ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುವುದನ್ನು ಗಣ್ಯಮಾಡಿ

ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುವುದನ್ನು ಗಣ್ಯಮಾಡಿ

“ಯೆಹೋವನ ದೃಷ್ಟಿಯು ಎಲ್ಲೆಲ್ಲಿಯೂ ಇರುವದು; ಆತನು ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಲೇ ಇರುವನು.”—ಜ್ಞಾನೋ. 15:3.

1, 2. ಯೆಹೋವನು ನಮ್ಮನ್ನು ಕಾಳಜಿಯಿಂದ ಗಮನಿಸುವುದು ವಾಹನ ಸಂಚಾರದ ನಿಗಾವಹಿಸುವ ಕ್ಯಾಮೆರಾಗಳಂತೆ ಅಲ್ಲ ಹೇಗೆ?

ಅನೇಕ ದೇಶಗಳಲ್ಲಿ ವಾಹನ ಸಂಚಾರದ ಮೇಲೆ ನಿಗಾ ಇಡಲು ಹಾಗೂ ಅಪಘಾತಗಳ ಚಿತ್ರಗಳನ್ನು ಸೆರೆಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ. ಯಾರಾದರೂ ಅಪಘಾತ ಮಾಡಿ ಪರಾರಿಯಾಗಿರುವಲ್ಲಿ ಕ್ಯಾಮೆರಾ ಸೆರೆಹಿಡಿದಿರುವ ಫೋಟೋಗಳಿಂದ ಅಪರಾಧಿಯನ್ನು ಗುರುತಿಸಿ ದಸ್ತಗಿರಿ ಮಾಡಲು ಪೊಲೀಸರಿಗೆ ಸಾಧ್ಯವಾಗುತ್ತದೆ. ಹೀಗೆ ಎಲ್ಲ ಕಡೆಗಳಲ್ಲೂ ಕ್ಯಾಮೆರಾ ಕಣ್ಣುಗಳು ಜನರ ಚಲನವಲನಗಳ ಮೇಲಿರುವುದರಿಂದ ದುಷ್ಕೃತ್ಯ ಮಾಡಿದವರು ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

2 ಕ್ಯಾಮೆರಾದ ಈ ಕೆಲಸಕ್ಕೂ ನಮ್ಮ ಪ್ರೀತಿಯ ತಂದೆಯಾದ ಯೆಹೋವನು ನಮ್ಮನ್ನು ಗಮನಿಸುವುದಕ್ಕೂ ವ್ಯತ್ಯಾಸವಿದೆಯಾ? ಬೈಬಲ್‌ ಹೇಳುವಂತೆ ಯೆಹೋವನ ದೃಷ್ಟಿಯು “ಎಲ್ಲೆಲ್ಲಿಯೂ” ಇದೆ. (ಜ್ಞಾನೋ. 15:3) ಆದರೆ ಇದರರ್ಥ ಆತನು ನಾವೇನು ತಪ್ಪು ಮಾಡುತ್ತೇವೆ ಎಂದು ಪರೀಕ್ಷಿಸಲಿಕ್ಕಾಗಿ ನಮ್ಮ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡುತ್ತಾನೆಂದಾ? ಆತನ ನಿಯಮಗಳನ್ನು ನಾವು ಮುರಿದೊಡನೆ ದಂಡಿಸಲು ಕಾದಿರುತ್ತಾನೆಂದಾ? (ಯೆರೆ. 16:17; ಇಬ್ರಿ. 4:13) ಇಲ್ಲವೇ ಇಲ್ಲ. ಆತನು ನಮ್ಮನ್ನು ಗಮನಿಸುತ್ತಿರುವುದಕ್ಕೆ ಮುಖ್ಯ ಕಾರಣ ನಮ್ಮಲ್ಲಿ ಒಬ್ಬೊಬ್ಬರನ್ನೂ ಆತನು ಪ್ರೀತಿಸುವುದರಿಂದ ಹಾಗೂ ನಮಗೆ ಒಳ್ಳೇದಾಗಬೇಕೆಂದು ಬಯಸುವುದರಿಂದ.—1 ಪೇತ್ರ 3:12.

3. ಯೆಹೋವನು ನಮ್ಮ ಕಾಳಜಿ ವಹಿಸುವ ಯಾವ ಐದು ವಿಧಗಳನ್ನು ಚರ್ಚಿಸಲಿದ್ದೇವೆ?

3 ಯೆಹೋವನು ನಮ್ಮನ್ನು ಗಮನಿಸುವುದು ನಮ್ಮ ಮೇಲೆ ಪ್ರೀತಿಯಿರುವುದರಿಂದ ಎಂಬುದನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬಹುದು? ಇದನ್ನು ತಿಳಿಯಲಿಕ್ಕಾಗಿ ಆತನು ನಮ್ಮ ಕಾಳಜಿ ವಹಿಸುವ ಐದು ವಿಧಗಳನ್ನು ನೋಡೋಣ. (1) ಕೆಟ್ಟದ್ದರ ಕಡೆಗೆ ಮನಸ್ಸು  ವಾಲುವಾಗ ನಮ್ಮನ್ನು ಎಚ್ಚರಿಸುತ್ತಾನೆ (2) ತಪ್ಪು ಹೆಜ್ಜೆ ತಕ್ಕೊಂಡಾಗ ನಮ್ಮನ್ನು ತಿದ್ದುತ್ತಾನೆ (3) ಬೈಬಲಿನಲ್ಲಿರುವ ತತ್ವಗಳ ಮುಖಾಂತರ ನಮ್ಮನ್ನು ಮಾರ್ಗದರ್ಶಿಸುತ್ತಾನೆ (4) ನಾನಾ ತರದ ಸಂಕಷ್ಟಗಳಲ್ಲಿರುವಾಗ ನಮಗೆ ನೆರವಾಗುತ್ತಾನೆ (5) ನಾವು ಒಳ್ಳೇದನ್ನು ಮಾಡುವಾಗ ಪ್ರತಿಫಲ ಕೊಡುತ್ತಾನೆ.

ನಮ್ಮನ್ನು ಗಮನಿಸಿ ಎಚ್ಚರಿಸುವ ದೇವರು

4. ‘ಪಾಪವು ಬಾಗಲಲ್ಲಿ ಹೊಂಚಿಕೊಂಡಿದೆ’ ಎಂದು ಯೆಹೋವನು ಕಾಯಿನನನ್ನು ಎಚ್ಚರಿಸಿದ್ದರ ಉದ್ದೇಶವೇನು?

