“ವಿವಿಧಭಾಷೆಗಳ” ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ
“ವಿವಿಧಭಾಷೆಗಳ” ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳುತ್ತಾರೆ
‘ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.’—ಜೆಕರ್ಯ 8:23.
ಸಂದರ್ಭ ಮತ್ತು ಸನ್ನಿವೇಶವು ಅನುಕೂಲಕರವಾಗಿತ್ತು. ಅದು ಸಾ.ಶ. 33ರ ಪಂಚಾಶತ್ತಮದ ದಿನವಾಗಿತ್ತು. ಕೆಲವು ವಾರಗಳಿಗೆ ಮುಂಚೆ, ವ್ಯಾಪಕವಾಗಿದ್ದ ರೋಮನ್ ಸಾಮ್ರಾಜ್ಯದ ಕಡಿಮೆಪಕ್ಷ 15 ಪ್ರಾಂತಗಳಿಂದ ಬಂದಿದ್ದ ಯೆಹೂದ್ಯರು ಮತ್ತು ಯೆಹೂದಿ ಮತಾವಲಂಬಿಗಳು, ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ ಯೆರೂಸಲೇಮಿನಲ್ಲಿ ಕಿಕ್ಕಿರಿದಿದ್ದರು. ಅಂದು ಅವರಲ್ಲಿ ಸಾವಿರಾರು ಮಂದಿ, ಸಾಮಾನ್ಯ ಜನರು ಪವಿತ್ರಾತ್ಮಭರಿತರಾಗಿ ಆ ಸಾಮ್ರಾಜ್ಯದಲ್ಲಿ ಮಾತಾಡಲ್ಪಡುತ್ತಿದ್ದ ಅನೇಕ ಭಾಷೆಗಳಲ್ಲಿ ಸುವಾರ್ತೆ ಸಾರುವುದನ್ನು ಕೇಳಿಸಿಕೊಂಡರು. ಪುರಾತನ ಬಾಬೆಲಿನಲ್ಲಿ ಆದಂತೆ ಇವರಿಗೆ ಗಲಿಬಿಲಿಯಾಗಲಿಲ್ಲ, ಬದಲಾಗಿ ಅವರಿಗೆ ಅದು ಅರ್ಥವಾಗುವ ರೀತಿಯಲ್ಲಿತ್ತು. (ಅ. ಕೃತ್ಯಗಳು 2:1-12) ಈ ಸಂದರ್ಭವು, ಕ್ರೈಸ್ತ ಸಭೆಯ ಸ್ಥಾಪನೆ ಮತ್ತು ಇಂದಿನ ವರೆಗೆ ಮುಂದುವರಿಸಲ್ಪಟ್ಟಿರುವ ಬಹುಭಾಷೀಯ ಹಾಗೂ ಅಂತಾರಾಷ್ಟ್ರೀಯ ಶೈಕ್ಷಣಿಕ ಕೆಲಸದ ಆರಂಭವನ್ನು ಗುರುತಿಸಿತು.
2 ಯೇಸುವಿನ ಶಿಷ್ಯರು ಆ ಕಾಲದಲ್ಲಿ ಮಾತಾಡಲ್ಪಡುತ್ತಿದ್ದ ಜನಪ್ರಿಯ ಭಾಷೆಯಾದ ಗ್ರೀಕ್ ಭಾಷೆಯನ್ನು ಮಾತಾಡಲು ಶಕ್ತರಾಗಿದ್ದಿರಬಹುದು. ದೇವಾಲಯದಲ್ಲಿ ಮಾತಾಡಲ್ಪಡುತ್ತಿದ್ದ ಹೀಬ್ರು ಭಾಷೆಯನ್ನು ಸಹ ಅವರು ಉಪಯೋಗಿಸಿದರು. ಆದರೆ, ಆ ಪಂಚಾಶತ್ತಮ ದಿನದಂದು, ಅಲ್ಲಿ ನೆರೆದಿದ್ದ ಜನರ ಸ್ವಂತ ಭಾಷೆಗಳಲ್ಲಿ ಮಾತಾಡುವ ಮೂಲಕ ತಮ್ಮ ವಿಭಿನ್ನ ಭಾಷೆಯ ಸಭಿಕರನ್ನು ಅವರು ‘ಆಶ್ಚರ್ಯಗೊಳಿಸಿದರು.’ ಇದರ ಫಲಿತಾಂಶವೇನಾಗಿತ್ತು? ಕೇಳುಗರ ಹೃದಯಗಳು ತಮ್ಮ ಮಾತೃಭಾಷೆಯಲ್ಲಿ ಕೇಳಿಸಿಕೊಂಡ ಪ್ರಮುಖ ಸತ್ಯಗಳಿಂದ ಪ್ರಭಾವಿತವಾದವು. ಆ ದಿನದ ಸಾಯಂಕಾಲದಷ್ಟಕ್ಕೆ, ಶಿಷ್ಯರ ಚಿಕ್ಕ ಗುಂಪು 3,000ಕ್ಕಿಂತಲೂ ಹೆಚ್ಚು ಮಂದಿಯಿಂದ ಕೂಡಿದ್ದ ಒಂದು ದೊಡ್ಡ ಸಮೂಹವಾಗಿ ಬೆಳೆದಿತ್ತು!—ಅ. ಕೃತ್ಯಗಳು 2:37-42.
3 ಈ ಮಹತ್ವಪೂರ್ಣ ಘಟನೆಯು ನಡೆದ ಸ್ವಲ್ಪದರಲ್ಲೇ, ಯೆರೂಸಲೇಮಿನಲ್ಲಿ ಹಿಂಸೆಯ ಅಲೆಯು ಎದ್ದಿತು ಮತ್ತು ಇದರಿಂದಾಗಿ “ಚದರಿಹೋದವರು ಅಲ್ಲಲ್ಲಿ ಹೋಗಿ ಸುವಾರ್ತಾವಾಕ್ಯವನ್ನು ಸಾರುತ್ತಿದ್ದರು.” (ಅ. ಕೃತ್ಯಗಳು 8:1-4) ಉದಾಹರಣೆಗೆ, ಅಪೊಸ್ತಲರ ಕೃತ್ಯಗಳು ಪುಸ್ತಕದ 8ನೇ ಅಧ್ಯಾಯದಲ್ಲಿ ನಾವು ಫಿಲಿಪ್ಪನ ಕುರಿತು ಓದುತ್ತೇವೆ. ಇವನು ಗ್ರೀಕ್ ಭಾಷೆಯನ್ನು ಮಾತಾಡುತ್ತಿದ್ದ ಸೌವಾರ್ತಿಕನಾಗಿದ್ದನು ಎಂದು ತೋರುತ್ತದೆ. ಫಿಲಿಪ್ಪನು ಸಮಾರ್ಯದವರಿಗೆ ಸಾರಿದನು. ಅವನು ಕ್ರಿಸ್ತನ ಕುರಿತಾದ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸಿದಂಥ ಐಥಿಯೋಪ್ಯ ದೇಶದ ಕಂಚುಕಿಗೂ ಸುವಾರ್ತೆಯನ್ನು ಸಾರಿದನು.—ಅ. ಕೃತ್ಯಗಳು 6:1-5; 8:5-13, 26-40; 21:8, 9.
