ಹೋಶೇಯ ಪುಸ್ತಕದ ಮುಖ್ಯಾಂಶಗಳು
ಯೆಹೋವನ ವಾಕ್ಯವು ಸಜೀವವಾದದ್ದು
ಹೋಶೇಯ ಪುಸ್ತಕದ ಮುಖ್ಯಾಂಶಗಳು
ಹತ್ತು ಕುಲಗಳ ಉತ್ತರ ಇಸ್ರಾಯೇಲ್ ರಾಜ್ಯದಲ್ಲಿ ಸತ್ಯಾರಾಧನೆಯು ಬಹುತೇಕ ಕಣ್ಮರೆಯಾಗಿದೆ. ಎರಡನೆಯ ಯಾರೊಬ್ಬಾಮನ ಆಳ್ವಿಕೆಯ ಕೆಳಗೆ ಇಸ್ರಾಯೇಲ್ನಲ್ಲಿ ಭೌತಿಕ ಸಮೃದ್ಧಿಯಿದೆ. ಆದರೆ ಅದು ಅವನು ಮರಣಹೊಂದಿದ ಸ್ವಲ್ಪದರಲ್ಲೇ ಕ್ಷೀಣಿಸುತ್ತದೆ. ಅದನ್ನು ಹಿಂಬಾಲಿಸಿ ಕ್ಷೋಭೆ ಮತ್ತು ರಾಜಕೀಯ ಅಸ್ಥಿರತೆ ಉಂಟಾಗುತ್ತದೆ. ತರುವಾಯ ಅಧಿಕಾರಕ್ಕೆ ಬಂದ ಆರು ಅರಸರಲ್ಲಿ ನಾಲ್ವರನ್ನು ಹತ್ಯೆಗೈಯಲಾಗುತ್ತದೆ. (2 ಅರಸುಗಳು 14:29; 15:8-30; 17:1-6) ಹೋಶೇಯನ ಪ್ರವಾದನಾ ಕಾರ್ಯವು ಈ ಸಂಕ್ಷೋಭೆಪೀಡಿತ ಸಮಯಾವಧಿಯನ್ನೇ ಆವರಿಸುತ್ತದೆ. ಅದು ಸಾ.ಶ.ಪೂ. 804ರಲ್ಲಿ ಆರಂಭಗೊಂಡು, 59 ವರ್ಷಗಳಷ್ಟು ದೀರ್ಘವಾಗಿರುತ್ತದೆ.
ಮೊಂಡ ಹೃದಯದ ಇಸ್ರಾಯೇಲ್ ಜನಾಂಗದ ಕುರಿತು ಯೆಹೋವನಿಗಿದ್ದ ಭಾವನೆಗಳು ಹೋಶೇಯನ ಮದುವೆಯಲ್ಲಿ ಸಂಭವಿಸಿದ ವಿಷಯಗಳಿಂದ ಸ್ಪಷ್ಟವಾಗಿ ಚಿತ್ರಿಸಲ್ಪಟ್ಟಿದೆ. ಇಸ್ರಾಯೇಲಿನ ದ್ರೋಹ ಮತ್ತು ಅದರ ಹಾಗೂ ಯೆಹೂದ ರಾಜ್ಯದ ವಿರುದ್ಧ ಪ್ರವಾದನಾತ್ಮಕ ತೀರ್ಪುಗಳು ಹೋಶೇಯನ ಸಂದೇಶದಲ್ಲಿರುವ ವಿಷಯಗಳಾಗಿವೆ. ಹೋಶೇಯನು ಇವೆಲ್ಲವನ್ನು ತನ್ನ ಹೆಸರನ್ನು ಹೊಂದಿರುವ ಪುಸ್ತಕದಲ್ಲಿ ಮೃದುವಾದ ಮನಮುಟ್ಟುವ ಪದಗಳನ್ನು ಬಳಸುತ್ತಾ ಕಣ್ಣಿಗೆ ಕಟ್ಟುವಂಥ ಪ್ರಬಲ ಭಾಷೆಯಲ್ಲಿ ಬರೆದಿದ್ದಾನೆ. ದೇವರ ಪ್ರೇರಿತ ವಾಕ್ಯದ ಭಾಗವಾಗಿರುವ ಈ ಪುಸ್ತಕದ ಸಂದೇಶವು ಸಜೀವವಾದದ್ದು ಮತ್ತು ಕಾರ್ಯಸಾಧಕವಾದದ್ದು ಆಗಿದೆ.—ಇಬ್ರಿಯ 4:12.
