ಯೆಹೋವನು ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲ
ಯೆಹೋವನು ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲ
ಯೂದಾಯದಲ್ಲಿದ್ದ ಕ್ರೈಸ್ತರು ಕ್ರೂರವಾದ ಹಿಂಸೆಯನ್ನು ಅನುಭವಿಸುತ್ತಿದ್ದರು ಮತ್ತು ಅವರ ಸುತ್ತಲಿದ್ದ ಜನರ ಪ್ರಾಪಂಚಿಕ ದೃಷ್ಟಿಕೋನದೊಂದಿಗೂ ಅವರಿಗೆ ಹೆಣಗಾಡಲಿಕ್ಕಿತ್ತು. ಅವರನ್ನು ಉತ್ತೇಜಿಸುವ ಸಲುವಾಗಿ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುತ್ತಿದ್ದಾಗ ಯೆಹೋವನು ಅವರಿಗೆ ಹೇಳಿದ ಮಾತುಗಳನ್ನು ಅಪೊಸ್ತಲ ಪೌಲನು ಉಲ್ಲೇಖಿಸಿದನು. ಪೌಲನು ಬರೆದದ್ದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5; ಧರ್ಮೋಪದೇಶಕಾಂಡ 31:6) ಈ ವಾಗ್ದಾನವು ಪ್ರಥಮ ಶತಮಾನದ ಇಬ್ರಿಯ ಕ್ರೈಸ್ತರನ್ನು ನಿಸ್ಸಂಶಯವಾಗಿ ಬಲಪಡಿಸಿತು.
ಇದೇ ವಾಗ್ದಾನವು, ‘ಕಠಿನಕಾಲಗಳಲ್ಲಿ’ ಜೀವಿಸುತ್ತಿರುವುದರಿಂದ ಬರುವ ಚಿಂತೆಗಳನ್ನು ನಿಭಾಯಿಸಲು ನಮ್ಮನ್ನು ಬಲಪಡಿಸಬೇಕು. (2 ತಿಮೊಥೆಯ 3:1) ನಾವು ಯೆಹೋವನಲ್ಲಿ ಭರವಸೆಯಿಟ್ಟು ಅದಕ್ಕನುಸಾರ ಕ್ರಿಯೆಗೈಯುವುದಾದರೆ, ಅತಿ ಕಷ್ಟಕರ ಸನ್ನಿವೇಶಗಳಲ್ಲಿಯೂ ಆತನು ನಮಗೆ ಆಸರೆಯಾಗಿರುವನು. ಈ ವಾಗ್ದಾನಕ್ಕನುಸಾರ ಯೆಹೋವನು ಹೇಗೆ ಕ್ರಿಯೆಗೈಯುತ್ತಾನೆ ಎಂಬುದನ್ನು ತಿಳಿದುಕೊಳ್ಳಲು, ಒಬ್ಬನು ತನ್ನ ಜೀವನಾಧಾರಕ್ಕಾಗಿರುವ ಕೆಲಸವನ್ನು ಥಟ್ಟನೆ ಕಳೆದುಕೊಳ್ಳುವ ಉದಾಹರಣೆಯನ್ನು ಪರಿಗಣಿಸೋಣ.
ಅನಿರೀಕ್ಷಿತ ಸಂಗತಿಯನ್ನು ಎದುರಿಸುವುದು
ಲೋಕದಾದ್ಯಂತ ನಿರುದ್ಯೋಗಿಗಳು ಹೆಚ್ಚಾಗುತ್ತಾ ಇದ್ದಾರೆ. ಪೋಲೆಂಡ್‌ನ ಒಂದು ಪತ್ರಿಕೆಗನುಸಾರ, ನಿರುದ್ಯೋಗವನ್ನು “ಅತಿ ಕಷ್ಟಕರವಾದ ಸಾಮಾಜಿಕಾರ್ಥಿಕ ಸಮಸ್ಯೆಗಳಲ್ಲಿ ಒಂದು” ಎಂಬುದಾಗಿ ಪರಿಗಣಿಸಲಾಗಿದೆ. ಉದ್ಯಮಶೀಲ ರಾಷ್ಟ್ರಗಳು ಸಹ ಇದಕ್ಕೆ ಹೊರತಾಗಿಲ್ಲ. ಉದಾಹರಣೆಗೆ ಆರ್ಥಿಕ ಸಹಕಾರ ಹಾಗೂ ವಿಕಾಸಕ್ಕಾಗಿರುವ ಸಂಸ್ಥೆಯ ಸದಸ್ಯರಲ್ಲಿಯೂ 2004ರೊಳಗೆ ನಿರುದ್ಯೋಗವು “3.2 ಕೋಟಿಗಿಂತ ಹೆಚ್ಚಿನ ಸಂಖ್ಯೆಗೆ ಏರಿತ್ತು. ಇದು 1930ಗಳ ಮಹಾ ಆರ್ಥಿಕ ಕುಸಿತದ ಸಮಯದಲ್ಲಿ ಇದ್ದದ್ದಕ್ಕಿಂತಲೂ ಹೆಚ್ಚಾಗಿತ್ತು.” ಪೋಲೆಂಡ್‌ನಲ್ಲಿನ, 2003ರ ಡಿಸೆಂಬರ್‌ನಷ್ಟಕ್ಕೆ 30 ಲಕ್ಷ ನಿರುದ್ಯೋಗಿಗಳನ್ನು ಕೇಂದ್ರಿಯ ಸಂಖ್ಯಾ ಸಂಗ್ರಹಣ ಆಫೀಸ್ ಪಟ್ಟಿಮಾಡಿದೆ. ಇದರಲ್ಲಿ “ಕೆಲಸ ಮಾಡುವ ವಯೋಮಿತಿಯಲ್ಲಿರುವ ಜನರು 18 ಪ್ರತಿಶತವಿದ್ದರು.” 2002ರಲ್ಲಿ ದಕ್ಷಿಣ ಆಫ್ರಿಕದಲ್ಲಿರುವ ಆಫ್ರಿಕನ್ ಜನರ ಮಧ್ಯೆ ನಿರುದ್ಯೋಗದ ಪ್ರಮಾಣವು 47.8 ಪ್ರತಿಶತವನ್ನು ತಲಪಿತು ಎಂದು ಒಂದು ಮೂಲವು ತಿಳಿಸಿತು.
