ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಪರೀಕ್ಷೆಯ ಗಳಿಗೆಯಲ್ಲಿ” ಸ್ಥಿರವಾಗಿ ನಿಂತರು

“ಪರೀಕ್ಷೆಯ ಗಳಿಗೆಯಲ್ಲಿ” ಸ್ಥಿರವಾಗಿ ನಿಂತರು

ನಮ್ಮ ಸಂಗ್ರಹಾಲಯ

“ಪರೀಕ್ಷೆಯ ಗಳಿಗೆಯಲ್ಲಿ” ಸ್ಥಿರವಾಗಿ ನಿಂತರು

1914ರಲ್ಲಾದ ಒಂದನೇ ಮಹಾ ಯುದ್ಧದ ಸಮಯದಲ್ಲಿ ಇಡೀ ಲೋಕಕ್ಕೆ ಬೈಬಲ್‌ವಿದ್ಯಾರ್ಥಿಗಳ ತಾಟಸ್ಥ್ಯ ತಿಳಿದುಬಂತು. (ಯೆಶಾ. 2:2-4; ಯೋಹಾ. 18:36; ಎಫೆ. 6:12) ಬ್ರಿಟನ್‌ನಲ್ಲಿದ್ದ ದೇವಜನರು ಏನೆಲ್ಲ ಸಹಿಸಿಕೊಳ್ಳಬೇಕಾಯಿತು ಗೊತ್ತಾ?

ಬ್ರಿಟನ್‌ ಸರಕಾರ 1916ರಲ್ಲಿ ಒಂದು ಕಾಯಿದೆ ಹೊರಡಿಸಿತು. 18ರಿಂದ 40 ವಯಸ್ಸಿನ ಮದುವೆಯಾಗದ ಎಲ್ಲ ಗಂಡಸರು ಮಿಲಿಟರಿಯಲ್ಲಿ ಸೇರಬೇಕು. ಮಿಲಿಟರಿಗೆ ಸೇರದಿರಲು “ಧಾರ್ಮಿಕ ಅಥವಾ ನೈತಿಕ ಪ್ರಜ್ಞೆಯಿಂದ” ಕೂಡಿದ ಬಲವಾದ ಕಾರಣ ಇರುವವರಿಗೆ ಮಾತ್ರ ವಿನಾಯಿತಿ ನೀಡಲಾಗುತ್ತೆ ಎಂದು ಆ ಕಾಯಿದೆ ಹೇಳಿತು. ಎಷ್ಟರಮಟ್ಟಿಗೆ ವಿನಾಯಿತಿ ಕೊಡಬಹುದೆಂದು ನಿರ್ಣಯಿಸಲು ಸರಕಾರ ಒಂದು ನ್ಯಾಯಮಂಡಲಿಯನ್ನು ಆಯೋಜಿಸಿತು.

ಕಾಯಿದೆಯಲ್ಲಿ ತಿಳಿಸಲಾದಂತೆ ನಮ್ಮ ಸಹೋದರರಿಗೆ ಯುದ್ಧದಲ್ಲಿ ಒಳಗೂಡದಿರಲು ಬಲವಾದ ಕಾರಣವಿದ್ದರೂ ಅನ್ಯಾಯಕ್ಕೊಳಗಾದರು. ಕಾಯಿದೆ ಹೊರಡಿಸಿದ ಸ್ವಲ್ಪದರಲ್ಲೇ 40 ಬೈಬಲ್‌ ವಿದ್ಯಾರ್ಥಿಗಳು ಜೈಲು ಪಾಲಾದರು. ಇನ್ನು 8 ಜನರನ್ನು ಫ್ರಾನ್ಸ್‌ನಲ್ಲಿ ನಡೆಯುತ್ತಿದ್ದ ಯುದ್ಧಕ್ಕೆ ಕಳುಹಿಸಲಾಯಿತು. ಇದನ್ನು ಖಂಡಿಸಿ ಸಹೋದರರು ಬ್ರಿಟನ್‌ನ ಪ್ರಧಾನ ಮಂತ್ರಿ ಹರ್ಬರ್ಟ್‌ ಆಸ್‌ಕ್ವಿತ್‌ಗೆ ಪತ್ರ ಬರೆದರು. ಆ ಪತ್ರದಲ್ಲಿ 5,500 ಜನರ ಸಹಿಗಳಿದ್ದವು.

ಫ್ರಾನ್ಸ್‌ಗೆ ಕಳುಹಿಸಲಾಗಿದ್ದ 8 ಸಹೋದರರು ಯುದ್ಧದಲ್ಲಿ ಭಾಗವಹಿಸದ ಕಾರಣ ಅವರನ್ನು ಗುಂಡಿಕ್ಕಿ ಕೊಲ್ಲುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇನ್ನೇನು ಗುಂಡು ಹಾರಿಸುವ ಸಮಯ ಬಂದಾಗ ನಿರ್ಧಾರ ಬದಲಾಗಿ 10ವರ್ಷದ ಜೈಲುಶಿಕ್ಷೆ ವಿಧಿಸಲಾಯಿತು. ಅವರನ್ನು ಇಂಗ್ಲೆಂಡ್‌ನ ಜೈಲಿಗೆ ಕಳುಹಿಸಿದರು.

ಯುದ್ಧದ ತೀವ್ರತೆ ಹೆಚ್ಚಾದಂತೆ ಮದುವೆಯಾದ ಗಂಡಸರೂ ಮಿಲಿಟರಿಗೆ ಸೇರಬೇಕೆಂದು ಆದೇಶ ಹೊರಡಿಸಲಾಯಿತು. ಇದರ ಕುರಿತು ಮಾದರಿ ಮೊಕದ್ದಮೆ ನಡೆಯಿತು. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ವೈದ್ಯರಾಗಿದ್ದ ಹೆನ್ರಿ ಹಡ್ಸನ್‌ ಎಂಬ ಸಹೋದರರೊಬ್ಬರು ಇದನ್ನು ಪ್ರತಿವಾದಿಸಿದರು. 1916ರ ಆಗಸ್ಟ್‌ 3ರಂದು ಕೋರ್ಟ್‌ ಅವರನ್ನೇ ತಪ್ಪಿತಸ್ಥರೆಂದು ತೀರ್ಪು ನೀಡಿ, ದಂಡ ವಿಧಿಸಿ, ಮಿಲಿಟರಿ ಸೇವೆ ಮಾಡುವಂತೆ ಆದೇಶಿಸಿತು. ಇಂಥದ್ದೇ ಇನ್ನೊಂದು ಮಾದರಿ ಮೊಕದ್ದಮೆ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದಾಗ, ಜೇಮ್ಸ್‌ ಫ್ರೆಡ್ರಿಕ್‌ ಸ್ಕಾಟ್‌ ಎಂಬ 25 ವರ್ಷದ ಕಾಲ್ಪೋರ್ಟರ್‌ (ಪಯನೀಯರ್‌) ಸಹೋದರರು ಸರಕಾರದ ವಿರುದ್ಧ ಗೆದ್ದು ನಿರಪರಾಧಿ ಎಂದು ಸಾಬೀತಾದರು. ಇದನ್ನು ಸಹಿಸಿಕೊಳ್ಳದ ಸರಕಾರ ಮೇಲ್ಮನವಿ ಮಾಡಲು ಯೋಚಿಸಿತು. ಆದರೆ ಲಂಡನ್ನಿನಲ್ಲಿ ಹರ್ಬರ್ಟ್‌ ಕಿಪ್ಸ್‌ ಎಂಬವರ ಮೂರನೇ ಮಾದರಿ ಮೊಕದ್ದಮೆಯಲ್ಲಿ ಸರಕಾರ ಜಯಸಾಧಿಸಿತು. ನಂತರ ಆ ಸಹೋದರನಿಗೆ ದಂಡ ವಿಧಿಸಿ, ಮಿಲಿಟರಿ ಸೇವೆಗೆ ದೊಬ್ಬಲಾಯಿತು.