‘ವ್ಯಭಿಚಾರಿಣಿಯನ್ನು ಮದುವೆಮಾಡಿಕೋ’
‘ನೀನು ಹೋಗಿ ವ್ಯಭಿಚಾರಿಣಿಯನ್ನು ಮದುವೆಮಾಡಿಕೋ’ ಎಂದು ಯೆಹೋವನು ಹೋಶೇಯನಿಗೆ ಹೇಳುತ್ತಾನೆ. (ಹೋಶೇಯ 1:2) ಹೋಶೇಯನು ಅದರಂತೆ ನಡೆದುಕೊಳ್ಳುತ್ತಾನೆ ಮತ್ತು ಗೋಮೆರಳಲ್ಲಿ ಒಬ್ಬ ಮಗನನ್ನು ಪಡೆಯುತ್ತಾನೆ. ಆಕೆ ಮುಂದೆ ಹೆರುವ ಎರಡು ಮಕ್ಕಳು ಹಾದರದಿಂದ ಹುಟ್ಟಿದ್ದಾಗಿವೆ ಎಂದು ತೋರುತ್ತದೆ. ಲೋರು ಹಾಮ ಮತ್ತು ಲೋ ಅಮ್ಮಿ ಎಂಬ ಆ ಮಕ್ಕಳ ಹೆಸರಿನ ಅರ್ಥಗಳು ಯೆಹೋವನು ಇಸ್ರಾಯೇಲಿಗೆ ಕರುಣೆ ತೋರಿಸುವುದನ್ನು ತಡೆಹಿಡಿದಿದ್ದಾನೆ ಮತ್ತು ನಿಷ್ಠೆಯಿಲ್ಲದ ಆತನ ಜನರನ್ನು ತ್ಯಜಿಸಿದ್ದಾನೆ ಎಂಬುದನ್ನು ಸೂಚಿಸುತ್ತವೆ.
ವಾಸ್ತವದಲ್ಲಿ, ತನ್ನ ದಂಗೆಕೋರ ಜನರ ಕುರಿತು ಯೆಹೋವನು ಹೇಗೆ ಭಾವಿಸುತ್ತಾನೆ? ಅವನು ಹೋಶೇಯನಿಗೆ ಹೇಳುವುದು: ‘ಅನ್ಯದೇವತೆಗಳ ಕಡೆಗೆ ತಿರುಗಿಕೊಂಡ . . . ಇಸ್ರಾಯೇಲ್ಯರನ್ನು ಯೆಹೋವನು ಪ್ರೀತಿಸುವ ಪ್ರಕಾರ ನೀನು ಮಿಂಡನಿಗೆ ಪ್ರಿಯಳೂ ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸು.’—ಹೋಶೇಯ 3:1.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
1:1—ಹೋಶೇಯನು ತನ್ನ ಶುಶ್ರೂಷೆಯ ಸಮಯಾವಧಿಯಲ್ಲಿ ಯೆಹೂದವನ್ನಾಳಿದ ನಾಲ್ವರು ಅರಸರ ಕುರಿತು ತಿಳಿಸುವಾಗ ಇಸ್ರಾಯೇಲಿನ ಕೇವಲ ಒಬ್ಬ ಅರಸನ ಹೆಸರನ್ನು ಮಾತ್ರ ಹೇಳುವುದೇಕೆ? ಏಕೆಂದರೆ, ದಾವೀದನ ವಂಶದಲ್ಲಿ ಬಂದ ಅರಸರನ್ನು ಮಾತ್ರವೇ ದೇವರಾದುಕೊಂಡ ಜನರ ಹಕ್ಕುಳ್ಳ ರಾಜರೆಂದು ಗುರುತಿಸಲಾಗುತ್ತಿತ್ತು. ಉತ್ತರ ರಾಜ್ಯದ ಅರಸರು ದಾವೀದನ ವಂಶಾವಳಿಯಲ್ಲಿ ಬಂದಿರಲಿಲ್ಲ. ಆದರೆ ಯೆಹೂದದ ಅರಸರು ಆ ವಂಶದವರಾಗಿದ್ದರು.
1:2-9—ಹೋಶೇಯನು ನಿಜವಾಗಿಯೂ ಒಬ್ಬ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡನೋ? ಹೌದು, ಹೋಶೇಯನು ಮದುವೆಮಾಡಿಕೊಂಡ ಸ್ತ್ರೀ ವಾಸ್ತವದಲ್ಲಿ ಬಳಿಕ ವ್ಯಭಿಚಾರಿಣಿಯಾದಳು. ತನ್ನ ಗೃಹಸಂಸಾರ ಜೀವನದ ಕುರಿತು ಪ್ರವಾದಿಯು ಹೇಳಿದ ವಿಷಯವು ಒಂದು ಕನಸು ಇಲ್ಲವೆ ದರ್ಶನ ಎಂಬುದನ್ನು ಅವನು ಸೂಚಿಸಲಿಲ್ಲ.
