“ಸರ್ವ ದೇಶಗಳ ಜನರಿಗಾಗಿ ಸುವಾರ್ತೆ”
“ಸರ್ವ ದೇಶಗಳ ಜನರಿಗಾಗಿ ಸುವಾರ್ತೆ”
ಈ ಮೇಲೆ ಕೊಡಲ್ಪಟ್ಟಿರುವಂಥದ್ದು, 2004/05ನೇ ಇಸವಿಯಲ್ಲಿ ನಡೆದ “ದೇವರೊಂದಿಗೆ ನಡೆಯಿರಿ” ಎಂಬ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಮಾಡಲ್ಪಟ್ಟ ಪುಸ್ತಿಕೆಯ ಶೀರ್ಷಿಕೆಯಾಗಿದೆ. ಇದರ ಒಂದು ಮುದ್ರಣವು 32-ಪುಟದ ಪುಸ್ತಿಕೆಯಾಗಿದ್ದು, ಅಸ್ಸಾಮಿ ಭಾಷೆಯಿಂದ ಹಿಡಿದು ಹಿಂದಿ ಭಾಷೆಯ ವರೆಗೆ 29 ಭಾಷೆಗಳಲ್ಲಿ ಒಂದು ಸಂಕ್ಷಿಪ್ತ ಸಂದೇಶವನ್ನು ಒಳಗೂಡಿದೆ. ಮತ್ತು ಇದು ಸಾಧ್ಯವಿರುವಷ್ಟು ಹೆಚ್ಚು ಜನರಿಗೆ ರಾಜ್ಯದ ಸುವಾರ್ತೆಯನ್ನು ಹಬ್ಬಿಸಲು ಸಹಾಯಕರವಾಗಿರುವಂತೆ ವಿನ್ಯಾಸಿಸಲ್ಪಟ್ಟಿದೆ. (ಮತ್ತಾಯ 24:14) ಈ ಪುಸ್ತಿಕೆಯು ಉಪಯೋಗಿಸಲ್ಪಡುವಾಗ ಆಗಿಂದಾಗ್ಗೆ ಯಾವ ಫಲಿತಾಂಶವು ದೊರಕುತ್ತದೆ ಎಂಬುದನ್ನು ಈ ಕೆಳಗಿನ ಅನುಭವಗಳು ತೋರಿಸುತ್ತವೆ.
• ಸಾಕ್ಷಿಗಳ ಒಂದು ಕುಟುಂಬವು ಅಧಿವೇಶನದಲ್ಲಿ ಈ ಪುಸ್ತಿಕೆಯನ್ನು ಪಡೆದುಕೊಂಡ ಬಳಿಕ, ಅವರು ಮೂರು ರಾಷ್ಟ್ರೀಯ ಉದ್ಯಾನವನಗಳನ್ನು ಸಂದರ್ಶಿಸಿದರು. ಅಲ್ಲಿ ಅವರು ನೆದರ್ಲೆಂಡ್ಸ್, ಪಾಕಿಸ್ತಾನ್, ಫಿಲಿಪ್ಪೀನ್ಸ್ ಮತ್ತು ಭಾರತದಿಂದ ಬಂದಿದ್ದ ಜನರನ್ನು ಭೇಟಿಯಾದರು. ಗಂಡನು ತಿಳಿಸಿದ್ದು: “ಆ ಜನರೆಲ್ಲರೂ ಸ್ವಲ್ಪಮಟ್ಟಿಗೆ ಇಂಗ್ಲಿಷ್ ಭಾಷೆಯನ್ನು ಮಾತಾಡುತ್ತಿದ್ದರಾದರೂ ಅವರ ಸ್ವಂತ ಭಾಷೆಯಲ್ಲಿ ಈ ಸಂದೇಶವನ್ನು ನಾವು ತೋರಿಸಿದಾಗ, ತಮ್ಮ ಸ್ವದೇಶದಿಂದ ಸಾವಿರಾರು ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಅವರು ಅದರಿಂದ ತುಂಬ ಪ್ರಭಾವಿತರಾದರು. ನಮ್ಮ ಲೋಕವ್ಯಾಪಕ ಕೆಲಸ ಹಾಗೂ ನಮ್ಮ ಐಕ್ಯಭಾವವನ್ನು ಅವರು ಸ್ಪಷ್ಟವಾಗಿ ಅರ್ಥಮಾಡಿಕೊಂಡರು.”
