ದೈವಿಕ ಶಿಕ್ಷಣ ಶಾಲೆಗಳು ಯೆಹೋವನ ಪ್ರೀತಿಯ ಪುರಾವೆ
ದೈವಿಕ ಶಿಕ್ಷಣ ಶಾಲೆಗಳು ಯೆಹೋವನ ಪ್ರೀತಿಯ ಪುರಾವೆ
ಯೆಹೋವನು ನಮ್ಮ “[ಮಹೋನ್ನತ] ಬೋಧಕ.” (ಯೆಶಾ. 30:20) ಇತರರಿಗೆ ಶಿಕ್ಷಣ ಕೊಡಲು ಮತ್ತು ತರಬೇತಿ ನೀಡಲು ಆತನಲ್ಲಿರುವ ಪ್ರೀತಿ ಪ್ರಚೋದಿಸುತ್ತದೆ. ಉದಾಹರಣೆಗೆ, ಯೆಹೋವನು ಯೇಸುವನ್ನು ತುಂಬ ಪ್ರೀತಿಸುವುದರಿಂದ “ತಾನು ಮಾಡುವವುಗಳನ್ನೆಲ್ಲ” ಅವನಿಗೆ ತೋರಿಸುತ್ತಾನೆ. (ಯೋಹಾ. 5:20) ಆತನ ಸಾಕ್ಷಿಗಳಾದ ನಮ್ಮ ಮೇಲೂ ಆತನಿಗೆ ಅಪಾರ ಪ್ರೀತಿಯಿದೆ. ಆದ್ದರಿಂದಲೇ ನಮಗೆ “ಶಿಕ್ಷಿತರ ನಾಲಿಗೆಯನ್ನು” ನೀಡುತ್ತಾನೆ. ಇದನ್ನು ಉಪಯೋಗಿಸಿ ಆತನನ್ನು ಘನಪಡಿಸಲು ಮತ್ತು ಇತರರಿಗೆ ನೆರವು ನೀಡಲು ಸರ್ವಪ್ರಯತ್ನ ಮಾಡೋಣ.—ಯೆಶಾ. 50:4.
ಆಡಳಿತ ಮಂಡಲಿಯು ಯೆಹೋವನ ಅದೇ ಪ್ರೀತಿಯನ್ನು ಅನುಕರಿಸುತ್ತಿದೆ. ಹಾಗಾಗಿ ಟೀಚಿಂಗ್ ಕಮಿಟಿಯ ಮೇಲ್ವಿಚಾರಣೆಯಡಿಯಲ್ಲಿ 10 ದೈವಿಕ ಶಿಕ್ಷಣ ಶಾಲೆಗಳನ್ನು ನಡೆಸುತ್ತಿದೆ. ಈ ಶಾಲೆಗಳಿಂದ ಪ್ರಯೋಜನ ಪಡೆಯಲು ಇಷ್ಟವುಳ್ಳವರು ಮತ್ತು ಸಾಧ್ಯವಿರುವವರು ಹಾಜರಾಗಬಹುದು. ನೀವು ಈ ಶಾಲೆಗಳನ್ನು ಯೆಹೋವನ ಪ್ರೀತಿಯ ಪುರಾವೆಯಾಗಿ ಕಾಣುತ್ತೀರಾ?
ದೈವಿಕ ಶಿಕ್ಷಣ ಶಾಲೆಗಳ ಕಿರುಪರಿಚಯ ಇಲ್ಲಿದೆ. ಈ ಶಾಲೆಗಳಿಗೆ ಹಾಜರಾದವರು ಏನು ಹೇಳುತ್ತಾರೆಂದು ಕೇಳಿ ಆನಂದಿಸಿ. ಅವುಗಳನ್ನು ಓದುತ್ತಾ ಹೋದಂತೆ ‘ಈ ದೈವಿಕ ಶಿಕ್ಷಣದಿಂದ ನಾನು ಹೇಗೆ ಪ್ರಯೋಜನ ಪಡೆಯಬಲ್ಲೆ?’ ಎಂದು ಕೇಳಿಕೊಳ್ಳಿ.
ದೈವಿಕ ತರಬೇತಿಯಿಂದ ಪ್ರಯೋಜನ ಪಡೆಯಿರಿ
‘ಪ್ರೀತಿಯ ದೇವರಾದ’ ಯೆಹೋವನು ಒದಗಿಸುವ ತರಬೇತಿ ನಮ್ಮ ಜೀವನಕ್ಕೆ ಅರ್ಥ ಕೊಡುತ್ತದೆ. ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ. ಸುವಾರ್ತೆ ಸಾರುವುದರಲ್ಲಿ ಸಂತೋಷ ಕಂಡುಕೊಳ್ಳಲು ನೆರವಾಗುತ್ತದೆ. (2 ಕೊರಿಂ. 13:11) ಪ್ರಥಮ ಶತಮಾನದ ಶಿಷ್ಯರಂತೆ ಇತರರಿಗೆ ಕಲಿಸಲು ನಮ್ಮನ್ನು ಸಜ್ಜುಗೊಳಿಸುತ್ತದೆ. ಯೇಸು ‘ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಲು’ ನಾವು ಶಕ್ತರಾಗುತ್ತೇವೆ.—ಮತ್ತಾ. 28:20.
ನಮಗೆ ಈ ಎಲ್ಲ ಶಾಲೆಗಳಿಗೆ ಹಾಜರಾಗಲು ಸಾಧ್ಯವಿಲ್ಲದಿದ್ದರೂ ಒಂದು ಅಥವಾ ಹೆಚ್ಚು ಶಾಲೆಗಳಿಂದ ಪ್ರಯೋಜನ ಪಡೆಯಬಹುದು. ಅದರಿಂದ ಸಿಗುವ ಬೈಬಲ್ ಆಧರಿತ ಮಾರ್ಗದರ್ಶನವನ್ನು ಅನ್ವಯಿಸಬಹುದು. ಮಾತ್ರವಲ್ಲ ಯೆಹೋವನ ಪರಿಣತ ಸೇವಕರನ್ನು ಜೊತೆಗೂಡಿ ಪರಿಣಾಮಕಾರಿಯಾಗಿ ಸಾರುವ ಸಾಮರ್ಥ್ಯ ಬೆಳೆಸಿಕೊಳ್ಳಬಹುದು.
ಹೀಗೆ ಕೇಳಿಕೊಳ್ಳಿ, ‘ಈ ಶಾಲೆಗಳಲ್ಲಿ ಯಾವುದಾದರೊಂದು ಶಾಲೆಗೆ ಸೇರಲು ನನ್ನಿಂದ ಸಾಧ್ಯವೇ?’
