“ಪವಿತ್ರಾತ್ಮದ ಕತ್ತಿಯನ್ನು” ಕೌಶಲದಿಂದ ಬಳಸಿರಿ
“ಪವಿತ್ರಾತ್ಮದ ಕತ್ತಿಯನ್ನು” ಕೌಶಲದಿಂದ ಬಳಸಿರಿ
“ಪವಿತ್ರಾತ್ಮದ ಕತ್ತಿಯನ್ನು ಅಂದರೆ ದೇವರ ವಾಕ್ಯವನ್ನು ಸ್ವೀಕರಿಸಿರಿ.”—ಎಫೆ. 6:17.
1, 2. ಹೆಚ್ಚು ರಾಜ್ಯ ಘೋಷಕರ ಬಹಳ ಅಗತ್ಯವಿರುವುದರಿಂದ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಜನರ ಗುಂಪುಗಳ ಆಧ್ಯಾತ್ಮಿಕ ಅಗತ್ಯವನ್ನು ಗಮನಿಸಿದ ಯೇಸುವು ತನ್ನ ಶಿಷ್ಯರಿಗೆ ಹೇಳಿದ್ದು: “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.” ವಿಷಯಗಳನ್ನು ಯೇಸು ಅಲ್ಲಿಗೇ ಬಿಡಲಿಲ್ಲ. ಆ ಮಾತುಗಳನ್ನು ನುಡಿದ ನಂತರ “ಅವನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು” ಅವರನ್ನು ಸಾರುವ ಅಥವಾ “ಕೊಯ್ಲಿನ” ಸಂಚಾರಕ್ಕೆ ಕಳುಹಿಸಿದನು. (ಮತ್ತಾ. 9:35-38; 10:1, 5) ತದನಂತರ ಅದೇ ಕೆಲಸವನ್ನು ಮಾಡಲು “ಬೇರೆ ಎಪ್ಪತ್ತು ಮಂದಿಯನ್ನು ನೇಮಿಸಿ . . . ಇಬ್ಬಿಬ್ಬರನ್ನಾಗಿ ಕಳುಹಿಸಿದನು.”—ಲೂಕ 10:1, 2.
2 ಹೆಚ್ಚು ರಾಜ್ಯ ಘೋಷಕರ ಬಹಳ ಅಗತ್ಯ ಇಂದು ಸಹ ಇದೆ. 2009ರ ಸೇವಾ ವರ್ಷದ ಲೋಕವ್ಯಾಪಕ ಜ್ಞಾಪಕಾಚರಣೆಯ ಹಾಜರಿಯು 1,81,68,323 ಆಗಿತ್ತು. ಅದು ಯೆಹೋವನ ಸಾಕ್ಷಿಗಳ ಒಟ್ಟು ಸಂಖ್ಯೆಗಿಂತ 100 ಲಕ್ಷಕ್ಕೂ ಮೀರಿತ್ತು. ಹೊಲಗಳು ನಿಶ್ಚಯವಾಗಿ ಕೊಯ್ಲಿಗೆ ಸಿದ್ಧವಾಗಿವೆ. (ಯೋಹಾ. 4:34, 35) ಆದುದರಿಂದ ನಾವು ಪ್ರಾರ್ಥನೆಯಲ್ಲಿ ಹೆಚ್ಚು ಕೆಲಸಗಾರರಿಗಾಗಿ ಬೇಡಿಕೊಳ್ಳಬೇಕು. ಆದರೆ ಅಂಥ ಬೇಡಿಕೆಗಳೊಂದಿಗೆ ಹೊಂದಿಕೆಯಲ್ಲಿ ನಾವು ಕ್ರಿಯೆಗೈಯುವುದು ಹೇಗೆ? ಹೇಗೆಂದರೆ, ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುವಾಗ ಹೆಚ್ಚು ಪರಿಣಾಮಕಾರಿ ಶುಶ್ರೂಷಕರಾಗುವ ಮೂಲಕವೇ.—ಮತ್ತಾ. 28:19, 20; ಮಾರ್ಕ 13:10.
3. ಹೆಚ್ಚು ಪರಿಣಾಮಕಾರಿ ಶುಶ್ರೂಷಕರಾಗುವಂತೆ ಸಹಾಯಮಾಡುವುದರಲ್ಲಿ ದೇವರಾತ್ಮವು ಮುಖ್ಯ ಪಾತ್ರವಹಿಸುವುದು ಹೇಗೆ?
3 ದೇವರ ಆತ್ಮದಿಂದ ಮಾರ್ಗದರ್ಶಿಸಲ್ಪಡುವುದರಿಂದಲೇ ನಾವು ‘ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಲು’ ಶಕ್ತರಾಗಿದ್ದೇವೆಂದು ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. (ಅ. ಕಾ. 4:31) ಕೌಶಲವುಳ್ಳ ಶುಶ್ರೂಷಕರಾಗುವಂತೆಯೂ ನಮಗೆ ಆ ಆತ್ಮವು ನೆರವಾಗಬಲ್ಲದು. ನಾವು ಶುಶ್ರೂಷೆಯನ್ನು ಪರಿಣಾಮಕಾರಿ ಮಾಡುವ ಒಂದು ವಿಧವು ಯೆಹೋವನು ನಮಗೆ ಒದಗಿಸಿರುವ ಅತ್ಯುತ್ತಮ ಸಾಧನವನ್ನು ಅಂದರೆ ಆತನ ಲಿಖಿತ ವಾಕ್ಯವಾದ ಬೈಬಲನ್ನು ಚೆನ್ನಾಗಿ ಉಪಯೋಗಿಸುವುದೇ. ಯಾಕೆಂದರೆ ಅದು ಪವಿತ್ರಾತ್ಮದ ಉತ್ಪಾದನೆ. (2 ತಿಮೊ. 3:16) ಅದರ ಸಂದೇಶವು ದೇವಪ್ರೇರಿತ. ಆದಕಾರಣ, ನಮ್ಮ ಶುಶ್ರೂಷೆಯಲ್ಲಿ ಬೈಬಲ್ ಸತ್ಯವನ್ನು ಕೌಶಲದಿಂದ ವಿವರಿಸಿಹೇಳುವಾಗ ನಾವು ನಿಜವಾಗಿ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತೇವೆ. ಅದು ಹೇಗೆ ಸಾಧ್ಯವೆಂದು ಪರಿಗಣಿಸುವ ಮುಂಚಿತವಾಗಿ ದೇವರ ವಾಕ್ಯಕ್ಕಿರುವ ಶಕ್ತಿಯೆಷ್ಟೆಂಬುದನ್ನು ತುಸು ಮನಸ್ಸಿಗೆ ತಂದುಕೊಳ್ಳೋಣ.