4 ಮೊದಲಾಗಿ, ಕೆಟ್ಟದ್ದನ್ನು ಮಾಡುವ ಯೋಚನೆ ನಮಗೆ ಬಂದಾಗ ದೇವರು ನಮ್ಮನ್ನು ಹೇಗೆ ಎಚ್ಚರಿಸುತ್ತಾನೆಂದು ನೋಡೋಣ. (1 ಪೂರ್ವ. 28:9) ಇದನ್ನು ಅರ್ಥಮಾಡಿಕೊಳ್ಳಲು ಕಾಯಿನನ ಉದಾಹರಣೆ ನೆರವಾಗುತ್ತದೆ. ತಾನು ದೇವರ ಮೆಚ್ಚುಗೆಗೆ ಪಾತ್ರನಾಗದಿದ್ದಾಗ ಕಾಯಿನನು “ಬಹು ಕೋಪಗೊಂಡನು.” (ಆದಿಕಾಂಡ 4:3-7 ಓದಿ.) ಆಗ ಯೆಹೋವನು ಅವನಿಗೆ ‘ಒಳ್ಳೇ ಕೆಲಸ ಮಾಡುವಂತೆ’ ಉತ್ತೇಜಿಸಿದನು. ಹಾಗೆ ಮಾಡದಿದ್ದಲ್ಲಿ ‘ಪಾಪವು ಬಾಗಲಲ್ಲಿ ಹೊಂಚಿಕೊಂಡಿರುವದು’ ಎಂದು ಎಚ್ಚರಿಸಿ “ನೀನು ಅದನ್ನು ವಶಮಾಡಿಕೊಳ್ಳಬೇಕು” ಅಂದರೆ ಜಯಿಸಬೇಕು ಎಂದೂ ಹೇಳಿದನು. ಏಕೆಂದರೆ ಕಾಯಿನನ ‘ತಲೆ ಎತ್ತಲ್ಪಡಬೇಕೆಂದು’ ಅಂದರೆ ಅವನು ಪುನಃ ತನ್ನ ಮೆಚ್ಚಿಕೆಗೆ ಪಾತ್ರನಾಗಬೇಕೆಂದು ಯೆಹೋವನು ಬಯಸಿದನು. ಈ ಎಚ್ಚರಿಕೆಗೆ ಕಿವಿಗೊಡುತ್ತಿದ್ದರೆ ಯೆಹೋವನೊಂದಿಗಿನ ಅವನ ಸಂಬಂಧ ಹಾಳಾಗುತ್ತಿರಲಿಲ್ಲ.

5. ನಮ್ಮಲ್ಲಿ ಕೆಟ್ಟ ಪ್ರವೃತ್ತಿ, ಹಂಬಲಗಳಿದ್ದರೆ ಯೆಹೋವನು ನಮ್ಮನ್ನು ಹೇಗೆ ಎಚ್ಚರಿಸುತ್ತಾನೆ?

5 ನಮ್ಮ ಬಗ್ಗೆ ಏನು? ಯೆಹೋವನು ನಮ್ಮ ಹೃದಯದ ಒಳಹೊಕ್ಕು ನೋಡುತ್ತಾನೆ. ಹಾಗಾಗಿ ನಾವಾತನಿಂದ ನಮ್ಮ ಇಂಗಿತಗಳನ್ನು, ಬಯಕೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ನಾವು ನೀತಿಯ ಮಾರ್ಗದಲ್ಲಿ ನಡೆಯಬೇಕೆಂಬುದೇ ನಮ್ಮ ಪ್ರೀತಿಯ ತಂದೆಯಾದ ಯೆಹೋವನ ಆಸೆ. ಆದರೂ ಹಾಗೆ ಮಾಡುವಂತೆ ಆತನು ನಮ್ಮನ್ನು ಒತ್ತಾಯಿಸುವುದಿಲ್ಲ. ಬದಲಿಗೆ ತಪ್ಪು ದಾರಿಯಲ್ಲಿ ಹೆಜ್ಜೆಯಿಡುವ ಯೋಚನೆ ನಮ್ಮಲ್ಲಿ ಬಂದಾಗಲೇ ತನ್ನ ವಾಕ್ಯವಾದ ಬೈಬಲಿನ ಮೂಲಕ ನಮಗೆ ಎಚ್ಚರಿಕೆ ಕೊಡುತ್ತಾನೆ. ಹೇಗೆ? ಪ್ರತಿದಿನ ಬೈಬಲ್‌ ಓದುವಾಗ ನಮ್ಮ ಕೆಟ್ಟ ಪ್ರವೃತ್ತಿಗಳನ್ನು, ಹಂಬಲಗಳನ್ನು ಸರಿಪಡಿಸಿಕೊಳ್ಳಲು ಸಹಾಯಮಾಡುವ ವಿಷಯಗಳನ್ನು ಆಗಾಗ್ಗೆ ನಮ್ಮ ಗಮನಕ್ಕೆ ತರುತ್ತಾನೆ. ಅಲ್ಲದೆ ಎಷ್ಟೋ ಬಾರಿ ಯೆಹೋವನಿಗೆ ಮಾತ್ರ ತಿಳಿದಿರುವ ನಮ್ಮ ಸಮಸ್ಯೆಯನ್ನು ಹೇಗೆ ಜಯಿಸಬಹುದೆಂದು ಕ್ರೈಸ್ತ ಸಾಹಿತ್ಯದಲ್ಲಿ ಬರುತ್ತದೆ. ಅಷ್ಟೇ ಅಲ್ಲ, ಸಭಾ ಕೂಟಗಳಲ್ಲಿ ನಮಗೆ ತಕ್ಕ ಸಮಯದಲ್ಲಿ ಸಲಹೆಗಳನ್ನು ಕೊಡಲಾಗುತ್ತದೆ.

6, 7. (ಎ) ಲಕ್ಷಗಟ್ಟಲೆ ಜನರಿಗಾಗಿ ತಯಾರಿಸಿರುವ ಆಧ್ಯಾತ್ಮಿಕ ವಿಷಯಗಳು ಯೆಹೋವನಿಗೆ ನಿಮ್ಮ ಕಡೆ ಕಾಳಜಿಯಿದೆ ಎಂದು ಹೇಗೆ ತೋರಿಸುತ್ತವೆ? (ಬಿ) ಯೆಹೋವನು ನಿಮಗೆ ವೈಯಕ್ತಿಕವಾಗಿ ತೋರಿಸುವ ಕಾಳಜಿಯಿಂದ ನೀವು ಹೇಗೆ ಪ್ರಯೋಜನ ಹೊಂದಬಹುದು?

6 ಈ ಎಲ್ಲ ಎಚ್ಚರಿಕೆಗಳು ಯೆಹೋವನು ನಮ್ಮನ್ನು ವೈಯಕ್ತಿಕವಾಗಿ ಪ್ರೀತಿ ಕಾಳಜಿಯಿಂದ ಗಮನಿಸುತ್ತಿದ್ದಾನೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಾಗಿವೆ. ಬೈಬಲಿನಲ್ಲಿರುವ ಮಾತುಗಳು ಎಷ್ಟೋ ಶತಮಾನಗಳಿಂದಲೂ ಇವೆ, ದೇವರ ಸಂಘಟನೆಯಿಂದ ಬರುವ ಸಾಹಿತ್ಯ ಲಕ್ಷಾಂತರ ಜನರಿಗಾಗಿ ಬರೆಯಲಾಗಿವೆ, ಕೂಟಗಳಲ್ಲಿ ಸಹ ಇಡೀ ಸಭೆಯನ್ನು ಮನಸ್ಸಿನಲ್ಲಿಟ್ಟು ಸಲಹೆ ನೀಡಲಾಗುತ್ತದೆ ಎಂಬುದು ನಿಜ. ಹಾಗಿದ್ದರೂ ನೀವು ನಿಮ್ಮ ಪ್ರವೃತ್ತಿ, ಹೇತುಗಳನ್ನು ಸರಿಪಡಿಸಿಕೊಳ್ಳುವಂತೆ ಯೆಹೋವನು ನಿಮ್ಮ ಗಮನವನ್ನು ತನ್ನ ವಾಕ್ಯದ ಕಡೆಗೆ ಸೆಳೆದಿದ್ದಾನೆ. ಇದು ತಾನೇ ಯೆಹೋವನ ವೈಯಕ್ತಿಕ ಪ್ರೀತಿಭರಿತ ಕಾಳಜಿಗೆ ಸಾಕ್ಷ್ಯವಾಗಿದೆ.