1916ರ ಸೆಪ್ಟೆಂಬರ್‌ನಷ್ಟಕ್ಕೆ ಒಟ್ಟು 264 ಸಹೋದರರು ಈ ಕಾಯಿದೆಯಡಿ ಮಿಲಿಟರಿಯಲ್ಲಿ ಒಳಗೂಡದಿರಲು ಕೇಳಿಕೊಂಡರು. ಅವರಲ್ಲಿ 5 ಜನರಿಗೆ ಮಾತ್ರ ಅನುಮತಿ ಕೊಡಲಾಯಿತು. 154 ಜನರನ್ನು “ರಾಷ್ಟ್ರೀಯ ಸೇವೆ”ಯ ಹೆಸರಿನಲ್ಲಿ ರಸ್ತೆ ನಿರ್ಮಾಣದಂಥ, ಗುಡ್ಡ ಕೊರೆಯುವಂಥ ಪ್ರಯಾಸದ ಕೆಲಸಕ್ಕೆ ದೂಡಲಾಯಿತು. 23 ಜನರಿಗೆ ನೇರವಾಗಿ ಯುದ್ಧಕ್ಕೆ ಸಂಬಂಧಿಸದ ಮಿಲಿಟರಿ ಕೆಲಸ ಮಾಡುವಂತೆ ಹೇಳಲಾಯಿತು. 82 ಜನರನ್ನು ಮಿಲಿಟರಿಗೆ, ಇನ್ನು ಕೆಲವರನ್ನು ಕಾಯಿದೆ ಮುರಿಯುತ್ತಿದ್ದಾರೆಂದು ಜೈಲಿಗೆ ಕಳುಹಿಸಲಾಯಿತು. ಸರಕಾರ ಈ ರೀತಿ ಕ್ರೂರವಾಗಿ ವ್ಯವಹರಿಸಿದ್ದನ್ನು ಗಮನಿಸಿದ ಅನೇಕರು ಖಂಡನೆ ವ್ಯಕ್ತಪಡಿಸಿದರು. ಹಾಗಾಗಿ ನಮ್ಮ ಸಹೋದರರನ್ನು ಜೈಲಿನಿಂದ ಬೇರೆ ಕೆಲಸಗಳಿಗೆ ವರ್ಗಾಯಿಸಲಾಯಿತು.

ಬ್ರಿಟನ್ನಿನಲ್ಲಿ ಬ್ರಾಂಚ್‌ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದ ಎಡ್ಗರ್‌ ಕ್ಲೇ ಮತ್ತು ಪ್ರೈಸ್‌ ಹ್ಯೂಜ್‌ ಎಂಬವರು ವೇಲ್ಸ್‌ ಅನ್ನೋ ಸ್ಥಳದಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಮಾಡಿದರು. ಫ್ರಾನ್ಸ್‌ನಿಂದ ಮರಳಿದ 8 ಮಂದಿಯಲ್ಲಿ ಒಬ್ಬರಾದ ಹರ್ಬರ್ಟ್‌ ಸೀನ್ಯರ್‌ ಅವರನ್ನು ಯಾರ್ಕ್‌ಶೈರ್‌ನಲ್ಲಿದ್ದ ವೇಕ್‌ಫೀಲ್ಡ್‌ ಜೈಲಿಗೆ ಕಳುಹಿಸಿದರು. ಇನ್ನುಳಿದವರು ಡಾರ್ಟ್‌ಮೂರ್‌ ಜೈಲಿನಲ್ಲಿ ಕಷ್ಟಪಟ್ಟು ಜೀತದಾಳುಗಳಾಗಿ ದುಡಿದರು. ಹೀಗೆ ಇಡೀ ಡಾರ್ಟ್‌ಮೂರ್‌ ಜೈಲು ನಮ್ಮ ಸಹೋದರರಿಂದ ತುಂಬಿಹೋಗಿತ್ತು.

