ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಆಶೀರ್ವಾದಗಳಿಗೆ ನೀವು ಕೃತಜ್ಞರೊ?

ದೇವರ ಆಶೀರ್ವಾದಗಳಿಗೆ ನೀವು ಕೃತಜ್ಞರೊ?

ದೇವರ ಆಶೀರ್ವಾದಗಳಿಗೆ ನೀವು ಕೃತಜ್ಞರೊ?

ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಅದ್ಭುತಕರವಾಗಿ ಬಿಡುಗಡೆಹೊಂದಿದಾಗ ಯೆಹೋವನನ್ನು ಆರಾಧಿಸಲು ಸ್ವತಂತ್ರರಾದದ್ದಕ್ಕಾಗಿ ಮೊದಮೊದಲು ಆನಂದತುಂದಿಲರಾದರು. (ವಿಮೋ. 14:29–15:1, 20, 21) ಆಮೇಲೆ ಸ್ವಲ್ಪದರಲ್ಲೇ ಅವರ ಮನೋಭಾವ ಬದಲಾಯಿತು. ತಮಗೆ ಅದಿಲ್ಲ ಇದಿಲ್ಲ ಎಂದು ದೂರುತ್ತಾ ಗುಣುಗುಟ್ಟಲು ತೊಡಗಿದರು. ಏಕೆ? ಏಕೆಂದರೆ ಯೆಹೋವನು ಅವರಿಗಾಗಿ ಮಾಡಿದ ಎಲ್ಲ ವಿಷಯಗಳನ್ನು ಮರೆತು ಅರಣ್ಯದಲ್ಲಿ ಎದುರಾದ ಕಷ್ಟಗಳ ಮೇಲೆಯೇ ಮನಸ್ಸಿಟ್ಟರು. ಅವರು ಮೋಶೆಗೆ ಅಂದದ್ದು: ‘ನೀವು ನಮ್ಮನ್ನು ಈ ಮರಳುಕಾಡಿನಲ್ಲಿ ಕೊಲ್ಲಬೇಕೆಂದು ಐಗುಪ್ತ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವೂ ಇಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು [ಮನ್ನ] ತಿಂದು ತಿಂದು ನಮಗೆ ಬೇಸರವಾಯಿತು.’—ಅರ. 21:5.

ಶತಮಾನಗಳ ನಂತರ ಪುರಾತನ ಇಸ್ರಾಯೇಲಿನ ರಾಜ ದಾವೀದನು ಹಾಡಿದ್ದು: “ನಾನಂತೂ ನಿನ್ನ ಕೃಪೆಯಲ್ಲಿ ಭರವಸವಿಟ್ಟಿದ್ದೇನೆ; ನೀನು ನನ್ನನ್ನು ರಕ್ಷಿಸಿದ್ದರಿಂದ ನನ್ನ ಹೃದಯವು ಹರ್ಷಗೊಳ್ಳುವದು. ಯೆಹೋವನ ಮಹೋಪಕಾರಕ್ಕಾಗಿ ಆತನಿಗೆ ಹಾಡುವೆನು.” (ಕೀರ್ತ. 13:5, 6) ಯೆಹೋವನ ಕೃಪಾಕೃತ್ಯಗಳನ್ನು ಅಂದರೆ ಆತನು ತನಗೆ ತೋರಿಸಿದ ಪ್ರೀತಿಪೂರ್ವಕ ದಯೆಯನ್ನು ದಾವೀದನು ಮರೆಯಲಿಲ್ಲ. ಬದಲಾಗಿ ಅದರ ಕುರಿತು ಧ್ಯಾನಿಸಲು ಕ್ರಮವಾಗಿ ಸಮಯ ತಕ್ಕೊಂಡನು. (ಕೀರ್ತ. 103:2) ಯೆಹೋವನು ನಮಗೂ ಮಹೋಪಕಾರಗಳನ್ನು ಮಾಡಿದ್ದಾನೆ. ಆತನು ನಮಗಾಗಿ ಮಾಡಿದ ಆ ವಿಷಯಗಳನ್ನು ಹಗುರವಾಗಿ ತಕ್ಕೊಳ್ಳದಿರುವುದು ವಿವೇಕಯುತ. ಆದ್ದರಿಂದ ನಾವಿಂದು ಆನಂದಿಸುತ್ತಿರುವ ದೇವರ ಆಶೀರ್ವಾದಗಳಲ್ಲಿ ಕೆಲವನ್ನು ಪರಿಗಣಿಸೋಣ.

