‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ’
‘ದೇವರ ವಾಕ್ಯವನ್ನು ಧೈರ್ಯದಿಂದ ಹೇಳಿರಿ’
“ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುತ್ತಿದ್ದರು.” —ಅ. ಕಾ. 4:31.
1, 2. ನಮ್ಮ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗಿರಲು ನಾವೇಕೆ ಶ್ರಮಿಸಬೇಕು?
ಯೇಸು ತನ್ನ ಮರಣಕ್ಕೆ ಮೂರು ದಿನ ಮುಂಚೆ ತನ್ನ ಶಿಷ್ಯರಿಗೆ ಹೇಳಿದ್ದು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” ಪುನರುತ್ಥಾನಗೊಂಡ ಯೇಸು ಸ್ವರ್ಗಕ್ಕೆ ಏರಿಹೋಗುವ ಮೊದಲು ತನ್ನ ಹಿಂಬಾಲಕರಿಗೆ, ‘ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ’ ಎಂಬ ಆದೇಶವನ್ನಿತ್ತನು. “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ” ಅವರ ಸಂಗಡ ಇರುತ್ತೇನೆ ಎಂಬ ವಚನವನ್ನೂ ಅವನು ಕೊಟ್ಟನು.—ಮತ್ತಾ. 24:14; 26:1, 2; 28:19, 20.
2 ಮೊದಲನೆಯ ಶತಮಾನದಲ್ಲಿ ಆರಂಭವಾದ ಆ ಕೆಲಸದಲ್ಲಿ ಯೆಹೋವನ ಸಾಕ್ಷಿಗಳಾದ ನಮಗೆ ಸಕ್ರಿಯವಾದ ಭಾಗವಿದೆ. ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವಿಕೆಯ ಆ ಜೀವರಕ್ಷಕ ಕೆಲಸಕ್ಕೆ ಪ್ರಾಧಾನ್ಯತೆಯಲ್ಲಿ ಸರಿಸಾಟಿಯಾದದ್ದು ಬೇರೊಂದಿಲ್ಲ. ಆದುದರಿಂದ ಶುಶ್ರೂಷೆಯಲ್ಲಿ ನಾವು ಪರಿಣಾಮಕಾರಿಯಾಗಿರುವುದು ಅದೆಷ್ಟು ಪ್ರಾಮುಖ್ಯ! ಈ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಧೈರ್ಯದಿಂದ ಮಾತನಾಡಲು ದೇವರ ಪವಿತ್ರಾತ್ಮದ ಮಾರ್ಗದರ್ಶನವು ಹೇಗೆ ಸಹಾಯಮಾಡುತ್ತದೆ ಎಂದು ನಾವು ಈ ಲೇಖನದಲ್ಲಿ ನೋಡಲಿದ್ದೇವೆ. ಕೌಶಲದಿಂದ ಕಲಿಸಲು ಹಾಗೂ ಎಡೆಬಿಡದೆ ಸಾರಲು ಯೆಹೋವನ ಆತ್ಮವು ನಮ್ಮನ್ನು ಹೇಗೆ ಮಾರ್ಗದರ್ಶಿಸಬಲ್ಲದು ಎಂಬುದನ್ನು ಮುಂದಿನ ಎರಡು ಲೇಖನಗಳು ತೋರಿಸುವವು.
ಧೈರ್ಯ ಬೇಕು
3. ರಾಜ್ಯ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸುವುದಕ್ಕೆ ಧೈರ್ಯವು ಬೇಕು ಏಕೆ?
3 ರಾಜ್ಯವನ್ನು ಸಾರಲು ದೇವರು ನಮಗಿತ್ತಿರುವ ನೇಮಕವು ದೊಡ್ಡ ಗೌರವದ ಕೆಲಸ. ಆದರೂ ಕೆಲವೊಮ್ಮೆ ಅದು ಕಷ್ಟಕರ. ಕೆಲವರು ದೇವರ ರಾಜ್ಯದ ಸುವಾರ್ತೆಯನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸುತ್ತಾರಾದರೂ ಅನೇಕರು ನೋಹನ ದಿನಗಳಲ್ಲಿದ್ದ ಜನರಂತೆಯೇ ಇದ್ದಾರೆ. “ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ” ಎಂದು ಯೇಸು ಹೇಳಿದನು. (ಮತ್ತಾ. 24:38, 39) ಅಲ್ಲದೆ, ಕೆಲವರು ನಮಗೆ ಕುಚೋದ್ಯ ಇಲ್ಲವೆ ವಿರೋಧವನ್ನೂ ಮಾಡುತ್ತಿರುತ್ತಾರೆ. (2 ಪೇತ್ರ 3:3) ಅಧಿಕಾರಿಗಳಿಂದ, ಸಹಪಾಠಿಗಳಿಂದ, ಸಹೋದ್ಯೋಗಿಗಳಿಂದ ಹಾಗೂ ಮನೆಮಂದಿಯಿಂದ ಸಹ ವಿರೋಧವು ಬರಸಾಧ್ಯವಿದೆ. ಜನರು ನಮ್ಮನ್ನು ತಿರಸ್ಕರಿಸ್ಯಾರು ಎಂಬ ಭಾವನೆ ಹಾಗೂ ಮುಜುಗರವೇ ಮುಂತಾದ ವೈಯಕ್ತಿಕ ಬಲಹೀನತೆಗಳು ಇದಕ್ಕೆ ಇನ್ನಷ್ಟನ್ನು ಕೂಡಿಸಬಹುದು. ಹೀಗೆ ಎಷ್ಟೋ ಕಾರಣಗಳು “ವಾಕ್ಸರಳತೆ” ಬಳಸುವುದನ್ನು ಹಾಗೂ ದೇವರ ವಾಕ್ಯವನ್ನು “ಧೈರ್ಯದಿಂದ” ಹೇಳುವುದನ್ನು ಕಷ್ಟಕರವಾಗಿ ಮಾಡಸಾಧ್ಯವಿದೆ. (ಎಫೆ. 6:19, 20) ದೇವರ ವಾಕ್ಯವನ್ನು ಪಟ್ಟುಹಿಡಿದು ಮಾತಾಡಲು ಧೈರ್ಯ ಅವಶ್ಯ. ಈ ಧೈರ್ಯವನ್ನು ಪಡೆದುಕೊಳ್ಳಲು ನಮಗೆ ಯಾವುದು ಸಹಾಯಮಾಡಬಲ್ಲದು?
