ನಿಮ್ಮ ಮಕ್ಕಳಿಗೆ ಶಾಂತಿಶೀಲರಾಗಿರಲು ಕಲಿಸಿರಿ
ನಿಮ್ಮ ಮಕ್ಕಳಿಗೆ ಶಾಂತಿಶೀಲರಾಗಿರಲು ಕಲಿಸಿರಿ
ಎಂಟು ವರ್ಷದ ನಿಕೋಲಳ ಕುಟುಂಬವು ದೂರದ ಒಂದು ಊರಿಗೆ ಸ್ಥಳಾಂತರಿಸಲಿತ್ತು. ಈ ಸಂಭ್ರಮದಲ್ಲಿದ್ದ ನಿಕೋಲ್ ತನ್ನ ಆಪ್ತ ಸ್ನೇಹಿತೆ ಗ್ಯಾಬ್ರಿಲ್‌ಗೆ ಅವರ ಎಲ್ಲ ಆಗುಹೋಗುಗಳ ಬಗ್ಗೆ ಚಿಕ್ಕಚಿಕ್ಕ ವಿಷಯಗಳನ್ನೂ ತಿಳಿಸುತ್ತಾ ಇದ್ದಳು. ಆದರೆ ಒಂದು ದಿನ ಗ್ಯಾಬ್ರಿಲ್ ಇದ್ದಕ್ಕಿದ್ದಂತೆ ನಿಕೋಲ್‌ಗೆ, ‘ನೀನು ಹೋದರೆ ನನಗೇನಂತೆ?’ ಎಂದು ಹೇಳಿಬಿಟ್ಟಳು. ಇದರಿಂದ ತುಂಬ ನೊಂದುಕೊಂಡ ನಿಕೋಲ್ ಸಿಟ್ಟಿನಿಂದ, “ನಾನು ಇನ್ನು ಮುಂದೆ ಗ್ಯಾಬ್ರಿಲ್ ಒಟ್ಟಿಗೆ ಮಾತಾಡುವುದೇ ಇಲ್ಲ!” ಎಂದು ತಾಯಿಗೆ ಹೇಳಿದಳು.
ನಿಕೋಲ್ ಮತ್ತು ಗ್ಯಾಬ್ರಿಲ್‌ಳ ನಡುವಿನ ಇಂಥ ಜಗಳಗಳು ಮಕ್ಕಳ ಮಧ್ಯೆ ಸಾಮಾನ್ಯ. ಈ ಜಗಳಗಳಲ್ಲಿ ಹೆಚ್ಚಾಗಿ ಹೆತ್ತವರು ನೋವಿನ ಭಾವನೆಗಳ ಶಮನಕ್ಕಾಗಿ ಮಾತ್ರವಲ್ಲ, ಆ ಸಮಸ್ಯೆಯನ್ನು ಹೇಗೆ ಇತ್ಯರ್ಥಮಾಡಬೇಕೆಂದು ತೋರಿಸಲಿಕ್ಕಾಗಿಯೂ ಮಧ್ಯೆಬರಬೇಕಾಗುತ್ತದೆ. ಮಕ್ಕಳು ಸ್ವಾಭಾವಿಕವಾಗಿಯೇ “ಬಾಲ್ಯದ” ಲಕ್ಷಣಗಳನ್ನು ತೋರಿಸುತ್ತಾರೆ. ತಮ್ಮ ನಡೆನುಡಿಗಳು ಯಾವ ಹಾನಿ ಮಾಡಬಲ್ಲವೆಂದು ಅವರಿಗೆ ಹೆಚ್ಚಾಗಿ ತಿಳಿದಿರುವುದಿಲ್ಲ. (1 ಕೊರಿಂಥ 13:11) ಆದುದರಿಂದ, ಕುಟುಂಬದೊಳಗೂ ಹೊರಗೂ ಇತರರೊಂದಿಗೆ ಸಮಾಧಾನದಿಂದಿರಲು ನೆರವಾಗಬಲ್ಲ ಗುಣಗಳನ್ನು ಬೆಳೆಸಲು ಅವರಿಗೆ ಸಹಾಯವು ಬೇಕು.
ಕ್ರೈಸ್ತ ಹೆತ್ತವರು, ‘ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲು’ ತಮ್ಮ ಮಕ್ಕಳಿಗೆ ತರಬೇತುಕೊಡುವ ವಿಷಯದಲ್ಲಿ ತೀವ್ರಾಸಕ್ತರಾಗಿದ್ದಾರೆ. (1 ಪೇತ್ರ 3:11) ಇತರರೊಂದಿಗೆ ಸಮಾಧಾನದಿಂದಿರುವಾಗ ಸಿಗುವ ಸಂತೋಷವು ಅನುಮಾನ, ಹತಾಶೆ ಹಾಗೂ ವೈರತ್ವದ ಭಾವನೆಗಳನ್ನು ಜಯಿಸಲಿಕ್ಕಾಗಿ ಮಾಡಲಾಗುವ ಸಕಲ ಪ್ರಯತ್ನಗಳನ್ನು ಸಾರ್ಥಕಗೊಳಿಸುತ್ತದೆ. ನೀವೊಬ್ಬ ಹೆತ್ತವರಾಗಿರುವಲ್ಲಿ ನಿಮ್ಮ ಮಕ್ಕಳು ಶಾಂತಿಶೀಲರಾಗಿರುವಂತೆ ಹೇಗೆ ಕಲಿಸಬಲ್ಲಿರಿ?