‘ದೇವರ ವಾಕ್ಯ ಪ್ರಬಲವಾದದ್ದು’
4. ಬೈಬಲಿನಲ್ಲಿರುವ ದೇವರ ಸಂದೇಶವು ವ್ಯಕ್ತಿಯೊಬ್ಬನಲ್ಲಿ ಯಾವ ಬದಲಾವಣೆಯನ್ನು ತರಬಲ್ಲದು?
4 ದೇವರ ವಾಕ್ಯ ಅಥವಾ ಸಂದೇಶವು ತುಂಬ ಪ್ರಬಲವಾದದ್ದು! (ಇಬ್ರಿ. 4:12) ಸಾಂಕೇತಿಕ ಅರ್ಥದಲ್ಲಿ, ಬೈಬಲಿನ ಸಂದೇಶವು ಮನುಷ್ಯ ನಿರ್ಮಿತ ಕತ್ತಿಗಿಂತ ಎಷ್ಟು ಹೆಚ್ಚು ಹರಿತವಾಗಿದೆಯೆಂದರೆ ಸಾಂಕೇತಿಕವಾಗಿ ಮೂಳೆಮಜ್ಜೆಗಳನ್ನೂ ಅದು ತೂರಿಹೋಗಬಲ್ಲದು. ಶಾಸ್ತ್ರೀಯ ಸತ್ಯವು ವ್ಯಕ್ತಿಯೊಬ್ಬನ ಆಂತರ್ಯದಾಳವನ್ನು ಪ್ರವೇಶಿಸುತ್ತಾ ಅವನ ಆಲೋಚನೆಗಳನ್ನೂ ಭಾವನೆಗಳನ್ನೂ ಭೇದಿಸಿ ಅವನು ಒಳಗೆ ನಿಜವಾಗಿ ಯಾವ ರೀತಿಯ ವ್ಯಕ್ತಿ ಎಂಬುದನ್ನು ಬಯಲುಪಡಿಸುತ್ತದೆ. ಆ ಸತ್ಯಕ್ಕೆ ನೂತನಗೊಳಿಸುವ ಶಕ್ತಿಯಿದೆ ಮತ್ತು ಅದು ವ್ಯಕ್ತಿಯೊಬ್ಬನಲ್ಲಿ ನಿಜವಾದ ಬದಲಾವಣೆಗಳನ್ನು ತರಸಾಧ್ಯವಿದೆ. (ಕೊಲೊಸ್ಸೆ 3:10 ಓದಿ.) ಹೌದು, ದೇವರ ವಾಕ್ಯಕ್ಕೆ ಜನರ ಜೀವಿತವನ್ನು ಬದಲಾಯಿಸುವ ಶಕ್ತಿಯಿದೆ.
5. ಯಾವ ರೀತಿಗಳಲ್ಲಿ ಬೈಬಲು ನಮ್ಮನ್ನು ಮಾರ್ಗದರ್ಶಿಸಬಲ್ಲದು ಮತ್ತು ಯಾವ ಫಲಿತಾಂಶದೊಂದಿಗೆ?
5 ಅಷ್ಟಲ್ಲದೆ, ಬೈಬಲು ಅಪ್ರತಿಮ ವಿವೇಕವು ಕೂಡಿರುವ ಗ್ರಂಥ. ಈ ಜಟಿಲವಾದ ಲೋಕದಲ್ಲಿ ಜೀವಿಸುವುದು ಹೇಗೆಂಬ ಸಹಾಯಕರ ಮಾಹಿತಿಯನ್ನು ಅದು ಜನರಿಗೆ ಕೊಡಬಲ್ಲದು. ದೇವರ ವಾಕ್ಯವು ನಮ್ಮ ಕಾಲುಗಳಿಗೆ ಮಾತ್ರವಲ್ಲದೆ ನಮ್ಮ ಮುಂದಿರುವ ದಾರಿಗೂ ಬೆಳಕಾಗಿ ಇದೆ. (ಕೀರ್ತ. 119:105) ಸಮಸ್ಯೆಗಳನ್ನು ಎದುರಿಸುವಾಗ ಅಥವಾ ಮಿತ್ರರ ಆಯ್ಕೆ, ಮನೋರಂಜನೆ, ಉದ್ಯೋಗ, ಉಡುಪುತೊಡುಪು ಇತ್ಯಾದಿಗಳ ಕುರಿತು ತೀರ್ಮಾನಗಳನ್ನು ಮಾಡುವಾಗ ಅದು ಮಹತ್ತರ ನೆರವನ್ನು ನೀಡುತ್ತದೆ. (ಕೀರ್ತ. 37:25; ಜ್ಞಾನೋ. 13:20; ಯೋಹಾ. 15:14; 1 ತಿಮೊ. 2:9) ದೇವರ ವಾಕ್ಯದಲ್ಲಿರುವ ಮೂಲತತ್ತ್ವಗಳನ್ನು ಅನ್ವಯಿಸುವುದರಿಂದ ಇತರರೊಂದಿಗೆ ಒಳ್ಳೇದಾಗಿ ಹೊಂದಿಕೊಂಡು ಹೋಗಲು ನಮಗೆ ಸಾಧ್ಯವಾಗುತ್ತದೆ. (ಮತ್ತಾ. 7:12; ಫಿಲಿ. 2:3, 4) ನಮ್ಮ ಮುಂದಿರುವ ದಾರಿಯು ಸಾಂಕೇತಿಕ ಬೆಳಕಿನಿಂದ ಚೆನ್ನಾಗಿ ಬೆಳಗಿರುವುದರಿಂದ ನಮ್ಮ ತೀರ್ಮಾನಗಳು ಮುಂದಕ್ಕೆ ಯಾವ ಪರಿಣಾಮ ಬೀರಬಹುದು ಎಂದು ತಿಳಿದುಕೊಳ್ಳಲು ನಾವು ಶಕ್ತರಾಗುವೆವು. (1 ತಿಮೊ. 6:9) ಶಾಸ್ತ್ರಗ್ರಂಥವು ಭವಿಷ್ಯತ್ತಿಗಾಗಿರುವ ದೇವರ ಉದ್ದೇಶವನ್ನು ಸಹ ಮುಂತಿಳಿಸುತ್ತದೆ. ಹೀಗೆ ಆ ಉದ್ದೇಶಕ್ಕೆ ಹೊಂದಿಕೆಯಾದ ಜೀವನಶೈಲಿಯನ್ನು ಬೆನ್ನಟ್ಟುವಂತೆ ನಮಗೆ ಸಹಾಯಮಾಡುತ್ತದೆ. (ಮತ್ತಾ. 6:33; 1 ಯೋಹಾ. 2:17, 18) ವ್ಯಕ್ತಿಯೊಬ್ಬನು ತನ್ನನ್ನು ದೈವಿಕ ಮೂಲತತ್ತ್ವಗಳು ಮಾರ್ಗದರ್ಶಿಸುವಂತೆ ಬಿಟ್ಟಲ್ಲಿ ಎಷ್ಟು ಅರ್ಥವತ್ತಾದ ಜೀವನವನ್ನು ಆನಂದಿಸಬಲ್ಲನು!
