ಅವರು ‘ಕುರಿಯಾದಾತನ ಹಿಂದೆ ಹೋಗುವರು’
ಅವರು ‘ಕುರಿಯಾದಾತನ ಹಿಂದೆ ಹೋಗುವರು’
“ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು.”—ಪ್ರಕ. 14:4.
ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿ ಸುಮಾರು ಎರಡೂವರೆ ವರ್ಷಗಳು ಕಳೆದಿದ್ದವು. ಅವನು “ಕಪೆರ್ನೌಮಿನ ಸಭಾಮಂದಿರದಲ್ಲಿ ಉಪದೇಶಮಾಡು”ತ್ತಿದ್ದಾಗ, ಅವನ ಮಾತು ಕಠಿಣವಾದದ್ದೆಂದು ಎಣಿಸಿ “ಆತನ ಶಿಷ್ಯರಲ್ಲಿ ಅನೇಕರು ಹಿಂಜರಿದು ಆತನ ಕೂಡ ಸಂಚಾರಮಾಡುವದನ್ನು ಬಿಟ್ಟರು.” ಆಗ ಯೇಸು ತನ್ನ 12 ಮಂದಿ ಅಪೊಸ್ತಲರಿಗೆ, ಅವರು ಸಹ ಹೋಗಲು ಇಚ್ಛಿಸುತ್ತಾರೋ ಎಂದು ಕೇಳಿದಾಗ ಸೀಮೋನ ಪೇತ್ರ ಉತ್ತರಿಸಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.” (ಯೋಹಾ. 6:48, 59, 60, 66-69) ಯೇಸುವಿನ ನಿಜ ಶಿಷ್ಯರು ಆತನನ್ನು ಹಿಂಬಾಲಿಸುವುದನ್ನು ಬಿಟ್ಟುಬಿಡಲಿಲ್ಲ. ಪವಿತ್ರಾತ್ಮದಿಂದ ಅಭಿಷಿಕ್ತರಾದ ಬಳಿಕವೂ ಅವರು ಯೇಸುವಿನ ನಿರ್ದೇಶನಕ್ಕೆ ಅಧೀನರಾಗಿ ಮುಂದುವರಿದರು.—ಅ. ಕೃ. 16:7-10.
2 ಆಧುನಿಕ ಸಮಯಗಳಲ್ಲಿ ಅಭಿಷಿಕ್ತ ಕ್ರೈಸ್ತರ ಕುರಿತೇನು? ಯೇಸು, ತನ್ನ ‘ಪ್ರತ್ಯಕ್ಷತೆ ಹಾಗೂ ಯುಗದ ಸಮಾಪ್ತಿಯ ಸೂಚನೆಯ’ ಕುರಿತ ಪ್ರವಾದನೆಯಲ್ಲಿ ಭೂಮಿಯಲ್ಲಿರುವ ತನ್ನ ಆತ್ಮಾಭಿಷಿಕ್ತ ಹಿಂಬಾಲಕರ ಗುಂಪನ್ನು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅಥವಾ ‘ನಂಬಿಗಸ್ತ ಮನೆವಾರ್ತೆ’ ಎಂದು ಕರೆದನು. (ಮತ್ತಾ. 24:3, 45; ಲೂಕ 12:42) ಈ ಆಳು ವರ್ಗವು ಒಂದು ಗುಂಪಿನೋಪಾದಿ, ‘ಕುರಿಯಾದಾತನು ಎಲ್ಲಿ ಹೋದರೂ ಆತನ ಹಿಂದೆ ಹೋಗುವ’ ಉತ್ತಮ ದಾಖಲೆಯನ್ನು ಹೊಂದಿದೆ. (ಪ್ರಕಟನೆ 14:4, 5 ಓದಿ.) ಇದರ ಸದಸ್ಯರು, ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನ’ ನಂಬಿಕೆಗಳು ಹಾಗೂ ಆಚರಣೆಗಳಿಂದ ತಮ್ಮನ್ನು ಕಲುಷಿತಗೊಳಿಸದಿರುವ ಮೂಲಕ ಆಧ್ಯಾತ್ಮಿಕವಾಗಿ ಕನ್ಯೆಯರಂತೆ ಉಳಿಯುತ್ತಾರೆ. (ಪ್ರಕ. 17:5) “ಇವರ ಬಾಯಲ್ಲಿ” ಯಾವುದೇ ಸುಳ್ಳು ಬೋಧನೆಗಳಿಲ್ಲ, ಮತ್ತು ಇವರು ಸೈತಾನನ ಲೋಕದಲ್ಲಿ “ನಿರ್ದೋಷಿಗಳಾಗಿದ್ದಾರೆ.” (ಯೋಹಾ. 15:19) ಭವಿಷ್ಯತ್ತಿನಲ್ಲಿ, ಭೂಮಿಯಲ್ಲಿ ಉಳಿದಿರುವ ಅಭಿಷಿಕ್ತರು ಕುರಿಯಾದಾತನ ‘ಹಿಂದೆಯೇ’ ಪರಲೋಕಕ್ಕೆ ಹೋಗುವರು.—ಯೋಹಾ. 13:36.
