ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!

ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!

ತಪ್ಪು ಆಲೋಚನೆಗಳನ್ನು ಪ್ರತಿರೋಧಿಸಿರಿ!

ಮೂಲಪಿತನಾದ ಯೋಬನು ಆಪತ್ತನ್ನು ಅನುಭವಿಸುತ್ತಿದ್ದಾಗ ಅವನ ಮೂವರು ಮಿತ್ರರಾದ ಎಲೀಫಜ, ಬಿಲ್ದದ ಮತ್ತು ಚೋಫರರು ಅವನನ್ನು ಭೇಟಿಮಾಡಿದರು. ಅವರು ಸಹಾನುಭೂತಿಯನ್ನು ವ್ಯಕ್ತಪಡಿಸಲು ಮತ್ತು ಸಾಂತ್ವನವನ್ನು ನೀಡಲು ಅವನ ಬಳಿ ಬಂದರು. (ಯೋಬ 2:11) ಈ ಮೂವರಲ್ಲಿ, ಎಲೀಫಜನು ಅತಿ ಹೆಚ್ಚು ಪ್ರಭಾವಶಾಲಿಯಾಗಿದ್ದನು ಮತ್ತು ಬಹುಶಃ ಹಿರಿಯನೂ ಆಗಿದ್ದನು. ಮಾತಾಡಲಾರಂಭಿಸಿದವನು ಮತ್ತು ಹೆಚ್ಚು ಮಾತಾಡಿದವನು ಅವನೇ. ಅವನು ಮಾತಾಡಿದ ಮೂರು ಸಂದರ್ಭಗಳಲ್ಲಿ ಅವನ ಮಾತುಗಳು ಯಾವ ವಿಧದ ಆಲೋಚನೆಗಳನ್ನು ಪ್ರತಿಬಿಂಬಿಸಿದವು?

ಎಲೀಫಜನು ತನಗೆ ಒಮ್ಮೆ ಆದಂಥ ಮಾನವಾತೀತ ಅನುಭವವನ್ನು ಜ್ಞಾಪಕಕ್ಕೆ ತಂದುಕೊಳ್ಳುತ್ತಾ ಹೇಳಿದ್ದು: “ಯಾವದೋ ಒಂದು ಉಸಿರು [“ಆತ್ಮವು,” NIBV] ನನ್ನ ಮುಖಕ್ಕೆ ಸುಳಿಯಲು ಮೈಯೆಲ್ಲಾ ನಿಲುಗೂದಲಾಯಿತು. ನನ್ನ ಕಣ್ಣು ಮುಂದೆ ಒಂದು ರೂಪವು ಇತ್ತು. ನಿಂತಿದ್ದರೂ ಅದು ಏನೆಂಬದು ಗೊತ್ತಾಗಲಿಲ್ಲ. ಒಂದು ಸೂಕ್ಷ್ಮ ಧ್ವನಿಯು ಕೇಳಬಂತು.” (ಯೋಬ 4:15, 16) ಯಾವ ರೀತಿಯ ಆತ್ಮವು ಎಲೀಫಜನ ಆಲೋಚನೆಗಳನ್ನು ಪ್ರಭಾವಿಸಿತ್ತು? ಅವನು ಮುಂದೆ ಆಡಿದಂಥ ಮಾತುಗಳ ಟೀಕಾತ್ಮಕ ದನಿಯು, ಆ ಆತ್ಮವು ಖಂಡಿತವಾಗಿಯೂ ದೇವರ ನೀತಿವಂತ ದೂತರಲ್ಲಿ ಒಬ್ಬನಾಗಿರಲಿಲ್ಲ ಎಂಬುದನ್ನು ತೋರಿಸಿತು. (ಯೋಬ 4:​17, 18) ಅದೊಂದು ದುಷ್ಟ ಆತ್ಮಜೀವಿಯಾಗಿತ್ತು. ಹೀಗಿಲ್ಲದಿರುತ್ತಿದ್ದಲ್ಲಿ, ಸುಳ್ಳನ್ನು ಆಡಿರುವುದಕ್ಕಾಗಿ ಯೆಹೋವನು ಎಲೀಫಜನನ್ನು ಮತ್ತವನ ಇಬ್ಬರು ಸಂಗಡಿಗರನ್ನು ಏತಕ್ಕೆ ಗದರಿಸುತ್ತಿದ್ದನು? (ಯೋಬ 42:⁠7) ಹೌದು, ಎಲೀಫಜನು ದೆವ್ವದ ಪ್ರಭಾವದಡಿಯಲ್ಲಿದ್ದನು. ಅವನ ಹೇಳಿಕೆಗಳು ದೈವಿಕವಲ್ಲದ ಆಲೋಚನೆಗಳನ್ನು ಪ್ರತಿಫಲಿಸಿದವು.

ಎಲೀಫಜನ ಹೇಳಿಕೆಗಳಿಂದ ಯಾವ ವಿಚಾರಗಳನ್ನು ಗುರುತಿಸಸಾಧ್ಯವಿದೆ? ನಾವು ತಪ್ಪು ಆಲೋಚನೆಗಳ ವಿರುದ್ಧ ಎಚ್ಚರಿಕೆಯಿಂದ ಇರುವುದು ಏಕೆ ಪ್ರಾಮುಖ್ಯವಾಗಿದೆ? ಮತ್ತು ಅದನ್ನು ಪ್ರತಿರೋಧಿಸಲು ನಾವು ಯಾವ ಕ್ರಮಗಳನ್ನು ಕೈಗೊಳ್ಳಬಹುದು?

‘ಆತನು ತನ್ನ ಪರಿಚಾರಕರಲ್ಲಿ ನಂಬಿಕೆಯನ್ನಿಡುವದಿಲ್ಲ’

ಎಲೀಫಜನು ಮಾತಾಡಿದಂಥ ಎಲ್ಲ ಮೂರು ಸಂದರ್ಭಗಳಲ್ಲಿ ಸಾದರಪಡಿಸಿದಂಥ ವಿಚಾರವು ಇದಾಗಿತ್ತು: ದೇವರು ಎಷ್ಟು ಕಠೋರನಾಗಿದ್ದಾನೆಂದರೆ ಅವನ ಸೇವಕರು ಏನು ಮಾಡಿದರೂ ಅದು ಆತನನ್ನು ಸಂತೋಷಪಡಿಸುವುದಿಲ್ಲ. ಎಲೀಫಜನು ಯೋಬನಿಗಂದದ್ದು: “ಆಹಾ, ಆತನು ತನ್ನ ಪರಿಚಾರಕರಲ್ಲಿಯೂ ನಂಬಿಕೆಯನ್ನಿಡುವದಿಲ್ಲ, ತನ್ನ ದೂತರ ಮೇಲೆಯೂ ತಪ್ಪುಹೊರಿಸುತ್ತಾನೆ.” (ಯೋಬ 4:18) ತದನಂತರ ಎಲೀಫಜನು ದೇವರ ಬಗ್ಗೆ ಹೇಳಿದ್ದು: “ಆಹಾ, ತನ್ನ ದೂತರಲ್ಲಿಯೂ ಆತನು ನಂಬಿಕೆಯಿಡುವದಿಲ್ಲ, ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಾಗಿರದು.” (ಯೋಬ 15:15) ಅವನು ಕೇಳಿದ್ದು: “ನೀನು ನೀತಿವಂತನಾಗಿರುವದು ಸರ್ವಶಕ್ತನಿಗೆ ಸುಖವೋ?” (ಯೋಬ 22:3) ಈ ದೃಷ್ಟಿಕೋನವನ್ನು ಬಿಲ್ದದನು ಸಹ ಸಮ್ಮತಿಸಿದನು. ಆದುದರಿಂದಲೇ ಅವನು ಹೇಳಿದ್ದು: “ನೋಡಿರಿ, ಆತನ [ದೇವರ] ದೃಷ್ಟಿಯಲ್ಲಿ ಚಂದ್ರನಿಗಾದರೂ ಕಳೆಯಿಲ್ಲ, ನಕ್ಷತ್ರಗಳೂ ಶುದ್ಧವಲ್ಲ.”​—⁠ಯೋಬ 25:⁠5.

