ಆಡಳಿತ ಮಂಡಲಿಯ ಹೊಸ ಸದಸ್ಯರು
ಆಡಳಿತ ಮಂಡಲಿಯ ಹೊಸ ಸದಸ್ಯರು
ಇಸವಿ 2005, ಆಗಸ್ಟ್ 24ರ ಬುಧವಾರ ಬೆಳಗ್ಗೆ, ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡದ ಬೆತೆಲ್ ಕುಟುಂಬಗಳ ಸದಸ್ಯರು ವಿಡಿಯೋ ಸಂಪರ್ಕವ್ಯವಸ್ಥೆಯ ಮೂಲಕ, ಪುಳಕಗೊಳಿಸುವಂಥ ಒಂದು ಪ್ರಕಟನೆಯನ್ನು ಕೇಳಿಸಿಕೊಂಡರು. 2005, ಸೆಪ್ಟೆಂಬರ್ 1ರಿಂದ ಆರಂಭಿಸಿ, ಜೆಫ್ರೀ ಡಬ್ಲ್ಯೂ. ಜ್ಯಾಕ್ಸನ್ ಮತ್ತು ಆ್ಯಂಥೊನಿ ಮೊರಿಸ್ III ಎಂಬ ಇಬ್ಬರು ಹೊಸ ಸದಸ್ಯರು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಗೆ ಕೂಡಿಸಲ್ಪಡುವರು ಎಂಬುದೇ ಆ ಪ್ರಕಟನೆಯಾಗಿತ್ತು.
ಸಹೋದರ ಜ್ಯಾಕ್ಸನ್ 1971ರ ಫೆಬ್ರವರಿ ತಿಂಗಳಿನಲ್ಲಿ ಆಸ್ಟ್ರೇಲಿಯದ ಟಾಸ್ಮೇನಿಯ ಎಂಬ ದ್ವೀಪ ರಾಜ್ಯದಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದರು. 1974ರ ಜೂನ್ ತಿಂಗಳಿನಲ್ಲಿ ಅವರು ಜನೆಟ್ (ಜೆನಿ)ರನ್ನು ಮದುವೆಯಾದರು. ತದನಂತರ ಸ್ವಲ್ಪದರಲ್ಲೇ ಅವರು ಸ್ಪೆಶಲ್ ಪಯನೀಯರರಾಗಿ ಸೇವೆಮಾಡುವಂತೆ ನೇಮಿಸಲ್ಪಟ್ಟರು. 1979ರಿಂದ 2003ರ ವರೆಗೆ ಅವರು, ದಕ್ಷಿಣ ಪೆಸಿಫಿಕ್ನಲ್ಲಿನ ದ್ವೀಪ ರಾಷ್ಟ್ರಗಳಾದ ಟುವಾಲು, ಸಮೋವ ಮತ್ತು ಫಿಜಿಯಲ್ಲಿ ಮಿಷನೆರಿಗಳಾಗಿ ಸೇವೆಮಾಡಿದರು. ಆ ದ್ವೀಪಗಳಲ್ಲಿದ್ದಾಗ ಸಹೋದರ ಮತ್ತು ಸಹೋದರಿ ಜ್ಯಾಕ್ಸನ್ ಅವರು ಬೈಬಲ್ ಸಾಹಿತ್ಯವನ್ನು ಭಾಷಾಂತರಿಸುವ ಕೆಲಸಕ್ಕೆ ಬಹಳಷ್ಟು ನೆರವು ನೀಡಿದರು. 1992ರಿಂದ ಆರಂಭಿಸಿ, ಸಹೋದರ ಜ್ಯಾಕ್ಸನ್ ಸಮೋವದಲ್ಲಿ ಬ್ರಾಂಚ್ ಕಮಿಟಿಯ ಸದಸ್ಯರಾಗಿ ಮತ್ತು 1996ರಿಂದ ಫಿಜಿಯಲ್ಲಿನ ಬ್ರಾಂಚ್ ಕಮಿಟಿಯ ಸದಸ್ಯರಾಗಿ ಸೇವೆಮಾಡಿದರು. 2003ರ ಏಪ್ರಿಲ್ ತಿಂಗಳಿನಲ್ಲಿ ಅವರು ಮತ್ತು ಜನೆಟ್ ಯುನೈಟೆಡ್ ಸ್ಟೇಟ್ಸ್ ಬೆತೆಲ್ ಕುಟುಂಬದ ಭಾಗವಾದರು ಹಾಗೂ ಟ್ರಾನ್ಸ್ಲೇಷನ್ ಸರ್ವಿಸಸ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸಮಾಡತೊಡಗಿದರು. ತದನಂತರ, ಸಹೋದರ ಜ್ಯಾಕ್ಸನ್ರನ್ನು ಆಡಳಿತ ಮಂಡಲಿಯ ಟೀಚಿಂಗ್ ಕಮಿಟಿಯ ಸಹಾಯಕರಾಗಿ ನೇಮಿಸಲಾಯಿತು.
