ನೀವು ನವೀಕರಿಸಲ್ಪಟ್ಟಿದ್ದೀರಾ?
ನೀವು ನವೀಕರಿಸಲ್ಪಟ್ಟಿದ್ದೀರಾ?
“ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿರಿ.”—ರೋಮ. 12:2.
ವಿವರಿಸುವಿರಾ?
ಎಲ್ಲ ಕ್ರೈಸ್ತರು ಏಕೆ ನವೀಕರಿಸಿಕೊಳ್ಳುವ ಅಗತ್ಯವಿದೆ?
ಪ್ರತಿಯೊಬ್ಬ ಕ್ರೈಸ್ತನು ಯಾವ ವಿಷಯದಲ್ಲಿ ನವೀಕರಿಸಿಕೊಳ್ಳಬೇಕು?
ಅಗತ್ಯವಿರುವ ಕ್ಷೇತ್ರಗಳಲ್ಲಿ ನಾವು ಹೇಗೆ ನಮ್ಮನ್ನು ನವೀಕರಿಸಿಕೊಳ್ಳಬಲ್ಲೆವು?
1, 2. ನಾವು ಬೆಳೆದುಬಂದಿರುವ ರೀತಿ ಮತ್ತು ಸುತ್ತಮುತ್ತಲಿನ ಪರಿಸರ ನಮ್ಮನ್ನು ಹೇಗೆ ಪ್ರಭಾವಿಸುತ್ತದೆ?
ನಾವು ಬೆಳೆದುಬಂದಿರುವ ರೀತಿ ಮತ್ತು ಸುತ್ತಮುತ್ತಲಿನ ಪರಿಸರ ನಮ್ಮನ್ನು ತುಂಬ ಪ್ರಭಾವಿಸುತ್ತದೆ. ನಾವು ಧರಿಸುವ ಉಡುಪು ಮತ್ತು ನಮ್ಮ ವರ್ತನೆ ನಿರ್ದಿಷ್ಟ ವಿಧದ್ದಾಗಿರುತ್ತದೆ. ನಿರ್ದಿಷ್ಟ ವಿಧದ ಊಟ ನಮಗೆ ಇಷ್ಟವಾಗುತ್ತದೆ. ಹಾಗೇಕೆ? ನಮ್ಮ ಸುತ್ತಮುತ್ತಲಿರುವ ಜನರು ನಮ್ಮ ಮೇಲೆ ಬೀರುವ ಪ್ರಭಾವ ಮತ್ತು ನಮ್ಮ ಸನ್ನಿವೇಶ ಕೂಡ ಇದಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿರುತ್ತದೆ.
2 ಆದರೂ, ನಮ್ಮ ಆಹಾರದ ಆಯ್ಕೆ ಮತ್ತು ಉಡುಪಿನ ಶೈಲಿಗಿಂತ ಎಷ್ಟೋ ಹೆಚ್ಚು ಪ್ರಮುಖವಾದ ವಿಷಯಗಳಿವೆ. ಉದಾಹರಣೆಗೆ, ನಾವು ಬೆಳೆಯುತ್ತಾ ಬಂದಂತೆ ಕೆಲವು ವಿಷಯಗಳು ಸರಿ, ಯೋಗ್ಯವಾದದ್ದು, ಇನ್ನು ಕೆಲವು ವಿಷಯಗಳು ತಪ್ಪು, ಯೋಗ್ಯವಲ್ಲ ಎಂದು ನಾವು ತಿಳಿದುಕೊಂಡಿದ್ದೇವೆ. ಇಂಥ ಅನೇಕ ವಿಷಯಗಳು ವೈಯಕ್ತಿಕವಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ನಮ್ಮ ಮನಸ್ಸಾಕ್ಷಿಯ ಪ್ರಕಾರವೂ ನಾವು ಆಯ್ಕೆಗಳನ್ನು ಮಾಡುತ್ತೇವೆ. “ಧರ್ಮಶಾಸ್ತ್ರವಿಲ್ಲದ ಅನ್ಯಜನಾಂಗಗಳ ಜನರು ಸ್ವಾಭಾವಿಕವಾಗಿಯೇ ಧರ್ಮಶಾಸ್ತ್ರದಲ್ಲಿರುವ ವಿಷಯಗಳನ್ನು” ಮಾಡುತ್ತಾರೆಂದು ಬೈಬಲ್ ಹೇಳುತ್ತದೆ. (ರೋಮ. 2:14) ಹಾಗಾದರೆ ದೇವರು ಒಂದು ವಿಷಯದ ಬಗ್ಗೆ ಸ್ಪಷ್ಟ ನಿಯಮ ಕೊಟ್ಟಿಲ್ಲವಾದರೆ ನಾವು ಬೆಳೆದು ಬಂದ ರೀತಿಯ ಪ್ರಕಾರ ಅಥವಾ ನಮ್ಮ ಸುತ್ತಮುತ್ತಲು ಸಾಮಾನ್ಯವಾಗಿರುವ ಮಟ್ಟಗಳಿಗನುಸಾರ ನಡೆಯಬಹುದೆಂದು ಇದರ ಅರ್ಥವೋ?
3. ಕ್ರೈಸ್ತರು ಸಾಮಾನ್ಯವಾಗಿ ಸ್ವೀಕೃತವಾದ ರೀತಿ ಮತ್ತು ಮಟ್ಟಗಳ ಹಿಂದೆಯೇ ಹೋಗದೆ ಇರುವುದಕ್ಕೆ ಎರಡು ಕಾರಣಗಳನ್ನು ಕೊಡಿ.