4. (ಎ) ಧೈರ್ಯ ಎಂದರೇನು? (ಬಿ) ಥೆಸಲೊನೀಕದ ಜನರೊಂದಿಗೆ ಮಾತಾಡಲು ಅಪೊಸ್ತಲ ಪೌಲನು ಧೈರ್ಯ ಪಡೆದುಕೊಂಡದ್ದು ಹೇಗೆ?
4 “ಧೈರ್ಯ” ಎಂಬುದಾಗಿ ಭಾಷಾಂತರವಾದ ಗ್ರೀಕ್ ಪದಕ್ಕೆ “ದೃಢತೆ, ನಿಷ್ಕಾಪಟ್ಯ, ಸ್ಪಷ್ಟತೆ” ಎಂಬರ್ಥವಿದೆ. ಆ ಶಬ್ದವು “ಧೀರತನ, ಆತ್ಮವಿಶ್ವಾಸ, . . . ನಿರ್ಭೀತಿ” ಎಂಬ ವಿಚಾರವನ್ನು ಮನಸ್ಸಿಗೆ ತರುತ್ತದೆ. ಧೈರ್ಯವೆಂದರೆ ಮೊಂಡತನ ಇಲ್ಲವೆ ಒರಟುತನವಲ್ಲ. (ಕೊಲೊ. 4:6) ಧೈರ್ಯವಂತರಾಗಿರುವ ಅದೇ ಸಮಯದಲ್ಲಿ ಎಲ್ಲರೊಂದಿಗೆ ಶಾಂತಿಶೀಲರಾಗಿರಲೂ ನಾವು ಬಯಸುತ್ತೇವೆ. (ರೋಮ. 12:18) ಮಾತ್ರವಲ್ಲದೆ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವಾಗ ಯಾರನ್ನಾದರೂ ಉದ್ದೇಶರಹಿತವಾಗಿ ಸಿಟ್ಟುಗೊಳಿಸದಂತೆ ಧೈರ್ಯ ಮತ್ತು ಜಾಣ್ಮೆಯಲ್ಲಿ ಸಮತೋಲನೆ ತೋರಿಸುವ ಅಗತ್ಯ ನಮಗಿದೆ. ಯೋಗ್ಯವಾದ ಧೈರ್ಯವನ್ನು ಪಡೆದುಕೊಳ್ಳಬೇಕಾದರೆ ಬೇರೆ ಗುಣಗಳನ್ನೂ ಬೆಳೆಸಿಕೊಳ್ಳಲು ಶ್ರಮಿಸಬೇಕು ನಿಶ್ಚಯ. ಈ ರೀತಿಯ ಧೈರ್ಯವು ನಮ್ಮ ಸ್ವಂತ ಶಕ್ತಿಯಿಂದ ಅಥವಾ ಸ್ವಾವಲಂಬಲನೆಯಿಂದ ಬರುವುದಿಲ್ಲ. ಅಪೊಸ್ತಲ ಪೌಲನು ಮತ್ತು ಅವನ ಸಂಗಡಿಗರು ‘ಫಿಲಿಪ್ಪಿಯಲ್ಲಿ ಅವಮಾನಕರವಾಗಿ ನಡೆಸಲ್ಪಟ್ಟಾಗ’ ಅವರು ಥೆಸಲೊನೀಕದ ಜನರೊಂದಿಗೆ ಮಾತನಾಡಲು ‘ಧೈರ್ಯವನ್ನು ಪಡೆದುಕೊಂಡದ್ದು’ ಹೇಗೆ? “ನಮ್ಮ ದೇವರ ಸಹಾಯದಿಂದ” ಎಂದು ಬರೆದನು ಪೌಲನು. (1 ಥೆಸಲೊನೀಕ 2:2 ಓದಿ.) ಯೆಹೋವನು ನಮ್ಮ ಭಯವನ್ನು ಹೋಗಲಾಡಿಸಿ ತದ್ರೀತಿಯ ಧೈರ್ಯವನ್ನು ಕೊಡಶಕ್ತನು.
5. ಪೇತ್ರ, ಯೋಹಾನ ಮತ್ತು ಬೇರೆ ಶಿಷ್ಯರಿಗೆ ಯೆಹೋವನು ಧೈರ್ಯವನ್ನು ಅನುಗ್ರಹಿಸಿದ್ದು ಹೇಗೆ?
5 ‘[ಜನರ] ಅಧಿಪತಿಗಳು, ಹಿರೀ ಪುರುಷರು ಮತ್ತು ಶಾಸ್ತ್ರಿಗಳಿಂದ’ ವಿರೋಧಿಸಲ್ಪಟ್ಟಾಗ ಅಪೊಸ್ತಲರಾದ ಪೇತ್ರ ಮತ್ತು ಯೋಹಾನರು ಹೇಳಿದ್ದು: “ದೇವರಿಗೆ ಬದಲಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ನ್ಯಾಯವಾಗಿದೆಯೋ ಎಂಬುದನ್ನು ನೀವೇ ತೀರ್ಪುಮಾಡಿಕೊಳ್ಳಿರಿ. ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು.” ಹಿಂಸೆಯನ್ನು ನಿಲ್ಲಿಸುವಂತೆ ದೇವರನ್ನು ಪ್ರಾರ್ಥಿಸುವ ಬದಲಿಗೆ ಅವರೂ ಅವರ ಜೊತೆ ವಿಶ್ವಾಸಿಗಳೂ ಯಾಚಿಸುತ್ತಾ ಅಂದದ್ದು: “ಯೆಹೋವನೇ, ಈಗ ಅವರ ಬೆದರಿಕೆಗಳಿಗೆ ಗಮನಕೊಡು ಮತ್ತು . . . ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಮಾತಾಡುತ್ತಾ ಇರಲು ನಿನ್ನ ಸೇವಕರಿಗೆ ಸಹಾಯಮಾಡು.” (ಅ. ಕಾ. 4:5, 19, 20, 29, 30) ಅವರ ಯಾಚನೆಗೆ ದೇವರು ಹೇಗೆ ಪ್ರತಿಕ್ರಿಯೆ ತೋರಿಸಿದನು? (ಅ. ಕಾರ್ಯಗಳು 4:31 ಓದಿ.) ತನ್ನ ಆತ್ಮದ ಮೂಲಕ ಧೈರ್ಯವನ್ನು ಪಡೆದುಕೊಳ್ಳುವಂತೆ ಯೆಹೋವನು ಅವರಿಗೆ ಸಹಾಯಮಾಡಿದನು. ನಮಗೂ ದೇವರ ಆತ್ಮವು ಸಹಾಯಮಾಡಬಲ್ಲದು. ಹಾಗಾಗಿ ನಾವು ದೇವರ ಆತ್ಮವನ್ನು ಪಡೆದುಕೊಳ್ಳುವುದೂ ನಮ್ಮ ಶುಶ್ರೂಷೆಯಲ್ಲಿ ಅದರಿಂದ ಮಾರ್ಗದರ್ಶಿಸಲ್ಪಡುವುದೂ ಹೇಗೆ?
