ಬಲ್ಗೇರಿಯದಲ್ಲಿ ಯಶಸ್ವಿಕರ ವಿಶೇಷ ಸೇವೆ
ಬಲ್ಗೇರಿಯದಲ್ಲಿ ಯಶಸ್ವಿಕರ ವಿಶೇಷ ಸೇವೆ
“ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ.”—ಮತ್ತಾ. 9:37, 38.
ಯೇಸುವಿನ ಈ ಮಾತುಗಳು ಯೂರೋಪಿನ ಆಗ್ನೇಯದಲ್ಲಿರುವ ಸುಂದರ ಬಾಲ್ಕನ್ ದೇಶವಾದ ಬಲ್ಗೇರಿಯದ ಸನ್ನಿವೇಶವನ್ನು ಎಷ್ಟು ಚೆನ್ನಾಗಿ ಒಪ್ಪುತ್ತವೆ! ಎಪ್ಪತ್ತು ಲಕ್ಷಕ್ಕಿಂತಲೂ ಹೆಚ್ಚು ಜನನಿವಾಸಿಗಳಿರುವ ಆ ದೇಶದಲ್ಲಿ ಸುವಾರ್ತೆಯನ್ನು ಸಾರಲು ಹೆಚ್ಚು ಕೆಲಸಗಾರರು ನಿಜವಾಗಿ ಬೇಕಾಗಿದ್ದಾರೆ. ಬಲ್ಗೇರಿಯದಲ್ಲಿರುವ ಪ್ರಚಾರಕರ ಸಂಖ್ಯೆ ಸುಮಾರು 1,700. ಅವರಿಂದ ಆ ಇಡೀ ಕ್ಷೇತ್ರವನ್ನು ಸುವಾರ್ತೆಯಿಂದ ಆವರಿಸಲು ಸಾಧ್ಯವಾಗಿಲ್ಲ. ಆದುದರಿಂದ 2009ರಲ್ಲಿ ಒಂದು ವಿಶೇಷ ಸೇವಾಕಾರ್ಯವನ್ನು ಏರ್ಪಡಿಸಲಾಯಿತು. ಹಲವಾರು ಯೂರೋಪಿಯನ್ ದೇಶಗಳಲ್ಲಿರುವ ಬಲ್ಗೇರಿಯನ್ ಭಾಷೆಯನ್ನಾಡುವ ಸಾಕ್ಷಿಗಳನ್ನು ಅಲ್ಲಿಗೆ ಆಮಂತ್ರಿಸಲು ಆಡಳಿತ ಮಂಡಲಿಯು ಒಪ್ಪಿಗೆ ನೀಡಿತು. ಬೇಸಗೆ ಕಾಲದ 7 ವಾರಗಳ ಅವಧಿಯಲ್ಲಿ ಆ ವಿಶೇಷ ಸೇವೆಯನ್ನು ನಡಿಸಲಾಯಿತು. ಮತ್ತು ಆಗಸ್ಟ್ 14-16, 2009ರಲ್ಲಿ ಸೊಫೀಯ ಶಹರದಲ್ಲಿ ನಡೆಯಲಿದ್ದ “ಸದಾ ಎಚ್ಚರವಾಗಿರಿ!” ಜಿಲ್ಲಾ ಅಧಿವೇಶನಕ್ಕೆ ಸರಿಯಾಗಿ ಆ ಚಟುವಟಿಕೆ ಕೊನೆಗೊಳ್ಳಲಿತ್ತು.
