ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಹಿರಿಯರು ‘ನಮ್ಮ ಸಂತೋಷಕ್ಕಾಗಿ ಜೊತೆ ಕೆಲಸದವರು’

ಕ್ರೈಸ್ತ ಹಿರಿಯರು ‘ನಮ್ಮ ಸಂತೋಷಕ್ಕಾಗಿ ಜೊತೆ ಕೆಲಸದವರು’

ಕ್ರೈಸ್ತ ಹಿರಿಯರು ‘ನಮ್ಮ ಸಂತೋಷಕ್ಕಾಗಿ ಜೊತೆ ಕೆಲಸದವರು’

“ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ.”—2 ಕೊರಿಂ. 1:24.

ಉತ್ತರ ಕಂಡುಹಿಡಿಯಿರಿ

ತಾನು ‘ಸಹೋದರರ ನಂಬಿಕೆಯ ಒಡೆಯನಲ್ಲ’ ಬದಲಿಗೆ ‘ಅವರ ಸಂತೋಷಕ್ಕಾಗಿ ಜೊತೆ ಕೆಲಸದವನು’ ಎಂದು ಪೌಲ ಹೇಗೆ ತೋರಿಸಿಕೊಟ್ಟನು?

ಇಂದು ಹಿರಿಯರು ಜೊತೆ ಕ್ರೈಸ್ತರ ಸಂತೋಷವನ್ನು ಹೇಗೆ ಹೆಚ್ಚಿಸುತ್ತಾರೆ?

ಸಭೆಯ ಸಂತೋಷವನ್ನು ನಾವೆಲ್ಲರೂ ಹೇಗೆ ಹೆಚ್ಚಿಸಬಹುದು?

1. ಕೊರಿಂಥದವರ ವಿಷಯದಲ್ಲಿ ಯಾವ ಸುದ್ದಿ ಕೇಳಿ ಪೌಲ ಹರ್ಷಿಸಿದನು?

ಕ್ರಿಸ್ತಶಕ 55. ಅಪೊಸ್ತಲ ಪೌಲ ತ್ರೋವದ ರೇವು ಪಟ್ಟಣದಲ್ಲಿದ್ದಾನೆ. ಆದರೆ ಅವನ ಮನಸ್ಸೆಲ್ಲ ಕೊರಿಂಥದಲ್ಲಿದೆ. ಅವನು ತೀತನಿಗಾಗಿ ಕಾಯುತ್ತಾ ಇದ್ದಾನೆ. ಏಕೆ? ಏಕೆಂದರೆ ಕೊರಿಂಥದ ಸಹೋದರರ ಮಧ್ಯೆ ಜಗಳಗಳು ನಡೆಯುತ್ತಿವೆ ಎಂಬ ಸುದ್ದಿಯನ್ನು ಕೆಲವು ತಿಂಗಳುಗಳ ಹಿಂದೆ ಅವನು ಕೇಳಿಸಿಕೊಂಡಿದ್ದನು. ಇದರಿಂದ ಅವನಿಗೆ ತುಂಬ ದುಃಖವಾಗಿತ್ತು. ತಂದೆಯಂತೆ ಅವರ ಬಗ್ಗೆ ಕಾಳಜಿ ವಹಿಸಿ ಪೌಲ ಅವರಿಗೆ ಒಂದು ಪತ್ರ ಬರೆದಿದ್ದನು. ತಮ್ಮನ್ನು ತಿದ್ದಿಕೊಳ್ಳುವಂತೆ ಸಲಹೆ ಕೊಟ್ಟಿದ್ದನು. (1 ಕೊರಿಂ. 1:11; 4:15) ಮಾತ್ರವಲ್ಲ ತನ್ನ ಜೊತೆ ಕೆಲಸಗಾರನಾದ ತೀತನನ್ನು ಕೊರಿಂಥಕ್ಕೆ ಕಳುಹಿಸಿ ಅಲ್ಲಿನ ಸಹೋದರರ ಬಗ್ಗೆ ವರದಿಯನ್ನು ತರುವಂತೆ ಹೇಳಿದ್ದನು. ಆದ್ದರಿಂದಲೇ ತ್ರೋವದಲ್ಲಿ ಪೌಲನು ತೀತ ಯಾವಾಗ ಬರುತ್ತಾನೋ, ಕೊರಿಂಥದವರ ಬಗ್ಗೆ ಏನು ಸುದ್ದಿ ತರುತ್ತಾನೋ ಎಂದು ಆತುರದಿಂದ ಕಾಯುತ್ತಿದ್ದಾನೆ. ಆದರೆ ತೀತ ಬರಲೇ ಇಲ್ಲ. ಪೌಲನಿಗಾದ ನಿರಾಶೆ ಹೇಳಲಸಾಧ್ಯ. ಅಲ್ಲಿಂದ ಸಮುದ್ರಯಾನ ಮಾಡಿ ಪೌಲ ಮಕೆದೋನ್ಯಕ್ಕೆ ಹೋಗುತ್ತಾನೆ. ಅಲ್ಲಿ ತೀತನ ಭೇಟಿಯಾಗುತ್ತದೆ. ಪೌಲ ತುಂಬ ಸಂತೋಷಪಡುತ್ತಾನೆ. ತೀತನು ಯಾವ ವರದಿ ತಂದಿದ್ದನು? ಕೊರಿಂಥದವರು ಪೌಲನ ಪತ್ರದಲ್ಲಿದ್ದ ಸಲಹೆಗಳನ್ನು ಅನ್ವಯಿಸಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಅವನನ್ನು ನೋಡಲು ತವಕಿಸುತ್ತಿದ್ದಾರೆ ಎನ್ನುತ್ತಾನೆ ತೀತ. ಅದನ್ನು ಕೇಳಿ ಪೌಲ ‘ಇನ್ನಷ್ಟು ಹರ್ಷಿಸಿದನು.’—2 ಕೊರಿಂ. 2:12, 13; 7:5-9.

2. (1) ನಂಬಿಕೆ ಮತ್ತು ಸಂತೋಷದ ಕುರಿತು ಪೌಲ ಕೊರಿಂಥದವರಿಗೆ ಏನು ಬರೆದನು? (2) ಯಾವ ಪ್ರಶ್ನೆಗಳಿಗೆ ಉತ್ತರ ನೋಡಲಿದ್ದೇವೆ?

2 ಇದಾಗಿ ಸ್ವಲ್ಪ ಸಮಯದ ನಂತರ ಪೌಲ ಕೊರಿಂಥದವರಿಗೆ ಎರಡನೇ ಪತ್ರ ಬರೆದನು. ಅವನು ಹೀಗಂದನು: “ನಾವು ನಿಮ್ಮ ನಂಬಿಕೆಯ ಒಡೆಯರೆಂದಲ್ಲ, ಬದಲಾಗಿ ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ; ನೀವು ನಿಂತಿರುವುದು ನಿಮ್ಮ ನಂಬಿಕೆಯಿಂದಲೇ.” (2 ಕೊರಿಂ. 1:24) ಪೌಲನ ಈ ಮಾತಿನ ಅರ್ಥವೇನಾಗಿತ್ತು? ಈ ಮಾತುಗಳಿಂದ ಇಂದಿರುವ ಸಭಾ ಹಿರಿಯರು ಏನು ಕಲಿಯಬಹುದು?

