ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ!
ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ!
“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾ. 6:10.
ಯೇಸು ಕ್ರಿಸ್ತನು ಕೊಟ್ಟ ಪರ್ವತ ಪ್ರಸಂಗದಲ್ಲಿ, ಅವನ ಮುಖ್ಯ ಬೋಧನೆಯನ್ನು ಸಾರಾಂಶಿಸಿದ ಒಂದು ಮಾದರಿ ಪ್ರಾರ್ಥನೆ ಇತ್ತು. ಅವನು ತನ್ನ ಹಿಂಬಾಲಕರಿಗೆ ಹೀಗೆ ಪ್ರಾರ್ಥಿಸುವಂತೆ ಕಲಿಸಿದನು: “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.” (ಮತ್ತಾ. 6:9-13) ಯೇಸು, “ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿದನು.” (ಲೂಕ 8:1) ಕ್ರಿಸ್ತನು ತನ್ನ ಹಿಂಬಾಲಕರಿಗೆ ಹೀಗೆ ಉತ್ತೇಜಿಸಿದನು: “ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ.” (ಮತ್ತಾ. 6:33) ಈ ಅಧ್ಯಯನ ಮಾಡುತ್ತಿರುವಾಗ, ಈ ವಿಷಯವನ್ನು ನಿಮ್ಮ ಶುಶ್ರೂಷೆಯಲ್ಲಿ ಯಾವೆಲ್ಲ ರೀತಿಗಳಲ್ಲಿ ಬಳಸಬಹುದೆಂಬುದರ ಕುರಿತು ಯೋಚಿಸಿರಿ. ದೃಷ್ಟಾಂತಕ್ಕಾಗಿ ಈ ಪ್ರಶ್ನೆಗಳಿಗೆ ನೀವು ಉತ್ತರ ಕಂಡುಕೊಳ್ಳಬಹುದು: ರಾಜ್ಯ ಸಂದೇಶವು ಎಷ್ಟು ಪ್ರಾಮುಖ್ಯ? ಮಾನವಕುಲಕ್ಕೆ ಯಾವುದರಿಂದ ಬಿಡುಗಡೆ ಬೇಕು? ದೇವರ ರಾಜ್ಯವು ಹೇಗೆ ಬಿಡುಗಡೆ ತರುವುದು?
2 ಯೇಸು ಮುಂತಿಳಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾ. 24:14) ದೇವರ ರಾಜ್ಯದ ಸುವಾರ್ತೆಯು ಅತಿ ಮಹತ್ವದ್ದಾಗಿದೆ. ಹೌದು, ಅದು ಜಗತ್ತಿನಲ್ಲೇ ಅತಿ ಪ್ರಾಮುಖ್ಯ ಸಂದೇಶ! ಲೋಕವ್ಯಾಪಕವಾಗಿ 1,00,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಸುಮಾರು 70 ಲಕ್ಷ ಯೆಹೋವನ ಸಾಕ್ಷಿಗಳು ಅಭೂತಪೂರ್ವವಾದ ಈ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾ, ಆ ರಾಜ್ಯ ಸ್ಥಾಪನೆಯಾಗಿದೆ ಎಂದು ಇತರರಿಗೆ ತಿಳಿಸುತ್ತಿದ್ದಾರೆ. ದೇವರು ಸ್ವರ್ಗದಲ್ಲಿ ರಾಜ್ಯವನ್ನು ಸ್ಥಾಪಿಸಿರುವುದು ಒಂದು ಸುವಾರ್ತೆಯಾಗಿದೆ ಏಕೆಂದರೆ ಅದು ಭೂವ್ಯವಹಾರಗಳ ಮೇಲೆ ಬೇಗನೆ ಪೂರ್ಣ ನಿಯಂತ್ರಣ ಸಾಧಿಸಲಿದೆ. ಆ ರಾಜ್ಯದಾಳಿಕೆಯಡಿ, ಯೆಹೋವನ ಚಿತ್ತವು ಪರಲೋಕದಲ್ಲಿ ನೆರವೇರುತ್ತಿರುವಂತೆ ಭೂಲೋಕದಲ್ಲಿಯೂ ನೆರವೇರಲಿದೆ.
3 ದೇವರ ಚಿತ್ತ ಭೂಮಿಯಲ್ಲಿ ನೆರವೇರುವಾಗ ಮಾನವಕುಲವು ಏನನ್ನು ಅನುಭವಿಸುವುದು? ಯೆಹೋವನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.” (ಪ್ರಕ. 21:4) ಬಾಧ್ಯತೆಯಾಗಿ ಬಂದ ಪಾಪ ಮತ್ತು ಅಪರಿಪೂರ್ಣತೆಗಳ ಕಾರಣ ಜನರು ಕಾಯಿಲೆಬೀಳುವುದೂ ಇಲ್ಲ ಸಾಯುವುದೂ ಇಲ್ಲ. ದೇವರ ಸ್ಮರಣೆಯಲ್ಲಿರುವ ಮೃತಜನರಿಗೂ ಸದಾಕಾಲ ಜೀವಿಸುವ ಅವಕಾಶ ಸಿಗುವುದು. ‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದು’ ಎಂದು ಬೈಬಲ್ ವಾಗ್ದಾನಿಸುತ್ತದೆ. (ಅ. ಕೃ. 24:15) ಆಗ ಯುದ್ಧ, ಕಾಯಿಲೆ, ಹಸಿವೆ ಇರುವುದಿಲ್ಲ. ಅಲ್ಲದೆ ಈ ಭೂಮಿ ಪರದೈಸಾಗುವುದು. ಇಂದು ಅಪಾಯಕಾರಿ ಆಗಿರುವ ಪ್ರಾಣಿಗಳು ಸಹ ಆಗ ಮಾನವರೊಂದಿಗೆ ಹಾಗೂ ಇತರ ಪ್ರಾಣಿಗಳೊಂದಿಗೆ ಶಾಂತಿಯಿಂದಿರುವವು.—ಕೀರ್ತ. 46:9; 72:16; ಯೆಶಾ. 11:6-9; 33:24; ಲೂಕ 23:43.