ಧೈರ್ಯವನ್ನು ಪಡೆದುಕೊಳ್ಳಿ
6, 7. ದೇವರ ಪವಿತ್ರಾತ್ಮವನ್ನು ಪಡೆಯುವ ಅತಿ ನೇರವಾದ ವಿಧ ಯಾವುದು? ಉದಾಹರಣೆಗಳನ್ನು ಕೊಡಿ.
6 ದೇವರ ಆತ್ಮವನ್ನು ಪಡೆದುಕೊಳ್ಳುವ ಅತಿ ನೇರವಾದ ವಿಧವು ಅದಕ್ಕಾಗಿ ಬೇಡಿಕೊಳ್ಳುವುದೇ ಆಗಿದೆ. ಯೇಸು ತನಗೆ ಕಿವಿಗೊಡುತ್ತಿದ್ದವರಿಗೆ ಹೇಳಿದ್ದು: “ಕೆಟ್ಟವರಾಗಿರುವ ನೀವು ನಿಮ್ಮ ಮಕ್ಕಳಿಗೆ ಒಳ್ಳೆಯ ಉಡುಗೊರೆಗಳನ್ನು ಕೊಡುವುದು ಹೇಗೆಂದು ತಿಳಿದಿರುವಲ್ಲಿ ಸ್ವರ್ಗದಲ್ಲಿರುವ ತಂದೆಯು ತನ್ನನ್ನು ಕೇಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮವನ್ನು ಕೊಡುವನಲ್ಲವೆ?” (ಲೂಕ 11:13) ಖಂಡಿತವಾಗಿಯೂ ನಾವು ಪವಿತ್ರಾತ್ಮಕ್ಕಾಗಿ ಎಡೆಬಿಡದೆ ಬೇಡಿಕೊಳ್ಳಬೇಕು. ಶುಶ್ರೂಷೆಯ ನಿರ್ದಿಷ್ಟ ಅಂಶಗಳು ಅಂದರೆ ಬೀದಿಸಾಕ್ಷಿ, ಅನೌಪಚಾರಿಕ ಸಾರುವಿಕೆ ಇಲ್ಲವೆ ವ್ಯಾಪಾರ ಕ್ಷೇತ್ರದ ಸೇವೆ ಮುಂತಾದವು ಮಾತಾಡಲು ಅಡಚಣೆಯನ್ನು ಉಂಟುಮಾಡಿದರೆ ನಾವು ಯೆಹೋವನ ಆತ್ಮಕ್ಕಾಗಿ ಬೇಡಿಕೊಂಡು ಬೇಕಾದ ಧೈರ್ಯವನ್ನು ಪಡೆದುಕೊಳ್ಳಲು ಸಹಾಯ ಕೇಳಬಹುದು.—1 ಥೆಸ. 5:17.
7 ರೋಸ ಎಂಬ ಕ್ರೈಸ್ತ ಮಹಿಳೆ ಅದನ್ನೇ ಮಾಡಿದಳು. * ಒಂದು ದಿನ ರೋಸ ತನ್ನ ಉದ್ಯೋಗದಲ್ಲಿದ್ದಾಗ, ಅವಳ ಜೊತೆಯಲ್ಲಿ ಕೆಲಸಮಾಡುತ್ತಿದ್ದ ಟೀಚರ್ ಮಕ್ಕಳಿಗಾಗುತ್ತಿರುವ ದುರುಪಚಾರದ ಕುರಿತ ಬೇರೆ ಶಾಲೆಯ ವರದಿಯೊಂದನ್ನು ಓದುತ್ತಾ “ಲೋಕವು ಎಂಥ ಕೆಟ್ಟಸ್ಥಿತಿಗೆ ಬಂದಿದೆಯಪ್ಪಾ” ಎಂದು ಉದ್ಗಾರವೆತ್ತಿದ್ದನ್ನು ಕೇಳಿಸಿಕೊಂಡಳು. ಸಾಕ್ಷಿಕೊಡಲು ಇದ್ದ ಅಂಥ ಸದವಕಾಶವನ್ನು ರೋಸ ಬಿಟ್ಟುಕೊಡುವಂತಿರಲಿಲ್ಲ. ಮಾತಾಡಲು ಬೇಕಾದ ಧೈರ್ಯಕ್ಕಾಗಿ ಅವಳೇನು ಮಾಡಿದಳು? “ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ಆತನ ಆತ್ಮದ ಸಹಾಯಕ್ಕಾಗಿ ಕೇಳಿಕೊಂಡೆ” ಎನ್ನುತ್ತಾಳೆ ರೋಸ. ಒಳ್ಳೇ ಸಾಕ್ಷಿಯನ್ನು ಕೊಡಲು ಆಕೆ ಶಕ್ತಳಾದಳು ಮತ್ತು ಪುನರ್ಭೇಟಿಗಾಗಿ ಏರ್ಪಡಿಸಿದಳು. ನ್ಯೂ ಯಾರ್ಕ್ ಸಿಟಿಯಲ್ಲಿ ವಾಸಿಸುವ ಐದು ವರ್ಷ ಪ್ರಾಯದ ಮಿಲೆನಿ ಎಂಬ ಹುಡುಗಿಯನ್ನು ಸಹ ಗಮನಿಸಿರಿ. ಅವಳನ್ನುವುದು: “ಶಾಲೆಗೆ ಹೋಗುವ ಮುನ್ನ ನನ್ನ ಮಮ್ಮಿ ಮತ್ತು ನಾನು ಯಾವಾಗಲೂ ಯೆಹೋವನಿಗೆ ಪ್ರಾರ್ಥನೆ ಮಾಡುತ್ತೇವೆ.” ಅವರು ಯಾವುದಕ್ಕಾಗಿ ಪ್ರಾರ್ಥಿಸುತ್ತಾರೆ? ಸತ್ಯಕ್ಕಾಗಿ ದೃಢನಿಲ್ಲಲು ಮತ್ತು ತನ್ನ ದೇವರ ಕುರಿತು ಮಾತನಾಡಲು ಮಿಲೆನಿಗೆ ಧೈರ್ಯವನ್ನು ಕೊಡುವಂತೆ! “ಹುಟ್ಟುಹಬ್ಬ ಮತ್ತು ಇತರ ಹಬ್ಬಗಳ ಕುರಿತ ತನ್ನ ನಿಲುವನ್ನು ವಿವರಿಸಲು ಮತ್ತು ಅವನ್ನು ಆಚರಿಸುವಾಗ ಅದರಲ್ಲಿ ಭಾಗವಹಿಸದಿರಲು ಇದು ಮಿಲೆನಿಗೆ ಸಹಾಯಮಾಡಿತು” ಎಂದು ಅವಳ ತಾಯಿ ಅನ್ನುತ್ತಾಳೆ. ಧೈರ್ಯವನ್ನು ಪಡೆದುಕೊಳ್ಳಬೇಕಾದಾಗ ಪ್ರಾರ್ಥನೆ ಹೇಗೆ ಕಾರ್ಯಸಾಧಕ ಎಂಬದನ್ನು ಈ ಉದಾಹರಣೆಗಳು ತೋರಿಸುವುದಿಲ್ಲವೇ?