3 ಯೇಸು ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು, ತನ್ನ “ಮನೆಯವರಿಗೆ” ಅಂದರೆ ಅದೇ ವರ್ಗದ ಸದಸ್ಯರಿಗೆ “ಹೊತ್ತು ಹೊತ್ತಿಗೆ ಆಹಾರ ಕೊಡಲಿಕ್ಕೆ” ನೇಮಿಸಿದ್ದಾನೆ. ಅವನು ಆ ಆಳನ್ನು ‘ತನ್ನ ಎಲ್ಲಾ ಆಸ್ತಿಯ ಮೇಲೂ’ ನೇಮಿಸಿದ್ದಾನೆ. (ಮತ್ತಾ. 24:45-47) ಈ “ಆಸ್ತಿ”ಯಲ್ಲಿ “ಬೇರೆ ಕುರಿಗಳ” ವೃದ್ಧಿಯಾಗುತ್ತಿರುವ “ಮಹಾ ಸಮೂಹ” ಸೇರಿದೆ. (ಪ್ರಕ. 7:9; ಯೋಹಾ. 10:16) ಅಭಿಷಿಕ್ತರ ಹಾಗೂ “ಬೇರೆ ಕುರಿಗಳ” ವರ್ಗದಲ್ಲಿ ಪ್ರತಿಯೊಬ್ಬ ಸದಸ್ಯನು ತನ್ನ ಮೇಲೆ ನೇಮಿಸಲಾಗಿರುವ ಆಳಿನಲ್ಲಿ ಭರವಸೆಯಿಡಬೇಕಲ್ಲವೇ? ಆಳು ವರ್ಗವು ನಮ್ಮ ಭರವಸೆಗೆ ಅರ್ಹವಾಗಿರಲು ಅನೇಕ ಕಾರಣಗಳಿವೆ. ಎರಡು ಗಮನಾರ್ಹ ಕಾರಣಗಳು ಇವಾಗಿವೆ: (1) ಯೆಹೋವನಿಗೆ ಈ ಆಳು ವರ್ಗದ ಮೇಲೆ ಭರವಸೆಯಿದೆ. (2) ಯೇಸುವಿಗೆ ಸಹ ಈ ಆಳು ವರ್ಗದ ಮೇಲೆ ಭರವಸೆಯಿದೆ. ಅವರಿಬ್ಬರಿಗೂ ಆಳು ವರ್ಗದಲ್ಲಿ ಪೂರ್ಣ ಭರವಸೆಯಿದೆ ಎಂಬುದಕ್ಕಿರುವ ಸಾಕ್ಷ್ಯಗಳನ್ನು ನಾವೀಗ ಪರಿಗಣಿಸೋಣ.
ಯೆಹೋವನಿಗೆ ಆಳಿನ ಮೇಲೆ ಭರವಸೆಯಿದೆ
4 ಸಮಯೋಚಿತ, ಪೌಷ್ಠಿಕ ಆಧ್ಯಾತ್ಮಿಕ ಆಹಾರವನ್ನು ಕೊಡಲು ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ ಹೇಗೆ ಸಾಧ್ಯವಾಗುತ್ತದೆ? ಯೆಹೋವನು ಹೇಳುವುದು: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆಹೇಳುವೆನು.” (ಕೀರ್ತ. 32:8) ಹೌದು, ಯೆಹೋವನೇ ಆಳಿಗೆ ನಿರ್ದೇಶನ ಕೊಡುತ್ತಾನೆ. ಆದುದರಿಂದಲೇ, ಈ ಆಳಿನಿಂದ ಸಿಗುವ ಆಧ್ಯಾತ್ಮಿಕ ಒಳನೋಟ, ತಿಳುವಳಿಕೆ ಮತ್ತು ಮಾರ್ಗದರ್ಶನದಲ್ಲಿ ನಾವು ಪೂರ್ಣ ಭರವಸೆಯಿಡಬಲ್ಲೆವು.
5 ಯೆಹೋವನು ಆಳು ವರ್ಗಕ್ಕೆ ತನ್ನ ಪವಿತ್ರಾತ್ಮ ಸಹ ಕೊಟ್ಟು ಆಶೀರ್ವದಿಸುತ್ತಾನೆ. ಯೆಹೋವನ ಪವಿತ್ರಾತ್ಮವು ಅದೃಶ್ಯವಾಗಿದ್ದರೂ, ಅದು ಇತರರಲ್ಲಿ ಕಾರ್ಯವೆಸಗುವಾಗ ಉಂಟಾಗುವ ಪರಿಣಾಮಗಳು ಸ್ಪಷ್ಟವಾಗಿ ತೋರಿಬರುತ್ತವೆ. ಯೆಹೋವ ದೇವರ, ಆತನ ಮಗನ ಹಾಗೂ ರಾಜ್ಯದ ಕುರಿತು ಸಾಕ್ಷಿಕೊಡುವ ವಿಷಯದಲ್ಲಿ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಏನೆಲ್ಲ ಸಾಧಿಸಿದೆ ಎಂಬುದರ ಕುರಿತು ಯೋಚಿಸಿ. ಯೆಹೋವನ ಆರಾಧಕರು 230ಕ್ಕಿಂತಲೂ ಹೆಚ್ಚು ದೇಶದ್ವೀಪಗಳಲ್ಲಿ ದೇವರ ರಾಜ್ಯದ ಸಂದೇಶವನ್ನು ಸಕ್ರಿಯವಾಗಿ ಘೋಷಿಸುತ್ತಿದ್ದಾರೆ. ಇದು ತಾನೇ, ದೇವರಾತ್ಮವು ಆಳು ವರ್ಗಕ್ಕೆ ಬಲ ಕೊಡುತ್ತಿದೆಯೆಂಬುದಕ್ಕೆ ನಿರಾಕರಿಸಲಾಗದ ಸಾಕ್ಷ್ಯವಲ್ಲವೇ? (ಅ. ಕೃತ್ಯಗಳು 1:8 ಓದಿ.) ಲೋಕವ್ಯಾಪಕವಾಗಿ ಯೆಹೋವನ ಜನರಿಗೆ ಸಮಯೋಚಿತ ಆಧ್ಯಾತ್ಮಿಕ ಆಹಾರವನ್ನು ಕೊಡಲು ಆಳು ವರ್ಗವು ಅತಿ ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾಗಿದೆ. ಅಂಥ ನಿರ್ಣಯಗಳನ್ನು ಮಾಡಿ, ಜಾರಿಗೆತರುವಾಗ ಆಳು ವರ್ಗವು ಪ್ರೀತಿ, ಸಾಧುತ್ವ ಮತ್ತು ಆತ್ಮದ ಇತರ ಗುಣಗಳನ್ನು ಪ್ರದರ್ಶಿಸುತ್ತದೆ.—ಗಲಾ. 5:22, 23.
