ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

“ಜ್ಞಾನವನ್ನು [“ತಿಳಿವಳಿಕೆ,” NW] ಪಡೆ, ವಿವೇಕವನ್ನು ಸಂಪಾದಿಸು.”—ಜ್ಞಾನೋ. 4:5.

1, 2. (ಎ) ತನ್ನೊಳಗೆ ನಡೆಯುತ್ತಿದ್ದ ಹೋರಾಟವನ್ನು ನಿಭಾಯಿಸಲು ಪೌಲನಿಗೆ ಯಾವುದು ಸಹಾಯಮಾಡಿತು? (ಬಿ) ನೀವು ತಿಳಿವಳಿಕೆ ಮತ್ತು ವಿವೇಕವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ?

“ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ.” ಈ ಮಾತುಗಳನ್ನು ಹೇಳಿದವನು ಯಾರೆಂದು ನಿಮಗೆ ಗೊತ್ತೇ? ಅಪೊಸ್ತಲ ಪೌಲನೇ ಅವನು. ಪೌಲನು ಯೆಹೋವನನ್ನು ಪ್ರೀತಿಸಿದ್ದನಾದರೂ ಸರಿಯಾದದ್ದನ್ನು ಮಾಡಲು ಅವನಿಗೂ ಕೆಲವೊಮ್ಮೆ ತುಂಬ ಕಷ್ಟವಾಗುತ್ತಿತ್ತು. ಅವನೊಳಗೆ ಹೀಗೆ ಹೋರಾಟ ನಡೆಯುತ್ತಿರುವಾಗ ಅವನಿಗೆ ಹೇಗನಿಸಿತು? “ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು!” ಎಂದನವನು. (ರೋಮ. 7:21-24) ಪೌಲನ ಅನಿಸಿಕೆಯನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರೋ? ಸರಿಯಾದದ್ದನ್ನು ಮಾಡಲು ನಿಮಗೂ ಕೆಲವೊಮ್ಮೆ ಕಷ್ಟವಾಗುತ್ತದೋ? ಆಗ ಪೌಲನಿಗಾದಂತೆ ನಿಮಗೂ ಹತಾಶೆಯಾಗುತ್ತದೋ? ಹೌದಾದರೆ, ನಿರಾಶರಾಗಬೇಡಿ. ಏಕೆಂದರೆ ಪೌಲನು ಆ ಸವಾಲುಗಳನ್ನು ನಿಭಾಯಿಸುವುದರಲ್ಲಿ ಯಶಸ್ವಿಯಾದನು, ನೀವು ಸಹ ಯಶಸ್ವಿಯಾಗಬಲ್ಲಿರಿ!

2 ಪೌಲನು ಯಶಸ್ವಿಯಾದದ್ದು ‘ಸ್ವಸ್ಥಕರವಾದ ಮಾತುಗಳು’ ತನ್ನನ್ನು ಮಾರ್ಗದರ್ಶಿಸುವಂತೆ ಬಿಟ್ಟುಕೊಟ್ಟದ್ದರಿಂದಲೇ. (2 ತಿಮೊ. 1:13, 14) ಇದರಿಂದಾಗಿ ಅವನು ತನ್ನ ಸವಾಲುಗಳನ್ನು ನಿಭಾಯಿಸಲು ಹಾಗೂ ಸರಿಯಾದ ನಿರ್ಣಯಗಳನ್ನು ಮಾಡಲು ಬೇಕಾದ ತಿಳಿವಳಿಕೆ, ವಿವೇಕವನ್ನು ಪಡೆದುಕೊಂಡನು. ನೀವು ಸಹ ತಿಳಿವಳಿಕೆ ಮತ್ತು ವಿವೇಕವನ್ನು ಪಡೆದುಕೊಳ್ಳುವಂತೆ ಯೆಹೋವ ದೇವರು ನಿಮಗೆ ಸಹಾಯಮಾಡುವನು. (ಜ್ಞಾನೋ. 4:5) ಅತ್ಯುತ್ತಮ ಸಲಹೆಯನ್ನು ಆತನು ತನ್ನ ವಾಕ್ಯವಾದ ಬೈಬಲಿನಲ್ಲಿ ನಿಮಗಾಗಿ ಕೊಟ್ಟಿದ್ದಾನೆ. (2 ತಿಮೊಥೆಯ 3:16, 17 ಓದಿ.) ನೀವು ಹೆತ್ತವರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಹಣಕಾಸನ್ನು ಹೇಗೆ ಬಳಸಬೇಕು ಹಾಗೂ ಒಬ್ಬರೇ ಇರುವಾಗ ಹೇಗೆ ನಡೆಯಬೇಕೆಂಬ ವಿಷಯದಲ್ಲಿ ಬೈಬಲಿನಲ್ಲಿರುವ ಮೂಲತತ್ತ್ವಗಳಿಂದ ಪ್ರಯೋಜನ ಪಡೆಯಬಲ್ಲ ವಿಧವನ್ನು ಪರಿಗಣಿಸಿ.

ಕುಟುಂಬದಲ್ಲಿ ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

3, 4. ಹೆತ್ತವರ ಕ್ರಮನಿಯಮಗಳಿಗೆ ವಿಧೇಯರಾಗುವುದು ನಿಮಗೇಕೆ ಕಷ್ಟವೆಂದು ಅನಿಸಬಹುದು? ಆದರೆ ಹೆತ್ತವರು ಕ್ರಮನಿಯಮಗಳನ್ನು ಮಾಡುವುದೇಕೆ?

3 ನಿಮ್ಮ ಹೆತ್ತವರು ವಿಧಿಸುವ ಕ್ರಮನಿಯಮಗಳನ್ನು ಪಾಲಿಸಲು ನಿಮಗೆ ಕಷ್ಟವಾಗುತ್ತದೋ? ಕಾರಣ ಏನಾಗಿರಬಹುದು? ನಿಮಗೆ ಸ್ವಲ್ಪ ಹೆಚ್ಚು ಸ್ವತಂತ್ರ ಬೇಕಿರುವುದೇ ಅದಕ್ಕೆ ಒಂದು ಕಾರಣವಾಗಿದ್ದೀತು. ಹಾಗೆ ಬಯಸುವುದು ಸಹಜವೇ. ಅದು ನೀವು ಬೆಳೆದು ದೊಡ್ಡವರಾಗುತ್ತಿದ್ದೀರಿ ಎಂಬುದರ ಗುರುತು. ಆದರೆ ಮನೆಯಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗುವುದು ನಿಮ್ಮ ಕರ್ತವ್ಯ.—ಎಫೆ. 6:1-3.