ಇಂಥ ಆಲೋಚನೆಗಳಿಂದ ಪ್ರಭಾವಿಸಲ್ಪಡದಂತೆ ನಾವು ಎಚ್ಚರಿಕೆಯಿಂದಿರಬೇಕು. ಏಕೆಂದರೆ ಅದು, ದೇವರು ನಮ್ಮಿಂದ ತೀರ ಹೆಚ್ಚನ್ನು ಅಪೇಕ್ಷಿಸುತ್ತಾನೆಂದು ಭಾವಿಸುವಂತೆ ಮಾಡಬಲ್ಲದು. ಮತ್ತು ಇಂಥ ದೃಷ್ಟಿಕೋನವು ಯೆಹೋವನೊಂದಿಗಿನ ನಮ್ಮ ಸಂಬಂಧದ ಮೇಲೆ ನೇರವಾಗಿ ದಾಳಿಮಾಡುತ್ತದೆ. ಅಷ್ಟುಮಾತ್ರವಲ್ಲದೆ, ಒಂದುವೇಳೆ ನಾವು ಆ ರೀತಿಯ ಆಲೋಚನೆಗಳಿಗೆ ಶರಣಾದರೆ, ಅಗತ್ಯವಿರುವ ಶಿಸ್ತು ನಮಗೆ ಕೊಡಲ್ಪಟ್ಟಾಗ ನಾವು ಯಾವ ಪ್ರತಿಕ್ರಿಯೆ ತೋರಿಸುವೆವು? ಆ ತಿದ್ದುಪಾಟನ್ನು ದೀನಭಾವದಿಂದ ಸ್ವೀಕರಿಸುವ ಬದಲು, ನಮ್ಮ ಹೃದಯವು “ಯೆಹೋವನ ಮೇಲೆ ಕುದಿಯು”ವುದು ಮತ್ತು ಆತನ ಕುರಿತು ನಾವು ಮನಸ್ಸಿನಲ್ಲಿ ಅಸಮಾಧಾನವನ್ನು ಇಟ್ಟುಕೊಳ್ಳುವೆವು. (ಜ್ಞಾನೋಕ್ತಿ 19:⁠3) ಇದು ಆಧ್ಯಾತ್ಮಿಕವಾಗಿ ಎಷ್ಟು ವಿಪತ್ಕಾರಕವಾಗಿರುವುದು!

“ಮನುಷ್ಯಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು?”

ದೇವರು ತುಂಬ ಕಠೋರನು ಎಂಬ ವಿಚಾರಕ್ಕೆ ತುಂಬ ನಿಕಟವಾಗಿ ಸಂಬಂಧಿಸಿರುವ ಇನ್ನೊಂದು ವಿಚಾರವೇನೆಂದರೆ, ಆತನು ಮಾನವರನ್ನು ನಿಷ್ಪ್ರಯೋಜಕರಾಗಿ ದೃಷ್ಟಿಸುತ್ತಾನೆಂಬುದೇ. ಎಲೀಫಜನು ಮೂರನೇ ಸಲ ಮಾತಾಡಿದಾಗ ಈ ಪ್ರಶ್ನೆ ಕೇಳಿದನು: “ಮನುಷ್ಯಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೇ ಪ್ರಯೋಜನವಷ್ಟೆ.” (ಯೋಬ 22:2) ದೇವರ ದೃಷ್ಟಿಯಲ್ಲಿ ಮನುಷ್ಯನು ನಿಷ್ಪ್ರಯೋಜಕನಾಗಿದ್ದಾನೆ ಎಂದು ಎಲೀಫಜನು ಸೂಚಿಸುತ್ತಿದ್ದನು. ಅದೇ ಧಾಟಿಯಲ್ಲಿ ಬಿಲ್ದದನು ವಾದಿಸಿದ್ದು: “ಮನುಷ್ಯನು ದೇವರ ಎಣಿಕೆಯಲ್ಲಿ ನೀತಿವಂತನಾಗಿರುವದು ಹೇಗೆ? ಸ್ತ್ರೀಯಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವದು ಸಾಧ್ಯವೋ?” (ಯೋಬ 25:4) ಅವರ ಈ ವಾದಸರಣಿಗನುಸಾರ, ಬರೀ ಮರ್ತ್ಯ ಮಾನವನಾಗಿರುವ ಯೋಬನು, ದೇವರ ಮುಂದೆ ನೀತಿಯ ನಿಲುವನ್ನು ಪಡೆಯಲು ಹೇಗೆ ತಾನೇ ಸಾಹಸಮಾಡಾನು?

