ಯೆಹೋವನ ಮಾತು ಎಂದಿಗೂ ವ್ಯರ್ಥವಾಗುವುದಿಲ್ಲ
ಯೆಹೋವನ ಮಾತು ಎಂದಿಗೂ ವ್ಯರ್ಥವಾಗುವುದಿಲ್ಲ
“ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
ಅವನೊಬ್ಬ ಶಕ್ತಿಶಾಲಿಯಾದ ನಿರ್ಭೀತ ಸೇನಾಧಿಪತಿಯಾಗಿದ್ದನು. ನಂಬಿಕೆ ಹಾಗೂ ಸಮಗ್ರತೆಯ ಪುರುಷನೂ ಆಗಿದ್ದನು. ಅವನು ಮೋಶೆಯೊಂದಿಗೆ ನಡೆದಾಡಿದನು ಮತ್ತು ಇಸ್ರಾಯೇಲ್ ಜನಾಂಗವನ್ನು ಒಂದು ಘೋರಾರಣ್ಯದಿಂದ ಹೊರತಂದು ಹಾಲೂ ಜೇನೂ ಹರಿಯುವ ದೇಶಕ್ಕೆ ನಡಿಸಲು ಅವನನ್ನು ಯೆಹೋವನು ಆರಿಸಿ ತೆಗೆದನು. ಈ ಅತಿ ಗಣ್ಯ ಪುರುಷನಾಗಿದ್ದ ಯೆಹೋಶುವನು ತನ್ನ ಜೀವಿತದ ಕೊನೆಯಲ್ಲಿ ಇಸ್ರಾಯೇಲಿನ ಹಿರೀ ಪುರುಷರಿಗೆ ಒಂದು ಸ್ಫೂರ್ತಿದಾಯಕ ವಿದಾಯ ಭಾಷಣವನ್ನಿತ್ತನು. ಆ ಭಾಷಣಕ್ಕೆ ಕಿವಿಗೊಟ್ಟವರ ನಂಬಿಕೆಯನ್ನು ಅದು ಬಲಪಡಿಸಿತ್ತೆಂಬುದಕ್ಕೆ ಸಂದೇಹವಿಲ್ಲ. ಅದು ನಿಮ್ಮ ನಂಬಿಕೆಯನ್ನೂ ಬಲಪಡಿಸಬಲ್ಲದು.
2 ಆ ಸನ್ನಿವೇಶವನ್ನು ಬೈಬಲ್ ವರ್ಣಿಸುವ ಪ್ರಕಾರ ನಿಮ್ಮ ಮನಸ್ಸಿನಲ್ಲಿ ಚಿತ್ರೀಕರಿಸಿರಿ: “ಯೆಹೋವನು ಸುತ್ತಣ ವಿರೋಧಿಗಳನ್ನು ನಿರ್ಮೂಲಮಾಡಿ ಇಸ್ರಾಯೇಲ್ಯರಿಗೆ ವಿಶ್ರಾಂತಿ ಕೊಟ್ಟನು. ತರುವಾಯ ಬಹುದಿನಗಳು ಗತಿಸಿದ ಮೇಲೆ ದಿನತುಂಬಿದ ಮುದುಕನಾದ ಯೆಹೋಶುವನು ಇಸ್ರಾಯೇಲ್ಯರ ಹಿರಿಯರು, ಪ್ರಭುಗಳು, ನ್ಯಾಯಾಧಿಪತಿಗಳು, ಅಧಿಕಾರಿಗಳು ಇವರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ತನ್ನ ಬಳಿಗೆ ಕರಿಸಿ ಅವರಿಗೆ—ನಾನು ದಿನತುಂಬಿದ ಮುದುಕನಾಗಿದ್ದೇನೆ” ಅಂದನು.—ಯೆಹೋಶುವ 23:1, 2.
3 ದೇವಜನರ ಇತಿಹಾಸದ ಒಂದು ಅತ್ಯಂತ ರೋಮಾಂಚಕ ಕಾಲಾವಧಿಯಲ್ಲಿ ಜೀವಿಸಿದ್ದ ಯೆಹೋಶುವನು ತನ್ನ ವೃದ್ಧಾಪ್ಯದ 110ನೇ ವಯಸ್ಸನ್ನು ಸಮೀಪಿಸುತ್ತಿದ್ದನು. ಅವನು ಯೆಹೋವನ ಮಹತ್ಕಾರ್ಯಗಳನ್ನು ನೋಡಿದ್ದನು ಮತ್ತು ಆತನ ಅನೇಕ ವಾಗ್ದಾನಗಳ ನೆರವೇರಿಕೆಯನ್ನು ಕಣ್ಣಾರೆ ಕಂಡಿದ್ದನು. ಹೀಗೆ ತನ್ನ ಸ್ವಂತ ಅನುಭವದ ಸಂಪೂರ್ಣ ಮನವರಿಕೆಯಿಂದ ಅವನಂದದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
4 ಯೆಹೋವನ ಯಾವ ಮಾತುಗಳು ಯೆಹೋಶುವನ ಜೀವಮಾನದಲ್ಲಿ ತಪ್ಪದೆ ನೆರವೇರಿದ್ದವು? ನಾವೀಗ ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ಮೂರು ಆಶ್ವಾಸನೆಗಳನ್ನು ಗಮನಿಸೋಣ. ಒಂದನೇದಾಗಿ, ಯೆಹೋವನು ಅವರನ್ನು ದಾಸತ್ವದಿಂದ ಬಿಡುಗಡೆ ಮಾಡಲಿದ್ದನು. ಎರಡನೇದಾಗಿ, ಅವರನ್ನು ಸಂರಕ್ಷಿಸಲಿದ್ದನು. ಮೂರನೇದಾಗಿ, ಅವರನ್ನು ಪೋಷಿಸಲಿದ್ದನು. ಯೆಹೋವನು ತದ್ರೀತಿಯ ಆಶ್ವಾಸನೆಗಳನ್ನು ತನ್ನ ಆಧುನಿಕ ಜನರಿಗೂ ನೀಡಿದ್ದಾನೆ ಮತ್ತು ಅವು ನಮ್ಮ ಜೀವಮಾನದಲ್ಲಿ ತಪ್ಪದೆ ನೆರವೇರಿರುವುದನ್ನು ನಾವು ಕಂಡಿದ್ದೇವೆ. ಆದರೂ ಆಧುನಿಕ ದಿನಗಳಲ್ಲಿ ಯೆಹೋವನು ಏನೆಲ್ಲ ಮಾಡಿದ್ದಾನೆ ಎಂದು ಚರ್ಚಿಸುವ ಮುನ್ನ ಯೆಹೋಶುವನ ದಿನಗಳಲ್ಲಿ ಆತನ ಕಾರ್ಯಗಳನ್ನು ನಾವೀಗ ಪರಿಗಣಿಸೋಣ.