1:7—ಯೆಹೂದ ವಂಶದವರಲ್ಲಿ ವಾತ್ಸಲ್ಯವಿಟ್ಟು [“ಕರುಣೆ ತೋರಿಸಿ,” NW] ಅವರನ್ನು ಉದ್ಧರಿಸಲಾದದ್ದು ಯಾವಾಗ? ಇದು ಸಾ.ಶ.ಪೂ. 732ರಲ್ಲಿ ಅರಸ ಹಿಜ್ಕೀಯನ ದಿನಗಳಲ್ಲಿ ನೇರವೇರಿತು. ಆ ಸಮಯದಲ್ಲಿ ಯೆಹೋವನು ಒಬ್ಬ ದೂತನನ್ನು ಕಳುಹಿಸಿ ಒಂದೇ ರಾತ್ರಿಯಲ್ಲಿ ಅಶ್ಶೂರ್ಯರ 1,85,000 ಮಂದಿ ಸೈನಿಕರನ್ನು ಸಂಹರಿಸುವ ಮೂಲಕ ಯೆರೂಸಲೇಮಿನ ಮೇಲಿದ್ದ ಅಶ್ಶೂರ್ಯರ ಬೆದರಿಕೆಯನ್ನು ಕೊನೆಗಾಣಿಸಿದನು. (2 ಅರಸುಗಳು 19:34, 35) ಹೀಗೆ ಯೆಹೋವನು “ಬಿಲ್ಲು, ಕತ್ತಿ, ಕಾಳಗ, ಕುದುರೆ, ರಾಹುತ, ಈ ಮೂಲಕದಿಂದಲ್ಲ” ಬದಲಿಗೆ ಒಬ್ಬ ದೂತನ ಮೂಲಕ ಯೆಹೂದವನ್ನು ಉದ್ಧರಿಸಿದನು.
1:10, 11—ಇಸ್ರಾಯೇಲಿನ ಉತ್ತರ ರಾಜ್ಯವು ಸಾ.ಶ.ಪೂ 740ರಲ್ಲಿ ಅವನತಿಯಾಗಿರಲಾಗಿ, ಇಸ್ರಾಯೇಲ್ಯರು ಯೆಹೂದ್ಯರೊಂದಿಗೆ ‘ಒಟ್ಟುಗೂಡಿದ್ದು’ ಹೇಗೆ? ಸಾ.ಶ.ಪೂ 607ರಲ್ಲಿ ಯೆಹೂದದ ನಿವಾಸಿಗಳನ್ನು ಬಾಬೆಲಿನವರು ಸೆರೆಹೊಯ್ಯುವ ಮೊದಲೇ ಉತ್ತರ ರಾಜ್ಯದಿಂದ ಅನೇಕರು ಯೆಹೂದಕ್ಕೆ ಹೋಗಿದ್ದರು. (2 ಪೂರ್ವಕಾಲವೃತ್ತಾಂತ 11:13-17; 30:6-12, 18-20, 25) ಸಾ.ಶ.ಪೂ 537ರಲ್ಲಿ ಯೆಹೂದಿ ಬಂದಿವಾಸಿಗಳು ತಮ್ಮ ಸ್ವದೇಶಕ್ಕೆ ಹಿಂತಿರುಗಿದಾಗ, ಅವರೊಂದಿಗೆ ಇಸ್ರಾಯೇಲಿನ ಉತ್ತರ ರಾಜ್ಯದ ವಂಶಸ್ಥರೂ ಸೇರಿದ್ದರು.—ಎಜ್ರ 2:70.
2:21-23—“ನಾನು ದೇಶದಲ್ಲಿ ಇಜ್ರೇಲನ್ನು ನನಗಾಗಿ ಬಿತ್ತಿಕೊಳ್ಳುವೆನು; [ಅವಳಿಗೆ, NW] ವಾತ್ಸಲ್ಯವನ್ನು [“ಕರುಣೆ,” NW] ತೋರಿಸುವೆನು” ಎಂಬ ಯೆಹೋವನ ಮಾತು ಏನನ್ನು ಮುನ್ಸೂಚಿಸಿತು? ಹೋಶೇಯನಿಗೆ ಗೋಮೆರಳಲ್ಲಿ ಹುಟ್ಟಿದ ಚೊಚ್ಚಲ ಮಗನ ಹೆಸರು ಇಜ್ರೇಲ್ ಎಂದಾಗಿತ್ತು. (ಹೋಶೇಯ 1:2-4) ಆ ಹೆಸರಿನ ಅರ್ಥ “ದೇವರು ಬೀಜವನ್ನು ಬಿತ್ತುವನು” ಎಂದಾಗಿದೆ. ಇದು ಪ್ರವಾದನಾತ್ಮಕವಾಗಿದ್ದು, ಯೆಹೋವನು ಸಾ.ಶ.ಪೂ 537ರಲ್ಲಿ ನಂಬಿಗಸ್ತ ಜನಶೇಷವನ್ನು ಒಟ್ಟುಗೂಡಿಸಿ ಯೆಹೂದದಲ್ಲಿ ಅವರನ್ನು ಬೀಜದಂತೆ ಬಿತ್ತುವನೆಂಬುದನ್ನು ಸೂಚಿಸುತ್ತದೆ. 