ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ಪ್ರೀತಿಸುವವರಿಗೆ ಎಡವುಗಲ್ಲೆಂಬುದೇ ಇಲ್ಲ

ಯೆಹೋವನನ್ನು ಪ್ರೀತಿಸುವವರಿಗೆ ಎಡವುಗಲ್ಲೆಂಬುದೇ ಇಲ್ಲ

ಯೆಹೋವನನ್ನು ಪ್ರೀತಿಸುವವರಿಗೆ ಎಡವುಗಲ್ಲೆಂಬುದೇ ಇಲ್ಲ

“ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣಸಮಾಧಾನವಿರುತ್ತದೆ; ಅಂಥವರಿಗೆ [ಎಡವುಗಲ್ಲೆಂಬುದೇ] ಇರುವದಿಲ್ಲ.”—ಕೀರ್ತ. 119:165.

ಉತ್ತರಿಸುವಿರಾ?

ಕ್ರೈಸ್ತರು ಯಾವ ಓಟ ಓಡುತ್ತಿದ್ದಾರೆ? ಜಯಿಸಿದವರಿಗೆ ಯಾವ ಬಹುಮಾನ ಸಿಗುತ್ತದೆ?

ಯಾವ ವಿಷಯಗಳು ಕ್ರೈಸ್ತರನ್ನು ಎಡವಿಸಬಲ್ಲವು?

ಯಾವ ಅರ್ಥದಲ್ಲಿ ‘ಯೆಹೋವನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಎಡವುಗಲ್ಲೆಂಬುದೇ ಇರುವದಿಲ್ಲ?’

1. ಒಬ್ಬಾಕೆ ಓಟಗಾರ್ತಿ ಹೇಗೆ ತನ್ನ ಓಟವನ್ನು ‘ಬಿಟ್ಟುಕೊಡಲಿಲ್ಲ’?

ಮ್ಯಾರೀ ಡೆಕರ್‌ ಹದಿವಯಸ್ಸಿನಿಂದಲೇ ಉತ್ತಮ ಓಟಗಾರ್ತಿಯೆಂಬ ಖ್ಯಾತಿ ಪಡೆದಾಕೆ. 1984ರ ಒಲಿಂಪಿಕ್ಸ್‌ನ 3,000 ಮೀಟರ್‌ ಓಟದ ಫೈನಲ್‌ನಲ್ಲಿ ಚಿನ್ನದ ಪದಕ ಅವಳ ಪಾಲಿಗೇ ಎಂದು ಖಚಿತವಾಗಿತ್ತು. ಆದರೆ ಓಟದಲ್ಲಿ ಮ್ಯಾರೀ ಅಂತಿಮ ರೇಖೆ ಮುಟ್ಟಲಿಲ್ಲ. ಓಟಮಧ್ಯದಲ್ಲಿ ಇನ್ನೊಬ್ಬ ಪಟುವಿನ ಕಾಲಿಗೆ ಎಡವಿ ಮುಗ್ಗರಿಸಿ ಬಿದ್ದಳು. ಗಾಯಗೊಂಡು ದುಃಖದಿಂದ ಅಳುತ್ತಿದ್ದ ಅವಳನ್ನು ಅಲ್ಲಿಂದ ಕರೆದೊಯ್ಯಲಾಯಿತು. ಆದರೆ ಆಕೆ ‘ಇದೇ ಕೊನೆ ಇನ್ನು ನನ್ನಿಂದಾಗದು’ ಎಂದು ಸುಮ್ಮನಾಗಲಿಲ್ಲ. ಒಂದು ವರ್ಷದೊಳಗೆ ಆಕೆ ಪುನಃ ಓಟದ ಪಥದಲ್ಲಿದ್ದಳು. 1985ರಲ್ಲಿ ಒಂದು ಮೈಲಿ ದೂರದ ಓಟದಲ್ಲಿ ವಿಶ್ವದಾಖಲೆಯನ್ನೇ ಬರೆದಳು.

2. (1) ಯಾವ ಓಟದಲ್ಲಿ ಕ್ರೈಸ್ತರು ಭಾಗಿಗಳಾಗಿದ್ದಾರೆ? (2) ನಮ್ಮ ಲಕ್ಷ್ಯ ಯಾವುದರ ಮೇಲೆ ಇರಬೇಕು?

2 ಕ್ರೈಸ್ತರಾದ ನಾವೂ ಒಂದು ಓಟದಲ್ಲಿ ಭಾಗಿಗಳಾಗಿದ್ದೇವೆ. ಅದು ಸಾಂಕೇತಿಕ ಓಟ. ಓಡಿ ಜಯಗಳಿಸುವುದೇ ನಮ್ಮ ಗುರಿಯಾಗಿರಬೇಕು. ಆದರೆ ಕೆಲವೇ ಮೀಟರ್‌ ದೂರವನ್ನು ಮಿಂಚಿನ ವೇಗದಲ್ಲಿ ಓಡಿ ಮುಗಿಸುವ ಓಟ ಇದಲ್ಲ. ಹಾಗಂತ ಜಾಗಿಂಗ್‌ನಂತೆ ಅಲ್ಲಲ್ಲಿ ನಿಲ್ಲಿಸುತ್ತಾ ನಿಧಾನವಾಗಿ ಓಡುವ ಓಟವೂ ಇದಲ್ಲ. ನಮ್ಮ ಓಟ ಮ್ಯಾರತನ್‌ ಓಟದಂಥ ಸುದೀರ್ಘ ಓಟವಾಗಿದೆ. ಜಯಗಳಿಸಬೇಕಾದರೆ ತಾಳ್ಮೆ ಅತ್ಯಗತ್ಯ. ಕ್ರೀಡೆಗಳಿಗೆ ಪ್ರಸಿದ್ಧವಾಗಿದ್ದ ಕೊರಿಂಥ ನಗರದಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ಅಪೊಸ್ತಲ ಪೌಲನು ಕ್ರೈಸ್ತರನ್ನು ಓಟಗಾರನಿಗೆ ಹೋಲಿಸಿದನು. ಅವನು ಬರೆದದ್ದು: “ಒಂದು ಓಟದ ಪಂದ್ಯದಲ್ಲಿ ಎಲ್ಲರೂ ಓಡುತ್ತಾರಾದರೂ ಒಬ್ಬನಿಗೆ ಮಾತ್ರ ಬಹುಮಾನ ದೊರಕುತ್ತದೆ ಎಂಬುದು ನಿಮಗೆ ತಿಳಿಯದೊ? ನೀವು ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ.”—1 ಕೊರಿಂ. 9:24.

3. ಅನಂತ ಜೀವನಕ್ಕಾಗಿರುವ ಓಟದಲ್ಲಿ ಎಲ್ಲರೂ ಹೇಗೆ ಜಯಗಳಿಸಬಹುದು?