ಯೆಹೋವನು ತನ್ನ ಜನರನ್ನು ಬಿಡುಗಡೆ ಮಾಡುತ್ತಾನೆ
5 ಐಗುಪ್ತದಲ್ಲಿ ತಾವು ಅನುಭವಿಸುತ್ತಿದ್ದ ದಾಸ್ಯದ ಕುರಿತು ಇಸ್ರಾಯೇಲ್ಯರು ಗೋಳಿಡುತ್ತಾ ಯೆಹೋವನಿಗೆ ಮೊರೆಯಿಟ್ಟಾಗ ಆತನು ಗಮನಕೊಟ್ಟನು. (ವಿಮೋಚನಕಾಂಡ 2:23-25) ಉರಿಯುವ ಮುಳ್ಳಿನ ಪೊದೆಯೊಳಗಿಂದ ಯೆಹೋವನು ಮೋಶೆಗೆ ಅಂದದ್ದು: “ಆದಕಾರಣ [ನನ್ನ ಜನರನ್ನು] ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ . . . ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ.” (ವಿಮೋಚನಕಾಂಡ 3:8) ಯೆಹೋವನು ಇದನ್ನು ತಪ್ಪದೆ ನಡಿಸಿದ್ದನ್ನು ನೋಡುವುದು ಇಸ್ರಾಯೇಲ್ಯರನ್ನು ಎಷ್ಟು ಪುಳಕಿತಗೊಳಿಸಿರಬೇಕು! ಇಸ್ರಾಯೇಲ್ಯರನ್ನು ಐಗುಪ್ತದಿಂದ ಹೋಗಗೊಡಿಸಲು ಫರೋಹನು ನಿರಾಕರಿಸಿದಾಗ, ದೇವರು ನೈಲ್ ನದಿಯ ನೀರನ್ನು ರಕ್ತವನ್ನಾಗಿ ಮಾಡುವನೆಂದು ಮೋಶೆ ಅವನಿಗೆ ಹೇಳಿದನು. ಯೆಹೋವನ ಮಾತು ವ್ಯರ್ಥವಾಗಲಿಲ್ಲ. ನೈಲ್ ನದಿಯ ನೀರು ರಕ್ತವಾಯಿತು. ಮೀನುಗಳು ಸತ್ತವು ಮತ್ತು ನದಿಯ ನೀರು ಹೊಲಸು ನಾರಿದ್ದರಿಂದ ಪಾನಯೋಗ್ಯವಾಗದೆ ಹೋಯಿತು. (ವಿಮೋಚನಕಾಂಡ 7:14-21) ಆದರೆ ಫರೋಹನು ಹಟಮಾರಿಯಾಗಿ ವರ್ತಿಸಿದರಿಂದ ತಾನು ತರಲಿದ್ದ ಪ್ರತಿಯೊಂದು ಬಾಧೆಯನ್ನು ಯೆಹೋವನು ಮುಂದಾಗಿ ತಿಳಿಸುತ್ತಾ ಇನ್ನೂ ಒಂಬತ್ತು ಬಾಧೆಗಳನ್ನು ಬರಮಾಡಿದನು. (ವಿಮೋಚನಕಾಂಡ, ಅಧ್ಯಾಯಗಳು 8-12) ಹತ್ತನೆಯ ಬಾಧೆಯು ಐಗುಪ್ತ್ಯರ ಚೊಚ್ಚಲು ಮಕ್ಕಳೆಲ್ಲರನ್ನು ಹತಿಸಲಾಗಿ ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟು ಹೊರಟುಹೋಗುವಂತೆ ಫರೋಹನು ಕಟ್ಟಪ್ಪಣೆಯಿತ್ತನು ಮತ್ತು ಇಸ್ರಾಯೇಲ್ಯರು ಹೊರಟೇಬಿಟ್ಟರು!—ವಿಮೋಚನಕಾಂಡ 12:29-32.
6 ಯೆಹೋವನು ಇಸ್ರಾಯೇಲನ್ನು ತನ್ನ ಸ್ವಕೀಯ ಜನಾಂಗವಾಗಿ ಆರಿಸಿಕೊಳ್ಳಲು ಆ ಬಿಡುಗಡೆಯು ದಾರಿಮಾಡಿತು. ಅದು ಯೆಹೋವನು ವಾಗ್ದಾನಗಳನ್ನು ನೆರವೇರಿಸುವ ದೇವರು ಮತ್ತು ಎಂದೂ ವ್ಯರ್ಥವಾಗದ ಮಾತುಗಳನ್ನಾಡುವ ದೇವರೆಂದು ಮಹಿಮೆಪಡಿಸಿತು. ಅನ್ಯಜನಾಂಗಗಳ ದೇವದೇವತೆಗಳ ಮೇಲೆ ಯೆಹೋವನಿಗಿರುವ ಸರ್ವಶ್ರೇಷ್ಠತೆಯನ್ನು ಅದು ಪ್ರದರ್ಶಿಸಿತು. ಆ ಬಿಡುಗಡೆಯ ಕುರಿತು ಕೇವಲ ಓದುವಾಗ ನಮ್ಮ ನಂಬಿಕೆಯೆಷ್ಟು ಬಲಗೊಳ್ಳುತ್ತದೆ! ಹೀಗಿರುವಾಗ ಅದನ್ನು ಸಾಕ್ಷಾತ್ ಅನುಭವಿಸಿದ್ದು ಅದೆಷ್ಟು ರೋಮಾಂಚಕರ ಆಗಿದ್ದಿರಬೇಕೆಂದು ತುಸು ಊಹಿಸಿರಿ! ಯೆಹೋವನು ನಿಸ್ಸಂದೇಹವಾಗಿ “ಭೂಲೋಕದಲ್ಲೆಲ್ಲಾ ಸರ್ವೋನ್ನತನೆಂದು” ಯೆಹೋಶುವನು ಅನುಭವದಿಂದ ತಿಳುಕೊಂಡನು.—ಕೀರ್ತನೆ 83:18.