ಈ ಶಾಲೆಗಳಲ್ಲಿ ಕಲಿಯುವ ಅಮೂಲ್ಯ ಸುಯೋಗ ಯೆಹೋವನ ಸೇವಕರಾದ ನಮಗಿದೆ. ಆದ್ದರಿಂದ ನಾವು ಈ ಶಾಲೆಗಳಲ್ಲಿ ಭಾಗವಹಿಸುವ ಮೂಲಕ ಬೆಂಬಲ ಕೊಡುತ್ತೇವೆ. ನಾವು ಪಡೆಯುವ ತರಬೇತಿಯಿಂದ ಯೆಹೋವನ ಸಮೀಪಕ್ಕೆ ಬರುತ್ತೇವೆ. ಆತನು ಕೊಡುವ ಜವಾಬ್ದಾರಿಗಳನ್ನು ಪೂರೈಸಲು ಸಂಪೂರ್ಣ ಶಕ್ತರಾಗುತ್ತೇವೆ. ಅದರಲ್ಲೂ ವಿಶೇಷವಾಗಿ ಸುವಾರ್ತೆಯನ್ನು ಸಾರುವ ತುರ್ತಿನ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ.
[ಪುಟ 13-ರಲ್ಲಿರುವ ಚೌಕ/ಚಿತ್ರ]
ದೈವಿಕ ಶಿಕ್ಷಣ ಶಾಲೆಗಳ ಕಿರುಪರಿಚಯ
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ
ಉದ್ದೇಶ: ಸುವಾರ್ತೆಯನ್ನು ಪರಿಣಾಮಕಾರಿಯಾಗಿ ಸಾರಲು ಮತ್ತು ಉತ್ತಮ ಬೋಧಕರಾಗಲು ಪ್ರಚಾರಕರಿಗೆ ತರಬೇತಿ ಕೊಡುವುದು. ಅವಧಿ: ನಿರಂತರ.
ಸ್ಥಳ: ಸ್ಥಳೀಯ ರಾಜ್ಯ ಸಭಾಗೃಹ.
ಅರ್ಹತೆ: ಸಭೆಗೆ ನಿಯತವಾಗಿ ಬರುತ್ತಿರಬೇಕು. ಬೈಬಲ್ ಬೋಧನೆಗಳನ್ನು ಒಪ್ಪಿಕೊಂಡು ಅದರ ಮೂಲತತ್ವಗಳಿಗೆ ಅನುಸಾರವಾಗಿ ನಡೆಯುತ್ತಿರಬೇಕು.
ಸೇರುವುದು ಹೇಗೆ: ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಮೇಲ್ವಿಚಾರಕನ ಬಳಿ ಮಾತಾಡಿ.
ಏಮೈಯಟ್ರೋಫಿಕ್ ಲ್ಯಾಟೆರಲ್‌ಸ್ಕ್ಲಿರೋಸಿಸ್ (ALS) ಎಂಬ ಪಾರ್ಶ್ವವಾಯು ರೋಗದಿಂದ ಬಳಲುತ್ತಿರುವ ಶಾರನ್ ಹೀಗನ್ನುತ್ತಾಳೆ: “ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯು ಸಂಶೋಧನೆ ಮಾಡಲು ಮತ್ತು ವಿಷಯಗಳನ್ನು ತರ್ಕಬದ್ಧವಾಗಿ ಪ್ರಸ್ತುತಪಡಿಸಲು ಕಲಿಸಿತು. ನನ್ನ ಆಧ್ಯಾತ್ಮಿಕ ಅಗತ್ಯಗಳಿಗೆ ಮಾತ್ರವಲ್ಲ ಇತರರ ಅಗತ್ಯಗಳಿಗೂ ಗಮನಕೊಡುವಂತೆ ಈ ಶಾಲೆಯಿಂದ ಕಲಿತೆ.”
ಅನೇಕ ವರ್ಷಗಳಿಂದ ಸಂಚರಣ ಮೇಲ್ವಿಚಾರಕರಾಗಿರುವ ಆರ್ನೀ ಏನು ಹೇಳುತ್ತಾರೆಂದ: “ಚಿಕ್ಕಂದಿನಿಂದಲೇ ನಾನು ಮಾತಾಡುವಾಗ ತೊದಲುತ್ತಿದ್ದೆ. ಬೇರೆಯವರ ಮುಖ ನೋಡಿ ಮಾತಾಡಲು ಕಷ್ಟಪಡುತ್ತಿದ್ದೆ. ಇದರಿಂದಾಗಿ ನನ್ನಲ್ಲಿ ಆತ್ಮವಿಶ್ವಾಸ ಇರಲಿಲ್ಲ. ಕೀಳರಿಮೆ ಇತ್ತು. ಈ ಶಾಲೆಯಿಂದಾಗಿ ನನ್ಮೇಲೆ ನನಗೆ ಭರವಸೆ ಬಂತು. ಯೆಹೋವನು ಕೊಟ್ಟ ಈ ತರಬೇತಿಯಿಂದ ನಾನು ಸರಿಯಾಗಿ ಉಸಿರಾಡುವ ಮತ್ತು ಏಕಾಗ್ರತೆಯ ವಿಧಾನಗಳನ್ನು ಕಲಿತೆ. ಸಭೆ ಹಾಗೂ ಸೇವೆಯಲ್ಲಿ ಯೆಹೋವನನ್ನು ಕೊಂಡಾಡುವ ಸಾಮರ್ಥ್ಯ ಕೊಟ್ಟದ್ದಕ್ಕಾಗಿ ನಾನು ಆತನಿಗೆ ಚಿರಋಣಿ.”
ಬೆತೆಲಿನ ಹೊಸ ಸದಸ್ಯರಿಗಾಗಿ ಶಾಲೆ
ಉದ್ದೇಶ: ಹೊಸದಾಗಿ ಬೆತೆಲಿಗೆ ಸೇರಿದವರು ತಮ್ಮ ಸೇವೆಯಲ್ಲಿ ಯಶಸ್ವಿಗಳಾಗಲು ಸಹಾಯ ನೀಡುವುದು.
ಅವಧಿ: ವಾರಕ್ಕೆ 45 ನಿಮಿಷಗಳಂತೆ 16 ವಾರಗಳು.
ಸ್ಥಳ: ಬೆತೆಲ್.
