ದೇವರ ಮಾರ್ಗದರ್ಶನದ ಪುರಾವೆಯನ್ನು ನೀವು ಗ್ರಹಿಸುತ್ತೀರೋ?
ದೇವರ ಮಾರ್ಗದರ್ಶನದ ಪುರಾವೆಯನ್ನು ನೀವು ಗ್ರಹಿಸುತ್ತೀರೋ?
ಇಸ್ರಾಯೇಲ್ಯರಾಗಲಿ ಈಜಿಪ್ಟ್ನವರಾಗಲಿ ಹಿಂದೆಂದೂ ಅಂಥದ್ದೊಂದನ್ನು ನೋಡಿರಲಿಲ್ಲ. ಇಸ್ರಾಯೇಲ್ಯರು ಈಜಿಪ್ಟ್ನಿಂದ ಬಿಡುಗಡೆ ಹೊಂದಿ ಬರುತ್ತಿರುವಾಗ ಒಂದು ಮೇಘಸ್ತಂಭವು ಅವರಿದ್ದ ಸ್ಥಳವನ್ನು ಆವರಿಸಿತು. ಅದು ಯಾವಾಗಲೂ ಅವರೊಂದಿಗಿರುತ್ತಿತ್ತು. ರಾತ್ರಿ ವೇಳೆಯಲ್ಲಿ ಅದೇ ಮೇಘಸ್ತಂಭವು ಅಗ್ನಿಸ್ತಂಭವಾಗಿ ಮಾರ್ಪಡುತ್ತಿತ್ತು. ಎಷ್ಟೊಂದು ಭಯವಿಸ್ಮಯಕರ! ಆದರೆ ಅದು ಎಲ್ಲಿಂದ ಬಂತು? ಏಕೆ ಬಂತು? ಅದಾಗಿ ಸುಮಾರು 3,500 ವರ್ಷಗಳೇ ಸಂದಿವೆಯಾದರೂ ಇಸ್ರಾಯೇಲ್ಯರು ಆಗ ‘ಅಗ್ನಿಮೇಘಸ್ತಂಭವನ್ನು’ ವೀಕ್ಷಿಸುತ್ತಿದ್ದ ವಿಧದಿಂದ ಇಂದು ನಾವೇನು ಕಲಿಯಬಲ್ಲೆವು?—ವಿಮೋ. 14:24.
ಆ ಸ್ತಂಭದ ಮೂಲ ಹಾಗೂ ಉದ್ದೇಶವನ್ನು ಪ್ರಕಟಪಡಿಸುತ್ತಾ ದೇವರ ವಾಕ್ಯ ಹೀಗನ್ನುತ್ತದೆ: “ಯೆಹೋವನು ಹಗಲುಹೊತ್ತಿನಲ್ಲಿ ದಾರಿತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿವೇಳೆಯಲ್ಲಿ ಬೆಳಕುಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಇದ್ದು ಅವರ ಮುಂಭಾಗದಲ್ಲಿ ಹೋದನು. ಈ ರೀತಿಯಲ್ಲಿ ಅವರು ಹಗಲಿರುಳು ಪ್ರಯಾಣಮಾಡಿದರು. ಹಗಲಲ್ಲಿ ಮೇಘಸ್ತಂಭವೂ ರಾತ್ರಿಯಲ್ಲಿ ಅಗ್ನಿಸ್ತಂಭವೂ ಜನರ ಮುಂದೆ ತಪ್ಪದೆ ಕಾಣಿಸಿದವು.” (ವಿಮೋ. 13:21, 22) ತನ್ನ ಜನರು ಈಜಿಪ್ಟ್ನಿಂದ ಹೊರಟಂದಿನಿಂದ ಅರಣ್ಯದಾದ್ಯಂತ ಅವರನ್ನು ಮಾರ್ಗದರ್ಶಿಸಲು ಯೆಹೋವ ದೇವರು ಅಗ್ನಿಮೇಘಸ್ತಂಭವನ್ನು ಉಪಯೋಗಿಸಿದನು. ಅವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಸದಾ ಸಿದ್ಧರಿದ್ದಲ್ಲಿ ಮಾತ್ರ ಆ ಸ್ತಂಭವನ್ನು ಹಿಂಬಾಲಿಸಲು ಆಗುತ್ತಿತ್ತು. ಈಜಿಪ್ಟ್ನವರು ಇಸ್ರಾಯೇಲ್ಯರನ್ನು ಬೆಂಬತ್ತಿ ಇನ್ನೇನು ಆಕ್ರಮಣ ಮಾಡಬೇಕೆನ್ನುವಷ್ಟರಲ್ಲಿ ಆ ಸ್ತಂಭವು ಈಜಿಪ್ಟ್ನವರ ಹಾಗೂ ಇಸ್ರಾಯೇಲ್ಯರ ನಡುವೆ ಬಂದು ನಿಂತು ಇಸ್ರಾಯೇಲ್ಯರನ್ನು ಸಂರಕ್ಷಿಸಿತು. (ವಿಮೋ. 14:19, 20) ಆ ಸ್ತಂಭವು ವಾಗ್ದತ್ತ ದೇಶಕ್ಕೆ ಹೋಗುವ ಹತ್ತಿರದ ಮಾರ್ಗವನ್ನು ತೋರಿಸದಿದ್ದರೂ ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಮುಟ್ಟಬೇಕಾದರೆ ಅದನ್ನು ಹಿಂಬಾಲಿಸಲೇಬೇಕಿತ್ತು.