6 ಯೆಹೋವನು ನಂಬಿಗಸ್ತ ಆಳಿನ ಮೇಲೆ ಎಷ್ಟರ ಮಟ್ಟಿಗೆ ಭರವಸೆಯಿಟ್ಟಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು, ಆತನು ಆ ವರ್ಗದ ಸದಸ್ಯರಿಗೆ ಏನನ್ನು ವಾಗ್ದಾನಿಸಿದ್ದಾನೋ ಅದರ ಕುರಿತು ಸ್ವಲ್ಪ ಯೋಚಿಸಿ. ಅಪೊಸ್ತಲ ಪೌಲನು ಬರೆದದ್ದು: “ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು. ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ.” (1 ಕೊರಿಂ. 15:52, 53) ನಂಬಿಗಸ್ತಿಕೆಯಿಂದ ದೇವರ ಸೇವೆಮಾಡಿದ ಯೇಸುವಿನ ಅಭಿಷಿಕ್ತ ಹಿಂಬಾಲಕರು ಲಯವಾಗುವ ದೇಹದೊಂದಿಗೆ ಸಾಯುತ್ತಾರಾದರೂ, ಪುನರುತ್ಥಾನಗೊಳ್ಳುವಾಗ ನಿತ್ಯಜೀವವುಳ್ಳ ಆತ್ಮಜೀವಿಗಳಿಗಿಂತ ಶ್ರೇಷ್ಠರಾಗುತ್ತಾರೆ. ಅವರಿಗೆ ಅಮರತ್ವವನ್ನು ಕೊಡಲಾಗುತ್ತದೆ. ಇದು ಅಂತ್ಯವಿಲ್ಲದ, ಅವಿನಾಶಿ ಜೀವವಾಗಿದೆ. ಅಲ್ಲದೆ, ಅವರಿಗೆ ನಿರ್ಲಯತ್ವವೂ ಸಿಗುತ್ತದೆ. ಅದರರ್ಥ, ಅವರಿಗೆ ಸಿಗುವ ದೇಹಗಳು ನಶಿಸಿಹೋಗಲಾರದವುಗಳು ಮತ್ತು ಸ್ವ-ಪೋಷಣೆ ಮಾಡುವಂಥವುಗಳಾಗಿರುತ್ತವೆ. ಪ್ರಕಟನೆ 4:4 ಇವರನ್ನು, ಸಿಂಹಾಸನಗಳ ಮೇಲೆ ಕೂತಿದ್ದು ಚಿನ್ನದ ಕಿರೀಟಗಳನ್ನು ಧರಿಸಿರುವವರಾಗಿ ವರ್ಣಿಸುತ್ತದೆ. ಹೀಗೆ, ಅಭಿಷಿಕ್ತ ಕ್ರೈಸ್ತರಿಗಾಗಿ ರಾಜವೈಭವ ಕಾದಿದೆ. ಆದರೆ ದೇವರಿಗೆ ಅವರ ಮೇಲೆ ಭರವಸೆ ಇದೆಯೆಂಬುದಕ್ಕೆ ಇನ್ನಷ್ಟು ಸಾಕ್ಷ್ಯಗಳಿವೆ.
7ಪ್ರಕಟನೆ 19:7, 8 ಹೇಳುವುದು: “ಯಜ್ಞದ ಕುರಿಯಾದಾತನ ವಿವಾಹಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; . . . ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು. ಆ ನಾರುಮಡಿ ಅಂದರೆ ದೇವಜನರ ಸತ್ಕಾರ್ಯಗಳೇ.” ಯೆಹೋವನು ಅಭಿಷಿಕ್ತ ಕ್ರೈಸ್ತರನ್ನು ತನ್ನ ಮಗನಾದ ಯೇಸು ಕ್ರಿಸ್ತನಿಗೆ ಮದಲಗಿತ್ತಿಯಾಗಲು ಆಯ್ಕೆಮಾಡಿದ್ದಾನೆ. ನಿರ್ಲಯತ್ವ, ಅಮರತ್ವ, ರಾಜವೈಭವ, ‘ಕುರಿಯಾದಾತನೊಂದಿಗೆ ವಿವಾಹ,’ ಇವೆಲ್ಲವೂ ಎಷ್ಟು ವಿಸ್ಮಯಕಾರಿ ವರಗಳು! ಇವು, ‘ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಆತನ ಹಿಂದೆ ಹೋಗುವ’ ಅಭಿಷಿಕ್ತರ ಮೇಲೆ ಯೆಹೋವನಿಗಿರುವ ಭರವಸೆಯ ಕುರಿತ ಭಾವಪ್ರಚೋದಕ ಸಾಕ್ಷ್ಯಗಳಾಗಿವೆ.
