ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರೀತಿಪರ ಉಡುಗೊರೆ

ದೇವರ ಪ್ರೀತಿಪರ ಉಡುಗೊರೆ

ದೇವರ ಪ್ರೀತಿಪರ ಉಡುಗೊರೆ

‘ಅಪಾತ್ರ ದಯೆಯು ನಿತ್ಯಜೀವವನ್ನು ಉಂಟುಮಾಡುತ್ತಾ ನೀತಿಯ ಮೂಲಕ ಅರಸನಂತೆ ಆಳುವುದು.’—ರೋಮ. 5:21.

1, 2. ಅನೇಕರು ಯಾವುದನ್ನು ಬೆಲೆಬಾಳುವ ಉಡುಗೊರೆಯಾಗಿ ಪರಿಗಣಿಸುತ್ತಾರೆ? ಆದರೆ ಅತಿ ಅಮೂಲ್ಯವಾದ ಉಡುಗೊರೆ ಯಾವುದು?

ರೋಮನ್‌ ಸಾಮ್ರಾಜ್ಯದ ನಿಯಮಗಳು ನಾಗರಿಕತೆಗಾಗಿ ಬಾಳುವ ಮೌಲ್ಯವುಳ್ಳ ಒಂದು ಉಡುಗೊರೆಯಾಗಿದೆ ಎಂದು ಆಸ್ಟ್ರೇಲಿಯದ ಮೆಲ್ಬರ್ನ್‌ ವಿಶ್ವವಿದ್ಯಾಲಯದ ಪ್ರೊಫೆಸರರೊಬ್ಬರು ಹೇಳಿದರು. ಆದರೆ ಅದಕ್ಕಿಂತಲೂ ಹೆಚ್ಚು ಅಮೂಲ್ಯವಾದ ಪ್ರೀತಿಪರ ಉಡುಗೊರೆಯೊಂದನ್ನು ದೇವರು ನಮಗೆ ಕೊಟ್ಟಿದ್ದಾನೆಂದು ಬೈಬಲ್‌ ತಿಳಿಸುತ್ತದೆ. ದೇವರ ಮುಂದೆ ಅಂಗೀಕೃತವಾದ ನೀತಿಯ ನಿಲುವನ್ನು ಹೊಂದಿ ರಕ್ಷಣೆ ಮತ್ತು ನಿತ್ಯಜೀವದ ಪ್ರತೀಕ್ಷೆಯನ್ನು ಹೊಂದಲು ಸಾಧ್ಯಮಾಡುವ ದೇವರ ಏರ್ಪಾಡೇ ಆ ಉಡುಗೊರೆಯಾಗಿದೆ.

2 ದೇವರು ಈ ಉಡುಗೊರೆಯನ್ನು ತನ್ನ ನ್ಯಾಯಕ್ಕೆ ಹೊಂದಿಕೆಯಲ್ಲಿ ಲಭ್ಯಗೊಳಿಸಿದನು. ಅದನ್ನು ಅಪೊಸ್ತಲ ಪೌಲನು ರೋಮನ್ನರಿಗೆ ಪುಸ್ತಕದ 5ನೇ ಅಧ್ಯಾಯದಲ್ಲಿ ಚರ್ಚಿಸಿದ್ದಾನೆ. ಆದರೆ ನಿಯಮಗಳನ್ನು ಚರ್ಚಿಸುತ್ತಾ ನೀರಸವಾಗಿ ಅದನ್ನು ಪ್ರಸ್ತುತಪಡಿಸಿಲ್ಲ. ಬದಲಾಗಿ ರೋಮಾಂಚಕ ಆಶ್ವಾಸನೆಯೊಂದಿಗೆ ಆರಂಭಿಸುತ್ತಾ ಅಂದದ್ದು: “ನಾವು . . . ನಂಬಿಕೆಯ ನಿಮಿತ್ತ ನೀತಿವಂತರೆಂದು ನಿರ್ಣಯಿಸಲ್ಪಟ್ಟಿರಲಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಸಮಾಧಾನದಲ್ಲಿ ಆನಂದಿಸೋಣ.” ದೇವರ ಆ ಉಡುಗೊರೆಯನ್ನು ಪಡೆಯುವವರು ಪ್ರತಿಯಾಗಿ ಆತನನ್ನು ಪ್ರೀತಿಸಲು ಪ್ರಚೋದಿಸಲ್ಪಡುತ್ತಾರೆ. ಅಂಥವರಲ್ಲಿ ಪೌಲನೂ ಒಬ್ಬನು. ಅವನು ಬರೆದದ್ದು: “ಪವಿತ್ರಾತ್ಮದ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳೊಳಗೆ ಸುರಿಸಲ್ಪಟ್ಟಿದೆ.”—ರೋಮ. 5:1, 5.

3. ಸಹಜವಾಗಿಯೇ ಯಾವ ಪ್ರಶ್ನೆಗಳು ಏಳುತ್ತವೆ?

3 ಆದರೆ ಈ ಪ್ರೀತಿಪರ ಉಡುಗೊರೆ ಏಕೆ ಅಗತ್ಯವಾಗಿತ್ತು? ದೇವರು ಅದನ್ನು ನ್ಯಾಯವಾಗಿಯೂ ಎಲ್ಲ ಜನರಿಗೆ ಪ್ರಯೋಜನವಾಗುವಂತೆಯೂ ಹೇಗೆ ಒದಗಿಸಿದನು? ಆ ಉಡುಗೊರೆ ಪಡೆಯಲು ಅರ್ಹರಾಗಲಿಕ್ಕಾಗಿ ಏನು ಮಾಡಬೇಕು? ಈ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ನಾವೀಗ ಪರಿಗಣಿಸೋಣ ಮತ್ತು ಅವು ದೇವರ ಪ್ರೀತಿಯನ್ನು ಹೇಗೆ ಎತ್ತಿತೋರಿಸುತ್ತವೆಂದು ನೋಡೋಣ.

ಪಾಪಕ್ಕೆ ಪ್ರತಿಯಾಗಿ ದೇವರ ಪ್ರೀತಿ

4, 5. (ಎ) ಯೆಹೋವನು ತನ್ನ ಪ್ರೀತಿಯನ್ನು ಯಾವ ಮಹತ್ತರ ವಿಧದಲ್ಲಿ ತೋರಿಸಿದನು? (ಬಿ) ರೋಮನ್ನರಿಗೆ 5:12ನ್ನು ಅರ್ಥಮಾಡಿಕೊಳ್ಳಲು ಯಾವ ಹಿನ್ನೆಲೆಜ್ಞಾನ ನಮಗಿರಬೇಕು?

