ಅತ್ಯುತ್ತಮ ನಾಯಕನಾದ ಕ್ರಿಸ್ತನನ್ನು ಅನುಸರಿಸಿರಿ
ಅತ್ಯುತ್ತಮ ನಾಯಕನಾದ ಕ್ರಿಸ್ತನನ್ನು ಅನುಸರಿಸಿರಿ
ಮಾನವ ನಾಯಕರನ್ನು ಅನುಸರಿಸುವವರಿಗೆ ನಿರಾಶೆ, ಆಶಾಭಂಗ ಕಟ್ಟಿಟ್ಟಬುತ್ತಿ. ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗುವವರಿಗಾದರೋ ಖಂಡಿತ ಎಂದೂ ಹೀಗಾಗದು. ಏಕೆಂದರೆ ಯೇಸು ಹೇಳಿದ್ದು: “ಎಲೈ ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ಚೈತನ್ಯ ನೀಡುವೆನು. ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ.” (ಮತ್ತಾ. 11:28, 29) ಹೌದು, ಯೇಸುವಿನ ನಾಯಕತ್ವ ಚೈತನ್ಯದಾಯಕ. ಅವನಿಗೆ ದೀನದಲಿತರ ಕಡೆಗೆ ಅಪಾರ ಕಾಳಜಿಯಿದೆ. ಹಾಗಾಗಿ ತನ್ನ ಮೃದುವಾದ ನೊಗದಡಿ ಬರುವಂತೆ ಅವರನ್ನು ಆಮಂತ್ರಿಸುತ್ತಿದ್ದಾನೆ. ಹಾಗಾದರೆ ಯೇಸುವಿನ ನಾಯಕತ್ವವನ್ನು ಅನುಸರಿಸುವುದರ ಅರ್ಥವೇನು?
ಅಪೊಸ್ತಲ ಪೇತ್ರನು ಬರೆದದ್ದು: “ಕ್ರಿಸ್ತನು ಸಹ ನಿಮಗೋಸ್ಕರ ಕಷ್ಟವನ್ನು ಅನುಭವಿಸಿ ನೀವು ತನ್ನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ನಿಮಗೋಸ್ಕರ ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ನಾವು ಯೇಸುವಿನ ಹೆಜ್ಜೆಜಾಡನ್ನು ಅನುಸರಿಸುವುದು ಎಷ್ಟು ಪ್ರಾಮುಖ್ಯ? ಇದನ್ನು ಊಹಿಸಿ: ನೀವು ಸಿಡಿಗುಂಡುಗಳಿರುವ ಪ್ರದೇಶವನ್ನು ದಾಟಬೇಕಾಗಿದೆ. ನಿಮ್ಮೊಂದಿಗಿರುವವರಲ್ಲಿ ಒಬ್ಬನಿಗೆ ಮಾತ್ರ ಆ ಸ್ಥಳವನ್ನು ಸುರಕ್ಷಿತವಾಗಿ ದಾಟುವ ಬಗೆ ತಿಳಿದಿದೆ. ಹೀಗಿರುವಾಗ ನೀವು ಈ ವ್ಯಕ್ತಿಯ ಹೆಜ್ಜೆಜಾಡನ್ನೇ ನಿಕಟವಾಗಿ ಅನುಸರಿಸುತ್ತಾ ಬಹುಶಃ ಅವನ ಹೆಜ್ಜೆಗುರುತುಗಳ ಮೇಲೆಯೇ ಹೆಜ್ಜೆಯನ್ನಿಡುತ್ತಾ ಮುಂದೆ ಸಾಗುವಿರಲ್ಲವೇ? ಅದೇ ರೀತಿಯಲ್ಲಿ ನಮ್ಮ ಭವಿಷ್ಯವು ಸುರಕ್ಷಿತವಾಗಿರಬೇಕಾದರೆ ನಾವು ಯೇಸುವಿನ ಮಾದರಿಯನ್ನು ಆದಷ್ಟು ನಿಕಟವಾಗಿ ಅನುಸರಿಸಬೇಕು. ಅಂದರೆ, ನಾವು ಅವನಿಗೆ ಕಿವಿಗೊಡಬೇಕು ಮತ್ತು ವಿಧೇಯರಾಗಬೇಕು. ಜೊತೆಗೆ ಅವನನ್ನು ಪ್ರತಿನಿಧಿಸುವವರೊಂದಿಗೆ ಸಹಕರಿಸಬೇಕು.