ಥಟ್ಟನೆ ಉದ್ಯೋಗವನ್ನು ಕಳೆದುಕೊಳ್ಳುವುದು ಮತ್ತು ಅನಿರೀಕ್ಷಿತವಾಗಿ ಕೆಲಸದಿಂದ ತೆಗೆಯಲ್ಪಡುವುದು, ಇವು ಯೆಹೋವನ ಸಾಕ್ಷಿಗಳನ್ನು ಸೇರಿಸಿ ಅನೇಕರಿಗೆ ನಿಜವಾದ ಬೆದರಿಕೆಯಾಗಿವೆ. “ಕಾಲ ಮತ್ತು ಮುಂಗಾಣದ ಸಂಭವವು” ಯಾರಿಗೂ ಎದುರಾಗಸಾಧ್ಯವಿದೆ. (ಪ್ರಸಂಗಿ 9:11, NW) “ನನ್ನ ಮನೋವ್ಯಥೆಗಳು ಹೆಚ್ಚಾಗಿವೆ” ಎಂಬ ದಾವೀದನ ಮಾತುಗಳನ್ನೇ ನಾವು ಸಹ ಹೇಳುವ ಸಂದರ್ಭ ಬರಬಹುದು. (ಕೀರ್ತನೆ 25:17, NW) ಅಂಥ ಅನನುಕೂಲಕರವಾದ ಸನ್ನಿವೇಶಗಳನ್ನು ನೀವು ನಿಭಾಯಿಸಲು ಶಕ್ತರಾಗಿರುವಿರೊ? ಅಂಥ ಸನ್ನಿವೇಶಗಳು ನಿಮ್ಮ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಭೌತಿಕ ಸುಕ್ಷೇಮವನ್ನು ಬಾಧಿಸಬಹುದು. ಒಂದುವೇಳೆ ನೀವು ನಿರುದ್ಯೋಗಿಯಾಗುವಲ್ಲಿ, ನಿಮ್ಮ ಕಾಲಮೇಲೆ ಪುನಃ ನಿಂತುಕೊಳ್ಳಲು ಶಕ್ತರಾಗಿರುವಿರೊ?
ಭಾವನಾತ್ಮಕ ಒತ್ತಡವನ್ನು ನಿಭಾಯಿಸುವುದು
ಸಾಂಪ್ರದಾಯಿಕವಾಗಿ ಪುರುಷರನ್ನು ಕುಟುಂಬಪೋಷಣೆಗಾಗಿ ದುಡಿಯುವವರಾಗಿ ವೀಕ್ಷಿಸಲಾಗುವ ಕಾರಣ “ಉದ್ಯೋಗದ ನಷ್ಟದಿಂದ ಪುರುಷರಿಗೆ ಹೆಚ್ಚು ವ್ಯಥೆಯಾಗುತ್ತದೆ” ಎಂದು ಮನಶ್ಶಾಸ್ತ್ರಜ್ಞರಾದ ಯಾನೂಶ್ ವೀಯೆಟ್‌ಜಿನ್‌ಸ್ಕೀ ವಿವರಿಸುತ್ತಾರೆ. ಇದು ಒಬ್ಬ ಪುರುಷನಿಗೆ ಎಷ್ಟೊಂದು “ಭಾವನಾತ್ಮಕ ತಳಮಳವನ್ನು ಉಂಟುಮಾಡಸಾಧ್ಯವಿದೆ” ಎಂದರೆ ಕೋಪದಿಂದ ಹಿಡಿದು ಆಶಾಹೀನ ಸ್ಥಿತಿಗೆ ತಲಪಿಸಬಲ್ಲದು. ಕೆಲಸದಿಂದ ತೆಗೆಯಲ್ಪಟ್ಟ ಒಬ್ಬ ತಂದೆಯು ತನ್ನ ಸ್ವಪ್ರತಿಷ್ಠೆಯನ್ನು ಕಳೆದುಕೊಳ್ಳಬಹುದು ಮತ್ತು “ತನ್ನ ಕುಟುಂಬದೊಂದಿಗೆ ಜಗಳವಾಡಲು” ಆರಂಭಿಸಬಹುದು.