ಸುತ್ತಲಿರುವ ಅಪಾಯಗಳಿಂದ ತಪ್ಪಿಸಿಕೊಳ್ಳಲು ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿ ನಮಗೆ ನೆರವಾಗುತ್ತದೆ (ಪ್ಯಾರ 6, 7 ನೋಡಿ)

7 ಯೆಹೋವನು ಕೊಡುವ ಎಚ್ಚರಿಕೆಯಿಂದ ಪ್ರಯೋಜನ ಹೊಂದಬೇಕಾದರೆ ಆತನಿಗೆ ನಮ್ಮ ಬಗ್ಗೆ ನಿಜವಾಗಿಯೂ ಕಾಳಜಿಯಿದೆ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಅನಂತರ ಆ ಎಚ್ಚರಿಕೆಗೆ ಕಿವಿಗೊಟ್ಟು ದೇವರು ಇಷ್ಟಪಡದ ಎಲ್ಲ ಆಲೋಚನೆಗಳನ್ನು ನಮ್ಮಿಂದ ತೆಗೆದುಹಾಕಲು ಸರ್ವಪ್ರಯತ್ನ ಮಾಡಬೇಕು. (ಯೆಶಾಯ 55:6, 7 ಓದಿ.) ಎಚ್ಚರಿಕೆಗೆ ನಾವು ಕಿವಿಗೊಟ್ಟರೆ ಮುಂದೆ ನೋವುಣ್ಣುವುದು ತಪ್ಪುತ್ತದೆ. ಒಂದುವೇಳೆ ಕಿವಿಗೊಡದಿದ್ದರೆ? ಆಗಲೂ ನಮ್ಮ ಪ್ರೀತಿಯ ತಂದೆ ನಮಗೆ ಸಹಾಯ ಮಾಡುತ್ತಾನೋ? ನೋಡೋಣ.

ಕಾಳಜಿವಹಿಸುತ್ತಾ ತಿದ್ದುವ ತಂದೆ

8, 9. ಯೆಹೋವನು ತನ್ನ ಸೇವಕರ ಮೂಲಕ ನಮಗೆ ಸಲಹೆ ಕೊಡುವುದು ಆತನಿಗೆ ನಮ್ಮ ಮೇಲಿರುವ ಗಾಢ ಪ್ರೀತಿಯನ್ನು ಹೇಗೆ ತೋರಿಸುತ್ತದೆ? ಉದಾಹರಣೆ ಕೊಡಿ.

8 ನಮಗೆ ತಿದ್ದುಪಾಟು ಸಿಕ್ಕಿದಾಗ ಯೆಹೋವನಿಗೆ ನಮ್ಮ ಬಗ್ಗೆ ಎಷ್ಟು ಕಳಕಳಿಯಿದೆ ಎನ್ನುವುದು ಚೆನ್ನಾಗಿ ತಿಳಿಯುತ್ತದೆ. (ಇಬ್ರಿಯ 12:5, 6 ಓದಿ.) ಯಾರಾದರೂ ಸಲಹೆ, ಶಿಸ್ತು ಕೊಟ್ಟಾಗ ನಮಗೆ ಸಂತೋಷವಾಗುವುದಿಲ್ಲ ನಿಜ. (ಇಬ್ರಿ. 12:11) ಆದರೆ ಸಲಹೆ ಕೊಟ್ಟ ವ್ಯಕ್ತಿ ಅದಕ್ಕಾಗಿ ಏನೆಲ್ಲ ಮಾಡಿದ್ದಾನೆಂದು ಸ್ವಲ್ಪ ಯೋಚಿಸಿ. ನೀವು ಮಾಡುತ್ತಿರುವ ವಿಷಯ ಯೆಹೋವ ದೇವರೊಂದಿಗಿರುವ ಸಂಬಂಧವನ್ನು ಹಾಳುಮಾಡಬಹುದೆಂದು ಆ ವ್ಯಕ್ತಿ ತಿಳಿದುಕೊಂಡಿರುತ್ತಾನೆ. ನಿಮ್ಮ ಭಾವನೆಗಳ ಬಗ್ಗೆ ಸಹ ಅವನು ತುಂಬ ಚಿಂತಿಸಿರುತ್ತಾನೆ. ದೇವರನ್ನು ಮೆಚ್ಚಿಸಲು ನೀವು ಯಾವ ಬದಲಾವಣೆ ಮಾಡಿಕೊಳ್ಳಬೇಕೆಂದು ಬೈಬಲಿನಿಂದ ಸಲಹೆ ಕೊಡಲಿಕ್ಕಾಗಿ ಶ್ರಮ ವಹಿಸಿರುತ್ತಾನೆ, ಸಮಯ ವ್ಯಯಿಸಿರುತ್ತಾನೆ. ಆ ಸಲಹೆ ಕೊಟ್ಟ ವ್ಯಕ್ತಿಗೆ ನಿಮ್ಮ ಬಗ್ಗೆ  ಎಷ್ಟೊಂದು ಕಾಳಜಿ ಇದೆಯೋ ಅದಕ್ಕಿಂತ ಹೆಚ್ಚು ಕಾಳಜಿ ಯೆಹೋವನಿಗಿದೆ. ಏಕೆಂದರೆ ಆ ಸಲಹೆಯ ಮೂಲನು ಆತನೇ.