3 ಸಾಂಕೇತಿಕ ಓಟವನ್ನು ಓಡುವಂತೆ ಬೈಬಲ್‌ ನಮಗೆ ಹೇಳುತ್ತದೆ. (1 ಕೊರಿಂಥ 9:25-27 ಓದಿ.) ಇದಕ್ಕೆ ಬಹುಮಾನ ಏನು? ಅಭಿಷಿಕ್ತ ಕ್ರೈಸ್ತರಿಗಾದರೆ ಸ್ವರ್ಗದಲ್ಲಿ, ಉಳಿದವರಿಗೆ ಭೂಮಿಯಲ್ಲಿ ಅನಂತ ಜೀವನ. ಹೆಚ್ಚಿನ ಕ್ರೀಡಾ ಸ್ಪರ್ಧೆಗಳಲ್ಲಿ ಒಬ್ಬರಿಬ್ಬರಿಗೆ ಬಹುಮಾನ ಸಿಗುತ್ತದೆ. ಆದರೆ ಈ ಸಾಂಕೇತಿಕ ಓಟದಲ್ಲಿ ಕೊನೆವರೆಗೆ ಓಡುವ ಎಲ್ಲರಿಗೆ ಬಹುಮಾನ ಖಚಿತ. (ಮತ್ತಾ. 24:13) ಓಟದ ನಿಯಮ ಮುರಿದವರಿಗೆ ಹಾಗೂ ಅಂತಿಮ ರೇಖೆ ತಲುಪದವರಿಗೆ ಮಾತ್ರ ಬಹುಮಾನ ದೊರಕದು. ಅನಂತ ಜೀವನವನ್ನು ಬಹುಮಾನವಾಗಿ ಕೊಡುವ ಒಂದೇ ಒಂದು ಓಟ ಇದಾಗಿದೆ.

4. ಅನಂತ ಜೀವನಕ್ಕಾಗಿರುವ ಓಟದಲ್ಲಿ ಯಾವೆಲ್ಲ ಸವಾಲುಗಳು ಎದುರಾಗಬಹುದು?

4 ಕ್ರೈಸ್ತ ಓಟದಲ್ಲಿ ಅಂತಿಮ ರೇಖೆ ದಾಟುವುದು ಸುಲಭವೇನಲ್ಲ. ಅದಕ್ಕಾಗಿ ನಮ್ಮನ್ನೇ ನಾವು ಶಿಸ್ತುಗೊಳಿಸಬೇಕು ಮತ್ತು ನಮ್ಮ ಉದ್ದೇಶ ಮನಸ್ಸಿನಲ್ಲಿ ಸ್ಪಷ್ಟವಾಗಿರಬೇಕು. ಒಮ್ಮೆಯೂ ಎಡವದೆ ಈ ಓಟವನ್ನು ಪೂರ್ಣಗೊಳಿಸಿದವನು ಯೇಸು ಕ್ರಿಸ್ತ ಮಾತ್ರ. ಆದರೆ ಹಾಗೆ ಓಡಲು ನಮ್ಮಿಂದ ಸಾಧ್ಯವಿಲ್ಲ. ಏಕೆಂದರೆ ಯೇಸುವಿನ ಶಿಷ್ಯ ಯಾಕೋಬನು ಹೇಳಿದಂತೆ “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” (ಯಾಕೋ. 3:2) ನಮ್ಮ ಸ್ವಂತ ಬಲಹೀನತೆ ಹಾಗೂ ಇತರರ ಬಲಹೀನತೆಗಳು ನಮ್ಮೆಲ್ಲರನ್ನು ಎಡವಿಸುತ್ತವೆ. ಹಾಗಾಗಿ ಕೆಲವೊಮ್ಮೆ ನಾವು ನಮ್ಮ ಸಮತೋಲನ ಕಳಕೊಂಡು ಓಟದ ವೇಗ ಕಡಿಮೆಯಾಗಬಹುದು. ಇನ್ನು ಕೆಲವೊಮ್ಮೆ ಪೂರಾ ಬಿದ್ದೇ ಬಿಡುತ್ತೇವೆ. ಆದರೂ ಎದ್ದು ಪುನಃ ಮುಂದೆ ಓಡುತ್ತೇವೆ. ಕೆಲವರು ಎಷ್ಟು ಜೋರಾಗಿ ಬಿದ್ದಿದ್ದರೆಂದರೆ ಅವರಿಗೆ ಎದ್ದೇಳಲು ತುಂಬ ಕಷ್ಟವಾಯಿತು. ಇತರರು ಕೊಟ್ಟ ಸಹಾಯದಿಂದ ಅವರು ಎದ್ದು ನಿಂತು ಪುನಃ ಓಟ ಮುಂದುವರಿಸಿದ್ದಾರೆ. ಇದರಿಂದ ನಮಗೆ ತಿಳಿಯುವುದೇನೆಂದರೆ ನಾವು ಕ್ರೈಸ್ತ ಓಟದಲ್ಲಿ ಎಡವುವ ಸಾಧ್ಯತೆಯಿದೆ, ಕೆಲವೊಮ್ಮೆ ಪುನಃ ಪುನಃ ಎಡವಬಹುದು, ಬೀಳಲೂಬಹುದು.—1 ಅರ. 8:46.

ಎಡವಿದರೂ ಓಟದ ಪಥದಲ್ಲೇ ಇರಿ

5, 6. (1) ಕ್ರೈಸ್ತನಿಗೆ “ಎಡವುಗಲ್ಲೆಂಬುದೇ ಇರುವದಿಲ್ಲ” ಯಾವ ಅರ್ಥದಲ್ಲಿ? (2) ಎಡವಿದಾಗ ‘ಮತ್ತೆ ಏಳಲು’ ಯಾವುದು ಸಹಾಯಮಾಡುವುದು? (3) ಕೆಲವರು ಬಿದ್ದ ಮೇಲೆ ಏಳುವುದಿಲ್ಲ ಏಕೆ?

5 “ಎಡವಿದನು” “ಬಿದ್ದನು” ಎಂಬ ಪದಗಳನ್ನು ಆಧ್ಯಾತ್ಮಿಕವಾಗಿ ಒಬ್ಬನ ನಕಾರಾತ್ಮಕ ಸ್ಥಿತಿಯನ್ನು ಸೂಚಿಸಲು ಬಳಸುತ್ತೇವೆ. ಬೈಬಲ್‌ ಸಹ ಈ ಪದಗಳನ್ನು ಅದೇ ಅರ್ಥದಲ್ಲಿ ಬಳಸುತ್ತದೆ. ಆದರೆ ಕೆಲವೊಮ್ಮೆ ಅದಕ್ಕೆ ಬೇರೆ ಅರ್ಥವೂ ಇದೆ. ಉದಾಹರಣೆಗೆ, ಜ್ಞಾನೋಕ್ತಿ 24:16ರಲ್ಲಿ ಈ ಪದವನ್ನು ಎರಡು ಅರ್ಥಗಳಲ್ಲಿ ಕೊಡಲಾಗಿದೆ: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು, ದುಷ್ಟನು ಕೇಡಿನಿಂದ ಬಿದ್ದೇಹೋಗುವನು.”