ಪ್ರಚಂಡ ಪ್ರತಿಕ್ರಿಯೆ
ಫ್ರಾನ್ಸ್, ಜರ್ಮನಿ, ಗ್ರೀಸ್, ಇಟಲಿ, ಪೋಲೆಂಡ್ ಮತ್ತು ಸ್ಪೇನ್‌ನಿಂದ ಎಷ್ಟುಮಂದಿ ಇದಕ್ಕೆ ಪ್ರತಿಕ್ರಿಯೆ ತೋರಿಸಿ ಬಂದಾರು ಎಂದು ಸೊಫೀಯ ಶಹರದ ಬ್ರಾಂಚ್ ಆಫೀಸಿನ ಸಹೋದರರು ಯೋಚಿಸುತ್ತಿದ್ದರು. ಯಾಕಂದರೆ ಅಲ್ಲಿಗೆ ಬರುವವರು ತಮ್ಮ ಸ್ವಂತ ಖರ್ಚಿನಲ್ಲಿ ಬರಬೇಕಿತ್ತು ಮಾತ್ರವಲ್ಲ ತಮ್ಮ ರಜಾದಿನಗಳನ್ನು ಸಾರುವ ಕೆಲಸದಲ್ಲಿ ಕಳೆಯಬೇಕಿತ್ತು. ಆದರೆ ಬರಲು ಅನುಮತಿ ಕೇಳುತ್ತಿದ್ದ ಜನರ ಸಂಖ್ಯೆಯು ವಾರ ವಾರವೂ ಹೆಚ್ಚಾಗುತ್ತಾ 292ಕ್ಕೆ ಏರಿದ್ದನ್ನು ಕಂಡು ಅವರೆಷ್ಟು ಪುಳಕಿತಗೊಂಡರು! ಅಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆ ಸಿಕ್ಕಲಾಗಿ ಬಲ್ಗೇರಿಯದ ಕಾಸಾನ್ಲಕ್, ಸಾಂಡಾನ್‌ಸ್ಕೀ, ಸಿಲಿಸ್ಟ್ರ ಎಂಬ ಮೂರು ಬೇರೆ ಬೇರೆ ಪಟ್ಟಣಗಳಲ್ಲಿ ಈ ಸ್ವಯಂಸೇವಕರನ್ನು ನೇಮಿಸಲು ಸಾಧ್ಯವಾಗಲಿತ್ತು. ಈ ಚಟುವಟಿಕೆಗೆ ಬೆಂಬಲ ಕೊಡಲು ಸ್ಥಳೀಕ ಪಯನೀಯರರನ್ನು ಮತ್ತು ಪ್ರಚಾರಕರನ್ನು ಸಹ ಬಲ್ಗೇರಿಯದ ಸರ್ಕಿಟ್ ಮೇಲ್ವಿಚಾರಕರು ಆಮಂತ್ರಿಸಿದರು. ಹೀಗೆ ಸುವಾರ್ತೆಯು ಬಹಳ ವಿರಳವಾಗಿ ತಲಪಿದ್ದ ಆ ಕ್ಷೇತ್ರಗಳಲ್ಲಿ ಕೊನೆಗೆ 382 ಸ್ವಯಂಸೇವಕರು ಹೊಸ ಹುರುಪಿನಿಂದ ಸಾರಲು ಶಕ್ತರಾದರು.
ವಸತಿ ಸೌಕರ್ಯ ಏರ್ಪಡಿಸಲು ಸಮೀಪದ ಸಭೆಗಳಿಂದ ಸಹೋದರರನ್ನು ಮುಂಚಿತವಾಗಿ ಕಳುಹಿಸಲಾಗಿತ್ತು. ಅವರು ವಾಸಕ್ಕಾಗಿ ಕೊಠಡಿಗಳನ್ನು ಬಾಡಿಗೆಗೆ ತಕ್ಕೊಂಡರು; ಕಡಿಮೆ ಕ್ರಯದ ಹೋಟೆಲುಗಳನ್ನು ಗೊತ್ತುಮಾಡಿದರು. ಆಗಮಿಸುತ್ತಿರುವ ಸ್ವಯಂಸೇವಕರಿಗೆ ಉಳುಕೊಳ್ಳಲು ವ್ಯವಸ್ಥಿತ ಏರ್ಪಾಡು ಮಾಡಲಿಕ್ಕಾಗಿ ಹಾಗೂ ಅವರ ನಿತ್ಯದ ಅಗತ್ಯತೆಗಳನ್ನು ಪೂರೈಸಲಿಕ್ಕಾಗಿ ಈ ಸ್ಥಳೀಕ ಸಹೋದರರು ನಿರಾಯಾಸದಿಂದ ದುಡಿದರು. ಈ ಮೂರೂ ಪಟ್ಟಣಗಳಲ್ಲಿ ಕೂಟಕ್ಕಾಗಿ ಸ್ಥಳಗಳನ್ನು ಬಾಡಿಗೆಗೆ ಹಿಡಿಯಲಾಗಿತ್ತು. ಸಂದರ್ಶಕ ಸಹೋದರರಿಂದ ಸಭಾ ಕೂಟಗಳು ನಿರ್ವಹಿಸಲ್ಪಡುವಂತೆ ಏರ್ಪಾಡುಗಳನ್ನು ಮಾಡಲಾಗಿತ್ತು. ಒಬ್ಬನೇ ಒಬ್ಬ ಸಾಕ್ಷಿಯೂ ಇರದಿದ್ದ ಆ ಸ್ಥಳಗಳಲ್ಲಿ ಯೆಹೋವನನ್ನು ಸ್ತುತಿಸಲು 50 ಪ್ರಚಾರಕರು ಕೂಡಿಬರುತ್ತಿರುವುದನ್ನು ನೋಡುವುದು ನಿಜವಾಗಿ ರೋಮಾಂಚಕವಾಗಿತ್ತು!