ಇಂದು ಕೆಲವು ಜನರು, ಸ್ವತಃ ತಮ್ಮ ಕುರಿತಾದ ನಕಾರಾತ್ಮಕ ಭಾವನೆಗಳಿಂದ ಪೀಡಿತರಾಗಿದ್ದಾರೆ. ಈ ಸ್ಥಿತಿಯು, ಅವರ ಕುಟುಂಬದಲ್ಲಿ ಸಿಕ್ಕಿರುವ ಪಾಲನೆ, ಜೀವನದ ಒತ್ತಡಗಳಿಗೆ ಒಡ್ಡುವಿಕೆ ಅಥವಾ ಜಾತೀಯ ಇಲ್ಲವೆ ಕುಲಸಂಬಂಧಿತ ಹಗೆತನಕ್ಕೆ ತುತ್ತಾಗಿರುವುದರಂಥ ಅಂಶಗಳಿಂದಾಗಿ ಉಂಟಾಗಿರಬಹುದು. ಆದರೆ ಸೈತಾನನು ಮತ್ತು ಅವನ ದೆವ್ವಗಳು ಸಹ, ಒಬ್ಬ ವ್ಯಕ್ತಿಯನ್ನು ಜಜ್ಜಿಹಾಕುವುದರಿಂದ ವಿಚಿತ್ರ ಆನಂದವನ್ನು ಪಡೆಯುತ್ತಾರೆ. ಅವರು, ಒಬ್ಬ ವ್ಯಕ್ತಿಯು ಏನು ಮಾಡಿದರೂ ಸರ್ವಶಕ್ತ ದೇವರನ್ನು ಸಂತೋಷಪಡಿಸಲಾರನೆಂಬ ಭಾವನೆ ಅವನಲ್ಲಿ ಬರುವಂತೆ ಪ್ರಭಾವಿಸಿದರೆ, ಆಗ ಅವನು ನಿರಾಶೆಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅಂಥ ವ್ಯಕ್ತಿಯು ಕಾಲಕ್ರಮೇಣ ಜೀವವುಳ್ಳ ದೇವರಿಂದ ದೂರ ಸರಿಯುವ, ಹೌದು ಅಗಲಿಹೋಗುವ ಸಾಧ್ಯತೆಯಿದೆ.​—⁠ಇಬ್ರಿಯ 2:1; 3:⁠12.

ಇಳಿವಯಸ್ಸು ಮತ್ತು ಆರೋಗ್ಯದ ಸಮಸ್ಯೆಗಳು ನಮ್ಮ ಮೇಲೆ ಇತಿಮಿತಿಗಳನ್ನು ಹೇರುತ್ತವೆ. ನಮ್ಮ ಯುವಪ್ರಾಯದಲ್ಲಿ ನಾವು ಹೆಚ್ಚು ಆರೋಗ್ಯವಂತರು, ಹೆಚ್ಚು ಬಲವುಳ್ಳವರಾಗಿದ್ದಾಗ ರಾಜ್ಯ ಸೇವೆಯಲ್ಲಿ ಏನನ್ನು ಮಾಡಿದ್ದೇವೊ ಅದಕ್ಕೆ ಹೋಲಿಸುವಾಗ ನಮ್ಮ ಈಗಿನ ಪಾಲು ತೀರ ಚಿಕ್ಕದಾಗಿ ತೋರಬಹುದು. ಆದರೆ, ನಾವು ಈಗ ಏನು ಮಾಡುತ್ತಿದ್ದೇವೊ ಅದರಿಂದ ದೇವರಿಗೆ ಸಂತೋಷವಾಗುವುದಿಲ್ಲವೆಂಬ ಭಾವನೆಯು ನಮ್ಮಲ್ಲಿ ಹುಟ್ಟಬೇಕೆಂದು ಬಯಸುವವರು ಸೈತಾನನು ಮತ್ತು ಅವನ ದೆವ್ವಗಳಾಗಿದ್ದಾರೆಂದು ಗ್ರಹಿಸುವುದು ಎಷ್ಟು ಪ್ರಾಮುಖ್ಯ! ಈ ಆಲೋಚನೆಯನ್ನು ನಾವು ಪ್ರತಿರೋಧಿಸಬೇಕು.

ನಕಾರಾತ್ಮಕ ಆಲೋಚನೆಗಳನ್ನು ಪ್ರತಿರೋಧಿಸುವುದು ಹೇಗೆ?

ಪಿಶಾಚನಾದ ಸೈತಾನನು ಯೋಬನ ಮೇಲೆ ತಂದ ಕಷ್ಟಸಂಕಟದ ಮಧ್ಯೆಯೂ ಅವನು ಹೇಳಿದ್ದು: “ಸಾಯುವ ತನಕ ನನ್ನ ಯಥಾರ್ಥತ್ವದ [“ಸಮಗ್ರತೆಯ,” NW] ಹೆಸರನ್ನು ಕಳಕೊಳ್ಳೆನು.” (ಯೋಬ 27:5) ಯೋಬನು ದೇವರನ್ನು ಪ್ರೀತಿಸುತ್ತಿದ್ದ ಕಾರಣ, ಏನೇ ಆಗಲಿ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅವನು ದೃಢನಿರ್ಧಾರವನ್ನು ಮಾಡಿದ್ದನು, ಮತ್ತು ಈ ನಿರ್ಧಾರವನ್ನು ಯಾವುದೇ ವಿಷಯದಿಂದ ಬದಲಾಯಿಸಲು ಸಾಧ್ಯವಿರಲಿಲ್ಲ. ಇದು ತಾನೇ ನಕಾರಾತ್ಮಕ ಆಲೋಚನೆಗಳನ್ನು ಪ್ರತಿರೋಧಿಸುವ ಪ್ರಾಮುಖ್ಯ ಅಂಶವಾಗಿದೆ. ನಾವು ದೇವರ ಪ್ರೀತಿಯ ಕುರಿತಾದ ಉತ್ತಮ ತಿಳಿವಳಿಕೆಯನ್ನು ಪಡೆದು, ಆ ಪ್ರೀತಿಗಾಗಿ ಹೃತ್ಪೂರ್ವಕವಾದ ಗಣ್ಯತೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಆತನಿಗಾಗಿರುವ ನಮ್ಮ ಪ್ರೀತಿಯನ್ನೂ ಗಾಢಗೊಳಿಸಬೇಕು. ಇದನ್ನು ದೇವರ ವಾಕ್ಯದ ಕ್ರಮವಾದ ಅಧ್ಯಯನ ಮತ್ತು ನಾವು ಕಲಿತಂಥ ವಿಷಯಗಳ ಕುರಿತಾದ ಪ್ರಾರ್ಥನಾಪೂರ್ವಕ ಧ್ಯಾನದ ಮೂಲಕ ಸಾಧಿಸಸಾಧ್ಯವಿದೆ.