4 ರಾಜ್ಯಾಳಿಕೆಯು ತರುವ ಇಂಥ ಅತ್ಯದ್ಭುತ ಆಶೀರ್ವಾದಗಳಿಂದಾಗಿಯೇ ಆ ಕಾಲದ ಜೀವನದ ಕುರಿತು ಬೈಬಲಿನ ಪ್ರವಾದನೆಯೊಂದು ಈ ನೆಮ್ಮದಿದಾಯಕ ಮಾತುಗಳನ್ನಾಡುವುದು ಅಚ್ಚರಿಯೇನಲ್ಲ: “ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು.” ಆದರೆ ಕೇಡುಮಾಡುವವರ ಕುರಿತೇನು? ಬೈಬಲ್ ಮುಂತಿಳಿಸುವುದು: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಅವನಿದ್ದ ಸ್ಥಳದಲ್ಲಿ ಎಷ್ಟು ವಿಚಾರಿಸಿದರೂ ಅವನು ಸಿಕ್ಕುವದೇ ಇಲ್ಲ.” ಆದರೆ “ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.”—ಕೀರ್ತ. 37:9-11.
5 ಇದೆಲ್ಲವೂ ನಡೆಯಬೇಕಾದರೆ, ಸದ್ಯದ ವ್ಯವಸ್ಥೆ ಮತ್ತು ಅದರಲ್ಲಿರುವ ಕಿತ್ತಾಡುವ ಸರಕಾರಗಳು, ಧರ್ಮಗಳು ಹಾಗೂ ವಾಣಿಜ್ಯ ವ್ಯವಸ್ಥೆಗಳು ತೆಗೆದುಹಾಕಲ್ಪಡಬೇಕು. ಆ ಸ್ವರ್ಗೀಯ ಸರಕಾರವು ಇದನ್ನೇ ಮಾಡಲಿದೆ. ಪ್ರವಾದಿ ದಾನಿಯೇಲನು ಪ್ರೇರಿತನಾಗಿ ಮುಂತಿಳಿಸಿದ್ದು: “ಆ [ಈಗ ಇರುವ] ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು [ಸ್ವರ್ಗದಲ್ಲಿ] ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ [ಸದ್ಯದ] ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿ. 2:44) ಒಂದು ಹೊಸ ಸ್ವರ್ಗೀಯ ಸರಕಾರವಾದ ದೇವರ ರಾಜ್ಯವು ಆಗ ಒಂದು ಹೊಸ ಭೂಸಮಾಜದ ಮೇಲೆ ಆಳುವುದು. ಆ ಸಮಯದಲ್ಲಿ, ‘ನೂತನಾಕಾಶಮಂಡಲವೂ ನೂತನಭೂಮಂಡಲವೂ’ ಇರುವುದು ಮತ್ತು “ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.
ಬಿಡುಗಡೆ—ಇಂದು ಹೆಚ್ಚು ಅಗತ್ಯ
6 ಸೈತಾನ ಮತ್ತು ಆದಾಮ ಹವ್ವರು ಸರಿ ಯಾವುದು ತಪ್ಪು ಯಾವುದೆಂಬುದನ್ನು ಸ್ವತಃ ನಿರ್ಣಯಿಸಲು ಬಯಸುತ್ತಾ ದೇವರ ವಿರುದ್ಧ ದಂಗೆಯೆದ್ದ ಸಮಯದಿಂದ ಮಾನವ ಕುಟುಂಬವು ವಿನಾಶದ ಹಾದಿಯನ್ನು ಹಿಡಿಯಿತು. 1,600ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ ನಡೆದ ಭೌಗೋಳಿಕ ಜಲಪ್ರಳಯದ ಮುಂಚೆ, ‘ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿದ್ದು, ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿತ್ತು.’ (ಆದಿ. 6:5) ಆ ಜಲಪ್ರಳಯವಾಗಿ ಸುಮಾರು 1,300 ವರ್ಷಗಳ ಬಳಿಕ ಪರಿಸ್ಥಿತಿಗಳು ಎಷ್ಟು ಕೆಟ್ಟದ್ದಾಗಿದ್ದವೆಂದರೆ ಸೊಲೊಮೋನನು ಬರೆದದ್ದು: “ಇದನ್ನು ನೋಡಿ ಇನ್ನೂ ಜೀವದಿಂದಿರುವವರಿಗಿಂತ ಸತ್ತವರೇ ಮೇಲೆಂದು ಹೊಗಳಿದೆನು; ಹೌದು, ಈ ಉಭಯರಿಗಿಂತಲೂ ಇನ್ನು ಹುಟ್ಟದೆ ಲೋಕದಲ್ಲಿನ ಅಧರ್ಮವನ್ನು ನೋಡದೆ ಇರುವವನೇ ಲೇಸೆಂದು ತಿಳಿದುಕೊಂಡೆನು.” (ಪ್ರಸಂ. 4:2, 3) ಅಲ್ಲಿಂದ ಇನ್ನೂ 3,000 ವರ್ಷಗಳ ಈಚೆಗೆ ಅಂದರೆ ನಮ್ಮೀ ದಿನಗಳಲ್ಲೂ ಕೆಟ್ಟತನ ಜಾಸ್ತಿಯಾಗುತ್ತಾ ಇದೆ.