ನಮ್ಮ ನಂಬಿಕೆ ಮತ್ತು ನಮ್ಮ ಸಂತೋಷ

3. (1) “ನೀವು ನಿಂತಿರುವುದು ನಿಮ್ಮ ನಂಬಿಕೆಯಿಂದಲೇ” ಎಂದು ಪೌಲ ಹೇಳಿದ್ದರ ಅರ್ಥವೇನಾಗಿತ್ತು? (2) ಇಂದಿರುವ ಸಭಾ ಹಿರಿಯರು ಪೌಲನನ್ನು ಹೇಗೆ ಅನುಕರಿಸುತ್ತಾರೆ?

3 ಕ್ರೈಸ್ತರಲ್ಲಿರಬೇಕಾದ ಎರಡು ಪ್ರಮುಖ ಗುಣಗಳನ್ನು ಪೌಲ ಹೇಳಿದನು. ಅದು ನಂಬಿಕೆ ಮತ್ತು ಸಂತೋಷ. ನಂಬಿಕೆಯ ಕುರಿತು ಪೌಲ ಹೇಳಿದ್ದೇನೆಂದರೆ, “ನಾವು ನಿಮ್ಮ ನಂಬಿಕೆಯ ಒಡೆಯರೆಂದಲ್ಲ, ನೀವು ನಿಂತಿರುವುದು ನಿಮ್ಮ ನಂಬಿಕೆಯಿಂದಲೇ.” ಈ ಮಾತಿನ ಅರ್ಥವೇನು? ಕೊರಿಂಥದವರು ನಂಬಿಕೆಯಲ್ಲಿ ದೃಢರಾಗಿ ನಿಂತದ್ದು ತನ್ನಿಂದಾಗಿ ಅಲ್ಲ, ಬೇರೆ ಯಾವ ಮನುಷ್ಯನಿಂದಾಗಿಯೂ ಅಲ್ಲ, ಸ್ವತಃ ಅವರಿಗೆ ದೇವರಲ್ಲಿದ್ದ ನಂಬಿಕೆಯಿಂದಲೇ ಎಂದು ಪೌಲ ಒಪ್ಪಿಕೊಂಡನು. ಅವರು ನಂಬಿಗಸ್ತ ಕ್ರೈಸ್ತರು, ಸರಿಯಾದದ್ದನ್ನೇ ಮಾಡಲು ಬಯಸುತ್ತಾರೆ ಎಂಬ ಭರವಸೆ ಅವನಿಗಿತ್ತು. ಹಾಗಾಗಿ ಅವರ ನಂಬಿಕೆಯನ್ನು ಪೌಲನು ನಿಯಂತ್ರಿಸಲಿಲ್ಲ. ಹಾಗೆ ಮಾಡುವ ಅಪೇಕ್ಷೆಯೂ ಅವನಲ್ಲಿರಲಿಲ್ಲ. (2 ಕೊರಿಂ. 2:3) ಇಂದಿರುವ ಸಭಾ ಹಿರಿಯರು ಕೂಡ ಪೌಲನ ಮಾದರಿಯನ್ನು ಅನುಕರಿಸುತ್ತಾರೆ. ಸಭೆಯಲ್ಲಿರುವ ಸಹೋದರರಿಗೆ ದೇವರಲ್ಲಿ ನಂಬಿಕೆಯಿದೆ ಮತ್ತು ಸರಿಯಾದ ಹೇತುವಿನಿಂದಲೇ ಆತನ ಸೇವೆ ಮಾಡುತ್ತಾರೆ ಎಂಬ ಭರವಸೆ ಅವರಿಗಿದೆ. (2 ಥೆಸ. 3:4) ಸಭೆಯಲ್ಲಿ ಅವರು ಕಟ್ಟುನಿಟ್ಟಾದ ನಿಯಮಗಳನ್ನು ಮಾಡಲು ಹೋಗುವುದಿಲ್ಲ. ಬದಲಿಗೆ ಬೈಬಲ್‌ ಮೂಲತತ್ವಗಳು ಹಾಗೂ ಯೆಹೋವನ ಸಂಘಟನೆ ಕೊಡುವ ಮಾರ್ಗದರ್ಶನಕ್ಕೆ ಅನುಗುಣವಾಗಿ ನಿರ್ಣಯಗಳನ್ನು ಮಾಡಲು ಸಹೋದರರಿಗೆ ಸಹಾಯ ಮಾಡುತ್ತಾರೆ. ಹೌದು, ಇಂದಿರುವ ಹಿರಿಯರು ಸಹೋದರರ ನಂಬಿಕೆಯ ಮೇಲೆ ಒಡೆಯರಲ್ಲ.—1 ಪೇತ್ರ 5:2, 3.

4. (1) “ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ” ಎಂದು ಪೌಲ ಹೇಳಿದ್ದರ ಅರ್ಥವೇನು? (2) ಪೌಲನಿಗಿದ್ದಂಥದ್ದೇ ಮನೋಭಾವವನ್ನು ಇಂದಿರುವ ಹಿರಿಯರು ಹೇಗೆ ತೋರಿಸುತ್ತಾರೆ?

4 “ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ” ಎಂದು ಸಹ ಪೌಲ ಹೇಳಿದನು. ಇಲ್ಲಿ ‘ಜೊತೆ ಕೆಲಸದವರು’ ಎಂದು ಹೇಳಿದಾಗ ಪೌಲನು ತನಗೆ ಮತ್ತು ತನ್ನ ಆಪ್ತ ಸಂಗಡಿಗರಿಗೆ ಸೂಚಿಸಿದನು. ಇದು ನಮಗೆ ಹೇಗೆ ಗೊತ್ತಾಗುತ್ತದೆಂದರೆ, ಈ ಪತ್ರದಲ್ಲೇ ಇನ್ನೊಂದು ಕಡೆ ಪೌಲ ತನ್ನ ಇಬ್ಬರು ಸಂಗಡಿಗರಿಗೆ ಸೂಚಿಸಿ ಮಾತಾಡಿದ್ದಾನೆ. ಆ ಮಾತುಗಳು ಹೀಗಿವೆ: “ನಮ್ಮ ಮೂಲಕ ಅಂದರೆ ನನ್ನ, ಸಿಲ್ವಾನನ ಮತ್ತು ತಿಮೊಥೆಯನ ಮೂಲಕ ನಿಮ್ಮ ನಡುವೆ . . . ದೇವರ ಮಗನಾದ ಕ್ರಿಸ್ತ ಯೇಸುವು” ಸಾರಲ್ಪಟ್ಟನು. (2 ಕೊರಿಂ. 1:19) ಮಾತ್ರವಲ್ಲ ಪೌಲ ತನ್ನ ಪತ್ರಗಳಲ್ಲಿ ಯಾವಾಗೆಲ್ಲ ‘ಜೊತೆ ಕೆಲಸಗಾರರು’ ಎಂದು ಬರೆದನೋ ಆಗೆಲ್ಲ ತನ್ನ ಆಪ್ತ ಸಂಗಡಿಗರಾದ ಅಪೊಲ್ಲೋಸ, ಅಕ್ವಿಲ, ಪ್ರಿಸ್ಕ, ತಿಮೊಥೆಯ, ತೀತ ಮತ್ತು ಇತರರನ್ನು ಸೂಚಿಸುತ್ತಿದ್ದನು. (ರೋಮ. 16:3, 21; 1 ಕೊರಿಂ. 3:6-9; 2 ಕೊರಿಂ. 8:23) ಹಾಗಾಗಿ ನಾವು ಅರ್ಥಮಾಡಿಕೊಳ್ಳಬಹುದೇನೆಂದರೆ “ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮ ಜೊತೆ ಕೆಲಸದವರಾಗಿದ್ದೇವೆ” ಎಂದು ಹೇಳುವ ಮೂಲಕ ಪೌಲನು, ಕೊರಿಂಥ ಸಭೆಯವರು ಸಂತೋಷದಿಂದ ದೇವರ ಸೇವೆ ಮಾಡುವುದಕ್ಕಾಗಿ ತಾನೂ ತನ್ನ ಸಂಗಡಿಗರೂ ಕೈಲಾದುದೆಲ್ಲವನ್ನು ಮಾಡಲು ಸಿದ್ಧರೆಂದು ಆ ಸಭೆಯವರಿಗೆ ಆಶ್ವಾಸನೆ ಕೊಟ್ಟನು. ಇಂದಿರುವ ಹಿರಿಯರಿಗೂ ಇದೇ ಮನೋಭಾವವಿದೆ. ಸಭೆಯಲ್ಲಿರುವ ಸಹೋದರರು ‘ಯೆಹೋವನನ್ನು ಸಂತೋಷದಿಂದ ಸೇವಿಸಲು’ ಸಾಧ್ಯವಾಗುವಂತೆ ತಮ್ಮಿಂದಾದುದೆಲ್ಲವನ್ನು ಮಾಡಲು ಅವರು ಬಯಸುತ್ತಾರೆ.—ಕೀರ್ತ. 100:2; ಫಿಲಿ. 1:25.

