ದೇವರನ್ನು ಮೆಚ್ಚಿಸುವಂಥ ಸತ್ಯ ಬೋಧನೆಗಳು
ದೇವರನ್ನು ಮೆಚ್ಚಿಸುವಂಥ ಸತ್ಯ ಬೋಧನೆಗಳು
ಯಾವ ಬೋಧನೆಗಳು ಸತ್ಯವಾಗಿವೆ ಮತ್ತು ದೇವರನ್ನು ಮೆಚ್ಚಿಸುತ್ತವೆ ಎಂಬುದನ್ನು ಭೂನಿವಾಸಿಗಳು ತಿಳಿದುಕೊಳ್ಳಬೇಕಾದರೆ, ದೇವರು ಮನುಷ್ಯರಿಗೆ ತನ್ನ ವಿಚಾರಗಳನ್ನು ಪ್ರಕಟಪಡಿಸಬೇಕಾಗಿದೆ. ಮಾತ್ರವಲ್ಲದೆ, ಪ್ರಕಟಪಡಿಸಿದ ಆ ಮಾಹಿತಿಯನ್ನು ಆತನು ಎಲ್ಲರಿಗೆ ಲಭ್ಯಗೊಳಿಸಬೇಕಾಗಿದೆ. ಇಲ್ಲವಾದರೆ, ದೇವರಿಗೆ ಅಂಗೀಕಾರಾರ್ಹವಾಗಿರುವ ಸಿದ್ಧಾಂತ, ಆರಾಧನೆ ಮತ್ತು ನಡತೆಯು ಯಾವುದೆಂದು ಮಾನವಕುಲವು ತಿಳಿದುಕೊಳ್ಳುವುದಾದರೂ ಹೇಗೆ? ಅಂಥ ಮಾಹಿತಿಯನ್ನು ದೇವರು ಒದಗಿಸಿದ್ದಾನೊ? ಒದಗಿಸಿರುವಲ್ಲಿ, ಯಾವ ರೂಪದಲ್ಲಿ ಒದಗಿಸಿದ್ದಾನೆ?
ಯಾವನೇ ಒಬ್ಬ ಮನುಷ್ಯನು, ಕೆಲವೇ ದಶಕಗಳ ತನ್ನ ಜೀವಮಾನದಲ್ಲಿ ವೈಯಕ್ತಿಕವಾಗಿ ಇಡೀ ಮಾನವಕುಲಕ್ಕೆ ದೇವರ ಸಂವಾದ ಮಾಧ್ಯಮವಾಗಿ ಸೇವೆಸಲ್ಲಿಸಬಲ್ಲನೆ? ಖಂಡಿತವಾಗಿಯೂ ಇಲ್ಲ. ಆದರೆ ಒಂದು ಚಿರಕಾಲವಿರುವ ಲಿಖಿತ ದಾಖಲೆಯಿರುವುದಾದರೆ ಅದು ಇಡೀ ಮಾನವಕುಲಕ್ಕೆ ದೇವರ ಸಂವಾದ ಮಾಧ್ಯಮವಾಗಿ ಸೇವೆಸಲ್ಲಿಸಬಲ್ಲದು. ಹಾಗಾದರೆ, ದೇವರಿಂದ ಬಂದ ಪ್ರಕಟನೆಯು ಒಂದು ಪುಸ್ತಕದ ರೂಪದಲ್ಲಿ ಲಭ್ಯಗೊಳಿಸಲ್ಪಟ್ಟಿರಬೇಕಾಗಿರುವುದು ಸೂಕ್ತವಲ್ಲವೆ? ಪುರಾತನ ಪುಸ್ತಕಗಳಲ್ಲಿ ಒಂದಾದ ಬೈಬಲ್ ದೇವರಿಂದ ಪ್ರೇರಿತವಾಗಿದೆ ಎಂದು ಹೇಳಿಕೊಳ್ಳುತ್ತದೆ. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ” ಎಂಬುದಾಗಿ ಅದರ ಒಬ್ಬ ಬರಹಗಾರನು ತಿಳಿಸಿದ್ದಾನೆ. (2 ತಿಮೊಥೆಯ 3:16) ಬೈಬಲನ್ನು ನಿಕಟವಾಗಿ ಪರೀಕ್ಷಿಸಿ, ಅದು ಸತ್ಯ ಬೋಧನೆಗಳ ಮೂಲವಾಗಿದೆಯೊ ಎಂಬುದನ್ನು ನೋಡೋಣ.
ಎಷ್ಟು ಹಳೆಯದು?
ಪ್ರಮುಖ ಧರ್ಮ ಗ್ರಂಥಗಳಲ್ಲಿ, ಬೈಬಲ್ ಅತ್ಯಂತ ಹಳೆಯ ಪುಸ್ತಕವಾಗಿದೆ. ಅದರ ಮೊದಲ ಭಾಗವು ಸುಮಾರು 3,500 ವರುಷಗಳ ಹಿಂದೆ ಬರೆಯಲ್ಪಟ್ಟಿತು. ಈ ಪುಸ್ತಕವನ್ನು ಸಾ.ಶ. 98ರಲ್ಲಿ ಬರೆದು ಮುಗಿಸಲಾಯಿತು. * ಈ ಪುಸ್ತಕವು, 1,600 ವರುಷಗಳ ಕಾಲಾವಧಿಯಲ್ಲಿ ಸುಮಾರು 40 ಪುರುಷರಿಂದ ಬರೆಯಲ್ಪಟ್ಟಿತಾದರೂ, ಬೈಬಲಿನಲ್ಲಿರುವ ಎಲ್ಲ ವಿಷಯಗಳು ಒಂದಕ್ಕೊಂದು ಹೊಂದಾಣಿಕೆಯಲ್ಲಿವೆ. ಇದಕ್ಕೆ ಕಾರಣ, ಇದರ ನಿಜವಾದ ಗ್ರಂಥಕರ್ತನು ದೇವರೇ ಆಗಿದ್ದಾನೆ.