ಕಿವಿಗೊಡಿರಿ ಮತ್ತು ವಿಧೇಯರಾಗಿರಿ
ಯೇಸು ತನ್ನ ಪರ್ವತ ಪ್ರಸಂಗದ ಕೊನೆಯಲ್ಲಿ ಹೀಗಂದನು: “ನನ್ನ ಈ ಮಾತುಗಳನ್ನು ಕೇಳಿಸಿಕೊಂಡು ಅವುಗಳಂತೆ ಮಾಡುವ ಪ್ರತಿಯೊಬ್ಬನೂ ದೊಡ್ಡ ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ವಿವೇಚನೆಯುಳ್ಳ ಒಬ್ಬ ಮನುಷ್ಯನಂತಿರುವನು. ಮಳೆ ಸುರಿಯಿತು, ನೆರೆಯು ಬಂತು ಮತ್ತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಆದರೆ ಅದರ ಅಸ್ತಿವಾರವು ದೊಡ್ಡ ಬಂಡೆಯ ಮೇಲಿದ್ದುದರಿಂದ ಅದು ಕುಸಿದುಬೀಳಲಿಲ್ಲ.”—ಮತ್ತಾ. 7:24, 25.
ತನಗೆ ಕಿವಿಗೊಟ್ಟು ವಿಧೇಯನಾಗುವ ವ್ಯಕ್ತಿಯನ್ನು ಯೇಸು ‘ವಿವೇಚನೆಯುಳ್ಳವನು’ ಎಂದು ಸಂಬೋಧಿಸಿದನು. ಹೃತ್ಪೂರ್ವಕವಾಗಿ ವಿಧೇಯರಾಗುವ ಮೂಲಕ ಕ್ರಿಸ್ತನ ಮಾದರಿಯನ್ನು ನಾವು ಗೌರವಿಸುತ್ತೇವೆಂದೂ ಮಾನ್ಯಮಾಡುತ್ತೇವೆಂದೂ ತೋರಿಸಿಕೊಡುತ್ತೇವೋ? ಅಥವಾ ಯೇಸುವಿನ ಆಜ್ಞೆಗಳಲ್ಲಿ ನಮಗೆ ಯಾವುದು ಸುಲಭವೆನಿಸುತ್ತದೋ ಅನುಕೂಲಕರವೆನಿಸುತ್ತದೋ ಅವುಗಳಿಗೆ ಮಾತ್ರ ವಿಧೇಯರಾಗುತ್ತೇವೋ? ಯೇಸು ಹೇಳಿದ್ದು: ‘ನಾನು ದೇವರಿಗೆ ಮೆಚ್ಚಿಕೆಯಾಗಿರುವುದನ್ನೇ ಯಾವಾಗಲೂ ಮಾಡುತ್ತೇನೆ.’ (ಯೋಹಾ. 8:29) ನಾವು ಸಹ ಅದೇ ಮಾದರಿಯನ್ನು ಅನುಕರಿಸಲು ಶ್ರಮಿಸೋಣ.