ಅರ್ಹತೆ: ಬೆತೆಲ್ ಕುಟುಂಬದ ಖಾಯಂ ಸದಸ್ಯರಾಗಿರಬೇಕು. ಇಲ್ಲವೆ ಬೆತೆಲಿನಲ್ಲಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತಾತ್ಕಾಲಿಕ ಸ್ವಯಂ ಸೇವಕರಾಗಿರಲು ಅನುಮತಿ ಪಡೆದಿರಬೇಕು.
ಸೇರುವುದು ಹೇಗೆ: ಹೊಸ ಸದಸ್ಯರೆಲ್ಲರನ್ನು ಈ ಶಾಲೆಗೆ ಸೇರಿಸಲಾಗುವುದು.
1980ರ ದಶಕದಲ್ಲಿ ಈ ಶಾಲೆಗೆ ಹಾಜರಾಗಿದ್ದ ಡಮೀಟ್ರೀಯಸ್‌ನ ಮಾತುಗಳು ಹೀಗಿ: “ಈ ಶಾಲೆ ನನ್ನ ಅಧ್ಯಯನ ರೂಢಿಯನ್ನು ಉತ್ತಮಗೊಳಿಸಿತು. ಹೆಚ್ಚು ಕಾಲ ಬೆತೆಲ್ ಸೇವೆ ಮಾಡಲು ನನ್ನನ್ನು ತಯಾರುಮಾಡಿತು. ಶಾಲೆಯ ಬೋಧಕರು ತೋರಿಸಿದ ಆಸಕ್ತಿ, ಅವರು ಕೊಟ್ಟ ಪ್ರಾಯೋಗಿಕ ಸಲಹೆ ಮತ್ತು ಶಾಲೆಯಲ್ಲಿ ಓದಿದ ಮಾಹಿತಿಯಿಂದ ಯೆಹೋವನು ನನ್ನ ಮೇಲಿಟ್ಟಿರುವ ಪ್ರೀತಿಯನ್ನು ನೋಡಲು ಸಾಧ್ಯವಾಯಿತು. ನಾನು ಬೆತೆಲ್‌ನಲ್ಲಿ ಹೆಚ್ಚು ಕಾಲ ಸೇವೆಮಾಡಬೇಕೆಂದು ಆತನು ಬಯಸುತ್ತಾನೆಂದು ತೋರಿಸಿಕೊಟ್ಟಿತು.”
ಈ ಶಾಲೆಗೆ ಹಾಜರಾದ ಕೇಟ್ಲಿನ್ ಎಂಬಾಕೆ ಹೇಳುವುದು: “ಆಧ್ಯಾತ್ಮಿಕ ವ್ಯಕ್ತಿಯಾಗಿರುವುದೇ ಹೆಚ್ಚು ಪ್ರಾಮುಖ್ಯ ಎನ್ನುವುದನ್ನು ಈ ಶಾಲೆಯಿಂದ ಕಲಿತೆ. ಯೆಹೋವನ ಮೇಲೆ, ಆತನ ಮನೆ ಮತ್ತು ಸಂಘಟನೆ ಮೇಲೆ ನನಗಿದ್ದ ಗಣ್ಯತೆಯನ್ನು ಈ ಶಾಲೆ ಇಮ್ಮಡಿಗೊಳಿಸಿತು.”
ರಾಜ್ಯ ಶುಶ್ರೂಷಾ ಶಾಲೆ
ಉದ್ದೇಶ: ಮೇಲ್ವಿಚಾರಣೆ ಮತ್ತು ಸಂಘಟನಾ ಜವಾಬ್ದಾರಿಗಳನ್ನು ನಿರ್ವಹಿಸಲು ಸಂಚರಣ ಮೇಲ್ವಿಚಾರಕರಿಗೆ, ಹಿರಿಯರಿಗೆ, ಕೆಲವೊಮ್ಮೆ ಶುಶ್ರೂಷಾ ಸೇವಕರಿಗೆ ತರಬೇತಿ ಕೊಡುವುದು. (ಅ. ಕಾ. 20:28) ಸಭೆಯ ಸದ್ಯದ ಪರಿಸ್ಥಿತಿ, ಪ್ರವೃತ್ತಿ ಮತ್ತು ತುರ್ತು ಅಗತ್ಯಗಳನ್ನು ನೋಡಿಕೊಳ್ಳಲು ಸಹಾಯ ಮಾಡುವುದು. ಈ ಶಾಲೆಯನ್ನು ಆಡಳಿತ ಮಂಡಲಿಯ ನಿರ್ಣಯಕ್ಕನುಸಾರ ಕೆಲವು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ.
ಅವಧಿ: ಇತ್ತೀಚಿಗೆ ಸಂಚರಣ ಮೇಲ್ವಿಚಾರಕರಿಗೆ ಎರಡರಿಂದ ಎರಡೂವರೆ ದಿನ. ಹಿರಿಯರಿಗೆ ಒಂದೂವರೆ ದಿನ. ಶುಶ್ರೂಷಾ ಸೇವಕರಿಗೆ ಒಂದು ದಿನ.
ಸ್ಥಳ: ಸಾಮಾನ್ಯವಾಗಿ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಂಗಣ.
ಅರ್ಹತೆ: ಸಂಚರಣ ಮೇಲ್ವಿಚಾರಕರು, ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿರಬೇಕು.
ಸೇರುವುದು ಹೇಗೆ: ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ಸರ್ಕಿಟ್ ಮೇಲ್ವಿಚಾರಕರು ಆಮಂತ್ರಿಸುತ್ತಾರೆ. ಸಂಚರಣ ಮೇಲ್ವಿಚಾರಕರನ್ನು ಬ್ರಾಂಚ್ ಆಫೀಸ್ ಆಮಂತ್ರಿಸುತ್ತದೆ.
“ಇಲ್ಲಿ ಸ್ವಲ್ಪವೇ ಸಮಯದಲ್ಲಿ ತುಂಬ ಕಲಿಯಲಿಕ್ಕಿರೋದಾದರೂ ಯೆಹೋವನ ಸೇವೆಯನ್ನು ಸಂತೋಷದಿಂದ, ಧೈರ್ಯದಿಂದ ಮಾಡಲು ಹಿರಿಯರಿಗೆ ಸಹಾಯ ಮಾಡುತ್ತದೆ. ಹೊಸ ಮತ್ತು ಅನುಭವಿ ಹಿರಿಯರು ಐಕ್ಯರಾಗಿದ್ದು ಸಭೆಯನ್ನು ಒಳ್ಳೇದಾಗಿ ಪರಾಮರಿಸಲು ಈ ಶಾಲೆ ಕಲಿಸಿತು.” —ಕ್ವಿನ್ (ಕೆಳಗೆ).
