“ಇದೇ ಮಾರ್ಗ, ಇದರಲ್ಲೇ ನಡೆಯಿರಿ”
“ಇದೇ ಮಾರ್ಗ, ಇದರಲ್ಲೇ ನಡೆಯಿರಿ”
ಎಮಿಲೀಯ ಪೆಡರ್ಸನ್ ಅವರ ಜೀವನಕಥೆ
ರೂತ್ ಇ. ಪೇಪಸ್ ಅವರು ಹೇಳಿದಂತೆ
ನನ್ನ ತಾಯಿಯಾದ ಎಮಿಲೀಯ ಪೆಡರ್ಸನ್ ಅವರು 1878ರಲ್ಲಿ ಜನಿಸಿದರು. ಸಮಯಾನಂತರ ಅವರು ಶಾಲೆಯಲ್ಲಿ ಉಪಾಧ್ಯಾಯಿನಿಯಾಗಿ ಕೆಲಸಮಾಡತೊಡಗಿದರು, ಆದರೆ ದೇವರೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡಲು ತಮ್ಮ ಜೀವನವನ್ನು ವಿನಿಯೋಗಿಸುವುದೇ ಅವರ ಮನದ ಬಯಕೆಯಾಗಿತ್ತು. ಅಮೆರಿಕದ ಮಿನ್ನೆಸೊಟದಲ್ಲಿನ ಜ್ಯಾಸ್ಪರ್ ಎಂಬ ಚಿಕ್ಕ ಪಟ್ಟಣದಲ್ಲಿದ್ದ ನಮ್ಮ ಮನೆಯಲ್ಲಿ ಇದ್ದ ಒಂದು ದೊಡ್ಡ ಟ್ರಂಕ್ ನಮ್ಮ ತಾಯಿಯ ಮನದಾಸೆಯ ಪುರಾವೆಯಾಗಿತ್ತು. ತಾವು ಮಿಷನೆರಿಯಾಗಿ ಸೇವೆಮಾಡಲು ಬಯಸಿದ್ದ ಚೀನಾ ದೇಶಕ್ಕೆ ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸಲಿಕ್ಕಾಗಿ ಅವರು ಆ ಟ್ರಂಕನ್ನು ಖರೀದಿಸಿದ್ದರು. ಆದರೆ ಅವರ ತಾಯಿಯವರು ತೀರಿಕೊಂಡಾಗ ಅವರು ತಮ್ಮ ಯೋಜನೆಗಳನ್ನು ಕೈಬಿಟ್ಟು, ತನ್ನ ತಂಗಿತಮ್ಮಂದಿರನ್ನು ನೋಡಿಕೊಳ್ಳಲಿಕ್ಕಾಗಿ ಮನೆಯಲ್ಲೇ ಉಳಿಯಬೇಕಾಯಿತು. 1907ರಲ್ಲಿ ಅವರು ಥೀಯಡೋರ್ ಹೋಲೀನ್ ಎಂಬವರನ್ನು ಮದುವೆಯಾದರು. ನಾನು 1925ರ ಡಿಸೆಂಬರ್ 2ರಂದು ಜನಿಸಿದೆ. ಏಳು ಮಂದಿ ಮಕ್ಕಳಲ್ಲಿ ನಾನೇ ಕೊನೆಯವಳಾಗಿದ್ದೆ.
ತಾಯಿಯವರಿಗೆ ಬೈಬಲಿನ ಕುರಿತಾದ ಪ್ರಶ್ನೆಗಳಿದ್ದವು ಮತ್ತು ಅವರು ಅವುಗಳಿಗೆ ಉತ್ತರಗಳನ್ನು ಪಡೆದುಕೊಳ್ಳಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಿದ್ದರು. ಒಂದು ಪ್ರಶ್ನೆಯು, ನರಕವು ದುಷ್ಟರಿಗಾಗಿರುವ ಅಗ್ನಿಮಯ ಯಾತನಾ ಸ್ಥಳವಾಗಿದೆ ಎಂಬ ಬೋಧನೆಯ ಕುರಿತಾಗಿತ್ತು. ಈ ಬೋಧನೆಗಾಗಿರುವ ಆಧಾರವನ್ನು ಬೈಬಲಿನಲ್ಲಿ ಎಲ್ಲಿ ಕಂಡುಕೊಳ್ಳಸಾಧ್ಯವಿದೆ ಎಂದು ಅವರು ಲೂಥರನ್ ಚರ್ಚಿನ ಸಂದರ್ಶಕ ಮೇಲ್ವಿಚಾರಕನೊಬ್ಬನ ಬಳಿ ಕೇಳಿದರು. ಅದಕ್ಕೆ ಅವನು, ಬೈಬಲ್ ಏನು ಹೇಳುತ್ತದೆ ಎಂಬುದೇನೂ ಪ್ರಾಮುಖ್ಯವಲ್ಲ, ಅಗ್ನಿಮಯ ಯಾತನೆಯ ನರಕದ ವಿಚಾರವನ್ನು ಬೋಧಿಸಲೇಬೇಕಾಗಿದೆ ಎಂದು ಅವರಿಗೆ ಹೇಳಿದನು.
ಅವರ ಆಧ್ಯಾತ್ಮಿಕ ಹಸಿವು ತಣಿಸಲ್ಪಟ್ಟಿತು
ಇಸವಿ 1900ರ ಸ್ವಲ್ಪ ಸಮಯಾವಧಿಯ ಬಳಿಕ, ಎಮ ಎಂಬ ಹೆಸರಿನ ನನ್ನ ಚಿಕ್ಕಮ್ಮನವರು ಸಂಗೀತದ ಅಧ್ಯಯನಕ್ಕಾಗಿ ಮಿನ್ನೆಸೊಟದ ನಾರ್ತ್‌ಫೀಲ್ಡ್‌ಗೆ ಹೋದರು. ಅಲ್ಲಿ ಅವರು ತಮ್ಮ ಶಿಕ್ಷಕರಾದ ಮಿಲ್ಯೂಸ್ ಕ್ರಿಸ್ಚನ್ಸನ್‌ರ ಮನೆಯಲ್ಲೇ ಉಳಿದುಕೊಂಡರು ಮತ್ತು ಅವರ ಪತ್ನಿಯು ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದರು; ಯೆಹೋವನ ಸಾಕ್ಷಿಗಳನ್ನು ಆಗ ಈ ಹೆಸರಿನಿಂದ ಕರೆಯಲಾಗುತ್ತಿತ್ತು. ತನಗೆ ಒಬ್ಬ ಅಕ್ಕ ಇದ್ದಾಳೆ ಮತ್ತು ಅವಳು ಶ್ರದ್ಧೆಯಿಂದ ಬೈಬಲ್ ಓದುತ್ತಾಳೆ ಎಂದು ನನ್ನ ಚಿಕ್ಕಮ್ಮನವರು ತಮ್ಮ ಶಿಕ್ಷಕರ ಪತ್ನಿಗೆ ತಿಳಿಸಿದರು. ಸ್ವಲ್ಪದರಲ್ಲೇ ಶ್ರೀಮತಿ ಕ್ರಿಸ್ಚನ್ಸನ್‌ರವರು ನನ್ನ ತಾಯಿಯವರಿಗೆ ಒಂದು ಪತ್ರವನ್ನು ಬರೆದರು ಮತ್ತು ಅದರಲ್ಲಿ ಅವರ ಬೈಬಲ್ ಪ್ರಶ್ನೆಗಳಿಗೆ ಉತ್ತರಗಳಿದ್ದವು.
