ನಮ್ಮ ಸಂಗ್ರಹಾಲಯ
“ಕೊಯ್ಲಿನ ಕೆಲಸ ತುಂಬ ಮಾಡಲಿಕ್ಕಿದೆ”
ವರ್ಷ: 1923. ಸ್ಥಳ: ಸಾವ್ ಪೌಲೂ ನಗರದ ಲಲಿತಕಲಾಶಾಲೆಯ ಗಾನಮಂದಿರ. ಹಾಜರಿದ್ದವರು: 585 ಮಂದಿ. ಭಾಷಣಕರ್ತ: ಸಹೋದರ ಜಾರ್ಜ್ ಯಂಗ್. ಸಹೋದರ ಯಂಗ್ರ ಸ್ಥಿರ ಧ್ವನಿ ಆ ಸಭಾಂಗಣದಲ್ಲಿ ಘನಘನಿಸುತ್ತಿತ್ತು. ಒಂದೊಂದು ವಾಕ್ಯವನ್ನು ಅವರು ಹೇಳಿ ಮುಗಿಸುತ್ತಿದ್ದಂತೆ ಅದನ್ನು ಅನುವಾದಕನು ಪೋರ್ಚುಗೀಸ್ ಭಾಷೆಗೆ ಅನುವಾದಿಸುತ್ತಿದ್ದನು. ಕಿಕ್ಕಿರಿದಿದ್ದ ಸಭಿಕರು ತದೇಕಚಿತ್ತದಿಂದ ಆಲಿಸುತ್ತಿದ್ದರು. ಪ್ರೊಜೆಕ್ಟರ್ನಿಂದ ಪೋರ್ಚುಗೀಸ್ ಭಾಷೆಯಲ್ಲಿ ಬೈಬಲ್ ವಚನಗಳನ್ನು ತೆರೆಯ ಮೇಲೆ ತೋರಿಸಲಾಗುತ್ತಿತ್ತು. ಭಾಷಣದ ಕೊನೆಯಲ್ಲಿ, ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ! ಎಂಬ ಕಿರುಪುಸ್ತಿಕೆಯ 100 ಪ್ರತಿಗಳನ್ನು ವಿತರಿಸಲಾಯಿತು. ಅದೂ ಪೋರ್ಚುಗೀಸ್ ಭಾಷೆಯಲ್ಲಿ! ಇಂಗ್ಲಿಷ್, ಇಟ್ಯಾಲಿಯನ್, ಜರ್ಮನ್ ಭಾಷೆಯಲ್ಲೂ ಕೆಲವು ಪ್ರತಿಗಳನ್ನು ಹಂಚಲಾಯಿತು. ಭಾಷಣ ಯಶಸ್ವಿ ಕಂಡಿತು! ಈ ಸುದ್ದಿ ಎಲ್ಲೆಡೆ ಹಬ್ಬಿತು. ಎರಡು ದಿನಗಳ ನಂತರ ಇನ್ನೊಂದು ಭಾಷಣಕ್ಕಾಗಿ ಜನರು ಮತ್ತೆ ಅಲ್ಲೇ ಅದೇ ಗಾನಮಂದಿರದಲ್ಲಿ ನೆರೆದುಬಂದಿದ್ದರು. ಈ ವಿಶೇಷ ಘಟನೆಗಳಿಗೆ ಕಾರಣ ಏನಾಗಿತ್ತು?