4 ಆವಶ್ಯಕತೆಗಳನ್ನೂ ಕ್ರಮನಿಯಮಗಳನ್ನೂ ಹೆತ್ತವರು ಏಕೆ ವಿಧಿಸುತ್ತಾರೆಂದು ಅರ್ಥಮಾಡಿಕೊಳ್ಳುವುದಾದರೆ ಅದನ್ನು ಪಾಲಿಸಲು ನಿಮಗೆ ಸುಲಭವಾಗುವುದು. ಆದರೂ 18 ವಯಸ್ಸಿನ ಬ್ರೀಎಲ್‌ಳಂತೆ * ಕೆಲವೊಮ್ಮೆ ನಿಮಗೂ ಅನಿಸಬಹುದು. ತನ್ನ ಹೆತ್ತವರ ಬಗ್ಗೆ ಅವಳು ಹೇಳಿದ್ದು: “ನನ್ನ ಪ್ರಾಯದಲ್ಲಿ ಅವರಿಗೆ ಹೇಗೆಲ್ಲ ಅನಿಸುತ್ತಿತ್ತೆಂದು ಪೂರ್ತಿ ಮರೆತುಬಿಟ್ಟಿದ್ದಾರೆ. ನಾನು ಒಂದು ಮಾತೂ ಹೇಳೋ ಹಾಗಿಲ್ಲ, ಇಷ್ಟವಾದದ್ದನ್ನು ಮಾಡೋ ಹಾಗಿಲ್ಲ. ನಾನಿನ್ನೂ ಚಿಕ್ಕ ಮಗು ಅಂದುಕೊಂಡಿದ್ದಾರೋ ಏನೋ.” ನಿಮ್ಮ ಹೆತ್ತವರು ಕೂಡ ನಿಮ್ಮನ್ನು ಅಗತ್ಯಕ್ಕಿಂತ ಹೆಚ್ಚು ಹತೋಟಿಯಲ್ಲಿಡುತ್ತಾರೆ ಎಂದು ಬ್ರೀಎಲ್‌ಳಂತೆ ನಿಮಗೆ ಅನಿಸಬಹುದು. ಆದರೆ ನಿಮ್ಮ ಹೆತ್ತವರು ಕ್ರಮನಿಯಮಗಳನ್ನು ವಿಧಿಸುವುದು ಮುಖ್ಯವಾಗಿ ನಿಮ್ಮ ಬಗ್ಗೆ ಅವರಿಗೆ ಚಿಂತೆ ಇರುವುದರಿಂದಲೇ. ಮಾತ್ರವಲ್ಲ ನಿಮ್ಮನ್ನು ಪರಾಮರಿಸುವ ವಿಧದ ಕುರಿತು ತಾವು ಯೆಹೋವನಿಗೆ ಲೆಕ್ಕ ಒಪ್ಪಿಸಬೇಕೆಂದೂ ಹೆತ್ತವರು ತಿಳಿದಿದ್ದಾರೆ.—1 ತಿಮೊ. 5:8.

5. ಹೆತ್ತವರಿಗೆ ವಿಧೇಯರಾಗುವುದು ನಿಮಗೆ ಹೇಗೆ ಪ್ರಯೋಜನಕರ?

5 ಹೆತ್ತವರ ನಿಯಮಗಳಿಗೆ ವಿಧೇಯರಾಗುವುದನ್ನು ಬ್ಯಾಂಕ್‌ನಿಂದ ಪಡೆದ ಸಾಲವನ್ನು ಹಿಂದಿರುಗಿಸುವುದಕ್ಕೆ ಹೋಲಿಸಬಹುದು. ನೀವು ಪ್ರಾಮಾಣಿಕತೆಯಿಂದ ಹಣವನ್ನು ಹಿಂದಿರುಗಿಸಿದರೆ ನಿಮಗೆ ಇನ್ನೂ ಹೆಚ್ಚಿನ ಸಾಲ ಕೊಡಲು ಬ್ಯಾಂಕ್‌ ಸಿದ್ಧವಿರುತ್ತದೆ. ಅದೇ ರೀತಿ ನೀವು ನಿಮ್ಮ ಹೆತ್ತವರಿಗೆ ಗೌರವ ಮತ್ತು ವಿಧೇಯತೆ ಎಂಬ ಸಾಲವನ್ನು ಸಲ್ಲಿಸಲಿಕ್ಕಿದೆ. (ಜ್ಞಾನೋಕ್ತಿ 1:8 ಓದಿ.) ನೀವು ಅವರಿಗೆ ಎಷ್ಟು ವಿಧೇಯರಾಗುತ್ತೀರೋ ಅಷ್ಟು ಹೆಚ್ಚು ಸ್ವಾತಂತ್ರ್ಯವನ್ನು ಅವರು ನಿಮಗೆ ಕೊಟ್ಟಾರು. (ಲೂಕ 16:10) ಆದರೆ ಅವರು ಮಾಡಿದ ಕ್ರಮನಿಯಮಗಳನ್ನು ಪಾಲಿಸಲು ನೀವು ಸದಾ ತಪ್ಪುತ್ತಾ ಇರುವುದಾದರೆ ಅವರು ನಿಮ್ಮ ಸ್ವಾತಂತ್ರ್ಯವನ್ನು ಕಡಿಮೆಮಾಡುತ್ತಾರೆ ಅಥವಾ ಪೂರ್ತಿ ನಿಲ್ಲಿಸುತ್ತಾರೆ ಖಂಡಿತ.

6. ಮಕ್ಕಳು ವಿಧೇಯರಾಗಿರುವಂತೆ ಹೆತ್ತವರು ಹೇಗೆ ಸಹಾಯಮಾಡಬಲ್ಲರು?

6 ಮಕ್ಕಳು ವಿಧೇಯತೆ ತೋರಿಸುವುದನ್ನು ಹೆತ್ತವರು ಹೇಗೆ ಸುಲಭವನ್ನಾಗಿ ಮಾಡಬಲ್ಲರು? ಒಂದು ವಿಧ ತಮ್ಮ ಸ್ವಂತ ಮಾದರಿಯ ಮೂಲಕವೇ. ಯೆಹೋವನು ಕೇಳಿಕೊಳ್ಳುವ ವಿಷಯಗಳಿಗೆ ಹೆತ್ತವರು ಸಿದ್ಧಮನಸ್ಸಿನಿಂದ ವಿಧೇಯರಾಗುವ ಮೂಲಕ ಆತನ ನಿಯಮಗಳು ನ್ಯಾಯವಾದವುಗಳೆಂದು ತೋರಿಸಿಕೊಡಬೇಕು. ಹೀಗೆ ಮಕ್ಕಳಿಗೆ ಹೆತ್ತವರ ನಿಯಮಗಳು ನ್ಯಾಯವಾದವುಗಳೆಂದು ತೋರಿಬರುತ್ತದೆ. (1 ಯೋಹಾ. 5:3) ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ ಯೆಹೋವನು ತನ್ನ ಸೇವಕರಿಗೆ ನಿರ್ದಿಷ್ಟ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನೂ ಕೊಟ್ಟನು ಎಂದು ಬೈಬಲ್‌ ತಿಳಿಸುತ್ತದೆ. (ಆದಿ. 18:22-32; 1 ಅರ. 22:19-22) ಹಾಗಾದರೆ ಹೆತ್ತವರಾದ ನೀವು ಸಹ ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಬಿಡಬಹುದಲ್ಲವೇ?