ಸಹೋದರ ಮೊರಿಸ್ ಅವರು 1971ರಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದರು. ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಅವರು ಸೂಸನ್ರನ್ನು ಮದುವೆಯಾದರು ಮತ್ತು ಅನಂತರ ಸುಮಾರು ನಾಲ್ಕು ವರ್ಷಗಳ ವರೆಗೆ ಅಂದರೆ ಅವರ ಹಿರಿಯ ಮಗನಾದ ಜೆಸ್ಸಿಯು ಜನಿಸುವ ತನಕ ಅವರು ಪಯನೀಯರ್ ಸೇವೆಯನ್ನು ಮುಂದುವರಿಸಿದರು. ಸಮಯಾನಂತರ ಅವರಿಗೆ ಪೌಲ್ ಎಂಬ ಇನ್ನೊಬ್ಬ ಮಗ ಜನಿಸಿದನು. 1979ರಲ್ಲಿ ಸಹೋದರ ಮೊರಿಸ್ ಅವರು ರೆಗ್ಯುಲರ್ ಪಯನೀಯರರಾಗಿ ಪೂರ್ಣ ಸಮಯದ ಸೇವೆಯನ್ನು ಪುನಃ ಆರಂಭಿಸಿದರು. ಹುಡುಗರು ಶಾಲೆಗೆ ಸೇರಿದಾಗ ಅವರ ಪತ್ನಿ ಸಹ ಅವರನ್ನು ಜೊತೆಗೂಡಿದರು. ಎಲ್ಲಿ ಪ್ರಚಾರಕರ ಅಗತ್ಯವು ಹೆಚ್ಚಾಗಿತ್ತೋ ಅಲ್ಲಿ ಅಂದರೆ ಯುನೈಟೆಡ್ ಸ್ಟೇಟ್ಸ್ನ ರೋಡ್ ಐಲೆಂಡ್ ಮತ್ತು ಉತ್ತರ ಕ್ಯಾರೊಲಿನದಲ್ಲಿ ಈ ಕುಟುಂಬವು ಸೇವೆಮಾಡಿತು. ಉತ್ತರ ಕ್ಯಾರೊಲಿನದಲ್ಲಿ ಸಹೋದರ ಮೊರಿಸ್ ಬದಲಿ ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆಮಾಡಿದರು ಮತ್ತು ಅವರ ಗಂಡುಮಕ್ಕಳು ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಿದರು. ಜೆಸ್ಸಿ ಮತ್ತು ಪೌಲ್ 19 ವರ್ಷದವರಾಗಿದ್ದಾಗ ಯುನೈಟೆಡ್ ಸ್ಟೇಟ್ಸ್ ಬ್ರಾಂಚ್ನಲ್ಲಿ ಕೆಲಸಕ್ಕಾಗಿ ಆಮಂತ್ರಿಸಲ್ಪಟ್ಟರು. ಈ ಮಧ್ಯೆ ಸಹೋದರ ಮೊರಿಸ್ ಅವರು ಸರ್ಕಿಟ್ ಕೆಲಸವನ್ನು ಆರಂಭಿಸಿದರು. ತದನಂತರ, 2002ರಲ್ಲಿ ಅವರು ಮತ್ತು ಸೂಸನ್ ಬೆತೆಲ್ಗೆ ಆಮಂತ್ರಿಸಲ್ಪಟ್ಟರು; ಆಗಸ್ಟ್ 1ರಿಂದ ಅವರು ಅಲ್ಲಿ ತಮ್ಮ ಹೊಸ ನೇಮಕವನ್ನು ಆರಂಭಿಸಿದರು. ಸಹೋದರ ಮೊರಿಸ್ ಅವರು ಪ್ಯಾಟರ್ಸನ್ನಲ್ಲಿರುವ ಸರ್ವಿಸ್ ಡಿಪಾರ್ಟ್ಮೆಂಟ್ನಲ್ಲಿ ಮತ್ತು ಸಮಯಾನಂತರ ಆಡಳಿತ ಮಂಡಲಿಯ ಸರ್ವಿಸ್ ಕಮಿಟಿಗೆ ಸಹಾಯಕರಾಗಿ ಕೆಲಸಮಾಡಿದರು.
ಈ ಇಬ್ಬರು ಹೊಸ ಸದಸ್ಯರ ಜೊತೆಗೆ ಆಡಳಿತ ಮಂಡಲಿಯಲ್ಲಿ, ಸಿ. ಡಬ್ಲ್ಯೂ. ಬಾರ್ಬರ್, ಜೆ. ಇ. ಬಾರ್, ಎಸ್. ಎಫ್. ಹರ್ಡ್, ಎಂ. ಎಸ್. ಲೆಟ್, ಜಿ. ಲಾಶ್, ಟಿ. ಜಾರಸ್, ಜಿ. ಏಚ್. ಪಿಯರ್ಸ್, ಎ. ಡಿ. ಶ್ರೋಡರ್, ಡಿ. ಏಚ್. ಸ್ಪ್ಲೇನ್ ಮತ್ತು ಡಿ. ಸಿಡ್ಲಿಕ್ ಇದ್ದಾರೆ. ಆಡಳಿತ ಮಂಡಲಿಯ ಎಲ್ಲ ಸದಸ್ಯರು ಅಭಿಷಿಕ್ತ ಕ್ರೈಸ್ತರಾಗಿದ್ದಾರೆ.