ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾರಾದರೂ ನಿಮ್ಮಿಂದ ಸಲಹೆ ಕೇಳುವಲ್ಲಿ?

ಯಾರಾದರೂ ನಿಮ್ಮಿಂದ ಸಲಹೆ ಕೇಳುವಲ್ಲಿ?

ಯಾರಾದರೂ ನಿಮ್ಮಿಂದ ಸಲಹೆ ಕೇಳುವಲ್ಲಿ?

‘ನೀವೇ ಹೇಳಿ ಈಗ ನಾನೇನು ಮಾಡಲಿ? ನಾನು ಆ ಸಮಾರಂಭಕ್ಕೆ ಹೋಗಬೇಕಾ? ಈ ನೌಕರಿಗೆ ಸೇರಿಕೊಳಬಹುದಾ? ಅವರನ್ನು ಮದುವೆಯಾಗಬಹುದಾ?’ ಎಂದು ನಿಮ್ಮ ಬಳಿ ಯಾರಾದರೂ ಸಲಹೆ ಕೇಳಿದ್ದುಂಟಾ?

ಕೆಲವರು ನಿರ್ಣಯಗಳನ್ನು ಮಾಡುವಾಗ ಯಥಾರ್ಥ ಮನಸ್ಸಿನಿಂದ ನಿಮ್ಮ ಸಹಾಯ ಕೋರಬಹುದು. ಅವರು ತಕ್ಕೊಳ್ಳಲಿರುವ ಆ ನಿರ್ಣಯ ಕುಟುಂಬದೊಂದಿಗೆ, ಮಿತ್ರರೊಂದಿಗೆ ಮಾತ್ರವಲ್ಲ ಯೆಹೋವನೊಂದಿಗೆ ಅವರಿಗಿರುವ ಸಂಬಂಧದ ಮೇಲೂ ಪರಿಣಾಮ ಬೀರುವಂಥದ್ದಾಗಿರಬಹುದು. ಹಾಗಿರುವಾಗ ನೀವು ಯಾವುದರ ಆಧಾರದ ಮೇಲೆ ಸಲಹೆ ಕೊಡುವಿರಿ? ಸ್ವಂತ ಬುದ್ಧಿಯ ಮೇಲೋ ಬೈಬಲಿನ ಮೇಲೋ? ನಿರ್ಣಯಗಳನ್ನು ಮಾಡಲು ನೀವು ಇತರರಿಗೆ ಸಹಾಯ ಮಾಡುವಾಗ ಸಹಜವಾಗಿ ನೀವೇನು ಮಾಡುತ್ತಿದ್ದಿರಿ? ಒಬ್ಬ ವ್ಯಕ್ತಿ ಪ್ರಸ್ತಾಪಿಸುವ ಸಂಗತಿ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಸಲಹೆ ಕೊಡುವಾಗ ಜ್ಞಾನೋಕ್ತಿ 15:28 ತಿಳಿಸುವಂತೆ “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ.” ಬೈಬಲಿನ ಐದು ಮೂಲತತ್ವಗಳು ಸಲಹೆ ಕೊಡುವ ವಿಷಯದಲ್ಲಿ ನಮಗೆ ಹೇಗೆ ಸಹಾಯ ಮಾಡುತ್ತವೆಂದು ಈಗ ನೋಡೋಣ.

1 ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ.

“ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.”ಜ್ಞಾನೋ. 18:13.