ಈ ಸೇವಾಕಾರ್ಯಕ್ಕಾಗಿ ಬೇರೆ ಬೇರೆ ದೇಶಗಳಿಂದ ಬಂದಿದ್ದ ಸ್ವಯಂಸೇವಕರ ಹುರುಪನ್ನಾದರೂ ಹೇಳತೀರದು. ಬೇಸಗೆಯಲ್ಲಿ ಬಲ್ಗೇರಿಯದ ತಾಪಮಾನವು 40 ಡಿಗ್ರಿ ಸೆಂಟಿಗ್ರೇಡಿಗಿಂತಲೂ ಹೆಚ್ಚು ಏರಬಲ್ಲದು. ಆದರೆ ಅದು ಯಾವುದೂ ಈ ಹುರುಪಿನ ಸಹೋದರ ಸಹೋದರಿಯರನ್ನು ತಡೆಯುವಂತಿರಲಿಲ್ಲ. ಡಾನ್ಯೂಬ್ ನದೀ ತೀರದ ಸಿಲಿಸ್ಟ್ರ ಪಟ್ಟಣದಲ್ಲಿ 50,000ಕ್ಕಿಂತಲೂ ಹೆಚ್ಚು ಜನಸಂಖ್ಯೆಯಿತ್ತು. ಮೊದಲಿನ ಮೂರು ವಾರಗಳೊಳಗೇ ಅವರಿಗೆ ಕೂಲಂಕಷ ಸಾಕ್ಷಿಯನ್ನು ನೀಡಲಾಯಿತು. ಆದುದರಿಂದ ಸಹೋದರರು ಸಮೀಪದ ಹಳ್ಳಿಗಳಿಗೂ ಸೇವೆಯನ್ನು ವಿಸ್ತರಿಸಿ ಸಿಲಿಸ್ಟ್ರದ ಪಶ್ಚಿಮಕ್ಕೆ 55 ಕಿ.ಮೀ. ದೂರದ ಟುಟ್ರಕಾನ್ ಹಳ್ಳಿಗೂ ತಲಪಿದರು. ಅವರು ಸಾಮಾನ್ಯವಾಗಿ ತಮ್ಮ ಶುಶ್ರೂಷೆಯನ್ನು ಬೆಳಿಗ್ಗೆ 9:30ರೊಳಗೆ ಆರಂಭಿಸುತ್ತಿದ್ದರು. ಮಧ್ಯಾಹ್ನದ ಊಟದ ನಂತರ ಅನೇಕ ಸಲ ಸಂಜೆ
7 ಗಂಟೆಯ ತನಕ ಅಥವಾ ಅದರ ನಂತರವೂ ಅವರು ಸೇವೆ ಮುಂದುವರಿಸುತ್ತಿದ್ದರು. ತದ್ರೀತಿ, ಈ ಸ್ವಯಂಸೇವಕರ ಪ್ರಚಂಡ ಹುರುಪಿನಿಂದಾಗಿ ಕಾಸಾನ್ಲಕ್ ಮತ್ತು ಸಾಂಡಾನ್‌ಸ್ಕೀಯ ಸೇವಾಕಾರ್ಯ ನೆರೆಹೊರೆಯ ಹಳ್ಳಿಗಳಿಗೂ ಪಟ್ಟಣಗಳಿಗೂ ವಿಸ್ತರಿಸಲ್ಪಟ್ಟಿತು.ಏನನ್ನು ಸಾಧಿಸಲಾಯಿತು?
ಆ ಏಳು ವಾರಗಳಲ್ಲಿ ಒಂದು ಮಹತ್ತಾದ ಸಾಕ್ಷಿಯನ್ನು ನೀಡಲಾಯಿತು. ಅಪೊಸ್ತಲರ ದಿನಗಳಲ್ಲಿ ಹೇಳಲಾಗಿದ್ದಂತೆ ಈ ಪಟ್ಟಣಗಳ ಜನರು ಸಹ ‘ನೀವು ನಮ್ಮ ಪಟ್ಟಣವನ್ನು ಬೋಧನೆಯಿಂದ ತುಂಬಿಸಿದ್ದೀರಿ’ ಎಂದು ಹೇಳಶಕ್ತರಾಗಿದ್ದರು. (ಅ. ಕಾ. 5:28) ಸೇವೆಯಲ್ಲಿ ಭಾಗವಹಿಸಿದ ಸಾಕ್ಷಿಗಳು ಸುಮಾರು 50,000 ಪತ್ರಿಕೆಗಳನ್ನು ನೀಡಿದರು ಮತ್ತು 482 ಬೈಬಲ್ ಅಧ್ಯಯನಗಳನ್ನು ಆರಂಭಿಸಿದರು. ಸಂತೋಷಕರವಾಗಿ 2009, ಸೆಪ್ಟೆಂಬರ್ 1ರಂದು ಸಿಲಿಸ್ಟ್ರದಲ್ಲಿ ಒಂದು ಸಭೆಯು ಪ್ರಾರಂಭಗೊಂಡಿತು. ಕಾಸಾನ್ಲಕ್ ಮತ್ತು ಸಾಂಡಾನ್‌ಸ್ಕೀಯಲ್ಲೂ ಚಿಕ್ಕ ಚಿಕ್ಕ ಗುಂಪುಗಳು ಆರಂಭಿಸಿವೆ. ಈ ಸೇವಾಕಾರ್ಯದ ಸಮಯದಲ್ಲಿ ಸುವಾರ್ತೆಯನ್ನು ಪ್ರಪ್ರಥಮವಾಗಿ ಕೇಳಿದ ಜನರು ಒಳ್ಳೆಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಿರುವುದನ್ನು ನೋಡುವುದು ನಿಜವಾಗಿ ಹೃದಯೋಲ್ಲಾಸಕರ!
