ನಿಮಗೆ ಆಪ್ತ ಸ್ನೇಹಿತರು ಬೇಕಾಗಿದ್ದಾರೊ?
ನಿಮಗೆ ಆಪ್ತ ಸ್ನೇಹಿತರು ಬೇಕಾಗಿದ್ದಾರೊ?
ಹೆಚ್ಚಿನ ಜನರು ಆಪ್ತ ಸ್ನೇಹಿತರನ್ನು ಹೊಂದಿರಲು ಬಯಸುತ್ತಾರೆ. ಆಪ್ತ ಒಡನಾಡಿಗಳೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಶಕ್ತರಾಗುವುದು ನಿಮ್ಮ ಜೀವನವನ್ನು ಹಸನಾಗಿಸುತ್ತದೆ. ಆದರೆ, ಆಪ್ತ ಸ್ನೇಹಿತರನ್ನು ನೀವು ಹೇಗೆ ಕಂಡುಕೊಳ್ಳಬಲ್ಲಿರಿ? ಯಾವುದೇ ಮಾನವ ಸಂಬಂಧಗಳು ಯಶಸ್ಸನ್ನು ಕಾಣಬೇಕಾದರೆ ನಿಸ್ವಾರ್ಥ ಪ್ರೀತಿಯು ಕೀಲಿಕೈಯಾಗಿದೆ ಎಂಬುದನ್ನು ಸುಮಾರು 2,000 ವರುಷಗಳ ಹಿಂದೆ ಯೇಸು ತೋರಿಸಿಕೊಟ್ಟನು. ಅವನು ಕಲಿಸಿದ್ದು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ, ಅಂಥದನ್ನೇ ನೀವು ಅವರಿಗೆ ಮಾಡಿರಿ.” (ಲೂಕ 6:31) ಸುವರ್ಣ ನಿಯಮ ಎಂದು ಅನೇಕವೇಳೆ ಕರೆಯಲ್ಪಡುವ ಈ ಹೇಳಿಕೆಯು, ಸ್ನೇಹಿತರನ್ನು ಹೊಂದಿರಬೇಕಾದರೆ ನೀವು ನಿಸ್ವಾರ್ಥಿಗಳೂ ಉದಾರ ಮನೋಭಾವದವರೂ ಆಗಿರಬೇಕು ಎಂಬುದನ್ನು ತೋರಿಸುತ್ತದೆ. ಸರಳ ಮಾತಿನಲ್ಲಿ ಹೇಳುವುದಾದರೆ, ಸ್ನೇಹಿತರನ್ನು ಹೊಂದಿರಬೇಕಾದರೆ ನೀವು ಸ್ನೇಹಪರರಾಗಿರಬೇಕು. ಹೇಗೆ?
ಆಪ್ತವಾದ ನೈಜ ಸ್ನೇಹವನ್ನು ದಿನಬೆಳಗಾಗುವುದರೊಳಗೆ ಬೆಳೆಸಿಕೊಳ್ಳಸಾಧ್ಯವಿಲ್ಲ. ಏಕೆಂದರೆ, ಸ್ನೇಹಿತರು ಪರಿಚಯಸ್ಥರಿಗಿಂತ ಎಷ್ಟೋ ಹೆಚ್ಚು ಆಪ್ತರಾಗಿರುತ್ತಾರೆ. ಆಪ್ತ ಸ್ನೇಹಿತರು, ನೀವು ಭಾವನಾತ್ಮಕವಾಗಿ ಅಂಟಿಕೊಳ್ಳುವ ವ್ಯಕ್ತಿಗಳಾಗಿದ್ದಾರೆ. ಅಂಥ ಆಪ್ತ ಬಂಧವನ್ನು ಬೆಳೆಸಿಕೊಂಡು ಕಾಪಾಡಿಕೊಳ್ಳಲು ಪ್ರಯತ್ನದ ಅಗತ್ಯವಿದೆ. ಸ್ನೇಹವನ್ನು ಬೆಳೆಸಿಕೊಳ್ಳಬೇಕಾದರೆ, ನೀವು ನಿಮ್ಮ ಅನುಕೂಲಕ್ಕಿಂತ ನಿಮ್ಮ ಒಡನಾಡಿಗಳ ಅಗತ್ಯವನ್ನು ಮುಂದಿಡಬೇಕು. ಸ್ನೇಹಿತರು ತಮ್ಮ ಆನಂದಗಳನ್ನು ಮಾತ್ರವಲ್ಲ ತಮ್ಮ ನಿರಾಶೆಗಳನ್ನೂ ಹಂಚಿಕೊಳ್ಳುತ್ತಾರೆ.
ಅಗತ್ಯದಲ್ಲಿರುವ ವ್ಯಕ್ತಿಗೆ ಮುಖ್ಯವಾಗಿ ಭಾವನಾತ್ಮಕ ಮತ್ತು ವ್ಯಾವಹಾರಿಕ ಬೆಂಬಲವನ್ನು ನೀಡುವ ಮೂಲಕ ನೀವು ನೈಜ ಸ್ನೇಹವನ್ನು ತೋರಿಸುತ್ತೀರಿ. ಜ್ಞಾನೋಕ್ತಿ 17:17 (NW) ಹೇಳುವುದು: “ಒಬ್ಬ ನಿಜ ಒಡನಾಡಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಸಂಕಟದ ಸಮಯದಲ್ಲಿ ಸಹಾಯಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ.” ವಾಸ್ತವದಲ್ಲಿ, ಸ್ನೇಹದ ಬಂಧವು ಕೌಟುಂಬಿಕ ಬಂಧಕ್ಕಿಂತಲೂ ಬಲವಾಗಿರಬಹುದು. ಜ್ಞಾನೋಕ್ತಿ 18:24 ತಿಳಿಸುವುದು: “ಬಹು ಮಂದಿ ಗೆಳೆಯರನ್ನು ಸೇರಿಸಿಕೊಂಡವನಿಗೆ ನಾಶನ; ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು.” ಇಂಥ ಅರ್ಥಭರಿತವಾದ ಸ್ನೇಹವನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬುದರ ಕುರಿತು ಹೆಚ್ಚನ್ನು ಕಲಿಯಲು ನೀವು ಬಯಸುತ್ತೀರೊ? ತಮ್ಮೊಳಗಿನ ಪರಸ್ಪರ ಪ್ರೀತಿಗೆ ಪ್ರಖ್ಯಾತರಾಗಿರುವ ಜನರ ಗುಂಪಿನ ಭಾಗವಾಗಲು ನೀವು ಬಯಸುತ್ತೀರೊ? (ಯೋಹಾನ 13:35) ಹಾಗಿರುವಲ್ಲಿ, ನೀವು ಆಪ್ತ ಸ್ನೇಹಿತರನ್ನು ಹೇಗೆ ಕಂಡುಕೊಳ್ಳಬಲ್ಲಿರಿ ಎಂಬುದನ್ನು ತೋರಿಸಲು ನಿಮ್ಮ ಸಮುದಾಯದಲ್ಲಿರುವ ಯೆಹೋವನ ಸಾಕ್ಷಿಗಳು ಸಂತೋಷಿಸುವರು.