ಇಬ್ಬರು ಮಕ್ಕಳಿರುವ ಕ್ರೈಸ್ತ ತಂದೆಯಾದ ಆ್ಯಡಮ್ ತಾನು ಕೆಲಸವನ್ನು ಕಳೆದುಕೊಂಡಾಗ ಹೇಗನಿಸಿತು ಎಂಬುದನ್ನು ಈ ರೀತಿಯಲ್ಲಿ ವಿವರಿಸುತ್ತಾನೆ: “ನಾನು ಬೇಗನೆ ಉದ್ರಿಕ್ತನಾಗುತ್ತಿದ್ದೆ; ಪ್ರತಿಯೊಂದು ವಿಷಯವೂ ನನ್ನನ್ನು ಕರಕರೆಗೊಳಿಸುತ್ತಿತ್ತು. ರಾತ್ರಿಯ ನಿದ್ದೆಯಲ್ಲಿಯೂ ನನ್ನ ಕೆಲಸದ ಬಗ್ಗೆ ಮತ್ತು ಆಗ ತಾನೇ ಅನಿರೀಕ್ಷಿತವಾಗಿ ಕೆಲಸವನ್ನು ಕಳೆದುಕೊಂಡಿದ್ದ ನನ್ನ ಹೆಂಡತಿಯ ಆವಶ್ಯಕತೆಗಳನ್ನು ಹಾಗೂ ಮಕ್ಕಳ ಆವಶ್ಯಕತೆಗಳನ್ನು ಒದಗಿಸುವುದರ ಬಗ್ಗೆಯೇ ಕನಸುಕಾಣುತ್ತಿದ್ದೆ.” ಒಂದು ಮಗುವಿದ್ದ ವಿವಾಹಿತ ದಂಪತಿಯಾದ ರಿಶರ್ಡ್ ಮತ್ತು ಮರೀಓಲ ತಮ್ಮ ಆದಾಯದ ಮೂಲವನ್ನು ಕಳೆದುಕೊಂಡರು. ಅವರಿಗೆ ದೊಡ್ಡ ಮೊತ್ತದ ಬ್ಯಾಂಕ್ ಸಾಲವೂ ಇತ್ತು. ಹೆಂಡತಿಯು ಹೇಳುವುದು: “ನಾವು ಆ ಸಾಲವನ್ನು ತೆಗೆದುಕೊಂಡದ್ದು ದೊಡ್ಡ ತಪ್ಪಾಗಿತ್ತು ಎಂದು ಯಾವಾಗಲೂ ನನ್ನ ಮನಸ್ಸಾಕ್ಷಿಯು ನನ್ನನ್ನು ಚುಚ್ಚುತ್ತಿತ್ತು. ಇದೆಲ್ಲವೂ ನನ್ನ ತಪ್ಪು ಎಂದು ನಾನು ನೆನಸುತ್ತಾ ಇದ್ದೆ.” ಅಂಥ ಪರಿಸ್ಥಿತಿಗಳು ಎದುರಾದಾಗ, ನಾವು ಸುಲಭವಾಗಿ ಉದ್ರೇಕಿತರಾಗಬಹುದು, ಚಿಂತೆಗೊಳಗಾಗಬಹುದು ಇಲ್ಲವೆ ಕಹಿಮನೋಭಾವನೆಯನ್ನು ಬೆಳೆಸಿಕೊಳ್ಳಬಹುದು ಮತ್ತು ನಮ್ಮ ಭಾವನೆಗಳೇ ನಮ್ಮನ್ನು ನಿಯಂತ್ರಿಸಲು ಆರಂಭಿಸಸಾಧ್ಯವಿದೆ. ಇಂಥ ಸಮಯದಲ್ಲಿ ನಮ್ಮಲ್ಲಿ ಬೆಳೆಯುವ ನಕಾರಾತ್ಮಕ ಭಾವನೆಗಳನ್ನು ನಾವು ಹೇಗೆ ಹತೋಟಿಯಲ್ಲಿಡಬಲ್ಲೆವು?
ಸಕಾರಾತ್ಮಕ ಮನೋಭಾವವನ್ನು ಹೇಗೆ ಕಾಪಾಡಿಕೊಳ್ಳುವುದು ಎಂಬುದರ ಕುರಿತು ಬೈಬಲ್ ಪರಿಣಾಮಕಾರಿ ಸಲಹೆಯನ್ನು ನೀಡುತ್ತದೆ. ಪೌಲನು ಬುದ್ಧಿವಾದ ನೀಡಿದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ಪ್ರಾರ್ಥನೆಯಲ್ಲಿ ಯೆಹೋವನನ್ನು ಸಮೀಪಿಸುವುದು ನಮಗೆ “ದೇವಶಾಂತಿ”ಯನ್ನು ಒದಗಿಸುತ್ತದೆ. ಇದು ದೇವರಲ್ಲಿನ ನಮ್ಮ ನಂಬಿಕೆಯ ಮೇಲಾಧಾರಿತವಾದ ಶಾಂತ ಮನಸ್ಥಿತಿಯಾಗಿದೆ. ಆ್ಯಡಮ್‌ನ ಹೆಂಡತಿ ಈರೇನಾ ಹೇಳುವುದು: “ಪ್ರಾರ್ಥನೆಯಲ್ಲಿ ಯೆಹೋವನಿಗೆ ನಮ್ಮ ಪರಿಸ್ಥಿತಿಯ ಬಗ್ಗೆ ಮತ್ತು ನಾವು ಹೇಗೆ ನಮ್ಮ ಜೀವನವನ್ನು ಸರಳೀಕರಿಸುವೆವು ಎಂಬುದರ ಬಗ್ಗೆ ತಿಳಿಸಿದೆವು. ಸಾಮಾನ್ಯವಾಗಿ ಅತಿ ಬೇಗನೆ ಚಿಂತಿತರಾಗುವ ನನ್ನ ಗಂಡ, ಈ ನಮ್ಮ ಸಮಸ್ಯೆಗೆ ಯಾವುದಾದರೊಂದು ಪರಿಹಾರವು ಖಂಡಿತ ಸಿಗಬಹುದು ಎಂದು ಭಾವಿಸಲಾರಂಭಿಸಿದರು.”