9 ಯೆಹೋವ ದೇವರಿಗೆ ನಮ್ಮ ಬಗ್ಗೆಯಿರುವ ಕಾಳಜಿ ನಮಗೆ ಸಲಹೆ ಕೊಡುವವರ ಮೂಲಕ ಹೇಗೆ ಗೊತ್ತಾಗುತ್ತದೆ? ಒಂದು ಉದಾಹರಣೆ ನೋಡೋಣ. ಒಬ್ಬ ಸಹೋದರನಿಗೆ ಸತ್ಯಕ್ಕೆ ಬರುವ ಮುಂಚೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟವಿತ್ತು. ಸತ್ಯ ಕಲಿತಾಗ ಅವನದನ್ನು ಬಿಟ್ಟನು. ಆದರೆ ಒಳಗೊಳಗೆ ಆ ಚಟ ಇನ್ನೂ ಹೊಗೆಯಾಡುತ್ತಿತ್ತು. ಹೊಸ ಮೊಬೈಲ್‌ ಅವನ ಕೈಗೆ ಬಂದಾಗ ಆ ಬಯಕೆ ಪುನಃ ಹೊತ್ತಿಕೊಂಡಿತು. (ಯಾಕೋ. 1:14, 15) ಫೋನಿನಲ್ಲಿ ಅಶ್ಲೀಲ ಇಂಟರ್‌ನೆಟ್‌ ಸೈಟ್‌ಗಳನ್ನು ನೋಡತೊಡಗಿದ. ಒಂದು ದಿನ ಟೆಲಿಫೋನ್‌ ಸಾಕ್ಷಿಕಾರ್ಯ ಮಾಡುತ್ತಿದ್ದಾಗ ಜೊತೆಗಿದ್ದ ಹಿರಿಯನಿಗೆ ವಿಳಾಸಗಳನ್ನು ಹುಡುಕಲು ತನ್ನ ಮೊಬೈಲನ್ನು ಕೊಟ್ಟ. ಆ ಹಿರಿಯನು ಮೊಬೈಲನ್ನು ಬಳಸಲು ಶುರುಮಾಡಿದಾಗ ಅಶ್ಲೀಲ ಸೈಟ್‌ಗಳು ಪರದೆಯ ಮೇಲೆ ಬರತೊಡಗಿದವು. ಹೀಗಾದದ್ದು ಆಧ್ಯಾತ್ಮಿಕವಾಗಿ ಅಪಾಯದಲ್ಲಿದ್ದ ಆ ಸಹೋದರನಿಗೆ ಆಶೀರ್ವಾದವಾಗಿ ಪರಿಣಮಿಸಿತು. ಹೇಗೆಂದರೆ, ಅವನಿಗೆ ಸರಿಯಾದ ಸಮಯದಲ್ಲಿ ಸಲಹೆ ಸಿಕ್ಕಿತು. ತಿದ್ದುಪಾಟು ಕೊಡಲಾಯಿತು. ಅದನ್ನವನು ಸ್ವೀಕರಿಸಿ ಕ್ರಮೇಣ ತನ್ನ ಕೆಟ್ಟ ಚಾಳಿಯಿಂದ ಮುಕ್ತನಾದನು. ಹೌದು, ಯೆಹೋವನು ನಮ್ಮಲ್ಲಿ ಅಡಗಿರುವ ಪಾಪಗಳನ್ನು ಗಮನಿಸಿ ಅದು ವಿಪರೀತಕ್ಕೆ ಹೋಗುವ ಮುಂಚೆಯೇ ನಮ್ಮನ್ನು ಸರಿಪಡಿಸುತ್ತಾನೆ. ಇಂಥ ಪ್ರೀತಿಯ ನಮ್ಮ ತಂದೆಯಾದ ಯೆಹೋವನಿಗೆ ನಾವು ಎಷ್ಟೊಂದು ಕೃತಜ್ಞರಾಗಿರಬೇಕಲ್ಲವೆ!

ಬೈಬಲ್‌ ತತ್ವಗಳನ್ನು ಅನುಸರಿಸುವುದರಿಂದ ಪ್ರಯೋಜನ

10, 11. (ಎ) ಯೆಹೋವನ ಮಾರ್ಗದರ್ಶನ ಪಡೆಯಲು ನಾವೇನು ಮಾಡಬೇಕು? (ಬಿ) ಯೆಹೋವನ ಮಾರ್ಗದರ್ಶನ ಅನುಸರಿಸುವುದರಿಂದ ಒಂದು ಕುಟುಂಬಕ್ಕೆ ಹೇಗೆ ಪ್ರಯೋಜನವಾಯಿತು?

10 ‘ನಿನ್ನ ಚಿತ್ತವನ್ನು ತಿಳಿಯಪಡಿಸಿ ನನ್ನನ್ನು ನಡೆಸು’ ಎಂದು ಕೀರ್ತನೆಗಾರನು ಯೆಹೋವನಿಗೆ ಹೇಳಿದನು. (ಕೀರ್ತ. 73:24) ನಮಗೆ ಯಾವುದಾದರೂ ವಿಷಯದಲ್ಲಿ ಮಾರ್ಗದರ್ಶನ ಬೇಕಿರುವಾಗ ನಾವು ದೇವರ ವಾಕ್ಯದಲ್ಲಿ ಹುಡುಕಬೇಕು. ಈ ರೀತಿಯಲ್ಲಿ ನಾವು ಆ ವಿಷಯದ ಕುರಿತು ಯೆಹೋವನ ದೃಷ್ಟಿಕೋನವೇನೆಂದು ತಿಳಿದುಕೊಳ್ಳುತ್ತೇವೆ ಮತ್ತು ಆತನಿಗೆ ‘ವಿಧೇಯರಾಗುತ್ತೇವೆ.’ ಹೀಗೆ ಬೈಬಲಿನಲ್ಲಿರುವ ತತ್ವಗಳನ್ನು ಅನುಸರಿಸುವುದರಿಂದ ಆಧ್ಯಾತ್ಮಿಕವಾಗಿ ನಮಗೆ ಪ್ರಯೋಜನವಾಗುತ್ತದೆ ಮಾತ್ರವಲ್ಲ ನಮ್ಮ ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.—ಜ್ಞಾನೋ. 3:6.