• ಒಬ್ಬ ಸಾಕ್ಷಿಯು ಭಾರತದವನಾಗಿದ್ದ ತನ್ನ ಸಹಕರ್ಮಿಗೆ ಈ ಪುಸ್ತಿಕೆಯನ್ನು ತೋರಿಸಿದಳು. ಅದರಲ್ಲಿರುವ ಎಲ್ಲ ಭಾಷೆಗಳನ್ನು ನೋಡಿ ಅವನು ಪುಳಕಿತನಾದನು ಮತ್ತು ತನ್ನ ಸ್ವಂತ ಭಾಷೆಯಲ್ಲಿ ಈ ಸಂದೇಶವನ್ನು ಓದಿದನು. ಇದು ಬೈಬಲಿನ ಕುರಿತಾದ ಹೆಚ್ಚಿನ ಚರ್ಚೆಗಳಿಗೆ ನಡಿಸಿತು. ಫಿಲಿಪ್ಪೀನ್ಸ್ನಿಂದ ಬಂದಿದ್ದ ಇನ್ನೊಬ್ಬಳು ಸಹಕರ್ಮಿಯು ಈ ಪುಸ್ತಿಕೆಯಲ್ಲಿ ತನ್ನ ಮಾತೃಭಾಷೆಯನ್ನು ಕಂಡು ಆಶ್ಚರ್ಯಗೊಂಡಳು ಮತ್ತು ಯೆಹೋವನ ಸಾಕ್ಷಿಗಳ ಕುರಿತು ಹೆಚ್ಚನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿಯನ್ನು ತೋರಿಸಿದಳು.
• ಕೆನಡದಲ್ಲಿ, ನೇಪಾಲದವಳಾಗಿದ್ದ ಒಬ್ಬ ಸ್ತ್ರೀಯು ಸಾಕ್ಷಿಯೊಬ್ಬಳೊಂದಿಗೆ ಫೋನಿನಲ್ಲಿ ಬೈಬಲ್ ಅಧ್ಯಯನವನ್ನು ನಡೆಸಲು ಒಪ್ಪಿಕೊಂಡಳು, ಆದರೆ ಅವಳಿಗೆ ಈ ಸಹೋದರಿಯನ್ನು ತನ್ನ ಮನೆಗೆ ಆಮಂತ್ರಿಸುವ ವಿಷಯದಲ್ಲಿ ಹಿಂಜರಿದಳು. ಆದರೆ ಸಹೋದರಿಯು, ನೇಪಾಲಿ ಭಾಷೆಯಲ್ಲಿ ಸಂದೇಶವಿರುವ ಈ ಪುಸ್ತಿಕೆಯ ಕುರಿತು ಆ ಸ್ತ್ರೀಗೆ ತಿಳಿಸಿದಾಗ, ಅತ್ಯುಲ್ಲಾಸದಿಂದ ಅವಳು ಸಹೋದರಿಯನ್ನು ತನ್ನ ಮನೆಗೆ ಆಹ್ವಾನಿಸಿದಳು. ಅವಳು ತನ್ನ ಮಾತೃಭಾಷೆಯಲ್ಲಿ ಈ ಸಂದೇಶವನ್ನು ಸ್ವತಃ ನೋಡಬೇಕಾಗಿತ್ತಷ್ಟೆ! ಅಂದಿನಿಂದ ಆ ಸ್ತ್ರೀಯ ಮನೆಯಲ್ಲಿ ಬೈಬಲ್ ಅಧ್ಯಯನವು ನಡಿಸಲ್ಪಡುತ್ತಿದೆ.