ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಲು ಕೀಲಿಕೈಗಳು

ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಲು ಕೀಲಿಕೈಗಳು

ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಲು ಕೀಲಿಕೈಗಳು

‘ನಾನದನ್ನು ಹೇಳಬಾರದಾಗಿತ್ತು.’ ‘ನನ್ನ ಮನಸ್ಸಿನಲ್ಲಿದ್ದದ್ದನ್ನು ನಾನು ಸ್ಪಷ್ಟವಾಗಿ ವ್ಯಕ್ತಪಡಿಸಲಿಲ್ಲ.’ ನಿಮ್ಮ ಸಂಗಾತಿಯೊಂದಿಗೆ ಸಂವಾದಿಸಲು ಪ್ರಯತ್ನಿಸಿದ ಬಳಿಕ ನಿಮಗೆ ಎಂದಾದರೂ ಹಾಗನಿಸಿದೆಯೊ? ಸಂವಾದವು ನಾವು ಬೆಳೆಸಿಕೊಳ್ಳಬೇಕಾದ ಒಂದು ಕೌಶಲವಾಗಿದೆ. ಯಾವುದೇ ಕೌಶಲದಂತೆ, ಕೆಲವರು ಅದನ್ನು ಸುಲಭವಾಗಿ ಕರಗತಗೊಳಿಸುತ್ತಾರೆ, ಆದರೆ ಇತರರಿಗೆ ಅದು ಕಷ್ಟಕರವಾಗಿರುತ್ತದೆ. ಒಂದುವೇಳೆ ನೀವು ಎರಡನೆಯ ಗುಂಪಿಗೆ ಸೇರಿದವರಾಗಿರುವುದಾದರೂ, ನಿಮ್ಮ ಆಲೋಚನೆಗಳನ್ನು ಹಿತಕರವಾದ ರೀತಿಯಲ್ಲಿ ವ್ಯಕ್ತಪಡಿಸುತ್ತಾ ಪರಿಣಾಮಕಾರಿಯಾಗಿ ಸಂವಾದಿಸಲು ನೀವು ಕಲಿಯಸಾಧ್ಯವಿದೆ.

ವಿವಾಹ ಸಂಗಾತಿಯೊಂದಿಗೆ ವ್ಯವಹರಿಸುವ ವಿಷಯದಲ್ಲಿ ಅನೇಕಬಾರಿ ಸಾಂಸ್ಕೃತಿಕ ಒತ್ತಡಗಳು ಜನರನ್ನು ಒಂದು ನಿರ್ದಿಷ್ಟ ಅಚ್ಚಿನೊಳಕ್ಕೆ ಹಾಕಿಬಿಡಬಹುದು. ಪುರುಷರು, ‘ಗಂಡಸುತನ ತೋರಿಸಬೇಕಾದರೆ ಹೆಚ್ಚು ಮಾತನಾಡಬಾರದು’ ಎಂಬದಾಗಿ ಅವರಿಗೆ ತಮ್ಮ ಸಂಸ್ಕೃತಿಗನುಸಾರ ಕಲಿಸಲ್ಪಟ್ಟಿರಬಹುದು. ಮಾತಾಳಿ ಪುರುಷರನ್ನು ತುಚ್ಛವಾಗಿ ಮತ್ತು ಕೆಲಸಕ್ಕೆಬಾರದವರಾಗಿ ಪರಿಗಣಿಸಲಾಗಬಹುದು. “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ” ಎಂದು ಬೈಬಲ್‌ ಹೇಳುತ್ತದೆ ನಿಜ. (ಯಾಕೋಬ 1:19) ಆದರೆ ಈ ಸಲಹೆಯು ಸ್ತ್ರೀಪುರುಷರಿಬ್ಬರಿಗೂ ಅನ್ವಯಿಸುತ್ತಾ ಸಂವಾದದಲ್ಲಿ ಕೇವಲ ಮಾತಾಡುವುದಕ್ಕಿಂತ ಹೆಚ್ಚಿನದ್ದು ಒಳಗೂಡಿದೆ ಎಂಬುದನ್ನು ತೋರಿಸುತ್ತದೆ. ಇಬ್ಬರು ವ್ಯಕ್ತಿಗಳು ಒಬ್ಬರೊಂದಿಗೊಬ್ಬರು ದೀರ್ಘಕಾಲದವರೆಗೆ ಮಾತನಾಡುತ್ತಿರಬಹುದು, ಆದರೆ ಅವರು ಒಬ್ಬರಿಗೊಬ್ಬರು ಕಿವಿಗೊಡದಿದ್ದರೆ ಆಗೇನು? ನಿಜವಾದ ಸಂವಾದವು ಅಲ್ಲಿರಸಾಧ್ಯವಿಲ್ಲ. ಮೇಲಿನ ಶಾಸ್ತ್ರವಚನವು ತೋರಿಸುವ ಹಾಗೆ, ಯಶಸ್ವಿಕರ ಸಂವಾದದ ಒಂದು ಪ್ರಾಮುಖ್ಯ ಅಂಶವು ಕಿವಿಗೊಡುವ ಕಲೆಯೇ ಆಗಿದೆ.

