ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ

ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ

ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ

“ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ.”​—⁠ಯೋಹಾ. 13:⁠15.

ಉತ್ತರಿಸುವಿರಾ?

ದೇವಪುತ್ರನು ಭೂಮಿಗೆ ಬರುವ ಮುಂಚೆ ಹೇಗೆ ದೀನತೆ ತೋರಿಸಿದನು?

ಮನುಷ್ಯನಾಗಿದ್ದಾಗ ಯೇಸು ಹೇಗೆ ದೀನತೆ ತೋರಿಸಿದನು?

ಯೇಸು ದೀನತೆ ತೋರಿಸಿದ್ದರಿಂದ ಯಾವ ಪ್ರಯೋಜನಗಳು ಸಿಕ್ಕಿವೆ?

1, 2. ಭೂಜೀವಿತದ ಕೊನೆಯ ರಾತ್ರಿಯಂದು ಯೇಸು ಅಪೊಸ್ತಲರಿಗೆ ಯಾವ ಪ್ರತ್ಯಕ್ಷ ನಿದರ್ಶನದ ಮೂಲಕ ಕಲಿಸಿದನು?

ಭೂಮಿಯ ಮೇಲೆ ಯೇಸುವಿನ ಕೊನೆಯ ರಾತ್ರಿ. ಅವನು ಅಪೊಸ್ತಲರೊಂದಿಗೆ ಯೆರೂಸಲೇಮಿನ ಒಂದು ಮನೆಯ ಮೇಲಂತಸ್ತಿನ ಕೋಣೆಯಲ್ಲಿದ್ದಾನೆ. ಸಂಧ್ಯಾ ಭೋಜನ ಮಾಡುತ್ತಿರುವಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟು ನಡುವಿಗೆ ಕೈಪಾವುಡ ಕಟ್ಟಿಕೊಳ್ಳುತ್ತಾನೆ. ಒಂದು ಬೋಗುಣಿಯಲ್ಲಿ ನೀರನ್ನು ತಕ್ಕೊಂಡು ಶಿಷ್ಯರ ಪಾದಗಳನ್ನು ತೊಳೆದು ಕೈಪಾವುಡದಿಂದ ಅವರ ಪಾದಗಳನ್ನು ಒರಸುತ್ತಾನೆ. ತದನಂತರ ಪುನಃ ತನ್ನ ಮೇಲಂಗಿಯನ್ನು ಹಾಕಿಕೊಳ್ಳುತ್ತಾನೆ. ಇಂಥ ಕೆಳಸ್ತರದ ಕೆಲಸವನ್ನು ಯೇಸು ಏಕೆ ಮಾಡಿದನು?​—⁠ಯೋಹಾ. 13:​3-5.

2 ಏಕೆಂದು ಯೇಸುವೇ ಶಿಷ್ಯರಿಗೆ ವಿವರಿಸಿದ್ದು: “ನಾನು ನಿಮಗೆ ಮಾಡಿದ್ದು ಏನೆಂದು ನಿಮಗೆ ತಿಳಿಯಿತೊ? . . . ಕರ್ತನೂ ಬೋಧಕನೂ ಆಗಿರುವ ನಾನು ನಿಮ್ಮ ಪಾದಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರು ಇನ್ನೊಬ್ಬರ ಪಾದಗಳನ್ನು ತೊಳೆಯಲೇಬೇಕು. ನಾನು ಮಾಡಿದಂತೆಯೇ ನೀವೂ ಮಾಡಬೇಕೆಂದು ನಾನು ನಿಮಗೆ ಒಂದು ಮಾದರಿಯನ್ನು ಇಟ್ಟಿದ್ದೇನೆ.” (ಯೋಹಾ. 13:​12-15) ಹೌದು, ಶಿಷ್ಯರು ಯಾವ ರೀತಿ ದೀನತೆಯನ್ನು ತೋರಿಸಬೇಕು ಎಂಬುದನ್ನು ಅವರ ಮನಸ್ಸಿನಲ್ಲಿ ಅಚ್ಚೊತ್ತಿಸಲು ಕೊಟ್ಟ ಪ್ರತ್ಯಕ್ಷ ನಿದರ್ಶನ ಅದಾಗಿತ್ತು.

3. (1) ದೀನತೆಯ ಮಹತ್ವವನ್ನು ಯೇಸು ಎರಡು ಸಂದರ್ಭಗಳಲ್ಲಿ ಹೇಗೆ ಒತ್ತಿಹೇಳಿದನು? (2) ಈ ಲೇಖನದಲ್ಲಿ ಏನನ್ನು ಚರ್ಚಿಸಲಿದ್ದೇವೆ?