ಒಂದು ದಿನ, ಲೋರ ಓಟ್‌ಹೌಟ್ ಎಂಬ ಬೈಬಲ್ ವಿದ್ಯಾರ್ಥಿಯೊಬ್ಬಳು ಸೌತ್ ಡಕೋಟದ ಸಿಔಕ್ಸ್ ಫಾಲ್ಸ್‌ನಿಂದ ಜ್ಯಾಸ್ಪರ್‌ಗೆ ಸುವಾರ್ತೆಯನ್ನು ಸಾರಲಿಕ್ಕಾಗಿ ರೈಲಿನಲ್ಲಿ ಬಂದಳು. ತಮಗೆ ಸಿಕ್ಕಿದ ಬೈಬಲ್ ಸಾಹಿತ್ಯವನ್ನು ಅಮ್ಮ ಅಧ್ಯಯನಮಾಡಿದರು ಮತ್ತು ಲೋರಳು ತಂದುಕೊಟ್ಟಿದ್ದ ಸಾಹಿತ್ಯವನ್ನು ವಿತರಿಸುತ್ತಾ 1915ರಲ್ಲಿ ಇತರರಿಗೆ ಬೈಬಲ್ ಸತ್ಯಗಳನ್ನು ತಿಳಿಯಪಡಿಸಲಾರಂಭಿಸಿದರು.
ಇಸವಿ 1916ರಲ್ಲಿ, ಸಿಔಕ್ಸ್ ಸಿಟಿಯ ಲೋವದಲ್ಲಿ ನಡೆಯಲಿರುವ ಅಧಿವೇಶನವೊಂದಕ್ಕೆ ಚಾರ್ಲ್ಸ್ ಟೇಸ್ ರಸಲ್ ಬರುತ್ತಾರೆ ಎಂಬುದನ್ನು ಅಮ್ಮ ಕೇಳಿಸಿಕೊಂಡರು. ಅವರು ಆ ಅಧಿವೇಶನಕ್ಕೆ ಹಾಜರಾಗಲು ಇಷ್ಟಪಟ್ಟರು. ಈ ಸಮಯದಷ್ಟಕ್ಕೆ ಅಮ್ಮನಿಗೆ ಐದು ಮಂದಿ ಮಕ್ಕಳಿದ್ದರು ಮತ್ತು ಅವರಲ್ಲಿ ಕಿರಿಯವನಾದ ಮಾರ್ವನ್‌ಗೆ ಐದು ತಿಂಗಳಾಗಿತ್ತಷ್ಟೆ. ಆದರೂ ತಮ್ಮ ಎಲ್ಲ ಮಕ್ಕಳೊಂದಿಗೆ ಅವರು ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಸಿಔಕ್ಸ್ ಸಿಟಿಗೆ ಸುಮಾರು 160 ಕಿಲೊಮೀಟರುಗಳಷ್ಟು ದೂರ ರೈಲಿನ ಪ್ರಯಾಣವನ್ನು ಮಾಡಿದರು. ಅವರು ಸಹೋದರ ರಸಲರ ಭಾಷಣಗಳನ್ನು ಕೇಳಿಸಿಕೊಂಡರು, “ಫೋಟೊ-ಡ್ರಾಮಾ ಆಫ್ ಕ್ರಿಯೇಷನ್” ನೋಡಿದರು ಮತ್ತು ದೀಕ್ಷಾಸ್ನಾನ ಪಡೆದುಕೊಂಡರು. ಮನೆಗೆ ಹಿಂದಿರುಗಿದ ಬಳಿಕ ಅವರು ಈ ಅಧಿವೇಶನದ ಬಗ್ಗೆ ಒಂದು ಲೇಖನವನ್ನು ಬರೆದರು ಮತ್ತು ಅದು ಜ್ಯಾಸ್ಪರ್ ಜರ್ನಲ್ ನಲ್ಲಿ ಪ್ರಕಟಿಸಲ್ಪಟ್ಟಿತು.
ಇಸವಿ 1922ರಲ್ಲಿ, ಸೀಡರ್ ಪಾಯಿಂಟ್ ಒಹಾಯೋದಲ್ಲಿ ನಡೆದ ಅಧಿವೇಶನಕ್ಕೆ ಹಾಜರಾದ ಸುಮಾರು 18,000 ಮಂದಿಯಲ್ಲಿ ಅಮ್ಮ ಸಹ ಇದ್ದರು. ಆ ಅಧಿವೇಶನದ ಬಳಿಕ ಅವರು ದೇವರ ರಾಜ್ಯದ ಕುರಿತು ಪ್ರಕಟಿಸುವುದನ್ನು ಎಂದೂ ನಿಲ್ಲಿಸಲಿಲ್ಲ. ವಾಸ್ತವದಲ್ಲಿ ಅವರು “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂಬ ಬುದ್ಧಿವಾದಕ್ಕೆ ಕಿವಿಗೊಡುವಂತೆ ನಮ್ಮನ್ನು ಹುರಿದುಂಬಿಸುತ್ತಿದ್ದರು.—ಯೆಶಾ. 30:21.