70 ವರ್ಷಗಳು ಹಾಳುಬಿದ್ದಿದ್ದ ದೇಶವು ಈಗ ಪುನಃ ಧಾನ್ಯದ್ರಾಕ್ಷಾರಸತೈಲಗಳನ್ನು ಉತ್ಪಾದಿಸಬೇಕಾಗಿದೆ. ಅದಕ್ಕಾಗಿ ಈ ಒಳ್ಳೆಯ ವಿಷಯಗಳು ಪೌಷ್ಠಿಕಾಂಶವನ್ನು ಕೊಡುವಂತೆ ಭೂಮಿಯನ್ನೂ, ಭೂಮಿ ಮಳೆಗಾಗಿ ಆಕಾಶವನ್ನೂ ಬೇಡುತ್ತವೆ ಎಂದು ಪ್ರವಾದನೆಯು ಕಾವ್ಯಾತ್ಮಕವಾಗಿ ಹೇಳುತ್ತದೆ. ಹಾಗೆಯೇ ಆಕಾಶವು ಮಳೆಮೋಡಗಳಿಗಾಗಿ ದೇವರನ್ನು ಬೇಡುತ್ತದೆ. ಇವೆಲ್ಲವೂ ಹಿಂದಿರುಗಿ ಬರುತ್ತಿರುವ ಜನಶೇಷದ ಅಗತ್ಯಗಳನ್ನು ಯಥೇಷ್ಟವಾಗಿ ಒದಗಿಸುವ ಉದ್ದೇಶಕ್ಕಾಗಿ ಆಗಿದೆ. ಹೋಶೇಯ 2:23ನ್ನು ಅಪೊಸ್ತಲ ಪೌಲ ಹಾಗೂ ಪೇತ್ರ ಆಧ್ಯಾತ್ಮಿಕ ಇಸ್ರಾಯೇಲಿನ ಜನಶೇಷದ ಒಟ್ಟುಗೂಡಿಸುವಿಕೆಗೆ ಅನ್ವಯಿಸುತ್ತಾರೆ.—ರೋಮಾಪುರ 9:25, 26; 1 ಪೇತ್ರ 2:10.
ನಮಗಾಗಿರುವ ಪಾಠಗಳು:
1:2-9; 3:1, 2. ದೈವಿಕ ಚಿತ್ತಕ್ಕೆ ವಿಧೇಯನಾಗಿ ಮದುವೆಯ ಬಂಧದಲ್ಲಿ ಉಳಿಯಲು ಹೋಶೇಯನು ಮಾಡಿದ ವೈಯಕ್ತಿಕ ತ್ಯಾಗದ ಕುರಿತು ಆಲೋಚಿಸಿರಿ! ದೇವರ ಚಿತ್ತವನ್ನು ಮಾಡುವ ವಿಷಯವು ಎದುರಾದಾಗ ಎಷ್ಟರ ಮಟ್ಟಿಗೆ ನಾವು ವೈಯಕ್ತಿಕ ಆದ್ಯತೆಗಳನ್ನು ಬಿಟ್ಟುಕೊಡುತ್ತೇವೆ?
1:6-9. ಶಾರೀರಿಕ ವ್ಯಭಿಚಾರವನ್ನು ದ್ವೇಷಿಸುವಂತೆಯೇ ಯೆಹೋವನು ಆಧ್ಯಾತ್ಮಿಕ ವ್ಯಭಿಚಾರವನ್ನೂ ದ್ವೇಷಿಸುತ್ತಾನೆ.
1:7, 10, 11; 2:14-23. ಇಸ್ರಾಯೇಲ್ ಮತ್ತು ಯೆಹೂದದ ಕುರಿತು ಯೆಹೋವನು ಏನನ್ನು ಮುಂತಿಳಿಸಿದನೋ ಅದು ನೇರವೇರಿತು. ಯೆಹೋವನ ವಾಕ್ಯ ಯಾವಾಗಲೂ ಸತ್ಯವಾಗಿದೆ.
2:16, 19, 21-23; 3:1-4. ಯಾರು ಹೃತ್ಪೂರ್ವಕವಾಗಿ ಪಶ್ಚಾತ್ತಾಪವನ್ನು ತೋರಿಸುತ್ತಾರೋ ಅವರನ್ನು ಕ್ಷಮಿಸಲು ಯೆಹೋವನು ಸಿದ್ಧನಿದ್ದಾನೆ. (ನೆಹೆಮೀಯ 9:17) ಯೆಹೋವನಂತೆ ನಾವು ಕೂಡ ಸಹಾನುಭೂತಿಯಿಂದಲೂ ದಯೆಯಿಂದಲೂ ಇತರರೊಂದಿಗೆ ವ್ಯವಹರಿಸಬೇಕು.
‘ಯೆಹೋವನು ವಿವಾದಹಾಕಿದ್ದಾನೆ’
“ಯೆಹೋವನು ದೇಶನಿವಾಸಿಗಳ ಮೇಲೆ ವಿವಾದಹಾಕಿದ್ದಾನೆ.” ಏಕೆ? “ಏಕಂದರೆ ಪ್ರೀತಿ ಸತ್ಯತೆ ದೇವಜ್ಞಾನಗಳು ದೇಶದಲ್ಲಿಲ್ಲ.” (ಹೋಶೇಯ 4:1) ಹೀಗಾಗಿ, ಇಸ್ರಾಯೇಲಿನ ಪಥಭ್ರಷ್ಟ ಜನರು ವಂಚನೆ ಮತ್ತು ರಕ್ತಾಪರಾಧದಲ್ಲಿ ತೊಡಗಿದ್ದಾರೆ. ಮಾತ್ರವಲ್ಲ, ಶಾರೀರಿಕ ಹಾಗೂ ಆಧ್ಯಾತ್ಮಿಕ ವ್ಯಭಿಚಾರವನ್ನು ಮಾಡಿದ್ದಾರೆ. ಅವರು ಸಹಾಯಕ್ಕಾಗಿ ದೇವರನ್ನು ಮೊರೆಹೊಗುವ ಬದಲು “ಐಗುಪ್ತವನ್ನು ಕೂಗುತ್ತಾರೆ, ಅಶ್ಶೂರಕ್ಕೆ ಹೊರಡುತ್ತಾರೆ.”—ಹೋಶೇಯ 7:11.