ಆ ಸ್ತಂಭದ ಅಸ್ತಿತ್ವವು ಯೆಹೋವನು ತಮ್ಮೊಂದಿಗಿದ್ದಾನೆಂಬ ಆಶ್ವಾಸನೆಯನ್ನು ದೇವಜನರಿಗೆ ಕೊಟ್ಟಿತು. ಅದು ಯೆಹೋವನನ್ನು ಪ್ರತಿನಿಧಿಸುತ್ತಿತ್ತು. ಕೆಲವೊಮ್ಮೆ ಆತನು ಅದರಿಂದ ಮಾತಾಡಿದನು ಸಹ. (ಅರ. 14:14; ಕೀರ್ತ. 99:7) ಅಲ್ಲದೆ ಮೇಘವು, ಇಡೀ ಜನಾಂಗವನ್ನು ಮುನ್ನಡೆಸಲು ಯೆಹೋವನು ಮೋಶೆಯನ್ನು ನೇಮಿಸಿದ್ದಾನೆ ಎಂಬದನ್ನು ರುಜುಪಡಿಸಿತು. (ವಿಮೋ. 33:9) ಅದೇ ರೀತಿ ಮೇಘವು ಕೊನೆಯ ಬಾರಿ ಕಾಣಿಸಿಕೊಂಡ ಸಂದರ್ಭದಲ್ಲಿ, ಯೆಹೋವನು ಯೆಹೋಶುವನನ್ನು ಮೋಶೆಯ ಉತ್ತರಾಧಿಕಾರಿಯಾಗಿ ನೇಮಿಸಿದ್ದಾನೆಂಬದನ್ನು ದೃಢೀಕರಿಸಿತು. (ಧರ್ಮೋ. 31:14, 15) ಇಸ್ರಾಯೇಲ್ಯರು ಈಜಿಪ್ಟ್ನಿಂದ ಹೊರಬಂದ ಉದ್ದೇಶ ಸಫಲವಾಗಬೇಕಾದರೆ ಅವರು ದೇವರ ಮಾರ್ಗದರ್ಶನದ ಪುರಾವೆಯನ್ನು ಗ್ರಹಿಸಿ ಅದನ್ನು ಅನುಸರಿಸಬೇಕಿತ್ತು.
