ದೇವದೂತರು ಮಾನವರಿಗಾಗಿ ಏನೆಲ್ಲ ಮಾಡುತ್ತಾರೆ?
ದೇವದೂತರು ಮಾನವರಿಗಾಗಿ ಏನೆಲ್ಲ ಮಾಡುತ್ತಾರೆ?
“ಇದಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; . . . ಅವನು ಗಟ್ಟಿಯಾದ ಶಬ್ದದಿಂದ ಕೂಗುತ್ತಾ—ಬಿದ್ದಳು, ಬಿದ್ದಳು, ಬಾಬೆಲೆಂಬ ಮಹಾ ನಗರಿಯು ಬಿದ್ದಳು . . . ಎಂದು ಹೇಳಿದನು.”—ಪ್ರಕಟನೆ 18:1-3.
ಪತ್ಮೋಸ್ ದ್ವೀಪದಲ್ಲಿ ವೃದ್ಧ ಅಪೊಸ್ತಲ ಯೋಹಾನನು ಸೆರೆಯಲ್ಲಿದ್ದಾಗ, ಅವನಿಗೆ ಪ್ರವಾದನಾತ್ಮಕ ದರ್ಶನಗಳನ್ನು ಕೊಡಲಾಯಿತು. “ದೇವರಾತ್ಮವಶನಾಗಿ” ಅವನು “ಕರ್ತನ ದಿನ”ದಲ್ಲಿದ್ದುಕೊಂಡು ರೋಮಾಂಚಕಾರಿ ಘಟನೆಗಳನ್ನು ನೋಡಲು ಶಕ್ತನಾದನು. ಆ ಕರ್ತನ ದಿನವು, ಯೇಸು ಕ್ರಿಸ್ತನು 1914ರಲ್ಲಿ ಸಿಂಹಾಸನಾರೂಢನಾದಾಗ ಆರಂಭವಾಯಿತು ಮತ್ತು ಅವನ ಸಾವಿರ ವರ್ಷಗಳ ಆಳ್ವಿಕೆಯ ಕೊನೆಯ ವರೆಗೂ ಮುಂದುವರಿಯುವುದು.—ಪ್ರಕಟನೆ 1:10.
2 ಯೆಹೋವ ದೇವರು ಈ ಪ್ರಕಟನೆಯನ್ನು ಯೋಹಾನನಿಗೆ ನೇರವಾಗಿ ನೀಡಲಿಲ್ಲ. ಆತನೊಂದು ಮಾಧ್ಯಮವನ್ನು ಬಳಸಿದನು. ಪ್ರಕಟನೆ 1:1 ತಿಳಿಸುವುದು: “ಯೇಸು ಕ್ರಿಸ್ತನ ಪ್ರಕಟನೆಯು. ಆತನು ಬೇಗನೆ ಸಂಭವಿಸಬೇಕಾಗಿರುವ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವದಕ್ಕಾಗಿ ದೇವರಿಂದ ಈ ಪ್ರಕಟನೆಯನ್ನು ಹೊಂದಿದನು; ಇದಲ್ಲದೆ ಆತನು ತನ್ನ ದೂತನನ್ನು ಕಳುಹಿಸಿ ಅವನ ಮೂಲಕ ಆ ಸಂಗತಿಗಳನ್ನು ತನ್ನ ದಾಸನಾದ ಯೋಹಾನನಿಗೆ ಸೂಚಿಸಿದನು.” ಯೆಹೋವನು, ಯೇಸುವಿನ ಮುಖಾಂತರ ಒಬ್ಬ ದೇವದೂತನನ್ನು ಬಳಸುತ್ತಾ, ‘ಕರ್ತನ ದಿನದಲ್ಲಿ’ ನಡೆಯಲಿರುವ ಅದ್ಭುತ ವಿಷಯಗಳನ್ನು ಯೋಹಾನನಿಗೆ ತಿಳಿಯಪಡಿಸಿದನು. ಒಂದು ಹಂತದಲ್ಲಿ ಯೋಹಾನನು, ‘ಪರಲೋಕದಿಂದ ಇಳಿಯುತ್ತಿರುವ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೇವದೂತನನ್ನು’ ಸಹ ನೋಡಿದನು. ಈ ದೇವದೂತನ ನೇಮಕವೇನಾಗಿತ್ತು? “ಅವನು ಗಟ್ಟಿಯಾದ ಶಬ್ದದಿಂದ ಕೂಗುತ್ತಾ—ಬಿದ್ದಳು, ಬಿದ್ದಳು, ಬಾಬೆಲೆಂಬ ಮಹಾ ನಗರಿಯು ಬಿದ್ದಳು. . . ಎಂದು ಹೇಳಿದನು.” (ಪ್ರಕಟನೆ 18:1-3) ಈ ಬಲಶಾಲಿ ದೇವದೂತನಿಗೆ, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ಕುರಿತಾದ ಈ ಘೋಷಣೆಯನ್ನು ಮಾಡುವ ವಿಶೇಷ ಅವಕಾಶವನ್ನು ಕೊಡಲಾಗಿತ್ತು. ಆದುದರಿಂದ, ಯೆಹೋವನು ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ದೇವದೂತರನ್ನು ಮಹತ್ತ್ವಪೂರ್ಣ ವಿಧದಲ್ಲಿ ಉಪಯೋಗಿಸುತ್ತಾನೆ ಎಂಬ ವಿಷಯದಲ್ಲಿ ಯಾವುದೇ ಸಂದೇಹವಿಲ್ಲ. ದೇವರ ಉದ್ದೇಶದಲ್ಲಿ ದೇವದೂತರ ಪಾತ್ರ ಮತ್ತು ಅವರು ನಮಗಾಗಿ ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನಾವೀಗ ವಿವರವಾಗಿ ಪರೀಕ್ಷಿಸಲಿದ್ದೇವೆ. ಆದರೆ ಅದಕ್ಕಿಂತಲೂ ಮುಂಚೆ ಈ ಆತ್ಮಜೀವಿಗಳು ಹೇಗೆ ಅಸ್ತಿತ್ವಕ್ಕೆ ಬಂದವು ಎಂಬುದನ್ನು ಪರಿಗಣಿಸೋಣ.
ದೇವದೂತರು ಅಸ್ತಿತ್ವಕ್ಕೆ ಬಂದದ್ದು ಹೇಗೆ?