4 ಕ್ರೈಸ್ತರು ಯೆರೂಸಲೇಮ್, ಯೂದಾಯ ಮತ್ತು ಗಲಿಲಾಯದ ಗಡಿಪ್ರದೇಶಗಳ ಹೊರಗೆ ಸ್ಥಳಾಂತರಿಸಿ ವಾಸಿಸಲಿಕ್ಕಾಗಿ ಸ್ಥಳಗಳನ್ನು ಹುಡುಕತೊಡಗಿದಂತೆ, ಅವರು ಕುಲಸಂಬಂಧಿತ ಹಾಗೂ ಭಾಷಾಸಂಬಂಧಿತವಾದ ಹೊಸ ತಡೆಗಟ್ಟುಗಳನ್ನು ಎದುರಿಸಿದರು. ಅವರಲ್ಲಿ ಕೆಲವರು ಯೆಹೂದ್ಯರಿಗೆ ಮಾತ್ರ ಸುವಾರ್ತೆಯನ್ನು ಸಾರಿದ್ದಿರಬಹುದು. ಆದರೆ ಶಿಷ್ಯನಾದ ಲೂಕನು ವರದಿಸುವುದು: “ಅವರಲ್ಲಿ ಕುಪ್ರದ್ವೀಪದವರು ಕೆಲವರೂ ಕುರೇನ್ಯದವರು ಕೆಲವರೂ ಅಂತಿಯೋಕ್ಯಕ್ಕೆ ಬಂದು ಗ್ರೀಕರ ಸಂಗಡಲೂ ಮಾತಾಡಿ ಕರ್ತನಾದ ಯೇಸುವಿನ ವಿಷಯವಾದ ಸುವಾರ್ತೆಯನ್ನು ತಿಳಿಸಿದರು.”—ಅ. ಕೃತ್ಯಗಳು 11:19-21.
ಪಕ್ಷಪಾತವಿಲ್ಲದ ದೇವರಿಂದ ಸರ್ವರಿಗಾಗಿ ಒಂದು ಸಂದೇಶ
5 ಇಂಥ ವಿಕಸನಗಳು ದೇವರ ಮಾರ್ಗಗಳಿಗೆ ಹೊಂದಿಕೆಯಲ್ಲಿವೆ, ಏಕೆಂದರೆ ದೇವರಲ್ಲಿ ಪಕ್ಷಪಾತವಿಲ್ಲ. ಅನ್ಯಜನಾಂಗಗಳ ಜನರ ಕುರಿತಾದ ತನ್ನ ದೃಷ್ಟಿಕೋನವನ್ನು ಸರಿಹೊಂದಿಸಿಕೊಳ್ಳುವಂತೆ ಅಪೊಸ್ತಲ ಪೇತ್ರನು ಯೆಹೋವನಿಂದ ಸಹಾಯಪಡೆದ ಬಳಿಕ, ಅವನು ಕೃತಜ್ಞತೆಯಿಂದ ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.” (ಅ. ಕೃತ್ಯಗಳು 10:34, 35; ಕೀರ್ತನೆ 145:9) ಈ ಮುಂಚೆ ಕ್ರೈಸ್ತರ ಹಿಂಸಕನಾಗಿದ್ದ ಅಪೊಸ್ತಲ ಪೌಲನು, ‘ಎಲ್ಲ ಮನುಷ್ಯರು ರಕ್ಷಣೆಯನ್ನು ಹೊಂದಬೇಕೆಂಬುದು ದೇವರ ಚಿತ್ತವಾಗಿದೆ’ ಎಂದು ಪ್ರಕಟಿಸಿದಾಗ, ದೇವರು ಪಕ್ಷಪಾತಿಯಲ್ಲ ಎಂಬುದನ್ನು ಪುನಃ ದೃಢೀಕರಿಸಿದನು. (1 ತಿಮೊಥೆಯ 2:4) ಯಾವುದೇ ಲಿಂಗಜಾತಿಯ, ಕುಲದ, ರಾಷ್ಟ್ರದ ಅಥವಾ ಭಾಷೆಯ ಜನರಿಗೆ ರಾಜ್ಯದ ನಿರೀಕ್ಷೆಯು ಲಭ್ಯಗೊಳಿಸಲ್ಪಟ್ಟಿರುವುದರಲ್ಲಿ ಸೃಷ್ಟಿಕರ್ತನ ನಿಷ್ಪಕ್ಷಪಾತವು ಸುವ್ಯಕ್ತವಾಗುತ್ತದೆ.
6 ಈ ಅಂತಾರಾಷ್ಟ್ರೀಯ ವಿಸ್ತರಣೆಯು ಶತಮಾನಗಳಿಗೆ ಮುಂಚೆಯೇ ಮುಂತಿಳಿಸಲ್ಪಟ್ಟಿತ್ತು. ದಾನಿಯೇಲನ ಪ್ರವಾದನೆಗನುಸಾರ, “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು [ಯೇಸುವಿಗೆ] ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು.” (ದಾನಿಯೇಲ 7:14) ಯೆಹೋವನ ರಾಜ್ಯದ ಕುರಿತು ನೀವು ಓದಶಕ್ತರಾಗುವಂತೆ ಈ ಪತ್ರಿಕೆಯು 151 ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತದೆ ಮತ್ತು ಲೋಕವ್ಯಾಪಕವಾಗಿ ವಿತರಿಸಲ್ಪಡುತ್ತದೆ ಎಂಬ ವಾಸ್ತವಾಂಶವೇ, ಆ ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ರುಜುಪಡಿಸುತ್ತದೆ.
7 ವಿಭಿನ್ನ ಭಾಷೆಗಳ ಜನರು ಬೈಬಲಿನ ಜೀವದಾಯಕ ಸಂದೇಶವನ್ನು ಕೇಳಿಸಿಕೊಳ್ಳುವಂಥ ಒಂದು ಕಾಲಾವಧಿಯನ್ನು ಬೈಬಲ್ ಮುಂತಿಳಿಸಿತು. ಸತ್ಯ ಆರಾಧನೆಯು ಅನೇಕರನ್ನು ಹೇಗೆ ಆಕರ್ಷಿಸುವುದು ಎಂಬುದನ್ನು ವಿವರಿಸುತ್ತಾ ಜೆಕರ್ಯನು ಪ್ರವಾದಿಸಿದ್ದು: “ಆ ಕಾಲದಲ್ಲಿ ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು ಯೆಹೂದ್ಯನೊಬ್ಬನ [‘ದೇವರ ಇಸ್ರಾಯೇಲಿನ’ ಭಾಗವಾಗಿರುವ ಆತ್ಮಾಭಿಷಿಕ್ತ ಕ್ರೈಸ್ತನ] ಸೆರಗನ್ನು ಹಿಡಿದುಕೊಂಡು—ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ ಎಂದು ಹೇಳುವರು.” (ಜೆಕರ್ಯ 8:23; ಗಲಾತ್ಯ 6:16) ಮತ್ತು ಒಂದು ದರ್ಶನದಲ್ಲಿ ತಾನೇನನ್ನು ಕಂಡನೋ ಅದರ ಕುರಿತು ತಿಳಿಸುತ್ತಾ ಅಪೊಸ್ತಲ ಯೋಹಾನನು ಹೇಳಿದ್ದು: “ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು ಕಂಡೆನು. ಅವರು ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು.” (ಪ್ರಕಟನೆ 7:9) ಇಂಥ ಪ್ರವಾದನೆಗಳು ನಿಜವಾಗುತ್ತಿರುವುದನ್ನು ನಾವು ನೋಡಿದ್ದೇವೆ!