“ಈ ತರಬೇತಿ ಆಧ್ಯಾತ್ಮಿಕ ವಿಷಯಗಳ ಕಡೆಗೆ ಗಣ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು. ಅಪಾಯಗಳ ಕುರಿತು ನಮ್ಮನ್ನು ಎಚ್ಚರಿಸಿತು. ಸಭೆಯನ್ನು ಪರಿಪಾಲಿಸಲು ಬೇಕಾದ ಸಲಹೆ ಸೂಚನೆಗಳನ್ನು ಕೊಟ್ಟಿತು. ಈ ಎಲ್ಲ ಸಹಾಯವನ್ನು ಕೊಟ್ಟ ಯೆಹೋವನು ನಿಜಕ್ಕೂ ಕರುಣಾಮಯಿ!”—ಮೈಕಲ್.
ಪಯನೀಯರ್ ಸೇವಾ ಶಾಲೆ
ಉದ್ದೇಶ: ‘ಶುಶ್ರೂಷೆಯನ್ನು ಪೂರ್ಣವಾಗಿ ನೆರವೇರಿಸಲು’ ಪಯನೀಯರರಿಗೆ ಸಹಾಯ ಮಾಡುವುದು.—2 ತಿಮೊ. 4:5.
ಅವಧಿ: ಎರಡು ವಾರ.
ಸ್ಥಳ: ಬ್ರಾಂಚ್ ಆಫೀಸ್ ನಿರ್ಣಯಿಸುತ್ತದೆ; ಸಾಮಾನ್ಯವಾಗಿ ರಾಜ್ಯ ಸಭಾಗೃಹ.
ಅರ್ಹತೆ: ಕಡಿಮೆಪಕ್ಷ ಒಂದು ಅಥವಾ ಹೆಚ್ಚು ವರ್ಷದಿಂದ ರೆಗ್ಯುಲರ್ ಪಯನೀಯರ್ ಆಗಿರಬೇಕು. *
ಸೇರುವುದು ಹೇಗೆ: ಅರ್ಹ ಪಯನೀಯರರ ಹೆಸರುಗಳನ್ನು ಸೇರಿಸಲಾಗುತ್ತದೆ. ಅವರಿಗದನ್ನು ಸರ್ಕಿಟ್ ಮೇಲ್ವಿಚಾರಕರು ತಿಳಿಸುತ್ತಾರೆ.
“ನನ್ನ ಜೀವನದಲ್ಲಿ ಮತ್ತು ಸೇವೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ನಿಭಾಯಿಸಲು ಈ ಶಾಲೆ ಸಹಾಯ ಮಾಡಿತು. ವೈಯಕ್ತಿಕ ಬೈಬಲ್ ಅಧ್ಯಯನ, ಕಲಿಸುವ ರೀತಿ, ಬೈಬಲನ್ನು ಉಪಯೋಗಿಸುವ ವಿಧ ಉತ್ತಮಗೊಂಡಿತು. ಇತರರಿಗೆ ಸಹಾಯಹಸ್ತ ನೀಡಲು, ಹಿರಿಯರಿಗೆ ಬೆಂಬಲ ಕೊಡಲು ಮತ್ತು ಸಭೆಯ ಪ್ರಗತಿಗೆ ನೆರವಾಗಲು ನನ್ನನ್ನು ಉತ್ತಮವಾಗಿ ರೂಪಿಸಿತು” ಎನ್ನುತ್ತಾಳೆ ಲಿಲೀ (ಬಲ).
ಎರಡು ಬಾರಿ ಈ ಶಾಲೆಗೆ ಹಾಜರಾದ ಬ್ರೆಂಡ ಹೀಗನ್ನುತ್ತಾಳೆ: “ಆಧ್ಯಾತ್ಮಿಕ ವಿಷಯಗಳಲ್ಲಿ ಪೂರ್ಣವಾಗಿ ಮಗ್ನಳಾಗಿರಲು ಇದು ಅವಕಾಶ ಮಾಡಿಕೊಟ್ಟಿತು. ನನ್ನ ಮನಸ್ಸಾಕ್ಷಿಗೆ ಒಳ್ಳೇ ತರಬೇತಿ ಸಿಕ್ಕಿತು. ಇತರರಿಗೆ ಸಹಾಯ ಮಾಡುವುದರ ಮೇಲೆ ಗಮನ ನೆಡಲು ಕಲಿಸಿತು. ಇಷ್ಟೆಲ್ಲ ಕಲಿಸಿದ ಯೆಹೋವನು ತುಂಬ ಉದಾರಿ!”
[ಪಾದಟಿಪ್ಪಣಿ]
^ ಪ್ಯಾರ. 39 ಒಂದುವೇಳೆ ಸಾಕಷ್ಟು ಹೊಸ ಪಯನೀಯರರು ಇಲ್ಲದಿದ್ದಲ್ಲಿ, ಪಯನೀಯರ್ ಶಾಲೆಗೆ ಹಾಜರಾಗಿ ಐದು ವರ್ಷ ಆಗಿರುವವರನ್ನು ಪುನಃ ಹಾಜರಾಗುವಂತೆ ಆಮಂತ್ರಿಸಲಾಗುತ್ತದೆ.
ಸಭಾ ಹಿರಿಯರಿಗಾಗಿ ಶಾಲೆ
ಉದ್ದೇಶ: ಹಿರಿಯರಿಗೆ ಸಭಾ ಜವಾಬ್ದಾರಿಗಳನ್ನು ನಿರ್ವಹಿಸಲು ಮತ್ತು ತಮ್ಮ ಆಧ್ಯಾತ್ಮಿಕತೆಯನ್ನು ಉತ್ತಮಗೊಳಿಸಲು ಸಹಾಯ ಮಾಡುವುದು.
ಅವಧಿ: ಐದು ದಿನ.
ಸ್ಥಳ: ಬ್ರಾಂಚ್ ಆಫೀಸ್ ನಿರ್ಣಯಿಸುತ್ತದೆ; ಸಾಮಾನ್ಯವಾಗಿ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಂಗಣ.
ಅರ್ಹತೆ: ಸಭಾ ಹಿರಿಯರಾಗಿರಬೇಕು.