ಅವರು ಪುರಾವೆಯನ್ನು ಮರೆತರು
ಇಸ್ರಾಯೇಲ್ಯರು ಮೊದಲ ಬಾರಿ ಆ ಸ್ತಂಭವನ್ನು ನೋಡಿದಾಗ ಖಂಡಿತ ಭಯಚಕಿತರಾಗಿದ್ದಿರಬೇಕು. ವಿಷಾದಕರವಾಗಿ, ಸದಾ ಅವರ ಕಣ್ಣೆದುರೇ ಆ ಅದ್ಭುತವು ನಡೆಯುತ್ತಿದ್ದರೂ ಯೆಹೋವನ ಮೇಲೆ ಅವರಿಟ್ಟಿದ್ದ ಭರವಸೆ ದೀರ್ಘಸಮಯ ಉಳಿಯಲಿಲ್ಲ. ಅವರು ದೇವರ ಮಾರ್ಗದರ್ಶನವನ್ನು ಅನೇಕ ಬಾರಿ ಪ್ರಶ್ನಿಸಿದರು. ಈಜಿಪ್ಟ್ನ ಸೈನ್ಯ ಅವರನ್ನು ಬೆನ್ನಟ್ಟಿ ಬಂದಾಗ ಯೆಹೋವನ ಸಂರಕ್ಷಣಾ ಶಕ್ತಿಯಲ್ಲಿ ಅವರು ಕಿಂಚಿತ್ತೂ ಭರವಸೆಯಿಡಲಿಲ್ಲ. ಮಾತ್ರವಲ್ಲ, ತಮ್ಮನ್ನು ಸಾಯಿಸಲಿಕ್ಕಾಗಿಯೇ ಈಜಿಪ್ಟ್ನಿಂದ ಕರೆತಂದಿರುವುದಾಗಿ ದೇವರ ಸೇವಕನಾದ ಮೋಶೆಯ ಮೇಲೆ ದೂರುಹೊರಿಸಿದರು. (ವಿಮೋ. 14:10-12) ಕೆಂಪು ಸಮುದ್ರದಿಂದ ಪಾರಾದ ಬಳಿಕ ಅವರು ಆಹಾರವಿಲ್ಲವೆಂದು ಕುಡಿಯಲು ನೀರೂ ಇಲ್ಲವೆಂದು ಮೋಶೆ, ಆರೋನ ಹಾಗೂ ಯೆಹೋವನ ವಿರುದ್ಧ ಗುಣುಗುಟ್ಟಿದರು. (ವಿಮೋ. 15:22-24; 16:1-3; 17:1-3, 7) ಅದಾಗಿ ಕೆಲವು ವಾರಗಳ ನಂತರ ಚಿನ್ನದ ಬಸವನನ್ನು ಮಾಡುವಂತೆ ಆರೋನನನ್ನು ಒತ್ತಾಯಿಸಿದರು. ತುಸು ಯೋಚಿಸಿ! ಪಾಳೆಯದ ಒಂದು ಭಾಗದಲ್ಲಿ ಅವರು ಈಜಿಪ್ಟ್ನಿಂದ ತಮ್ಮನ್ನು ಕರಕೊಂಡುಬಂದಾತನ ಅತ್ಯದ್ಭುತ ಪುರಾವೆಯನ್ನು ಅಂದರೆ ಅಗ್ನಿಮೇಘಸ್ತಂಭವನ್ನು ಕಣ್ಣಾರೆ ನೋಡುತ್ತಿದ್ದರು. ಅದೇ ಜನರು ಇನ್ನೊಂದೆಡೆ ನಿರ್ಜೀವ ವಿಗ್ರಹಗಳನ್ನು ಆರಾಧಿಸುತ್ತಾ, “ಇಸ್ರಾಯೇಲ್ಯರೇ, ನೋಡಿರಿ; ಇದೇ ನಿಮ್ಮನ್ನು ಐಗುಪ್ತದೇಶದಿಂದ ಕರಕೊಂಡುಬಂದ ದೇವರು” ಎಂದು ಹೇಳುತ್ತಿದ್ದರು. ಎಂಥ ‘ಅಸಡ್ಡೆಯ,’ ಅಗೌರವದ ಕೃತ್ಯವಿದು!—ವಿಮೋ. 32:4; ನೆಹೆ. 9:18.
ಇಸ್ರಾಯೇಲ್ಯರ ದಂಗೆಕೋರ ಕೃತ್ಯಗಳು ಯೆಹೋವನ ಮಾರ್ಗದರ್ಶನದ ಕಡೆಗೆ ಅವರಿಗಿದ್ದ ತೀರ ಅಸಡ್ಡೆಯ ಮನೋಭಾವವನ್ನು ತೋರಿಸಿದವು. ಸಮಸ್ಯೆ ಅವರ ಶಾರೀರಿಕ ದೃಷ್ಟಿಯದ್ದಲ್ಲ ಬದಲಾಗಿ ಕೀರ್ತ. 78:40-42, 52-54; ನೆಹೆ. 9:19.