7, 8. (ಎ) ಕೆಲವು ಯೌವನಸ್ಥರು ಯಾವ ಸವಾಲನ್ನು ಎದುರಿಸುತ್ತಾರೆ? (ಬಿ) ಶಿಸ್ತಿನಿಂದ ಪ್ರಯೋಜನ ಪಡೆಯಲು ನೀವೇನನ್ನು ಅರ್ಥಮಾಡಿಕೊಳ್ಳಬೇಕು?

7 ತಮ್ಮ ಹೆತ್ತವರ ಟೀಕೆಯು ನ್ಯಾಯವಲ್ಲ ಎಂದು ಮಕ್ಕಳಿಗೆ ಕೆಲವು ಸಲ ಅನಿಸೀತು. ಇದು ಕೂಡ ಅವರು ಎದುರಿಸುವ ಒಂದು ಸವಾಲು. ಕ್ರೇಗ್‌ ಎಂಬ ಯುವಕನಂತೆ ಕೆಲವೊಮ್ಮೆ ನಿಮಗೆ ಅನಿಸಬಹುದು. ಅವನು ಹೇಳಿದ್ದು: “ನನ್ನ ಅಮ್ಮ ಪೊಲೀಸ್‌ ಪತ್ತೇದಾರರಂತೆ ನನ್ನ ಮೇಲೆ ಯಾವಾಗಲೂ ಕಣ್ಣಿಡುತ್ತಾರೆ ಎಂದು ನನಗನಿಸಿತ್ತು. ಎಲ್ಲಿ ತಪ್ಪುಮಾಡ್ತೇನೋ ಅಂತ ಹಿಡಿಯಲಿಕ್ಕೆ.”

8 ನಮಗೆ ತಿದ್ದುಪಾಟು ಅಥವಾ ಶಿಸ್ತು ಸಿಗುವಾಗ ನಮ್ಮನ್ನು ಟೀಕಿಸಲಾಗುತ್ತಿದೆ ಎಂದು ನಾವು ಅನೇಕಬಾರಿ ಭಾವಿಸುತ್ತೇವೆ. ಶಿಸ್ತನ್ನು ಕೊಡಲು ನ್ಯಾಯವಾದ ಕಾರಣವಿದ್ದರೂ ಅದನ್ನು ಸ್ವೀಕರಿಸುವುದು ಬಹು ಕಷ್ಟ ಎಂಬುದನ್ನು ಬೈಬಲ್‌ ಒಪ್ಪುತ್ತದೆ. (ಇಬ್ರಿ. 12:11) ನೀವು ಪಡೆದುಕೊಳ್ಳುವ ಶಿಸ್ತಿನಿಂದ ಪ್ರಯೋಜನ ಪಡೆಯಲು ಯಾವುದು ನಿಮಗೆ ಸಹಾಯಮಾಡಬಲ್ಲದು? ನಿಮ್ಮ ಮೇಲಣ ಪ್ರೀತಿಯಿಂದಲೇ ಹೆತ್ತವರು ನಿಮಗೆ ಶಿಕ್ಷೆ ಕೊಡುತ್ತಿದ್ದಾರೆ ಎಂದು ನೆನಪಿಡುವುದೇ. (ಜ್ಞಾನೋ. 3:12) ನೀವು ದುರಭ್ಯಾಸಗಳನ್ನು ಬೆಳೆಸಿಕೊಳ್ಳದೆ ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬುದೇ ಅವರ ಅಪೇಕ್ಷೆ. ನಿಮ್ಮ ತಪ್ಪನ್ನು ತಿದ್ದದಿರುವುದು ನಿಮ್ಮನ್ನು ದ್ವೇಷಿಸುವುದಕ್ಕೆ ಸಮಾನವೆಂದು ಅವರಿಗೆ ಗೊತ್ತು. (ಜ್ಞಾನೋಕ್ತಿ 13:24 ಓದಿ.) ಅಷ್ಟೇ ಅಲ್ಲ, ತಪ್ಪುಮಾಡುವುದು ಕಲಿಯುವ ಪ್ರಕ್ರಿಯೆಯ ಒಂದು ಭಾಗ ಎಂಬುದನ್ನೂ ಮನಸ್ಸಿನಲ್ಲಿಡಿ. ಆದುದರಿಂದ ಹೆತ್ತವರು ನಿಮ್ಮನ್ನು ತಿದ್ದುವಾಗ ಅವರ ಮಾತಿನಲ್ಲಿರುವ ವಿವೇಕವನ್ನು ಅರ್ಥಮಾಡಿಕೊಳ್ಳಿ. ಏಕೆಂದರೆ “[ವಿವೇಕದ] ಲಾಭವು ಬೆಳ್ಳಿಯ ಲಾಭಕ್ಕಿಂತಲೂ ಅದರಿಂದಾಗುವ ಆದಾಯವು ಬಂಗಾರಕ್ಕಿಂತಲೂ ಅಮೂಲ್ಯವೇ ಸರಿ.”—ಜ್ಞಾನೋ. 3:13, 14.

9. ಅನ್ಯಾಯವೆಂದು ತೋರುವ ವಿಷಯವನ್ನೇ ಯೋಚಿಸಿ ತಲೆಕೆಡಿಸಿಕೊಳ್ಳುವ ಬದಲು ಯೌವನಸ್ಥರು ಏನು ಮಾಡಬಲ್ಲರು?