3 ಯೇಸು ದೀನತೆಯ ಮಹತ್ವದ ಬಗ್ಗೆ ಹೇಳಿದ್ದು ಇದೇ ಮೊದಲ ಬಾರಿಯೇನಲ್ಲ. ಈ ಮುಂಚೆ ತನ್ನ ಕೆಲವು ಅಪೊಸ್ತಲರ ಮಧ್ಯೆ ಸ್ಪರ್ಧಾತ್ಮಕ ಮನೋಭಾವ ಇದೆಯೆಂದು ತಿಳಿದುಬಂದಾಗ ಅವನು ಒಂದು ಚಿಕ್ಕ ಮಗುವನ್ನು ತನ್ನ ಪಕ್ಕ ನಿಲ್ಲಿಸಿ, “ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನೂ ಸೇರಿಸಿಕೊಂಡಂತಾಗುವುದು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿದಾತನನ್ನೂ ಸೇರಿಸಿಕೊಂಡಂತಾಗುವುದು. ನಿಮ್ಮೆಲ್ಲರ ಮಧ್ಯದಲ್ಲಿ ತನ್ನನ್ನು ಚಿಕ್ಕವನಾಗಿ ನಡೆಸಿಕೊಳ್ಳುವವನೇ ದೊಡ್ಡವನಾಗಿದ್ದಾನೆ” ಎಂದು ಹೇಳಿದ್ದನು. (ಲೂಕ 9:​46-48) ಫರಿಸಾಯರು ಸ್ವಪ್ರತಿಷ್ಠೆಗೆ ಮಹತ್ವ ಕೊಡುವುದನ್ನು ನೋಡಿದ ಯೇಸು “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಎಂದು ಎಚ್ಚರಿಸಿದ್ದನು. (ಲೂಕ 14:11) ಇದರಿಂದ ನಮಗೇನು ತಿಳಿಯುತ್ತದೆ? ತನ್ನ ಹಿಂಬಾಲಕರಲ್ಲಿ ಗರ್ವ ಅಹಂಕಾರವಲ್ಲ ದೀನತೆ ಇರಬೇಕೆಂದು ಯೇಸು ಬಯಸುತ್ತಾನೆ. ನಾವು ಯೇಸುವನ್ನು ಅನುಕರಿಸುವ ಸಲುವಾಗಿ ಆತನಿಟ್ಟ ದೀನತೆಯ ಮಾದರಿಯನ್ನು ಪರಿಶೀಲಿಸೋಣ. ಆ ಗುಣವನ್ನು ತೋರಿಸುವವರು ಮಾತ್ರವಲ್ಲ ಇತರರೂ ಅದರಿಂದ ಹೇಗೆ ಪ್ರಯೋಜನ ಪಡೆಯುವರೆಂದು ಸಹ ನೋಡೋಣ.

ಯೇಸು ‘ವಿಮುಖನಾಗಲಿಲ್ಲ’

4. ದೇವರ ಏಕೈಕಜಾತ ಪುತ್ರನು ಮನುಷ್ಯನಾಗಿ ಹುಟ್ಟುವ ಮುಂಚೆ ಹೇಗೆ ದೀನತೆ ತೋರಿಸಿದ್ದನು?

4 ದೇವರ ಏಕೈಕಜಾತ ಪುತ್ರನು ಭೂಮಿಗೆ ಬರುವ ಮೊದಲು ಅಗಣಿತ ವರ್ಷ ತನ್ನ ತಂದೆಯೊಂದಿಗೆ ಕಳೆದಿದ್ದನು. ಆಗಲೂ ಅವನು ದೀನತೆ ತೋರಿಸಿದ್ದನು. ಮಗನಿಗೆ ತಂದೆಯೊಂದಿಗಿದ್ದ ಅತ್ಯಾಪ್ತ ಬಂಧವನ್ನು ಯೆಶಾಯ ಪುಸ್ತಕದಲ್ಲಿ ಹೀಗೆ ವರ್ಣಿಸಲಾಗಿದೆ: “ಬಳಲಿಹೋದವರನ್ನು ಮಾತುಗಳಿಂದ ಸುಧಾರಿಸುವದಕ್ಕೆ ನಾನು ಬಲ್ಲವನಾಗುವಂತೆ ಕರ್ತನಾದ ಯೆಹೋವನು ಶಿಕ್ಷಿತರ ನಾಲಿಗೆಯನ್ನು ನನಗೆ ದಯಪಾಲಿಸಿದ್ದಾನೆ; ಬೆಳಬೆಳಗೂ ನನ್ನನ್ನು ಎಚ್ಚರಿಸಿ ಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಜಾಗರಗೊಳಿಸುತ್ತಾನೆ. ಕರ್ತನಾದ ಯೆಹೋವನು ನನ್ನ ಕಿವಿಯನ್ನು ತೆರೆದಿದ್ದಾನೆ; ನಾನು ಎದುರು ಬೀಳಲಿಲ್ಲ, ವಿಮುಖನಾಗಲೂ ಇಲ್ಲ.” (ಯೆಶಾ. 50:​4, 5) ಹೌದು, ಮಗನು ದೀನತೆ ತೋರಿಸಿದನು. ತಂದೆಯು ಕಲಿಸುವಾಗ ಗಮನಕೊಟ್ಟು ಕೇಳಿದನು. ಸತ್ಯದೇವರಾದ ಯೆಹೋವನಿಂದ ಕಲಿಯಲು ಅವನಲ್ಲಿ ಉತ್ಕಟ ಬಯಕೆಯಿತ್ತು. ಯೆಹೋವನು ದೀನತೆಯಿಂದ ಪಾಪಿ ಮಾನವರಿಗೆ ಕರುಣೆ ತೋರಿಸುತ್ತಾ ಇದ್ದಾಗ ಅದನ್ನು ತದೇಕಚಿತ್ತದಿಂದ ಯೇಸು ಗಮನಿಸಿದ್ದಿರಬೇಕಲ್ಲವೆ?

5. ಯೇಸು ಪಿಶಾಚನೊಂದಿಗೆ ವ್ಯವಹರಿಸುವಾಗ ದೀನತೆ ಮತ್ತು ನಮ್ರತೆಯ ವಿಷಯದಲ್ಲಿ ಯಾವ ಮಾದರಿಯನ್ನಿಟ್ಟನು?