3 ದೇವದೂತರು ಅಸ್ತಿತ್ವದಲ್ಲಿದ್ದಾರೆಂದು ಇಂದು ಲಕ್ಷಗಟ್ಟಲೆ ಜನರು ನಂಬುತ್ತಾರೆ. ಆದರೆ ದೇವದೂತರ ಬಗ್ಗೆ ಮತ್ತು ಅವರು ಹೇಗೆ ಅಸ್ತಿತ್ವಕ್ಕೆ ಬಂದರು ಎಂಬುದರ ಬಗ್ಗೆ ಅನೇಕರಿಗೆ ತಪ್ಪಾದ ಅಭಿಪ್ರಾಯಗಳಿವೆ. ಉದಾಹರಣೆಗಾಗಿ, ಒಬ್ಬ ಪ್ರಿಯ ವ್ಯಕ್ತಿ ಸತ್ತಾಗ, ಆ ವ್ಯಕ್ತಿಯನ್ನು ದೇವರು ತನ್ನ ಬಳಿ ಕರೆದಿದ್ದಾನೆ ಮತ್ತು ಅವನೊಬ್ಬ ದೇವದೂತನಾಗುತ್ತಾನೆ ಎಂದು ಧಾರ್ಮಿಕ ಜನರು ಅಭಿಪ್ರಯಿಸುತ್ತಾರೆ. ದೇವದೂತರ ಸೃಷ್ಟಿ, ಅಸ್ತಿತ್ವ ಮತ್ತು ಉದ್ದೇಶದ ಬಗ್ಗೆ ದೇವರ ವಾಕ್ಯವು ಇದನ್ನೇ ಕಲಿಸುತ್ತದೋ?
4 ಶಕ್ತಿ ಮತ್ತು ಅಧಿಕಾರದಲ್ಲಿ ಅಗ್ರಗಣ್ಯನಾಗಿರುವ ಪ್ರಧಾನ ದೇವದೂತನ ಹೆಸರು ಮೀಕಾಯೇಲ ಎಂದಾಗಿದೆ. (ಯೂದ 9) ಅವನು ಯೇಸು ಕ್ರಿಸ್ತನು. (1 ಥೆಸಲೊನೀಕ 4:16) ಈ ದೇವದೂತ ಪುತ್ರನನ್ನು, ಬಹಳಷ್ಟು ಸಮಯದ ಹಿಂದೆ ಯೆಹೋವನು ತಾನು ಸೃಷ್ಟಿಕರ್ತನಾಗಬೇಕೆಂದು ಉದ್ದೇಶಿಸಿ ಸೃಷ್ಟಿಕಾರ್ಯವನ್ನು ಆರಂಭಿಸಿದಾಗ ಮೊತ್ತಮೊದಲಾಗಿ ಸೃಷ್ಟಿಸಿದನು. (ಪ್ರಕಟನೆ 3:14) ತದನಂತರ, ಈ ಜ್ಯೇಷ್ಠಪುತ್ರನ ಮೂಲಕ ಯೆಹೋವನು ಬೇರೆಲ್ಲಾ ಆತ್ಮಜೀವಿಗಳನ್ನು ಸೃಷ್ಟಿಸಿದನು. (ಕೊಲೊಸ್ಸೆ 1:15-17) ಯೆಹೋವನು ಆ ಆತ್ಮಜೀವಿಗಳನ್ನು ತನ್ನ ಕುಮಾರರು ಅಥವಾ ಪುತ್ರರೆಂದು ಕರೆಯುತ್ತಾನೆ. ಇದು, ಆತನು ಮೂಲಪಿತನಾದ ಯೋಬನಿಗೆ ಕೇಳಿದ ಈ ಮಾತುಗಳಿಂದ ಸೂಚಿಸಲ್ಪಟ್ಟಿದೆ: “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು. ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದಘೋಷಮಾಡುತ್ತಾ ಇರಲು . . . ಅದರ ಮೂಲೆಗಲ್ಲನ್ನು ಹಾಕಿದವರು ಯಾರು?” (ಯೋಬ 38:4, 6, 7) ಹಾಗಾದರೆ, ದೇವದೂತರನ್ನು ದೇವರು ಸೃಷ್ಟಿಸಿದ್ದಾನೆ ಮತ್ತು ಅವರು ಮಾನವರಿಗಿಂತ ಎಷ್ಟೋ ಸಮಯದ ಹಿಂದೆಯೇ ಅಸ್ತಿತ್ವಕ್ಕೆ ಬಂದರೆಂಬುದು ಸ್ಪಷ್ಟ.
1 ಕೊರಿಂಥ 14:33 ಹೇಳುತ್ತದೆ. ಅದಕ್ಕನುಸಾರ, ಯೆಹೋವನು ತನ್ನ ಆತ್ಮಪುತ್ರರನ್ನು ಈ ಮೂರು ಮುಖ್ಯ ವರ್ಗಗಳಾಗಿ ಸಂಘಟಿಸಿದ್ದಾನೆ: (1) ಸೆರಾಫಿಯರು. ಇವರು ಪರಿಚಾರಕರಾಗಿ ಸೇವೆಸಲ್ಲಿಸಲು ದೇವರ ಸಿಂಹಾಸನದ ಬಳಿ ನಿಂತಿದ್ದು, ಆತನ ಪರಿಶುದ್ಧತೆಯನ್ನು ಘೋಷಿಸುತ್ತಿರುತ್ತಾರೆ ಮತ್ತು ಆತನ ಜನರನ್ನು ಆಧ್ಯಾತ್ಮಿಕವಾಗಿ ಶುದ್ಧರಾಗಿಡುತ್ತಾರೆ. (2) ಕೆರೂಬಿಯರು. ಇವರು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುತ್ತಾರೆ. (3) ದೇವದೂತರು. ಇವರು ದೇವರ ಚಿತ್ತವನ್ನು ನಡೆಸುತ್ತಾರೆ. (ಕೀರ್ತನೆ 103:20; ಯೆಶಾಯ 6:1-3; ಯೆಹೆಜ್ಕೇಲ 10:3-5; ದಾನಿಯೇಲ 7:10) ಈ ಆತ್ಮಜೀವಿಗಳು ಮಾನವರಿಗಾಗಿ ಮಾಡುವಂಥ ಕೆಲವು ವಿಷಯಗಳಾವುವು?—ಪ್ರಕಟನೆ 5:11.
5 “ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ” ಎಂದುದೇವದೂತರು ಯಾವ ಪಾತ್ರವನ್ನು ನಿರ್ವಹಿಸುತ್ತಾರೆ?