6 ಯಾರು ಯೆಹೋವನಲ್ಲಿ ಭರವಸೆಯಿಡುತ್ತಾರೋ ಅವರು ಏಳಲಾರದಂಥ ರೀತಿಯಲ್ಲಿ ಬೀಳಲು ಅಥವಾ ಎಡವಲು ಯೆಹೋವನು ಬಿಡನು. ನಾವು ಎಡವಿದರೆ ಅಂದರೆ ಯಾವುದಾದರೂ ಸಂಕಷ್ಟವನ್ನು ಅನುಭವಿಸಿದರೆ ಅಥವಾ ಆಧ್ಯಾತ್ಮಿಕವಾಗಿ ಹಿಂದೆಸರಿದರೆ ‘ಮತ್ತೆ ಏಳಲು’ ಯೆಹೋವನು ಸಹಾಯಮಾಡುತ್ತಾನೆ. ಹೀಗೆ ಪುನಃ ಚೇತರಿಸಿಕೊಂಡು ಆತನಿಗೆ ಪೂರ್ಣ ಭಕ್ತಿ ಸಲ್ಲಿಸಲು ಶಕ್ತರಾಗುವೆವು. ಯೆಹೋವನನ್ನು ಮನಸಾರೆ ಪ್ರೀತಿಸುವವರಿಗೆ ಈ ಆಶ್ವಾಸನೆ ಎಷ್ಟೊಂದು ಸಾಂತ್ವನ ಕೊಡುತ್ತದಲ್ಲ? ಆದರೆ ದುಷ್ಟರ ಮನೋಭಾವವೇ ಬೇರೆ. ಎಡವಿದರೂ ಏಳುವ ಬಯಕೆ ಅವರಲ್ಲಿರುವುದಿಲ್ಲ. ಪವಿತ್ರಾತ್ಮದ ಮತ್ತು ದೇವಜನರ ಸಹಾಯ ಪಡೆಯಲು ಪ್ರಯತ್ನಿಸುವುದಿಲ್ಲ. ಸಹಾಯ ಮಾಡಲು ಇತರರು ಮುಂದೆಬಂದರೂ ಅದನ್ನು ಸ್ವೀಕರಿಸುವುದಿಲ್ಲ. ಇದಕ್ಕೆ ತದ್ವಿರುದ್ಧವಾಗಿ “ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ” ವಿಘ್ನಕರವಾದ ವಿಷಯ ಅಥವಾ ಎಡವುಗಲ್ಲೆಂಬುದು ಇರುವದಿಲ್ಲ. ಯಾವುದೂ ಅವರನ್ನು ಜೀವಕ್ಕಾಗಿರುವ ಓಟದಿಂದ ಶಾಶ್ವತವಾಗಿ ದೂರಮಾಡುವುದಿಲ್ಲ.ಕೀರ್ತನೆ 119:165 ಓದಿ.

7, 8. ಕ್ರೈಸ್ತನೊಬ್ಬನು “ಬಿದ್ದರೂ” ದೇವರ ಅನುಗ್ರಹದಲ್ಲಿ ಹೇಗೆ ಉಳಿಯಬಲ್ಲನು?

7 ಕೆಲವೊಮ್ಮೆ ಒಬ್ಬ ವ್ಯಕ್ತಿ ತನ್ನ ಬಲಹೀನತೆಯ ಕಾರಣ ಯಾವುದೋ ಚಿಕ್ಕ ತಪ್ಪನ್ನು ಮಾಡಿರಬಹುದು. ಅದನ್ನು ಪುನಃ ಪುನಃ ಮಾಡುತ್ತಿರಲೂಬಹುದು. ಅಂಥವನ ಕುರಿತೇನು? ಯೆಹೋವನು ಅವನನ್ನು ಹೇಗೆ ವೀಕ್ಷಿಸುವನು? ಅವನು ‘ಮತ್ತೆ ಏಳುವಲ್ಲಿ’ ಅಂದರೆ ಹೃತ್ಪೂರ್ವಕವಾಗಿ ಪಶ್ಚಾತ್ತಾಪಪಟ್ಟು ಪುನಃ ನಿಷ್ಠೆಯಿಂದ ಸೇವೆಸಲ್ಲಿಸಲು ಪ್ರಯತ್ನಿಸುವಲ್ಲಿ ಯೆಹೋವನ ದೃಷ್ಟಿಯಲ್ಲಿ ನೀತಿವಂತನಾಗಿರುವನು. ಇಸ್ರಾಯೇಲ್ಯರು ಸಹ ಪಶ್ಚಾತ್ತಾಪಪಟ್ಟಾಗಲೆಲ್ಲ ದೇವರು ಅವರನ್ನು ನೀತಿವಂತರೆಂದು ವೀಕ್ಷಿಸಿದನು. (ಯೆಶಾ. 41:9, 10) ಈ ಮುಂಚೆ ನೋಡಿದ ಜ್ಞಾನೋಕ್ತಿ 24:16 ಸಹ ‘ಬೀಳುವುದಕ್ಕಲ್ಲ,’ ಕರುಣಾಮಯಿ ದೇವರ ಸಹಾಯದಿಂದ ‘ಮತ್ತೆ ಏಳುವುದಕ್ಕೆ’ ಹೆಚ್ಚು ಒತ್ತು ಕೊಡುತ್ತದೆ. (ಯೆಶಾಯ 55:7 ಓದಿ.) ಯೆಹೋವನಿಗೂ ಯೇಸು ಕ್ರಿಸ್ತನಿಗೂ ನಮ್ಮ ಮೇಲೆ ಭರವಸೆಯಿದೆ. ಆದ್ದರಿಂದಲೇ ‘ಮತ್ತೆ ಏಳುವಂತೆ’ ದಯೆಯಿಂದ ಪ್ರೋತ್ಸಾಹಿಸುತ್ತಾರೆ.—ಕೀರ್ತ. 86:5; ಯೋಹಾ. 5:19.

8 ಮ್ಯಾರತನ್‌ ಓಟಗಾರನು ಒಂದುವೇಳೆ ಓಟದ ಮಧ್ಯೆ ಎಡವುವಲ್ಲಿ ಅಥವಾ ಬೀಳುವಲ್ಲಿ ಆದಷ್ಟು ಬೇಗ ಎದ್ದು ಓಟವನ್ನು ಮುಂದುವರಿಸಿದರೆ ಖಂಡಿತ ಗುರಿ ಮುಟ್ಟಬಲ್ಲನು. ನಮ್ಮ ಕ್ರೈಸ್ತ ಓಟ ಕೊನೆಗೊಳ್ಳುವ “ದಿನ ಮತ್ತು ಗಳಿಗೆ” ನಮಗೆ ಗೊತ್ತಿಲ್ಲ. (ಮತ್ತಾ. 24:36) ಆದರೂ ನಾವು ಎಡವುದನ್ನು ಆದಷ್ಟು ತಪ್ಪಿಸುವುದಾದರೆ ಒಂದೇ ವೇಗದಲ್ಲಿ ಓಡುತ್ತಾ ಇರುವೆವು, ಓಟದ ಪಥದಲ್ಲೇ ಉಳಿಯುವೆವು, ಓಟವನ್ನು ಸಂಪೂರ್ಣಗೊಳಿಸುವೆವು. ಹಾಗಾದರೆ ಎಡವುದನ್ನು ತಪ್ಪಿಸುವುದು ಹೇಗೆ?