6. ನಮ್ಮ ಆಧ್ಯಾತ್ಮಿಕ ಹೋರಾಟದಲ್ಲಿ ಬೈಬಲು ಎಷ್ಟು ಪ್ರಭಾವಶಾಲಿ ಶಸ್ತ್ರವಾಗಿದೆ?
6 ನಮ್ಮ ಆಧ್ಯಾತ್ಮಿಕ ಹೋರಾಟದಲ್ಲಿ ಬೈಬಲು ಎಂಥ ಪ್ರಭಾವಶಾಲಿ ಶಸ್ತ್ರವಾಗಿದೆ ಎಂಬುದನ್ನೂ ಮನಸ್ಸಿಗೆ ತನ್ನಿರಿ. ಪೌಲನು ದೇವರ ವಾಕ್ಯವನ್ನು “ಪವಿತ್ರಾತ್ಮದ ಕತ್ತಿ” ಎಂದು ಕರೆದನು. (ಎಫೆಸ 6:12, 17 ಓದಿ.) ಪರಿಣಾಮಕಾರಿಯಾಗಿ ನೀಡುವಾಗ ಬೈಬಲಿನ ಸಂದೇಶವು ಜನರನ್ನು ಸೈತಾನನ ಆಧ್ಯಾತ್ಮಿಕ ದಾಸ್ಯದಿಂದ ಬಿಡಿಸಬಲ್ಲದು. ಅದು ಜೀವಗಳನ್ನು ರಕ್ಷಿಸುವ ಕತ್ತಿಯಾಗಿದೆಯೇ ಹೊರತು ಅವುಗಳನ್ನು ನಾಶಮಾಡುವ ಕತ್ತಿಯಲ್ಲ. ಆದ್ದರಿಂದ ಅದನ್ನು ನಾವು ಕೌಶಲದಿಂದ ಬಳಸಲು ಶ್ರಮಿಸಬೇಕಲ್ಲವೆ?
ಸರಿಯಾದ ರೀತಿಯಲ್ಲಿ ನಿರ್ವಹಿಸಿರಿ
7. “ಪವಿತ್ರಾತ್ಮದ ಕತ್ತಿಯನ್ನು” ಚೆನ್ನಾಗಿ ಬಳಸಲು ಕಲಿಯುವುದು ಏಕೆ ಪ್ರಾಮುಖ್ಯ?
7 ಒಬ್ಬ ಸೈನಿಕನು ತನ್ನ ಶಸ್ತ್ರಗಳನ್ನು ಸರಿಯಾಗಿ ಬಳಸಲು ಅಭ್ಯಾಸಮಾಡಿ ಕಲಿತಿದ್ದರೆ ಮಾತ್ರ ಅವನ್ನು ಯುದ್ಧದಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲನು. ನಮ್ಮ ಆಧ್ಯಾತ್ಮಿಕ ಹೋರಾಟದಲ್ಲಿ “ಪವಿತ್ರಾತ್ಮದ ಕತ್ತಿಯ” ಉಪಯೋಗವು ಕೂಡ ಇದೇ ರೀತಿ ಇದೆ. “ನಿನ್ನನ್ನು ದೇವರ ಮುಂದೆ ಮೆಚ್ಚಿಗೆಯಾಗುವ ರೀತಿಯಲ್ಲಿ ಒಪ್ಪಿಸಿಕೊಳ್ಳಲು ನಿನ್ನಿಂದಾದಷ್ಟು ಶ್ರಮಿಸು; ಯಾವುದರಿಂದಲೂ ಲಜ್ಜಿತನಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವವನೂ ಆಗಿರು” ಎಂದು ಪೌಲನು ಬರೆದನು.—2 ತಿಮೊ. 2:15.
8, 9. ಬೈಬಲ್ ಹೇಳುವಂಥ ವಿಷಯದ ಅರ್ಥವನ್ನು ತಿಳಿಯಲು ನಮಗೆ ಯಾವುದು ಸಹಾಯಮಾಡುವುದು? ಒಂದು ಉದಾಹರಣೆ ಕೊಡಿ.
8 ನಮ್ಮ ಶುಶ್ರೂಷೆಯಲ್ಲಿ ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲು’ ಯಾವುದು ಸಹಾಯಕಾರಿ? ಬೈಬಲ್ ಹೇಳುವ ವಿಷಯಗಳನ್ನು ಇತರರಿಗೆ ನಾವು ಸ್ಪಷ್ಟವಾಗಿ ಕಲಿಸುವ ಮೊದಲು ಸ್ವತಃ ನಮಗೆ ಅದರ ಅರ್ಥವು ತಿಳಿದಿರುವ ಅಗತ್ಯವಿದೆ. ಇದು ಒಂದು ವಚನದ ಅಥವಾ ವಾಕ್ಯವೃಂದದ ಪೂರ್ವಾಪರಕ್ಕೆ ಗಮನಕೊಡುವುದನ್ನು ಅವಶ್ಯಪಡಿಸುತ್ತದೆ. ಪೂರ್ವಾಪರ ಅಂದರೆ ಒಂದು ಶಬ್ದ, ವಾಕ್ಯ ಅಥವಾ ಪ್ಯಾರಗ್ರಾಫ್‌ನ ಹಿಂದೆ ಮತ್ತು ಮುಂದೆ ಬರುವಂಥ ಶಬ್ದಗಳು, ವಾಕ್ಯಗಳು ಅಥವಾ ಪ್ಯಾರಗ್ರಾಫ್‌ಗಳಾಗಿವೆ. ಇವು ಅರ್ಥವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಲು ಸಹಾಯಮಾಡುತ್ತವೆ.