3 ಬೆಳೆದುಬಂದ ರೀತಿ, ಪರಿಸರಕ್ಕನುಸಾರ ಕ್ರೈಸ್ತರು ಆಯ್ಕೆ ಮಾಡುವುದಿಲ್ಲ. ಅದಕ್ಕೆ ಕಡಿಮೆಪಕ್ಷ ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ಬೈಬಲ್ ನಮಗೆ ಜ್ಞಾಪಕ ಹುಟ್ಟಿಸುವುದು: “ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು; ಕಟ್ಟಕಡೆಗೆ ಅದು ಮರಣಮಾರ್ಗವೇ.” (ಜ್ಞಾನೋ. 16:25) ನಾವು ಅಪರಿಪೂರ್ಣರಾದ್ದರಿಂದ ನಮ್ಮ ಹೆಜ್ಜೆಗಳನ್ನು ಪರಿಪೂರ್ಣವಾಗಿ ಮಾರ್ಗದರ್ಶಿಸುವ ಸಾಮರ್ಥ್ಯ ನಮಗಿಲ್ಲ. (ಜ್ಞಾನೋ. 28:26; ಯೆರೆ. 10:23) ಎರಡನೆಯದಾಗಿ, ಲೋಕದ ಪ್ರವೃತ್ತಿ ಮತ್ತು ಮಟ್ಟಗಳು ಇನ್ನಾವನಿಂದಲೂ ಅಲ್ಲ, “ಈ ವಿಷಯಗಳ ವ್ಯವಸ್ಥೆಯ ದೇವನು” ಆದ ಸೈತಾನನಿಂದ ನಿಯಂತ್ರಿಸಲ್ಪಡುತ್ತವೆಂದು ಬೈಬಲ್ ತೋರಿಸುತ್ತದೆ. (2 ಕೊರಿಂ. 4:4; 1 ಯೋಹಾ. 5:19) ಆದಕಾರಣ ಯೆಹೋವನ ಆಶೀರ್ವಾದ, ಒಪ್ಪಿಗೆಯನ್ನು ನಾವು ಬಯಸುತ್ತೇವಾದ್ದರಿಂದ ರೋಮನ್ನರಿಗೆ 12:2ರ (ಓದಿ) ಸಲಹೆಗೆ ಕಿವಿಗೊಡುವುದು ಆವಶ್ಯಕ.
4. ಈ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?
ರೋಮನ್ನರಿಗೆ 12:2ರಲ್ಲಿ ದಾಖಲಾಗಿರುವ ಮುಖ್ಯ ಅಂಶಗಳಿಗೆ ನಾವು ತುಂಬ ಗಮನ ಕೊಡಬೇಕು. (1) ನಾವು ಏಕೆ ‘ನವೀಕರಿಸಲ್ಪಡಬೇಕು’? (2) ನವೀಕರಿಸಲ್ಪಡುವುದರಲ್ಲಿ ಏನೆಲ್ಲ ಒಳಗೊಂಡಿದೆ? (3) ನಾವು ನವೀಕರಿಸಲ್ಪಡುವುದು ಹೇಗೆ? ಈ ಪ್ರಶ್ನೆಗಳನ್ನು ಪರಿಗಣಿಸೋಣ.
4ಏಕೆ ನವೀಕರಿಸಲ್ಪಡಬೇಕು?
5. ರೋಮನ್ನರಿಗೆ 12:2ರ ಮಾತುಗಳು ಯಾರಿಗೆ ವಿಶೇಷ ಅರ್ಥದಲ್ಲಿವೆ?
5 ಅಪೊಸ್ತಲ ಪೌಲನು ರೋಮನ್ನರಿಗೆ ಬರೆದ ಪತ್ರವನ್ನು ಅವಿಶ್ವಾಸಿಗಳಿಗೆ ಅಥವಾ ಜನಸಾಮಾನ್ಯರಿಗೆ ಬರೆಯಲಿಲ್ಲ. ಅಭಿಷಿಕ್ತರಾದ ಜೊತೆ ಕ್ರೈಸ್ತರಿಗೆ ಬರೆದನು. (ರೋಮ. 1:7) ಅವರು ನವೀಕರಿಸಲ್ಪಡಬೇಕೆಂತಲೂ “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳಲ್ಪಡುವುದನ್ನು” ಬಿಡಬೇಕೆಂತಲೂ ಅವನು ಪ್ರೋತ್ಸಾಹಿಸಿದನು. ಸುಮಾರು ಕ್ರಿ.ಶ. 56ರಲ್ಲಿ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ರೋಮ್‌ನ ಜನರ ಮಟ್ಟಗಳು, ಪದ್ಧತಿಗಳು, ಶೈಲಿಗಳೇ “ವಿಷಯಗಳ ವ್ಯವಸ್ಥೆ” ಆಗಿತ್ತು. ‘ಬಿಡಿರಿ’ ಎಂದು ಪೌಲ ಹೇಳಿರುವುದು, ಆ “ವಿಷಯಗಳ ವ್ಯವಸ್ಥೆ” ಕೆಲವು ಕ್ರೈಸ್ತರನ್ನು ಇನ್ನೂ ಪ್ರಭಾವಿಸುತ್ತಿತ್ತು ಎಂದು ಸೂಚಿಸುತ್ತದೆ. ಹಾಗಾದರೆ ಆ ವ್ಯವಸ್ಥೆ ಆಗಿನ ನಮ್ಮ ಸಹೋದರ ಸಹೋದರಿಯರ ಮೇಲೆ ಯಾವ ರೀತಿಯ ಪ್ರಭಾವ ಬೀರಿತು?
6, 7. ಪೌಲನ ದಿನಗಳಲ್ಲಿ ರೋಮ್‌ನಲ್ಲಿದ್ದ ಸಾಮಾಜಿಕ ಮತ್ತು ಧಾರ್ಮಿಕ ಸ್ಥಿತಿ ಕ್ರೈಸ್ತರಿಗೆ ಸವಾಲನ್ನೊಡ್ಡಿದ್ದು ಹೇಗೆ?
6 ಇಂದು ಪ್ರವಾಸಿಗರು ರೋಮ್‌ನಲ್ಲಿ ಸಾಮಾನ್ಯವಾಗಿ ದೇವಸ್ಥಾನ, ಸಮಾಧಿ, ಸ್ಮಾರಕಗಳು, ಕ್ರೀಡಾಂಗಣ ಮತ್ತು ನಾಟಕಶಾಲೆ ಇತ್ಯಾದಿಗಳ ಅವಶೇಷಗಳನ್ನು ನೋಡುತ್ತಾರೆ. ಇವುಗಳಲ್ಲಿ ಕೆಲವು ಒಂದನೆಯ ಶತಮಾನದಷ್ಟು ಹಿಂದಿನವು. ಗತಕಾಲಗಳ ಇಂಥ ಅವಶೇಷಗಳು ಪ್ರಾಚೀನ ರೋಮ್‌ನ ಸಾಮಾಜಿಕ ಮತ್ತು ಧಾರ್ಮಿಕ ಜೀವನದ ಬಗ್ಗೆ ನಮಗೆ ಬಹಳಷ್ಟನ್ನು ತಿಳಿಸುತ್ತವೆ. ಇತಿಹಾಸ ಪುಸ್ತಕಗಳಲ್ಲೂ ಅಲ್ಲಿಯ ಕತ್ತಿಮಲ್ಲ ಪಂದ್ಯಗಳು, ರಥದೋಟ, ಅನೇಕ ನಾಟಕ ಮತ್ತು ಸಂಗೀತ ಕಚೇರಿಗಳ ಕುರಿತು ಓದಬಹುದು. ಇಂಥ ನಾಟಕ, ಸಂಗೀತಗಳಲ್ಲಿ ಕೆಲಮೊಮ್ಮೆ ಅನೈತಿಕತೆ ಒಳಗೂಡಿರುತ್ತಿತ್ತು. ರೋಮ್ ಶ್ರೀಮಂತ ವ್ಯಾಪಾರ ಕೇಂದ್ರವಾಗಿದ್ದರಿಂದ ಹಣ ಸಂಪಾದಿಸಲು ಅವಕಾಶಗಳೂ ಹೇರಳವಾಗಿದ್ದವು.—ರೋಮ. 6:21; 1 ಪೇತ್ರ 4:3, 4.