4 ಯೆಹೋವನು ಅಪಾರ ಪ್ರೀತಿಯನ್ನು ತೋರಿಸುತ್ತಾ ಮಾನವರಿಗೆ ಸಹಾಯಮಾಡಲು ತನ್ನ ಏಕೈಕಜಾತ ಪುತ್ರನನ್ನು ಕಳುಹಿಸಿಕೊಟ್ಟನು. ಅದನ್ನು ಪೌಲನು ಹೀಗೆ ತಿಳಿಸಿದನು: “ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ.” (ರೋಮ. 5:8) ಈ ವಚನದಲ್ಲಿ, “ನಾವು ಇನ್ನೂ ಪಾಪಿಗಳಾಗಿದ್ದಾಗಲೇ” ಎಂಬ ಅಭಿವ್ಯಕ್ತಿಯನ್ನು ಪರಿಗಣಿಸಿರಿ. ಹಾಗಾದರೆ ಮಾನವರು ಪಾಪಿಗಳಾದದ್ದು ಹೇಗೆ? ಇದನ್ನು ಎಲ್ಲರೂ ತಿಳಿಯುವ ಅಗತ್ಯವಿದೆ.

5 ಆ ವಿಷಯವನ್ನು ಸಾರಾಂಶಿಸುತ್ತಾ ಪೌಲನು ಹೀಗಂದನು: “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮ. 5:12) ಈ ವಾಸ್ತವಾಂಶವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಏಕೆಂದರೆ ಮಾನವ ಜೀವನದ ಆರಂಭವನ್ನು ದೇವರು ದಾಖಲೆ ಮಾಡಿಸಿಟ್ಟಿದ್ದಾನೆ. ಯೆಹೋವನು ಆದಾಮ, ಹವ್ವ ಎಂಬಿಬ್ಬರನ್ನು ಸೃಷ್ಟಿಸಿದನು. ಸೃಷ್ಟಿಕರ್ತನು ಪರಿಪೂರ್ಣನಾದ ಕಾರಣ ನಮ್ಮ ಪೂರ್ವಜರಾದ ಆ ಪ್ರಥಮ ಮಾನವರು ಕೂಡ ಪರಿಪೂರ್ಣರಾಗಿದ್ದರು. ದೇವರು ಅವರಿಗೆ ಬೇಕಾದುದ್ದೆಲ್ಲವನ್ನೂ ಒದಗಿಸಿ ಕೇವಲ ಒಂದು ವಿಷಯವನ್ನು ಮಾಡಬಾರದೆಂದು ಆಜ್ಞಾಪಿಸಿದ್ದನು. ಅದನ್ನು ಮೀರುವಲ್ಲಿ ಸಾವು ಖಚಿತವೆಂದೂ ತಿಳಿಸಿದ್ದನು. (ಆದಿ. 2:17) ಆದರೂ ಆದಾಮಹವ್ವರು ವಿಪತ್ಕಾರಕ ದಾರಿಯನ್ನು ಹಿಡಿದು ದೇವರ ನ್ಯಾಯಸಮ್ಮತ ಆಜ್ಞೆಗೆ ಅವಿಧೇಯತೆ ತೋರಿಸಿದರು. ಹೀಗೆ ನಿಯಮದಾತನೂ ಪರಮಾಧಿಕಾರಿಯೂ ಆದ ಯೆಹೋವನನ್ನು ತಿರಸ್ಕರಿಸಿದರು.—ಧರ್ಮೋ. 32:4, 5.

6. (ಎ) ದೇವರು ಮೋಶೆಯ ಧರ್ಮಶಾಸ್ತ್ರವನ್ನು ಕೊಡುವ ಮುಂಚೆ ಮತ್ತು ನಂತರವೂ ಆದಾಮನ ಸಂತತಿಯವರು ಸಾಯುವುದೇಕೆ? (ಬಿ) ಅನುವಂಶೀಯವಾಗಿ ಬರುವ ರೋಗದಿಂದ ಯಾವುದನ್ನು ವಿವರಿಸಬಹುದು?

6 ಆದಾಮನಿಗೆ ಮಕ್ಕಳು ಹುಟ್ಟಿದ್ದು ಅವನು ಪಾಪಮಾಡಿದ ಬಳಿಕವೇ. ಈ ಮೂಲಕ ಅವನು ಪಾಪ ಮತ್ತು ಅದರ ಪರಿಣಾಮಗಳನ್ನು ತನ್ನ ಮಕ್ಕಳೆಲ್ಲರಿಗೂ ದಾಟಿಸಿದನು. ಆದರೆ, ಅವರು ಆದಾಮನಂತೆ ದೇವರ ನಿಯಮವನ್ನು ಉಲ್ಲಂಘಿಸಿರಲಿಲ್ಲ. ಆದ್ದರಿಂದ ಅವರ ಮೇಲೆ ಆ ಪಾಪವನ್ನು ಹೊರಿಸುವಂತಿರಲಿಲ್ಲ. ಅಲ್ಲದೆ ಅವರಿಗೆ ಆಗ ಯಾವುದೇ ನಿಯಮಗಳನ್ನು ಕೊಡಲಾಗಿರಲಿಲ್ಲ. (ಆದಿ. 2:17) ಹಾಗಿದ್ದರೂ ಆದಾಮನ ಸಂತತಿಯವರು ಪಾಪವನ್ನು ಬಾಧ್ಯತೆಯಾಗಿ ಪಡೆದರು. ಹೀಗೆ ದೇವರು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಡುವ ಸಮಯದ ವರೆಗೆ ಪಾಪ ಮತ್ತು ಮರಣವು ಆಳ್ವಿಕೆ ನಡೆಸಿತು. ಆ ಧರ್ಮಶಾಸ್ತ್ರವು ತಾವು ಪಾಪಿಗಳೆಂಬುದನ್ನು ಜನರಿಗೆ ಸ್ಪಷ್ಟವಾಗಿ ತೋರಿಸಿಕೊಟ್ಟಿತು. (ರೋಮನ್ನರಿಗೆ 5:13, 14 ಓದಿ.) ಬಾಧ್ಯತೆಯಾಗಿ ಬಂದಿರುವ ಪಾಪದ ಪರಿಣಾಮವನ್ನು ಹೆತ್ತವರಿಂದ ಅನುವಂಶೀಯವಾಗಿ ಬರುವ ರೋಗಗಳಿಗೆ ಹೋಲಿಸಬಹುದು. ಆದರೆ ಅನುವಂಶೀಯ ರೋಗವು ಕುಟುಂಬದ ಎಲ್ಲ ಮಕ್ಕಳಿಗೆ ಬರದಿರಬಹುದು. ಪಾಪದ ವಿಷಯದಲ್ಲಾದರೋ ಹಾಗಲ್ಲ. ನಾವೆಲ್ಲರೂ ಆದಾಮನಿಂದ ಪಾಪವನ್ನು ಬಾಧ್ಯತೆಯಾಗಿ ಪಡೆದಿದ್ದೇವೆ ಮತ್ತು ಆ ಕಾರಣ ನಾವೆಲ್ಲರೂ ಸಾಯುತ್ತೇವೆ. ಆ ದುಃಸ್ಥಿತಿಯಿಂದ ಎಂದಾದರೂ ಹೊರಬರಲು ಸಾಧ್ಯವೋ?