ಆದುದರಿಂದಲೇ ಯೆಹೋವನು ತನ್ನ ತೀರ್ಪನ್ನು ನೀಡುತ್ತಾನೆ. ಆತನು ಹೇಳುವುದು: ‘ಇಸ್ರಾಯೇಲ್ ನುಂಗಲ್ಪಡಲೇ ಬೇಕು.’ (ಹೋಶೇಯ 8:8) ಯೆಹೂದ ರಾಜ್ಯವು ಸಹ ದೋಷದಿಂದ ಮುಕ್ತವಾಗಿಲ್ಲ. ಹೋಶೇಯ 12:2 ತಿಳಿಸುವುದು: “ಯೆಹೋವನು ಯೆಹೂದದ ಮೇಲೆ ವ್ಯಾಜ್ಯಹಾಕಿದ್ದಾನೆ, ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು, ಅದರ ದುಷ್ಕೃತ್ಯಗಳಿಗೆ ಪ್ರತೀಕಾರಮಾಡುವನು.” ಆದರೆ ಪುನಸ್ಥಾಪನೆಯೋ ನಿಶ್ಚಯ. ಏಕೆಂದರೆ ಯೆಹೋವನು ವಾಗ್ದಾನಿಸುವುದು: “ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು. ಮರಣದಿಂದ ಅವರನ್ನು ಬಿಡಿಸುವೆನು.”—ಹೋಶೇಯ 13:14, NIBV.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
6:1-3—“ಯೆಹೋವನ ಕಡೆಗೆ ಹಿಂದಿರುಗಿ ಹೋಗೋಣ ಬನ್ನಿರಿ” ಎಂದು ಇಸ್ರಾಯೇಲ್ಯರಲ್ಲಿ ಯಾರು ಹೇಳುತ್ತಿದ್ದರು? ಯೆಹೋವನ ಕಡೆಗೆ ಹಿಂದಿರುಗೋಣವೆಂದು ಅಪನಂಬಿಗಸ್ತ ಇಸ್ರಾಯೇಲ್ಯರು ಪರಸ್ಪರ ಉತ್ತೇಜಿಸುತ್ತಿದ್ದಿರಬಹುದು. ಅದು ನಿಜವಾಗಿರುವಲ್ಲಿ ಅವರು ಪಶ್ಚಾತ್ತಾಪದ ಸೋಗು ಹಾಕಿಕೊಳ್ಳುತ್ತಿದ್ದರಷ್ಟೇ. ಅವರ ಭಕ್ತಿ ಅಥವಾ ಪ್ರೀತಿಪೂರ್ವಕ ದಯೆ ‘ಪ್ರಾತಃಕಾಲದ ಮೋಡ ಹಾಗೂ ಬೇಗನೆ ಮಾಯವಾಗುವ ಇಬ್ಬನಿಯಂತೆ’ ಸ್ವಲ್ಪಕಾಲವಿದ್ದು ಕಣ್ಮರೆಯಾಗುವಂತಿತ್ತು. (ಹೋಶೇಯ 6:4) ಆದರೆ ಇದಕ್ಕೆ ಬದಲಾಗಿ ಕರೆ ಕೊಟ್ಟವನು, ಯೆಹೋವನ ಕಡೆಗೆ ಹಿಂತಿರುಗಿ ಬರುವಂತೆ ಜನರನ್ನು ಬೇಡಿಕೊಳ್ಳುತ್ತಿದ್ದ ಹೋಶೇಯನಾಗಿರಸಾಧ್ಯವಿದೆ. ಏನೇ ಆಗಿರಲಿ, ಉತ್ತರದ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದ ಮೊಂಡ ನಿವಾಸಿಗಳು ಯಥಾರ್ಥವಾಗಿ ಪಶ್ಚಾತ್ತಾಪಪಟ್ಟು ನಿಜಕ್ಕೂ ಯೆಹೋವನ ಕಡೆಗೆ ತಿರುಗಿಕೊಳ್ಳುವ ಅಗತ್ಯವಿತ್ತು.
7:4 (NIBV)—ವ್ಯಭಿಚಾರದ ಇಸ್ರಾಯೇಲ್ ಯಾವ ರೀತಿಯಲ್ಲಿ “ಬಿಸಿಮಾಡಲ್ಪಟ್ಟ ಒಲೆಯ ಹಾಗೆ” ಇದ್ದರು? ಈ ಹೋಲಿಕೆಯು ಅವರ ಹೃದಯದ ದುರಿಚ್ಛೆಗಳ ತೀವ್ರತೆಯನ್ನು ದೃಷ್ಟಾಂತಿಸುತ್ತದೆ.