5 ದೇವರ ಏಕೈಕಜಾತ ಪುತ್ರನಲ್ಲಿ ಇದ್ದಂಥದ್ದೇ ಮನೋಭಾವ ಸ್ವರ್ಗದಲ್ಲಿದ್ದ ಎಲ್ಲಾ ಆತ್ಮಜೀವಿಗಳಲ್ಲಿ ಇರಲಿಲ್ಲ. ಒಬ್ಬ ದೇವದೂತನಿಗೆ ಯೆಹೋವನಿಂದ ಕಲಿಯುವ ಇಚ್ಛೆ ಇರಲಿಲ್ಲ. ದೀನತೆಯ ಗುಣಕ್ಕೆ ವಿರುದ್ಧವಾದ ಸ್ವಪ್ರತಿಷ್ಠೆ ಮತ್ತು ಹೆಮ್ಮೆಯ ಪ್ರಭಾವಕ್ಕೊಳಗಾಗಿ ಅವನು ಪಿಶಾಚನಾದ ಸೈತಾನನಾದನು. ಅನಂತರ ಯೆಹೋವನ ವಿರುದ್ಧವೇ ದಂಗೆ ಎದ್ದನು. ಆದರೆ ಯೇಸು ಸ್ವರ್ಗದಲ್ಲಿ ತನಗಿದ್ದ ಸ್ಥಾನದ ಬಗ್ಗೆ ಅತೃಪ್ತನಾಗಲೂ ಇಲ್ಲ ತನಗಿದ್ದ ಅಧಿಕಾರವನ್ನು ಕೆಟ್ಟದ್ದಾಗಿ ಉಪಯೋಗಿಸಲೂ ಇಲ್ಲ. ‘ಮೋಶೆಯ ದೇಹದ ವಿಷಯದಲ್ಲಿ ಪಿಶಾಚನೊಂದಿಗೆ ಭಿನ್ನಾಭಿಪ್ರಾಯವೆದ್ದಾಗ’ ಪ್ರಧಾನ ದೇವದೂತನಾಗಿದ್ದ ಯೇಸು ತನ್ನ ಅಧಿಕಾರವನ್ನು ಮೀರಿ ವರ್ತಿಸಲಿಲ್ಲ. ದೇವಪುತ್ರನು ದೀನತೆ ಮತ್ತು ನಮ್ರತೆ ತೋರಿಸಿದನು. ವಿಶ್ವದ ಸರ್ವೋಚ್ಛ ನ್ಯಾಯಾಧಿಕಾರಿಯಾದ ಯೆಹೋವನು ತನ್ನದೇ ರೀತಿಯಲ್ಲಿ ಸೂಕ್ತವಾದ ಸಮಯದಲ್ಲಿ ವಿಷಯಗಳನ್ನು ಸರಿಮಾಡಲಿ ಎಂದು ಯೇಸು ಬಯಸಿದನು.​ಯೂದ 9 ಓದಿ.

6. ಮೆಸ್ಸೀಯನಾಗಿ ಸೇವೆ ಸಲ್ಲಿಸುವ ನೇಮಕವನ್ನು ಒಪ್ಪಿಕೊಳ್ಳುವ ಮೂಲಕ ಯೇಸು ದೀನತೆ ತೋರಿಸಿದನೆಂದು ನಾವು ಏಕೆ ಹೇಳಬಹುದು?

6 ಸ್ವರ್ಗದಲ್ಲಿ ಯೇಸು ಅನೇಕ ವಿಷಯಗಳನ್ನು ಕಲಿತಿರಬೇಕು. ಮೆಸ್ಸೀಯನಾಗಿ ಭೂಮಿಗೆ ಬಂದಾಗ ಅವನ ಜೀವನ ಹೇಗಿರುವುದೆಂಬ ವಿವರಗಳಿದ್ದ ಪ್ರವಾದನೆಗಳೂ ಆತನಿಗೆ ತಿಳಿದಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಮುಂದೆ ತನ್ನ ಜೀವನದಲ್ಲಿ ತುಂಬ ಕಷ್ಟಕರ ಸನ್ನಿವೇಶಗಳು ಬರುವವು ಎಂದು ಆತನಿಗೆ ಮುಂಚೆಯೇ ಗೊತ್ತಿದ್ದಿರಬೇಕು. ಆದರೂ ಭೂಮಿಗೆ ಬರುವ ಮತ್ತು ವಾಗ್ದತ್ತ ಮೆಸ್ಸೀಯನಾಗಿ ಸಾಯುವ ನೇಮಕವನ್ನು ಯೇಸು ಒಪ್ಪಿಕೊಂಡನು. ಯಾಕೆ? ಇದಕ್ಕೆ ಉತ್ತರ ಅಪೊಸ್ತಲ ಪೌಲನ ಮಾತುಗಳಲ್ಲಿದೆ. ದೇವರ ಏಕೈಕಜಾತ ಪುತ್ರನ ದೀನತೆಯನ್ನು ಎತ್ತಿತೋರಿಸುತ್ತಾ ಅವನಂದದ್ದು: “ಅವನು ದೇವರ ಸ್ವರೂಪದಲ್ಲಿದ್ದರೂ, ವಶಪಡಿಸಿಕೊಳ್ಳುವುದಕ್ಕೆ ಅಂದರೆ ದೇವರಿಗೆ ಸಮಾನನಾಗಿರಬೇಕೆಂಬುದಕ್ಕೆ ಯಾವುದೇ ಪರಿಗಣನೆಯನ್ನು ತೋರಿಸಲಿಲ್ಲ. ಅದರ ಬದಲಿಗೆ ಅವನು ತನ್ನನ್ನು ಬರಿದುಮಾಡಿಕೊಂಡು ದಾಸನ ರೂಪವನ್ನು ಧರಿಸಿ ಮನುಷ್ಯರಿಗೆ ಸದೃಶನಾದನು.”​—⁠ಫಿಲಿ. 2:​6, 7.

‘ಮನುಷ್ಯನಾಗಿ ತನ್ನನ್ನು ತಗ್ಗಿಸಿಕೊಂಡನು’

7, 8. ತನ್ನ ಬಾಲ್ಯದಲ್ಲಿ ಮತ್ತು ಸೇವೆಯಲ್ಲಿ ಯೇಸು ಯಾವೆಲ್ಲಾ ವಿಧಗಳಲ್ಲಿ ದೀನತೆ ತೋರಿಸಿದನು?