7 ರೋಮನ್ನರಿಗೆ ಅನೇಕ ದೇವಸ್ಥಾನಗಳಿದ್ದರೂ, ಬಹುದೇವರುಗಳನ್ನು ಆರಾಧಿಸುತ್ತಿದ್ದರೂ ತಾವು ಆರಾಧಿಸುತ್ತಿದ್ದ ದೇವರುಗಳೊಂದಿಗೆ ನಿಜವಾದ ವೈಯಕ್ತಿಕ ಸಂಬಂಧವಿರಲಿಲ್ಲ. ಅವರಿಗೆ ಧರ್ಮವೆಂದರೆ ಮುಖ್ಯವಾಗಿ ಜನನ, ವಿವಾಹ ಮತ್ತು ಶವಸಂಸ್ಕಾರಗಳಲ್ಲಿ ಮಾಡುತ್ತಿದ್ದ ಆಚರಣೆಗಳಾಗಿದ್ದವು. ಇವು ಅವರ ಸಾಮಾಜಿಕ ವ್ಯವಸ್ಥೆಯ ಭಾಗವಾಗಿದ್ದವು. ಇವೆಲ್ಲ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ಎಂಥ ಸವಾಲುಗಳನ್ನೊಡ್ಡಿದ್ದವು ಎಂದು ನಾವು ಊಹಿಸಬಹುದು. ಕ್ರೈಸ್ತರಲ್ಲಿ ಅನೇಕರು ಆ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಅವರು ನವೀಕರಿಸಲ್ಪಡುವ ಅಗತ್ಯವಿತ್ತು. ಅಂಥ ನವೀಕರಣ ಅವರ ದೀಕ್ಷಾಸ್ನಾನದ ದಿನದಂದು ಮುಗಿದುಹೋಗುತ್ತಿರಲಿಲ್ಲ.
8. ಈ ಲೋಕ ಇಂದಿನ ಕ್ರೈಸ್ತರಿಗೆ ಹೇಗೆ ಅಪಾಯವನ್ನೊಡ್ಡುತ್ತದೆ?
8 ಆ ರೋಮನ್ ಜಗತ್ತಿನಂತೆ, ಇಂದಿನ ಜಗತ್ತು ಸಹ ಸಮರ್ಪಿತ ಕ್ರೈಸ್ತರಿಗೆ ಅಪಾಯಕಾರಿಯಾಗಿದೆ. ಹಾಗೇಕೆ? ಏಕೆಂದರೆ ಲೋಕದ ಮನೋಭಾವ ಎಲ್ಲೆಲ್ಲಿಯೂ ಇದೆ. (ಎಫೆಸ 2:2, 3; 1 ಯೋಹಾನ 2:16 ಓದಿ.) ನಾವು ಯಾವಾಗಲೂ ಲೋಕದ ಬಯಕೆ, ಯೋಚನೆ, ಮೌಲ್ಯಗಳು, ನೈತಿಕತೆಗೆ ಒಡ್ಡಲ್ಪಡುವುದರಿಂದ ಲೋಕದೊಳಗೇ ಮುಳುಗಿಹೋಗುವ ಅಪಾಯ ಇದ್ದೇ ಇದೆ. ಆದಕಾರಣ, “ಈ ವಿಷಯಗಳ ವ್ಯವಸ್ಥೆಯ ಪ್ರಕಾರ ರೂಪಿಸಿಕೊಳ್ಳುವುದನ್ನು ಬಿಟ್ಟು . . . ನವೀಕರಿಸಿಕೊಳ್ಳಿರಿ” ಎಂಬ ಪ್ರೇರಿತ ಸಲಹೆಗೆ ಕಿವಿಗೊಡಲು ಹೇರಳ ಕಾರಣಗಳು ನಮಗಿವೆ. ಹಾಗಾದರೆ ನಾವೇನು ಮಾಡಬೇಕು?
ಯಾವುದನ್ನು ನವೀಕರಿಸಬೇಕು?
9. ದೀಕ್ಷಾಸ್ನಾನಕ್ಕೆ ಅರ್ಹರಾಗುವ ಮೊದಲು ಅನೇಕರು ಯಾವ ಬದಲಾವಣೆಗಳನ್ನು ಮಾಡಿದ್ದಾರೆ?
9 ಒಬ್ಬನು ಬೈಬಲ್ ಸತ್ಯವನ್ನು ಕಲಿತು ಅನ್ವಯಿಸಿಕೊಳ್ಳುವಾಗ ಅವನ ಆಧ್ಯಾತ್ಮಿಕ ಪ್ರಗತಿ ಆರಂಭವಾಗುತ್ತದೆ. ಪರಿಣಾಮವಾಗಿ ತಾನು ಕಲಿತಿರುವುದಕ್ಕೆ ಅನುಸಾರವಾಗಿ ತನ್ನ ಜೀವನದಲ್ಲಿ ಬದಲಾವಣೆಗಳನ್ನು ಮಾಡುತ್ತಾನೆ. ಸುಳ್ಳುಧರ್ಮದ ಆಚಾರಗಳನ್ನು ಮತ್ತು ಹಿಂದಿನ ಜೀವನದ ಬೇಡವಾದ ಸ್ವಭಾವಗಳನ್ನು ಕಳಚಿಹಾಕಿ, ಕ್ರಿಸ್ತಸದೃಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾನೆ. (ಎಫೆ. 4:22-24) ಪ್ರತಿ ವರ್ಷ ಲಕ್ಷಗಟ್ಟಲೆ ಜನರು ಇಂಥ ಪ್ರಗತಿ ಮಾಡಿ ತಮ್ಮನ್ನು ಯೆಹೋವ ದೇವರಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯುವುದನ್ನು ನೋಡಿ ನಾವು ಸಂತೋಷಿಸುತ್ತೇವೆ. ಇದು ಖಂಡಿತವಾಗಿ ಯೆಹೋವನ ಹೃದಯವನ್ನು ಹರ್ಷಗೊಳಿಸುತ್ತದೆ. (ಜ್ಞಾನೋ. 27:11) ಆದರೆ ನಾವು ಈ ಪ್ರಶ್ನೆಯನ್ನು ಪರಿಗಣಿಸುವುದು ಉತ್ತಮ: “ಇಷ್ಟು ಬದಲಾವಣೆ ಮಾಡಿದರೆ ಸಾಕಾ?”
