‘ಹಿಂದೆಂದೂ ಆಲಿಸಿರದ ಬಹು ಒಳ್ಳೆಯ ಸಂದೇಶ’
ನಮ್ಮ ಸಂಗ್ರಹಾಲಯ
‘ಹಿಂದೆಂದೂ ಆಲಿಸಿರದ ಬಹು ಒಳ್ಳೆಯ ಸಂದೇಶ’
ಕೆನಡದ ಸಸ್ಕ್ಯಾಚುವಾನ್‌ನ ಸಸ್ಕಾಟೂನ್‌ನಲ್ಲಿ ಯುದ್ಧಸಲಕರಣೆಗಳನ್ನು ಇಡುತ್ತಿದ್ದ ಸ್ಥಳ. ಅಲ್ಲಿ 18 ಮೀಟರ್ ಉದ್ದದ ಮರದ ದಿಮ್ಮಿಗಳು ರಾಶಿ ಬಿದ್ದಿದ್ದವು. ಅವುಗಳಿಗೆ ಕೈತೋರಿಸುತ್ತಾ ಸಹೋದರ ಜಾರ್ಜ್ ನೇಶ್ “ಇವೆಲ್ಲ ಯಾವುದಕ್ಕೆ?” ಎಂದು ಕೇಳಿದರು. ಒಂದನೇ ಮಹಾಯುದ್ಧದ ಸಮಯದಲ್ಲಿ ಸಿಗ್ನಲ್ ಟವರ್‌ಗಳನ್ನು ನಿರ್ಮಿಸಲು ಇವನ್ನು ಬಳಸಲಾಗಿತ್ತು ಎಂಬ ಉತ್ತರ ಅವರಿಗೆ ಸಿಕ್ಕಿತು. “ಅರೆ, ಈ ದಿಮ್ಮಿಗಳನ್ನು ರೇಡಿಯೋ ಟವರ್ ಕಟ್ಟಲು ಉಪಯೋಗಿಸಬಹುದಲ್ಲಾ ಎಂಬ ಯೋಚನೆ ತಟ್ಟನೆ ಮನಸ್ಸಿಗೆ ಹೊಳೆಯಿತು. ಬೈಬಲ್ ಸತ್ಯವನ್ನು ಪ್ರಸಾರ ಮಾಡುವ ರೇಡಿಯೋ ಸ್ಟೇಷನ್ ಇದ್ದರೆ ಹೇಗೆ ಎಂಬ ಆಲೋಚನೆ ಚಿಗುರೊಡೆದದ್ದು ಆಗಲೇ” ಎಂದು ಹೇಳುತ್ತಾರೆ ಸಹೋದರ ನೇಶ್. ಒಂದೇ ವರ್ಷದ ನಂತರ ಅಂದರೆ 1924ರಲ್ಲಿ CHUC ರೇಡಿಯೋ ಸ್ಟೇಷನ್ ಆರಂಭಗೊಂಡಿತು. ಕೆನಡದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ಮೊತ್ತಮೊದಲ ರೇಡಿಯೋ ಸ್ಟೇಷನ್‌ಗಳಲ್ಲಿ ಇದು ಒಂದಾಗಿತ್ತು.
