ಕಾವಲಿನಬುರುಜು ಪತ್ರಿಕೆಯ ನೂತನ ಅಧ್ಯಯನ ಆವೃತ್ತಿ
ಕಾವಲಿನಬುರುಜು ಪತ್ರಿಕೆಯ ನೂತನ ಅಧ್ಯಯನ ಆವೃತ್ತಿ
ನೀವು ಓದುತ್ತಿರುವ ಪತ್ರಿಕೆಯು ಕಾವಲಿನಬುರುಜುವಿನ ಅಧ್ಯಯನ ಆವೃತ್ತಿಯ ಮೊತ್ತಮೊದಲ ಸಂಚಿಕೆಯಾಗಿದೆ. ಈ ಪತ್ರಿಕೆಯ ಕೆಲವೊಂದು ಹೊಸ ವೈಶಿಷ್ಟ್ಯಗಳನ್ನು ತಿಳಿಸಲು ನಾವು ಬಯಸುತ್ತೇವೆ.
ಈ ಅಧ್ಯಯನ ಆವೃತ್ತಿಯನ್ನು ಯೆಹೋವನ ಸಾಕ್ಷಿಗಳಿಗಾಗಿ ಹಾಗೂ ಪ್ರಗತಿ ಮಾಡುತ್ತಿರುವ ಬೈಬಲ್ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಲಾಗುತ್ತಿದೆ. ಇದನ್ನು ತಿಂಗಳಿಗೊಮ್ಮೆ ಪ್ರಕಟಿಸಲಾಗುವುದು ಮತ್ತು ಇದರಲ್ಲಿ ನಾಲ್ಕರಿಂದ ಐದು ಅಧ್ಯಯನ ಲೇಖನಗಳು ಇರುವುವು. ಪತ್ರಿಕೆಯ ಮುಖಪುಟದಲ್ಲಿ ಈ ಅಧ್ಯಯನ ಲೇಖನಗಳ ಚರ್ಚೆಗಾಗಿ ಶೆಡ್ಯೂಲನ್ನು ಕೊಡಲಾಗಿದೆ. ಈ ಅಧ್ಯಯನ ಆವೃತ್ತಿಯನ್ನು ಕ್ಷೇತ್ರ ಸೇವೆಯಲ್ಲಿ ನೀಡುವುದಿಲ್ಲವಾದ್ದರಿಂದ, ಕಾವಲಿನಬುರುಜು ಪತ್ರಿಕೆಯ ಸಾರ್ವಜನಿಕ ಆವೃತ್ತಿಯಂತೆ ಇದರ ಮುಖಪುಟ ಚಿತ್ರವಿನ್ಯಾಸವು ಪ್ರತಿ ಸಂಚಿಕೆಗೂ ಬದಲಾಗುವುದಿಲ್ಲ.
ಈ ಪತ್ರಿಕೆಯ 2ನೇ ಪುಟದಲ್ಲಿ ಉಪಲೇಖನಗಳ ಪರಿವಿಡಿಯನ್ನು ಕೊಡಲಾಗಿದೆ. ಅದರೊಂದಿಗೆ ಪ್ರತಿಯೊಂದು ಅಧ್ಯಯನ ಲೇಖನದ ಅಥವಾ ಲೇಖನಮಾಲೆಯ ಉದ್ದೇಶವನ್ನು ತಿಳಿಸುವ ಬಲು ಉಪಯುಕ್ತವಾದ ಸಂಕ್ಷಿಪ್ತ ಸಾರಾಂಶವನ್ನೂ ನೀವು ಕಾಣುವಿರಿ. ಈ ವೈಶಿಷ್ಟ್ಯವು ಕಾವಲಿನಬುರುಜು ಅಧ್ಯಯನ ನಿರ್ವಾಹಕರಿಗೆ ಅನುಕೂಲವಾಗಲಿದ್ದು, ಅವರು ಸಭಾ ಕೂಟದಲ್ಲಿ ಅಧ್ಯಯನ ಲೇಖನಗಳನ್ನು ಅರ್ಥಭರಿತವಾಗಿ ಚರ್ಚಿಸುವಂತೆ ತಯಾರಿಮಾಡಲು ಸಹಾಯಮಾಡುವುದು.