1867ರಲ್ಲಿ ಸಾರಾ ಬೆಲೋನ ಫರ್ಗಸನ್ ಎಂಬಾಕೆ ತನ್ನ ಕುಟುಂಬದೊಂದಿಗೆ ಅಮೆರಿಕದಿಂದ ಬ್ರಸಿಲ್ಗೆ ಬಂದು ನೆಲಸಿದರು. 1899ರಲ್ಲಿ ತನ್ನ ತಮ್ಮ ಅಮೆರಿಕದಿಂದ ಬ್ರಸಿಲ್ಗೆ ತಂದಿದ್ದ ಕೆಲವು ಬೈಬಲ್ ಸಾಹಿತ್ಯವನ್ನು ಆಕೆ ಓದಿ ಇದೇ ಸತ್ಯವೆಂದು ಅರಿತುಕೊಂಡರು. ಓದುವ ಹವ್ಯಾಸವಿದ್ದ ಅವರು ಇಂಗ್ಲಿಷ್ ಕಾವಲಿನ ಬುರುಜು ಪತ್ರಿಕೆಗೆ ಚಂದಾದಾರರಾದರು. ತಾವು ಓದಿದ ಬೈಬಲ್ ಸಂದೇಶದಿಂದ ಅವರೆಷ್ಟು ಪುಳಕಿತರಾದರೆಂದರೆ ಸಹೋದರ ಸಿ. ಟಿ. ರಸಲ್ರಿಗೆ ಪತ್ರ ಬರೆದು ಹೀಗಂದರು: “ಎಷ್ಟೇ ದೂರದಲ್ಲಿದ್ದರೂ [ರಾಜ್ಯ ಸಂದೇಶ] ತಲಪುವುದು ಅಸಾಧ್ಯವಲ್ಲ ಎನ್ನುವುದಕ್ಕೆ ನಾನೇ ಜೀವಂತ ಸಾಕ್ಷಿ.”
ಸಾರಾ ಫರ್ಗಸನ್ರವರು ಬೈಬಲ್ ಸತ್ಯವನ್ನು ಇತರರಿಗೆ ತಿಳಿಸಲು ಸರ್ವಪ್ರಯತ್ನ ಮಾಡಿದರು. ಆದರೆ ಅವರಿಗಿದ್ದ ಚಿಂತೆ ಏನೆಂದರೆ, ತನಗೂ ತನ್ನ ಕುಟುಂಬಕ್ಕೂ ಮತ್ತು ಬ್ರಸಿಲ್ನಲ್ಲಿರುವ ಸಜ್ಜನರೆಲ್ಲರಿಗೂ ಸತ್ಯವನ್ನು ಇನ್ನೂ ಹೆಚ್ಚು ಯಾರು ಕಲಿಸುತ್ತಾರೆ ಎಂಬುದೇ. 1912ರಲ್ಲಿ ಬ್ರೂಕ್ಲಿನ್ ಬೆತೆಲ್ನಿಂದ ಅವರಿಗೊಂದು ಪತ್ರ ಬಂತು. ‘ಮೃತರು ಎಲ್ಲಿದ್ದಾರೆ?’ ಎಂಬ ಶೀರ್ಷಿಕೆಯುಳ್ಳ ಪೋರ್ಚುಗೀಸ್ ಭಾಷೆಯ ಸಾವಿರಾರು ಕರಪತ್ರಗಳನ್ನು ವ್ಯಕ್ತಿಯೊಬ್ಬರು ಸಾವ್ ಪೌಲೂ ನಗರಕ್ಕೆ ತಕ್ಕೊಂಡು ಬರುತ್ತಿದ್ದಾರೆ ಎಂದು ತಿಳಿಸಿತು ಆ ಪತ್ರ. ಸಾರಾ ಫರ್ಗಸನ್ರವರು 1915ರಲ್ಲಿ ಒಂದು ಪತ್ರ ಬರೆದರು. ಅನೇಕ ಬೈಬಲ್ ವಿದ್ಯಾರ್ಥಿಗಳು ಬೇಗನೆ ತಾವು ಸ್ವರ್ಗಕ್ಕೆ ಒಯ್ಯಲ್ಪಡಲಿದ್ದೇವೆ ಎಂದು ನಂಬುತ್ತಿರುವುದನ್ನು ತಿಳಿದು ತನಗೆ ಆಶ್ಚರ್ಯವಾಗುತ್ತಿತ್ತು ಎಂದು ಆ ಪತ್ರದಲ್ಲಿ ತಿಳಿಸಿದರು. ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ ಅವರು ಬರೆದದ್ದು: “ಹಾಗಾದರೆ ಬ್ರಸಿಲ್ ಮತ್ತು ದಕ್ಷಿಣ ಅಮೆರಿಕದ ಕುರಿತೇನು? . . . ಪ್ರಪಂಚದ ಒಂದು ದೊಡ್ಡ ಭಾಗವೇ ದಕ್ಷಿಣ ಅಮೆರಿಕ ಆಗಿರುವಾಗ ಕೊಯ್ಲಿನ ಕೆಲಸ ತುಂಬ ಮಾಡಲಿಕ್ಕಿದೆ ಎನ್ನುವುದು ಸುಲಭವಾಗಿ ಗೊತ್ತಾಗುತ್ತದೆ.” ಹೌದು, ಕೊಯ್ಲಿನ ಕೆಲಸ ಬೃಹತ್ ಪ್ರಮಾಣದಲ್ಲಿ ಮಾಡಲ್ಪಡಲಿತ್ತು!