ಯೇಸುವಿಗೆ ಆಳಿನ ಮೇಲೆ ಭರವಸೆಯಿದೆ
8 ಯೇಸುವಿಗೆ ತನ್ನ ಆತ್ಮಾಭಿಷಿಕ್ತ ಹಿಂಬಾಲಕರ ಮೇಲೆ ಪೂರ್ಣ ಭರವಸೆಯಿದೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ? ಭೂಜೀವಿತದ ಕೊನೆ ರಾತ್ರಿಯಂದು ಯೇಸು ತನ್ನ 11 ಮಂದಿ ನಂಬಿಗಸ್ತ ಅಪೊಸ್ತಲರಿಗೆ ಈ ಮಾತು ಕೊಟ್ಟನು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.” (ಲೂಕ 22:28-30) ಯೇಸು ಆ 11 ಮಂದಿಯೊಂದಿಗೆ ಮಾಡಿದ ಒಡಂಬಡಿಕೆಯು, ಎಲ್ಲ 1,44,000 ಅಭಿಷಿಕ್ತ ಕ್ರೈಸ್ತರಿಗೆ ಅನ್ವಯವಾಗುವುದು. (ಲೂಕ 12:32; ಪ್ರಕ. 5:9, 10; 14:1) ಒಂದುವೇಳೆ ಯೇಸುವಿಗೆ ಅವರ ಮೇಲೆ ಭರವಸೆಯಿರದಿದ್ದಲ್ಲಿ, ತನ್ನ ರಾಜ್ಯಾಧಿಕಾರವನ್ನೇ ಹಂಚಿಕೊಳ್ಳುವ ಆ ಒಡಂಬಡಿಕೆಯನ್ನು ಅವರೊಂದಿಗೆ ಮಾಡುತ್ತಿದ್ದನೋ?
9 ಅಷ್ಟುಮಾತ್ರವಲ್ಲದೆ, ಯೇಸು ಕ್ರಿಸ್ತನು ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗವನ್ನು “ತನ್ನ ಎಲ್ಲಾ ಆಸ್ತಿ” ಅಂದರೆ ಭೂಮಿಯಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳ ಮೇಲೆ ನೇಮಿಸಿದ್ದಾನೆ. (ಮತ್ತಾ. 24:47) ಈ ಆಸ್ತಿಯಲ್ಲಿ, ಯೆಹೋವನ ಸಾಕ್ಷಿಗಳ ಜಾಗತಿಕ ಕಾರ್ಯಾಲಯದಲ್ಲಿ, ಬೇರೆಬೇರೆ ದೇಶಗಳಲ್ಲಿರುವ ಬ್ರಾಂಚ್ ಆಫೀಸ್ಗಳಲ್ಲಿ, ಜಗತ್ತಿನಾದ್ಯಂತವಿರುವ ಅಸೆಂಬ್ಲಿ ಹಾಲ್ಗಳಲ್ಲಿ, ರಾಜ್ಯ ಸಭಾಗೃಹಗಳಲ್ಲಿ ಇರುವ ಎಲ್ಲ ಸ್ವತ್ತುಗಳು ಒಳಗೂಡಿವೆ. ಅಲ್ಲದೇ, ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವು ಸಹ ಅದರಲ್ಲಿ ಸೇರಿದೆ. ಯಾರಾದರೂ ತಾನು ಭರವಸೆಯಿಡದ ವ್ಯಕ್ತಿಯ ಕೈಗೆ ತನ್ನ ಅಮೂಲ್ಯ ವಸ್ತುಗಳನ್ನು ಒಪ್ಪಿಸುವನೋ?
10 ಪುನರುತ್ಥಿತ ಕ್ರಿಸ್ತನು ಸ್ವರ್ಗಕ್ಕೇರಿಹೋಗುವ ಸ್ವಲ್ಪ ಮುಂಚೆ ತನ್ನ ನಂಬಿಗಸ್ತ ಶಿಷ್ಯರಿಗೆ ಕಾಣಿಸಿಕೊಂಡು ಅವರಿಗೆ ಮಾತುಕೊಟ್ಟಿದ್ದು: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಅವನು ಈ ಮಾತನ್ನು ಉಳಿಸಿಕೊಂಡಿದ್ದಾನೋ? 15 ವರ್ಷಗಳ ಹಿಂದೆ ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ಸುಮಾರು 70,000 ಸಭೆಗಳಿದ್ದವು. ಈಗ ಅವುಗಳ ಸಂಖ್ಯೆ 1,00,000ಕ್ಕೂ ಮೀರಿದೆ. ಶೇಕಡ 40ಕ್ಕಿಂತಲೂ ಹೆಚ್ಚು ವೃದ್ಧಿ! ಹೊಸ ಶಿಷ್ಯರ ಕುರಿತೇನು? ಕಳೆದ 15 ವರ್ಷಗಳಲ್ಲಿ ಸುಮಾರು 45,00,000 ಮಂದಿ ದೀಕ್ಷಾಸ್ನಾನಹೊಂದಿದ್ದಾರೆ. ಅಂದರೆ ಪ್ರತಿದಿನ ಸರಾಸರಿ 800ಕ್ಕೂ ಹೆಚ್ಚು ಮಂದಿ! ಈ ಅತ್ಯದ್ಭುತ ವೃದ್ಧಿಗಳು, ಯೇಸು ತನ್ನ ಅಭಿಷಿಕ್ತ ಹಿಂಬಾಲಕರನ್ನು ಅವರ ಸಭಾ ಕೂಟಗಳಲ್ಲಿ ನಿರ್ದೇಶಿಸುತ್ತಿದ್ದಾನೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಅವರನ್ನು ಬೆಂಬಲಿಸುತ್ತಿದ್ದಾನೆ ಎಂಬುದಕ್ಕೆ ಸ್ಪಷ್ಟ ರುಜುವಾತಾಗಿವೆ.