ಉತ್ತಮ ಸಲಹೆ ಕೊಡಬೇಕಾದರೆ ಮೊದಲಾಗಿ ನಾವು ಸಹಾಯ ಕೋರುವ ವ್ಯಕ್ತಿಯ ಪರಿಸ್ಥಿತಿಯನ್ನು, ಅವನ ಅಭಿಪ್ರಾಯವನ್ನು ಅರ್ಥಮಾಡಿಕೊಳ್ಳಬೇಕು. ನಿಮಗೆ ಮಿತ್ರರೊಬ್ಬರು ಫೋನ್‌ ಮಾಡಿ ನಿಮ್ಮ ಮನೆಗೆ ಬರಲು ಸುಲಭ ದಾರಿ ಯಾವುದೆಂದು ಕೇಳುತ್ತಾರೆ ಎಂದಿಟ್ಟುಕೊಳ್ಳಿ. ಅವರಿಗೆ ಸಹಾಯ ಮಾಡಲು ನೀವು ಮೊದಲು ಏನು ಮಾಡುವಿರಿ? ಅವರು ಸದ್ಯಕ್ಕೆ ಯಾವ ಸ್ಥಳದಲ್ಲಿದ್ದಾರೆಂದು ಕೇಳದೆ ಮಾರ್ಗವನ್ನು ಸೂಚಿಸುವಿರಾ? ಇಲ್ಲ ಅಲ್ಲವೇ? ಅದೇ ರೀತಿ ಸೂಕ್ತ ಮಾರ್ಗದರ್ಶನೆ ನೀಡಬೇಕಾದರೆ ಆ ವ್ಯಕ್ತಿಯ ಸದ್ಯದ ಪರಿಸ್ಥಿತಿ ಮತ್ತು ಅವನ ಅಭಿಪ್ರಾಯವನ್ನು ತಿಳಿದುಕೊಳ್ಳಬೇಕು. ಕೆಲವೊಮ್ಮೆ ವ್ಯಕ್ತಿಯ ಪರಿಸ್ಥಿತಿಗನುಸಾರ ನಾವು ಕೊಡುವ ಸಲಹೆಯನ್ನು ಬದಲಾಯಿಸುವ ಅಗತ್ಯವೇಳಬಹುದು. ಒಂದುವೇಳೆ ನಾವು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ ಸಲಹೆ ನೀಡುವಲ್ಲಿ ಅದು ಆ ವ್ಯಕ್ತಿಯನ್ನು ಇನ್ನೂ ಹೆಚ್ಚು ಗೊಂದಲಗೊಳಿಸಬಹುದು.—ಲೂಕ 6:39.

ಅವರೆಷ್ಟು ಸಂಶೋಧನೆ ಮಾಡಿದ್ದಾರೆಂದು ತಿಳಿದುಕೊಳ್ಳಿ. ಸಲಹೆ ಕೋರುವ ವ್ಯಕ್ತಿಯನ್ನು ಹೀಗೆ ಕೇಳುವುದು ಕೂಡ ವಿವೇಕಯುತ: “ಬೈಬಲಿನ ಯಾವ ಮೂಲತತ್ವಗಳು ನಿಮಗೆ ಸಹಾಯ ಮಾಡುತ್ತವೆಂದು ನೆನಸುತ್ತೀರಿ?” “ನೀವು ತಕ್ಕೊಳ್ಳಬಹುದಾದ ನಿರ್ಣಯಗಳ ಸಾಧಕ-ಬಾಧಕಗಳೇನು?” “ನೀವೀಗಾಗಲೇ ಎಷ್ಟು ಸಂಶೋಧನೆ ಮಾಡಿದ್ದೀರಿ?” “ಸಭಾ ಹಿರಿಯರು, ಹೆತ್ತವರು, ಬೈಬಲ್‌ ಅಧ್ಯಯನ ನಡೆಸುವವರು ಅಥವಾ ಇತರರು ನಿಮಗೆ ಈಗಾಗಲೇ ಯಾವ ಸಹಾಯ ನೀಡಿದ್ದಾರೆ?”

ಅವರು ಕೊಡುವ ಉತ್ತರ ಈಗಾಗಲೇ ಅವರೆಷ್ಟು ಪ್ರಯತ್ನ ಹಾಕಿದ್ದಾರೆಂದು ತಿಳಿಯಲು ಮತ್ತು ಇತರರಿಂದ ಅವರು ಯಾವುದಾದರೂ ಸಲಹೆ ಪಡೆದಿದ್ದಾರೋ ಎನ್ನುವುದನ್ನು ತಿಳಿಯಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಆ ವ್ಯಕ್ತಿ ‘ತನ್ನ ಕಿವಿಗಳನ್ನು ಪುಳಕಗೊಳಿಸುವ’ ಅಂದರೆ ತಮಗಿಷ್ಟವಾದ ಸಲಹೆಯನ್ನು ಪಡೆಯುವ ಸಲುವಾಗಿ ಒಬ್ಬರ ನಂತರ ಇನ್ನೊಬ್ಬರನ್ನು ಕೇಳುತ್ತಿದ್ದಾರಾ ಎನ್ನುವುದೂ ಸ್ಪಷ್ಟವಾಗುತ್ತದೆ.—2 ತಿಮೊ. 4:3.

2 ದುಡುಕಿ ಉತ್ತರಿಸಬೇಡಿ.

“ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.”ಯಾಕೋ. 1:19.

ಕೆಲವೊಮ್ಮೆ ಒಳ್ಳೇ ಉದ್ದೇಶದಿಂದ ನಾವು ಆ ಕೂಡಲೆ ಉತ್ತರ ಕೊಡಬಹುದು. ಆದರೆ ಪ್ರಶ್ನೆಯ ಬಗ್ಗೆ ಸಂಪೂರ್ಣ ಸಂಶೋಧನೆ ಮಾಡದೆ ದುಡುಕಿ ಉತ್ತರ ಕೊಡುವುದು ವಿವೇಕಯುತವೋ? “ದುಡುಕಿ ಮಾತಾಡುವವನನ್ನು ನೋಡು; ಅಂಥವನಿಗಿಂತಲೂ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯನ್ನಿಡಬಹುದು” ಎನ್ನುತ್ತದೆ ಜ್ಞಾನೋಕ್ತಿ 29:20.

ಆದುದರಿಂದ ನೀವು ಕೊಡುವ ಸಲಹೆ ದೇವರ ವಾಕ್ಯದಲ್ಲಿರುವ ವಿವೇಕದ ಮೇಲೆ ಪೂರ್ತಿ ಆಧಾರಗೊಂಡಿದೆಯೋ ಎಂದು ಖಚಿತಪಡಿಸಿಕೊಳ್ಳಿ. ‘ನನ್ನ ಯೋಚನೆಯನ್ನು “ಲೋಕದ ಮನೋಭಾವ” ಮತ್ತು ಯೋಚನಾಧಾಟಿ ಪ್ರಭಾವಿಸಿದೆಯೇ?’ ಎಂದು ಕೇಳಿಕೊಳ್ಳಿ. (1 ಕೊರಿಂ. 2:12, 13) ನಮ್ಮಲ್ಲಿ ಸದುದ್ದೇಶವಿದ್ದರೆ ಮಾತ್ರ ಸಾಲದು. ಯೇಸು ಅನುಭವಿಸಲಿದ್ದ ಕಷ್ಟವನ್ನು ತಿಳಿದಾಗ ಅಪೊಸ್ತಲ ಪೇತ್ರ ಅವನಿಗೆ “ಕರ್ತನೇ, ನಿನಗೆ ದಯೆತೋರಿಸಿಕೋ; ನಿನಗೆ ಈ ಗತಿ ಎಂದಿಗೂ ಆಗದು” ಎಂದು ಸಲಹೆ ಕೊಟ್ಟನು. ಪೇತ್ರನ ಪ್ರತಿಕ್ರಿಯೆಯಿಂದ ನಾವೇನು ಕಲಿಯಬಲ್ಲೆವು? ಸದುದ್ದೇಶವಿದ್ದರೂ ಜಾಗ್ರತೆ ವಹಿಸದಿದ್ದರೆ ನಾವು ದೇವರ ಆಲೋಚನೆಗಳನ್ನಲ್ಲ ಮನುಷ್ಯರ ಆಲೋಚನೆಗಳನ್ನು ಬೆಂಬಲಿಸುವಂಥ ಸಲಹೆಯನ್ನು ಕೊಡುವ ಅಪಾಯಕ್ಕೊಳಗಾಗಬಹುದು. (ಮತ್ತಾ. 16:21-23) ಹಾಗಾಗಿ ಯೋಚಿಸಿ ಮಾತಾಡುವುದು ಬಹು ಪ್ರಾಮುಖ್ಯ. ದೇವರ ಅಪಾರ ವಿವೇಕದ ಮುಂದೆ ನಮಗಿರುವ ಅನುಭವ ಅತ್ಯಲ್ಪವೇ ಸರಿ!—ಯೋಬ 38:1-4; ಜ್ಞಾನೋ. 11:2.

3 ದೀನತೆಯಿಂದ ದೇವರ ವಾಕ್ಯವನ್ನು ಅನ್ವಯಿಸಿ.

“ನನ್ನ ಸ್ವಪ್ರೇರಣೆಯಿಂದ ನಾನು ಏನೂ ಮಾಡದೆ ತಂದೆಯು ಕಲಿಸಿಕೊಟ್ಟಂತೆಯೇ ಈ ಎಲ್ಲ ವಿಷಯಗಳನ್ನು ಮಾತಾಡುತ್ತೇನೆ.”ಯೋಹಾ. 8:28.