ಕೆನಡ ಹೆಚ್ಚುಕಡಿಮೆ ಯೂರೋಪ್‌ನಷ್ಟು ದೊಡ್ಡದಾದ ಕಾರಣ ರೇಡಿಯೋ ಮೂಲಕ ಸಾಕ್ಷಿಕೊಡುವುದು ಸೂಕ್ತವಾಗಿತ್ತು. ಸಸ್ಕಾಟೂನ್‌ನ ರೇಡಿಯೋ ಸ್ಟೇಷನ್‌ನಲ್ಲಿ ಕೆಲಸಮಾಡಿದ ಫ್ಲಾರೆನ್ಸ್ ಜಾನ್‌ಸನ್ ಹೀಗಂದರು: “ನಾವು ನೇರವಾಗಿ ಹೋಗಿ ಸಂದರ್ಶಿಸಲು ಆಗದಿದ್ದ ಬಹು ಮಂದಿಗೆ ಸತ್ಯವನ್ನು ತಲಪಿಸಲು ರೇಡಿಯೋ ಪ್ರಸಾರಗಳು ಸಹಾಯ ಮಾಡಿದವು. ರೇಡಿಯೋ ಆಗ ಹೊಸ ಸಾಧನವಾದ್ದರಿಂದ ಎಲ್ಲ ಕಾರ್ಯಕ್ರಮಗಳನ್ನು ಕೇಳಿಸಿಕೊಳ್ಳುವ ಕುತೂಹಲ ಜನರಲ್ಲಿತ್ತು.” 1926ರಷ್ಟಕ್ಕೆ ಬೈಬಲ್ ವಿದ್ಯಾರ್ಥಿಗಳಿಗೆ (ಯೆಹೋವನ ಸಾಕ್ಷಿಗಳಿಗೆ ಆಗ ಇದ್ದ ಹೆಸರು) ಕೆನಡದ ನಾಲ್ಕು ನಗರಗಳಲ್ಲಿ ಸ್ವಂತ ರೇಡಿಯೋ ಸ್ಟೇಷನ್ ಇತ್ತು. *
ಅದರಲ್ಲಿ ಏನು ಕೇಳಿಬರುತ್ತಿತ್ತು? ಆಗಾಗ್ಗೆ ಸ್ಥಳೀಯ ಸಭೆಯ ಗಾಯಕರು ವಾದ್ಯೋಪಕರಣಗಳನ್ನು ನುಡಿಸುತ್ತಾ ಗೀತೆಗಳನ್ನು ಹಾಡುತ್ತಿದ್ದರು. ಚಿಕ್ಕ ವಾದ್ಯಗೋಷ್ಠಿಗಳು ಕೂಡ ಇರುತ್ತಿದ್ದವು. ಸಹೋದರರು ಉಪನ್ಯಾಸಗಳನ್ನು ಕೊಡುತ್ತಿದ್ದರು. ಬೈಬಲ್ ಚರ್ಚೆಗಳನ್ನು ನಡೆಸುತ್ತಿದ್ದರು. ಇಂಥ ಚರ್ಚೆಯಲ್ಲಿ ಭಾಗವಹಿಸಿದ ಸಹೋದರಿ ಏಮೀ ಜೋನ್ಸ್ ಹೀಗಂದರು: “ಕ್ಷೇತ್ರ ಸೇವೆಯಲ್ಲಿ ಮನೆಯವರಿಗೆ ನನ್ನನ್ನು ಪರಿಚಯಿಸಿಕೊಂಡಾಗ ಕೆಲವರು ‘ಓಹ್. . . ರೇಡಿಯೋದಲ್ಲಿ ಮಾತಾಡುತ್ತಿರಲ್ಲಾ ಅವರು ತಾನೇ ನೀವು!’ ಎಂದು ಹೇಳುತ್ತಿದ್ದರು.”