ಇತಿಹಾಸದಲ್ಲಿಯೇ ಅತಿ ವ್ಯಾಪಕವಾಗಿ ಚಲಾವಣೆಗೊಂಡಿರುವ ಮತ್ತು ಭಾಷಾಂತರಿಸಲ್ಪಟ್ಟಿರುವ ಪುಸ್ತಕವು ಬೈಬಲ್ ಆಗಿದೆ. ಪ್ರತಿ ವರುಷ, ಇಡೀ ಬೈಬಲಿನ ಅಥವಾ ಅದರ ಭಾಗಗಳ ಸುಮಾರು ಆರು ಕೋಟಿ ಪ್ರತಿಗಳು ವಿತರಣೆಯಾಗುತ್ತಿವೆ. ಸಂಪೂರ್ಣ ಬೈಬಲ್
ಅಥವಾ ಅದರ ಭಾಗಗಳು, 2,300ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಮತ್ತು ಉಪಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ. ಮಾನವ ಕುಟುಂಬದ ಸುಮಾರು 90 ಪ್ರತಿಶತ ಜನರಿಗೆ, ಬೈಬಲ್ ಅಥವಾ ಕಡಿಮೆಪಕ್ಷ ಅದರ ಭಾಗವಾದರೂ ಅವರ ಸ್ವಂತ ಭಾಷೆಯಲ್ಲಿ ಲಭ್ಯವಿದೆ. ಈ ಪುಸ್ತಕವು ರಾಷ್ಟ್ರೀಯ ಎಲ್ಲೆಗಳನ್ನು, ಜಾತೀಯ ವಿಭಜನೆಗಳನ್ನು ಮತ್ತು ಕುಲಸಂಬಂಧಿತ ತಡೆಗಳನ್ನು ಜಯಿಸಿ ಬಂದಿದೆ.ಹೇಗೆ ವ್ಯವಸ್ಥಾಪಿಸಲ್ಪಟ್ಟಿತು?
ನಿಮ್ಮ ಬಳಿ ಬೈಬಲ್ ಇರುವುದಾದರೆ, ಅದನ್ನು ತೆರೆದು ಅದು ಹೇಗೆ ವ್ಯವಸ್ಥಾಪಿಸಲ್ಪಟ್ಟಿದೆ ಎಂಬುದನ್ನು ಏಕೆ ನೋಡಬಾರದು? * ಮೊದಲಾಗಿ, ಪರಿವಿಡಿಯ ಕಡೆಗೆ ತಿರುಗಿಸಿರಿ. ಇದು, ಹೆಚ್ಚಿನ ಬೈಬಲ್‌ಗಳಲ್ಲಿ ಆರಂಭದ ಪುಟಗಳಲ್ಲಿ ಕಂಡುಬರುತ್ತದೆ. ಅಲ್ಲಿ, ಪ್ರತಿಯೊಂದು ಪುಸ್ತಕದ ಹೆಸರನ್ನು ಪಟ್ಟಿಮಾಡಿ, ಅದು ಯಾವ ಪುಟದಲ್ಲಿದೆ ಎಂಬುದನ್ನು ಕಂಡುಕೊಳ್ಳಲು ಸಂಖ್ಯೆಯನ್ನು ಸಹ ನೀಡಲಾಗಿರುತ್ತದೆ. ಬೈಬಲ್ ನಿಜವಾಗಿಯೂ, ಅನೇಕ ಪುಸ್ತಕಗಳ ಒಂದು ದೊಡ್ಡ ಸಂಗ್ರಹವಾಗಿದೆ ಎಂಬುದನ್ನು ನೀವು ಗಮನಿಸುವಿರಿ ಮತ್ತು ಪ್ರತಿಯೊಂದು ಪುಸ್ತಕಕ್ಕೆ ಅದರದ್ದೇ ಆದ ಹೆಸರಿದೆ. ಮೊದಲನೇ ಪುಸ್ತಕವು ಆದಿಕಾಂಡ ಮತ್ತು ಕೊನೆಯ ಪುಸ್ತಕವು ಪ್ರಕಟನೆ ಅಥವಾ ಅಪಾಕಲಿಪ್ಸ್ ಆಗಿದೆ. ಬೈಬಲಿನಲ್ಲಿರುವ ಪುಸ್ತಕಗಳನ್ನು ಎರಡು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ. ಮೊದಲ 39 ಪುಸ್ತಕಗಳನ್ನು ಹೀಬ್ರು ಶಾಸ್ತ್ರಗಳೆಂದು ಕರೆಯಲಾಗುತ್ತದೆ, ಏಕೆಂದರೆ ಅವುಗಳಲ್ಲಿ ಹೆಚ್ಚಿನವುಗಳು ಹೀಬ್ರು ಭಾಷೆಯಲ್ಲಿ ಬರೆಯಲ್ಪಟ್ಟವು. ಕೊನೆಯ 27 ಪುಸ್ತಕಗಳು ಗ್ರೀಕ್ ಭಾಷೆಯಲ್ಲಿ ಬರೆಯಲ್ಪಟ್ಟ ಕಾರಣ ಅವನ್ನು ಗ್ರೀಕ್ ಶಾಸ್ತ್ರಗಳೆಂದು ಕರೆಯಲಾಗುತ್ತದೆ. ಕೆಲವರು ಈ ಎರಡು ವಿಭಾಗಗಳನ್ನು, ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ ಎಂದು ಕರೆಯುತ್ತಾರೆ.