11 ಫಿಲಿಪೀನ್ಸ್‌ನ ಮಸ್ಬಾಟೀ ಎಂಬ ಪರ್ವತ ಪ್ರದೇಶದಲ್ಲಿ ಜೀವಿಸುವ ಸಹೋದರನೊಬ್ಬನ ಅನುಭವ ಇದಕ್ಕೊಂದು ಉದಾಹರಣೆ. ಗುತ್ತಿಗೆ ಬೇಸಾಯಗಾರನಾಗಿರುವ ಅವನು ತನ್ನ ದೊಡ್ಡ ಕುಟುಂಬವನ್ನು ನೋಡಿಕೊಳ್ಳುವುದರ ಜೊತೆಗೆ ಹೆಂಡತಿಯೊಂದಿಗೆ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡುತ್ತಿದ್ದನು. ಒಂದು ದಿನ ಅಚಾನಕ್ಕಾಗಿ ಅವರ ಜಮೀನುದಾರ ಅವರಿಗೆ ನೋಟೀಸು ಕಳುಹಿಸಿ ಆ ಜಮೀನು ಬಿಟ್ಟುಹೋಗುವಂತೆ ಹೇಳಿದ. ಯಾಕೆ? ಅವರು ಅಪ್ರಾಮಾಣಿಕರೆಂದು ಯಾರೋ ಸುಳ್ಳಾರೋಪ ಹಾಕಿದ್ದರು. ಈಗ ಎಲ್ಲಿ ಹೋಗಿ ಬದುಕುವುದು ಎಂದು ಸಹೋದರನಿಗೆ ಚಿಂತೆಯಾದರೂ ಅವನು ಹೀಗಂದನು: “ಯೆಹೋವನು ದಾರಿ ತೋರಿಸುತ್ತಾನೆ. ಏನೇ ಆದರೂ  ಆತನು ನಮ್ಮ ಕೈಬಿಡುವುದಿಲ್ಲ. ನಮ್ಮ ಅಗತ್ಯಗಳನ್ನು ಪೂರೈಸುತ್ತಾನೆ.” ಆ ಸಹೋದರನ ಭರವಸೆ ಸುಳ್ಳಾಗಲಿಲ್ಲ. ಕೆಲವು ದಿನಗಳ ಬಳಿಕ ಜಮೀನುದಾರನು ಅವರು ಅಲ್ಲಿಂದ ಹೋಗಬೇಕಾಗಿಲ್ಲ ಎಂದು ಹೇಳಿದನು. ಈ ರೀತಿ ಬದಲಾವಣೆಗೆ ಕಾರಣವೇನು? ತಮ್ಮ ಮೇಲೆ ಸುಳ್ಳಾರೋಪ ಹಾಕಲಾಗಿದ್ದರೂ ಈ ಸಾಕ್ಷಿ ಕುಟುಂಬ ಬೈಬಲ್‌ ತತ್ವಗಳನ್ನು ಅನುಸರಿಸುತ್ತಾ ಜಮೀನುದಾರನೊಂದಿಗೆ ಶಾಂತಿಯಿಂದಿದ್ದರು, ಅವನಿಗೆ ಗೌರವ ತೋರಿಸುತ್ತಿದ್ದರು. ಇದರಿಂದ ಪ್ರಭಾವಿತನಾದ ಜಮೀನುದಾರ ಅವರು ಅಲ್ಲೇ ಉಳಿದುಕೊಳ್ಳುವಂತೆ ಅನುಮತಿಸಿದನು ಮಾತ್ರವಲ್ಲ ಬೇಸಾಯ ಮಾಡಲು ಇನ್ನೂ ಹೆಚ್ಚು ಜಮೀನನ್ನು ಕೊಟ್ಟನು. (1 ಪೇತ್ರ 2:12 ಓದಿ.) ಕಷ್ಟಗಳನ್ನು ನಿಭಾಯಿಸಲು ಯೆಹೋವನು ತನ್ನ ವಾಕ್ಯವಾದ ಬೈಬಲಿನ ಮೂಲಕ ನಮ್ಮನ್ನು ಮಾರ್ಗದರ್ಶಿಸುತ್ತಾನೆ ಎನ್ನುವುದು ಎಷ್ಟು ನಿಜವಲ್ಲವೆ?

ಸಂಕಷ್ಟಗಳಲ್ಲಿ ಸಹಾಯಹಸ್ತ ಚಾಚುವ ಮಿತ್ರ

12, 13. ನಮ್ಮ ಕಷ್ಟವನ್ನು ನಿಜವಾಗಿಯೂ ಯೆಹೋವನು ನೋಡುತ್ತಿದ್ದಾನಾ ಎಂದು ಯಾವ ಸನ್ನಿವೇಶದಲ್ಲಿ ಅನಿಸಬಹುದು?

12 ಕೆಲವೊಮ್ಮೆ ನಾವು ಅನುಭವಿಸುತ್ತಿರುವ ಸಂಕಷ್ಟಗಳು ಕೊನೆಗೊಳ್ಳುವುದೇ ಇಲ್ಲ ಎಂದನಿಸಬಹುದು. ದೀರ್ಘಕಾಲದಿಂದ ಇರುವ ಕಾಯಿಲೆ, ನಿರಂತರ ಹಿಂಸೆ, ಮನೆಮಂದಿಯಿಂದ ಯಾವಾಗಲೂ ವಿರೋಧ ಅವುಗಳಲ್ಲಿ ಕೆಲವು. ಸಹೋದರರೊಂದಿಗೆ ಉಂಟಾಗುವ ಗಂಭೀರ ಮನಸ್ತಾಪಗಳನ್ನು ಸಹ ಸಹಿಸಲು ಕಷ್ಟವಾಗಬಹುದು.

13 ಉದಾಹರಣೆಗೆ, ಒಬ್ಬ ಸಹೋದರ ನಿಮ್ಮ ಬಗ್ಗೆ ಹೇಳಿದ ಯಾವುದೋ ಮಾತು ನಿಮ್ಮನ್ನು ತುಂಬ ಘಾಸಿಗೊಳಿಸಿರಬಹುದು. ‘ದೇವರ ಸಂಘಟನೆಯಲ್ಲಿ ಈ ರೀತಿ ಆಗಬಾರದು’ ಎಂದು ನೀವು ಯೋಚಿಸಬಹುದು. ಆದರೆ ಹಾಗೆ ಮಾತಾಡಿದ ಆ ಸಹೋದರನಿಗೆ ಸಭೆಯಲ್ಲಿ ಹೆಚ್ಚೆಚ್ಚು ಸೇವಾಸುಯೋಗಗಳು ಸಿಗುತ್ತಿರುವುದನ್ನು ಮತ್ತು ಎಲ್ಲರು ಅವನನ್ನು ಒಳ್ಳೇ ಸಹೋದರ ಎಂದು ಗೌರವಿಸುವುದನ್ನು ನೀವು ಕಾಣುತ್ತೀರಿ. ‘ಅದು ಹೇಗೆ ಸಾಧ್ಯ? ನನ್ನ ನೋವು ಯೆಹೋವನಿಗೆ ಕಾಣ್ತಾ ಇಲ್ವಾ? ಯಾಕೆ ಏನೂ ಮಾಡ್ತಾ ಇಲ್ಲ?’ ಎಂಬ ಪ್ರಶ್ನೆಗಳು ನಿಮ್ಮಲ್ಲಿ ಏಳಬಹುದು.—ಕೀರ್ತ. 13:1, 2; ಹಬ. 1:2, 3.

14. ಸಹೋದರನೊಬ್ಬನು ನಮಗೆ ಕಟ್ಟುನಿಟ್ಟಾಗಿ ಸಲಹೆ ಕೊಡುವಂತೆ ಯೆಹೋವನು ಏಕೆ ಅನುಮತಿಸಬಹುದು?