6 ಆತ್ಮಜೀವಿಗಳ ಬಗ್ಗೆ ಮೊದಲ ನೇರ ಪ್ರಸ್ತಾಪವು ಆದಿಕಾಂಡ 3:23, 24ರಲ್ಲಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: ಯೆಹೋವನು “[ಆದಾಮನನ್ನು] ಏದೆನ್ ತೋಟದಿಂದ ಹೊರಡಿಸಿಬಿಟ್ಟನು. ಅದಲ್ಲದೆ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ [ಯೆಹೋವನು] ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ ಇರಿಸಿದನು.” ಈ ಕೆರೂಬಿಯರು, ಆದಾಮಹವ್ವರು ತಮ್ಮ ಆರಂಭದ ಮನೆಯನ್ನು ಮತ್ತೆ ಪ್ರವೇಶಿಸಲು ಸಾಧ್ಯವಾಗದಂತೆ ನೋಡಿಕೊಂಡರು. ಇದು ಮಾನವ ಇತಿಹಾಸದ ಆರಂಭದಲ್ಲಿ ದೇವದೂತರು ಮಾಡಿದ ಕೆಲಸವಾಗಿತ್ತು. ಆದರೆ ಅಂದಿನಿಂದ ಅವರು ಯಾವ ಪಾತ್ರವನ್ನು ನಿರ್ವಹಿಸಿದ್ದಾರೆ?
7 ದೇವದೂತರ ಬಗ್ಗೆ ಬೈಬಲಿನಲ್ಲಿ ಬಹುಮಟ್ಟಿಗೆ 400 ಸಲ ತಿಳಿಸಲಾಗಿದೆ. “ದೇವದೂತ” ಎಂಬುದಕ್ಕಾಗಿರುವ ಹೀಬ್ರು ಮತ್ತು ಗ್ರೀಕ್ ಪದಗಳನ್ನು “ಸಂದೇಶವಾಹಕ” ಎಂದು ಭಾಷಾಂತರಿಸಸಾಧ್ಯವಿದೆ. ಇದರಂತೆ ದೇವದೂತರು, ದೇವರ ಮತ್ತು ಮಾನವರ ಮಧ್ಯೆ ಸಂವಾದದ ಮಾಧ್ಯಮವಾಗಿ ಕೆಲಸಮಾಡಿದ್ದಾರೆ. ಈ ಲೇಖನದ ಮೊದಲ ಎರಡು ಪ್ಯಾರಗ್ರಾಫ್‌ಗಳಲ್ಲಿ ಗಮನಿಸಿರುವಂತೆ, ಅಪೊಸ್ತಲ ಯೋಹಾನನಿಗೆ ತನ್ನ ಸಂದೇಶವನ್ನು ರವಾನಿಸಲಿಕ್ಕಾಗಿ ಯೆಹೋವನು ಒಬ್ಬ ದೇವದೂತನನ್ನು ಬಳಸಿದನು.
8 ಭೂಮಿಯ ಮೇಲಿರುವ ದೇವರ ಸೇವಕರಿಗೆ ಬೆಂಬಲ ಮತ್ತು ಉತ್ತೇಜನವನ್ನು ಕೊಡಲಿಕ್ಕಾಗಿಯೂ ದೇವದೂತರನ್ನು ಉಪಯೋಗಿಸಲಾಗಿದೆ. ಉದಾಹರಣೆಗಾಗಿ, ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕರ ಕಾಲದಲ್ಲಿ, ಮಾನೋಹ ಮತ್ತು ಬಂಜೆಯಾಗಿದ್ದ ಅವನ ಹೆಂಡತಿ ಒಂದು ಮಗುವಿಗಾಗಿ ಹಂಬಲಿಸುತ್ತಿದ್ದರು. ಆಕೆಗೆ ಒಂದು ಗಂಡುಮಗು ಹುಟ್ಟುವುದೆಂದು ತಿಳಿಸಲು, ಮಾನೋಹನ ಹೆಂಡತಿಯ ಬಳಿ ಯೆಹೋವನು ತನ್ನ ದೇವದೂತನನ್ನು ಕಳುಹಿಸಿದನು. ಆ ವೃತ್ತಾಂತವು ನಮಗೆ ಹೀಗನ್ನುತ್ತದೆ: “ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು; ಅವನು ಹುಟ್ಟಿದಂದಿನಿಂದ ದೇವರಿಗೆ ಪ್ರತಿಷ್ಠಿತನಾಗಿರುವನು; ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವದಕ್ಕೆ ಪ್ರಾರಂಭಿಸುವನು.”—ನ್ಯಾಯಸ್ಥಾಪಕರು 13:1-5.
9 ಅಂತೆಯೇ, ಮಾನೋಹನ ಹೆಂಡತಿ ಒಂದು ಗಂಡುಮಗುವನ್ನು ಹೆತ್ತಳು. ಅವನ ಹೆಸರು ಸಂಸೋನ ಎಂದಾಗಿತ್ತು ಮತ್ತು ಅವನು ಬೈಬಲಿನ ಚರಿತ್ರೆಯಲ್ಲಿ ಪ್ರಸಿದ್ಧನಾದನು. (ನ್ಯಾಯಸ್ಥಾಪಕರು 13:24) ಮಗು ಹುಟ್ಟುವ ಮುಂಚೆಯೇ ಆ ದೇವದೂತನು ಪುನಃ ಬಂದು, ತಮ್ಮ ಮಗನನ್ನು ಹೇಗೆ ಬೆಳೆಸತಕ್ಕದ್ದೆಂಬುದರ ಬಗ್ಗೆ ಸೂಚನೆಗಳನ್ನು ಕೊಡುವಂತೆ ಮಾನೋಹನು ಯೆಹೋವನನ್ನು ವಿನಂತಿಸಿಕೊಂಡನು. ದೇವದೂತನು ಪ್ರತ್ಯಕ್ಷನಾದಾಗ ಮಾನೋಹನು ಅವನಿಗೆ ಹೀಗೆ ಕೇಳಿದನು: “ನಾವು ಆ ಮಗುವಿಗೋಸ್ಕರ ಮಾಡತಕ್ಕದ್ದೇನು? ಅವನನ್ನು ಹೇಗೆ ನಡಿಸತಕ್ಕದ್ದು”? ಆಗ ಯೆಹೋವನ ದೂತನು ಮಾನೋಹನ ಹೆಂಡತಿಗೆ ಈ ಹಿಂದೆ ಕೊಟ್ಟ ಸೂಚನೆಗಳನ್ನೇ ಪುನರಾವರ್ತಿಸಿದನು. (ನ್ಯಾಯಸ್ಥಾಪಕರು 13:6-14) ಇದರಿಂದ ಮಾನೋಹನಿಗೆ ಎಷ್ಟು ಉತ್ತೇಜನ ಸಿಕ್ಕಿರಬೇಕು! ಇಂದು ದೇವದೂತರು ಈ ರೀತಿಯಲ್ಲಿ ಮನುಷ್ಯರನ್ನು ಭೇಟಿಮಾಡುವುದಿಲ್ಲ. ಆದರೂ, ಹೆತ್ತವರು ತಮ್ಮ ಮಕ್ಕಳನ್ನು ತರಬೇತಿಗೊಳಿಸುವ ವಿಷಯದಲ್ಲಿ ಮಾನೋಹನಂತೆಯೇ ಯೆಹೋವನ ಸಲಹೆಸೂಚನೆಯನ್ನು ಪಡೆಯಲು ಪ್ರಯತ್ನಿಸಬಹುದು.—ಎಫೆಸ 6:4.