ಎಲ್ಲ ರೀತಿಯ ಜನರನ್ನು ತಲಪುವುದು
8 ಇಂದು ಹೆಚ್ಚೆಚ್ಚು ಜನರು ಬೇರೆ ದೇಶಗಳಿಗೆ ವಲಸೆಹೋಗುತ್ತಾರೆ. ಜಾಗತೀಕರಣವು ವಲಸೆಹೋಗುವಿಕೆಯ
ಒಂದು ಹೊಸ ಯುಗವನ್ನೇ ಆರಂಭಿಸಿಬಿಟ್ಟಿದೆ. ಯುದ್ಧ ಪ್ರದೇಶಗಳಿಂದ ಮತ್ತು ಆರ್ಥಿಕವಾಗಿ ಅವನತಿಹೊಂದಿರುವ ಕ್ಷೇತ್ರಗಳಿಂದ ಸಹಸ್ರಾರು ಜನರು ಭೌತಿಕವಾಗಿ ಸುಭದ್ರವಾದ ಜೀವನ ರೀತಿಯನ್ನು ಹುಡುಕುತ್ತಾ ಹೆಚ್ಚು ಸುರಕ್ಷಿತವಾದ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಅನೇಕ ದೇಶಗಳಲ್ಲಿ ವಲಸೆಗಾರರ ಮತ್ತು ನಿರಾಶ್ರಿತರ ಮಹಾಪೂರವು, ವಿದೇಶೀ ಭಾಷೆಯನ್ನು ಮಾತಾಡುವ ಗುಂಪುಗಳ ರಚನೆಗೆ ಕಾರಣವಾಗಿದೆ. ಉದಾಹರಣೆಗೆ, ಫಿನ್ಲೆಂಡ್‌ನಲ್ಲಿ 120ಕ್ಕಿಂತಲೂ ಹೆಚ್ಚು ಭಾಷೆಗಳು ಮಾತಾಡಲ್ಪಡುತ್ತವೆ; ಆಸ್ಟ್ರೇಲಿಯದಲ್ಲಿ ಈ ಸಂಖ್ಯೆ 200ಕ್ಕಿಂತಲೂ ಹೆಚ್ಚಾಗಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಸ್ಯಾನ್ ಡೀಏಗೊ ಎಂಬ ಒಂದೇ ನಗರದಲ್ಲಿ 100ಕ್ಕಿಂತಲೂ ಹೆಚ್ಚು ಭಾಷೆಗಳನ್ನು ಕೇಳಿಸಿಕೊಳ್ಳಸಾಧ್ಯವಿದೆ!9 ಕ್ರೈಸ್ತ ಶುಶ್ರೂಷಕರಾಗಿರುವ ನಾವು, ಬೇರೆ ಭಾಷೆಗಳನ್ನಾಡುವ ಇಂಥ ಜನರ ಉಪಸ್ಥಿತಿಯನ್ನು ನಮ್ಮ ಶುಶ್ರೂಷೆಗೆ ಒಂದು ಅಡಚಣೆಯಾಗಿ ಪರಿಗಣಿಸುತ್ತೇವೊ? ನಿಶ್ಚಯವಾಗಿಯೂ ಇಲ್ಲ! ಬದಲಾಗಿ, ನಾವು ಇದನ್ನು ನಮ್ಮ ಶುಶ್ರೂಷಾ ಟೆರಿಟೊರಿಯ ಅಪೇಕ್ಷಣೀಯ ವಿಸ್ತರಣೆಯಾಗಿ, ಅಂದರೆ ‘ಬೆಳ್ಳಗಾಗಿ ಕೊಯ್ಲಿಗೆ ಬಂದಿರುವ ಹೊಲಗಳಾಗಿ’ ಪರಿಗಣಿಸುತ್ತೇವೆ. (ಯೋಹಾನ 4:35) ತಮ್ಮ ಆಧ್ಯಾತ್ಮಿಕ ಆವಶ್ಯಕತೆಯ ಪ್ರಜ್ಞೆಯುಳ್ಳವರಾಗಿರುವಂಥ ಜನರ ರಾಷ್ಟ್ರೀಯತೆ ಅಥವಾ ಭಾಷೆಯು ಯಾವುದೇ ಆಗಿರಲಿ, ಅವರ ಕಾಳಜಿವಹಿಸಲು ನಾವು ಪ್ರಯತ್ನಿಸುತ್ತೇವೆ. (ಮತ್ತಾಯ 5:3) ಇದರ ಫಲಿತಾಂಶವಾಗಿ, ಪ್ರತಿ ವರ್ಷ ‘ಸಕಲ ಭಾಷೆಗಳನ್ನಾಡುವ’ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಸ್ತನ ಶಿಷ್ಯರಾಗುತ್ತಿದ್ದಾರೆ. (ಪ್ರಕಟನೆ 14:6) ಉದಾಹರಣೆಗೆ, ಜರ್ಮನಿಯಲ್ಲಿ 2004ರ ಆಗಸ್ಟ್ ತಿಂಗಳಿನ ವರೆಗೆ ಸಾರುವ ಕೆಲಸವು ಸುಮಾರು 40 ಭಾಷೆಗಳಲ್ಲಿ ನಡೆಸಲ್ಪಡುತ್ತಿತ್ತು. ಮತ್ತು ಆಸ್ಟ್ರೇಲಿಯದಲ್ಲಿ ಕೇವಲ ಹತ್ತು ವರ್ಷಗಳ ಹಿಂದೆ 18 ಭಾಷೆಗಳಲ್ಲಿ ಸಾರಲ್ಪಡುತ್ತಿದ್ದ ಸುವಾರ್ತೆಯು ಈ ಸಮಯದಷ್ಟಕ್ಕೆ 30 ಭಾಷೆಗಳಲ್ಲಿ ಸಾರಲ್ಪಡುತ್ತಿತ್ತು. ಗ್ರೀಸ್‌ನಲ್ಲಿ ಯೆಹೋವನ ಸಾಕ್ಷಿಗಳು ಬಹುಮಟ್ಟಿಗೆ 20 ಭಿನ್ನ ಭಾಷೆಗಳಲ್ಲಿ ಜನರಿಗೆ ಸುವಾರ್ತೆಯನ್ನು ಮುಟ್ಟಿಸುತ್ತಿದ್ದರು. ಲೋಕವ್ಯಾಪಕವಾಗಿ, ಯೆಹೋವನ ಸಾಕ್ಷಿಗಳಲ್ಲಿ ಸುಮಾರು 80 ಪ್ರತಿಶತದಷ್ಟು ಮಂದಿ, ಪ್ರಚಲಿತ ಅಂತಾರಾಷ್ಟ್ರೀಯ ಭಾಷೆಯಾಗಿರುವ ಇಂಗ್ಲಿಷನ್ನು ಬಿಟ್ಟು ಬೇರೊಂದು ಭಾಷೆಯನ್ನು ಮಾತಾಡುತ್ತಾರೆ.