8. ಧೈರ್ಯವನ್ನು ಪಡೆದುಕೊಳ್ಳುವ ವಿಷಯದಲ್ಲಿ ಪ್ರವಾದಿ ಯೆರೆಮೀಯನಿಂದ ನಾವೇನನ್ನು ಕಲಿಯಬಲ್ಲೆವು?
8 ಧೈರ್ಯವನ್ನು ಪಡೆದುಕೊಳ್ಳಲು ಪ್ರವಾದಿ ಯೆರೆಮೀಯನಿಗೆ ಯಾವುದು ಸಹಾಯ ಮಾಡಿತೆಂಬುದನ್ನು ಸಹ ಮನಸ್ಸಿಗೆ ತನ್ನಿರಿ. ಅನ್ಯದೇಶಗಳಿಗೆ ಯೆಹೋವನು ಅವನನ್ನು ಪ್ರವಾದಿಯಾಗಿ ನೇಮಿಸಿದಾಗ “ನಾನು ಮಾತುಬಲ್ಲವನಲ್ಲ, ಬಾಲಕನು” ಎಂದು ಯೆರೆಮೀಯನು ಉತ್ತರಿಸಿದನು. (ಯೆರೆ. 1:4-6) ಆದರೆ ಕಾಲಾನಂತರ ಯೆರೆಮೀಯನು ಸಾರುವ ಕೆಲಸದಲ್ಲಿ ಎಷ್ಟು ಛಲವಾದಿಯೂ ಪ್ರಭಾವಶಾಲಿಯೂ ಆದನೆಂದರೆ ಅನೇಕರು ಅವನನ್ನು ದುರ್ಗತಿ ಘೋಷಕ ಎಂದು ವೀಕ್ಷಿಸಿದರು. (ಯೆರೆ. 38:4) 65ಕ್ಕಿಂತ ಹೆಚ್ಚು ವರ್ಷಗಳ ತನಕ ಅವನು ಯೆಹೋವನ ತೀರ್ಪುಗಳನ್ನು ಧೈರ್ಯದಿಂದ ಸಾರಿದನು. ಇಸ್ರಾಯೇಲಿನಲ್ಲಿ ತನ್ನ ನಿರ್ಭೀತ ಹಾಗೂ ಧೀರ ಸಾರುವಿಕೆಗೆ ಎಷ್ಟು ಪ್ರಖ್ಯಾತನಾಗಿದ್ದನೆಂದರೆ, ಸುಮಾರು 600 ವರ್ಷಗಳ ತರುವಾಯ ಯೇಸು ಧೈರ್ಯದಿಂದ ಸಾರಿದಾಗ ಅವನೇ ಜೀವಿತನಾಗಿ ಬಂದ ಯೆರೆಮೀಯನು ಎಂದು ಕೆಲವರು ನಂಬಿದರು. (ಮತ್ತಾ. 16:13, 14) ಆರಂಭದಲ್ಲಿ ಹಿಂಜರಿಕೆ ತೋರಿಸಿದ್ದ ಯೆರೆಮೀಯನು ತನ್ನ ಮುಜುಗರವನ್ನು ಹೋಗಲಾಡಿಸಿದ್ದು ಹೇಗೆ? ಅವನನ್ನುವುದು: “ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; [ದೇವರ ವಾಕ್ಯವನ್ನು] ತಡೆದು ತಡೆದು ಆಯಾಸಗೊಂಡಿದ್ದೇನೆ.” (ಯೆರೆ. 20:9) ಹೌದು, ಯೆಹೋವನ ವಾಕ್ಯವು ಯೆರೆಮೀಯನ ಮೇಲೆ ಶಕ್ತಿಯುತ ಪ್ರಭಾವವನ್ನು ಬೀರಿ ಅವನನ್ನು ಮಾತಾಡುವಂತೆ ಹುರಿದುಂಬಿಸಿತು.
9. ದೇವರ ವಾಕ್ಯವು ಯೆರೆಮೀಯನನ್ನು ಪ್ರಭಾವಿಸಿದಂತೆ ನಮ್ಮನ್ನೂ ಏಕೆ ಪ್ರಭಾವಿಸಬಲ್ಲದು?