ಆಧ್ಯಾತ್ಮಿಕ ದೃಷ್ಟಿಯದ್ದಾಗಿತ್ತು. ಅವರು ಸ್ತಂಭವನ್ನು ನೋಡಿದರು ನಿಜ. ಆದರೆ ಅದರ ಮಹತ್ವವನ್ನು ಮಾನ್ಯಮಾಡಲಿಲ್ಲ. ಅವರು ತಮ್ಮ ಕ್ರಿಯೆಗಳ ಮೂಲಕ “ಇಸ್ರಾಯೇಲ್ಯರ ಸದಮಲಸ್ವಾಮಿಯನ್ನು ಕರಕರೆಗೊಳಿಸಿದರು.” ಹಾಗಿದ್ದರೂ ಯೆಹೋವನು ಕರುಣೆಯಿಂದ ಅವರು ವಾಗ್ದತ್ತ ದೇಶವನ್ನು ತಲಪುವ ವರೆಗೆ ಆ ಅಗ್ನಿಮೇಘಸ್ತಂಭದ ಮೂಲಕ ಮಾರ್ಗದರ್ಶಿಸಿದನು.—ಇಂದು ದೈವಿಕ ಮಾರ್ಗದರ್ಶನದ ಪುರಾವೆಯನ್ನು ಗ್ರಹಿಸಿರಿ
ಅದೇ ರೀತಿ ಆಧುನಿಕ ಕಾಲದಲ್ಲೂ ಯೆಹೋವನು ತನ್ನ ಜನರಿಗೆ ಸ್ಪಷ್ಟ ಮಾರ್ಗದರ್ಶನವನ್ನು ಸತತವಾಗಿ ಕೊಡುತ್ತಿದ್ದಾನೆ. ಇಸ್ರಾಯೇಲ್ಯರು ತಮ್ಮ ದಾರಿಯನ್ನು ತಾವೇ ಹುಡುಕಿಕೊಳ್ಳಲಿ ಎಂದು ಯೆಹೋವನು ಬಯಸಲಿಲ್ಲ. ಇಂದು ಸಹ ವಾಗ್ದತ್ತ ನೂತನ ಲೋಕಕ್ಕೆ ಹೋಗುವ ದಾರಿಯನ್ನು ಸ್ವತಃ ಹುಡುಕಿಕೊಳ್ಳುವಂತೆ ಆತನು ನಮಗೆ ಹೇಳಿಲ್ಲ. ಸಭೆಗೆ ನಾಯಕನಾಗಿ ಯೇಸು ಕ್ರಿಸ್ತನನ್ನು ನೇಮಿಸಿದ್ದಾನೆ. (ಮತ್ತಾ. 23:10; ಎಫೆ. 5:23) ಹಾಗೂ ಯೇಸು ನಂಬಿಗಸ್ತ ಆತ್ಮಾಭಿಷಿಕ್ತ ಕ್ರೈಸ್ತರಿರುವ ನಂಬಿಗಸ್ತ ಆಳಿಗೆ ಸ್ವಲ್ಪಮಟ್ಟಿಗಿನ ಅಧಿಕಾರವನ್ನು ಕೊಟ್ಟಿದ್ದಾನೆ. ಈ ಆಳು ವರ್ಗವು ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಕರನ್ನು ನೇಮಿಸಿದೆ.—ಮತ್ತಾ. 24:45-47; ತೀತ 1:5-9.
ಆ ನಂಬಿಗಸ್ತ ಆಳು ಅಥವಾ ಮನೆವಾರ್ತೆ ವರ್ಗದವರು ಯಾರೆಂದು ನಾವು ಖಚಿತವಾಗಿ ಹೇಗೆ ತಿಳಿಯಬಲ್ಲೆವು? ಅದರ ಬಗ್ಗೆ ಸ್ವತಃ ಯೇಸು ನೀಡಿರುವ ವರ್ಣನೆಯನ್ನು ಗಮನಿಸಿ: “ತಕ್ಕ ಸಮಯಕ್ಕೆ ತನ್ನ ಸೇವಕರ ಗುಂಪಿಗೆ ಅವರ ಪಾಲಿನ ಆಹಾರವನ್ನು ಅಳೆದುಕೊಡುತ್ತಾ ಇರಲಿಕ್ಕಾಗಿ ಯಜಮಾನನು ನೇಮಿಸುವ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಮನೆವಾರ್ತೆಯವನು ನಿಜವಾಗಿಯೂ ಯಾರು? ಯಜಮಾನನು ಬಂದಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಸಂತೋಷಿತನು!”—ಲೂಕ 12:42, 43.
