ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪುರಾತನ ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನು ತನ್ನ ವೃದ್ಧಾಪ್ಯದಲ್ಲಿ ದೇವರಿಗೆ ಅಪನಂಬಿಗಸ್ತನಾಗಿ ಪರಿಣಮಿಸಿದ್ದರಿಂದ, ಅವನ ಪುನರುತ್ಥಾನವಾಗುವುದಿಲ್ಲ ಎಂಬ ತೀರ್ಮಾನಕ್ಕೆ ನಾವು ಬರಸಾಧ್ಯವಿದೆಯೋ?​—1 ಅರಸುಗಳು 11:​3-10.

ನಿಸ್ಸಂದೇಹವಾಗಿಯೂ ಪುನರುತ್ಥಾನವಾಗಲಿರುವ ಕೆಲವು ನಂಬಿಗಸ್ತ ಸ್ತ್ರೀಪುರುಷರ ಹೆಸರುಗಳನ್ನು ಬೈಬಲು ಪಟ್ಟಿಮಾಡುತ್ತದಾದರೂ, ಬೈಬಲಿನಲ್ಲಿ ಯಾರ ಹೆಸರುಗಳು ಕೊಡಲ್ಪಟ್ಟಿವೆಯೊ ಅವರಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪುನರುತ್ಥಾನದ ಪ್ರತೀಕ್ಷೆಗಳ ಕುರಿತು ಅದು ನಿಖರವಾಗಿ ಹೇಳಿಕೆ ನೀಡುವುದಿಲ್ಲ. (ಇಬ್ರಿಯ 11:1-40) ಸೊಲೊಮೋನನ ವಿಷಯದಲ್ಲಾದರೋ, ಅವನು ಮರಣಪಟ್ಟಾಗ ಏನು ಸಂಭವಿಸಿತು ಎಂಬುದನ್ನು, ಕೆಲವು ನಂಬಿಗಸ್ತರು ಮರಣಪಟ್ಟಾಗ ಏನು ಸಂಭವಿಸಿತು ಎಂಬುದರೊಂದಿಗೆ ಹೋಲಿಸುವ ಮೂಲಕ ನಾವು ದೇವರ ನ್ಯಾಯತೀರ್ಪಿನ ಕುರಿತಾದ ಗ್ರಹಿಕೆಯನ್ನು ಪಡೆಯಸಾಧ್ಯವಿದೆ.

ಮೃತಜನರಿಗೆ ಕೇವಲ ಎರಡು ಸಾಧ್ಯತೆಗಳಿವೆ ಎಂದು ಶಾಸ್ತ್ರವಚನಗಳು ತಿಳಿಸುತ್ತವೆ​—⁠ಒಂದು ತಾತ್ಕಾಲಿಕವಾಗಿ ಅಸ್ತಿತ್ವದಲ್ಲಿಲ್ಲದೇ ಹೋಗುವ ಸ್ಥಿತಿ ಮತ್ತು ಮತ್ತೊಂದು ನಿತ್ಯಮರಣದ ಸ್ಥಿತಿ. ಪುನರುತ್ಥಾನಕ್ಕೆ ಅನರ್ಹರಾಗಿ ತೀರ್ಪು ವಿಧಿಸಲ್ಪಡುವವರು ‘ಗೆಹೆನಕ್ಕೆ’ (NW) ಅಥವಾ ‘ಬೆಂಕಿಯ ಕೆರೆಗೆ’ ದೊಬ್ಬಲ್ಪಡುವರು. (ಮತ್ತಾಯ 5:22; ಮಾರ್ಕ 9:47, 48; ಪ್ರಕಟನೆ 20:14) ಇವರಲ್ಲಿ ಪ್ರಥಮ ಮಾನವ ದಂಪತಿಯಾದ ಆದಾಮಹವ್ವರು, ವಿಶ್ವಾಸಘಾತುಕನಾದ ಇಸ್ಕರಿಯೋತ ಯೂದನು ಮತ್ತು ದೇವರು ನ್ಯಾಯತೀರ್ಪನ್ನು ವಿಧಿಸಿದಾಗ ಯಾರು ಮರಣಪಟ್ಟರೋ ಅಂಥವರು, ಅಂದರೆ ನೋಹನ ದಿನಗಳಲ್ಲಿದ್ದ ಜನರು ಹಾಗೂ ಸೊದೋಮ್‌ ಮತ್ತು ಗೊಮೋರ ಪಟ್ಟಣಗಳ ನಿವಾಸಿಗಳು ಸೇರಿರುವರು. * ಪುನರುತ್ಥಾನದ ಅನುಗ್ರಹವುಳ್ಳವರು, ಮರಣಪಟ್ಟಾಗ ಮಾನವಕುಲದ ಸಾಮಾನ್ಯ ಸಮಾಧಿಯಾಗಿರುವ ಷೀಓಲ್‌ಗೆ ಅಥವಾ ಹೇಡೀಸ್‌ಗೆ ಹೋಗುತ್ತಾರೆ. ಅವರ ಭವಿಷ್ಯತ್ತಿನ ಕುರಿತು ಮಾತಾಡುತ್ತಾ ಬೈಬಲ್‌ ಹೀಗೆ ಹೇಳುತ್ತದೆ: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌ ಸಹ,” NW] ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು. ಅವರಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳ ಪ್ರಕಾರ ನ್ಯಾಯತೀರ್ಪಾಯಿತು.”​—⁠ಪ್ರಕಟನೆ 20:⁠13.