9 ಇಬ್ರಿಯರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು ತಿಳಿಸಿದ್ದು: “ದೇವರ ವಾಕ್ಯವು ಸಜೀವವಾದದ್ದೂ ಪ್ರಬಲವಾದದ್ದೂ ಯಾವುದೇ ಇಬ್ಬಾಯಿಕತ್ತಿಗಿಂತಲೂ ಹರಿತವಾದದ್ದೂ ಪ್ರಾಣಮನಸ್ಸುಗಳನ್ನು ಮತ್ತು ಕೀಲುಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೆ ತೂರಿಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಸಂಕಲ್ಪಗಳನ್ನೂ ವಿವೇಚಿಸಲು ಶಕ್ತವಾಗಿರುವಂಥದ್ದೂ ಆಗಿದೆ.” (ಇಬ್ರಿ. 4:12) ದೇವರ ಸಂದೇಶ ಅಥವಾ ವಾಕ್ಯವು ಯೆರೆಮೀಯನನ್ನು ಪ್ರಭಾವಿಸಿದ ರೀತಿಯಲ್ಲಿ ನಮ್ಮನ್ನೂ ಪ್ರಭಾವಿಸಬಲ್ಲದು. ಬೈಬಲನ್ನು ಬರೆಯಲು ಮನುಷ್ಯರು ಉಪಯೋಗಿಸಲ್ಪಟ್ಟಿದ್ದರೂ ಅದು ಮಾನುಷ ವಿವೇಕವು ಅಡಕವಾಗಿರುವ ಗ್ರಂಥವಲ್ಲ ಎಂಬುದನ್ನು ನೆನಪಿನಲ್ಲಿಡಿ. ಅದು ದೇವರಿಂದ ಪ್ರೇರಿತವಾದ ಗ್ರಂಥ. 2 ಪೇತ್ರ 1:21ರಲ್ಲಿ ನಾವು ಓದುವುದು: “ಪ್ರವಾದನೆಯು ಎಂದೂ ಮನುಷ್ಯನ ಚಿತ್ತದಿಂದ ಉಂಟಾಗಲಿಲ್ಲ, ಬದಲಿಗೆ ಮನುಷ್ಯರು ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಟ್ಟು ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” ಬೈಬಲಿನ ಅರ್ಥವತ್ತಾದ ವೈಯಕ್ತಿಕ ಅಧ್ಯಯನವನ್ನು ಮಾಡಲು ನಾವು ಸಮಯವನ್ನು ತೆಗೆದುಕೊಳ್ಳುವಾಗ ಪವಿತ್ರಾತ್ಮದಿಂದ ಪ್ರೇರಿತವಾದ ಸಂದೇಶವು ನಮ್ಮ ಮನಸ್ಸುಗಳನ್ನು ತುಂಬಿಕೊಳ್ಳುವುದು. (1 ಕೊರಿಂಥ 2:10 ಓದಿ.) ಆ ಸಂದೇಶವು ನಮ್ಮ ಒಡಲಲ್ಲಿ ‘ಉರಿಯುವ ಬೆಂಕಿಯಂತೆ’ ದಹಿಸುತ್ತಾ ಇರಬಲ್ಲದು. ಆದ್ದರಿಂದ ಅದನ್ನು ನಮ್ಮಲ್ಲಿಯೇ ಇಟ್ಟುಕೊಳ್ಳಲು ಶಕ್ತರಾಗಿರುವುದಿಲ್ಲ.
10, 11. (ಎ) ಮಾತಾಡುವುದರಲ್ಲಿ ಧೈರ್ಯವನ್ನು ಪಡೆದುಕೊಳ್ಳ ಬಯಸುವುದಾದರೆ ಬೈಬಲನ್ನು ನಾವು ಹೇಗೆ ಅಧ್ಯಯನಿಸಬೇಕು? (ಬಿ) ನಿಮ್ಮ ವೈಯಕ್ತಿಕ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸಲು ನೀವು ತಕ್ಕೊಳ್ಳಬಯಸುವ ಕಡಿಮೆಪಕ್ಷ ಒಂದು ಹೆಜ್ಜೆಯನ್ನು ತಿಳಿಸಿರಿ.
ಯೆಹೆಜ್ಕೇಲ 2:8–3:4, 7-9 ಓದಿ.
10 ವೈಯಕ್ತಿಕ ಬೈಬಲ್ ಅಧ್ಯಯನವು ನಮ್ಮಲ್ಲಿ ಶಕ್ತಿಯುತ ಪ್ರಭಾವವನ್ನು ಬೀರಬೇಕಾದರೆ ಬೈಬಲಿನ ಸಂದೇಶವನ್ನು ಹೃದಯದಾಳವನ್ನು ತಲಪುವ ರೀತಿಯಲ್ಲಿ ಅಧ್ಯಯನಿಸಬೇಕು. ಅದು ನಮ್ಮ ಆಂತರ್ಯವನ್ನು ಪ್ರಭಾವಿಸಬೇಕು. ಉದಾಹರಣೆಗೆ ಪ್ರವಾದಿ ಯೆಹೆಜ್ಕೇಲನಿಗೆ, ಅವಿಧೇಯ ಜನರಿಗೆ ನೀಡಬೇಕಾಗಿದ್ದ ಕಠಿಣ ಸಂದೇಶವು ಕೂಡಿದ್ದ ಒಂದು ಗ್ರಂಥದ ಸುರುಳಿಯನ್ನು ತಿನ್ನುವಂತೆ ದರ್ಶನವೊಂದರಲ್ಲಿ ಹೇಳಲಾಯಿತು. ಯೆಹೆಜ್ಕೇಲನು ಆ ಸಂದೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ತನ್ನ ಸ್ವಂತದ್ದಾಗಿ ಮಾಡಿಕೊಳ್ಳಬೇಕಿತ್ತು. ಹಾಗೆ ಮಾಡುವ ಮೂಲಕ ಆ ಸಂದೇಶವನ್ನು ನೀಡುವ ಕೆಲಸವು ಅವನಿಗೆ ಹಿತಕರವಾಗಿರುತ್ತಿತ್ತು—ಅಂದರೆ ಜೇನಿನಂತೆ ಸಿಹಿಯಾಗಿ ಇರಸಾಧ್ಯವಿತ್ತು.—11 ಯೆಹೆಜ್ಕೇಲನಿದ್ದ ತದ್ರೀತಿಯ ಸನ್ನಿವೇಶದಲ್ಲಿ ನಾವೂ ಇದ್ದೇವೆ. ಇಂದು ಅನೇಕರಿಗೆ ಬೈಬಲಿನ ಸಂದೇಶವನ್ನು ಕೇಳಿಸಿಕೊಳ್ಳಲು ಸ್ವಲ್ಪವೂ ಮನಸ್ಸಿಲ್ಲ. ದೇವರ ವಾಕ್ಯವನ್ನು ಪಟ್ಟುಹಿಡಿದು ಹೇಳಬೇಕಾದರೆ ನಾವು ಶಾಸ್ತ್ರಗ್ರಂಥವನ್ನು ಪೂರ್ಣವಾಗಿ ಹೀರಿಕೊಳ್ಳುವ ರೀತಿಯಲ್ಲಿ ಅಧ್ಯಯನ ಮಾಡುವುದು ಪ್ರಾಮುಖ್ಯ. ಅಂದರೆ ಅದನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಅದು ಹೇಳುವುದನ್ನು ನಂಬಬೇಕು. ನಮ್ಮ ಅಧ್ಯಯನ ಹವ್ಯಾಸಗಳಲ್ಲಿ ಕ್ರಮತೆ ಇರಬೇಕು. ಆದರಾಗಲಿ ಹೋದರೆ ಹೋಗಲಿ ಎಂಬ ಮನೋಧರ್ಮವಲ್ಲ. ನಮ್ಮ ಅಪೇಕ್ಷೆಯು ಕೀರ್ತನೆಗಾರನಂತಿರಬೇಕು. ಅವನು ಹಾಡಿದ್ದು: “ಯೆಹೋವನೇ, ನನ್ನ ಶರಣನೇ, ನನ್ನ ವಿಮೋಚಕನೇ, ನನ್ನ ಮಾತುಗಳೂ ನನ್ನ ಹೃದಯದ ಧ್ಯಾನವೂ ನಿನಗೆ ಸಮರ್ಪಕವಾಗಿರಲಿ.” (ಕೀರ್ತ. 19:14) ನಾವು ಓದುವ ವಿಷಯವನ್ನು ಧ್ಯಾನಿಸಲು ಸಮಯವನ್ನು ತೆಗೆದುಕೊಳ್ಳುವುದು ಬಹಳ ಪ್ರಾಮುಖ್ಯ. ಆಗ ಬೈಬಲಿನ ಸತ್ಯವು ನಮ್ಮ ಹೃದಯದಾಳಕ್ಕೆ ತಲಪುವುದು! ನಮ್ಮ ವೈಯಕ್ತಿಕ ಅಧ್ಯಯನದ ಗುಣಮಟ್ಟವನ್ನು ಉತ್ತಮಗೊಳಿಸಲು ನಾವು ಶ್ರಮಿಸಬೇಕು ನಿಶ್ಚಯ. *
12. ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡಲು ಕ್ರೈಸ್ತ ಕೂಟಗಳು ನಮಗೆ ಏಕೆ ಸಹಾಯಮಾಡುತ್ತವೆ?