ಪ್ರಗತಿಗೆ ಮುಳುವಾಗಬಲ್ಲ ಎಡವುಗಲ್ಲುಗಳು

9. ನಮಗೆ ಎದುರಾಗಬಲ್ಲ ಯಾವ ಎಡವುಗಲ್ಲುಗಳ ಕುರಿತು ಚರ್ಚಿಸಲಿದ್ದೇವೆ?

9 ನಮಗೆ ಎದುರಾಗಬಲ್ಲ ಐದು ಎಡವುಗಲ್ಲುಗಳ ಕುರಿತು ನೋಡೋಣ. ಅವು, ಸ್ವಂತ ಬಲಹೀನತೆಗಳು, ಶಾರೀರಿಕ ಬಯಕೆಗಳು, ಜೊತೆವಿಶ್ವಾಸಿಗಳಿಂದ ನಮಗಾಗುವ ಅನ್ಯಾಯ, ಸಂಕಟ ಅಥವಾ ಹಿಂಸೆ, ಇತರರ ಅಪರಿಪೂರ್ಣತೆಗಳು. ನಾವು ಎಡವಿರುವುದಾದರೆ ಇದನ್ನು ನೆನಪಿನಲ್ಲಿಡೋಣ, ಯೆಹೋವನು ಆ ಕೂಡಲೆ ನಮಗೆ ‘ಅಪನಂಬಿಗಸ್ತರು’ ಎಂಬ ಹಣೆಪಟ್ಟಿ ಹಚ್ಚುವುದಿಲ್ಲ. ನಮ್ಮ ವಿಷಯದಲ್ಲಿ ತಾಳ್ಮೆ ತೋರಿಸುತ್ತಾನೆ.

10, 11. ದಾವೀದನು ಯಾವ ಬಲಹೀನತೆಯೊಂದಿಗೆ ಹೋರಾಡಿದನು?

10 ನಮ್ಮ ಸ್ವಂತ ಬಲಹೀನತೆಗಳು ಓಟದ ಪಥದಲ್ಲಿ ಬಿದ್ದಿರುವ ಕಲ್ಲುಗಳಂತೆ. ರಾಜ ದಾವೀದ ಹಾಗೂ ಅಪೊಸ್ತಲ ಪೇತ್ರನ ಜೀವನದಲ್ಲಾದ ಕೆಲವು ಘಟನೆಗಳನ್ನು ಪರಿಗಣಿಸುವಾಗ ಇಂಥ ಎರಡು ಬಲಹೀನತೆಗಳನ್ನು ಗುರುತಿಸಬಹುದು: ಸ್ವನಿಯಂತ್ರಣದ ಕೊರತೆ ಹಾಗೂ ಮನುಷ್ಯನ ಭಯ.

11 ರಾಜ ದಾವೀದನು ಕೆಲವೊಮ್ಮೆ ಸ್ವನಿಯಂತ್ರಣ ತೋರಿಸಲು ತಪ್ಪಿಹೋದನು. ಇದು ಬತ್ಷೆಬೆಯೊಂದಿಗೆ ನಡೆದ ಘಟನೆಯಿಂದ ತಿಳಿಯುತ್ತದೆ. ನಾಬಾಲನು ಅವಮಾನ ಮಾಡಿದಾಗ ಕೂಡ ದಾವೀದನು ದುಡುಕಿ ಪ್ರತಿಕ್ರಿಯಿಸಲಿದ್ದನು. ಹೀಗೆ ದಾವೀದನಿಗೆ ಕೆಲವೊಮ್ಮೆ ಸ್ವನಿಯಂತ್ರಣ ತೋರಿಸಲು ಕಷ್ಟವಾಯಿತಾದರೂ ಯೆಹೋವನನ್ನು ಮೆಚ್ಚಿಸಲು ಮಾಡುತ್ತಿದ್ದ ಪ್ರಯತ್ನವನ್ನು ಬಿಟ್ಟುಬಿಡಲಿಲ್ಲ. ಇತರರ ನೆರವಿನೊಂದಿಗೆ ಪುನಃ ಆಧ್ಯಾತ್ಮಿಕ ಸಮತೋಲನವನ್ನು ಪಡೆದುಕೊಂಡನು.—1 ಸಮು. 25:5-13, 32, 33; 2 ಸಮು. 12:1-13.

12. ಪೇತ್ರನು ಕೆಲವೊಂದು ಸಾರಿ ಎಡವಿದರೂ ಹೇಗೆ ಓಟವನ್ನು ಮುಂದುವರಿಸಿದನು?

12 ಮನುಷ್ಯನ ಭಯ ಇದ್ದ ಕಾರಣ ಪೇತ್ರನು ಕೆಲವೊಮ್ಮೆ ಜೋರಾಗಿ ಎಡವಿದನು. ಆದರೂ ಯೇಸುವಿಗೆ ಮತ್ತು ಯೆಹೋವನಿಗೆ ನಿಷ್ಠೆ ತೋರಿಸುವುದನ್ನು ಬಿಟ್ಟುಬಿಡಲಿಲ್ಲ. ಒಂದು ಸಂದರ್ಭದಲ್ಲಿ ಪೇತ್ರನು ತನ್ನ ಗುರುವಾದ ಯೇಸುವನ್ನು ಒಂದಲ್ಲ ಮೂರು ಸಾರಿ ಅಲ್ಲಗಳೆದನು. (ಲೂಕ 22:54-62) ಇನ್ನೊಂದು ಸಂದರ್ಭದಲ್ಲಿ, ಅನ್ಯಜನಾಂಗಗಳಿಂದ ಬಂದ ಕ್ರೈಸ್ತರನ್ನು ಸುನ್ನತಿಯಾದ ಯೆಹೂದಿ ಕ್ರೈಸ್ತರಿಗಿಂತ ಕೆಳದರ್ಜೆಯವರಂತೆ ಉಪಚರಿಸಿದನು. ಕ್ರೈಸ್ತ ಸಭೆಯಲ್ಲಿ ವರ್ಗಭೇದಗಳಿಗೆ ಜಾಗವಿಲ್ಲದಿರುವುದರಿಂದ ಪೇತ್ರನು ಮಾಡಿದ್ದು ತಪ್ಪಾಗಿತ್ತು. ಅದು ಸಹೋದರತ್ವವನ್ನು ಹಾಳುಗೆಡವಸಾಧ್ಯವಿತ್ತು. ಇದನ್ನು ಅಪೊಸ್ತಲ ಪೌಲನು ಗಮನಿಸಿ ಆಗಲೇ ನೇರವಾಗಿ ಪೇತ್ರನನ್ನು ತರಾಟೆಗೆ ತಕ್ಕೊಂಡನು. (ಗಲಾ. 2:11-14) ಪೇತ್ರನು ತನಗೆ ಮುಖಭಂಗವಾಯಿತೆಂದು ನೆನಸುತ್ತಾ ಕ್ರೈಸ್ತ ಓಟವನ್ನು ನಿಲ್ಲಿಸಿಬಿಟ್ಟನೋ? ಇಲ್ಲ. ಅವನು ಪೌಲನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು ಅನ್ವಯಿಸಿದನು. ಹೀಗೆ ಕ್ರೈಸ್ತ ಓಟದಲ್ಲಿ ಮುಂದುವರಿದನು.