ಕ್ರಿಸ್ತನ ನಾಯಕತ್ವಕ್ಕೆ ಅಧೀನರಾಗುವ ವಿಷಯದಲ್ಲಿ ಒಂದನೇ ಶತಮಾನದ ಅಪೊಸ್ತಲರು ಒಳ್ಳೇ ಮಾದರಿಯನ್ನಿಟ್ಟಿದ್ದಾರೆ. ಒಂದು ಸಂದರ್ಭದಲ್ಲಿ ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸುತ್ತಿದ್ದೇವೆ” ಎಂದು ಹೇಳಿದನು. (ಮಾರ್ಕ 10:28) ಅಪೊಸ್ತಲರು ಯೇಸುವಿನ ನಾಯಕತ್ವವನ್ನು ಎಷ್ಟು ಮಾನ್ಯಮಾಡಿದರೆಂದರೆ ಅವನನ್ನು ಅನುಸರಿಸಲಿಕ್ಕಾಗಿ ಸಿದ್ಧಮನಸ್ಸಿನಿಂದ ಎಲ್ಲವನ್ನು ಬಿಟ್ಟುಬಂದರು.—ಮತ್ತಾ. 4:18-22.
ಕ್ರಿಸ್ತನ ಪ್ರತಿನಿಧಿಗಳೊಂದಿಗೆ ಸಹಕರಿಸಿ
ಯೇಸು ತನ್ನ ಮರಣಕ್ಕೆ ಸ್ವಲ್ಪ ಮುಂಚೆ ನಾವು ಅವನ ನಾಯಕತ್ವವನ್ನು ಅನುಸರಿಸಬಹುದಾದ ಇನ್ನೊಂದು ವಿಧದ ಬಗ್ಗೆ ತಿಳಿಸಿದನು. “ನಾನು ಕಳುಹಿಸಿಕೊಡುವವನನ್ನು ಅಂಗೀಕರಿಸುವವನು ನನ್ನನ್ನೂ ಅಂಗೀಕರಿಸುವವನಾಗಿದ್ದಾನೆ” ಎಂದನು ಅವನು. (ಯೋಹಾ. 13:20) ನಿಜವೇನೆಂದರೆ, ಯೇಸು ತನ್ನ ಅಭಿಷಿಕ್ತ ಪ್ರತಿನಿಧಿಗಳನ್ನು ತನ್ನ ‘ಸಹೋದರರು’ ಎಂದು ಕರೆದನು. (ಮತ್ತಾ. 25:40) ಯೇಸು ಪುನರುತ್ಥಾನಗೊಂಡು ಸ್ವರ್ಗಕ್ಕೆ ಹೋದ ತರುವಾಯ ಅವನ ಪರವಾಗಿ ಕ್ರಿಯೆಗೈಯಲು ಅವನ ‘ಸಹೋದರರು’ ನೇಮಿಸಲ್ಪಟ್ಟರು. ರಾಯಭಾರಿಗಳಾಗಿ “ಕ್ರಿಸ್ತನ ಬದಲಿಯಾಗಿರುವ” ಇವರು ಯೆಹೋವ ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬರುವಂತೆ ಇತರರನ್ನು ಆಮಂತ್ರಿಸುತ್ತಿದ್ದಾರೆ. (2 ಕೊರಿಂ. 5:18-20) ನಾವು ಕ್ರಿಸ್ತನ ನಾಯಕತ್ವವನ್ನು ಅಂಗೀಕರಿಸುವುದರಲ್ಲಿ ಅವನ ‘ಸಹೋದರರಿಗೆ’ ಅಧೀನತೆ ತೋರಿಸುವುದೂ ಸೇರಿದೆ.