ಸೇರುವುದು ಹೇಗೆ: ಬ್ರಾಂಚ್ ಆಫೀಸ್ ಆಮಂತ್ರಿಸುತ್ತದೆ.
ಅಮೆರಿಕದಲ್ಲಿ 92ನೇ ತರಗತಿಯನ್ನು ಹಾಜರಾದ ಕೆಲವರ ಹೇಳಿಕೆಗಳು ಹೀಗಿವೆ:
“ಈ ಶಾಲೆಯಿಂದ ನಾನು ಪಡೆದ ಪ್ರಯೋಜನ ಅಷ್ಟಿಷ್ಟಲ್ಲ. ನನ್ನನ್ನು ಪರೀಕ್ಷಿಸಿಕೊಳ್ಳಲು ಹಾಗೂ ಯೆಹೋವನ ಮಂದೆಯನ್ನು ಪರಿಪಾಲಿಸುವುದು ಹೇಗೆಂದು ತಿಳಿಯಲು ನೆರವು ನೀಡಿತು.”
“ಬೈಬಲಿನ ಮುಖ್ಯ ಅಂಶಗಳಿಗೆ ಗಮನ ಸೆಳೆದು ಇತರರನ್ನು ಪ್ರೋತ್ಸಾಹಿಸಲು ನನ್ನನ್ನು ತಯಾರು ಮಾಡಿತು.”
“ಈ ತರಬೇತಿಯನ್ನು ಜೀವನಪರ್ಯಂತ ಮರೆಯಲ್ಲ.”
ಸಂಚರಣ ಮೇಲ್ವಿಚಾರಕರು ಮತ್ತು ಅವರ ಪತ್ನಿಯರಿಗಾಗಿ ಶಾಲೆ
ಉದ್ದೇಶ: ಸಭೆಗಳಲ್ಲಿ ‘ಮಾತಾಡುವುದರಲ್ಲಿಯೂ ಬೋಧಿಸುವುದರಲ್ಲಿಯೂ ಶ್ರಮಪಟ್ಟು ಕೆಲಸಮಾಡುತ್ತಾ’ ಹೆಚ್ಚು ಪರಿಣಾಮಕಾರಿಯಾಗಿ ಸೇವೆ ಮಾಡಲು ಸಹಾಯ ಮಾಡುವುದೇ. —1 ತಿಮೊ. 5:17; 1 ಪೇತ್ರ 5:2, 3.
ಅವಧಿ: ಎರಡು ತಿಂಗಳು.
ಸ್ಥಳ: ಬ್ರಾಂಚ್ ಆಫೀಸ್ ನಿರ್ಣಯಿಸುತ್ತದೆ.
ಅರ್ಹತೆ: ಸಹೋದರರು ಸರ್ಕಿಟ್ ಅಥವಾ ಡಿಸ್ಟ್ರಿಕ್ಟ್ ಮೇಲ್ವಿಚಾರಕರಾಗಿರಬೇಕು.
ಸೇರುವುದು ಹೇಗೆ: ಸಂಚರಣ ಮೇಲ್ವಿಚಾರಕರನ್ನೂ ಅವರ ಪತ್ನಿಯರನ್ನೂ ಬ್ರಾಂಚ್ ಆಫೀಸ್ ಆಮಂತ್ರಿಸುತ್ತದೆ.
1999ರಲ್ಲಿ ಈ ಶಾಲೆಯ ಪ್ರಥಮ ತರಗತಿಗೆ ಹಾಜರಾದ ಜೋಯಲ್ ಹೀಗನ್ನುತ್ತಾರೆ: “ಸಂಘಟನೆಯ ಮೇಲಿರುವ ಯೇಸುವಿನ ಶಿರಸ್ಸುತನಕ್ಕೆ ಹೆಚ್ಚು ಗಣ್ಯತೆ ತೋರಿಸಲು ಸಾಧ್ಯವಾಯಿತು. ನಾವು ಸೇವೆ ಮಾಡುವ ಪ್ರತಿ ಸಭೆಯ ಸಹೋದರರನ್ನು ಪ್ರೋತ್ಸಾಹಿಸುವ ಮತ್ತು ಐಕ್ಯತೆಯನ್ನು ಬಲಗೊಳಿಸುವ ಅಗತ್ಯವನ್ನು ಮನಗಂಡೆವು. ಸಹೋದರರಿಗೆ ಯಾವುದೇ ಸಲಹೆ ಅಥವಾ ತಿದ್ದುಪಾಟನ್ನು ಕೊಡುವಾಗ ಯೆಹೋವನು ಅವರನ್ನು ಎಷ್ಟು ಪ್ರೀತಿಸುತ್ತಾನೆಂದು ಮನಗಾಣುವಂತೆ ಸಹಾಯ ಮಾಡುವುದೇ ಸಂಚರಣ ಮೇಲ್ವಿಚಾರಕರ ಮುಖ್ಯ ಗುರಿ ಎಂದು ಈ ಶಾಲೆ ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಸಿತು.”
ಅವಿವಾಹಿತ ಸಹೋದರರಿಗಾಗಿ ಬೈಬಲ್ ಶಾಲೆ
ಉದ್ದೇಶ: ಅವಿವಾಹಿತ ಹಿರಿಯರನ್ನು ಮತ್ತು ಶುಶ್ರೂಷಾ ಸೇವಕರನ್ನು ಸಂಘಟನೆಯಲ್ಲಿ ಅಧಿಕ ಜವಾಬ್ದಾರಿಯನ್ನು ನಿರ್ವಹಿಸಲು ತಯಾರು ಮಾಡುವುದು. ಹೆಚ್ಚಿನ ಪದವೀಧರರನ್ನು ಸ್ವದೇಶದಲ್ಲಿಯೇ ಅಗತ್ಯವಿರುವಲ್ಲಿಗೆ ನೇಮಿಸಲಾಗುತ್ತದೆ. ಬೇರೆ ದೇಶಕ್ಕೆ ಹೋಗಿ ಸೇವೆಮಾಡಲು ಸಿದ್ಧರಿರುವವರನ್ನು ವಿದೇಶಕ್ಕೆ ನೇಮಿಸಲೂಬಹುದು. ಕೆಲವು ಪದವೀಧರರನ್ನು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಿಸಬಹುದು. ನಗರದಿಂದ ದೂರವಿರುವ ಸ್ಥಳಗಳಿಗೆ ಇಲ್ಲವೆ ಪ್ರತ್ಯೇಕವಾಗಿರುವ ಪ್ರದೇಶಗಳಿಗೆ ಹೋಗಿ ಸೇವೆ ಆರಂಭಿಸಲು ಅಥವಾ ಸೇವೆ ಹೆಚ್ಚಿಸಲು ಅವರನ್ನು ಕಳುಹಿಸಲಾಗುವುದು.
