ನಿತ್ಯಜೀವಕ್ಕಾಗಿ ನೀವೆಷ್ಟು ತ್ಯಾಗಮಾಡಲು ಸಿದ್ಧರಿದ್ದೀರಿ?
ನಿತ್ಯಜೀವಕ್ಕಾಗಿ ನೀವೆಷ್ಟು ತ್ಯಾಗಮಾಡಲು ಸಿದ್ಧರಿದ್ದೀರಿ?
“ಒಬ್ಬನು ತನ್ನ ಪ್ರಾಣಕ್ಕೆ ಏನು ಈಡುಕೊಟ್ಟಾನು?”—ಮತ್ತಾ. 16:26.
ಅಪೊಸ್ತಲ ಪೇತ್ರನಿಗೆ ತನ್ನ ಕಿವಿಗಳನ್ನೇ ನಂಬಲಿಕ್ಕಾಗಲಿಲ್ಲ. ಏಕೆಂದರೆ, ತನ್ನ ಪ್ರೀತಿಯ ನಾಯಕನಾದ ಯೇಸು ಕ್ರಿಸ್ತನು ಸ್ವಲ್ಪದರಲ್ಲೇ ವೇದನಾಮಯ ಮರಣಕ್ಕೀಡಾಗಲಿದ್ದನೆಂದು “ಏನೂ ಗುಂಬವಿಲ್ಲದೆ” ಅಂದರೆ ಮುಚ್ಚುಮರೆಯಿಲ್ಲದೆ ಆಗತಾನೇ ಹೇಳಿದ್ದನು. ಇದಕ್ಕೆ ಪ್ರತಿಕ್ರಿಯಿಸುತ್ತಾ, ಪೇತ್ರನು ನಿಸ್ಸಂದೇಹವಾಗಿ ಯೇಸುವಿನ ಹಿತಾಸಕ್ತಿಯಿಂದ ಅವನನ್ನು ಹೀಗೆ ಗದರಿಸಿದನು: “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು.” ಆಗ ಯೇಸು ಪೇತ್ರನಿಗೆ ಬೆನ್ನುಹಾಕಿ ಇತರ ಶಿಷ್ಯರತ್ತ ನೋಡಿದನು. ಬಹುಶಃ ಅವರೆಲ್ಲರಿಗೂ ಅದೇ ತಪ್ಪಭಿಪ್ರಾಯವಿತ್ತು. ನಂತರ ಅವನು ಪೇತ್ರನಿಗಂದದ್ದು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.”—ಮಾರ್ಕ 8:32, 33; ಮತ್ತಾ. 16:21-23.
2 ಯೇಸು ಹಾಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಕಾರಣ ಏನೆಂಬುದನ್ನು ಅವನ ಮುಂದಿನ ಮಾತುಗಳಿಂದ ಪೇತ್ರನು ಗ್ರಹಿಸಿರಬೇಕು. ಯೇಸು “ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು” ಹೇಳಿದ್ದು: “ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು.” (ಮಾರ್ಕ 8:34, 35) ಯೇಸು ತನ್ನ ಪ್ರಾಣವನ್ನು ಇನ್ನೇನು ಕೊಡಲಿದ್ದನು ಮಾತ್ರವಲ್ಲ, ತನ್ನ ಹಿಂಬಾಲಕರು ಸಹ ದೇವರ ಸೇವೆಗಾಗಿ ತಮ್ಮ ಪ್ರಾಣ ಕೊಡಲು ಸಿದ್ಧರಿರಬೇಕೆಂಬುದನ್ನು ನಿರೀಕ್ಷಿಸುತ್ತಿದ್ದನು. ಅವರು ಹಾಗೆ ಮಾಡುವಲ್ಲಿ ಹೇರಳ ಬಹುಮಾನವನ್ನು ಪಡೆಯಲಿದ್ದರು.—ಮತ್ತಾಯ 16:27 ಓದಿ.
3 ಅದೇ ಸಂದರ್ಭದಲ್ಲಿ ಯೇಸು ಎರಡು ವಿಚಾರಪ್ರೇರಕ ಪ್ರಶ್ನೆಗಳನ್ನು ಕೇಳಿದನು: “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಮಾರ್ಕ 8:36, 37) ಮೊದಲನೇ ಪ್ರಶ್ನೆಗೆ ಉತ್ತರವೇನೆಂಬುದು ಮನುಷ್ಯರಿಗೆ ತಿಳಿದಿದೆ. ಒಬ್ಬ ವ್ಯಕ್ತಿ ತನ್ನ ಸ್ವತ್ತುಗಳನ್ನು ಬಳಸಸಾಧ್ಯವಿರುವುದು ಅವನು ಬದುಕಿದ್ದರೆ ತಾನೇ? ಅವನು ಇಡೀ ಲೋಕವನ್ನು ಸಂಪಾದಿಸಿಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಏನೂ ಪ್ರಯೋಜನವಿಲ್ಲ. “ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು?” ಎಂಬ ಯೇಸುವಿನ ಎರಡನೇ ಪ್ರಶ್ನೆಯು ಅವನ ಕೇಳುಗರಿಗೆ, “ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು” ಎಂದು ಯೋಬನ ದಿನದಲ್ಲಿ ಸೈತಾನನು ಮಾಡಿದ ಆರೋಪವನ್ನು ನೆನಪಿಗೆ ತಂದಿರಬೇಕು. (ಯೋಬ 2:4) ಯೆಹೋವನನ್ನು ಆರಾಧಿಸದ ಕೆಲವರ ವಿಷಯದಲ್ಲಿ ಸೈತಾನನು ಆಡಿದ ಮಾತುಗಳು ಸತ್ಯವಾಗಿರಬಹುದು. ಅವರು ಬದುಕಿರಲು ಏನನ್ನೇ ಮಾಡಲು, ಯಾವುದೇ ತತ್ತ್ವವನ್ನು ತೊರೆಯಲೂ ಸಿದ್ಧರಿರುತ್ತಾರೆ. ಕ್ರೈಸ್ತರ ನೋಟವಾದರೋ ಭಿನ್ನವಾಗಿರುತ್ತದೆ.