ದೇವರು ಯೇಸು ಕ್ರಿಸ್ತನ ಮೂಲಕ ಏನನ್ನು ಒದಗಿಸಿದನು?

7, 8. ಇಬ್ಬರು ಪರಿಪೂರ್ಣ ಪುರುಷರ ಮಾರ್ಗಕ್ರಮಗಳು ಹೇಗೆ ಭಿನ್ನ ಫಲಿತಾಂಶಗಳನ್ನು ತಂದಿವೆ?

7 ಬಾಧ್ಯತೆಯಾಗಿ ಪಡೆದ ಪಾಪಪೂರ್ಣ ಸ್ಥಿತಿಯಿಂದ ಮಾನವರು ಹೊರಬರುವಂತೆ ಯೆಹೋವನು ಪ್ರೀತಿಪರ ಏರ್ಪಾಡುಮಾಡಿದನು. ಇದು, ಇನ್ನೊಬ್ಬ ಪರಿಪೂರ್ಣ ಪುರುಷನಿಂದ ವಾಸ್ತವದಲ್ಲಿ ಎರಡನೇ ಆದಾಮನಿಂದ ಸಾಧ್ಯವಾಯಿತೆಂದು ಪೌಲನು ವಿವರಿಸಿದನು. (1 ಕೊರಿಂ. 15:45) ಈ ಇಬ್ಬರು ಪರಿಪೂರ್ಣ ಪುರುಷರ ಮಾರ್ಗಕ್ರಮಗಳು ತೀರ ವ್ಯತಿರಿಕ್ತವಾದ ಫಲಿತಾಂಶಗಳನ್ನು ತಂದವು. ಅದು ಹೇಗೆ?—ರೋಮನ್ನರಿಗೆ 5:15, 16 ಓದಿ.

8 ಪೌಲನು ಬರೆದದ್ದು: “ಅಪರಾಧದ ವಿಷಯದಲ್ಲಿದ್ದಂತೆ ವರದ ವಿಷಯದಲ್ಲಿ ಇರುವುದಿಲ್ಲ.” ಆ ಅಪರಾಧಕ್ಕೆ ಆದಾಮನು ದೋಷಿಯಾಗಿದ್ದಾನೆ. ನ್ಯಾಯವಾಗಿಯೇ ಅದಕ್ಕೆ ದಂಡನೆಯಾಗಿ ಅವನು ಮರಣವನ್ನು ಹೊಂದಿದನು. ಆದರೆ ಸಾಯಬೇಕಾಗಿ ಬಂದದ್ದು ಅವನು ಮಾತ್ರವೇ ಅಲ್ಲ. ‘ಆ ಒಬ್ಬ ಮನುಷ್ಯನ ಅಪರಾಧದಿಂದಾಗಿ ಅನೇಕರು ಸತ್ತರು’ ಎಂದು ನಾವು ಓದುತ್ತೇವೆ. ಯೆಹೋವನ ನ್ಯಾಯಕ್ಕನುಸಾರ ಪಾಪಿಗಳು ಮರಣಕ್ಕೆ ಪಾತ್ರರು. ಆದ್ದರಿಂದ ಆದಾಮನಂತೆ ಅವನ ಮಕ್ಕಳೆಲ್ಲರೂ ನಾವು ಸಹ ಮರಣಕ್ಕೆ ಪಾತ್ರರು. ಹಾಗಿದ್ದರೂ ನಾವು ಸಾಂತ್ವನ ಪಡೆಯಬಲ್ಲೆವು. ಏಕೆಂದರೆ ಪರಿಪೂರ್ಣ ಮನುಷ್ಯನಾದ ಯೇಸು ಆದಾಮನಿಗಿಂತ ತೀರಾ ಭಿನ್ನ ಫಲಿತಾಂಶವನ್ನು ತರಶಕ್ತನು. ಏನದು? ಉತ್ತರ ಪೌಲನ ಈ ಮಾತುಗಳಲ್ಲಿದೆ: ‘ಎಲ್ಲ ರೀತಿಯ ಜನರು ಜೀವಕ್ಕಾಗಿ ನೀತಿವಂತರೆಂದು ನಿರ್ಣಯಿಸಲ್ಪಡುವರು.’—ರೋಮ. 5:18.

9. ರೋಮನ್ನರಿಗೆ 5:16, 18ರಲ್ಲಿ ತಿಳಿಸಲ್ಪಟ್ಟಂತೆ ದೇವರು ಮಾನವರನ್ನು ನೀತಿವಂತರೆಂದು ನಿರ್ಣಯಿಸಲು ಏನು ಮಾಡಿದನು?

9 “ನೀತಿವಂತರೆಂಬ ನಿರ್ಣಯ” ಇಲ್ಲವೆ ‘ನೀತಿವಂತರೆಂದು ನಿರ್ಣಯಿಸಲ್ಪಡುವುದು’ ಎಂಬ ಗ್ರೀಕ್‌ ಪದಗಳ ಒಳಾರ್ಥವೇನು? ಒಬ್ಬ ಬೈಬಲ್‌ ಅನುವಾದಕನು ಆ ಬಗ್ಗೆ ಬರೆದದ್ದು: “ಮೇಲ್ನೋಟಕ್ಕೆ ಕಾನೂನು ಸಂಬಂಧಿತ ಅಂಶವೆಂಬಂತೆ ಕಾಣುವ ಕಾನೂನು ರೂಪಕಾಲಂಕಾರ ಇದಾಗಿದೆ. ಇದು, ದೇವರ ಮುಂದೆ ಒಬ್ಬನ ಸ್ಥಾನ ಬದಲಾವಣೆಯ ಕುರಿತು ಮಾತಾಡುತ್ತದೆಯೇ ಹೊರತು ಒಬ್ಬನ ಅಂತರಂಗದಲ್ಲಾಗುವ ಬದಲಾವಣೆಯನ್ನಲ್ಲ . . . ಈ ರೂಪಕಾಲಂಕಾರವು ದೋಷಿಯ ಪರವಾಗಿ ತೀರ್ಪುಕೊಟ್ಟಿರುವ ನ್ಯಾಯಾಧಿಪತಿಯಂತೆ ದೇವರನ್ನು ಚಿತ್ರಿಸುತ್ತದೆ. ಅನೀತಿವಂತನೆಂಬ ದೋಷದ ಮೇರೆಗೆ ಅವನು ಸಾಂಕೇತಿಕ ಅರ್ಥದಲ್ಲಿ ದೇವರ ನ್ಯಾಯಾಲಯದ ಮುಂದೆ ತರಲ್ಪಟ್ಟನು. ಆದರೆ ದೇವರು ಅವನನ್ನು ಆ ದೋಷದಿಂದ ವಿಮುಕ್ತಗೊಳಿಸಿದನು.”