ಯೆಹೋವನು ತನ್ನ ಜನರನ್ನು ಸಂರಕ್ಷಿಸುತ್ತಾನೆ
7 ಯೆಹೋವನು ತನ್ನ ಜನರನ್ನು ಸಂರಕ್ಷಿಸುವನು ಎಂಬ ಎರಡನೆಯ ಆಶ್ವಾಸನೆಯ ಕುರಿತೇನು? ಈ ಆಶ್ವಾಸನೆಯು, ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆ ಮಾಡಿ ವಾಗ್ದತ್ತ ದೇಶದೊಳಗೆ ಅವರನ್ನು ಸೇರಿಸುವ ಯೆಹೋವನ ವಾಗ್ದಾನದಲ್ಲಿ ಅಡಕವಾಗಿತ್ತು. ಫರೋಹನು ರೋಷಾವೇಶಗೊಂಡು ನೂರಾರು ರಥಾಶ್ವಗಳಿಂದ ಸನ್ನದ್ಧವಾಗಿದ್ದ ತನ್ನ ಬಲಾಢ್ಯ ಸೈನ್ಯದೊಂದಿಗೆ ಇಸ್ರಾಯೇಲ್ಯರನ್ನು ಬೆನ್ನಟ್ಟಿ ಬಂದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. ವಿಶೇಷವಾಗಿ ಇಸ್ರಾಯೇಲ್ಯರು ಬೆಟ್ಟಗಳ ಮತ್ತು ಸಮುದ್ರದ ನಡುವೆ ಸಿಕ್ಕಿಬಿದ್ದಂತೆ ಕಂಡುಬಂದಾಗ ಆ ಅಹಂಕಾರಿಯಾದ ಫರೋಹನು ಅದೆಷ್ಟು ಉದ್ಧಟತನದಿಂದ ಮುಂದೊತ್ತಿರಬೇಕು! ಆಗ ದೇವರು ಹಸ್ತಕ್ಷೇಪ ಮಾಡಿದನು! ಎರಡೂ ಪಾಳೆಯಗಳ ನಡುವೆ ಒಂದು ಮೇಘಸ್ತಂಭವು ನಿಲ್ಲುವಂತೆ ಮಾಡಿದ ಮೂಲಕ ಯೆಹೋವನು ತನ್ನ ಜನರನ್ನು ಕಾಪಾಡುವುದಕ್ಕಾಗಿ ಮುಂದಡಿಯಿಟ್ಟನು. ಆ ಮೇಘವು ಐಗುಪ್ತ್ಯರ ಪಕ್ಕದಲ್ಲಿ ಕತ್ತಲೆಯನ್ನೂ ಇಸ್ರಾಯೇಲ್ಯರ ಪಕ್ಕದಲ್ಲಿ ಬೆಳಕನ್ನೂ ಉಂಟುಮಾಡಿತು. ಐಗುಪ್ತ್ಯರನ್ನು ಮುಂದೊತ್ತದಂತೆ ಮೇಘವು ತಡೆಗಟ್ಟಿದಾಗ, ಮೋಶೆಯು ಸಮುದ್ರದ ಮೇಲೆ ತನ್ನ ಕೈಚಾಚಿದನು. ಆಗ ಕೆಂಪು ಸಮುದ್ರವು ಇಬ್ಭಾಗವಾಗಿ ಇಸ್ರಾಯೇಲ್ಯರಿಗೆ ಪಾರಾಗುವ ದಾರಿಯನ್ನು ಒದಗಿಸಿತು ಮತ್ತು ಐಗುಪ್ತ್ಯರನ್ನು ಬೋನಿನೊಳಗೆ ಸಿಕ್ಕಿಸಿಹಾಕಿತು. ಹೀಗೆ ಯೆಹೋವನು ಫರೋಹನ ಬಲಾಢ್ಯ ಸೈನ್ಯವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ತನ್ನ ಜನರನ್ನಾದರೊ ನಿಶ್ಚಿತ ಸೋಲಿನಿಂದ ಸಂರಕ್ಷಿಸಿದನು.—ವಿಮೋಚನಕಾಂಡ 14:19-28.
8 ಕೆಂಪು ಸಮುದ್ರವನ್ನು ದಾಟಿದ ಬಳಿಕ ಇಸ್ರಾಯೇಲ್ಯರು “ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾರಣ್ಯ . . . ನೀರು ಬತ್ತಿಹೋದ ಭೂಮಿ” ಎಂದು ಬಣ್ಣಿಸಲಾದ ಒಂದು ಅರಣ್ಯ ಪ್ರದೇಶದಲ್ಲಿ ಅಲೆದಾಡಿದರು. (ಧರ್ಮೋಪದೇಶಕಾಂಡ 8:15) ಅಲ್ಲಿ ಸಹ ಯೆಹೋವನು ತನ್ನ ಜನರನ್ನು ಸಂರಕ್ಷಿಸಿದನು. ಮತ್ತು ವಾಗ್ದತ್ತ ದೇಶದೊಳಗೆ ಅವರು ಪ್ರವೇಶಿಸುವ ವಿಷಯದಲ್ಲೇನು? ಕಾನಾನ್ಯರ ಬಲಿಷ್ಠ ಸೈನ್ಯಗಳು ಅವರನ್ನು ವಿರೋಧಿಸಿದವು. ಆದರೂ ಯೆಹೋವನು ಯೆಹೋಶುವನಿಗೆ ಅಂದದ್ದು: “ನೀನು ಈಗ ಎದ್ದು ಸಮಸ್ತ ಪ್ರಜಾಸಹಿತವಾಗಿ ಈ ಯೊರ್ದನ್ ಹೊಳೆಯನ್ನು ದಾಟಿ ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶಕ್ಕೆ ಹೋಗು. ನಿನ್ನ ಜೀವಮಾನದಲ್ಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು; ನಾನು ಮೋಶೆಯ ಸಂಗಡ ಇದ್ದ ಹಾಗೆ ನಿನ್ನ ಸಂಗಡಲೂ ಇರುವೆನು.” (ಯೆಹೋಶುವ 1:2, 5) ಯೆಹೋವನ ಆ ಮಾತುಗಳು ವ್ಯರ್ಥವಾಗಿ ಹೋಗಲಿಲ್ಲ. ಸರಿಸುಮಾರು ಆರು ವರ್ಷಗಳೊಳಗೆ ಯೆಹೋಶುವನು 31 ಮಂದಿ ಅರಸರನ್ನು ಸೋಲಿಸಿಬಿಟ್ಟನು ಮತ್ತು ವಾಗ್ದತ್ತ ದೇಶದ ವಿಸ್ತಾರವಾದ ಭಾಗಗಳನ್ನು ಹಸ್ತಗತ ಮಾಡಿಕೊಂಡನು. (ಯೆಹೋಶುವ 12:7-24) ಆ ವಿಜಯಗಳು ಯೆಹೋವನ ಸಂರಕ್ಷಣಾ ಹಸ್ತದ ಹೊರತು ಬೇರೆ ರೀತಿಯಲ್ಲಿ ಶಕ್ಯವಾಗುತ್ತಿರಲಿಲ್ಲ.