ಹಾಗಾದರೆ ಮನೆವಾರ್ತೆ ವರ್ಗದವರು ‘ನಂಬಿಗಸ್ತರಾಗಿದ್ದಾರೆ’ ಅಂದರೆ ಅವರು ಯೆಹೋವನನ್ನು, ಯೇಸುವನ್ನು, ಬೈಬಲ್ ಸತ್ಯಗಳನ್ನು ಹಾಗೂ ದೇವಜನರನ್ನು ಎಂದಿಗೂ ತೊರೆಯುವುದಿಲ್ಲ ಅಥವಾ ಅವರಿಗೆ ದ್ರೋಹವೆಸಗುವುದಿಲ್ಲ. ‘ವಿವೇಚನೆಯುಳ್ಳವರಾಗಿರುವ’ ಈ ಮನೆವಾರ್ತೆ ವರ್ಗದವರು ‘ರಾಜ್ಯದ ಸುವಾರ್ತೆಯನ್ನು’ ಸಾರುವ ಹಾಗೂ “ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ” ಮಾಡುವ ಪ್ರಮುಖ ಕೆಲಸವನ್ನು ನಿರ್ದೇಶಿಸುವುದರಲ್ಲಿ ವಿವೇಚನಾಶಕ್ತಿಯನ್ನು ಉಪಯೋಗಿಸುತ್ತಾರೆ. (ಮತ್ತಾ. 24:14; 28:19, 20) ಮನೆವಾರ್ತೆ ವರ್ಗದವರು ವಿಧೇಯತೆಯಿಂದ “ತಕ್ಕ ಸಮಯಕ್ಕೆ” ಆರೋಗ್ಯಕರವಾದ ಹಾಗೂ ಪೌಷ್ಠಿಕವಾದ ಆಧ್ಯಾತ್ಮಿಕ ಆಹಾರವನ್ನು ಒದಗಿಸುತ್ತಾರೆ. ಅವರನ್ನು ಯೆಹೋವನು ಅಂಗೀಕರಿಸಿದ್ದಾನೆ ಎಂಬುದಕ್ಕೆ ಯಾವ ಪುರಾವೆಗಳಿವೆ? ಆತನು ಸತ್ಯಾರಾಧಕರ ಸಂಖ್ಯೆಯನ್ನು ಹೆಚ್ಚಿಸಿ ಆಶೀರ್ವದಿಸುತ್ತಿದ್ದಾನೆ, ಪ್ರಾಮುಖ್ಯ ನಿರ್ಣಯಗಳನ್ನು ಮಾಡಲು ಮಾರ್ಗದರ್ಶನವನ್ನು ಒದಗಿಸುತ್ತಿದ್ದಾನೆ, ಬೈಬಲ್ ಸತ್ಯಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತಿದ್ದಾನೆ, ವೈರಿಗಳ ಕೈಯಲ್ಲಿ ಸಂಪೂರ್ಣವಾಗಿ ನಾಶವಾಗದಂತೆ ಕಾಪಾಡುತ್ತಿದ್ದಾನೆ ಹಾಗೂ ಹೃದಮನಗಳಿಗೆ ಶಾಂತಿಯನ್ನು ನೀಡುತ್ತಿದ್ದಾನೆ. ಇವು ತಾನೇ ಯೆಹೋವನ ಅಂಗೀಕಾರವನ್ನು ಸೂಚಿಸುತ್ತವೆ.—ಯೆಶಾ. 54:17; ಫಿಲಿ. 4:7.