ನಂಬಿಗಸ್ತ ಮತ್ತು ವಿವೇಕಿ ಆಳು
11 ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ನಂಬಿಗಸ್ತನೂ ವಿವೇಕಿಯೂ ಆದ ಆಳಿನ ಮೇಲೆ ಪೂರ್ಣ ಭರವಸೆಯಿಟ್ಟಿರುವುದರಿಂದ ನಾವೂ ಭರವಸೆಯಿಡಬೇಕಲ್ಲವೇ? ಅಷ್ಟುಮಾತ್ರವಲ್ಲ ಆ ಆಳು ತಾನೇ, ತನಗೆ ನೇಮಕವಾಗಿರುವ ಕೆಲಸವನ್ನು ನಂಬಿಗಸ್ತಿಕೆಯಿಂದ ಮಾಡಿತೋರಿಸಿದೆ. ಉದಾಹರಣೆಗೆ, 130 ವರ್ಷಗಳಿಂದ ಕಾವಲಿನಬುರುಜು ಪತ್ರಿಕೆಯನ್ನು ಪ್ರಕಾಶಿಸಲಾಗುತ್ತಿದೆ! ಅಲ್ಲದೆ, ಯೆಹೋವನ ಸಾಕ್ಷಿಗಳ ಕೂಟಗಳು, ಸಮ್ಮೇಳನಗಳು, ಅಧಿವೇಶನಗಳು ಈಗಲೂ ನಮ್ಮನ್ನು ಆಧ್ಯಾತ್ಮಿಕವಾಗಿ ಕಟ್ಟುತ್ತಾ ಇವೆ.
12 ನಂಬಿಗಸ್ತ ಆಳು ವಿವೇಕಿಯೂ ಆಗಿದೆ. ಅದು ಯೆಹೋವನಿಂದ ಸ್ಪಷ್ಟ ನಿರ್ದೇಶನ ಸಿಗುವ ಮುಂಚೆ ಕ್ರಿಯೆಗೈಯುವುದಿಲ್ಲ. ಇಲ್ಲವೇ, ನಿರ್ದೇಶನ ಸಿಕ್ಕಿದ ಬಳಿಕ ಅದಕ್ಕೆ ಸ್ಪಂದಿಸದೆ ಇರುವುದೂ ಇಲ್ಲ. ಉದಾಹರಣೆಗೆ ಲೋಕದ ಜನರ ಸ್ವಾರ್ಥಪರ, ಭಕ್ತಿಹೀನ ನಡತೆಗೆ ಸುಳ್ಳು ಧರ್ಮದ ಮುಖಂಡರು ಮೌನ ಸಮ್ಮತಿ ಇಲ್ಲವೇ ಬಹಿರಂಗ ಮನ್ನಣೆ ಕೊಡುತ್ತಿರುವಾಗ, ಆಳು ವರ್ಗವಾದರೊ ಸೈತಾನನ ದುಷ್ಟ ವ್ಯವಸ್ಥೆಯ ಪಾಶಗಳ ಕುರಿತು ಎಚ್ಚರಿಸುತ್ತಿದೆ. ಈ ಆಳು ವರ್ಗವನ್ನು ಯೆಹೋವನು ಮತ್ತು ಯೇಸು ಕ್ರಿಸ್ತನು ಆಶೀರ್ವದಿಸುತ್ತಿರುವುದರಿಂದ ಅದು ವಿವೇಕಯುತ, ಸಮಯೋಚಿತ ಎಚ್ಚರಿಕೆಗಳನ್ನು ಕೊಡಶಕ್ತವಾಗಿದೆ. ಆದುದರಿಂದಲೇ ಆಳು ವರ್ಗ ನಮ್ಮ ಪೂರ್ಣ ಭರವಸೆಗೆ ಅರ್ಹವಾಗಿದೆ. ಆದರೆ ನಮಗೆ ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೇಲೆ ಭರವಸೆಯಿದೆಯೆಂದು ಹೇಗೆ ತೋರಿಸಿಕೊಡಬಲ್ಲೆವು?
ಅಭಿಷಿಕ್ತರು ಕುರಿಯಾದಾತನನ್ನು ಹಿಂಬಾಲಿಸುವಾಗ ಅವರೊಂದಿಗೆ ‘ಹೋಗಿ’
13 ಬೈಬಲಿನ ಜೆಕರ್ಯ ಪುಸ್ತಕವು, “ಹತ್ತು ಜನರು ಯೆಹೂದ್ಯನೊಬ್ಬನ” ಬಳಿ ಹೋಗಿ, “ನಾವು ನಿಮ್ಮೊಂದಿಗೆ ಬರುವೆವು” ಎಂದು ಹೇಳುವುದಾಗಿ ತಿಳಿಸುತ್ತದೆ. (ಜೆಕರ್ಯ 8:23 ಓದಿ.) “ಯೆಹೂದ್ಯನೊಬ್ಬನ” ಬಗ್ಗೆ ಹೇಳುವಾಗ “ನಿಮ್ಮೊಂದಿಗೆ” ಎಂಬ ಬಹುವಚನದ ಬಳಕೆಯು, ಅವನು ಜನರ ಒಂದು ವರ್ಗವನ್ನು ಪ್ರತಿನಿಧಿಸುತ್ತಾನೆಂದು ತೋರಿಸುತ್ತದೆ. ನಮ್ಮ ದಿನದಲ್ಲಿ ಆ ಯೆಹೂದ್ಯನು, ‘ದೇವರ ಇಸ್ರಾಯೇಲಿನ’ ಒಂದು ಭಾಗವಾಗಿರುವ ಆತ್ಮಾಭಿಷಿಕ್ತ ಕ್ರೈಸ್ತರಲ್ಲಿ ಉಳಿಕೆಯವರನ್ನು ಸೂಚಿಸುತ್ತಾನೆ. (ಗಲಾ. 6:16) “ಜನಾಂಗಗಳ ವಿವಿಧಭಾಷೆಗಳವರಾದ ಹತ್ತು ಜನರು” ಬೇರೆ ಕುರಿಗಳ ಮಹಾ ಸಮೂಹವನ್ನು ಪ್ರತಿನಿಧಿಸುತ್ತಾರೆ. ಅಭಿಷಿಕ್ತ ಕ್ರೈಸ್ತರು ಯೇಸು ಹೋದಲ್ಲೆಲ್ಲಾ ಆತನ ಹಿಂದೆ ಹೋಗುವಂತೆಯೇ, ಮಹಾ ಸಮೂಹವು ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನೊಂದಿಗೆ ‘ಬರುತ್ತದೆ’ ಅಥವಾ ಜೊತೆಗೂಡುತ್ತದೆ. ಮಹಾ ಸಮೂಹದವರು, ‘ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯಲ್ಪಟ್ಟವರ’ ಸಂಗಡಿಗರಾಗಿ ತಮ್ಮನ್ನು ಗುರುತಿಸಿಕೊಳ್ಳಲು ನಾಚಿಕೆಪಡಬಾರದು. (ಇಬ್ರಿ. 3:1) ಸ್ವತಃ ಯೇಸು ಅಭಿಷಿಕ್ತರನ್ನು ತನ್ನ “ಸಹೋದರರೆನ್ನುವದಕ್ಕೆ” ನಾಚಿಕೆಪಡುವುದಿಲ್ಲ.—ಇಬ್ರಿ. 2:11.