ವಿಶೇಷ ಸೇವಾಕಾರ್ಯದ ಮೊದಲ ವಾರದಲ್ಲಿ, ಸ್ಪೆಯಿನ್ ದೇಶದವಳಾದ ಬಲ್ಗೇರಿಯನ್ ಭಾಷೆಯನ್ನಾಡುವ ವಿಶೇಷ ಪಯನೀಯರ್ ಸಹೋದರಿಯು ಕಾರೈನಾ ಎಂಬ ಸ್ತ್ರೀಗೆ ಸಾರಿದಳು. ಸಿಲಿಸ್ಟ್ರದ ಈ ಸ್ತ್ರೀ ಬೀದಿಬದಿಯಲ್ಲಿ ವಾರ್ತಾಪತ್ರಗಳನ್ನು ಮಾರುತ್ತಿದ್ದಳು. ಆಸಕ್ತಿ ತೋರಿಸಿದ ಕಾರೈನಾ ಕೂಟಕ್ಕೆ ಹಾಜರಾದಳು. ಬೈಬಲ್ ಅಧ್ಯಯನ ಮಾಡಲು ಒಡನೇ ಒಪ್ಪಿಕೊಂಡಳು. ಅವಳ ಗಂಡ ನಾಸ್ತಿಕ. ಆದುದರಿಂದ ಬೈಬಲ್ ಅಧ್ಯಯನವನ್ನು ಒಂದು ಪಾರ್ಕಿನಲ್ಲಿ ನಡಿಸುವಂತೆ ಆಕೆ ಕೇಳಿಕೊಂಡಳು. ಅವಳ ಇಬ್ಬರು ಹೆಣ್ಣುಮಕ್ಕಳೂ ಅಧ್ಯಯನದಲ್ಲಿ ಕೂಡಿದ್ದರು. ಹಿರಿಯ ಮಗಳಾದ ಡಾನ್ಯೇಲಾ ಬೈಬಲ್ ಸತ್ಯಕ್ಕೆ ವಿಶೇಷ ಗಣ್ಯತೆ ತೋರಿಸಿದಳು. ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ಡಾನ್ಯೇಲಾ ಒಂದೇ ವಾರದೊಳಗೆ ಓದಿಮುಗಿಸಿ ವಿಗ್ರಹಾರಾಧನೆಯ ಕುರಿತು ಬೈಬಲ್ ಹೇಳುವುದನ್ನು ಕೂಡಲೆ ಅನ್ವಯಿಸಿಕೊಂಡಳು. ನಂತರ ತನ್ನ ಗೆಳತಿಯರಿಗೆ ಸತ್ಯದ ಕುರಿತು ತಿಳಿಸತೊಡಗಿದಳು. ಸಭಾ ಕೂಟಕ್ಕೆ ಪ್ರಥಮವಾಗಿ ಹಾಜರಾದ ಕೇವಲ ಮೂರು ವಾರಗಳ ನಂತರ, ಅಧ್ಯಯನ ನಡಿಸುತ್ತಿದ್ದ ಸಹೋದರಿಗೆ “ನಾನೂ ನಿಮ್ಮಲ್ಲಿ ಒಬ್ಬಳಂತೆ ನನಗನಿಸುತ್ತದೆ. ನಿಮ್ಮ ಹಾಗೆ ನಾನೂ ಸಾರಬೇಕಾದರೆ ಏನು ಮಾಡಬೇಕು?” ಎಂದು ಕೇಳಿದಳು. ಡಾನ್ಯೇಲಾ ತನ್ನ ತಾಯಿ ಮತ್ತು ತಂಗಿಯೊಂದಿಗೆ ಒಳ್ಳೇ ಪ್ರಗತಿ ಮಾಡುತ್ತಾ ಇದ್ದಾಳೆ.