ಹೀಗಿರುವುದರಿಂದ, ಇಬ್ರಿಯ 11ನೆಯ ಅಧ್ಯಾಯದಲ್ಲಿ ಯಾರ ಕುರಿತು ಮಾತಾಡಲಾಗಿದೆಯೋ ಆ ನಂಬಿಗಸ್ತರು ಷೀಓಲ್‌ನಲ್ಲಿ ಅಥವಾ ಹೇಡೀಸ್‌ನಲ್ಲಿದ್ದಾರೆ ಮತ್ತು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ದೇವರ ನಿಷ್ಠಾವಂತ ಸೇವಕರಾಗಿದ್ದ ಅಬ್ರಹಾಮ, ಮೋಶೆ ಮತ್ತು ದಾವೀದರು ಒಳಗೂಡಿದ್ದಾರೆ. ಅವರ ಮರಣದ ಕುರಿತು ಬೈಬಲ್‌ ಹೇಗೆ ಮಾತಾಡುತ್ತದೆಂಬುದನ್ನು ಈಗ ಪರಿಗಣಿಸಿರಿ. ಯೆಹೋವನು ಅಬ್ರಹಾಮನಿಗೆ ಹೇಳಿದ್ದು: “ನೀನಂತೂ ಸಮಾಧಾನದೊಡನೆ ಪಿತೃಗಳ ಬಳಿಗೆ ಸೇರುವಿ; ತುಂಬಾ ವೃದ್ಧನಾಗಿ ಉತ್ತರಕ್ರಿಯೆಯನ್ನು ಹೊಂದುವಿ.” (ಆದಿಕಾಂಡ 15:15) ಯೆಹೋವನು ಮೋಶೆಗೆ ಹೇಳಿದ್ದು: “ನೀನು ಮೃತನಾಗಿ ನಿನ್ನ ಪಿತೃಗಳ ಸಂಗಡ ಸೇರುವಿ.” (ಧರ್ಮೋಪದೇಶಕಾಂಡ 31:​16, NIBV) ಸೊಲೊಮೋನನ ತಂದೆಯಾಗಿದ್ದ ದಾವೀದನ ಕುರಿತು ಬೈಬಲ್‌ ಹೇಳುವುದು: “ಅನಂತರ ದಾವೀದನು ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿ ಮಾಡಿದರು.” (1 ಅರಸುಗಳು 2:10) ಹೀಗೆ, ‘ಪಿತೃಗಳ ಬಳಿಗೆ ಸೇರು’ ಎಂಬ ಅಭಿವ್ಯಕ್ತಿಯು, ಆ ವ್ಯಕ್ತಿಯು ಷೀಓಲ್‌ಗೆ ಹೋದನು ಎಂದು ಹೇಳುವಂಥ ಇನ್ನೊಂದು ವಿಧವಾಗಿದೆ.