9 ಆದರೂ ಹೆತ್ತವರು ಸಹ ತಪ್ಪುಗಳನ್ನು ಮಾಡುತ್ತಾರೆ ನಿಜ. (ಯಾಕೋ. 3:2) ನಿಮಗೆ ಶಿಸ್ತುಕೊಡುವಾಗ ಕೆಲವೊಮ್ಮೆ ಅವರು ದುಡುಕಿ ಏನಾದರೂ ಹೇಳಿಬಿಟ್ಟಾರು. (ಜ್ಞಾನೋ. 12:18) ನಿಮ್ಮ ಹೆತ್ತವರು ಹಾಗೆ ಮಾತಾಡಲು ಕಾರಣವೇನಾಗಿರಬಹುದು? ಅವರು ತುಂಬ ಒತ್ತಡದ ಕೆಳಗಿರಬಹುದು ಅಥವಾ ನಿಮ್ಮ ತಪ್ಪಿಗೆ ತಾವೇ ಕಾರಣರೆಂಬ ದೋಷಿಭಾವನೆಯಿಂದ ಹಾಗೆ ಹೇಳಿರಬಹುದು. ಹೆತ್ತವರು ಹಾಗೆ ಮಾತಾಡಿದ್ದು ನ್ಯಾಯವಲ್ಲ ಎಂದು ಯೋಚಿಸುತ್ತಾ ತಲೆಕೆಡಿಸಿಕೊಳ್ಳುವ ಬದಲು ನಿಮಗೆ ಸಹಾಯಮಾಡಲು ಅವರಿಗಿರುವ ಯಥಾರ್ಥ ಅಪೇಕ್ಷೆಗಾಗಿ ನೀವು ಕೃತಜ್ಞತೆ ತೋರಿಸಬೇಕಲ್ಲವೇ? ಶಿಸ್ತನ್ನು ಸ್ವೀಕರಿಸುವ ಮನಸ್ಸನ್ನು ನೀವೀಗಲೇ ಬೆಳೆಸಿಕೊಳ್ಳುವುದು ದೊಡ್ಡವರಾದಂತೆ ನಿಮಗೆ ಸಹಾಯಕರ.

10. ಹೆತ್ತವರ ತಿದ್ದುಪಾಟು ಹಾಗೂ ನಿಯಮಗಳು ಸ್ವೀಕರಿಸಲು ಸುಲಭವೂ ಪ್ರಯೋಜನಕರವೂ ಆಗಿರಬೇಕಾದರೆ ನೀವೇನು ಮಾಡಬೇಕು?

10 ಹೆತ್ತವರ ತಿದ್ದುಪಾಟು ಹಾಗೂ ನಿಯಮಗಳು ಸ್ವೀಕರಿಸಲು ಸುಲಭವೂ ಪ್ರಯೋಜನಕರವೂ ಆಗಿರಬೇಕೆಂದು ನೀವು ಬಯಸುತ್ತೀರೋ? ಹೌದಾದಲ್ಲಿ ನಿಮ್ಮ ಸಂವಾದಿಸುವ ಕೌಶಲವನ್ನು ಉತ್ತಮಗೊಳಿಸುವ ಅಗತ್ಯವಿದೆ. ಅದನ್ನು ಹೇಗೆ ಮಾಡಬಹುದು? ಮೊದಲ ಹೆಜ್ಜೆ, ಚೆನ್ನಾಗಿ ಕಿವಿಗೊಡುವುದೇ. “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ” ಆಗಿರುವಂತೆ ಬೈಬಲ್‌ ಹೇಳುತ್ತದೆ. (ಯಾಕೋ. 1:19) ನೀವು ಮಾಡಿದ್ದೇ ಸರಿಯೆಂದು ಸಮರ್ಥಿಸಿಕೊಳ್ಳಲು ಆತುರಪಡುವ ಬದಲು ನಿಮ್ಮ ಭಾವನೆಗಳನ್ನು ಅಂಕೆಯಲ್ಲಿಡಲು ಪ್ರಯತ್ನಿಸಿರಿ ಹಾಗೂ ಹೆತ್ತವರು ಹೇಳುವ ಮಾತನ್ನು ಕಿವಿಗೊಟ್ಟು ಕೇಳಿ. ಅವರು ಅದನ್ನು ಹೇಗೆ ಹೇಳುತ್ತಾರೆಂದಲ್ಲ, ಏನು ಹೇಳುತ್ತಾರೆ ಎಂಬುದಕ್ಕೆ ಮನಸ್ಸುಕೊಡಿ. ನಿಮ್ಮ ತಪ್ಪನ್ನು ಮನಸಾರೆ ಒಪ್ಪಿಕೊಳ್ಳುವ ಮೂಲಕ ಹೆತ್ತವರು ಹೇಳಿದ್ದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ತೋರಿಸಿರಿ. ನೀವು ಮಾಡಿದ ತಪ್ಪಿಗೆ ಕಾರಣವನ್ನು ತಿಳಿಸಲು ನೀವು ಬಯಸುವುದಾದರೆ ಆಗೇನು? ಹೆತ್ತವರು ಹೇಳಿದ್ದಕ್ಕೆ ವಿಧೇಯರಾಗುವ ತನಕ ‘ಮೌನವಾಗಿರುವುದೇ’ ವಿವೇಕಯುತ. (ಜ್ಞಾನೋ. 10:19) ಅವರ ಮಾತನ್ನು ನೀವು ಆಲಿಸಿದ್ದೀರೆಂದು ಹೆತ್ತವರಿಗೆ ಮನವರಿಕೆಯಾದರೆ ಅವರೂ ನೀವು ಹೇಳುವುದನ್ನು ಕೇಳಲು ಹೆಚ್ಚು ಮನಸ್ಸುಮಾಡುವರು. ಇಂಥ ಪ್ರೌಢ ನಡವಳಿಕೆಯು ನೀವು ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡುತ್ತಿದ್ದೀರಿ ಎಂದು ತೋರಿಸುತ್ತದೆ.

ಹಣಕಾಸಿನ ವಿಷಯದಲ್ಲಿ ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

11, 12. (ಎ) ಹಣದ ವಿಷಯದಲ್ಲಿ ಬೈಬಲ್‌ ನಮಗೆ ಏನು ಮಾಡುವಂತೆ ಪ್ರೋತ್ಸಾಹಿಸುತ್ತದೆ? ಏಕೆ? (ಬಿ) ಹಣವನ್ನು ಜಾಗ್ರತೆಯಿಂದ ಖರ್ಚುಮಾಡಲು ನಿಮ್ಮ ಹೆತ್ತವರು ಹೇಗೆ ಸಹಾಯಮಾಡಬಲ್ಲರು?