ಉದಾಹರಣೆಗೆ, ಯೋಹಾನ 3:16 ತಿಳಿಸುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು.” ಯೆಹೋವನಿಗೆ ಮಾನವಕುಲದ ಜಗತ್ತಿನ ಮೇಲೆ ಗಾಢವಾದ ಪ್ರೀತಿಯಿದೆ, ಮತ್ತು ಮಾನವರೊಂದಿಗಿನ ಆತನ ವ್ಯವಹಾರಗಳು ಆ ಪ್ರೀತಿಯನ್ನು ತೋರಿಸುತ್ತವೆ. ಗತಕಾಲದ ಉದಾಹರಣೆಗಳ ಕುರಿತಾದ ಧ್ಯಾನವು, ಯೆಹೋವನಿಗಾಗಿ ನಮ್ಮ ಗಣ್ಯತೆಯನ್ನು ಬೆಳೆಸಿ, ಆತನಿಗಾಗಿರುವ ನಮ್ಮ ಪ್ರೀತಿಯನ್ನು ಗಾಢಗೊಳಿಸತಕ್ಕದ್ದು. ಇದು ನಾವು ತಪ್ಪಾದ ಇಲ್ಲವೆ ನಕಾರಾತ್ಮಕ ಆಲೋಚನೆಗಳನ್ನು ಪ್ರತಿರೋಧಿಸುವಂತೆ ಸಹಾಯಮಾಡಬಲ್ಲದು.

ಸೊದೋಮ್‌ ಗೊಮೋರ ಪಟ್ಟಣಗಳ ನಾಶನವು ಸನ್ನಿಹಿತವಾಗಿದ್ದ ಸಮಯದಲ್ಲಿ ಯೆಹೋವನು ಅಬ್ರಹಾಮನೊಂದಿಗೆ ವ್ಯವಹರಿಸಿದ ರೀತಿಯನ್ನು ಪರಿಗಣಿಸಿರಿ. ಅಬ್ರಹಾಮನು ಯೆಹೋವನಿಗೆ ಆತನ ನ್ಯಾಯತೀರ್ಪಿನ ಕುರಿತು ಎಂಟು ಬಾರಿ ವಿಚಾರಿಸಿದನು. ಆದರೆ ಯೆಹೋವನು ಒಂದು ಬಾರಿಯೂ ಕಿರಿಕಿರಿಗೊಳ್ಳಲಿಲ್ಲ ಇಲ್ಲವೆ ಬೇಸರಪಡಲಿಲ್ಲ. ಅದರ ಬದಲು ಆತನು ಕೊಟ್ಟ ಉತ್ತರಗಳು ಅಬ್ರಹಾಮನಿಗೆ ಆಶ್ವಾಸನೆ ಹಾಗೂ ಸಾಂತ್ವನವನ್ನು ನೀಡಿದವು. (ಆದಿಕಾಂಡ 18:​22-33) ತದನಂತರ ದೇವರು ಲೋಟನನ್ನೂ ಅವನ ಕುಟುಂಬವನ್ನೂ ಸೊದೋಮಿನಿಂದ ರಕ್ಷಿಸಿದಾಗ, ಬೆಟ್ಟಗಳಿಗೆ ಹೋಗುವ ಬದಲು ಹತ್ತಿರದಲ್ಲಿದ್ದ ಒಂದು ಪಟ್ಟಣಕ್ಕೆ ಹೋಗಲು ಅನುಮತಿಸುವಂತೆ ಲೋಟನು ಕೇಳಿಕೊಂಡನು. ಯೆಹೋವನು ಉತ್ತರಿಸಿದ್ದು: “ಈ ವಿಷಯದಲ್ಲಿಯೂ ನಿನಗೆ ಅನುಗ್ರಹಮಾಡಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡಹುವದಿಲ್ಲ.” (ಆದಿಕಾಂಡ 19:18-22) ಈ ವೃತ್ತಾಂತಗಳು ಯೆಹೋವನು ಒಬ್ಬ ಕಠೋರ, ಪ್ರೀತಿರಹಿತ, ನಿರಂಕುಶಾಧಿಕಾರಿ ಆಗಿದ್ದಾನೆಂಬ ಚಿತ್ರಣವನ್ನು ಕೊಡುತ್ತವೊ? ಇಲ್ಲ. ಆತನು ವಾಸ್ತವವಾಗಿ ಏನಾಗಿದ್ದಾನೆ, ಅಂದರೆ ಒಬ್ಬ ಪ್ರೀತಿಪರ, ದಯಾಪರ, ಕರುಣಾಮಯಿ ಮತ್ತು ಸಹಾನುಭೂತಿಯುಳ್ಳ ಅಧಿಪತಿಯಾಗಿದ್ದಾನೆಂಬುದನ್ನು ಅವು ತೋರಿಸುತ್ತವೆ.