ಬೈಬಲ್ ಆಧರಿತ ಪ್ರಕಾಶನಗಳಲ್ಲಿ ತಕ್ಕ ಸಮಯಕ್ಕೆ ಕೊಡಲಾಗುವ ಶಾಸ್ತ್ರಾಧಾರಿತ ಸಲಹೆಗೆ ನಾವು ಹೇಗೆ ಸ್ಪಂದಿಸುತ್ತೇವೆಂಬದನ್ನು ಸಹ ಪರಿಶೀಲಿಸಬೇಕು. ಬೈಬಲನ್ನು ಅಧ್ಯಯನ ಮಾಡುವ ಹಾಗೂ ಸಭಾ ಕೂಟಗಳಿಗೆ ಹಾಜರಾಗುವ ಮೂಲಕ ನಾವು ಕ್ರಿಸ್ತನ ಮಾತುಗಳನ್ನು ಮರುಜ್ಞಾಪಿಸಿಕೊಳ್ಳಸಾಧ್ಯ. (2 ಪೇತ್ರ 3:1, 2) ಹೀಗೆ ನಮಗೆ ಸಿಗುತ್ತಿರುವ ಆಧ್ಯಾತ್ಮಿಕ ಆಹಾರವನ್ನು ಕ್ರಮವಾಗಿ ಸೇವಿಸುವ ಮೂಲಕ ಅದರೆಡೆಗೆ ನಮಗಿರುವ ಹೃತ್ಪೂರ್ವಕ ಗಣ್ಯತೆಯನ್ನು ವ್ಯಕ್ತಪಡಿಸುತ್ತೇವೆ. ಆದರೆ, ನಿರ್ದಿಷ್ಟ ಸಲಹೆಯನ್ನು ಪದೇ ಪದೇ ಕೊಡಲಾಗುತ್ತಿರುವಲ್ಲಿ ನಾವು ಹೇಗೆ ಪ್ರತಿಕ್ರಿಯಿಸಬೇಕು? ಉದಾಹರಣೆಗೆ, “ಕರ್ತನಲ್ಲಿರುವವನನ್ನು ಮಾತ್ರ” ಮದುವೆಯಾಗುವಂತೆ ದೇವರ ವಾಕ್ಯವು ಕ್ರೈಸ್ತರಿಗೆ ಸಲಹೆ ನೀಡುತ್ತದೆ. (1 ಕೊರಿಂ. 7:39) ಒಂದು ಶತಮಾನಕ್ಕಿಂತ ಹೆಚ್ಚಿನ ಸಮಯದಿಂದ ಈ ವಿಷಯದ ಬಗ್ಗೆ ಆಗಿಂದಾಗ್ಗೆ ಕಾವಲಿನಬುರುಜು ಪತ್ರಿಕೆಗಳಲ್ಲಿ ಚರ್ಚಿಸಲಾಗಿದೆ. ಇಂಥ ಹಾಗೂ ಇತರ ಪ್ರೇರಿತ ಸಲಹೆಗಳ ಬಗ್ಗೆ ಲೇಖನಗಳನ್ನು ಪ್ರಕಾಶಿಸುವ ಮೂಲಕ ನಮ್ಮ ಆಧ್ಯಾತ್ಮಿಕ ಹಿತಕ್ಷೇಮದ ಬಗ್ಗೆ ತಮಗಿರುವ ಪ್ರೀತಿಪರ ಕಾಳಜಿಯನ್ನು ಕ್ರಿಸ್ತನ ಸಹೋದರರು ತೋರಿಸಿಕೊಡುತ್ತಿದ್ದಾರೆ. ಈ ಮರುಜ್ಞಾಪನಗಳಿಗೆ ಕಿವಿಗೊಡುವುದು ಅತ್ಯುತ್ತಮ ನಾಯಕನಾದ ಯೇಸು ಕ್ರಿಸ್ತನನ್ನು ಅನುಸರಿಸುತ್ತಿದ್ದೇವೆ ಎಂಬದನ್ನು ತೋರಿಸುವ ಒಂದು ವಿಧವಾಗಿದೆ.
“ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ” ಎನ್ನುತ್ತದೆ ಜ್ಞಾನೋಕ್ತಿ 4:18. ಹೌದು, ಯೇಸುವಿನ ನಾಯಕತ್ವದ ಕೆಳಗೆ ಸಭೆಯು ಅಭಿವೃದ್ಧಿ ಪಥದಲ್ಲಿ ಸಾಗುತ್ತಲೇ ಇರುತ್ತದೆ, ಒಂದು ಹಂತದಲ್ಲಿ ನಿಲ್ಲುವುದಿಲ್ಲ. ಕ್ರಿಸ್ತನ ‘ಸಹೋದರರೊಂದಿಗೆ’ ಸಹಕರಿಸುವ ಮತ್ತೊಂದು ವಿಧ “ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು” ಪ್ರಕಾಶನಗಳಲ್ಲಿ ಬೈಬಲ್ ಸತ್ಯಗಳ ತಿಳುವಳಿಕೆಯ ಸಂಬಂಧದಲ್ಲಿ ಪರಿಷ್ಕೃತ ಮಾಹಿತಿಯನ್ನು ಕೊಡುವಾಗ ಅದನ್ನು ಸಕಾರಾತ್ಮಕ ಮನೋಭಾವದಿಂದ ಸ್ವೀಕರಿಸುವುದೇ.—ಮತ್ತಾ. 24:45.