14 ಯೇಸು ಕ್ರಿಸ್ತನು ಹೇಳಿದ್ದೇನೆಂದರೆ ನಾವು ಆತನ ಸಹೋದರರನ್ನು ಬೆಂಬಲಿಸುವಲ್ಲಿ, ಅದು ಸ್ವತಃ ಆತನನ್ನು ಬೆಂಬಲಿಸಿದಂತಾಗುತ್ತದೆ. (ಮತ್ತಾಯ 25:40 ಓದಿ.) ಭೂನಿರೀಕ್ಷೆಯುಳ್ಳವರು ಕ್ರಿಸ್ತನ ಆತ್ಮಾಭಿಷಿಕ್ತ ಸಹೋದರರನ್ನು ಯಾವ ವಿಧದಲ್ಲಿ ಬೆಂಬಲಿಸಬಹುದು? ಮುಖ್ಯವಾಗಿ ರಾಜ್ಯವನ್ನು ಸಾರುವ ಕೆಲಸದಲ್ಲಿ ಅವರಿಗೆ ಸಹಾಯಮಾಡುವ ಮೂಲಕವೇ. (ಮತ್ತಾ. 24:14; ) ಕಳೆದಿರುವ ದಶಕಗಳಾದ್ಯಂತ ಭೂಮಿಯಲ್ಲಿ ಅಭಿಷಿಕ್ತರ ಸಂಖ್ಯೆ ಕಡಿಮೆಯಾಗಿದೆಯಾದರೂ, ಬೇರೆ ಕುರಿಗಳ ಸಂಖ್ಯೆ ಹೆಚ್ಚಿದೆ. ಭೂನಿರೀಕ್ಷೆಯುಳ್ಳವರು ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಾಗ ಮತ್ತು ಸಾಧ್ಯವಿರುವಲ್ಲಿ ಪೂರ್ಣ ಸಮಯದ ಸೌವಾರ್ತಿಕರಾಗಿ ಸೇವೆಸಲ್ಲಿಸುವಾಗ ಅವರು ಶಿಷ್ಯರನ್ನಾಗಿ ಮಾಡುವ ನೇಮಕವನ್ನು ಪೂರೈಸುವುದರಲ್ಲಿ ಆತ್ಮಾಭಿಷಿಕ್ತರನ್ನು ಬೆಂಬಲಿಸುತ್ತಿದ್ದಾರೆ. ( ಯೋಹಾ. 14:12ಮತ್ತಾ. 28:19, 20) ವಿವಿಧ ವಿಧಾನಗಳಲ್ಲಿ ಕಾಣಿಕೆಗಳನ್ನು ಕೊಡುವ ಮೂಲಕವೂ ಈ ಕೆಲಸದೆಡೆಗೆ ನಮ್ಮ ಬೆಂಬಲ ವ್ಯಕ್ತವಾಗುತ್ತದೆ.
15 ಬೈಬಲಾಧರಿತ ಪ್ರಕಾಶನಗಳು, ಕ್ರೈಸ್ತ ಕೂಟಗಳು ಹಾಗೂ ಸಮ್ಮೇಳನಗಳ ಮೂಲಕ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಕೊಡುವ ಸಮಯೋಚಿತ ಆಧ್ಯಾತ್ಮಿಕ ಆಹಾರವನ್ನು ಕ್ರೈಸ್ತರಾದ ನಾವು ವ್ಯಕ್ತಿಗತವಾಗಿ ಹೇಗೆ ದೃಷ್ಟಿಸುತ್ತೇವೆ? ಅದನ್ನು ಕೃತಜ್ಞತಾಭಾವದಿಂದ ಸೇವಿಸಿ ಕಲಿತದ್ದನ್ನು ಆ ಕೂಡಲೇ ಅನ್ವಯಿಸಿಕೊಳ್ಳುತ್ತೇವೋ? ಆಳು ಮಾಡುವಂಥ ಸಂಘಟನಾತ್ಮಕ ನಿರ್ಣಯಗಳಿಗೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅದರ ನಿರ್ದೇಶನಕ್ಕೆ ನಾವು ತೋರಿಸುವ ಮನಃಪೂರ್ವಕ ವಿಧೇಯತೆಯು, ಯೆಹೋವನ ಏರ್ಪಾಡಿನಲ್ಲಿ ನಮಗಿರುವ ನಂಬಿಕೆಯನ್ನು ತೋರಿಸುತ್ತದೆ.—ಯಾಕೋ. 3:17.