ಇಟೆಲಿಯಿಂದ ಈ ವಿಶೇಷ ಸೇವಾಕಾರ್ಯಕ್ಕೆ ಬಂದಿದ್ದ ಆರ್ಲಿನ್ ಎಂಬ ಬಲ್ಗೇರಿಯನ್ ಸಹೋದರನು ಕಾಸಾನ್ಲಕ್‌ನಲ್ಲಿ ಕ್ಷೇತ್ರಸೇವೆಯ ನಂತರ ತನ್ನ ವಸತಿಗೃಹಕ್ಕೆ ಹಿಂತಿರುಗುತ್ತಿದ್ದನು. ದಾರಿಯಲ್ಲಿ, ಪಾರ್ಕಿನ ಬೆಂಚಿನ ಮೇಲೆ ಕೂತಿದ್ದ ಇಬ್ಬರು ಯುವಕರಿಗೆ ಆರ್ಲಿನ್ ಸಾಕ್ಷಿಕೊಟ್ಟನು. ಅವರಿಗೆ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿದನು ಮತ್ತು ಮರುದಿನ ಪುನರ್ಭೇಟಿಗಾಗಿ ಏರ್ಪಡಿಸಿದನು. ಆ ಭೇಟಿಯಲ್ಲಿ ಸ್ವೆಟೋಮಿರ್ ಎಂಬವನ ಸಂಗಡ ಆರ್ಲಿನ್ ಬೈಬಲ್ ಅಧ್ಯಯನ ಆರಂಭಿಸಿ ಮರುದಿನದಿಂದಲೇ ಅದನ್ನು ಮುಂದುವರಿಸಿದನು. ಒಂಬತ್ತು ದಿನಗಳಲ್ಲಿ ಸ್ವೆಟೋಮಿರ್‌ನೊಂದಿಗೆ ಎಂಟು ಸಲ ಅಧ್ಯಯನ ಮಾಡಿದನು. ಸ್ವೆಟೋಮಿರ್ ಹೇಳಿದ್ದು: “ನಿಮ್ಮ ಭೇಟಿಗೆ ಎರಡು ದಿನ ಮುಂಚೆ ನಾನು ದೇವರಿಗೆ ಪ್ರಾರ್ಥಿಸುತ್ತಾ ದೇವರೇ, ನಿನ್ನನ್ನು ತಿಳುಕೊಳ್ಳಲು ಸಹಾಯಮಾಡು. ಸಹಾಯಮಾಡುವಲ್ಲಿ ನನ್ನನ್ನು ನಿನಗೆ ಸಮರ್ಪಿಸಿಕೊಳ್ಳುವೆನೆಂದು ವಚನವಿತ್ತಿದ್ದೆ.” ಆರ್ಲಿನ್ ಇಟೆಲಿಗೆ ಹಿಂತಿರುಗಿದ ನಂತರ ಸ್ಥಳೀಕ ಸಹೋದರರು ಸ್ವೆಟೋಮಿರ್ ಸಂಗಡ ಅಧ್ಯಯನ
ಮುಂದುವರಿಸಿದರು. ಅವನು ಸತ್ಯಕಲಿಯುವುದರಲ್ಲಿ ಉತ್ತಮ ಪ್ರಗತಿ ಮಾಡುತ್ತಿದ್ದಾನೆ.ತ್ಯಾಗ ಮಾಡುವವರಿಗೆ ಹೇರಳ ಆಶೀರ್ವಾದ
ಇನ್ನೊಂದು ದೇಶದಲ್ಲಿ ಸುವಾರ್ತೆ ಸಾರಲು ತಮ್ಮ ಸ್ವಂತ ಖರ್ಚಿನಿಂದ ಪ್ರಯಾಣಮಾಡಿ ತಮ್ಮ ರಜಾದಿನಗಳನ್ನು ಉದಾರವಾಗಿ ಬಳಸಿದ ಆ ಸ್ವಯಂಸೇವಕರಿಗೆ ಹೇಗನಿಸುತ್ತದೆ? ಸ್ಪೆಯಿನ್‌ನಲ್ಲಿ ಹಿರಿಯರಾಗಿರುವ ಒಬ್ಬರು ಹೇಳುವುದು: “ಆ ವಿಶೇಷ ಸೇವಾಕಾರ್ಯವು ಸ್ಪೆಯಿನ್‌ನಲ್ಲಿರುವ ಬಲ್ಗೇರಿಯನ್ ಕ್ಷೇತ್ರದ ಸಹೋದರರನ್ನು ಆಪ್ತಬಂಧಕ್ಕೆ ಎಳೆದಿದೆ. ಅದರಲ್ಲಿ ಭಾಗವಹಿಸಿದ ಸಹೋದರರ ಮೇಲೆ ಅದು ಬಹಳ ಒಳ್ಳೆಯ ಪ್ರಭಾವಬೀರಿತು.” ಇಟೆಲಿಯ ಒಬ್ಬ ದಂಪತಿ ಬರೆದದ್ದು: “ಅದು ನಮ್ಮ ಜೀವನದ ಅತ್ಯುತ್ತಮ ತಿಂಗಳು. ಆ ಸೇವಾಕಾರ್ಯ ನಮ್ಮ ಬದುಕನ್ನೇ ಬದಲಾಯಿಸಿತು! ನಾವೀಗ ಬದಲಾಗಿರುವ ವ್ಯಕ್ತಿಗಳು.” ಈ ದಂಪತಿ ಅಗತ್ಯ ಹೆಚ್ಚಿರುವಲ್ಲಿ ಸೇವೆಮಾಡಲು ಬಲ್ಗೇರಿಯಕ್ಕೆ ಖಾಯಂ ಸ್ಥಳಾಂತರಿಸುವ ಸಾಧ್ಯತೆಯ ಕುರಿತು ಗಂಭೀರವಾಗಿ ಯೋಚಿಸತೊಡಗಿದರು. ಕಾರೀನಾ ಎಂಬವಳು ಸ್ಪೆಯಿನ್‌ನ ರೆಗ್ಯುಲರ್ ಪಯನೀಯರಳಾಗಿದ್ದು ಸಿಲಿಸ್ಟ್ರದ ವಿಶೇಷ ಸೇವಾಕಾರ್ಯವನ್ನು ಬೆಂಬಲಿಸಿದ್ದಳು. ಅವಿವಾಹಿತೆಯಾದ ಅವಳು ಸ್ಪೆಯಿನ್‌ನ ತನ್ನ ಉದ್ಯೋಗವನ್ನು ಬಿಟ್ಟುಕೊಟ್ಟು ಸಿಲಿಸ್ಟ್ರದ ಹೊಸ ಸಭೆಗೆ ಬೆಂಬಲ ಕೊಡಲು ಅಲ್ಲಿಗೆ ಸ್ಥಳಾಂತರ ಮಾಡಿದಳು. ಬಲ್ಗೇರಿಯದಲ್ಲಿ 1 ವರ್ಷ ವಾಸಿಸಲಿಕ್ಕಾಗಿ ಸಾಕಷ್ಟು ಹಣವನ್ನು ಆಕೆ ಕೂಡಿಸಿಟ್ಟಿದ್ದಳು. ತನ್ನ ನಿರ್ಣಯದ ಕುರಿತು ಕಾರೀನಾ ಹೇಳುವುದು: “ಇಲ್ಲಿ ಬಲ್ಗೇರಿಯದಲ್ಲಿ ಸೇವೆಮಾಡಲು ಯೆಹೋವನು ಅನುಮತಿಸಿದ್ದಕ್ಕಾಗಿ ನಾನು ಬಹು ಸಂತೋಷಿತೆ. ತುಂಬ ಸಮಯ ಇಲ್ಲಿ ಉಳಿಯಲು ಸಾಧ್ಯವಾಗಲಿ ಎಂಬುದೇ ನನ್ನ ನಿರೀಕ್ಷೆ. ನನಗೀಗಲೆ 5 ಬೈಬಲ್ ಅಧ್ಯಯನಗಳಿವೆ; ಅದರಲ್ಲಿ ಮೂವರು ಕೂಟಗಳಿಗೆ ಹಾಜರಾಗುತ್ತಿದ್ದಾರೆ.”
ಇಟೆಲಿಯ ಸಹೋದರಿಯೊಬ್ಬಳು ಈ ಸೇವಾಕಾರ್ಯದಲ್ಲಿ ಜೊತೆಗೂಡಲು ಬಯಸಿದ್ದಳು. ಆದರೆ ಆಗಲೇ ಒಂದು ಹೊಸ ಕೆಲಸವನ್ನು ಆರಂಭಿಸಿದ್ದರಿಂದ ಅವಳಿಗೆ ರಜೆ ಸಿಗಲಿಲ್ಲ. ನಿರಾಶಳಾಗದೆ ಒಂದು ತಿಂಗಳ ವೇತನರಹಿತ ರಜೆಯನ್ನು ಕೇಳಿದಳು ಮತ್ತು ತನ್ನ ವಿನಂತಿಗೆ ಒಪ್ಪಿಗೆ ಸಿಗದೇ ಇದ್ದಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡಲು ತಯಾರಿದ್ದಳು. ಆದರೆ ಅವಳ ಮಾಲೀಕನು “ನೀನು ಹೋಗಬಹುದು. ಆದರೆ ಒಂದು ಶರತ್ತು, ಬಲ್ಗೇರಿಯದಿಂದ ಒಂದು ಪೋಸ್ಟ್ ಕಾರ್ಡನ್ನು ನನಗೆ ಕಳುಹಿಸಬೇಕು” ಎಂದಾಗ ಅವಳಿಗೆ ಆಶ್ಚರ್ಯ. ಯೆಹೋವನು ತನ್ನ ಪ್ರಾರ್ಥನೆಗಳನ್ನು ಉತ್ತರಿಸಿದ್ದಾನೆಂಬ ಖಾತ್ರಿ ಆ ಸಹೋದರಿಗಾಯಿತು.