ನೋವಾ ಸ್ಕೋಶ ಪ್ರಾಂತದ ಹ್ಯಾಲಿಫ್ಯಾಕ್ಸ್ ನಗರದಲ್ಲಿದ್ದ ಬೈಬಲ್ ವಿದ್ಯಾರ್ಥಿಗಳು ಹೊಸ ವಿಧಾನದಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದ್ದರು. ಮೊದಲು ಒಂದು ವಿಷಯವನ್ನಾಧರಿಸಿ ಭಾಷಣ. ಬಳಿಕ ರೇಡಿಯೋ ಸ್ಟೇಷನ್‌ಗೆ ಫೋನ್ ಮಾಡಿ ಬೈಬಲ್ ಪ್ರಶ್ನೆಗಳನ್ನು ಕೇಳುವಂತೆ ಕೇಳುಗರಿಗೆ ಆಮಂತ್ರಣ. ಈ ಬಗ್ಗೆ ಸಹೋದರರೊಬ್ಬರು ಹೀಗೆ ಬರೆದರು: “ಇಂಥ ಕಾರ್ಯಕ್ರಮಗಳಿಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಎಷ್ಟು ಫೋನ್ ಕರೆಗಳು ಬರುತ್ತಿದ್ದವೆಂದರೆ ಯಾವುದನ್ನು
ಸ್ವೀಕರಿಸೋದು ಯಾವುದಕ್ಕೆ ಉತ್ತರ ಕೊಡೋದು ಅನ್ನೋದೇ ಗೊತ್ತಾಗುತ್ತಿರಲಿಲ್ಲ.”ಬೈಬಲ್ ವಿದ್ಯಾರ್ಥಿಗಳಿಗೆ ಅಪೊಸ್ತಲ ಪೌಲನಿಗಾದಂಥದ್ದೇ ಅನುಭವವಾಯಿತು. ಅವರು ಬಿತ್ತರಿಸುತ್ತಿದ್ದ ಸಂದೇಶಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. (ಅ. ಕಾ. 17:1-5) ಕೆಲವರು ಕೇಳಿಸಿಕೊಂಡ ಸಂದೇಶವನ್ನು ತುಂಬ ಇಷ್ಟಪಟ್ಟರು. ಅವರಲ್ಲಿ ಒಬ್ಬರು ಹೆಕ್ಟರ್ ಮಾರ್ಷಲ್. ರೇಡಿಯೋ ಕಾರ್ಯಕ್ರಮದಲ್ಲಿ ಸ್ಟಡೀಸ್ ಇನ್ ದ ಸ್ಕ್ರಿಪ್ಚರ್ಸ್ ಪುಸ್ತಕದ ಬಗ್ಗೆ ಕೇಳಿಸಿಕೊಂಡ ಅವರು ಅದರ 6 ಸಂಪುಟಗಳನ್ನು ವಿನಂತಿಸಿದರು. “ಈ ಪುಸ್ತಕಗಳಿಂದ ಸಂಡೇ ಸ್ಕೂಲ್‌ನಲ್ಲಿ ಕಲಿಸಲು ಸಹಾಯವಾಗುತ್ತೆ ಎಂದು ನೆನಸಿ ಓದತೊಡಗಿದೆ” ಎಂದರವರು. ಆದರೆ ಒಂದನೇ ಸಂಪುಟವನ್ನು ಓದಿ ಮುಗಿಸುತ್ತಿದ್ದಂತೆ ಅವರು ಚರ್ಚನ್ನು ಬಿಟ್ಟುಬರಲು ನಿರ್ಧರಿಸಿದರು. ಮುಂದೆ ಹುರುಪಿನ ಸೌವಾರ್ತಿಕರಾದರು. 1998ರಲ್ಲಿ ಮೃತಪಟ್ಟ ಅವರು ಅಲ್ಲಿಯವರೆಗೂ ನಂಬಿಗಸ್ತಿಕೆಯಿಂದ ಯೆಹೋವ ದೇವರ ಸೇವೆಮಾಡಿದರು. ರೇಡಿಯೋದಲ್ಲಿ “ದೇವರ ರಾಜ್ಯ—ಲೋಕಕ್ಕೆ ನಿರೀಕ್ಷೆ” ಎಂಬ ಭಾಷಣ ಪ್ರಸಾರವಾದ ಮರುದಿನ ಪೂರ್ವ ನೋವಾ ಸ್ಕೋಶದಲ್ಲಿ ಕೊಲೊನಲ್ ಜೆ. ಎ. ಮ್ಯಾಕ್‌ಡೊನಾಲ್ಡ್ ಎಂಬವರು ಅಲ್ಲಿನ ಒಬ್ಬ ಸಹೋದರರಿಗೆ “ನಿನ್ನೆ ಕೇಳಿಸಿಕೊಂಡ ಸಂದೇಶ ಎಷ್ಟು ಒಳ್ಳೇದಾಗಿತ್ತು! ಇಂಥ ಸಂದೇಶವನ್ನು ಕೇಪ್ ಬ್ರಿಟನ್ ದ್ವೀಪದ ಜನರು ಈ ಹಿಂದೆ ಕೇಳಿಸಿಕೊಂಡದ್ದೇ ಇಲ್ಲ” ಎಂದು ಉದ್ಗರಿಸಿದರು.