‘ಯೆಹೋವನು ಆಪ್ತಮಿತ್ರನು’

ಕೀರ್ತನೆಗಾರನು ಹಾಡಿದ್ದು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು.” (ಕೀರ್ತ. 25:14) ಯೆಹೋವನೊಂದಿಗೆ ವೈಯಕ್ತಿಕ ಆಪ್ತ ಮಿತ್ರತ್ವವನ್ನು ಹೊಂದಿರುವುದು ಅಪರಿಪೂರ್ಣ ಮಾನವರಾದ ನಮಗೆ ಎಂಥ ಭಾಗ್ಯ! ಆದರೆ ನಾವು ನಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲೇ ಮುಳುಗಿದ್ದು ಪ್ರಾರ್ಥನೆ ಮಾಡುವುದಕ್ಕೆ ಸ್ವಲ್ಪವೇ ಸಮಯ ಕೊಡುವುದಾದರೆ ಆಗೇನು? ಯೆಹೋವನೊಂದಿಗಿನ ನಮ್ಮ ಸುಸಂಬಂಧಕ್ಕೆ ಆಗ ಏನಾಗುವುದೆಂದು ಯೋಚಿಸಿ. ನಾವು ಆತನಲ್ಲಿ ಭರವಸೆಯಿಡುವಂತೆ ಮತ್ತು ಪ್ರಾರ್ಥನೆಯಲ್ಲಿ ಹೃದಯವನ್ನು ತೋಡಿಕೊಳ್ಳುವಂತೆ ನಮ್ಮ ಮಿತ್ರನಾದ ಯೆಹೋವನು ಅಪೇಕ್ಷಿಸುತ್ತಾನೆ. ನಮಗಿರುವ ಭಯ, ಅಪೇಕ್ಷೆ, ಚಿಂತೆ, ಆತಂಕಗಳನ್ನು ತನಗೆ ಮನಬಿಚ್ಚಿ ಹೇಳಬೇಕೆಂಬುದೇ ಆತನ ಇಚ್ಛೆ. (ಜ್ಞಾನೋ. 3:5, 6; ಫಿಲಿ. 4:6, 7) ಹೀಗಿರಲಾಗಿ ನಮ್ಮ ಪ್ರಾರ್ಥನೆಗಳ ಗುಣಮಟ್ಟಕ್ಕೆ ನಾವು ಹೆಚ್ಚು ಗಮನಕೊಡಬೇಕಲ್ಲವೇ?