14 ಆದರೆ ಆ ಸನ್ನಿವೇಶದಲ್ಲಿ ಹಸ್ತಕ್ಷೇಪ ಮಾಡದಿರಲು ಯೆಹೋವನಿಗೆ ಸರಿಯಾದ ಕಾರಣಗಳಿರಬಹುದು. ಉದಾಹರಣೆಗೆ, ಆ ಸಹೋದರನದ್ದೇ ಹೆಚ್ಚು ತಪ್ಪೆಂದು ನಿಮಗನಿಸಬಹುದು. ಆದರೆ ಯೆಹೋವನ ದೃಷ್ಟಿಯಲ್ಲಿ ಹೆಚ್ಚಿನ ತಪ್ಪು ನಿಮ್ಮದಾಗಿರಬಹುದು. ನಿಮ್ಮ ಮನನೋಯಿಸಿರುವ ಆ ಮಾತು ನಿಮಗೆ ಅವಶ್ಯವಾಗಿ ಸಿಗಬೇಕಾಗಿದ್ದ ಸಲಹೆ ಆಗಿರಬಹುದು. ನೀವದನ್ನು ಅನ್ವಯಿಸುವ ಅಗತ್ಯವಿರಬಹುದು. ಇಂಥದ್ದೇ ಸನ್ನಿವೇಶವೊಂದು ತನ್ನ ಜೀವಿತದಲ್ಲಿ ಬಂತೆಂದು ಆಡಳಿತ ಮಂಡಲಿಯಲ್ಲಿ ಸೇವೆ ಮಾಡಿದ ಸಹೋದರ ಕಾರ್ಲ್ ಕ್ಲಿನ್‌ ತಮ್ಮ ಜೀವನ ಕಥೆಯಲ್ಲಿ ಹೇಳಿದ್ದಾರೆ. ಒಮ್ಮೆ ಅವರನ್ನು ಸಹೋದರ ಜೆ. ಎಫ್‌. ರದರ್‌ಫರ್ಡ್‌ ಕಟ್ಟುನಿಟ್ಟಾಗಿ ಖಂಡಿಸಿದರು. ಸ್ವಲ್ಪ ಸಮಯದ ನಂತರ ಕಾರ್ಲ್ರನ್ನು ನೋಡಿ ಸಹೋದರ ರದರ್‌ಫರ್ಡ್‌ “ಹಲೋ ಕಾರ್ಲ್” ಎಂದು ಹಸನ್ಮುಖದಿಂದ ವಂದಿಸಿದರು. ಆದರೆ ಅವರು ಹೇಳಿದ್ದ ಮಾತು ಸಹೋದರ ಕಾರ್ಲ್ಗೆ ಇನ್ನೂ ಚುಚ್ಚುತ್ತಿದ್ದದರಿಂದ ಅರೆಮನಸ್ಸಿನಿಂದಲೇ ಮೆಲ್ಲನೆ ಉತ್ತರಿಸಿದರು. ತಾನು ಸಲಹೆಯನ್ನು ಕೊಟ್ಟಿದ್ದಕ್ಕಾಗಿ ಕಾರ್ಲ್ ಕಹಿ ಭಾವ ತಾಳಿದ್ದಾರೆಂದು ತಿಳಿದ ಸಹೋದರ ರದರ್‌ಫರ್ಡ್‌ ‘ಪಿಶಾಚನಿಗೆ ಬಲಿಯಾಗದಂತೆ’ ಅವರನ್ನು ಎಚ್ಚರಿಸಿದರು. ಈ ಕುರಿತು ಸಹೋದರ ಕಾರ್ಲ್ ನಂತರ ಹೀಗೆ ಬರೆದರು: “ನಾವು ನಮ್ಮ ಸಹೋದರರ ಮೇಲೆ ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ, ಅದರಲ್ಲೂ ನಮಗೆ ಸಲಹೆ ಕೊಡುವ ಜವಾಬ್ದಾರಿ ಹಾಗೂ ಹಕ್ಕಿರುವವರ ಮೇಲೆ ಅಸಮಾಧಾನ ಬೆಳೆಸಿಕೊಂಡರೆ ನಾವು ನಮ್ಮನ್ನೇ ಪಿಶಾಚನ ಪಾಶಕ್ಕೆ ಸಿಲುಕಿಕೊಳ್ಳುತ್ತೇವೆ.” *

15. ಕಷ್ಟಕರ ಸನ್ನಿವೇಶದಲ್ಲಿ ಯೆಹೋವನ ಸಹಾಯಕ್ಕಾಗಿ ಕಾಯುತ್ತಿರುವಾಗ ತಾಳ್ಮೆಗೆಡದಿರಲು ನಾವು ಏನನ್ನು ಮನಸ್ಸಿನಲ್ಲಿಡಬೇಕು?

15 ಕೆಲವೊಮ್ಮೆ ಯಾವುದಾದರೂ ಕಷ್ಟದ ಸನ್ನಿವೇಶ ಕೊನೆಗೊಳ್ಳುತ್ತಿಲ್ಲ ಎಂದನಿಸುವಾಗ ನಾವು ತಾಳ್ಮೆಗೆಡಬಹುದು. ಆಗೇನು ಮಾಡಬೇಕು? ಈ ಉದಾಹರಣೆ ಗಮನಿಸಿ. ನೀವು ಹೆದ್ದಾರಿಯಲ್ಲಿ ಕಾರಲ್ಲಿ ಪ್ರಯಾಣಿಸುತ್ತಿದ್ದೀರಿ. ದಾರಿಯಲ್ಲಿ ವಾಹನ ದಟ್ಟಣೆಯಿಂದಾಗಿ ನಿಮಗೆ ಮುಂದೆ ಹೋಗಲು ಆಗುತ್ತಿಲ್ಲ. ಇನ್ನೆಷ್ಟು ಹೊತ್ತು ಅಲ್ಲೇ ಕಾದುಕೊಂಡಿರಬೇಕೋ ನಿಮಗೆ ತಿಳಿದಿಲ್ಲ. ನೀವು ಕಾದು ಕಾದು ಬೇಸತ್ತು ನಿಮ್ಮ ಕಾರನ್ನು ಪಕ್ಕಕ್ಕೆ ತಿರುಗಿಸಿ ಬೇರೆ ರಸ್ತೆಯಿಂದ ಹೋಗುತ್ತೀರಿ. ಇದರಿಂದ ನೀವು ದಾರಿತಪ್ಪಿ ಬೇರೆಲ್ಲೋ ಹೋಗಿಬಿಡುತ್ತೀರಿ. ತಲಪಬೇಕಾದ ಸ್ಥಳಕ್ಕೆ ಮುಟ್ಟಲು ತುಂಬ ಹೊತ್ತು ಹಿಡಿಯುತ್ತದೆ. ಒಂದುವೇಳೆ ವಾಹನದಟ್ಟಣೆ ಇದ್ದಲ್ಲೇ ತಾಳ್ಮೆಯಿಂದ ಕಾದು ಅದೇ ರಸ್ತೆಯಲ್ಲಿ ಬಂದಿದ್ದರೆ ಇದಕ್ಕಿಂತ ಬೇಗ ತಲಪುತ್ತಿದ್ದಿರಿ. ಅದೇ ರೀತಿ, ನಿಮಗೆ ಸಂಕಷ್ಟಗಳು ಬಂದರೂ ದೇವರ ವಾಕ್ಯದಲ್ಲಿ ಹೇಳಿರುವ ಮಾರ್ಗದಲ್ಲೇ ಇರುವಲ್ಲಿ ಸಮಯಾನಂತರ ನಿಮ್ಮ ಗುರಿ ತಲಪುವಿರಿ.

16. ನಾವು ಕಷ್ಟದಲ್ಲಿದ್ದಾಗ ಯೆಹೋವನು ಕೆಲವೊಮ್ಮೆ ಹಸ್ತಕ್ಷೇಪ ಮಾಡದಿರಲು ಇರುವ ಇನ್ನೊಂದು ಕಾರಣವೇನು?