7 ಕೆಟ್ಟತನವು ಸಾವಿರಾರು ವರ್ಷಗಳಿಂದಲೂ ಇದೆಯೆಂಬುದು ನಿಜವಾದರೂ, ದೇವರ ರಾಜ್ಯದ ಮೂಲಕ ಬಿಡುಗಡೆಯು ಎಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಏಕೆಂದರೆ ಕಳೆದ 100 ವರ್ಷಗಳಲ್ಲಿ ಪರಿಸ್ಥಿತಿಗಳು ಹಿಂದೆಂದಿಗಿಂತಲೂ ಕೆಟ್ಟದ್ದಾಗಿವೆ ಮತ್ತು ಇನ್ನೂ ಹದಗೆಡುತ್ತಿವೆ. ಉದಾಹರಣೆಗಾಗಿ, ವರ್ಲ್ಡ್ವಾಚ್ ಇನ್ಸ್ಟಿಟ್ಯೂಟ್ ಹೀಗೆ ವರದಿಸುತ್ತದೆ:
“ಕ್ರಿ.ಶ. ಪ್ರಥಮ ಶತಮಾನದಿಂದ 1899ರ ವರೆಗಿನ ಎಲ್ಲ ಯುದ್ಧಗಳಲ್ಲಿ ಸತ್ತವರಿಗಿಂತಲೂ ಮೂರು ಪಟ್ಟು ಹೆಚ್ಚು ಜನರು [20ನೇ] ಶತಮಾನದಲ್ಲಿ ನಡೆದ ಯುದ್ಧಗಳಿಂದ ಸತ್ತರು.” 1914ರಿಂದಂತೂ 10 ಕೋಟಿಗಿಂತಲೂ ಹೆಚ್ಚು ಮಂದಿ ಕೇವಲ ಯುದ್ಧಗಳಿಗೇ ಆಹುತಿಯಾದರು! IIನೇ ವಿಶ್ವ ಯುದ್ಧದಲ್ಲಿ 6 ಕೋಟಿಗಳಷ್ಟು ಜನರು ಮಡಿದರೆಂಬುದು ಒಂದು ವಿಶ್ವಕೋಶದ ಅಂದಾಜು. ಇಂದು ಕೆಲವು ರಾಷ್ಟ್ರಗಳ ಬಳಿ ನ್ಯೂಕ್ಲಿಯರ್ ಶಸ್ತ್ರಾಸ್ತ್ರಗಳಿರುವುದರಿಂದ, ಲೋಕದ ಜನಸಂಖ್ಯೆಯ ಬಹು ದೊಡ್ಡ ಭಾಗಗಳನ್ನೇ ಅಳಿಸಿಹಾಕುವ ಸಾಮರ್ಥ್ಯ ಈಗ ಮಾನವರಿಗಿದೆ. ವಿಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಮುನ್ನಡೆಗಳ ಮಧ್ಯೆಯೂ, ಪ್ರತಿ ವರ್ಷ ಈಗಲೂ ಸುಮಾರು 50 ಲಕ್ಷ ಮಕ್ಕಳು ಹಸಿವೆಯಿಂದ ಮರಣಕ್ಕೀಡಾಗುತ್ತಿದ್ದಾರೆ.—ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 9ನೇ ಅಧ್ಯಾಯ ನೋಡಿ.8 ಕೆಟ್ಟತನಕ್ಕೆ ಕಡಿವಾಣ ಹಾಕುವ ಮಾನವ ಪ್ರಯತ್ನಗಳು ನೆಲಕಚ್ಚಿವೆ. ಈ ಲೋಕದ ರಾಜಕೀಯ, ವಾಣಿಜ್ಯ ಹಾಗೂ ಧಾರ್ಮಿಕ ಸಂಸ್ಥೆಗಳು ಶಾಂತಿ, ಸಮೃದ್ಧಿ ಹಾಗೂ ಆರೋಗ್ಯವೆಂಬ ಮಾನವರ ಮೂಲಭೂತ ಅಗತ್ಯಗಳನ್ನು ಎಂದೂ ಪೂರೈಸಿಲ್ಲ. ಇಂದು ಮಾನವಕುಲದ ಮುಂದಿರುವ ಬೆಟ್ಟದಂಥ ಸಮಸ್ಯೆಗಳನ್ನು ಬಗೆಹರಿಸುವ ಬದಲು ಈ ಸಂಸ್ಥೆಗಳು ಅವುಗಳನ್ನು ಇನ್ನಷ್ಟು ಎತ್ತರಕ್ಕೇರಿಸಿವೆ. “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲ . . . ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು” ಎಂಬೀ ಮಾತುಗಳ ಸತ್ಯತೆಯನ್ನು ಸಾವಿರಾರು ವರ್ಷಗಳ ಮಾನವಾಳ್ವಿಕೆಯು ಸಾಬೀತುಪಡಿಸಿದೆ. (ಯೆರೆ. 10:23) ಹೌದು, ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂ. 8:9) ಅಷ್ಟುಮಾತ್ರವಲ್ಲದೆ, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆ.”—ರೋಮಾ. 8:22.