ಯುವ ಸಾಕ್ಷಿಯಾಗಿರುವ ಪೌಲ್‌ ತನ್ನ ಪ್ರಾರ್ಥನೆಗಳ ಕುರಿತು ಆಲೋಚಿಸಿದಾಗ ಅವುಗಳ ಗುಣಮಟ್ಟವನ್ನು ಉತ್ತಮಗೊಳಿಸುವ ಅಗತ್ಯವಿದೆಯೆಂದು ಮನಗಂಡನು. * ಅವನು ಹೇಳಿದ್ದು: “ಯೆಹೋವನಿಗೆ ಪ್ರಾರ್ಥಿಸುವಾಗ ನಾನು ಪದೇ ಪದೇ ಒಂದೇ ರೀತಿಯ ಅಭಿವ್ಯಕ್ತಿಗಳನ್ನು ಬಳಸುವುದು ನನಗೆ ರೂಢಿಯಾಗಿಬಿಟ್ಟಿತ್ತು.” ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ನಲ್ಲಿ ಆ ವಿಷಯದ ಕುರಿತು ಪೌಲ್‌ ಸಂಶೋಧನೆ ಮಾಡಿದಾಗ ಬೈಬಲಿನಲ್ಲಿ ಸುಮಾರು 180 ಪ್ರಾರ್ಥನೆಗಳು ದಾಖಲಾಗಿವೆಯೆಂದು ಅವನಿಗೆ ತಿಳಿದುಬಂತು. ಅವುಗಳಲ್ಲಿ ಯೆಹೋವನ ಪ್ರಾಚೀನ ಸೇವಕರು ತಮ್ಮ ಹೃದಯಾಂತರಾಳದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು. ಪೌಲ್‌ ಹೇಳಿದ್ದು: “ಬೈಬಲಿನಲ್ಲಿರುವ ಆ ಮಾದರಿಗಳನ್ನು ಧ್ಯಾನಿಸಿದ ಮೂಲಕ ನಾನು ಪ್ರಾರ್ಥನೆ ಮಾಡುವಾಗ ವಿಷಯಗಳನ್ನು ನಿರ್ದಿಷ್ಟವಾಗಿ ಹೇಳಲು ಕಲಿತೆ. ಯೆಹೋವನೊಂದಿಗೆ ಹೃದಯಬಿಚ್ಚಿ ಮಾತಾಡಲು ಇದು ನನಗೆ ಸಹಾಯಮಾಡಿತು. ಈಗ ಪ್ರಾರ್ಥನೆಯಲ್ಲಿ ಯೆಹೋವನಿಗೆ ಆಪ್ತನಾಗುವುದು ನಿಜವಾಗಿಯೂ ಸಂತೋಷದ ಅನುಭವ.”

ತಕ್ಕ ಸಮಯಕ್ಕೆ ಆಹಾರ

ಯೆಹೋವನು ದಯಪಾಲಿಸಿರುವ ಇನ್ನೊಂದು ಆಶೀರ್ವಾದವೆಂದರೆ ಬೈಬಲಿನ ಅನೇಕಾನೇಕ ಸತ್ಯಗಳನ್ನು ನಮಗೆ ತಿಳಿಸಿರುವುದೇ. ಸಮೃದ್ಧವಾದ ಹೇರಳ ಆಧ್ಯಾತ್ಮಿಕ ಆಹಾರವನ್ನು ನಾವು ಉಂಡು ಉಲ್ಲಾಸಿಸುವಾಗ ‘ಹೃದಯಾನಂದದಿಂದ ಹರ್ಷಧ್ವನಿಗೈಯಲು’ ನಮಗೆ ಅನೇಕ ಕಾರಣವಿದೆ. (ಯೆಶಾ. 65:13, 14) ಆದರೂ ಸತ್ಯಕ್ಕಾಗಿರುವ ನಮ್ಮ ಉತ್ಸಾಹವನ್ನು ಕೆಟ್ಟ ಪ್ರಭಾವಗಳು ಕೆಡಿಸದಂತೆ ನಾವು ಎಚ್ಚರವಹಿಸಬೇಕು. ಉದಾಹರಣೆಗೆ, ಧರ್ಮಭ್ರಷ್ಟ ಅಪಪ್ರಚಾರಕ್ಕೆ ಗಮನಕೊಡುವುದು ನಮ್ಮ ಯೋಚನೆಯನ್ನು ಮೊಬ್ಬುಗೊಳಿಸಬಲ್ಲದು. ಮಾತ್ರವಲ್ಲ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿನ’ ಮೂಲಕ ಯೆಹೋವನು “ತಕ್ಕ ಸಮಯಕ್ಕೆ” ಒದಗಿಸುವ ‘ಆಹಾರಕ್ಕೆ’ ಕೃತಘ್ನರನ್ನಾಗಿಯೂ ಮಾಡಬಲ್ಲದು.—ಮತ್ತಾ. 24:45-47.