11 “ಧನವು . . . ಆಶ್ರಯ” ಎನ್ನುತ್ತದೆ ಬೈಬಲ್‌. ಆದರೆ ಧನಕ್ಕಿಂತಲೂ ವಿವೇಕವು ಹೆಚ್ಚು ಅಮೂಲ್ಯವೆಂದು ಅದೇ ವಚನವು ತೋರಿಸುತ್ತದೆ. (ಪ್ರಸಂ. 7:12) ಹಣದ ಮೌಲ್ಯವನ್ನು ಅರಿತಿರುವಂತೆ ದೇವರ ವಾಕ್ಯವು ನಮ್ಮನ್ನು ಪ್ರೋತ್ಸಾಹಿಸುತ್ತದೆಯೇ ಹೊರತು ಅದನ್ನು ಪ್ರೀತಿಸುವುದನ್ನಲ್ಲ. ಹಣದ ವ್ಯಾಮೋಹವನ್ನು ಏಕೆ ವರ್ಜಿಸಬೇಕು? ಈ ದೃಷ್ಟಾಂತವನ್ನು ಪರಿಗಣಿಸಿ: ಒಬ್ಬ ಕುಶಲ ಬಾಣಸಿಗನ ಕೈಯಲ್ಲಿ ಒಂದು ಹರಿತ ಚೂರಿಯು ಉಪಯುಕ್ತ ಸಾಧನ. ಆದರೆ ಅದೇ ಚೂರಿಯು ಅಜಾಗರೂಕ, ನಿರ್ಲಕ್ಷ್ಯ ವ್ಯಕ್ತಿಯ ಕೈಯಲ್ಲಿದ್ದರೆ ಗಂಭೀರ ಹಾನಿ ತಪ್ಪಿದ್ದಲ್ಲ. ಹಾಗೆಯೇ ವಿವೇಚನೆಯಿಂದ ಉಪಯೋಗಿಸುವಲ್ಲಿ ಹಣವೂ ಉಪಯುಕ್ತವಾಗಿರಬಲ್ಲದು. ಆದರೆ “ಐಶ್ವರ್ಯವಂತರಾಗಬೇಕೆಂದು ದೃಢನಿರ್ಧಾರಮಾಡಿಕೊಂಡಿರುವವರು” ಅನೇಕವೇಳೆ ಅದಕ್ಕಾಗಿ ಸ್ನೇಹ, ಕುಟುಂಬ ಬಾಂಧವ್ಯ ಮಾತ್ರವಲ್ಲ ದೇವರೊಂದಿಗಿನ ಸುಸಂಬಂಧವನ್ನೂ ತೊರೆದುಬಿಡುತ್ತಾರೆ. ಪರಿಣಾಮವಾಗಿ, ಅವರು “ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ” ತಿವಿಸಿಕೊಳ್ಳುತ್ತಾರೆ.—1 ತಿಮೊಥೆಯ 6:9, 10 ಓದಿ.

12 ಹಣವನ್ನು ವಿವೇಚನೆಯಿಂದ ಬಳಸಲು ನೀವು ಹೇಗೆ ಕಲಿಯಬಲ್ಲಿರಿ? ಕಡಿಮೆ ಖರ್ಚುಮಾಡುವುದು ಹೇಗೆಂಬ ಸಲಹೆಗಾಗಿ ನಿಮ್ಮ ಹೆತ್ತವರನ್ನೇ ಕೇಳಬಹುದಲ್ಲವೇ? ಸೊಲೊಮೋನನು ಬರೆದದ್ದು: “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು, ವಿವೇಕಿಯು [ಮತ್ತಷ್ಟು] ಉಚಿತಾಲೋಚನೆಯುಳ್ಳವನಾಗುವನು.” (ಜ್ಞಾನೋ. 1:5) ಆ್ಯನ ಎಂಬ ಯುವತಿಯು ಸರಿಯಾದ ಮಾರ್ಗದರ್ಶನೆಗಾಗಿ ತನ್ನ ಹೆತ್ತವರನ್ನೇ ಕೇಳಿದಳು. ಅವಳನ್ನುವುದು: “ಮಿತವ್ಯಯವನ್ನು ಅಪ್ಪ ನನಗೆ ಕಲಿಸಿದರು. ನನ್ನ ಹಣವನ್ನು ಸರಿಯಾಗಿ ಯೋಜಿಸಿ ಖರ್ಚುಮಾಡುವುದು ಎಷ್ಟು ಪ್ರಾಮುಖ್ಯವೆಂಬುದನ್ನು ಅವರು ಹೇಳಿಕೊಟ್ಟರು.” ಆ್ಯನಳ ತಾಯಿ ಸಹ ಅವಳಿಗೆ ಪ್ರಾಯೋಗಿಕ ಸಹಾಯ ಕೊಟ್ಟರು. “ಖರೀದಿ ಮಾಡುವ ಮೊದಲು ಬೇರೆ ಬೇರೆ ಕಡೆಗಳಲ್ಲಿ ಬೆಲೆಯನ್ನು ಹೋಲಿಸಿನೋಡುವುದರ ಮಹತ್ವವನ್ನು ಅಮ್ಮ ಹೇಳಿಕೊಟ್ಟರು.” ಇದರಿಂದ ಆ್ಯನಳಿಗೆ ಯಾವ ಪ್ರಯೋಜನವಾಯಿತು? ಅವಳು ಹೇಳುವುದು: “ಈಗ ನನ್ನ ಹಣವನ್ನು ನಾನೇ ಜಾಗ್ರತೆಯಿಂದ ಮಿತವಾಗಿ ಖರ್ಚುಮಾಡಬಲ್ಲೆ. ನನಗೀಗ ಸ್ವತಂತ್ರ ಹಾಗೂ ಮನಶ್ಶಾಂತಿ ಇದೆ, ಅನಾವಶ್ಯಕ ಸಾಲದಲ್ಲಿ ಬೀಳುವ ತಲೆನೋವೇ ಇಲ್ಲ.”

13. ಹಣ ಖರ್ಚು ಮಾಡುವ ವಿಷಯದಲ್ಲಿ ನಿಮ್ಮನ್ನೇ ನೀವು ಹೇಗೆ ಶಿಸ್ತುಗೊಳಿಸಬಲ್ಲಿರಿ?