9 ನಮ್ಮ ಸಮಯಗಳ ಕುರಿತಾಗಿ ಬೈಬಲ್ ಮುಂತಿಳಿಸಿದ್ದು: ‘ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವು.’ ಮಾನವಾಳ್ವಿಕೆಯಿರುವ ಕಡೇ ದಿವಸಗಳಲ್ಲಿನ ಪರಿಸ್ಥಿತಿಗಳನ್ನು ವರ್ಣಿಸಿದ ಬಳಿಕ ಆ ಪ್ರವಾದನೆ ತಿಳಿಸುವುದು: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.” (2 ತಿಮೊಥೆಯ 3:1-5, 13 ಓದಿ.) ಹೀಗಾಗುವುದೆಂದು ಕ್ರೈಸ್ತರಿಗೆ ತಿಳಿದಿದೆ ಏಕೆಂದರೆ “ಲೋಕವೆಲ್ಲವು ಕೆಡುಕನ [ಸೈತಾನನ] ವಶದಲ್ಲಿ ಬಿದ್ದಿದೆ.” (1 ಯೋಹಾ. 5:19) ಆದರೆ ಶುಭವಾರ್ತೆ ಏನೆಂದರೆ ದೇವರು ತನ್ನನ್ನು ಪ್ರೀತಿಸುವವರನ್ನು ಬೇಗನೆ ವಿಮೋಚಿಸಲಿದ್ದಾನೆ. ದಿನದಿಂದ ದಿನಕ್ಕೆ ಕೆಡುತ್ತಾ ಹೋಗುತ್ತಿರುವ ಈ ಲೋಕದಿಂದ ಅವರಿಗೆ ಬಿಡುಗಡೆ ಸಿಗಲಿದೆ.
ಬಿಡುಗಡೆಯ ಏಕೈಕ ಭರವಸಾರ್ಹ ಮೂಲ
10 ಬಿಡುಗಡೆಯ ಏಕೈಕ ಭರವಸಾರ್ಹ ಮೂಲನು ಯೆಹೋವನು ಎಂದು ಸುವಾರ್ತೆ ಸಾರುವಾಗ ನಿಮ್ಮ ಕೇಳುಗರಿಗೆ ವಿವರಿಸಿರಿ. ಆತನೊಬ್ಬನಿಗೆ ಮಾತ್ರ ತನ್ನ ಸೇವಕರನ್ನು ಯಾವುದೇ ಕೆಟ್ಟ ಪರಿಸ್ಥಿತಿಯಿಂದ ಬಿಡಿಸುವ ಶಕ್ತಿ ಹಾಗೂ ಮನಸ್ಸು ಇದೆ. (ಅ. ಕೃ. 4:24, 31; ಪ್ರಕ. 4:11) ಯೆಹೋವನು ತನ್ನ ಜನರನ್ನು ಖಂಡಿತ ಬಿಡಿಸುವನು ಮತ್ತು ತನ್ನ ಉದ್ದೇಶಗಳನ್ನು ಪೂರೈಸುವನು ಎಂದು ನಾವು ನಿಶ್ಚಯದಿಂದಿರಬಲ್ಲೆವು, ಏಕೆಂದರೆ “ನಾನು ಸಂಕಲ್ಪಿಸಿದ್ದೇ ನೆರವೇರುವದು” ಎಂದಾತನು ಪ್ರತಿಜ್ಞೆಮಾಡಿದ್ದಾನೆ. ಆತನ ಮಾತು “ವ್ಯರ್ಥವಾಗಿ ಹಿಂದಿರುಗುವುದಿಲ್ಲ.”—ಯೆಶಾಯ 14:24, 25; 55:10, 11 ಓದಿ.
11 ಯೆಹೋವನು ದುಷ್ಟರ ಮೇಲೆ ತೀರ್ಪನ್ನು ಜಾರಿಗೊಳಿಸುವಾಗ ತನ್ನ ಸೇವಕರನ್ನು ವಿಮೋಚಿಸುವನೆಂಬ ಖಾತ್ರಿ ಕೊಟ್ಟಿದ್ದಾನೆ. ಕಠೋರ ಪಾಪಿಗಳೊಂದಿಗೆ ಧೈರ್ಯದಿಂದ ಮಾತಾಡಲು ಪ್ರವಾದಿ ಯೆರೆಮೀಯನನ್ನು ಕಳುಹಿಸುವಾಗ ದೇವರು ಅವನಿಗಂದದ್ದು: “ಅಂಜಬೇಡ.” ಏಕೆಂದರೆ “ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು.” (ಯೆರೆ. 1:8) ಅಂತೆಯೇ ದುಷ್ಟ ಸೊದೋಮ್ ಗೊಮೋರ ಪಟ್ಟಣಗಳನ್ನು ಯೆಹೋವನು ನಾಶಮಾಡಲಿದ್ದಾಗ ಲೋಟನನ್ನೂ ಅವನ ಕುಟುಂಬವನ್ನೂ ಆ ಕ್ಷೇತ್ರದಿಂದ ಸುರಕ್ಷಿತವಾಗಿ ಹೊರತರಲು ಇಬ್ಬರು ದೇವದೂತರನ್ನು ಕಳುಹಿಸಿದನು. ಅನಂತರವೇ ‘ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿದನು.’—ಆದಿ. 19:15, 24, 25.