13. ಆರೋಗ್ಯ ಸಮಸ್ಯೆ ಎಡವುಗಲ್ಲಾಗಬಹುದು ಹೇಗೆ?

13 ಕೆಲವೊಮ್ಮೆ ಆರೋಗ್ಯ ಸಮಸ್ಯೆಯೇ ದೊಡ್ಡ ಎಡವುಗಲ್ಲಿನೋಪಾದಿ ಎದುರಾಗಬಹುದು. ಅದು ನಮ್ಮ ಆಧ್ಯಾತ್ಮಿಕ ಓಟವನ್ನು ನಿಧಾನಗೊಳಿಸಿ ಸಮತೋಲನ ಕಳೆದುಕೊಳ್ಳುವಂತೆ, ಕೊನೆಗೆ ದಣಿದು ಓಟವನ್ನು ನಿಲ್ಲಿಸಿಬಿಡುವಂತೆ ಮಾಡಬಲ್ಲದು. ಜಪಾನಿನ ಒಬ್ಬ ಸಹೋದರಿಗೆ ಹೀಗೆಯೇ ಆಯಿತು. ಆಕೆ ದೀಕ್ಷಾಸ್ನಾನ ಪಡೆದು 17 ವರ್ಷಗಳ ನಂತರ ದೊಡ್ಡ ಆರೋಗ್ಯ ಸಮಸ್ಯೆಗೆ ತುತ್ತಾದಳು. ಆರೋಗ್ಯದ ಕಡೆಗೆ ಗಮನಹರಿಸುವುದರಲ್ಲಿ ಎಷ್ಟು ಮುಳುಗಿಹೋದಳೆಂದರೆ ಆಧ್ಯಾತ್ಮಿಕವಾಗಿ ಬಲಹೀನಳಾದಳು. ತದನಂತರ ಆಧ್ಯಾತ್ಮಿಕವಾಗಿ ನಿಷ್ಕ್ರಿಯಳಾದಳು. ಇಂಥ ಸನ್ನಿವೇಶದಲ್ಲಿ ಇಬ್ಬರು ಹಿರಿಯರು ಆಕೆಗೆ ನೆರವಾದರು. ಭೇಟಿಮಾಡಿ ಪ್ರೋತ್ಸಾಹಿಸಿದರು. ಅವರ ಕಾಳಜಿಯ ಮಾತುಗಳಿಂದ ಆಕೆ ಉತ್ತೇಜನ ಪಡೆದು ಪುನಃ ಕೂಟಗಳಿಗೆ ಹಾಜರಾಗತೊಡಗಿದಳು. “ಸೋದರ ಸೋದರಿಯರು ನನ್ನನ್ನು ಪ್ರೀತಿಯಿಂದ ವಂದಿಸಿದಾಗ ನಾನು ಕಣ್ಣೀರಾದೆ” ಎನ್ನುತ್ತಾಳೆ ಆಕೆ. ಆ ನಮ್ಮ ಸಹೋದರಿ ಕ್ರೈಸ್ತ ಪಥಕ್ಕೆ ಹಿಂದಿರುಗಿ ಈಗ ಓಟವನ್ನು ಮುಂದುವರಿಸುತ್ತಿದ್ದಾರೆ.

14, 15. ತಪ್ಪು ಬಯಕೆಗಳು ಬರುವಾಗ ಎಂಥ ದೃಢ ಹೆಜ್ಜೆ ತಕ್ಕೊಳ್ಳಬೇಕಾಗುತ್ತದೆ? ಉದಾಹರಣೆ ಕೊಡಿ.

14 ಶಾರೀರಿಕ ಬಯಕೆಗಳು ಅನೇಕರನ್ನು ಎಡವುವಂತೆ ಮಾಡಿವೆ. ಇಂಥ ಬಯಕೆಗಳು ನಮ್ಮನ್ನು ತಪ್ಪುದಾರಿಗೆ ಸೆಳೆಯುವಾಗ ಮಾನಸಿಕವಾಗಿ, ನೈತಿಕವಾಗಿ, ಆಧ್ಯಾತ್ಮಿಕವಾಗಿ ಶುದ್ಧರಾಗಿ ಉಳಿಯಲು ದೃಢ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಅವಶ್ಯ. ನಮ್ಮನ್ನು ಎಡವಿಸುವುದು ಯಾವುದೇ ಆಗಿರಲಿ, ನಮ್ಮ ಕಣ್ಣಾಗಿರಲಿ, ಕೈಯಾಗಿರಲಿ ಅದನ್ನು ಕಿತ್ತು ಬಿಸಾಡುವಂತೆ ಯೇಸು ಹೇಳಿದ್ದಾನಲ್ಲ? ಇದರಲ್ಲಿ ನಮ್ಮನ್ನು ಎಡವುವಂತೆ ಮಾಡಬಲ್ಲ ಅನೈತಿಕ ಆಲೋಚನೆಗಳು, ಕಾರ್ಯಗಳು ಸಹ ಸೇರಿವೆ. ಇವುಗಳಿಂದಾಗಿ ಕೆಲವರು ಕ್ರೈಸ್ತ ಓಟವನ್ನು ನಿಲ್ಲಿಸಿಬಿಟ್ಟಿದ್ದಾರೆ.ಮತ್ತಾಯ 5:29, 30 ಓದಿ.