10. ಯೇಸು ಮಾಡಿದ ಯಾವ ವಿಷಯವು ಮಾನವರು ನೀತಿವಂತರೆಂದು ನಿರ್ಣಯಿಸಲ್ಪಡಲು ಆಧಾರವನ್ನು ಒದಗಿಸಿತು?

10 ನೀತಿಯುತವಾಗಿ “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಯಾವ ಆಧಾರದ ಮೇರೆಗೆ ಅನೀತಿವಂತನನ್ನು ದೋಷಮುಕ್ತಗೊಳಿಸುತ್ತಾನೆ? (ಆದಿ. 18:25) ಇದಕ್ಕೆ ತಳಪಾಯ ಹಾಕುತ್ತಾ ದೇವರು ಪ್ರೀತಿಯಿಂದ ತನ್ನ ಏಕೈಕಜಾತ ಮಗನನ್ನು ಭೂಮಿಗೆ ಕಳುಹಿಸಿದನು. ಯೇಸು ಪ್ರಲೋಭನೆಗಳು, ತೀವ್ರ ಕುಚೋದ್ಯ, ನಿಂದೆಯ ಮಧ್ಯೆಯೂ ತನ್ನ ತಂದೆಯ ಚಿತ್ತವನ್ನು ಪರಿಪೂರ್ಣವಾಗಿ ಮಾಡಿದನು. ಯಾತನಾ ಕಂಬದ ಮೇಲೆ ಮರಣ ಹೊಂದುವ ತನಕವೂ ಅವನು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. (ಇಬ್ರಿ. 2:10) ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಯಜ್ಞವಾಗಿ ಅರ್ಪಿಸುವ ಮೂಲಕ ಆದಾಮನ ಸಂತತಿಯನ್ನು ಪಾಪಮರಣದಿಂದ ಬಿಡುಗಡೆಗೊಳಿಸುವ ಅಥವಾ ವಿಮುಕ್ತಗೊಳಿಸುವ ವಿಮೋಚನಾ ಮೌಲ್ಯವನ್ನು ಒದಗಿಸಿದನು.—ಮತ್ತಾ. 20:28; ರೋಮ. 5:6-8.

11. ವಿಮೋಚನಾ ಮೌಲ್ಯವು ಅನುರೂಪವಾದ ಯಾವ ಸಂಗತಿಯ ಮೇಲೆ ಆಧರಿತವಾಗಿದೆ?

11 ಈ ವಿಮೋಚನಾ ಮೌಲ್ಯವನ್ನು ಪೌಲನು ಇನ್ನೊಂದು ಕಡೆ “ಅನುರೂಪವಾದ ವಿಮೋಚನಾ ಮೌಲ್ಯ” ಎಂದು ಹೇಳಿದ್ದಾನೆ. (1 ತಿಮೊ. 2:6) ಯಾವುದು ಅನುರೂಪವಾಗಿತ್ತು? ಆದಾಮನು ತನ್ನ ಸಂತತಿಯವರಾದ ಕೋಟ್ಯನುಕೋಟಿ ಮಂದಿಗೆ ಅಪರಿಪೂರ್ಣತೆ ಮತ್ತು ಮರಣವನ್ನು ದಾಟಿಸಿದನು. ಪರಿಪೂರ್ಣ ಮನುಷ್ಯನಾದ ಯೇಸು ಕೋಟ್ಯನುಕೋಟಿ ಮಂದಿ ಪರಿಪೂರ್ಣ ಸಂತತಿಯ ಮೂಲನಾಗುವ ಸಾಧ್ಯತೆಯಿತ್ತು ನಿಜ. * ಆದ್ದರಿಂದ ಯೇಸುವಿನ ಜೀವ ಮತ್ತು ಅವನಿಂದ ಹುಟ್ಟಸಾಧ್ಯವಿದ್ದ ಪರಿಪೂರ್ಣ ಸಂತತಿಯವರ ಜೀವವು ಆದಾಮನಿಗೂ ಅವನ ಅಪರಿಪೂರ್ಣ ಸಂತತಿಯವರಿಗೂ ಸಮನಾದ ಯಜ್ಞವನ್ನು ಒದಗಿಸಸಾಧ್ಯವಿತ್ತೆಂದು ಈ ಹಿಂದೆ ಅರ್ಥಮಾಡಿಕೊಳ್ಳಲಾಗಿತ್ತು. ಆದರೆ ಯೇಸುವಿನಿಂದ ಹುಟ್ಟಸಾಧ್ಯವಿದ್ದ ಸಂತತಿಯವರು ವಿಮೋಚನಾ ಮೌಲ್ಯದ ಒದಗಿಸುವಿಕೆಯಲ್ಲಿ ಭಾಗಿಗಳಾಗುವ ಸಾಧ್ಯತೆಯಿತ್ತೆಂದು ಬೈಬಲ್‌ ಹೇಳುವುದಿಲ್ಲ. ಕೇವಲ ‘ಒಬ್ಬ ಮನುಷ್ಯನ’ ಮರಣ ವಿಮೋಚನೆಯನ್ನು ಒದಗಿಸಿತೆಂದು ರೋಮನ್ನರಿಗೆ 5:15-19 ಸ್ಪಷ್ಟಪಡಿಸುತ್ತದೆ. ಹೌದು ಯೇಸುವಿನ ಪರಿಪೂರ್ಣ ಜೀವವು ಆದಾಮನ ಪರಿಪೂರ್ಣ ಜೀವಕ್ಕೆ ಅನುರೂಪವಾಗಿತ್ತು. ಆದ್ದರಿಂದ ಯೇಸು ಕ್ರಿಸ್ತನೊಬ್ಬನೇ ಕೇಂದ್ರಬಿಂದು ಆಗಿದ್ದಾನೆ ಮತ್ತು ಅವನೊಬ್ಬನೇ ಕೇಂದ್ರಬಿಂದು ಆಗಿರಬೇಕು. ಯೇಸುವಿನ “ಸಮರ್ಥನೆಯ ಒಂದು ಕ್ರಿಯೆಯ” ಮೂಲಕ ಅಂದರೆ ಮರಣದ ತನಕ ಅವನು ತೋರಿಸಿದ ವಿಧೇಯತೆ ಮತ್ತು ಸಮಗ್ರತೆಯ ಮೂಲಕ ಎಲ್ಲ ರೀತಿಯ ಜನರು ಉಚಿತ ವರವನ್ನು ಮತ್ತು ಜೀವವನ್ನು ಪಡೆಯಲು ಸಾಧ್ಯವಾಯಿತು. (2 ಕೊರಿಂ. 5:14, 15; 1 ಪೇತ್ರ 3:18) ಅದು ಹೇಗೆ ಸಾಧ್ಯವಾಯಿತು?