ವರ್ಷಗಳಿಂದ ಯೆಹೋವನ ಸೇವೆಮಾಡಿದ್ದ ಆ್ಯಂಡ್ರೆ ಎಂಬವನಿಗೆ ಧರ್ಮಭ್ರಷ್ಟ ಯೋಚನೆಯಿಂದ ಅಡ್ಡದಾರಿಗೆ ಸೆಳೆಯಲ್ಪಟ್ಟ ಕಹಿ ಅನುಭವವಾಯಿತು. ಧರ್ಮಭ್ರಷ್ಟ ವೆಬ್‌ಸೈಟ್‌ನಲ್ಲಿ ಸ್ವಲ್ಪ ಕಣ್ಣಾಡಿಸುವುದರಿಂದ ಏನೂ ಅಪಾಯವಾಗದೆಂದು ಅವನು ನೆನಸಿದನು. ಅವನು ನೆನಪಿಸಿದ್ದು: “ಧರ್ಮಭ್ರಷ್ಟರು ಸತ್ಯವೆಂದನ್ನುವ ಅಸತ್ಯಕ್ಕೆ ನಾನು ಆರಂಭದಲ್ಲಿ ಆಕರ್ಷಿತನಾದೆ. ಅವರು ಹೇಳಿದ್ದನ್ನು ನಾನು ಎಷ್ಟು ಹೆಚ್ಚು ಪರೀಕ್ಷಿಸಿದೆನೋ ಅಷ್ಟು ಹೆಚ್ಚಾಗಿ ಯೆಹೋವನ ಸಂಘಟನೆಯನ್ನು ಬಿಟ್ಟುಬಿಡುವುದೇ ಸರಿಯೆಂದು ತೋಚಿತು. ಆದರೆ ಯೆಹೋವನ ಸಾಕ್ಷಿಗಳ ವಿರುದ್ಧ ಧರ್ಮಭ್ರಷ್ಟರ ಕೆಲವು ವಾದಗಳ ಬಗ್ಗೆ ನಾನು ಸಂಶೋಧನೆ ಮಾಡಿದಾಗ ಆ ಸುಳ್ಳುಬೋಧಕರು ಎಷ್ಟು ಕುತಂತ್ರಿಗಳೆಂದು ನನಗೆ ತಿಳಿದುಬಂತು. ಯಾವುದೇ ಮಾಹಿತಿಯ ಪೂರ್ವಾಪರವನ್ನು ಪರಿಗಣಿಸದೆ ಅಪಾರ್ಥಕೊಟ್ಟು ವಿವರಿಸುವುದೇ ನಮ್ಮ ವಿರುದ್ಧವಾಗಿ ಅವರಿಗಿರುವ ಬಲವಾದ ಪುರಾವೆ. ಆದ್ದರಿಂದ ನಾನು ನಮ್ಮ ಪ್ರಕಾಶನಗಳನ್ನು ಪುನಃ ಓದಲು ನಿಶ್ಚಯಿಸಿ, ಕೂಟಗಳಿಗೆ ಹಾಜರಾಗತೊಡಗಿದೆ. ಬೇಗನೆ ನನಗೆ ನಾನೆಷ್ಟು ಕಳಕೊಂಡಿದ್ದೇನೆಂಬ ಮನವರಿಕೆಯಾಯಿತು.” ಸಂತೋಷಕರವಾಗಿ ಆ್ಯಂಡ್ರೆ ಪುನಃ ಸಭೆಗೆ ಹಿಂತಿರುಗಿ ಬಂದನು.

“ಸಹೋದರರ ಇಡೀ ಬಳಗ”