ಮಾತಿಲ್ಲದೆ ಸಂವಾದಿಸುವುದು

ಕೆಲವು ಸಮುದಾಯಗಳಲ್ಲಿ, ಹೆಂಡತಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸದೆ ತಮ್ಮಲ್ಲೇ ಇಟ್ಟುಕೊಳ್ಳುವಂತೆ ನಿರೀಕ್ಷಿಸಲಾಗುತ್ತದೆ. ಗಂಡಂದಿರಾದರೋ ಕುಟುಂಬದ ವ್ಯವಹಾರಗಳಲ್ಲಿ ನಿರ್ಲಿಪ್ತರಾಗಿ ಉಳಿಯಬೇಕಾಗಿರುತ್ತದೆ. ಪರಿಸ್ಥಿತಿಯು ಹೀಗಿರುವಾಗ, ಗಂಡ ಮತ್ತು ಹೆಂಡತಿಯು ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ತನ್ನ ಸಂಗಾತಿಯು ಏನನ್ನು ಬಯಸುತ್ತಾರೆಂದು ಕೇವಲ ಊಹಿಸಬೇಕಾಗಿರುತ್ತದೆ. ಕೆಲವು ಹೆಂಡತಿಯರು ತಮ್ಮ ಗಂಡಂದಿರ ಆವಶ್ಯಕತೆಗಳೇನೆಂಬುದನ್ನು ಗ್ರಹಿಸುವುದರಲ್ಲಿ ನಿಪುಣರಾಗುತ್ತಾ, ಅವುಗಳನ್ನು ಪೂರೈಸಲು ತಕ್ಷಣ ಕಾರ್ಯವೆಸಗುತ್ತಾರೆ. ಇಂತಹ ಸನ್ನಿವೇಶಗಳಲ್ಲಿ ಗಂಡಹೆಂಡತಿಯರ ನಡುವೆ ಮಾತಿಲ್ಲದ ಸಂವಾದವು ನಡೆಯುತ್ತಿರುತ್ತದೆ. ಹಾಗಿದ್ದರೂ, ಸಾಮಾನ್ಯವಾಗಿ ಅನೇಕ ಕಡೆಗಳಲ್ಲಿ ಈ ರೀತಿಯ ಸಂವಾದವು ಏಕಮುಖದ್ದಾಗಿರುತ್ತದೆ. ಹೆಂಡತಿಯು ತನ್ನ ಗಂಡನ ಆಲೋಚನೆ ಅಥವಾ ಭಾವನೆಗಳನ್ನು ವಿವೇಚಿಸಲು ಕಲಿಯುತ್ತಾಳಾದರೂ, ಗಂಡನಾದರೊ ತದ್ರೀತಿಯ ನಿಪುಣತೆಯನ್ನು ಬೆಳೆಸಿಕೊಂಡು ತನ್ನ ಹೆಂಡತಿಯ ಭಾವನೆಗಳನ್ನು ವಿವೇಚಿಸಿಕೊಳ್ಳುವಂತೆ ನಿರೀಕ್ಷಿಸಲ್ಪಡುವುದು ಅತಿ ವಿರಳ.

ಕೆಲವು ಸಂಸ್ಕೃತಿಗಳಲ್ಲಿ ಪುರುಷರು, ಸ್ತ್ರೀಯರ ಭಾವನಾತ್ಮಕ ಆವಶ್ಯಕತೆಗಳನ್ನು ಗಮನಿಸಿ ಅವನ್ನು ಪೂರೈಸಲು ಪ್ರಯತ್ನಿಸುತ್ತಾರೆ ನಿಜ. ಆದರೂ ಇಂತಹ ಸಂಸ್ಕೃತಿಗಳಲ್ಲಿಯೂ ಹೆಚ್ಚು ಉತ್ತಮವಾದ ಸಂವಾದವು ಇರುವಲ್ಲಿ ಅನೇಕ ವಿವಾಹಗಳು ಪ್ರಯೋಜನಹೊಂದುವವು.