ಅವಧಿ: ಎರಡು ತಿಂಗಳು.
ಸ್ಥಳ: ಬ್ರಾಂಚ್ ಆಫೀಸ್ ನಿರ್ಣಯಿಸುತ್ತದೆ; ಸಾಮಾನ್ಯವಾಗಿ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಂಗಣ.
ಅರ್ಹತೆ: 23ರಿಂದ 62 ವರ್ಷ ಪ್ರಾಯದ ಅವಿವಾಹಿತ ಸಹೋದರರು. ಆರೋಗ್ಯವಂತರಾಗಿರಬೇಕು. ಅಗತ್ಯವಿರುವಲ್ಲಿಗೆ ಹೋಗಿ ಸೇವೆ ಮಾಡಲು ಸಿದ್ಧರಿರಬೇಕು. (ಮಾರ್ಕ 10:29, 30) ಕಡಿಮೆಪಕ್ಷ ಎರಡು ವರ್ಷದಿಂದ ರೆಗ್ಯುಲರ್ ಪಯನೀಯರರಾಗಿಯೂ ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿಯೂ ಸೇವೆ ಸಲ್ಲಿಸುತ್ತಿರಬೇಕು.
ಸೇರುವುದು ಹೇಗೆ: ಈ ಶಾಲೆಗೆ ಸೇರಲು ಇಷ್ಟವಿರುವವರಿಗೆಂದೇ ಸರ್ಕಿಟ್ ಸಮ್ಮೇಳನದಲ್ಲಿ ಒಂದು ಕೂಟವಿರುತ್ತದೆ. ಅಲ್ಲಿ ಹೆಚ್ಚಿನ ಮಾಹಿತಿ ಕೊಡಲಾಗುತ್ತದೆ.
ಅಮೆರಿಕದಲ್ಲಿ 23ನೇ ತರಗತಿಗೆ ಹಾಜರಾದ ರಿಕ್ ಹೇಳುವುದು: “ಆ ಎರಡು ತಿಂಗಳು ಯೆಹೋವನು ಕೊಟ್ಟ ಶಿಕ್ಷಣದಲ್ಲಿ ನಾನು ಮುಳುಗಿ ಹೋಗಿದ್ದೆ. ಆ ಸಮಯದಲ್ಲಿ ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನನ್ನ ಅಂತರಾಳದಲ್ಲಿ ಬದಲಾವಣೆಗಳನ್ನು ಮಾಡಿ ರೂಪಿಸಿದನು. ಯೆಹೋವನು ಒಂದು ನೇಮಕವನ್ನು ಕೊಡುವುದಾದರೆ ಅದನ್ನು ಪೂರೈಸಲು ಸಹ ಆತನೇ ಸಹಾಯ ಮಾಡುತ್ತಾನೆ. ನನ್ನ ಬಗ್ಗೆಯೇ ಯೋಚಿಸುವುದನ್ನು ಬಿಟ್ಟು ಯೆಹೋವನ ಚಿತ್ತ ಮಾಡುವುದಕ್ಕೆ ಗಮನಕೊಟ್ಟರೆ ಖಂಡಿತ ಆತನು ನನ್ನನ್ನು ಬಲಪಡಿಸುತ್ತಾನೆ ಎಂದು ಕಲಿತೆ.”
ಜರ್ಮನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಂಡ್ರೇಯಾಸ್ ಏನನ್ನುತ್ತಾರೆ ಕೇಳಿ: “ಯೆಹೋವನ ಸಂಘಟನೆ ನಮ್ಮೀ ಸಮಯದಲ್ಲಿ ಕಾರ್ಯನಿರ್ವಹಿಸುವ ವಿಧ ನಿಜಕ್ಕೂ ಒಂದು ಅದ್ಭುತವೆಂದು ಅರಿತೆ. ಮುಂದೆ ಮಾಡಲಿರುವ ಸೇವೆಗಾಗಿ ಈ ಶಾಲೆ ನನ್ನನ್ನು ತಯಾರು ಮಾಡಿತು. ಮಾತ್ರವಲ್ಲ ಸಹೋದರರ ಮತ್ತು ಯೆಹೋವನ ಸೇವೆ ಮಾಡುವುದರಿಂದಲೇ ನಿಜವಾದ ಸಂತೋಷ ಸಿಗುತ್ತದೆ ಎಂಬ ಸತ್ಯವನ್ನು ಅನೇಕ ಬೈಬಲ್ ಉದಾಹರಣೆಗಳು ಕಲಿಸಿದವು.”
ಕ್ರೈಸ್ತ ದಂಪತಿಗಳಿಗಾಗಿ ಬೈಬಲ್ ಶಾಲೆ
ಉದ್ದೇಶ: ಯೆಹೋವನಿಗೆ ಮತ್ತು ಆತನ ಸಂಘಟನೆಗೆ ಹೆಚ್ಚು ಉಪಯುಕ್ತರಾಗಲು ದಂಪತಿಗಳಿಗೆ ವಿಶೇಷ ತರಬೇತಿ ನೀಡುವುದು. ಪದವೀಧರರಲ್ಲಿ ಹೆಚ್ಚಿನವರನ್ನು ಸ್ವದೇಶದಲ್ಲಿಯೇ ಅಗತ್ಯವಿರುವಲ್ಲಿಗೆ ನೇಮಿಸಲಾಗುವುದು. ಇಷ್ಟವಿರುವವರಿಗೆ ವಿದೇಶಕ್ಕೆ ನೇಮಕ ಸಿಗಬಹುದು. ಪದವೀಧರರನ್ನು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಿಸಬಹುದು. ನಗರದಿಂದ ದೂರವಿರುವ ಸ್ಥಳಗಳಿಗೆ ಇಲ್ಲವೆ ಪ್ರತ್ಯೇಕವಾಗಿರುವ ಪ್ರದೇಶಗಳಿಗೆ ಹೋಗಿ ಸೇವೆ ಆರಂಭಿಸಲು ಅಥವಾ ಸೇವೆ ಹೆಚ್ಚಿಸಲು ಅವರನ್ನು ಕಳುಹಿಸಲಾಗುವುದು.
ಅವಧಿ: ಎರಡು ತಿಂಗಳು.