10“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂಬ ಯೇಸುವಿನ ಆಜ್ಞೆಯು ನಿಶ್ಚಯವಾಗಿಯೂ ಪೂರೈಸಲ್ಪಡುತ್ತಿದೆ! (ಮತ್ತಾಯ 28:19) ಈ ನೇಮಕವನ್ನು ಅತ್ಯುತ್ಸಾಹದಿಂದ ಸ್ವೀಕರಿಸಿರುವ ಯೆಹೋವನ ಸಾಕ್ಷಿಗಳು 235 ದೇಶಗಳಲ್ಲಿ ಕ್ರಿಯಾಶೀಲರಾಗಿದ್ದಾರೆ ಮತ್ತು 400ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಸಾಹಿತ್ಯವನ್ನು ವಿತರಿಸುತ್ತಿದ್ದಾರೆ. ಜನರನ್ನು ತಲಪಲು ಬೇಕಾಗಿರುವ ವಾಚನ ಸಾಮಗ್ರಿಯನ್ನು ಯೆಹೋವನ ಸಂಘಟನೆಯು ಒದಗಿಸುತ್ತಿದೆ, ಆದರೆ ಜನರು ಅತ್ಯುತ್ತಮವಾಗಿ ಅರ್ಥಮಾಡಿಕೊಳ್ಳಸಾಧ್ಯವಿರುವಂಥ ಭಾಷೆಯಲ್ಲಿ ‘ಎಲ್ಲರಿಗೆ’ ಅಂದರೆ ಎಲ್ಲ ರೀತಿಯ ಜನರಿಗೆ ಬೈಬಲ್ ಸಂದೇಶವನ್ನು ತಿಳಿಯಪಡಿಸುವ ಮುನ್ನೆಜ್ಜೆಯನ್ನು ಪ್ರತಿಯೊಬ್ಬ ರಾಜ್ಯ ಪ್ರಚಾರಕನು ತೆಗೆದುಕೊಳ್ಳಬೇಕು. (ಯೋಹಾನ 1:7) ಈ ಐಕ್ಯ ಪ್ರಯತ್ನವು, ಬೇರೆ ಬೇರೆ ಭಾಷಾ ಗುಂಪುಗಳ ಕೋಟಿಗಟ್ಟಲೆ ಜನರು ಸುವಾರ್ತೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಶಕ್ತಗೊಳಿಸುತ್ತದೆ. (ರೋಮಾಪುರ 10:14, 15) ಹೌದು, ನಮ್ಮಲ್ಲಿ ಪ್ರತಿಯೊಬ್ಬರು ಸಹ ಅತ್ಯಾವಶ್ಯಕ ಪಾತ್ರವನ್ನು ವಹಿಸುವವರಾಗಿದ್ದೇವೆ!
ಪಂಥಾಹ್ವಾನವನ್ನು ನಿಭಾಯಿಸಲು ಏನು ಅಗತ್ಯವಿದೆಯೋ ಅದನ್ನು ಮಾಡುವುದು
11 ಇಂದು ಅನೇಕ ರಾಜ್ಯ ಪ್ರಚಾರಕರು ಇನ್ನೊಂದು ಭಾಷೆಯನ್ನು ಕಲಿಯಲು ಬಯಸುತ್ತಾರೆ, ಆದರೆ ಅವರು ದೇವರ ಪವಿತ್ರಾತ್ಮದ ಅದ್ಭುತಕರ ವರದಾನಗಳ ಮೇಲೆ ಅವಲಂಬಿತರಾಗಿರಲು ಅಥವಾ ಅದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. (1 ಕೊರಿಂಥ 13:8, NW) ಹೊಸ ಭಾಷೆಯೊಂದನ್ನು ಕಲಿಯುವುದು ಬಹಳ ದೊಡ್ಡ ಕೆಲಸವಾಗಿದೆ. ಈಗಾಗಲೇ ಇನ್ನೊಂದು ಭಾಷೆಯನ್ನು ಮಾತಾಡಲು ಕಲಿತಿರುವವರು ಸಹ, ಈ ನಿರ್ದಿಷ್ಟ ಭಾಷೆಯನ್ನು ಮಾತಾಡುವ ಆದರೆ ಭಿನ್ನವಾದ ಹಿನ್ನೆಲೆಗಳು ಮತ್ತು ಸಂಸ್ಕೃತಿಗಳಿಂದ ಬಂದಿರುವ ಜನರಿಗೆ ಬೈಬಲ್ ಸಂದೇಶವನ್ನು ಆಸಕ್ತಿದಾಯಕವಾದದ್ದಾಗಿ ಮಾಡುವುದಕ್ಕೋಸ್ಕರ ತಮ್ಮ ಆಲೋಚನಾ ರೀತಿಯನ್ನು ಹಾಗೂ ವಿಧಾನಗಳನ್ನು ಸರಿಹೊಂದಿಸಿಕೊಳ್ಳಬೇಕಾಗಿರಬಹುದು. ಅಷ್ಟುಮಾತ್ರವಲ್ಲ, ಹೊಸ ವಲಸೆಗಾರರು ಅನೇಕವೇಳೆ ನಾಚಿಕೆ ಹಾಗೂ ಸಂಕೋಚ ಸ್ವಭಾವದವರಾಗಿರುತ್ತಾರೆ; ಅವರ ಆಲೋಚನಾ ರೀತಿಯನ್ನು ಅರ್ಥಮಾಡಿಕೊಳ್ಳುವುದು ಹೆಚ್ಚಿನ ಪ್ರಯತ್ನವನ್ನು ಅಗತ್ಯಪಡಿಸುತ್ತದೆ.