ಮತ್ತು “ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು?” (4 ಯೇಸು ಭೂಮಿಗೆ ಬಂದದ್ದು ನಮಗೆ ಸದ್ಯದ ಲೋಕದಲ್ಲಿ ಆರೋಗ್ಯ, ಐಶ್ವರ್ಯ ಅಥವಾ ದೀರ್ಘಾಯುಸ್ಸನ್ನು ಕೊಡಲಿಕ್ಕಲ್ಲವೆಂದು ನಮಗೆ ತಿಳಿದಿದೆ. ಹೊಸ ಲೋಕದಲ್ಲಿ ಸದಾಕಾಲ ಜೀವಿಸುವ ಅವಕಾಶವನ್ನು ತೆರೆಯಲಿಕ್ಕಾಗಿ ಆತನು ಬಂದಿದ್ದನು. ಆ ಜೀವನದ ನಿರೀಕ್ಷೆಯು ನಮಗೆ ಬಹುಮೂಲ್ಯವಾಗಿದೆ. (ಯೋಹಾ. 3:16) ಕ್ರೈಸ್ತನೊಬ್ಬನು, ಯೇಸು ಕೇಳಿದ ಮೊದಲ ಪ್ರಶ್ನೆಯನ್ನು ಹೀಗೆ ಅರ್ಥೈಸಿಕೊಳ್ಳುವನು: “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡು, ನಿತ್ಯಜೀವದ ತನ್ನ ನಿರೀಕ್ಷೆಯನ್ನು ಕಳೆದುಕೊಂಡರೆ ಪ್ರಯೋಜನವೇನು?” ಏನೂ ಇಲ್ಲ. (1 ಯೋಹಾ. 2:15-17) ಯೇಸುವಿನ ಎರಡನೇ ಪ್ರಶ್ನೆಯನ್ನು ಉತ್ತರಿಸಲಿಕ್ಕೆ, ನಮ್ಮನ್ನೇ ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಹೊಸ ಲೋಕದಲ್ಲಿನ ಜೀವನದ ನಿರೀಕ್ಷೆಯನ್ನು ನಿಶ್ಚಿತಗೊಳಿಸಲು, ನಾನೀಗ ಎಷ್ಟು ತ್ಯಾಗಮಾಡಲು ಸಿದ್ಧನಿದ್ದೇನೆ?’ ಈ ಪ್ರಶ್ನೆಗೆ, ನಮ್ಮ ಜೀವನಕ್ರಮದಿಂದ ವ್ಯಕ್ತವಾಗುವ ಉತ್ತರವು ನಮ್ಮ ಹೃದಯದಲ್ಲಿರುವ ನಿರೀಕ್ಷೆ ಎಷ್ಟು ಬಲವಾಗಿದೆ ಎಂಬುದನ್ನು ತೋರಿಸುವುದು.—ಯೋಹಾನ 12:25 ಹೋಲಿಸಿ.
5 ನಿತ್ಯ ಜೀವವನ್ನು ಸಂಪಾದಿಸಬಹುದು ಎಂಬುದನ್ನು ಯೇಸು ನಿಶ್ಚಯವಾಗಿ ಹೇಳುತ್ತಿರಲಿಲ್ಲ. ನಿತ್ಯ ಜೀವವಾಗಿರಲಿ, ಈಗಿನ ನಮ್ಮ ಅಲ್ಪಾಯುಷ್ಯವೇ ಆಗಿರಲಿ, ಜೀವವೆಂಬುದೇ ಒಂದು ಕೊಡುಗೆಯಾಗಿದೆ. ಅದನ್ನು ನಾವು ಖರೀದಿಸಲಾರೆವು ಇಲ್ಲವೇ ಅದನ್ನು ಪಡೆಯುವ ಯೋಗ್ಯತೆ ಗಳಿಸಲಾರೆವು. ನಾವು ನಿತ್ಯಜೀವವೆಂಬ ಕೊಡುಗೆಯನ್ನು ಪಡೆಯಬಲ್ಲ ಏಕೈಕ ಮಾರ್ಗವು, ‘ಯೇಸು ಕ್ರಿಸ್ತನ ಮೇಲೆ ನಂಬಿಕೆ ಇಡುವುದು’ ಮತ್ತು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವಾತನಾದ ಯೆಹೋವನಲ್ಲಿ ನಂಬಿಕೆಯಿಡುವುದೇ ಆಗಿದೆ. (ಗಲಾ. 2:16; ಇಬ್ರಿ. 11:6) ಆದಾಗ್ಯೂ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸಬೇಕು, ಏಕೆಂದರೆ ‘ಕ್ರಿಯೆಗಳಿಲ್ಲದ ನಂಬಿಕೆ ಸತ್ತದ್ದೇ.’ (ಯಾಕೋ. 2:26) ಆದುದರಿಂದ ನಾವು ಯೇಸುವಿನ ಪ್ರಶ್ನೆಯ ಕುರಿತು ಇನ್ನಷ್ಟು ಧ್ಯಾನಿಸುವಾಗ, ಈ ವಿಷಯಗಳ ವ್ಯವಸ್ಥೆಯಲ್ಲಿ ನಾವೆಷ್ಟು ತ್ಯಾಗಮಾಡಲು ಸಿದ್ಧರಿದ್ದೇವೆ ಮತ್ತು ಯೆಹೋವನ ಸೇವೆಯಲ್ಲಿ ಏನೆಲ್ಲಾ ಮಾಡಲು ಸಿದ್ಧರಿದ್ದೇವೆ ಎಂಬುದನ್ನು ಗಂಭೀರವಾಗಿ ಯೋಚಿಸುವುದು ಉತ್ತಮ. ಈ ಕ್ರಿಯೆಗಳು, ನಮ್ಮ ನಂಬಿಕೆಯು ನಿಜವಾಗಿಯೂ ಜೀವಂತವಾಗಿದೆ ಎಂಬುದನ್ನು ತೋರಿಸುವವು.