ಅಧ್ಯಯನ ಲೇಖನಗಳು ಮೊದಲಿಗಿಂತಲೂ ಈಗ ಸ್ವಲ್ಪ ಮೊಟುಕಾಗಿರುವುದನ್ನು ನೀವು ಗಮನಿಸಬಹುದು. ಇದರಿಂದಾಗಿ, ಕಾವಲಿನಬುರುಜು ಅಧ್ಯಯನ ನಡೆಸುವಾಗ ಮುಖ್ಯ ಶಾಸ್ತ್ರವಚನಗಳನ್ನು ಪರಿಗಣಿಸಲು ಹೆಚ್ಚು ಸಮಯವಿರುತ್ತದೆ. ಲೇಖನಗಳಲ್ಲಿ ಉಲ್ಲೇಖಿಸಿರುವ ಎಲ್ಲ ಶಾಸ್ತ್ರವಚನಗಳನ್ನು ಪ್ರತಿ ವಾರವೂ ತೆರೆದು ಓದುವಂತೆ ನಾವು ನಿಮ್ಮನ್ನು ಸೌಹಾರ್ದಯುತವಾಗಿ ಪ್ರೋತ್ಸಾಹಿಸುತ್ತೇವೆ. ಕೆಲವು ವಚನಗಳನ್ನು “ಓದಿ” ಎಂದು ಸೂಚಿಸಲಾಗಿದೆ. ಈ ವಚನಗಳನ್ನು ಕಾವಲಿನಬುರುಜು ಅಧ್ಯಯನದ ಸಮಯದಲ್ಲಿ ಓದಿ ಚರ್ಚಿಸಬೇಕು. ಸಮಯವಿರುವಲ್ಲಿ ಇತರ ವಚನಗಳನ್ನು ಸಹ ಓದಬಹುದಾಗಿದೆ. ಕೆಲವು ಲೇಖನಗಳಲ್ಲಿ ವಚನಗಳನ್ನು “ಹೋಲಿಸಿ” ಎಂದು ಸೂಚಿಸಲಾಗಿರುವುದನ್ನು ನೀವು ಕಾಣಬಹುದು. ಅಂಥ ವಚನಗಳು ಪ್ಯಾರಗ್ರಾಫ್ನ ಮುಖ್ಯ ವಿಷಯವನ್ನು ನೇರವಾಗಿ ಸಮರ್ಥಿಸುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ಅವನ್ನು ಸಭಾಕೂಟದಲ್ಲಿ ಓದಲಾಗುವುದಿಲ್ಲ. ಆದರೂ “ಹೋಲಿಸಿ” ಎಂದು ಸೂಚಿಸಲಾಗಿರುವ ವಚನಗಳು ಹೆಚ್ಚಿನ ಆಸಕ್ತಿಕರ ಮಾಹಿತಿಯನ್ನು ಹೊಂದಿರುತ್ತವೆ. ಅಲ್ಲದೆ, ಚರ್ಚಿಸಲ್ಪಡುತ್ತಿರುವ ವಿಷಯಗಳನ್ನು ಅದು ಪರೋಕ್ಷವಾಗಿ ಬೆಂಬಲಿಸಲೂಬಹುದು. ಕಾವಲಿನಬುರುಜು ಅಧ್ಯಯನಕ್ಕಾಗಿ ನೀವು ತಯಾರಿಸುವಾಗ ಆ ವಚನಗಳನ್ನು ಸಹ ಪರೀಕ್ಷಿಸುವಂತೆ ನಾವು ನಿಮ್ಮನ್ನು ಉತ್ತೇಜಿಸುತ್ತೇವೆ. ಬಹುಶಃ ನೀವು ಅದನ್ನು ನಿಮ್ಮ ಹೇಳಿಕೆಗಳಲ್ಲಿ ಒಳಗೂಡಿಸಬಹುದು.