ಆದರೆ ಪಾದ್ರಿಗಳು ಕೋಪದಿಂದ ಕೆರಳಿದರು. ಬೈಬಲ್ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ ರೇಡಿಯೋ ಸ್ಟೇಷನ್‌ಗೆ ಒಂದು ಗತಿ ಕಾಣಿಸುತ್ತೇವೆಂದು ಹ್ಯಾಲಿಫ್ಯಾಕ್ಸ್ ನಗರದ ಕೆಲವು ಪಾದ್ರಿಗಳು ಬೆದರಿಕೆ ಹಾಕಿದರು. ಸರ್ಕಾರವೂ ಪಾದ್ರಿಗಳ ಪ್ರಭಾವಕ್ಕೊಳಗಾಗಿ ಬೈಬಲ್ ವಿದ್ಯಾರ್ಥಿಗಳ ರೇಡಿಯೋ ಸ್ಟೇಷನ್‌ಗಳ ಪರವಾನಗಿಯನ್ನು ನವೀಕರಿಸುವುದಿಲ್ಲ ಎಂದು 1928ರಲ್ಲಿ ಪ್ರಕಟಿಸಿತು. ಸಹೋದರ ಸಹೋದರಿಯರು ಈ ನಿರ್ಣಯವನ್ನು ಪ್ರತಿಭಟಿಸುತ್ತಾ, ರೇಡಿಯೋ ತರಂಗಗಳ ಮೇಲೆ ಯಾರಿಗೆ ಅಧಿಕಾರವಿದೆ? (ಇಂಗ್ಲಿಷ್) ಎಂಬ ಕರಪತ್ರವನ್ನು ಮುದ್ರಿಸಿ ವಿತರಿಸಿದರು. ಆದರೂ ಬೈಬಲ್ ವಿದ್ಯಾರ್ಥಿಗಳ ರೇಡಿಯೋ ಸ್ಟೇಷನ್‌ಗಳ ಪರವಾನಗಿಯನ್ನು ಸರ್ಕಾರ ನವೀಕರಿಸಲಿಲ್ಲ.
ಇದು ಕೆನಡದಲ್ಲಿದ್ದ ಬೈಬಲ್ ವಿದ್ಯಾರ್ಥಿಗಳ ಚಿಕ್ಕ ಗುಂಪಿನ ಉತ್ಸಾಹವನ್ನು ಕುಂದಿಸಿತಾ? “ಆರಂಭದಲ್ಲಿ ವಿರೋಧಿಗಳು ದೊಡ್ಡ ಜಯಗಳಿಸಿದರು ಎಂದು ಅನಿಸತೊಡಗಿತು. ಆದರೆ ಒಂದುವೇಳೆ ರೇಡಿಯೋ ಮೂಲಕವೇ ಸಂದೇಶ ಪ್ರಸಾರವಾಗಬೇಕೆಂದು ಯೆಹೋವನಿಗೆ ಅನಿಸಿದ್ದರೆ ಅದನ್ನು ನಿಷೇಧಿಸಲು ಆತನು ಬಿಡುತ್ತಿರಲಿಲ್ಲ ಎಂದು ನನಗೆ ಗೊತ್ತು. ಆತನು ಇದನ್ನು ಅನುಮತಿಸಿದ್ದಾನೆಂದರೆ ಇದರರ್ಥ ನಾವು ಇನ್ನೂ ಒಳ್ಳೆಯ ವಿಧಾನವನ್ನು ಉಪಯೋಗಿಸಿ ಸುವಾರ್ತೆ ಸಾರಬೇಕಾಗಿದೆ ಎಂದಿರಬೇಕು” ಎಂದರು ಸಹೋದರಿ ಇಜಬೆಲ್ ವೇನ್‌ರೈಟ್. ಹಾಗಾಗಿ ಕೆನಡದಲ್ಲಿನ ಬೈಬಲ್ ವಿದ್ಯಾರ್ಥಿಗಳು ರೇಡಿಯೋ ಪ್ರಸಾರದ ಮೇಲೆಯೇ ಆತುಕೊಳ್ಳದೆ ಮನೆ ಮನೆಗೆ ಹೋಗಿ ಜನರನ್ನು ಭೇಟಿಮಾಡುವುದರ ಕಡೆಗೆ ಹೆಚ್ಚು ಗಮನಹರಿಸಿದರು. ಆದರೆ ಒಂದು ಮಾತ್ರ ಸತ್ಯ ಏನೆಂದರೆ ಆ ನಿರ್ದಿಷ್ಟ ಸಮಯಾವಧಿಯಲ್ಲಿ ರೇಡಿಯೋ ‘ಹಿಂದೆಂದೂ ಕೇಳಿಸಿಕೊಂಡಿರದ ಬಹು ಒಳ್ಳೆಯ ಸಂದೇಶವನ್ನು’ ಪ್ರಸಾರಮಾಡುವುದರಲ್ಲಿ ಮುಖ್ಯ ಪಾತ್ರ ವಹಿಸಿತು.—ಕೆನಡದ ನಮ್ಮ ಸಂಗ್ರಹಾಲಯದಿಂದ.
[ಪಾದಟಿಪ್ಪಣಿ]
^ ಪ್ಯಾರ. 4 ಕೆನಡದಲ್ಲಿದ್ದ ಸಹೋದರರು ಬೈಬಲ್ ಸಂದೇಶವನ್ನು ಪ್ರಸಾರ ಮಾಡಲು ಬೇರೆ ರೇಡಿಯೋ ಸ್ಟೇಷನ್‌ಗಳಲ್ಲೂ ನಿರ್ದಿಷ್ಟ ಅವಧಿಯನ್ನು ಕೊಂಡುಕೊಂಡಿದ್ದರು.
[ಪುಟ 32ರಲ್ಲಿರುವ ಸಂಕ್ಷಿಪ್ತ ವಿವರ]
“ಎಷ್ಟು ಫೋನ್ ಕರೆಗಳು ಬರುತ್ತಿದ್ದವೆಂದರೆ ಯಾವುದನ್ನು ಸ್ವೀಕರಿಸೋದು ಯಾವುದಕ್ಕೆ ಉತ್ತರ ಕೊಡೋದು ಅನ್ನೋದೇ ಗೊತ್ತಾಗುತ್ತಿರಲಿಲ್ಲ”
[ಪುಟ 32ರಲ್ಲಿರುವ ಚಿತ್ರಗಳು]
(1) ಅಲ್ಬರ್ಟಾ ಪ್ರಾಂತ್ಯದ ಎಡ್ಮಂಟನ್ ನಗರದಲ್ಲಿನ ರೇಡಿಯೋ ಸ್ಟೇಷನ್ (2) ಆಂಟಾರಿಯೊ ಪ್ರಾಂತ್ಯದ ಟೊರಾಂಟೊ ನಗರದಲ್ಲಿ ಸಹೋದರರೊಬ್ಬರು ಸಂವಾಹಕ ಯಂತ್ರ (ಟ್ರಾನ್ಸ್‌ಮಿಟರ್)ದಲ್ಲಿ ಕೆಲಸಮಾಡುತ್ತಿರುವುದು (3) ಸಸ್ಕ್ಯಾಚುವಾನ್‌ನ ಸಸ್ಕಾಟೂನ್‌ನಲ್ಲಿ CHUC ಸ್ಟೂಡಿಯೋ