‘ಕ್ರಿಸ್ತನು ತನ್ನ ಸುಖ ನೋಡಿಕೊಳ್ಳಲಿಲ್ಲ’
6 ಯೇಸು, ತನ್ನ ದಿನದ ಲೋಕವು ತನಗೆ ನೀಡಲಿದ್ದ ವಿಷಯಗಳ ಮೇಲೆ ದೃಷ್ಟಿ ನೆಡಲಿಲ್ಲ. ಅವನು ಹೆಚ್ಚು ಪ್ರಾಮುಖ್ಯ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ, ತನ್ನ ಜೀವನವನ್ನು ಸುಖಕರವನ್ನಾಗಿ ಮಾಡಬಲ್ಲ ಭೌತಿಕ ಸ್ವತ್ತುಗಳನ್ನು ಗಿಟ್ಟಿಸಿಕೊಳ್ಳುವ ಪ್ರಲೋಭನೆಯನ್ನು ಪ್ರತಿರೋಧಿಸಿದನು. ಅವನ ಜೀವನವು ತ್ಯಾಗಮಯವಾಗಿತ್ತು ಮತ್ತು ದೇವರಿಗೆ ವಿಧೇಯತೆ ತೋರಿಸುವಂಥದ್ದಾಗಿತ್ತು. ಯೋಹಾ. 8:29) ದೇವರನ್ನು ಮೆಚ್ಚಿಸಲಿಕ್ಕಾಗಿ ಯೇಸು ಏನೇನು ಮಾಡಲು ಸಿದ್ಧನಿದ್ದನು?
ತನಗೆ ಮೆಚ್ಚಿಕೆಯಾದದ್ದನ್ನು ಮಾಡದೆ, ‘ನಾನು ತಂದೆಗೆ ಮೆಚ್ಚಿಕೆಯಾದದ್ದನ್ನು ಯಾವಾಗಲೂ ಮಾಡುತ್ತೇನೆ’ ಎಂದನವನು. (7 ಯೇಸು ತನ್ನ ಶಿಷ್ಯರಿಗೆ ಒಮ್ಮೆ ಹೀಗಂದನು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು.” (ಮತ್ತಾ. 20:28) ಈ ಹಿಂದೆ, ಯೇಸು ತಾನು ‘ಪ್ರಾಣವನ್ನು ಕೊಡಲಿದ್ದೇನೆ’ ಎಂದು ತನ್ನ ಹಿಂಬಾಲಕರಿಗೆ ಹೇಳಿದಾಗ, ಅವನಿಗೆ ಹಾಗೆಂದಿಗೂ ಆಗಬಾರದೆಂದು ಪೇತ್ರನು ಹೇಳಿದ್ದನು. ಆದರೆ ಯೇಸು ಅಚಲನಾಗಿದ್ದನು. ಅವನು ಸಿದ್ಧಮನಸ್ಸಿನಿಂದ ತನ್ನ ಪ್ರಾಣವನ್ನು ಅಂದರೆ ತನ್ನ ಪರಿಪೂರ್ಣ ಮಾನವ ಜೀವವನ್ನು ಮನುಷ್ಯರಿಗಾಗಿ ಕೊಟ್ಟನು. ಯೇಸುವಿನ ನಿಸ್ವಾರ್ಥ ಜೀವನಕ್ರಮದ ಫಲವಾಗಿ ಅವನ ಸ್ವಂತ ಭವಿಷ್ಯತ್ತು ಭದ್ರವಾಯಿತು. ಅವನನ್ನು ಪುನರುತ್ಥಾನಗೊಳಿಸಲಾಯಿತು ಮತ್ತು ದೇವರ ಬಲಗಡೆಗೆ, ‘ಉನ್ನತಸ್ಥಾನಕ್ಕೆ ಏರಿಸಲಾಯಿತು.’ (ಅ. ಕೃ. 2:32, 33) ಈ ರೀತಿಯಲ್ಲಿ ಆತನು ನಮಗಾಗಿ ಒಬ್ಬ ಅತ್ಯುತ್ಕೃಷ್ಟ ಮಾದರಿಯಾದನು.
8 ಅಪೊಸ್ತಲ ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಅವರು ಕೇವಲ ‘ತಮ್ಮ ಸುಖವನ್ನೇ ನೋಡಿಕೊಳ್ಳಬಾರದು’ ಎಂಬ ಸಲಹೆಕೊಟ್ಟು, “ಕ್ರಿಸ್ತನು ಸಹ ತನ್ನ ಸುಖವನ್ನು ನೋಡಿಕೊಳ್ಳಲಿಲ್ಲ” ಎಂಬುದನ್ನು ಜ್ಞಾಪಕಹುಟ್ಟಿಸಿದನು. (ರೋಮಾ. 15:1-3) ನಾವು ಆ ಅಪೊಸ್ತಲನ ಸಲಹೆಯನ್ನು ಅನ್ವಯಿಸುತ್ತಾ, ಕ್ರಿಸ್ತನ ಅನುಕರಣೆಯಲ್ಲಿ ಎಷ್ಟು ತ್ಯಾಗಗಳನ್ನು ಮಾಡಲು ಸಿದ್ಧರಿದ್ದೇವೆ?
ಯೆಹೋವನು ಸರ್ವೋತ್ತಮವಾದದ್ದನ್ನು ನಮ್ಮಿಂದ ಬಯಸುತ್ತಾನೆ
9 ಪ್ರಾಚೀನ ಇಸ್ರಾಯೇಲಿನಲ್ಲಿ, ಹೀಬ್ರು ದಾಸರನ್ನು ತಮ್ಮ ದಾಸತ್ವದ ಎಳನೇ ವರ್ಷದಲ್ಲಿ ಇಲ್ಲವೇ ಜೂಬಿಲಿ ವರ್ಷದಲ್ಲಿ ಸ್ವತಂತ್ರಗೊಳಿಸಬೇಕೆಂದು ಮೋಶೆಯ ಧರ್ಮಶಾಸ್ತ್ರ ವಿಧಿಸಿತ್ತು. ಹಾಗಿದ್ದರೂ ಅವರಿಗೊಂದು ಆಯ್ಕೆಯಿತ್ತು. ಒಬ್ಬ ದಾಸನು ತನ್ನ ಧಣಿಯನ್ನು ಇಷ್ಟಪಡುವಲ್ಲಿ, ಅವನು ಅದೇ ಮನೆಯಲ್ಲಿ ತನ್ನ ಜೀವನದುದ್ದಕ್ಕೂ ದಾಸನಾಗಿ ಉಳಿಯಬಹುದಿತ್ತು. (ಧರ್ಮೋಪದೇಶಕಾಂಡ 15:12, 16, 17 ಓದಿ.) ನಾವು ನಮ್ಮನ್ನೇ ದೇವರಿಗೆ ಸಮರ್ಪಿಸಿಕೊಳ್ಳುವಾಗ ಅಂಥದ್ದೇ ಆಯ್ಕೆಮಾಡುತ್ತೇವೆ. ಸ್ವಇಷ್ಟಾನುಸಾರ ನಡೆದುಕೊಳ್ಳದೆ ದೇವರ ಚಿತ್ತವನ್ನು ಮಾಡುವೆವೆಂದು ನಾವಾಗಿಯೇ ಒಪ್ಪಿಕೊಳ್ಳುತ್ತೇವೆ. ಹಾಗೆ ಮಾಡುವ ಮೂಲಕ, ಯೆಹೋವನ ಮೇಲೆ ನಮಗಿರುವ ಗಾಢ ಪ್ರೀತಿಯನ್ನು ಮತ್ತು ಆತನನ್ನು ಸದಾಕಾಲವೂ ಸೇವಿಸುವ ನಮ್ಮ ಇಚ್ಛೆಯನ್ನು ತೋರಿಸಿಕೊಡುತ್ತೇವೆ.