ಬೈಬಲಿನ ನಿರ್ದಿಷ್ಟ ದಾಖಲೆಯನ್ನು ಸುಲಭವಾಗಿ ತೆರೆಯಲಿಕ್ಕಾಗಿ ಅವುಗಳಲ್ಲಿ ಅಧ್ಯಾಯಗಳು ಮತ್ತು ವಚನಗಳಿವೆ. ಈ ಪತ್ರಿಕೆಯಲ್ಲಿ ನೀಡಲ್ಪಟ್ಟಿರುವ ಶಾಸ್ತ್ರವಚನಗಳಲ್ಲಿ, ಬೈಬಲ್ ಪುಸ್ತಕದ ಹೆಸರಿನ ಅನಂತರ ಕೊಡಲ್ಪಟ್ಟಿರುವ ಮೊದಲ ಸಂಖ್ಯೆಯು ಆ ಪುಸ್ತಕದ ಅಧ್ಯಾಯಕ್ಕೆ ಸೂಚಿಸುತ್ತದೆ ಮತ್ತು ಅನಂತರ ಕೊಡಲ್ಪಟ್ಟಿರುವ ಸಂಖ್ಯೆಯು ವಚನಕ್ಕೆ ಸೂಚಿಸುತ್ತದೆ. ಉದಾಹರಣೆಗೆ, “2 ತಿಮೊಥೆಯ 3:16” ಎಂಬುದಾಗಿ ನೀಡಲ್ಪಟ್ಟಿರುವಾಗ ಅದರ ಅರ್ಥ, ಎರಡನೆಯ ತಿಮೊಥೆಯ ಪುಸ್ತಕದ 3ನೇ ಅಧ್ಯಾಯ ಮತ್ತು 16ನೇ ವಚನ ಎಂದಾಗಿದೆ. ಈ ವಚನವನ್ನು ನೀವು ನಿಮ್ಮ ಬೈಬಲಿನಲ್ಲಿ ತೆರೆಯಬಲ್ಲಿರೊ ಎಂದು ನೋಡಿ.
ಬೈಬಲಿನ ಸುಪರಿಚಯ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವು ಅದನ್ನು ಕ್ರಮವಾಗಿ ಓದುವ ಮೂಲಕವೇ ಆಗಿದೆ ಎಂಬುದನ್ನು ನೀವು ಒಪ್ಪುವುದಿಲ್ಲವೇ? ಕೆಲವರಿಗೆ ಗ್ರೀಕ್ ಶಾಸ್ತ್ರಗಳನ್ನು ಮೊದಲು ಓದುವುದು ಬಹಳ ಸಹಾಯಕವಾಗಿ ಕಂಡುಬಂದಿದೆ. ಅಂದರೆ, ಅವರು ಮತ್ತಾಯ ಪುಸ್ತಕದಿಂದ ಆರಂಭಿಸುತ್ತಾರೆ. ಪ್ರತಿ ದಿನ ಮೂರರಿಂದ ಐದು ಅಧ್ಯಾಯಗಳನ್ನು ಓದುವ ಮೂಲಕ ಒಂದು ವರುಷದೊಳಗೆ ನೀವು ಇಡೀ ಬೈಬಲನ್ನು ಓದಿ ಮುಗಿಸಬಲ್ಲಿರಿ. ಆದರೆ ಬೈಬಲಿನಲ್ಲಿ ನೀವು ಏನು ಓದುತ್ತೀರೊ ಅದು ನಿಜವಾಗಿಯೂ ದೈವಪ್ರೇರಿತವಾಗಿದೆ ಎಂದು ಹೇಗೆ ಖಚಿತರಾಗಿರಬಲ್ಲಿರಿ?
ನೀವು ಬೈಬಲನ್ನು ನಂಬಬಲ್ಲಿರೊ?