16 ಯೆಹೋವನು ನಮ್ಮ ಸಂಕಷ್ಟದ ಪರಿಸ್ಥಿತಿಯನ್ನು  ಮುಂದುವರಿಯುವಂತೆ ಅನುಮತಿಸಲು ಕಾರಣ ಅದರಿಂದ ನಾವು ಅಗತ್ಯವಾದ ತರಬೇತಿಯನ್ನು ಪಡೆಯಬೇಕೆಂದು ಆತನು ಬಯಸುವುದೇ. (1 ಪೇತ್ರ 5:6-10 ಓದಿ.) ಆದರೆ ನಮ್ಮ ಕಷ್ಟಗಳಿಗೆ ಆತನು ಕಾರಣನಲ್ಲ. (ಯಾಕೋ. 1:13) ನಮ್ಮ “ವಿರೋಧಿಯಾಗಿರುವ ಪಿಶಾಚನು” ಹೆಚ್ಚಿನ ಕಷ್ಟಗಳಿಗೆ ಕಾರಣ. ಆ ಕಷ್ಟದ ಸನ್ನಿವೇಶಗಳನ್ನೇ ಬಳಸಿ ದೇವರು ನಮ್ಮನ್ನು ಆಧ್ಯಾತ್ಮಿಕವಾಗಿ ಬಲಗೊಳಿಸಬಲ್ಲನು. ನಾವು ಕಷ್ಟಪಡುವುದನ್ನು ಆತನು ನೋಡುತ್ತಿದ್ದಾನೆ. ‘ಆತನು ನಮಗೋಸ್ಕರ ಚಿಂತಿಸುತ್ತಾನಾದ್ದರಿಂದ’ ಆ ಸನ್ನಿವೇಶ “ಸ್ವಲ್ಪಕಾಲ” ಮಾತ್ರ ಇರುವಂತೆ ನೋಡಿಕೊಳ್ಳುತ್ತಾನೆ. ನೀವು ಕಷ್ಟದಲ್ಲಿರುವಾಗ ಯೆಹೋವನು ಕಾಳಜಿಯಿಂದ ನಿಮ್ಮನ್ನು ಗಮನಿಸುತ್ತಿರುತ್ತಾನೆ ಹಾಗೂ ತಪ್ಪಿಸಿಕೊಳ್ಳುವ ದಾರಿಯನ್ನು ತೋರಿಸುತ್ತಾನೆ ಎಂಬ ಭರವಸೆ ನಿಮಗಿರಲಿ.—2 ಕೊರಿಂ. 4:7-9.

ದೇವರ ಮೆಚ್ಚಿಕೆಗೆ ಪಾತ್ರರಾಗಿ

17. ಯೆಹೋವನು ಯಾರಿಗಾಗಿ ಹುಡುಕುತ್ತಿದ್ದಾನೆ? ಏಕೆ?

17 ಯೆಹೋವನು ನಮ್ಮನ್ನು ಪರೀಕ್ಷಿಸಲು ಒಂದು ಉತ್ತಮ ಕಾರಣವಿದೆ. ಆತನು ದರ್ಶಿಯಾದ ಹನಾನಿಯ ಮೂಲಕ ರಾಜ ಆಸನಿಗೆ, “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ” ಎಂದು ಹೇಳಿದನು. (2 ಪೂರ್ವ. 16:9) ರಾಜ ಆಸನಲ್ಲಿ ಯಥಾರ್ಥ ಹೃದಯವಿರಲಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡುತ್ತಿರುವಲ್ಲಿ ಯೆಹೋವನು ನಿಮ್ಮ ಪರವಾಗಿ “ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.”

18. ನಾವು ಮಾಡುತ್ತಿರುವುದನ್ನು ಯಾರೂ ಗಣ್ಯಮಾಡುವುದಿಲ್ಲ ಎಂದನಿಸುವಾಗ ಯೆಹೋವನ ಬಗ್ಗೆ ನಾವೇನನ್ನು ನೆನಪು ಮಾಡಿಕೊಳ್ಳಬೇಕು? (ಲೇಖನದ ಆರಂಭದಲ್ಲಿರುವ ಚಿತ್ರ ನೋಡಿ.)

18 ನಾವು ‘ಒಳ್ಳೆಯದನ್ನು ಹುಡುಕಿ’ “ಒಳ್ಳೇದನ್ನು ಪ್ರೀತಿಸಿ” ‘ಒಳ್ಳೇದನ್ನು ಮಾಡಿ’ ತನ್ನ ‘ಅನುಗ್ರಹಕ್ಕೆ’ ಪಾತ್ರರಾಗಬೇಕೆಂದು ಯೆಹೋವನು ಬಯಸುತ್ತಾನೆ. (ಆಮೋ. 5:14, 15, NW; 1 ಪೇತ್ರ 3:11, 12) ಆತನು ನೀತಿವಂತರನ್ನು ಗಮನಿಸುತ್ತಾನೆ ಹಾಗೂ ಆಶೀರ್ವದಿಸುತ್ತಾನೆ. (ಕೀರ್ತ. 34:15) ಶಿಫ್ರಾ ಮತ್ತು ಪೂಗಾ ಎಂಬ ಇಬ್ರಿಯ ಸೂಲಗಿತ್ತಿಯರ ಉದಾಹರಣೆ ನೋಡಿ. ಇಸ್ರಾಯೇಲ್ಯರು ಈಜಿಪ್ಟಿನಲ್ಲಿ ದಾಸರಾಗಿದ್ದಾಗ ಫರೋಹನು ಈ ಸ್ತ್ರೀಯರಿಗೆ ಇಸ್ರಾಯೇಲ್ಯರ ಗಂಡುಮಕ್ಕಳನ್ನು ಹುಟ್ಟಿದ ಕೂಡಲೆ ಸಾಯಿಸುವಂತೆ ಆಜ್ಞಾಪಿಸಿದ್ದನು. ಈ ಸ್ತ್ರೀಯರು ಫರೋಹನಿಗಿಂತ ಹೆಚ್ಚಾಗಿ ಯೆಹೋವನಿಗೆ ಭಯಪಟ್ಟದ್ದರಿಂದ ಗಂಡುಕೂಸುಗಳ ಜೀವ ಉಳಿಸಿದರು. ಎಲ್ಲ ಕಡೆಗಳಲ್ಲಿ ಪ್ರಸರಿಸುವ ಯೆಹೋವನ ದೃಷ್ಟಿಗೆ ಅವರು ಮಾಡಿದ ಈ ಒಳ್ಳೇ ಕೆಲಸ ಮರೆಯಾಗಲಿಲ್ಲ. ಅವರಿಗೆ ವಂಶಾಭಿವೃದ್ಧಿಯನ್ನುಂಟುಮಾಡುವ ಮೂಲಕ ಆತನು ಅವರನ್ನು ಆಶೀರ್ವದಿಸಿದನು. (ವಿಮೋ. 1:15-17, 20, 21) ಕೆಲವೊಮ್ಮೆ, ನಾವು ಮಾಡುವ ಒಳ್ಳೇದನ್ನು ಯಾರೂ ಗಣನೆಗೆ ತಕ್ಕೊಳ್ಳುತ್ತಿಲ್ಲ ಎಂದು ನಮಗನಿಸಬಹುದು. ಆದರೆ ಯೆಹೋವನು ಗಣನೆಗೆ ತಕ್ಕೊಳ್ಳುತ್ತಾನೆ. ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕೃತ್ಯವನ್ನು ಗಮನಿಸಿ ನಮಗೆ ಪ್ರತಿಫಲ ಕೊಡುತ್ತಾನೆ.—ಮತ್ತಾ. 6:4, 6; 1 ತಿಮೊ. 5:25; ಇಬ್ರಿ. 6:10.