12 ಯೆಹೋವನ ಪವಿತ್ರಾತ್ಮದಿಂದ ಪ್ರಯೋಜನ ಪಡೆಯುವ ಇನ್ನೊಂದು ವಿಧವು ‘ಸಭೆಯಾಗಿ ಕೂಡಿಬರುವುದನ್ನು ಬಿಟ್ಟುಬಿಡದೆ ಪ್ರೀತಿ, ಸತ್ಕಾರ್ಯಗಳನ್ನು ಮಾಡುವಂತೆ ಒಬ್ಬರನ್ನೊಬ್ಬರು ಪ್ರೇರೇಪಿಸುವುದೇ.’ (ಇಬ್ರಿ. 10:24, 25) ಕ್ರೈಸ್ತ ಕೂಟಗಳಲ್ಲಿ ಕ್ರಮವಾಗಿ ಹಾಜರಾಗಿರಲು ಶ್ರಮಿಸುವುದು, ಜಾಗರೂಕತೆಯಿಂದ ಕಿವಿಗೊಡುವುದು, ಕಲಿತ ವಿಷಯಗಳನ್ನು ಅನ್ವಯಿಸುವುದು ದೇವರಾತ್ಮದಿಂದ ಮಾರ್ಗದರ್ಶಿಸಲ್ಪಡುವ ಅತ್ಯುತ್ತಮ ವಿಧಗಳು. ಎಷ್ಟೆಂದರೂ ಯೆಹೋವನ ಆತ್ಮವು ಮಾರ್ಗದರ್ಶನೆ ಕೊಡುವುದು ಸಭೆಯ ಮೂಲಕವಾಗಿಯೇ ಅಲ್ಲವೇ?—ಪ್ರಕಟನೆ 3:6 ಓದಿ.
ಧೈರ್ಯ ಪಡೆದುಕೊಳ್ಳುವುದರಿಂದ ಪ್ರಯೋಜನ
13. ಪ್ರಥಮ ಶತಮಾನದ ಕ್ರೈಸ್ತರು ಸಾರುವ ಕೆಲಸದಲ್ಲಿ ಪೂರೈಸಿದ ಸಂಗತಿಯಿಂದ ನಾವೇನನ್ನು ಕಲಿಯಬಲ್ಲೆವು?
13 ಪವಿತ್ರಾತ್ಮವು ಇಡೀ ವಿಶ್ವದಲ್ಲೇ ಅತಿ ಬಲಾಢ್ಯ ಶಕ್ತಿ. ಅದು ಮಾನವರನ್ನು ಯೆಹೋವನ ಚಿತ್ತವನ್ನು ಮಾಡುವಂತೆ ಶಕ್ತಿಯುತರನ್ನಾಗಿ ಮಾಡಬಲ್ಲದು. ಅದರ ಪ್ರಭಾವದ ಕೆಳಗೆ ಪ್ರಥಮ ಶತಕದ ಕ್ರೈಸ್ತರು ಪ್ರಚಂಡ ಸಾಕ್ಷಿಕಾರ್ಯವನ್ನು ಪೂರೈಸಿದರು. ಸುವಾರ್ತೆಯನ್ನು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಿದರು. (ಕೊಲೊ. 1:23) ಅವರಲ್ಲಿ ಹೆಚ್ಚಿನವರು “ವಿದ್ಯಾಭ್ಯಾಸವಿಲ್ಲದ ಸಾಧಾರಣ” ವ್ಯಕ್ತಿಗಳೆಂದು ನಾವು ಪರಿಗಣಿಸುವಾಗ, ಅವರು ನಿಜವಾಗಿಯೂ ಬಲಾಢ್ಯ ಶಕ್ತಿಯಿಂದ ಪ್ರಚೋದಿಸಲ್ಪಟ್ಟಿದ್ದರು ಎಂಬುದು ಸುವ್ಯಕ್ತ.—ಅ. ಕಾ. 4:13.
14. ‘ಪವಿತ್ರಾತ್ಮದಿಂದ ಪ್ರಜ್ವಲಿತರಾಗಿರಲು’ ನಮಗೆ ಯಾವುದು ಸಹಾಯಮಾಡಬಲ್ಲದು?