ಸೊಲೊಮೋನನು ಮರಣಪಟ್ಟಾಗ ಏನು ಸಂಭವಿಸಿತು? ಬೈಬಲ್‌ ಹೀಗೆ ಉತ್ತರಿಸುತ್ತದೆ: “ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲ್ಯರನ್ನು ನಾಲ್ವತ್ತು ವರುಷ ಆಳಿದನಂತರ ಪಿತೃಗಳ ಬಳಿಗೆ ಸೇರಿದನು; ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು.” (1 ಅರಸುಗಳು 11:42, 43) ಆದುದರಿಂದ, ಸೊಲೊಮೋನನು ಷೀಓಲ್‌ ಅಥವಾ ಹೇಡೀಸ್‌ನಲ್ಲಿದ್ದಾನೆ ಮತ್ತು ಅಲ್ಲಿಂದ ಅವನು ಪುನರುತ್ಥಾನಗೊಳಿಸಲ್ಪಡುವನು ಎಂಬ ತೀರ್ಮಾನಕ್ಕೆ ಬರುವುದು ಸಮಂಜಸವಾದದ್ದಾಗಿದೆ.

ಈ ತೀರ್ಮಾನದ ಸೂಚಿತಾರ್ಥವೇನೆಂದರೆ, ಯಾರ ಕುರಿತಾಗಿ ಶಾಸ್ತ್ರವಚನಗಳು ನಿರ್ದಿಷ್ಟವಾಗಿ ‘ಅವರು ಪಿತೃಗಳ ಬಳಿಗೆ ಸೇರಿದರು’ ಎಂದು ಹೇಳುತ್ತವೋ ಆ ಇತರರೂ ಪುನರುತ್ಥಾನಗೊಳಿಸಲ್ಪಡುವ ಸಾಧ್ಯತೆಯಿದೆ. ವಾಸ್ತವದಲ್ಲಿ, ಸೊಲೊಮೋನನ ಬಳಿಕ ಆಳಿದಂಥ ಅರಸರಲ್ಲಿ ಅನೇಕರು ಅಪನಂಬಿಗಸ್ತರಾಗಿದ್ದರೂ, ಅವರ ಬಗ್ಗೆ ಇದೇ ರೀತಿ ತಿಳಿಸಲಾಗಿದೆ. ಇದು ನಂಬಲಸಾಧ್ಯವಾದ ವಿಚಾರವೇನಲ್ಲ, ಏಕೆಂದರೆ ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗಲಿದೆ.’ (ಅ. ಕೃತ್ಯಗಳು 24:15) ಆದರೆ “ಸಮಾಧಿಗಳಲ್ಲಿರುವವರೆಲ್ಲರು” ಎಬ್ಬಿಸಲ್ಪಟ್ಟ ಬಳಿಕವೇ, ಯಾರಿಗೆ ಪುನರುತ್ಥಾನದ ಅನುಗ್ರಹವು ದೊರಕಿದೆ ಎಂಬುದು ನಮಗೆ ಖಂಡಿತವಾಗಿಯೂ ಗೊತ್ತಾಗುವುದು ಎಂಬುದಂತೂ ನಿಶ್ಚಯ. (ಯೋಹಾನ 5:28, 29) ಆದುದರಿಂದ, ಪುರಾತನ ಕಾಲದ ಯಾವುದೇ ನಿರ್ದಿಷ್ಟ ವ್ಯಕ್ತಿಯ ಪುನರುತ್ಥಾನದ ಕುರಿತು ಖಡಾಖಂಡಿತವಾಗಿ ಪ್ರತಿಪಾದಿಸುವುದಕ್ಕೆ ಬದಲಾಗಿ, ಯೆಹೋವನ ಲೋಪರಹಿತ ನಿರ್ಣಯದಲ್ಲಿ ಭರವಸೆಯಿಡುತ್ತಾ ನಾವು ಕಾಯೋಣ.

[ಪಾದಟಿಪ್ಪಣಿ]

^ ಪ್ಯಾರ. 4 ಜೂನ್‌ 1, 1988ರ ಕಾವಲಿನಬುರುಜು (ಇಂಗ್ಲಿಷ್‌) ಸಂಚಿಕೆಯ 30-1ನೇ ಪುಟಗಳನ್ನು ನೋಡಿ.