10 ನೀವೀಗ ಯೆಹೋವನ ಸಾಕ್ಷಿಗಳಿಂದ ಬೈಬಲ್ ಅಧ್ಯಯನ ಪಡೆಯುತ್ತಿರುವಲ್ಲಿ, ಸುವಾರ್ತೆ ಸಾರುತ್ತಿರುವಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿರುವಲ್ಲಿ ಪ್ರಶಂಸಾರ್ಹರು. ಬಲುಬೇಗನೆ ನೀವು ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಲು ಪ್ರಚೋದಿತರಾಗಿ, ‘ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?’ ಎಂದು ಐಥಿಯೋಪ್ಯದವನು ಫಿಲಿಪ್ಪನಿಗೆ ಕೇಳಿದ ಪ್ರಶ್ನೆಯನ್ನೇ ಕೇಳುವಿರೆಂದು ನಿರೀಕ್ಷಿಸುತ್ತೇವೆ. (ಅ. ಕೃ. 8:35-37) ಆಗ, ದೇವರೊಂದಿಗಿನ ನಿಮ್ಮ ಸಂಬಂಧವು ಪೌಲನು ಯಾರಿಗೆ ಪತ್ರ ಬರೆದನೋ ಆ ಕ್ರೈಸ್ತರಂತಿರುವುದು. ಅವನು ಬರೆದದ್ದು: “ನೀವು ನಿಮ್ಮ ಸ್ವಂತ ಸೊತ್ತಲ್ಲ; ನೀವು ಕ್ರಯಕ್ಕೆ ಕೊಳ್ಳಲ್ಪಟ್ಟವರು.” (1 ಕೊರಿಂ. 6:19, 20) ನಮಗೆ ಸ್ವರ್ಗೀಯ ನಿರೀಕ್ಷೆ ಇರಲಿ, ಇಲ್ಲವೇ ಭೂನಿರೀಕ್ಷೆ ಇರಲಿ, ಸಮರ್ಪಿತರಾದ ನಮ್ಮೆಲ್ಲರ ಯಜಮಾನ ಯೆಹೋವನೇ. ಹೀಗಿರುವುದರಿಂದ ಸ್ವಾರ್ಥ ಆಶೆಗಳನ್ನು ನಿಗ್ರಹಿಸುವುದು ಮತ್ತು “ಮನುಷ್ಯರಿಗೆ ದಾಸರಾಗ”ದಿರುವುದು ಎಷ್ಟು ಮಹತ್ತ್ವದ್ದು! (1 ಕೊರಿಂ. 7:23) ಯೆಹೋವನು ನಮ್ಮನ್ನು ತನ್ನ ಇಷ್ಟಾನುಸಾರ ಬಳಸುವಂತೆ ನಾವಾತನ ನಿಷ್ಠಾವಂತ ಸೇವಕರಾಗಿರುವುದು ಎಂಥ ಸುಯೋಗ!
11 ಪೌಲನು ಜೊತೆ ವಿಶ್ವಾಸಿಗಳಿಗೆ ಬುದ್ಧಿಹೇಳಿದ್ದು: “ನಿಮ್ಮ ನಿಮ್ಮ ದೇಹಗಳನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಗೆಯಾಗಿಯೂ ಇರುವ ಸಜೀವಯಜ್ಞವಾಗಿ ಅರ್ಪಿಸಿರಿ; ಇದೇ ನಿಮ್ಮ ವಿವೇಕಪೂರ್ವಕವಾದ ಆರಾಧನೆಯು.” (ರೋಮಾ. 12:1) ಈ ಮಾತುಗಳು ಆ ಯೆಹೂದಿ ಕ್ರೈಸ್ತರಿಗೆ, ಅವರು ಯೇಸುವಿನ ಹಿಂಬಾಲಕರಾಗುವ ಮುಂಚೆ ತಮ್ಮ ಆರಾಧನೆಯ ಭಾಗವಾಗಿದ್ದ ಯಜ್ಞಗಳನ್ನು ನೆನಪಿಗೆ ತಂದಿರಬೇಕು. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಯೆಹೋವನಿಗೆ ಯಜ್ಞವಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿ ಇದ್ದದ್ದರಲ್ಲೇ ಸರ್ವೋತ್ತಮವಾಗಿರಬೇಕಿತ್ತು ಎಂಬುದು ಅವರಿಗೆ ತಿಳಿದಿದ್ದಿರಬೇಕು. ದೋಷವಿರುವ ಯಾವುದೇ ಪ್ರಾಣಿಯನ್ನು ಸ್ವೀಕರಿಸಲಾಗುತ್ತಿರಲಿಲ್ಲ. (ಮಲಾ. 1:8, 13) ನಮ್ಮ ದೇಹವನ್ನು ‘ಸಜೀವಯಜ್ಞವಾಗಿ ಅರ್ಪಿಸುವಾಗಲೂ’ ಈ ಮಾತು ಸತ್ಯ. ನಾವು ಯೆಹೋವನಿಗೆ ಸರ್ವೋತ್ತಮವಾದದ್ದನ್ನೇ ಕೊಡುತ್ತೇವೆ ಹೊರತು ನಮ್ಮೆಲ್ಲ ವೈಯಕ್ತಿಕ ಆಸೆಗಳನ್ನು ತಣಿಸಿ, ಬಾಕಿ ಉಳಿದದ್ದನ್ನಲ್ಲ. ದೇವರಿಗೆ ನಮ್ಮನ್ನು ಸಮರ್ಪಿಸಿಕೊಳ್ಳುವಾಗ ನಾವು ಷರತ್ತಿಲ್ಲದೆ, ನಮ್ಮ ಜೀವನವನ್ನೇ ಆತನಿಗೆ ಕೊಡುತ್ತೇವೆ. ಇದರಲ್ಲಿ ನಮ್ಮ ಶಕ್ತಿ, ಸೊತ್ತು ಮತ್ತು ಸಾಮರ್ಥ್ಯಗಳು ಸೇರಿವೆ. (ಕೊಲೊ. 3:23) ಈ ಸಂಗತಿಯನ್ನು ನಮ್ಮ ಜೀವನದಲ್ಲಿ ಕಾರ್ಯಗತಗೊಳಿಸುವುದು ಹೇಗೆ?