ರಾಜ್ಯದ ಶುಶ್ರೂಷೆಯ ಫಲ
ಸಾವಿರದ ಒಂಬೈನೂರ ಇಪ್ಪತ್ತುಗಳ ಆರಂಭದಲ್ಲಿ ನನ್ನ ಹೆತ್ತವರು ಜ್ಯಾಸ್ಪರ್‌ನಿಂದ ಹೊರಗಿದ್ದ ಮನೆಯೊಂದಕ್ಕೆ ಸ್ಥಳಾಂತರಿಸಿದರು. ತಂದೆಯವರಿಗೆ ಯಶಸ್ವಿಕರವಾದ ವ್ಯಾಪಾರವಿತ್ತು ಮತ್ತು ಒಂದು ದೊಡ್ಡ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯಿತ್ತು. ಅಮ್ಮ ಬೈಬಲ್ ಅಧ್ಯಯನಮಾಡಿದಷ್ಟು ಹೆಚ್ಚು ಮಟ್ಟಿಗೆ ಅವರು ಮಾಡಲಿಲ್ಲ, ಆದರೆ ಅವರು ಸಾರುವ ಕೆಲಸಕ್ಕೆ ಮನಃಪೂರ್ವಕವಾದ ಬೆಂಬಲವನ್ನು ನೀಡಿದರು ಮತ್ತು ಆಗ ಪಿಲ್‌ಗ್ರಿಮ್ಸ್ ಎಂದು ಕರೆಯಲ್ಪಡುತ್ತಿದ್ದ ಸಂಚಾರಕ ಶುಶ್ರೂಷಕರು ತಮ್ಮ ಮನೆಯನ್ನು ಉಪಯೋಗಿಸುವಂತೆ ಬಿಡುತ್ತಿದ್ದರು. ಅನೇಕವೇಳೆ, ಸಂಚಾರಕ ಸಹೋದರರಲ್ಲಿ ಒಬ್ಬರು ನಮ್ಮ ಮನೆಯಲ್ಲಿ ಭಾಷಣವನ್ನು ಕೊಡುತ್ತಿದ್ದಾಗ, ನೂರು ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ಹಾಜರಾಗುತ್ತಿದ್ದರು; ನಮ್ಮ ವಾಸದ ಕೊಠಡಿ, ಊಟದ ಕೋಣೆ ಮತ್ತು ಮಲಗುವ ಕೋಣೆಯಲ್ಲೆಲ್ಲ ಜನರು ತುಂಬಿರುತ್ತಿದ್ದರು.
ನಾನು ಸುಮಾರು ಏಳು ವರ್ಷದವಳಿದ್ದಾಗ, ಲಿಟೀ ಎಂಬ ಹೆಸರಿನ ನನ್ನ ಚಿಕ್ಕಮ್ಮನವರು ನಮಗೆ ಫೋನ್ ಮಾಡಿ, ತಮ್ಮ ಪಕ್ಕದ ಮನೆಯವರಾದ ಎಡ್ ಲಾರ್ಸನ್ ಮತ್ತು ಅವರ ಪತ್ನಿಯವರು ಬೈಬಲ್ ಅಧ್ಯಯನಮಾಡಲು ಬಯಸುತ್ತಾರೆ ಎಂದು ತಿಳಿಸಿದರು. ಅವರು ಬೈಬಲ್ ಸತ್ಯಗಳನ್ನು ಮನಸಾರೆ ಸ್ವೀಕರಿಸಿದರು ಮತ್ತು ಸಮಯಾನಂತರ ತಮ್ಮ ನೆರೆಯವರಾಗಿದ್ದು ಎಂಟು ಮಕ್ಕಳ ತಾಯಿಯಾಗಿದ್ದ ಮಾರ್ಥ ವಾನ್ ಡಾಲನ್ ಅವರನ್ನು ಸಹ ಅಧ್ಯಯನದಲ್ಲಿ ಜೊತೆಗೂಡುವಂತೆ ಆಮಂತ್ರಿಸಿದರು. ಮಾರ್ಥ ಮತ್ತು ಅವರ ಇಡೀ ಕುಟುಂಬದವರು ಸಹ ‘ಬೈಬಲ್ ವಿದ್ಯಾರ್ಥಿ’ಗಳಾಗಿ ಪರಿಣಮಿಸಿದರು. *
ಸುಮಾರು ಅದೇ ಸಮಯದಲ್ಲಿ, ನಮ್ಮ ಮನೆಯಿಂದ ಕೆಲವಾರು ಕಿಲೊಮೀಟರುಗಳಷ್ಟು ದೂರದಲ್ಲಿ ವಾಸಿಸುತ್ತಿದ್ದ ಗೋರ್ಡನ್ ಕಮರೂಡ್ ಎಂಬ ಯೌವನಸ್ಥನು ತಂದೆಯೊಂದಿಗೆ ಕೆಲಸಮಾಡಲಾರಂಭಿಸಿದನು. “ಧಣಿಯ ಪುತ್ರಿಯರ ವಿಷಯದಲ್ಲಿ ಜಾಗ್ರತೆಯಿಂದಿರು. ಅವರದ್ದು ತುಂಬ ವಿಚಿತ್ರವಾದ ಧರ್ಮ” ಎಂದು ಗೋರ್ಡನ್‌ನಿಗೆ ಯಾರೋ ಎಚ್ಚರಿಕೆ ನೀಡಿದ್ದರು. ಆದರೆ ಗೋರ್ಡನ್ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದನು ಮತ್ತು ತಾನು ಸತ್ಯವನ್ನು ಕಂಡುಕೊಂಡಿದ್ದೇನೆ ಎಂಬುದು ಅವನಿಗೆ ಸ್ವಲ್ಪದರಲ್ಲೇ ಮನವರಿಕೆಯಾಗಿತ್ತು. ಮೂರು ತಿಂಗಳುಗಳ ಬಳಿಕ ಅವನು ದೀಕ್ಷಾಸ್ನಾನ ಪಡೆದುಕೊಂಡನು. ಅವನ ಹೆತ್ತವರು ಸಹ ವಿಶ್ವಾಸಿಗಳಾದರು. ಇದಲ್ಲದೆ ನಮ್ಮ ಕುಟುಂಬಗಳು, ಅಂದರೆ ಹೋಲೀನ್ ಕುಟುಂಬ, ಕಮರೂಡ್ ಕುಟುಂಬ ಮತ್ತು ವಾನ್ ಡಾಲನ್ ಕುಟುಂಬಗಳವರು ಆಪ್ತ ಸ್ನೇಹಿತರಾದರು.