‘ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದರೆ ಹೀಗೆ ಮಾಡುತ್ತಿದ್ದೆ’ ಎಂದನ್ನುತ್ತೀರಾ? ಸಲಹೆ ಕೇಳುವ ವ್ಯಕ್ತಿಯ ಪ್ರಶ್ನೆ ಉತ್ತರಿಸಲು ತುಂಬ ಸುಲಭವಾಗಿದ್ದರೂ ದೀನತೆ ಮತ್ತು ನಮ್ರತೆಯ ವಿಷಯದಲ್ಲಿ ಯೇಸುವಿಟ್ಟ ಮಾದರಿಯನ್ನು ಅನುಸರಿಸುವುದು ಉತ್ತಮ. ಯಾವನೇ ಮಾನವನಿಗಿಂತಲೂ ಅಪಾರ ಜ್ಞಾನ, ಅನುಭವ ಯೇಸುವಿಗಿತ್ತು. ಹಾಗಿದ್ದರೂ ಅವನು ಏನು ಹೇಳಿದನೆಂದು ಗಮನಿಸಿ: “ನನ್ನ ಸ್ವಂತ ಪ್ರೇರಣೆಯಿಂದ ನಾನು ಮಾತಾಡಲಿಲ್ಲ; ಏನು ಹೇಳಬೇಕು ಮತ್ತು ಏನು ಮಾತಾಡಬೇಕು ಎಂದು . . . ತಂದೆಯೇ ನನಗೆ ಆಜ್ಞೆಯನ್ನು ಕೊಟ್ಟಿದ್ದಾನೆ.” (ಯೋಹಾ. 12:49, 50) ಹೌದು, ಯೇಸುವಿನ ಬೋಧನೆಗಳು ಮತ್ತು ಸಲಹೆ ಸದಾ ಅವನ ತಂದೆಯ ಚಿತ್ತದ ಮೇಲೆ ಆಧರಿತವಾಗಿತ್ತು.

ಇದಕ್ಕೊಂದು ಒಳ್ಳೇ ಉದಾಹರಣೆ ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯಂದು ನಡೆದ ಘಟನೆ. ಅಂದು ಯೇಸುವನ್ನು ಬಂಧಿಸಲು ಬಂದ ಗುಂಪಿನ ವಿರುದ್ಧ ಹೋರಾಡಬೇಕೋ ಎಂದು ಶಿಷ್ಯರು ಅವನ ಬಳಿ ಸಲಹೆ ಕೇಳಿದರೆಂದು ಲೂಕ 22:49ರಲ್ಲಿ ನಾವು ಓದುತ್ತೇವೆ. ಒಬ್ಬ ಶಿಷ್ಯನು ಕತ್ತಿಯನ್ನು ಉಪಯೋಗಿಸಿಯೇ ಬಿಟ್ಟನು. ಇದೇ ವೃತ್ತಾಂತವನ್ನು ಮತ್ತಾಯ 26:52-54ರಲ್ಲಿ ಗಮನಿಸಿ. ಯೇಸು ಅಂಥ ಸಂದರ್ಭದಲ್ಲೂ ತನ್ನ ಶಿಷ್ಯರೊಂದಿಗೆ ಯೆಹೋವನ ಚಿತ್ತದ ಕುರಿತು ತರ್ಕಬದ್ಧವಾಗಿ ಮಾತಾಡಲು ಸಮಯ ತಕ್ಕೊಂಡನು. ಆದಿಕಾಂಡ 9:6ರಲ್ಲಿರುವ ಸೂತ್ರ ಮತ್ತು ಕೀರ್ತನೆ 22, ಯೆಶಾಯ 53ರಲ್ಲಿರುವ ಪ್ರವಾದನೆಯನ್ನು ಅರಿತಿದ್ದ ಯೇಸು ಆ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದನು. ಇದು ಇತರರ ಜೀವ ಉಳಿಸಿತು, ಯೆಹೋವನನ್ನು ಮೆಚ್ಚಿಸಿತು.

4 ದೇವಪ್ರಭುತ್ವಾತ್ಮಕ ಲೈಬ್ರರಿಯನ್ನು ಸದುಪಯೋಗಿಸಿ.

“ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?”ಮತ್ತಾ. 24:45.