ನಮಗಾಗಿರುವ ಪಾಠಗಳು:
4:1, 6. ಯೆಹೋವನ ಅನುಗ್ರಹಕ್ಕೆ ನಾವು ಸದಾ ಪಾತ್ರರಾಗಿರಬೇಕಾದರೆ, ಆತನ ಕುರಿತು ಜ್ಞಾನವನ್ನು ನಾವು ಪಡೆದುಕೊಳ್ಳುತ್ತಾ ಇರಬೇಕು ಮತ್ತು ಕಲಿತ ಪ್ರಕಾರ ನಡೆಯಬೇಕು.
4:9-13. ಲೈಂಗಿಕ ಅನೈತಿಕತೆಯನ್ನು ನಡೆಸುವವರಿಗೆ ಮತ್ತು ಅಶುದ್ಧವಾದ ಆರಾಧನೆಯನ್ನು ಮಾಡುವವರಿಗೆ ಯೆಹೋವನು ಮುಯ್ಯಿತೀರಿಸಲಿದ್ದಾನೆ.—ಹೋಶೇಯ 1:4.
5:1. ದೇವಜನರಲ್ಲಿ ನಾಯಕತ್ವ ವಹಿಸುತ್ತಿರುವವರು ಸಂಪೂರ್ಣವಾಗಿ ಧರ್ಮಭ್ರಷ್ಟತೆಯನ್ನು ತೊರೆದುಬಿಡಬೇಕು. ಇಲ್ಲವಾದಲ್ಲಿ, ಅವರು ಕೆಲವರನ್ನು ಸುಳ್ಳು ಆರಾಧನೆಯಲ್ಲಿ ಒಳಗೂಡುವಂತೆ ಮೋಸಗೊಳಿಸಬಹುದು. ಹೀಗೆ ಅವರಿಗೆ ‘ಉರುಳಾಗಿಯೂ ಬಲೆಯಾಗಿಯೂ’ ಇರುವರು.
6:1-4; 7:14, 16. ಬಾಯಿ ಮಾತುಗಳಲ್ಲಿ ಪಶ್ಚಾತ್ತಾಪ ತೋರಿಸುವುದು ಕೇವಲ ಕಪಟವೇಷವಾಗಿದೆ ಮತ್ತು ವ್ಯರ್ಥ. ದೇವರ ಕರುಣೆಯನ್ನು ಪಡೆಯಬೇಕಾದರೆ ತಪ್ಪಿತಸ್ಥನು ಹೃತ್ಪೂರ್ವಕವಾದ ಪಶ್ಚಾತ್ತಾಪವನ್ನು ತೋರಿಸಬೇಕು. ಅವನು “ಮೇಲಕ್ಕೆ” ಅಂದರೆ ಉನ್ನತ ರೀತಿಯ ಆರಾಧನೆಗೆ ಹಿಂತಿರುಗಿದ ರುಜುವಾತನ್ನು ಕೊಡಬೇಕು. ಅವನ ಕೃತ್ಯಗಳು ದೇವರ ಶ್ರೇಷ್ಠವಾದ ಮಟ್ಟಗಳಿಗೆ ಹೊಂದಿಕೆಯಲ್ಲಿರಬೇಕು.—ಹೋಶೇಯ 7:16.
6:6. ಪಾಪವನ್ನು ಮಾಡುತ್ತಾ ಮುಂದುವರಿಯುವುದು ದೇವರಿಗಾಗಿ ನಿಷ್ಠಾವಂತ ಪ್ರೀತಿಯ ಕೊರತೆಯನ್ನು ಸೂಚಿಸುತ್ತದೆ. ಎಷ್ಟೇ ಪ್ರಮಾಣದ ಆಧ್ಯಾತ್ಮಿಕ ಯಜ್ಞವು ಈ ಕೊರತೆಯನ್ನು ಸರಿದೂಗಿಸಲಾರದು.
8:7, 13; 10:13. “ಮನುಷ್ಯನು ತಾನು ಏನು ಬಿತ್ತುತ್ತಾನೋ ಗಲಾತ್ಯ 6:7.
ಅದನ್ನೇ ಕೊಯ್ಯಬೇಕು” ಎಂಬ ಮೂಲತತ್ತ್ವವು ವಿಗ್ರಹಾರಾಧಕ ಇಸ್ರಾಯೇಲ್ಯರ ವಿಷಯದಲ್ಲಿ ನಿಜವಾಯಿತು.—8:8; 9:17; 13:16. ಉತ್ತರ ರಾಜ್ಯದ ಕುರಿತಾದ ಪ್ರವಾದನೆಗಳು ಅದರ ರಾಜಧಾನಿಯಾದ ಸಮಾರ್ಯವನ್ನು ಅಶ್ಶೂರದವರು ಸೆರೆಹಿಡಿದಾಗ ನೆರವೇರಿದವು. (2 ಅರಸುಗಳು 17:3-6) ದೇವರು ತಾನು ಹೇಳಿದ ಮೇರೆಗೆ ನಡೆಯುವನು ಮತ್ತು ಮಾತುಕೊಟ್ಟನಂತರ ನೆರವೇರಿಸುವನು ಎಂದು ನಾವು ಭರವಸೆಯಿಂದಿರಬಲ್ಲೆವು.—ಅರಣ್ಯಕಾಂಡ 23:19.
