ಸೃಷ್ಟಿಕರ್ತನಿಂದ ಒಂದು ಶಾಶ್ವತ ಕೊಡುಗೆ
ಸೃಷ್ಟಿಕರ್ತನಿಂದ ಒಂದು ಶಾಶ್ವತ ಕೊಡುಗೆ
ವಿಜ್ಞಾನಿಗಳು ಕೆಲವು ಅಂಶಗಳು ಜೀವನಕ್ಕೆ ಅವಶ್ಯವಾಗಿವೆ ಎಂದು ನಂಬುತ್ತಾರೆ. ಆ ಅಂಶಗಳನ್ನೇ ಬೈಬಲಿನ ಮೊದಲನೇ ಅಧ್ಯಾಯದಲ್ಲಿ ತಿಳಿಸಲಾಗಿದೆ ಅಥವಾ ಅಲ್ಲಿ ಪರೋಕ್ಷವಾಗಿ ಸೂಚಿಸಲಾಗಿದೆ ಎಂಬ ಸಂಗತಿ ನಿಮ್ಮನ್ನು ಆಶ್ಚರ್ಯಗೊಳಿಸುವುದಿಲ್ಲವೊ? ಆದರೆ ಆ ಅಂಶಗಳು ಯಾವುವು?
ಜೀವರಾಶಿಯು ಹಸನಾಗಿ ಬೆಳೆಯಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಇರಬೇಕು. ಅಂತಹ ಜಲಸಮೂಹದ ಕುರಿತು ಆದಿಕಾಂಡ 1:2 ಹೇಳುತ್ತದೆ. ಒಂದು ಗ್ರಹದಲ್ಲಿ ನೀರು ದ್ರವ್ಯರೂಪದಲ್ಲಿರಬೇಕಾದರೆ ತಾಪಮಾನವು ಸರಿಯಾಗಿರಬೇಕು. ಇದಕ್ಕಾಗಿ ಆ ಗ್ರಹವು ತನ್ನ ಸೂರ್ಯನಿಂದ ಸರಿಯಾದ ದೂರದಲ್ಲಿರಬೇಕು. ಸೂರ್ಯ, ಮತ್ತು ಅದು ಭೂಮಿಯ ಮೇಲೆ ಬೀರುವ ಪರಿಣಾಮದ ಕಡೆಗೆ ಆದಿಕಾಂಡದ ವೃತ್ತಾಂತವು ಪದೇಪದೇ ಗಮನ ಸೆಳೆಯುತ್ತದೆ.
ಒಂದು ಗ್ರಹವು ಮಾನವ ನಿವಾಸಕ್ಕೆ ಯೋಗ್ಯವಾಗಿರಬೇಕಾದರೆ ಆ ಗ್ರಹದ ವಾತಾವರಣದಲ್ಲಿ ಅನಿಲಗಳ ನಿರ್ದಿಷ್ಟವಾದ ಮಿಶ್ರಣವಿರಬೇಕು. ಈ ಪ್ರಾಮುಖ್ಯವಾದ ಅಂಶವನ್ನು ಆದಿಕಾಂಡ 1:6-8ರಲ್ಲಿ ಉಲ್ಲೇಖಿಸಲಾಗಿದೆ. ಸಸ್ಯವರ್ಗದ ಬೆಳವಣಿಗೆಯು ಸಮೃದ್ಧವಾದ ಆಮ್ಲಜನಕದ ಪ್ರಧಾನ ಮೂಲವಾಗಿದೆ. ಆಮ್ಲಜನಕದ ಈ ಮೂಲದ ಕುರಿತು ಆದಿಕಾಂಡ 1:11, 12ರಲ್ಲಿ ವಿವರಿಸಲಾಗಿದೆ. ವೈವಿಧ್ಯಮಯವಾದ ಪ್ರಾಣಿಗಳು ಜೀವಿಸಬೇಕಾದರೆ ಒಣನೆಲ ಮತ್ತು ಫಲವತ್ತಾದ ಭೂಮಿ ಇರುವ ಖಂಡಗಳಿರಬೇಕು. ಆದಿಕಾಂಡ 1:9-12ರಲ್ಲಿ ಇಂತಹ ನೆಲದ ಕುರಿತು ವಿವರಿಸಲಾಗಿದೆ. ಕಡೆಯದಾಗಿ, ಹಿತಕರವಾದ ಹವಾಮಾನವಿರಬೇಕಾದರೆ ಗ್ರಹವೊಂದು ನಿರ್ದಿಷ್ಟವಾದ ಕೋನದಲ್ಲಿ ಬಾಗಿರಬೇಕು ಮತ್ತು ಅದು ಹಾಗೆಯೇ ಉಳಿಯಬೇಕು. ಭೂಮಿಯ ವಿಷಯದಲ್ಲಿ, ನಮ್ಮ ಚಂದ್ರ ತನ್ನ ಗುರುತ್ವಾಕರ್ಷಣೆಯ ಬಲದಿಂದ ಈ ಕೆಲಸವನ್ನು ಸ್ವಲ್ಪಮಟ್ಟಿಗೆ ಮಾಡುತ್ತಿದೆ. ಈ ಉಪಗ್ರಹದ ಅಸ್ತಿತ್ವವನ್ನು ಮತ್ತು ಅದರ ಕೆಲವು ಪ್ರಯೋಜನಗಳನ್ನು ಆದಿಕಾಂಡ 1:14, 16ರಲ್ಲಿ ಎತ್ತಿತೋರಿಸಲಾಗಿದೆ.
ಪುರಾತನ ಕಾಲದ ಬರಹಗಾರನಾಗಿದ್ದ ಮೋಶೆಯು ಆಧುನಿಕಕಾಲದ ವಿಜ್ಞಾನದ ಸಹಾಯವಿಲ್ಲದೆ ಈ ಮೇಲಿನ ಅಂಶಗಳೆಡೆಗೆ ಗಮನ ಸೆಳೆಯಲು ಹೇಗೆ ಸಾಧ್ಯವಾಯಿತು? ಈ ಅಂಶಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ತನ್ನ ಸಮಕಾಲೀನರಲ್ಲಿ ಇಲ್ಲದಿದ್ದಂತಹ ಅಸಾಧಾರಣವಾದ ಸಾಮರ್ಥ್ಯವು ಮೋಶೆಯಲ್ಲೇನಾದರೂ ಇದ್ದಿರಬಹುದೊ? ಇಲ್ಲ, ಇದಕ್ಕೆ ಕಾರಣವೇನೆಂದರೆ ಭೂಮ್ಯಾಕಾಶಗಳ ಸೃಷ್ಟಿಕರ್ತನೇ ಅವನು ಅದನ್ನು ಬರೆಯುವಂತೆ ಪ್ರೇರೇಪಿಸಿದನು. ಇದು ಒಂದು ಗಮನಾರ್ಹ ವಿಷಯವಾಗಿದೆ, ಏಕೆಂದರೆ ಈ ಕಾರಣದಿಂದಲೇ ಆದಿಕಾಂಡ ವೃತ್ತಾಂತವು ವೈಜ್ಞಾನಿಕವಾಗಿಯೂ ನಿಷ್ಕೃಷ್ಟವಾಗಿದೆ.