ನಮಗೆ ಅತ್ಯಾವಶ್ಯಕ ಆಧ್ಯಾತ್ಮಿಕ ಆಹಾರವನ್ನು ಒದಗಿಸಲು ಯೇಸು ಭರವಸಾರ್ಹ ಆಳು ವರ್ಗವನ್ನು ನೇಮಿಸಿದ್ದಾನೆ. ಪ್ರಾಮುಖ್ಯ ವಿಷಯಗಳ ಸಂಬಂಧದಲ್ಲಿ ನೀವು ಇತರರಿಗೆ ಸಲಹೆ, ಮಾರ್ಗದರ್ಶನವನ್ನು ನೀಡಬೇಕಿರುವಾಗ ಬೈಬಲಾಧರಿತ ಪ್ರಕಾಶನಗಳಲ್ಲಿ ಪೂರ್ಣ ಸಂಶೋಧನೆ ಮಾಡಲು ಸಮಯ ತಕ್ಕೊಳ್ಳುತ್ತೀರೋ?

ವಾಚ್‌ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಮತ್ತು ವಾಚ್‌ಟವರ್‌ ಲೈಬ್ರರಿಯನ್ನು * ಉಪಯೋಗಿಸುವಾಗ ಸ್ಪಷ್ಟವಾದ ಮಾಹಿತಿಯ ಮಹಾಪೂರ ನಿಮ್ಮ ಬೆರಳತುದಿಯಲ್ಲಿರುತ್ತದೆ. ಡಿಸೆಂಬರ್‌ ತಿಂಗಳ ಕಾವಲಿನಬುರುಜು ಪತ್ರಿಕೆಯ ಕೊನೆಯ ಪುಟದಲ್ಲಿರುವ ವಿಷಯಸೂಚಿಯಲ್ಲಿ ಪಟ್ಟಿಮಾಡಿರುವ ಲೇಖನಗಳು ಸಹ ಉತ್ತಮ ಸಲಹೆ ಪಡೆಯಲು ಸಹಾಯಕರ. ಇಂಥ ಮಾಹಿತಿಯ ಭಂಡಾರವನ್ನು ಕಡೆಗಣಿಸುವುದು ಎಷ್ಟು ದೊಡ್ಡ ತಪ್ಪಾಗಿರುವುದು! ಅದರಲ್ಲಿ ಸಾವಿರಾರು ವಿಷಯಗಳನ್ನು ಅನುಕ್ರಮದಲ್ಲಿ ಪಟ್ಟಿಮಾಡಲಾಗಿದೆ. ಸಂಬಂಧಿಸಿದ ಅನೇಕಾನೇಕ ಲೇಖನಗಳನ್ನು ಸೂಚಿಸಲಾಗಿದೆ. ಈ ಲೇಖನಗಳು ಸಲಹೆಯ ಅಗತ್ಯವಿರುವವರಿಗೆ ಬಹಳ ಸಹಾಯಕರ. ಈ ಸಾಧನಗಳನ್ನು ಉಪಯೋಗಿಸುವಂತೆ ನೀವು ಇತರರಿಗೆ ಸಹಾಯ ಮಾಡುತ್ತೀರಾ? ಅವರಾಗಿಯೇ ಬೈಬಲ್‌ ಮೂಲತತ್ವಗಳನ್ನು ಕಂಡುಕೊಂಡು ಸರಿಯಾದ ನಿರ್ಣಯವನ್ನು ಮಾಡುವಂತೆ ಸಹಾಯ ಮಾಡುವುದರಲ್ಲಿ ನೀವೆಷ್ಟು ನಿಪುಣರಾಗಿದ್ದೀರಿ? ನಕ್ಷೆಯು ಹೇಗೆ ಒಬ್ಬನಿಗೆ ತಾನಿರುವ ಸ್ಥಳವನ್ನು ಗುರುತಿಸಲು ಮತ್ತು ಗಮ್ಯಸ್ಥಾನಕ್ಕೆ ತಲಪಲು ಸಹಾಯ ಮಾಡುತ್ತದೋ ಅದೇ ರೀತಿ ಸಂಶೋಧನೆ ಮಾಡಲು ಇರುವ ಸಾಧನಗಳು ಒಬ್ಬನಿಗೆ ಜೀವನ ಮಾರ್ಗದಲ್ಲಿ ತಾನೆಲ್ಲಿದ್ದೇನೆಂದು ಗುರುತಿಸಿ ನಿತ್ಯಜೀವದ ಮಾರ್ಗದಲ್ಲಿ ಉಳಿಯುವುದು ಹೇಗೆಂದು ತೋರಿಸಿಕೊಡುತ್ತದೆ.