7 “[ಯೇಸು] ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಯಾತನಾ ಕಂಬದ ಮೇಲೆ ಮರಣವನ್ನು ಹೊಂದುವಷ್ಟರ ಮಟ್ಟಿಗೆ ವಿಧೇಯನಾದನು” ಎಂದು ಬರೆದನು ಪೌಲ. (ಫಿಲಿ. 2:⁠8) ಯೇಸು ತನ್ನ ಬಾಲ್ಯದಿಂದಲೂ ದೀನತೆ ತೋರಿಸುವ ಮೂಲಕ ನಮಗೆ ಮಾದರಿ ಇಟ್ಟಿದ್ದಾನೆ. ಹೆತ್ತವರಾದ ಯೋಸೇಫ ಮತ್ತು ಮರಿಯಳು ಅಪರಿಪೂರ್ಣರಾಗಿದ್ದರೂ ಯೇಸು ದೀನತೆಯಿಂದ “ಅವರಿಗೆ ಅಧೀನನಾಗಿ ಮುಂದುವರಿದನು.” (ಲೂಕ 2:51) ಮಕ್ಕಳಿಗೆ ಎಂಥ ಉತ್ತಮ ಮಾದರಿ! ಸ್ವಇಚ್ಛೆಯಿಂದ ಹೆತ್ತವರಿಗೆ ಅಧೀನರಾಗುವ ಮಕ್ಕಳಿಗೆ ಯೆಹೋವನ ಆಶೀರ್ವಾದ ಖಂಡಿತ!

8 ದೊಡ್ಡವನಾದ ಮೇಲೂ ಯೇಸು ದೀನತೆ ತೋರಿಸಲು ಮರೆಯಲಿಲ್ಲ. ಅವನು ತನ್ನ ಸ್ವಂತ ಇಷ್ಟಕ್ಕಿಂತ ಯೆಹೋವನ ಚಿತ್ತ ಮಾಡುವುದಕ್ಕೆ ಪ್ರಥಮ ಸ್ಥಾನ ಕೊಟ್ಟನು. (ಯೋಹಾ. 4:34) ಸೇವೆಯಲ್ಲಿ ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸಿದನು. ಯೆಹೋವನ ಗುಣಲಕ್ಷಣಗಳು ಮತ್ತು ಮನುಷ್ಯರಿಗಾಗಿರುವ ಆತನ ಉದ್ದೇಶದ ಸರಿಯಾದ ಜ್ಞಾನವನ್ನು ಪ್ರಾಮಾಣಿಕ ಜನರು ಪಡೆಯುವಂತೆ ಸಹಾಯ ಮಾಡಿದನು. ಯೆಹೋವನ ಬಗ್ಗೆ ಏನು ಕಲಿಸಿದನೋ ಅದಕ್ಕೆ ತಕ್ಕಂತೆ ನಡೆದನು ಕೂಡ. ಉದಾಹರಣೆಗೆ ತನ್ನ ಮಾದರಿ ಪ್ರಾರ್ಥನೆಯಲ್ಲಿ ಯೇಸು ಉಪಯೋಗಿಸಿದ ಮೊದಲ ಅಂಶವನ್ನು ಗಮನಿಸಿ: “ಸ್ವರ್ಗದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ.” (ಮತ್ತಾ. 6:⁠9) ಹೀಗೆ ಯೆಹೋವನ ನಾಮವನ್ನು ಪ್ರವಿತ್ರೀಕರಿಸುವುದೇ ಪ್ರಮುಖ ಆದ್ಯತೆಯಾಗಿರಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. ಅವರಿಗೆ ಹೇಳಿದ್ದು ಮಾತ್ರವಲ್ಲ ತಾನು ಕೂಡ ಅದರಂತೆ ಜೀವಿಸಿದನು. ಭೂಮಿಯ ಮೇಲಿನ ತನ್ನ ಸೇವೆಯ ಅಂತ್ಯದಲ್ಲಿ ಯೇಸು ಯೆಹೋವನಿಗೆ ಹೇಳಿದ್ದು: “ನಾನು ಇವರಿಗೆ [ಅಪೊಸ್ತಲರಿಗೆ] ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು.” (ಯೋಹಾ. 17:26) ಅಷ್ಟೇ ಅಲ್ಲ, ಭೂಮಿಯಲ್ಲಿ ತಾನು ಮಾಡಿದ್ದೆಲ್ಲದರ ಕೀರ್ತಿಯನ್ನು ಯೆಹೋವನಿಗೆ ಸಲ್ಲಿಸಿದನು.​—⁠ಯೋಹಾ. 5:⁠19.

9. (1) ಮೆಸ್ಸೀಯನ ಬಗ್ಗೆ ಜೆಕರ್ಯ ಏನನ್ನು ಪ್ರವಾದಿಸಿದನು? (2) ಅದು ಹೇಗೆ ನೆರವೇರಿತು?

9 ಮೆಸ್ಸೀಯನ ಕುರಿತು ಜೆಕರ್ಯ ಪ್ರವಾದನಾತ್ಮಕವಾಗಿ ಬರೆದದ್ದು: “ಚೀಯೋನ್‌ ನಗರಿಯೇ, ಬಹು ಸಂತೋಷಪಡು; ಯೆರೂಸಲೇಮ್‌ ಪುರಿಯೇ, ಹರ್ಷಧ್ವನಿಗೈ! ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ನ್ಯಾಯವಂತನು, ಸುರಕ್ಷಿತನು; ಶಾಂತಗುಣವುಳ್ಳವನಾಗಿಯೂ ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.” (ಜೆಕ. 9:⁠9) ಇದು ನೆರವೇರಿದ್ದು ಕ್ರಿ.ಶ. 33ರ ಪಸ್ಕಹಬ್ಬದ ಮುಂಚೆ ಯೇಸು ಕತ್ತೆಮರಿಯ ಮೇಲೆ ಕೂತು ಯೆರೂಸಲೇಮನ್ನು ಪ್ರವೇಶಿಸಿದಾಗ. ಜನರು ತಮ್ಮ ಮೇಲಂಗಿಗಳನ್ನು ಹಾಗೂ ಮರದ ರೆಂಬೆಗಳನ್ನು ದಾರಿಯಲ್ಲಿ ಹರಡಿದರು. ಹೌದು ಆತನ ಆಗಮನದಿಂದಾಗಿ ಇಡೀ ಪಟ್ಟಣದಲ್ಲಿ ಗೌಜುಗದ್ದಲವಾಯಿತು. ‘ರಾಜ’ ಎಂದು ಜನರು ಜೈಕಾರಘೋಷ ಕೂಗಿದಾಗಲೂ ಯೇಸು ದೀನನಾಗಿದ್ದನು.​—⁠ಮತ್ತಾ. 21:​4-11.