ಕ್ರೈಸ್ತ ಸಭೆಯ ನೇಮಿತ ಮೇಲ್ವಿಚಾರಕರೊಂದಿಗೆ ಸಹಕರಿಸುವ ಮೂಲಕವೂ ನಾವು ಕ್ರಿಸ್ತನ ‘ಸಹೋದರರಿಗೆ’ ಅಧೀನರಾಗಿದ್ದೇವೆಂದು ತೋರಿಸಿಕೊಡುತ್ತೇವೆ. ಅಪೊಸ್ತಲ ಪೌಲನು ಹೇಳಿದ್ದು: “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ.” (ಇಬ್ರಿ. 13:17) ಉದಾಹರಣೆಗೆ, ಹಿರಿಯನೊಬ್ಬನು ನಮಗೆ ಕುಟುಂಬ ಆರಾಧನೆಯ ಸಂಜೆಯನ್ನು ತಪ್ಪದೇ ನಡೆಸುವುದರ ಮಹತ್ವದ ಸಂಬಂಧದಲ್ಲಿ ಉತ್ತೇಜನ ನೀಡಬಹುದು ಅಥವಾ ಕ್ಷೇತ್ರ ಸೇವೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೊಡಬಹುದು. ಸಂಚರಣ ಮೇಲ್ವಿಚಾರಕನು ಕ್ರೈಸ್ತ ಜೀವನದ ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಾಯಕರ ಬೈಬಲಾಧರಿತ ಸಲಹೆಯನ್ನು ಕೊಡಬಹುದು. ನಾವಿಂಥ ಸಲಹೆಗಳನ್ನು ಸಿದ್ಧಮನಸ್ಸಿನಿಂದ ಅನ್ವಯಿಸಿಕೊಳ್ಳುವಾಗ ನಮ್ಮ ನಾಯಕನಾದ ಯೇಸುವನ್ನು ಅನುಸರಿಸುತ್ತಿದ್ದೇವೆಂದು ತೋರಿಸುತ್ತೇವೆ.
ಈ ಲೋಕದಲ್ಲಿ ಅತ್ಯುತ್ತಮ ನಾಯಕತ್ವದ ಕೊರತೆ ಎದ್ದುಕಾಣುತ್ತಿದೆ. ಹೀಗಿರುವಾಗ ಕ್ರಿಸ್ತನ ಪ್ರೀತಿಪರ ನಾಯಕತ್ವವನ್ನು ಅನುಸರಿಸುವುದು ಎಷ್ಟೊಂದು ಚೈತನ್ಯದಾಯಕ! ಆದ್ದರಿಂದ ನಮ್ಮ ನಾಯಕನನ್ನು ಅನುಸರಿಸುತ್ತಿರೋಣ ಹಾಗೂ ಅವನ ಪ್ರತಿನಿಧಿಗಳೊಂದಿಗೆ ಸಹಕರಿಸುತ್ತಿರೋಣ.
[ಪುಟ 27ರಲ್ಲಿರುವ ಚಿತ್ರಗಳು]
‘ಅವಿಶ್ವಾಸಿಯೊಂದಿಗೆ ಜೊತೆಯಾಗಬೇಡಿ’ ಎಂಬ ಬೈಬಲ್ ಸಲಹೆಗೆ ನೀವು ಕಿವಿಗೊಡುತ್ತೀರೋ?