ಪ್ರತಿವರ್ಷದ ಕಾವಲಿನಬುರುಜು ವಿಷಯಸೂಚಿ, ಇಂಡೆಕ್ಸ್‌ ಅಥವಾ ವಾಚ್‌ಟವರ್‌ ಲೈಬ್ರರಿಯ ಸಹಾಯದಿಂದ ಲೇಖನಗಳನ್ನು ಓದಿ ತಮಗೆ ಅನ್ವಯವಾಗುವ ಬೈಬಲ್‌ ಮೂಲತತ್ವಗಳನ್ನು ಕಂಡುಕೊಳ್ಳುವುದು ಹೇಗೆಂದು ಅನೇಕ ಸಭಾ ಹಿರಿಯರು ಪ್ರಚಾರಕರಿಗೆ ಕಲಿಸಿಕೊಟ್ಟಿದ್ದಾರೆ. ಇದರಿಂದ ಪ್ರಚಾರಕರಿಗೆ ಸದ್ಯದ ಸಮಸ್ಯೆಯನ್ನು ನಿಭಾಯಿಸಲು ಸಹಾಯ ಸಿಗುತ್ತದೆ ಮಾತ್ರವಲ್ಲ ಸಂಶೋಧನೆ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಲು, ಯೆಹೋವನು ಮಾಡಿರುವ ಆಧ್ಯಾತ್ಮಿಕ ಏರ್ಪಾಡಿನ ಮೇಲೆ ಆತುಕೊಳ್ಳಲು ಇದು ನೆರವಾಗುತ್ತದೆ. ಈ ಮೂಲಕ ಅವರು “ಸರಿ ಮತ್ತು ತಪ್ಪಿನ ಭೇದವನ್ನು ತಿಳಿಯಲಿಕ್ಕಾಗಿ . . . ತಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸಿ”ಕೊಂಡಿದ್ದಾರೆ.—ಇಬ್ರಿ. 5:14.

5 ಇತರರಿಗಾಗಿ ನೀವು ನಿರ್ಣಯ ಮಾಡಬೇಡಿ.

“ಪ್ರತಿಯೊಬ್ಬನು ತನ್ನ ಸ್ವಂತ ಹೊರೆಯನ್ನು ಹೊತ್ತುಕೊಳ್ಳುವನು.”ಗಲಾ. 6:5.

ಕೊನೆಗೆ ಯಾವ ಸಲಹೆ, ಬುದ್ಧಿವಾದ ಪಾಲಿಸಬೇಕು ಎನ್ನುವುದನ್ನು ನಿರ್ಣಯಿಸಬೇಕಿರುವುದು ನಾವಲ್ಲ ಅವರು. ಬೈಬಲ್‌ ಮೂಲತತ್ವಗಳನ್ನು ಪಾಲಿಸಬೇಕೋ ಬೇಡವೋ ಎನ್ನುವುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಯೆಹೋವನು ನಮ್ಮೆಲ್ಲರಿಗೆ ಕೊಟ್ಟಿದ್ದಾನೆ. (ಧರ್ಮೋ. 30:19, 20) ಕೆಲವು ಸನ್ನಿವೇಶಗಳಲ್ಲಿ ವ್ಯಕ್ತಿಯು ಬೈಬಲ್‌ನ ಅನೇಕ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವ ಅಗತ್ಯವಿರಬಹುದು. ಆದರೂ ಅಂತಿಮವಾಗಿ ಅವರೇ ನಿರ್ಣಯ ಮಾಡಬೇಕು. ಅವರು ನಮ್ಮ ಮುಂದಿಡುವ ವಿಷಯ ಮತ್ತು ಅವರ ವಯಸ್ಸನ್ನು ಮನಸ್ಸಿನಲ್ಲಿಡುತ್ತಾ, ‘ಈ ಪ್ರಶ್ನೆಗೆ ಉತ್ತರಿಸಲು ನನಗೆ ಅಧಿಕಾರವಿದೆಯಾ?’ ಎಂದು ನಾವು ಸ್ವತಃ ಕೇಳಿಕೊಳ್ಳಬೇಕು. ಕೆಲವು ಸಂದರ್ಭಗಳಲ್ಲಿ ನಾವು ಉತ್ತರ ಕೊಡದೆ ಸಭಾ ಹಿರಿಯರನ್ನು ಕೇಳುವಂತೆ ಅವರಿಗೆ ಹೇಳುವುದೇ ಒಳ್ಳೇದು. ಸಹಾಯ ಕೋರುವವರು ಯುವ ಪ್ರಾಯದವರಾಗಿರುವಲ್ಲಿ ಅವರ ಹೆತ್ತವರೆಡೆಗೆ ನಿರ್ದೇಶಿಸುವುದು ಉತ್ತಮ.