ಅಧಿವೇಶನಗಳಿಂದ ಬಲಪಡಿಸಲ್ಪಟ್ಟದ್ದು
ಸೀಡರ್ ಪಾಯಿಂಟ್ ಅಧಿವೇಶನದಿಂದ ಅಮ್ಮ ಎಷ್ಟು ಉತ್ತೇಜಿತರಾಗಿದ್ದರೆಂದರೆ, ಅಂದಿನಿಂದ ಅವರು ಬೇರೆ ಯಾವುದೇ ಅಧಿವೇಶನವನ್ನು ತಪ್ಪಿಸಿಕೊಳ್ಳಲು ಇಷ್ಟಪಡಲಿಲ್ಲ. ಆದುದರಿಂದ ಅಂಥ ಒಕ್ಕೂಟಗಳಿಗೆ ಹಾಜರಾಗಲಿಕ್ಕಾಗಿ ಮಾಡಿದ ದೀರ್ಘವಾದ ಪ್ರಯಾಣಗಳು ನನ್ನ ಬಾಲ್ಯದ ನೆನಪುಗಳಾಗಿವೆ. 1931ರಲ್ಲಿ ಕೊಲಂಬಸ್ ಒಹಾಯೋದಲ್ಲಿ ನಡೆದ ಅಧಿವೇಶನವು ಮಹತ್ವಪೂರ್ಣವಾಗಿತ್ತು, ಏಕೆಂದರೆ ಆ ಸಮಯದಲ್ಲೇ ‘ಯೆಹೋವನ ಸಾಕ್ಷಿಗಳು’ ಎಂಬ ಹೆಸರು ಅಂಗೀಕರಿಸಲ್ಪಟ್ಟಿತು. (ಯೆಶಾ. 43:10-12) 1935ರಲ್ಲಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಅಧಿವೇಶನವೂ ನನಗೆ ಚೆನ್ನಾಗಿ ನೆನಪಿದೆ. ಆ ಅಧಿವೇಶನದಲ್ಲಿ ಕೊಡಲ್ಪಟ್ಟ ಐತಿಹಾಸಿಕ ಭಾಷಣವು, ಪ್ರಕಟನೆ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ “ಮಹಾ ಜನಸ್ತೋಮ” ಅಥವಾ “ಮಹಾ ಸಮೂಹ”ವನ್ನು ಗುರುತಿಸಿತು. (ಪ್ರಕ. 7:9; ಕಿಂಗ್ ಜೇಮ್ಸ್ ವರ್ಷನ್) ಅಲ್ಲಿ ದೀಕ್ಷಾಸ್ನಾನ ಪಡೆದುಕೊಂಡ 800ಕ್ಕಿಂತಲೂ ಹೆಚ್ಚಿನ ಜನರಲ್ಲಿ ನನ್ನ ಅಕ್ಕಂದಿರಾದ ಲಿಲ್ಯನ್ ಮತ್ತು ಯೂನಸ್ ಸಹ ಇದ್ದರು.
ನಮ್ಮ ಕುಟುಂಬವು 1937ರಲ್ಲಿ ಕೊಲಂಬಸ್ ಒಹಾಯೋ ಅಧಿವೇಶನಕ್ಕೆ, 1938ರಲ್ಲಿ ಸಿಯಾಟಲ್ ವಾಷಿಂಗ್ಟನ್ ಅಧಿವೇಶನಕ್ಕೆ ಮತ್ತು 1939ರಲ್ಲಿ ನ್ಯೂ ಯಾರ್ಕ್ ಸಿಟಿಯ ಅಧಿವೇಶನಕ್ಕೆ ಪ್ರಯಾಣಿಸಿತು. ವಾನ್ ಡಾಲನ್ ಕುಟುಂಬ ಮತ್ತು ಕಮರೂಡ್ ಕುಟುಂಬಗಳವರು ಹಾಗೂ ಇನ್ನಿತರರು ನಮ್ಮೊಂದಿಗೆ ಪ್ರಯಾಣದಲ್ಲಿ ಜೊತೆಗೂಡಿದರು; ದಾರಿಯಲ್ಲಿ ನಾವು ಶಿಬಿರಗಳಲ್ಲಿ ತಂಗುತ್ತಿದ್ದೆವು. 1940ರಲ್ಲಿ ಯೂನಸಳು ಲೀಯೋ ವಾನ್ ಡಾಲನ್‌ರನ್ನು ಮದುವೆಯಾದಳು ಮತ್ತು ಅವರು ಪಯನೀಯರರಾದರು. ಅದೇ ವರ್ಷ ಲಿಲ್ಯನ್‌ಳು ಗೋರ್ಡನ್ ಕಮರೂಡ್‌ರನ್ನು ಮದುವೆಯಾದಳು ಮತ್ತು ಅವರು ಸಹ ಪಯನೀಯರರಾದರು.
ಮಿಸ್ಸೌರಿಯ ಸೆಂಟ್ ಲೂಯಿಯಲ್ಲಿ 1941ರಲ್ಲಿ ನಡೆದ ಅಧಿವೇಶನವು ತುಂಬ ವಿಶೇಷವಾದದ್ದಾಗಿತ್ತು. ಅಲ್ಲಿ ಸಾವಿರಾರು ಮಂದಿ ಯುವ ಜನರು ಮಕ್ಕಳು (ಇಂಗ್ಲಿಷ್) ಎಂಬ ಪುಸ್ತಕವನ್ನು ಪಡೆದುಕೊಂಡರು. ಆ ಅಧಿವೇಶನವು ನನ್ನ ಜೀವನದಲ್ಲಿ ನಿರ್ಣಾಯಕ ಘಟ್ಟವಾಗಿತ್ತು. ತದನಂತರ ಸ್ವಲ್ಪದರಲ್ಲೇ, 1941ರ ಸೆಪ್ಟೆಂಬರ್ 1ರಂದು ನನ್ನ ಅಣ್ಣನಾದ ಮಾರ್ವನ್ ಮತ್ತು ಅವನ ಪತ್ನಿಯಾದ ಜೊಯ್ಸ್‌ರೊಂದಿಗೆ ನಾನು ಒಬ್ಬ ಪಯನೀಯರಳಾದೆ. ಆಗ ನನಗೆ 15 ವರ್ಷವಾಗಿತ್ತು.