ಬೈಬಲ್‌ ವಿದ್ಯಾರ್ಥಿ ಫ್ರಾಂಕ್‌ ಪ್ಲಾಟ್‌ಗೆ ಯುದ್ಧಕ್ಕೆ ಸಂಬಂಧಿಸದ ಕೆಲಸ ಕೊಡುತ್ತೇವೆ ಎಂದು ಹೇಳಿ ಯುದ್ಧದಲ್ಲಿ ಪಾಲುತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು. ಅವರು ಒಪ್ಪದ ಕಾರಣ ಅವರನ್ನು ಕಠಿಣವಾಗಿ ಪದೇಪದೇ ಹಿಂಸಿಸಲಾಯಿತು. ಆಗತಾನೇ ಹೊಸದಾಗಿ ಸತ್ಯಕ್ಕೆ ಬಂದಿದ್ದ ಆ್ಯಟ್‌ಕನ್ಸನ್‌ ಪ್ಯಾಜಟ್‌ ಎಂಬವರು ಸಹ ಯುದ್ಧಕ್ಕೆ ಸೇರಲು ನಿರಾಕರಿಸಿದ್ದರಿಂದ ತೀವ್ರ ಹಿಂಸೆಗೆ ಒಳಗಾದರು.

ಹೆಚ್ಚುಕಡಿಮೆ ನೂರು ವರ್ಷಗಳ ಹಿಂದೆ ಇದ್ದ ಕ್ರೈಸ್ತರಿಗೆ ತಾವು ಯಾಕೆ ಯುದ್ಧದಲ್ಲಿ ಮತ್ತು ರಾಜಕೀಯದಲ್ಲಿ ಪಾಲು ತೆಗೆದುಕೊಳ್ಳಬಾರದೆಂದು ಸ್ಪಷ್ಟವಾಗಿ ಗೊತ್ತಿರಲಿಲ್ಲವಾದರೂ ಅವರಲ್ಲಿ ಯೆಹೋವನನ್ನು ಮೆಚ್ಚಿಸುವ ಬಯಕೆ ಇತ್ತು. ಈ ವರದಿಯಲ್ಲಿ ಕೊಡಲಾದ ಎಲ್ಲ ಸಹೋದರರು “ಪರೀಕ್ಷೆಯ ಗಳಿಗೆಯಲ್ಲಿ” ತಮ್ಮ ಸಮಗ್ರತೆಯನ್ನು ಕಾಪಾಡಿಕೊಂಡರು. (ಪ್ರಕ. 3:10)—ಬ್ರಿಟನ್‌ನ ನಮ್ಮ ಸಂಗ್ರಹಾಲಯದಿಂದ.

[ಪುಟ 31ರಲ್ಲಿರುವ ಚಿತ್ರ]

ಹೆನ್ರಿ ಹಡ್ಸನ್‌

[ಪುಟ 31ರಲ್ಲಿರುವ ಚಿತ್ರ]

ಜೇಮ್ಸ್‌ ಫ್ರೆಡ್ರಿಕ್‌ ಸ್ಕಾಟ್‌

[ಪುಟ 31ರಲ್ಲಿರುವ ಚಿತ್ರ]

ಪ್ರೈಸ್‌ ಹ್ಯೂಜ್‌

[ಪುಟ 32ರಲ್ಲಿರುವ ಚಿತ್ರ]

ಅನೇಕ ‘ಬೈಬಲ್‌ ವಿದ್ಯಾರ್ಥಿಗಳನ್ನು’ ಬಂಧಿಸಿಟ್ಟಿದ್ದ ಡಾರ್ಟ್‌ಮೂರ್‌ ಜೈಲು

[ಪುಟ 32ರಲ್ಲಿರುವ ಚಿತ್ರ]

ಹರ್ಬರ್ಟ್‌ ಸೀನ್ಯರ್‌

[ಪುಟ 32ರಲ್ಲಿರುವ ಚಿತ್ರ]

ಫ್ರಾಂಕ್‌ ಪ್ಲಾಟ್‌