15 ಸಾಕ್ಷಿ ಕುಟುಂಬದಲ್ಲಿ ಬೆಳೆದ ಒಬ್ಬ ಸಹೋದರನ ಅನುಭವ ಗಮನಿಸಿ. ಆ ಸಹೋದರನು ಅನೇಕ ವರ್ಷಗಳಿಂದ ಸಲಿಂಗಕಾಮಿ ಭಾವನೆಗಳೊಂದಿಗೆ ಹೋರಾಡುತ್ತಿದ್ದನು. ಅವನು ಹೇಳುವುದು: “ನನ್ನಲ್ಲಿ ಅಸಹಜ ಭಾವನೆಗಳಿದ್ದ ಕಾರಣ ಜನರೊಟ್ಟಿಗಿರುವಾಗೆಲ್ಲ ಮುಜುಗರ ಆಗುತ್ತಿತ್ತು. ಬೆರೆಯಲು ಕಷ್ಟ ಆಗುತ್ತಿತ್ತು.” 20 ವರ್ಷದಷ್ಟಕ್ಕೆ ರೆಗ್ಯುಲರ್‌ ಪಯನೀಯರ್‌ ಹಾಗೂ ಶುಶ್ರೂಷಾ ಸೇವಕನಾಗಿದ್ದ ಅವನು ನಂತರ ಗಂಭೀರ ಪಾಪ ಮಾಡಿ ಎಡವಿ ಬಿದ್ದನು. ಅವನಿಗೆ ಬೈಬಲಾಧಾರಿತ ಶಿಸ್ತು ಕೊಡಲಾಯಿತು. ಹಿರಿಯರು ಸಹಾಯಹಸ್ತ ಚಾಚಿದರು. ಅವನು ಸಹ ಪ್ರಾರ್ಥನೆ, ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವ ಮೂಲಕ, ಇತರರಿಗೆ ಸಹಾಯ ಮಾಡುವುದಕ್ಕೆ ಹೆಚ್ಚು ಗಮನಕೊಡುವ ಮೂಲಕ ಆಧ್ಯಾತ್ಮಿಕವಾಗಿ ಎದ್ದು ನಿಂತನು, ಕ್ರೈಸ್ತ ಪಥದಲ್ಲಿ ಮುಂದೆ ಸಾಗಿದನು. ಇದಾಗಿ ಕೆಲವು ವರ್ಷಗಳ ನಂತರ ಅವನು ಒಪ್ಪಿಕೊಳ್ಳುವುದು: “ಈಗಲೂ ಕೆಲವೊಮ್ಮೆ ಅಂಥ ಭಾವನೆಗಳು ಬರುತ್ತವೆ. ಆದರೆ ಅವು ನನ್ನನ್ನು ನಿಯಂತ್ರಿಸುವಂತೆ ನಾನು ಬಿಡುವುದಿಲ್ಲ. ನಿಭಾಯಿಸಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಪ್ರಲೋಭಿಸಲ್ಪಡುವಂತೆ ಯೆಹೋವನು ಬಿಡುವುದಿಲ್ಲ ಎನ್ನುವುದನ್ನು ನಾನು ಅರಿತಿದ್ದೇನೆ. ಈ ಸಮಸ್ಯೆಯನ್ನು ನಿಭಾಯಿಸಲು ನನ್ನಿಂದಾಗುತ್ತದೆ ಎಂಬ ನಂಬಿಕೆ ದೇವರಿಗೆ ಇದ್ದ ಮೇಲೆ ಖಂಡಿತ ಅದು ನನ್ನಿಂದ ಸಾಧ್ಯ.” ಕೊನೆಯಲ್ಲಿ ಅವನು ಹೇಳುವುದು: “ಯೆಹೋವನು ಬಯಸುವಂಥ ರೀತಿಯಲ್ಲಿ ಜೀವಿಸಲು ಹೋರಾಡಬೇಕಾದರೂ ಅದಕ್ಕೆ ಪ್ರತಿಫಲವನ್ನು ಆತನು ನನಗೆ ಹೊಸ ಲೋಕದಲ್ಲಿ ಕೊಡುವನು. ಅದನ್ನು ನಾನು ಪಡೆಯಲೇಬೇಕು. ಅಷ್ಟರ ವರೆಗೆ ಹೋರಾಡುತ್ತಾ ಇರುವೆ.” ಹೌದು, ಕ್ರೈಸ್ತ ಪಥದಲ್ಲಿ ಓಡುತ್ತಾ ಇರುವ ದೃಢಸಂಕಲ್ಪವನ್ನು ಅವನು ಮಾಡಿದ್ದಾನೆ.

16, 17. (1) ಅನ್ಯಾಯವಾಗಿದೆ ಎಂದು ನೆನಸಿದ ಒಬ್ಬ ಸಹೋದರನಿಗೆ ಕ್ರೈಸ್ತ ಓಟವನ್ನು ಪುನಃ ಆರಂಭಿಸಲು ಯಾವುದು ಸಹಾಯಮಾಡಿತು? (2) ನಂಬಿಕೆಯಲ್ಲಿ ಎಡವದಿರಲು ನಾವು ಯಾರ ಮೇಲೆ ಗಮನವಿಡಬೇಕು?

16 ಜೊತೆವಿಶ್ವಾಸಿಗಳಿಂದ ನಮಗಾಗುವ ಅನ್ಯಾಯಗಳು ನಮ್ಮನ್ನು ಆಧ್ಯಾತ್ಮಿಕವಾಗಿ ಎಡವಿಸಬಲ್ಲವು. ಫ್ರಾನ್ಸ್‌ ದೇಶದ ಒಬ್ಬ ಸಹೋದರನಿಗೂ ಹೀಗಾಯಿತು. ತನಗೆ ಅನ್ಯಾಯವಾಗಿದೆ ಎಂದು ಅನಿಸಿದ್ದರಿಂದ ಅವನು ಸಭೆಗೆ ಬರುವುದನ್ನು ಬಿಟ್ಟುಬಿಟ್ಟನು. ಈ ಮುಂಚೆ ಹಿರಿಯನಾಗಿದ್ದ ಆ ಸಹೋದರನು ತದನಂತರ ನಿಷ್ಕ್ರಿಯನಾದನು. ಇಬ್ಬರು ಹಿರಿಯರು ಅವನನ್ನು ಭೇಟಿಮಾಡಿದರು. ತಾನು ಅಂದುಕೊಂಡಿದ್ದನ್ನು ಅವನು ಮನಬಿಚ್ಚಿ ಹೇಳುತ್ತಿದ್ದಾಗ ದಯೆಯಿಂದ ಆಲಿಸಿದರು. ಭಾರವನ್ನೆಲ್ಲ ಯೆಹೋವನ ಮೇಲೆ ಹಾಕುವಂತೆ ಉತ್ತೇಜಿಸಿದರು. ಯೆಹೋವನನ್ನು ಮೆಚ್ಚಿಸುವುದೇ ಎಲ್ಲಕ್ಕಿಂತಲೂ ಮುಖ್ಯವಾದದ್ದು ಎನ್ನುವುದನ್ನು ಮನವರಿಕೆ ಮಾಡಿಸಿದರು. ಅವರ ಉತ್ತೇಜನಕ್ಕೆ ಆ ಸಹೋದರನು ಸಕಾರಾತ್ಮಕ ಪ್ರತಿಕ್ರಿಯೆ ತೋರಿಸಿ ಪುನಃ ಕ್ರೈಸ್ತ ಓಟವನ್ನು ಓಡಲಾರಂಭಿಸಿದನು ಮತ್ತು ಸಭಾ ಚಟುವಟಿಕೆಗಳಲ್ಲಿ ಸಕ್ರಿಯನಾದನು.