1920ರ ಸುಮಾರಿಗೆ ಎಂಟು ಮಂದಿ ಬ್ರಸಿಲ್ ನಾವಿಕರು ತಮ್ಮ ಯುದ್ಧನೌಕೆಯು ನ್ಯೂ ಯಾರ್ಕ್ನಲ್ಲಿ ರಿಪೇರಿಯಾಗುತ್ತಿದ್ದಾಗ ಸ್ಥಳೀಯ ಸಭಾ ಕೂಟಗಳಿಗೆ ಕೆಲವು ಬಾರಿ ಹಾಜರಾದರು. ಆ ನಾವಿಕರು ಬ್ರಸಿಲ್ನ ರಿಯೊ ಡಿ ಜನೈರೊ ನಗರಕ್ಕೆ ವಾಪಸ್ಸಾದಾಗ ತಾವು ಬೈಬಲಿನಿಂದ ಹೊಸದಾಗಿ ಕಲಿತ ನಿರೀಕ್ಷೆಯ ಬಗ್ಗೆ ಇತರರಿಗೆ ತಿಳಿಸಿದರು. 1923ರ ಮಾರ್ಚ್ ತಿಂಗಳಷ್ಟರಲ್ಲಿ ಜಾರ್ಜ್ ಯಂಗ್ರವರು ರಿಯೊ ಡಿ ಜನೈರೊ ನಗರಕ್ಕೆ ಬಂದರು. ಆಗ ಪಿಲ್ಗ್ರಿಮ್ ಆಗಿದ್ದ ಅಂದರೆ ಸಂಚರಣ ಮೇಲ್ವಿಚಾರಕರಾಗಿದ್ದ ಅವರಿಗೆ ಆ ನಗರದಲ್ಲಿ ಆಸಕ್ತ ಜನರು ಸಿಕ್ಕಿದರು. ಅನೇಕ ಪ್ರಕಾಶನಗಳು ಪೋರ್ಚುಗೀಸ್ ಭಾಷೆಗೆ ಅನುವಾದವಾಗುವಂತೆ ಏರ್ಪಡಿಸಿದರು. ಸಹೋದರ ಯಂಗ್ ಸ್ವಲ್ಪದರಲ್ಲೇ ಸಾವ್ ಪೌಲೂ ನಗರಕ್ಕೆ ಪ್ರಯಾಣಿಸಿದರು. ಆಗ ಅಲ್ಲಿನ ಜನಸಂಖ್ಯೆ ಸುಮಾರು 6 ಲಕ್ಷ. ಈ ಲೇಖನದ ಆರಂಭದಲ್ಲಿ ಹೇಳಲಾದಂತೆ ಅವರು ಉಪನ್ಯಾಸ ನೀಡಿ, ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯುವುದಿಲ್ಲ! ಎಂಬ ಕಿರುಪುಸ್ತಿಕೆಯನ್ನು ಹಂಚಿದ್ದು ಆ ಸಂದರ್ಭದಲ್ಲೇ. ಅವರು ವರದಿಸಿದ್ದು: “ನಾನು ಆಗ ಒಬ್ಬನೇ ಇದ್ದ ಕಾರಣ ಭಾಷಣದ ಕುರಿತು ಜಾಹೀರಾತು ಕೊಡಲು ವಾರ್ತಾಪತ್ರಿಕೆಯನ್ನೇ ನೆಚ್ಚಿಕೊಳ್ಳಬೇಕಾಯಿತು. ಬ್ರಸಿಲ್ನಲ್ಲಿ I.B.S.A. ಮೇಲ್ವಿಚಾರಣೆಯಡಿಯಲ್ಲಿ ಸಾರ್ವಜನಿಕ ಭಾಷಣಗಳ ಕುರಿತು ಈ ರೀತಿ ವಾರ್ತಾಪತ್ರಿಕೆಯಲ್ಲಿ ಜಾಹೀರಾತು ಕೊಟ್ಟದ್ದು ಅದೇ ಪ್ರಥಮ ಬಾರಿ.” *
1923, ಡಿಸೆಂಬರ್ 15ರ ಕಾವಲಿನ ಬುರುಜು ಬ್ರಸಿಲ್ನ ಕುರಿತು ಹೀಗೆ ವರದಿ ಮಾಡಿತು: “ಜೂನ್ 1ರಲ್ಲಿ ಕೆಲಸ ಆರಂಭಿಸಿದಾಗ ಒಂದೇ ಒಂದು ಸಾಹಿತ್ಯ ನಮ್ಮ ಹತ್ತಿರ ಇರಲಿಲ್ಲ. ಇದನ್ನು ನೋಡುವಾಗ ಕರ್ತನು ನಮ್ಮ ಕೆಲಸವನ್ನು ಆಶೀರ್ವದಿಸಿರುವುದು ಎದ್ದುಕಾಣುತ್ತದೆ.” ಸಹೋದರ ಯಂಗ್ರವರು ಸಾವ್ ಪೌಲೂ ನಗರದಲ್ಲಿ 2 ಸಾರ್ವಜನಿಕ ಭಾಷಣಗಳನ್ನು, ಬ್ರಸಿಲ್ನಲ್ಲಿ ಒಟ್ಟು 21 ಭಾಷಣಗಳನ್ನು ನೀಡಿದರೆಂದು ಮತ್ತು ಅವೆಲ್ಲದರ ಒಟ್ಟು ಹಾಜರಿ 3,600 ಎಂದು ಆ ವರದಿ ಹೇಳಿತು. ಮಾತ್ರವಲ್ಲ, ‘ರಿಯೊ ಡಿ ಜನೈರೊ ನಗರದಲ್ಲಿ ರಾಜ್ಯ ಸಂದೇಶವು ಎಲ್ಲೆಡೆ ಹಬ್ಬುತ್ತಿದೆ. ಕೆಲವೇ ತಿಂಗಳುಗಳಲ್ಲಿ ಪೋರ್ಚುಗೀಸ್ನಲ್ಲಿ 7 ಸಾವಿರಕ್ಕಿಂತಲೂ ಹೆಚ್ಚು ಪ್ರಕಾಶನಗಳನ್ನು ವಿತರಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 1923, ನವೆಂಬರ್-ಡಿಸೆಂಬರ್ ಸಂಚಿಕೆಯಿಂದ ಆರಂಭಿಸಿ ಪೋರ್ಚುಗೀಸ್ನಲ್ಲಿ ಕಾವಲಿನ ಬುರುಜು ಪತ್ರಿಕೆಯನ್ನು ಹೊರತರಲು ಆರಂಭಿಸಲಾಗಿದೆ’ ಎಂದು ತಿಳಿಸಿತು.