10 ದೇವದೂತರು ಕೊಡುವ ಬೆಂಬಲದ ಬಗ್ಗೆ ಪ್ರವಾದಿಯಾದ ಎಲೀಷನ ದಿನಗಳಲ್ಲಿ ಒಂದು ಎದ್ದುಕಾಣುವ ಉದಾಹರಣೆ ಸಿಗುತ್ತದೆ. ಎಲೀಷನು ಇಸ್ರಾಯೇಲಿನ ಒಂದು ಪಟ್ಟಣವಾಗಿದ್ದ ದೋತಾನಿನಲ್ಲಿ ತಂಗಿದ್ದನು. ಒಂದು ದಿನ ಎಲೀಷನ ಸೇವಕನು ಬೆಳಗಾತ ಬೇಗನೆ ಎದ್ದು ಹೊರಗೆ ಕಣ್ಣು ಹಾಯಿಸಿದಾಗ, ಆ ಪಟ್ಟಣವು ಕುದುರೆ ಮತ್ತು ಯುದ್ಧ ರಥಗಳಿಂದ ಸುತ್ತುವರಿದಿರುವುದನ್ನು ನೋಡಿದನು. ಅರಾಮ್ಯದ ರಾಜನು ಎಲೀಷನನ್ನು ಸೆರೆಹಿಡಿಯಲು ಈ ಬಲಾಢ್ಯ ಮಿಲಿಟರಿ ಸೇನೆಯನ್ನು ಕಳುಹಿಸಿದ್ದನು. ಇದನ್ನು ನೋಡಿ ಎಲೀಷನ ಸೇವಕನ ಪ್ರತಿಕ್ರಿಯೆ ಏನಾಗಿತ್ತು? ಭಯಭೀತನಾಗಿ, ಬಹುಶಃ ಗಾಬರಿಯಿಂದ ಅವನು “ಅಯ್ಯೋ, ಸ್ವಾಮೀ, ಏನು ಮಾಡೋಣ” ಎಂದು ಕೂಗಿಕೊಂಡನು. ಅವರೊಂದು ಆಶಾರಹಿತ ಸ್ಥಿತಿಯಲ್ಲಿದ್ದಾರೆಂದು ಅವನಿಗನಿಸಿತು. ಆದರೆ ಎಲೀಷನು 2 ಅರಸುಗಳು 6:11-16.
ಹೀಗೆ ಉತ್ತರಿಸಿದನು: “ಹೆದರಬೇಡ; ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” ಅವನ ಮಾತಿನ ಅರ್ಥವೇನಾಗಿತ್ತು?—11 ತನ್ನನ್ನು ಬೆಂಬಲಿಸಲು ದೇವದೂತರಿದ್ದಾರೆ ಎಂಬುದು ಎಲೀಷನಿಗೆ ಕಾಣುತ್ತಿತ್ತು. ಆದರೆ ಅವನ ಸೇವಕನಿಗೆ ಇದ್ಯಾವುದೂ ಕಾಣುತ್ತಿರಲಿಲ್ಲ. ಆದುದರಿಂದ ಎಲೀಷನು ‘ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ ಎಂದು ಪ್ರಾರ್ಥಿಸಿದನು.’ ಆ ಕೂಡಲೇ “ಯೆಹೋವನು ಅವನ [ಸೇವಕನ] ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥರಥಾಶ್ವಗಳು ಆ ಸೇವಕನಿಗೆ ಕಂಡವು.” (2 ಅರಸುಗಳು 6:17) ಆಗ ಮಾತ್ರ ಆ ಸೇವಕನಿಗೆ ಆ ದೇವದೂತರ ಗಣಗಳನ್ನು ನೋಡಲು ಸಾಧ್ಯವಾಯಿತು. ಆಧ್ಯಾತ್ಮಿಕ ಒಳನೋಟದೊಂದಿಗೆ ನಾವು ಸಹ, ದೇವದೂತರೆಲ್ಲರೂ ಯೆಹೋವ ಹಾಗೂ ಕ್ರಿಸ್ತನ ನಿರ್ದೇಶನದ ಮೇರೆಗೆ ದೇವಜನರಿಗೆ ಬೆಂಬಲ ಹಾಗೂ ಸಂರಕ್ಷಣೆಯನ್ನು ಕೊಡುತ್ತಿರುವುದನ್ನು ಗ್ರಹಿಸಲು ಶಕ್ತರಾಗಿರುವೆವು.
ಕ್ರಿಸ್ತನ ಸಮಯದಲ್ಲಿ ದೇವದೂತರ ಬೆಂಬಲ
12 ಕನ್ಯೆಯಾಗಿದ್ದ ಯೆಹೂದಿ ಸ್ತ್ರೀಯಾದ ಮರಿಯಳಿಗೆ, “ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು” ಎಂಬ ಸುದ್ದಿ ಸಿಕ್ಕಿದಾಗ ಅವಳಿಗೆ ಸಿಕ್ಕಿದಂಥ ಬೆಂಬಲವನ್ನು ಪರಿಗಣಿಸಿರಿ. ದೇವರು ಕಳುಹಿಸಿದ್ದ ದೇವದೂತ ಗಬ್ರಿಯೇಲನು, ಚಕಿತಗೊಳಿಸುವಂಥ ಆ ಸಂದೇಶವನ್ನು ಕೊಡುವ ಸ್ವಲ್ಪ ಮುಂಚೆ ಅವಳಿಗೆ “ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ ದೊರಕಿತು” ಎಂದು ಹೇಳಿದನು. (ಲೂಕ 1:26, 27, 30, 31) ತನಗೆ ದೇವರ ಕೃಪೆ ಇದೆಯೆಂಬ ಈ ಭರವಸದಾಯಕ ಮಾತುಗಳಿಂದ ಮರಿಯಳಿಗೆ ಎಷ್ಟು ಉತ್ತೇಜನ ಮತ್ತು ಬಲ ಸಿಕ್ಕಿರಬೇಕು!