17 ಕ್ರೈಸ್ತರಾದ ನಮ್ಮೆಲ್ಲರ ಗಮನ ಅಪರಿಪೂರ್ಣ ಮಾನವರ ಮೇಲಲ್ಲ, ಸಭೆಯ ಶಿರಸ್ಸಾದ ಯೇಸು ಕ್ರಿಸ್ತನ ಮೇಲಿರಬೇಕು. ‘ಅಗ್ನಿಜ್ವಾಲೆಯಂತಿರುವ’ ಆತನ ಕಣ್ಣುಗಳು ಎಲ್ಲವನ್ನು ನೋಡುತ್ತವೆ. ಅಂದರೆ ಸಭೆಯಲ್ಲಿ ನಡೆಯುವ ಪ್ರತಿಯೊಂದು ವಿಷಯವನ್ನು ಮತ್ತು ಆ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಆತನು ಚೆನ್ನಾಗಿ ತಿಳಿದಿದ್ದಾನೆ. ನಾವು ನೋಡಲು ಸಾಧ್ಯವಿರುವುದಕ್ಕಿಂತ ಎಷ್ಟೋ ಹೆಚ್ಚನ್ನು ಆತನು ನೋಡಬಲ್ಲನು. (ಪ್ರಕ. 1:13-16) ನಮಗೆ ಅನ್ಯಾಯವಾಗಿದೆ ಎಂದು ನಾವು ನೆನಸುವಾಗ, ಒಂದುವೇಳೆ ಅದು ನಾವು ತಪ್ಪರ್ಥ ಮಾಡಿಕೊಂಡಿದ್ದಾಗಿದ್ದರೂ ಅದನ್ನು ಯೇಸು ಕ್ರಿಸ್ತನು ತಿಳಿದಿದ್ದಾನೆ. ಸಭೆಯಲ್ಲಿ ಯಾವುದಾದರೂ ವಿಷಯ ಸರಿಯಾಗಬೇಕಾದರೆ ಅದನ್ನಾತನು ಅತ್ಯುತ್ತಮ ರೀತಿಯಲ್ಲಿ ಹಾಗೂ ತಕ್ಕ ಸಮಯದಲ್ಲಿ ಮಾಡುತ್ತಾನೆ. ಆದ್ದರಿಂದ ನಮ್ಮ ಸಹೋದರ ಸಹೋದರಿಯರು ಮಾಡುವ ಯಾವುದೇ ಕ್ರಿಯೆ ಅಥವಾ ನಿರ್ಣಯ ನಮ್ಮನ್ನು ಎಡವಿಸುವಂತೆ ಬಿಡಬಾರದು.

18. ಸಂಕಟಗಳು ಅಥವಾ ಇನ್ಯಾವುದೇ ಕಷ್ಟಕರ ಸನ್ನಿವೇಶವು ನಮ್ಮನ್ನು ಎಡವಿಸದಂತೆ ಹೇಗೆ ನೋಡಿಕೊಳ್ಳಬಲ್ಲೆವು?

18 ನಮ್ಮನ್ನು ಎಡವಿಸಬಲ್ಲ ಇನ್ನೆರಡು ಎಡವುಗಲ್ಲುಗಳು ಸಂಕಟ ಅಥವಾ ಹಿಂಸೆ ಮತ್ತು ಸಭೆಯಲ್ಲಿರುವ ಇತರರ ಅಪರಿಪೂರ್ಣತೆಗಳು. ಯೇಸು ಬಿತ್ತುವವನ ಸಾಮ್ಯದಲ್ಲಿ ಹೇಳಿದಂತೆ ಕೆಲವರು ವಾಕ್ಯದ ನಿಮಿತ್ತ “ಸಂಕಟ ಅಥವಾ ಹಿಂಸೆ” ಎದುರಿಸಿದಾಗ ಎಡವಬಹುದು. ಯಾರಲ್ಲಿ ಸತ್ಯ ‘ಬೇರುಬಿಟ್ಟಿಲ್ಲವೋ’ ಅಂದರೆ ಬಲವಾದ ನಂಬಿಕೆಯಿಲ್ಲವೋ ಅಂಥವರು ಕುಟುಂಬದಿಂದ, ನೆರೆಯವರಿಂದ ಅಥವಾ ಸರ್ಕಾರಿ ಅಧಿಕಾರಿಗಳಿಂದ ಹಿಂಸೆ ಬಂದಾಗ ಎಡವುವ ಸಾಧ್ಯತೆ ಇದೆ. (ಮತ್ತಾ. 13:21) ಆದರೆ ನಮ್ಮ ಹೃದಯದ ಸ್ಥಿತಿ ಒಳ್ಳೇದಾಗಿರುವಂತೆ ನೋಡಿಕೊಳ್ಳುವಲ್ಲಿ ಸತ್ಯದ ಬೀಜ ಆಳವಾಗಿ ಬೇರುಬಿಟ್ಟು ನಂಬಿಕೆ ದೃಢವಾಗುತ್ತದೆ. ಹಾಗಾಗಿ ಸಂಕಷ್ಟಗಳು ಎದುರಾದಾಗ ಸ್ತುತಿಗೆ ಯೋಗ್ಯವಾದ ವಿಷಯಗಳ ಕುರಿತು ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸಲು ಪ್ರಯತ್ನಿಸಿ. (ಫಿಲಿಪ್ಪಿ 4:6-9 ಓದಿ.) ಆಗ ಯಾವುದೇ ಸಂಕಷ್ಟ ಬರಲಿ ಯೆಹೋವನ ಸಹಾಯದೊಂದಿಗೆ ಅದನ್ನು ಎದುರಿಸಲು ಶಕ್ತರಾಗುವೆವು. ಅಂಥ ಸಂಕಷ್ಟಗಳು ನಮ್ಮನ್ನು ಎಡವಿಸಲಾರವು.

19. ಯಾರಾದರೂ ನಮ್ಮ ಮನನೋಯಿಸುವಲ್ಲಿ ಅದು ಎಡವುಗಲ್ಲಾಗದಂತೆ ಹೇಗೆ ನೋಡಿಕೊಳ್ಳಬಲ್ಲೆವು?