ಸಂವಾದವು ಅತ್ಯಗತ್ಯ

ಮುಚ್ಚುಮರೆಯಿಲ್ಲದ ಸಂವಾದವು ತಪ್ಪಭಿಪ್ರಾಯಗಳು ಮತ್ತು ಅಪಾರ್ಥಗಳಾಗದಂತೆ ತಡೆಯಬಲ್ಲದು. ಇಸ್ರಾಯೇಲ್ಯರ ಇತಿಹಾಸದ ಆರಂಭದಲ್ಲಿ, ಯೊರ್ದನ್‌ ಹೊಳೆಯ ಪೂರ್ವದಲ್ಲಿ ನೆಲೆಸಿದ ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ಯೊರ್ದನ್‌ ತೀರಪ್ರದೇಶದಲ್ಲಿ “ಒಂದು ಮಹಾವೇದಿಯನ್ನು” ಕಟ್ಟಿದರು. ಮಿಕ್ಕ ಕುಲದವರು ಅವರ ಈ ಕೃತ್ಯವನ್ನು ಅಪಾರ್ಥಮಾಡಿಕೊಂಡರು. ಯೊರ್ದನ್‌ ಆಚೆಯ ಪ್ರದೇಶದಲ್ಲಿರುವ ತಮ್ಮ ಸಹೋದರರು ಧರ್ಮಭ್ರಷ್ಟತೆಯ ಕೃತ್ಯವನ್ನು ನಡೆಸಿದ್ದಾರೆಂದೆಣಿಸಿ, ಪಶ್ಚಿಮದಲ್ಲಿದ್ದ ಕುಲಗಳು ಆ “ದಂಗೆಕೋರರೊಂದಿಗೆ” ಯುದ್ಧಮಾಡಲು ಸಿದ್ಧರಾದರು. ಆದಾಗ್ಯೂ, ಯುದ್ಧಕ್ಕೆ ಹೊರಡುವ ಮುನ್ನ ಅವರು ಪೂರ್ವದಲ್ಲಿದ್ದ ಆ ಕುಲಗಳೊಂದಿಗೆ ಮಾತುಕತೆನಡೆಸಲು ಪ್ರತಿನಿಧಿಗಳ ಒಂದು ತಂಡವನ್ನು ಕಳುಹಿಸಿದರು. ಎಂತಹ ವಿವೇಕಯುತ ಹೆಜ್ಜೆ ಅದಾಗಿತ್ತು! ಆ ವೇದಿಯು ನ್ಯಾಯಬದ್ಧವಲ್ಲದ ಸರ್ವಾಂಗಹೋಮಗಳಿಗಾಗಿ ಅಥವಾ ಯಜ್ಞಗಳಿಗಾಗಿ ಕಟ್ಟಲ್ಪಟ್ಟಿರಲಿಲ್ಲ ಎಂದು ಅವರಿಗೆ ತಿಳಿದುಬಂತು. ಇದಕ್ಕೆ ಬದಲಾಗಿ, ಪೂರ್ವದಲ್ಲಿದ್ದ ಆ ಕುಲಗಳಿಗೆ, ಭವಿಷ್ಯತ್ತಿನಲ್ಲಿ ಮಿಕ್ಕ ಕುಲದವರು “ಇಸ್ರಾಯೇಲ್‌ ದೇವರಾದ ಯೆಹೋವನಲ್ಲಿ ನಿಮಗೇನು ಪಾಲಿದೆ?” ಎಂದು ಹೇಳುವರೆಂಬ ಭಯವಿತ್ತು. ಆ ವೇದಿಯು, ಅವರು ಕೂಡ ಯೆಹೋವನ ಆರಾಧಕರೆಂಬುದಕ್ಕೆ ಸಾಕ್ಷಿಯನ್ನು ಕೊಡಲಿಕ್ಕಿತ್ತು. (ಯೆಹೋಶುವ 22:10-29) ಯೆಹೋವನು ಅವರಿಗೆ ಸತ್ಯ ದೇವರಾಗಿದ್ದಾನೆಂಬುದಕ್ಕೆ ಆ ವೇದಿಯು ಸಾಕ್ಷಿಕೊಡುತ್ತಿದ್ದ ಕಾರಣ ಅವರು ಅದಕ್ಕೆ “ಸಾಕ್ಷಿ” ಎಂದು ಹೆಸರಿಟ್ಟರು.​—⁠ಯೆಹೋಶುವ 22:​34, BSI ರೆಫರೆನ್ಸ್‌ ಬೈಬಲ್‌, ಪಾದಟಿಪ್ಪಣಿ.

ರೂಬೇನ್ಯರು ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರು ನೀಡಿದ ವಿವರಣೆಯು ಮಿಕ್ಕ ಕುಲದವರನ್ನು ಮನಗಾಣಿಸಿತು. ಆದುದರಿಂದ ಅವರು ರೂಬೇನ್ಯರು, ಗಾದ್ಯರು ಮತ್ತು ಮನಸ್ಸೆಕುಲದ ಅರ್ಧಜನರ ವಿರುದ್ಧ ಕ್ರಮಕೈಗೊಳ್ಳುವ ಆಲೋಚನೆಯನ್ನು ಬಿಟ್ಟುಬಿಟ್ಟರು. ಹೌದು, ಮುಚ್ಚುಮರೆಯಿಲ್ಲದ ನೇರವಾದ ಸಂವಾದವು ಸಶಸ್ತ್ರ ಕಾಳಗವನ್ನು ತಪ್ಪಿಸಿತು. ಕಾಲಾನಂತರ, ಇಸ್ರಾಯೇಲ್‌ ಜನಾಂಗವು ತನ್ನ ಸಾಂಕೇತಿಕ ಗಂಡನಾದ ಯೆಹೋವ ದೇವರ ವಿರುದ್ಧ ದಂಗೆಯೆದ್ದಾಗ, ಆತನು ಅವರೊಂದಿಗೆ ಕರುಣೆಯಿಂದ “ಹೃದಯಂಗಮವಾಗಿ ಮಾತಾಡುವೆನು” ಎಂದು ಹೇಳಿದನು. (ಹೋಶೇಯ 2:14) ವಿವಾಹಿತರಿಗೆ ಇದೆಂಥ ಉತ್ತಮ ನಮೂನೆಯಾಗಿದೆ! ಹೌದು, ನಿಮ್ಮ ಸಂಗಾತಿಯು ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ ಅವನ ಅಥವಾ ಅವಳ ಮನಮುಟ್ಟಲು ನೀವು ಪ್ರಯತ್ನಪಡುವ ಆವಶ್ಯಕತೆ ಇದೆ. ಚರ್ಚಿಸಲಾಗುತ್ತಿರುವ ವಿಷಯವು ಗಾಢವಾದ ಭಾವನೆಗಳನ್ನು ಒಳಗೂಡುವುದಾದರೆ, ಇದು ಇನ್ನಷ್ಟು ಪ್ರಾಮುಖ್ಯವಾಗಿರುತ್ತದೆ. ಯುನೈಟೆಡ್‌ ಸ್ಟೇಟ್ಸ್‌ನ ಒಬ್ಬ ಪತ್ರಕರ್ತೆಯಾದ ಪ್ಯಾಟಿ ಮಿಒಲಿಕ್‌ ಹೇಳುವುದು: “ಮಾತುಗಳನ್ನಾಡಲು ಬೆಲೆ ಕಟ್ಟಬೇಕಾಗಿಲ್ಲ ಆದರೆ ಅದೇ ಸಮಯದಲ್ಲಿ ಮಾತುಗಳು ಬೆಲೆಕಟ್ಟಲು ಅಸಾಧ್ಯವಾದವುಗಳೂ ಆಗಿರಬಲ್ಲವು. ಕೆಲವರಿಗೆ ಭಾವುಕತೆಯನ್ನು ವ್ಯಕ್ತಪಡಿಸುವುದು ಕಷ್ಟಕರವಾಗಿರಬಹುದಾದರೂ ಹಾಗೆಮಾಡುವುದರ ಫಲಿತಾಂಶವು ಬ್ಯಾಂಕ್‌ನಲ್ಲಿರುವ ಹಣಕ್ಕಿಂತ ಎಷ್ಟೋ ಹೆಚ್ಚಾಗಿರಬಲ್ಲದು.”