‘ಸಮಾಧಾನದ ದೇವರನ್ನು’ ಮೆಚ್ಚಿಸುವ ಅಪೇಕ್ಷೆ ಬೆಳೆಸಿರಿ
ಯೆಹೋವನನ್ನು ‘ಸಮಾಧಾನದ ದೇವರು’ ಮತ್ತು ‘ಶಾಂತಿದಾಯಕನು’ ಎಂದು ಕರೆಯಲಾಗಿದೆ. (ಫಿಲಿಪ್ಪಿ 4:9, NIBV; ರೋಮಾಪುರ 15:33) ಹೀಗಿರುವುದರಿಂದ ವಿವೇಕಿಗಳಾದ ಹೆತ್ತವರು ತಮ್ಮ ಮಕ್ಕಳಲ್ಲಿ ದೇವರನ್ನು ಮೆಚ್ಚಿಸುವ ಮತ್ತು ಆತನ ಗುಣಗಳನ್ನು ಅನುಕರಿಸಬೇಕೆಂಬ ಅಪೇಕ್ಷೆಯನ್ನು ಹುಟ್ಟಿಸಲಿಕ್ಕಾಗಿ ದೇವರ ವಾಕ್ಯವಾದ ಬೈಬಲನ್ನು ಕೌಶಲದಿಂದ ಬಳಸುತ್ತಾರೆ. ಉದಾಹರಣೆಗಾಗಿ ನಿಮ್ಮ ಮಕ್ಕಳು ತಮ್ಮ ಮನಸ್ಸಿನಲ್ಲಿ, ಅಪೊಸ್ತಲ ಯೋಹಾನನು ದರ್ಶನದಲ್ಲಿ ಯೆಹೋವನ ಸಿಂಹಾಸನದ ಸುತ್ತ ನೋಡಿದ ಒಂದು ಉಜ್ವಲ ಪಚ್ಚೆ-ಹಸಿರು ಮುಗಿಲುಬಿಲ್ಲನ್ನು ಚಿತ್ರಿಸಿಕೊಳ್ಳುವಂತೆ ಸಹಾಯಮಾಡಿ. * (ಪ್ರಕಟನೆ 4:2, 3) ಈ ಮುಗಿಲುಬಿಲ್ಲು ಯೆಹೋವನ ಸುತ್ತಲೂ ಇರುವ ಸಮಾಧಾನ ಹಾಗೂ ಪ್ರಶಾಂತತೆಯನ್ನು ಪ್ರತಿನಿಧಿಸುತ್ತದೆ ಮತ್ತು ಅಂಥ ಆಶೀರ್ವಾದಗಳು ಆತನಿಗೆ ವಿಧೇಯರಾಗುವ ಎಲ್ಲರಿಗೂ ಸಿಗುತ್ತವೆಂದು ವಿವರಿಸಿರಿ.
ಯೆಶಾಯ 9:6, 7) ಆದುದರಿಂದ, ಜಗಳ ಹಾಗೂ ವಾದವಿವಾದಗಳನ್ನು ಬಿಟ್ಟುಬಿಡುವುದರ ಬಗ್ಗೆ ಯೇಸು ಕಲಿಸಿದ ಅಮೂಲ್ಯ ಪಾಠಗಳುಳ್ಳ ಬೈಬಲ್ ವೃತ್ತಾಂತಗಳನ್ನು ನಿಮ್ಮ ಮಕ್ಕಳೊಂದಿಗೆ ಓದಿ ಚರ್ಚಿಸಿರಿ. (ಮತ್ತಾಯ 26:51-56; ಮಾರ್ಕ 9:33-35) ಒಂದು ಕಾಲದಲ್ಲಿ “ಬಲಾತ್ಕಾರಿ” ಆಗಿದ್ದ ಪೌಲನು ತನ್ನ ನಡವಳಿಯನ್ನು ಏಕೆ ಬದಲಾಯಿಸಿದನು ಮತ್ತು “ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ” ಆಗಿರಬೇಕೆಂದು ಅವನು ಏಕೆ ಬರೆದನೆಂಬುದನ್ನು ವಿವರಿಸಿರಿ. (1 ತಿಮೊಥೆಯ 1:12; 2 ತಿಮೊಥೆಯ 2:24) ಇದಕ್ಕೆ ನಿಮ್ಮ ಮಕ್ಕಳು ತೋರಿಸುವ ಪ್ರತಿಕ್ರಿಯೆ ನಿಮಗೆ ಆನಂದಾಶ್ಚರ್ಯ ತಂದೀತು.