ನಮ್ಮ ವ್ಯವಸಾಯಗಾರರ ಸಮುದಾಯದಲ್ಲಿ ಎಲ್ಲ ಸಹೋದರರು ಅಧಿವೇಶನಗಳಿಗೆ ಹಾಜರಾಗುವುದು ಕಷ್ಟಕರವಾಗಿತ್ತು, ಏಕೆಂದರೆ ಅಧಿವೇಶನಗಳು ಹೆಚ್ಚಾಗಿ ಕೊಯ್ಲಿನ ಸಮಯದಲ್ಲಿ ನಡೆಯುತ್ತಿದ್ದವು. ಆದುದರಿಂದ ಅಧಿವೇಶನಗಳ ಬಳಿಕ, ಹಾಜರಾಗಲು ಅಸಾಧ್ಯವಾದವರ ಪ್ರಯೋಜನಾರ್ಥವಾಗಿ ನಮ್ಮ ಮನೆಯ ಹಿತ್ತಲಿನಲ್ಲಿ ಅಧಿವೇಶನದ ಪುನರ್ವಿಮರ್ಶೆ ನಡೆಸಲಾಗುತ್ತಿತ್ತು. ಇವು ಸಂತೋಷಕರವಾದ ಒಟ್ಟುಗೂಡುವಿಕೆಗಳಾಗಿದ್ದವು.
ಗಿಲ್ಯಡ್ ಮತ್ತು ವಿದೇಶೀ ನೇಮಕಗಳು
ಇಸವಿ 1943ರ ಫೆಬ್ರವರಿ ತಿಂಗಳಿನಲ್ಲಿ, ಪಯನೀಯರರನ್ನು ಮಿಷನೆರಿ ಸೇವೆಗಾಗಿ ತರಬೇತುಗೊಳಿಸಲಿಕ್ಕಾಗಿ ‘ಗಿಲ್ಯಡ್ ಶಾಲೆ’ಯು ಸ್ಥಾಪಿಸಲ್ಪಟ್ಟಿತು. ಮೊದಲ ಕ್ಲಾಸಿನಲ್ಲಿ ವಾನ್ ಡಾಲನ್ ಕುಟುಂಬದ ಆರು ಮಂದಿ ಸದಸ್ಯರು ಒಳಗೂಡಿದ್ದರು. ಅವರು ಯಾರೆಂದರೆ, ಅಣ್ಣತಮ್ಮಂದಿರಾದ ಎಮಲ್, ಆರ್ಥರ್, ಹೋಮರ್ ಮತ್ತು ಲೀಯೋ; ಅವರ ಸೋದರಸಂಬಂಧಿಯಾದ ಡಾನಲ್ಡ್; ಹಾಗೂ ನನ್ನ ಅಕ್ಕಳೂ ಲೀಯೋನ ಪತ್ನಿಯೂ ಆದ ಯೂನಸ್. ನಾವು ಮಿಶ್ರಭಾವನೆಗಳೊಂದಿಗೆ ಪರಸ್ಪರ ವಿದಾಯವನ್ನು ಹೇಳಿದೆವು, ಏಕೆಂದರೆ ನಾವು ಪುನಃ ಯಾವಾಗ ಒಬ್ಬರನ್ನೊಬ್ಬರು ಭೇಟಿಯಾಗುವೆವು ಎಂಬುದು ನಮಗೆ ತಿಳಿದಿರಲಿಲ್ಲ. ಪದವಿ ಪಡೆದ ಬಳಿಕ ಎಲ್ಲ ಆರು ಜನರೂ ಪೋರ್ಟ ರೀಕೊಗೆ ಹೋಗುವ ನೇಮಕವನ್ನು ಪಡೆದರು; ಆ ಸಮಯದಲ್ಲಿ ಅಲ್ಲಿ ಹನ್ನೆರಡಕ್ಕಿಂತಲೂ ಕಡಿಮೆ ಸಾಕ್ಷಿಗಳಿದ್ದರು.
ಒಂದು ವರ್ಷದ ಬಳಿಕ ಲಿಲ್ಯನ್ ಮತ್ತು ಗೋರ್ಡನ್ ಹಾಗೂ ಮಾರ್ವನ್ ಮತ್ತು ಜೊಯ್ಸ್ ಗಿಲ್ಯಡ್‌ನ ಮೂರನೇ ಕ್ಲಾಸಿಗೆ ಹಾಜರಾದರು. ಅವರನ್ನು ಸಹ ಪೋರ್ಟ ರೀಕೊಗೆ ಕಳುಹಿಸಲಾಯಿತು. ತದನಂತರ 1944ರ ಸೆಪ್ಟೆಂಬರ್ ತಿಂಗಳಿನಲ್ಲಿ, ಅಂದರೆ 18ರ ಪ್ರಾಯದಲ್ಲಿ ನಾನು ಗಿಲ್ಯಡ್‌ನ ನಾಲ್ಕನೆಯ ಕ್ಲಾಸಿಗೆ ಹಾಜರಾದೆ. 1945ರ ಫೆಬ್ರವರಿ ತಿಂಗಳಿನಲ್ಲಿ ಪದವಿ ಪಡೆದ ಬಳಿಕ ನಾನು ಪೋರ್ಟ ರೀಕೊದಲ್ಲಿರುವ ನನ್ನ ಒಡಹುಟ್ಟಿದವರ ಜೊತೆಗೂಡಿದೆ. ಆಸಕ್ತಿಕರವಾದ ಒಂದು ಲೋಕವೇ ನನ್ನ ಮುಂದೆ ತೆರೆದುಕೊಂಡಂತಿತ್ತು! ಸ್ಪ್ಯಾನಿಷ್ ಭಾಷೆಯನ್ನು ಕಲಿಯುವುದು ಒಂದು ಪಂಥಾಹ್ವಾನವಾಗಿತ್ತಾದರೂ, ಸ್ವಲ್ಪ ಸಮಯಾವಧಿಯಲ್ಲೇ ನಮ್ಮಲ್ಲಿ ಕೆಲವರು ವೈಯಕ್ತಿಕವಾಗಿ 20 ಬೈಬಲ್ ಅಧ್ಯಯನಗಳನ್ನು ನಡೆಸುತ್ತಿದ್ದೆವು. ಯೆಹೋವನು ನಮ್ಮ ಕೆಲಸವನ್ನು ಆಶೀರ್ವದಿಸಿದನು. ಇಂದು ಪೋರ್ಟ ರೀಕೊದಲ್ಲಿ ಸುಮಾರು 25,000 ಮಂದಿ ಸಾಕ್ಷಿಗಳು ಇದ್ದಾರೆ.