10. ನವೀಕರಿಸಿಕೊಳ್ಳುವುದಕ್ಕೂ ಅಭಿವೃದ್ಧಿಗೂ ಏನು ವ್ಯತ್ಯಾಸ?
10 ನವೀಕರಿಸಿಕೊಳ್ಳುವುದರಲ್ಲಿ ಪ್ರಗತಿ ಇಲ್ಲವೆ ಅಭಿವೃದ್ಧಿಗಿಂತ ಹೆಚ್ಚಿನದ್ದು ಸೇರಿದೆ. ಒಂದು ವಸ್ತುವಿನ ಮೇಲೆ “ಪರಿಷ್ಕರಿಸಲಾಗಿದೆ” ಎಂಬ ಪಟ್ಟಿ ಹಚ್ಚಿರಬಹುದು ಅಥವಾ ಜಾಹೀರಾತುಗಳಲ್ಲಿ ಹೇಳಿರಬಹುದು. ಆ ವಸ್ತುವಿನಲ್ಲಿ ಯಾವುದೋ ಒಂದು ಅಂಶ ಹೊಸದಾಗಿರಬಹುದು ಅಥವಾ ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಿರಬಹುದು. ಆದರೆ ವಸ್ತು ಹೆಚ್ಚು ಕಡಿಮೆ ಅದೇ ಆಗಿರುತ್ತದೆ. ಒಂದು ಶಬ್ದಕೋಶದ (ವೈನ್ಸ್ ಎಕ್ಸ್‌ಪೊಸಿಟರಿ ಡಿಕ್ಷನರಿ) ಟಿಪ್ಪಣಿ ವಿವರಿಸುವಂತೆ, ರೋಮನ್ನರಿಗೆ 12:2ರಲ್ಲಿ ಹೇಳಿರುವ “ನವೀಕರಿಸಿಕೊಳ್ಳಿ” ಎಂಬುದರಲ್ಲಿ ಪವಿತ್ರಾತ್ಮ ಶಕ್ತಿಯ ಸಹಾಯದಿಂದ ನಮ್ಮ ಆಲೋಚನಾ ರೀತಿಯನ್ನು ಹೊಸತುಗೊಳಿಸುವುದು ಅಥವಾ ಬದಲಾಯಿಸುವುದು ಸೇರಿದೆ. ಆದಕಾರಣ ಒಬ್ಬ ಕ್ರೈಸ್ತನು ನವೀಕರಿಸಿಕೊಳ್ಳುವುದರ ಅರ್ಥ ಹಾನಿಕರ ರೂಢಿಗಳನ್ನು, ಕೆಟ್ಟ ಮಾತು ಮತ್ತು ಅನೈತಿಕ ನಡತೆಯನ್ನು ಬಿಟ್ಟುಬಿಡುವುದಷ್ಟೆ ಅಲ್ಲ. ಬೈಬಲ್ ಜ್ಞಾನವಿಲ್ಲದ ಕೆಲವರು ಸಹ ಅಂತಹ ಕೆಟ್ಟ ವಿಷಯಗಳನ್ನು ಹೆಚ್ಚುಕಡಿಮೆ ಬಿಟ್ಟುಬಿಟ್ಟಿರುತ್ತಾರೆ. ಹಾಗಾದರೆ ಕ್ರೈಸ್ತರು ತಮ್ಮನ್ನು ‘ನವೀಕರಿಸಿಕೊಳ್ಳುವುದರಲ್ಲಿ’ ಏನು ಒಳಗೂಡಿದೆ?
11. ನವೀಕರಿಸಲ್ಪಡುವುದು ಹೇಗೆಂದು ಪೌಲನು ತೋರಿಸಿಕೊಟ್ಟನು?
11 “ನಿಮ್ಮ ಮನಸ್ಸನ್ನು ಮಾರ್ಪಡಿಸಿ ನವೀಕರಿಸಿಕೊಳ್ಳಿ” ಎಂದು ಪೌಲನು ಬರೆದನು. ಇಲ್ಲಿ “ಮನಸ್ಸು” ನಮ್ಮ ಯೋಚನಾ ಸಾಮರ್ಥ್ಯಗಳಿಗೆ ಸಂಬಂಧಿಸಿದೆ. ಆದರೆ ಬೈಬಲ್‌ನಲ್ಲಿ ಆ ಪದವನ್ನು ಬಳಸಿರುವ ಪ್ರಕಾರ “ಮನಸ್ಸು” ಎನ್ನುವುದರಲ್ಲಿ ಮಾನಸಿಕ ಪ್ರವೃತ್ತಿ, ಮನೋಭಾವ, ವಿವೇಚನಾಶಕ್ತಿ ಸೇರಿವೆ. ಈ ಹಿಂದೆ ರೋಮನ್ನರಿಗೆ ಬರೆದ ಪತ್ರದಲ್ಲಿ ಪೌಲನು “ಅನಂಗೀಕೃತ ಮಾನಸಿಕ ಸ್ಥಿತಿ”ಯನ್ನು ತೋರಿಸಿದ ಜನರ ಕುರಿತು ಹೇಳಿದನು. ಇಂಥವರು “ಅನೀತಿ, ದುಷ್ಟತನ, ದುರಾಶೆ, ಕೆಟ್ಟತನ, ಹೊಟ್ಟೆಕಿಚ್ಚು, ಕೊಲೆ, ಜಗಳ, ಮೋಸ” ಮತ್ತು ಇತರ ಕೆಟ್ಟ ಸಂಗತಿಗಳಲ್ಲಿ ಮಗ್ನರಾಗಿದ್ದರು. (ರೋಮ. 1:28-31) ಇಂಥ ಪರಿಸರದಲ್ಲಿ ಬೆಳೆದು ಬಳಿಕ ಕ್ರೈಸ್ತರಾದವರನ್ನು “ನವೀಕರಿಸಿಕೊಳ್ಳಿ,” “ಮನಸ್ಸನ್ನು ಮಾರ್ಪಡಿಸಿ” ಎಂದು ಪೌಲನು ಏಕೆ ಪ್ರೋತ್ಸಾಹಿಸಿದನೆಂದು ನಮಗೀಗ ತಿಳಿಯಿತಲ್ಲವೆ?