ವಿಮೋಚನಾ ಮೌಲ್ಯದ ಆಧಾರದಲ್ಲಿ ಬಿಡುಗಡೆ

12, 13. ನೀತಿವಂತರೆಂದು ನಿರ್ಣಯಿಸಲ್ಪಟ್ಟವರಿಗೆ ದೇವರ ಕರುಣೆ ಮತ್ತು ಪ್ರೀತಿ ಅಗತ್ಯವಿದೆಯೇಕೆ?

12 ಯೆಹೋವ ದೇವರು ತನ್ನ ಮಗ ಅರ್ಪಿಸಿದ ವಿಮೋಚನಾ ಮೌಲ್ಯದ ಯಜ್ಞವನ್ನು ಸ್ವೀಕರಿಸಿದನು. (ಇಬ್ರಿ. 9:24; 10:10, 12) ಹಾಗಿದ್ದರೂ ಭೂಮಿಯ ಮೇಲಿದ್ದ ಯೇಸುವಿನ ಶಿಷ್ಯರೆಲ್ಲರೂ, ಅವನ ನಂಬಿಗಸ್ತ ಅಪೊಸ್ತಲರು ಸಹ ಇನ್ನೂ ಅಪರಿಪೂರ್ಣರಾಗಿದ್ದರು. ತಪ್ಪನ್ನು ಮಾಡದಿರಲು ಅವರು ಪ್ರಯಾಸಪಡುತ್ತಿದ್ದರಾದರೂ ಎಲ್ಲ ಸಂದರ್ಭಗಳಲ್ಲಿ ಅವರದರಲ್ಲಿ ಸಫಲರಾಗಲಿಲ್ಲ. ಏಕೆ? ಏಕೆಂದರೆ ಬಾಧ್ಯತೆಯಾಗಿ ಪಡೆದ ಪಾಪ ಅವರಲ್ಲಿತ್ತು. (ರೋಮ. 7:18-20) ಆದರೆ ಈ ಸಂಬಂಧದಲ್ಲಿ ದೇವರು ಏನನ್ನೋ ಮಾಡಸಾಧ್ಯವಿತ್ತು ಮತ್ತು ಅದನ್ನಾತನು ಮಾಡಿದನು ಸಹ. ಏನದು? ಆತನು ‘ಅನುರೂಪವಾದ ವಿಮೋಚನಾ ಮೌಲ್ಯವನ್ನು’ ಸ್ವೀಕರಿಸಿ ತನ್ನ ಮಾನವ ಸೇವಕರ ಪ್ರಯೋಜನಾರ್ಥವಾಗಿ ಅದನ್ನು ಸಿದ್ಧಮನಸ್ಸಿನಿಂದ ಅನ್ವಯಿಸಿದನು.

13 ಅಪೊಸ್ತಲರು ಹಾಗೂ ಇನ್ನಿತರರು ಕೆಲವೊಂದು ಸತ್ಕಾರ್ಯಗಳನ್ನು ಮಾಡಿದ್ದರೆಂಬ ಕಾರಣಕ್ಕೆ ಅವರಿಗೆ ವಿಮೋಚನಾ ಮೌಲ್ಯದ ಪ್ರಯೋಜನಗಳನ್ನು ಅನ್ವಯಿಸುವ ಹಂಗು ದೇವರಿಗಿರಲಿಲ್ಲ. ಆದಾಗ್ಯೂ ಆತನು ಕರುಣೆ ಮತ್ತು ಅಪಾರ ಪ್ರೀತಿಯ ನಿಮಿತ್ತ ವಿಮೋಚನಾ ಮೌಲ್ಯವನ್ನು ಅವರ ಪರವಾಗಿ ಅನ್ವಯಿಸಿದನು. ಬಾಧ್ಯತೆಯಾಗಿ ಪಡೆದ ದೋಷದಿಂದ ಅಪೊಸ್ತಲರನ್ನೂ ಇನ್ನಿತರರನ್ನೂ ವಿಮುಕ್ತರೆಂಬಂತೆ ವೀಕ್ಷಿಸುತ್ತಾ ಅವರ ವಿರುದ್ಧ ಇದ್ದ ತೀರ್ಪಿನಿಂದ ಅವರನ್ನು ವಿಮೋಚಿಸಿದನು. ಪೌಲನು ಅದನ್ನು ಸರಳವಾಗಿ ಹೀಗಂದನು: “ಈ ಅಪಾತ್ರ ದಯೆಯಿಂದಾಗಿಯೇ ನೀವು ನಿಮ್ಮ ನಂಬಿಕೆಯ ಮೂಲಕ ರಕ್ಷಿಸಲ್ಪಟ್ಟಿದ್ದೀರಿ; ಇದು ನಿಮ್ಮಿಂದ ಉಂಟಾದದ್ದಲ್ಲ, ಇದು ದೇವರ ಉಡುಗೊರೆಯೇ.”—ಎಫೆ. 2:8.

14, 15. ದೇವರಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟಿರುವವರಿಗೆ ಯಾವ ಪ್ರತೀಕ್ಷೆಯಿತ್ತು? ಹಾಗಿದ್ದರೂ ಅವರು ಏನನ್ನು ಮಾಡಬೇಕಿತ್ತು?