19. ಒಳ್ಳೇ ಕ್ರಿಯೆಗಳು ಯೆಹೋವನ ದೃಷ್ಟಿಗೆ ಮರೆಯಾಗಿಲ್ಲ ಎಂದು ಒಬ್ಬ ಸಹೋದರಿ ಹೇಗೆ ಕಲಿತಳು?

19 ನಾವು ಪಡುವ ಶ್ರಮ ಯೆಹೋವನ ದೃಷ್ಟಿಗೆ ಮರೆಯಾಗಿಲ್ಲ. ಇದನ್ನು ಆಸ್ಟ್ರಿಯದಲ್ಲಿರುವ ಒಬ್ಬ ಸಹೋದರಿ ತನ್ನ ಅನುಭವದಿಂದ ಕಲಿತಳು. ಆಕೆ ಹಂಗೇರಿಯ ಮೂಲದವಳಾಗಿದ್ದರಿಂದ ಹಂಗೇರಿಯನ್‌ ಭಾಷೆಯ ಸ್ತ್ರೀಯೊಬ್ಬಳ ವಿಳಾಸವನ್ನು ಕೊಟ್ಟು ಆಕೆಯನ್ನು ಭೇಟಿಯಾಗುವಂತೆ ಹೇಳಲಾಯಿತು. ತಕ್ಷಣವೇ ಸಹೋದರಿ ಆ ಸ್ತ್ರೀಯ ಮನೆಗೆ ಹೋದಳು. ಆದರೆ ಯಾರೂ ಮನೆಯಲ್ಲಿರಲಿಲ್ಲ. ಪುನಃ ಪುನಃ ಹೋದಳು. ಕೆಲವೊಮ್ಮೆ ಮನೆಯಲ್ಲಿ ಯಾರೋ ಇದ್ದಾರೆ ಆದರೆ ಬಾಗಿಲು ತೆರೆಯುತ್ತಿಲ್ಲ ಎನ್ನುವುದು ಅವಳ ಅರಿವಿಗೆ ಬಂತು. ಹಾಗಾಗಿ ಸಾಹಿತ್ಯವನ್ನು, ಪತ್ರಗಳನ್ನು, ಟೆಲಿಫೋನ್‌ ನಂಬರನ್ನು ಇಟ್ಟುಬಂದಳು. ಹಾಗೇ ಒಂದೂವರೆ ವರ್ಷ ಆ ಮನೆಯ ಕದವನ್ನು ತಟ್ಟಿದ ಮೇಲೆ ಅಂತೂ ಕೊನೆಗೆ ಆ ಸ್ತ್ರೀ ಬಾಗಿಲು ತೆರೆದಳು! ಸ್ನೇಹಮಯಿಯಾದ ಒಬ್ಬಾಕೆ ಸ್ತ್ರೀ ಸಹೋದರಿಯನ್ನು ವಂದಿಸುತ್ತಾ “ಒಳಗೆ ಬನ್ನಿ. ನೀವು ಇಟ್ಟುಹೋಗಿದ್ದ ಎಲ್ಲವನ್ನು ನಾನು ಓದಿದೆ. ನಿಮಗಾಗಿಯೇ ಕಾಯುತ್ತಿದ್ದೆ” ಎಂದು ಸ್ವಾಗತಿಸಿದಳು. ನಿಜಾಂಶವೇನೆಂದರೆ ಆ ಸ್ತ್ರೀ ಕಿಮತೆರಪಿ ಚಿಕಿತ್ಸೆಗೆ ಒಳಗಾಗಿದ್ದಳು. ಚಿಕಿತ್ಸೆಯ ಸಮಯದಲ್ಲಿ ಆಕೆ ಯಾರನ್ನೂ ಭೇಟಿಯಾಗಲು ಇಷ್ಟಪಟ್ಟಿರಲಿಲ್ಲ. ಅನಂತರ ಆಕೆ ಬೈಬಲ್‌ ಅಧ್ಯಯನ ಆರಂಭಿಸಿದಳು. ಹೌದು, ಸಹೋದರಿಯ ಪರಿಶ್ರಮವನ್ನು ಯೆಹೋವನು ಆಶೀರ್ವದಿಸಿದನು.

20. ಯೆಹೋವನು ನಿಮ್ಮನ್ನು ಕಾಳಜಿಯಿಂದ ಗಮನಿಸುತ್ತಿರುವುದರ ಬಗ್ಗೆ ನಿಮಗೆ ಹೇಗನಿಸುತ್ತದೆ?

20 ನೀವು ಮಾಡುವ ಎಲ್ಲವನ್ನು ಯೆಹೋವನು ಗಮನಿಸುತ್ತಾನೆ ಹಾಗೂ ಅದಕ್ಕೆ ತಕ್ಕ ಫಲವನ್ನು ಕೊಡುತ್ತಾನೆ. ಯೆಹೋವನ ಕಣ್ಣುಗಳು ನಿಮ್ಮನ್ನು ಗಮನಿಸುತ್ತಿವೆ ಎಂಬ ಅರಿವು ನಿಮಗಾದಾಗ ವಾಹನ ಸಂಚಾರದ ನಿಗಾ ಇಡುವ ಕ್ಯಾಮೆರಾದ ಕೆಳಗಿರುವಂತೆ ನಿಮಗೆ ಅನಿಸದಿರಲಿ. ಬದಲಿಗೆ ಅದು, ನಿಮ್ಮ ಕಾಳಜಿ ವಹಿಸುವ ಮತ್ತು ನಿಮ್ಮ ಬಗ್ಗೆ ತುಂಬ ಚಿಂತಿಸುವ ದೇವರಾದ ಯೆಹೋವನಿಗೆ ನಿಮ್ಮನ್ನು ಹೆಚ್ಚೆಚ್ಚು ಆಪ್ತರನ್ನಾಗಿ ಮಾಡಲಿ!

^ ಪ್ಯಾರ. 14 ಸಹೋದರ ಕಾರ್ಲ್ ಕ್ಲಿನ್‍ರ ಜೀವನ ಕಥೆಯನ್ನು 1984, ಅಕ್ಟೋಬರ್‌ 1ರ ಕಾವಲಿನಬುರುಜುನಲ್ಲಿ ನೋಡಿ.