ಸಂವಾದದ ಕೌಶಲಗಳನ್ನು ವಿಕಸಿಸಿಕೊಳ್ಳುವುದು

‘ಆರಂಭದಿಂದಲೇ ನಮ್ಮ ವಿವಾಹವು ಒಂದು ಸೋಲಾಗಿತ್ತು,’ ಎಂದು ಕೆಲವರು ಹೇಳಬಹುದು. ಇನ್ನು ಕೆಲವರು, ‘ಈ ವಿವಾಹವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ತೀರ್ಮಾನಕ್ಕೆ ಬರಬಹುದು. ವಿವಾಹದ ತರುವಾಯ ತಮ್ಮ ಸಂವಾದ ಕೌಶಲಗಳನ್ನು ಉತ್ತಮಗೊಳಿಸಲು ಸಾಧ್ಯವೇ ಇಲ್ಲವೆಂದು ಕೆಲವರಿಗೆ ಅನಿಸಬಹುದು. ಆದರೂ, ಸಂಬಂಧಿಕರು ವಿವಾಹವನ್ನು ನಿಶ್ಚಯಿಸುವಂಥ ಸಮಾಜಗಳಲ್ಲಿರುವವರ ಬಗ್ಗೆ ಯೋಚಿಸಿರಿ. ಇಂತಹ ಸಂಸ್ಕೃತಿಗಳಲ್ಲಿ ಅನೇಕರು ತಮ್ಮ ವೈವಾಹಿಕ ಜೀವನದಲ್ಲಿ ಕ್ರಮೇಣವಾಗಿ ಸಂವಾದವನ್ನು ಯಶಸ್ವಿಯಾಗಿ ನಡೆಸಲು ಶಕ್ತರಾಗುತ್ತಾರೆ.

ಪೌರಸ್ತ್ಯ ದೇಶದ ಒಂದು ದಂಪತಿಯು, ಹಿರಿಯರು ನಿಶ್ಚಯಿಸಿದ ವಿವಾಹಬಂಧದಲ್ಲಿ ಬೆಸೆಯಲ್ಪಟ್ಟರು. ಆ ಪುರುಷನಿಗಾಗಿ ವಧುವನ್ನು ಹುಡುಕಲು ದೂರದ ದೇಶಕ್ಕೆ ಪ್ರಯಾಣಿಸುವಂತೆ ಒಬ್ಬ ಪ್ರತಿನಿಧಿಯನ್ನು ಕೇಳಿಕೊಳ್ಳಲಾಗಿತ್ತು. ಆದರೂ, ಸುಮಾರು 4,000 ವರ್ಷಗಳ ಹಿಂದೆ ಜೀವಿಸಿದ್ದ ಆ ವಿವಾಹಿತ ದಂಪತಿಯು ಸಂವಾದದ ಕಲೆಯಲ್ಲಿ ಎದ್ದುಕಾಣುವ ಕೌಶಲವನ್ನು ತೋರಿಸಿತು. ಆ ಪುರುಷನಾದ ಇಸಾಕನು ಪ್ರತಿನಿಧಿಯನ್ನು ಮತ್ತು ತನ್ನ ಭಾವೀ ವಧುವನ್ನು ಅಡವಿಯಲ್ಲಿ ಭೇಟಿಯಾದನು. ಪ್ರತಿನಿಧಿಯಾಗಿ ಕೆಲಸಮಾಡಿದವನು, ‘ತಾನು ಮಾಡಿದ ಕಾರ್ಯಗಳನ್ನೆಲ್ಲಾ ಇಸಾಕನಿಗೆ ತಿಳಿಸಿದನು.’ ಈ ವಿವಾಹದ ವೃತ್ತಾಂತವು ಮುಂದುವರಿಸುವುದು: ‘ನಂತರ ಇಸಾಕನು ಆಕೆಯನ್ನು [ರೆಬೆಕ್ಕಳನ್ನು] ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು [ಇದು ಒಂದು ಅಧಿಕೃತ ವಿವಾಹವನ್ನು ಸೂಚಿಸುವ ಹೆಜ್ಜೆಯಾಗಿತ್ತು]. ಈ ರೀತಿಯಾಗಿ ಅವನು ರೆಬೆಕ್ಕಳನ್ನು ವರಿಸಿದನು, ಆಕೆ ಅವನ ಹೆಂಡತಿಯಾದಳು. ಅವನು ಆಕೆಯನ್ನು ಪ್ರೀತಿಸಿದನು’.​—⁠ಆದಿಕಾಂಡ 24:62-67.