ಎಲ್ಲ ಜನರಿಗಾಗಿ ಬರೆಯಲ್ಪಟ್ಟಿರುವ ದೈವಪ್ರೇರಿತವಾಗಿರುವ ಪುಸ್ತಕವು, ಹೇಗೆ ಜೀವಿಸಬೇಕೆಂಬುದರ ಕುರಿತಾದ ಕಾಲಾತೀತ ಸಲಹೆಯನ್ನು ಹೊಂದಿರಬೇಕಲ್ಲವೆ? ಮಾನವಕುಲದ ಪ್ರತಿಯೊಂದು ಸಂತತಿಗೂ ಅನ್ವಯಿಸುವ ಮಾನವ ಸ್ವಭಾವದ ತಿಳಿವಳಿಕೆಯನ್ನು ಬೈಬಲ್ ಪ್ರತಿಬಿಂಬಿಸುತ್ತದೆ ಮತ್ತು ಅದರಲ್ಲಿ ಕಂಡುಬರುವ ಮೂಲತತ್ತ್ವಗಳು ಅದನ್ನು ಬರೆದಂಥ ಸಮಯದಲ್ಲಿ ಇದ್ದಂತೆ ಇಂದು ಸಹ ಅಷ್ಟೇ ಪ್ರಾಯೋಗಿಕವಾಗಿವೆ. ಕ್ರೈಸ್ತತ್ವದ ಸ್ಥಾಪಕನಾದ ಯೇಸು ಕ್ರಿಸ್ತನು ನೀಡಿದ ಒಂದು ಪ್ರಖ್ಯಾತ ಭಾಷಣದಲ್ಲಿ ಇದನ್ನು ಸುಲಭವಾಗಿ ತಿಳಿದುಕೊಳ್ಳಸಾಧ್ಯವಿದೆ. ಅದನ್ನು ಮತ್ತಾಯ 5ರಿಂದ 7ನೇ ಅಧ್ಯಾಯಗಳಲ್ಲಿ ದಾಖಲಿಸಲಾಗಿದೆ. ಈ ಭಾಷಣವನ್ನು ಪರ್ವತ ಪ್ರಸಂಗ ಎಂದು ಕರೆಯಲಾಗುತ್ತದೆ. ಇದು, ನಿಜ ಸಂತೋಷವನ್ನು ಹೇಗೆ ಕಂಡುಕೊಳ್ಳುವುದು ಎಂಬುದನ್ನು ತೋರಿಸುತ್ತದೆ ಮಾತ್ರವಲ್ಲ, ಜಗಳಗಳನ್ನು ಹೇಗೆ ಪರಿಹರಿಸುವುದು, ಹೇಗೆ ಪ್ರಾರ್ಥಿಸುವುದು, ಭೌತಿಕ ಅಗತ್ಯಗಳನ್ನು ಹೇಗೆ ದೃಷ್ಟಿಸಬೇಕು ಮತ್ತು ಇನ್ನೂ ಅನೇಕ ವಿಷಯಗಳನ್ನು ತಿಳಿಸುತ್ತದೆ. ಈ ಭಾಷಣದಲ್ಲಿ ಮತ್ತು ಬೈಬಲಿನ ಉಳಿದೆಲ್ಲ ಭಾಗಗಳಲ್ಲಿ, ನಾವು ದೇವರನ್ನು ಮೆಚ್ಚಿಸಬೇಕಾದರೆ ಮತ್ತು ನಮ್ಮ ಪರಿಸ್ಥಿತಿಯನ್ನು ಉತ್ತಮಗೊಳಿಸಬೇಕಾದರೆ ಏನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಬೈಬಲಿನಲ್ಲಿ ನೀವು ಏಕೆ ಭರವಸವಿಡಬಲ್ಲಿರಿ ಎಂಬುದಕ್ಕಾಗಿನ ಇನ್ನೊಂದು ಕಾರಣವು, ಈ ಪುರಾತನ ಪುಸ್ತಕವು ವೈಜ್ಞಾನಿಕ ವಿಚಾರಗಳ ಕುರಿತು ಏನನ್ನು ತಿಳಿಸುತ್ತದೊ ಅದು ಬಹಳ ನಿಷ್ಕೃಷ್ಟವಾಗಿದೆ. ಉದಾಹರಣೆಗೆ, ಭೂಮಿಯು ಚಪ್ಪಟೆಯಾಗಿದೆ ಎಂಬುದಾಗಿ ಹಿಂದೆ ಹೆಚ್ಚಿನ ಜನರು ನಂಬಿದ ಸಮಯದಲ್ಲಿ ಬೈಬಲಾದರೊ “ಭೂವೃತ್ತದ” ಕುರಿತು ಮಾತಾಡಿದೆ. * (ಯೆಶಾಯ 40:22, NIBV) ಮತ್ತು ಭೂಮಿಯು ಶೂನ್ಯ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣ ಬಲದಿಂದ ನೆಲೆಸಿದೆ ಎಂಬುದನ್ನು ಪ್ರಖ್ಯಾತ ವಿಜ್ಞಾನಿ ಸರ್ ಐಸಕ್ ನ್ಯೂಟನ್ ತಿಳಿಸುವ 3,000ಕ್ಕಿಂತ ಹೆಚ್ಚು ವರುಷಗಳ ಹಿಂದೆ, “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗ ಹಾಕಿದ್ದಾನೆ” ಎಂದು ಬೈಬಲ್ ಕಾವ್ಯಾತ್ಮಕವಾಗಿ ತಿಳಿಸಿತ್ತು. (ಯೋಬ 26:7) ಭೂಮಿಯ ಜಲಚಕ್ರದ ಕುರಿತಾಗಿ ಸುಮಾರು 3,000 ವರುಷಗಳ ಹಿಂದೆ ದಾಖಲಿಸಲ್ಪಟ್ಟಿರುವ ಈ ಕಾವ್ಯಾತ್ಮಕ ವರ್ಣನೆಯನ್ನೂ ಪರಿಗಣಿಸಿರಿ: “ನದಿಗಳೆಲ್ಲಾ ಸಮುದ್ರಕ್ಕೆ ಹರಿದುಹೋಗುತ್ತವೆ; ಆದರೂ ಸಮುದ್ರವು ತುಂಬುವುದಿಲ್ಲ. ನದಿಗಳು ಎಲ್ಲಿಂದ ಬಂದಿವೆಯೋ ಆ ಸ್ಥಳಕ್ಕೆ ಅವು ಹಿಂತಿರುಗುತ್ತವೆ.” (ಪ್ರಸಂಗಿ 1:7, NIBV) ಹೌದು, ಈ ವಿಶ್ವದ ಸೃಷ್ಟಿಕರ್ತನೇ ಬೈಬಲಿನ ಗ್ರಂಥಕರ್ತನೂ ಆಗಿದ್ದಾನೆ.