ಯೆಹೋವನ ಪುತ್ರನಾದ ಯೇಸುವನ್ನು “ಸಮಾಧಾನದ ಪ್ರಭು” ಎಂದು ಕರೆಯಲಾಗಿದೆ. ಈತನ ಮೂಲಕವೂ ಯೆಹೋವನು ಮಾರ್ಗದರ್ಶನ ಕೊಡುತ್ತಾನೆ. (ಈವನ್ ಎಂಬವನು ಏಳು ವರ್ಷದವನಾಗಿದ್ದಾಗ ಸ್ಕೂಲ್ ಬಸ್‌ನಲ್ಲಿ ಹುಡುಗನೊಬ್ಬನು ಅವನಿಗೆ ಗೇಲಿಮಾಡುತ್ತಿದ್ದದ್ದನ್ನು ಜ್ಞಾಪಿಸುತ್ತಾನೆ. ಅವನನ್ನುವುದು: “ನನಗೆಷ್ಟು ಸಿಟ್ಟುಬಂತೆಂದರೆ ಅವನಿಗೂ ಹಾಗೆಯೇ ಮಾಡಬೇಕೆಂದು ಅನಿಸಿತು! ಆದರೆ ಜಗಳಗಂಟರ ಕುರಿತು ನಾನು ಮನೆಯಲ್ಲಿ ಕಲಿತ ಪಾಠ ಆಗ ನನ್ನ ನೆನಪಿಗೆ ಬಂತು. ನಾನು ‘ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬಾರದು’ ಮತ್ತು ‘ಎಲ್ಲರ ಸಂಗಡ ಸಮಾಧಾನದಿಂದಿರಬೇಕು’ ಎಂಬುದೇ ಯೆಹೋವನ ಅಪೇಕ್ಷೆ ಎಂದು ನನಗೆ ತಿಳಿದಿತ್ತು.” (ರೋಮಾಪುರ 12:17, 18) ಆಗ ಈವನ್‌ಗೆ, ಸೌಮ್ಯವಾದ ರೀತಿಯಲ್ಲಿ ಪ್ರತಿಕ್ರಿಯಿಸುವ ಮೂಲಕ ಆ ಸ್ಫೋಟಕ ಸ್ಥಿತಿಯನ್ನು ಶಾಂತಗೊಳಿಸಲು ಬೇಕಾದ ಬಲ ಹಾಗೂ ಧೈರ್ಯ ಸಿಕ್ಕಿತು. ಸಮಾಧಾನದ ದೇವರನ್ನು ಸಂತೋಷಪಡಿಸುವುದೇ ಅವನ ಅಪೇಕ್ಷೆ ಆಗಿತ್ತು.
ಶಾಂತಿಶೀಲರಾದ ಹೆತ್ತವರಾಗಿರಿ
ನಿಮ್ಮ ಮನೆ ಸಮಾಧಾನದ ತಾಣವಾಗಿದೆಯೋ? ಹಾಗಿದ್ದರೆ ನೀವು ಸಮಾಧಾನದ ಬಗ್ಗೆ ಚರ್ಚಿಸದಿದ್ದರೂ ಅದರ ಕುರಿತು ನಿಮ್ಮ ಮಕ್ಕಳು ಬಹಳಷ್ಟನ್ನು ಕಲಿಯಬಹುದು. ನಿಮ್ಮ ಮಕ್ಕಳಿಗೆ ಶಾಂತಿಶೀಲರಾಗಿರಲು ನೀವು ಕೊಡುವ ಬೋಧನೆಯ ಪರಿಣಾಮಕಾರಿತ್ವವು ದೇವರ ಮತ್ತು ಕ್ರಿಸ್ತನ ಶಾಂತಿಭರಿತ ಮಾರ್ಗಗಳನ್ನು ನೀವು ಅನುಕರಿಸುವುದರ ಮೇಲೆ ಬಹಳಷ್ಟು ಹೊಂದಿಕೊಂಡಿದೆ.—ರೋಮಾಪುರ 2:21.
ರಸ್ ಮತ್ತು ಸಿಂಡಿ ಎಂಬವರು ತಮ್ಮ ಇಬ್ಬರು ಪುತ್ರರಿಗೆ ತರಬೇತು ಕೊಡಲಿಕ್ಕೆ ತುಂಬ ಶ್ರಮವಹಿಸುತ್ತಾರೆ. ಇತರರು ಅವರನ್ನು ಕೆರಳಿಸುವಾಗ ಪ್ರೀತಿಯಿಂದ ವರ್ತಿಸುವಂತೆ ಈ ಹೆತ್ತವರು ಬುದ್ಧಿಹೇಳುತ್ತಾರೆ. ಸಿಂಡಿ ಹೇಳುವುದು: “ಸಮಸ್ಯೆಗಳು ಬಂದಾಗ ನಾನು ಮತ್ತು ರಸ್ ನಮ್ಮ ಪುತ್ರರ ಹಾಗೂ ಇತರರ ಕಡೆಗೆ ತೋರಿಸುವ ಮನೋಭಾವವು, ಮಕ್ಕಳೂ ಅಂಥದ್ದೇ ಸಮಸ್ಯೆಗಳನ್ನು ಹೇಗೆ ನಿರ್ವಹಿಸುತ್ತಾರೆಂಬುದನ್ನು ಬಹಳಷ್ಟು ಪ್ರಭಾವಿಸುತ್ತದೆ.”