5. (1) ಕೆಲವು ಸಹೋದರ ಸಹೋದರಿಯರಿಗೆ ಯಾವ ಪ್ರಶ್ನೆ ಕೇಳಲಾಯಿತು? (2) ಅವರ ಉತ್ತರಗಳನ್ನು ಪರಿಗಣಿಸುವಾಗ ನಾವೇನು ಮಾಡಬೇಕು?

5 ಇತ್ತೀಚೆಗೆ, ಬೇರೆ ಬೇರೆ ದೇಶದ ಕೆಲವು ಹುರುಪಿನ ಸಹೋದರ ಸಹೋದರಿಯರಿಗೆ “ಸಭಾ ಹಿರಿಯರ ಯಾವ ಮಾತುಗಳು ಮತ್ತು ಕ್ರಿಯೆಗಳು ನಿಮ್ಮ ಸಂತೋಷವನ್ನು ಹೆಚ್ಚಿಸಿವೆ?” ಎಂದು ಕೇಳಲಾಯಿತು. ಅವರು ಕೊಟ್ಟ ಉತ್ತರಗಳನ್ನು ನಾವೀಗ ಪರಿಗಣಿಸುತ್ತಾ ಹೋದಂತೆ ಹಿರಿಯರ ಯಾವ ಮಾತು ಮತ್ತು ಕ್ರಿಯೆ ನಿಮ್ಮ ಸಂತೋಷವನ್ನು ಹೆಚ್ಚಿಸಿತೆಂದು ನೆನಪಿಸಿಕೊಳ್ಳಿ. ನಮ್ಮ ಸಭೆಯ ಸಂತೋಷವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೇಗೆ ಕೆಲಸಮಾಡಬಹುದು ಎನ್ನುವುದನ್ನು ಕೂಡ ನಾವೆಲ್ಲರೂ ನೋಡೋಣ. *

“ನಮ್ಮ ಪ್ರಿಯ ಪೆರ್ಸೀಸಳಿಗೂ ವಂದನೆ”

6, 7. (1) ಯೇಸು, ಪೌಲ ಮತ್ತು ಇತರ ದೇವಸೇವಕರ ಮಾದರಿಯನ್ನು ಹಿರಿಯರು ಅನುಕರಿಸಬಹುದಾದ ಒಂದು ವಿಧ ಯಾವುದು? (2) ನಾವು ಸಹೋದರ ಸಹೋದರಿಯರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳುವಾಗ ಅವರು ತುಂಬ ಸಂತೋಷಿಸುತ್ತಾರೆ ಏಕೆ?

6 ಹಿರಿಯರು ವೈಯಕ್ತಿಕ ಆಸಕ್ತಿ ತೋರಿಸುವಾಗ ಹೆಚ್ಚು ಸಂತೋಷವಾಗುತ್ತದೆ ಎಂದು ಅನೇಕ ಸಹೋದರ ಸಹೋದರಿಯರು ಹೇಳಿದರು. ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಒಂದು ವಿಧ ಯಾವುದು? ದಾವೀದ, ಎಲೀಹು ಮತ್ತು ಯೇಸುವಿನ ಮಾದರಿಯನ್ನು ಹಿರಿಯರು ಅನುಸರಿಸಬೇಕು. (2 ಸಮುವೇಲ 9:6; ಯೋಬ 33:1; ಲೂಕ 19:5 ಓದಿ.) ಈ ಮೂವರು ಇತರರಲ್ಲಿ ಯಥಾರ್ಥ ಆಸಕ್ತಿ ತೋರಿಸಿದರು. ಹೇಗೆ ಗೊತ್ತೆ? ಮಾತಾಡುತ್ತಿರುವಾಗ ಆ ವ್ಯಕ್ತಿಯ ಹೆಸರನ್ನು ಉಪಯೋಗಿಸುವ ಮೂಲಕ. ಪೌಲ ಸಹ ಸಹೋದರ ಸಹೋದರಿಯರ ಹೆಸರನ್ನು ನೆನಪಿಟ್ಟುಕೊಂಡು ಅದನ್ನು ಬಳಸುವುದು ಪ್ರಾಮುಖ್ಯವೆಂದು ಅರಿತಿದ್ದನು. ಆದ್ದರಿಂದಲೇ ತನ್ನ ಒಂದು ಪತ್ರದ ಕೊನೆಯಲ್ಲಿ 25ಕ್ಕಿಂತ ಹೆಚ್ಚು ಸಹೋದರ ಸಹೋದರಿಯರ ಹೆಸರು ಹೇಳಿ ವಂದನೆ ತಿಳಿಸಿದನು. ಅವರಲ್ಲಿ ಸಹೋದರಿ ಪೆರ್ಸೀಸಳೂ ಒಬ್ಬಳು. “ನಮ್ಮ ಪ್ರಿಯ ಪೆರ್ಸೀಸಳಿಗೂ ವಂದನೆ” ಎಂದು ಪೌಲ ಬರೆದನು.—ರೋಮ. 16:3-15.