12 ಆದರೂ, ಬೇರೆ ಭಾಷೆಗಳನ್ನು ಮಾತಾಡುವಂಥ ಜನರಿಗೆ ಸಹಾಯಮಾಡಲಿಕ್ಕಾಗಿ ಮಾಡುವಂಥ ಪ್ರಯತ್ನಗಳಲ್ಲಿ ಪವಿತ್ರಾತ್ಮವು ಯೆಹೋವನ ಸೇವಕರ ನಡುವೆ ಇನ್ನೂ ಕಾರ್ಯನಡಿಸುತ್ತಿದೆ. (ಲೂಕ 11:13) ಅದ್ಭುತಕರವಾದ ಭಾಷಾ ಸಾಮರ್ಥ್ಯಗಳನ್ನು ದಯಪಾಲಿಸುವ ಬದಲಿಗೆ, ಪವಿತ್ರಾತ್ಮವು ನಮ್ಮ ಭಾಷೆಯನ್ನು ಮಾತಾಡದಿರುವಂಥ ಜನರೊಂದಿಗೆ ಸಂವಾದಿಸಲಿಕ್ಕಾಗಿರುವ ನಮ್ಮ ಬಯಕೆಯನ್ನು ಹೆಚ್ಚಿಸಬಲ್ಲದು. (ಕೀರ್ತನೆ 143:10) ಜನರಿಗೆ ಹೆಚ್ಚು ಅರ್ಥವಾಗದಿರುವಂಥ ಒಂದು ಭಾಷೆಯಲ್ಲಿ ಬೈಬಲ್ ಸಂದೇಶವನ್ನು ಸಾರುವುದು ಅಥವಾ ಕಲಿಸುವುದು ಅವರ ಮನಸ್ಸಿಗೆ ತಲಪಬಹುದು. ಆದರೆ, ನಮ್ಮ ಕೇಳುಗರ ಹೃದಯವನ್ನು ತಲಪಬೇಕಾದರೆ, ಅನೇಕವೇಳೆ ಅವರ ಮಾತೃಭಾಷೆಯನ್ನು ಉಪಯೋಗಿಸುವುದು ಹೆಚ್ಚು ಉತ್ತಮವಾದದ್ದಾಗಿದೆ. ಏಕೆಂದರೆ ಇದು ಅವರ ಅಂತರಂಗದ ಮಹತ್ವಾಕಾಂಕ್ಷೆಗಳು, ಹೇತುಗಳು ಮತ್ತು ನಿರೀಕ್ಷೆಗಳ ಮೇಲೆ ಪ್ರಭಾವ ಬೀರುವಂಥ ಭಾಷೆಯಾಗಿದೆ.—ಲೂಕ 24:32.
13 ಬೈಬಲ್ ಸತ್ಯಕ್ಕೆ ತೋರಿಸಲ್ಪಡುವ ಅತ್ಯುತ್ತಮ ಪ್ರತಿಕ್ರಿಯೆಯನ್ನು ಗಮನಿಸಿರುವ ಅನೇಕ ರಾಜ್ಯ ಪ್ರಚಾರಕರು, ವಿದೇಶೀ ಭಾಷೆಯ ಕ್ಷೇತ್ರದಲ್ಲಿ ಶುಶ್ರೂಷೆಯನ್ನು ಆರಂಭಿಸಲು ಮುಂದೆ ಬಂದಿದ್ದಾರೆ. ಇತರರಾದರೋ, ಅವರ ಸೇವೆಯು ಹೆಚ್ಚು ಪಂಥಾಹ್ವಾನದಾಯಕವೂ ಆಸಕ್ತಿಕರವೂ ಆಗಿರುವಾಗ ಬಹಳಷ್ಟು ಉತ್ತೇಜನಗೊಳ್ಳುತ್ತಾರೆ. “ಪೂರ್ವ ಯೂರೋಪ್‌ನಿಂದ ಬರುವವರಲ್ಲಿ ಅನೇಕರು ಸತ್ಯದ ದಾಹವುಳ್ಳವರಾಗಿರುತ್ತಾರೆ” ಎಂದು ದಕ್ಷಿಣ ಯೂರೋಪ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಒಂದು ಬ್ರಾಂಚ್ ಆಫೀಸ್ ತಿಳಿಸುತ್ತದೆ. ಇಂಥ ಸ್ವೀಕಾರಾರ್ಹ ಮನೋಭಾವದ ವ್ಯಕ್ತಿಗಳಿಗೆ ಸಹಾಯಮಾಡುವುದು ಎಷ್ಟು ತೃಪ್ತಿಯನ್ನು ನೀಡುವಂಥದ್ದಾಗಿದೆ!—ಯೆಶಾಯ 55:1, 2.
14 ಆದರೂ, ಈ ಕೆಲಸದಲ್ಲಿ ಅರ್ಥಭರಿತವಾಗಿ ಪಾಲ್ಗೊಳ್ಳಲು ನಮಗೆ ದೃಢನಿರ್ಧಾರ ಮತ್ತು ಸ್ವತ್ಯಾಗದ ಅಗತ್ಯವಿದೆ. (ಕೀರ್ತನೆ 110:3) ಉದಾಹರಣೆಗೆ, ಜಪಾನಿನ ಅನೇಕ ಸಾಕ್ಷಿ ಕುಟುಂಬಗಳು ದೊಡ್ಡ ದೊಡ್ಡ ನಗರಗಳಲ್ಲಿನ ಸುಖಸೌಕರ್ಯಗಳಿಂದ ತುಂಬಿರುವ ಮನೆಗಳನ್ನು ಬಿಟ್ಟು, ಬೈಬಲನ್ನು ಅರ್ಥಮಾಡಿಕೊಳ್ಳುವಂತೆ ಚೀನಾದ ವಲಸೆಗಾರರ ಗುಂಪುಗಳಿಗೆ ಸಹಾಯಮಾಡಲಿಕ್ಕಾಗಿ ಬಹು ದೂರದ ಕ್ಷೇತ್ರಗಳಿಗೆ ಸ್ಥಳಾಂತರಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನ ಪಶ್ಚಿಮ ಕರಾವಳಿಯಲ್ಲಿ, ಪ್ರಚಾರಕರು ಕ್ರಮವಾಗಿ ಒಂದೆರಡು ತಾಸುಗಳ ವರೆಗೆ ವಾಹನದಲ್ಲಿ ಪ್ರಯಾಣಿಸಿ ಫಿಲಿಪ್ಪಿನೊ ಕ್ಷೇತ್ರದಲ್ಲಿರುವ ಜನರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಾರೆ. ನಾರ್ವೆಯಲ್ಲಿ, ಒಂದು ದಂಪತಿಯು ಆಫ್ಘಾನಿಸ್ತಾನ್‌ನಿಂದ ಬಂದಿರುವ ಒಂದು ಕುಟುಂಬದೊಂದಿಗೆ ಅಧ್ಯಯನ ನಡೆಸುತ್ತಿದ್ದಾರೆ. ಈ ಸಾಕ್ಷಿ ದಂಪತಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? * ಎಂಬ ಬ್ರೋಷರಿನ ಇಂಗ್ಲಿಷ್ ಮತ್ತು ನಾರ್ವೆ ಭಾಷೆಯ ಮುದ್ರಣಗಳನ್ನು ಉಪಯೋಗಿಸುತ್ತಾರೆ. ಆ ಕುಟುಂಬವು, ಡಾರೀ ಎಂಬ ಅವರ ಸ್ವಂತ ಭಾಷೆಯನ್ನು ಬಹಳಷ್ಟು ಮಟ್ಟಿಗೆ ಹೋಲುವ ಪರ್ಷಿಯನ್ ಭಾಷೆಯಲ್ಲಿ ಪ್ಯಾರಗ್ರಾಫ್‌ಗಳನ್ನು ಓದುತ್ತದೆ. ಅವರು ಇಂಗ್ಲಿಷ್ ಮತ್ತು ನಾರ್ವೆ ಭಾಷೆಯಲ್ಲಿ ಸಂಭಾಷಿಸುತ್ತಾರೆ. ವಿದೇಶೀಯರು ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುವಾಗ, ಇಂಥ ಸ್ವತ್ಯಾಗ ಮನೋಭಾವ ಮತ್ತು ಹೊಂದಿಸಿಕೊಳ್ಳುವಿಕೆಯು ಹೇರಳವಾಗಿ ಆಶೀರ್ವದಿಸಲ್ಪಡುತ್ತದೆ. *
15 ಈ ಬಹುಭಾಷೀಯ ಚಟುವಟಿಕೆಯಲ್ಲಿ ನೀವು ಸಹ ಪಾಲ್ಗೊಳ್ಳಬಲ್ಲಿರೊ? ನಿಮ್ಮ ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಯಾವ ಅನ್ಯ ಭಾಷೆಗಳನ್ನು ಮಾತಾಡಲಾಗುತ್ತದೆ ಎಂಬುದನ್ನು ಕಂಡುಕೊಳ್ಳುವ ಮೂಲಕ ನೀವಿದನ್ನು ಆರಂಭಿಸಬಾರದೇಕೆ? ತದನಂತರ ಆ ಭಾಷೆಗಳಲ್ಲಿ ಕೆಲವು ಟ್ರ್ಯಾಕ್ಟ್‌ಗಳನ್ನು ಅಥವಾ ಬ್ರೋಷರ್‌ಗಳನ್ನು ನೀವು ಕೊಂಡೊಯ್ಯಬಹುದು. 2004ನೇ ಇಸವಿಯಲ್ಲಿ ಬಿಡುಗಡೆಮಾಡಲ್ಪಟ್ಟ ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯು, ರಾಜ್ಯದ ಸಂದೇಶವನ್ನು ಹಬ್ಬಿಸುವುದರಲ್ಲಿ ಈಗಾಗಲೇ ಪ್ರಮುಖ ಪಾತ್ರವನ್ನು ವಹಿಸಿದೆ; ಇದರಲ್ಲಿ ಅನೇಕ ಭಾಷೆಗಳಲ್ಲಿ ಸರಳವಾದ, ಸಕಾರಾತ್ಮಕವಾದ ರಾಜ್ಯ ಸಂದೇಶವು ಕೊಡಲ್ಪಟ್ಟಿದೆ.—ಪುಟ 32ರಲ್ಲಿರುವ “ಸರ್ವ ದೇಶಗಳ ಜನರಿಗಾಗಿ ಸುವಾರ್ತೆ” ಎಂಬ ಲೇಖನವನ್ನು ನೋಡಿ.
‘ಪರದೇಶದವರಲ್ಲಿ ಪ್ರೀತಿಯಿಡುವುದು’
16 ನಾವು ಬೇರೊಂದು ಭಾಷೆಯನ್ನು ಕಲಿಯಲಿ ಅಥವಾ ಕಲಿಯದಿರಲಿ, ನಮ್ಮ ಕ್ಷೇತ್ರದಲ್ಲಿರುವ ವಿದೇಶೀಯರ ಅಥವಾ ಬೇರೊಂದು ಭಾಷೆಯನ್ನು ಮಾತಾಡುವವರ ಆಧ್ಯಾತ್ಮಿಕ ಶಿಕ್ಷಣಕ್ಕೆ ನಾವೆಲ್ಲರೂ ಸಹಾಯಮಾಡಸಾಧ್ಯವಿದೆ. ಯೆಹೋವನು ತನ್ನ ಜನರಿಗೆ “ಪರದೇಶದವರಲ್ಲಿ ಪ್ರೀತಿಯಿಡಿರಿ” ಎಂದು ಉಪದೇಶಿಸಿದ್ದನು. (ಧರ್ಮೋಪದೇಶಕಾಂಡ 10:18, 19) ಉದಾಹರಣೆಗೆ, ಉತ್ತರ ಅಮೆರಿಕದಲ್ಲಿರುವ ಒಂದು ದೊಡ್ಡ ನಗರದಲ್ಲಿ ಒಂದೇ ರಾಜ್ಯ ಸಭಾಗೃಹದಲ್ಲಿ ಐದು ಸಭೆಗಳು ಕೂಡಿಬರುತ್ತವೆ. ಅನೇಕ ಸಭಾಗೃಹಗಳಲ್ಲಿ ಆಗುವಂತೆ ಇಲ್ಲಿಯೂ ಕೂಟದ ಸಮಯಗಳು ವಾರ್ಷಿಕವಾಗಿ ಸರದಿಯ ಪ್ರಕಾರ ಬದಲಾಗುವುದರಿಂದ, ಭಾನುವಾರದಂದು ಚೀನೀ ಭಾಷೆಯ ಕೂಟಗಳು ಸಂಜೆ ತುಂಬ ತಡವಾಗಿ ನಡೆಸಲ್ಪಡಲಿಕ್ಕಿದ್ದವು. ಆದರೆ, ಇದರಿಂದಾಗಿ ಹೋಟೆಲುಗಳಿಗೆ ಸಂಬಂಧಪಟ್ಟ ಉದ್ಯೋಗಗಳಲ್ಲಿ ಕೆಲಸಮಾಡುವಂಥ ವಲಸೆಗಾರರಲ್ಲಿ ಹೆಚ್ಚಿನವರು ಕೂಟಗಳಿಗೆ ಹಾಜರಾಗಲು ಅಶಕ್ತರಾಗಸಾಧ್ಯವಿತ್ತು. ಆದುದರಿಂದ, ಚೀನೀ ಭಾಷೆಯ ಕೂಟಗಳು ಭಾನುವಾರದಂದು ಸ್ವಲ್ಪ ಬೇಗನೆ ನಡೆಸಲ್ಪಡಲು ಸಾಧ್ಯವಾಗುವಂತೆ ಬೇರೆ ಸಭೆಗಳ ಹಿರಿಯರು ದಯಾಭಾವದಿಂದ ಹೊಂದಾಣಿಕೆಗಳನ್ನು ಮಾಡಿದರು.