13 ನೀವು ಕಂಡದ್ದನ್ನೆಲ್ಲ ಖರೀದಿಸಿದರೆ ಅಥವಾ ನಿಮ್ಮ ಸ್ನೇಹಿತರನ್ನು ಬರೇ ಮೆಚ್ಚಿಸಲಿಕ್ಕಾಗಿ ಮಿತಿಮೀರಿ ಖರ್ಚುಮಾಡಿದರೆ ಬೇಗನೆ ಸಾಲದಲ್ಲಿ ಮುಳುಗಿಬಿಟ್ಟೀರಿ. ಈ ಪಾಶದಲ್ಲಿ ಬೀಳದಂತೆ ನಿಮಗೆ ಯಾವುದು ಸಹಾಯಮಾಡಬಹುದು? ಹಣ ಖರ್ಚುಮಾಡುವ ವಿಷಯದಲ್ಲಿ ನಿಮ್ಮನ್ನೇ ನೀವು ಶಿಸ್ತುಗೊಳಿಸಲು ಕಲಿಯಬೇಕು. 20-22ರ ವಯಸ್ಸಿನ ಎಲನ ಹೀಗೆಯೇ ಮಾಡಿದಳು. ಅವಳಂದದ್ದು: “ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಇಂತಿಷ್ಟೇ ಹಣ ಖರ್ಚುಮಾಡಬೇಕೆಂದು ಮೊದಲೇ ಯೋಜಿಸುತ್ತೇನೆ. . . . ಮಾತ್ರವಲ್ಲ ಕಣ್ಣಿಗೆ ಕಂಡದ್ದನ್ನೆಲ್ಲ ಕೂಡಲೆ ಖರೀದಿಸದೆ ಬೆಲೆಗಳನ್ನು ತೂಗಿನೋಡುವಂತೆ ಪ್ರೋತ್ಸಾಹಿಸುವ ಹಾಗೂ ಜಾಗ್ರತೆಯಿಂದ ಹಣ ವೆಚ್ಚಮಾಡುವ ಸ್ನೇಹಿತರೊಂದಿಗೇ ನಾನು ಹೋಗುತ್ತೇನೆ.”

14. ‘ಐಶ್ವರ್ಯದ ಮೋಸಕರ ಪ್ರಭಾವದ’ ಕುರಿತು ನೀವೇಕೆ ಎಚ್ಚರದಿಂದಿರಬೇಕು?

14 ಹಣ ಸಂಪಾದನೆ ಹಾಗೂ ಅದನ್ನು ಜಾಗ್ರತೆಯಿಂದ ಬಳಸುವುದು ಬದುಕಿನ ಒಂದು ಮುಖ್ಯ ಅಂಶ. ಆದರೂ ಯೇಸು ಹೇಳಿದಂತೆ, ನಿಜ ಸಂತೋಷ ಲಭಿಸುವುದು ‘ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಿಗೆ’ ಮಾತ್ರ. (ಮತ್ತಾ. 5:3) ‘ಐಶ್ವರ್ಯದ ಮೋಸಕರವಾದ ಪ್ರಭಾವವು’ ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಅಭಿರುಚಿಯನ್ನು ಅದುಮಿಬಿಡುತ್ತದೆ ಎಂದು ಯೇಸು ಎಚ್ಚರಿಸಿದನು. (ಮಾರ್ಕ 4:19) ಆದಕಾರಣ ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡುವಂತೆ ಬಿಟ್ಟುಕೊಡುವುದು ಹಾಗೂ ಹಣದ ವಿಷಯದಲ್ಲಿ ಯೋಗ್ಯ ನೋಟವಿರುವುದು ಎಷ್ಟೊಂದು ಪ್ರಾಮುಖ್ಯ!

ಒಂಟಿಗರಾಗಿರುವಾಗ ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ

15. ದೇವರೆಡೆಗಿನ ನಿಮ್ಮ ನಿಷ್ಠೆ ಹೆಚ್ಚು ಪರೀಕ್ಷೆಗೊಳಗಾಗುವುದು ಯಾವಾಗ?

15 ದೇವರೆಡೆಗಿನ ನಿಮ್ಮ ನಿಷ್ಠೆ ಹೆಚ್ಚು ಪರೀಕ್ಷೆಗೊಳಗಾಗುವುದು ಯಾವಾಗ? ನೀವು ಇತರರೊಂದಿಗೆ ಇರುವಾಗಲೋ, ಒಬ್ಬರೇ ಇರುವಾಗಲೋ? ನೀವು ಶಾಲೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿರುವಾಗ ಸಾಮಾನ್ಯವಾಗಿ ನಿಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಲು ಎಚ್ಚರವಾಗಿರುತ್ತೀರಿ. ಅಂದರೆ ಆಧ್ಯಾತ್ಮಿಕ ಅಪಾಯಗಳನ್ನು ಎದುರಿಸಲು ಹೆಚ್ಚು ಸನ್ನದ್ಧರಾಗಿರುತ್ತೀರಿ. ಆದರೆ ನೀವು ಒಂಟಿಯಾಗಿರುವಾಗ, ಜಾಗರೂಕರಿಲ್ಲದಿರುವಾಗ ನಿಮ್ಮ ನೈತಿಕ ಮಟ್ಟಗಳು ಸುಲಭವಾಗಿ ಆಕ್ರಮಣಕ್ಕೆ ಗುರಿಯಾಗಬಲ್ಲವು.

16. ಒಬ್ಬರೇ ಇರುವಾಗಲೂ ನೀವು ಯೆಹೋವನಿಗೆ ವಿಧೇಯರಾಗಬೇಕು ಏಕೆ?

16 ಒಬ್ಬರೇ ಇರುವಾಗಲೂ ನೀವೇಕೆ ಯೆಹೋವನಿಗೆ ವಿಧೇಯರಾಗಬೇಕು? ಇದನ್ನು ನೆನಪಿಡಿ: ನಿಮ್ಮ ನಡತೆ ಯೆಹೋವನ ಮನಸ್ಸನ್ನು ಒಂದೋ ನೋಯಿಸಬಲ್ಲದು ಇಲ್ಲವೆ ಸಂತೋಷಪಡಿಸಬಲ್ಲದು. (ಆದಿ. 6:5, 6; ಜ್ಞಾನೋ. 27:11) ನಿಮ್ಮ ಕ್ರಿಯೆಗಳು ಯೆಹೋವನಿಗೆ ಮುಖ್ಯವಾಗಿವೆ ಏಕೆಂದರೆ “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ನಿಮ್ಮ ಸ್ವಂತ ಪ್ರಯೋಜನಕ್ಕಾಗಿ ನೀವು ಆತನಿಗೆ ಕಿವಿಗೊಡಬೇಕೆಂದು ಆತನು ಬಯಸುತ್ತಾನೆ. (ಯೆಶಾ. 48:17, 18) ಪುರಾತನ ಇಸ್ರಾಯೇಲಿನಲ್ಲಿದ್ದ ಯೆಹೋವನ ಸೇವಕರಲ್ಲಿ ಕೆಲವರು ಆತನ ಮಾತುಗಳನ್ನು ಅಲಕ್ಷಿಸಿ ಆತನ ಮನಸ್ಸಿಗೆ ನೋವನ್ನುಂಟುಮಾಡಿದರು. (ಕೀರ್ತ. 78:40, 41) ಇನ್ನೊಂದು ಕಡೆ, ಪ್ರವಾದಿ ದಾನಿಯೇಲನನ್ನು ಯೆಹೋವನು ತುಂಬ ಪ್ರೀತಿಸಿದನು. ಏಕೆ? ದಾನಿಯೇಲನು ಇತರರೊಂದಿಗಿದ್ದಾಗ ಮಾತ್ರವಲ್ಲ ಒಬ್ಬನೇ ಇದ್ದಾಗಲೂ ಯೆಹೋವನಿಗೆ ನಿಷ್ಠೆ ತೋರಿಸಿದನು. (ದಾನಿಯೇಲ 6:10 ಓದಿ.) ಆದುದರಿಂದಲೇ ಒಬ್ಬ ದೇವದೂತನು ಅವನನ್ನು “ಅತಿಪ್ರಿಯನೇ” ಎಂದು ಕರೆದನು.—ದಾನಿ. 10:11.