ಸ್ಥಳ: ಈ ಶಾಲೆಯನ್ನು ಅಮೆರಿಕದಲ್ಲಿ ನಡೆಸಲಾಯಿತು. 2012ರ ಸೆಪ್ಟೆಂಬರ್‌ನಿಂದ ಪ್ರಪಂಚದಾದ್ಯಂತ ಆಯ್ದ ಬ್ರಾಂಚ್‌ನ ಕ್ಷೇತ್ರಗಳಲ್ಲಿ ನಡೆಸಲಾಗುತ್ತದೆ. ಸಾಮಾನ್ಯವಾಗಿ ರಾಜ್ಯ ಸಭಾಗೃಹ ಅಥವಾ ಸಮ್ಮೇಳನ ಸಭಾಂಗಣದಲ್ಲಿ.
ಅರ್ಹತೆ: 25ರಿಂದ 50 ವರ್ಷ ಪ್ರಾಯದ ದಂಪತಿಗಳಾಗಿರಬೇಕು. ಆರೋಗ್ಯವಂತರಾಗಿರಬೇಕು. ಅಗತ್ಯವಿರುವಲ್ಲಿಗೆ ಹೋಗಿ ಸೇವೆ ಮಾಡುವ ಪರಿಸ್ಥಿತಿಯುಳ್ಳವರಾಗಿರಬೇಕು. “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು” ಎನ್ನುವ ಮನೋಭಾವ ಇರಬೇಕು. (ಯೆಶಾ. 6:8) ಮದುವೆಯಾಗಿ ಕನಿಷ್ಠ ಎರಡು ವರ್ಷಗಳಾಗಿರಬೇಕು. ನಿರಂತರ ಎರಡು ವರ್ಷದಿಂದ ಪೂರ್ಣ ಸಮಯದ ಸೇವೆ ಮಾಡುತ್ತಿರಬೇಕು. ಗಂಡನು ನಿರಂತರ ಎರಡು ವರ್ಷದಿಂದ ಹಿರಿಯ ಅಥವಾ ಶುಶ್ರೂಷಾ ಸೇವಕನಾಗಿರಬೇಕು.
ಸೇರುವುದು ಹೇಗೆ: ಆಸಕ್ತರಿಗೆಂದೇ ಜಿಲ್ಲಾ ಅಧಿವೇಶನದಲ್ಲಿ ಒಂದು ಕೂಟವಿರುವುದು. ಅಲ್ಲಿ ಮಾಹಿತಿಯನ್ನು ಕೊಡಲಾಗುವುದು. ನಿಮಗೆ ಈ ಶಾಲೆಗೆ ಅರ್ಜಿಹಾಕಲು ಇಷ್ಟವಿದ್ದು ನೀವು ಹಾಜರಾಗುವ ಅಧಿವೇಶನದಲ್ಲಿ ಕೂಟ ನಡೆಸದಿದ್ದರೆ ಬ್ರಾಂಚ್ ಆಫೀಸಿಗೆ ಪತ್ರ ಬರೆದು ಹೆಚ್ಚಿನ ಮಾಹಿತಿ ಪಡೆಯಬಹುದು.
2011ರಲ್ಲಿ ಈ ಶಾಲೆಯ ಪ್ರಥಮ ತರಗತಿಗೆ ಹಾಜರಾದ ಎರಿಕ್ ಮತ್ತು ಕೊರೀನಾ (ಬಲ) ಹೇಳುವುದು: “ಆ ಎಂಟು ವಾರಗಳು ನಮ್ಮ ಜೀವನವನ್ನೇ ಬದಲಾಯಿಸಿದವು. ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಬಯಸುವ ದಂಪತಿಗಳಿಗೆ ಇದು ಸುವರ್ಣ ಅವಕಾಶ! ನಮ್ಮ ಜೀವನವನ್ನು ಸರಳಗೊಳಿಸಿ ಸಮಯವನ್ನು ಉತ್ತಮವಾಗಿ ಉಪಯೋಗಿಸಲು ದೃಢನಿಶ್ಚಯ ಮಾಡಿದೆವು.”
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್
ಉದ್ದೇಶ: ಜನನಿಬಿಡ ಪ್ರದೇಶಗಳಲ್ಲಿ ಮಿಷನರಿಗಳಾಗಿ ಸೇವೆ ಮಾಡಲು, ಸಂಚರಣ ಮೇಲ್ವಿಚಾರಕರಾಗಿ, ಬೆತೆಲ್ ಸದಸ್ಯರಾಗಿ ಸೇವೆ ಸಲ್ಲಿಸಲು ತರಬೇತಿ ನೀಡುವುದು. ಇದರ ಮುಖ್ಯ ಗುರಿ ಕ್ಷೇತ್ರ ಸೇವೆಯನ್ನು ಕ್ರಮಗೊಳಿಸಿ ಒಳ್ಳೇದಾಗಿ ಮುಂದುವರಿಸುವುದು ಮತ್ತು ಬ್ರಾಂಚ್ ಕೆಲಸಕಾರ್ಯಗಳನ್ನು ಉತ್ತಮಗೊಳಿಸುವುದೇ.
ಅವಧಿ: ಐದು ತಿಂಗಳು.
ಸ್ಥಳ: ವಾಚ್‌ಟವರ್ ಎಜ್ಯುಕೇಷನಲ್ ಸೆಂಟರ್, ಪ್ಯಾಟರ್ಸನ್, ನ್ಯೂ ಯಾರ್ಕ್, ಅಮೆರಿಕ.
ಅರ್ಹತೆ: ಈಗಾಗಲೇ ವಿಶೇಷ ಪೂರ್ಣಸಮಯದ ಸೇವೆ ಮಾಡುತ್ತಿರುವ ದಂಪತಿಗಳಾಗಿರಬೇಕು. ಮಿಷನರಿಗಳಾಗಿದ್ದು ಈ ಶಾಲೆಗೆ ಇದುವರೆಗೂ ಹಾಜರಾಗದೆ ಇರುವವರು, ವಿಶೇಷ ಪಯನೀಯರರು, ಸಂಚರಣ ಮೇಲ್ವಿಚಾರಕರು ಅಥವಾ ಬೆತೆಲ್ ಸದಸ್ಯರಾಗಿರಬೇಕು. ದಂಪತಿ ಮೂರು ವರ್ಷಗಳಿಂದ ವಿಶೇಷ ಪೂರ್ಣಸಮಯದ ಸೇವೆಯಲ್ಲಿರಬೇಕು. ಸರಾಗವಾಗಿ ಇಂಗ್ಲಿಷ್ ಮಾತಾಡಲು, ಓದಲು ಹಾಗೂ ಬರೆಯಲು ಗೊತ್ತಿರಬೇಕು.