19 ವಿಷಾದದ ಸಂಗತಿಯೇನೆಂದರೆ ಕೆಲವರು ಇತರರ ಅಪರಿಪೂರ್ಣತೆಗಳಿಂದಾಗಿ ಕ್ರೈಸ್ತ ಓಟವನ್ನು ನಿಲ್ಲಿಸಿದ್ದಾರೆ. ಮನಸ್ಸಾಕ್ಷಿಗೆ ಸಂಬಂಧಿಸಿದ ವಿಷಯದಲ್ಲಿ ಒಬ್ಬರಿಂದೊಬ್ಬರಿಗೆ ಇರುವ ವ್ಯತ್ಯಾಸಗಳು ಕೆಲವರನ್ನು ಎಡವಿಸಿವೆ. (1 ಕೊರಿಂ. 8:12, 13) ನಮ್ಮ ಕುರಿತೇನು? ಯಾರಾದರೂ ನಮ್ಮ ಮನನೋಯಿಸುವಲ್ಲಿ ಅದನ್ನು ದೊಡ್ಡ ವಿಷಯವಾಗಿ ಮಾಡುತ್ತೇವಾ? ನಾವು ಇತರರನ್ನು ತೀರ್ಪು ಮಾಡಬಾರದು, ಕ್ಷಮಿಸಬೇಕು, ಕೋಪಿಸಿಕೊಳ್ಳಲು ಕಾರಣವಿದ್ದರೂ ಕ್ಷಮಿಸಬೇಕು ಎಂದು ಬೈಬಲ್‌ ಹೇಳುತ್ತದೆ. (ಲೂಕ 6:37) ಎಡವಿಸಬಹುದಾದ ಸಂದರ್ಭಗಳು ಬಂದಾಗ ಹೀಗೆ ಕೇಳಿಕೊಳ್ಳಿ: ‘ನಾನು ಅಂದುಕೊಂಡ ಹಾಗೆ ಅವರು ಮಾಡಲಿಲ್ಲ ಎಂದ ಮಾತ್ರಕ್ಕೆ ಅವರನ್ನು ತಪ್ಪೆಂದು ತೀರ್ಪು ಮಾಡುತ್ತೇನಾ? ನಮ್ಮ ಸಹೋದರರು ಅಪರಿಪೂರ್ಣರೆಂದು ಗೊತ್ತಿದ್ದರೂ, ಯಾರೋ ಒಬ್ಬರಲ್ಲಿರುವ ಕುಂದುಕೊರತೆಯಿಂದಾಗಿ ಜೀವಕ್ಕಾಗಿರುವ ಓಟವನ್ನೇ ನಿಲ್ಲಿಸಿಬಿಡುತ್ತೇನಾ?’ ನಮಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇರಬೇಕೆಂದರೆ ಬೇರೊಬ್ಬರು ಮಾಡುವ ಯಾವುದೇ ವಿಷಯ ನಮ್ಮ ಕ್ರೈಸ್ತ ಓಟವನ್ನು ನಿಧಾನಿಸಬಾರದು.

ಸಹನೆಯಿಂದ ಓಡಿ ಎಡವದಂತೆ ನೋಡಿಕೊಳ್ಳಿ

20, 21. ಜೀವಕ್ಕಾಗಿರುವ ಓಟದ ಕುರಿತು ಯಾವ ದೃಢನಿರ್ಧಾರ ಮಾಡಿದ್ದೀರಿ?

20 ನೀವು ಅಂತಿಮಘಟ್ಟದ ವರೆಗೆ ಓಡಿ ಓಟವನ್ನು ‘ಕೊನೆಗಾಣಿಸಲು’ ದೃಢನಿರ್ಧಾರ ಮಾಡಿದ್ದೀರೋ? (2 ತಿಮೊ. 4:7, 8) ಹಾಗಾದರೆ ವೈಯಕ್ತಿಕ ಅಧ್ಯಯನ ಅವಶ್ಯ. ಬೈಬಲ್‌ ಮತ್ತು ಬೈಬಲಾಧರಿತ ಪ್ರಕಾಶನಗಳನ್ನು ಬಳಸಿ ಸಂಶೋಧನೆ ಮಾಡಿ, ಧ್ಯಾನಿಸಿ, ಎಡವುಗಲ್ಲಂತಿರುವ ವಿಷಯಗಳನ್ನು ಗುರುತಿಸಿ. ಆಧ್ಯಾತ್ಮಿಕವಾಗಿ ಬಲವಾಗಿರಲು ಪವಿತ್ರಾತ್ಮ ಕೊಡುವಂತೆ ದೇವರಲ್ಲಿ ಅಂಗಲಾಚಿ ಬೇಡಿ. ನೆನಪಿಡಿ, ಜೀವಕ್ಕಾಗಿರುವ ಓಟದಲ್ಲಿ ಓಟಗಾರ ಕೆಲವು ಬಾರಿ ಎಡವಿದಾಕ್ಷಣ ಸೋತುಹೋಗುವುದಿಲ್ಲ. ಪುನಃ ಮೇಲೆದ್ದು ಓಡಬಲ್ಲನು. ಅಷ್ಟೇ ಅಲ್ಲ ನಂಬಿಕೆಗೆ ಬಂದ ಸವಾಲುಗಳಿಂದ ಪಾಠ ಕಲಿತು ಎಡವುಗಲ್ಲುಗಳನ್ನೇ ಪ್ರಗತಿಯ ಮೆಟ್ಟಿಲುಗಳನ್ನಾಗಿ ಬದಲಾಯಿಸಬಲ್ಲನು.

21 ಬೈಬಲ್‌ ಹೇಳುವ ಕ್ರೈಸ್ತ ಓಟವು ನಮ್ಮಿಂದ ಕ್ರಿಯೆಯನ್ನು ಕೇಳಿಕೊಳ್ಳುತ್ತದೆ. ಇದು ಒಂದು ಬಸ್ಸಲ್ಲಿ ಕುಳಿತು ವಿಜಯದ ರೇಖೆಯ ಕಡೆಗೆ ಪ್ರಯಾಣ ಮಾಡುವುದಲ್ಲ. ಜಯಗಳಿಸಬೇಕಾದರೆ ಸ್ವತಃ ನಾವು ಓಡಬೇಕು. ಹಾಗೆ ಮಾಡುವಾಗ ಯೆಹೋವನು ಕೊಡುವ “ಸಂಪೂರ್ಣಸಮಾಧಾನ” ನಮ್ಮನ್ನು ಮುಂದೊತ್ತುವ ಗಾಳಿಯಂತಿದ್ದು ಓಡಲು ಸಹಾಯಕಾರಿಯಾಗಿರುವುದು. (ಕೀರ್ತ. 119:165) ಈ ಓಟವನ್ನು ಓಡುತ್ತಾ ಇರುವಾಗ ಯೆಹೋವನು ನಮ್ಮನ್ನು ಈಗಲೂ ಆಶೀರ್ವದಿಸುವನು ಮಾತ್ರವಲ್ಲ ಓಟವನ್ನು ಮುಗಿಸಿದಾಗ ಆಶೀರ್ವಾದಗಳ ಸುರಿಮಳೆಗೈಯುವನು.—ಯಾಕೋ. 1:12.

[ಅಧ್ಯಯನ ಪ್ರಶ್ನೆಗಳು]

[ಪುಟ 3ರಲ್ಲಿರುವ ಚಿತ್ರ]

[ಪುಟ 4ರಲ್ಲಿರುವ ಚಿತ್ರ]

ಎಡವಿ ಬಿದ್ದರೆ ಸಹಾಯ ಸ್ವೀಕರಿಸಿ ಎದ್ದೇಳಿ!

[ಪುಟ 7ರಲ್ಲಿರುವ ಚಿತ್ರ]

ಯಾವುದೂ ನಿಮ್ಮ ಓಟವನ್ನು ತಡೆಯುವಂತೆ ಬಿಡಬೇಡಿ