ದೇವರ ಮಾರ್ಗದರ್ಶನಕ್ಕೆ ಸ್ಪಂದಿಸಿ
ದೇವರ ಮಾರ್ಗದರ್ಶನವನ್ನು ನಾವು ಗಣ್ಯಮಾಡುತ್ತೇವೆಂದು ಹೇಗೆ ತೋರಿಸಬಲ್ಲೆವು? “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ” ಎಂದನು ಅಪೊಸ್ತಲ ಪೌಲನು. (ಇಬ್ರಿ. 13:17) ಇದು ಯಾವಾಗಲೂ ಅಷ್ಟು ಸುಲಭವಲ್ಲ. ದೃಷ್ಟಾಂತಕ್ಕೆ, ನೀವು ಮೋಶೆ ಕಾಲದ ಇಸ್ರಾಯೇಲ್ಯರಲ್ಲಿ ಒಬ್ಬರಾಗಿದ್ದೀರೆಂದು ನೆನಸಿ. ನೀವು ಸ್ವಲ್ಪ ಸಮಯ ನಡೆದುಕೊಂಡು ಹೋದ ಬಳಿಕ ಸ್ತಂಭವು ಒಂದು ಕಡೆ ನಿಲ್ಲುತ್ತದೆ. ಅದು ಅಲ್ಲಿ ಎಷ್ಟು ಸಮಯ ನಿಲ್ಲುತ್ತದೆ? ಒಂದು ದಿನ? ಒಂದು ವಾರ? ಕೆಲವು ತಿಂಗಳು? ಅದ್ಯಾವುದೂ ನಿಮಗೆ ಗೊತ್ತಿಲ್ಲ. ‘ನನ್ನ ಗಂಟುಮೂಟೆ ಬಿಚ್ಚಿ ಎಲ್ಲ ವಸ್ತುಗಳನ್ನು ಹೊರಗೆ ತೆಗೆದಿಡಬೇಕೋ ಬೇಡವೋ?’ ಎಂಬ ಯೋಚನೆ ಈಗ ಆರಂಭವಾಗುತ್ತದೆ. ಮೊದಲು ಅಗತ್ಯದ ವಸ್ತುಗಳನ್ನು ಮಾತ್ರ ನೀವು ಹೊರಗೆ ತೆಗೆದಿಡುತ್ತೀರಿ. ಕೆಲವು ದಿನಗಳ ನಂತರ ವಸ್ತುಗಳಿಗಾಗಿ ಹುಡುಕುವ ಜಂಜಾಟದಿಂದ ಬೇಸತ್ತು ಗಂಟುಮೂಟೆಯಲ್ಲಿರುವ ಎಲ್ಲವನ್ನು ತೆಗೆದು ಹೊರಗಿಡುತ್ತೀರಿ. ಇನ್ನೇನು ಎಲ್ಲ ವಸ್ತುಗಳನ್ನು ತೆಗೆದಿಟ್ಟಾಯಿತು ಎನ್ನುವಷ್ಟರಲ್ಲಿ ಆ ಸ್ತಂಭ ಗುಡಾರದಿಂದ ಮೇಲಕ್ಕೆ ಏಳಲಾರಂಭಿಸುತ್ತದೆ. ಈಗ ನೀವು ಪುನಃ ಗಂಟುಮೂಟೆ ಕಟ್ಟಬೇಕಾಗುತ್ತದೆ. ಇದು ಅಷ್ಟು ಸುಲಭವೂ ಅಲ್ಲ ಅನುಕೂಲಕರವೂ ಅಲ್ಲ. ಹೀಗಿದ್ದರೂ ಇಸ್ರಾಯೇಲ್ಯರು ‘[“ಕೂಡಲೆ,” NW] ಮುಂದಕ್ಕೆ ಪ್ರಯಾಣಮಾಡಬೇಕಿತ್ತು.’—ಅರ. 9:17-22.