ಯೆಹೋವನು ತನ್ನ ಜನರನ್ನು ಪೋಷಿಸುತ್ತಾನೆ
9 ಯೆಹೋವನು ತನ್ನ ಜನರನ್ನು ಪೋಷಿಸುವನು ಎಂಬ ಮೂರನೆಯ ಆಶ್ವಾಸನೆಯನ್ನು ಈಗ ಪರಿಗಣಿಸಿರಿ. ಐಗುಪ್ತದಿಂದ ಅವರನ್ನು ಬಿಡುಗಡೆಮಾಡಿದ ಸ್ವಲ್ಪ ಸಮಯದಲ್ಲಿ ಯೆಹೋವನು ಇಸ್ರಾಯೇಲ್ಯರಿಗೆ ವಾಗ್ದಾನಿಸಿದ್ದು: “ಇಗೋ ನಾನು ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವೂ ಹೊರಗೆ ಹೋಗಿ ಆಯಾ ದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು.” ದೇವರು ತಾನು ಅಂದಂತೆಯೇ ಅವರಿಗೆ ‘ಆಕಾಶದಿಂದ ಆಹಾರವನ್ನು’ ಖಂಡಿತ ಒದಗಿಸಿದನು. “ಇಸ್ರಾಯೇಲ್ಯರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ಇದೇನಿರಬಹುದು ಎಂದು ಹೇಳಿಕೊಂಡರು.” ಅದು, ಯೆಹೋವನು ಅವರಿಗೆ ವಾಗ್ದಾನಿಸಿದ್ದ ಆಹಾರ ಅಂದರೆ ಮನ್ನವಾಗಿತ್ತು.—ವಿಮೋಚನಕಾಂಡ 16:4, 13-15.
10 ಆ ಅರಣ್ಯದಲ್ಲಿ 40 ವರ್ಷಗಳ ವರೆಗೆ ಯೆಹೋವನು ಇಸ್ರಾಯೇಲ್ಯರಿಗೆ ಆಹಾರ ಮತ್ತು ನೀರನ್ನು ಒದಗಿಸಿಕೊಟ್ಟು ಪಾಲಿಸಿ ಪೋಷಿಸಿದನು. ಅವರ ಮೈಮೇಲಿನ ಉಡುಪು ಸವೆದು ಜೀರ್ಣವಾಗದಂತೆ ಹಾಗೂ ಅವರು ನಡೆದು ನಡೆದು ಕಾಲುಗಳು ಬಾತುಹೋಗದಂತೆ ಸಹ ಅವನು ನೋಡಿಕೊಂಡನು. (ಧರ್ಮೋಪದೇಶಕಾಂಡ 8:3, 4) ಯೆಹೋಶುವನು ಇದೆಲ್ಲವನ್ನು ಕಣ್ಣಾರೆ ಕಂಡನು. ಯೆಹೋವನು ತನ್ನ ಜನರನ್ನು ತಾನು ವಾಗ್ದಾನಿಸಿದ ಪ್ರಕಾರವೇ ಬಿಡುಗಡೆ ಮಾಡಿದನು, ಸಂರಕ್ಷಿಸಿದನು ಮತ್ತು ಪೋಷಿಸಿದನು.
ಆಧುನಿಕ ಸಮಯದಲ್ಲಿ ಬಿಡುಗ
11 ನಮ್ಮ ಸಮಯದ ಕುರಿತೇನು? ಇಸವಿ 1914ರ ಅಕ್ಟೋಬರ್ 2ರ ಶುಕ್ರವಾರ ಬೆಳಗ್ಗೆ, ಆ ದಿನಗಳಲ್ಲಿ ಬೈಬಲ್ ವಿದ್ಯಾರ್ಥಿಗಳ ಮಧ್ಯೆ ಮುಂದಾಳತ್ವ ವಹಿಸಿದ್ದ ಚಾರ್ಲ್ಸ್ ಟೇಸ್ ರಸೆಲ್‌ರವರು ನ್ಯೂಯಾರ್ಕ್ ಬ್ರೂಕ್ಲಿನ್ ಬೆತೆಲ್‌ನ ಭೋಜನ ಗೃಹವನ್ನು ದಾಪುಗಾಲು ಹಾಕುತ್ತಾ ಪ್ರವೇಶಿಸಿ, “ಗುಡ್ ಮಾರ್ನಿಂಗ್” ಎಂದು ಎಲ್ಲರನ್ನು ಸಂತಸದಿಂದ ವಂದಿಸಿದರು. ಕೂತುಕೊಳ್ಳುವ ಮುಂಚಿತವಾಗಿ ಅವರು ಸಂತೋಷದಿಂದ ಪ್ರಕಟಿಸಿದ್ದು: “ಅನ್ಯಜನಾಂಗಗಳ ಕಾಲ ಅಂತ್ಯಗೊಂಡಿದೆ, ಅವರ ಅರಸರ ದಿನಗಳು ಮುಗಿದಿವೆ.” ವಿಶ್ವದ ಪರಮಾಧಿಕಾರಿ ಯೆಹೋವನು ಪುನಃ ಒಮ್ಮೆ ತನ್ನ ಜನರ ಪರವಾಗಿ ಕ್ರಿಯೆಗೈಯುವ ಸಮಯವು ಆಗ ಆಗಮಿಸಿತು. ಮತ್ತು ಆತನು ಕ್ರಿಯೆಗೈದನು ನಿಶ್ಚಯ!