ನಿಮ್ಮ ಸಮಯವನ್ನು ವಿವೇಕಯುತವಾಗಿ ಬಳಸಿ
12 ಯೆಹೋವನಿಗೆ ಸರ್ವೋತ್ತಮವಾದದ್ದನ್ನು ಕೊಡುವ ಒಂದು ವಿಧವು ನಮ್ಮ ಸಮಯವನ್ನು ವಿವೇಕಯುತವಾಗಿ ಬಳಸುವುದಾಗಿದೆ. (ಎಫೆಸ 5:15, 16 ಓದಿ.) ಇದಕ್ಕಾಗಿ ಸ್ವನಿಯಂತ್ರಣ ಅಗತ್ಯ. ಈ ಲೋಕವು ಬೀರುವ ಪ್ರಭಾವಗಳಲ್ಲದೆ, ನಾವು ಪಿತ್ರಾರ್ಜಿತವಾಗಿ ಪಡೆದಿರುವ ಅಪರಿಪೂರ್ಣತೆಯು, ನಾವು ನಮ್ಮ ಸಮಯವನ್ನು ಕೇವಲ ನಮ್ಮ ಸ್ವಂತ ಆನಂದಕ್ಕಾಗಿ ಇಲ್ಲವೇ ಸ್ವಂತ ಲಾಭಕ್ಕಾಗಿ ಬಳಸುವಂತೆ ಮಾಡಬಹುದು. ಸಂತೋಷದಾಯಕ ವಿನೋದವಿಹಾರ ಮತ್ತು ನಮ್ಮ ಕ್ರೈಸ್ತ ಕರ್ತವ್ಯಗಳನ್ನು ಪೂರೈಸಲು ಶಕ್ತಗೊಳಿಸುವ ಐಹಿಕ ಕೆಲಸವನ್ನು ಮಾಡುವುದರ ಸಮೇತ, “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು” ನಿಜ. (ಪ್ರಸಂ. 3:1) ಆದರೆ ಒಬ್ಬ ಸಮರ್ಪಿತ ಕ್ರೈಸ್ತನು ಸಮತೋಲನದಿಂದಿದ್ದು, ತನ್ನ ಸಮಯವನ್ನು ವಿವೇಕಯುತವಾಗಿ ಬಳಸಬೇಕು.
13 ಪೌಲನು ಅಥೇನೆ ಪಟ್ಟಣಕ್ಕೆ ಭೇಟಿಯಿತ್ತಾಗ, “ಅಥೇನೆಯರೂ ಅಲ್ಲಿ ವಾಸವಾಗಿದ್ದ ಪರಸ್ಥಳದವರೂ ಹೊಸ ಹೊಸ ಸಂಗತಿಗಳನ್ನು ಹೇಳುವದಕ್ಕೂ ಕೇಳುವದಕ್ಕೂ ಹೊರತು ಬೇರೆ ಯಾವದಕ್ಕೂ ಸಮಯ ಕೊಡುತ್ತಿರಲಿಲ್ಲ” ಎಂಬುದನ್ನು ಗಮನಿಸಿದನು. (ಅ. ಕೃ. 17:21) ಅಂತೆಯೇ ಇಂದು ಸಹ ಅನೇಕರು ಸುಮ್ಮನೆ ಕಾಲಹರಣ ಮಾಡುತ್ತಿರುತ್ತಾರೆ. ಆಧುನಿಕ ಸಮಯಗಳ ಅಪಕರ್ಷಣೆಗಳಲ್ಲಿ, ಟಿ.ವಿ. ವೀಕ್ಷಿಸುವುದು, ವಿಡಿಯೋ ಗೇಮ್ ಆಡುವುದು, ಇಂಟರ್ನೆಟ್ ಸರ್ಫ್ ಮಾಡುವುದು ಇತ್ಯಾದಿ ಸೇರಿವೆ. ನಮ್ಮನ್ನು ಅಪಕರ್ಷಿಸಿ, ನಮ್ಮ ಸಮಯ ಕಬಳಿಸಲು ಅನೇಕಾನೇಕ ವಿಷಯಗಳು ಲಭ್ಯ ಇವೆ. ಅವುಗಳಿಗೆ ನಮ್ಮ ಸಮಯ ಕೊಟ್ಟರೆ, ನಾವು ನಮ್ಮ ಆಧ್ಯಾತ್ಮಿಕ ಅಗತ್ಯಗಳನ್ನು ನಿರ್ಲಕ್ಷಿಸಬಹುದು. ‘ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು’ ಅಂದರೆ ಯೆಹೋವನ ಸೇವೆಗೆ ಸಂಬಂಧಪಟ್ಟ ಕೆಲಸಗಳನ್ನು ಮಾಡಲು ನಮ್ಮ ಬಳಿ ಸಮಯವಿಲ್ಲದಷ್ಟು ಬ್ಯುಸಿ ಆಗಿದ್ದೇವೆಂದೂ ನಾವು ನೆನಸಲಾರಂಭಿಸಬಹುದು.—ಫಿಲಿ. 1:9, 10, NIBV.