12 ಯೆಹೋವನು ತನ್ನ ಚಿತ್ತ ಮಾಡುವವರನ್ನು ಭೂವ್ಯಾಪಕ ಮಟ್ಟದಲ್ಲೂ ವಿಮೋಚಿಸುವನು. ಪುರಾತನಕಾಲದ ದುಷ್ಟ ಲೋಕವನ್ನು ಜಲಪ್ರಳಯದಲ್ಲಿ ನಾಶಮಾಡಿದಾಗ ಆತನು, “ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.” (2 ಪೇತ್ರ 2:5) ಯೆಹೋವನು ಸದ್ಯದ ದುಷ್ಟ ಲೋಕವನ್ನು ನಾಶಮಾಡುವಾಗ ಯಥಾರ್ಥವಂತರನ್ನು ಪುನಃ ಒಮ್ಮೆ ವಿಮೋಚಿಸುವನು. ಈ ಕಾರಣದಿಂದಲೇ ಆತನ ವಾಕ್ಯವು ತಿಳಿಸುವುದು: “ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ, ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫ. 2:3) ಈ ಲೋಕವ್ಯಾಪಕ ನಾಶನದಿಂದಾಗಿ “ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು” ಮತ್ತು “ನಿರ್ದೋಷಿಗಳು” ಭೂಮಿಯಲ್ಲಿ “ನೆಲೆಯಾಗಿರುವರು.”—ಜ್ಞಾನೋ. 2:21, 22.
13 ಆದರೆ ದೇವರ ಸೇವಕರಲ್ಲಿ ಅನೇಕಾನೇಕರು ಈಗಾಗಲೇ ಕಾಯಿಲೆ, ಹಿಂಸೆ ಇತ್ಯಾದಿಗಳಿಂದ ಮೃತಪಟ್ಟಿದ್ದಾರೆ. (ಮತ್ತಾ. 24:9) ಇವರೆಲ್ಲರಿಗೆ ಹೇಗೆ ಬಿಡುಗಡೆಯಾಗುವುದು? ಈ ಹಿಂದೆ ತಿಳಿಸಲಾದಂತೆ, ‘ನೀತಿವಂತರಿಗೆ ಪುನರುತ್ಥಾನವಾಗುವುದು.’ (ಅ. ಕೃ. 24:15) ಯೆಹೋವನು ತನ್ನ ಸೇವಕರನ್ನು ಬಿಡುಗಡೆಗೊಳಿಸುವುದರಿಂದ ಯಾವುದೂ ತಡೆಯಲಾರದು ಎಂಬುದನ್ನು ತಿಳಿಯುವುದು ಎಷ್ಟು ನೆಮ್ಮದಿ ಕೊಡುತ್ತದೆ!
ನೀತಿಯ ಸರ್ಕಾರ
14 ಯೆಹೋವನ ಸ್ವರ್ಗೀಯ ರಾಜ್ಯವು ನೀತಿಯ ಸರ್ಕಾರವಾಗಿದೆ ಎಂದು ಶುಶ್ರೂಷೆಯಲ್ಲಿ ನೀವು ವಿವರಿಸಬಹುದು. ಇದು ನೀತಿಯ ಸರ್ಕಾರವಾಗಿದೆ ಏಕೆಂದರೆ ದೇವರ ಅತ್ಯದ್ಭುತ ಗುಣಗಳಾದ ನ್ಯಾಯ, ನೀತಿ ಹಾಗೂ ಪ್ರೀತಿಯನ್ನು ಅದು ಪ್ರತಿಬಿಂಬಿಸುತ್ತದೆ. (ಧರ್ಮೋ. 32:4; 1 ಯೋಹಾ. 4:8) ಭೂಮಿಯನ್ನು ಆಳಲು ಪೂರ್ಣವಾಗಿ ಸಮರ್ಥನಾದ ಯೇಸು ಕ್ರಿಸ್ತನಿಗೆ ದೇವರು ಆ ರಾಜ್ಯವನ್ನು ಒಪ್ಪಿಸಿದ್ದಾನೆ. 1,44,000 ಮಂದಿ ಅಭಿಷಿಕ್ತ ಕ್ರೈಸ್ತರನ್ನು ಭೂಮಿಯಿಂದ ಕೊಂಡು, ಸ್ವರ್ಗೀಯ ಜೀವನಕ್ಕೆ ಎಬ್ಬಿಸಿ ಅವರು ಭೂವ್ಯವಹಾರಗಳ ನಿರ್ವಹಣೆಯಲ್ಲಿ ಕ್ರಿಸ್ತನೊಂದಿಗೆ ಬಾಧ್ಯಸ್ಥರಾಗಬೇಕೆಂದೂ ಯೆಹೋವನು ಉದ್ದೇಶಿಸಿದ್ದನು.—ಪ್ರಕ. 14:1-5.