17. ಮನೋರಂಜನೆಯನ್ನು ಆರಿಸಿಕೊಳ್ಳುವಾಗ ನೀವು ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

17 ಒಂಟಿಯಾಗಿರುವಾಗಲೂ ನೀವು ಯೆಹೋವನಿಗೆ ನಿಷ್ಠರಾಗಿ ಉಳಿಯಬೇಕಾದರೆ “ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ . . . ಗ್ರಹಣ ಶಕ್ತಿಗಳನ್ನು” ಬೆಳೆಸಿಕೊಳ್ಳಬೇಕು. ಅನಂತರ, ಸರಿಯಾದದ್ದನ್ನು ಮಾಡುವ ಮೂಲಕ ಆ ಗ್ರಹಣ ಶಕ್ತಿಗಳನ್ನು ‘ಉಪಯೋಗದಿಂದ’ ತರಬೇತಿಗೊಳಿಸಬೇಕು. (ಇಬ್ರಿ. 5:14) ಉದಾಹರಣೆಗೆ, ನೀವು ಕೇಳುವ ಸಂಗೀತ, ನೋಡುವ ಚಲನಚಿತ್ರ ಹಾಗೂ ಇಂಟರ್‌ನೆಟ್‌ ಸೈಟ್‌ಗಳನ್ನು ಆರಿಸಿಕೊಳ್ಳುವಾಗ ಸರಿಯಾದದ್ದನ್ನು ಆರಿಸಿ ಕೆಟ್ಟದ್ದನ್ನು ವರ್ಜಿಸಲು ಈ ಕೆಳಗಿನ ಪ್ರಶ್ನೆಗಳು ನಿಮಗೆ ಸಹಾಯಮಾಡುವವು. ಹೀಗೆ ಕೇಳಿಕೊಳ್ಳಿ: ‘ನಾನು ಇತರರೆಡೆಗೆ ಕೋಮಲ ಮಮತೆ ತೋರಿಸುವಂತೆ ಇದು ಉತ್ತೇಜಿಸುತ್ತದೋ ಅಥವಾ “ಪರರ ವಿಪತ್ತನ್ನು” ನೋಡಿ ಹಿಗ್ಗುವಂತೆ ಪ್ರಚೋದಿಸುತ್ತದೋ?’ (ಜ್ಞಾನೋ. 17:5) ‘ನಾನು “ಒಳ್ಳೇದನ್ನು ಪ್ರೀತಿಸುವಂತೆ” ಇದು ನೆರವಾಗುತ್ತದೋ ಅಥವಾ “ಕೆಟ್ಟದ್ದನ್ನು ದ್ವೇಷಿಸಲು” ಕಷ್ಟವನ್ನಾಗಿ ಮಾಡುತ್ತದೋ?’ (ಆಮೋ. 5:15) ಒಬ್ಬರೇ ಇರುವಾಗ ನೀವು ಮಾಡುವ ವಿಷಯಗಳು ನೀವು ನಿಜವಾಗಿಯೂ ಯಾವುದನ್ನು ಮಹತ್ವವುಳ್ಳದ್ದಾಗಿ ಎಣಿಸುತ್ತೀರೆಂದು ತೋರಿಸಿಕೊಡುತ್ತದೆ.—ಲೂಕ 6:45.

18. ನೀವು ತಪ್ಪು ನಡತೆಯಲ್ಲಿ ಗುಟ್ಟಾಗಿ ಒಳಗೂಡಿರುವಲ್ಲಿ ಏನು ಮಾಡಬೇಕು? ಏಕೆ?

18 ಆದರೆ ತಪ್ಪೆಂದು ನಿಮಗೆ ತಿಳಿದಿರುವ ನಡತೆಯಲ್ಲಿ ನೀವು ಗುಟ್ಟಾಗಿ ಒಳಗೂಡಿರುವುದಾದರೆ ನೀವೇನು ಮಾಡಬೇಕು? ನೆನಪಿಡಿ, “ದೋಷಗಳನ್ನು ಮುಚ್ಚಿಕೊಳ್ಳುವವನಿಗೆ ಶುಭವಾಗದು; ಅವುಗಳನ್ನು ಒಪ್ಪಿಕೊಂಡು ಬಿಟ್ಟುಬಿಡುವವನಿಗೆ ಕರುಣೆ ದೊರೆಯುವದು.” (ಜ್ಞಾನೋ. 28:13) ಆ ದುರ್ನಡತೆಯನ್ನೇ ಇನ್ನೂ ಮಾಡುತ್ತಾ ‘ದೇವರ ಪವಿತ್ರಾತ್ಮವನ್ನು ದುಃಖಪಡಿಸುವುದು’ ಎಷ್ಟು ಅವಿವೇಕ! (ಎಫೆ. 4:30) ನಿಮ್ಮ ಯಾವುದೇ ತಪ್ಪನ್ನು ಮೊದಲಾಗಿ ದೇವರಿಗೆ ಮತ್ತು ಹೆತ್ತವರಿಗೆ ಅರಿಕೆಮಾಡುವ ಹಂಗು ನಿಮಗಿದೆ. ಹೀಗೆ ಮಾಡುವುದು ನಿಮಗೇ ಪ್ರಯೋಜನಕರ. ಈ ವಿಷಯದಲ್ಲಿ ‘ಸಭೆಯ ಹಿರೀಪುರುಷರು’ ನಿಮಗೆ ತುಂಬ ಸಹಾಯಮಾಡಬಲ್ಲರು. ಶಿಷ್ಯ ಯಾಕೋಬನು ಬರೆದದ್ದು: “ಅವರು ಯೆಹೋವನ ಹೆಸರಿನಲ್ಲಿ [ತಪ್ಪಿತಸ್ಥನಿಗೆ] ಎಣ್ಣೆಯನ್ನು ಹಚ್ಚಿ ಅವನಿಗೋಸ್ಕರ ಪ್ರಾರ್ಥಿಸಲಿ. ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ಅಸ್ವಸ್ಥನನ್ನು ಗುಣಪಡಿಸುವುದು ಮತ್ತು ಯೆಹೋವನು ಅವನನ್ನು ಎಬ್ಬಿಸುವನು. ಇದಲ್ಲದೆ ಅವನು ಪಾಪಗಳನ್ನು ಮಾಡಿರುವುದಾದರೆ ಅವು ಅವನಿಗೆ ಕ್ಷಮಿಸಲ್ಪಡುವವು.” (ಯಾಕೋ. 5:14, 15) ಒಂದುವೇಳೆ ಹಿರಿಯರಿಗೆ ಅದನ್ನು ತಿಳಿಸಲು ನಿಮಗೆ ಮುಜುಗರವಾಗಬಹುದು, ಕೆಲವೊಮ್ಮೆ ಅದರಿಂದ ಅಹಿತಕರ ಪರಿಣಾಮಗಳೂ ಆಗಬಹುದು. ಆದರೆ ನೀವು ಧೈರ್ಯಮಾಡಿ ಸಹಾಯ ಕೇಳುವಲ್ಲಿ ಯಾವುದೇ ಹೆಚ್ಚಿನ ಅಪಾಯದಿಂದ ತಪ್ಪಿಸಿಕೊಳ್ಳುವಿರಿ ಹಾಗೂ ಶುದ್ಧ ಮನಸ್ಸಾಕ್ಷಿಯನ್ನು ಪುನಃ ಪಡೆದುಕೊಂಡು ನೆಮ್ಮದಿಯನ್ನು ಅನುಭವಿಸುವಿರಿ.—ಕೀರ್ತ. 32:1-5.