7 ಕೆಲವು ಹಿರಿಯರಿಗೆ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಆದರೂ ಅವರು ಪ್ರಯತ್ನಪಟ್ಟು ಹೆಸರುಗಳನ್ನು ನೆನಪಿಟ್ಟು ಕರೆಯುವಾಗ, ‘ನೀವು ನನಗೆ ಬಹು ಅಮೂಲ್ಯರು’ ಎಂದು ಸಹೋದರ ಸಹೋದರಿಯರಿಗೆ ಹೇಳಿದಂತಾಗುತ್ತದೆ. (ವಿಮೋ. 33:17) ವಿಶೇಷವಾಗಿ ಕಾವಲಿನಬುರುಜು ಅಧ್ಯಯನ ಅಥವಾ ಬೇರೆ ಕೂಟಗಳಲ್ಲಿ ಉತ್ತರಕ್ಕಾಗಿ ಕೈ ಎತ್ತಿದವರನ್ನು ಹಿರಿಯರು ಹೆಸರು ಹೇಳಿ ಕರೆಯುವಾಗ ಸಹೋದರ ಸಹೋದರಿಯರು ತುಂಬ ಸಂತೋಷಿಸುತ್ತಾರೆ.—ಯೋಹಾನ 10:3 ಹೋಲಿಸಿ.

‘ಅವಳು ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಳು’

8. ಪೌಲನು ಯೆಹೋವ ದೇವರ ಮತ್ತು ಯೇಸುವಿನ ಮಾದರಿ ಅನುಕರಿಸಿದ ಒಂದು ಪ್ರಾಮುಖ್ಯ ವಿಧ ಯಾವುದು?

8 ಪೌಲನು ಇತರರನ್ನು ಮನಸಾರೆ ಪ್ರಶಂಸಿಸುವ ಮೂಲಕವೂ ವೈಯಕ್ತಿಕ ಆಸಕ್ತಿ ತೋರಿಸಿದನು. ಇದು ಹಿರಿಯರು ಜೊತೆ ವಿಶ್ವಾಸಿಗಳ ಸಂತೋಷವನ್ನು ಹೆಚ್ಚಿಸುವ ಇನ್ನೊಂದು ವಿಧವಾಗಿದೆ. ಪೌಲನು ಕೊರಿಂಥದವರಿಗೆ ಬರೆದ ಪತ್ರದಲ್ಲಿ ಅವರ ಬಗ್ಗೆ ಹೀಗಂದನು: “ನನಗೆ ನಿಮ್ಮ ವಿಷಯದಲ್ಲಿ ತುಂಬ ಹೆಮ್ಮೆಯಿದೆ.” (2 ಕೊರಿಂ. 7:4) ಇಂಥ ಪ್ರಶಂಸೆಯ ಮಾತುಗಳನ್ನು ಕೇಳಿ ಆ ಸಹೋದರರ ಹೃದಯಕ್ಕೆ ತಂಪೆರೆದಂತೆ ಆಗಿರಬೇಕು! ಬೇರೆ ಸಭೆಗಳವರನ್ನೂ ಪೌಲ ಇದೇ ರೀತಿ ಪ್ರಶಂಸಿಸಿದನು. (ರೋಮ. 1:8; ಫಿಲಿ. 1:3-5; 1 ಥೆಸ. 1:8) ರೋಮ್‌ ಸಭೆಗೆ ಬರೆದ ಪತ್ರದಲ್ಲಿ ಅವನು ಪೆರ್ಸೀಸಳಿಗೆ ವಂದನೆ ಹೇಳುವಾಗ ‘ಅವಳು ಕರ್ತನ ಸೇವೆಯಲ್ಲಿ ಬಹಳವಾಗಿ ಪ್ರಯಾಸಪಟ್ಟಿದ್ದಾಳೆ’ ಎಂದು ಪ್ರಶಂಸಿಸಿದನು. (ರೋಮ. 16:12) ಈ ಮಾತುಗಳನ್ನು ಕೇಳಿ ಆ ನಂಬಿಗಸ್ತ ಸಹೋದರಿಯ ಹೃದಯ ತುಂಬಿ ಬಂದಿರಬೇಕು! ಹೀಗೆ ಇತರರನ್ನು ಪ್ರಶಂಸಿಸುವುದರಲ್ಲಿ ಪೌಲನು ಯೆಹೋವ ದೇವರ ಮತ್ತು ಯೇಸುವಿನ ಮಾದರಿ ಅನುಕರಿಸಿದನು.ಮಾರ್ಕ 1:9-11; ಯೋಹಾನ 1:47 ಓದಿ; ಪ್ರಕ. 2:2, 13, 19.

9. ಇತರರನ್ನು ಪ್ರಶಂಸಿಸುವುದು ಹಾಗೂ ಇತರರು ನಮ್ಮನ್ನು ಪ್ರಶಂಸಿಸುವುದು ಹೇಗೆ ಸಭೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ?

9 ಇಂದು ಕೂಡ ಜೊತೆಕ್ರೈಸ್ತರಿಗೆ ತಮ್ಮ ಮಾತುಗಳ ಮೂಲಕ ಗಣ್ಯತೆ ವ್ಯಕ್ತಪಡಿಸುವುದು ಪ್ರಾಮುಖ್ಯ ಎಂದು ಹಿರಿಯರು ಅರಿತಿದ್ದಾರೆ. (ಜ್ಞಾನೋ. 3:27; 15:23) ಹೀಗೆ ಗಣ್ಯತೆಯನ್ನು ವ್ಯಕ್ತಪಡಿಸುವಾಗ, ಆ ಸಹೋದರ ಅಥವಾ ಸಹೋದರಿಯ ಬಗ್ಗೆ ತನಗೆ ತುಂಬ ಕಾಳಜಿಯಿದೆ ಮತ್ತು ಅವರ ಸೇವೆಯನ್ನು ಗಮನಿಸಿದ್ದೇನೆ ಎಂದು ಹಿರಿಯನು ತೋರಿಸಿಕೊಡುತ್ತಾನೆ. ಇಂಥ ಆಶ್ವಾಸನೆಯ ಮಾತುಗಳ ಅಗತ್ಯವೂ ಸಹೋದರ ಸಹೋದರಿಯರಿಗಿದೆ. 50ರ ಗಡಿ ದಾಟಿರುವ ಈ ಸಹೋದರಿ ಏನನ್ನುತ್ತಾರೆ ಗಮನಿಸಿ: “ಕೆಲಸದ ಸ್ಥಳದಲ್ಲಿ ಮೆಚ್ಚಿಗೆಯ ಒಂದು ಮಾತೂ ಕೇಳಲಿಕ್ಕೆ ಸಿಗುವುದಿಲ್ಲ. ಇನ್ನೊಬ್ಬರ ಬಗ್ಗೆ ಕಾಳಜಿ ಇಲ್ಲವೇ ಇಲ್ಲ. ಒಬ್ಬರಿಗಿಂತ ಒಬ್ಬರು ಮುಂದೆ ಬರಬೇಕು ಎಂಬ ಯೋಚನೆ ಎಲ್ಲರಿಗೆ. ಹಾಗಾಗಿ ಸಭೆಯಲ್ಲಿ ಹಿರಿಯರೊಬ್ಬರು ನಾನು ಮಾಡಿದ ಯಾವುದಾದರೂ ಕೆಲಸಕ್ಕಾಗಿ ಪ್ರಶಂಸಿಸಿದಾಗ ಅದು ನನ್ನಲ್ಲಿ ನವಚೈತನ್ಯ ತುಂಬುತ್ತದೆ, ಹೊಸ ಬಲ ಬಂದಂತಾಗುತ್ತದೆ! ಸ್ವರ್ಗದಲ್ಲಿರುವ ತಂದೆಯಾದ ಯೆಹೋವ ದೇವರು ನನ್ನನ್ನೆಷ್ಟು ಪ್ರೀತಿಸುತ್ತಾನೆ ಎನ್ನುವುದು ನನ್ನ ಅನುಭವಕ್ಕೆ ಬರುತ್ತದೆ.” ನಮ್ಮಲ್ಲಿ ಅನೇಕರಿಗೆ ಖಂಡಿತ ಇದೇ ರೀತಿ ಅನಿಸಿಕೆಯಾಗುತ್ತದೆ. ಇನ್ನೊಬ್ಬ ಸಹೋದರರ ಅನುಭವ ಗಮನಿಸಿ. ಒಂಟಿ ಹೆತ್ತವರಾಗಿರುವ ಅವರಿಗೆ ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯಿದೆ. ಇತ್ತೀಚೆಗೆ ಒಬ್ಬ ಹಿರಿಯನು ಅವರನ್ನು ಪ್ರಶಂಸಿಸಿದನು. ಅದನ್ನು ಕೇಳಿ ಆ ಸಹೋದರನಿಗೆ ಹೇಗನಿಸಿತು? “ಆ ಹಿರಿಯನ ಮಾತುಗಳು ನನ್ನನ್ನು ಹುರಿದುಂಬಿಸಿದವು. ಇನ್ನೂ ಹೆಚ್ಚು ಮಾಡುವಂತೆ ಪ್ರೋತ್ಸಾಹಿಸಿದವು” ಎನ್ನುತ್ತಾರವರು. ಹೌದು, ಮನಸಾರೆ ಪ್ರಶಂಸಿಸುವಾಗ ಹಿರಿಯರು ಸಹೋದರ ಸಹೋದರಿಯರಲ್ಲಿ ನವಚೈತನ್ಯ ತುಂಬುತ್ತಾರೆ. ಅವರ ಸಂತೋಷವನ್ನು ಇಮ್ಮಡಿಗೊಳಿಸುತ್ತಾರೆ. ಅದು ಜೀವದ ಮಾರ್ಗದಲ್ಲಿ ನಡೆಯುವಾಗ ಅವರು ‘ಬಳಲಿಹೋಗದೆ’ ಮುಂದೆ ಸಾಗುತ್ತಾ ಇರಲು ಹೆಚ್ಚಿನ ಬಲ ಕೊಡುವುದು.—ಯೆಶಾ. 40:31.

‘ದೇವರ ಸಭೆಯನ್ನು ಪರಿಪಾಲಿಸಿರಿ’

10, 11. (1) ಹಿರಿಯರು ನೆಹೆಮೀಯನ ಮಾದರಿಯನ್ನು ಹೇಗೆ ಅನುಕರಿಸಬಹುದು? (2) ಪರಿಪಾಲನಾ ಭೇಟಿಯ ಸಂದರ್ಭದಲ್ಲಿ ಆಧ್ಯಾತ್ಮಿಕ ವರವನ್ನು ಕೊಡಲು ಹಿರಿಯನಿಗೆ ಯಾವುದು ಸಹಾಯಮಾಡುವುದು?

10 ಹಿರಿಯರು ಸಭೆಯಲ್ಲಿರುವ ಸಹೋದರ ಸಹೋದರಿಯರಲ್ಲಿ ವೈಯಕ್ತಿಕ ಆಸಕ್ತಿ ತೋರಿಸುವ ಮತ್ತು ಅವರ ಸಂತೋಷವನ್ನು ಹೆಚ್ಚಿಸುವ ಅತಿ ಪ್ರಾಮುಖ್ಯ ವಿಧ ಯಾವುದು? ಪ್ರೋತ್ಸಾಹದ ಅಗತ್ಯವಿರುವವರಿಗೆ ಸಹಾಯಮಾಡಲು ಮೊದಲ ಹೆಜ್ಜೆ ತೆಗೆದುಕೊಳ್ಳುವುದೇ. (ಅಪೊಸ್ತಲ ಕಾರ್ಯಗಳು 20:28 ಓದಿ.) ಹೀಗೆ ಮಾಡುವಾಗ ಹಿರಿಯರು ಪ್ರಾಚೀನ ಕಾಲದ ಆಧ್ಯಾತ್ಮಿಕ ಕುರುಬರನ್ನು ಅನುಕರಿಸುತ್ತಾರೆ. ಉದಾಹರಣೆಗೆ ನಂಬಿಗಸ್ತ ಮೇಲ್ವಿಚಾರಕನಾದ ನೆಹೆಮೀಯನು ಏನು ಮಾಡಿದನೆಂದು ನೋಡೋಣ. ತನ್ನ ಯೆಹೂದಿ ಸಹೋದರರಲ್ಲಿ ಕೆಲವರು ಆಧ್ಯಾತ್ಮಿಕವಾಗಿ ಬಲಹೀನರಾಗಿದ್ದಾರೆಂದು ಗಮನಿಸಿದ ಅವನು ಕೂಡಲೆ ಹೆಜ್ಜೆ ತಕ್ಕೊಂಡನು. ಅವರನ್ನು ಸಂದರ್ಶಿಸಿ ಅವರ ಮುಂದೆ ನಿಂತು ಉತ್ತೇಜಿಸಿದನು. (ನೆಹೆ. 4:14) ಇಂದಿರುವ ಹಿರಿಯರೂ ನೆಹೆಮೀಯನಂತೆ ಇರುತ್ತಾರೆ. ಜೊತೆ ವಿಶ್ವಾಸಿಗಳನ್ನು ನಂಬಿಕೆಯಲ್ಲಿ ಬಲಗೊಳಿಸಲು ಅವರಾಗಿಯೇ ‘ಮುಂದೆ ಬಂದು’ ನೆರವು ನೀಡುತ್ತಾರೆ. ಸನ್ನಿವೇಶ ಅನುಮತಿಸುವಲ್ಲಿ ಸಹೋದರ ಸಹೋದರಿಯರನ್ನು ಸಂದರ್ಶಿಸಲು ಅವರ ಮನೆಗೆ ಹೋಗುತ್ತಾರೆ. ಅಂಥ ಪರಿಪಾಲನಾ ಭೇಟಿಯ ಸಮಯದಲ್ಲಿ ಅವರಿಗೆ “ಆಧ್ಯಾತ್ಮಿಕ ವರವನ್ನು” ಕೊಡುತ್ತಾರೆ. (ರೋಮ. 1:11) ಇಂಥ ಆಧ್ಯಾತ್ಮಿಕ ವರ ಅಥವಾ ಆಧ್ಯಾತ್ಮಿಕ ಉಡುಗೊರೆಯನ್ನು ಕೊಡಲು ಹಿರಿಯರಿಗೆ ಯಾವುದು ನೆರವಾಗುವುದು?