ಆ ಪ್ರತಿನಿಧಿಯು ತನ್ನ ವರದಿಯನ್ನು ‘ತಿಳಿಸಿದನಂತರವೇ’ ಇಸಾಕನು ರೆಬೆಕ್ಕಳನ್ನು ತನ್ನ ಹೆಂಡತಿಯಾಗಿ ತೆಗೆದುಕೊಂಡನೆಂಬುದನ್ನು ಗಮನಿಸಿರಿ. ಆ ಪ್ರತಿನಿಧಿಯು, ಇಸಾಕನು ಆರಾಧಿಸುತ್ತಿದ್ದ ಯೆಹೋವ ದೇವರ ಭಕ್ತನಾಗಿದ್ದ ಒಬ್ಬ ಭರವಸಾರ್ಹ ಸೇವಕನಾಗಿದ್ದನು. ಅವನ ಮೇಲೆ ಭರವಸೆಯನ್ನಿಡಲು ಇಸಾಕನಿಗೆ ಉತ್ತಮ ಕಾರಣಗಳಿದ್ದವು. ತದನಂತರ ಇಸಾಕನು ತಾನು ವಿವಾಹವಾದ ರೆಬೆಕ್ಕಳನ್ನು ‘ಪ್ರೀತಿಸಿದನು.’

ಇಸಾಕನು ಮತ್ತು ರೆಬೆಕ್ಕಳು ಉತ್ತಮ ಸಂವಾದ ಕೌಶಲಗಳನ್ನು ವಿಕಸಿಸಿಕೊಂಡಿದ್ದರೋ? ಅವರ ಮಗನಾದ ಏಸಾವನು ಇಬ್ಬರು ಹಿತ್ತಿಯ ಸ್ತ್ರೀಯರನ್ನು ಮದುವೆಯಾದ ಬಳಿಕ ಒಂದು ಗಂಭೀರ ಸಮಸ್ಯೆಯು ಕುಟುಂಬದಲ್ಲಿ ತಲೆದೋರಿತು. ರೆಬೆಕ್ಕಳು ಇಸಾಕನಿಗೆ ಸತತವಾಗಿ, “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ [ಅವರ ಕಿರಿಮಗ] ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಎಂದು ಹೇಳಿದಳು.” (ಆದಿಕಾಂಡ 26:34; 27:46) ಹೌದು, ಆಕೆ ತನ್ನ ಚಿಂತೆಯನ್ನು ಸ್ಪಷ್ಟ ಹಾಗೂ ನಿಶ್ಚಿತ ರೀತಿಯಲ್ಲಿ ವ್ಯಕ್ತಪಡಿಸಿದಳು.

ಆದುದರಿಂದ ಇಸಾಕನು ಏಸಾವನ ಅವಳಿ ಸಹೋದರನಾದ ಯಾಕೋಬನಿಗೆ ಕಾನಾನ್ಯ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದೆಂದು ಹೇಳಿದನು. (ಆದಿಕಾಂಡ 28:1, 2) ರೆಬೆಕ್ಕಳು ಈಗಾಗಲೇ ತನ್ನ ಅಭಿಪ್ರಾಯವನ್ನು ತಿಳಿಯಪಡಿಸಿದ್ದಳು. ಹೀಗೆ, ಈ ದಂಪತಿಯು ಕುಟುಂಬಕ್ಕೆ ಸಂಬಂಧಪಟ್ಟ ಅತಿ ಸೂಕ್ಷ್ಮವಾದ ವಿಷಯದ ಬಗ್ಗೆ ಯಶಸ್ವಿಕರವಾಗಿ ಸಂವಾದಿಸಿದರು ಮತ್ತು ನಮಗೆ ಒಂದು ಉತ್ತಮ ಮಾದರಿಯನ್ನು ಒದಗಿಸಿದ್ದಾರೆ. ಹಾಗಿದ್ದರೂ, ಸಂಗಾತಿಗಳು ಏಕಾಭಿಪ್ರಾಯಕ್ಕೆ ಬರಲಾಗದಿರುವಲ್ಲಿ ಆಗೇನು? ಏನು ಮಾಡಸಾಧ್ಯವಿದೆ?

ಒಂದು ಭಿನ್ನಾಭಿಪ್ರಾಯವನ್ನು ಎದುರಿಸುವಾಗ

ನಿಮಗೆ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಒಂದು ಗುರುತರವಾದ ಭಿನ್ನಾಭಿಪ್ರಾಯವು ಇರುವಲ್ಲಿ, ನಿಮ್ಮ ಸಂಗಾತಿಗೆ ಮೌನೋಪಚಾರ ನೀಡಬೇಡಿರಿ. ಅದು ಸ್ಪಷ್ಟವಾದ ಸಂದೇಶವನ್ನು ಕೊಡುತ್ತದೆ: ನೀವು ಸಂತೋಷದಿಂದಿಲ್ಲ, ಆದುದರಿಂದ ನಿಮ್ಮ ಸಂಗಾತಿಯೂ ಸಂತೋಷಪಡಬಾರದು ಎಂಬುದು ನಿಮ್ಮ ಬಯಕೆ. ಆದರೆ ನಿಮ್ಮ ಸಂಗಾತಿಗೆ ನಿಮ್ಮ ಬಯಕೆಗಳು ಮತ್ತು ಭಾವನೆಗಳೇನೆಂಬುದು ಪೂರ್ಣವಾಗಿ ಅರ್ಥವಾಗಲಿಕ್ಕಿಲ್ಲ.