14 ಆದುದರಿಂದ ಯೆಹೋವನ ಸಮರ್ಪಿತ ಸೇವಕರಾದ ನೀವು ಹೀಗೆ ಕೇಳಿಕೊಳ್ಳಿ: ‘ನನ್ನ ದೈನಂದಿನ ಶೆಡ್ಯೂಲ್ನಲ್ಲಿ ಬೈಬಲ್ ವಾಚನ, ಧ್ಯಾನ ಹಾಗೂ ಪ್ರಾರ್ಥನೆಗಾಗಿ ಸಮಯವಿದೆಯೋ?’ (ಕೀರ್ತ. 77:12; 119:97; 1 ಥೆಸ. 5:16, 17) ‘ಕ್ರೈಸ್ತ ಕೂಟಗಳಿಗಾಗಿ ತಯಾರಿಸಲು ಸಮಯ ಮಾಡುತ್ತೇನೋ? ಕೂಟಗಳಲ್ಲಿ ಹೇಳಿಕೆಗಳನ್ನು ಕೊಡುವ ಮೂಲಕ ಇತರರನ್ನು ಉತ್ತೇಜಿಸುತ್ತೇನೋ?’ (ಕೀರ್ತ. 122:1; ಇಬ್ರಿ. 2:12) ಪೌಲ ಬಾರ್ನಬರು ‘ಬಹು ಕಾಲದ’ ವರೆಗೆ ಯೆಹೋವನು ದಯಪಾಲಿಸಿದಂತೆ “ಧೈರ್ಯದಿಂದ ಮಾತಾ”ಡಿದರೆಂದು ದೇವರ ವಾಕ್ಯ ಹೇಳುತ್ತದೆ. (ಅ. ಕೃ. 14:3) ಸಾರುವ ಕೆಲಸದಲ್ಲಿ “ಬಹು ಕಾಲ”ವನ್ನು ಅಂದರೆ ಹೆಚ್ಚಿನ ಸಮಯವನ್ನು ಕಳೆಯಲು, ಬಹುಶಃ ಪಯನೀಯರರಾಗಿರಲು ನಿಮ್ಮ ಪರಿಸ್ಥಿತಿಗಳಲ್ಲಿ ಹೊಂದಾಣಿಕೆ ಮಾಡಬಲ್ಲಿರೋ?—ಇಬ್ರಿಯ 13:15 ಓದಿ.
15 ಅಪೊಸ್ತಲ ಪೌಲನು ಮತ್ತು ಬಾರ್ನಬನು ಅಂತಿಯೋಕ್ಯದಲ್ಲಿದ್ದ ಕ್ರೈಸ್ತ ಸಭೆಗೆ ಭೇಟಿನೀಡಿದಾಗ, “ಅಲ್ಲಿ ಶಿಷ್ಯರ ಸಂಗಡ ಬಹುಕಾಲ” ಇದ್ದು ಅವರನ್ನು ಉತ್ತೇಜಿಸಿದರು. (ಅ. ಕೃ. 14:28) ಅದೇ ರೀತಿಯಲ್ಲಿ ಇಂದು ಪ್ರೀತಿಭರಿತ ಹಿರಿಯರು ತಮ್ಮ ಸಮಯದಲ್ಲಿ ಹೆಚ್ಚಿನಾಂಶವನ್ನು ಬೇರೆಯವರನ್ನು ಬಲಪಡಿಸಲಿಕ್ಕಾಗಿ ಬಳಸುತ್ತಾರೆ. ಕ್ಷೇತ್ರ ಸೇವೆಗೆ ಹೋಗುವುದರ ಜೊತೆಗೆ ಕುರಿಮಂದೆಯ ಪಾಲನೆಯಲ್ಲಿ, ಕಳೆದುಹೋಗಿರುವ ಕುರಿಗಳನ್ನು ಹುಡುಕುವುದರಲ್ಲಿ, ಅಸ್ವಸ್ಥರಿಗೆ ನೆರವುನೀಡುವುದರಲ್ಲಿ ಮತ್ತು ಸಭೆಯಲ್ಲಿ ಇನ್ನಿತರ ಅನೇಕ ಜವಾಬ್ದಾರಿಗಳನ್ನು ಸಂಭಾಳಿಸಲು ಶ್ರಮಿಸುತ್ತಾರೆ. ನೀವೊಬ್ಬ ದೀಕ್ಷಾಸ್ನಾನಹೊಂದಿರುವ ಸಹೋದರರಾಗಿರುವಲ್ಲಿ, ಈ ಹೆಚ್ಚಿನ ಸೇವಾ ಸುಯೋಗಗಳನ್ನು ಎಟಕಿಸಿಕೊಳ್ಳಲು ನಿಮ್ಮ ಪರಿಸ್ಥಿತಿಗಳು ಅನುಮತಿಸುತ್ತವೋ?
16 ಮಾನವನಿಂದಾದ ವಿಪತ್ತುಗಳು ಇಲ್ಲವೇ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಪರಿಹಾರಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಅನೇಕರಿಗೆ ಆನಂದ ಸಿಕ್ಕಿದೆ. ದೃಷ್ಟಾಂತಕ್ಕಾಗಿ, ಬೇತೇಲಿನಲ್ಲಿರುವ ಸುಮಾರು 65 ವಯಸ್ಸಿನ ಸಹೋದರಿಯೊಬ್ಬಳು, ದೂರದ ಕ್ಷೇತ್ರಗಳಿಗೆ ಪ್ರಯಾಣಿಸಿ ಪರಿಹಾರ ಕಾರ್ಯದಲ್ಲಿ ಸ್ವಯಂಸೇವಕಳಾಗಿ ಕೆಲಸಮಾಡಲು ಹಲವಾರು ಸಂದರ್ಭಗಳಲ್ಲಿ ಮುಂದಾಗಿದ್ದಾಳೆ. ಆಕೆ ತನ್ನ ರಜಾಕಾಲವನ್ನು ಈ ರೀತಿಯಲ್ಲಿ ಉಪಯೋಗಿಸಿದ್ದೇಕೆ? ಗಲಾ. 6:10.