9 ಒಂದು ಶಾಸ್ತ್ರವಚನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಅದರ ಸುತ್ತಮುತ್ತಣ ವಚನಗಳನ್ನು ಪರಿಗಣಿಸುವುದು ಅವಶ್ಯ. ಆ ಅಗತ್ಯವನ್ನು ಗಲಾತ್ಯ 5:13ರಲ್ಲಿರುವ ಪೌಲನ ಹೇಳಿಕೆಯು ಉದಾಹರಿಸುತ್ತದೆ. ಅವನು ಬರೆದದ್ದು: “ಸಹೋದರರೇ, ನೀವು ಸ್ವಾತಂತ್ರ್ಯಕ್ಕಾಗಿ ಕರೆಯಲ್ಪಟ್ಟಿದ್ದೀರಿ; ಆದರೆ ಈ ಸ್ವಾತಂತ್ರ್ಯವನ್ನು ಶಾರೀರಿಕ ಇಚ್ಛೆಯನ್ನು ಮಾಡಲು ಪ್ರಚೋದನೆಯಾಗಿ ಬಳಸಬೇಡಿರಿ, ಬದಲಾಗಿ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಿರಿ.” ಪೌಲನು ಇಲ್ಲಿ ಹೇಳುತ್ತಿರುವ ಸ್ವಾತಂತ್ರ್ಯವು ಯಾವುದು? ಪಾಪ ಮತ್ತು ಮರಣದಿಂದ, ಸುಳ್ಳು ನಂಬಿಕೆಗಳ ದಾಸ್ಯದಿಂದ ಅಥವಾ ಬೇರೆ ಯಾವುದೇ ವಿಷಯದಿಂದ ಸ್ವಾತಂತ್ರ್ಯಕ್ಕೆ ಅವನು ಸೂಚಿಸುತ್ತಿದ್ದನೊ? ಪೌಲನು ಇಲ್ಲಿ ‘ಧರ್ಮಶಾಸ್ತ್ರದ ಶಾಪದೊಳಗಿಂದ ಬಿಡಿಸಲ್ಪಟ್ಟದ್ದರ’ ಫಲಿತಾಂಶವಾಗಿ ಸಿಗುವ ಸ್ವಾತಂತ್ರ್ಯದ ಕುರಿತು ಹೇಳುತ್ತಿದ್ದನೆಂದು ಪೂರ್ವಾಪರವು ತಿಳಿಸುತ್ತದೆ. (ಗಲಾ. 3:13, 19-24; 4:1-5) ಅವನು ಕ್ರೈಸ್ತ ಸ್ವಾತಂತ್ರ್ಯಕ್ಕೆ ಸೂಚಿಸುತ್ತಿದ್ದನು. ಆ ಸ್ವಾತಂತ್ರ್ಯವನ್ನು ಮಾನ್ಯಮಾಡಿದವರು ಪ್ರೀತಿಯಿಂದ ಒಬ್ಬರು ಇನ್ನೊಬ್ಬರ ಸೇವೆಮಾಡಿದರು. ಪ್ರೀತಿಯಿಲ್ಲದವರು ಜಗಳ ಮತ್ತು ಕಚ್ಚಾಟದಲ್ಲಿ ತೊಡಗಿದರು.—ಗಲಾ. 5:15.
10. ಶಾಸ್ತ್ರಗ್ರಂಥದ ಅರ್ಥವನ್ನು ನಿಷ್ಕೃಷ್ಟವಾಗಿ ತಿಳಿದುಕೊಳ್ಳಲು ಯಾವ ರೀತಿಯ ಮಾಹಿತಿಯನ್ನು ಪರಿಗಣಿಸಬೇಕು, ಮತ್ತು ನಾವದನ್ನು ಹೇಗೆ ಪಡೆದುಕೊಳ್ಳಬಹುದು?
10 ಪೂರ್ವಾಪರ ಎಂಬ ಶಬ್ದಕ್ಕೆ ಇನ್ನೊಂದು ಅರ್ಥವಿದೆ. ಪೂರ್ವಾಪರದ ಸಮಾನಾರ್ಥ ಪದಗಳಲ್ಲಿ ಹಿನ್ನೆಲೆ, ಪರಿಸ್ಥಿತಿ ಮತ್ತು ಸನ್ನಿವೇಶ ಸೇರಿರುತ್ತದೆ. ಒಂದು ವಚನದ ಸರಿಯಾದ ಅರ್ಥವನ್ನು ತಿಳಿದುಕೊಳ್ಳಬೇಕಾದರೆ ನಾವು ಅದರ ಹಿನ್ನೆಲೆಯ ಮಾಹಿತಿಯನ್ನು ಅಂದರೆ ಆ ಬೈಬಲ್ ಪುಸ್ತಕವನ್ನು ಯಾರು ಬರೆದರು, ಅದು ಯಾವಾಗ ಮತ್ತು ಯಾವ ಸನ್ನಿವೇಶಗಳ ಕೆಳಗೆ ಬರೆಯಲ್ಪಟ್ಟಿತು ಎಂಬುದನ್ನು ಪರಿಗಣಿಸಬೇಕು. ಆ ಪುಸ್ತಕವು ಯಾವ ಉದ್ದೇಶಕ್ಕಾಗಿ ಬರೆಯಲ್ಪಟ್ಟಿತು ಎಂದು ತಿಳಿಯುವುದೂ ಸಹಾಯಕರ. ಸಾಧ್ಯವಾದರೆ ಆ ದಿನದಲ್ಲಿದ್ದ ಜನರ ಪದ್ಧತಿಗಳು, ನಡವಳಿಕೆ, ಮೌಲ್ಯಗಳು ಮತ್ತು ಅವರ ಆರಾಧನಾ ರೀತಿ ಮುಂತಾದವುಗಳನ್ನು ತಿಳಿದುಕೊಳ್ಳಬಹುದು. *
11. ಶಾಸ್ತ್ರವಚನಗಳನ್ನು ವಿವರಿಸುವಾಗ ನಾವು ಯಾವ ಜಾಗ್ರತೆ ವಹಿಸಬೇಕು?
11 ‘ದೇವರ ವಾಕ್ಯವನ್ನು ಸರಿಯಾಗಿ ನಿರ್ವಹಿಸುವುದರಲ್ಲಿ’ ಶಾಸ್ತ್ರಾಧಾರಿತ ಸತ್ಯಗಳನ್ನು ನಿಷ್ಕೃಷ್ಟವಾಗಿ ವಿವರಿಸುವುದಕ್ಕಿಂತ ಹೆಚ್ಚಿನದ್ದು ಸೇರಿರುತ್ತದೆ. ಜನರನ್ನು ಹೆದರಿಸುವುದಕ್ಕಾಗಿ ನಾವು ಬೈಬಲನ್ನು ಉಪಯೋಗಿಸದಂತೆ ಜಾಗ್ರತೆ ವಹಿಸಬೇಕು. ಪಿಶಾಚನಿಂದ ಶೋಧಿಸಲ್ಪಟ್ಟಾಗ ಯೇಸು ಮಾಡಿದಂತೆ ಸತ್ಯವನ್ನು ಸಮರ್ಥಿಸಲು ನಾವು ಶಾಸ್ತ್ರಗ್ರಂಥವನ್ನು ಉಪಯೋಗಿಸುತ್ತೇವಾದರೂ ಬೈಬಲು ನಮ್ಮ ಕೇಳುಗರನ್ನು ದಬಾಯಿಸಲು ಬಳಸುವ ದೊಣ್ಣೆಯಲ್ಲ. (ಧರ್ಮೋ. 6:16; 8:3; 10:20; ಮತ್ತಾ. 4:4, 7, 10) ಅಪೊಸ್ತಲ ಪೇತ್ರನ ಬುದ್ಧಿವಾದವನ್ನು ನಾವು ಪಾಲಿಸಬೇಕು. ಅವನಂದದ್ದು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪವಿತ್ರೀಕರಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೇಳುವ ಪ್ರತಿಯೊಬ್ಬರ ಮುಂದೆ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ; ಆದರೆ ಇದನ್ನು ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ ಮಾಡಿರಿ.”—1 ಪೇತ್ರ 3:15.