12 ಕೇವಲ ಐದು ವರ್ಷಗಳ ತರುವಾಯ, ಯೆಹೋವನು ತನ್ನ ಜನರನ್ನು ಸುಳ್ಳು ಧರ್ಮದ ಬಲಾಢ್ಯ ಲೋಕಸಾಮ್ರಾಜ್ಯವಾದ ‘ಮಹಾ ಬಾಬೆಲ್’ನಿಂದ ಬಿಡುಗಡೆ ಮಾಡಿದನು. (ಪ್ರಕಟನೆ 18:2) ಆ ರೋಮಾಂಚಕ ಬಿಡುಗಡೆಯನ್ನು ಅವಲೋಕಿಸಲು ನಮ್ಮಲ್ಲಿ ಸಾಕಷ್ಟು ದೊಡ್ಡವರಾಗಿದ್ದವರು ಕೇವಲ ಕೆಲವರೇ. ಆದರೂ ನಾವು ಅದರ ಫಲಿತಾಂಶಗಳನ್ನು ಸುಸ್ಪಷ್ಟವಾಗಿ ಕಾಣುತ್ತಿದ್ದೇವೆ. ಯೆಹೋವನು ಶುದ್ಧಾರಾಧನೆಯನ್ನು ಪುನಃಸ್ಥಾಪಿಸಿದನು ಮತ್ತು ಆತನನ್ನು ಆರಾಧಿಸಲು ಹಂಬಲಿಸುತ್ತಿದ್ದವರನ್ನು ಐಕ್ಯಗೊಳಿಸಿದನು. ಇದು ಪ್ರವಾದಿಯಾದ ಯೆಶಾಯನ ಮೂಲಕ ಪ್ರವಾದಿಸಲ್ಪಟ್ಟಿತು: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು.”—ಯೆಶಾಯ 2:2.
13 ಯೆಶಾಯನ ಮಾತುಗಳು ವ್ಯರ್ಥವಾಗದೆ ಸತ್ಯವಾಗಿ ನೆರವೇರಿದವು. ಅಭಿಷಿಕ್ತ ಉಳಿಕೆಯವರು 1919ರಲ್ಲಿ ಸತ್ಯದೇವರ ಆರಾಧನೆಯನ್ನು ಉನ್ನತೀಕರಿಸಿದ ಲೋಕವ್ಯಾಪಕವಾದ ಸಾಕ್ಷಿನೀಡುವ ನಿರ್ಭೀತ ಕಾರ್ಯಾಚರಣೆಯನ್ನು ಆರಂಭಿಸಿದರು. 1930ರ ದಶಕದಲ್ಲಿ “ಬೇರೆ ಕುರಿಗಳು” ಸಹ ಸತ್ಯಾರಾಧನೆಯಲ್ಲಿ ಪಾಲ್ಗೊಳ್ಳಲು ಆಮಂತ್ರಿಸಲ್ಪಟ್ಟರೆಂದು ಸ್ಪಷ್ಟವಾಗಿ ತೋರಿಬಂತು. (ಯೋಹಾನ 10:16) ಮೊದಲಾಗಿ ನೂರಾರು ಮಂದಿ ಕೂಡಿಬಂದರು, ಆಮೇಲೆ ಹತ್ತಾರು ಸಾವಿರ ಮಂದಿ ಮತ್ತು ಈಗ ಲಕ್ಷಗಟ್ಟಲೆ ಮಂದಿ ಸತ್ಯಾರಾಧನೆಗಾಗಿ ತಮ್ಮ ನಿಲುವನ್ನು ತೆಗೆದುಕ್ಕೊಳ್ಳುತ್ತಿದ್ದಾರೆ! ಅಪೊಸ್ತಲ ಯೋಹಾನನಿಗೆ ಕೊಡಲಾದ ಒಂದು ದರ್ಶನದಲ್ಲಿ ಅವರನ್ನು “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹ . . . ಸಕಲ ಜನಾಂಗಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಎಂದು ವರ್ಣಿಸಲಾಗಿದೆ. (ಪ್ರಕಟನೆ 7:9) ನಿಮ್ಮ ಜೀವಮಾನದಲ್ಲಿ ನೀವೇನನ್ನು ಕಂಡಿದ್ದೀರಿ? ಮೊದಲಾಗಿ ನೀವು ಸತ್ಯವನ್ನು ಕಲಿತಾಗ ಎಷ್ಟು ಮಂದಿ ಯೆಹೋವನ ಸಾಕ್ಷಿಗಳು ಭೂಮಿಯಲ್ಲಿದ್ದರು? ಇಂದು ಯೆಹೋವನನ್ನು ಸೇವಿಸುವವರ ಸಂಖ್ಯೆಯಾದರೋ 67,00,000ಕ್ಕಿಂತಲೂ ಹೆಚ್ಚಾಗಿದೆ. ಯೆಹೋವನು ತನ್ನ ಜನರನ್ನು ಮಹಾ ಬಾಬೆಲಿನಿಂದ ಬಿಡುಗಡೆ ಮಾಡಿದ ಮೂಲಕ ನಾವೀಗ ವಿಶ್ವವ್ಯಾಪಕವಾಗಿ ಕಾಣುವ ರೋಮಾಂಚಕ ಅಭಿವೃದ್ಧಿಗೆ ದಾರಿ ತೆರೆದಿದ್ದಾನೆ.