13 ದೇವದೂತರು ಬೆಂಬಲನೀಡಿದ ಇನ್ನೊಂದು ಸಂದರ್ಭವು, ಅರಣ್ಯದಲ್ಲಿ ಸೈತಾನನು ತಂದ ಮೂರು ಶೋಧನೆಗಳನ್ನು ಯೇಸು ಪ್ರತಿರೋಧಿಸಿದ ನಂತರದ ಸಮಯವಾಗಿತ್ತು. ಆ ಶೋಧನೆಗಳ ಅಂತ್ಯದಲ್ಲಿ ‘ಸೈತಾನನು [ಯೇಸುವನ್ನು] ಬಿಟ್ಟುಬಿಟ್ಟನು ಮತ್ತು ದೇವದೂತರು ಬಂದು ಆತನಿಗೆ ಉಪಚಾರ ಮಾಡಿದರು’ ಎಂದು ಆ ವೃತ್ತಾಂತ ನಮಗೆ ತಿಳಿಸುತ್ತದೆ. (ಮತ್ತಾಯ 4:1-11) ಯೇಸು ಸಾಯಲಿದ್ದ ಹಿಂದಿನ ರಾತ್ರಿ ಇದೇ ರೀತಿಯ ಒಂದು ಸಂಗತಿ ನಡೆಯಿತು. ಬೇಗುದಿಯಿಂದ ತುಂಬಿದ್ದ ಯೇಸು, ಮೊಣಕಾಲೂರಿ ಪ್ರಾರ್ಥಿಸಲಾರಂಭಿಸಿದನು. ಅವನು ಹೀಗಂದನು: “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು; ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ . . . ಆಗ ಪರಲೋಕದಿಂದ ಬಂದ ಒಬ್ಬ ದೇವದೂತನು ಆತನಿಗೆ ಕಾಣಿಸಿಕೊಂಡು ಆತನನ್ನು ಬಲಪಡಿಸಿದನು.” (ಲೂಕ 22:42, 43) ಆದರೆ ಇಂದು ನಮಗೆ ದೇವದೂತರಿಂದ ಯಾವ ವಿಧದ ಬೆಂಬಲವಿದೆ?
ಆಧುನಿಕ ಸಮಯಗಳಲ್ಲಿ ದೇವದೂತರ ಬೆಂಬಲ
14 ಯೆಹೋವನ ಸಾಕ್ಷಿಗಳ ಸಾರುವ ಕಾರ್ಯದ ಆಧುನಿಕ-ದಿನದ ಇತಿಹಾಸವನ್ನು ನಾವು ಪರಿಗಣಿಸುವಾಗ ಅವರಿಗೆ ದೇವದೂತರ ಬೆಂಬಲವಿದೆ ಎಂಬುದನ್ನು ನಾವು ನೋಡಬಹುದಲ್ಲವೋ? ಉದಾಹರಣೆಗಾಗಿ IIನೇ ಲೋಕ ಯುದ್ಧಕ್ಕೆ ಮುಂಚೆ ಮತ್ತು ಆ ಯುದ್ಧ ನಡೆಯುತ್ತಿದ್ದಾಗ (1939-45), ಯೆಹೋವನ ಜನರು ಜರ್ಮನಿ ಮತ್ತು ಪಶ್ಚಿಮ ಯುರೋಪಿನಲ್ಲಿ ನಾಜಿಗಳ ಆಕ್ರಮಣವನ್ನು ಎದುರಿಸಿನಿಲ್ಲಲು ಶಕ್ತರಾಗಿದ್ದರು. ಇಟಲಿ, ಸ್ಪೆಯ್ನ್, ಪೋರ್ಟುಗಲ್ ದೇಶಗಳಲ್ಲಿ ಕ್ಯಾಥೊಲಿಕ್ ಫ್ಯಾಸಿಸ್ಟ್ ಆಳ್ವಿಕೆಗಳ ಅಡಿಯಲ್ಲಿ ಅವರು ಇನ್ನೂ ಹೆಚ್ಚು ಸಮಯ ಹಿಂಸೆಯನ್ನು ತಾಳಿಕೊಳ್ಳಬೇಕಾಯಿತು. ಮತ್ತು ಅನೇಕ ದಶಕಗಳ ವರೆಗೆ ಅವರು ಮಾಜಿ ಸೋವಿಯಟ್ ಒಕ್ಕೂಟ ಮತ್ತು ಅದರ ಆಳ್ವಿಕೆಯ ಕೆಳಗಿದ್ದ ರಾಷ್ಟ್ರಗಳಲ್ಲಿ ಹಿಂಸೆಯನ್ನು ತಾಳಿಕೊಂಡರು. ಆಫ್ರಿಕದ ಕೆಲವು ರಾಷ್ಟ್ರಗಳಲ್ಲಿ ಸಾಕ್ಷಿಗಳು ತಾಳಿಕೊಂಡಿರುವ ಹಿಂಸೆ ಇನ್ನೊಂದು ಉದಾಹರಣೆಯಾಗಿದೆ. * ಇತ್ತೀಚಿನ ಸಮಯಗಳಲ್ಲಿ, ಯೆಹೋವನ ಸೇವಕರು ಜಾರ್ಜಿಯ ಎಂಬ ದೇಶದಲ್ಲಿ ಅತಿ ಉಗ್ರವಾದ ಹಿಂಸೆಗೀಡಾಗಿದ್ದಾರೆ. ಯೆಹೋವನ ಸಾಕ್ಷಿಗಳ ಚಟುವಟಿಕೆಯನ್ನು ಕೊನೆಗಾಣಿಸಲು ಸೈತಾನನು ತನ್ನಿಂದಾದುದೆಲ್ಲವನ್ನು ಮಾಡಿದ್ದಾನೆ. ಹಾಗಿದ್ದರೂ ಒಂದು ಸಂಘಟನೆಯಾಗಿ ಅವರು ಅಂಥ ವಿರೋಧದಿಂದ ಪಾರಾಗಿ, ಅಭಿವೃದ್ಧಿಹೊಂದಿದ್ದಾರೆ. ಇದಕ್ಕೆ ಒಂದು ಕಾರಣ, ದೇವದೂತರು ಕೊಟ್ಟಿರುವ ಸಂರಕ್ಷಣೆಯೇ ಆಗಿದೆ.—ಕೀರ್ತನೆ 34:7; ದಾನಿಯೇಲ 3:28; 6:22.