12, 13. “ಬಲವಾಗಿ ಬೇರೂರಿರುವ” ಯಾವ ವಿಷಯಗಳನ್ನು ದೇವರ ವಾಕ್ಯದ ಸತ್ಯವು ಕೆಡವಿಹಾಕಬಲ್ಲದು? ಉದಾಹರಣೆ ಕೊಡಿ.
12 ಸರಿಯಾದ ರೀತಿಯಲ್ಲಿ ನಿರ್ವಹಿಸಿದಾಗ ದೇವರ ವಾಕ್ಯದ ಸತ್ಯವು ಏನನ್ನು ಪೂರೈಸಬಲ್ಲದು? (2 ಕೊರಿಂಥ 10:4, 5 ಓದಿ.) ಶಾಸ್ತ್ರಾಧಾರಿತ ಸತ್ಯವು “ಬಲವಾಗಿ ಬೇರೂರಿರುವ ವಿಷಯಗಳನ್ನು” ಕೆಡವಿಹಾಕಬಲ್ಲದು. ಅಂದರೆ ಸುಳ್ಳು ಬೋಧನೆಗಳನ್ನು, ಹಾನಿಕರ ಪದ್ಧತಿಗಳನ್ನು ಮತ್ತು ಅಸಂಪೂರ್ಣ ಮಾನವ ವಿವೇಕವನ್ನು ಪ್ರತಿಬಿಂಬಿಸುವ ತತ್ತ್ವಜ್ಞಾನವನ್ನು ಬಯಲುಪಡಿಸಬಲ್ಲದು. “ದೇವರ ಜ್ಞಾನಕ್ಕೆ ವಿರುದ್ಧವಾಗಿ ಎಬ್ಬಿಸಲ್ಪಡುವ” ಯಾವುದೇ ವಿಚಾರಗಳನ್ನು ಕೆಡವಿಹಾಕಲು ನಾವು ಬೈಬಲನ್ನು ಉಪಯೋಗಿಸಬಹುದು. ಸತ್ಯಕ್ಕೆ ಹೊಂದಿಕೆಯಲ್ಲಿ ಜನರು ಯೋಚಿಸುವಂತೆ ನೆರವಾಗಲು ಸಹ ನಾವು ಬೈಬಲಿನ ಬೋಧನೆಗಳನ್ನು ಬಳಸಬಹುದು.
13 ಉದಾಹರಣೆಗೆ, ಭಾರತದ ನಿವಾಸಿಯಾದ 93 ವಯಸ್ಸಿನ ಒಬ್ಬಾಕೆ ಮಹಿಳೆಯನ್ನು ತಕ್ಕೊಳ್ಳಿರಿ. ತೀರ ಚಿಕ್ಕ ಪ್ರಾಯದಿಂದಲೇ ಅವಳಿಗೆ ಪುನರ್ಜನ್ಮದಲ್ಲಿ ನಂಬಿಕೆಯಿಡುವಂತೆ ಕಲಿಸಲಾಗಿತ್ತು. ಪರದೇಶದಲ್ಲಿ ವಾಸಿಸುತ್ತಿದ್ದ ಅವಳ ಮಗನು ಪತ್ರವ್ಯವಹಾರದ ಮೂಲಕ ಅವಳೊಂದಿಗೆ ಬೈಬಲನ್ನು ಅಧ್ಯಯನಿಸಲು ಆರಂಭಿಸಿದನು. ಯೆಹೋವನ ಮತ್ತು ಆತನ ವಾಗ್ದಾನಗಳ ಕುರಿತು ಕಲಿತ ವಿಷಯಗಳನ್ನು ಅವಳು ಸಿದ್ಧಮನಸ್ಸಿನಿಂದ ಸ್ವೀಕರಿಸಿದಳು. ಆದರೂ ಪುನರ್ಜನ್ಮದ ಬೋಧನೆಯು ಅವಳಲ್ಲಿ ಎಷ್ಟು ದೃಢವಾಗಿ ಬೇರೂರಿತ್ತೆಂದರೆ, ಮೃತರ ಸ್ಥಿತಿಯ ಕುರಿತು ಮಗನು ಬರೆದಾಗ
ಅವಳು ಆಕ್ಷೇಪವೆತ್ತಿದಳು. ಅವಳಂದದ್ದು: “ನಿನ್ನ ಬೈಬಲಿನ ಸತ್ಯತೆಯು ನನಗೆ ಅರ್ಥವೇ ಆಗುವುದಿಲ್ಲ. ನಮ್ಮೊಳಗೆ ಅಮರವಾದ ಏನೋ ಒಂದು ವಿಷಯವಿದೆ ಎಂದು ಎಲ್ಲ ಧರ್ಮಗಳು ಕಲಿಸುತ್ತವೆ. ದೇಹ ಮಾತ್ರ ಸಾಯುತ್ತದೆ ಮತ್ತು ಅದರ ಅದೃಶ್ಯ ಭಾಗವು ಬೇರೆ ಬೇರೆ ದೇಹಗಳಲ್ಲಿ ಸುಮಾರು 84,00,000 ಬಾರಿ ಪುನಃ ಪುನಃ ಜನ್ಮತಾಳುತ್ತದೆ ಎಂದು ನಾನು ಯಾವಾಗಲೂ ನಂಬಿದ್ದೆ. ಇದು ಏಕೆ ಸತ್ಯವಾಗಿರಲಾರದು? ಹೆಚ್ಚಿನ ಧರ್ಮಗಳು ಸುಳ್ಳೆಂದು ಹೇಳುತ್ತೀಯೊ?” ಇಂತಹ ಬಲವಾಗಿ ಬೇರೂರಿಸಲ್ಪಟ್ಟ ನಂಬಿಕೆಯನ್ನು ‘ಪವಿತ್ರಾತ್ಮದ ಕತ್ತಿಯು’ ಕೆಡವಿಹಾಕಬಲ್ಲದೊ? ಈ ವಿಷಯದ ಮೇಲೆ ಇನ್ನೂ ಹೆಚ್ಚಿನ ಶಾಸ್ತ್ರಾಧಾರಿತ ಚರ್ಚೆಯಾದ ಮೇಲೆ ಕೆಲವು ವಾರಗಳ ಬಳಿಕ ಆಕೆ ಬರೆದದ್ದು: “ಮರಣದ ಕುರಿತ ನಿಜ ಸತ್ಯವು ನನಗೀಗ ಅರ್ಥವಾಗುತ್ತಿದೆ. ಪುನರುತ್ಥಾನವು ಸಂಭವಿಸುವಾಗ ಮೃತರಾದ ನಮ್ಮ ಪ್ರಿಯಜನರನ್ನು ಸಂಧಿಸಲು ಸಾಧ್ಯವಿದೆ ಎಂಬುದನ್ನು ತಿಳಿಯಲು ನನಗೆ ತುಂಬ ಸಂತೋಷ. ದೇವರ ರಾಜ್ಯವು ಬೇಗನೆ ಬರಲಿ ಎಂದು ನಿರೀಕ್ಷಿಸುತ್ತೇನೆ.”ಒಡಂಬಡಿಸುವ ರೀತಿಯಲ್ಲಿ ಬಳಸಿರಿ
14. ನಮಗೆ ಕಿವಿಗೊಡುವವರನ್ನು ಒಡಂಬಡಿಸುವುದು ಎಂದರೆ ಅರ್ಥವೇನು?