ನೀವೇನಾದರೂ ತಪ್ಪು ಮಾಡುವಾಗಲೂ (ತಪ್ಪನ್ನೇ ಮಾಡದ ಹೆತ್ತವರು ಇಲ್ಲವಲ್ಲ?) ಆ ಸಂದರ್ಭವನ್ನು ಮಕ್ಕಳಿಗೆ ಅಮೂಲ್ಯ ಪಾಠಗಳನ್ನು ಕಲಿಸಲಿಕ್ಕಾಗಿ ಉಪಯೋಗಿಸಬಹುದು. ಸ್ಟೀಫನ್ ಎಂಬವನು ಒಪ್ಪಿಕೊಳ್ಳುವುದು: “ನಾನು ಮತ್ತು ನನ್ನ ಹೆಂಡತಿ ಟೆರಿ, ಎಲ್ಲ ವಾಸ್ತವಾಂಶಗಳನ್ನು ತಿಳಿದುಕೊಳ್ಳುವ ಮುಂಚೆಯೇ ವಿಪರೀತವಾಗಿ ಪ್ರತಿಕ್ರಿಯಿಸಿ ನಮ್ಮ ಮೂವರು ಮಕ್ಕಳಿಗೆ ಶಿಕ್ಷೆಕೊಟ್ಟ ಸಂದರ್ಭಗಳಿದ್ದವು. ಆದರೆ ಹಾಗಾದಾಗ ನಾವು ಅವರಿಂದ ಕ್ಷಮೆಕೇಳಿದೆವು.” ಅವನು ಮುಂದುವರಿಸುವುದು: “ನಾವು ಸಹ ಅಪರಿಪೂರ್ಣರು, ತಪ್ಪುಗಳನ್ನು ಮಾಡುವವರೆಂದು ಮಕ್ಕಳು ತಿಳಿದುಕೊಳ್ಳುವಂತೆ ಬಿಟ್ಟೆವು. ಇದು, ನಮ್ಮ ಕುಟುಂಬದ ಶಾಂತಿಗೆ ನೆರವುನೀಡಿದೆ ಮಾತ್ರವಲ್ಲ ಶಾಂತಿಶೀಲರಾಗಿರುವುದು ಹೇಗೆಂಬುದನ್ನು ಮಕ್ಕಳು ಕಲಿಯುವಂತೆ ಸಹಾಯ ಮಾಡಿದೆಯೆಂದು ನಮಗನಿಸುತ್ತದೆ.”
ನೀವು ನಿಮ್ಮ ಮಕ್ಕಳೊಂದಿಗೆ ನಡೆದುಕೊಳ್ಳುವ ರೀತಿಯಿಂದ ಶಾಂತಿಶೀಲರಾಗಿರುವುದು ಹೇಗೆಂಬುದನ್ನು ಅವರು ಕಲಿಯುತ್ತಿದ್ದಾರೋ? “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ” ಎಂಬ ಬುದ್ಧಿವಾದವನ್ನು ಯೇಸು ಕೊಟ್ಟನು. (ಮತ್ತಾಯ 7:12) ನಿಮ್ಮ ಕುಂದುಕೊರತೆಗಳೇನೇ ಇದ್ದರೂ, ಮಕ್ಕಳಿಗೆ ನೀವು ತೋರಿಸುವ ಪ್ರೀತಿವಾತ್ಸಲ್ಯವು ಉತ್ತಮ ಫಲಿತಾಂಶಗಳನ್ನು ತರುವುದೆಂಬ ಆಶ್ವಾಸನೆ ನಿಮಗಿರಲಿ. ನೀವು ಪ್ರೀತಿಯಿಂದ ಕೊಡುವ ನಿರ್ದೇಶನಕ್ಕೆ ಮಕ್ಕಳು ಸಂತೋಷದಿಂದ ಪ್ರತಿಕ್ರಿಯೆ ತೋರಿಸುವರು.
ಕೋಪಿಸುವುದರಲ್ಲಿ ನಿಧಾನಿಗಳಾಗಿರಿ
ಜ್ಞಾನೋಕ್ತಿ 19:11 ಹೇಳುವುದು: “ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” ಇಂಥ ವಿವೇಕವನ್ನು, ಅಥವಾ ಮೂಲಭಾಷೆಯಲ್ಲಿ ಹೇಳಲಾದ ಒಳನೋಟವನ್ನು ಬೆಳೆಸಿಕೊಳ್ಳಲು ನಿಮ್ಮ ಮಕ್ಕಳಿಗೆ ಹೇಗೆ ಸಹಾಯ ಮಾಡುವಿರಿ? ಡೇವಿಡ್ ಮತ್ತವನ ಹೆಂಡತಿ ಮೇರಿಯಾನ್ ತಮ್ಮ ಮಕ್ಕಳ ವಿಷಯದಲ್ಲಿ ವ್ಯವಹಾರಿಕವೆಂದು ಕಂಡುಬಂದ ವಿಧಾನವನ್ನು ವರ್ಣಿಸುತ್ತಾರೆ. ಡೇವಿಡ್ ಹೇಳುವುದು: “ಯಾರಾದರೂ ಹೇಳಿದ ಇಲ್ಲವೇ ಮಾಡಿದ ಸಂಗತಿಯಿಂದ ಮಕ್ಕಳಿಗೆ ಕೋಪಬಂದಾಗಲೆಲ್ಲ ಅವರು ಆ ವ್ಯಕ್ತಿಗಾಗಿ ಸಹಾನುಭೂತಿ ತೋರಿಸುವಂತೆ ಸಹಾಯ ಮಾಡುತ್ತೇವೆ. ನಾವು ಈ ಸರಳ ಪ್ರಶ್ನೆಗಳನ್ನು ಅವರಿಗೆ ಕೇಳುತ್ತೇವೆ: ‘ಆ ವ್ಯಕ್ತಿ ತನ್ನ ಕೆಲಸದ ನಿಮಿತ್ತ ತುಂಬ ಬಳಲಿದ್ದನೋ? ಅವನಿಗೆ ಹೊಟ್ಟೆಕಿಚ್ಚಾಗುತ್ತದೋ? ಯಾರಾದರೂ ಅವನ ಮನನೋಯಿಸಿದ್ದಾರೋ?’” ಮೇರಿಯಾನ ಕೂಡಿಸಿ ಹೇಳುವುದು: “ಮಕ್ಕಳು ನಕಾರಾತ್ಮಕ ವಿಚಾರಗಳ ಕುರಿತಾಗಿಯೇ ಯಾವಾಗಲೂ ಯೋಚಿಸುವಂತೆ, ಇಲ್ಲವೇ ಯಾರು ತಪ್ಪು ಯಾರು ಸರಿ ಎಂಬುದರ ಬಗ್ಗೆ ವಾದಮಾಡುತ್ತಾ ಇರುವಂತೆ ಬಿಡುವ ಬದಲು ಈ ರೀತಿಯ ಪ್ರಶ್ನೆಗಳು ಅವರ ಮನಸ್ಸನ್ನು ಶಾಂತಗೊಳಿಸುತ್ತವೆ.”
ಇಂಥ ತರಬೇತಿ ವಿಸ್ಮಯಕಾರಿ ಫಲಿತಾಂಶಗಳನ್ನು ತರಬಲ್ಲದು. ಈ ಲೇಖನದ ಆರಂಭದಲ್ಲಿ ತಿಳಿಸಲಾಗಿರುವ ನಿಕೋಲ್‌ಳ ತಾಯಿ ಮಿಶೆಲ್ ತನ್ನ ಮಗಳಿಗೆ ಹೇಗೆ ಸಹಾಯ ಮಾಡಿದಳೆಂಬುದನ್ನು ಗಮನಿಸಿ. ಇದು, ಅವಳ ಸ್ನೇಹಿತೆ ಗ್ಯಾಬ್ರಿಲ್‌ಳೊಂದಿಗಿನ ಸ್ನೇಹವನ್ನು ಪುನಃ ಬೆಸೆಯಿತಲ್ಲದೆ ಇನ್ನೂ ಹೆಚ್ಚನ್ನು ಮಾಡಿತು. ಮಿಶೆಲ್ ಅನ್ನುವುದು: “ನಾನು ನಿಕೋಲ್‌ಳೊಂದಿಗೆ ಮಹಾ ಬೋಧಕನಿಂದ ಕಲಿಯಿರಿ * ಎಂಬ ಪುಸ್ತಕದ 14ನೇ ಅಧ್ಯಾಯವನ್ನು ಓದಿದೆ. ಅನಂತರ, ಒಬ್ಬನನ್ನು ‘ಏಳೆಪ್ಪತ್ತು ಸಾರಿ’ ಕ್ಷಮಿಸಬೇಕೆಂದು ಯೇಸು ಹೇಳಿದ ಮಾತಿನ ಅರ್ಥವೇನಾಗಿತ್ತು ಎಂಬುದನ್ನು ವಿವರಿಸಿಹೇಳಿದೆ. ನಿಕೋಲ್ ತನ್ನ ಅನಿಸಿಕೆಗಳನ್ನು ತಿಳಿಸುತ್ತಿದ್ದಾಗ ಗಮನಕೊಟ್ಟು ಆಲಿಸಿದೆ. ಬಳಿಕ, ಗ್ಯಾಬ್ರಿಲ್‌ಗೆ ತನ್ನ ಅತ್ಯಾಪ್ತ ಗೆಳತಿ ದೂರ ಹೋಗುತ್ತಿರುವುದರ ಬಗ್ಗೆ ಎಷ್ಟೊಂದು ದುಃಖ ಹಾಗೂ ಹತಾಶೆ ಆಗುತ್ತಿರಬೇಕೆಂಬುದನ್ನು ನಿಕೋಲ್ ಅರ್ಥಮಾಡಿಕೊಳ್ಳುವಂತೆ ಸಹಾಯ ಮಾಡಿದೆ.”—ಮತ್ತಾಯ 18:21, 22.
ಗ್ಯಾಬ್ರಿಲ್ ಯಾಕೆ ಹಾಗೆ ಹೇಳಿದ್ದಿರಬೇಕೆಂಬುದರ ಬಗ್ಗೆ ಒಳನೋಟ ಸಿಕ್ಕಿದಾಗ ನಿಕೋಲ್‌ಗೆ ಸಹಾನುಭೂತಿ ಉಕ್ಕಿಬಂತು ಮತ್ತು ಅವಳ ಕ್ಷಮೆಕೋರಲು ಫೋನ್ ಮಾಡಿದಳು. ಮಿಶೆಲ್ ಅನ್ನುವುದು: “ಅಂದಿನಿಂದ ನಿಕೋಲ್‌ಗೆ ಬೇರೆಯವರ ಭಾವನೆಗಳನ್ನು ಪರಿಗಣಿಸಲು ಮತ್ತು ಅವರನ್ನು ಖುಷಿಪಡಿಸಲು ದಯೆಯ ಕೃತ್ಯಗಳನ್ನು ಮಾಡುವುದರಲ್ಲಿ ಹೆಚ್ಚಿನ ಸಂತೋಷ ಸಿಗುತ್ತಿದೆ.”—ಫಿಲಿಪ್ಪಿ 2:3, 4.
ಬೇರೆಯವರ ತಪ್ಪುಗಳಿಂದ ಮತ್ತು ತಪ್ಪಭಿಪ್ರಾಯಗಳಿಂದ ಮಕ್ಕಳು ಕೆರಳದಂತೆ ಸಹಾಯ ಮಾಡಿರಿ. ಆಗ, ನಿಮ್ಮ ಮಕ್ಕಳು ಇತರರಿಗೆ ಸದ್ಭಾವನೆ ಹಾಗೂ ಕೋಮಲ ವಾತ್ಸಲ್ಯ ತೋರಿಸುವುದನ್ನು ನೋಡುವ ತೃಪ್ತಿ ನಿಮಗೆ ಸಿಗಬಹುದು.—ರೋಮಾಪುರ 12:10; 1 ಕೊರಿಂಥ 12:25.
ಕ್ಷಮಿಸುವುದನ್ನು ಭೂಷಣವಾಗಿ ಮಾಡುವಂತೆ ಉತ್ತೇಜಿಸಿರಿ
‘ಪರರ ದೋಷವನ್ನು ಲಕ್ಷಿಸದಿರುವದು ಮನುಷ್ಯನಿಗೆ ಭೂಷಣ’ ಎಂದು ಜ್ಞಾನೋಕ್ತಿ 19:11 ಹೇಳುತ್ತದೆ. ಯೇಸು ಅತ್ಯಂತ ಯಾತನಾಮಯ ಸ್ಥಿತಿಯಲ್ಲಿದ್ದಾಗಲೂ ತನ್ನ ತಂದೆಯನ್ನು ಅನುಕರಿಸಿ ಕ್ಷಮಾಭಾವವನ್ನು ತೋರ್ಪಡಿಸಿದನು. (ಲೂಕ 23:34) ನಿಮ್ಮ ಕ್ಷಮೆಯಿಂದ ಸಿಗುವ ಸಾಂತ್ವನವನ್ನು ಮಕ್ಕಳು ಸ್ವತಃ ಅನುಭವಿಸುವಾಗ ಕ್ಷಮಿಸುವುದನ್ನು ಭೂಷಣವಾಗಿ ಮಾಡಲು ಕಲಿಯುವರು.
ಉದಾಹರಣೆಗಾಗಿ, ವಿಲ್ಲಿ ಎಂಬ ಐದು ವರ್ಷದ ಹುಡುಗನಿಗೆ ತನ್ನ ಅಜ್ಜಿಯೊಟ್ಟಿಗೆ ಸೇರಿ ಚಿತ್ರಗಳಿಗೆ ಬಣ್ಣಹಾಕುವುದೆಂದರೆ ಬಲು ಇಷ್ಟ. ಹೀಗೆ ಅವರು ಒಮ್ಮೆ ಒಟ್ಟಿಗಿದ್ದಾಗ ಅಜ್ಜಿ ತಟ್ಟನೆ ಬಣ್ಣಹಾಕುವುದನ್ನು ನಿಲ್ಲಿಸಿ, ಅವನನ್ನು ಗದರಿಸಿ ಅಲ್ಲಿಂದ ಎದ್ದುಹೋದರು. ವಿಲ್ಲಿ ದುಃಖದಿಂದ ಮುದುಡಿಹೋದನು. ಅವನ ತಂದೆ ಸ್ಯಾಮ್ ಹೇಳುವುದು: “ವಿಲ್ಲಿಯ ಅಜ್ಜಿ ಆಲ್ಜೈಮರ್ಸ್ ರೋಗಿ. ಇದನ್ನು ಅವನಿಗೆ ಅರ್ಥವಾಗುವ ಮಾತುಗಳಲ್ಲಿ ವಿವರಿಸಿದೆವು.” ಅವನನ್ನು ಎಷ್ಟೋ ಸಲ ಕ್ಷಮಿಸಲಾಗಿದೆ ಆದುದರಿಂದ ಅವನು ಸಹ ಇತರರನ್ನು ಕ್ಷಮಿಸಬೇಕೆಂದು ನೆನಪುಹುಟ್ಟಿಸಿದಾಗ ವಿಲ್ಲಿ ತೋರಿಸಿದ ಪ್ರತಿಕ್ರಿಯೆ ಸ್ಯಾಮ್‌ನನ್ನು ಅಚ್ಚರಿಗೊಳಿಸಿತು. ಅವನಂದದ್ದು: “ನಮ್ಮ ಪುಟ್ಟನು, 80 ವರ್ಷದ ಅಜ್ಜಿ ಬಳಿ ಹೋಗಿ, ಕ್ಷಮೆಯಾಚಿಸುವ ಧಾಟಿಯಲ್ಲಿ ಮಾತಾಡಿ ಅವರ ಕೈಹಿಡಿದು ಪುನಃ ಮೇಜಿನ ಬಳಿ ಕರತಂದಾಗ ನನಗೂ ನನ್ನ ಹೆಂಡತಿಗೂ ಹೇಗನಿಸಿತೆಂದು ಭಾವಿಸಬಲ್ಲಿರೋ?”
ಮಕ್ಕಳು ಇತರರ ಲೋಪದೋಷಗಳನ್ನು ಹಾಗೂ ತಪ್ಪುಗಳನ್ನು ಕೊಲೊಸ್ಸೆ 3:13) ಜನರು ಬೇಕುಬೇಕೆಂದೇ ಸಿಟ್ಟೆಬ್ಬಿಸುವಂಥ ರೀತಿಯಲ್ಲಿ ನಡೆಯುವಾಗಲೂ ಸಮಾಧಾನದಿಂದ ಪ್ರತಿಕ್ರಿಯಿಸುವುದು ಹೆಚ್ಚು ಪರಿಣಾಮಕಾರಿ ಎಂದು ನಿಮ್ಮ ಮಗುವಿಗೆ ಆಶ್ವಾಸನೆಕೊಡಿರಿ. ಏಕೆಂದರೆ, “ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.”—ಜ್ಞಾನೋಕ್ತಿ 16:7.
‘ಸೈರಿಸಿಕೊಂಡು ಕ್ಷಮಿಸಲು’ ಕಲಿಯುವಾಗ ಅದು ನಿಜವಾಗಿಯೂ ಒಂದು ಭೂಷಣ ಆಗಿರುತ್ತದೆ. (ನಿಮ್ಮ ಮಕ್ಕಳು ಶಾಂತಿಶೀಲರಾಗಿರಲು ಸಹಾಯ ಮಾಡುತ್ತಾ ಇರ್ರಿ
ಹೆತ್ತವರು ಮಕ್ಕಳಿಗೆ ‘ಸಮಾಧಾನದ’ ವಾತಾವರಣದಲ್ಲಿ ಕಲಿಸಲು ದೇವರ ವಾಕ್ಯವನ್ನು ಬಳಸುವಾಗ ಮತ್ತು “ಸಮಾಧಾನಕರ್ತರು” (NW) ಆಗಿರುವಾಗ ಅವರು ಮಕ್ಕಳಿಗೆ ನಿಜವಾದ ಆಶೀರ್ವಾದದ ಮೂಲವಾಗಿರುತ್ತಾರೆ. (ಯಾಕೋಬ 3:18) ಇಂಥ ಹೆತ್ತವರು ತಮ್ಮ ಮಕ್ಕಳು ತಿಕ್ಕಾಟಗಳನ್ನು ಬಗೆಹರಿಸಿ ಶಾಂತಿಶೀಲರಾಗಿರಲು ಬೇಕಾಗಿರುವ ಗುಣಗಳಿಂದ ಸಜ್ಜುಗೊಳಿಸುತ್ತಿದ್ದಾರೆ. ಇದು ಜೀವನಪೂರ್ತಿ ಮಕ್ಕಳ ಸಂತೋಷ ಹಾಗೂ ಸಂತೃಪ್ತಿಗೆ ಅಪಾರ ನೆರವನ್ನು ನೀಡುತ್ತದೆ.
ಡ್ಯಾನ್ ಮತ್ತು ಕ್ಯಾತಿ ಎಂಬವರಿಗೆ ಮೂವರು ಮಕ್ಕಳು. ಈ ಮೂವರೂ ಹದಿವಯಸ್ಕರು ಮತ್ತು ಆಧ್ಯಾತ್ಮಿಕವಾಗಿ ಉತ್ತಮ ಪ್ರಗತಿಮಾಡುತ್ತಿದ್ದಾರೆ. “ಮಕ್ಕಳ ಆರಂಭದ ವರ್ಷಗಳಲ್ಲಿ ತರಬೇತಿಕೊಡುವಾಗ ಅನೇಕ ಕಷ್ಟಗಳಿದ್ದರೂ ಅವರು ಈಗ ಯೆಹೋವನ ಸೇವೆಯನ್ನು ಉತ್ತಮವಾಗಿ ಮಾಡುತ್ತಿರುವುದನ್ನು ನೋಡಿ ನಮಗೆ ಅತೀವ ಆನಂದವಾಗುತ್ತದೆ. ಅವರು ಈಗ ಇತರರೊಂದಿಗೆ ಒಳ್ಳೇ ರೀತಿಯಲ್ಲಿ ಹೊಂದಿಕೊಂಡು ಹೋಗುತ್ತಾರೆ, ಮತ್ತು ಶಾಂತಿಭಂಗವಾಗಬಲ್ಲ ಸಂದರ್ಭಗಳಲ್ಲಿ ಇತರರನ್ನು ಉದಾರವಾಗಿ ಕ್ಷಮಿಸುತ್ತಾರೆ.” ಕ್ಯಾತಿ ಹೇಳುವುದು: “ಈ ಸಂಗತಿ ನಮಗೆ ವಿಶೇಷವಾಗಿ ಉತ್ತೇಜನೀಯ ಏಕೆಂದರೆ ಸಮಾಧಾನವು ದೇವರಾತ್ಮದ ಫಲವಾಗಿದೆ.”—ಗಲಾತ್ಯ 5:22, 23.
ಆದುದರಿಂದ ಕ್ರೈಸ್ತ ಹೆತ್ತವರಾದ ನೀವು ತಮ್ಮ ಮಕ್ಕಳಿಗೆ ಸಮಾಧಾನದಿಂದ ಬದುಕಲು ಕಲಿಸುವಾಗ ಮತ್ತು ವಿಶೇಷವಾಗಿ ಅವರು ನಿಧಾನವಾಗಿ ಪ್ರಗತಿಮಾಡುತ್ತಿರುವಂತೆ ತೋರುವಾಗ ‘ಬೇಸರಗೊಳ್ಳದಿರಲು’ ಇಲ್ಲವೇ ‘ಮನಗುಂದದೇ’ ಇರಲು ಸಕಾರಣವಿದೆ. ನೀವು ಹೀಗೆ ಕಲಿಸುತ್ತಾ ಹೋದಂತೆ, “ಪ್ರೀತಿಯನ್ನೂ ಶಾಂತಿಯನ್ನೂ ಕೊಡುವ ದೇವರು ನಿಮ್ಮ ಸಂಗಡ ಇರುವನು” ಎಂಬ ಆಶ್ವಾಸನೆ ನಿಮಗಿರಲಿ.—ಗಲಾತ್ಯ 6:9; 2 ಕೊರಿಂಥ 13:11. (w07 12/1)
[ಪಾದಟಿಪ್ಪಣಿಗಳು]
^ ಪ್ಯಾರ. 6 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ, ಪ್ರಕಟನೆ—ಅದರ ಮಹಾ ಪರಮಾವಧಿ ಹತ್ತಿರ! ಪುಸ್ತಕದ ಪುಟ 75ರಲ್ಲಿರುವ ಚಿತ್ರವನ್ನು ನೋಡಿರಿ.
^ ಪ್ಯಾರ. 16 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.
[ಪುಟ 20ರಲ್ಲಿರುವ ಚೌಕ/ಚಿತ್ರ]
ಒಳ್ಳೇ ಪ್ರಭಾವವೋ?
‘ಮೀಡಿಯಾ ಅವೇರ್‌ನೆಸ್ ನೆಟ್‌ವರ್ಕ್’ (ಸಮೂಹಮಾಧ್ಯಮ ಜಾಗೃತಿ ಜಾಲಬಂಧ) ಪ್ರಕಾಶಿಸಿರುವ, “ಸಮೂಹಮಾಧ್ಯಮ ಮನೋರಂಜನೆಯಲ್ಲಿ ಹಿಂಸಾಚಾರ” ಎಂಬ ಶೀರ್ಷಿಕೆಯ ಪ್ರಬಂಧ ಹೇಳುವುದು: “ಸಮಸ್ಯೆ ಏನೇ ಆಗಿರಲಿ ಅದನ್ನು ಬಗೆಹರಿಸಲು ಹಿಂಸಾಚಾರ ಬಳಸಬೇಕೆಂಬ ವಿಚಾರಕ್ಕೆ ಮನೋರಂಜನೆ ಒತ್ತುಕೊಡುತ್ತದೆ. ಅದರಲ್ಲಿ ನಾಯಕರು ಹಾಗೂ ಖಳನಾಯಕರು ಪದೇಪದೇ ಹಿಂಸಾಚಾರವನ್ನು ಬಳಸುತ್ತಿರುತ್ತಾರೆ.” ಪರಿಶೀಲಿಸಲಾದ ಟಿವಿ ಕಾರ್ಯಕ್ರಮಗಳು, ಸಿನೆಮಾಗಳು ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ 10% ಮಾತ್ರ, ಹಿಂಸಾಚಾರ ಬಳಸುವುದರಿಂದ ಉಂಟಾಗುವ ಫಲಿತಾಂಶಗಳನ್ನು ತೋರಿಸಿದವು. ಇದನ್ನು ಬಿಟ್ಟರೆ ಬೇರೆಲ್ಲವುಗಳಲ್ಲಿ, “ಹಿಂಸಾಚಾರವನ್ನು ಸಮರ್ಥನೀಯ, ಸಹಜ, ಅನಿವಾರ್ಯ—ಹೀಗೆ ಸಮಸ್ಯೆಯನ್ನು ಬಗೆಹರಿಸುವ ಸೂಕ್ತ ವಿಧವೆಂಬಂತೆ ಸಾದರಪಡಿಸಲಾಯಿತು” ಎಂದು ಆ ಪ್ರಬಂಧವು ತಿಳಿಸುತ್ತದೆ.
ನಿಮ್ಮ ಮನೆಯಲ್ಲಿ ನೀವು ನೋಡುವ ಟಿವಿ ಕಾರ್ಯಕ್ರಮಗಳ ವಿಷಯದಲ್ಲಿ ಬದಲಾವಣೆಗಳನ್ನು ಮಾಡುವ ಅಗತ್ಯವಿದೆಯೋ? ನಿಮ್ಮ ಮಕ್ಕಳು ಶಾಂತಿಶೀಲರಾಗಿರಲಿಕ್ಕಾಗಿ ಕಲಿಸಲು ನೀವು ಮಾಡುವ ಪ್ರಯತ್ನಗಳನ್ನು ಸಮೂಹಮಾಧ್ಯಮದ ಮನೋರಂಜನೆ ಕೆಡಿಸುವಂತೆ ಬಿಡಬೇಡಿ.
[ಪುಟ 17ರಲ್ಲಿರುವ ಚಿತ್ರ]
‘ಸಮಾಧಾನದ ದೇವರನ್ನು’ ಸಂತೋಷಪಡಿಸುವ ಅಪೇಕ್ಷೆಯನ್ನು ನಿಮ್ಮ ಮಕ್ಕಳಲ್ಲಿ ಬೆಳೆಸಿರಿ
[ಪುಟ 18ರಲ್ಲಿರುವ ಚಿತ್ರ]
ಮನನೋಯಿಸುವ ನಡೆನುಡಿಗಳನ್ನು ತಿದ್ದಲು ಸಮಯ ತೆಗೆದುಕೊಳ್ಳಿರಿ
[ಪುಟ 19ರಲ್ಲಿರುವ ಚಿತ್ರ]
ನಿಮ್ಮ ಮಕ್ಕಳು ಕ್ಷಮೆಯಾಚಿಸುವುದನ್ನು ಮತ್ತು ಕ್ಷಮಿಸುವುದನ್ನು ಕಲಿಯಬೇಕು