ನಮ್ಮ ಕುಟುಂಬದ ಮೇಲೆ ದುರಂತಗಳು ಬಂದೆರಗಿದ್ದು
ಇಸವಿ 1950ರಲ್ಲಿ ಲೀಯೋ ಮತ್ತು ಯೂನಸ್‌ರಿಗೆ ಮಾರ್ಕ್ ಎಂಬ ಹೆಸರಿನ ಮಗನು ಜನಿಸಿದ ಬಳಿಕವೂ ಅವರು ಪೋರ್ಟ ರೀಕೊದಲ್ಲೇ ಉಳಿದರು. 1952ರಲ್ಲಿ ಅವರು, ಸ್ವದೇಶದಲ್ಲಿರುವ ಸಂಬಂಧಿಕರನ್ನು ಭೇಟಿಯಾಗಲಿಕ್ಕಾಗಿ ರಜೆಯನ್ನು ತೆಗೆದುಕೊಳ್ಳುವ ಏರ್ಪಾಡನ್ನು ಮಾಡಿದರು. ಏಪ್ರಿಲ್ 11ರಂದು ಅವರು ವಿಮಾನದ ಮೂಲಕ ಅಲ್ಲಿಂದ ಹೊರಟರು. ದುರಂತಕರವಾಗಿ, ವಿಮಾನವು ಮೇಲೆ ಹಾರಿದ ಸ್ವಲ್ಪದರಲ್ಲೇ ಸಾಗರಕ್ಕೆ ಬಿದ್ದು ಮುಳುಗಿಹೋಯಿತು. ಲೀಯೋ ಮತ್ತು ಯೂನಸ್ ಮೃತಪಟ್ಟರು. ಎರಡು ವರ್ಷದ ಮಾರ್ಕ್ ಸಾಗರದಲ್ಲಿ ತೇಲುತ್ತಿರುವುದನ್ನು ಕಂಡುಕೊಳ್ಳಲಾಯಿತು. ಈ ಅವಗಡದಿಂದ ಪಾರಾಗಿ ಉಳಿದವರೊಬ್ಬರು ಮಾರ್ಕ್‌ನನ್ನು ಜೀವರಕ್ಷಕ ತೆಪ್ಪದ ಮೇಲೆ ಹಾಕಿದ್ದರು. ಅವನಿಗೆ ಕೃತಕ ಉಸಿರಾಟವನ್ನು ನೀಡಲಾಯಿತು ಮತ್ತು ಅವನು ಬದುಕಿಉಳಿದನು. *
ಐದು ವರ್ಷಗಳ ಬಳಿಕ, 1957ರ ಮಾರ್ಚ್ 7ರಂದು ಅಪ್ಪ ಮತ್ತು ಅಮ್ಮನವರು ರಾಜ್ಯ ಸಭಾಗೃಹಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಗಾಡಿಯ ಟಯರ್ ಪಂಕ್ಚರ್ ಆಯಿತು. ರಸ್ತೆಯ ಬದಿಯಲ್ಲಿ ಟಯರನ್ನು ಬದಲಾಯಿಸುತ್ತಿದ್ದಾಗ, ಹಾದುಹೋಗುತ್ತಿದ್ದ ಒಂದು ಕಾರ್ ಅಪ್ಪನವರಿಗೆ ಬಡಿದು ಅವರು ಸ್ಥಳದಲ್ಲೇ ಮೃತಪಟ್ಟರು. ಸುಮಾರು 600 ಮಂದಿ ಶವಸಂಸ್ಕಾರದ ಭಾಷಣಕ್ಕೆ ಹಾಜರಾಗಿದ್ದರು ಮತ್ತು ತಂದೆಯವರನ್ನು ಗೌರವದಿಂದ ಕಾಣಲಾಗುತ್ತಿದ್ದ ನಮ್ಮ ಸಮುದಾಯದಲ್ಲಿ ಅತ್ಯುತ್ತಮವಾದ ಸಾಕ್ಷಿಯು ಕೊಡಲ್ಪಟ್ಟಿತು.
ಹೊಸ ನೇಮಕಗಳು
ಅಪ್ಪನವರು ಸಾಯುವುದಕ್ಕೆ ಸ್ವಲ್ಪ ಮುಂಚೆ, ಅರ್ಜೆಂಟೀನದಲ್ಲಿ ಸೇವೆಮಾಡುವ ನೇಮಕವನ್ನು ನಾನು ಪಡೆದುಕೊಂಡಿದ್ದೆ. 1957ರ ಆಗಸ್ಟ್ ತಿಂಗಳಿನಲ್ಲಿ ನಾನು ಆ್ಯಂಡಿಸ್ ಪರ್ವತದ ಬುಡದಲ್ಲಿರುವ ಮೆಂಡೊಸಾ ನಗರಕ್ಕೆ ಬಂದಿಳಿದೆ. 1958ರಲ್ಲಿ, ಗಿಲ್ಯಡ್‌ನ 30ನೇ ಕ್ಲಾಸಿನ ಪದವೀಧರನಾಗಿದ್ದ ಜಾರ್ಜ್ ಪೇಪಸ್‌ನನ್ನು ಸಹ ಅರ್ಜೆಂಟೀನಕ್ಕೆ ನೇಮಿಸಲಾಯಿತು. ಜಾರ್ಜ್ ಮತ್ತು ನಾನು ಒಳ್ಳೇ ಸ್ನೇಹಿತರಾದೆವು ಮತ್ತು 1960ರ ಏಪ್ರಿಲ್ ತಿಂಗಳಿನಲ್ಲಿ ನಾವು ಮದುವೆಮಾಡಿಕೊಂಡೆವು. 1961ರಲ್ಲಿ 83ರ ಪ್ರಾಯದಲ್ಲಿ ನನ್ನ ಅಮ್ಮ ಮೃತಪಟ್ಟರು. ಸತ್ಯಾರಾಧನೆಯ ಮಾರ್ಗದಲ್ಲಿ