14 ಇನ್ನೊಂದು ಬಿಡುಗಡೆಯು ಇನ್ನೂ ಆಗಲಿಕ್ಕಿದೆ. ಅದರಲ್ಲಿ ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಳಗೂಡಲಿದ್ದಾನೆ. ತನ್ನ ಶಕ್ತಿಯ ಅದ್ಭುತ ಪ್ರದರ್ಶನದಲ್ಲಿ ಯೆಹೋವನು ತನ್ನನ್ನು ವಿರೋಧಿಸುವವರೆಲ್ಲರನ್ನು ತೆಗೆದುಹಾಕುವನು. ತನ್ನ ಜನರನ್ನಾದರೋ ನೀತಿಯು ವಾಸವಾಗಿರುವ ಒಂದು ಹೊಸ ಲೋಕದೊಳಗೆ ಪಾರುಗೊಳಿಸುವನು. ದುಷ್ಟತನದ ಅಂತ್ಯವನ್ನು ಕಾಣುವುದು ಮತ್ತು ಇಡೀ ಮಾನವ ಇತಿಹಾಸದ ಅತ್ಯಂತ ಮಹಿಮಾನ್ವಿತ ಯುಗದ ಉದಯವನ್ನು ನೋಡುವುದು ಅದೆಷ್ಟು ಆನಂದಕರವಾಗಿರುವುದು!—ನಮ್ಮ ದಿನದಲ್ಲಿ ಯೆಹೋವನ ಸಂರಕ್ಷಣೆ
15 ನಾವು ನೋಡಿದ ಪ್ರಕಾರವೇ ಯೆಹೋಶುವನ ದಿನದ ಇಸ್ರಾಯೇಲ್ಯರಿಗೆ ಯೆಹೋವನ ಸಂರಕ್ಷಣೆಯ ಅಗತ್ಯವಿತ್ತು. ಆಧುನಿಕ ದಿನಗಳ ಯೆಹೋವನ ಸಾಕ್ಷಿಗಳಿಗೆ ಆತನ ಸಂರಕ್ಷಣೆಯ ಅಗತ್ಯವಿಲ್ಲವೋ? ಖಂಡಿತವಾಗಿಯೂ ಇದೆ! ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಕೆಯಿತ್ತದ್ದು: “ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಮತ್ತಾಯ 24:9) ಅನೇಕ ವರ್ಷಗಳಿಂದ ಯೆಹೋವನ ಸಾಕ್ಷಿಗಳು ಅನೇಕ ದೇಶಗಳಲ್ಲಿ ಕಟು ವಿರೋಧ ಮತ್ತು ಕ್ರೂರ ಹಿಂಸೆಯನ್ನು ಅನುಭವಿಸಿದ್ದಾರೆ ನಿಜ. ಆದರೂ ಯೆಹೋವನು ತನ್ನ ಜನರೊಂದಿಗಿದ್ದು ಅವರನ್ನು ಬೆಂಬಲಿಸಿದ್ದಾನೆಂಬುದೂ ಖಚಿತ. (ರೋಮಾಪುರ 8:31) ‘ನಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು’ ಎಂದು ಆತನ ವಾಕ್ಯವು ನಮಗೆ ಆಶ್ವಾಸನೆ ಕೊಡುತ್ತದೆ. ಆದುದರಿಂದ ನಮ್ಮ ರಾಜ್ಯ ಸಾರುವಿಕೆ ಮತ್ತು ಕಲಿಸುವಿಕೆಯನ್ನು ನಿಲ್ಲಿಸಲು ಯಾರೂ ಶಕ್ತರಲ್ಲ ನಿಶ್ಚಯ.—ಯೆಶಾಯ 54:17.
16 ಲೋಕದ ದ್ವೇಷದ ಮಧ್ಯೆಯೂ ಯೆಹೋವನ ಜನರು ಅಭಿವೃದ್ಧಿಯಾಗುತ್ತಾ ಬಂದಿದ್ದಾರೆ. ಯೆಹೋವನ ಸಾಕ್ಷಿಗಳು 236 ದೇಶಗಳಲ್ಲಿ ಅಭ್ಯುದಯವನ್ನು ಹೊಂದುತ್ತಿರುವುದು, ಯೆಹೋವನು ಅವರೊಂದಿಗಿದ್ದಾನೆ ಮತ್ತು ಅವರನ್ನು ನಾಶಗೊಳಿಸಲು ಅಥವಾ ಮೌನಗೊಳಿಸಲು ಪ್ರಯತ್ನಿಸುವವರಿಂದ ಅವರನ್ನು ಸಂರಕ್ಷಿಸುತ್ತಾನೆಂಬುದಕ್ಕೆ ಖಾತ್ರಿದಾಯಕ ಪುರಾವೆಯಾಗಿದೆ. ನಿಮ್ಮ ಜೀವಮಾನದಲ್ಲಿ ದೇವಜನರನ್ನು ತೀಕ್ಷ್ಣವಾಗಿ ವಿರೋಧಿಸಿದ ಪ್ರಬಲ ರಾಜಕೀಯ ಅಥವಾ ಧಾರ್ಮಿಕ ಧುರೀಣರ ಹೆಸರುಗಳನ್ನು ನೀವು ಜ್ಞಾಪಿಸಬಲ್ಲಿರೋ? ಅವರಿಗೇನು ಸಂಭವಿಸಿತು? ಅವರೀಗ ಎಲ್ಲಿದ್ದಾರೆ? ಮೋಶೆ ಮತ್ತು ಯೆಹೋಶುವನ ದಿನಗಳ ಫರೋಹನಂತೆಯೇ ಅವರಲ್ಲಿ ಹೆಚ್ಚಿನವರು ಅಳಿದುಹೋಗಿದ್ದಾರಲ್ಲಾ. ಆದರೆ ನಂಬಿಗಸ್ತರಾಗಿ ಸತ್ತ ದೇವರ ಆಧುನಿಕ ದಿನದ ಸೇವಕರ ಕುರಿತೇನು? ಅವರು ಯೆಹೋವನ ಸ್ಮರಣೆಯಲ್ಲಿ ಸುರಕ್ಷಿತರಾಗಿ ಇದ್ದಾರೆ. ಅದಕ್ಕಿಂತ ಹೆಚ್ಚು ಸುರಕ್ಷಿತ ಸ್ಥಾನ ಬೇರೊಂದಿರದು. ಸಂರಕ್ಷಣೆಯ ವಿಷಯದಲ್ಲಿ ಯೆಹೋವನ ಮಾತುಗಳು ಸತ್ಯವಾಗಿ ರುಜುವಾಗಿವೆ ಎಂಬುದು ಸ್ಪಷ್ಟ.
ಯೆಹೋವನು ತನ್ನ ಜನರನ್ನು ಇಂದು ಪೋಷಿಸುತ್ತಾನೆ
17 ಯೆಹೋವನು ತನ್ನ ಜನರಾದ ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ಪೋಷಿಸಿದನು, ಮತ್ತು ಇಂದು ಸಹ ತನ್ನ ಜನರನ್ನು ಪೋಷಿಸುತ್ತಾನೆ. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ನಾವು ಆಧ್ಯಾತ್ಮಿಕವಾಗಿ ಉಣಿಸಲ್ಪಡುತ್ತಿದ್ದೇವೆ. (ಮತ್ತಾಯ 24:45) ಶತಮಾನಗಳಿಂದ ಮರೆಯಲ್ಲಿದ್ದ ಆಧ್ಯಾತ್ಮಿಕ ಸತ್ಯಗಳ ಜ್ಞಾನವನ್ನು ನಾವು ಆ ಮೂಲಕ ಪಡೆಯುತ್ತೇವೆ. ದೇವದೂತನು ದಾನಿಯೇಲನಿಗೆ ತಿಳಿಸಿದ್ದು: “ನೀನು ಈ ಮಾತುಗಳನ್ನು ಮುಚ್ಚಿಡು, ಅವುಗಳನ್ನು ಬರೆಯುವ ಗ್ರಂಥಕ್ಕೆ ಮುದ್ರೆಹಾಕು, ಅಂತ್ಯಕಾಲದ ವರೆಗೆ ಮರೆಯಾಗಿರಲಿ; ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು ಹೆಚ್ಚುವದು.”—ದಾನಿಯೇಲ 12:4.