10. ಜೀವನದ ಅಂತಿಮ ಗಳಿಗೆಯ ವರೆಗೂ ಯೇಸು ಸ್ವಇಚ್ಛೆಯಿಂದ ವಿಧೇಯತೆ ತೋರಿಸಿದ್ದು ಏನನ್ನು ರುಜುಪಡಿಸಿತು?

10 ಯೇಸು ಯಾತನಾ ಕಂಬದ ಮೇಲೆ ಮರಣಪಟ್ಟದ್ದು ಆತನ ದೀನತೆ ಮತ್ತು ವಿಧೇಯತೆಯ ಪರಾಕಾಷ್ಠೆಯಾಗಿತ್ತು. ಹೀಗೆ ಮನುಷ್ಯರು ತೀವ್ರ ಪರೀಕ್ಷೆಯ ಕೆಳಗೂ ಯೆಹೋವನಿಗೆ ನಿಷ್ಠೆ ತೋರಿಸಲು ಸಾಧ್ಯವೆನ್ನುವುದನ್ನು ಅವನು ರುಜುಪಡಿಸಿದನು. ಮಾತ್ರವಲ್ಲ ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ಯೆಹೋವನನ್ನು ಆರಾಧಿಸುತ್ತಾರೆಂಬ ಸೈತಾನನ ಆರೋಪ ಸುಳ್ಳೆಂದು ತೋರಿಸಿಕೊಟ್ಟನು. (ಯೋಬ 1:​9-11; 2:⁠4) ಕ್ರಿಸ್ತನ ಪರಿಪೂರ್ಣ ಸಮಗ್ರತೆಯ ದಾಖಲೆಯು ಯೆಹೋವನ ಆಳುವ ಹಕ್ಕನ್ನು ಸಮರ್ಥಿಸಿತು ಮತ್ತು ಆತನು ಆಳುವ ವಿಧವೇ ಅತ್ಯುತ್ತಮವಾದದ್ದೆಂದು ತೋರಿಸಿಕೊಟ್ಟಿತು. ತನ್ನ ದೀನ ಪುತ್ರನ ಅಚಲ ನಿಷ್ಠೆಯನ್ನು ಗಮನಿಸಿದ ಯೆಹೋವನು ಸಂತೋಷಿಸಿದ್ದು ಖರೆ!​ಜ್ಞಾನೋಕ್ತಿ 27:11 ಓದಿ.

11. ಯೇಸುವಿನ ವಿಮೋಚನಾ ಮೌಲ್ಯ ಯಜ್ಞವು ಅದರಲ್ಲಿ ನಂಬಿಕೆಯಿಡುವ ಮಾನವರಿಗೆ ಯಾವ ಪ್ರತೀಕ್ಷೆ ಕೊಟ್ಟಿತು?

11 ಯೇಸು ಯಾತನಾ ಕಂಬದ ಮೇಲೆ ಸತ್ತದ್ದರಿಂದ ಇನ್ನೊಂದು ಪ್ರಯೋಜನವೂ ಇದೆ. ಅವನು ಮಾನವಕುಲಕ್ಕಾಗಿ ವಿಮೋಚನಾ ಮೌಲ್ಯವನ್ನು ಕೊಡಲು ಸಾಧ್ಯವಾಯಿತು. (ಮತ್ತಾ. 20:28) ಇದು ಪಾಪಿಗಳಾದ ಮಾನವರಿಗೆ ಸದಾಕಾಲ ಜೀವಿಸುವ ಅವಕಾಶ ನೀಡಿತು. ನೀತಿಯ ಅವಶ್ಯಕತೆಗಳನ್ನು ಪೂರೈಸಿತು. ಪೌಲ ಹೇಳಿದಂತೆ “ಸಮರ್ಥನೆಯ ಒಂದು ಕ್ರಿಯೆಯ ಫಲಿತಾಂಶವಾಗಿ ಎಲ್ಲ ರೀತಿಯ ಜನರು ಜೀವಕ್ಕಾಗಿ ನೀತಿವಂತರೆಂದು ನಿರ್ಣಯಿಸಲ್ಪಡುವಂತಾಯಿತು.” (ರೋಮ. 5:18) ಯೇಸುವಿನ ಮರಣವು ಆತ್ಮಾಭಿಷಿಕ್ತ ಕ್ರೈಸ್ತರಿಗೆ ಸ್ವರ್ಗದಲ್ಲಿ ಅಮರ ಜೀವನ ಪಡೆಯುವ ಮತ್ತು ‘ಬೇರೆ ಕುರಿಗಳಿಗೆ’ ಇದೇ ಭೂಮಿಯ ಮೇಲೆ ಸದಾಕಾಲ ಜೀವಿಸುವ ಪ್ರತೀಕ್ಷೆಗೆ ದಾರಿ ಮಾಡಿಕೊಟ್ಟಿತು.​—⁠ಯೋಹಾ. 10:16; ರೋಮ. 8:​16, 17.

‘ನಾನು ದೀನಹೃದಯದವನು’

12. ಅಪರಿಪೂರ್ಣ ಮನುಷ್ಯರೊಂದಿಗೆ ವ್ಯವಹರಿಸುವಾಗ ಯೇಸು ಹೇಗೆ ಸೌಮ್ಯಭಾವ ಮತ್ತು ದೀನತೆ ತೋರಿಸಿದನು?