ಪ್ರೀತಿಪರ ಐಕ್ಯತೆಯುಳ್ಳ ನಮ್ಮ ಸಹೋದರತ್ವವು ಯೆಹೋವನ ಇನ್ನೊಂದು ಆಶೀರ್ವಾದ. (ಕೀರ್ತ. 133:1) ಸಕಾರಣದಿಂದಲೇ ಅಪೊಸ್ತಲ ಪೇತ್ರನು, “ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ” ಎಂದು ಬರೆದನು. (1 ಪೇತ್ರ 2:17) ಕ್ರೈಸ್ತ ಸಹೋದರತ್ವದ ಭಾಗವಾಗಿರುವ ಮೂಲಕ ಒಂದೇ ನಂಬಿಕೆಯಲ್ಲಿರುವ ಆಧ್ಯಾತ್ಮಿಕ ತಂದೆ, ತಾಯಿ, ಸಹೋದರ ಸಹೋದರಿಯರ ಸೌಹಾರ್ದತೆಯ ಬೆಂಬಲದಲ್ಲಿ ನಾವು ಆನಂದಿಸುತ್ತೇವೆ.—ಮಾರ್ಕ 10:29, 30.

ಆದರೂ ಕೆಲವೊಮ್ಮೆ ವಿವಿಧ ಸನ್ನಿವೇಶಗಳು ಸಹೋದರ ಸಹೋದರಿಯರೊಂದಿಗಿನ ನಮ್ಮ ಸಂಬಂಧದಲ್ಲಿ ಬಿರುಕನ್ನು ಉಂಟುಮಾಡಬಹುದು. ಉದಾಹರಣೆಗೆ, ಬೇರೆಯವರ ಅಪರಿಪೂರ್ಣತೆಯಿಂದಾಗಿ ಸಿಟ್ಟಿಗೆದ್ದು ಅವರ ಕಡೆಗೆ ಟೀಕಾತ್ಮಕ ಮನೋಭಾವವನ್ನು ಹೊಂದುವುದು ಅತಿ ಸುಲಭ. ಇದು ಸಂಭವಿಸಿದಲ್ಲಿ, ಯೆಹೋವನು ತನ್ನ ಸೇವಕರನ್ನು ಅವರ ಅಪರಿಪೂರ್ಣತೆಗಳ ಹೊರತೂ ಪ್ರೀತಿಸುತ್ತಾನೆ ಎಂಬುದನ್ನು ನೆನಪಿಸುವುದು ಸಹಾಯಕರವಲ್ಲವೆ? ಅಷ್ಟಲ್ಲದೆ, “ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿದರೆ ನಮ್ಮನ್ನು ನಾವೇ ಮೋಸಪಡಿಸಿಕೊಳ್ಳುತ್ತೇವೆ, ಮತ್ತು ಸತ್ಯವೆಂಬದು ನಮ್ಮಲ್ಲಿಲ್ಲ.” (1 ಯೋಹಾ. 1:8) ಆದುದರಿಂದ ‘ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಲು’ ನಾವು ಪ್ರಯಾಸಪಡಬೇಕಲ್ಲವೆ?—ಕೊಲೊ. 3:13.

ಆ್ಯನ್‌ ಎಂಬ ಯೌವನಸ್ಥೆಯು ಕ್ರೈಸ್ತ ಸಹವಾಸದ ಮೌಲ್ಯವನ್ನು ಕಹಿ ಅನುಭವದಿಂದ ಕಲಿತಳು. ಯೇಸುವಿನ ದೃಷ್ಟಾಂತದ ಪೋಲಿಹೋದ ಮಗನಂತೆಯೇ ಅವಳು ಕ್ರೈಸ್ತ ಸಭೆಯಿಂದ ದೂರ ಸರಿದಳು. ಸಮಯಾನಂತರ ಅವಳಿಗೆ ತನ್ನ ತಪ್ಪಿನ ಅರಿವಾಗಿ ಸತ್ಯಕ್ಕೆ ಹಿಂದಿರುಗಿದಳು. (ಲೂಕ 15:11-24) ಈ ಅನುಭವದಿಂದ ಆ್ಯನ್‌ ಕಲಿತದ್ದೇನು? ಅವಳು ಹೇಳುವುದು: “ನಾನೀಗ ಯೆಹೋವನ ಸಂಘಟನೆಗೆ ಹಿಂತಿರುಗಿ ಬಂದಿದ್ದೇನೆ. ನನ್ನ ಎಲ್ಲ ಸಹೋದರ ಸಹೋದರಿಯರು ತಮ್ಮ ಅಪರಿಪೂರ್ಣತೆಯ ಹೊರತೂ ಈಗ ನನಗೆ ಅಮೂಲ್ಯರು. ಹಿಂದೆ ನಾನು ಅವರನ್ನು ಮಾತುಮಾತಿಗೆ ಟೀಕಿಸುತ್ತಿದ್ದೆ. ಆದರೆ ಈಗ ಜೊತೆವಿಶ್ವಾಸಿಗಳೊಂದಿಗೆ ನಾನು ಆನಂದಿಸುವ ಆಶೀರ್ವಾದಗಳನ್ನು ನನ್ನಿಂದ ಯಾವುದೂ ಕಸಿದುಕೊಳ್ಳದಂತೆ ಮಾಡುವುದೇ ನನ್ನ ದೃಢಸಂಕಲ್ಪ. ನಮ್ಮ ಆಧ್ಯಾತ್ಮಿಕ ಪರದೈಸವನ್ನು ತೊರೆದುಬಿಡಲು ಹೊರಗೆ ಲೋಕದಲ್ಲಿರುವ ಯಾವ ಆಕರ್ಷಣೆಗಳೂ ಅರ್ಹವಲ್ಲ.”