ನೀವು ಮತ್ತು ನಿಮ್ಮ ಸಂಗಾತಿಯು ಜೊತೆಗೂಡಿ ವಿಷಯಗಳನ್ನು ಚರ್ಚಿಸುವ ಅಗತ್ಯವಿರಬಹುದು. ವಾದಾಂಶವು ಸೂಕ್ಷ್ಮವಾಗಿರುವಲ್ಲಿ, ಶಾಂತರಾಗಿ ಉಳಿಯುವುದು ಸುಲಭವಾಗಿರಲಿಕ್ಕಿಲ್ಲ. ಇಸಾಕನ ಹೆತ್ತವರಾದ ಅಬ್ರಹಾಮ ಮತ್ತು ಸಾರಳು, ಒಮ್ಮೆ ಒಂದು ಕಷ್ಟಕರ ಸನ್ನಿವೇಶವನ್ನು ಎದುರಿಸಿದರು. ಸಾರಳು ಬಂಜೆಯಾಗಿದ್ದ ಕಾರಣ ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯ ಮೇರೆಗೆ ಅವಳು ತನ್ನ ದಾಸಿಯಾದ ಹಾಗರಳನ್ನು, ಸಂತಾನವನ್ನು ಪಡೆಯುವಂತೆ ಅವನಿಗೆ ಉಪಪತ್ನಿಯಾಗಿ ಕೊಟ್ಟಳು. ಹಾಗರಳು ಅಬ್ರಹಾಮನಿಗೆ ಇಸ್ಮಾಯೇಲನೆಂಬ ಮಗನನ್ನು ಹೆತ್ತಳು. ಏನೇ ಆಗಲಿ, ತದನಂತರ ಸಾರಳೇ ಬಸುರಾಗಿ ಅಬ್ರಹಾಮನಿಗೆ ಇಸಾಕನೆಂಬ ಮಗನನ್ನು ಹೆತ್ತಳು. ಇಸಾಕನು ಮೊಲೆಬಿಟ್ಟ ದಿನದಂದು ಇಸ್ಮಾಯೇಲನು ತನ್ನ ಮಗನಿಗೆ ಅಪಹಾಸ್ಯ ಮಾಡುವುದನ್ನು ಸಾರಳು ಗಮನಿಸಿದಳು. ಹಾಗಾಗಿ ಸಾರಳು ತನ್ನ ಮಗನಿಗೆ ಮುಂಬರುವ ಅಪಾಯವನ್ನು ಮನಗಂಡು ದಾಸಿಯನ್ನು ಮತ್ತು ಅವಳ ಮಗನನ್ನು ಹೊರಹಾಕುವಂತೆ ಅಬ್ರಹಾಮನನ್ನು ಒತ್ತಾಯಿಸಿದಳು. ಹೌದು ಸಾರಳು ತನ್ನ ಅನಿಸಿಕೆಯನ್ನು ಯಾವುದೇ ಮುಚ್ಚುಮರೆಯಿಲ್ಲದೆ ತಿಳಿಸಿದಳು. ಆದರೆ ಅವಳು ಹೇಳಿದ್ದನ್ನು ಮಾಡಲು ಅಬ್ರಹಾಮನಿಗೆ ಸ್ವಲ್ಪವೂ ಒಪ್ಪಿಗೆಯಿರಲಿಲ್ಲ.

ಈ ಭಿನ್ನಾಭಿಪ್ರಾಯವು ಹೇಗೆ ಇತ್ಯರ್ಥಮಾಡಲ್ಪಟ್ಟಿತು? ಬೈಬಲ್‌ ವೃತ್ತಾಂತವು ತಿಳಿಸುವುದು: “ಆದರೆ ದೇವರು [ಅಬ್ರಹಾಮನಿಗೆ]​—⁠ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ಕರಕರೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು.” ಅಬ್ರಹಾಮನು ಯೆಹೋವ ದೇವರ ಮಾರ್ಗದರ್ಶನವನ್ನು ಅಂಗೀಕರಿಸಿ ಅದರಂತೆಯೇ ನಡೆದನು.​—⁠ಆದಿಕಾಂಡ 16:1-4; 21:1-14.

ನೀವು ಹೀಗನ್ನಬಹುದು: ‘ಒಳ್ಳೆಯದು, ಒಂದುವೇಳೆ ದೇವರೇ ಸ್ವರ್ಗದಿಂದ ನಮ್ಮೊಂದಿಗೆ ಮಾತನಾಡುವುದಾದರೆ, ನಾವು ಸುಲಭವಾಗಿ ಏಕಾಭಿಪ್ರಾಯಕ್ಕೆ ಬರಸಾಧ್ಯವಿದೆ!’ ಇದು ವೈವಾಹಿಕ ಸಮಸ್ಯೆಗಳನ್ನು ಬಗೆಹರಿಸುವ ಮತ್ತೊಂದು ಕೀಲಿಕೈಗೆ ನಮ್ಮನ್ನು ನಡೆಸುತ್ತದೆ. ವಿವಾಹಿತ ದಂಪತಿಗಳು ದೇವರಿಗೆ ಕಿವಿಗೊಡಸಾಧ್ಯವಿದೆ. ಹೇಗೆ? ದೇವರ ವಾಕ್ಯವನ್ನು ಜೊತೆಯಾಗಿ ಓದುವ ಮತ್ತು ಅದು ಯಾವುದನ್ನು ದೇವರ ನಿರ್ದೇಶನವೆಂದು ಹೇಳುತ್ತದೋ ಅದನ್ನು ಅಂಗೀಕರಿಸುವ ಮೂಲಕವೇ ಆಗಿದೆ.​—⁠1 ಥೆಸಲೊನೀಕ 2:13.