12 “ಕಷ್ಟಪಡುತ್ತಿರುವವರೇ, ಹೊರೆಹೊತ್ತಿರುವವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ” ಎಂದು ಯೇಸು ಆಮಂತ್ರಿಸಿದನು. “ನಾನು ಸೌಮ್ಯಭಾವದವನೂ ದೀನಹೃದಯದವನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿಯಿರಿ; ಆಗ ನೀವು ನಿಮ್ಮ ಪ್ರಾಣಗಳಿಗೆ ಚೈತನ್ಯವನ್ನು ಪಡೆದುಕೊಳ್ಳುವಿರಿ” ಎಂದು ಅವರಿಗೆ ಹೇಳಿದನು. (ಮತ್ತಾ. 11:​28, 29) ಅಪರಿಪೂರ್ಣ ಮನುಷ್ಯರೊಂದಿಗೆ ದಯೆ ಮತ್ತು ನಿಷ್ಪಕ್ಷಪಾತದಿಂದ ವ್ಯವಹರಿಸಲು ಯೇಸುವಿನಲ್ಲಿದ್ದ ದೀನತೆ ಮತ್ತು ಸೌಮ್ಯಭಾವ ಪ್ರಚೋದಿಸಿತು. ಅವನು ಅಪೊಸ್ತಲರ ಇತಿಮಿತಿಗಳನ್ನು ಅರಿತಿದ್ದನು. ಅವರಿಂದ ಮಾಡಲಾಗದ್ದನ್ನು ಕೇಳಿಕೊಳ್ಳಲಿಲ್ಲ. ಅವರನ್ನು ಪ್ರಶಂಸಿಸಿದನು. ಪ್ರೋತ್ಸಾಹಿಸಿದನು. ತಾವು ಅಸಮರ್ಥರು ಅಯೋಗ್ಯರು ಎಂಬ ಭಾವನೆ ಅವರಲ್ಲಿ ಮೂಡುವಂತೆ ಮಾಡಲಿಲ್ಲ. ಯೇಸು ಒರಟನಾಗಿರಲಿಲ್ಲ. ದಬ್ಬಾಳಿಕೆ ಮಾಡುವವನಾಗಿರಲಿಲ್ಲ. ಬದಲಾಗಿ, ತನ್ನ ಹಿಂಬಾಲಕರು ತನಗೆ ಆಪ್ತರಾಗುವುದಾದರೆ, ತಾನು ಉಪದೇಶಿಸಿದಂತೆ ನಡೆಯುವುದಾದರೆ ಚೈತನ್ಯ ಪಡೆಯಸಾಧ್ಯ ಎಂಬ ಭರವಸೆ ತುಂಬಿದನು. ಏಕೆಂದರೆ ಅವನ ನೊಗವು ಮೃದುವಾದದ್ದು, ಹೊರೆಯು ಹಗುರವಾದದ್ದು. ಹಾಗಾಗಿ ಸ್ತ್ರೀಯರಿಗೂ ಪುರುಷರಿಗೂ ವೃದ್ಧರಿಂದ ಹಿಡಿದು ಮಕ್ಕಳಿಗೂ ಹೀಗೆ ಯಾರಿಗೂ ಅವನೊಂದಿಗಿರಲಿಕ್ಕೆ ಹಿಂಜರಿಕೆ ಆಗುತ್ತಿರಲಿಲ್ಲ.​—⁠ಮತ್ತಾ. 11:⁠30.

13. ಕಷ್ಟದಲ್ಲಿದ್ದ ಜನರ ಕಡೆಗೆ ಯೇಸು ಹೇಗೆ ಅನುಕಂಪ ತೋರಿದನು?

13 ಇಸ್ರಾಯೇಲಿನ ಜನಸಾಮಾನ್ಯರೊಂದಿಗೆ ಯೇಸು ವರ್ತಿಸಿದ ವಿಧವನ್ನು ಸಹ ಗಮನಿಸಿ. ಅವರ ಕಷ್ಟವನ್ನು ಕಂಡು ಅವನು ಮನಮರುಗಿದನು. ಅವರ ಅಗತ್ಯಗಳೇನೆಂದು ತಿಳಿದು ಪ್ರೀತಿಯಿಂದ ಸಹಾಯಮಾಡಿದನು. ಉದಾಹರಣೆಗೆ, ಯೇಸು ಯೆರಿಕೋವಿನ ಹತ್ತಿರದಲ್ಲಿದ್ದಾಗ ದಾರಿ ಬದಿಯಲ್ಲಿ ಇಬ್ಬರು ಕುರುಡ ಬಿಕ್ಷುಕರಿದ್ದರು. ಒಬ್ಬನ ಹೆಸರು ಬಾರ್ತಿಮಾಯ. ತಮಗೆ ಸಹಾಯಮಾಡುವಂತೆ ಅವರಿಬ್ಬರೂ ಅಂಗಲಾಚಿ ಬೇಡಿಕೊಳ್ಳುತ್ತಿದ್ದರು. ಆದರೆ ಜನರು ಅವರನ್ನು ಗದರಿಸಿ ಸುಮ್ಮನಿರುವಂತೆ ಹೇಳಿದರು. ಯೇಸು ಕೂಡ ಅವರನ್ನು ನಿರ್ಲಕ್ಷಿಸಿ ಸುಮ್ಮನೆ ಹೋಗಬಹುದಿತ್ತು. ಆದರೆ ಹಾಗೆ ಮಾಡದೆ ಆ ಬಿಕ್ಷುಕರನ್ನು ತನ್ನ ಬಳಿ ಕರೆತರುವಂತೆ ಹೇಳಿದನು. ಅವರ ಪರಿಸ್ಥಿತಿ ನೋಡಿ ಯೇಸುವಿಗೆ ಕರುಳು ಚುರ್ರೆಂದಿತು. ಅವನು ಕನಿಕರಪಟ್ಟು ಅವರಿಗೆ ದೃಷ್ಟಿಬರುವಂತೆ ಮಾಡಿದನು. ಹೌದು, ಹೀಗೆ ಯೇಸು ದೀನತೆಯನ್ನು ಮತ್ತು ಕಷ್ಟದಲ್ಲಿರುವವರ ಕಡೆಗೆ ಅನುಕಂಪವನ್ನು ತೋರಿಸುವ ಮೂಲಕ ತನ್ನ ತಂದೆಯಾದ ಯೆಹೋವನನ್ನು ಅನುಕರಿಸಿದನು.​—⁠ಮತ್ತಾ. 20:​29-34; ಮಾರ್ಕ 10:​46-52.

“ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು”

14. ಯೇಸು ಜೀವನದಾದ್ಯಂತ ತೋರಿಸಿದ ದೀನತೆಯಿಂದ ಯಾವ ಪ್ರಯೋಜನಗಳು ದೊರೆತಿವೆ?

14 ಯೇಸು ತನ್ನ ಜೀವನದಾದ್ಯಂತ ತೋರಿಸಿದ ದೀನತೆ ಎಲ್ಲರಿಗೂ ಸಂತೋಷವನ್ನೂ ಅನೇಕಾನೇಕ ಪ್ರಯೋಜನಗಳನ್ನೂ ತಂದಿದೆ. ತನ್ನ ಚಿತ್ತಕ್ಕೆ ದೀನತೆಯಿಂದ ಬದ್ಧನಾದ ಯೇಸುವನ್ನು ಕಂಡು ಯೆಹೋವನು ಬಹು ಸಂತೋಷಗೊಂಡಿರಬೇಕು! ಯೇಸು ಸೌಮ್ಯಭಾವದವನೂ ದೀನಹೃದಯದವನೂ ಆಗಿದ್ದರಿಂದ ಅವನ ಅಪೊಸ್ತಲರೂ ಶಿಷ್ಯರೂ ಚೈತನ್ಯಗೊಂಡರು. ಅವನ ಅತ್ಯುತ್ತಮ ಮಾದರಿ, ಬೋಧನೆಗಳು, ಮನಸಾರೆ ಕೊಡುತ್ತಿದ್ದ ಪ್ರಶಂಸೆ ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಅವರನ್ನು ಉತ್ತೇಜಿಸಿತು. ಯೇಸು ಜನರಿಗೆ ಸಹಾಯಮಾಡಿದನು. ಬೋಧಿಸಿದನು, ಪ್ರೋತ್ಸಾಹ ನೀಡಿದನು. ಹೀಗೆ ಅವನು ತೋರಿಸಿದ ದೀನತೆಯಿಂದ ಜನಸಾಮಾನ್ಯರು ಸಹ ಪ್ರಯೋಜನ ಪಡೆದುಕೊಂಡರು. ಅಷ್ಟೇ ಏಕೆ, ಯೇಸುವಿನ ವಿಮೋಚನಾ ಮೌಲ್ಯ ಯಜ್ಞದಿಂದ ಇಡೀ ಮಾನವಕುಲವೇ ನಿತ್ಯನಿರಂತರಕ್ಕೂ ಪ್ರಯೋಜನಗಳನ್ನು ಹೇರಳವಾಗಿ ಕೊಯ್ಯಲಿದೆ.

15. ದೀನನಾಗಿದ್ದರಿಂದ ಯೇಸುವಿಗೆ ಯಾವ ಪ್ರಯೋಜನ ಸಿಕ್ಕಿತು?

15 ಯೇಸುವಿನ ದೀನತೆಯಿಂದ ಸ್ವತಃ ಅವನಿಗೆ ಪ್ರಯೋಜನವಾಗಿದೆಯಾ? ಹೌದು. ಅದು ಹೇಗೆ ಗೊತ್ತಾಗುತ್ತದೆ? “ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಎಂದು ಯೇಸು ಶಿಷ್ಯರಿಗೆ ಹೇಳಿದನು. (ಮತ್ತಾ. 23:12) ಈ ಮಾತು ಯೇಸುವಿನ ವಿಷಯದಲ್ಲೂ ಸತ್ಯವಾಯಿತು. ಏಕೆಂದರೆ ಪೌಲ ಹೇಳಿದಂತೆ “ದೇವರು . . . [ಯೇಸುವನ್ನು] ಉನ್ನತವಾದ ಸ್ಥಾನಕ್ಕೆ ಏರಿಸಿ ಬೇರೆ ಎಲ್ಲ ಹೆಸರುಗಳಿಗಿಂತಲೂ ಉನ್ನತವಾದ ಹೆಸರನ್ನು ಅವನಿಗೆ ದಯಪಾಲಿಸಿದನು. ಆದುದರಿಂದ ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ ನೆಲದ ಕೆಳಗಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಮೊಣಕಾಲೂರಬೇಕು ಮತ್ತು ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನೇ ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಬಹಿರಂಗವಾಗಿ ಒಪ್ಪಿಕೊಳ್ಳಬೇಕು.” ಹೌದು, ಯೇಸು ಭೂಮಿಯಲ್ಲಿದ್ದಾಗ ತೋರಿಸಿದ ದೀನತೆ ಮತ್ತು ನಂಬಿಗಸ್ತಿಕೆಯ ಫಲವಾಗಿ ಯೆಹೋವನು ಅವನನ್ನು ಉನ್ನತ ಸ್ಥಾನಕ್ಕೆ ಏರಿಸಿದನು. ಸ್ವರ್ಗದಲ್ಲೂ ಭೂಮಿಯಲ್ಲೂ ಇರುವ ಸಕಲ ಜೀವಿಗಳ ಮೇಲೆ ಅಧಿಕಾರ ಕೊಟ್ಟನು.​—⁠ಫಿಲಿ. 2:​9-11.

