ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸುವಿನ ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ದುಷ್ಕರ್ಮಿಗಳು ಯಾವ ಅಪರಾಧಗೈದಿದ್ದರು?

ಯೇಸುವಿನ ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ದುಷ್ಕರ್ಮಿಗಳು ಯಾವ ಅಪರಾಧಗೈದಿದ್ದರು?

ನಿಮಗೆ ತಿಳಿದಿತ್ತೋ?

ಯೇಸುವಿನ ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ದುಷ್ಕರ್ಮಿಗಳು ಯಾವ ಅಪರಾಧಗೈದಿದ್ದರು?

ಆ ದುಷ್ಕರ್ಮಿಗಳನ್ನು ‘ಕಳ್ಳರು’ ಎಂದು ಬೈಬಲ್‌ ತಿಳಿಸುತ್ತದೆ. (ಮತ್ತಾ. 27:38; ಮಾರ್ಕ 15:27) ಬೇರೆ ಬೇರೆ ರೀತಿಯ ಪಾತಕಿಗಳನ್ನು ಸೂಚಿಸಲು ಬೈಬಲ್‌ ಬೇರೆ ಬೇರೆ ಪದಗಳನ್ನು ಉಪಯೋಗಿಸುತ್ತದೆಂದು ಕೆಲವು ಬೈಬಲ್‌ ನಿಘಂಟುಗಳು ಹೇಳುತ್ತವೆ. ಸಿಕ್ಕಿಹಾಕಿಕೊಳ್ಳಬಾರದೆಂದು ಗುಪ್ತವಾಗಿ ಕಳ್ಳತನ ಮಾಡುವವನಿಗೆ ಗ್ರೀಕ್‌ನಲ್ಲಿ ಕ್ಲೆಪ್ಟೀಸ್‌ ಎಂಬ ಪದವನ್ನು ಬಳಸಲಾಗಿದೆ. ಈ ಪದವನ್ನು, ಯಾರಿಗೂ ಗೊತ್ತಾಗದಂತೆ ಶಿಷ್ಯರ ಹಣದ ಪೆಟ್ಟಿಗೆಯಿಂದ ಆಗಾಗ್ಗೆ ಹಣ ಕದಿಯುತ್ತಿದ್ದ ಇಸ್ಕರಿಯೋತ ಯೂದನಿಗೆ ಬಳಸಲಾಗಿದೆ. (ಯೋಹಾ. 12:6) ಆದರೆ ಲೀಸ್ಟೀಸ್‌ ಎಂಬ ಗ್ರೀಕ್‌ ಪದ ಹಿಂಸಾಕೃತ್ಯಗಳನ್ನು ಮಾಡಿ ದರೋಡೆ ಮಾಡುತ್ತಿದ್ದವನಿಗೆ ಮತ್ತು ಕ್ರಾಂತಿವಾದಿ, ಬಂಡುಕೋರ ಅಥವಾ ಗೆರಿಲ್ಲರಿಗೂ ಸೂಚಿಸುತ್ತದೆ. ಯೇಸುವಿನ ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ಕಳ್ಳರು ಈ ಎರಡನೇ ರೀತಿಯ ಪಾತಕಿಗಳಾಗಿದ್ದರು. ಇದನ್ನು ಅವರಲ್ಲಿ ಒಬ್ಬನ ಮಾತಿನಿಂದಲೇ ನಾವು ತಿಳಿಯಬಹುದು. “ನಾವಾದರೋ ಮಾಡಿದ ಕೆಲಸಕ್ಕೆ ತಕ್ಕ ಶಿಕ್ಷೆಯನ್ನು ಪೂರ್ಣವಾಗಿ ಹೊಂದುತ್ತಿದ್ದೇವೆ” ಎಂದು ಅವನು ಹೇಳಿದ್ದಾಗಿ ವರದಿ ತಿಳಿಸುತ್ತದೆ. (ಲೂಕ 23:41) ಅಂದರೆ ಆ ಕಳ್ಳರು ಕೇವಲ ಕಳ್ಳತನ ಮಾತ್ರವಲ್ಲ ಹೆಚ್ಚಿನ ಅಪರಾಧಗೈದಿದ್ದರು.

ಆ ಇಬ್ಬರು ಕಳ್ಳರಂತೆ ಬರಬ್ಬನನ್ನೂ ಲೀಸ್ಟೀಸ್‌ ಎಂದು ಕರೆಯಲಾಗಿದೆ. (ಯೋಹಾ. 18:40) ಬರಬ್ಬನು ಕಳ್ಳ ಮಾತ್ರವಲ್ಲ ಹೆಚ್ಚಿನ ಅಪರಾಧ ಮಾಡಿದ್ದನೆಂದು ಲೂಕ 23:19ರಿಂದ ಸ್ಪಷ್ಟವಾಗುತ್ತದೆ: “ಈ ಮನುಷ್ಯನು ಪಟ್ಟಣದಲ್ಲಿ ನಡೆದ ದಂಗೆಯ ಕಾರಣದಿಂದಲೂ ಕೊಲೆಯ ಕಾರಣದಿಂದಲೂ ಸೆರೆಮನೆಗೆ ಹಾಕಲ್ಪಟ್ಟಿದ್ದನು.”

ಆದ್ದರಿಂದ ಯೇಸುವಿನ ಪಕ್ಕದಲ್ಲಿ ಶೂಲಕ್ಕೇರಿಸಲಾಗಿದ್ದ ಪಾತಕಿಗಳು ದರೋಡೆ ಮಾತ್ರವಲ್ಲ ದಂಗೆಯಲ್ಲೂ ಒಳಗೂಡಿದ್ದಿರಬೇಕು ಅಥವಾ ಕೊಲೆಗೈದಿದ್ದಿರಬೇಕು. ಏನೇ ಆಗಿರಲಿ ರೋಮ್‌ ರಾಜ್ಯಪಾಲ ಪೊಂತ್ಯ ಪಿಲಾತ ಅವರನ್ನು ಮರಣದಂಡನೆಗೆ ಅರ್ಹರೆಂದು ಎಣಿಸಿ ಶೂಲಕ್ಕೇರಿಸಿದನು. (w12-E 02/01)