12. (1) ಇಂದಿನ ಜನಸಾಮಾನ್ಯರು ಹೇಗೆ ಯೋಚಿಸುತ್ತಾರೆ? (2) ಈ ಮನೋಭಾವ ಕ್ರೈಸ್ತರಿಗೆ ಹೇಗೆ ಅಪಾಯಕಾರಿಯಾಗಬಹುದು?
12 ದುಃಖಕರವಾಗಿ ಪೌಲನು ವರ್ಣಿಸಿದ್ದಂಥ ಜನರೇ ನಮ್ಮ ಸುತ್ತಮುತ್ತಲಿದ್ದಾರೆ. ಮಟ್ಟಗಳು ಮತ್ತು ತತ್ವಗಳು ಬೇಕೆಂದು ಹೇಳುವವರು ‘ಹಳೇ ಕಾಲದವರು, ಆ ಮಟ್ಟಗಳಿಗನುಸಾರ ನಡೆಯಬೇಕೆಂದು ಇತರರನ್ನು ಒತ್ತಾಯಿಸುವವರು ಆಗಿದ್ದಾರೆ’ ಎಂದು ಜನರು ಯೋಚಿಸುತ್ತಾರೆ. ಅನೇಕ ಶಿಕ್ಷಕರು ಮತ್ತು ಹೆತ್ತವರು ಮಕ್ಕಳಿಗೆ ಇಷ್ಟಬಂದಂತೆ ಮಾಡಲು ಹೇಳುತ್ತಾರೆ. ಮಾತ್ರವಲ್ಲ ತಪ್ಪು, ಸರಿ ಯಾವುದೆಂದು ಅವರವರೇ ನಿರ್ಣಯಿಸಬೇಕೆಂದು ಕೀರ್ತ. 14:1) ಈ ಮನೋಭಾವ ಸತ್ಯ ಕ್ರೈಸ್ತರಿಗೆ ಅಪಾಯಕಾರಿ. ಏಕೆಂದರೆ ಎಚ್ಚರವಾಗಿಲ್ಲದಿದ್ದರೆ ದೇವಪ್ರಭುತ್ವಾತ್ಮಕ ಏರ್ಪಾಡುಗಳನ್ನೂ ಹೀಗೆಯೇ ವೀಕ್ಷಿಸಬಹುದು. ಸಭೆಯ ಏರ್ಪಾಡುಗಳಿಗನುಸಾರ ನಡೆಯದೆ ಇರಬಹುದು. ತಮಗೆ ಇಷ್ಟವಾಗದ ವಿಷಯಗಳ ಬಗ್ಗೆ ದೂರಲೂಬಹುದು. ಇಲ್ಲವೆ ಮನರಂಜನೆ, ಇಂಟರ್‌ನೆಟ್ ಬಳಕೆ ಮತ್ತು ಉನ್ನತ ಶಿಕ್ಷಣದ ಕುರಿತಾದ ಬೈಬಲಾಧರಿತ ಸಲಹೆಯನ್ನು ಸಂಪೂರ್ಣವಾಗಿ ಒಪ್ಪಲಿಕ್ಕಿಲ್ಲ.
ಕಲಿಸುತ್ತಾರೆ. ಸರಿ-ತಪ್ಪು ಯಾವುದೆಂದು ನಿಷ್ಕೃಷ್ಟವಾಗಿ ತಿಳಿಯಲು ಸಾಧ್ಯವೇ ಇಲ್ಲ ಎನ್ನುವುದು ಅವರ ಅಂಬೋಣ. ತಾವು ದೇವಭಕ್ತರೆಂದು ಹೇಳಿಕೊಳ್ಳುವ ಅನೇಕರು ಸಹ, ತಮಗೆ ಯಾವುದು ಸರಿಯೆಂದು ಕಾಣುತ್ತದೋ ಅದನ್ನು ಮಾಡಲು ತಮಗೆ ಸ್ವಾತಂತ್ರ್ಯವಿದೆ, ದೇವರಿಗೆ, ಆತನ ಆಜ್ಞೆಗಳಿಗೆ ಅಧೀನರಾಗಬೇಕಿಲ್ಲವೆಂದು ಯೋಚಿಸುತ್ತಾರೆ. (13. ನಮ್ಮ ವಿಷಯದಲ್ಲಿ ನಾವು ಏಕೆ ಪ್ರಾಮಾಣಿಕ ಪರೀಕ್ಷೆ ಮಾಡಬೇಕು?
13 ಆದುದರಿಂದ, ಇನ್ನು ಮುಂದೆ ನಾವು ಲೋಕದಿಂದ ರೂಪಿಸಲ್ಪಡಬಾರದಾದರೆ, ನಾವು ನಮ್ಮ ಅಂತರಾಳದ ಮನೋಭಾವ ಮತ್ತು ಅನಿಸಿಕೆಗಳನ್ನು, ನಮ್ಮ ಗುರಿಗಳನ್ನು, ಮೌಲ್ಯಗಳನ್ನು ಪ್ರಾಮಾಣಿಕವಾಗಿ ಪರೀಕ್ಷಿಸಬೇಕು. ಇಂಥ ವಿಷಯಗಳು ಬೇರೆಯವರಿಗೆ ಕಾಣದಿರಬಹುದು. ಬೇರೆಯವರು ನಮ್ಮನ್ನು ಒಳ್ಳೆಯವರೆಂದು ಹೇಳಬಹುದು. ಹಾಗಿದ್ದರೂ ಬೈಬಲ್‌ನಿಂದ ಕಲಿತಿರುವ ವಿಷಯಗಳು ನಮ್ಮನ್ನು ಪರಿವರ್ತಿಸುವಂತೆ ಮತ್ತು ಪರಿವರ್ತಿಸುತ್ತಾ ಇರುವಂತೆ ನಾವು ನಿಜವಾಗಿ ಬಿಟ್ಟಿದ್ದೇವಾ ಎಂಬುದು ನಮಗೆ ಮಾತ್ರ ತಿಳಿದಿರುತ್ತದೆ.—ಯಾಕೋಬ 1:23-25 ಓದಿ.