ನೀವು ಒಂದುವೇಳೆ ಅನಿರೀಕ್ಷಿತವಾಗಿ ಉದ್ಯೋಗವನ್ನು ಕಳೆದುಕೊಂಡಲ್ಲಿ, ಪರ್ವತ ಪ್ರಸಂಗದಲ್ಲಿ ಯೇಸು ಕ್ರಿಸ್ತನು ಹೇಳಿದ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಲು ನಿಮಗೆ ಒಳ್ಳೇ ಅವಕಾಶವಿದೆ: “ನಮ್ಮ ಪ್ರಾಣಧಾರಣೆಗೆ ಏನು ಊಟಮಾಡಬೇಕು, ಏನು ಕುಡಿಯಬೇಕು, ನಮ್ಮ ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. . . . ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:25, 33) ರಿಶರ್ಡ್ ಮತ್ತು ಮರೀಓಲ ತಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡಲು ಈ ಸಲಹೆಯನ್ನು ಅನ್ವಯಿಸಿಕೊಂಡರು. ಮರೀಓಲ ಜ್ಞಾಪಿಸಿಕೊಳ್ಳುವುದು: “ನನ್ನ ಗಂಡನು ಯಾವಾಗಲೂ ನನ್ನನ್ನು ಸಂತೈಸುತ್ತಿದ್ದನು ಮತ್ತು ಯೆಹೋವನು ನಮ್ಮನ್ನು ಎಂದಿಗೂ ಕೈಬಿಡುವದಿಲ್ಲ ಎಂದು ಒತ್ತಿಹೇಳುತ್ತಿದ್ದನು.” ಅವಳ ಗಂಡನು ಕೂಡಿಸಿದ್ದು: “ಎಡೆಬಿಡದೆ ಜೊತೆಯಾಗಿ ಪ್ರಾರ್ಥಿಸಿದ ಕಾರಣ, ನಾವು ದೇವರಿಗೂ ಪರಸ್ಪರರಿಗೂ ಇನ್ನೂ ಸಮೀಪವಾದೆವು ಮತ್ತು ಇದು ತಾನೇ ನಮಗೆ ಬೇಕಾದ ಸಾಂತ್ವನವನ್ನು ನೀಡಿತು.”
ಪರಿಸ್ಥಿತಿಯನ್ನು ನಿಭಾಯಿಸುವಂತೆ ದೇವರ ಪವಿತ್ರಾತ್ಮವೂ ನಮಗೆ ಸಹಾಯವನ್ನು ನೀಡುತ್ತದೆ. ಪವಿತ್ರಾತ್ಮವು ನಮ್ಮಲ್ಲಿ ಬೆಳೆಸುವ ಶಮೆದಮೆ ಅಥವಾ ಸ್ವನಿಯಂತ್ರಣ ಎಂಬಂಥ ಗುಣವು, ಸ್ವತಃ ನಮ್ಮನ್ನು ಮತ್ತು ನಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಡಲು ನಮಗೆ ಸಹಾಯಮಾಡುತ್ತದೆ. (ಗಲಾತ್ಯ 5:22, 23) ಇದು ಸುಲಭದ ಸಂಗತಿಯಾಗಿರಲಿಕ್ಕಿಲ್ಲ. ಆದರೆ ಅದೇ ಸಮಯದಲ್ಲಿ ಇದು ಅಸಾಧ್ಯ ಸಂಗತಿಯೂ ಅಲ್ಲ. ಏಕೆಂದರೆ, ‘ಪರಲೋಕದಲ್ಲಿರುವ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮವರವನ್ನು ಕೊಡುವನು’ ಎಂದು ಯೇಸು ವಾಗ್ದಾನಿಸಿದ್ದಾನೆ.—ಲೂಕ 11:13; 1 ಯೋಹಾನ 5:14, 15.
ನಿಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಅಲಕ್ಷಿಸಬೇಡಿ
ಅನಿರೀಕ್ಷಿತವಾಗಿ ಕೆಲಸದಿಂದ ತೆಗೆದುಹಾಕಲ್ಪಡುವುದು, ಬಹಳ ಸ್ಥಿರಚಿತ್ತನಾಗಿರುವ ಕ್ರೈಸ್ತನನ್ನು ಸಹ ಒಮ್ಮೆಗೆ ಕುಗ್ಗಿಸಿಬಿಡಬಹುದು. ಆದರೆ ಇಂಥ ಸಮಯದಲ್ಲಿ ನಾವು ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ಅಲಕ್ಷಿಸಬಾರದು. ಉದಾಹರಣೆಗೆ 40 ವರುಷದವನಾದ ಮೋಶೆಯ ಉದಾಹರಣೆಯನ್ನು ಪರಿಗಣಿಸಿರಿ. ರಾಜಮನೆತನದಲ್ಲಿ ಅವನಿಗಿದ್ದ ಸ್ಥಾನವನ್ನು ಕಳೆದುಕೊಂಡು, ಐಗುಪ್ತ್ಯರು ಅಸಹ್ಯಪಡುತ್ತಿದ್ದ ಕುರಿಮೇಯಿಸುವ ಕೆಲಸವನ್ನು ಮಾಡಬೇಕಾದಾಗ, ಅವನ ಇಡೀ ಜೀವನವೇ ಬದಲಾಯಿತು. (ಆದಿಕಾಂಡ 46:34) ತನ್ನ ಹೊಸ ಪರಿಸ್ಥಿತಿಯೊಂದಿಗೆ ಮೋಶೆಯು ಹೊಂದಿಕೊಳ್ಳಬೇಕಿತ್ತು. ಮುಂದಿನ 40 ವರುಷಗಳ ತನಕ ಯೆಹೋವನು ತನ್ನನ್ನು ರೂಪಿಸುವಂತೆ ಮತ್ತು ತನ್ನ ಮುಂದಿದ್ದ ಹೊಸ ಕೆಲಸಕ್ಕೆ ಸಿದ್ಧಗೊಳಿಸುವಂತೆ ಅವನು ಅನುಮತಿಸಿದನು. (ವಿಮೋಚನಕಾಂಡ 2:11-22; ಅ. ಕೃತ್ಯಗಳು 7:29, 30; ಇಬ್ರಿಯ 11:24-26) ಕಷ್ಟಗಳನ್ನು ಎದುರಿಸುತ್ತಿದ್ದಾಗಲೂ, ಮೋಶೆಯು ಆಧ್ಯಾತ್ಮಿಕ ವಿಷಯಗಳ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸಿದನು ಮತ್ತು ಯೆಹೋವನಿಂದ ತರಬೇತಿಯನ್ನು ಸ್ವೀಕರಿಸಲು ಸಿದ್ಧನಿದ್ದನು. ಅನನುಕೂಲಕರವಾದ ಸನ್ನಿವೇಶಗಳು ನಮ್ಮ ಆಧ್ಯಾತ್ಮಿಕ ಮೌಲ್ಯಗಳನ್ನು ಮರೆಮಾಡುವಂತೆ ನಾವು ಎಂದಿಗೂ ಬಿಡಬಾರದು.
ಅನಿರೀಕ್ಷಿತವಾಗಿ ಕೆಲಸವನ್ನು ಕಳೆದುಕೊಳ್ಳುವುದು ಆಘಾತವನ್ನು ಉಂಟುಮಾಡಬಲ್ಲದಾದರೂ, ಯೆಹೋವ ದೇವರೊಂದಿಗೆ ಮತ್ತು ಆತನ ಜನರೊಂದಿಗೆ ನಮ್ಮ ಬಂಧಗಳನ್ನು ಬಲಪಡಿಸಲು ಇದೇ ಸೂಕ್ತ ಸಮಯವಾಗಿದೆ. ಹಿಂದೆ ತಿಳಿಸಲಾದ ಆ್ಯಡಮ್‌ಗೆ ಇದೇ ರೀತಿ ಅನಿಸಿತು. ಅವನು ಹೇಳುವುದು: “ನಾನು ಮತ್ತು ನನ್ನ ಪತ್ನಿ ಕೆಲಸವನ್ನು ಕಳೆದುಕೊಂಡಾಗ, ಕೂಟಗಳಿಗೆ ಹಾಜರಾಗದೆ ಇರುವ ಇಲ್ಲವೆ ಸಾಕ್ಷಿಕಾರ್ಯವನ್ನು ಕಡಿಮೆಗೊಳಿಸುವ ಆಲೋಚನೆ ಎಂದಿಗೂ ನಮ್ಮ ಮನಸ್ಸಿಗೆ ಬರಲಿಲ್ಲ. ಇದು, ನಮ್ಮ ನಾಳಿನ ಕುರಿತು ನಾವು ಮಿತಿಮೀರಿ ಚಿಂತಿಸದಂತೆ ತಡೆಯಿತು.” ರಿಶರ್ಡ್ ಸಹ ಅದೇ ರೀತಿಯ ಭಾವನೆಗಳನ್ನು ಹಂಚಿಕೊಳ್ಳುತ್ತಾನೆ: “ಕೂಟಗಳ ಮತ್ತು ಶುಶ್ರೂಷೆಯ ಕಾರಣದಿಂದ ನಾವು ನಮ್ಮ ಪರಿಸ್ಥಿತಿಯನ್ನು ನಿಭಾಯಿಸಶಕ್ತರಾದೆವು; ಇಲ್ಲವಾದರೆ ಖಂಡಿತವಾಗಿಯೂ ನಾವು ಚಿಂತೆಯಲ್ಲಿಯೇ ಮುಳುಗಿಹೋಗಿರುತ್ತಿದ್ದೆವು. ಹಾಗೂ ಇತರರೊಂದಿಗೆ ಮಾಡಿದ ಆಧ್ಯಾತ್ಮಿಕ ಸಂಭಾಷಣೆಗಳು ನಮ್ಮನ್ನು ಬಲಪಡಿಸಿದವು, ಏಕೆಂದರೆ ಅವು ನಮ್ಮ ಗಮನವನ್ನು ನಮ್ಮ ಸ್ವಂತ ಅಗತ್ಯಗಳ ಬದಲಿಗೆ ಇತರರ ಅಗತ್ಯಗಳ ಕಡೆಗೆ ಸೆಳೆದವು.”—ಫಿಲಿಪ್ಪಿ 2:4.