14 ಪವಿತ್ರಾತ್ಮವು ನಮ್ಮ ಜೀವನವನ್ನು ಮಾರ್ಗದರ್ಶಿಸುವಂತೆ ಬಿಡುವ ರೀತಿಯಲ್ಲಿ ಜೀವಿಸುವುದು ಸಹ ನಮ್ಮ ಶುಶ್ರೂಷೆಯನ್ನು ಧೈರ್ಯದಿಂದ ನಿರ್ವಹಿಸುವಂತೆ ನಮ್ಮನ್ನು ಪ್ರಚೋದಿಸಬಲ್ಲದು. ಪವಿತ್ರಾತ್ಮಕ್ಕಾಗಿ ಸದಾ ಪ್ರಾರ್ಥಿಸುತ್ತಿರುವುದು, ಶ್ರದ್ಧಾಪೂರ್ವಕವಾಗಿ ಅರ್ಥಭರಿತ ವೈಯಕ್ತಿಕ ಅಧ್ಯಯನದಲ್ಲಿ ತೊಡಗುವುದು, ಓದುವ ವಿಷಯದ ಕುರಿತು ಪ್ರಾರ್ಥನಾಪೂರ್ವಕ ಧ್ಯಾನಿಸುವುದು ಮತ್ತು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಿಂದ ಸಿಗುವ ಒಟ್ಟು ಪ್ರಯೋಜನಗಳು ‘ಪವಿತ್ರಾತ್ಮದಿಂದ ಪ್ರಜ್ವಲಿಸಲು’ ನಮಗೆ ಸಹಾಯಮಾಡಬಲ್ಲವು. (ರೋಮ. 12:11) ‘ಎಫೆಸಕ್ಕೆ ಬಂದ ಅಲೆಕ್ಸಾಂದ್ರಿಯದ ನಿವಾಸಿಯೂ ವಾಕ್ಚಾತುರ್ಯವುಳ್ಳವನೂ ಆಗಿದ್ದ ಅಪೊಲ್ಲೋಸನೆಂಬ ಒಬ್ಬ ಯೆಹೂದ್ಯನ’ ಕುರಿತು ಬೈಬಲ್ ಹೇಳುವುದು: “[ಅವನು] ಪವಿತ್ರಾತ್ಮದಿಂದ ಪ್ರಜ್ವಲಿತನಾಗಿದ್ದುದರಿಂದ ಯೇಸುವಿನ ಕುರಿತಾದ ವಿಷಯಗಳನ್ನು ಸರಿಯಾಗಿ ತಿಳಿಸುತ್ತಾ ಬೋಧಿಸುತ್ತಾ ಇದ್ದನು.” (ಅ. ಕಾ. 18:24, 25) ‘ಪವಿತ್ರಾತ್ಮದಲ್ಲಿ ಬೆಂಕಿಯುಳ್ಳವರಾಗಿರುವ’ ಮೂಲಕ ಮನೆ ಮನೆ ಶುಶ್ರೂಷೆಯಲ್ಲಿ ಮತ್ತು ಅನೌಪಚಾರಿಕ ಸಾಕ್ಷಿಯಲ್ಲಿ ನಾವು ಹೆಚ್ಚಿನ ಧೈರ್ಯವನ್ನು ತೋರಿಸಸಾಧ್ಯವಿದೆ.—ರೋಮ. 12:11, NIBV.
15. ಹೆಚ್ಚು ಧೈರ್ಯದಿಂದ ಮಾತಾಡುವುದು ನಮಗೆ ಹೇಗೆ ಪ್ರಯೋಜನಕಾರಿ?
15 ಸಾಕ್ಷಿಕಾರ್ಯದಲ್ಲಿ ಹೆಚ್ಚಿನ ಧೈರ್ಯವನ್ನು ಪಡೆದುಕೊಳ್ಳುವುದು ನಮ್ಮ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ. ನಮ್ಮ ಮನೋಭಾವವು ಉತ್ತಮಿಸುವುದು, ಏಕೆಂದರೆ ನಮ್ಮ ಕೆಲಸದ ಪ್ರಮುಖತೆ ಹಾಗೂ ಪ್ರಯೋಜನವನ್ನು ನಾವು ಹೆಚ್ಚು ಪೂರ್ಣವಾಗಿ ಗಣ್ಯಮಾಡುತ್ತೇವೆ. ನಮ್ಮ ಉತ್ಸಾಹವು ಹೆಚ್ಚುವುದು, ಏಕೆಂದರೆ ಶುಶ್ರೂಷೆಯಲ್ಲಿ ಪರಿಣಾಮಕಾರಿಯಾಗುವಾಗ ನಮ್ಮ ಸಂತೋಷವು ಹೆಚ್ಚುವುದು. ನಮ್ಮ ಹುರುಪು ಇನ್ನಷ್ಟು ಬಲಗೊಳ್ಳುವುದು, ಏಕೆಂದರೆ ಸಾರುವ ಕಾರ್ಯಕ್ಕೆ ನಮಗಿರುವ ತುರ್ತುಪ್ರಜ್ಞೆಯು ಅಧಿಕಗೊಳ್ಳುವುದು.
16. ಶುಶ್ರೂಷೆಗಾಗಿ ನಮ್ಮ ಹುರುಪು ಕುಂದಿಹೋಗಿರುವುದಾದರೆ ನಾವೇನು ಮಾಡಬೇಕು?
16 ಶುಶ್ರೂಷೆಗಾಗಿ ಹುರುಪನ್ನು ಅಥವಾ ಹಿಂದೆ ಇದ್ದಂಥ ಕಟ್ಟಾಸಕ್ತಿಯನ್ನು ನಾವು ಕಳಕೊಂಡಿದ್ದಲ್ಲಿ ಆಗೇನು? ಹಾಗಿದ್ದರೆ ಪ್ರಾಮಾಣಿಕವಾದ ಸ್ವ-ಪರೀಕ್ಷಣೆಯು ಅತಿ ಸೂಕ್ತ. ಪೌಲನು ಬರೆದದ್ದು: “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.” (2 ಕೊರಿಂ. 13:5) ನಿಮ್ಮನ್ನು ಕೇಳಿಕೊಳ್ಳಿ: ‘ನಾನಿನ್ನೂ ಪವಿತ್ರಾತ್ಮದಿಂದ ಪ್ರಜ್ವಲಿತನೊ? ಯೆಹೋವನ ಆತ್ಮಕ್ಕಾಗಿ ನಾನು ಬೇಡಿಕೊಳ್ಳುತ್ತೇನೊ? ದೇವರ ಚಿತ್ತವನ್ನು ಮಾಡಲು ನಾನು ಆತನನ್ನು ಆತುಕೊಂಡಿದ್ದೇನೆಂದು ನನ್ನ ಪ್ರಾರ್ಥನೆಗಳು ತೋರಿಸುತ್ತವೊ? ನನ್ನ ಪ್ರಾರ್ಥನೆಗಳಲ್ಲಿ ನಮಗೆ ವಹಿಸಲಾದ ಶುಶ್ರೂಷೆಗಾಗಿ ಗಣ್ಯತೆಯ ಮಾತುಗಳಿವೆಯೊ? ನನ್ನ ವೈಯಕ್ತಿಕ ಅಧ್ಯಯನ ಹವ್ಯಾಸಗಳು ಹೇಗಿವೆ? ನಾನು ಓದುವ ಮತ್ತು ಆಲಿಸುವ ವಿಷಯಗಳನ್ನು ಧ್ಯಾನಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತೇನೆ? ಸಭಾ ಕೂಟಗಳಲ್ಲಿ ನಾನು ಎಷ್ಟರ ಮಟ್ಟಿಗೆ ಒಳಗೊಂಡಿರುತ್ತೇನೆ?’ ಇಂಥ ಪ್ರಶ್ನೆಗಳ ಕುರಿತು ಆಲೋಚಿಸುವ ಮೂಲಕ ನೀವು ದುರ್ಬಲರಾಗಿರುವ ಕ್ಷೇತ್ರಗಳನ್ನು ಗುರುತಿಸಲು ಹಾಗೂ ಸರಿಪಡಿಸಿಕೊಳ್ಳಲು ಸಹಾಯಸಿಗುವುದು.