ಹಾಗಾದರೆ, ದೈವಿಕ ಮಾರ್ಗದರ್ಶನ ಸಿಗುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ನಾವು “ಕೂಡಲೆ” ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇವೋ? ಅಥವಾ ಯಥಾಪ್ರಕಾರ ಮುಂದುವರಿಯುತ್ತೇವೋ? ಮನೆ ಬೈಬಲ್ ಅಧ್ಯಯನ ನಡೆಸುವುದು, ಪರಭಾಷೆ ಮಾತಾಡುವವರಿಗೆ ಸಾರುವುದು, ಕ್ರಮವಾಗಿ ಕುಟುಂಬ ಆರಾಧನೆಯಲ್ಲಿ ಪಾಲ್ಗೊಳ್ಳುವುದು, ಹಾಸ್ಪಿಟಲ್ ಲಿಏಸಾನ್ ಕಮಿಟಿಗಳೊಂದಿಗೆ ಸಹಕರಿಸುವುದು ಮತ್ತು ಅಧಿವೇಶನಗಳಲ್ಲಿ ಸಭ್ಯವಾಗಿ ನಡೆದುಕೊಳ್ಳುವುದರ ಬಗ್ಗೆ ಸಮಯಕ್ಕೆ ಸರಿಯಾಗಿ ಕೊಡಲ್ಪಡುವ ನಿರ್ದೇಶನಗಳು ನಮಗೆ ತಿಳಿದಿವೆಯೋ? ನಾವು ಸಲಹೆಗಳನ್ನು ಅನ್ವಯಿಸಿಕೊಳ್ಳುವ ಮೂಲಕವೂ ದೇವರ ಮಾರ್ಗದರ್ಶನವನ್ನು ಮಾನ್ಯಮಾಡುತ್ತೇವೆಂದು ತೋರಿಸುತ್ತೇವೆ. ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಾಗಿರುವಾಗ ನಾವು
ನಮ್ಮ ಸ್ವಂತ ವಿವೇಕದ ಮೇಲೆ ಆತುಕೊಳ್ಳದೆ ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೂ ಆತನ ಸಂಘಟನೆಯ ಕಡೆಗೂ ನೋಡುತ್ತೇವೆ. ಪ್ರಚಂಡ ಬಿರುಗಾಳಿ ಬಂದೆರಗುವಾಗ ಒಂದು ಮಗು ಸಂರಕ್ಷಣೆಗಾಗಿ ಹೇಗೆ ಹೆತ್ತವರ ಬಳಿ ಹೋಗುತ್ತದೋ ಹಾಗೆಯೇ ಈ ಲೋಕದಲ್ಲಿ ನಮಗೆ ಬಿರುಗಾಳಿಯಂಥ ಸಮಸ್ಯೆಗಳು ಎದುರಾಗುವಾಗ ನಾವು ಸಂರಕ್ಷಣೆಗಾಗಿ ಯೆಹೋವನ ಸಂಘಟನೆಯ ಕಡೆಗೆ ನೋಡುತ್ತೇವೆ.ದೇವರ ಸಂಘಟನೆಯ ಭೂಭಾಗದಲ್ಲಿ ಮುಂದಾಳುತ್ವ ವಹಿಸುವವರು ಪರಿಪೂರ್ಣರಲ್ಲ ನಿಜ. ಮೋಶೆಯೂ ಪರಿಪೂರ್ಣನಾಗಿರಲಿಲ್ಲ. ಹಾಗಿದ್ದರೂ ದೇವರೇ ಅವನನ್ನು ನೇಮಿಸಿದ್ದಾನೆ ಹಾಗೂ ಅಂಗೀಕರಿಸಿದ್ದಾನೆ ಎಂಬುದಕ್ಕೆ ಆ ಸ್ತಂಭವು ದೃಢ ಪುರಾವೆಯನ್ನು ಕೊಟ್ಟಿತು. ಯಾವಾಗ ಹೊರಡಬೇಕೆಂದು ಇಸ್ರಾಯೇಲ್ಯರು ವೈಯಕ್ತಿಕವಾಗಿ ನಿರ್ಣಯಿಸುತ್ತಿರಲಿಲ್ಲ ಎಂಬುದನ್ನೂ ಗಮನಿಸಿ. “ಯೆಹೋವನು ಮೋಶೆಯ ಮೂಲಕವಾಗಿ ಆಜ್ಞಾಪಿಸಿದಂತೆಯೇ” ಜನರು ಕ್ರಿಯೆಗೈಯುತ್ತಿದ್ದರು. (ಅರ. 9:23) ಹಾಗಾದರೆ ದೇವರ ಮಾರ್ಗದರ್ಶನದ ಮಾಧ್ಯಮವಾಗಿದ್ದ ಮೋಶೆ ಇಸ್ರಾಯೇಲ್ಯರಿಗೆ ಹೊರಡಲು ಹಸಿರು ನಿಶಾನೆ ಕೊಡುತ್ತಿದ್ದನು.