ಉದ್ಯೋಗದ ಬಗ್ಗೆ ಚಿಂತಿಸುತ್ತಾ ಇರುವ ಬದಲು ವೈಯಕ್ತಿಕ ಅಧ್ಯಯನ, ಸಭಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಇಲ್ಲವೆ ನಿಮ್ಮ ಶುಶ್ರೂಷೆಯ ವಿಸ್ತರಿಸುವಿಕೆ ಈ ಮುಂತಾದ ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಪ್ರಯತ್ನಿಸಿರಿ. ಯಾವುದೇ ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವ ಬದಲು ‘ಕರ್ತನ ಕೆಲಸವನ್ನು ಅತ್ಯಾಸಕ್ತಿಯಿಂದ ಮಾಡಲು’ ಬಹಳಷ್ಟಿರುವುದು. ಇದು ನಿಮಗೂ ನೀವು ಸಾರುವಾಗ ರಾಜ್ಯದ ಸಂದೇಶಕ್ಕೆ ಪ್ರತಿಕ್ರಿಯಿಸುವ ಯಥಾರ್ಥ ಜನರಿಗೂ ಆನಂದವನ್ನು ತರುತ್ತದೆ.—ನಿಮ್ಮ ಕುಟುಂಬಕ್ಕೆ ಭೌತಿಕವಾಗಿ ಒದಗಿಸುವುದು
ಹಾಗಿದ್ದರೂ, ಬರೀ ಆಧ್ಯಾತ್ಮಿಕ ಪೋಷಣೆಯು ಹಸಿದ ಹೊಟ್ಟೆಯನ್ನು ತುಂಬಿಸಲಾರದು. ನಾವು ಮುಂದಿನ ಮೂಲತತ್ತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಆ್ಯಡಮ್ ತಿಳಿಸುವುದು: “ನಮ್ಮ ಭೌತಿಕ ಅಗತ್ಯಗಳನ್ನು ಪೂರೈಸಲು ಸಭೆಯಲ್ಲಿರುವ ಸಹೋದರರು ಕೂಡಲೆ ಮುಂಬರುವುದಾದರೂ, ಉದ್ಯೋಗವನ್ನು ಹುಡುಕುವ ಜವಾಬ್ದಾರಿ ಕ್ರೈಸ್ತರಾದ ನಮಗಿದೆ.” ಯೆಹೋವನ ಮತ್ತು ಆತನ ಜನರ ಬೆಂಬಲದ ಮೇಲೆ ನಾವು ಅವಲಂಬಿಸಬಲ್ಲೆವಾದರೂ, ಒಂದು ಉದ್ಯೋಗವನ್ನು ಹುಡುಕುವ ಪ್ರಥಮ ಹೆಜ್ಜೆಯನ್ನು ಸ್ವತಃ ನಾವೇ ತೆಗೆದುಕೊಳ್ಳಬೇಕೆಂಬುದನ್ನು ನಾವು ಮರೆಯಬಾರದು.
ಯಾವ ಪ್ರಥಮ ಹೆಜ್ಜೆಯನ್ನು ನಾವು ತೆಗೆದುಕೊಳ್ಳಸಾಧ್ಯವಿದೆ? “ದೇವರು ಕ್ರಿಯೆಗೈಯುತ್ತಾನೆ, ಯಾವುದಾದರೊಂದು ಅದ್ಭುತ ನಡೆಯಬಹುದು ಎಂದು ನಿರೀಕ್ಷಿಸುತ್ತಾ ಕೈಕಟ್ಟಿ ಕಾಯುತ್ತಾ ಕುಳಿತುಕೊಳ್ಳಬೇಡಿ,” ಎಂದು ಆ್ಯಡಮ್ ಹೇಳುತ್ತಾನೆ. ಅವನು ಮುಂದುವರಿಸಿದ್ದು: “ನೀವು ಕೆಲಸವನ್ನು ಹುಡುಕುವಾಗ ನೀವೊಬ್ಬ ಯೆಹೋವನ ಸಾಕ್ಷಿ ಎಂದು ಗುರುತಿಸುವುದನ್ನು ಮರೆಯಬೇಡಿ. ಧಣಿಗಳು ಸಾಮಾನ್ಯವಾಗಿ ಅದನ್ನು ಗಣ್ಯಮಾಡುತ್ತಾರೆ.” ರಿಶರ್ಡ್ ಈ ಸಲಹೆಯನ್ನು ನೀಡುತ್ತಾನೆ: “ಯಾವುದಾದರೂ ಕೆಲಸವಿದೆಯೊ ಎಂದು ನಿಮಗೆ ಪರಿಚಯವಿರುವ ಜನರಲ್ಲಿ ಕೇಳಿರಿ. ಉದ್ಯೋಗ ಮಂಡಲಿಯಲ್ಲಿ ಆಗಾಗ ವಿಚಾರಿಸುತ್ತಾ ಇರಿ, ‘ಅಂಗವಿಕಲ ವ್ಯಕ್ತಿಯ ಪರಾಮರಿಕೆ ಮಾಡಲು ಒಬ್ಬಾಕೆ ಸ್ತ್ರೀ ಬೇಕಾಗಿದ್ದಾರೆ’; ಇಲ್ಲವೆ, ‘ತಾತ್ಕಾಲಿಕ ಉದ್ಯೋಗ: ಚಹಾ ಎಲೆಯನ್ನು ಕೀಳುವವರು ಬೇಕಾಗಿದ್ದಾರೆ’ ಈ ಮುಂತಾದ ಜಾಹಿರಾತುಗಳಿಗಾಗಿ ಹುಡುಕಿರಿ. ಕೆಲಸಕ್ಕಾಗಿ ಹುಡುಕುತ್ತಾ ಇರಿ! ಶ್ರಮದ ಕೆಲಸವನ್ನು ಮಾಡಬೇಕಾಗಿರಲಿ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾದ ಕೆಲಸವನ್ನು ಮಾಡಬೇಕಾಗಿರಲಿ ಅದೇ ಸಿಗಬೇಕು ಇದೇ ಸಿಗಬೇಕು ಎಂದು ನೆನಸಬೇಡಿ.”
