ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಬಂಧಿಸಲ್ಪಟ್ಟಿದ್ದ ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆಂದು ಶಿಷ್ಯರು ಕೇಳಿಸಿಕೊಂಡಾಗ, ಅದು “ಅವನ ದೂತನಾಗಿರಬೇಕು” ಎಂದು ಏಕೆ ಹೇಳಿದರು?—ಅ. ಕೃತ್ಯಗಳು 12:15.
ಪೇತ್ರನನ್ನು ಪ್ರತಿನಿಧಿಸುವ ಒಬ್ಬ ಸಂದೇಶವಾಹಕ ದೂತನು ಬಾಗಿಲಿನ ಮುಂದೆ ನಿಂತಿರಬೇಕು ಎಂದು ಶಿಷ್ಯರು ತಪ್ಪಾಗಿ ತಿಳಿದಿರಬಹುದು. ಈ ಹೇಳಿಕೆಯ ಪೂರ್ವಾಪರವನ್ನು ಪರಿಗಣಿಸಿರಿ.
ಯಾಕೋಬನನ್ನು ಕೊಲ್ಲಿಸಿದ ಹೆರೋದನೇ ಪೇತ್ರನನ್ನೂ ಬಂಧಿಸಿದ್ದನು. ಆದುದರಿಂದ ಪೇತ್ರನು ಸಹ ಅದೇ ಶಿಕ್ಷೆಯನ್ನು ಅನುಭವಿಸುವನು ಎಂದು ಶಿಷ್ಯರು ನೆನಸಲು ಸಕಾರಣವಿತ್ತು. ಪೇತ್ರನನ್ನು ಸರಪಣಿಯಿಂದ ಕಟ್ಟಿ ಸೆರೆಮನೆಗೆ ಹಾಕಲಾಯಿತು ಮತ್ತು ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಪಾಳಿ ಗುಂಪುಗಳನ್ನು ಇಡಲಾಯಿತು. ನಂತರ ಒಂದು ರಾತ್ರಿ ಪೇತ್ರನು ದೇವದೂತನಿಂದ ಅದ್ಭುತಕರವಾಗಿ ಬಿಡಿಸಲ್ಪಟ್ಟನು. ಏನಾಯಿತೆಂದು ಗ್ರಹಿಸಿಕೊಂಡಾಗ ಪೇತ್ರನು ಹೀಗೆ ಹೇಳಿದನು: “ಕರ್ತನು [“ಯೆಹೋವನು,” NW] ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದ . . . ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿದು ಬಂದಿದೆ.”—ಅ. ಕೃತ್ಯಗಳು 12:1-11.
ಕೂಡಲೆ ಪೇತ್ರನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಹೋದನು. ಅಲ್ಲಿ ಅನೇಕ ಶಿಷ್ಯರು ಒಟ್ಟುಸೇರಿದ್ದರು. ಅವನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಚಾಕರಿಯವಳು ಬಾಗಿಲು ತೆರೆಯಲು ಹೋದಳು. ಆದರೆ, ಅವಳು ಪೇತ್ರನ ಧ್ವನಿಯನ್ನು ಗೊತ್ತುಹಿಡಿದ ಕೂಡಲೆ ಬಾಗಿಲನ್ನು ತೆರೆಯದೆ ಇತರರಿಗೆ ತಿಳಿಸಲು ಒಳಕ್ಕೆ ಓಡಿಹೋದಳು! ಪೇತ್ರನು ಬಾಗಿಲಿನ ಮುಂದೆ ನಿಂತಿದ್ದಾನೆಂಬುದನ್ನು ಮೊದಲು ಶಿಷ್ಯರಿಗೆ ನಂಬಲಾಗಲಿಲ್ಲ. ಅದಕ್ಕೆ ಬದಲಿಗೆ, ಅವರು ಅದು “ಅವನ ದೂತನಾಗಿರಬೇಕು” ಎಂದು ತಪ್ಪಾಗಿ ಊಹಿಸಿದರು.—ಅ. ಕೃತ್ಯಗಳು 12:12-15.