ಬೈಬಲಿನ ಐತಿಹಾಸಿಕ ನಿಷ್ಕೃಷ್ಟತೆಯು ಅದು ದೈವಪ್ರೇರಿತವಾಗಿದೆ ಎಂಬ ವಾಸ್ತವಾಂಶವನ್ನು ರುಜುಪಡಿಸುತ್ತದೆ. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಘಟನೆಗಳು ಕೇವಲ ಮಿಥ್ಯಕಥೆಗಳಲ್ಲ. ಅವು ನಿರ್ದಿಷ್ಟ ತಾರೀಖುಗಳ, ಜನರ ಮತ್ತು ಸ್ಥಳಗಳ ಕುರಿತಾಗಿವೆ. ಉದಾಹರಣೆಗೆ, ಲೂಕ 3:1ರಲ್ಲಿ “ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ, ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ” ಆಗಿದ್ದ ಸಮಯಕ್ಕೆ ನಿಷ್ಕೃಷ್ಟವಾಗಿ ಸೂಚಿಸುತ್ತದೆ.
ಪುರಾತನ ಇತಿಹಾಸಗಾರರು ಹೆಚ್ಚಾಗಿ ಅಧಿಪತಿಗಳು ಗಳಿಸಿದ ವಿಜಯಗಳನ್ನು ಮತ್ತು ಅವರ ಒಳ್ಳೇ ಗುಣಗಳನ್ನು ಮಾತ್ರ ವರದಿಸಿದ್ದಾರಾದರೂ, ಬೈಬಲ್ ಬರಹಗಾರರು ಪ್ರಾಮಾಣಿಕರಾಗಿದ್ದರು ಮತ್ತು ತಮ್ಮ ಸ್ವಂತ ತಪ್ಪುಗಳನ್ನು ಸಹ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡರು. ಉದಾಹರಣೆಗೆ, ಇಸ್ರಾಯೇಲಿನ ರಾಜ ದಾವೀದನು ತನ್ನ ತಪ್ಪನ್ನು ಒಪ್ಪಿಕೊಂಡು ಹೀಗೆ ಹೇಳಿದನು: “ನಾನು ಬುದ್ಧಿಹೀನಕಾರ್ಯವನ್ನು ಮಾಡಿ ಪಾಪಿಯಾದೆನು.” ಈ ಹೇಳಿಕೆಯನ್ನು ಸ್ಪಷ್ಟವಾಗಿ ಬೈಬಲಿನಲ್ಲಿ ದಾಖಲೆಮಾಡಲಾಗಿದೆ. (2 ಸಮುವೇಲ 24:10) ಮತ್ತು ಬೈಬಲ್ ಬರಹಗಾರನಾದ ಮೋಶೆಯು, ತಾನು ಸತ್ಯ ದೇವರ ಮೇಲೆ ಅವಲಂಬನೆಯನ್ನು ತೋರಿಸದೆ ಇದ್ದ ಒಂದು ಸಂದರ್ಭದ ಕುರಿತಾಗಿ ತಾನೇ ದಾಖಲೆಮಾಡಿದ್ದಾನೆ.—ಅರಣ್ಯಕಾಂಡ 20:12.
ಬೈಬಲ್ ದೈವಪ್ರೇರಿತವಾಗಿದೆ ಎಂಬುದಕ್ಕೆ ಇನ್ನೊಂದು ರುಜುವಾತಿದೆ. ನೆರವೇರಿದ ಪ್ರವಾದನೆಗಳೇ—ಮುಂಚಿತವಾಗಿಯೇ ಬರೆಯಲ್ಪಟ್ಟ ಇತಿಹಾಸ—ಆ ರುಜುವಾತಾಗಿದೆ. ಇವುಗಳಲ್ಲಿ ಕೆಲವು ಯೇಸು ಕ್ರಿಸ್ತನ ಕುರಿತಾದ ಪ್ರವಾದನೆಗಳಾಗಿವೆ. ಉದಾಹರಣೆಗಾಗಿ, ಯೇಸುವಿನ ಜನನಕ್ಕಿಂತ 700 ವರುಷಗಳ ಮುಂಚೆ, ಹೀಬ್ರು ಶಾಸ್ತ್ರವಚನಗಳಲ್ಲಿ ವಾಗ್ದಾನಿತ ವ್ಯಕ್ತಿಯು “ಯೂದಾಯದ ಬೇತ್ಲೆಹೇಮಿನಲ್ಲಿ” ಜನಿಸುವನು ಎಂಬುದಾಗಿ ನಿಷ್ಕೃಷ್ಟವಾಗಿ ಮುಂತಿಳಿಸಲಾಗಿತ್ತು.—ಮತ್ತಾಯ 2:1-6; ಮೀಕ 5:2.
ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. 2 ತಿಮೊಥೆಯ 3:1-5ರಲ್ಲಿ ಬೈಬಲ್ ಹೀಗೆ ತಿಳಿಸುತ್ತದೆ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.” ಇಂದಿರುವ ಹೆಚ್ಚಿನ ಜನರ ಮನೋಭಾವವನ್ನು ಇದು ವರ್ಣಿಸುವುದಿಲ್ಲವೇ? ಈ ಮಾತುಗಳು ಸುಮಾರು 1,900ಕ್ಕಿಂತಲೂ ಹೆಚ್ಚು ವರುಷಗಳ ಹಿಂದೆ, ಸಾ.ಶ. 65ರಲ್ಲಿ ಬರೆಯಲ್ಪಟ್ಟವು!