ನವೀಕರಿಸಲ್ಪಡುವುದು ಹೇಗೆ?
14. ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಯಾವುದು ನಮಗೆ ಸಹಾಯಮಾಡುತ್ತದೆ?
14 ನವೀಕರಿಸಲ್ಪಡುವುದರಲ್ಲಿ ನಮ್ಮ ಹೃದಯದಲ್ಲಿ ಏನಿದೆಯೋ ಅದನ್ನು ಬದಲಾಯಿಸಿಕೊಳ್ಳುವುದು ಸೇರಿದೆ. ಆದಕಾರಣ ನಮ್ಮ ಹೃದಯದಾಳವನ್ನು ತಲಪುವ ಒಂದು ವಿಷಯ ನಮಗೆ ಅಗತ್ಯ. ಅದಕ್ಕೆ ಯಾವುದು ಸಹಾಯ ಮಾಡಬಲ್ಲದು? ನಾವು ಬೈಬಲನ್ನು ಅಧ್ಯಯನ ಮಾಡಿದಾಗ ಯೆಹೋವನು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆಂದು ನಾವು ತಿಳಿಯುತ್ತೇವೆ. ಓದಿದ್ದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ನಮ್ಮ ಹೃದಯದಲ್ಲಿ ಏನಿದೆ ಎಂದು ತೋರಿಸುತ್ತದೆ. ಇದು, ನಾವು “ದೇವರ . . . ಪರಿಪೂರ್ಣವಾದ ಚಿತ್ತ”ದ ಪ್ರಕಾರ ನಡೆಯಬೇಕಾದರೆ ಯಾವ ಹೊಂದಾಣಿಕೆಗಳನ್ನು ಮಾಡಬೇಕು ಎಂಬುದನ್ನು ತಿಳಿಯಲು ನಮಗೆ ಸಹಾಯಮಾಡುತ್ತದೆ.—ರೋಮ. 12:2; ಇಬ್ರಿ. 4:12.
15. ಯೆಹೋವನು ನಮ್ಮನ್ನು ರೂಪಿಸುವಾಗ ನಾವು ಯಾವ ರೀತಿಯಲ್ಲಿ ನವೀಕರಿಸಲ್ಪಡುತ್ತೇವೆ?
15 ಯೆಶಾಯ 64:8 ಓದಿ. ಯೆಶಾಯ ಪ್ರವಾದಿ ಬಳಸಿದ ಪದಚಿತ್ರಣ ಒಂದು ಪ್ರಾಯೋಗಿಕ ವಿಷಯವನ್ನು ನಮ್ಮ ಗಮನಕ್ಕೆ ತರುತ್ತದೆ. ಕುಂಬಾರನಾದ ಯೆಹೋವನು ಜೇಡಿಮಣ್ಣಾದ ನಮ್ಮನ್ನು ಹೇಗೆ ರೂಪಿಸುತ್ತಾನೆ ಎಂದು ಅದು ತಿಳಿಸುತ್ತದೆ. ರೂಪಿಸುವುದು ಎನ್ನುವಾಗ ನಮ್ಮನ್ನು ಹೆಚ್ಚು ಆಕರ್ಷಕರಾಗಿ ಕಾಣುವಂತೆ ಇಲ್ಲವೆ ಹೆಚ್ಚು ಸುಂದರ ಮೈಕಟ್ಟು ಹೊಂದುವಂತೆ ರೂಪಿಸುವುದಲ್ಲ. ಯೆಹೋವನು ಶಾರೀರಿಕ ತರಬೇತನ್ನಲ್ಲ, ಆಧ್ಯಾತ್ಮಿಕ ತರಬೇತನ್ನು ಒದಗಿಸುತ್ತಾನೆ. ಆತನು ನಮ್ಮನ್ನು ರೂಪಿಸುವಂತೆ ನಾವು ಬಿಡುವಲ್ಲಿ ಅದರಿಂದ ನಾವು ಆಂತರಿಕವಾಗಿ ಇಲ್ಲವೆ ಆಧ್ಯಾತ್ಮಿಕವಾಗಿ ನವೀಕರಿಸಲ್ಪಡುತ್ತೇವೆ. ಲೌಕಿಕ ಪ್ರಭಾವದ ವಿರುದ್ಧ ಹೋರಾಡಲು ನಮಗೆ ಬೇಕಾಗಿರುವುದು ಇದೇ. ಆದರೆ ಈ ರೂಪಿಸುವ ವಿಧಾನ ಕಾರ್ಯನಡೆಸುವುದು ಹೇಗೆ?
16, 17. (1) ಕುಂಬಾರನು ಉತ್ತಮ ಪಾತ್ರೆಗಳನ್ನು ಮಾಡಲು ಮಣ್ಣನ್ನು ಏನು ಮಾಡುತ್ತಾನೆಂದು ವರ್ಣಿಸಿ. (2) ಯೆಹೋವನ ದೃಷ್ಟಿಯಲ್ಲಿ ನಾವು ಬೆಲೆಬಾಳುವ ಪಾತ್ರೆಯಾಗಲು ದೇವರ ವಾಕ್ಯ ಹೇಗೆ ಸಹಾಯಮಾಡುತ್ತದೆ?