ಯೇಸು “ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ” ಯುದ್ಧ ಮಾಡುವನು

16. ದೇವಪುತ್ರನು ತನ್ನ ಕೆಲಸಗಳಲ್ಲಿ ದೀನತೆಯನ್ನು ತೋರಿಸುತ್ತಾ ಮುಂದುವರಿಯುವನು ಎಂದು ಯಾವುದು ತೋರಿಸುತ್ತದೆ?

16 ದೇವಪುತ್ರನು ತನ್ನ ಕೆಲಸಗಳಲ್ಲಿ ದೀನತೆಯನ್ನು ತೋರಿಸುತ್ತಾ ಮುಂದುವರಿಯುವನು. ಅದು ನಮಗೆ ಹೇಗೆ ಗೊತ್ತು? ಸ್ವರ್ಗದಲ್ಲಿ ಉನ್ನತ ಸ್ಥಾನದಲ್ಲಿರುವ ಯೇಸು ವೈರಿಗಳ ವಿರುದ್ಧ ಹೇಗೆ ಕ್ರಿಯೆಗೈಯುವನು ಎಂದು ಮುಂತಿಳಿಸುತ್ತಾ ಕೀರ್ತನೆಗಾರನು ಹಾಡಿದ್ದು: “ಸತ್ಯತೆದೈನ್ಯನೀತಿಗಳನ್ನು ಸ್ಥಾಪಿಸುವದಕ್ಕಾಗಿ ಆಡಂಬರದಿಂದ ವಾಹನಾರೂಢನಾಗಿ ವಿಜಯೋತ್ಸವದೊಡನೆ ಹೊರಡೋಣವಾಗಲಿ.” (ಕೀರ್ತ. 45:⁠4) ಅಂದರೆ ಸತ್ಯವನ್ನು ಪ್ರೀತಿಸುವವರು, ನೀತಿವಂತರು ಮತ್ತು ದೀನರನ್ನು ರಕ್ಷಿಸಲು ಅರ್ಮಗೆದೋನ್‌ನಲ್ಲಿ ಯೇಸು ಯುದ್ಧ ಮಾಡುವನು. ದೀನರನ್ನು ರಕ್ಷಿಸುವ ಯೇಸು ಖಂಡಿತವಾಗಿಯೂ ದೀನನಾಗಿರುವನು. ಆದರೆ ಸಾವಿರ ವರ್ಷದಾಳ್ವಿಕೆಯ ಕೊನೆಯಲ್ಲಿ “ಎಲ್ಲ ಆಧಿಪತ್ಯವನ್ನೂ ಎಲ್ಲ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿದ ಮೇಲೆ” ಮೆಸ್ಸೀಯ ರಾಜನು ದೀನತೆ ತೋರಿಸುವನೇ? ಹೌದು. ಬೈಬಲ್‌ ಹೇಳುವಂತೆ ಕೊನೆಯಲ್ಲಿ ಅವನು ದೀನತೆಯಿಂದ ‘ತನ್ನ ದೇವರೂ ತಂದೆಯೂ ಆಗಿರುವಾತನಿಗೆ ರಾಜ್ಯವನ್ನು ಒಪ್ಪಿಸಿಕೊಡುವನು.’​1 ಕೊರಿಂಥ 15:​24-28 ಓದಿ.

17, 18. (1) ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿಯನ್ನು ಯೆಹೋವನ ಜನರು ಅನುಕರಿಸುವುದು ಏಕೆ ಪ್ರಾಮುಖ್ಯ? (2) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?

17 ಈಗ ನಮ್ಮ ಬಗ್ಗೆ ಯೋಚಿಸೋಣ. ನಮಗೆ ಆದರ್ಶನಾಗಿರುವ ಯೇಸುವಿನಂತೆ ನಾವು ಸಹ ದೀನತೆ ತೋರಿಸುತ್ತೇವಾ? ರಾಜ ಯೇಸು ಕ್ರಿಸ್ತನು ಅರ್ಮಗೆದೋನಿನಲ್ಲಿ ಕೇವಲ ದೀನರನ್ನು ಹಾಗೂ ನೀತಿವಂತರನ್ನು ರಕ್ಷಿಸುವನು. ನಾವು ದೀನರಾಗಿದ್ದರೆ ಮಾತ್ರ ರಕ್ಷಣೆ ಪಡೆಯುವೆವು. ಯೇಸು ತನ್ನ ಜೀವನದಾದ್ಯಂತ ದೀನತೆ ತೋರಿಸಿದ್ದರಿಂದ ಅವನಿಗೂ ಇತರರಿಗೂ ಪ್ರಯೋಜನವಾಯಿತು. ಹಾಗೆಯೇ ನಾವು ದೀನರಾಗಿರುವುದಾದರೆ ನಮಗೂ ಇತರರಿಗೂ ಅನೇಕ ವಿಧಗಳಲ್ಲಿ ಪ್ರಯೋಜನವಾಗುವುದು.

18 ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿಯನ್ನು ಅನುಕರಿಸಲು ನಮಗೆ ಯಾವುದು ಸಹಾಯಮಾಡುವುದು? ದೀನತೆ ತೋರಿಸಲು ಕಷ್ಟವಾಗುವ ಸಂದರ್ಭಗಳಲ್ಲೂ ನಾವು ಹೇಗೆ ಈ ಗುಣವನ್ನು ತೋರಿಸಲು ಪ್ರಯತ್ನಿಸಬಹುದು? ಉತ್ತರ ಮುಂದಿನ ಲೇಖನದಲ್ಲಿದೆ.

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರಗಳು]

ದೀನತೆಯ ವಿಷಯದಲ್ಲಿ ಯೇಸುವಿಟ್ಟ ಮಾದರಿಯಿಂದ ನಾವೇನು ಕಲಿಯುತ್ತೇವೆ?

[ಪುಟ 13ರಲ್ಲಿರುವ ಚಿತ್ರ]

ಯೇಸು ತೋರಿಸಿದ ಅನುಕಂಪ ಅನುಕರಣೀಯ