ಬಲ್ಗೇರಿಯದ ವಾರೈನಾ ಪಟ್ಟಣದ ಸ್ಟಾನಿಸ್ಲಾವಾ ಎಂಬ ಯುವ ಸಹೋದರಿಗೆ ಒಳ್ಳೇ ಸಂಬಳದ ಉದ್ಯೋಗವಿತ್ತು. ಅವಳು ಸಿಲಿಸ್ಟ್ರದ ಸೇವಾಕಾರ್ಯದಲ್ಲಿ ಭಾಗವಹಿಸಲಿಕ್ಕಾಗಿ ರಜೆ ಪಡೆದುಕೊಂಡಿದ್ದಳು. ಸುವಾರ್ತೆ ಸಾರಲಿಕ್ಕಾಗಿ ಅಷ್ಟು ದೂರದಿಂದ ತನ್ನ ದೇಶಕ್ಕೆ ಬಂದಿದ್ದ ಅನೇಕ ಪಯನೀಯರರ ಹರ್ಷೋಲ್ಲಾಸವನ್ನು ಕಂಡಾಗ ಆಕೆಗೆ ಕಣ್ಣುಗಳು ತುಂಬಿಬಂದವು. ಐಹಿಕ ಉದ್ಯೋಗವನ್ನು ಬೆನ್ನಟ್ಟುತ್ತಾ ತನ್ನ ಜೀವನದಲ್ಲಿ ತಾನೇನು ಮಾಡುತ್ತಿದ್ದೆನೆಂದು ಅವಳು ಯೋಚಿಸತೊಡಗಿದಳು. ಎರಡು ವಾರಗಳ ನಂತರ ಮನೆಗೆ ಹಿಂತಿರುಗಿದಾಗ ಅವಳು ತನ್ನ ಕೆಲಸವನ್ನು ಬಿಟ್ಟು ರೆಗ್ಯುಲರ್ ಪಯನೀಯರಳಾದಳು. ಯೌವನದಲ್ಲಿ ತನ್ನ ಸೃಷ್ಟಿಕರ್ತನನ್ನು ಸ್ಮರಿಸುತ್ತಿರುವ ಅವಳೀಗ ನಿಜವಾಗಿಯೂ ಸಂತೋಷಿತಳು.—ಪ್ರಸಂ. 12:1.
ಯೆಹೋವನ ಸೇವೆಯಲ್ಲಿ ಕ್ರಿಯಾಸಕ್ತರಾಗಿರುವುದು ಎಷ್ಟು ಆಶೀರ್ವಾದಕರ! ಸುವಾರ್ತೆಯನ್ನು ಸಾರುವ ಮತ್ತು ಬೋಧಿಸುವ ಮಹತ್ವದ ಕೆಲಸಕ್ಕೆ ನಿಮ್ಮ ಸಮಯ ಮತ್ತು ಶಕ್ತಿಯನ್ನು ಕೊಡುವುದಕ್ಕಿಂತ ಹೆಚ್ಚು ಉತ್ತಮ ಕೆಲಸ ಬೇರೊಂದಿಲ್ಲ. ಈ ಜೀವರಕ್ಷಕ ಶುಶ್ರೂಷೆಯಲ್ಲಿ ನಿಮ್ಮ ಪಾಲನ್ನು ವೈಯಕ್ತಿಕವಾಗಿ ಹೆಚ್ಚಿಸಬಲ್ಲ ವಿಧಾನಗಳಿವೆಯೋ? ನಿಮ್ಮ ಸ್ವಂತ ದೇಶದಲ್ಲಿ ಹೆಚ್ಚಿನ ಅಗತ್ಯವಿರುವ ಕ್ಷೇತ್ರಗಳಿರಬಹುದು. ಅಂಥ ಕ್ಷೇತ್ರವೊಂದಕ್ಕೆ ನೀವು ಸ್ಥಳಾಂತರಿಸಸಾಧ್ಯವೋ? ಇಲ್ಲವೆ ಬೈಬಲ್ ಸತ್ಯಕ್ಕಾಗಿ ಹಸಿದು ಬಾಯಾರಿರುವ ಜನರಿಗೆ ನಿಮ್ಮ ದೇಶದಲ್ಲೇ ಸಹಾಯ ಮಾಡಲಿಕ್ಕಾಗಿ ನೀವು ಇನ್ನೊಂದು ಭಾಷೆಯನ್ನು ಕಲಿಯಬಹುದು. ಶುಶ್ರೂಷೆಯಲ್ಲಿ ನಿಮ್ಮ ಪಾಲನ್ನು ಹೆಚ್ಚಿಸಲು ನೀವು ಯಾವುದೇ ಹೊಂದಾಣಿಕೆಗಳನ್ನು ಮಾಡಶಕ್ತರಾದರೂ ಯೆಹೋವನು ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನೆಂಬ ಭರವಸೆಯು ನಿಮಗಿರಬಲ್ಲದು.—ಜ್ಞಾನೋ. 10:22.