ಬೈಬಲ್ ನಮಗೆ ಏನನ್ನು ಬೋಧಿಸುತ್ತದೆ?
ಬೈಬಲನ್ನು ನೀವು ಓದುತ್ತಾ ಹೋದಂತೆ, ಅದು ಉನ್ನತ ವಿವೇಕದ ಮೂಲವಾಗಿದೆ ಎಂಬುದನ್ನು ನೀವು ಗ್ರಹಿಸಿಕೊಳ್ಳುವಿರಿ. ದೇವರು ಯಾರು? ಪಿಶಾಚನು ನಿಜವಾದ ವ್ಯಕ್ತಿಯೊ? ಯೇಸು ಕ್ರಿಸ್ತನು ಯಾರು? ಕಷ್ಟಸಂಕಟವು ಏಕೆ ಅಸ್ತಿತ್ವದಲ್ಲಿದೆ? ನಾವು ಸತ್ತ ಅನಂತರ ಏನು ಸಂಭವಿಸುತ್ತದೆ? ಎಂಬಂಥ ಪ್ರಶ್ನೆಗಳಿಗೆ ಬೈಬಲ್ ಸಂತೃಪ್ತಿಕರ ಉತ್ತರಗಳನ್ನು ಒದಗಿಸುತ್ತದೆ. ಇತರರಿಂದ ನೀವು ಪಡೆದುಕೊಳ್ಳಬಹುದಾದ ಉತ್ತರಗಳು, ಆ ಉತ್ತರಗಳನ್ನು ಕೊಡುವ ಜನರ ನಂಬಿಕೆಗಳು ಮತ್ತು ಸಂಪ್ರದಾಯಗಳಷ್ಟೇ ವ್ಯತ್ಯಾಸವಾಗಿರುತ್ತವೆ. ಆದರೆ ಬೈಬಲ್ ಈ ಎಲ್ಲ ವಿಷಯಗಳ ಮತ್ತು ಇನ್ನಿತರ ಅನೇಕ ವಿಷಯಗಳ ಕುರಿತಾಗಿ ಸತ್ಯವನ್ನು ತಿಳಿಸುತ್ತದೆ. ಮಾತ್ರವಲ್ಲದೆ, ಇತರ ಮಾನವರ ಹಾಗೂ ಉನ್ನತ ಅಧಿಕಾರಿಗಳ ಕಡೆಗಿನ ನಮ್ಮ ನಡತೆ ಮತ್ತು ಮನೋಭಾವದ ಕುರಿತಾಗಿ ಬೈಬಲ್ ನೀಡುವ ಮಾರ್ಗದರ್ಶನವು ಅತ್ಯುತ್ತಮವಾದದ್ದಾಗಿದೆ. *
ಭೂಮಿ ಮತ್ತು ಮಾನವಕುಲಕ್ಕಾಗಿರುವ ದೇವರ ಉದ್ದೇಶದ ಕುರಿತಾಗಿ ಬೈಬಲ್ ಏನನ್ನು ಪ್ರಕಟಪಡಿಸುತ್ತದೆ? ಅದು ವಾಗ್ದಾನಿಸುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:10, 11) “ದೇವರು ತಾನೇ ಅವರ [ಮಾನವಕುಲದ] ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕಟನೆ 21:3, 4) “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
ಯುದ್ಧ, ಪಾತಕ, ಹಿಂಸಾಚಾರ ಮತ್ತು ದುಷ್ಟತನವು ಬೇಗನೆ ಕೊನೆಗೊಳ್ಳುವುದು ಎಂಬುದಾಗಿ ಸಹ ಬೈಬಲ್ ಮುಂತಿಳಿಸುತ್ತದೆ. ರೋಗ, ವೃದ್ಧಾಪ್ಯ ಮತ್ತು ಮರಣವು ಇಲ್ಲದೆ ಹೋಗುವುದು. ಭೂಮಿಯ ಮೇಲೆ ಪರದೈಸಿನಲ್ಲಿನ ನಿತ್ಯಜೀವವು ಒಂದು ನಿಜವಾದ ಸಂಗತಿಯಾಗಲಿರುವುದು. ಎಂಥ ಆನಂದದಾಯಕ ಪ್ರತೀಕ್ಷೆ! ಇವೆಲ್ಲವು, ಮಾನವಕುಲಕ್ಕಾಗಿನ ದೇವರ ಪ್ರೀತಿಯ ಎಂಥ ಮಹಾನ್ ಪ್ರದರ್ಶನವಾಗಿವೆ!
ನೀವು ಏನು ಮಾಡುವಿರಿ?
ಬೈಬಲ್ ನಮ್ಮ ಸೃಷ್ಟಿಕರ್ತನಿಂದ ಬಂದ ಅದ್ಭುತಕರವಾದ ಉಡುಗೊರೆಯಾಗಿದೆ. ಈ ಪುಸ್ತಕಕ್ಕೆ ನೀವು ಹೇಗೆ ಪ್ರತಿಕ್ರಿಯಿಸಬೇಕು? ದೇವರಿಂದ ಬಂದ ಜ್ಞಾನವು ಇಡೀ ಮಾನವಕುಲಕ್ಕೆ ಪ್ರಯೋಜನವನ್ನು * ಲೋಕದಲ್ಲಿ ಅತ್ಯಂತ ವ್ಯಾಪಕವಾಗಿ ಹಂಚಲ್ಪಟ್ಟ ಈ ಪುಸ್ತಕದ ಬಗ್ಗೆ ಯಾವುದೇ ಅಭಿಪ್ರಾಯವನ್ನು ಬೆಳೆಸಿಕೊಳ್ಳುವ ಮುಂಚೆ ಅದನ್ನು ಓದಿನೋಡಬೇಕು ಎಂಬುದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿನ ವಿಶ್ವವಿದ್ಯಾನಿಲಯದ ಪ್ರೊಫೆಸರರೊಬ್ಬರು ಸಹ ಗ್ರಹಿಸಿಕೊಂಡರು.