ಅನುಭವಸ್ಥಳಾದ ಒಬ್ಬ ಕ್ರೈಸ್ತ ಪತ್ನಿಯು ಹೇಳಿದ್ದು: “ಅನೇಕವೇಳೆ ಯಾರಾದರೊಬ್ಬ ಯುವ ಸ್ತ್ರೀಯು ತನ್ನ ವಿವಾಹದ ಬಗ್ಗೆ ಸಲಹೆಗಾಗಿ ನನ್ನ ಬಳಿ ಬರುವಾಗ, ಅವಳು ಮತ್ತು ಅವಳ ಗಂಡನು ಬೈಬಲನ್ನು ಜೊತೆಯಾಗಿ ಓದುತ್ತಿದ್ದಾರೋ ಎಂದು ನಾನು ಕೇಳುತ್ತೇನೆ. ಕುಟುಂಬದಲ್ಲಿ ಸಮಸ್ಯೆಯಿರುವವರಲ್ಲಿ ಹೆಚ್ಚಿನವರಿಗೆ ಈ ರೂಢಿ ಇರುವುದಿಲ್ಲ.” (ತೀತ 2:3-5) ಆಕೆಯು ಗಮನಿಸಿರುವ ಈ ವಿಷಯದಿಂದ ನಾವೆಲ್ಲರು ಪ್ರಯೋಜನವನ್ನು ಪಡೆಯಬಲ್ಲೆವು. ದೇವರ ವಾಕ್ಯವನ್ನು ನಿಮ್ಮ ಸಂಗಾತಿಯೊಂದಿಗೆ ಕ್ರಮವಾಗಿ ಓದಿರಿ. ಆ ಮೂಲಕ ನೀವು ಪ್ರತಿ ದಿನ ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತಾದ ದೇವರ ಮಾತುಗಳು ನಿಮ್ಮ “ಕಿವಿಗೆ ಬೀಳುವದು.” (ಯೆಶಾಯ 30:21) ಆದರೆ ಒಂದು ಎಚ್ಚರಿಕೆಯ ಮಾತು: ನಿಮ್ಮ ಸಂಗಾತಿಯು, ಅನ್ವಯಿಸಲು ತಪ್ಪುತ್ತಿದ್ದಾರೆಂದು ನೀವು ಅಂದುಕೊಳ್ಳುವ ಶಾಸ್ತ್ರವಚನಗಳಿಗೆ ಯಾವಾಗಲೂ ಸೂಚಿಸುತ್ತಾ, ನಿಮ್ಮ ಸಂಗಾತಿಯನ್ನು ಹೊಡೆಯಲು ದೇವರ ವಾಕ್ಯವನ್ನು ಬೆತ್ತದ ಹಾಗೆ ಉಪಯೋಗಿಸಬೇಡಿರಿ. ಬದಲಿಗೆ ನೀವಿಬ್ಬರೂ ಓದಿದ್ದನ್ನು ಹೇಗೆ ಕಾರ್ಯರೂಪಕ್ಕೆ ಹಾಕಬಹುದೆಂಬುದನ್ನು ನೋಡಲು ಪ್ರಯತ್ನಿಸಿರಿ.

ನೀವೊಂದು ಜಟಿಲವಾದ ಸಮಸ್ಯೆಯನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವುದಾದರೆ, ನಿಮ್ಮ ನಿರ್ದಿಷ್ಟ ಚಿಂತೆಯ ಬಗ್ಗೆ ವಾಚ್‌ ಟವರ್‌ ಪ್ರಕಾಶನಗಳ ವಿಷಯಸೂಚಿಯಲ್ಲಿ * (ಇಂಗ್ಲಿಷ್‌) ಏಕೆ ನೋಡಬಾರದು? ಪ್ರಾಯಶಃ ನೀವು ವೃದ್ಧ ಹೆತ್ತವರನ್ನು ನೋಡಿಕೊಳ್ಳುವುದು ನಿಮ್ಮ ವಿವಾಹದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತಿರಬಹುದು. ನಿಮ್ಮ ಸಂಗಾತಿಯು ಏನನ್ನು ಮಾಡಬೇಕು ಅಥವಾ ಏನನ್ನು ಮಾಡಬಾರದೆಂಬುದರ ಬಗ್ಗೆ ಕಚ್ಚಾಡುವ ಬದಲು ವಿಷಯಸೂಚಿಯನ್ನು ಒಟ್ಟಾಗಿ ಏಕೆ ನೋಡಬಾರದು? ಮೊದಲು “ಹೆತ್ತವರು” ಎಂಬ ಮುಖ್ಯಶೀರ್ಷಿಕೆಗೆ ತೆರೆಯಿರಿ. ತದನಂತರ “ವಯಸ್ಸಾದ ಹೆತ್ತವರನ್ನು ಪರಾಂಬರಿಸುವುದು” ಎಂಬಂಥ ಉಪಶೀರ್ಷಿಕೆಗಳ ರೆಫರೆನ್ಸ್‌ಗಳನ್ನು ನೀವು ನೋಡಬಹುದು. ಯೆಹೋವನ ಸಾಕ್ಷಿಗಳ ಪ್ರಕಾಶನಗಳಿಂದ ಸಂಬಂಧಿತ ಲೇಖನಗಳನ್ನು ಒಟ್ಟಾಗಿ ಓದಿರಿ. ಅನೇಕ ಪ್ರಾಮಾಣಿಕ ಕ್ರೈಸ್ತರಿಗೆ ಸಹಾಯನೀಡಿದ ಬೈಬಲ್‌ ಆಧಾರಿತ ಮಾಹಿತಿಯು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಎಷ್ಟೊಂದು ಪ್ರಯೋಜನತರಬಲ್ಲದು ಎಂಬುದನ್ನು ನೀವು ಮನಗಾಣುವಿರಿ.