ಹೌದು, ‘[ಯೆಹೋವನು] ನಿಮ್ಮ ಸಹಾಯಕನು.’ ಆತನು ‘ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.’ (ಇಬ್ರಿಯ 13:5, 6) ಆದುದರಿಂದ ನೀವು ಮಿತಿಮೀರಿ ಚಿಂತೆಪಡಬೇಕಾದ ಅಗತ್ಯವಿಲ್ಲ. ಕೀರ್ತನೆಗಾರನಾದ ದಾವೀದನು ಬರೆದದ್ದು: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು.” (ಕೀರ್ತನೆ 37:5) ‘ನಮ್ಮ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಡುವುದು’ ಎಂದರೆ, ನಮ್ಮ ಸನ್ನಿವೇಶಗಳು ಅನನುಕೂಲವಾಗಿ ಕಂಡುಬಂದರೂ ನಾವು ಯೆಹೋವನನ್ನು ಅವಲಂಬಿಸಿ, ವಿಷಯಗಳನ್ನು ಆತನ ಮಾರ್ಗಗಳಿಗೆ ಅನುಸಾರವಾಗಿ ಮಾಡುವುದು ಎಂದಾಗಿದೆ.
ಆ್ಯಡಮ್ ಮತ್ತು ಈರೇನಾ, ಕಿಟಕಿ ಹಾಗೂ ಮೆಟ್ಟಿಲುಸಾಲುಗಳನ್ನು ಶುಚಿಗೊಳಿಸುವ ಕೆಲಸವನ್ನು ಮಾಡುವ ಮತ್ತು ಮಿತವ್ಯಯಿಗಳಾಗಿರುವ ಮೂಲಕ ತಮ್ಮನ್ನು ತಾವೇ ಆರ್ಥಿಕವಾಗಿ ಬೆಂಬಲಿಸಿಕೊಳ್ಳಲು ಕಲಿತರು. ಮಾತ್ರವಲ್ಲದೆ, ಅವರು ಉದ್ಯೋಗ ಮಂಡಲಿಗೆ ಕ್ರಮವಾಗಿ ಹೋಗುತ್ತಿದ್ದರು. ಈರೇನಾ ತಿಳಿಸುವುದು: “ನಮಗೆ ಯಾವಾಗ ಅಗತ್ಯವಿತ್ತೊ ಆಗಲೇ ಸಹಾಯವು ಸರಿಯಾಗಿ ದೊರಕುತ್ತಿತ್ತು.” ಅವಳ ಗಂಡನು ಕೂಡಿಸುವುದು: “ನಾವು ಪ್ರಾರ್ಥಿಸುವ ವಿಷಯಗಳು ಎಲ್ಲ ಸಮಯದಲ್ಲಿ ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರಲಿಕ್ಕಿಲ್ಲ ಎಂಬುದನ್ನು ನಾವು ಅನುಭವದಿಂದ ಕಲಿತುಕೊಂಡೆವು. ಇದು ನಮಗೆ ನಮ್ಮ ಸ್ವಂತ ವಿವೇಕದ ಮೇಲೆ ಅವಲಂಬಿಸದಂತೆ ಮತ್ತು ನಮ್ಮ ಸ್ವಂತ ತಿಳಿವಳಿಕೆಗೆ ಅನುಸಾರ ಕ್ರಿಯೆಗೈಯದಂತೆ ಕಲಿಸಿತು. ದೇವರು ಒದಗಿಸುವ ಪರಿಹಾರಕ್ಕಾಗಿ ತಾಳ್ಮೆಯಿಂದ ಕಾಯುವುದು ಅತ್ಯುತ್ತಮವಾಗಿದೆ.”—ಯಾಕೋಬ 1:4.