15 ಯೇಸು ಮತ್ತು 1,44,000 ಮಂದಿಯ ಆಳ್ವಿಕೆಗೂ ಅಪರಿಪೂರ್ಣ ಮಾನವರ ಆಳ್ವಿಕೆಗೂ ಎಷ್ಟು ಅಜಗಜಾಂತರವಿರುವುದು! ಈ ವ್ಯವಸ್ಥೆಯ ಅಧಿಪತಿಗಳು ಅನೇಕವೇಳೆ ಕ್ರೂರಿಗಳಾಗಿದ್ದು, ತಮ್ಮ ಪ್ರಜೆಗಳನ್ನು ಯುದ್ಧಗಳಿಗೆ ನಡೆಸಿರುವುದರಿಂದ ಕೋಟಿಗಟ್ಟಲೆ ಜನರು ಹತಿಸಲ್ಪಟ್ಟಿದ್ದಾರೆ. ಆದುದರಿಂದ ‘ಸಹಾಯಮಾಡ ಶಕ್ತರಲ್ಲದ’ ಮಾನವರಲ್ಲಿ ನಾವು ಭರವಸೆ ಇಡಬಾರದೆಂದು ಬೈಬಲ್ ನೀಡುವ ಸಲಹೆ ಅಚ್ಚರಿ ಹುಟ್ಟಿಸುವುದಿಲ್ಲ! (ಕೀರ್ತ. 146:3) ಆದರೆ ಕ್ರಿಸ್ತನು ಎಷ್ಟು ಉತ್ತಮ ಮನೋಭಾವದಿಂದ ಆಳುವನು! ಅವನಂದದ್ದು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾ. 11:28-30.
ಕಡೇ ದಿವಸಗಳು ಬೇಗನೆ ಕೊನೆಗೊಳ್ಳಲಿವೆ!
16 ಈ ಲೋಕ 1914ರಂದಿನಿಂದ ಕಡೇ ದಿವಸಗಳಲ್ಲಿದೆ ಇಲ್ಲವೇ ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿದೆ.’ (ಮತ್ತಾ. 24:3, NW) ಸ್ವಲ್ಪದರಲ್ಲೇ, ಯೇಸು ಹೇಳಿದ ‘ಮಹಾ ಸಂಕಟ’ ಸಂಭವಿಸಲಿದೆ. (ಮತ್ತಾಯ 24:21 ಓದಿ.) ಸರಿಸಾಟಿಯಿಲ್ಲದ ಈ ಸಂಕಟವು ಸೈತಾನನ ಇಡೀ ಲೋಕವನ್ನು ಕೊನೆಗೊಳಿಸುವುದು. ಆದರೆ ಮಹಾ ಸಂಕಟ ಹೇಗೆ ಆರಂಭವಾಗುವುದು? ಅದು ಹೇಗೆ ಕೊನೆಗೊಳ್ಳುವುದು?
17 ಮಹಾ ಸಂಕಟವು ತಟ್ಟನೆ ಆರಂಭವಾಗುವುದು. “ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ” ಅನಿರೀಕ್ಷಿತವಾಗಿ ‘ಯೆಹೋವನ ದಿನ’ ಬರುವುದು. (1 ಥೆಸಲೋನಿಕ 5:2, 3 ಓದಿ.) ರಾಷ್ಟ್ರಗಳು ತಮ್ಮ ದೊಡ್ಡ ದೊಡ್ಡ ಸಮಸ್ಯೆಗಳನ್ನು ಇನ್ನೇನು ಬಗೆಹರಿಸಿಯೇ ತೀರುತ್ತೇವೆಂದು ನೆನಸುತ್ತಿರುವಾಗ ಮುಂತಿಳಿಸಲಾಗಿರುವ ಆ ಸಂಕಟ ಆರಂಭವಾಗುವುದು. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲ್’ ತಟ್ಟನೆ ನಾಶವಾಗುವಾಗ ಇಡೀ ಜಗತ್ತೇ ಬೆಚ್ಚಿಬೀಳಲಿದೆ. ಮಹಾ ಬಾಬೆಲಿನ ಮೇಲೆ ನ್ಯಾಯತೀರ್ಪು ಜಾರಿಯಾಗುವಾಗ ಅರಸರೂ ಇತರರೂ ಚಕಿತರಾಗುವರು.—ಪ್ರಕ. 17:1-6, 18; 18:9, 10, 15, 16, 19.
18 ಒಂದು ನಿರ್ಣಾಯಕ ಘಟ್ಟದಲ್ಲಿ, “ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು” ಮತ್ತು “ಮನುಷ್ಯಕುಮಾರನನ್ನು ಸೂಚಿಸುವ ಗುರುತು ಆಕಾಶದಲ್ಲಿ ಕಾಣಬರುವದು.” ಆಗ ನಾವು ‘ನಮ್ಮ ತಲೆ ಎತ್ತಬಹುದು’ ಏಕೆಂದರೆ ‘ನಮ್ಮ ಬಿಡುಗಡೆ ಸಮೀಪವಾಗಿರುವುದು.’ (ಲೂಕ 21:25-28; ಮತ್ತಾ. 24:29, 30) ಸೈತಾನನು ಇಲ್ಲವೇ ಗೋಗನು, ತನ್ನ ಪಡೆಗಳು ದೇವಜನರ ಮೇಲೆ ಎರಗುವಂತೆ ಮಾಡುವನು. ಆದರೆ ತನ್ನ ನಂಬಿಗಸ್ತ ಸೇವಕರ ಮೇಲಾಗುವ ಆಕ್ರಮಣದ ಬಗ್ಗೆ ಯೆಹೋವನು ಹೇಳುವುದು: “ನಿಮ್ಮನ್ನು ತಾಕುವವನು [ನನ್ನ] ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ.” (ಜೆಕ. 2:8) ಆದುದರಿಂದ, ಯೆಹೋವನ ಸೇವಕರನ್ನು ನಾಶಮಾಡಲು ಸೈತಾನನು ಮಾಡುವ ಪ್ರಯತ್ನ ಸಫಲವಾಗದು. ಏಕೆ? ಏಕೆಂದರೆ ತನ್ನ ಸೇವಕರನ್ನು ಬಿಡಿಸಲಿಕ್ಕಾಗಿ ಪರಮಾಧಿಕಾರಿ ಪ್ರಭುವಾದ ಯೆಹೋವನು ತಡಮಾಡದೇ ಕ್ರಿಯೆಗೈಯುವನು.—ಯೆಹೆ. 38:9, 18.