ಆ ರೆಫರೆನ್ಸ್‌ಗಳನ್ನು ತೆರೆದು ವಿಷಯಗಳನ್ನು ಜೊತೆಯಾಗಿ ಓದುವುದು, ನಿಮ್ಮ ಸಮಸ್ಯೆಯ ವಾಸ್ತವಿಕ ನೋಟವನ್ನು ಪಡೆಯಲು ನಿಮಗೆ ಸಹಾಯಮಾಡುತ್ತದೆ. ದೇವರ ಆಲೋಚನೆ ಏನೆಂಬುದನ್ನು ತೋರಿಸುವ ಬೈಬಲ್‌ ವಚನಗಳ ಉದ್ಧರಣೆ ಮತ್ತು ಉಲ್ಲೇಖಗಳು ನಿಮಗೆ ಸಿಗುವವು. ಅವನ್ನು ಬೈಬಲಿನಲ್ಲಿ ತೆರೆದು ಜೊತೆಯಾಗಿ ಓದಿರಿ. ಹೌದು, ಹೀಗೆ ಮಾಡುವಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ದೇವರು ಏನು ಹೇಳುತ್ತಾನೆಂದು ನೀವು ಕೇಳಿಸಿಕೊಳ್ಳುವಿರಿ!

ಸಂವಾದದ ಕದವನ್ನು ತೆರೆದಿಡಿ

ತುಂಬ ಸಮಯದಿಂದ ಉಪಯೋಗಿಸಲ್ಪಡದ ಒಂದು ಕದವನ್ನು ತೆರೆಯಲು ನೀವು ಎಂದಾದರೂ ಪ್ರಯತ್ನಿಸಿದ್ದೀರಾ? ಕಿರುಗುಟ್ಟುತ್ತಾ, ತುಕ್ಕು ಹಿಡಿದ ಕೀಲುಗಳು ಮೆಲ್ಲನೆ ತಿರುಗಿ ಕದವು ತೆರೆಯುತ್ತದೆ. ಒಂದುವೇಳೆ ಆ ಕದವನ್ನು ಕ್ರಮವಾಗಿ ಉಪಯೋಗಿಸಿ ಅದರ ಕೀಲುಗಳಿಗೆ ಎಣ್ಣೆಯನ್ನು ಹಚ್ಚುತ್ತಿದ್ದರೆ ಹೇಗಿರುತ್ತಿತ್ತು? ಕದವನ್ನು ತೆರೆಯಲು ಸುಲಭವಾಗಿರುತ್ತಿತ್ತು ಅಲ್ಲವೇ. ಸಂವಾದ ಎಂಬ ಕದದ ವಿಷಯದಲ್ಲೂ ಇದು ಸತ್ಯವಾಗಿರುತ್ತದೆ. ನೀವು ಸಂವಾದಮಾಡುವ ಮತ್ತು ಕ್ರೈಸ್ತ ಪ್ರೀತಿಯಿಂದ ಸಂವಾದವೆಂಬ ಕದದ ಕೀಲುಗಳಿಗೆ ಎಣ್ಣೆಯನ್ನು ಸವರುವ ಅಭ್ಯಾಸವನ್ನು ಮಾಡುವುದಾದರೆ, ಗಂಭೀರವಾದ ಸಮಸ್ಯೆಗಳಿರುವಾಗಲೂ ನಿಮ್ಮ ಅನಿಸಿಕೆಗಳನ್ನು ಹೆಚ್ಚು ಸುಲಭವಾಗಿ ಹೇಳಲು ನಿಮಗೆ ಸಾಧ್ಯವಾಗುವುದು.

ಹೇಗೊ ನೀವು ಸಂವಾದಮಾಡಲು ಒಂದಲ್ಲ ಒಂದು ಹಂತದಲ್ಲಿ ಪ್ರಾರಂಭಿಸಲೇಬೇಕು. ಸಂವಾದಮಾಡುವುದರಲ್ಲಿ ಮೊದಮೊದಲು ಹೆಚ್ಚು ಪ್ರಯಾಸವು ಒಳಗೂಡುವುದಾದರೂ ಶ್ರದ್ಧಾಪೂರ್ವಕವಾಗಿ ಆ ವಿಷಯದಲ್ಲಿ ಕೆಲಸಮಾಡಿರಿ. ಆಗ ನೀವು ನಿಮ್ಮ ಸಂಗಾತಿಯನ್ನು ಸದಾ ಅರ್ಥಮಾಡಿಕೊಳ್ಳಲು ಶಕ್ತರಾಗುತ್ತ, ಕಟ್ಟಕಡೆಗೆ ಹೆಚ್ಚು ಸುಖಕರವಾದ ಬಾಂಧವ್ಯದಲ್ಲಿ ಆನಂದಿಸಸಾಧ್ಯವಾಗುವುದು.

[ಪಾದಟಿಪ್ಪಣಿ]

^ ಪ್ಯಾರ. 22 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.

[ಪುಟ 7ರಲ್ಲಿರುವ ಚಿತ್ರ]

ಒಂದು ಭಿನ್ನಾಭಿಪ್ರಾಯವನ್ನು ಎದುರಿಸುವಾಗ ನೀವು ದೇವರ ಮಾರ್ಗದರ್ಶನಕ್ಕಾಗಿ ಹುಡುಕುವಿರೋ?