16 ಯೇಸು ಅಂದದ್ದು: “ನನ್ನ ಕುರಿಗಳು ನನ್ನ ಸ್ವರಕ್ಕೆ ಕಿವಿಗೊಡುತ್ತವೆ; ನಾನು ಅವುಗಳನ್ನು ಬಲ್ಲೆನು; ಅವು ನನ್ನ ಹಿಂದೆ ಬರುತ್ತವೆ.” (ಯೋಹಾ. 10:27) ಇದನ್ನು ಅಭಿಷಿಕ್ತ ಕ್ರೈಸ್ತರು ಮಾಡುತ್ತಾರೆ. ಆದರೆ ‘ಅವರೊಂದಿಗೆ ಬರುವವರ’ ಕುರಿತೇನು? ಅಂಥವರು ಯೇಸುವಿಗೆ ಕಿವಿಗೊಡಬೇಕು. ಅದಲ್ಲದೆ, ಅವರು ಆತನ ಸಹೋದರರಿಗೂ ಕಿವಿಗೊಡಬೇಕು. ಏಕೆಂದರೆ ದೇವಜನರ ಆಧ್ಯಾತ್ಮಿಕ ಹಿತಕ್ಷೇಮವನ್ನು ನೋಡಿಕೊಳ್ಳುವ ಮುಖ್ಯ ಜವಾಬ್ದಾರಿಯನ್ನು ಆ ಸಹೋದರರಿಗೇ ವಹಿಸಿಕೊಡಲಾಗಿದೆ. ಅವರ ಸ್ವರಕ್ಕೆ ಕಿವಿಗೊಡುವುದರ ಅರ್ಥವೇನು?
17 ಇಂದು ಆಡಳಿತ ಮಂಡಲಿಯು ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮಂಡಲಿಯು, ಮುಂದಾಳುತ್ವ ವಹಿಸುತ್ತಾ ರಾಜ್ಯವನ್ನು ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಸಂಘಟಿಸುತ್ತದೆ. ಇದರ ಸದಸ್ಯರು, ಆತ್ಮಾಭಿಷಿಕ್ತ ಅನುಭವೀ ಹಿರಿಯರಾಗಿದ್ದಾರೆ. ವಿಶೇಷವಾಗಿ ಅವರನ್ನು ನಮ್ಮ ಮಧ್ಯೆ ‘ಮುಂದಾಳುತ್ವ ವಹಿಸುತ್ತಿರುವವರು’ ಎಂದು ವರ್ಣಿಸಬಹುದು. (ಇಬ್ರಿ. 13:7, NW) ಈ ಅಭಿಷಿಕ್ತ ಮೇಲ್ವಿಚಾರಕರಿಗೆ 1,00,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿರುವ 70,00,000 ರಾಜ್ಯ ಘೋಷಕರನ್ನು ಪರಾಮರಿಸಲಿಕ್ಕಿರುವುದರಿಂದ ‘ಕರ್ತನ ಕೆಲಸವನ್ನು ಹೇರಳವಾಗಿ ಮಾಡಲಿಕ್ಕಿದೆ.’ (1 ಕೊರಿಂ. 15:58, NW) ಆಳು ವರ್ಗಕ್ಕೆ ಕಿವಿಗೊಡುವುದರ ಅರ್ಥ, ಅದರ ಆಡಳಿತ ಮಂಡಲಿಗೆ ಪೂರ್ಣ ಸಹಕಾರ ಕೊಡುವುದಾಗಿದೆ.
ಆಳಿಗೆ ಕಿವಿಗೊಡುವವರು ಧನ್ಯರು
18 ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ನೇಮಕವಾದಂದಿನಿಂದ ಅದು ‘ಅನೇಕರನ್ನು ನೀತಿಯ ಕಡೆಗೆ ತಿರುಗಿಸಿದೆ.’ (ದಾನಿ. 12:3, NIBV) ಇಂಥ ಜನರಲ್ಲಿ, ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನದಿಂದ ಪಾರಾಗಲಿರುವವರೂ ಸೇರಿದ್ದಾರೆ. ದೇವರ ಮುಂದೆ ನೀತಿಯ ನಿಲುವನ್ನು ಹೊಂದುವುದು ಎಂಥ ಆಶೀರ್ವಾದ!
19 ಭವಿಷ್ಯತ್ತಿನಲ್ಲಿ, ‘ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು [1,44,000 ಮಂದಿ] ತನ್ನ ಗಂಡನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಶೃಂಗರಿಸಿಕೊಂಡು ಪರಲೋಕದಿಂದ ದೇವರ ಬಳಿಯಿಂದ ಇಳಿದುಬರುವಾಗ’ ಆಳಿನ ಸ್ವರಕ್ಕೆ ಕಿವಿಗೊಟ್ಟವರು ಏನನ್ನು ಆನಂದಿಸುವರು? “ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” (ಪ್ರಕ. 21:2-4) ಹೀಗಿರುವುದರಿಂದ, ನಾವು ಕ್ರಿಸ್ತನಿಗೂ ಭರವಸಾರ್ಹರಾದ ಆತನ ಆತ್ಮಾಭಿಷಿಕ್ತ ಸಹೋದರರಿಗೂ ಕಿವಿಗೊಡೋಣ.
ನೀವೇನು ಕಲಿತಿರಿ?
• ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೇಲೆ ಯೆಹೋವನಿಗೆ ಭರವಸೆಯಿದೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ?
• ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ ಮೇಲೆ ಯೇಸುವಿಗೆ ಪೂರ್ಣ ಭರವಸೆಯಿದೆಯೆಂದು ಯಾವುದು ತೋರಿಸುತ್ತದೆ?
• ನಂಬಿಗಸ್ತ ಮನೆವಾರ್ತೆಯು ನಮ್ಮ ಭರವಸೆಗೆ ಅರ್ಹವಾಗಿದೆಯೇಕೆ?
• ನಾವು ಆಳಿನ ಮೇಲೆ ಭರವಸೆಯಿಟ್ಟಿದ್ದೇವೆಂದು ಹೇಗೆ ತೋರಿಸಿಕೊಡುತ್ತೇವೆ?