18 ನಾವಿಂದು ಆ ಅಂತ್ಯಕಾಲದಲ್ಲಿ ಜೀವಿಸುತ್ತಿದ್ದೇವೆ ಮತ್ತು ತಿಳುವಳಿಕೆ ಅಥವಾ ನಿಜ ಜ್ಞಾನವು ಖಂಡಿತವಾಗಿಯೂ ಹೆಚ್ಚಾಗಿದೆ. ಪವಿತ್ರಾತ್ಮವು ಲೋಕದಾದ್ಯಂತ ಸತ್ಯಪ್ರೇಮಿಗಳನ್ನು ಸತ್ಯದೇವರ ಮತ್ತು ಆತನ ಉದ್ದೇಶಗಳ ಕುರಿತ ನಿಷ್ಕೃಷ್ಟ ಜ್ಞಾನಕ್ಕೆ ನಡಿಸಿದೆ. ಬೈಬಲು ಇಂದು ಭೂಮಿಯಲ್ಲೆಲ್ಲೂ ಯಥೇಚ್ಛವಾಗಿ ಲಭ್ಯವಿದೆ ಮತ್ತು ಬೈಬಲಿನಲ್ಲಿ ಅಡಕವಾಗಿರುವ ಅಮೂಲ್ಯ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಜನರಿಗೆ ನೆರವಾಗುವ ಪ್ರಕಾಶನಗಳೂ ಲಭ್ಯವಿವೆ. ಉದಾಹರಣೆಗಾಗಿ, ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಬೈಬಲಧ್ಯಯನ ಪುಸ್ತಕದ ಪರಿವಿಡಿಯನ್ನು ಪರಿಗಣಿಸಿರಿ. * ಅದರ ಕೆಲವು ಅಧ್ಯಾಯಗಳು ಹೀಗಿವೆ: “ದೇವರ ಕುರಿತಾದ ಸತ್ಯವೇನು?,” “ಮೃತಜನರು ಎಲ್ಲಿದ್ದಾರೆ?,” “ದೇವರ ರಾಜ್ಯ ಎಂದರೇನು?” ಮತ್ತು “ದೇವರು ಕಷ್ಟಸಂಕಟಗಳಿಗೆ ಏಕೆ ಅವಕಾಶ ಕೊಡುತ್ತಾನೆ?” ಇಂಥ ಪ್ರಶ್ನೆಗಳನ್ನು ಜನರು ಸಾವಿರಾರು ವರ್ಷಗಳಿಂದ ಪರ್ಯಾಲೋಚಿಸಿದ್ದಾರೆ. ಈಗಲಾದರೊ ಅವುಗಳ ಉತ್ತರಗಳು ಸುಲಭವಾಗಿ ಲಭ್ಯವಿವೆ. ಶತಮಾನಗಳಿಂದ ಬೈಬಲಿನ ಕುರಿತು ಜನರಿಗಿದ್ದ ಅಜ್ಞಾನ ಮತ್ತು ಕ್ರೈಸ್ತಪ್ರಪಂಚದ ಧರ್ಮಭ್ರಷ್ಟ ಬೋಧನೆಗಳ ಮಧ್ಯೆಯೂ, ಯೆಹೋವನನ್ನು ಸೇವಿಸಲು ಹಂಬಲಿಸುವವರೆಲ್ಲರನ್ನು ಪೋಷಿಸುತ್ತಾ ದೇವರ ಮಾತು ಜಯಶಾಲಿಯಾಗಿ ನಿಂತಿದೆ.
19 ನಿಶ್ಚಯವಾಗಿಯೂ ನಾವು ಅವಲೋಕಿಸಿರುವ ಸಂಗತಿಗಳಿಂದಾಗಿ ನಾವೂ ಹೀಗೆ ಹೇಳಬಲ್ಲೆವು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:14) ಯೆಹೋವನು ತನ್ನ ಸೇವಕರನ್ನು ಬಿಡುಗಡೆ ಮಾಡುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ಪೋಷಿಸುತ್ತಾನೆ. ಆತನ ನೇಮಿತ ಸಮಯದಲ್ಲಿ ನೆರವೇರಲು ತಪ್ಪಿರುವ ಯಾವುದೇ ವಾಗ್ದಾನಕ್ಕೆ ನೀವು ಕೈತೋರಿಸಬಲ್ಲಿರೋ? ಹಾಗೆ ಮಾಡುವುದು ಅಸಾಧ್ಯವೇ ಸರಿ. ದೇವರ ನಂಬಲರ್ಹವಾದ ಮಾತಿನಲ್ಲಿ ನಾವು ವಿವೇಕಿಗಳಾಗಿ ಭರವಸವಿಡುತ್ತೇವೆ.
20 ಭವಿಷ್ಯತ್ತಿನ ಕುರಿತೇನು? ಒಂದು ಪರಮಾನಂದದ ಪರದೈಸವಾಗಿ ಮಾರ್ಪಡುವ ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯು ನಮ್ಮಲ್ಲಿ ಹೆಚ್ಚಿನವರಿಗೆ ಇರಬಲ್ಲದೆಂದು ಯೆಹೋವನು ನಮಗೆ ಹೇಳಿದ್ದಾನೆ. ನಮ್ಮಲ್ಲಿ ಕೊಂಚ ಮಂದಿಗೆ ಪರಲೋಕದಲ್ಲಿ ಕ್ರಿಸ್ತನೊಂದಿಗೆ ಆಳುವ ನಿರೀಕ್ಷೆಯೂ ಇದೆ. ನಮ್ಮ ನಿರೀಕ್ಷೆಯು ಏನೇ ಆಗಿರಲಿ, ಯೆಹೋಶುವನಂತೆ ನಂಬಿಗಸ್ತರಾಗಿ ಉಳಿಯಲು ನಮಗೆ ನಿಶ್ಚಯವಾಗಿಯೂ ಕಾರಣವಿದೆ. ನಮ್ಮ ನಿರೀಕ್ಷೆಯು ಈಡೇರುವಂಥ ಆ ದಿನವು ಬರಲಿದೆ. ಆಗ ಯೆಹೋವನು ಮಾಡಿರುವ ಎಲ್ಲ ವಾಗ್ದಾನಗಳನ್ನು ನಾವೂ ಜ್ಞಾಪಿಸಿಕೊಳ್ಳುತ್ತಾ ಹೀಗೆ ಹೇಳುವೆವು: ‘ಎಲ್ಲವೂ ತಪ್ಪದೆ ನೆರವೇರಿದವು.’ (w07 11/1)
[ಪಾದಟಿಪ್ಪಣಿ]
^ ಪ್ಯಾರ. 26 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
ನೀವು ವಿವರಿಸಬಲ್ಲಿರೋ?