ದೇವರ ಆಶೀರ್ವಾದಗಳಿಗೆ ಸದಾ ಕೃತಜ್ಞರಾಗಿರ್ರಿ

ಸಕಲ ಮಾನವಕುಲದ ಸಮಸ್ಯೆಗಳಿಗೆ ಪರಿಹಾರವಾಗಿರುವ ದೇವರ ರಾಜ್ಯದಲ್ಲಿ ನಮಗಿರುವ ನಿರೀಕ್ಷೆಯು ಬೆಲೆಕಟ್ಟಲಾಗದ ನಿಕ್ಷೇಪ. ಈ ನಿರೀಕ್ಷೆಯನ್ನು ನಾವು ಮೊದಲು ಪಡಕೊಂಡಾಗ ನಮ್ಮ ಹೃದಯವು ಎಷ್ಟು ಕೃತಜ್ಞತೆಯಿಂದ ಹಿರಿಹಿರಿ ಹಿಗ್ಗಿತು! ಯೇಸುವಿನ ದೃಷ್ಟಾಂತದಲ್ಲಿರುವ ಆ ವ್ಯಾಪಾರಿಯಂತೆಯೇ ನಮಗನಿಸಿತು! ಅವನು “ಬಹು ಬೆಲೆಯುಳ್ಳ ಒಂದು ಮುತ್ತನ್ನು” ಖರೀದಿಸಲಿಕ್ಕಾಗಿ ‘ತನ್ನ ಬಳಿಯಿರುವುದನ್ನೆಲ್ಲ ಮಾರಿಬಿಟ್ಟನು.’ (ಮತ್ತಾ. 13:45, 46) ವ್ಯಾಪಾರಿಯು ಆ ಮುತ್ತಿಗಾಗಿ ತನಗಿದ್ದ ಗಣ್ಯತೆಯನ್ನು ಎಂದಾದರೂ ಕಳಕೊಂಡನೆಂದು ಯೇಸು ಹೇಳಲಿಲ್ಲ. ತದ್ರೀತಿಯಲ್ಲಿ ನಮ್ಮ ಆಶ್ಚರ್ಯಕರ ನಿರೀಕ್ಷೆಗಾಗಿ ನಮಗಿರುವ ಕೃತಜ್ಞತೆಯನ್ನು ನಾವೆಂದೂ ಕಳಕೊಳ್ಳದಿರೋಣ.—1 ಥೆಸ. 5:8; ಇಬ್ರಿ. 6:19.

60ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸೇವೆ ಮಾಡುತ್ತಿರುವ ಜೀನ್‌ ಎಂಬಾಕೆಯ ಉದಾಹರಣೆಯನ್ನು ಗಮನಿಸಿರಿ. ಅವಳನ್ನುವುದು: “ದೇವರ ರಾಜ್ಯಕ್ಕೆ ಆದ್ಯತೆ ಕೊಡಲು ನನಗೆ ನೆರವಾದದ್ದು ಯಾವುದೆಂದರೆ ಅದರ ಕುರಿತು ಜನರೊಂದಿಗೆ ಮಾತಾಡುವುದೇ. ಆ ರಾಜ್ಯದ ಕುರಿತು ಕಲಿಯುವಾಗ ಅವರ ಕಣ್ಗಳು ತಿಳುವಳಿಕೆಯಿಂದ ಹೊಳೆಯುತ್ತವೆ. ಇದನ್ನು ಕಾಣುವಾಗ ನನಗೆಷ್ಟು ಸಂತೋಷ! ಆ ರಾಜ್ಯವು ಬೈಬಲ್‌ ವಿದ್ಯಾರ್ಥಿಯ ಜೀವನದಲ್ಲಿ ಮಾಡಶಕ್ತವಾದ ಬದಲಾವಣೆಗಳನ್ನು ಕಾಣುವಾಗ ಇತರರಿಗೆ ಕೊಡಲು ನನ್ನಲ್ಲಿ ಎಷ್ಟು ಆಶ್ಚರ್ಯಕರ ಸತ್ಯಗಳಿವೆ ಎಂಬ ನೆನಪನ್ನು ಹುಟ್ಟಿಸುತ್ತದೆ!”

ನಾವು ಆನಂದಿಸುವ ಅನೇಕಾನೇಕ ಆಧ್ಯಾತ್ಮಿಕ ಆಶೀರ್ವಾದಗಳಿಗಾಗಿ ಕೃತಜ್ಞರಾಗಿರಲು ಸಕಾರಣಗಳಿವೆ. ವಿರೋಧ, ಅಸೌಖ್ಯ, ವೃದ್ಧಾಪ್ಯ, ಖಿನ್ನತೆ, ವಿಯೋಗ, ಆರ್ಥಿಕ ಮುಗ್ಗಟ್ಟು ಮುಂತಾದ ಕಷ್ಟಸಂಕಟಗಳನ್ನು ನಾವು ಎದುರಿಸಿದರೂ ಅವೆಲ್ಲವೂ ಕೇವಲ ತಾತ್ಕಾಲಿಕ ಎಂದು ನಮಗೆ ಗೊತ್ತು. ದೇವರ ರಾಜ್ಯದ ಕೆಳಗೆ ನಮ್ಮ ಆಧ್ಯಾತ್ಮಿಕ ಆಶೀರ್ವಾದಗಳಿಗೆ ಶಾರೀರಿಕ ಆಶೀರ್ವಾದಗಳೂ ಕೂಡಿಸಲ್ಪಡುವವು. ಇಂದು ನಾವು ತಾಳಿಕೊಳ್ಳುವ ಯಾವುದೇ ಕಷ್ಟಾನುಭವವು ಹೊಸ ಲೋಕದಲ್ಲಿ ಇನ್ನೆಂದಿಗೂ ಇರವು.—ಪ್ರಕ. 21:4.

ಆ ತನಕ ನಮಗಿರುವ ಆಧ್ಯಾತ್ಮಿಕ ಆಶೀರ್ವಾದಗಳಿಗಾಗಿ ನಾವು ಕೃತಜ್ಞರಾಗಿರೋಣ. ಕೀರ್ತನೆಗಾರನಂತೆ ಗಣ್ಯತೆಯಿಂದ ಹೀಗೆ ಹಾಡೋಣ: “ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು? ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ; ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.”—ಕೀರ್ತ. 40:5.

[ಪಾದಟಿಪ್ಪಣಿ]

^ ಪ್ಯಾರ. 6 ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 18ರಲ್ಲಿರುವ ಚಿತ್ರ]

ಸಂಕಷ್ಟದ ಸಮಯದಲ್ಲಿ ನಮಗೆ ಸಿಗುವ ಆಧ್ಯಾತ್ಮಿಕ ಬೆಂಬಲವು ಆಶೀರ್ವಾದವೇ ಸರಿ