17 ಪ್ರೀತಿಭರಿತ ಮೇಲ್ವಿಚಾರಕರು, ಬೇರೆ ಭಾಷಾ ಗುಂಪುಗಳಿಗೆ ಸಹಾಯ ನೀಡಲಿಕ್ಕಾಗಿ ಸ್ಥಳಾಂತರಿಸಲು ಬಯಸುವಂಥ ಅರ್ಹರಾದ ಮತ್ತು ಕೌಶಲಭರಿತ ಸಹೋದರ ಸಹೋದರಿಯರನ್ನು ಪ್ರಶಂಸಿಸುತ್ತಾರೆ. ಇಂಥ ಅನುಭವಸ್ಥ ಬೈಬಲ್ ಬೋಧಕರು ಬೇರೆ ಕಡೆಗೆ ಹೋಗುವುದು ಸ್ವಂತ ಸಭೆಯಲ್ಲಿ ಅವರ ಕೊರತೆಯನ್ನು ಉಂಟುಮಾಡಬಹುದಾದರೂ, ಸ್ಥಳಿಕ ಮೇಲ್ವಿಚಾರಕರಿಗೆ ಲುಸ್ತ್ರ ಮತ್ತು ಇಕೋನ್ಯದಲ್ಲಿನ ಹಿರಿಯರಿಗಾದಂಥ ಅನಿಸಿಕೆಯೇ ಇದೆ. ತಿಮೊಥೆಯನು ಅವರ ಸ್ವಂತ ಸಭೆಗಳಲ್ಲಿ ತುಂಬ ಉಪಯುಕ್ತನಾಗಿದ್ದನಾದರೂ, ಅವನು ಪೌಲನೊಂದಿಗೆ ಮಿಷನೆರಿ ಕೆಲಸಕ್ಕೆ ಹೋಗುವುದರಿಂದ ಆ ಹಿರಿಯರು ಅವನನ್ನು ತಡೆಯಲಿಲ್ಲ. (ಅ. ಕೃತ್ಯಗಳು 16:1-4) ಅಷ್ಟುಮಾತ್ರವಲ್ಲ, ಸಾರುವ ಕೆಲಸದಲ್ಲಿ ಯಾರು ನಾಯಕತ್ವವನ್ನು ವಹಿಸುತ್ತಾರೋ ಅವರು, ವಿದೇಶೀಯರ ಭಿನ್ನ ಮನೋಗುಣ, ಪದ್ಧತಿಗಳು ಅಥವಾ ವರ್ತನೆಗಳಿಂದ ವಿಚಲಿತರಾಗುವುದಿಲ್ಲ. ಬದಲಾಗಿ ಅವರು ವೈವಿಧ್ಯವನ್ನು ಸ್ವೀಕರಿಸುತ್ತಾರೆ ಮತ್ತು ಸುವಾರ್ತೆಯ ನಿಮಿತ್ತ ಒಳ್ಳೇ ಸಂಬಂಧಗಳನ್ನು ಬೆಳೆಸಿಕೊಳ್ಳುವ ಮಾರ್ಗಗಳನ್ನು ಹುಡುಕುತ್ತಾರೆ.—1 ಕೊರಿಂಥ 9:22, 23.
18 ಪ್ರವಾದಿಸಲ್ಪಟ್ಟಂತೆಯೇ ಸುವಾರ್ತೆಯು ‘ಜನಾಂಗಗಳ ವಿವಿಧಭಾಷೆಗಳವರಿಗೆ’ ಸಾರಲ್ಪಡುತ್ತಿದೆ. ವಿದೇಶೀ ಭಾಷಾ ಕ್ಷೇತ್ರಗಳಲ್ಲಿ ಬಹಳಷ್ಟು ಅಭಿವೃದ್ಧಿಯ ಸಾಧ್ಯತೆಯು ಇನ್ನೂ ಇದೆ. ಸಾವಿರಾರು ಮಂದಿ ಸಮರ್ಥ ಪ್ರಚಾರಕರು ಈ “ಚಟುವಟಿಕೆಗೆ ಮುನ್ನಡಿಸುವಂಥ ವಿಶಾಲವಾದ ದ್ವಾರವನ್ನು” (NW) ಪ್ರವೇಶಿಸಿದ್ದಾರೆ. (1 ಕೊರಿಂಥ 16:9) ಆದರೂ, ಮುಂದಿನ ಲೇಖನವು ತೋರಿಸಲಿರುವಂತೆ, ಇಂಥ ಟೆರಿಟೊರಿಗಳಲ್ಲಿ ಫಲವನ್ನು ಉತ್ಪಾದಿಸಲು ಇನ್ನೂ ಹೆಚ್ಚಿನದ್ದರ ಅಗತ್ಯವಿದೆ.
[ಪಾದಟಿಪ್ಪಣಿಗಳು]
^ ಪ್ಯಾರ. 19 ಯೆಹೋವನ ಸಾಕ್ಷಿಗಳು ಪ್ರಕಟಿಸಿದ್ದು.
^ ಪ್ಯಾರ. 19 ಇನ್ನೂ ಹೆಚ್ಚಿನ ಉದಾಹರಣೆಗಳಿಗಾಗಿ, 2004, ಏಪ್ರಿಲ್ 1ರ ಕಾವಲಿನಬುರುಜು ಪತ್ರಿಕೆಯ 24-8ನೇ ಪುಟಗಳಲ್ಲಿರುವ “ಚಿಕ್ಕಪುಟ್ಟ ತ್ಯಾಗಗಳು ನಮಗೆ ಅನೇಕ ಆಶೀರ್ವಾದಗಳನ್ನು ತಂದವು” ಎಂಬ ಲೇಖನವನ್ನು ನೋಡಿ.
ನೀವು ವಿವರಿಸಬಲ್ಲಿರೊ?
• ಎಲ್ಲ ಜನರೊಂದಿಗೆ ನಿಷ್ಪಕ್ಷಪಾತದಿಂದ ವರ್ತಿಸುವುದರಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಸಾಧ್ಯವಿದೆ?
• ನಮ್ಮ ಟೆರಿಟೊರಿಯಲ್ಲಿ ನಮ್ಮ ಭಾಷೆಯನ್ನು ಮಾತಾಡದಿರುವಂಥ ಜನರನ್ನು ನಾವು ಹೇಗೆ ಪರಿಗಣಿಸಬೇಕು?
• ಜನರಿಗೆ ಅವರ ಮಾತೃಭಾಷೆಯಲ್ಲಿ ಸಾರುವುದು ಏಕೆ ಸಹಾಯಕರವಾದದ್ದಾಗಿದೆ?
• ನಮ್ಮ ನಡುವೆ ಇರುವ ವಿದೇಶೀಯರ ಅಥವಾ ಬೇರೊಂದು ಭಾಷೆಯನ್ನು ಮಾತಾಡುವವರ ಬಗ್ಗೆ ನಾವು ಹೇಗೆ ಕಾಳಜಿಯನ್ನು ತೋರಿಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1. ಬೇರೆ ಬೇರೆ ಭಾಷೆಗಳ ಮತ್ತು ರಾಷ್ಟ್ರಗಳ ಜನರಿಗೆ ಸಾರುವುದನ್ನು ಆರಂಭಿಸಲಿಕ್ಕಾಗಿ ಯೆಹೋವನು ಹೇಗೆ ಅನುಕೂಲಕರವಾದ ಸಂದರ್ಭ ಮತ್ತು ಸನ್ನಿವೇಶವನ್ನು ಒದಗಿಸಿದನು?
2. ಸಾ.ಶ. 33ರ ಪಂಚಾಶತ್ತಮದಂದು ಯೇಸುವಿನ ಶಿಷ್ಯರು ತಮ್ಮ ವಿಭಿನ್ನ ಭಾಷೆಯ ಸಭಿಕರನ್ನು ಹೇಗೆ ‘ಆಶ್ಚರ್ಯಗೊಳಿಸಿದರು’?