15 ಲೋಕವ್ಯಾಪಕವಾಗಿ ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ತಮಗಿರುವ ನೇಮಕವನ್ನು ಯೆಹೋವನ ಸಾಕ್ಷಿಗಳು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಆದುದರಿಂದ ಅವರು ಎಲ್ಲೆಡೆಯೂ ಆಸಕ್ತ ಜನರಿಗೆ ಬೈಬಲ್ ಸತ್ಯವನ್ನು ಕಲಿಸುವ ಮೂಲಕ ಶಿಷ್ಯರನ್ನು ಮಾಡುತ್ತಾರೆ. (ಮತ್ತಾಯ 28:19, 20) ಆದರೆ ದೇವದೂತರಿಂದ ಬೆಂಬಲವಿಲ್ಲದೆ ತಾವು ಈ ನೇಮಕವನ್ನು ಪೂರೈಸಲಾರೆವೆಂದು ಅವರಿಗೆ ಚೆನ್ನಾಗಿ ತಿಳಿದಿದೆ. ಆದುದರಿಂದ ಪ್ರಕಟನೆ 14:6, 7ರಲ್ಲಿರುವ ಮಾತುಗಳು ಅವರಿಗೆ ನಿರಂತರವಾಗಿಯೂ ಉತ್ತೇಜನದ ಮೂಲವಾಗಿರುತ್ತವೆ. ಅಲ್ಲಿ ನಾವು ಅಪೊಸ್ತಲ ಯೋಹಾನನ ಈ ಮಾತುಗಳನ್ನು ಓದುತ್ತೇವೆ: “ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಿಹೋಗುವದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ ಸಾರಿಹೇಳುವದಕ್ಕೆ ನಿತ್ಯವಾದ ಶುಭವರ್ತಮಾನವು ಅವನಲ್ಲಿತ್ತು. ಅವನು—ನೀವೆಲ್ಲರು ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ, ಆತನು ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ. ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ ನಮಸ್ಕಾರಮಾಡಿರಿ ಎಂದು ಮಹಾ ಶಬ್ದದಿಂದ ಹೇಳಿದನು.”
16 ಯೆಹೋವನ ಸಾಕ್ಷಿಗಳ ಮಹತ್ತರವಾದ ಲೋಕವ್ಯಾಪಕ ಸೌವಾರ್ತಿಕ ಕೆಲಸಕ್ಕೆ ದೇವದೂತರ ಬೆಂಬಲ ಮತ್ತು ನಿರ್ದೇಶನವಿದೆ ಎಂದು ಈ ಮಾತುಗಳು ತೋರಿಸುತ್ತವೆ. ಪ್ರಾಮಾಣಿಕ ಮನಸ್ಸಿನ ಜನರನ್ನು ತನ್ನ ಸಾಕ್ಷಿಗಳ ಕಡೆಗೆ ನಿರ್ದೇಶಿಸಲು ಯೆಹೋವನು ತನ್ನ ದೇವದೂತರನ್ನು ಉಪಯೋಗಿಸುತ್ತಾನೆ. ದೇವದೂತರು ಸಾಕ್ಷಿಗಳನ್ನು ಸಹ ಆಸಕ್ತ ಜನರ ಕಡೆಗೆ ನಿರ್ದೇಶಿಸಿದ್ದಾರೆ. ಒಬ್ಬ ವ್ಯಕ್ತಿ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು, ಆಧ್ಯಾತ್ಮಿಕ ಸಹಾಯದ ಅಗತ್ಯದಲ್ಲಿರುವಾಗಲೇ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಸರಿಯಾದ ಸಮಯಕ್ಕೆ ಅವರ ಬಳಿ ತಲಪಲು ಕಾರಣವೇನೆಂದು ಇದರಿಂದ ತಿಳಿದುಬರುತ್ತದೆ. ಇವು ಕೇವಲ ಕಾಕತಾಳೀಯ ಘಟನೆಗಳಾಗಿರಲು ಸಾಧ್ಯವೇ ಇಲ್ಲ.