ನಮ್ಮ ಸುತ್ತಲೂ ವಿಶ್ವದಲ್ಲಿ ನಾವು ನೋಡುವ ಅದ್ಭುತಗಳ ಹಿಂದೆ ಒಂದು ಉದ್ದೇಶವಿದೆಯೆಂದು ಬೈಬಲ್ ದೃಢೀಕರಿಸುತ್ತದೆ. “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ” ಎಂದು ಕೀರ್ತನೆ 115:16 ಹೇಳುತ್ತದೆ. ಇನ್ನೊಂದು ಕೀರ್ತನೆಯು ಹೇಳುವುದು: “ಯುಗಯುಗಾಂತರಗಳಿಗೂ ಅದು ಕದಲದ ಹಾಗೆ ಭೂಮಿಯನ್ನು ಅದರ ಅಸ್ತಿವಾರಗಳ ಮೇಲೆ ಆತನು ಸ್ಥಾಪಿಸಿದನು.” (ಕೀರ್ತನೆ 104:5, NIBV) ವಿಶ್ವವನ್ನು ಮತ್ತು ಸುಂದರವಾದ ನಮ್ಮ ಗ್ರಹವನ್ನು ಒಬ್ಬ ಸೃಷ್ಟಿಕರ್ತನು ವಿನ್ಯಾಸಿಸಿ ನಿರ್ಮಿಸಿರುವಲ್ಲಿ, ಅವುಗಳನ್ನು ನೋಡಿಕೊಳ್ಳುವ ಸಾಮರ್ಥ್ಯವೂ ಆತನಿಗಿದೆ ಎಂಬುದನ್ನು ನಂಬುವುದು ಖಂಡಿತವಾಗಿಯೂ ತರ್ಕಸಮ್ಮತವಾಗಿದೆ. ಆತನಿಗಿರುವ ಈ ಸಾಮರ್ಥ್ಯವು, “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು” ಎಂಬ ಅದ್ಭುತವಾದ ವಾಗ್ದಾನದ ನೆರವೇರಿಕೆಯ ಕಡೆಗೆ ನೀವು ಧೈರ್ಯದಿಂದ ಎದುರುನೋಡಬಲ್ಲಿರಿ ಎಂಬುದನ್ನು ಸೂಚಿಸುತ್ತದೆ. (ಕೀರ್ತನೆ 37:29) ನಿಶ್ಚಯವಾಗಿಯೂ, ದೇವರು “ಭೂಲೋಕವನ್ನು . . . ಶೂನ್ಯಸ್ಥಾನವಾಗಿರಲೆಂದು” ಸೃಷ್ಟಿಸಲಿಲ್ಲ. ಬದಲಿಗೆ ಅದನ್ನು ತನ್ನ ಕೆಲಸಗಳನ್ನು ಮಾನ್ಯಮಾಡುವಂತಹ ಮಾನವರ ಶಾಶ್ವತ “ನಿವಾಸಕ್ಕಾಗಿಯೇ ರೂಪಿಸಿದನು.”—ಯೆಶಾಯ 45:18.
ಬೈಬಲಿಗನುಸಾರ, ದೇವರ ಬಗ್ಗೆ ಮತ್ತು ವಿಧೇಯ ಮಾನವಕುಲಕ್ಕೆ ನಿತ್ಯಜೀವವನ್ನು ಕೊಡುವ ಆತನ ಉದ್ದೇಶದ ಬಗ್ಗೆ ಬೋಧಿಸಲು ಯೇಸು ಈ ಭೂಮಿಗೆ ಬಂದನು. (ಯೋಹಾನ 3:16) ಶೀಘ್ರದಲ್ಲೇ ದೇವರು “ಲೋಕನಾಶಕರನ್ನು ನಾಶಮಾಡು”ವನು ಮತ್ತು ರಕ್ಷಣೆಗಾಗಿ ಆತನು ಮಾಡಿರುವ ಒದಗಿಸುವಿಕೆಯನ್ನು ಒಪ್ಪಿಕೊಳ್ಳುವ ಎಲ್ಲ ಜನಾಂಗಗಳ ಶಾಂತಿಪ್ರಿಯ ಮಾನವರು ಆ ನಾಶನದಿಂದ ಪಾರಾಗುವರು. (ಪ್ರಕಟನೆ 7:9, 14; 11:18) ದೇವರ ಸೃಷ್ಟಿಕಾರ್ಯದ ಅದ್ಭುತಗಳನ್ನು ಮಾನವರು ಸದಾಕಾಲಕ್ಕೂ ಕಂಡುಹಿಡಿಯುತ್ತಾ ಅವುಗಳಲ್ಲಿ ಆನಂದಿಸುತ್ತಾ ಇರುವಾಗ ಜೀವನವು ಎಷ್ಟು ಸೊಗಸಾಗಿರುವುದು!—ಪ್ರಸಂಗಿ 3:11; ರೋಮಾಪುರ 8:21. (w07 2/15)
[ಪುಟ 8ರಲ್ಲಿರುವ ಚಿತ್ರ ಕೃಪೆ]
NASA photo