3, 4. ಶಿಷ್ಯರು ಯೆರೂಸಲೇಮ್, ಯೂದಾಯ ಮತ್ತು ಗಲಿಲಾಯದಿಂದ ಹೊರಗೆ ಸ್ಥಳಾಂತರಿಸಿದಾಗ ಸಾರುವ ಕೆಲಸವು ಹೇಗೆ ವಿಸ್ತಾರಗೊಂಡಿತು?
5. ಸುವಾರ್ತೆಯ ವಿಷಯದಲ್ಲಿ ಯೆಹೋವನ ನಿಷ್ಪಕ್ಷಪಾತವು ಹೇಗೆ ಕಂಡುಬರುತ್ತದೆ?
6, 7. ಸುವಾರ್ತೆಯ ಅಂತಾರಾಷ್ಟ್ರೀಯ, ಬಹುಭಾಷೀಯ ವಿಸ್ತರಣೆಯನ್ನು ಯಾವ ಬೈಬಲ್ ಪ್ರವಾದನೆಗಳು ಮುಂತಿಳಿಸಿದವು?
8. ಆಧುನಿಕ ದಿನದ ಯಾವ ವಾಸ್ತವಿಕತೆಯು, ನಮ್ಮ ಸಾಕ್ಷಿಕಾರ್ಯದಲ್ಲಿ ಹೊಂದಾಣಿಕೆಗಳನ್ನು ಅಗತ್ಯಪಡಿಸುತ್ತದೆ?
9. ನಮ್ಮ ಟೆರಿಟೊರಿಯಲ್ಲಿ ಭಿನ್ನ ಭಾಷೆಗಳನ್ನು ಮಾತಾಡುವಂಥ ಜನರನ್ನು ನಾವು ಹೇಗೆ ಪರಿಗಣಿಸಬೇಕು?
10. “ಎಲ್ಲಾ ದೇಶಗಳ” ಜನರನ್ನು ಶಿಷ್ಯರನ್ನಾಗಿ ಮಾಡುವುದರಲ್ಲಿ ಪ್ರತಿಯೊಬ್ಬ ಪ್ರಚಾರಕನ ವೈಯಕ್ತಿಕ ಪಾತ್ರವೇನಾಗಿದೆ?
11, 12. (ಎ) ಯಾವ ಪಂಥಾಹ್ವಾನಗಳನ್ನು ಎದುರಿಸಬೇಕಾಗಿದೆ, ಮತ್ತು ಪವಿತ್ರಾತ್ಮವು ಹೇಗೆ ಸಹಾಯಮಾಡುತ್ತದೆ? (ಬಿ) ಅನೇಕವೇಳೆ ಜನರಿಗೆ ಅವರ ಮಾತೃಭಾಷೆಯಲ್ಲಿ ಸಾರುವುದು ಏಕೆ ಸಹಾಯಕರವಾದ್ದದಾಗಿದೆ?
13, 14. (ಎ) ಇನ್ನೊಂದು ಭಾಷಾ ಕ್ಷೇತ್ರದಲ್ಲಿ ಶುಶ್ರೂಷೆಯನ್ನು ಆರಂಭಿಸುವಂತೆ ಕೆಲವರನ್ನು ಯಾವುದು ಪ್ರಚೋದಿಸುತ್ತದೆ? (ಬಿ) ಸ್ವತ್ಯಾಗದ ಮನೋಭಾವವು ಹೇಗೆ ಕಂಡುಬರುತ್ತದೆ?
15. ಬಹುಭಾಷೀಯ ಸಾಕ್ಷಿಕಾರ್ಯದ ಪ್ರಯತ್ನದಲ್ಲಿ ನಾವೆಲ್ಲರೂ ಪಾಲ್ಗೊಳ್ಳಸಾಧ್ಯವಿದೆ ಹೇಗೆ?
16. ವಿದೇಶೀ ಭಾಷೆಯ ಜನರಿಗೆ ಸಹಾಯಮಾಡುವುದರಲ್ಲಿ ಜವಾಬ್ದಾರಿಯುತ ಸಹೋದರರು ನಿಸ್ವಾರ್ಥ ಆಸಕ್ತಿಯನ್ನು ತೋರಿಸಸಾಧ್ಯವಿದೆ ಹೇಗೆ?
17. ಇನ್ನೊಂದು ಭಾಷಾ ಗುಂಪಿಗೆ ಸಹಾಯಮಾಡಲಿಕ್ಕಾಗಿ ಯಾರಾದರೊಬ್ಬರು ಬೇರೆ ಕಡೆಗೆ ಸ್ಥಳಾಂತರಿಸಲು ನಿರ್ಧರಿಸುವಾಗ ನಮಗೆ ಹೇಗನಿಸಬೇಕು?
18. ಚಟುವಟಿಕೆಯ ಯಾವ ವಿಶಾಲವಾದ ದ್ವಾರವು ಎಲ್ಲರ ಮುಂದೆ ತೆರೆದಿಡಲ್ಪಟ್ಟಿದೆ?
[ಪುಟ 23ರಲ್ಲಿರುವ ಭೂಪಟ/ಚಿತ್ರ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ರೋಮ್
ಕ್ರೇತ
ಏಷ್ಯಾ
ಫ್ರುಗ್ಯ
ಪಂಫುಲ್ಯ
ಪೊಂತ
ಕಪ್ಪದೋಕ್ಯ
ಮೆಸೊಪೊತಾಮ್ಯ
ಮೇದ್ಯ
ಪಾರ್ಥಿಯ
ಏಲಾಮ್
ಅರೇಬಿಯ
ಲಿಬ್ಯ
ಈಜಿಪ್ಟ್
ಯೂದಾಯ
ಯೆರೂಸಲೇಮ್
[ಜಲಾಶಯಗಳು]
ಮೆಡಿಟರೇನಿಯನ್ ಸಮುದ್ರ
ಕಪ್ಪು ಸಮುದ್ರ
ಕೆಂಪು ಸಮುದ್ರ
ಪರ್ಷಿಯನ್ ಖಾರಿ
[ಚಿತ್ರ]
ಸಾ.ಶ. 33ರ ಪಂಚಾಶತ್ತಮದಂದು, ರೋಮನ್ ಸಾಮ್ರಾಜ್ಯದ 15 ಪ್ರಾಂತಗಳಿಂದ ಬಂದಿದ್ದ ಜನರು ತಮ್ಮ ಸ್ವಂತ ಭಾಷೆಗಳಲ್ಲಿ ಸುವಾರ್ತೆಯನ್ನು ಕೇಳಿಸಿಕೊಂಡರು
[ಪುಟ 24ರಲ್ಲಿರುವ ಚಿತ್ರಗಳು]
ವಿದೇಶೀಯರಲ್ಲಿ ಅನೇಕರು ಬೈಬಲ್ ಸತ್ಯಕ್ಕೆ ಒಳ್ಳೇ ಪ್ರತಿಕ್ರಿಯೆ ತೋರಿಸುತ್ತಾರೆ
[ಪುಟ 25ರಲ್ಲಿರುವ ಚಿತ್ರ]
ಐದು ಭಾಷೆಗಳಲ್ಲಿ ಒಂದು ರಾಜ್ಯ ಸಭಾಗೃಹದ ನಾಮಫಲಕ