11 ಪರಿಪಾಲನಾ ಭೇಟಿ ಮಾಡಲು ಹೋಗುವ ಮೊದಲು ಹಿರಿಯನು ಸ್ವಲ್ಪ ಸಮಯ ತಕ್ಕೊಂಡು ಭೇಟಿಮಾಡಲಿರುವ ವ್ಯಕ್ತಿಯ ಕುರಿತು ಯೋಚಿಸಬೇಕು. ಆ ವ್ಯಕ್ತಿ ಯಾವ ಸವಾಲುಗಳನ್ನು ಎದುರಿಸುತ್ತಿದ್ದಾನೆ? ಆ ವ್ಯಕ್ತಿಯನ್ನು ಉತ್ತೇಜಿಸಲು ಏನು ಹೇಳಬಹುದು? ಅವನಿಗೆ ಯಾವ ಬೈಬಲ್‌ ವಚನ ಅನ್ವಯವಾಗುತ್ತದೆ? ಅಥವಾ ಅವನ ಸನ್ನಿವೇಶ ಯಾವ ಬೈಬಲ್‌ ಉದಾಹರಣೆಗೆ ಹೋಲುತ್ತದೆ? ಹೀಗೆ ಹಿರಿಯನು ಮೊದಲೇ ಯೋಚಿಸಿ ಹೋಗುವುದಾದರೆ ಪರಿಪಾಲನಾ ಭೇಟಿಯಲ್ಲಿ ಏನೋ ಒಂದು ಮಾತಾಡಿ ಬರದೆ ಅರ್ಥಪೂರ್ಣ ಸಂಭಾಷಣೆ ಮಾಡಲು ಸಾಧ್ಯವಾಗುವುದು. ಭೇಟಿಯ ಸಂದರ್ಭದಲ್ಲಿ ಆ ಸಹೋದರ ಸಹೋದರಿಯರು ತಮ್ಮ ಅನಿಸಿಕೆಗಳನ್ನು, ಭಾವನೆಗಳನ್ನು ವ್ಯಕ್ತಪಡಿಸುವಂತೆ ಹಿರಿಯನು ಅನುವು ಮಾಡಿಕೊಡುತ್ತಾನೆ. ಮಾತ್ರವಲ್ಲ ಅವರು ಮಾತಾಡುವಾಗ ಕಿವಿಗೊಟ್ಟು ಕೇಳುತ್ತಾನೆ. (ಯಾಕೋ. 1:19) “ಹಿರಿಯರು ಮನಸ್ಸುಕೊಟ್ಟು ಆಲಿಸುವಾಗ ತುಂಬ ಸಾಂತ್ವನ ಸಿಗುತ್ತದೆ” ಎನ್ನುತ್ತಾರೆ ಒಬ್ಬ ಸಹೋದರಿ.—ಲೂಕ 8:18.

12. (1) ಯಾರಿಗೆಲ್ಲ ಉತ್ತೇಜನದ ಅಗತ್ಯವಿದೆ? (2) ಏಕೆ?

12 ಹಿರಿಯರ ಉತ್ತೇಜನ ಯಾರಿಗೆಲ್ಲ ಅವಶ್ಯ? ‘ಇಡೀ ಮಂದೆಗೆ ಗಮನಕೊಡುವಂತೆ’ ಪೌಲ ತನ್ನ ಜೊತೆ ಹಿರಿಯರಿಗೆ ಹೇಳಿದನು. ಅದರರ್ಥ ಸಭೆಯಲ್ಲಿರುವ ಎಲ್ಲರಿಗೂ ಉತ್ತೇಜನದ ಅಗತ್ಯವಿದೆ. ವರ್ಷಗಳಿಂದ ನಂಬಿಗಸ್ತರಾಗಿ ಸೇವೆ ಸಲ್ಲಿಸುತ್ತಿರುವ ಪ್ರಚಾರಕರಿಗೂ ಪಯನೀಯರರಿಗೂ ಪ್ರೋತ್ಸಾಹ ಬೇಕು. ನಂಬಿಗಸ್ತರಾಗಿರುವ ಅವರಿಗೆ ನೆರವು ಯಾಕೆ ಬೇಕು ಎಂದು ನಾವು ನೆನಸಬಹುದು. ಆಧ್ಯಾತ್ಮಿಕವಾಗಿ ದೃಢರಾಗಿರುವವರು ಸಹ ಕೆಲವೊಮ್ಮೆ ಈ ಲೋಕದ ಒತ್ತಡಗಳಿಂದ ಕುಗ್ಗಿಹೋಗುವ ಸಾಧ್ಯತೆಯಿದೆ. ನಂಬಿಕೆಯಲ್ಲಿ ದೃಢರಾಗಿರುವವರಿಗೂ ಕೆಲವೊಮ್ಮೆ ಜೊತೆ ಕ್ರೈಸ್ತರ ಸಹಾಯ ಏಕೆ ಬೇಕೆಂಬುದನ್ನು ಅರ್ಥಮಾಡಿಕೊಳ್ಳಲು ರಾಜ ದಾವೀದನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಪರಿಗಣಿಸೋಣ.

‘ಅಬೀಷೈ ಸಹಾಯಕ್ಕೆ ಬಂದನು’

13. (1) ದಾವೀದನ ಯಾವ ಸ್ಥಿತಿಯನ್ನು ಇಷ್ಬೀಬೆನೋಬನು ಬಳಸಿಕೊಳ್ಳಲಿದ್ದನು? (2) ದಾವೀದನ ಸಹಾಯಕ್ಕೆ ಬರಲು ಅಬೀಷೈಗೆ ಹೇಗೆ ಸಾಧ್ಯವಾಯಿತು?