19 ಯೆಹೋವನು ಜನಾಂಗಗಳ ವಿರುದ್ಧ ಕ್ರಮಗೈಯುವಾಗ ‘ಆತನೇ ಯೆಹೋವನು ಎಂದು ಅವುಗಳಿಗೆ ನಿಶ್ಚಿತವಾಗುವದು.’ (ಯೆಹೆ. 36:23) ಭೂಮಿಯಲ್ಲಿರುವ ಸೈತಾನನ ವ್ಯವಸ್ಥೆಯ ಉಳಿದ ಭಾಗವನ್ನು ನಾಶಮಾಡಲು ಆತನು ಕ್ರಿಸ್ತ ಯೇಸುವಿನ ನೇತೃತ್ವದಲ್ಲಿರುವ ಕೋಟ್ಯಾನುಕೋಟಿ ಆತ್ಮಜೀವಿಗಳಿಂದ ಕೂಡಿದ ಸಂಹಾರ ಪಡೆಗಳನ್ನು ಕಳುಹಿಸುವನು. (ಪ್ರಕ. 19:11-19) ಒಮ್ಮೆ ಕೇವಲ ಒಬ್ಬ ದೇವದೂತನು ಒಂದೇ ರಾತ್ರಿಯಲ್ಲಿ ದೇವರ ವೈರಿಗಳಲ್ಲಿ “ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು” ಎಂಬುದನ್ನು ನಾವು ನೆನಪಿಗೆ ತರಬಹುದು. ಹೀಗಿರುವಾಗ, ಮಹಾ ಸಂಕಟವನ್ನು ಕೊನೆಗೊಳಿಸುವ ಅರ್ಮಗೆದೋನಿನಲ್ಲಿ ಈ ಸ್ವರ್ಗೀಯ ಸೈನ್ಯವು ಭೂಮಿಯಲ್ಲಿರುವ ಸೈತಾನನ ವ್ಯವಸ್ಥೆಯ ಪ್ರತಿಯೊಂದು ಅಂಶವನ್ನು ಸುಲಭವಾಗಿ ನಾಶಮಾಡಬಲ್ಲದೆಂಬ ದೃಢಭರವಸೆ ನಮಗಿರಬಲ್ಲದು. (2 ಅರ. 19:35; ಪ್ರಕ. 16:14, 16) ಸೈತಾನನೂ ಅವನ ದೆವ್ವಗಳೂ ಸಾವಿರ ವರ್ಷಗಳ ವರೆಗೆ ಅಧೋಲೋಕದಲ್ಲಿ ಬಂಧಿಸಿಡಲ್ಪಡುವರು. ಕೊನೆಗೆ ಅವರನ್ನು ನಾಶಮಾಡಲಾಗುವುದು.—ಪ್ರಕ. 20:1-3.
20 ಹೀಗೆ, ಸ್ವರ್ಗ ಹಾಗೂ ಭೂಮಿಯಿಂದ ದುಷ್ಟತನವನ್ನು ತೆಗೆದುಹಾಕಲಾಗುವುದು ಮತ್ತು ನೀತಿವಂತ ಮಾನವರು ಈ ಭೂಗೋಳದಲ್ಲಿ ಸದಾಕಾಲ ಜೀವಿಸುವರು. ಯೆಹೋವನು ಮಹಾ ವಿಮೋಚಕನೆಂದು ರುಜುವಾಗುವುದು. (ಕೀರ್ತ. 145:20) ರಾಜ್ಯದ ಮೂಲಕ ಆತನು ತನ್ನ ಪರಮಾಧಿಕಾರವನ್ನು ಸಮರ್ಥಿಸುವನು, ತನ್ನ ಪವಿತ್ರ ನಾಮವನ್ನು ಪರಿಶುದ್ಧಗೊಳಿಸುವನು ಮತ್ತು ಭೂಮಿಗಾಗಿರುವ ತನ್ನ ಭವ್ಯ ಉದ್ದೇಶವನ್ನು ಪೂರೈಸುವನು. ಈ ಸುವಾರ್ತೆಯನ್ನು ಘೋಷಿಸುತ್ತಾ, ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟವರಿಗೆ’ ಇಲ್ಲವೇ ಯೋಗ್ಯ ಪ್ರವೃತ್ತಿಯುಳ್ಳವರಿಗೆ ದೇವರ ರಾಜ್ಯದ ಮೂಲಕ ಬಿಡುಗಡೆ ಸಮೀಪವಿದೆ ಎಂದು ಗ್ರಹಿಸುವಂತೆ ಸಹಾಯಮಾಡುವಾಗ ನೀವು ನಿಮ್ಮ ಶುಶ್ರೂಷೆಯಲ್ಲಿ ಮಹದಾನಂದವನ್ನು ಅನುಭವಿಸುವಂತಾಗಲಿ!—ಅ. ಕೃ. 13:48.
ನಿಮಗೆ ಜ್ಞಾಪಕವಿದೆಯೋ?
• ರಾಜ್ಯದ ಮಹತ್ವವನ್ನು ಯೇಸು ಹೇಗೆ ಎತ್ತಿತೋರಿಸಿದನು?
• ಬಿಡುಗಡೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಏಕೆ?