ದೇವರು ತಪ್ಪುಗಳನ್ನು ಹುಡುಕುವವನಾಗಿದ್ದಾನೆ ಮತ್ತು ಯಾರೂ ಆತನನ್ನು ಮೆಚ್ಚಿಸಲಾರರು ಎಂಬ ವಿಚಾರವು ಸುಳ್ಳಾಗಿದೆ ಎಂಬುದನ್ನು ಪುರಾತನ ಇಸ್ರಾಯೇಲಿನ ಆರೋನ, ದಾವೀದ ಮತ್ತು ಮನಸ್ಸೆಯ ಉದಾಹರಣೆಗಳು ರುಜುಪಡಿಸುತ್ತವೆ. ಆರೋನನು ಗಂಭೀರವಾದ ಮೂರು ತಪ್ಪುಗಳನ್ನು ಮಾಡಿದ್ದನು. ಅವನು ಚಿನ್ನದ ಬಸವನನ್ನು ಮಾಡಿದ್ದನು, ಮೋಶೆಯನ್ನು ಟೀಕಿಸುವುದರಲ್ಲಿ ತನ್ನ ಅಕ್ಕ ಮಿರ್ಯಾಮಳೊಂದಿಗೆ ಜೊತೆಗೂಡಿದ್ದನು, ಮತ್ತು ಮೆರೀಬದಲ್ಲಿ ದೇವರ ಹೆಸರನ್ನು ಪವಿತ್ರೀಕರಿಸಲು ಹಾಗೂ ಆತನನ್ನು ಗೌರವಿಸಲು ತಪ್ಪಿಹೋಗಿದ್ದನು. ಹೀಗಿದ್ದರೂ, ಯೆಹೋವನು ಅವನಲ್ಲಿದ್ದ ಸುಗುಣಗಳನ್ನು ನೋಡಿ, ಅವನ ಮರಣದ ವರೆಗೂ ಮಹಾ ಯಾಜಕನಾಗಿ ಸೇವೆಸಲ್ಲಿಸುವುದನ್ನು ಮುಂದುವರಿಸುವಂತೆ ಅನುಮತಿಸಿದನು.​—⁠ವಿಮೋಚನಕಾಂಡ 32:​3, 4; ಅರಣ್ಯಕಾಂಡ 12:​1, 2; 20:​9-13.

ಅರಸನಾದ ದಾವೀದನು ತನ್ನ ಆಳ್ವಿಕೆಯ ಸಮಯದಲ್ಲಿ ಗುರುತರವಾದ ಪಾಪಗಳನ್ನು ಮಾಡಿದನು. ಇವುಗಳಲ್ಲಿ ಹಾದರ, ಒಬ್ಬ ಅಮಾಯಕ ವ್ಯಕ್ತಿಯ ಹತ್ಯೆಗೆ ಸಂಚುಹೂಡುವಿಕೆ ಮತ್ತು ನಿಯಮಕ್ಕೆ ವಿರುದ್ಧವಾಗಿ ಮಾಡಿದ ಜನಗಣತಿ ಸೇರಿತ್ತು. ಆದರೆ ದಾವೀದನು ತೋರಿಸಿದ ಪಶ್ಚಾತ್ತಾಪವನ್ನು ಯೆಹೋವನು ಗಮನಕ್ಕೆ ತಂದುಕೊಂಡನು ಮತ್ತು ಅವನು ಮರಣದ ವರೆಗೂ ರಾಜನಾಗಿ ಇರುವಂತೆ ಅನುಮತಿಸುವ ಮೂಲಕ ರಾಜ್ಯದೊಡಂಬಡಿಕೆಗೆ ನಿಷ್ಠೆಯಿಂದ ಅಂಟಿಕೊಂಡನು.​—⁠2 ಸಮುವೇಲ 12:9; 1 ಪೂರ್ವಕಾಲವೃತ್ತಾಂತ 21:​1-7.