ಯೆಹೋವನ ಮನಸ್ಸನ್ನು ಸಂತೋಷಪಡಿಸಿರಿ

19, 20. ನೀವು ಹೇಗಿರುವಂತೆ ಯೆಹೋವನು ಬಯಸುತ್ತಾನೆ? ಆದರೆ ನೀವೇನು ಮಾಡಬೇಕು?

19 ಯೆಹೋವನು ‘ಸಂತೋಷದ ದೇವರು.’ ನೀವು ಕೂಡ ಸಂತೋಷದಿಂದ ಇರಬೇಕೆಂಬುದೇ ಆತನ ಇಚ್ಛೆ. (1 ತಿಮೊ. 1:11) ಆತನಿಗೆ ನಿಮ್ಮಲ್ಲಿ ತುಂಬ ಆಸಕ್ತಿಯಿದೆ. ಒಳ್ಳೇದನ್ನು ಮಾಡಲು ನೀವು ಪಡುವ ಶ್ರಮವನ್ನು ಬೇರೆ ಯಾರೂ ನೋಡದಿದ್ದರೂ ಯೆಹೋವನು ನೋಡುತ್ತಾನೆ. ಯಾವುದೂ ಆತನ ದೃಷ್ಟಿಗೆ ಮರೆಯಾಗಿಲ್ಲ. ಆತನು ನಿಮ್ಮನ್ನು ನೋಡುತ್ತಿರುವುದು ನಿಮ್ಮ ತಪ್ಪನ್ನು ಹುಡುಕಲಿಕ್ಕಲ್ಲ, ಒಳ್ಳೇದನ್ನು ಮಾಡಲು ನೀವು ಪ್ರಯತ್ನಿಸುವಾಗ ನಿಮ್ಮನ್ನು ಬೆಂಬಲಿಸಲಿಕ್ಕಾಗಿಯೇ. ದೇವರು “ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”—2 ಪೂರ್ವ. 16:9.

20 ಆದುದರಿಂದ ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಲು ನಿಮ್ಮನ್ನು ಬಿಟ್ಟುಕೊಡಿ ಮತ್ತು ಅದರ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಿ. ಆಗ ಮುಳ್ಳುಗಳಂತಿರುವ ಸಮಸ್ಯೆಗಳನ್ನು ಜಯಿಸಲು ಹಾಗೂ ಜೀವನದ ಕಷ್ಟಕರ ಆಯ್ಕೆಗಳನ್ನು ಮಾಡಲು ಬೇಕಾದ ತಿಳಿವಳಿಕೆ ಹಾಗೂ ವಿವೇಕವನ್ನು ಪಡೆಯುವಿರಿ. ಹೀಗೆ ಮಾಡುವ ಮೂಲಕ ನೀವು ನಿಮ್ಮ ಹೆತ್ತವರನ್ನು ಮತ್ತು ಯೆಹೋವನನ್ನು ಸಂತೋಷಪಡಿಸುತ್ತೀರಿ, ಮಾತ್ರವಲ್ಲ ಸ್ವತಃ ನೀವು ಜೀವನದಲ್ಲಿ ನಿಜ ಸಂತೋಷವನ್ನು ಅನುಭವಿಸುವಿರಿ.

[ಪಾದಟಿಪ್ಪಣಿ]

^ ಪ್ಯಾರ. 4 ಹೆಸರುಗಳನ್ನು ಬದಲಾಯಿಸಲಾಗಿದೆ.

ನಿಮ್ಮ ಉತ್ತರವೇನು?

• ಹೆತ್ತವರ ತಿದ್ದುಪಾಟು ಹಾಗೂ ನಿಯಮಗಳನ್ನು ಸ್ವೀಕರಿಸಿ ಅದರಿಂದ ಪ್ರಯೋಜನಪಡೆಯಲು ಯೌವನಸ್ಥರು ಏನು ಮಾಡಬೇಕು?

• ಹಣದ ವಿಷಯದಲ್ಲಿ ಯೋಗ್ಯ ನೋಟವಿರುವುದು ಪ್ರಾಮುಖ್ಯವೇಕೆ?

• ಒಬ್ಬರೇ ಇರುವಾಗಲೂ ನೀವು ಹೇಗೆ ಯೆಹೋವನಿಗೆ ನಿಷ್ಠರಾಗಿ ಉಳಿಯಬಲ್ಲಿರಿ?

[ಅಧ್ಯಯನ ಪ್ರಶ್ನೆಗಳು]

[ಪುಟ 6ರಲ್ಲಿರುವ ಚಿತ್ರ]

ಒಬ್ಬರೇ ಇರುವಾಗ ನೀವು ದೇವರಿಗೆ ನಿಷ್ಠರಾಗಿ ಉಳಿಯುವಿರೋ?