ಸೇರುವುದು ಹೇಗೆ: ದಂಪತಿಗಳು ಅರ್ಜಿ ಹಾಕುವಂತೆ ಬ್ರಾಂಚ್ ಕಮಿಟಿ ಆಹ್ವಾನಿಸುತ್ತದೆ.
ಅಮೆರಿಕದ ಸಹೋದರ ಲಾಡೆ, ಪತ್ನಿ ಮೋನೀಕ್ ಈಗ ಆಫ್ರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಲಾಡೆ ಹೇಳುವುದು: “ಪ್ರಪಂಚದಲ್ಲಿ ಎಲ್ಲಿಗೆ ಬೇಕಾದರೂ ಹೋಗಿ ಸಹೋದರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸೇವೆ ಮಾಡಲು ಗಿಲ್ಯಡ್ ಶಾಲೆ ನಮ್ಮನ್ನು ತಯಾರು ಮಾಡಿತು.”
ಮೋನೀಕ್ ಹೀಗೆ ಹೇಳುತ್ತಾರೆ: “ದೇವರ ವಾಕ್ಯದಿಂದ ನಾನು ಕಲಿತ ವಿಷಯಗಳನ್ನು ಅನ್ವಯಿಸಿಕೊಂಡಾಗ ನನ್ನ ನೇಮಕದಲ್ಲಿ ಅಪಾರ ಸಂತೋಷ ಸಿಕ್ಕಿತು. ಆ ಸಂತೋಷ ಯೆಹೋವನು ನನ್ನನ್ನೆಷ್ಟು ಪ್ರೀತಿಸುತ್ತಾನೆ ಎನ್ನುವುದಕ್ಕೆ ಪುರಾವೆ.”
ಬ್ರಾಂಚ್ ಕಮಿಟಿ ಸದಸ್ಯರು ಮತ್ತು ಅವರ ಪತ್ನಿಯರಿಗಾಗಿ ಶಾಲೆ
ಉದ್ದೇಶ: ಬ್ರಾಂಚ್ ಕಮಿಟಿಯ ಸದಸ್ಯರಿಗೆ ಬೆತೆಲ್ ಗೃಹಗಳ ಉತ್ತಮ ಮೇಲ್ವಿಚಾರಣೆ ಮಾಡಲು, ಸಭೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಗಮನಕೊಡಲು ಮತ್ತು ಸರ್ಕಿಟ್, ಡಿಸ್ಟ್ರಿಕ್ಟ್‌ಗಳ ಮೇಲ್ವಿಚಾರಣೆ ಮಾಡಲು ಸಹಾಯ ಮಾಡುವುದು. ಸಾಹಿತ್ಯದ ಭಾಷಾಂತರ, ಮುದ್ರಣ ಮತ್ತು ಸಾಗಣೆ ಕೆಲಸಗಳ ತಿಳಿವಳಿಕೆ ನೀಡುವುದು.
ಅವಧಿ: ಎರಡು ತಿಂಗಳು.
ಸ್ಥಳ: ವಾಚ್‌ಟವರ್ ಎಜ್ಯುಕೇಷನಲ್ ಸೆಂಟರ್, ಪ್ಯಾಟರ್ಸನ್, ನ್ಯೂ ಯಾರ್ಕ್, ಅಮೆರಿಕ.
ಅರ್ಹತೆ: ಬ್ರಾಂಚ್ ಕಮಿಟಿ ಅಥವಾ ಕಂಟ್ರಿ ಕಮಿಟಿಯ ಸದಸ್ಯರಾಗಿ ಸೇವೆ ಮಾಡುತ್ತಿರುವವರು ಇಲ್ಲವೆ ಈಗಷ್ಟೇ ನೇಮಕ ಪಡೆದವರು.
ಸೇರುವುದು ಹೇಗೆ: ಸಹೋದರರನ್ನು ಹಾಗೂ ಅವರ ಪತ್ನಿಯರನ್ನು ಆಡಳಿತ ಮಂಡಲಿ ಆಮಂತ್ರಿಸುತ್ತದೆ.
25ನೇ ತರಗತಿಗೆ ಹಾಜರಾಗಿದ್ದ ಲೋಯಲ್ ಮತ್ತು ಕಾರಾ ಈಗ ನೈಜೀರಿಯದಲ್ಲಿ ಸೇವೆಸಲ್ಲಿಸುತ್ತಿದ್ದಾರೆ. “ನಾನು ಎಷ್ಟೇ ಕಾರ್ಯನಿರತನಾಗಿರಲಿ ಯಾವುದೇ ನೇಮಕ ಹೊಂದಿರಲಿ ಯೆಹೋವನನ್ನು ಸಂತೋಷಪಡಿಸಬೇಕಾದರೆ ಎಲ್ಲವನ್ನು ಆತನು ಮೆಚ್ಚುವಂಥ ರೀತಿಯಲ್ಲೇ ಮಾಡಬೇಕು ಎಂದು ಕಲಿತೆ. ಯೆಹೋವನು ತನ್ನ ಸೇವಕರಿಗೆ ತೋರಿಸುವಂಥದ್ದೇ ಪ್ರೀತಿಯನ್ನು ನಾವು ಇತರರಿಗೆ ತೋರಿಸುವುದು ಎಷ್ಟು ಪ್ರಾಮುಖ್ಯ ಎನ್ನುವುದನ್ನು ಈ ಶಾಲೆ ಒತ್ತಿಹೇಳಿತು” ಎನ್ನುತ್ತಾರೆ ಲೋಯಲ್.
ಕಾರಾ ಹೇಳುವುದು: “ಅಲ್ಲಿ ಕಲಿತ ಒಂದು ಅಂಶ ನನ್ನ ಮನಸ್ಪರ್ಶಿಸಿತು. ಅದೇನೆಂದರೆ ಒಂದು ವಿಷಯವನ್ನು ಸುಲಭವಾಗಿ ಅರ್ಥವಾಗುವಂಥ ರೀತಿಯಲ್ಲಿ ಕಲಿಸಲು ಆಗಲ್ಲ ಅಂದ್ರೆ ಮೊದಲು ನಾನು ಆ ವಿಷಯದ ಕುರಿತು ಅಧ್ಯಯನ ಮಾಡಬೇಕು.”