ಯೆಹೂದದ ರಾಜನಾದ ಮನಸ್ಸೆ, ಬಾಳನಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದನು, ತನ್ನ ಪುತ್ರರನ್ನು ಬೆಂಕಿಗೆ ಆಹುತಿಕೊಟ್ಟನು, ಪ್ರೇತಾತ್ಮವಾದದ ಆಚರಣೆಗಳಿಗೆ ಕುಮ್ಮಕ್ಕು ನೀಡಿದನು ಮತ್ತು ದೇವಾಲಯದ ಅಂಗಣಗಳಲ್ಲಿ ಸುಳ್ಳು ಧಾರ್ಮಿಕ ವೇದಿಗಳನ್ನು ಕಟ್ಟಿಸಿದನು. ಹೀಗಿದ್ದರೂ ಅವನು ಹೃದಯದಾಳದಿಂದ ಪಶ್ಚಾತ್ತಾಪ ತೋರಿಸಿದಾಗ, ಯೆಹೋವನು ಅವನನ್ನು ಕ್ಷಮಿಸಿದನು, ಬಂದಿವಾಸದಿಂದ ಬಿಡಿಸಿದನು ಮತ್ತು ಅವನಿಗೆ ರಾಜತನವನ್ನು ವಾಪಸ್ಸು ಕೊಟ್ಟನು. (2 ಪೂರ್ವಕಾಲವೃತ್ತಾಂತ 33:​1-13) ನಾವೇನು ಮಾಡಿದರೂ ಸಂತೋಷಪಡಿಸಲಾಗದ ದೇವರೊಬ್ಬನು ಇಂಥ ಕೃತ್ಯಗಳನ್ನು ಮಾಡುವನೊ? ಖಂಡಿತವಾಗಿಯೂ ಇಲ್ಲ!

ಆ ಸುಳ್ಳು ಆಪಾದಕನೇ ಅಪರಾಧಿಯಾಗಿದ್ದಾನೆ

ಯೆಹೋವನಲ್ಲಿ ಯಾವ ಗುಣಲಕ್ಷಣಗಳಿವೆಯೆಂದು ಸೈತಾನನು ಆರೋಪಿಸುತ್ತಾನೊ, ಅದೇ ಗುಣಲಕ್ಷಣಗಳು ಮುಖ್ಯವಾಗಿ ಸೈತಾನನಲ್ಲೇ ಇವೆಯೆಂಬ ಸಂಗತಿಯು ನಮ್ಮನ್ನು ಆಶ್ಚರ್ಯಗೊಳಿಸಬಾರದು. ಸೈತಾನನು ನಿರ್ದಯಿ ಹಾಗೂ ಕಠೋರನಾಗಿದ್ದಾನೆ. ಇದನ್ನು, ಗತಕಾಲದಲ್ಲಿ ಸುಳ್ಳು ಆರಾಧನೆಯೊಂದಿಗೆ ಸಂಬಂಧಿಸಿದ ಶಿಶು ಬಲಿಗಳ ಆಚರಣೆಯಿಂದ ಸ್ಪಷ್ಟವಾಗಿ ನೋಡಬಹುದು. ಧರ್ಮಭ್ರಷ್ಟರಾಗಿದ್ದ ಇಸ್ರಾಯೇಲ್ಯರು ತಮ್ಮ ಪುತ್ರಪುತ್ರಿಯರನ್ನು ಬೆಂಕಿಗೆ ಆಹುತಿಕೊಟ್ಟರು ಮತ್ತು ಇಂಥ ವಿಚಾರವು ಯೆಹೋವನ ಮನಸ್ಸಿನಲ್ಲಿ ಹುಟ್ಟಲೇ ಇಲ್ಲ.​—⁠ಯೆರೆಮೀಯ 7:⁠31.