ತರಬೇಕಾದರೆ, ಅದು ನಾಗರಿಕತೆಯ ಆರಂಭದ ಸಮಯದಷ್ಟು ಹಳೆಯದಾಗಿರಬೇಕು ಎಂಬುದಾಗಿ ಒಬ್ಬ ಹಿಂದೂ ವ್ಯಕ್ತಿಯು ನಂಬುತ್ತಿದ್ದನು. ಬೈಬಲಿನ ಕೆಲವು ಪುಸ್ತಕಗಳು ಅತಿ ಪುರಾತನ ಹಿಂದೂ ಬರಹಗಳಾದ ವೇದಗಳಿಗಿಂತಲೂ ಹಳೆಯದು ಎಂಬುದನ್ನು ಗ್ರಹಿಸಿದ ಅನಂತರ, ಅವನು ಬೈಬಲನ್ನು ಓದಿ ಅದರಲ್ಲಿರುವ ವಿಷಯಗಳನ್ನು ಪರೀಕ್ಷಿಸಲು ನಿರ್ಧರಿಸಿದನು.ಬೈಬಲನ್ನು ಓದಿ, ಅದು ಕಲಿಸುವ ಸಂಗತಿಗಳನ್ನು ಅನ್ವಯಿಸುವುದು ಹೇರಳವಾದ ಆಶೀರ್ವಾದಗಳನ್ನು ತರುತ್ತದೆ. ಬೈಬಲ್ ತಿಳಿಸುವುದು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.” * (ಕೀರ್ತನೆ 1:1-3) ಬೈಬಲನ್ನು ಅಧ್ಯಯನಮಾಡಿ, ಅದು ಏನು ಹೇಳುತ್ತದೊ ಅದರ ಕುರಿತು ಧ್ಯಾನಿಸುವುದಾದರೆ ನಿಮಗೆ ಆನಂದವು ಸಿಗುತ್ತದೆ, ಏಕೆಂದರೆ ಈ ಮೂಲಕ ನಿಮ್ಮ ಆಧ್ಯಾತ್ಮಿಕ ಅಗತ್ಯವು ತೃಪ್ತಿಪಡಿಸಲ್ಪಡುವುದು. (ಮತ್ತಾಯ 5:3) ಫಲಪ್ರದವಾದ ಜೀವನವನ್ನು ಹೇಗೆ ನಡೆಸಬೇಕು ಮತ್ತು ಸಮಸ್ಯೆಗಳನ್ನು ಯಶಸ್ವಿಕರವಾಗಿ ಹೇಗೆ ಎದುರಿಸಬೇಕು ಎಂಬುದನ್ನು ಬೈಬಲ್ ನಿಮಗೆ ತಿಳಿಸುತ್ತದೆ. ಹೌದು, “[ಬೈಬಲಿನಲ್ಲಿರುವ ದೇವರ ನಿಯಮಗಳನ್ನು] ಕೈಕೊಳ್ಳುವದರಿಂದ ಬಹಳ ಫಲ ಉಂಟಾಗುತ್ತದೆ.” (ಕೀರ್ತನೆ 19:11) ಅಷ್ಟುಮಾತ್ರವಲ್ಲದೆ, ದೇವರ ವಾಗ್ದಾನಗಳಲ್ಲಿ ಭರವಸೆಯನ್ನಿಡುವ ಮೂಲಕ ಈಗ ನಿಮಗೆ ಆಶೀರ್ವಾದಗಳು ದೊರಕುವವು ಮತ್ತು ಭವಿಷ್ಯತ್ತಿಗಾಗಿ ಒಂದು ಆಶಾದಾಯಕ ನಿರೀಕ್ಷೆಯು ಸಿಗುವುದು.
ಬೈಬಲ್ ನಮಗೆ ಉತ್ತೇಜಿಸುವುದು: “ಹಸುಮಕ್ಕಳಂತೆ ಪಾರಮಾರ್ಥಿಕವಾದ ಶುದ್ಧ ಹಾಲನ್ನು ಬಯಸಿರಿ.” (1 ಪೇತ್ರ 2:2) ಒಂದು ಹಸುಗೂಸು ತನ್ನ ಬೆಳವಣಿಗೆಗಾಗಿ ಪೋಷಣೆಯ ಮೇಲೆ ಹೊಂದಿಕೊಂಡಿರುತ್ತದೆ ಮತ್ತು ಅದನ್ನು ಪಡೆಯಲು ಪಟ್ಟುಹಿಡಿಯುತ್ತದೆ. ಅಂತೆಯೇ, ನಾವು ವಾಸ್ತವದಲ್ಲಿ ದೇವರ ಜ್ಞಾನದ ಮೇಲೆ ಹೊಂದಿಕೊಂಡಿದ್ದೇವೆ. ಆದುದರಿಂದ, ದೇವರ ವಾಕ್ಯಕ್ಕಾಗಿ ‘ಬಯಕೆಯನ್ನು’ ಅಥವಾ ಒಂದು ಬಲವಾದ ಇಚ್ಛೆಯನ್ನು ಬೆಳೆಸಿಕೊಳ್ಳಿರಿ. ಬೈಬಲ್ ದೇವರಿಂದ ಬಂದ ಸತ್ಯ ಬೋಧನೆಗಳನ್ನು ಹೊಂದಿರುವ ಪುಸ್ತಕವಾಗಿದೆ. ಅದನ್ನು ಕ್ರಮವಾಗಿ ಅಧ್ಯಯನಮಾಡುವ ಗುರಿಯನ್ನು ಇಟ್ಟುಕೊಳ್ಳಿರಿ. ನಿಮ್ಮ ಅಧ್ಯಯನದಿಂದ ನೀವು ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ, ನಿಮ್ಮ ಸಮುದಾಯದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ. ಅವರನ್ನು ಭೇಟಿಯಾಗಲು ನಿಮಗೆ ಹಾರ್ದಿಕ ಆಮಂತ್ರಣವಿದೆ. ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ನೀವು ಬರೆಯಬಹುದು.
