ಒಂದು ಹೆಸರನ್ನು ಹೊಂದುವ ಹಕ್ಕು
ಒಂದು ಹೆಸರನ್ನು ಹೊಂದುವ ಹಕ್ಕು
ಪ್ರತಿಯೊಬ್ಬ ವ್ಯಕ್ತಿಗೂ ಒಂದು ಹೆಸರನ್ನು ಹೊಂದುವ ಹಕ್ಕು ಇದೆ. ಟಹೀಟಿಯಲ್ಲಿ, ತಂದೆತಾಯಿಗಳು ಯಾರು ಎಂಬುದು ಗೊತ್ತಿಲ್ಲದಿರುವಂಥ ಪರಿತ್ಯಕ್ತ ನವಜಾತ ಶಿಶುವಿಗೆ ಸಹ ಒಂದು ಹೆಸರು ಕೊಡಲ್ಪಡುತ್ತದೆ. ಪರಿತ್ಯಕ್ತ ಶಿಶುವಿಗೆ ನೋಂದಣಿ ಕಚೇರಿಯು ಒಂದು ವ್ಯಕ್ತಿನಾಮವನ್ನು ಹಾಗೂ ಉಪನಾಮವನ್ನು ನೀಡುತ್ತದೆ.
ಆದರೆ, ಕಾರ್ಯತಃ ಎಲ್ಲ ಮಾನವರಿಗೆ ಕೊಡಲ್ಪಡುವಂಥ ಈ ಹಕ್ಕು, ಅಂದರೆ ಹೆಸರನ್ನು ಹೊಂದುವ ಮೂಲಭೂತ ಹಕ್ಕು ಒಂದರ್ಥದಲ್ಲಿ ಕೊಡಲ್ಪಟ್ಟಿರದ ಒಬ್ಬ ವ್ಯಕ್ತಿ ಇದ್ದಾನೆ. ಆಶ್ಚರ್ಯದ ಸಂಗತಿಯೇನೆಂದರೆ ಆತನು, ಯಾರಿಂದ “ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರು ತೆಗೆದುಕೊಳ್ಳುತ್ತದೋ ಆ ತಂದೆ” ಆಗಿದ್ದಾನೆ! (ಎಫೆಸ 3:14, 15) ನೋಡಿ, ಬೈಬಲಿನಲ್ಲಿ ಕಂಡುಬರುವಂಥ ಸೃಷ್ಟಿಕರ್ತನ ಹೆಸರನ್ನು ಉಪಯೋಗಿಸಲು ಅನೇಕರು ನೇರವಾಗಿ ನಿರಾಕರಿಸುತ್ತಾರೆ. ಅವರು ಆ ಹೆಸರಿನ ಬದಲಿಗೆ “ದೇವರು,” “ಕರ್ತನು” ಅಥವಾ “ಶಾಶ್ವತನು” ಎಂಬ ಬಿರುದುಗಳನ್ನು ಉಪಯೋಗಿಸಲು ಇಷ್ಟಪಡುತ್ತಾರೆ. ಹಾಗಾದರೆ ಆತನ ಹೆಸರೇನು? ಕೀರ್ತನೆಗಾರನು ಈ ಪ್ರಶ್ನೆಗೆ ಉತ್ತರಿಸುತ್ತಾನೆ: “ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.”—ಕೀರ್ತನೆ 83:18.
ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ, ಲಂಡನ್ ಮಿಷನೆರಿ ಸೊಸೈಟಿಯ ಮಿಷನೆರಿಗಳು ಟಹೀಟಿಗೆ ಆಗಮಿಸಿದಾಗ ಅಲ್ಲಿನ ಪಾಲಿನೇಷಿಯನ್ ಜನರು ಅನೇಕಾನೇಕ ದೇವದೇವತೆಗಳನ್ನು ಆರಾಧಿಸುತ್ತಿದ್ದರು. ಅವುಗಳಲ್ಲಿ ಪ್ರತಿಯೊಂದಕ್ಕೂ ವಿಶಿಷ್ಟ ಹೆಸರುಗಳಿದ್ದು, ಮುಖ್ಯ ದೇವತೆಗಳು ಓರೋ ಮತ್ತು ಟಆರೋಆ ಎಂಬವುಗಳಾಗಿದ್ದವು. ಈ ಮಿಷನೆರಿಗಳು ಬೈಬಲಿನ ದೇವರನ್ನು ಇತರ ದೇವತೆಗಳಿಂದ ಪ್ರತ್ಯೇಕವಾಗಿ ಗುರುತಿಸಲಿಕ್ಕಾಗಿ, ಟಹೀಟಿಯನ್ ಭಾಷೆಯಲ್ಲಿ ಯೇಹೋವಾ ಎಂದು ಲಿಪ್ಯಂತರಮಾಡಲ್ಪಟ್ಟಿರುವ ದೇವರ ಹೆಸರನ್ನು ವ್ಯಾಪಕವಾಗಿ ಉಪಯೋಗಿಸಲು ಹಿಂಜರಿಯಲಿಲ್ಲ.
ದೇವರ ಹೆಸರು ತುಂಬ ಪ್ರಸಿದ್ಧವಾಯಿತು ಮತ್ತು ದೈನಂದಿನ ಸಂಭಾಷಣೆಯಲ್ಲಿ ಹಾಗೂ ಪತ್ರವ್ಯವಹಾರದಲ್ಲಿ ಸರ್ವಸಾಮಾನ್ಯವಾಗಿ ಉಪಯೋಗಿಸಲ್ಪಟ್ಟಿತು. 19ನೆಯ ಶತಮಾನದ ಆರಂಭದಲ್ಲಿ ಆಳ್ವಿಕೆ ನಡಿಸಿದ ಟಹೀಟಿಯ ರಾಜನಾದ IIನೆಯ ಪೊಮಾರೆ, ತನ್ನ ವೈಯಕ್ತಿಕ ಪತ್ರವ್ಯವಹಾರದಲ್ಲಿ ದೇವರ ಹೆಸರನ್ನು ಆಗಿಂದಾಗ್ಗೆ ಉಪಯೋಗಿಸಿದನು. ಈ ವಾಸ್ತವಾಂಶದ ಪುರಾವೆಯು ಇಲ್ಲಿ ತೋರಿಸಲಾಗಿರುವ ಪತ್ರದಲ್ಲಿ ಕಂಡುಬರುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟಿರುವ ಇದು, ‘ಟಹೀಟಿ ಹಾಗೂ ಅದರ ದ್ವೀಪಗಳ ಮ್ಯೂಸಿಯಮ್’ನಲ್ಲಿ ಪ್ರದರ್ಶನಕ್ಕಿಡಲ್ಪಟ್ಟಿದೆ. ಈ ಪತ್ರವು, ಆ ಕಾಲದಲ್ಲಿ ಜನರು ದೇವರ ಹೆಸರನ್ನು ಉಪಯೋಗಿಸುವುದರ ಬಗ್ಗೆ ಯಾವುದೇ ದುರಭಿಪ್ರಾಯವನ್ನು ಹೊಂದಿರಲಿಲ್ಲ ಎಂಬುದನ್ನು ತೋರಿಸುತ್ತದೆ. ಅಷ್ಟುಮಾತ್ರವಲ್ಲದೆ, 1835ರಲ್ಲಿ ಪೂರ್ಣಗೊಳಿಸಲ್ಪಟ್ಟ ಮೊದಲ ಟಹೀಟಿಯನ್ ಬೈಬಲ್ ಭಾಷಾಂತರದಲ್ಲಿ ದೇವರ ವೈಯಕ್ತಿಕ ಹೆಸರು ಸಾವಿರಾರು ಬಾರಿ ಕಂಡುಬರುತ್ತದೆ.
[ಪುಟ 32ರಲ್ಲಿರುವ ಚಿತ್ರ]
ರಾಜ IIನೆಯ ಪೊಮಾರೆ
[ಪುಟ 32ರಲ್ಲಿರುವ ಚಿತ್ರ ಕೃಪೆ]
ರಾಜ ಮತ್ತು ಪತ್ರ: Collection du Musée de Tahiti et de ses Îles, Punaauia, Tahiti