14 ಶುಶ್ರೂಷೆಯಲ್ಲಿ ಬೈಬಲನ್ನು ಪರಿಣಾಮಕಾರಿಯಾಗಿ ಬಳಸುವುದೆಂದರೆ ಕೇವಲ ವಚನಗಳನ್ನು ಉಲ್ಲೇಖಿಸಿ ಹೇಳುವುದಲ್ಲ. ಪೌಲನು ‘ಒಡಂಬಡಿಸುವ’ ರೀತಿಯಲ್ಲಿ ಮಾತಾಡಿದನು. ನಾವೂ ಹಾಗೇ ಮಾಡಬೇಕು. (ಅ. ಕಾರ್ಯಗಳು 19:8, 9; 28:23 ಓದಿ.) “ಒಡಂಬಡಿಸು” ಎಂದರೆ “ಮನವೊಲಿಸಿ ಮಾತನಾಡುವುದು” ಎಂದರ್ಥ. ಒಡಂಬಡಿಸಲ್ಪಟ್ಟವನು ‘ಎಷ್ಟು ಮನಗಾಣಿಸಲ್ಪಡುತ್ತಾನೆ ಎಂದರೆ ಅವನು ಕೇಳಿದ ವಿಷಯದಲ್ಲಿ ಭರವಸೆಯಿಡುತ್ತಾನೆ.’ ಬೈಬಲಿನ ಬೋಧನೆಯೊಂದನ್ನು ಸ್ವೀಕರಿಸುವಂತೆ ಒಬ್ಬ ವ್ಯಕ್ತಿಯನ್ನು ನಾವು ಒಡಂಬಡಿಸುವಾಗ ಆ ಬೋಧನೆಯಲ್ಲಿ ತನ್ನ ಭರವಸೆಯಿಡುವಂತೆ ನಾವು ಅವನ ಮನವೊಲಿಸುತ್ತೇವೆ. ಇದನ್ನು ಪೂರೈಸಲು ನಾವು ಹೇಳುವ ವಿಷಯದ ಸತ್ಯತೆಯನ್ನು ಅವನಿಗೆ ಮನಗಾಣಿಸುವ ಅಗತ್ಯವಿದೆ. ಈ ಕೆಳಗಿನ ವಿಧಗಳಲ್ಲಿ ನಾವದನ್ನು ಮಾಡಬಲ್ಲೆವು.
15. ಬೈಬಲಿಗೆ ಗೌರವ ಹುಟ್ಟಿಸುವ ರೀತಿಯಲ್ಲಿ ಅದರ ಕಡೆಗೆ ನೀವು ಹೇಗೆ ಗಮನ ಸೆಳೆಯಬಲ್ಲಿರಿ?
15ದೇವರ ವಾಕ್ಯಕ್ಕೆ ಗೌರವ ಹುಟ್ಟಿಸುವ ರೀತಿಯಲ್ಲಿ ಅದರ ಕಡೆಗೆ ಗಮನ ಸೆಳೆಯಿರಿ. ವಚನವೊಂದನ್ನು ತೋರಿಸುವಾಗ ಆ ವಿಷಯದಲ್ಲಿ ದೇವರ ನೋಟವನ್ನು ತಿಳಿಯುವ ಮಹತ್ವದ ಕಡೆಗೆ ಗಮನ ಕೇಂದ್ರೀಕರಿಸಿರಿ. ಮನೆಯವನಿಗೆ ಒಂದು ಪ್ರಶ್ನೆಯನ್ನು ಹಾಕಿ ಅವನ ಪ್ರತಿಕ್ರಿಯೆಯನ್ನು ತಿಳಿದ ಮೇಲೆ ನೀವು ಹೀಗೆ ಹೇಳಬಹುದು: ‘ಈ ವಿಷಯದಲ್ಲಿ ದೇವರ ನೋಟವೇನು ಎಂದು ನಾವು ತಿಳಿಯೋಣ.’ ಅಥವಾ ‘ಈ ಸನ್ನಿವೇಶದ ಕುರಿತು ದೇವರು ಏನು ಹೇಳುತ್ತಾನೆ’ ಎಂದೂ ನೀವು ಕೇಳಬಹುದು. ಈ ರೀತಿಯಲ್ಲಿ ವಚನವನ್ನು ಪರಿಚಯಿಸುವುದು ಬೈಬಲು ದೇವರ ಗ್ರಂಥ ಎಂಬುದನ್ನು ಒತ್ತಿಹೇಳುತ್ತದೆ ಮತ್ತು ಕಿವಿಗೊಡುವವನು ಮನಸ್ಸಿನಲ್ಲಿ ಅದಕ್ಕೆ ಗೌರವವನ್ನು ತೋರಿಸಲು ಸಹಾಯವಾಗುತ್ತದೆ. ದೇವರನ್ನು ನಂಬುವ ಆದರೆ ಬೈಬಲಿನ ಬೋಧನೆಯನ್ನು ತಿಳಿದಿಲ್ಲದ ಒಬ್ಬ ವ್ಯಕ್ತಿಗೆ ಸಾಕ್ಷಿಕೊಡುವಾಗ ನಾವು ಹೀಗೆ ಮಾಡುವುದು ವಿಶೇಷವಾಗಿ ಪ್ರಾಮುಖ್ಯ.—ಕೀರ್ತ. 19:7-10.
16. ಶಾಸ್ತ್ರವಚನಗಳನ್ನು ಸರಿಯಾಗಿ ವಿವರಿಸಲು ನಿಮಗೆ ಯಾವುದು ಸಹಾಯಕಾರಿ?
16ಶಾಸ್ತ್ರವಚನಗಳನ್ನು ಬರೇ ಓದಬೇಡಿ; ವಿವರಿಸಿಹೇಳಿ. ತಾನು ಕಲಿಸಿದ ವಿಷಯಗಳನ್ನು ‘ವಿವರಿಸುತ್ತಾ ಆಧಾರಗಳಿಂದ ರುಜುಪಡಿಸುವುದು’ ಪೌಲನ ವಾಡಿಕೆಯಾಗಿತ್ತು. (ಅ. ಕಾ. 17:3) ಒಂದು ಶಾಸ್ತ್ರವಚನದಲ್ಲಿ ಹೆಚ್ಚಾಗಿ ಒಂದಕ್ಕಿಂತ ಹೆಚ್ಚು ಅಂಶಗಳು ಅಡಕವಾಗಿರುತ್ತವೆ. ಆ ವಚನದಲ್ಲಿ ನಾವು ಚರ್ಚಿಸುತ್ತಿರುವ ವಿಷಯಕ್ಕೆ ಅನ್ವಯಿಸುವಂಥ ಮುಖ್ಯ ಶಬ್ದಗಳನ್ನು ಒತ್ತಿಹೇಳುವ ಅಗತ್ಯವಿರಬಹುದು. ವಿಚಾರಪ್ರೇರಕ ಶಬ್ದಗಳನ್ನು ಪುನರುಚ್ಚರಿಸುವ ಮೂಲಕ ಅಥವಾ ಮನೆಯವನಿಗೆ ಅದು ತಿಳಿಯುವಂಥ ರೀತಿಯಲ್ಲಿ ಪ್ರಶ್ನೆಗಳನ್ನು ಹಾಕುವ ಮೂಲಕ ನೀವಿದನ್ನು ಮಾಡಬಹುದು. ಆಮೇಲೆ ವಚನದ ಆ ಭಾಗದ ಅರ್ಥವನ್ನು ನೀವು ವಿವರಿಸಬಹುದು. ತದನಂತರ ಆ ವಚನವು ಮನೆಯವನಿಗೆ ವೈಯಕ್ತಿಕವಾಗಿ ಹೇಗೆ ಅನ್ವಯಿಸುತ್ತದೆ ಎಂಬುದನ್ನು ತಿಳಿಯಲು ಸಹಾಯಮಾಡಿ.
17. ಮನಗಾಣಿಸುವ ರೀತಿಯಲ್ಲಿ ಶಾಸ್ತ್ರವಚನಗಳಿಂದ ನೀವು ಹೇಗೆ ತರ್ಕಿಸಬಲ್ಲಿರಿ?
17ಮನಗಾಣಿಸುವ ರೀತಿಯಲ್ಲಿ ಶಾಸ್ತ್ರಗ್ರಂಥದಿಂದ ತರ್ಕಿಸಿ. ಹೃದಯಪೂರ್ವಕ ಬಿನ್ನಹ ಮತ್ತು ಸೂಕ್ತ ವಾದಸರಣಿಯನ್ನು ಉಪಯೋಗಿಸುತ್ತಾ ಪೌಲನು ಮನಗಾಣಿಸುವ ರೀತಿಯಲ್ಲಿ ‘ಇತರರೊಂದಿಗೆ ಶಾಸ್ತ್ರಗ್ರಂಥದಿಂದ ತರ್ಕಿಸಿದನು.’ (ಅ. ಕಾ. 17:2, 4) ಅವನಂತೆಯೇ ನಿಮಗೆ ಕಿವಿಗೊಡುವ ವ್ಯಕ್ತಿಯ ಹೃದಯವನ್ನು ತಲಪಲು ಪ್ರಯತ್ನಿಸಿ. ವ್ಯಕ್ತಿಯಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ದಯಾಪರ ಪ್ರಶ್ನೆಗಳ ಮೂಲಕ ಅವನ ಹೃದಯದಲ್ಲಿರುವುದನ್ನು ಹೊರತನ್ನಿ. (ಜ್ಞಾನೋ. 20:5) ಮೊಂಡತನದಿಂದ ಮಾತಾಡಬೇಡಿ. ವಾದಗಳನ್ನು ಸ್ಪಷ್ಟವಾಗಿಯೂ ತರ್ಕಬದ್ಧವಾಗಿಯೂ ತಿಳಿಯಪಡಿಸಿ. ತೃಪ್ತಿಕರವಾದ ಪುರಾವೆಗಳ ಆಧಾರವು ಅದಕ್ಕಿರಬೇಕು. ನೀವು ಹೇಳುವ ಮಾತುಗಳು ದೇವರ ವಾಕ್ಯದಲ್ಲಿ ದೃಢವಾಗಿ ಆಧರಿಸಿರಬೇಕು. ಎರಡು ಮೂರು ವಚನಗಳನ್ನು ಒಂದರ ಮೇಲೊಂದು ತ್ವರೆಯಾಗಿ ಓದುವುದಕ್ಕಿಂತ ಒಂದೇ ವಚನವನ್ನು ಚೆನ್ನಾಗಿ ಉಪಯೋಗಿಸಿ ವಿಷಯವನ್ನು ವಿವರಿಸುವುದು ಮತ್ತು ಉದಾಹರಿಸುವುದು ಒಳ್ಳೇದು. ದೃಢೀಕರಿಸುವ ಪುರಾವೆಯನ್ನು ಉಪಯೋಗಿಸುವುದು ಕೂಡ ‘ನಿಮ್ಮ ತುಟಿಗಳ [ಒಡಂಬಡಿಸುವ] ಶಕ್ತಿಯನ್ನು ಹೆಚ್ಚಿಸಬಲ್ಲದು.’ (ಜ್ಞಾನೋ. 16:23) ಕೆಲವೊಮ್ಮೆ ಸಂಶೋಧನೆ ಮಾಡಿ ಅಧಿಕ ಮಾಹಿತಿಯನ್ನು ಒದಗಿಸುವುದು ಅವಶ್ಯವಾಗಿದ್ದೀತು. ಈ ಮೊದಲು ತಿಳಿಸಿದ 93 ವಯಸ್ಸಿನ ಮಹಿಳೆಗೆ ಅಮರ ಆತ್ಮದ ಬೋಧನೆಯು ಏಕೆ ಅಷ್ಟು ಪ್ರಚಲಿತ ಎಂಬುದನ್ನು ತಿಳಿಯುವ ಅಗತ್ಯವಿತ್ತು. ಆ ಬೋಧನೆಯು ಎಲ್ಲಿಂದ ಬಂತು ಮತ್ತು ಅದು ಹೇಗೆ ಲೋಕದ ಹೆಚ್ಚಿನ ಧರ್ಮಗಳನ್ನು ಪ್ರವೇಶಿಸಿತು ಎಂಬ ತಿಳಿವಳಿಕೆಯು ಈ ವಿಷಯದ ಕುರಿತ ಬೈಬಲಿನ ಬೋಧನೆಯನ್ನು ಸ್ವೀಕರಿಸುವಂತೆ ಆಕೆಯನ್ನು ಒಡಂಬಡಿಸಲು ಅವಶ್ಯವಿತ್ತು. *
ಕೌಶಲದಿಂದ ಬಳಸುವುದನ್ನು ಮುಂದುವರಿಸಿ
18, 19. “ಪವಿತ್ರಾತ್ಮದ ಕತ್ತಿಯನ್ನು” ಕೌಶಲದಿಂದ ಬಳಸುವುದನ್ನು ನಾವೇಕೆ ಮುಂದುವರಿಸಬೇಕು?