[ಪಾದಟಿಪ್ಪಣಿಗಳು]
^ ಪ್ಯಾರ. 5 ಸಾ.ಶ. ಎಂಬುದು “ಸಾಮಾನ್ಯ ಶಕ”ವನ್ನು ಸೂಚಿಸುತ್ತದೆ. ಅನೇಕವೇಳೆ ಇದನ್ನು ಕ್ರಿ.ಶ., ಅಂದರೆ ಕ್ರಿಸ್ತ ಶಕ ಎಂಬುದಾಗಿಯೂ ಕರೆಯುತ್ತಾರೆ. ಇದರ ಅರ್ಥ, “ಕರ್ತನ ವರುಷದಲ್ಲಿ” ಎಂದಾಗಿದೆ. ಸಾ.ಶ.ಪೂ. ಎಂದರೆ “ಸಾಮಾನ್ಯ ಶಕ ಪೂರ್ವ” ಎಂದಾಗಿದೆ.
^ ಪ್ಯಾರ. 8 ನಿಮ್ಮೊಂದಿಗೆ ಬೈಬಲಿನ ವೈಯಕ್ತಿಕ ಪ್ರತಿ ಇಲ್ಲದಿರುವುದಾದರೆ, ಒಂದು ಪ್ರತಿಯನ್ನು ನಿಮಗೆ ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುತ್ತಾರೆ.
^ ಪ್ಯಾರ. 13 ಯೆಶಾಯ 40:22ರಲ್ಲಿ “ವೃತ್ತ” ಎಂಬುದಾಗಿ ತರ್ಜುಮೆಯಾಗಿರುವ ಮೂಲ ಭಾಷಾ ಪದವನ್ನು “ಗೋಳ” ಎಂದೂ ಅನುವಾದಿಸಬಹುದು. ಕೆಲವು ಬೈಬಲ್‌ಗಳು, “ಭೂಮಿಯ ಗೋಳ” (ಡುಯೇ ವರ್ಷನ್) ಮತ್ತು “ಉರುಟಾದ ಭೂಮಿ” (ಮೊಫೆಟ್) ಎಂಬುದಾಗಿ ಭಾಷಾಂತರಿಸಿವೆ.
^ ಪ್ಯಾರ. 19 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಲ್ಲಿ ಈ ವಿಚಾರಗಳು ಚರ್ಚಿಸಲ್ಪಟ್ಟಿವೆ.
^ ಪ್ಯಾರ. 23 ವೇದಗಳ ಅತಿ ಹಳೆಯ ಸ್ತೋತ್ರಪಾಠಗಳು ಸುಮಾರು 3,000 ವರುಷಗಳ ಹಿಂದೆ ರಚಿಸಲ್ಪಟ್ಟು, ಬಾಯಿಮಾತಿನ ಮೂಲಕ ಒಬ್ಬರಿಂದೊಬ್ಬರಿಗೆ ದಾಟಿಸಲ್ಪಟ್ಟವು ಎಂದು ನಂಬಲಾಗಿದೆ. “ಕೇವಲ ಕ್ರಿ.ಶ. ಹದಿನಾಲ್ಕನೇ ಶತಮಾನದಲ್ಲಿ ವೇದವು ಲಿಖಿತ ರೂಪದಲ್ಲಿ ಹಾಕಲ್ಪಟ್ಟಿತು,” ಎಂಬುದಾಗಿ ಪಿ. ಕೆ. ಸರಥ್‌ಕುಮಾರ್ ಭಾರತದ ಇತಿಹಾಸ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ.
^ ಪ್ಯಾರ. 24 ಯೆಹೋವ ಎಂಬುದು ಬೈಬಲಿನ ದೇವರ ಹೆಸರಾಗಿದೆ. ಅನೇಕ ಬೈಬಲ್ ಭಾಷಾಂತರಗಳಲ್ಲಿ, ಅದನ್ನು ಕೀರ್ತನೆ 83:18ರಲ್ಲಿ ಕಾಣಸಾಧ್ಯವಿದೆ.
[ಪುಟ 7ರಲ್ಲಿರುವ ಚಿತ್ರ]
ದೇವರ ವಾಕ್ಯಕ್ಕಾಗಿ ‘ಬಯಕೆಯನ್ನು’ ಬೆಳೆಸಿಕೊಳ್ಳಿರಿ. ಬೈಬಲನ್ನು ಕ್ರಮವಾಗಿ ಅಧ್ಯಯನಮಾಡಿರಿ
[ಪುಟ 5ರಲ್ಲಿರುವ ಚಿತ್ರ ಕೃಪೆ]
NASA photo