ಸೈತಾನನೇ ತಪ್ಪುಗಳನ್ನು ಹುಡುಕುವವನಾಗಿದ್ದಾನೆ, ಯೆಹೋವನಲ್ಲ. ಪ್ರಕಟನೆ 12:10 ಸೈತಾನನನ್ನು, “ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನು” ಎಂದು ಕರೆಯುತ್ತದೆ. ಇನ್ನೊಂದು ಬದಿಯಲ್ಲಿ ಯೆಹೋವನ ಬಗ್ಗೆ ಕೀರ್ತನೆಗಾರನು ಹಾಡಿದ್ದು: ‘ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು? ನೀನು ಪಾಪವನ್ನು ಕ್ಷಮಿಸುವವನು.’​—⁠ಕೀರ್ತನೆ 130:3, 4.

ತಪ್ಪು ಆಲೋಚನೆಗಳೇ ಇಲ್ಲದಿರುವ ಸಮಯ

ಪಿಶಾಚನಾದ ಸೈತಾನನು ಮತ್ತು ಅವನ ದೆವ್ವಗಳು ಸ್ವರ್ಗದಿಂದ ಹೊರದೊಬ್ಬಲ್ಪಟ್ಟಾಗ ಅಲ್ಲಿದ್ದ ಆತ್ಮಜೀವಿಗಳಿಗೆ ಎಷ್ಟು ನೆಮ್ಮದಿಯಾಗಿರಬೇಕು! (ಪ್ರಕಟನೆ 12:​7-9) ಅಂದಿನಿಂದ ಆ ದುಷ್ಟಾತ್ಮಗಳಿಗೆ, ಸ್ವರ್ಗದಲ್ಲಿದ್ದ ದೂತರಿಂದ ರಚಿತವಾಗಿದ್ದ ಯೆಹೋವನ ಕುಟುಂಬದ ಚಟುವಟಿಕೆಗಳನ್ನು ಯಾವುದೇ ರೀತಿಯಲ್ಲಿ ಬಾಧಿಸುವುದು ಅಸಾಧ್ಯವಾಗಿತ್ತು.​—⁠ದಾನಿಯೇಲ 10:⁠13.

ಭೂನಿವಾಸಿಗಳು ಸಹ ಹತ್ತಿರದ ಭವಿಷ್ಯತ್ತಿನಲ್ಲಿ ಹರ್ಷಿಸುವರು. ಏಕೆಂದರೆ ಬೇಗನೆ, ಪರಲೋಕದಿಂದ ಇಳಿದು ಬರುವ ಒಬ್ಬ ದೇವದೂತನು ಅಧೋಲೋಕದ ಬೀಗದ ಕೈಯನ್ನೂ ದೊಡ್ಡ ಸರಪಣಿಯನ್ನೂ ಕೈಯಲ್ಲಿ ಹಿಡಿದುಕೊಂಡು ಸೈತಾನನನ್ನೂ ಅವನ ದೆವ್ವಗಳನ್ನೂ ಬಂಧಿಸಿ, ನಿಷ್ಕ್ರಿಯತೆಯೆಂಬ ಅಧೋಲೋಕಕ್ಕೆ ದೊಬ್ಬುವನು. (ಪ್ರಕಟನೆ 20:​1-3) ಇದು ಸಂಭವಿಸುವಾಗ ನಮಗೆಷ್ಟು ಉಪಶಮನ ಸಿಗುವುದು!

ಅಲ್ಲಿಯ ವರೆಗೆ, ತಪ್ಪು ಆಲೋಚನೆಗಳ ವಿರುದ್ಧ ನಾವು ಎಚ್ಚರಿಕೆಯಿಂದಿರಬೇಕು. ನಮ್ಮ ಮನಸ್ಸಿನೊಳಗೆ ತಪ್ಪಾದ ಇಲ್ಲವೆ ನಕಾರಾತ್ಮಕ ಆಲೋಚನೆಗಳು ಮೆಲ್ಲನೆ ನುಸುಳುತ್ತಿವೆಯೆಂದು ನಮಗೆ ತಿಳಿದುಬರುವಾಗ, ಯೆಹೋವನ ಪ್ರೀತಿಯ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ನಾವು ಅವುಗಳನ್ನು ಪ್ರತಿರೋಧಿಸಬೇಕು. “ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.”​—⁠ಫಿಲಿಪ್ಪಿ 4:6, 7.

[ಪುಟ 26ರಲ್ಲಿರುವ ಚಿತ್ರ]

ಯೋಬನು ನಕಾರಾತ್ಮಕ ಆಲೋಚನೆಗಳನ್ನು ಪ್ರತಿರೋಧಿಸಿದನು

[ಪುಟ 28ರಲ್ಲಿರುವ ಚಿತ್ರ]

ಯೆಹೋವನು ಸಹಾನುಭೂತಿಯುಳ್ಳ ಪರಮಾಧಿಕಾರಿಯಾಗಿದ್ದಾನೆಂದು ಲೋಟನು ಕಲಿತುಕೊಂಡನು