16 ಉತ್ತಮ ಮಟ್ಟದ ಪಾತ್ರೆ ರಚಿಸಲು, ಕುಂಬಾರನು ಉತ್ತಮ ಗುಣಮಟ್ಟದ ಜೇಡಿಮಣ್ಣನ್ನು ಬಳಸುತ್ತಾನೆ. ಆದರೂ ಅವನು ಎರಡು ವಿಷಯಗಳನ್ನು ಮಾಡಬೇಕು. ಮೊದಲು ಆ ಜೇಡಿಮಣ್ಣಿನಲ್ಲಿರುವ ಇತರ ವಸ್ತುಗಳನ್ನು ಇಲ್ಲವೆ ಖನಿಜಾಂಶಗಳನ್ನು ತೆಗೆದು ಶುದ್ಧಗೊಳಿಸಬೇಕು. ಬಳಿಕ ಆ ಜೇಡಿಮಣ್ಣಿಗೆ ತಕ್ಕ ಪ್ರಮಾಣದ ನೀರನ್ನು ಸೇರಿಸಿ ಚೆನ್ನಾಗಿ ಹದಗೊಳಿಸಬೇಕು. ಆಗ ಒತ್ತಡದಲ್ಲಿ ಅದು ರೂಪಿಸಲ್ಪಡುವಾಗ ಚೆನ್ನಾಗಿ ರೂಪ ಪಡೆಯುತ್ತದೆ.
17 ಜೇಡಿಮಣ್ಣಿನಿಂದ ಕಲ್ಮಶವನ್ನು ತೆಗೆಯುವಾಗ ಮತ್ತು ಮಣ್ಣನ್ನು ಹದಗೊಳಿಸುವಾಗ ನೀರನ್ನು ಬಳಸಲಾಗುತ್ತದೆ. ಇದರಿಂದ ಕುಂಬಾರನಿಗೆ ತನಗೆ ಬೇಕಾದ ಪಾತ್ರೆಯನ್ನು, ನಾಜೂಕಾದ ಪಾತ್ರೆಯನ್ನೂ ರೂಪಿಸಲು ಸಾಧ್ಯವಾಗುವುದು. ನೀರಿನಂತೆಯೇ ದೇವರ ವಾಕ್ಯ ನಮ್ಮ ಜೀವಿತದಲ್ಲಿ ಹೇಗೆ ಪಾತ್ರವಹಿಸುತ್ತದೆ? ದೇವರನ್ನು ತಿಳಿಯುವುದಕ್ಕಿಂತ ಮುಂಚೆ ನಮ್ಮಲ್ಲಿದ್ದ ಹಳೇ ಯೋಚನೆಗಳನ್ನು ತೆಗೆದುಹಾಕುವಂತೆ ಮತ್ತು ಆತನ ದೃಷ್ಟಿಯಲ್ಲಿ ಬೆಲೆಬಾಳುವ ಪಾತ್ರೆಯಾಗುವಂತೆ ಸಹಾಯಮಾಡಬಲ್ಲದು. (ಎಫೆ. 5:26) ಬೈಬಲನ್ನು ಪ್ರತಿ ದಿನ ಓದುವಂತೆ ಮತ್ತು ಕೂಟಗಳಿಗೆ ಕ್ರಮವಾಗಿ ಹಾಜರಾಗುವಂತೆ ನಮಗೆ ಎಷ್ಟು ಸಾರಿ ಪ್ರೋತ್ಸಾಹ ಕೊಡಲಾಗಿದೆ ಎಂದು ಯೋಚಿಸಿ. ಏಕೆ ಹೀಗೆ ಪ್ರೋತ್ಸಾಹಿಸಲಾಗಿದೆ? ಏಕೆಂದರೆ, ಹೀಗೆ ಮಾಡುವ ಮೂಲಕ ಯೆಹೋವನು ನಮ್ಮನ್ನು ರೂಪಿಸುವಂತೆ ನಾವು ಬಿಟ್ಟುಕೊಡುತ್ತೇವೆ.—ಕೀರ್ತ. 1:2; ಅ. ಕಾ. 17:11; ಇಬ್ರಿ. 10:24, 25.
18. (1) ದೇವರ ವಾಕ್ಯ ನಮ್ಮ ಮೇಲೆ ಪ್ರಭಾವಬೀರಿ ನಮ್ಮನ್ನು ನವೀಕರಿಸಬೇಕಾದರೆ ಮನನ ಏಕೆ ಅಗತ್ಯ? (2) ಹಾಗೆ ಮಾಡಲು ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕು?
18 ದೇವರ ವಾಕ್ಯ ನಮ್ಮನ್ನು ನವೀಕರಿಸಬೇಕಾದರೆ ಬೈಬಲನ್ನು ಕ್ರಮವಾಗಿ ಓದಿ ಅದರಿಂದ ಕಲಿಯುವುದು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚು ಮಾಡಬೇಕು. ಅನೇಕರು ಆಗಾಗ ಬೈಬಲನ್ನು ಓದಿ, ಅದರಲ್ಲೇನಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ನೀವು ಕ್ಷೇತ್ರ ಸೇವೆಗೆ ಹೋದಾಗ ಇಂಥವರನ್ನು ಭೇಟಿಯಾಗಿರಬಹುದು. ಕೆಲವರಂತೂ ಬೈಬಲ್ ವಚನಭಾಗಗಳನ್ನು ಬಾಯಿಪಾಠವಾಗಿ ಹೇಳುತ್ತಾರೆ. * ಆದರೆ ಅದು ಅವರ ಯೋಚನೆ ಮತ್ತು ಜೀವನರೀತಿಯನ್ನು ಬದಲಾಯಿಸಿರಲಿಕ್ಕಿಲ್ಲ. ಏಕೆ? ದೇವರ ವಾಕ್ಯ ಒಬ್ಬನ ಮೇಲೆ ಪ್ರಭಾವಬೀರಿ ಅವನನ್ನು ನವೀಕರಿಸಬೇಕಾದರೆ ಅದು ಅವನ ಹೃದಯದಾಳಕ್ಕೆ ಮುಟ್ಟುವಂತೆ ಬಿಡಬೇಕು. ಆದಕಾರಣ ನಾವೇನು ಕಲಿಯುತ್ತಿದ್ದೇವೋ ಅದರ ಕುರಿತು ಯೋಚಿಸಲು ಸಮಯ ವ್ಯಯಿಸಬೇಕು. ನಾವು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಈ ವಿಷಯ ಕೇವಲ ಒಂದು ಧಾರ್ಮಿಕ ಬೋಧನೆಯಷ್ಟೇ ಅಲ್ಲ ಎಂದು ನನಗೆ ಮನದಟ್ಟಾಗಿದೆಯೋ? ಅದು ಸತ್ಯವೆಂಬುದರ ರುಜುವಾತನ್ನು ನನ್ನ ಸ್ವಂತ ಜೀವನದಲ್ಲೇ ನೋಡಿದ್ದೇನಾ? ಇದಲ್ಲದೆ, ನಾನು ಕಲಿತದ್ದನ್ನು ಕೇವಲ ಇತರರಿಗೆ ಕಲಿಸುವ ವಿಷಯವೆಂಬಂತೆ ನೋಡದೆ, ನನ್ನ ಸ್ವಂತ ಜೀವಿತದಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸುತ್ತೇನಾ? ಯೆಹೋವನು ನನ್ನೊಂದಿಗೆ ವೈಯಕ್ತಿಕವಾಗಿ ಮಾತಾಡುತ್ತಿದ್ದಾನೆಂದು ನನಗೆ ಅನಿಸುತ್ತಿದೆಯೆ?’ ಇಂಥ ಪ್ರಶ್ನೆಗಳನ್ನು ಕೇಳಿಕೊಂಡು ಮನನ ಮಾಡುವಲ್ಲಿ, ಯೆಹೋವನ ಕಡೆಗಿನ ನಮ್ಮ ಅನಿಸಿಕೆಗಳು ಗಾಢವಾಗುವವು. ಆತನ ಮೇಲೆ ಪ್ರೀತಿ ಹೆಚ್ಚಾಗುವುದು. ಹೀಗೆ ನಮ್ಮ ಹೃದಯ ಸ್ಪರ್ಶಿಸಲ್ಪಟ್ಟು ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವವು.—ಜ್ಞಾನೋ. 4:23; ಲೂಕ 6:45.