8:14. ಸಾ.ಶ.ಪೂ 607ರಲ್ಲಿ ಯೆಹೋವನು ಬಾಬೆಲಿನವರ ಮೂಲಕ “[ಯೆಹೂದದ] ಪಟ್ಟಣಗಳ ಮೇಲೆ ಬೆಂಕಿಯನ್ನು” ಕಳುಹಿಸಿದನು. ಹೀಗೆ ಯೆರೂಸಲೇಮ್ ಹಾಗೂ ಯೆಹೂದದ ಮೇಲೆ ಮುಂತಿಳಿಸಲ್ಪಟ್ಟಂತೆ ನಾಶನವನ್ನು ತಂದನು. (2 ಪೂರ್ವಕಾಲವೃತ್ತಾಂತ 36:19) ದೇವರ ವಾಕ್ಯವು ವ್ಯರ್ಥವಾಗಲು ಎಂದಿಗೂ ಸಾಧ್ಯವೇ ಇಲ್ಲ.—ಯೆಹೋಶುವ 23:14.
9:10. ಇಸ್ರಾಯೇಲ್ಯರು ಸತ್ಯದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರೂ, ‘ಬಾಳ್ಪೆಗೋರಿಗೆ ಬಂದು ಬಾಳ್ದೇವತೆಯ ಭಕ್ತರಾಗಿ [“ನಾಚಿಕೆಗೆಟ್ಟ ವಿಷಯಗಳಿಗೆ,” NW] ದೀಕ್ಷೆಗೊಂಡರು.’ ಅವರ ಕೆಟ್ಟ ಉದಾಹರಣೆಯಿಂದ ನಾವು ಎಚ್ಚರವಾಗಿರುವುದಾದರೆ ಮತ್ತು ಯೆಹೋವನಿಗೆ ಮಾಡಿಕೊಂಡ ಸಮರ್ಪಣೆಯನ್ನು ಮುರಿಯದೆ ಕಾಪಾಡಿಕೊಳ್ಳುವುದಾದರೆ ನಾವು ವಿವೇಕಿಗಳಾಗಿದ್ದೇವೆ.—1 ಕೊರಿಂಥ 10:11.
10:1, 2, 12. ಯಾವುದೇ ಕಪಟವಿಲ್ಲದ ಹೃದಯದಿಂದ ನಾವು ದೇವರನ್ನು ಆರಾಧಿಸಬೇಕು. ‘ನಾವು ನೀತಿಯ ಬೀಜವನ್ನು ಬಿತ್ತುವುದಾದರೆ, ದೇವರ ಪ್ರೀತಿಪೂರ್ವಕ ದಯೆಯ ಫಲವನ್ನು ಕೊಯ್ಯುವೆವು.’
10:5. ಬೇತಾವೇನ್ (“ಕೆಡುಕನ ಮನೆ” ಎಂದು ಅರ್ಥ) ಎಂಬುದು ಬೇತೆಲಿಗೆ (“ದೇವರ ಮನೆ” ಎಂದು ಅರ್ಥ) ಕೊಟ್ಟ ತಿರಸ್ಕಾರದ ಹೆಸರಾಗಿದೆ. ಬೇತಾವೇನ್ನಿಂದ ಬಸವನ ಮೂರ್ತಿಯನ್ನು ಗಡೀಪಾರು ಮಾಡಿದಾಗ, ಸಮಾರ್ಯದ ನಿವಾಸಿಗಳು ತಾವು ಪೂಜಿಸುತ್ತಿದ್ದ ವಸ್ತುವೊಂದು ನಷ್ಟವಾಯಿತಲ್ಲ ಎಂದು ಎದೆಬಡಿದುಕೊಂಡರು. ತನ್ನನ್ನೇ ತಾನು ರಕ್ಷಿಸಿಕೊಳ್ಳಲಾರದ ಜಡ ವಿಗ್ರಹಗಳಲ್ಲಿ ಭರವಸೆಯಿಡುವುದು ಎಂಥ ಮೂರ್ಖತನ!—ಕೀರ್ತನೆ 135:15-18; ಯೆರೆಮೀಯ 10:3-5.
11:1-4. ಯೆಹೋವನು ಯಾವಾಗಲೂ ತನ್ನ ಜನರೊಂದಿಗೆ ಪ್ರೀತಿ ಮಮತೆಯಿಂದ ವ್ಯವಹರಿಸುತ್ತಾನೆ. ಆದುದರಿಂದ ದೇವರಿಗೆ ಅಧೀನರಾಗಿರುವುದು ಎಂದಿಗೂ ಭಾರವಲ್ಲ.