ಅನತಿದೂರದ ಭವಿಷ್ಯದಲ್ಲಿ ದೇವದೂತರ ಗಮನಾರ್ಹ ಪಾತ್ರ
17 ದೇವದೂತರು ಯೆಹೋವನ ಆರಾಧಕರಿಗೆ ಸಂದೇಶವಾಹಕರಾಗಿ ಮತ್ತು ಅವರನ್ನು ಬಲಪಡಿಸುವವರಾಗಿ ಸೇವೆಸಲ್ಲಿಸುವುದರ ಜೊತೆಗೆ ಇನ್ನೊಂದು ಉದ್ದೇಶವನ್ನೂ ಪೂರೈಸುತ್ತಾರೆ. ಗತಕಾಲಗಳಲ್ಲಿ ಅವರು ದೈವಿಕ ದಂಡನೆಗಳನ್ನು ನಡೆಸಿದರು. ಉದಾಹರಣೆಗಾಗಿ ಸಾ.ಶ.ಪೂ. ಎಂಟನೇ ಶತಮಾನದಲ್ಲಿ ಅಶ್ಶೂರದ ಸೈನಿಕರ ಒಂದು ದೊಡ್ಡ ದಳವು ಯೆರೂಸಲೇಮಿಗೆ ಬೆದರಿಕೆಯೊಡ್ಡುತ್ತಿತ್ತು. ಇದಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನು? ಅವನಂದದ್ದು: “ನನಗೋಸ್ಕರವಾಗಿಯೂ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಇದನ್ನು ಉಳಿಸಿ ಕಾಪಾಡುವೆನು.” ಏನು ನಡೆಯಿತೆಂಬುದನ್ನು ಬೈಬಲ್ ವೃತ್ತಾಂತವು ನಮಗೆ ತಿಳಿಸುತ್ತದೆ: “ಅದೇ ರಾತ್ರಿಯಲ್ಲಿ ಯೆಹೋವನ ದೂತನು ಹೊರಟುಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಅಶ್ಶೂರ್ಯರು ಬೆಳಿಗ್ಗೆ ಎದ್ದು ನೋಡುವಲ್ಲಿ ಪಾಳೆಯತುಂಬಾ ಹೆಣಗಳಿದ್ದವು.” (2 ಅರಸುಗಳು 19:34, ) ಕೇವಲ ಒಬ್ಬ ದೇವದೂತನ ಶಕ್ತಿಗೆ ಹೋಲಿಸುವಾಗ ಮಾನವ ಸೈನ್ಯಗಳು ಎಷ್ಟು ಕ್ಷುಲ್ಲಕವಾಗಿವೆ! 35
18 ದೇವದೂತರು ಅನತಿದೂರದ ಭವಿಷ್ಯದಲ್ಲಿ ದೇವರ ದಂಡನೆಯನ್ನು ಜಾರಿಗೆ ತರುವ ಪಡೆಗಳಾಗಿ ಕೆಲಸಮಾಡುವರು. ಬಲುಬೇಗನೆ ಯೇಸು “ತನ್ನ ದೂತರೊಂದಿಗೆ ಪರಲೋಕದಿಂದ ಪ್ರಜ್ವಲಿಸುವ ಜ್ವಾಲೆಯಲ್ಲಿ ಪ್ರತ್ಯಕ್ಷನಾಗು”ವನು. ಇವರೆಲ್ಲರ ಗುರಿಯು, “ದೇವರನ್ನು ಅರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಅವಿಧೇಯರಾದವರಿಗೂ ಪ್ರತೀಕಾರ ಮಾಡು”ವುದೇ ಆಗಿರುವುದು. (2 ಥೆಸಲೊನೀಕ 1:7, 8, NIBV) ಅವರ ಈ ಕೃತ್ಯವು ಮಾನವಕುಲದ ಮೇಲೆ ಎಂಥ ಪ್ರಭಾವವನ್ನು ಬೀರಲಿದೆ! ಭೂವ್ಯಾಪಕವಾಗಿ ಈಗ ಘೋಷಿಸಲಾಗುತ್ತಿರುವ ದೇವರ ರಾಜ್ಯದ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸಲು ನಿರಾಕರಿಸುವವರು ನಾಶವಾಗಲಿದ್ದಾರೆ. ಯಾರು ಯೆಹೋವನನ್ನು ಆಶ್ರಯಿಸುವರೋ, ಸದ್ಧರ್ಮವನ್ನು ಅಭ್ಯಾಸಿಸುವರೋ, ದೈನ್ಯವನ್ನು ಹೊಂದಿಕೊಳ್ಳುವರೋ ಅವರು ಮಾತ್ರ ‘ಯೆಹೋವನ ಸಿಟ್ಟಿನ ದಿನದಲ್ಲಿ ಮರೆಯಾಗಿ’ ಹಾನಿಯಿಂದ ತಪ್ಪಿಸಿಕೊಳ್ಳುವರು.—ಚೆಫನ್ಯ 2:3.
19 ಯೆಹೋವನು, ಈ ಭೂಮಿಯ ಮೇಲಿರುವ ತನ್ನ ಆರಾಧಕರನ್ನು ಬೆಂಬಲಿಸಲು ಮತ್ತು ಬಲಪಡಿಸಲು ತನ್ನ ಶಕ್ತಿಶಾಲಿ ದೇವದೂತರನ್ನು ಉಪಯೋಗಿಸುತ್ತಿರುವುದಕ್ಕಾಗಿ ನಾವು ಆಭಾರಿಗಳಾಗಿರಬಲ್ಲೆವು. ದೇವರ ಉದ್ದೇಶದಲ್ಲಿ ದೇವದೂತರಿಗಿರುವ ಪಾತ್ರದ ಕುರಿತಾದ ತಿಳುವಳಿಕೆಯು ವಿಶೇಷವಾಗಿ ಸಾಂತ್ವನದಾಯಕವಾಗಿದೆ ಯಾಕೆಂದರೆ ಕೆಲವು ದೇವದೂತರು ಯೆಹೋವನ ವಿರುದ್ಧ ದಂಗೆಯೆದ್ದು ಸೈತಾನನ ನಾಯಕತ್ವದ ಕೆಳಗೆ ಬಂದಿದ್ದಾರೆ. ಮುಂದಿನ ಲೇಖನವು, ಪಿಶಾಚನಾದ ಸೈತಾನನ ಮತ್ತವನ ದೆವ್ವಗಳ ಪ್ರಬಲವಾದ ಪ್ರಭಾವದ ವಿರುದ್ಧ ತಮ್ಮನ್ನು ಸಂರಕ್ಷಿಸಿಕೊಳ್ಳಲು ಸತ್ಯ ಕ್ರೈಸ್ತರು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಚರ್ಚಿಸಲಿದೆ. (w07 3/15)
[ಪಾದಟಿಪ್ಪಣಿ]
^ ಪ್ಯಾರ. 20 ಈ ಹಿಂಸೆಯ ಅಲೆಗಳ ಬಗ್ಗೆ ವಿವರವಾದ ವೃತ್ತಾಂತಗಳಿಗಾಗಿ, ಯೆಹೋವನ ಸಾಕ್ಷಿಗಳ ವರ್ಷಪುಸ್ತಕದ (ಇಂಗ್ಲಿಷ್) ಈ ಆವೃತ್ತಿಗಳನ್ನು ನೋಡಿ: 1983 (ಆ್ಯಂಗೊಲ), 1992 (ಇಥಿಯೋಪಿಯ), 1982 (ಇಟಲಿ), 2000 (ಚೆಕ್ ರಿಪಬ್ಲಿಕ್), 1972 (ಚೆಕೊಸ್ಲೊವಾಕಿಯ), 1974 ಮತ್ತು 1999 (ಜರ್ಮನಿ), 1994 (ಪೊಲೆಂಡ್), 1983 (ಪೋರ್ಟುಗಲ್), 1999 (ಮಲಾವಿ), 1996 (ಮೊಸಾಂಬೀಕ್), 2002 (ಯೂಕ್ರೇನ್), 1978 (ಸ್ಪೆಯ್ನ್) ಮತ್ತು 2006 (ಸಾಂಬಿಯ).