13 ರಾಜನಾಗಲು ದಾವೀದನನ್ನು ಅಭಿಷೇಕಿಸಿದ ಸ್ವಲ್ಪ ಸಮಯದಲ್ಲೇ ಅವನು ರೆಫಾಯನಾದ ದೈತ್ಯ ಗೊಲ್ಯಾತನನ್ನು ರಣರಂಗದಲ್ಲಿ ಮುಖಾಮುಖಿ ಎದುರಿಸಿದನು. ಧೈರ್ಯಶಾಲಿ ತರುಣ ದಾವೀದನು ಗೊಲ್ಯಾತನನ್ನು ಮಣಿಸಿ ಕೊಂದನು. (1 ಸಮು. 17:4, 48-51; 1 ಪೂರ್ವ. 20:5, 8) ಅನೇಕ ವರ್ಷಗಳ ನಂತರ ದಾವೀದನು ಫಿಲಿಷ್ಟಿಯರೊಂದಿಗೆ ಯುದ್ಧ ಮಾಡುತ್ತಿದ್ದಾಗ ಪುನಃ ಒಮ್ಮೆ ಇನ್ನೊಬ್ಬ ದೈತ್ಯನನ್ನು ಎದುರಿಸಬೇಕಾಯಿತು. ಅವನು ಸಹ ರೆಫಾಯನಾಗಿದ್ದನು. ಅವನ ಹೆಸರು ಇಷ್ಬೀಬೆನೋಬ್‌. (2 ಸಮು. 21:16) ಆದರೆ ಈ ಬಾರಿ ಆ ದೈತ್ಯನೇ ದಾವೀದನನ್ನು ಕೊಲ್ಲುವುದರಲ್ಲಿದ್ದನು. ದಾವೀದನು ಧೈರ್ಯ ಕಳೆದುಕೊಂಡಿದ್ದನು ಅಂತಲ್ಲ, ಬದಲಿಗೆ ಅವನು ಶಾರೀರಿಕವಾಗಿ ಬಳಲಿದ್ದನು. ಅವನು ‘ಬಹಳವಾಗಿ ದಣಿದಿದ್ದನು’ ಎಂದು ಬೈಬಲ್‌ ಹೇಳುತ್ತದೆ. ಈ ಸಂದರ್ಭ ಬಳಸಿ ಆ ದೈತ್ಯನು ದಾವೀದನನ್ನು “ಕೊಲ್ಲುವದಕ್ಕಿದ್ದನು.” ಮುಂದೇನಾಯಿತು? ಅವನು ದಾವೀದನನ್ನು ತನ್ನ ಆಯುಧದಿಂದ ಇನ್ನೇನು ಇರಿಯಬೇಕೆನ್ನುವಷ್ಟರಲ್ಲಿ “ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು.” (2 ಸಮು. 21:15-17) ಕೂದಲೆಳೆಯಷ್ಟರಲ್ಲಿ ದಾವೀದನು ಪಾರಾದನು! ಅಬೀಷೈಯು ತನ್ನ ಮೇಲೆ ಗಮನವಿಟ್ಟು ಜೀವಾಪಾಯದ ಸಮಯದಲ್ಲಿ ತಕ್ಷಣ ಸಹಾಯಕ್ಕೆ ಬಂದದ್ದಕ್ಕಾಗಿ ದಾವೀದನೆಷ್ಟು ಕೃತಜ್ಞನಾಗಿದ್ದಿರಬೇಕು! ಇದರಿಂದ ನಮಗೇನು ಪಾಠ?

14. (1) ಗೊಲ್ಯಾತನಂಥ ದೈತ್ಯ ಸವಾಲುಗಳನ್ನು ನಾವು ಹೇಗೆ ಎದುರಿಸಸಾಧ್ಯ? (2) ದಣಿದವರು ಪುನಃ ಬಲ ಹಾಗೂ ಆನಂದವನ್ನು ಪಡೆದುಕೊಳ್ಳುವಂತೆ ಹಿರಿಯರು ಹೇಗೆ ಸಹಾಯಮಾಡಬಹುದು? ಉದಾಹರಣೆ ಕೊಡಿ.

14 ಇಂದು ಲೋಕಾದ್ಯಂತವಿರುವ ಯೆಹೋವನ ಸೇವಕರು ಸೈತಾನನು ತಂದೊಡ್ಡುವ ಅಡ್ಡಿತಡೆಗಳ ಮಧ್ಯೆಯೂ ನಂಬಿಗಸ್ತರಾಗಿ ಸೇವೆಮಾಡುತ್ತಿದ್ದಾರೆ. ನಮ್ಮಲ್ಲಿ ಕೆಲವರು ದೈತ್ಯ ಸವಾಲುಗಳನ್ನು ಎದುರಿಸಿದ್ದಾರೆ. ಗೊಲ್ಯಾತನಂತಿದ್ದ ಆ ದೊಡ್ಡ ಸವಾಲುಗಳನ್ನು ಯೆಹೋವ ದೇವರ ಸಹಾಯದೊಂದಿಗೆ ಅವರು ಜಯಿಸಿದ್ದಾರೆ. ಹಾಗಿದ್ದರೂ ಕೆಲವೊಮ್ಮೆ ಈ ಲೋಕ ತರುವ ಒತ್ತಡದ ವಿರುದ್ಧ ಹೋರಾಡಿ ಹೋರಾಡಿ ನಾವು ದಣಿದು ಬಳಲಬಹುದು, ನಿರಾಶೆಹೊಂದಬಹುದು. ಅಂಥ ಸ್ಥಿತಿಯಲ್ಲಿರುವಾಗ ನಾವು ಸೈತಾನನ ಆಕ್ರಮಣಕ್ಕೆ ಬಲಿಬೀಳುವುದು ಸುಲಭ. ಬೇರೆ ಸಮಯದಲ್ಲಾದರೆ ಇಂಥ ಒತ್ತಡಗಳನ್ನು ಯಶಸ್ವಿಯಾಗಿ ಎದುರಿಸುತ್ತಿದ್ದೆವು. ಆದರೆ ಈಗಿರುವ ಬಲಹೀನ ಸ್ಥಿತಿಯಿಂದಾಗಿ ನಾವು ಸೋತುಹೋಗಬಹುದು. ಆ ಸಮಯಕ್ಕೆ ಸರಿಯಾಗಿ ಹಿರಿಯರು ನಮಗೆ ಸಹಾಯಹಸ್ತ ಚಾಚುವಾಗ ನಾವು ಪುನಃ ಬಲಹೊಂದಿ ಹೊಸ ಆನಂದ ಪಡೆಯುತ್ತೇವೆ. ಇದು ಅನೇಕರ ಅನುಭವ ಸಹ. 60 ದಾಟಿದ ಒಬ್ಬ ಪಯನೀಯರ್‌ ಸಹೋದರಿ ಹೇಳಿದ್ದು: “ಸ್ವಲ್ಪ ಸಮಯದ ಹಿಂದೆ ನನ್ನ ಆರೋಗ್ಯ ಸರಿಯಿರಲಿಲ್ಲ. ಸೇವೆಗೆ ಹೋದರೆ ಸುಸ್ತಾಗಿಬಿಡುತ್ತಿದ್ದೆ. ನನ್ನ ಬಲಹೀನ ಸ್ಥಿತಿಯನ್ನು ಗಮನಿಸಿ ಒಬ್ಬ ಹಿರಿಯರು ನನ್ನನ್ನು ಬಲಪಡಿಸಲು ಮುಂದಾದರು. ಒಂದು ಬೈಬಲ್‌ ಭಾಗವನ್ನು ಚರ್ಚಿಸುತ್ತಾ ನನ್ನನ್ನು ಉತ್ತೇಜಿಸಿದರು. ಅವರು ಕೊಟ್ಟ ಸಲಹೆಗಳನ್ನು ಅನ್ವಯಿಸಿದೆ. ತುಂಬ ಪ್ರಯೋಜನವಾಯಿತು. ಆ ಹಿರಿಯರಿಗೆ ನನ್ನ ಬಗ್ಗೆ ಎಷ್ಟೊಂದು ಕಾಳಜಿ! ನನ್ನ ನಿರ್ಬಲ ಸ್ಥಿತಿ ಗಮನಿಸಿ ಸರಿಯಾದ ಸಮಯಕ್ಕೆ ಸಹಾಯಮಾಡಿದರು.” ಹೌದು, ನಮ್ಮ ಮೇಲಿರುವ ಪ್ರೀತಿಯಿಂದಾಗಿ ಹಿರಿಯರು ನಮ್ಮನ್ನು ಗಮನಿಸುತ್ತಾರೆ ಹಾಗೂ ಅಬೀಷೈಯಂತೆ ‘ಸಹಾಯ ನೀಡಲು’ ಯಾವಾಗಲೂ ಸಿದ್ಧರಾಗಿರುತ್ತಾರೆ. ಇಂಥ ಹಿರಿಯರು ನಮಗಿರುವುದಕ್ಕೆ ಹೃದಯ ತುಂಬಿ ಬರುವುದಿಲ್ಲವೆ?