ರಿಶರ್ಡ್ ಮತ್ತು ಮರೀಓಲ ಅನೇಕ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದರು, ಆದರೆ ಅದೇ ಸಮಯದಲ್ಲಿ ಎಲ್ಲಿ ಹೆಚ್ಚಿನ ಅಗತ್ಯವಿದೆಯೊ ಅಂಥ ಕ್ಷೇತ್ರದಲ್ಲಿ ಸಾಕ್ಷಿಕಾರ್ಯವನ್ನು ಮಾಡುವುದರಲ್ಲಿ ತಮ್ಮನ್ನು ಒಳಗೂಡಿಸಿಕೊಂಡರು. “ನಮಗೆ ಊಟಕ್ಕೆ ಇನ್ನೇನಿಲ್ಲ ಎನ್ನುವ ಸಮಯದಲ್ಲಿಯೇ ನಮಗೆ ಕೆಲಸವು ಸಿಗುತ್ತಿತ್ತು. ನಾವು ಉತ್ತಮ ಸಂಬಳದ ಉದ್ಯೋಗವನ್ನು ನಿರಾಕರಿಸುತ್ತಿದ್ದೆವು, ಏಕೆಂದರೆ ಅದು ನಮ್ಮ ದೇವಪ್ರಭುತ್ವಾತ್ಮಕ ಜವಾಬ್ದಾರಿಗಳಿಗೆ ಅಡ್ಡಿಬರುತ್ತಿದ್ದವು. ನಾವು ಯೆಹೋವನ ಮೇಲೆ ಆತುಕೊಳ್ಳಲು ಇಷ್ಟಪಟ್ಟೆವು” ಎಂದು ರಿಶರ್ಡ್ ತಿಳಿಸುತ್ತಾನೆ. ತಾವು ಕಡಿಮೆ ಬಾಡಿಗೆಗೆ ಮನೆಯನ್ನು ಹೊಂದುವಂತೆ ಯೆಹೋವನು ಹೇಗೊ ವಿಷಯಗಳನ್ನು ನಿರ್ವಹಿಸಿದನು ಎಂಬುದು ಅವರ ನಂಬಿಕೆ ಮತ್ತು ಕೊನೆಗೆ ರಿಶರ್ಡ್ ಒಂದು ಉದ್ಯೋಗವನ್ನು ಕಂಡುಕೊಂಡನು.
ಜೀವನಾಧಾರಕ್ಕಾಗಿರುವ ಕೆಲಸವನ್ನು ಕಳೆದುಕೊಳ್ಳುವುದು ಬಹಳ ಚಿಂತಾಜನಕ ಸಂಗತಿಯಾಗಿದೆ, ಆದರೆ ಯೆಹೋವನು ನಿಮ್ಮನ್ನು ತೊರೆದುಬಿಡುವುದಿಲ್ಲ ಎಂಬುದನ್ನು ವೈಯಕ್ತಿಕವಾಗಿ ಅನುಭವಿಸಿ ನೋಡಲು ಇದನ್ನು ಒಂದು ಸಂದರ್ಭವಾಗಿ ಏಕೆ ವೀಕ್ಷಿಸಬಾರದು? ಯೆಹೋವನು ನಿಮ್ಮನ್ನು ನೋಡಿಕೊಳ್ಳುತ್ತಾನೆ. (1 ಪೇತ್ರ 5:6, 7) ಆತನು ಪ್ರವಾದಿಯಾದ ಯೆಶಾಯನ ಮೂಲಕ ವಾಗ್ದಾನಿಸಿದ್ದು: “ದಿಗ್ಭ್ರಮೆಗೊಳ್ಳದಿರು, ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿಸುತ್ತೇನೆ; ಹೌದು, ನಿನಗೆ ಸಹಾಯಕೊಡುತ್ತೇನೆ.” (ಯೆಶಾಯ 41:10) ಉದ್ಯೋಗದ ನಷ್ಟ ಮುಂತಾದ ಯಾವುದೇ ಅನಿರೀಕ್ಷಿತ ಘಟನೆಯು ನಿಮ್ಮನ್ನು ನಿಷ್ಕ್ರಿಯರನ್ನಾಗಿ ಮಾಡುವಂತೆ ಬಿಡಬೇಡಿರಿ. ನಿಮ್ಮಿಂದ ಸಾಧ್ಯವಾದದ್ದೆಲ್ಲವನ್ನು ಮಾಡಿ, ಉಳಿದವುಗಳನ್ನು ಯೆಹೋವನ ಹಸ್ತಕ್ಕೆ ಒಪ್ಪಿಸಿರಿ. ಯೆಹೋವನಲ್ಲಿ ಕಾದುಕೊಂಡಿರಿ, ಹೌದು ‘ಶಾಂತವಾಗಿ ಕಾದುಕೊಂಡಿರಿ.’ (ಪ್ರಲಾಪಗಳು 3:26) ಆಗ ನೀವು ಹೇರಳವಾಗಿ ಆಶೀರ್ವದಿಸಲ್ಪಡುವಿರಿ.—ಯೆರೆಮೀಯ 17:7.
[ಪುಟ 9ರಲ್ಲಿರುವ ಚಿತ್ರ]
ಆಧ್ಯಾತ್ಮಿಕ ಚಟುವಟಿಕೆಗಳಿಗಾಗಿ ಸಮಯವನ್ನು ಉಪಯೋಗಿಸಿರಿ
[ಪುಟ 10ರಲ್ಲಿರುವ ಚಿತ್ರಗಳು]
ಮಿತವ್ಯಯಿಗಳಾಗಿರಲು ಕಲಿತುಕೊಳ್ಳಿರಿ ಮತ್ತು ಉದ್ಯೋಗವನ್ನು ಹುಡುಕುವಾಗ ಅದೇ ಸಿಗಬೇಕು ಇದೇ ಸಿಗಬೇಕು ಎಂದು ನೆನಸಬೇಡಿ