[ಪಾದಟಿಪ್ಪಣಿ]

^ ಪ್ಯಾರ. 20 ವಾಚ್‌ಟವರ್‌ ಲೈಬ್ರರಿ ಆನ್‌ ಸಿಡಿ-ರಾಮ್‌ ಪ್ರಸ್ತುತ 39 ಭಾಷೆಗಳಲ್ಲಿ ಲಭ್ಯವಿದೆ. ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ 45ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ.

[ಪುಟ 8ರಲ್ಲಿರುವ ಚೌಕ/ಚಿತ್ರ]

ಕುಟುಂಬ ಆರಾಧನೆಯಲ್ಲೊಂದು ಪ್ರಾಜೆಕ್ಟ್‌

ಇತ್ತೀಚೆಗೆ ಯಾರಾದರೂ ನಿಮ್ಮಲ್ಲಿ ಒಂದು ಪ್ರಶ್ನೆ ಕೇಳಿರಬಹುದು. ಸಭೆಯಲ್ಲಿರುವ ಒಬ್ಬರನ್ನು ಮದುವೆಯಾಗಲು ಇಷ್ಟಪಡುತ್ತಿರುವ ಒಬ್ಬ ಸಹೋದರನೋ ಸಹೋದರಿಯೋ ನಿಮ್ಮ ಬಳಿ ಬಂದು ಡೇಟಿಂಗ್‌ ಮಾಡುವುದರ ಬಗ್ಗೆ ಕೇಳುತ್ತಾರೆ ಎಂದಿಟ್ಟುಕೊಳ್ಳಿ. ಇದನ್ನೇ ಕುಟುಂಬ ಆರಾಧನೆಯ ಸಂಜೆಯಲ್ಲಿ ಒಂದು ಪ್ರಾಜೆಕ್ಟ್‌ ಆಗಿ ಅಂದರೆ ಸಂಶೋಧನಾ ವಿಷಯವಾಗಿ ತೆಗೆದುಕೊಳ್ಳಬಾರದೇಕೆ? ಅವರಿಗೆ ನೆರವಾಗುವ ಲೇಖನಗಳು ಮತ್ತು ಬೈಬಲ್‌ ಮೂಲತತ್ವಗಳನ್ನು ಕಂಡುಕೊಳ್ಳಲು ಇಂಡೆಕ್ಸ್‌, ವಾಚ್‌ಟವರ್‌ ಲೈಬ್ರರಿ ಅಥವಾ ಪ್ರತಿವರ್ಷದ ಕಾವಲಿನಬುರುಜು ವಿಷಯಸೂಚಿಯನ್ನು ಬಳಸಿ. ಕಾವಲಿನಬುರುಜು ವಿಷಯಸೂಚಿಯಲ್ಲಿ “ಅಧ್ಯಯನ ಲೇಖನಗಳು” ಅಥವಾ “ಕ್ರೈಸ್ತ ಜೀವನ ಮತ್ತು ಗುಣಗಳು” ಎಂಬ ಶೀರ್ಷಿಕೆಯ ಕೆಳಗೆ ಸಂಬಂಧಿಸಿದ ಲೇಖನಗಳನ್ನು ನೋಡಿ. ಇಂಡೆಕ್ಸ್‌ನಲ್ಲಿ “ಡೇಟಿಂಗ್‌” ಅಥವಾ “ಮ್ಯಾರೆಜ್‌” ಎಂಬ ಶೀರ್ಷಿಕೆ ನೋಡಿ. ಅನಂತರ ಸೂಕ್ತವಾಗಿರುವ ಉಪ ಶೀರ್ಷಿಕೆಗಳನ್ನು ನೋಡಿ. ಕೆಲವೆಡೆ ಮುಖ್ಯ ಶೀರ್ಷಿಕೆಯ ಕೆಳಗೆ “ಇದನ್ನೂ ನೋಡಿ” (See also) ಎಂದು ಸೂಚಿಸಲಾಗಿರುತ್ತದೆ. ಅದನ್ನು ಪರಿಗಣಿಸುವ ಮೂಲಕ ನೀವು ಹೆಚ್ಚು ಮಾಹಿತಿಯನ್ನು ಕಲೆಹಾಕಬಹುದು.