ದೇವರಾತ್ಮವು ನಿಮ್ಮನ್ನು ಧೈರ್ಯಗೊಳಿಸಲಿ
17, 18. (ಎ) ಇಂದು ಸಾರುವ ಕೆಲಸವು ಯಾವ ಪ್ರಮಾಣದಲ್ಲಿ ನಡೆಸಲ್ಪಡುತ್ತಾ ಇದೆ? (ಬಿ) ದೇವರ ರಾಜ್ಯದ ಸುವಾರ್ತೆಯ ಸಾರುವಿಕೆಯಲ್ಲಿ ನಾವು ಹೇಗೆ “ತುಂಬ ವಾಕ್ಸರಳತೆ” ತೋರಿಸಬಲ್ಲೆವು?
17 ಪುನರುತ್ಥಾನಗೊಂಡ ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದು: “ಪವಿತ್ರಾತ್ಮವು ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಯೂದಾಯ ಸಮಾರ್ಯಗಳಲ್ಲಿಯೂ ಮತ್ತು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ.” (ಅ. ಕಾ. 1:8) ಆಗ ಆರಂಭಗೊಂಡ ಕೆಲಸವು ಇಂದು ಅಭೂತಪೂರ್ವ ಪ್ರಮಾಣದಲ್ಲಿ ನಡೆಸಲ್ಪಡುತ್ತಾ ಇದೆ. ಈಗ 70 ಲಕ್ಷಕ್ಕೂ ಮೀರಿದ ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ, ವರ್ಷಕ್ಕೆ ಸರಿಸುಮಾರು ಒಂದೂವರೆ ಶತಕೋಟಿ ತಾಸುಗಳನ್ನು ರಾಜ್ಯದ ಸಂದೇಶವನ್ನು ಸಾರುವುದರಲ್ಲಿ ಕಳೆಯುತ್ತಿದ್ದಾರೆ. ಎಂದೂ ಪುನರಾವರ್ತಿಸಲಾಗದ ಈ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವುದು ಎಷ್ಟು ರೋಮಾಂಚಕರ!
18 ಪ್ರಥಮ ಶತಮಾನದಲ್ಲಿ ಹೇಗೊ ಹಾಗೆ ಇಂದು ಸಹ ಭೂವ್ಯಾಪಕ ಸಾರುವಿಕೆಯು ದೇವರಾತ್ಮದ ಮಾರ್ಗದರ್ಶನೆಯ ಕೆಳಗೆ ನಡಿಸಲ್ಪಡುತ್ತದೆ. ನಾವು ಪವಿತ್ರಾತ್ಮದ ಮಾರ್ಗದರ್ಶನೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದಲ್ಲಿ ನಮ್ಮ ಶುಶ್ರೂಷೆಯಲ್ಲಿ “ತುಂಬ ವಾಕ್ಸರಳತೆ” ತೋರಿಸುವೆವು. (ಅ. ಕಾ. 28:31) ಆದುದರಿಂದ ದೇವರ ರಾಜ್ಯದ ಸುವಾರ್ತೆಯನ್ನು ನಾವು ಸಾರುತ್ತಾ ಹೋಗುವಾಗ ಅವಶ್ಯವಾಗಿ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡೋಣ!
[ಪಾದಟಿಪ್ಪಣಿಗಳು]
^ ಪ್ಯಾರ. 7 ಹೆಸರುಗಳನ್ನು ಬದಲಾಯಿಸಲಾಗಿದೆ.
^ ಪ್ಯಾರ. 11 ನಿಮ್ಮ ಬೈಬಲ್ ವಾಚನ ಮತ್ತು ವೈಯಕ್ತಿಕ ಅಧ್ಯಯನದಿಂದ ಅತಿ ಹೆಚ್ಚಿನ ಪ್ರಯೋಜನ ಹೊಂದಲು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪುಸ್ತಕದ ಪುಟ 21-32ರಲ್ಲಿರುವ “ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ” ಮತ್ತು “ಅಧ್ಯಯನವು ಪ್ರತಿಫಲದಾಯಕವಾಗಿದೆ” ಎಂಬ ಅಧ್ಯಾಯಗಳನ್ನು ನೋಡಿರಿ.
ನೀವೇನು ಕಲಿತಿರಿ?
• ದೇವರ ವಾಕ್ಯವನ್ನು ಮಾತಾಡುವುದರಲ್ಲಿ ನಾವೇಕೆ ಧೈರ್ಯದಿಂದಿರುವ ಅಗತ್ಯವಿದೆ?
• ಧೈರ್ಯದಿಂದ ಮಾತಾಡುವುದಕ್ಕೆ ಆರಂಭದ ಶಿಷ್ಯರಿಗೆ ಯಾವುದು ನೆರವಾಯಿತು?
• ನಾವು ಧೈರ್ಯವನ್ನು ಪಡೆದುಕೊಳ್ಳುವುದು ಹೇಗೆ?
• ಧೈರ್ಯವನ್ನು ಪಡೆದುಕೊಳ್ಳುವುದು ನಮಗೆ ಹೇಗೆ ಸಹಾಯಕಾರಿ?
[ಅಧ್ಯಯನ ಪ್ರಶ್ನೆಗಳು]
[ಪುಟ 7ರಲ್ಲಿರುವ ಚಿತ್ರ]
ತಮ್ಮ ಮಕ್ಕಳು ಧೈರ್ಯವನ್ನು ಪಡೆದುಕೊಳ್ಳುವಂತೆ ಹೆತ್ತವರು ಹೇಗೆ ಸಹಾಯ ನೀಡಬಲ್ಲರು?
[ಪುಟ 8ರಲ್ಲಿರುವ ಚಿತ್ರಗಳು]
ಶುಶ್ರೂಷೆಯಲ್ಲಿ ಧೈರ್ಯವನ್ನು ಪಡೆದುಕೊಳ್ಳಲು ಒಂದು ಚುಟುಕಾದ ಪ್ರಾರ್ಥನೆ ನಿಮಗೆ ಸಹಾಯಮಾಡಬಲ್ಲದು