ಆಕೆ ಹೇಳುವುದು: “ನನ್ನಲ್ಲಿ ವಿಶೇಷ ಕೌಶಲಗಳೇನೂ ಇಲ್ಲದಿದ್ದರೂ, ಅಗತ್ಯವಿದ್ದ ಯಾವುದೇ ಕೆಲಸವನ್ನು ಮಾಡುವುದು ಒಂದು ಸುಯೋಗವಾಗಿತ್ತು. ಭಾರೀ ಭೌತಿಕ ನಷ್ಟಗಳಿಗೀಡಾದ ನನ್ನ ಸಹೋದರ ಸಹೋದರಿಯರ ಬಲವಾದ ನಂಬಿಕೆಯನ್ನು ನೋಡಿ ನಾನು ತುಂಬ ಉತ್ತೇಜನ ಪಡೆದೆ.” ಅಷ್ಟುಮಾತ್ರವಲ್ಲದೆ ಲೋಕವ್ಯಾಪಕವಾಗಿ ಸಾವಿರಾರು ಮಂದಿ, ರಾಜ್ಯ ಸಭಾಗೃಹಗಳನ್ನು ಹಾಗೂ ಸಮ್ಮೇಳನದ ಸಭಾಂಗಣಗಳನ್ನು ಕಟ್ಟುವುದರಲ್ಲಿ ಸಹಾಯಮಾಡುತ್ತಾರೆ. ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ, ನಾವು ನಿಸ್ವಾರ್ಥದಿಂದ ‘ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಒಳ್ಳೇದನ್ನು ಮಾಡುತ್ತೇವೆ.’—“ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ”
17 ದೇವರಿಂದ ವಿಮುಖವಾಗಿರುವ ಮಾನವ ಸಮಾಜವು ಬೇಗನೆ ನಾಶವಾಗಲಿದೆ. ಇದು ನಿಖರವಾಗಿ ಯಾವಾಗ ಆಗುವುದೆಂದು ನಮಗೆ ತಿಳಿದಿಲ್ಲವಾದರೂ, “ಸಮಯವು ಸಂಕೋಚ”ವಾಗಿದೆ ಮತ್ತು “ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂದು ನಮಗೆ ತಿಳಿದಿದೆ. (1 ಕೊರಿಂಥ 7:29-31 ಓದಿ.) ಇದು, “ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಟ್ಟಾನು?” ಎಂದು ಯೇಸು ಕೇಳಿದ ಪ್ರಶ್ನೆಗೆ ಹೆಚ್ಚಿನ ಅರ್ಥ ಕೂಡಿಸುತ್ತದೆ. “ವಾಸ್ತವವಾದ ಜೀವವನ್ನು” ಗಳಿಸಲಿಕ್ಕಾಗಿ, ಯೆಹೋವನು ಕೇಳಿಕೊಳ್ಳುವ ಯಾವುದೇ ತ್ಯಾಗಗಳನ್ನು ನಾವು ನಿಶ್ಚಯವಾಗಿಯೂ ಮಾಡುವೆವು. (1 ತಿಮೊ. 6:18, 19) ಸದಾ ಯೇಸುವಿನ ‘ಹಿಂದೆ ಹೋಗಲು’ ಮತ್ತು ‘ರಾಜ್ಯವನ್ನು ಪ್ರಥಮವಾಗಿ ಹುಡುಕಲು’ ಆತನು ಕೊಟ್ಟ ಬುದ್ಧಿವಾದವನ್ನು ಪಾಲಿಸುವುದು ಅತಿ ಪ್ರಾಮುಖ್ಯ.—ಮತ್ತಾ. 6:31-33; 24:13.
18 ಯೇಸುವನ್ನು ಹಿಂಬಾಲಿಸುವುದು ಯಾವಾಗಲೂ ಸುಲಭವಲ್ಲ ಮತ್ತು ಆತನು ಎಚ್ಚರಿಸಿದಂತೆಯೇ ಇದನ್ನು ಮಾಡಿದ್ದರಿಂದ ಕೆಲವರು ಈ ವಿಷಯಗಳ ವ್ಯವಸ್ಥೆಯಲ್ಲಿ ತಮ್ಮ ಜೀವಗಳನ್ನೂ ತೆರಬೇಕಾಗಿ ಬಂದಿದೆ. ನಮ್ಮ ಕುರಿತೇ ಅತಿಯಾದ ಕಾಳಜಿ ವಹಿಸುತ್ತಾ ‘ನಮಗೆ ಹೀಗೆ ಎಂದಿಗೂ ಆಗಬಾರದೆಂಬ’ ಮನೋಭಾವವನ್ನು ದೂರವಿಡುವ ಮೂಲಕ ನಾವು ಯೇಸುವಿನಂತಿರಬೇಕು. ಆತನು ಪ್ರಥಮ ಶತಮಾನದ ತನ್ನ ಅಭಿಷಿಕ್ತ ಹಿಂಬಾಲಕರಿಗೆ ಕೊಟ್ಟ ಈ ಆಶ್ವಾಸನೆಯಲ್ಲಿ ನಮಗೆ ನಂಬಿಕೆಯಿದೆ: “ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಹಾಗಾಗಿ, ನಮ್ಮ ಸಮಯ ಸಾಮರ್ಥ್ಯಗಳನ್ನು ಸಾಧ್ಯವಾದಷ್ಟು ಪೂರ್ಣ ಮಟ್ಟಿಗೆ ಪವಿತ್ರ ಸೇವೆಯಲ್ಲಿ ಬಳಸೋಣ. ನಾವು ಹೀಗೆ ಮಾಡುವಾಗ, ಯೆಹೋವನು ನಮ್ಮನ್ನು ಮಹಾ ಸಂಕಟದಿಂದ ಜೀವಂತವಾಗಿ ಪಾರುಗೊಳಿಸುವನು ಇಲ್ಲವೇ ಹೊಸ ಲೋಕದಲ್ಲಿ ಪುನಃ ಜೀವಕ್ಕೆ ತರುವನೆಂಬ ದೃಢಭರವಸೆ ನಮಗಿದೆ ಎಂಬುದು ವ್ಯಕ್ತವಾಗುತ್ತದೆ. (ಇಬ್ರಿ. 6:10) ಈ ಮೂಲಕ, ನಾವು ಜೀವವೆಂಬ ಕೊಡುಗೆಯನ್ನು ಬಹುಮೂಲ್ಯವಾಗಿ ಎಣಿಸಿದ್ದೇವೆಂಬುದನ್ನು ತೋರಿಸಿಕೊಡುವೆವು.
ನಿಮ್ಮ ಉತ್ತರಗಳೇನು?
• ದೇವರನ್ನೂ ಮನುಷ್ಯರನ್ನೂ ಸೇವಿಸಲು ಯೇಸು ತೋರಿಸಿದ ಸಿದ್ಧಮನಸ್ಸು ಏಕೆ ಗಮನಾರ್ಹವಾಗಿತ್ತು?
• ಒಬ್ಬ ವ್ಯಕ್ತಿ ತನ್ನನ್ನೇ ನಿರಾಕರಿಸಬೇಕು ಏಕೆ, ಮತ್ತು ಇದನ್ನು ಮಾಡುವುದು ಹೇಗೆ?