• ಯೆಹೋವನ ಯಾವ ಆಶ್ವಾಸನೆಗಳ ನೆರವೇರಿಕೆಯನ್ನು ಯೆಹೋಶುವನು ಕಂಡನು?
• ದೇವರ ಯಾವ ಆಶ್ವಾಸನೆಗಳ ನೆರವೇರಿಕೆಯನ್ನು ನೀವು ಕಂಡಿರುವಿರಿ?
• ದೇವರ ಮಾತಿನ ಕುರಿತು ಯಾವ ಖಾತ್ರಿಯು ನಮಗಿರಬಹುದು?
[ಅಧ್ಯಯನ ಪ್ರಶ್ನೆಗಳು]
1. ಯೆಹೋಶುವನು ಯಾರು, ಮತ್ತು ತನ್ನ ಜೀವಿತದ ಕೊನೆಯಲ್ಲಿ ಅವನು ಏನು ಮಾಡಿದನು?
2, 3. ಯೆಹೋಶುವನು ಇಸ್ರಾಯೇಲಿನ ಹಿರೀ ಪುರುಷರೊಂದಿಗೆ ಮಾತಾಡಿದಾಗ ಇಸ್ರಾಯೇಲಿನ ಪರಿಸ್ಥಿತಿಯು ಹೇಗಿತ್ತು, ಮತ್ತು ಯೆಹೋಶುವನು ಹೇಳಿದ್ದೇನು?
4. ಯೆಹೋವನು ಇಸ್ರಾಯೇಲ್ಯರಿಗೆ ಯಾವ ಆಶ್ವಾಸನೆಗಳನ್ನು ಕೊಟ್ಟನು?
5, 6. ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡುಗಡೆ ಮಾಡಿದ್ದು ಹೇಗೆ, ಮತ್ತು ಇದು ಏನನ್ನು ಪ್ರದರ್ಶಿಸಿತು?
7. ಫರೋಹನ ಸೈನ್ಯವು ಬೆನ್ನಟ್ಟಿದಾಗ ಇಸ್ರಾಯೇಲ್ಯರನ್ನು ಯೆಹೋವನು ಸಂರಕ್ಷಿಸಿ ಉಳಿಸಿದ್ದು ಹೇಗೆ?
8. ಇಸ್ರಾಯೇಲ್ಯರು (ಎ) ಘೋರಾರಣ್ಯದಲ್ಲಿ ಅಲೆದಾಡಿದಾಗ ಮತ್ತು (ಬಿ) ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಯಾವ ಸಂರಕ್ಷಣೆಯನ್ನು ಅನುಭವಿಸಿದರು?
9, 10. ಯೆಹೋವನು ತನ್ನ ಜನರನ್ನು ಅರಣ್ಯದಲ್ಲಿ ಪೋಷಿಸಿದ್ದು ಹೇಗೆ?
11. ನ್ಯೂಯಾರ್ಕ್ ಬ್ರೂಕ್ಲಿನ್‌ನಲ್ಲಿ ಇಸವಿ 1914ರಲ್ಲಿ ಏನು ಸಂಭವಿಸಿತು, ಮತ್ತು ಆಗ ಯಾವುದಕ್ಕಾಗಿ ಸಮಯವು ಆಗಮಿಸಿತ್ತು?
12. ಇಸವಿ 1919ರಲ್ಲಿ ಯಾವ ಬಿಡುಗಡೆಯು ಸಂಭವಿಸಿತು, ಮತ್ತು ಇದು ಯಾವುದಕ್ಕೆ ದಾರಿಮಾಡಿತು?
13. ಯೆಹೋವನ ಸಾಕ್ಷಿಗಳ ನಡುವೆ ಯಾವ ಅಭಿವೃದ್ಧಿಯನ್ನು ನೀವು ಕಂಡಿದ್ದೀರಿ?
14. ಯಾವ ಬಿಡುಗಡೆಯು ಇನ್ನೂ ಆಗಲಿಕ್ಕಿದೆ?
15. ಆಧುನಿಕ ಸಮಯಗಳಲ್ಲಿ ಯೆಹೋವನ ಸಂರಕ್ಷಣೆಯ ಅಗತ್ಯವಿದ್ದದ್ದೇಕೆ?
16. ಯೆಹೋವನು ತನ್ನ ಜನರನ್ನು ಸಂರಕ್ಷಿಸುತ್ತಾನೆಂಬುದಕ್ಕೆ ಯಾವ ಪುರಾವೆಯನ್ನು ನೀವು ಕಂಡಿದ್ದೀರಿ?
17. ಆಧ್ಯಾತ್ಮಿಕ ಆಹಾರದ ಕುರಿತಾಗಿ ಯೆಹೋವನು ಯಾವ ಆಶ್ವಾಸನೆಯನ್ನು ಕೊಟ್ಟನು?
18. ಸತ್ಯ ಜ್ಞಾನವು ಇಂದು ಹೇರಳವಾಗಿ ಲಭ್ಯವಿದೆ ಎಂದು ಏಕೆ ಹೇಳಸಾಧ್ಯವಿದೆ?
19. ಯಾವ ವಾಗ್ದಾನಗಳು ನೆರವೇರಿರುವುದನ್ನು ನೀವು ನೋಡಿರುವಿರಿ, ಮತ್ತು ಯಾವ ತೀರ್ಮಾನಕ್ಕೆ ನೀವು ಬಂದಿರುತ್ತೀರಿ?
20. ನಾವು ಭವಿಷ್ಯತ್ತನ್ನು ಭರವಸದಿಂದ ಎದುರುನೋಡಬಹುದು ಏಕೆ?
[ಪುಟ 25ರಲ್ಲಿರುವ ಚಿತ್ರಗಳು]
ಯೆಹೋವನು ಇಂದು ತನ್ನ ಜನರನ್ನು ಪರಾಮರಿಸುತ್ತಾನೆ