ಏಡ್ರೀಏನಳ ಬಯಕೆ
ಏಡ್ರೀಏನಳ ಬಯಕೆ
ಅಮೆರಿಕದ ಓಕ್ಲಹಾಮದಲ್ಲಿನ ಟುಲ್ಸಾದಲ್ಲಿ ವಾಸಿಸುತ್ತಿದ್ದ ಆರು ವರ್ಷದ ಏಡ್ರೀಏನಗೆ ಒಂದು ಬಯಕೆಯಿತ್ತು. ಅದು ಕೀರ್ತನೆಗಾರ ದಾವೀದನ ಮನದಾಳದ ಬಯಕೆಯನ್ನು ಹೋಲುತ್ತದೆ. ಅವನು ಹಾಡಿದ್ದು: “ನನ್ನ ಜೀವಮಾನದಲ್ಲೆಲ್ಲಾ ಯೆಹೋವನ ಮನೆಯಲ್ಲಿ ವಾಸಮಾಡುತ್ತಾ ಆತನ ಪ್ರಸನ್ನತೆಯನ್ನು ನೋಡುವದಕ್ಕೂ ಆತನ ಮಂದಿರದಲ್ಲಿ ಧ್ಯಾನಮಾಡುವದಕ್ಕೂ ನನಗೆ ಅಪ್ಪಣೆಯಾಗಬೇಕೆಂಬ ಒಂದೇ ವರವನ್ನು ಯೆಹೋವನಿಂದ ಕೇಳಿಕೊಂಡು ಅದನ್ನೇ ಎದುರುನೋಡುತ್ತಿರುವೆನು.”—ಕೀರ್ತನೆ 27:4.
ಏಡ್ರೀಏನ ಕೇವಲ ಆರು ತಿಂಗಳ ಮಗುವಾಗಿರುವಾಗಲೇ ಅವಳಿಗೆ ನ್ಯೂರೊಬ್ಲಾಸ್ಟೋಮಾ ಎಂಬ ರೋಗವಿತ್ತೆಂದು ಪತ್ತೆಹಚ್ಚಲಾಯಿತು. ಇದು ನರವ್ಯೂಹದಲ್ಲಿ ಬೆಳೆಯುವ ಮಾರಕ ಗಡ್ಡೆಯಾಗಿದೆ. ಈ ಜೀವಘಾತುಕ ರೋಗದಿಂದಾಗಿ ಅವಳ ಎರಡೂ ಕಾಲುಗಳು ನಿಷ್ಕ್ರಿಯಗೊಂಡವು. ಡಾಕ್ಟರ್ಗಳು ಅವಳಿಗೆ ಅನೇಕ ಶಸ್ತ್ರಕ್ರಿಯೆಗಳನ್ನು ಮಾಡಿದರು ಮತ್ತು ಒಂದು ವರ್ಷದ ವರೆಗೆ ಕೆಮತೆರಪಿ ಚಿಕಿತ್ಸೆಯನ್ನೂ ನೀಡಿದರು.
ಏಡ್ರೀಏನ ಮತ್ತು ಅವಳ ತಾಯಿಯ ಧಾರ್ಮಿಕ ನಂಬಿಕೆಗಳಲ್ಲಿ ಒಳಗೂಡದ ಅವಳ ತಂದೆಯು, ಜೀವಘಾತುಕ ರೋಗವಿರುವ ಮಕ್ಕಳ ಆಸೆಗಳನ್ನು ಈಡೇರಿಸುವಂಥ ಒಂದು ಸಂಸ್ಥೆಯನ್ನು ಸಂಪರ್ಕಿಸಿ ತನ್ನ ಮಗಳು ಜಗತ್ಪ್ರಸಿದ್ಧವಾದ ಮನರಂಜನಾ ಪಾರ್ಕನ್ನು ಭೇಟಿ ನೀಡಲು ಅನುವು ಮಾಡಿಕೊಡುವಂತೆ ವಿನಂತಿಸಿದರು. ಅವರ ಆ ವಿನಂತಿಗೆ ಸಮ್ಮತಿಸುವ ಮುನ್ನ ಸಂಸ್ಥೆಯು ಏಡ್ರೀಏನಳನ್ನು ಇಂಟರ್ವ್ಯೂ ಮಾಡಿತು. ಅವರ ದಯಾಪರತೆಗೆ ಉಪಕಾರ ಹೇಳಿದ ಅವಳು, ಪಾರ್ಕ್ಗಿಂತಲೂ ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಚಟುವಟಿಕೆಯ ಕೇಂದ್ರವಾದ ನ್ಯೂಯಾರ್ಕ್ನಲ್ಲಿನ ಬೆತೆಲ್ ಅನ್ನು ಭೇಟಿಮಾಡಲು ತನಗೆ ತುಂಬ ಇಷ್ಟ ಎಂದು ಹೇಳಿದಳು. ತನ್ನ ತಂದೆಯ ವಿನಂತಿಯ ಬಗ್ಗೆ ಇಂಟರ್ವ್ಯೂನಲ್ಲಿ ಅವಳಿಗೆ ತಿಳಿದುಬಂದಾಗ, ಬೆತೆಲ್ಗೆ ಭೇಟಿ ಮಾಡುವಂತೆ ತನಗೊಂದು ಅವಕಾಶ ಕಲ್ಪಿಸಿಕೊಡಬೇಕೆಂದು ಅವಳು ಯೆಹೋವನಿಗೆ ಪ್ರಾರ್ಥಿಸಿದಳು. ಒಂದು ಧಾರ್ಮಿಕ ಸಂಘಟನೆಗೆ ಭೇಟಿ ನೀಡುವುದು ಮಕ್ಕಳಿಗೆ ಅಷ್ಟು ಸ್ವಾರಸ್ಯಕರವಲ್ಲವೆಂದೂ ಏಡ್ರೀಏನಳಿಗೆ ಮಕ್ಕಳ ಮನರಂಜನೆಯು ತುಂಬ ಇಷ್ಟವಾಗಬಹುದೆಂದು ಆ ಸಂಸ್ಥೆಯು ಎಣಿಸಿತ್ತು. ಆದರೂ ಅವಳ ಆಸೆಯನ್ನು ಈಡೇರಿಸಲು ಸಮ್ಮತಿಸಿತು. ಅವಳ ತಂದೆ ಸಹ ಅದನ್ನು ಬೇಡವೆನ್ನಲಿಲ್ಲ.
ಏಡ್ರೀಏನ ತನ್ನ ತಾಯಿ, ಅಕ್ಕ ಮತ್ತು ಸ್ನೇಹಿತೆಯೊಂದಿಗೆ ನ್ಯೂಯಾರ್ಕ್ಗೆ ಪ್ರಯಾಣಿಸಿ ಬೆತೆಲ್ಗೆ ಮೊತ್ತಮೊದಲ ಬಾರಿ ಭೇಟಿ ನೀಡಿದಳು. “ಯೆಹೋವನು ನನ್ನ ಪ್ರಾರ್ಥನೆಯನ್ನು ಉತ್ತರಿಸಿದನು. ಆತನು ಬೆತೆಲ್ಗೆ ನಮ್ಮನ್ನು ಖಂಡಿತ ಬರಗೊಡಿಸುವನೆಂದು ನನಗೆ ಗೊತ್ತಿತ್ತು. ಪುಸ್ತಕಗಳು, ಪತ್ರಿಕೆಗಳು, ಬೈಬಲ್ಗಳು ಹೇಗೆ ತಯಾರಿಸಲ್ಪಡುತ್ತವೆ ಎಂದು ನಾನು ನೋಡಿದೆ. ಇದು ಮನರಂಜನಾ ಪಾರ್ಕ್ಗಿಂತ ಎಷ್ಟೋ ಚೆನ್ನಾಗಿತ್ತು” ಎಂದಳು ಏಡ್ರೀಏನ.
ಹೌದು, ಅವಳು ‘ಯೆಹೋವನ ಪ್ರಸನ್ನತೆಯನ್ನು ನೋಡಿದಳು.’ ಯೆಹೋವನ ಸಾಕ್ಷಿಗಳ ಇಂದಿನ ಚಟುವಟಿಕೆಗಳ ಕೇಂದ್ರದ ಕಾರ್ಯಾಚರಣೆಯನ್ನು ಗಣ್ಯಮಾಡಿದಳು. ಬೆತೆಲ್ಗೆ ಭೇಟಿ ನೀಡಲು ನಿಮಗೂ ಸ್ವಾಗತ. ನ್ಯೂಯಾರ್ಕ್ನಲ್ಲಿರುವ ಯೆಹೋವನ ಸಾಕ್ಷಿಗಳ ಈ ಮುಖ್ಯ ಕಾರ್ಯಾಲಯವಲ್ಲದೆ ಲೋಕದ ಹಲವಾರು ಕಡೆಗಳಲ್ಲಿ ಅದರ ಬ್ರಾಂಚ್ ಆಫೀಸುಗಳು ಸಹ ಇವೆ. (w07 4/15)