• ಮಹಾ ಸಂಕಟದ ಸಮಯದಲ್ಲಿ ನಾವು ಯಾವ ಘಟನೆಗಳನ್ನು ನಿರೀಕ್ಷಿಸಬಹುದು?
• ಯೆಹೋವನು ಮಹಾ ವಿಮೋಚಕನಾಗಿರುವುದು ಹೇಗೆ?
[ಅಧ್ಯಯನ ಪ್ರಶ್ನೆಗಳು]
1. ಯೇಸುವಿನ ಮುಖ್ಯ ಬೋಧನೆ ಏನಾಗಿತ್ತು?
2. ರಾಜ್ಯ ಸಂದೇಶವು ಎಷ್ಟು ಮಹತ್ವದ್ದಾಗಿದೆ?
3, 4. ದೇವರ ಚಿತ್ತವು ಭೂಮಿಯಲ್ಲಿ ನೆರವೇರುವಾಗ ಫಲಿತಾಂಶ ಏನಾಗಿರುವುದು?
5. ಸದ್ಯದ ವ್ಯವಸ್ಥೆಗೆ ಏನಾಗಲಿದೆ?
6. ಈ ಲೋಕದ ಕೆಟ್ಟತನವನ್ನು ಬೈಬಲ್ ಹೇಗೆ ವರ್ಣಿಸುತ್ತದೆ?
7. ದೇವರಿಂದ ಬರುವ ಬಿಡುಗಡೆಯ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಏಕೆ?
8. ಸಾವಿರಾರು ವರ್ಷಗಳ ಮಾನವಾಳ್ವಿಕೆಯು ಯಾವ ಮಾತನ್ನು ಬಲವಾಗಿ ಸಾಬೀತುಪಡಿಸಿದೆ?
9. “ಕಡೇ ದಿವಸಗಳಲ್ಲಿ” ಯಾವ ಸ್ಥಿತಿಗಳಿರುವವೆಂದು ಸತ್ಕ್ರೈಸ್ತರಿಗೆ ತಿಳಿದಿದೆ?
10. ಯೆಹೋವನು ಬಿಡುಗಡೆಯ ಏಕೈಕ ಭರವಸಾರ್ಹ ಮೂಲನೇಕೆ?
11, 12. ದೇವರು ತನ್ನ ಸೇವಕರಿಗೆ ಯಾವ ಖಾತ್ರಿ ಕೊಡುತ್ತಾನೆ?
13. ಯೆಹೋವನ ಸೇವಕರಲ್ಲಿ ಮೃತಪಟ್ಟವರಿಗೆ ಹೇಗೆ ಬಿಡುಗಡೆಯಾಗುವುದು?
14. ದೇವರ ರಾಜ್ಯವು ನೀತಿಯ ಸರ್ಕಾರವೆಂಬ ಭರವಸೆ ನಮಗಿದೆ ಏಕೆ?
15. ದೇವರ ರಾಜ್ಯದ ಆಳ್ವಿಕೆಗೂ ಮಾನವ ಆಳ್ವಿಕೆಗೂ ಇರುವ ವ್ಯತ್ಯಾಸ ತಿಳಿಸಿ.
16. ಕಡೇ ದಿವಸಗಳು ಹೇಗೆ ಅಂತ್ಯಗೊಳ್ಳುವವು?
17. ಮಹಾ ಸಂಕಟದ ಆರಂಭದ ಕುರಿತು ಬೈಬಲ್ ಏನನ್ನು ಸೂಚಿಸುತ್ತದೆ?
18. ದೇವ ಜನರ ಮೇಲೆ ಸೈತಾನನು ಮಾಡುವ ಆಕ್ರಮಣಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ?
19. ದೇವರ ಸಂಹಾರ ಪಡೆಗಳು ಸೈತಾನನ ವ್ಯವಸ್ಥೆಯನ್ನು ನಾಶಮಾಡುವವೆಂಬ ಭರವಸೆ ನಮಗೇಕೆ ಇರಬಲ್ಲದು?
20. ರಾಜ್ಯದ ಮುಖಾಂತರ ಯೆಹೋವನು ಏನನ್ನು ಸಾಧಿಸುವನು?
[ಪುಟ 12ರಲ್ಲಿರುವ ಚಿತ್ರಗಳು]
ನಮ್ಮ ಸಮಯದಲ್ಲಿ ನಡೆಯುವ ಸರಿಸಾಟಿಯಿಲ್ಲದ ಲೋಕವ್ಯಾಪಕ ಸಾರುವ ಕೆಲಸದ ಬಗ್ಗೆ ದೇವರ ವಾಕ್ಯ ಮುಂತಿಳಿಸಿತ್ತು
[ಪುಟ 15ರಲ್ಲಿರುವ ಚಿತ್ರ]
ಯೆಹೋವನು ನೋಹ ಹಾಗೂ ಅವನ ಕುಟುಂಬವನ್ನು ವಿಮೋಚಿಸಿದಂತೆಯೇ ನಮ್ಮನ್ನೂ ವಿಮೋಚಿಸಬಲ್ಲನು
[ಪುಟ 16ರಲ್ಲಿರುವ ಚಿತ್ರ]
ಯೆಹೋವನು “ಕಣ್ಣೀರನ್ನೆಲ್ಲಾ ಒರಸಿಬಿಡುವನು . . . ಇನ್ನು ಮರಣವಿರುವುದಿಲ್ಲ.”—ಪ್ರಕ. 21:4