ಜಾರ್ಜ್ ಯಂಗ್ರವರು ಸಾರಾ ಫರ್ಗಸನ್ರನ್ನು ಭೇಟಿಯಾದರು. ಆ ಬಗ್ಗೆ ಕಾವಲಿನ ಬುರುಜು ಹೀಗೆ ವರದಿಸಿತು: ಸಹೋದರ ಯಂಗ್ರನ್ನು ನೋಡಿದಾಗ ಆ ಸಹೋದರಿಗೆ “ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ಸಹೋದರ ಯಂಗ್ರ ಕೈಹಿಡಿದು ಆಶ್ಚರ್ಯದಿಂದ ಅವರ ಮುಖವನ್ನು ನೋಡುತ್ತಾ ನಿಂತ ಆ ಸಹೋದರಿ ಕೊನೆಗೆ, ‘ನಾನು ಪಿಲ್ಗ್ರಿಮ್ರೊಬ್ಬರನ್ನು ನೋಡುತ್ತಿರುವುದು ನಿಜವೇ?’ ಎಂದು ಉದ್ಗರಿಸಿದರು.” ಆಕೆ ಮತ್ತು ಆಕೆಯ ಮಕ್ಕಳಲ್ಲಿ ಕೆಲವರು ಸ್ವಲ್ಪ ಸಮಯದಲ್ಲೇ ದೀಕ್ಷಾಸ್ನಾನ ಪಡೆದರು. ನಿಜ ಏನೆಂದರೆ ದೀಕ್ಷಾಸ್ನಾನ ಪಡೆಯಲು ಆಕೆ 25 ವರ್ಷಗಳಿಂದ ಕಾಯುತ್ತಿದ್ದಳು! ಬ್ರಸಿಲ್ನಲ್ಲಿ 50 ಮಂದಿ ದೀಕ್ಷಾಸ್ನಾನ ಪಡೆದರೆಂದು 1924, ಆಗಸ್ಟ್ 1ರ ಕಾವಲಿನ ಬುರುಜು ವರದಿಸಿತು. ಅವರಲ್ಲಿ ಹೆಚ್ಚಿನವರು ರಿಯೊ ಡಿ ಜನೈರೊ ನಗರದವರಾಗಿದ್ದರು.
ಈಗ ಸುಮಾರು 90 ವರ್ಷಗಳೇ ಕಳೆದಿವೆ. ನಾವೀಗ, “ಹಾಗಾದರೆ ಬ್ರಸಿಲ್ ಮತ್ತು ದಕ್ಷಿಣ ಅಮೆರಿಕದ ಕುರಿತೇನು?” ಎಂದು ಕೇಳಬೇಕಾಗಿಲ್ಲ. ಏಕೆಂದರೆ ಈಗ ಬ್ರಸಿಲ್ನಲ್ಲಿ 7,60,000ಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ಸುವಾರ್ತೆಯನ್ನು ಸಾರುತ್ತಿದ್ದಾರೆ. ದಕ್ಷಿಣ ಅಮೆರಿಕದಾದ್ಯಂತ ರಾಜ್ಯ ಸಂದೇಶವನ್ನು ಪೋರ್ಚುಗೀಸ್, ಸ್ಪ್ಯಾನಿಷ್ ಹಾಗೂ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಸಾರಲಾಗುತ್ತಿದೆ. 1915ರಲ್ಲಿ ಸಾರಾ ಫರ್ಗಸನ್ ಹೇಳಿದ್ದು ಸರಿಯಾಗಿತ್ತು. ‘ಕೊಯ್ಲಿನ ಕೆಲಸ ಇನ್ನೂ ತುಂಬ ಮಾಡಲಿಕ್ಕಿತ್ತು.’—ಬ್ರಸಿಲ್ನ ನಮ್ಮ ಸಂಗ್ರಹಾಲಯದಿಂದ.
^ ಪ್ಯಾರ. 6 I.B.S.A. ಅಂದರೆ ಇಂಟರ್ನ್ಯಾಷನಲ್ ಬೈಬಲ್ ಸ್ಟೂಡೆಂಟ್ಸ್ ಅಸೋಸಿಏಷನ್.