19, 20. ಬೈಬಲಿನ ಯಾವ ಸಲಹೆಯನ್ನು ಅನ್ವಯಿಸಿಕೊಳ್ಳುವುದರಿಂದ ನಮಗೆ ಪ್ರಯೋಜನ ಸಿಗುತ್ತದೆ?
19 ದೇವರ ವಾಕ್ಯವನ್ನು ಪ್ರತಿದಿನ ಓದಿ ಧ್ಯಾನಿಸುವುದು, ಪೌಲನು ಹೇಳಿರುವ ಈ ವಿಷಯವನ್ನು ಮಾಡುತ್ತಾ ಇರಲು ನಮ್ಮನ್ನು ಪ್ರಚೋದಿಸುವುದು: “ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿರಿ ಮತ್ತು ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ; ಈ ವ್ಯಕ್ತಿತ್ವವು . . . ನಿಷ್ಕೃಷ್ಟ ಜ್ಞಾನದ ಮೂಲಕ ನೂತನಗೊಳಿಸಲ್ಪಡುತ್ತಿದೆ.” (ಕೊಲೊ. 3:9, 10) ದೇವರ ವಾಕ್ಯದಲ್ಲಿರುವ ವಿಷಯಗಳನ್ನು ಅರ್ಥಮಾಡಿಕೊಂಡು ಅನ್ವಯಿಸುವಾಗ ನಾವು ಹೊಸ ಕ್ರೈಸ್ತ ವ್ಯಕ್ತಿತ್ವವನ್ನು ಧರಿಸಿಕೊಳ್ಳುತ್ತೇವೆ. ಇದು ಸೈತಾನನ ಮೋಸಕರವಾದ ಕುತಂತ್ರಗಳಿಂದ ನಮ್ಮನ್ನು ಕಾಪಾಡಿಕೊಳ್ಳಲು ಸಹಾಯಮಾಡುವುದು.
20 “ನಿಮಗಿದ್ದ ಇಚ್ಛೆಗಳಿಗನುಸಾರ ನಡೆಯುತ್ತಿದ್ದಂತೆ ಈಗ ನಡೆಯುವುದನ್ನು ಬಿಟ್ಟುಬಿಡಿರಿ. . . . ವಿಧೇಯ ಮಕ್ಕಳಂತೆ ನಿಮ್ಮ ಎಲ್ಲ ನಡವಳಿಕೆಯಲ್ಲಿ ನೀವು . . . ಪವಿತ್ರರಾಗಿರಬೇಕು” ಎಂದು ಅಪೊಸ್ತಲ ಪೇತ್ರನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (1 ಪೇತ್ರ 1:14, 15) ಹಿಂದೆ ನಮ್ಮಲ್ಲಿದ್ದ ಯೋಚನಾಧಾಟಿ ಮತ್ತು ಮನೋಭಾವಗಳನ್ನು ತೆಗೆದುಹಾಕಲು ನಾವು ಸಾಧ್ಯವಿರುವುದನ್ನೆಲ್ಲ ಮಾಡುತ್ತಾ ನಮ್ಮನ್ನು ನವೀಕರಿಸಿಕೊಳ್ಳುವಲ್ಲಿ ಆಶೀರ್ವಾದಗಳನ್ನು ಪಡೆಯುತ್ತೇವೆ. ಇದನ್ನೇ ನಾವು ಮುಂದಿನ ಲೇಖನದಲ್ಲಿ ನೋಡುವೆವು.
[ಪಾದಟಿಪ್ಪಣಿ]
^ ಪ್ಯಾರ. 18 1994, ಫೆಬ್ರವರಿ 1ರ ಕಾವಲಿನಬುರುಜು, ಪುಟ 10, ಪ್ಯಾರ 7ರಲ್ಲಿರುವ ಉದಾಹರಣೆ ನೋಡಿ.
[ಅಧ್ಯಯನ ಪ್ರಶ್ನೆಗಳು]
[ಪುಟ 17ರಲ್ಲಿರುವ ಚಿತ್ರ]
[ಪುಟ 18, 19ರಲ್ಲಿರುವ ಚಿತ್ರ]
ಅನೇಕರು ಸೈತಾನನ ಲೋಕದಿಂದ ಹೊರಬಂದು ತಮ್ಮನ್ನು ನವೀಕರಿಸಿಕೊಳ್ಳುವುದು ಅವಶ್ಯ (ಪ್ಯಾರ 9)
[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]
‘ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ನಿಮ್ಮಿಂದ ತೆಗೆದುಹಾಕಿರಿ.’—ಎಫೆ. 4:31
[ಪುಟ 21ರಲ್ಲಿರುವ ಚಿತ್ರ]
ನವೀಕರಿಸಿಕೊಳ್ಳುವುದರಿಂದ ನಿಮ್ಮ ಸಮಸ್ಯೆಗಳನ್ನು ಹಿಂದಿಗಿಂತ ಹೆಚ್ಚು ಉತ್ತಮವಾಗಿ ನಿಭಾಯಿಸಬಲ್ಲಿರಿ (ಪ್ಯಾರ 18)