11:8-11; 13:14. ತನ್ನ ಜನರನ್ನು ಸತ್ಯಾರಾಧನೆಗೆ ಪುನಸ್ಥಾಪಿಸುವ ವಿಷಯದ ಕುರಿತಾದ ಯೆಹೋವನ ಮಾತು ಅದನ್ನು ‘ಕೈಗೂಡಿಸಿದ ಹೊರತು ಆತನ ಕಡೆಗೆ ವ್ಯರ್ಥವಾಗಿ ಹಿಂದಿರುಗಲಿಲ್ಲ.’ (ಯೆಶಾಯ 55:11) ಸಾ.ಶ.ಪೂ 537ರಲ್ಲಿ ಬಾಬೆಲಿನ ಬಂದಿವಾಸವು ಕೊನೆಗೊಂಡು ಜನಶೇಷವೊಂದು ಯೆರೂಸಲೇಮಿಗೆ ಹಿಂತಿರುಗಿತು. (ಎಜ್ರ 2:1; 3:1-3) ತನ್ನ ಪ್ರವಾದಿಗಳ ಮೂಲಕ ಯೆಹೋವನು ಏನನ್ನೇ ನುಡಿದಿರಲಿ ಅದೆಲ್ಲವು ತಪ್ಪದೆ ಖಂಡಿತ ನೆರವೇರುವುದು.
12:6. ನೀತಿಪ್ರೀತಿಗಳನ್ನನುಸರಿಸಿ ಯೆಹೋವನನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರುವ ದೃಢ ತೀರ್ಮಾನ ನಮಗಿರಬೇಕು.
13:6. ಇಸ್ರಾಯೇಲ್ಯರ ‘ಹೊಟ್ಟೆ ತುಂಬಿದಾಗ ಅವರ ಮನಸ್ಸು ಉಬ್ಬಿಕೊಂಡಿತು. ಇದರಿಂದ [ಯೆಹೋವನನ್ನು] ಮರೆತುಬಿಟ್ಟರು.’ ಗರ್ವದಿಂದ ಉಬ್ಬಿಕೊಳ್ಳುವ ಪ್ರವೃತ್ತಿಯ ಬಗ್ಗೆ ನಾವು ಎಚ್ಚರವಹಿಸಬೇಕು.
“ಯೆಹೋವನ ಮಾರ್ಗಗಳು ರುಜುವಾದವುಗಳು”
ಹೋಶೇಯನು ಬೇಡಿಕೊಳ್ಳುವುದು: “ಇಸ್ರಾಯೇಲೇ, ನೀನು ಹಿಂದಿರುಗಿ ನಿನ್ನ ದೇವರಾದ ಯೆಹೋವನನ್ನು ಸೇರಿಕೋ; ನಿನ್ನ ಅಪರಾಧದಿಂದಲೇ, ನೀನು ಮುಗ್ಗರಿಸಿ ಬಿದ್ದಿ.” ಯೆಹೋವನನ್ನು ಜನರು ಈ ರೀತಿಯಲ್ಲಿ ಕೇಳಿಕೊಳ್ಳುವಂತೆ ಅವನು ಪ್ರೇರೇಪಿಸುತ್ತಾನೆ: “ನಮ್ಮ ಅಪರಾಧವನ್ನು ಸಂಪೂರ್ಣವಾಗಿ ನಿವಾರಣೆಮಾಡಿ [ನಮ್ಮಲ್ಲಿನ] ಒಳ್ಳೆಯದನ್ನು ಅಂಗೀಕರಿಸು; ನಮ್ಮ ಸ್ತೋತ್ರಗಳೆಂಬ ಹೋರಿಗಳನ್ನು ಅರ್ಪಿಸುವೆವು.”—ಹೋಶೇಯ 14:1, 2.
ಪಶ್ಚಾತ್ತಾಪಿ ತಪ್ಪಿತಸ್ಥನು ಯೆಹೋವನ ಬಳಿಗೆ ಬಂದು ಆತನ ಮಾರ್ಗಗಳನ್ನು ಸ್ವೀಕರಿಸಿ ಆತನಿಗೆ ಸ್ತೋತ್ರಯಜ್ಞಗಳನ್ನು ಅರ್ಪಿಸಬೇಕು. ಯಾಕೆ? ಯಾಕಂದರೆ, “ಯೆಹೋವನ ಮಾರ್ಗಗಳು ರುಜುವಾದವುಗಳು; ಅವುಗಳಲ್ಲಿ ಸನ್ಮಾರ್ಗಿಗಳು ನಡೆಯುವರು.” (ಹೋಶೇಯ 14:9) ಇನ್ನೂ ಅನೇಕರು ಈ ‘ಅಂತ್ಯಕಾಲದಲ್ಲಿ ಯೆಹೋವನನ್ನೂ ಆತನ ದಯೆಯನ್ನೂ ಭಯಭಕ್ತಿಯಿಂದ ಮರೆಹೊಗುವಾಗ’ ನಮಗೆಷ್ಟು ಸಂತೋಷವಾಗುತ್ತದೆ!—ಹೋಶೇಯ 3:5. (w07 9/15)