ಅವರು ನಂಬಿಗಸ್ತಿಕೆಯಿಂದ ನಡೆದಿದ್ದರು ಮತ್ತು ಇದನ್ನೇ ಮಾಡುವಂತೆ ಇನ್ನೂ ಅನೇಕಾನೇಕರಿಗೆ ಸಹಾಯಮಾಡಿದ್ದರು.ಹತ್ತು ವರ್ಷಗಳ ವರೆಗೆ ಜಾರ್ಜ್ ಮತ್ತು ನಾನು ಇತರ ಮಿಷನೆರಿಗಳೊಂದಿಗೆ ಸೇರಿ ಬೇರೆ ಬೇರೆ ಮಿಷನೆರಿ ಗೃಹಗಳಲ್ಲಿ ಸೇವೆಮಾಡಿದೆವು. ತದನಂತರ ಸರ್ಕಿಟ್ ಕೆಲಸದಲ್ಲಿ ಏಳು ವರ್ಷಗಳನ್ನು ಕಳೆದೆವು. 1975ರಲ್ಲಿ, ಅಸ್ವಸ್ಥರಾಗಿದ್ದ ಕುಟುಂಬ ಸದಸ್ಯರಿಗೆ ಸಹಾಯಮಾಡಲಿಕ್ಕಾಗಿ ನಾವು ಅಮೆರಿಕಕ್ಕೆ ಹಿಂದಿರುಗಿದೆವು. 1980ರಲ್ಲಿ ನನ್ನ ಪತಿಯನ್ನು ಸ್ಪ್ಯಾನಿಷ್ ಭಾಷೆಯ ಕ್ಷೇತ್ರದಲ್ಲಿ ಸರ್ಕಿಟ್ ಕೆಲಸವನ್ನು ಮಾಡುವಂತೆ ಆಮಂತ್ರಿಸಲಾಯಿತು. ಆ ಸಮಯದಲ್ಲಿ ಅಮೆರಿಕದಲ್ಲಿ ಸ್ಪ್ಯಾನಿಷ್ ಭಾಷೆಯನ್ನು ಮಾತಾಡುವಂಥ ಸುಮಾರು 600 ಸಭೆಗಳು ಇದ್ದವು. ಸುಮಾರು 26 ವರ್ಷಗಳ ವರೆಗೆ ನಾವು ಅವುಗಳಲ್ಲಿ ಅನೇಕ ಸಭೆಗಳನ್ನು ಸಂದರ್ಶಿಸಿದೆವು ಮತ್ತು ಸಭೆಗಳ ಸಂಖ್ಯೆಯು 3,000ಕ್ಕಿಂತಲೂ ಅಧಿಕಗೊಳ್ಳುವುದನ್ನು ನೋಡಿದೆವು.
ಅವರು ಅದೇ “ಮಾರ್ಗ”ದಲ್ಲಿ ನಡೆದಿದ್ದಾರೆ
ತಮ್ಮ ಕುಟುಂಬದ ಕಿರಿಯ ಸದಸ್ಯರು ಪೂರ್ಣ ಸಮಯದ ಶುಶ್ರೂಷೆಯನ್ನು ಪ್ರವೇಶಿಸುವುದನ್ನು ನೋಡುವುದರಿಂದ ಉಂಟಾಗುವ ಆನಂದದ ಅನುಭವ ಸಹ ಅಮ್ಮನಿಗೆ ಲಭಿಸಿತು. ಉದಾಹರಣೆಗೆ, ನನ್ನ ಹಿರಿಯ ಅಕ್ಕಳಾದ ಎಸ್ಟರ್‌ಳ ಮಗಳಾದ ಕ್ಯಾರಲ್ 1953ರಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದಳು. ಸಮಯಾನಂತರ ಅವಳು ಡೆನಸ್ ಟ್ರಂಬೋರ್‌ನನ್ನು ಮದುವೆಯಾದಳು ಮತ್ತು ಅಂದಿನಿಂದ ಅವರಿಬ್ಬರೂ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಪಾಲ್ಗೊಂಡಿದ್ದಾರೆ. ಎಸ್ಟರ್‌ಳ ಇನ್ನೊಬ್ಬ ಮಗಳಾದ ಲೋಯಿಸಳು ವೆಂಡೆಲ್ ಜೆನ್ಸನ್‌ನನ್ನು ಮದುವೆಯಾದಳು. ಅವರು ಗಿಲ್ಯಡ್‌ನ 41ನೆಯ ಕ್ಲಾಸಿಗೆ ಹಾಜರಾಗಿ, ನೈಜೀರಿಯದಲ್ಲಿ 15 ವರ್ಷಗಳ ವರೆಗೆ ಮಿಷನೆರಿಗಳಾಗಿ ಸೇವೆಮಾಡಿದರು. ವಿಮಾನ ಅಪಘಾತದಲ್ಲಿ ಹೆತ್ತವರನ್ನು ಕಳೆದುಕೊಂಡ ಮಾರ್ಕ್‌ನನ್ನು ಲೀಯೋನ ಸಹೋದರಿಯಾದ ರೂತ್ ಲ ಲೊಂಡ್ ಮತ್ತು ಅವಳ ಪತಿಯಾದ ಕರ್ಟಿಸ್‌ರು ದತ್ತುತೆಗೆದುಕೊಂಡು ಸಾಕಿದರು. ಮಾರ್ಕ್ ಮತ್ತು ಅವನ ಪತ್ನಿಯಾದ ಲವೋನ್ ಅನೇಕ ವರ್ಷಗಳ ವರೆಗೆ ಪಯನೀಯರ್ ಸೇವೆಯನ್ನು ಮಾಡಿದರು ಮತ್ತು ತಮ್ಮ ನಾಲ್ಕು ಮಂದಿ ಮಕ್ಕಳನ್ನು ಅದೇ “ಮಾರ್ಗ”ದಲ್ಲಿ ಬೆಳೆಸಿದರು.—ಯೆಶಾ. 30:21.
ನನ್ನ ಒಡಹುಟ್ಟಿದವರಲ್ಲಿ ಇನ್ನೂ ಬದುಕಿರುವವನು ಓರ್ಲನ್ ಒಬ್ಬನೇ, ಅವನು ಈಗ ಸುಮಾರು 95ರ ಪ್ರಾಯದವನಾಗಿದ್ದಾನೆ. ಈಗಲೂ ಅವನು ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿದ್ದಾನೆ. ಜಾರ್ಜ್ ಮತ್ತು ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆನಂದಭರಿತರಾಗಿ ಮುಂದುವರಿಯುತ್ತಿದ್ದೇವೆ.