[ಅಧ್ಯಯನ ಪ್ರಶ್ನೆಗಳು]
1. ಯೇಸುವನ್ನು ಹಿಂಬಾಲಿಸುವುದರ ಬಗ್ಗೆ ನಿಜ ಶಿಷ್ಯರಿಗೆ ಹೇಗನಿಸಿತು?
2. (ಎ) “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಅಥವಾ ‘ನಂಬಿಗಸ್ತ ಮನೆವಾರ್ತೆ’ ಯಾರು? (ಬಿ) ಈ ಆಳು ‘ಕುರಿಯಾದಾತನ ಹಿಂದೆ ಹೋಗುವ’ ಉತ್ತಮ ದಾಖಲೆಯನ್ನು ಹೊಂದಿರುವುದು ಹೇಗೆ?
3. ಆಳು ವರ್ಗದಲ್ಲಿ ನಾವು ಭರವಸೆಯಿಡುವುದು ಏಕೆ ಪ್ರಾಮುಖ್ಯ?
4. ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಕೊಡುವ ಆಧ್ಯಾತ್ಮಿಕ ಆಹಾರದಲ್ಲಿ ನಾವೇಕೆ ಭರವಸೆಯಿಡಬಲ್ಲೆವು?
5. ದೇವರಾತ್ಮವು ಆಳು ವರ್ಗಕ್ಕೆ ಬಲ ಕೊಡುತ್ತಿದೆಯೆಂದು ಯಾವುದು ತೋರಿಸುತ್ತದೆ?
6, 7. ಯೆಹೋವನು ನಂಬಿಗಸ್ತ ಆಳಿನ ಮೇಲೆ ಎಷ್ಟರ ಮಟ್ಟಿಗೆ ಭರವಸೆಯಿಟ್ಟಿದ್ದಾನೆ?
8. ಯೇಸು ಮಾಡಿದ ರಾಜ್ಯದ ಒಡಂಬಡಿಕೆಯು, ಆತ್ಮಾಭಿಷಿಕ್ತ ಹಿಂಬಾಲಕರ ಮೇಲೆ ಅವನಿಗೆ ಭರವಸೆಯಿದೆಯೆಂದು ಹೇಗೆ ತೋರಿಸುತ್ತದೆ?
9. ಕ್ರಿಸ್ತನ ‘ಎಲ್ಲಾ ಆಸ್ತಿಯಲ್ಲಿ’ ಏನೇನು ಸೇರಿದೆ?
10. ಯೇಸು ತನ್ನ ಅಭಿಷಿಕ್ತ ಹಿಂಬಾಲಕರೊಂದಿಗೆ ಇದ್ದಾನೆಂದು ಯಾವುದು ತೋರಿಸುತ್ತದೆ?
11, 12. ಆಳು, ತಾನು ನಂಬಿಗಸ್ತನೂ ವಿವೇಕಿಯೂ ಆಗಿದ್ದೇನೆಂದು ಹೇಗೆ ತೋರಿಸಿಕೊಟ್ಟಿದೆ?
13. ಜೆಕರ್ಯನ ಪ್ರವಾದನೆಗನುಸಾರ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಲ್ಲಿ ನಾವು ಹೇಗೆ ಭರವಸೆ ತೋರಿಸಬಹುದು?
14. ಕ್ರಿಸ್ತನ ಸಹೋದರರಿಗೆ ಹೇಗೆ ನಿಷ್ಠಾವಂತ ಬೆಂಬಲವನ್ನು ಕೊಡಬಹುದು?
15. ಆಳು ಕೊಡುವ ಸಮಯೋಚಿತ ಆಧ್ಯಾತ್ಮಿಕ ಆಹಾರಕ್ಕೆ ಮತ್ತು ಅದು ಮಾಡುವ ಸಂಘಟನಾತ್ಮಕ ನಿರ್ಣಯಗಳಿಗೆ ಕ್ರೈಸ್ತರು ವ್ಯಕ್ತಿಗತವಾಗಿ ಹೇಗೆ ಪ್ರತಿಕ್ರಿಯಿಸಬೇಕು?
16. ಕ್ರೈಸ್ತರೆಲ್ಲರು ಕ್ರಿಸ್ತನ ಸಹೋದರರಿಗೆ ಏಕೆ ಕಿವಿಗೊಡಬೇಕು?
17. ಆಳು ವರ್ಗಕ್ಕೆ ಕಿವಿಗೊಡುವುದರ ಅರ್ಥವೇನು?
18, 19. (ಎ) ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ ಕಿವಿಗೊಡುವವರು ಧನ್ಯರೇಕೆ? (ಬಿ) ನಮ್ಮ ದೃಢಸಂಕಲ್ಪ ಏನಾಗಿರಬೇಕು?
[ಪುಟ 25ರಲ್ಲಿರುವ ಚಿತ್ರ]
ಯೆಹೋವನು ತನ್ನ ಮಗನ ಮದಲಗಿತ್ತಿಯಾಗಿ ಯಾರನ್ನು ಆಯ್ಕೆಮಾಡಿದ್ದಾನೆಂದು ನಿಮಗೆ ಗೊತ್ತೋ?
[ಪುಟ 26ರಲ್ಲಿರುವ ಚಿತ್ರಗಳು]
ಯೇಸು ಕ್ರಿಸ್ತನು ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿಗೆ ‘ತನ್ನ ಆಸ್ತಿಯನ್ನು’ ವಹಿಸಿಕೊಟ್ಟಿದ್ದಾನೆ
[ಪುಟ 27ರಲ್ಲಿರುವ ಚಿತ್ರ]
ನಾವು ಸಾಕ್ಷಿಕಾರ್ಯದಲ್ಲಿ ಪಾಲ್ಗೊಳ್ಳುವಾಗ ಆತ್ಮಾಭಿಷಿಕ್ತರನ್ನು ಬೆಂಬಲಿಸುತ್ತಿದ್ದೇವೆ