[ಪುಟ 9ರಲ್ಲಿರುವ ಚೌಕ]

ಸಲಹೆಯನ್ನು ಪಡೆದುಕೊಳ್ಳಲು ಮತ್ತು ಇತರರಿಗೆ ನೀಡಲು ಯೆಹೋವನು ತನ್ನ ಸಂಘಟನೆಯ ಮೂಲಕ ಸಹಾಯ ಮಾಡಿರುವುದಕ್ಕೆ ಆತನಿಗೆ ಹೃದಯಾಳದಿಂದ ಕೃತಜ್ಞರಾಗಿದ್ದೇವೆ. ಪ್ರಸಂಗಿ 12:11 ಹೀಗನ್ನುತ್ತದೆ: “ಜ್ಞಾನಿಗಳ ಮಾತುಗಳು ಮುಳ್ಳುಗೋಲುಗಳು; ಸಂಗ್ರಹವಾಕ್ಯಗಳು ಬಿಗಿಯಾಗಿ ಬಡಿದ ಮೊಳೆಗಳು; ಒಬ್ಬನೇ ಕರ್ತನಿಂದ [ಕುರುಬನಿಂದ, NIBV] ಬಂದಿವೆ.” ಸಾಕುಪ್ರಾಣಿಗಳನ್ನು ಮುನ್ನಡೆಸಲು ಬಳಸುವ “ಮುಳ್ಳುಗೋಲು”ಗಳಂತೆ ಪ್ರೀತಿಯಿಂದ ನೀಡುವ ಉತ್ತಮ ಸಲಹೆಗಳು ಯಥಾರ್ಥ ಜನರನ್ನು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶಿಸುತ್ತವೆ. “ಮೊಳೆಗಳು” ಬಡಿದಿರುವ ವಸ್ತು ಹೇಗೆ ಸ್ಥಿರವಾಗಿ ಅಚಲವಾಗಿ ಉಳಿಯುತ್ತದೋ ಹಾಗೆಯೇ ಒಳ್ಳೆಯ ಸಲಹೆ ಸರಿಯಾದ, ದೃಢವಾದ ನಿರ್ಣಯಗಳನ್ನು ಮಾಡಲು ಸಹಾಯ ಮಾಡುತ್ತದೆ. ವಿವೇಕಿಗಳು ‘ಒಬ್ಬನೇ ಕುರುಬನಾದ’ ಯೆಹೋವನಿಂದ ಬರುವ ‘ಸಂಗ್ರಹವಾಕ್ಯಗಳನ್ನು’ ಅಂದರೆ ವಿವೇಕಯುತ ಸಲಹೆಗಳನ್ನು ಪರಿಗಣಿಸಿ ಸಂತೋಷದಿಂದ ಪಾಲಿಸುತ್ತಾರೆ.

ಸಲಹೆ ಕೊಡುವಾಗ ನಮ್ಮ ಕುರುಬನಾದ ಯೆಹೋವನನ್ನು ಅನುಕರಿಸೋಣ. ಬೇರೆಯವರು ಸಲಹೆಗಾಗಿ ನಮ್ಮ ಬಳಿ ಬಂದಾಗ ಸಾಧ್ಯವಿರುವಾಗೆಲ್ಲ ಅವರಿಗೆ ಕಿವಿಗೊಟ್ಟು ಸಹಾಯಕರ ಸಲಹೆ ಕೊಡುವುದು ಒಂದು ಸುಯೋಗವೇ ಸರಿ! ನಮ್ಮ ಸಲಹೆ ಬೈಬಲಿನ ಮೂಲತತ್ವಗಳ ಮೇಲೆ ನಿಜವಾಗಿಯೂ ಆಧರಿತವಾಗಿರುವಲ್ಲಿ ಅವರಿಗೆ ಪ್ರಯೋಜನ ತರುವವು ಮತ್ತು ನಿತ್ಯಜೀವದ ಪಥದಲ್ಲಿ ನಡೆಸುವವು.