ಅಮ್ಮ ಬಿಟ್ಟುಹೋದ ಆಸ್ತಿ
ಅಮ್ಮನ ಅಮೂಲ್ಯ ವಸ್ತುಗಳಲ್ಲಿ ಒಂದು ಈಗ ನನ್ನ ಬಳಿ ಇದೆ. ಅದು ಅವರ ಮೇಜೇ. ಇದು ನನ್ನ ತಂದೆಯವರು ಅವರಿಗೆ ಕೊಟ್ಟ ಮದುವೆಯ ಉಡುಗೊರೆಯಾಗಿತ್ತು. ಅದರ ಡ್ರಾಯರುಗಳಲ್ಲೊಂದರಲ್ಲಿ ಅವರ ಹಳೆಯ ಸಂಕಲನ ಪುಸ್ತಕ (ಸ್ಕ್ರಾಪ್‌ಬುಕ್) ಇದೆ. ಆ ಪುಸ್ತಕದಲ್ಲಿ ಅವರು ಬರೆದ ಹಾಗೂ ದೇವರ ರಾಜ್ಯದ ಕುರಿತು ಅತ್ಯುತ್ತಮ ಸಾಕ್ಷಿಯನ್ನು ಕೊಟ್ಟ ಪತ್ರಗಳು ಮತ್ತು ವಾರ್ತಾಪತ್ರಿಕೆಯ ಮುದ್ರಿತ ಲೇಖನಗಳು ಇವೆ. ಇವುಗಳಲ್ಲಿ ಕೆಲವು 1900ಗಳ ಆರಂಭದಷ್ಟು ಹಿಂದಿನ ತಾರೀಖಿನವುಗಳಾಗಿವೆ. ಈ ಮೇಜಿನಲ್ಲಿ ಅಮ್ಮನ ಮಿಷನೆರಿ ಮಕ್ಕಳಿಂದ ಬಂದ ಅಮೂಲ್ಯ ಪತ್ರಗಳು ಸಹ ಇವೆ. ಇವುಗಳನ್ನು ಪುನಃ ಪುನಃ ಓದುವುದು ನನ್ನ ಮನಸ್ಸಿಗೆಷ್ಟು ಸಂತೋಷವನ್ನು ನೀಡುತ್ತದೆ! ಇದಲ್ಲದೆ ಅವರು ನಮಗೆ ಬರೆಯುತ್ತಿದ್ದ ಪತ್ರಗಳು ಯಾವಾಗಲೂ ತುಂಬ ಉತ್ತೇಜನದಾಯಕವಾಗಿರುತ್ತಿದ್ದವು ಮತ್ತು ಸಕಾರಾತ್ಮಕ ವಿಚಾರಗಳಿಂದ ತುಂಬಿರುತ್ತಿದ್ದವು. ಒಬ್ಬ ಮಿಷನೆರಿಯಾಗುವ ಅಮ್ಮನ ಬಯಕೆಯು ಎಂದಿಗೂ ಈಡೇರಲಿಲ್ಲ. ಆದರೆ ಅವರಿಗೆ ಮಿಷನೆರಿ ಸೇವೆಗಾಗಿರುವ ಹುರುಪು ಇತ್ತು ಮತ್ತು ಅವರ ಬಳಿಕವೂ ಇತರರ ಹೃದಯಗಳನ್ನು ಅನೇಕ ಸಂತತಿಗಳ ವರೆಗೆ ಇದು ಪ್ರಚೋದಿಸಿತು. ಪರದೈಸ ಭೂಮಿಯಲ್ಲಿ ಅಮ್ಮ ಮತ್ತು ಅಪ್ಪನೊಂದಿಗೆ ಕುಟುಂಬದ ಸಂತೋಷಕರ ಪುನರ್ಮಿಲನಕ್ಕಾಗಿ ನಾನೆಷ್ಟು ಮುನ್ನೋಡುತ್ತಿದ್ದೇನೆ!—ಪ್ರಕ. 21:3, 4.
[ಪಾದಟಿಪ್ಪಣಿಗಳು]
^ ಪ್ಯಾರ. 13 ಮಾರ್ಥರ ಮಕ್ಕಳಲ್ಲಿ ಒಬ್ಬರಾದ ಎಮಲ್ ಏಚ್. ವಾನ್ ಡಾಲನ್‌ರ ಜೀವನಕಥೆಗಾಗಿ ಕಾವಲಿನಬುರುಜು (ಇಂಗ್ಲಿಷ್) 1983, ಜೂನ್ 15, ಪುಟಗಳು 27-30ನ್ನು ನೋಡಿ.
^ ಪ್ಯಾರ. 24 ಎಚ್ಚರ! (ಇಂಗ್ಲಿಷ್) 1952, ಜೂನ್ 22, ಪುಟಗಳು 3-4ನ್ನು ನೋಡಿ.
[ಪುಟ 17ರಲ್ಲಿರುವ ಚಿತ್ರ]
ಎಮಿಲೀಯ ಪೆಡರ್ಸನ್
[ಪುಟ 18ರಲ್ಲಿರುವ ಚಿತ್ರ]
1916: ಅಮ್ಮ, ಅಪ್ಪ (ಮಾರ್ವನ್‌ನನ್ನು ಹಿಡಿದುಕೊಂಡಿದ್ದಾರೆ); ಕೆಳಗೆ, ಎಡದಿಂದ ಬಲಕ್ಕೆ: ಓರ್ಲನ್, ಎಸ್ಟರ್, ಲಿಲ್ಯನ್, ಮಿಲ್‌ಡ್ರೆಡ್
[ಪುಟ 19ರಲ್ಲಿರುವ ಚಿತ್ರ]
ಲೀಯೋ ಮತ್ತು ಯೂನಸ್—ತಮ್ಮ ಮರಣಕ್ಕೆ ಸ್ವಲ್ಪ ಮುಂಚೆ
[ಪುಟ 20ರಲ್ಲಿರುವ ಚಿತ್ರ]
1950: ಎಡದಿಂದ ಬಲಕ್ಕೆ, ಮೇಲೆ: ಎಸ್ಟರ್, ಮಿಲ್‌ಡ್ರೆಡ್, ಲಿಲ್ಯನ್, ಯೂನಸ್, ರೂತ್; ಕೆಳಗೆ: ಓರ್ಲನ್, ಅಮ್ಮ, ಅಪ್ಪ ಮತ್ತು ಮಾರ್ವನ್
[ಪುಟ 20ರಲ್ಲಿರುವ ಚಿತ್ರ]
2001ರಲ್ಲಿ, ಸರ್ಕಿಟ್ ಕೆಲಸದಲ್ಲಿ ಜಾರ್ಜ್ ಮತ್ತು ರೂತ್ ಪೇಪಸ್