18 “ಈ ಲೋಕದ ದೃಶ್ಯವು ಮಾರ್ಪಡುತ್ತಾ ಇದೆ” ಎನ್ನುತ್ತದೆ ಬೈಬಲ್. ದುಷ್ಟರು ಕೆಟ್ಟದ್ದರಿಂದ ತೀರ ಕೆಟ್ಟದ್ದಕ್ಕೆ ಹೋಗುತ್ತಿದ್ದಾರೆ. (1 ಕೊರಿಂ. 7:31; 2 ತಿಮೊ. 3:13) ಆದ್ದರಿಂದ ನಾವು “ಪವಿತ್ರಾತ್ಮದ ಕತ್ತಿಯನ್ನು ಅಂದರೆ ದೇವರ ವಾಕ್ಯವನ್ನು” ಉಪಯೋಗಿಸುವ ಮೂಲಕ “ಬಲವಾಗಿ ಬೇರೂರಿರುವ ವಿಷಯಗಳನ್ನು” ಕೆಡವಿಹಾಕುವುದನ್ನು ಮುಂದುವರಿಸುವುದು ಪ್ರಾಮುಖ್ಯ.
19 ದೇವರ ವಾಕ್ಯವಾದ ಬೈಬಲ್ ನಮ್ಮಲ್ಲಿರುವುದಕ್ಕಾಗಿ ನಾವೆಷ್ಟು ಸಂತೋಷಿತರು! ಅದರ ಪ್ರಭಾವಶಾಲಿ ಸಂದೇಶವನ್ನು ಉಪಯೋಗಿಸುತ್ತಾ ನಾವು ಸುಳ್ಳು ಬೋಧನೆಗಳನ್ನು ಕೆಡವಿಹಾಕಬಲ್ಲೆವು ಮತ್ತು ಪ್ರಾಮಾಣಿಕ ಹೃದಯದ ಜನರನ್ನು ತಲಪಬಲ್ಲೆವು. ಬಲವಾಗಿ ಬೇರೂರಿರುವ ಯಾವುದೇ ವಿಷಯವು ಅದರ ಸಂದೇಶಕ್ಕಿಂತ ಹೆಚ್ಚು ಬಲವಾಗಿರುವುದಿಲ್ಲ. ಆದ್ದರಿಂದ ರಾಜ್ಯ ಘೋಷಣೆಯ ನಮ್ಮ ದೇವದತ್ತ ಕೆಲಸದಲ್ಲಿ “ಪವಿತ್ರಾತ್ಮದ ಕತ್ತಿಯನ್ನು” ಕೌಶಲದಿಂದ ಬಳಸಲು ಶ್ರದ್ಧೆಯಿಂದ ಪ್ರಯತ್ನಿಸೋಣ.
[ಪಾದಟಿಪ್ಪಣಿಗಳು]
^ ಪ್ಯಾರ. 10 ಬೈಬಲ್ ಪುಸ್ತಕಗಳ ಕುರಿತ ಹಿನ್ನೆಲೆಯ ಮಾಹಿತಿಯನ್ನು ಪಡೆದುಕೊಳ್ಳಲು ಅತ್ಯುತ್ತಮ ಸಹಾಯಕ “ಶಾಸ್ತ್ರವೆಲ್ಲವೂ” ವಿಶ್ವಾಸಾರ್ಹ ಮತ್ತು ಪ್ರಯೋಜನಕರ, ಶಾಸ್ತ್ರಗಳ ಒಳನೋಟ ಎಂಬ ಪ್ರಕಾಶನಗಳು ಮತ್ತು ಕಾವಲಿನಬುರುಜುವಿನಲ್ಲಿ ಬರುವ “ಯೆಹೋವನ ವಾಕ್ಯವು ಸಜೀವವಾದದ್ದು” ಎಂಬ ಲೇಖನಗಳು.
^ ಪ್ಯಾರ. 17 ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್) ಎಂಬ ಬ್ರೋಷರಿನ ಪುಟ 5-16 ನೋಡಿ.
ನೀವೇನು ಕಲಿತಿರಿ?
• ದೇವರ ವಾಕ್ಯವು ಎಷ್ಟು ಪ್ರಭಾವಶಾಲಿಯಾಗಿದೆ?
• ನಾವು ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದು’ ಹೇಗೆ?
• ‘ಬಲವಾಗಿ ಬೇರೂರಿರುವ ವಿಷಯಗಳಿಗೆ’ ಬೈಬಲಿನ ಸಂದೇಶವು ಏನು ಮಾಡಬಲ್ಲದು?
• ಶುಶ್ರೂಷೆಯಲ್ಲಿ ನಿಮ್ಮ ಒಡಂಬಡಿಸುವ ಶಕ್ತಿಯನ್ನು ಹೇಗೆ ಉತ್ತಮಗೊಳಿಸಬಲ್ಲಿರಿ?
[ಅಧ್ಯಯನ ಪ್ರಶ್ನೆಗಳು]
[ಪುಟ 12ರಲ್ಲಿರುವ ಚೌಕ/ಚಿತ್ರ]
ದೇವರ ವಾಕ್ಯವನ್ನು ಒಡಂಬಡಿಸುವ ರೀತಿಯಲ್ಲಿ ಬಳಸುವ ವಿಧ
▪ ಬೈಬಲಿನ ಮೇಲೆ ಗೌರವ ಹುಟ್ಟುವಂತೆ ಮಾಡಿ
▪ ಶಾಸ್ತ್ರವಚನಗಳನ್ನು ವಿವರಿಸಿಹೇಳಿ
▪ ಹೃದಯವನ್ನು ತಲಪುವಂತೆ ಮನಗಾಣಿಸುವ ರೀತಿಯಲ್ಲಿ ತರ್ಕಿಸಿ
[ಪುಟ 11ರಲ್ಲಿರುವ ಚಿತ್ರ]
“ಪವಿತ್ರಾತ್ಮದ ಕತ್ತಿಯನ್ನು” ಪರಿಣಾಮಕಾರಿಯಾಗಿ ಬಳಸಲು ನೀವು ಕಲಿಯಬೇಕು