ಯಾವಾಗ, ಹೇಗೆ ಕ್ರಿಯೆಗೈಯಬೇಕು ಎನ್ನುವುದಕ್ಕೆ ಸ್ಪಷ್ಟವಾದ ಸೂಚನೆಗಳನ್ನು ಇಂದು ಯೆಹೋವನ ಮನೆವಾರ್ತೆ ವರ್ಗದವರು ಕೊಡುತ್ತಾರೆ. ಮನೆವಾರ್ತೆಯವರು ಇದನ್ನು ಹೇಗೆ ಮಾಡುತ್ತಾರೆ? ಕಾವಲಿನಬುರುಜು ಮತ್ತು ನಮ್ಮ ರಾಜ್ಯ ಸೇವೆಯಲ್ಲಿನ ಲೇಖನಗಳು, ಹೊಸ ಪ್ರಕಾಶನಗಳು, ಸಮ್ಮೇಳನ ಹಾಗೂ ಅಧಿವೇಶನಗಳಲ್ಲಿ ಕೊಡಲಾಗುವ ಭಾಷಣಗಳ ಮೂಲಕವೇ. ಅಲ್ಲದೆ ಸಂಚಾರ ಮೇಲ್ವಿಚಾರಕರ ಮೂಲಕ, ಪತ್ರಗಳ ಮೂಲಕ ಅಥವಾ ಸಭೆಯ ಜವಾಬ್ದಾರಿಯುತ ಸಹೋದರರು ಹಾಜರಾಗುವ ತರಬೇತಿ ಶಾಲೆಗಳ ಮೂಲಕವೂ ಸಭೆಗಳಿಗೆ ನಿರ್ದೇಶನಗಳನ್ನು ಕೊಡಲಾಗುತ್ತದೆ.
ದೈವಿಕ ಮಾರ್ಗದರ್ಶನದ ಪುರಾವೆಯನ್ನು ನೀವು ಸ್ಪಷ್ಟವಾಗಿ ಗ್ರಹಿಸುತ್ತಿದ್ದೀರೋ? ಅಪಾಯಕಾರಿ ಅರಣ್ಯದಂತಿರುವ ಸೈತಾನನ ಈ ದುಷ್ಟ ಲೋಕದಲ್ಲಿ ಯೆಹೋವನು ತನ್ನ ಜನರಿಗೆ ಅಂದರೆ ನಮಗೆ ಮಾರ್ಗದರ್ಶನ ನೀಡಲು ತನ್ನ ಸಂಘಟನೆಯನ್ನು ಉಪಯೋಗಿಸುತ್ತಿದ್ದಾನೆ. ಪರಿಣಾಮವಾಗಿ ನಾವು ಪ್ರೀತಿ, ಏಕತೆ, ಭದ್ರತೆಯನ್ನು ಅನುಭವಿಸುತ್ತಿದ್ದೇವೆ.
ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ ಯೆಹೋಶುವನು ಅವರಿಗೆ, “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ” ಎಂದು ಹೇಳಿದನು. (ಯೆಹೋ. 23:14) ಅದೇ ರೀತಿಯಲ್ಲಿ ಇಂದಿರುವ ದೇವಜನರು ವಾಗ್ದತ್ತ ನೂತನ ಲೋಕವನ್ನು ಖಂಡಿತ ಪ್ರವೇಶಿಸುವರು. ಆದರೆ ವೈಯಕ್ತಿಕವಾಗಿ ನಾವು ಅಲ್ಲಿರುವೆವೋ ಎಂಬುದು ದೇವರ ಮಾರ್ಗದರ್ಶನವನ್ನು ದೀನತೆಯಿಂದ ಅನುಸರಿಸಲು ನಮಗಿರುವ ಸಿದ್ಧಮನಸ್ಸಿನ ಮೇಲೆ ಹೆಚ್ಚಾಗಿ ಹೊಂದಿಕೊಂಡಿದೆ. ಆದ್ದರಿಂದ ನಾವೆಲ್ಲರೂ ಯೆಹೋವನ ಮಾರ್ಗದರ್ಶನದ ಪುರಾವೆಯನ್ನು ಗ್ರಹಿಸುತ್ತಾ ಇರೋಣ!
[ಪುಟ 5ರಲ್ಲಿರುವ ಚಿತ್ರಗಳು]
ಯೆಹೋವನ ಸಂಘಟನೆ ಇಂದು ನಮ್ಮನ್ನು ಮಾರ್ಗದರ್ಶಿಸುತ್ತಿದೆ
ಅಧಿವೇಶನದಲ್ಲಿ ಪ್ರಕಾಶನಗಳ ಬಿಡುಗಡೆ
ದೇವಪ್ರಭುತ್ವಾತ್ಮಕ ತರಬೇತಿ
ಶುಶ್ರೂಷೆಗಾಗಿ ಕೂಟಗಳಲ್ಲಿ ತರಬೇತಿ