‘ನಿಮ್ಮ ಮೇಲೆ ನನಗಿರುವ ಪ್ರೀತಿಯನ್ನು ತಿಳಿದುಕೊಳ್ಳಿ’

15, 16. (1) ಪೌಲನನ್ನು ಜೊತೆಕ್ರೈಸ್ತರು ಬಹಳ ಪ್ರೀತಿಸಲು ಕಾರಣವೇನು? (2) ನಮ್ಮ ಕಾಳಜಿವಹಿಸುವ ಹಿರಿಯರನ್ನು ನಾವೇಕೆ ಪ್ರೀತಿಸುತ್ತೇವೆ?

15 ಆಧ್ಯಾತ್ಮಿಕ ಕುರುಬರು ತುಂಬ ಶ್ರಮಪಡುತ್ತಾರೆ. ಕೆಲವೊಮ್ಮೆ ಜೊತೆ ಕ್ರೈಸ್ತರಿಗೆ ಆಧ್ಯಾತ್ಮಿಕ ನೆರವು ನೀಡಲು ಅಥವಾ ಅವರ ಬಗ್ಗೆ ಪ್ರಾರ್ಥನಾಪೂರ್ವಕವಾಗಿ ಯೋಚಿಸಲು ಅವರು ನಿದ್ರೆಗೆಡಬೇಕಾಗುತ್ತದೆ. (2 ಕೊರಿಂ. 11:27, 28) ಆದರೂ ಅವರು ಪೌಲನಂತೆ ತಮ್ಮ ಜವಾಬ್ದಾರಿಯನ್ನು ಪೂರ್ಣವಾಗಿ ಸಂತೋಷದಿಂದ ಮಾಡುತ್ತಾರೆ. ಪೌಲನು ಕೊರಿಂಥದ ಕ್ರೈಸ್ತರಿಗೆ ಹೀಗೆ ಬರೆದನು: “ನಾನಾದರೋ ನನ್ನನ್ನು ನಿಮ್ಮ ಪ್ರಾಣಗಳಿಗೋಸ್ಕರ ಅತಿ ಸಂತೋಷದಿಂದ ವಿನಿಯೋಗಿಸಿಕೊಳ್ಳುವೆನು, ಸಂಪೂರ್ಣವಾಗಿ ವಿನಿಯೋಗಿಸುವಂತೆ ಬಿಡುವೆನು.” (2 ಕೊರಿಂ. 12:15) ಹೌದು, ಸಹೋದರರ ಮೇಲಿದ್ದ ಪ್ರೀತಿಯ ಕಾರಣ ಪೌಲನು ಅವರನ್ನು ಬಲಪಡಿಸಲಿಕ್ಕಾಗಿ ತನ್ನನ್ನು ಸಂಪೂರ್ಣವಾಗಿ ವಿನಿಯೋಗಿಸಿಕೊಂಡನು. (2 ಕೊರಿಂಥ 2:4 ಓದಿ; ಫಿಲಿ. 2:17; 1 ಥೆಸ. 2:8) ಆದ್ದರಿಂದಲೇ ಸಹೋದರರು ಅವನನ್ನು ಬಹಳವಾಗಿ ಪ್ರೀತಿಸಿದರು.—ಅ. ಕಾ. 20:31-38.

16 ನಾವು ಸಹ ನಮ್ಮ ಸಭಾ ಹಿರಿಯರನ್ನು ತುಂಬ ಪ್ರೀತಿಸುತ್ತೇವೆ. ಅವರನ್ನು ಒದಗಿಸಿದ್ದಕ್ಕಾಗಿ ಯೆಹೋವನಿಗೆ ನಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಕೃತಜ್ಞತೆ ಸಲ್ಲಿಸುತ್ತೇವೆ. ಅವರು ನಮ್ಮಲ್ಲಿ ವೈಯಕ್ತಿಕ ಆಸಕ್ತಿ ತೋರಿಸುವ ಮೂಲಕ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತಾರೆ. ಅವರ ಪರಿಪಾಲನಾ ಭೇಟಿಗಳ ಮೂಲಕ ನಾವು ಹೊಸ ಬಲ ಪಡೆಯುತ್ತೇವೆ. ಮಾತ್ರವಲ್ಲ ನಾವು ಈ ಲೋಕದ ಒತ್ತಡಗಳಿಂದ ಕುಗ್ಗಿಹೋದಾಗ ನಮಗೆ ಸಹಾಯಹಸ್ತ ಚಾಚಲು ಅವರು ಯಾವಾಗಲೂ ಸಿದ್ಧರಿದ್ದಾರೆ. ನಮ್ಮ ಮೇಲೆ ಲಕ್ಷ್ಯವಿಡುವ ಈ ಕ್ರೈಸ್ತ ಹಿರಿಯರು ನಿಜವಾಗಿಯೂ ‘ನಮ್ಮ ಸಂತೋಷಕ್ಕಾಗಿ ಜೊತೆ ಕೆಲಸದವರಾಗಿದ್ದಾರೆ.’

[ಪಾದಟಿಪ್ಪಣಿ]

^ ಪ್ಯಾರ. 5 “ಒಬ್ಬ ಹಿರಿಯನಲ್ಲಿ ಯಾವ ಗುಣ ಇರಬೇಕೆಂದು ನೀವು ಬಯಸುತ್ತೀರಿ?” ಎಂದು ಇದೇ ಸಹೋದರ ಸಹೋದರಿಯರಿಗೆ ಕೇಳಲಾಯಿತು. ‘ಯಾರು ಬೇಕಾದರೂ ಹಿಂಜರಿಕೆಯಿಲ್ಲದೆ ಹೋಗಿ ಮಾತಾಡುವಷ್ಟು ಸ್ನೇಹಪರರಾಗಿರಬೇಕು’ ಎಂದು ಹೆಚ್ಚಿನಂಶ ಎಲ್ಲರೂ ಹೇಳಿದರು. ಈ ಗುಣ ಇರುವುದು ಏಕೆ ಪ್ರಾಮುಖ್ಯ ಎಂಬುದನ್ನು ಈ ಪತ್ರಿಕೆಯ ಮುಂದಿನ ಒಂದು ಸಂಚಿಕೆಯಲ್ಲಿ ಚರ್ಚಿಸಲಾಗುವುದು.

[ಅಧ್ಯಯನ ಪ್ರಶ್ನೆಗಳು]

[ಪುಟ 27ರಲ್ಲಿರುವ ಚಿತ್ರ]

[ಪುಟ 30ರಲ್ಲಿರುವ ಚಿತ್ರಗಳು]

ಒಳ್ಳೇ ತಯಾರಿಯು ಪರಿಪಾಲನಾ ಭೇಟಿಯಲ್ಲಿ “ಆಧ್ಯಾತ್ಮಿಕ ವರವನ್ನು” ಕೊಡಲು ಹಿರಿಯರಿಗೆ ಸಹಾಯಮಾಡುತ್ತದೆ