ನೀವೇನು ಕಲಿತುಕೊಂಡಿರಿ?
• ದೇವದೂತರು ಹೇಗೆ ಅಸ್ತಿತ್ವಕ್ಕೆ ಬಂದರು?
• ದೇವದೂತರನ್ನು ಬೈಬಲ್ ಸಮಯಗಳಲ್ಲಿ ಹೇಗೆ ಉಪಯೋಗಿಸಲಾಗಿತ್ತು?
• ದೇವದೂತರ ಇಂದಿನ ಚಟುವಟಿಕೆಯ ಕುರಿತಾಗಿ ಪ್ರಕಟನೆ 14:6, 7 ಏನನ್ನು ಪ್ರಕಟಪಡಿಸುತ್ತದೆ?
• ಅನತಿದೂರದ ಭವಿಷ್ಯದಲ್ಲಿ ದೇವದೂತರು ಯಾವ ಗಮನಾರ್ಹ ಪಾತ್ರ ವಹಿಸಲಿದ್ದಾರೆ?
[ಅಧ್ಯಯನ ಪ್ರಶ್ನೆಗಳು]
1, 2. ಯೆಹೋವನು ತನ್ನ ಚಿತ್ತವನ್ನು ಪೂರೈಸಲು ದೇವದೂತರನ್ನು ಬಳಸುತ್ತಾನೆಂದು ಹೇಗೆ ತಿಳಿದುಬರುತ್ತದೆ?
3. ದೇವದೂತರ ಬಗ್ಗೆ ಅನೇಕ ಜನರಿಗೆ ಯಾವ ತಪ್ಪಾದ ಅಭಿಪ್ರಾಯವಿದೆ?
4. ದೇವದೂತರು ಹೇಗೆ ಅಸ್ತಿತ್ವಕ್ಕೆ ಬಂದರು ಎಂಬುದರ ಬಗ್ಗೆ ಬೈಬಲ್ ನಮಗೇನನ್ನುತ್ತದೆ?
5. ದೇವದೂತರನ್ನು ಹೇಗೆ ಸಂಘಟಿಸಲಾಗಿದೆ?
6. ಏದೆನ್ ತೋಟದ ಸಂಬಂಧದಲ್ಲಿ ಯೆಹೋವನು ಕೆರೂಬಿಯರನ್ನು ಹೇಗೆ ಉಪಯೋಗಿಸಿದನು?
7. “ದೇವದೂತ” ಎಂಬುದರ ಮೂಲಭಾಷಾ ಪದಗಳ ಅರ್ಥವು ದೇವದೂತರು ನಿರ್ವಹಿಸುವ ಯಾವ ಒಂದು ಪಾತ್ರವನ್ನು ತಿಳಿಸುತ್ತದೆ?
8, 9. (ಎ) ಒಬ್ಬ ದೇವದೂತನು ಮಾನೋಹ ಮತ್ತವನ ಹೆಂಡತಿಯನ್ನು ಭೇಟಿಮಾಡಿದ್ದು ಅವರ ಮೇಲೆ ಯಾವ ರೀತಿಯ ಪ್ರಭಾವ ಬೀರಿತು? (ಬಿ) ದೇವದೂತನು ಮಾನೋಹನನ್ನು ಭೇಟಿಮಾಡಿದ ಘಟನೆಯಿಂದ ಹೆತ್ತವರು ಏನು ಕಲಿಯಬಹುದು?
10, 11. (ಎ) ದಂಡೆತ್ತಿ ಬಂದಿದ್ದ ಅರಾಮ್ಯ ಸೇನೆಯು ಎಲೀಷ ಮತ್ತವನ ಸೇವಕನ ಮೇಲೆ ಯಾವ ಪರಿಣಾಮಬೀರಿತು? (ಬಿ) ಈ ಘಟನೆಯ ಬಗ್ಗೆ ಯೋಚಿಸುವ ಮೂಲಕ ನಾವು ಹೇಗೆ ಪ್ರಯೋಜನ ಹೊಂದಬಲ್ಲೆವು?
12. ದೇವದೂತ ಗಬ್ರಿಯೇಲನಿಂದ ಮರಿಯಳಿಗೆ ಎಂಥ ಬೆಂಬಲವು ದೊರೆಯಿತು?
13. ದೇವದೂತರು ಯೇಸುವನ್ನು ಹೇಗೆ ಬೆಂಬಲಿಸಿದರು?
14. ಯೆಹೋವನ ಸಾಕ್ಷಿಗಳು ಆಧುನಿಕ ಸಮಯಗಳಲ್ಲಿ ಯಾವ ಹಿಂಸೆಯನ್ನು ತಾಳಿಕೊಳ್ಳಬೇಕಾಯಿತು, ಮತ್ತು ಫಲಿತಾಂಶವೇನು?
15, 16. ಯೆಹೋವನ ಸಾಕ್ಷಿಗಳು ತಮ್ಮ ಲೋಕವ್ಯಾಪಕ ಶುಶ್ರೂಷೆಯಲ್ಲಿ ದೇವದೂತರಿಂದ ಯಾವ ಬೆಂಬಲವನ್ನು ಪಡೆಯುತ್ತಾರೆ?
17. ಕೇವಲ ಒಬ್ಬ ದೇವದೂತನಿಂದಾಗಿ ಅಶ್ಶೂರ್ಯದವರ ಗತಿ ಏನಾಯಿತು?
18, 19. ಅನತಿದೂರದ ಭವಿಷ್ಯದಲ್ಲಿ ದೇವದೂತರು ಯಾವ ಗಮನಾರ್ಹ ಪಾತ್ರ ವಹಿಸಲಿದ್ದಾರೆ, ಮತ್ತು ಇದು ಮಾನವಕುಲವನ್ನು ಯಾವ ರೀತಿಯಲ್ಲಿ ಬಾಧಿಸಲಿದೆ?
[ಪುಟ 14ರಲ್ಲಿರುವ ಚಿತ್ರ]
ಮಾನೋಹ ಮತ್ತವನ ಹೆಂಡತಿ ಒಬ್ಬ ದೇವದೂತನಿಂದ ಉತ್ತೇಜನ ಹೊಂದಿದರು
[ಪುಟ 15ರಲ್ಲಿರುವ ಚಿತ್ರ]
“ಅವರ ಕಡೆಯಲ್ಲಿರುವವರಿಗಿಂತಲೂ ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ”