ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’

‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’

‘ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’

‘ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರು.’—ಕೊಲೊ. 4:17.

ನಮ್ಮ ಸುತ್ತಲೂ ವಾಸಿಸುವ ಜನರ ಕಡೆಗೆ ನಮಗೊಂದು ಭಾರಿ ಜವಾಬ್ದಾರಿಯಿದೆ. ಅವರು ಈಗ ತೆಗೆದುಕೊಳ್ಳುವ ನಿರ್ಣಯಗಳಿಂದ ‘ಮಹಾ ಸಂಕಟದ’ ಸಮಯದಲ್ಲಿ ಅವರು ಒಂದೋ ಜೀವದಿಂದುಳಿಯುವರು ಅಥವಾ ನಾಶವಾಗುವರು. (ಪ್ರಕ. 7:14) ಜ್ಞಾನೋಕ್ತಿ ಪುಸ್ತಕದ ಲೇಖಕನು ದೇವಪ್ರೇರಿತನಾಗಿ ಹೇಳಿದ್ದು: “ಕೊಲೆಗೆ ಸೆಳೆಯಲ್ಪಟ್ಟವರನ್ನು ರಕ್ಷಿಸು! ಸಂಹಾರಕ್ಕೆ ಗುರಿಯಾದವರನ್ನು ತಪ್ಪಿಸುವದಿಲ್ಲವೇ.” ಈ ಮಾತುಗಳು ನಿಜಕ್ಕೂ ಗಮನಾರ್ಹ! ಜನರ ಮುಂದಿರುವ ಆಯ್ಕೆಯ ಕುರಿತು ಅವರನ್ನು ಎಚ್ಚರಿಸದೆ ಹೋದರೆ ಅವರ ಮರಣಕ್ಕೆ ನಾವೇ ಹೊಣೆಯಾಗುತ್ತೇವೆ. ಆ ವಚನ ಮುಂದುವರಿಸುವುದು: “ಇದು ನನಗೆ ಗೊತ್ತಿರಲಿಲ್ಲ ಎಂದು ನೀನು ನೆವ ಹೇಳಿದರೆ ಹೃದಯಶೋಧಕನು ಗ್ರಹಿಸುವದಿಲ್ಲವೋ? ನಿನ್ನ ಆತ್ಮವನ್ನು ಕಾಯುವಾತನು ತಿಳಿಯುವದಿಲ್ಲವೋ? ಪ್ರತಿಯೊಬ್ಬನ ಕರ್ಮಕ್ಕೆ ಪ್ರತಿಫಲವನ್ನು ಕೊಡದೆ ಬಿಟ್ಟಾನೇ?” ಹೌದು, ಜನರ ಪ್ರಾಣಾಪಾಯದ ಕುರಿತು “ನನಗೆ ಗೊತ್ತಿರಲಿಲ್ಲ” ಎಂದು ಯೆಹೋವನ ಸೇವಕರು ಹೇಳಸಾಧ್ಯವಿಲ್ಲ.—ಜ್ಞಾನೋ. 24:11, 12.

2 ಜೀವವು ಯೆಹೋವನಿಗೆ ಅತ್ಯಮೂಲ್ಯ. ಆದಕಾರಣ ತನ್ನ ಸೇವಕರು ಸಾಧ್ಯವಾದಷ್ಟು ಹೆಚ್ಚು ಜೀವಗಳನ್ನು ರಕ್ಷಿಸಲು ಶತಪ್ರಯತ್ನ ಮಾಡಬೇಕೆಂದು ಆತನು ಪ್ರೋತ್ಸಾಹಿಸುತ್ತಾನೆ. ದೇವರ ವಾಕ್ಯದಲ್ಲಿರುವ ಜೀವರಕ್ಷಕ ಸಂದೇಶವನ್ನು ದೇವರ ಪ್ರತಿಯೊಬ್ಬ ಶುಶ್ರೂಷಕನು ಸಾರಲೇಬೇಕು. ನಮ್ಮ ಕೆಲಸವು, ಅಪಾಯವನ್ನು ಮುಂಗಂಡು ಜನರನ್ನು ಕೂಗಿ ಎಚ್ಚರಿಸುವ ಕಾವಲುಗಾರನ ಕೆಲಸಕ್ಕೆ ಸಮವಾಗಿದೆ. ನಾಶನದಂಚಿನಲ್ಲಿರುವವರ ಮರಣದ ರಕ್ತಾಪರಾಧಕ್ಕೆ ನಾವು ಹೊಣೆಯಾಗಲು ಇಷ್ಟಪಡುವುದಿಲ್ಲ. (ಯೆಹೆ. 33:1-7) ಆದುದರಿಂದ, ನಾವು ಪಟ್ಟುಹಿಡಿದು ‘ವಾಕ್ಯವನ್ನು ಸಾರುತ್ತಾ’ ಇರುವುದು ಬಹಳ ಮಹತ್ವದ್ದಾಗಿದೆ!—2 ತಿಮೊಥೆಯ 4:1, 2, 5ನ್ನು ಓದಿ.

3 ನೀವು ಮಾಡುವ ಜೀವರಕ್ಷಕ ಶುಶ್ರೂಷೆಗೆ ಎದುರಾಗುವ ಅಡೆತಡೆಗಳನ್ನು ಹೇಗೆ ಜಯಿಸಬಲ್ಲಿರಿ? ಇನ್ನಷ್ಟು ಹೆಚ್ಚು ಜನರಿಗೆ ನೀವು ಹೇಗೆ ಸಹಾಯ ನೀಡಬಲ್ಲಿರಿ? ಇವನ್ನು ಈ ಲೇಖನವು ಚರ್ಚಿಸುವುದು. ಮುಂದಿನ ಲೇಖನವು, ಜೀವಾಧಾರ ಸತ್ಯಗಳನ್ನು ಕಲಿಸುವ ಕೌಶಲವನ್ನು ನೀವು ಹೇಗೆ ಬೆಳೆಸಿಕೊಳ್ಳಬಲ್ಲಿರಿ ಎಂಬುದನ್ನು ಚರ್ಚಿಸುವುದು. ಮೂರನೆಯ ಅಧ್ಯಯನ ಲೇಖನವು, ಲೋಕದೆಲ್ಲೆಡೆಯಿರುವ ರಾಜ್ಯಘೋಷಕರಿಂದ ಪಡೆದುಕೊಳ್ಳುತ್ತಿರುವ ಕೆಲವು ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ತಿಳಿಯಪಡಿಸುವುದು. ಆದರೆ ನಾವು ಈ ವಿಷಯಗಳನ್ನು ಪರಿಗಣಿಸುವ ಮೊದಲು ನಮ್ಮ ಸಮಯಗಳು ಏಕೆ ಇಷ್ಟು ಭೀಕರವಾಗಿವೆ ಎಂಬುದನ್ನು ವಿಮರ್ಶಿಸುವುದು ಉತ್ತಮವಾಗಿರುವುದು.

ಅನೇಕರಿಗೆ ನಿರೀಕ್ಷೆಯಿಲ್ಲದಿರಲು ಕಾರಣ

4 ನಾವು “ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿ”ಯಲ್ಲಿ ಜೀವಿಸುತ್ತಿದ್ದೇವೆ ಮತ್ತು ಅಂತ್ಯವು ಅತಿ ನಿಕಟವಾಗಿದೆ ಎಂದು ಲೋಕಘಟನೆಗಳು ಸೂಚಿಸುತ್ತವೆ. ಯೇಸು ಮತ್ತು ಅವನ ಶಿಷ್ಯರು ‘ಕಡೇ ದಿವಸಗಳಲ್ಲಿ’ ಸಂಭವಿಸುತ್ತದೆಂದು ಹೇಳಿದ ಘಟನೆಗಳನ್ನು ಮತ್ತು ಪರಿಸ್ಥಿತಿಗಳನ್ನು ಮಾನವಕುಲವು ಇಂದು ಅನುಭವಿಸುತ್ತಿದೆ. ಯುದ್ಧಗಳು, ಆಹಾರದ ಅಭಾವಗಳು, ಭೂಕಂಪಗಳು ಮತ್ತು ಇತರ ವಿಪತ್ತುಗಳು ಸೇರಿರುವ “ತೀವ್ರ ಯಾತನೆಗಳು” ಮಾನವರನ್ನು ಬಾಧಿಸುತ್ತಿವೆ. ಅನ್ಯಾಯ, ಸ್ವಾರ್ಥ ಮತ್ತು ಭಕ್ತಿಹೀನ ಮನೋಭಾವಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ. ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು ಪ್ರಯತ್ನಿಸುವ ಜನರಿಗೆ ಸಹ ಇವು ‘ಕಠಿನಕಾಲಗಳಾಗಿವೆ.’—ಮತ್ತಾ. 24:3, 6-8, 12, NW; 2 ತಿಮೊ. 3:1-5.

5 ಲೋಕಘಟನೆಗಳು ಈ ರೀತಿ ಹದಗೆಡುತ್ತಿರಲು ಕಾರಣವೇನೆಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಆದಕಾರಣ ಅನೇಕರು ತಮ್ಮ ಮತ್ತು ತಮ್ಮ ಕುಟುಂಬಗಳ ಸುರಕ್ಷೆಯ ಬಗ್ಗೆ ಚಿಂತಿತರಾಗಿದ್ದಾರೆ. ಪ್ರಿಯರ ಮರಣ ಇಲ್ಲವೆ ದುರಂತದ ಬರಸಿಡಿಲು ಅನೇಕರನ್ನು ಆಘಾತದ ದಾರುಣ ಸ್ಥಿತಿಗೆ ದೂಡಿದೆ. ಇಂಥ ಸಂಗತಿಗಳು ಏಕೆ ಸಂಭವಿಸುತ್ತವೆ ಮತ್ತು ಪರಿಹಾರವೆಲ್ಲಿದೆ ಎಂಬುದರ ಕುರಿತು ನಿಷ್ಕೃಷ್ಟ ಜ್ಞಾನ ಇಲ್ಲದಿರುವುದರಿಂದ ಈ ಜನರು ಯಾವುದೇ ನಿರೀಕ್ಷೆ ಇಲ್ಲದವರಾಗಿದ್ದಾರೆ.—ಎಫೆ. 2:12.

6 ಸುಳ್ಳುಧರ್ಮದ ಲೋಕ ಸಾಮ್ರಾಜ್ಯವಾದ ‘ಮಹಾ ಬಾಬೆಲ್‌’ ಮಾನವಕುಲಕ್ಕೆ ಯಾವ ರೀತಿಯ ಸಾಂತ್ವನವನ್ನೂ ನೀಡಿಲ್ಲ. ಆದರೆ, ಅದು ತನ್ನ ‘ಜಾರತ್ವವೆಂಬ ದ್ರಾಕ್ಷಾಮದ್ಯದ’ ಅಮಲಿನಿಂದ ಅಸಂಖ್ಯಾತ ಜನರು ಆಧ್ಯಾತ್ಮಿಕ ಗಲಿಬಿಲಿಯಲ್ಲಿ ತೂರಾಡುವಂತೆ ಮಾಡಿದೆ. ಇದಲ್ಲದೆ, ಸುಳ್ಳುಧರ್ಮವು ವೇಶ್ಯೆಯಂತೆ ವರ್ತಿಸುತ್ತ ‘ಭೂರಾಜರನ್ನು’ ಪಾಪಕ್ಕೆ ಪ್ರೇರಿಸಿ ತನ್ನ ಹದ್ದುಬಸ್ತಿನಲ್ಲಿಟ್ಟಿದೆ. ಜನರು ಪ್ರತಿಭಟಿಸದೆ ತಮ್ಮ ರಾಜಕೀಯ ಧುರೀಣರಿಗೆ ಅಧೀನರಾಗುವಂತೆ ಮಾಡಲು ಅದು ಸುಳ್ಳು ತತ್ತ್ವಗಳನ್ನೂ ಪ್ರೇತವ್ಯವಹಾರವನ್ನೂ ಬಳಸಿದೆ. ಹೀಗೆ ಸುಳ್ಳುಧರ್ಮವು ಅಧಿಕಾರಬಲ ಮತ್ತು ವರ್ಚಸ್ಸನ್ನು ಗಿಟ್ಟಿಸಿಕೊಂಡಿದೆ. ಆದರೆ, ಧಾರ್ಮಿಕ ಸತ್ಯವನ್ನು ಪೂರ್ಣವಾಗಿ ತ್ಯಜಿಸಿದೆ.—ಪ್ರಕ. 17:1, 2, 5, NW; 18:23.

7 ಮಾನವಕುಲದ ಬಹುಪಾಲು ಜನರು ನಾಶಕ್ಕೆ ನಡೆಸುವ ಅಗಲವಾದ ದಾರಿಯಲ್ಲಿ ಹೋಗುತ್ತಿದ್ದಾರೆ ಎಂದು ಯೇಸು ಹೇಳಿದನು. (ಮತ್ತಾ. 7:13, 14) ಕೆಲವರು ಆ ಅಗಲವಾದ ದಾರಿಯಲ್ಲಿ ಹೋಗುತ್ತಿರುವುದು ಬೈಬಲ್‌ ಬೋಧನೆಗಳನ್ನು ಬೇಕುಬೇಕೆಂದು ತಳ್ಳಿಹಾಕಿರುವುದರಿಂದ. ಆದರೆ ಇನ್ನೂ ಅನೇಕರು ಆ ಅಗಲವಾದ ದಾರಿಯಲ್ಲಿರುವುದು ವಂಚಿಸಲ್ಪಟ್ಟಿರುವ ಕಾರಣ. ಅಥವಾ ಯೆಹೋವನು ನಿಜವಾಗಿಯೂ ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತು ಧಾರ್ಮಿಕ ಮುಖಂಡರು ಅವರಿಗೆ ಏನನ್ನೂ ಕಲಿಸದೆ ಕತ್ತಲೆಯಲ್ಲಿ ಇಟ್ಟಿರುವುದರಿಂದಲೇ. ಇಂಥ ಜನರಿಗೆ, ತಮ್ಮ ಆ ಜೀವನಮಾರ್ಗವನ್ನು ಬಿಡಲು ಬೈಬಲಿನಿಂದ ಸ್ಪಷ್ಟ ಕಾರಣಗಳನ್ನು ತೋರಿಸಿಕೊಡುವಲ್ಲಿ ಪ್ರಾಯಶಃ ಕೆಲವರು ತಮ್ಮ ಮಾರ್ಗವನ್ನು ಬದಲಾಯಿಸಬಹುದು. ಆದರೆ ಯಾರು ಮಹಾ ಬಾಬೆಲನ್ನು ಬಿಟ್ಟುಬರದೆ ಬೈಬಲ್‌ ಮಟ್ಟಗಳನ್ನು ತಳ್ಳಿಹಾಕುತ್ತಿರುತ್ತಾರೊ ಅವರು ‘ಮಹಾ ಸಂಕಟದಲ್ಲಿ’ ಪಾರಾಗುವುದಿಲ್ಲ.—ಪ್ರಕ. 7:14.

“ಎಡೆಬಿಡದೆ” ಸಾರಿರಿ

8 ತನ್ನ ಹಿಂಬಾಲಕರು ಜನರಿಗೆ ರಾಜ್ಯದ ಸುವಾರ್ತೆಯನ್ನು ಸಾರಿ ಶಿಷ್ಯರನ್ನಾಗಿ ಮಾಡುವರೆಂದು ಯೇಸು ಹೇಳಿದನು. (ಮತ್ತಾ. 28:19, 20) ಆದುದರಿಂದ, ಸಾರುವ ಕಾರ್ಯದಲ್ಲಿ ಪಾಲ್ಗೊಳ್ಳುವುದು ದೇವರಿಗೆ ನಿಷ್ಠೆ ತೋರಿಸುವ ಸಂಗತಿಯಾಗಿದೆ ಎಂದು ಸತ್ಯ ಕ್ರೈಸ್ತರು ಸದಾ ಪರಿಗಣಿಸಿದ್ದಾರೆ. ಅಲ್ಲದೆ ತಮ್ಮ ಕ್ರೈಸ್ತ ನಂಬಿಕೆಯನ್ನು ವ್ಯಕ್ತಪಡಿಸುವ ವಿಧವೆಂದು ಎಣಿಸಿದ್ದಾರೆ. ಈ ಕಾರಣದಿಂದಲೇ, ಯೇಸುವಿನ ಆದಿ ಹಿಂಬಾಲಕರು ವಿರೋಧದ ಮಧ್ಯೆಯೂ ಸಾರುವುದನ್ನು ಮುಂದುವರಿಸಿದರು. ಅವರು, “[ಯೆಹೋವನ] ವಾಕ್ಯವನ್ನು ಧೈರ್ಯದಿಂದ ಹೇಳುವ ಹಾಗೆ” ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತಾ ಬಲಕ್ಕಾಗಿ ಆತನ ಮೇಲೆ ಹೊಂದಿಕೊಂಡರು. ಆ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ ಯೆಹೋವನು ಅವರ ಮೇಲೆ ಪವಿತ್ರಾತ್ಮವನ್ನು ಸುರಿಸಿದನು. ಈ ಮೂಲಕ ಅವರು ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು.—ಅ. ಕೃ. 4:18, 29-31.

9 ವಿರೋಧವು ಹೆಚ್ಚುತ್ತಾ ಹಿಂಸೆಗೆ ತಿರುಗಿದಾಗ ಯೇಸುವಿನ ಶಿಷ್ಯರು ಸುವಾರ್ತೆಯನ್ನು ಸಾರಬೇಕೆಂಬ ತಮ್ಮ ದೃಢನಿರ್ಧಾರದಿಂದ ಹಿಂದೆಸರಿದರೋ? ಎಂದಿಗೂ ಇಲ್ಲ. ಅಪೊಸ್ತಲರ ಸಾರುವ ಕಾರ್ಯದಿಂದ ರೊಚ್ಚಿಗೆದ್ದ ಯೆಹೂದಿ ಧಾರ್ಮಿಕ ನಾಯಕರು ಅವರನ್ನು ಬಂಧಿಸಿ, ಬೆದರಿಸಿ, ಥಳಿಸಿದರು. ಆದರೂ, ಅಪೊಸ್ತಲರು “ಎಡೆಬಿಡದೆ . . . ಕ್ರಿಸ್ತನಾದ ಯೇಸುವಿನ ವಿಷಯವಾದ ಶುಭವರ್ತಮಾನವನ್ನು ಸಾರುತ್ತಾ ಇದ್ದರು.” ‘ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕು’ ಎಂಬುದನ್ನು ಅವರು ಸ್ಪಷ್ಟವಾಗಿ ಮನಗಂಡಿದ್ದರು.—ಅ. ಕೃ. 5:28, 29, 40-42.

10 ಇಂದಿನ ದೇವರ ಸೇವಕರಲ್ಲಿ ಹೆಚ್ಚಿನವರಿಗೆ ತಮ್ಮ ಸಾರುವ ಚಟುವಟಿಕೆಗಳ ನಿಮಿತ್ತ ಹೊಡೆತಗಳನ್ನು ಅಥವಾ ಸೆರೆವಾಸವನ್ನು ತಾಳಿಕೊಳ್ಳುವ ಸಂದರ್ಭವು ಬಂದಿರುವುದಿಲ್ಲ. ಆದರೂ, ಸತ್ಯ ಕ್ರೈಸ್ತರೆಲ್ಲರೂ ಒಂದಲ್ಲ ಒಂದು ರೀತಿಯ ಕಷ್ಟಪರೀಕ್ಷೆಯನ್ನು ಎದುರಿಸುತ್ತಾರೆ. ದೃಷ್ಟಾಂತಕ್ಕೆ, ನಿಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಯ ಕಾರಣ ಜನಪ್ರಿಯವಲ್ಲದ ನಡವಳಿಕೆಯನ್ನು ನೀವು ಅನುಸರಿಸಬಹುದು. ಇದರಿಂದ ನೀವು ಇತರರಿಗಿಂತ ಭಿನ್ನವಾಗಿ ಕಾಣಬಹುದು. ನೀವು ಬೈಬಲ್‌ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಕಾರಣ ನಿಮ್ಮ ಸಹೋದ್ಯೋಗಿಗಳು, ಸಹಪಾಠಿಗಳು ಅಥವಾ ನೆರೆಯವರು ನಿಮ್ಮನ್ನು ವಿಚಿತ್ರ ವ್ಯಕ್ತಿಯೆಂದು ಭಾವಿಸಬಹುದು. ಆದರೂ, ಅವರ ನಕಾರಾತ್ಮಕ ಪ್ರತಿಕ್ರಿಯೆ ನಿಮ್ಮನ್ನು ಎದೆಗುಂದಿಸಬಾರದು. ಲೋಕವು ಆಧ್ಯಾತ್ಮಿಕ ಅಂಧಕಾರದಲ್ಲಿದ್ದರೂ ಕ್ರೈಸ್ತರು “ಹೊಳೆಯುವ ಜ್ಯೋತಿರ್ಮಂಡಲಗಳಂತೆ” ಇರಬೇಕು. (ಫಿಲಿ. 2:16) ಆಗ ಪ್ರಾಯಶಃ ಕೆಲವು ಯಥಾರ್ಥ ಜನರು ನೀವು ಮಾಡುವ ಒಳ್ಳೇ ಕ್ರಿಯೆಗಳನ್ನು ನೋಡಿ ಮಾನ್ಯಮಾಡಿ ಯೆಹೋವನನ್ನು ಕೊಂಡಾಡುವರು.—ಮತ್ತಾಯ 5:16ನ್ನು ಓದಿ.

11 ರಾಜ್ಯ ಸಂದೇಶವನ್ನು ಸಾರುತ್ತ ಇರಲು ನಮಗೆ ಧೈರ್ಯ ಅತ್ಯವಶ್ಯ. ಕೆಲವು ಜನರು, ಅಷ್ಟೇಕೆ ಸಂಬಂಧಿಗಳು ಸಹ ನಿಮ್ಮನ್ನು ಪರಿಹಾಸ್ಯ ಮಾಡಬಹುದು ಇಲ್ಲವೆ ಇತರ ವಿಧಗಳಲ್ಲಿ ನಿಮ್ಮನ್ನು ನಿರುತ್ತೇಜಿಸಬಹುದು. (ಮತ್ತಾ. 10:36) ಅಪೊಸ್ತಲ ಪೌಲನು ನಂಬಿಗಸ್ತಿಕೆಯಿಂದ ಸಾರುವ ಕಾರ್ಯದಲ್ಲಿ ಪಾಲ್ಗೊಂಡದ್ದರಿಂದ ಒಂದಕ್ಕಿಂತ ಹೆಚ್ಚು ಬಾರಿ ಏಟು ತಿಂದನು. ಆದರೆ ಅಂಥ ವಿರೋಧಕ್ಕೆ ಅವನು ಪ್ರತಿವರ್ತಿಸಿದ ರೀತಿಯನ್ನು ಗಮನಿಸಿ: ‘ನಮಗೆ ಹಿಂಸೆಯೂ ಅವಮಾನವೂ ಮೊದಲು ಸಂಭವಿಸಿದರೂ ನಾವು ನಮ್ಮ ದೇವರ ಮೂಲಕ ಧೈರ್ಯಗೊಂಡು ಬಹು ವಿರೋಧವನ್ನು ಅನುಭವಿಸುವವರಾಗಿ ನಿಮಗೆ ದೇವರ ಸುವಾರ್ತೆಯನ್ನು ತಿಳಿಸಿದೆವು.’ (1 ಥೆಸ. 2:2) ಪೌಲನನ್ನು ಹಿಡಿದು ಅವನ ವಸ್ತ್ರಗಳನ್ನು ಹರಿದು ಚಡಿಗಳಿಂದ ಬಾರಿಸಿ ಸೆರೆಮನೆಗೆ ದೂಡಿದ ಬಳಿಕವೂ ಸುವಾರ್ತೆ ಸಾರುತ್ತ ಮುಂದುವರಿಯುವುದು ಅವನಿಗೆ ದೊಡ್ಡ ಸವಾಲಾಗಿತ್ತು. (ಅ. ಕೃ. 16:19-24) ಸಾರುವುದನ್ನು ನಿಲ್ಲಿಸದೆ ಮುಂದುವರಿಸಲು ಅವನಿಗೆ ಯಾವುದು ಧೈರ್ಯವನ್ನು ಕೊಟ್ಟಿತು? ದೇವದತ್ತ ಸಾರುವ ನೇಮಕವನ್ನು ಪೂರ್ಣಗೊಳಿಸಲು ಅವನಲ್ಲಿದ್ದ ಪ್ರಬಲ ಬಯಕೆಯೇ.—1 ಕೊರಿಂ. 9:16.

12 ಜನರು ಹೆಚ್ಚಾಗಿ ಮನೆಗಳಲ್ಲಿ ಇಲ್ಲದಿರುವ ಅಥವಾ ರಾಜ್ಯ ಸಂದೇಶಕ್ಕೆ ಅಷ್ಟಾಗಿ ಪ್ರತಿಕ್ರಿಯೆ ತೋರಿಸದಿರುವ ಟೆರಿಟೊರಿಗಳಲ್ಲಿ ಸಾರುವಾಗ ಸಹ ನಮ್ಮ ಹುರುಪನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿರಬಲ್ಲದು. ಅಂಥ ಸನ್ನಿವೇಶಗಳಲ್ಲಿ ನಾವು ಏನು ಮಾಡಬಲ್ಲೆವು? ಆಗ ಅನೌಪಚಾರಿಕವಾಗಿ ಜನರಿಗೆ ಸಾಕ್ಷಿ ನೀಡಲು ನಾವು ಹೆಚ್ಚು ಧೈರ್ಯವನ್ನು ತಂದುಕೊಳ್ಳುವದು ಆವಶ್ಯಕವಾಗಿರಬಹುದು. ನಾವು ಬೇರೆ ಬೇರೆ ಸಮಯಗಳಲ್ಲಿ ಇಲ್ಲವೆ ದಿನಗಳಲ್ಲಿ ಕೂಡ ಸಾರಬೇಕಾಗಬಹುದು. ಅಥವಾ ಹೆಚ್ಚು ಜನರನ್ನು ಸಂಪರ್ಕಿಸಸಾಧ್ಯವಿರುವ ಟೆರಿಟೊರಿಗಳಲ್ಲಿ ಸೇವೆ ಮಾಡಬೇಕಾಗಬಹುದು.—ಯೋಹಾನ 4:7-15ನ್ನು ಹೋಲಿಸಿ; ಅ. ಕೃ. 16:13; 17:17.

13 ಇನ್ನೂ ಅನೇಕರು ವೃದ್ಧಾಪ್ಯ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾರುವ ಕಾರ್ಯದಲ್ಲಿ ತಮ್ಮಿಂದಾದಷ್ಟು ಮಾಡುವುದನ್ನು ಇದು ಕುಂಠಿತಗೊಳಿಸಬಹುದು. ಈ ಸಮಸ್ಯೆಯನ್ನು ನೀವು ಎದುರಿಸುತ್ತಿರುವಲ್ಲಿ ನಿರಾಶರಾಗಬೇಡಿ. ಯೆಹೋವನು ನಿಮ್ಮ ಇತಿಮಿತಿಗಳನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ. ಈ ಪರಿಸ್ಥಿತಿಯಲ್ಲೂ ನೀವು ಏನು ಮಾಡುತ್ತೀರೋ ಅದನ್ನು ಆತನು ಬಹಳ ಗಣ್ಯಮಾಡುತ್ತಾನೆ. (2 ಕೊರಿಂಥ 8:12ನ್ನು ಓದಿ.) ಆದುದರಿಂದ ವಿರೋಧ, ಔದಾಸೀನ್ಯ ಅಥವಾ ಅನಾರೋಗ್ಯದಂಥ ಯಾವುದೇ ಸಮಸ್ಯೆಗಳನ್ನು ನೀವು ಎದುರಿಸುತ್ತಿರುವುದಾದರೂ, ಇತರರಿಗೆ ಸುವಾರ್ತೆಯನ್ನು ಸಾರಲು ನಿಮ್ಮಿಂದಾಗುವುದೆಲ್ಲವನ್ನು ಮಾಡಿರಿ.—ಜ್ಞಾನೋ. 3:27; ಮಾರ್ಕ 12:41-44ನ್ನು ಹೋಲಿಸಿ.

‘ನಿಮ್ಮ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರ್ರಿ’

14 ಅಪೊಸ್ತಲ ಪೌಲನು ತನ್ನ ಶುಶ್ರೂಷೆಯನ್ನು ತುಂಬ ಶ್ರದ್ಧೆಯಿಂದ ಮಾಡಿದನು. ಹಾಗೆ ಮಾಡುವಂತೆ ಜೊತೆ ವಿಶ್ವಾಸಿಗಳನ್ನೂ ಪ್ರೋತ್ಸಾಹಿಸಿದನು. (ಅ. ಕೃ. 20:20, 21; 1 ಕೊರಿಂ. 11:1) ಈ ರೀತಿ ಪೌಲನು ವಿಶೇಷ ಪ್ರೋತ್ಸಾಹನೆ ನೀಡಿದವರಲ್ಲಿ ಒಂದನೆಯ ಶತಮಾನದ ಕ್ರೈಸ್ತ ಅರ್ಖಿಪ್ಪನು ಒಬ್ಬನಾಗಿದ್ದನು. ಪೌಲನು ಬರೆದುದು: “ಅರ್ಖಿಪ್ಪನಿಗೆ—ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ನೆರವೇರಿಸುವದಕ್ಕೆ ಎಚ್ಚರವಾಗಿರಬೇಕೆಂದು ಹೇಳಿರಿ.” (ಕೊಲೊ. 4:17) ಈ ಅರ್ಖಿಪ್ಪನು ಯಾರೆಂದಾಗಲಿ ಅವನ ಸನ್ನಿವೇಶ ಹೇಗಿತ್ತೆಂದಾಗಲಿ ನಮಗೆ ತಿಳಿದಿಲ್ಲವಾದರೂ, ಅವನು ಸಾರುವ ನೇಮಕವನ್ನು ಹೊಂದಿದ್ದನು ಎಂಬುದಂತೂ ಸುವ್ಯಕ್ತ. ನೀವು ಸಮರ್ಪಿತ ಕ್ರೈಸ್ತರಾಗಿರುವಲ್ಲಿ ನೀವೂ ಆ ಶುಶ್ರೂಷೆಯ ನೇಮಕವನ್ನು ಹೊಂದಿದ್ದೀರಿ. ಹಾಗಾದರೆ ಅದನ್ನು ಪೂರ್ಣವಾಗಿ ನೆರವೇರಿಸಲು ನೀವು ಎಚ್ಚರವಹಿಸುತ್ತಿದ್ದೀರೋ?

15 ದೀಕ್ಷಾಸ್ನಾನಕ್ಕೆ ಮುಂಚೆ ನಾವು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತಾ ಯೆಹೋವನಿಗೆ ನಮ್ಮ ಜೀವಗಳನ್ನು ಸಮರ್ಪಿಸಿದೆವು. ಆತನ ಚಿತ್ತವನ್ನು ಮಾಡುವ ದೃಢತೆ ಆಗ ನಮ್ಮಲ್ಲಿತ್ತೆಂದು ಇದರರ್ಥ. ಆದುದರಿಂದ ನಾವು ಈಗ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ‘ನಿಜವಾಗಿಯೂ ದೇವರ ಚಿತ್ತವನ್ನು ಮಾಡುವುದೇ ನನ್ನ ಜೀವನದಲ್ಲಿ ಅತಿ ಪ್ರಾಮುಖ್ಯವಾಗಿದೆಯೋ?’ ನಮ್ಮ ಕುಟುಂಬವನ್ನು ನೋಡಿಕೊಳ್ಳುವಂಥ ಅನೇಕ ರೀತಿಯ ಜವಾಬ್ದಾರಿಗಳು ನಮಗಿರಬಹುದು ನಿಜ. ನಾವು ಅವನ್ನು ಪೂರೈಸಬೇಕೆಂದು ಯೆಹೋವನು ಸಹ ಬಯಸುತ್ತಾನೆ. (1 ತಿಮೊ. 5:8) ಆದರೆ ಮಿಕ್ಕ ಸಮಯ ಮತ್ತು ಶಕ್ತಿಯನ್ನು ನಾವು ಹೇಗೆ ಬಳಸುತ್ತೇವೆ? ನಮ್ಮ ಜೀವನದಲ್ಲಿ ಯಾವುದಕ್ಕೆ ಪ್ರಥಮ ಸ್ಥಾನ ಕೊಡುತ್ತೇವೆ?—2 ಕೊರಿಂಥ 5:14, 15ನ್ನು ಓದಿ.

16 ಯೂನಿವರ್ಸಿಟಿ ಡಿಗ್ರಿ ಮಾಡಲು ಯೋಚಿಸುತ್ತಿರುವ ಸ್ನಾತ ಹದಿವಯಸ್ಕರು ನೀವಾಗಿದ್ದೀರೋ? ಪ್ರಾಯಶಃ ನಿಮ್ಮ ಹೆಗಲ ಮೇಲೆ ಕುಟುಂಬ ಜವಾಬ್ದಾರಿಯ ಭಾರಿ ಹೊರೆ ಇನ್ನೂ ಬಂದಿರಲಿಕ್ಕಿಲ್ಲ. ಹಾಗಿರುವಲ್ಲಿ, ನೀವು ಮುಂದೇನು ಮಾಡಬೇಕೆಂದಿದ್ದೀರಿ? ನೀವು ಯಾವ ನಿರ್ಣಯಗಳನ್ನು ಮಾಡುವಲ್ಲಿ ಯೆಹೋವನ ಚಿತ್ತವನ್ನು ಮಾಡಲು ಕೊಟ್ಟಿರುವ ವಚನವನ್ನು ಉತ್ತಮವಾಗಿ ಪೂರೈಸಲು ಶಕ್ತರಾಗುವಿರಿ? ನೀವು ಯೂನಿವರ್ಸಿಟಿ ಡಿಗ್ರಿ ಮಾಡುವುದಕ್ಕೆ ಬದಲಾಗಿ ಪಯನೀಯರ್‌ ಸೇವೆ ಮಾಡಲು ನಿಮ್ಮ ಕೆಲಸಗಳನ್ನು ಸಂಘಟಿಸಬಲ್ಲಿರೋ? ಅನೇಕರು ಪಯನೀಯರ್‌ ಸೇವೆಯನ್ನು ಮಾಡಲು ತಮ್ಮ ಕೆಲಸಕಾರ್ಯಗಳನ್ನು ಸಂಘಟಿಸಿದ್ದಾರೆ. ಇದರ ಪರಿಣಾಮವಾಗಿ ಅವರು ಹೇರಳ ಸಂತೋಷ ಮತ್ತು ಸಂತೃಪ್ತಿಯನ್ನು ಸವಿದಿದ್ದಾರೆ.—ಕೀರ್ತ. 110:3; ಪ್ರಸಂ. 12:1.

17 ನೀವು ಒಬ್ಬ ಯುವ ವ್ಯಕ್ತಿಯಾಗಿದ್ದೀರೋ? ಪೂರ್ಣಾವಧಿಯ ಉದ್ಯೋಗವಿದ್ದರೂ ಕೇವಲ ನಿಮ್ಮನ್ನು ನೋಡಿಕೊಳ್ಳುವುದನ್ನು ಬಿಟ್ಟು ಬೇರೆ ಹೆಚ್ಚಿನ ಜವಾಬ್ದಾರಿಗಳು ನಿಮಗೆ ಇಲ್ಲದಿರಬಹುದು. ಸಮಯವು ಅನುಮತಿಸುವಷ್ಟರ ಮಟ್ಟಿಗೆ ಸಭಾ ಚಟುವಟಿಕೆಗಳಲ್ಲಿ ಭಾಗವಹಿಸಿ ನೀವು ಸಂತೋಷಪಡುತ್ತೀರಿ ಎಂಬುದು ನಿಸ್ಸಂಶಯ. ಆದರೆ ಅದಕ್ಕಿಂತಲೂ ಹೆಚ್ಚು ಸಂತೋಷವನ್ನು ಪಡೆಯುವ ಸಂದರ್ಭ ನಿಮಗಿರಬಲ್ಲದೊ? ಶುಶ್ರೂಷೆಯಲ್ಲಿ ಇನ್ನಷ್ಟು ಹೆಚ್ಚು ಪಾಲ್ಗೊಳ್ಳುವುದರ ಕುರಿತು ನೀವು ಯೋಚಿಸಿದ್ದೀರೋ? (ಕೀರ್ತ. 34:8; ಜ್ಞಾನೋ. 10:22) ಜೀವದಾಯಕ ಸತ್ಯ ಸಂದೇಶವನ್ನು ಪ್ರತಿಯೊಬ್ಬರಿಗೂ ತಲಪಿಸಲಿಕ್ಕಾಗಿ ಕೆಲವು ಟೆರಿಟೊರಿಗಳಲ್ಲಿ ಸಾಕಷ್ಟು ಕೆಲಸವನ್ನು ಇನ್ನೂ ಮಾಡಲಿಕ್ಕಿದೆ. ಈ ಕಾರಣದಿಂದ, ಹೆಚ್ಚು ರಾಜ್ಯ ಘೋಷಕರ ಅವಶ್ಯವಿರುವ ಪ್ರದೇಶದಲ್ಲಿ ಸೇವೆಮಾಡಲು ನೀವು ನಿಮ್ಮ ಜೀವನದಲ್ಲಿ ಹೊಂದಾಣಿಕೆಗಳನ್ನು ಮಾಡಬಲ್ಲಿರೊ?—1 ತಿಮೊಥೆಯ 6:6-8ನ್ನು ಓದಿ.

18 ಅಮೆರಿಕದ ಕೆವನ್‌ ಮತ್ತು ಎಲೀನ ಎಂಬವರ ಉದಾಹರಣೆಯನ್ನು ಪರಿಗಣಿಸಿ. * ಆ ಪ್ರದೇಶದ ನವದಂಪತಿಗಳ ಸಾಮಾನ್ಯ ಬಯಕೆಯಂತೆ, ತಾವು ಸಹ ಒಂದು ಮನೆಯನ್ನು ಖರೀದಿಸಲೇಬೇಕೆಂದು ಅವರು ಯೋಚಿಸಿದರು. ಇಬ್ಬರೂ ಪೂರ್ಣಾವಧಿಯ ಉದ್ಯೋಗದಲ್ಲಿದ್ದುದರಿಂದ ಅವರ ಬದುಕು ಸುಖಸೌಕರ್ಯಗಳಿಂದ ಕೂಡಿತ್ತು. ಆದರೆ, ಅವರ ಉದ್ಯೋಗದ ಕಾರ್ಯತಖ್ತೆ ಮತ್ತು ಮನೆಕೆಲಸಗಳ ಕಾರಣ ಕ್ಷೇತ್ರ ಸೇವೆಗೆ ಹೆಚ್ಚು ಸಮಯವೇ ಸಿಗುತ್ತಿರಲಿಲ್ಲ. ತಮ್ಮೆಲ್ಲಾ ಸಮಯ, ಶಕ್ತಿಯನ್ನು ಕೆಲಸಕಾರ್ಯಗಳಿಗಾಗಿಯೇ ವ್ಯಯಿಸುತ್ತಿದ್ದೇವೆಂದು ಅವರು ಮನಗಂಡರು. ಒಂದು ಸಂತುಷ್ಟ ಪಯನೀಯರ್‌ ದಂಪತಿಗಳ ಸರಳ ಜೀವನಶೈಲಿಯನ್ನು ಅವಲೋಕಿಸಿದಾಗ, ಕೆವನ್‌ ಮತ್ತು ಎಲೀನ ತಮ್ಮ ಜೀವಿತದ ಆದ್ಯತೆಯನ್ನು ಬದಲಾಯಿಸಲು ನಿರ್ಣಯಿಸಿದರು. ಸರಿಯಾದ ನಿರ್ಣಯವನ್ನು ತೆಗೆದುಕೊಳ್ಳಲು ಸಹಾಯ ಮಾಡುವಂತೆ ಯೆಹೋವನಿಗೆ ಪ್ರಾರ್ಥಿಸಿದರು. ಬಳಿಕ ತಮ್ಮ ಮನೆಯನ್ನು ಮಾರಿ ಒಂದು ಅಪಾರ್ಟ್‌ಮಂಟ್‌ನಲ್ಲಿ ವಾಸಿಸಿದರು. ಎಲೀನ ತನ್ನ ಉದ್ಯೋಗ ವೇಳೆಯನ್ನು ಕಡಿಮೆ ಮಾಡಿ ಪಯನೀಯರ್‌ ಸೇವೆ ಆರಂಭಿಸಿದಳು. ತನ್ನ ಪತ್ನಿಗೆ ಸೇವೆಯಲ್ಲಿ ಸಿಕ್ಕಿದ ಉತ್ತಮ ಅನುಭವಗಳಿಂದ ಉತ್ತೇಜಿತನಾದ ಕೆವನ್‌ ಪೂರ್ಣ ಸಮಯದ ಉದ್ಯೋಗವನ್ನು ಬಿಟ್ಟು ಪಯನೀಯರ್‌ ಸೇವೆಯನ್ನು ಆರಂಭಿಸಿದನು. ಸ್ವಲ್ಪ ಸಮಯಾನಂತರ, ಹೆಚ್ಚು ರಾಜ್ಯ ಘೋಷಕರ ಅವಶ್ಯವಿದ್ದ ದಕ್ಷಿಣ ಅಮೇರಿಕದ ದೇಶವೊಂದಕ್ಕೆ ಅವರು ಸ್ಥಳಾಂತರಿಸಿದರು. “ನಮ್ಮ ದಾಂಪತ್ಯಜೀವನದಲ್ಲಿ ಯಾವಾಗಲೂ ಸಂತೋಷವಿತ್ತು. ಆದರೆ, ನಾವು ಆಧ್ಯಾತ್ಮಿಕ ಗುರಿಗಳನ್ನು ತಲಪಪ್ರಯತ್ನಿಸಿದಾಗಲಂತೂ ಆ ಸಂತೋಷವು ಇನ್ನಷ್ಟು ಹೆಚ್ಚಾಯಿತು” ಎನ್ನುತ್ತಾನೆ ಕೆವನ್‌.—ಮತ್ತಾಯ 6:19-22ನ್ನು ಓದಿ.

19 ಸುವಾರ್ತೆಯನ್ನು ಸಾರುವುದೇ ಇಂದು ಭೂಮಿಯ ಮೇಲಿರುವ ಎಲ್ಲ ಕೆಲಸಕ್ಕಿಂತ ಅತಿ ಪ್ರಾಮುಖ್ಯವಾಗಿದೆ. (ಪ್ರಕ. 14:6, 7) ಇದು ಯೆಹೋವನ ನಾಮದ ಪವಿತ್ರೀಕರಣಕ್ಕೆ ಸಹಾಯ ನೀಡುತ್ತದೆ. (ಮತ್ತಾ. 6:9) ಪ್ರತಿ ವರ್ಷ ಬೈಬಲಿನ ಸಂದೇಶವನ್ನು ಸ್ವೀಕರಿಸುವ ಸಾವಿರಾರು ಮಂದಿಯ ಬಾಳು ಸುಧಾರಣೆಗೊಳ್ಳುತ್ತದೆ ಮತ್ತು ಇದು ಅವರನ್ನು ರಕ್ಷಣೆಗೆ ನಡೆಸಬಲ್ಲದು. ಆದರೆ, “ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” ಎಂದು ಅಪೊಸ್ತಲ ಪೌಲನು ಕೇಳಿದನು. (ರೋಮಾ. 10:14, 15) ಹೌದು, ಯಾರೂ ಸಾರದಿರುವಲ್ಲಿ ಕೇಳುವುದಾದರೂ ಹೇಗೆ? ಆದುದರಿಂದ, ನಿಮ್ಮ ಶುಶ್ರೂಷೆಯನ್ನು ಪೂರೈಸಲು ನಿಮಗೆ ಸಾಧ್ಯವಿರುವುದನ್ನೆಲ್ಲ ಮಾಡಲು ದೃಢಚಿತ್ತರಾಗಿರ್ರಿ.

20 ಜನರು ಈ ಕಠಿನ ಕಾಲಗಳ ಪ್ರಮುಖತೆಯನ್ನು ಮತ್ತು ತಾವು ಮಾಡುವ ನಿರ್ಣಯಗಳ ಅಂತ್ಯಪರಿಣಾಮಗಳನ್ನು ತಿಳಿದುಕೊಳ್ಳುವಂತೆ ನೀವು ಸಹಾಯಮಾಡಬಲ್ಲ ಇನ್ನೊಂದು ವಿಧವು ನಿಮ್ಮ ಬೋಧನಾ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಮೂಲಕವೇ. ಇದನ್ನು ನೀವು ಹೇಗೆ ಮಾಡಬಲ್ಲಿರೆಂದು ಮುಂದಿನ ಲೇಖನವು ಚರ್ಚಿಸುತ್ತದೆ.

[ಪಾದಟಿಪ್ಪಣಿ]

^ ಪ್ಯಾರ. 23 ಹೆಸರುಗಳನ್ನು ಬದಲಾಯಿಸಲಾಗಿದೆ.

ನೀವು ಹೇಗೆ ಉತ್ತರಿಸುವಿರಿ?

• ಕ್ರೈಸ್ತರಿಗೆ ಮಾನವಕುಲದ ಕಡೆಗೆ ಯಾವ ಜವಾಬ್ದಾರಿಯಿದೆ?

• ನಮ್ಮ ಸಾರುವ ಕೆಲಸಕ್ಕೆ ಬರುವ ಅಡೆತಡೆಗಳನ್ನು ನಾವು ಹೇಗೆ ನಿಭಾಯಿಸಬೇಕು?

• ನಾವು ಹೊಂದಿರುವ ಸೇವೆಯನ್ನು ಹೇಗೆ ನೆರವೇರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

1, 2 ಕ್ರೈಸ್ತರಿಗೆ ಮಾನವಕುಲದ ವಿಷಯದಲ್ಲಿ ಯಾವ ಜವಾಬ್ದಾರಿಯಿದೆ?

3. ಈ ಲೇಖನವೂ ಮುಂದಿನ ಎರಡು ಲೇಖನಗಳೂ ಯಾವ ವಿಷಯಗಳನ್ನು ಚರ್ಚಿಸುವುವು?

4, 5. ಮಾನವಕುಲವು ಏನನ್ನು ಅನುಭವಿಸುತ್ತಿದೆ ಮತ್ತು ಅನೇಕರ ಪ್ರತಿಕ್ರಿಯೆಯೇನು?

6. ‘ಮಹಾ ಬಾಬೆಲ್‌’ ತನ್ನ ಹಿಂಬಾಲಕರಿಗೆ ಸಹಾಯ ನೀಡಲು ಅಶಕ್ತಳಾಗಿರುವುದೇಕೆ?

7. ಬಹುಪಾಲು ಜನರ ಮುಂದೆ ಯಾವ ಪ್ರತೀಕ್ಷೆಯಿದೆ ಮತ್ತು ಕೆಲವರಿಗೆ ಹೇಗೆ ಸಹಾಯ ನೀಡಬಹುದು?

8, 9. ಒಂದನೆಯ ಶತಮಾನದ ಕ್ರೈಸ್ತರು ವಿರೋಧವನ್ನು ಎದುರಿಸಿದಾಗ ಹೇಗೆ ಪ್ರತಿವರ್ತಿಸಿದರು ಮತ್ತು ಏಕೆ?

10. ಇಂದು ಕ್ರೈಸ್ತರು ಯಾವ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವರ ಉತ್ತಮ ನಡತೆಯ ಪರಿಣಾಮವೇನಾಗಬಹುದು?

11. (ಎ) ಸಾರುವ ಕಾರ್ಯಕ್ಕೆ ಕೆಲವರು ಹೇಗೆ ಪ್ರತಿಕ್ರಿಯಿಸಬಹುದು? (ಬಿ) ಅಪೊಸ್ತಲ ಪೌಲನು ಯಾವ ರೀತಿಯ ವಿರೋಧವನ್ನು ಎದುರಿಸಿದನು ಮತ್ತು ಅದಕ್ಕೆ ಅವನು ಹೇಗೆ ಪ್ರತಿಕ್ರಿಯಿಸಿದನು?

12, 13. ಕೆಲವರು ಯಾವ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಅವನ್ನು ನಿಭಾಯಿಸಲು ಹೇಗೆ ಪ್ರಯತ್ನಿಸಿದ್ದಾರೆ?

14. ಅಪೊಸ್ತಲ ಪೌಲನು ಜೊತೆಕ್ರೈಸ್ತರಿಗೆ ಯಾವ ಮಾದರಿಯನ್ನಿಟ್ಟನು ಮತ್ತು ಅವನು ಯಾವ ಸಲಹೆಯನ್ನು ಕೊಟ್ಟನು?

15. ಕ್ರೈಸ್ತ ಸಮರ್ಪಣೆಯಲ್ಲಿ ಏನು ಒಳಗೂಡಿದೆ ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

16, 17. ಯುವ ಕ್ರೈಸ್ತರು ಇಲ್ಲವೆ ಕೆಲವೇ ಜವಾಬ್ದಾರಿಗಳಿರುವವರು ಏನನ್ನು ಪರಿಗಣಿಸಬಹುದು?

18. ಯುವ ದಂಪತಿಯೊಂದು ಯಾವ ಹೊಂದಾಣಿಕೆಗಳನ್ನು ಮಾಡಿತು ಮತ್ತು ಫಲಿತಾಂಶಗಳೇನು?

19, 20. ಸುವಾರ್ತೆ ಸಾರುವಿಕೆಯು ಇಂದು ಅತಿ ಪ್ರಾಮುಖ್ಯ ಕೆಲಸವಾಗಿದೆ ಏಕೆ?

[ಪುಟ 5ರಲ್ಲಿರುವ ಚಿತ್ರ]

ವಿರೋಧದ ಮಧ್ಯೆ ಸಾರಲು ಧೈರ್ಯವು ಅಗತ್ಯ

[ಪುಟ 7ರಲ್ಲಿರುವ ಚಿತ್ರ]

ಜನರು ಮನೆಯಲ್ಲಿ ಸಿಗುವುದು ವಿರಳವಾಗಿರುವಲ್ಲಿ ನೀವು ಏನು ಮಾಡಬಲ್ಲಿರಿ?