14 ಒಬ್ಬನು ಬಾಧ್ಯತೆಯಾಗಿ ಪಡೆದ ಪಾಪವನ್ನು ಮಾತ್ರವಲ್ಲ ಅದರೊಟ್ಟಿಗೆ ಸ್ವತಃ ಅವನು ಮಾಡಿರುವ ತಪ್ಪುಗಳನ್ನು ಸಹ ಸರ್ವಶಕ್ತನು ಕ್ಷಮಿಸುವುದು ಒಂದು ಉಡುಗೊರೆಯೇ ಸರಿ! ಕ್ರೈಸ್ತರಾಗುವ ಮುನ್ನ ಯಾರು ಎಷ್ಟು ಪಾಪಗಳನ್ನು ಮಾಡಿರುತ್ತಾರೆಂದು ಲೆಕ್ಕಿಸಲಿಕ್ಕೂ ಸಾಧ್ಯವಿಲ್ಲ. ಆದರೂ ದೇವರು ವಿಮೋಚನಾ ಮೌಲ್ಯದ ಆಧಾರದ ಮೇಲೆ ಆ ಪಾಪಗಳನ್ನೆಲ್ಲ ಕ್ಷಮಿಸಬಲ್ಲನು. ಪೌಲನು ಬರೆದದ್ದು: “ಅನೇಕ ಅಪರಾಧಗಳಿಂದ ಫಲಿಸಿದ ವರವು ನೀತಿವಂತರೆಂಬ ನಿರ್ಣಯವಾಗಿದೆ.” (ರೋಮ. 5:16) ಈ ಪ್ರೀತಿಯ ವರವನ್ನು ಅಥವಾ ಉಡುಗೊರೆಯನ್ನು (ಅಂದರೆ ನೀತಿವಂತರೆಂದು ನಿರ್ಣಯಿಸಲ್ಪಡುವ ಉಡುಗೊರೆಯನ್ನು) ಪಡೆದ ಅಪೊಸ್ತಲರು ಮತ್ತು ಇತರರು ನಂಬಿಕೆಯಿಂದ ಸತ್ಯದೇವರನ್ನು ಆರಾಧಿಸುವುದನ್ನು ಮುಂದುವರಿಸಬೇಕಿತ್ತು. ಆಗ ಅವರಿಗೆ ಯಾವ ಆಶೀರ್ವಾದ ಸಿಗಲಿತ್ತು? “ಅಪಾತ್ರ ದಯೆಯನ್ನೂ ನೀತಿಯ ಉಚಿತ ವರವನ್ನೂ ಸಮೃದ್ಧವಾಗಿ ಪಡೆದಿರುವವರು ಯೇಸು ಕ್ರಿಸ್ತನೆಂಬ ಒಬ್ಬ ವ್ಯಕ್ತಿಯ ಮೂಲಕ ಜೀವದಲ್ಲಿ ಅರಸರಾಗಿ ಆಳುವರು.” ನೀತಿಯ ವರವು ಆದಾಮನು ಮಾಡಿದ ಅಪರಾಧದಿಂದ ಉಂಟಾದ ಪರಿಣಾಮಕ್ಕಿಂತ ವ್ಯತಿರಿಕ್ತವಾದ ಪರಿಣಾಮವನ್ನು ಉಂಟುಮಾಡುತ್ತದೆ. ಹೌದು, ಆ ವರವು ಜೀವವನ್ನು ಫಲಿಸುತ್ತದೆ.—ರೋಮ. 5:17; ಲೂಕ 22:28-30 ಓದಿ.

15 ಆ ವರವನ್ನು ಪಡೆದವರು ಅಂದರೆ ನೀತಿವಂತರೆಂದು ನಿರ್ಣಯಿಸಲ್ಪಟ್ಟವರು ದೇವರ ಆಧ್ಯಾತ್ಮಿಕ ಪುತ್ರರಾಗುತ್ತಾರೆ. ಕ್ರಿಸ್ತನೊಂದಿಗೆ ಜೊತೆ ಬಾಧ್ಯರಾದ ಅವರು ಆತ್ಮಪುತ್ರರಾಗಿ ಸ್ವರ್ಗಕ್ಕೆ ಪುನರುತ್ಥಾನಗೊಂಡು ಯೇಸು ಕ್ರಿಸ್ತನೊಂದಿಗೆ “ಅರಸರಾಗಿ ಆಳುವ” ಪ್ರತೀಕ್ಷೆಯನ್ನು ಹೊಂದಿದ್ದಾರೆ.—ರೋಮನ್ನರಿಗೆ 8:15-17, 23 ಓದಿ.

ದೇವರು ಇತರರಿಗೂ ತೋರಿಸಿದ ಪ್ರೀತಿ

16. ಭೂನಿರೀಕ್ಷೆಯುಳ್ಳವರು ಇಂದು ಸಹ ಯಾವ ಉಡುಗೊರೆಯನ್ನು ಪಡೆಯಸಾಧ್ಯವಿದೆ?

16 ದೇವರಲ್ಲಿ ನಂಬಿಕೆಯನ್ನಿಡುವ ಮತ್ತು ಆತನಿಗೆ ನಿಷ್ಠೆಯಿಂದ ಸೇವೆಸಲ್ಲಿಸುವ ಎಲ್ಲ ಕ್ರೈಸ್ತರಿಗೆ ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ “ಅರಸರಾಗಿ ಆಳುವ” ನಿರೀಕ್ಷೆ ಇಲ್ಲ. ಅವರಲ್ಲಿ ಹೆಚ್ಚಿನವರು ಕ್ರಿಸ್ತಪೂರ್ವದ ದೇವಸೇವಕರಿಗಿದ್ದಂಥ ಬೈಬಲಾಧರಿತ ನಿರೀಕ್ಷೆಯನ್ನು ಹೊಂದಿದ್ದಾರೆ. ಪರದೈಸ್‌ ಭೂಮಿಯಲ್ಲಿ ಶಾಶ್ವತವಾಗಿ ಜೀವಿಸುವುದನ್ನು ಅವರು ಎದುರುನೋಡುತ್ತಾರೆ. ಆದರೆ ಭೂನಿರೀಕ್ಷೆಯಿರುವ ಇವರು ದೇವರಿಂದ ಪ್ರೀತಿಯ ಉಡುಗೊರೆಯನ್ನು ಪಡೆದು ಇಂದು ಸಹ ನೀತಿವಂತರೆಂದು ವೀಕ್ಷಿಸಲ್ಪಡಲು ಸಾಧ್ಯವೋ? ಖಂಡಿತ ಹೌದು! ಪೌಲನು ರೋಮನ್ನರಿಗೆ ಬರೆದ ಪತ್ರದಲ್ಲಿ ಆ ಆಶ್ವಾಸನೆಯಿದೆ.

17, 18. (ಎ) ಅಬ್ರಹಾಮನ ನಂಬಿಕೆಯ ನಿಮಿತ್ತವಾಗಿ ದೇವರು ಅವನನ್ನು ಹೇಗೆ ಪರಿಗಣಿಸಿದನು? (ಬಿ) ಯೆಹೋವನು ಅಬ್ರಹಾಮನನ್ನು ನೀತಿವಂತನೆಂದು ಹೇಗೆ ಪರಿಗಣಿಸಸಾಧ್ಯವಿತ್ತು?

17 ಯೆಹೋವನು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮುಂಚೆ ಮತ್ತು ಕ್ರಿಸ್ತನು ಸ್ವರ್ಗೀಯ ಜೀವನಕ್ಕೆ ದಾರಿಯನ್ನು ತೆರೆಯುವುದಕ್ಕೆ ಎಷ್ಟೋ ಸಮಯದ ಮುಂಚೆ ಜೀವಿಸಿದ ನಂಬಿಗಸ್ತ ಮನುಷ್ಯನಾದ ಅಬ್ರಹಾಮನ ಅತ್ಯುತ್ತಮ ಉದಾಹರಣೆಯನ್ನು ಪೌಲನು ತಿಳಿಸಿದನು. (ಇಬ್ರಿ. 10:19, 20) ನಾವು ಓದುವುದು: “ಅಬ್ರಹಾಮನು ಲೋಕಕ್ಕೆ ಬಾಧ್ಯಸ್ಥನಾಗುವನು ಎಂಬ ವಾಗ್ದಾನವು ಅವನಿಗಾಗಲಿ ಅವನ ಸಂತಾನಕ್ಕಾಗಲಿ ದೊರಕಿದ್ದು ಧರ್ಮಶಾಸ್ತ್ರದ ಮೂಲಕವಾಗಿ ಅಲ್ಲ, ನಂಬಿಕೆಯ ಮೂಲಕ ಸಿಕ್ಕಿದ ನೀತಿಯಿಂದ ದೊರಕಿತು.” (ರೋಮ. 4:13; ಯಾಕೋ. 2:23, 24) ಹಾಗಾದರೆ ನಂಬಿಗಸ್ತನಾಗಿದ್ದ ಅಬ್ರಹಾಮನನ್ನು ದೇವರು ನೀತಿವಂತನೆಂದು ಎಣಿಸಿದನು.—ರೋಮನ್ನರಿಗೆ 4:20-22 ಓದಿ.