ಇನ್ನು ಮುಂದೆ ಕಾವಲಿನಬುರುಜು ಪತ್ರಿಕೆಯಲ್ಲಿ ವಾರ್ಷಿಕ ವರದಿಯನ್ನು ಪ್ರಕಟಿಸಲಾಗುವುದಿಲ್ಲ. ಅದನ್ನು ಇಸವಿ 2008ರಿಂದ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಮತ್ತು ಯಿಯರ್ಬುಕ್ನಲ್ಲಿ ಪ್ರಕಟಿಸಲಾಗುವುದು. ಆದರೆ, ಮೇಲೆ ತಿಳಿಸಲಾದಂತೆ ಅಧ್ಯಯನ ಆವೃತ್ತಿಯಲ್ಲಿ ಇತರ ಉಪಲೇಖನಗಳೂ ಇರುವುವು. ಇಂಥ ಅನೇಕ ಉಪಲೇಖನಗಳನ್ನು ಸಭಾಕೂಟಗಳಲ್ಲಿ ಚರ್ಚಿಸುವುದಿಲ್ಲವಾದರೂ ಅವುಗಳನ್ನು ಶ್ರದ್ಧೆಯಿಂದ ಓದುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ. ಏಕೆಂದರೆ, ಅವು ಸಹ ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನಿಂದ’ ಬರುವ ಆಧ್ಯಾತ್ಮಿಕ ಆಹಾರವನ್ನು ಹೊಂದಿವೆ.—ಮತ್ತಾ. 24:45-47.
ಕೊನೆಯ ವಿಷಯವೇನೆಂದರೆ, ಕಾವಲಿನಬುರುಜು ಪತ್ರಿಕೆಯ ಅಧ್ಯಯನ ಆವೃತ್ತಿ ಮತ್ತು ಸಾರ್ವಜನಿಕ ಆವೃತ್ತಿಗಳೆರಡೂ ಬೇರೆ ಬೇರೆ ಪತ್ರಿಕೆಗಳಲ್ಲ. ಅವೆರಡು ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಒಂದೇ ಹೆಸರುಳ್ಳ ಪತ್ರಿಕೆಗಳಾಗಿವೆ. ಈ ಪತ್ರಿಕೆಗಳ ಪುಟ 2ರಲ್ಲಿ ಕಾವಲಿನಬುರುಜುವಿನ ಉದ್ದೇಶವನ್ನು ವಿವರಿಸುವ ತದ್ರೂಪದ ಪ್ಯಾರವಿದೆ. ವಾರ್ಷಿಕವಾಗಿ ಬರುವ ಬೌಂಡ್ ವಾಲ್ಯೂಮ್ನಲ್ಲಿ ಈ ಎರಡು ಆವೃತ್ತಿಗಳು ಇರುವುವು. ಮಾತ್ರವಲ್ಲ, ಅಧ್ಯಯನ ಆವೃತ್ತಿಯಲ್ಲಿ ಪ್ರಕಟಿಸಲಾಗುವ “ನಿಮಗೆ ನೆನಪಿದೆಯೇ?” ಲೇಖನದಲ್ಲಿ ಎರಡೂ ಆವೃತ್ತಿಗಳಲ್ಲಿರುವ ವಿಷಯಗಳು ಸೇರಿರುವುವು.
ಇಸವಿ 1879ರಿಂದಲೂ ಕಾವಲಿನಬುರುಜು ಪತ್ರಿಕೆಯು ಯುದ್ಧ, ಆರ್ಥಿಕ ಬಿಕ್ಕಟ್ಟು, ಹಿಂಸೆ ಮುಂತಾದ ಎಲ್ಲ ಸಮಯಗಳಲ್ಲಿಯೂ ನಂಬಿಗಸ್ತಿಕೆಯಿಂದ ದೇವರ ರಾಜ್ಯದ ಕುರಿತು ಸತ್ಯಗಳನ್ನು ಘೋಷಿಸಿದೆ. ಯೆಹೋವನ ಆಶೀರ್ವಾದದಿಂದ ತನ್ನ ವಿನೂತನ ಶೈಲಿಯಲ್ಲಿಯೂ ಹೀಗೆಯೇ ಘೋಷಿಸುತ್ತ ಮುಂದುವರಿಯಲಿ ಎಂದು ನಾವು ಪ್ರಾರ್ಥಿಸುತ್ತೇವೆ. ಅಲ್ಲದೆ, ಓದುಗರಾದ ನೀವು ಕಾವಲಿನಬುರುಜುವಿನ ಈ ನೂತನ ಅಧ್ಯಯನ ಆವೃತ್ತಿಯನ್ನು ಸದುಪಯೋಗಿಸುವಾಗ ಯೆಹೋವನು ನಿಮ್ಮನ್ನು ಆಶೀರ್ವದಿಸಲಿ ಎಂಬುದು ಸಹ ನಮ್ಮ ಪ್ರಾರ್ಥನೆಯಾಗಿದೆ.