• ಪ್ರಾಚೀನ ಇಸ್ರಾಯೇಲಿನಲ್ಲಿ ಯೆಹೋವನು ಯಾವ ರೀತಿಯ ಯಜ್ಞಗಳನ್ನು ಮಾತ್ರ ಸ್ವೀಕರಿಸುತ್ತಿದ್ದನು, ಮತ್ತು ಇದರಿಂದ ನಾವಿಂದು ಏನು ಕಲಿಯುತ್ತೇವೆ?
• ಯಾವ ವಿಧಗಳಲ್ಲಿ ನಮ್ಮ ಸಮಯವನ್ನು ವಿವೇಕಯುತವಾಗಿ ಬಳಸಬಲ್ಲೆವು?
[ಅಧ್ಯಯನ ಪ್ರಶ್ನೆಗಳು]
1. ಪೇತ್ರನ ಗದರಿಕೆಯನ್ನು ಯೇಸು ತಳ್ಳಿಹಾಕಿದ್ದೇಕೆ?
2. ಒಬ್ಬ ನಿಜ ಶಿಷ್ಯನಿಂದ ನಿರೀಕ್ಷಿಸಲಾಗುವ ಸಂಗತಿಯನ್ನು ಯೇಸು ಹೇಗೆ ನಿರೂಪಿಸಿದನು?
3. (ಎ) ಯೇಸು ತನ್ನ ಕೇಳುಗರಿಗೆ ಯಾವ ಪ್ರಶ್ನೆಗಳನ್ನು ಕೇಳಿದನು? (ಬಿ) ಯೇಸುವಿನ ಎರಡನೇ ಪ್ರಶ್ನೆಯು ತನ್ನ ಕೇಳುಗರಿಗೆ ಏನನ್ನು ನೆನಪಿಗೆ ತಂದಿರಬೇಕು?
4. ಯೇಸುವಿನ ಪ್ರಶ್ನೆಗಳು ವಿಶೇಷವಾಗಿ ಕ್ರೈಸ್ತರಿಗೆ ಗಾಢಾರ್ಥವುಳ್ಳದ್ದಾಗಿವೆ ಏಕೆ?
5. ನಿತ್ಯ ಜೀವದ ಕೊಡುಗೆಯನ್ನು ನಾವು ಹೇಗೆ ಪಡೆಯಬಲ್ಲೆವು?
6. ಯೇಸು ಯಾವುದಕ್ಕೆ ಆದ್ಯತೆ ಕೊಟ್ಟನು?
7, 8. (ಎ) ಯೇಸು ಯಾವ ತ್ಯಾಗ ಮಾಡಿದನು, ಮತ್ತು ಅವನಿಗೆ ಯಾವ ಬಹುಮಾನ ಸಿಕ್ಕಿತು? (ಬಿ) ನಾವು ಯಾವ ಪ್ರಶ್ನೆ ಕೇಳಿಕೊಳ್ಳಬೇಕು?
9. ಕ್ರೈಸ್ತನೊಬ್ಬನು ತನ್ನನ್ನೇ ದೇವರಿಗೆ ಸಮರ್ಪಿಸಿಕೊಳ್ಳುವಾಗ ನಿಜವಾಗಿ ಏನು ಮಾಡುತ್ತಾನೆ?
10. ನಾವು ಯಾವ ವಿಧದಲ್ಲಿ ದೇವರ ಸೊತ್ತಾಗಿದ್ದೇವೆ, ಮತ್ತು ಈ ವಾಸ್ತವಾಂಶವು ನಮ್ಮ ವಿಚಾರಗಳನ್ನೂ ಕ್ರಿಯೆಗಳನ್ನೂ ಹೇಗೆ ಪ್ರಭಾವಿಸಬೇಕು?
11. ಯಾವ ಯಜ್ಞ ಅರ್ಪಿಸುವಂತೆ ಕ್ರೈಸ್ತರನ್ನು ಉತ್ತೇಜಿಸಲಾಗಿದೆ, ಮತ್ತು ಇದರ ಬಗ್ಗೆ ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾದ ಯಜ್ಞಗಳು ಏನನ್ನು ಕಲಿಸುತ್ತವೆ?
12, 13. ನಾವು ಯೆಹೋವನಿಗೆ ಸರ್ವೋತ್ತಮವಾದದ್ದನ್ನು ಕೊಡುವ ಒಂದು ವಿಧ ಯಾವುದು?
14. ಯಾವ ಪ್ರಶ್ನೆಗಳ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು?
15. ಹಿರಿಯರು ತಮ್ಮ ಸಮಯವನ್ನು ಹೇಗೆ ವಿವೇಕಯುತವಾಗಿ ಬಳಸುತ್ತಾರೆ?
16. ‘ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಒಳ್ಳೇದನ್ನು ಮಾಡುವ’ ಕೆಲವು ವಿಧಗಳಾವುವು?
17. ನಿತ್ಯ ಜೀವಕ್ಕಾಗಿ ವೈಯಕ್ತಿಕವಾಗಿ ನೀವೇನು ತ್ಯಾಗಮಾಡಲು ಸಿದ್ಧರಿದ್ದೀರಿ?
18. ನಮಗೆ ಯಾವ ದೃಢಭರವಸೆ ಇರಬಲ್ಲದು, ಮತ್ತು ಏಕೆ?
[ಪುಟ 26ರಲ್ಲಿರುವ ಚಿತ್ರಗಳು]
ಯೇಸು ಯಾವಾಗಲೂ ಯೆಹೋವನಿಗೆ ಮೆಚ್ಚಿಕೆಯಾದದ್ದನ್ನು ಮಾಡಿದನು
[ಪುಟ 28ರಲ್ಲಿರುವ ಚಿತ್ರ]
ಕೃತಜ್ಞತಾಭಾವದ ಇಸ್ರಾಯೇಲ್ಯರು ಸತ್ಯಾರಾಧನೆಯನ್ನು ಬೆಂಬಲಿಸಲು ಸರ್ವೋತ್ತಮವಾದದ್ದನ್ನು ಕೊಟ್ಟರು
[ಪುಟ 29ರಲ್ಲಿರುವ ಚಿತ್ರಗಳು]
ನಮ್ಮ ಸಮಯವನ್ನು ವಿವೇಕಯುತವಾಗಿ ಬಳಸುವ ಮೂಲಕ ದೇವರನ್ನು ಮೆಚ್ಚಿಸುತ್ತೇವೆ