18 ಇದರರ್ಥ, ಅಬ್ರಹಾಮನು ದಶಕಗಳಿಂದ ಯೆಹೋವನ ಸೇವೆಮಾಡುತ್ತಿದ್ದಾಗ ಪಾಪರಹಿತನಾಗಿದ್ದನೆಂದಲ್ಲ. ಆ ಅರ್ಥದಲ್ಲಿ ಅವನು ನೀತಿವಂತನಾಗಿರಲಿಲ್ಲ. (ರೋಮ. 3:10, 23) ಆದರೂ ಅಪರಿಮಿತ ವಿವೇಕವುಳ್ಳ ಯೆಹೋವನು ಅಬ್ರಹಾಮನ ಅಸಾಧಾರಣ ನಂಬಿಕೆ ಮತ್ತು ಅದಕ್ಕನುಗುಣವಾಗಿ ಅವನು ಮಾಡಿದ ಕ್ರಿಯೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡನು. ಮುಖ್ಯವಾಗಿ ಅಬ್ರಹಾಮನು ತನ್ನ ಮೂಲಕ ಬರಲಿದ್ದ ವಾಗ್ದತ್ತ ‘ಸಂತತಿಯಲ್ಲಿ’ ನಂಬಿಕೆಯನ್ನು ವ್ಯಕ್ತಪಡಿಸಿದನು. ಆ ಸಂತತಿ ಮೆಸ್ಸೀಯ ಅಥವಾ ಕ್ರಿಸ್ತನಾಗಿದ್ದನು. (ಆದಿ. 15:6; 22:15-18) ಆದ್ದರಿಂದ ‘ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದ’ ಆಧಾರದ ಮೇರೆಗೆ ನ್ಯಾಯಾಧಿಪತಿಯಾದ ಯೆಹೋವನು ಮುಂಚಿನ ಪಾಪಗಳನ್ನು ಕ್ಷಮಿಸಶಕ್ತನಾದನು. ಹಾಗಾಗಿ ಅಬ್ರಹಾಮ ಮತ್ತು ಕ್ರಿಸ್ತಪೂರ್ವದ ಇತರ ನಂಬಿಗಸ್ತ ವ್ಯಕ್ತಿಗಳು ಪುನರುತ್ಥಾನ ಹೊಂದಲಿದ್ದಾರೆ.—ರೋಮನ್ನರಿಗೆ 3:24, 25 ಓದಿ; ಕೀರ್ತ. 32:1, 2.

ಈಗ ನೀತಿಯ ನಿಲುವನ್ನು ಹೊಂದಿರಿ

19. ಅಬ್ರಹಾಮನ ಬಗ್ಗೆ ದೇವರಿಗಿದ್ದ ದೃಷ್ಟಿಕೋನವು ಇಂದಿರುವ ಅನೇಕರಿಗೆ ಉತ್ತೇಜನದಾಯಕವಾಗಿರಬೇಕು ಏಕೆ?

19 ಪ್ರೀತಿಯ ದೇವರು ಅಬ್ರಹಾಮನನ್ನು ನೀತಿವಂತನೆಂದು ಎಣಿಸಿದ ನಿಜತ್ವವು ಇಂದಿನ ನಿಜ ಕ್ರೈಸ್ತರಿಗೆ ಉತ್ತೇಜನದಾಯಕವಾಗಿರಬೇಕು. ‘ಕ್ರಿಸ್ತನೊಂದಿಗೆ ಜೊತೆ ಬಾಧ್ಯರಾಗಿರಲು’ ಪವಿತ್ರಾತ್ಮದ ಮೂಲಕ ಅಭಿಷೇಕಿಸಲ್ಪಡುವವರನ್ನು ಯೆಹೋವನು ಯಾವ ಅರ್ಥದಲ್ಲಿ ನೀತಿವಂತರೆಂದು ನಿರ್ಣಯಿಸುತ್ತಾನೋ ಆ ಅರ್ಥದಲ್ಲಿ ಅಬ್ರಹಾಮನನ್ನು ನೀತಿವಂತನೆಂದು ನಿರ್ಣಯಿಸಲಿಲ್ಲ. ಸೀಮಿತ ಸಂಖ್ಯೆಯಲ್ಲಿರುವ ಆ ಅಭಿಷಿಕ್ತರು “ಪವಿತ್ರ ಜನರಾಗಿರಲು ಕರೆಯಲ್ಪಟ್ಟಿರುವವರೂ” “ದೇವರ ಪುತ್ರರಾಗಿ” ಸ್ವೀಕರಿಸಲ್ಪಟ್ಟಿರುವವರೂ ಆಗಿದ್ದಾರೆ. (ರೋಮ. 1:7; 8:14, 17, 33) ಇದಕ್ಕೆ ವ್ಯತಿರಿಕ್ತವಾಗಿ ಅಬ್ರಹಾಮನು ‘ಯೆಹೋವನ ಸ್ನೇಹಿತನಾಗಿದ್ದನು.’ ಅದರಲ್ಲೂ ವಿಮೋಚನಾ ಮೌಲ್ಯದ ಯಜ್ಞ ಅರ್ಪಿಸಲ್ಪಡುವುದಕ್ಕೂ ಮುಂಚೆಯೇ ಹಾಗೆ ಕರೆಯಲ್ಪಟ್ಟನು. (ಯಾಕೋ. 2:23; ಯೆಶಾ. 41:8) ಹಾಗಾದರೆ ಪುನಃಸ್ಥಾಪಿಸಲ್ಪಡುವ ಭೂಪರದೈಸ್‌ನಲ್ಲಿ ಜೀವಿಸುವ ನಿರೀಕ್ಷೆಯುಳ್ಳ ನಿಜ ಕ್ರೈಸ್ತರ ಕುರಿತೇನು?

20. ದೇವರು ಅಬ್ರಹಾಮನನ್ನು ವೀಕ್ಷಿಸಿದಂತೆ ಇಂದು ಯಾರನ್ನು ನೀತಿವಂತರೆಂದು ವೀಕ್ಷಿಸುತ್ತಾನೋ ಅವರಿಂದ ಏನನ್ನು ಅಪೇಕ್ಷಿಸುತ್ತಾನೆ?