[ಪುಟ 32ರಲ್ಲಿರುವ ಚೌಕ/ ಚಿತ್ರ]
ಸ್ಮರಣೀಯ ದಿನ
ಬಲ್ಗೇರಿಯದಲ್ಲಿನ ವಿಶೇಷ ಸೇವಾಕಾರ್ಯವನ್ನು ಬೆಂಬಲಿಸಲಿಕ್ಕಾಗಿ ಯೂರೋಪಿನ ಇತರ ದೇಶಗಳಿಂದ ಬಂದವರಲ್ಲಿ ಅನೇಕರು, “ಸದಾ ಎಚ್ಚರವಾಗಿರಿ!” ಜಿಲ್ಲಾ ಅಧಿವೇಶನಕ್ಕೆ ಸೊಫೀಯದಲ್ಲೇ ಹಾಜರಾಗಲು ಯೋಜಿಸಿದರು. ಬೇರೆ ಬೇರೆ ದೇಶಗಳಿಂದ ಆ ಅನೇಕ ಸಂದರ್ಶಕರನ್ನು ಭೇಟಿಯಾಗುವುದು ಸ್ಥಳೀಕ ಸಹೋದರ ಸಹೋದರಿಯರಿಗೆ ಅತ್ಯಂತ ಉತ್ತೇಜನದಾಯಕವಾಗಿತ್ತು. ಆಡಳಿತ ಮಂಡಲಿಯ ಸಹೋದರ ಜೆಫ್ರಿ ಜ್ಯಾಕ್ಸನ್‌ರವರು ಬಲ್ಗೇರಿಯನ್ ಭಾಷೆಯಲ್ಲಿ ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರದ ಬೈಬಲನ್ನು ಬಿಡುಗಡೆಗೊಳಿಸಿದಾಗ ಹಾಜರಿದ್ದ 2,039 ಮಂದಿ ಎಷ್ಟು ಪುಳಕಿತಗೊಂಡರು! ಆ ಶುಕ್ರವಾರದಂದು ಹಾಜರಿದ್ದ ಎಲ್ಲರು ಅತಿ ಉತ್ಸಾಹಭರಿತ ಹಾಗೂ ಸುದೀರ್ಘ ಕರತಾಡನದಿಂದ ತಮ್ಮ ಹೃತ್ಪೂರ್ವಕ ಗಣ್ಯತೆಯನ್ನು ತೋರಿಸಿದರು. ಅನೇಕರ ಕಣ್ಗಳಿಂದ ಆನಂದ ಭಾಷ್ಪಗಳೂ ಸುರಿದವು. ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಲಭ್ಯವಿರುವ ಈ ನಿಷ್ಕೃಷ್ಟ ಭಾಷಾಂತರವು ಪ್ರಾಮಾಣಿಕ ಬಲ್ಗೇರಿಯನ್ ಜನರಿಗೆ ಯೆಹೋವನನ್ನು ತಿಳಿದುಕೊಳ್ಳಲು ಸಹಾಯಮಾಡುವುದು ನಿಶ್ಚಯ.
[ಪುಟ 30, 31ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಬಲ್ಗೇರಿಯ
ಸೊಫೀಯ
ಸಾಂಡಾನ್‌ಸ್ಕೀ
ಸಿಲಿಸ್ಟ್ರ
ಕಾಸಾನ್ಲಕ್
[ಪುಟ 31ರಲ್ಲಿರುವ ಚಿತ್ರಗಳು]
ಆ ಏಳು ವಾರಗಳಲ್ಲಿ ಒಂದು ಮಹತ್ತಾದ ಸಾಕ್ಷಿಯನ್ನು ನೀಡಲಾಯಿತು