ಪೇತ್ರನು ಈಗಾಗಲೇ ಮರಣಕ್ಕೆ ಒಪ್ಪಿಸಲ್ಪಟ್ಟಿದ್ದಾನೆ ಮತ್ತು ಬಾಗಿಲಿನ ಮುಂದೆ ನಿಂತಿರುವಂಥದ್ದು ದೇಹವಿಲ್ಲದ ಅವನ ಆತ್ಮವಾಗಿದೆ ಎಂದು ಶಿಷ್ಯರು ನಂಬಿದರೊ? ಖಂಡಿತವಾಗಿಯೂ ಇಲ್ಲ. ಯೇಸುವಿನ ಶಿಷ್ಯರಿಗೆ ಮರಣದಲ್ಲಿ ಒಬ್ಬ ವ್ಯಕ್ತಿಗೆ ಏನು ಸಂಭವಿಸುತ್ತದೆ ಎಂಬ ಶಾಸ್ತ್ರೀಯ ಸತ್ಯವು ತಿಳಿದಿತ್ತು. “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂಬುದು ಅವರಿಗೆ ತಿಳಿದಿತ್ತು. (ಪ್ರಸಂಗಿ 9:5, 10) ಹಾಗಾದರೆ, “ಅವನ ದೂತನಾಗಿರಬೇಕು” ಎಂದು ಶಿಷ್ಯರು ಯಾವ ಅರ್ಥದಲ್ಲಿ ಹೇಳಿರಸಾಧ್ಯವಿದೆ?
ಇತಿಹಾಸದಾದ್ಯಂತ ದೇವದೂತರು ದೇವರ ಜನರಿಗೆ ವೈಯಕ್ತಿಕ ಸಹಾಯವನ್ನು ನೀಡಿದರು ಎಂಬುದು ಯೇಸುವಿನ ಶಿಷ್ಯರಿಗೆ ತಿಳಿದಿತ್ತು. ಉದಾಹರಣೆಗೆ, ‘ತನ್ನನ್ನು ಎಲ್ಲಾ ಕೇಡುಗಳಿಂದ ತಪ್ಪಿಸಿ ಕಾಪಾಡುತ್ತಾ ಬಂದ ದೂತನ’ ಕುರಿತಾಗಿ ಪೂರ್ವಜನಾದ ಯಾಕೋಬನು ಹೇಳಿದ್ದನು. (ಆದಿಕಾಂಡ 48:16) ಅಷ್ಟುಮಾತ್ರವಲ್ಲದೆ ತಮ್ಮ ಮಧ್ಯೆ ಇದ್ದ ಒಂದು ಚಿಕ್ಕ ಮಗುವಿನ ವಿಷಯವಾಗಿ ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ; ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ.”—ಮತ್ತಾಯ 18:10.
ಆಸಕ್ತಿಕರವಾಗಿ, ಯಂಗ್ಸ್ ಲಿಟ್ರಲ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಬೈಬಲ್, “ದೇವದೂತ” ಎಂಬ ಅರ್ಥವಿರುವ ಆಂಗೆಲಾಸ್ ಎಂಬ ಪದವನ್ನು “ಸಂದೇಶವಾಹಕ” ಎಂದು ಭಾಷಾಂತರಿಸಿದೆ. ದೇವರ ಪ್ರತಿಯೊಬ್ಬ ಸೇವಕನಿಗೆ ಅವನದ್ದೇ ಆದ ಒಬ್ಬ ದೇವದೂತ, “ರಕ್ಷಕ ದೂತನು” ಇದ್ದಾನೆಂದು ಕೆಲವು ಯೆಹೂದ್ಯರು ನಂಬುತ್ತಿದ್ದರೆಂದು ತೋರುತ್ತದೆ. ಈ ವಿಚಾರವನ್ನು ದೇವರ ವಾಕ್ಯವು ನೇರವಾಗಿ ಕಲಿಸುವುದಿಲ್ಲ. ಹಾಗಿದ್ದರೂ, “ಅವನ ದೂತನಾಗಿರಬೇಕು” ಎಂದು ಶಿಷ್ಯರು ಹೇಳಿದಾಗ, ಪೇತ್ರನನ್ನು ಪ್ರತಿನಿಧಿಸುವ ಒಬ್ಬ ಸಂದೇಶವಾಹಕ ದೂತನು ಬಾಗಿಲಿನ ಮುಂದೆ ನಿಂತಿದ್ದಾನೆ ಎಂದು ಅವರು ಒಂದುವೇಳೆ ನೆನಸಿರಬಹುದು.