20 ಇವರು “ಕ್ರಿಸ್ತ ಯೇಸು ನೀಡಿದ ವಿಮೋಚನಾ ಮೌಲ್ಯದಿಂದ ಬಿಡುಗಡೆಯನ್ನು ಹೊಂದುವ ಮೂಲಕ” ‘ನೀತಿಯ ಉಚಿತ ವರವನ್ನು’ ಪಡೆಯುವುದು ಸ್ವರ್ಗೀಯ ಜೀವನದ ನಿರೀಕ್ಷೆಯೊಂದಿಗೆ ಅಲ್ಲ. (ರೋಮ. 3:24; 5:15, 17) ಹಾಗಿದ್ದರೂ ಅವರು ದೇವರಲ್ಲಿ ಮತ್ತು ಆತನು ಒದಗಿಸಿದ ವಿಮೋಚನಾ ಮೌಲ್ಯದಲ್ಲಿ ಆಳವಾದ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ ಹಾಗೂ ತಮ್ಮ ನಂಬಿಕೆಯನ್ನು ಸತ್ಕ್ರಿಯೆಗಳ ಮೂಲಕ ತೋರಿಸಿಕೊಡುತ್ತಾರೆ. ಆ ಸತ್ಕ್ರಿಯೆಗಳಲ್ಲಿ ಒಂದು ‘ದೇವರ ರಾಜ್ಯದ ಕುರಿತು ಸಾರುವುದು ಮತ್ತು ಕರ್ತನಾದ ಯೇಸು ಕ್ರಿಸ್ತನ ಕುರಿತು ಬೋಧಿಸುವುದಾಗಿದೆ.’ (ಅ. ಕಾ. 28:31) ಆದ್ದರಿಂದ ಯೆಹೋವನು ಅಬ್ರಹಾಮನನ್ನು ಪರಿಗಣಿಸಿದ ಅರ್ಥದಲ್ಲಿ ಇವರನ್ನು ನೀತಿವಂತರೆಂದು ಪರಿಗಣಿಸಬಲ್ಲನು. ಇವರು ಪಡೆಯುವ ವರವು ದೇವರೊಂದಿಗಿನ ಸ್ನೇಹಸಂಬಂಧವಾಗಿದೆ ಮತ್ತು ಆ ವರವು ಅಭಿಷಿಕ್ತರು ಪಡೆಯುವ ‘ಉಚಿತ ವರಕ್ಕಿಂತ’ ಭಿನ್ನವಾಗಿದೆ. ಆದರೂ ಅವರದನ್ನು ಆಳವಾದ ಕೃತಜ್ಞತೆಯೊಂದಿಗೆ ಸ್ವೀಕರಿಸುತ್ತಾರೆ.

21. ಯೆಹೋವನ ಪ್ರೀತಿ ಮತ್ತು ನ್ಯಾಯದಿಂದಾಗಿ ನಾವು ಹೇಗೆ ಪ್ರಯೋಜನ ಹೊಂದುತ್ತೇವೆ?

21 ಮಾನವ ಅಧಿಪತಿಗಳು ಅನೇಕ ವಾಗ್ದಾನಗಳನ್ನು ಮಾಡುತ್ತಾರಾದರೂ ನಿತ್ಯಜೀವದ ನಿರೀಕ್ಷೆ ನಿಮಗೆ ಸಿಕ್ಕಿರುವುದು ಅವರಿಂದಲ್ಲ. ನಿತ್ಯಜೀವದ ಸದವಕಾಶವು ವಿಶ್ವದ ಪರಮಾಧಿಕಾರಿಯ ವಿವೇಕಯುತ ಉದ್ದೇಶವಾಗಿದೆ. ಯೆಹೋವನು ತನ್ನ ಉದ್ದೇಶವನ್ನು ಈಡೇರಿಸಲು ಪ್ರಗತಿಪರ ಹೆಜ್ಜೆಗಳನ್ನು ತೆಗೆದುಕೊಂಡಿದ್ದಾನೆ. ಈ ಹೆಜ್ಜೆಗಳು ಪರಿಪೂರ್ಣ ನ್ಯಾಯಕ್ಕೆ ಹೊಂದಿಕೆಯಲ್ಲಿವೆ. ಅದಕ್ಕಿಂತಲೂ ಹೆಚ್ಚಾಗಿ ಅವು ದೇವರ ಅಪಾರ ಪ್ರೀತಿಯನ್ನು ತೋರಿಸಿವೆ. ಆದ್ದರಿಂದ ಪೌಲನು ಹೀಗೆ ಹೇಳಶಕ್ತನಾದನು: “ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ.”—ರೋಮ. 5:8.

[ಪಾದಟಿಪ್ಪಣಿ]

^ ಪ್ಯಾರ. 11 ಉದಾಹರಣೆಗೆ, ಸಂತತಿ ಅಥವಾ ವಂಶಜರ ಕುರಿತ ಈ ವಿಚಾರವು ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್‌) ಸಂಪುಟ 2, ಪುಟ 736, ಪ್ಯಾರ 4-5ರಲ್ಲಿದೆ.

ನಿಮಗೆ ನೆನಪಿದೆಯೇ?

• ಆದಾಮನ ಸಂತತಿಯವರು ಏನನ್ನು ಬಾಧ್ಯತೆಯಾಗಿ ಪಡೆದಿದ್ದಾರೆ? ಫಲಿತಾಂಶವೇನು?

• ಅನುರೂಪವಾದ ವಿಮೋಚನಾ ಮೌಲ್ಯ ಹೇಗೆ ಒದಗಿಸಲ್ಪಟ್ಟಿತು? ಅದು ಯಾವ ಅರ್ಥದಲ್ಲಿ ಅನುರೂಪವಾಗಿತ್ತು?

• ನೀತಿವಂತರೆಂದು ನಿರ್ಣಯಿಸಲ್ಪಡುವ ಉಡುಗೊರೆಯು ನಿಮಗೆ ಯಾವ ಪ್ರತೀಕ್ಷೆಯನ್ನು ಕೊಟ್ಟಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಪರಿಪೂರ್ಣ ಮನುಷ್ಯನಾದ ಆದಾಮನು ಪಾಪಮಾಡಿದನು. ಪರಿಪೂರ್ಣ ಮನುಷ್ಯನಾದ ಯೇಸು ‘ಅನುರೂಪವಾದ ವಿಮೋಚನಾ ಮೌಲ್ಯವನ್ನು’ ಒದಗಿಸಿದನು

[ಪುಟ 15ರಲ್ಲಿರುವ ಚಿತ್ರ]

ಯೇಸುವಿನ ಮೂಲಕ ನಾವು ನೀತಿವಂತರೆಂದು ನಿರ್ಣಯಿಸಲ್ಪಡಸಾಧ್ಯವಿದೆ ಎಂಬುದು ನಿಜಕ್ಕೂ ಸುವಾರ್ತೆಯೇ!