‘ನಿನ್ನ ದೇವರಾದ ಯೆಹೋವನನ್ನು ಪ್ರೀತಿಸು’
“ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.”—ಮತ್ತಾ. 22:37.
1. ದೇವರ ಮತ್ತು ಆತನ ಮಗನ ನಡುವಿನ ಪ್ರೀತಿ ಬೆಳೆಯಲು ಕಾರಣವೇನು?
ಯೆಹೋವನ ಮಗನಾದ ಯೇಸು ಕ್ರಿಸ್ತನು “ನಾನು ತಂದೆಯನ್ನು ಪ್ರೀತಿಸುತ್ತೇನೆ” ಎಂದು ಹೇಳಿದನು. (ಯೋಹಾ. 14:31) “ತಂದೆಗೆ ಮಗನ ಮೇಲೆ ಮಮತೆಯಿದೆ” ಎಂದೂ ಹೇಳಿದನು. (ಯೋಹಾ. 5:20) ಈ ಮಾತುಗಳಿಂದ ನಾವು ಆಶ್ಚರ್ಯಗೊಳ್ಳಬೇಕಾಗಿಲ್ಲ. ಏಕೆಂದರೆ ಯೇಸು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ದೇವರ ಜತೆ “ಕುಶಲ ಶಿಲ್ಪಿ”ಯಾಗಿ ಕೋಟಿಗಟ್ಟಲೆ ವರ್ಷಗಳ ಕಾಲ ಕೆಲಸ ಮಾಡಿದ್ದನು. (ಜ್ಞಾನೋ. 8:30, ಪವಿತ್ರ ಗ್ರಂಥ ಭಾಷಾಂತರ) ಯೆಹೋವ ಮತ್ತು ಯೇಸು ಒಟ್ಟಾಗಿ ಕೆಲಸ ಮಾಡುತ್ತಾ ಹೋದ ಹಾಗೆ ಮಗನು ತನ್ನ ತಂದೆಯ ಗುಣಗಳ ಬಗ್ಗೆ ತಿಳಿದುಕೊಂಡನು. ತಂದೆಯನ್ನು ಪ್ರೀತಿಸಲು ಆತನಿಗೆ ಹೀಗೆ ಅಸಂಖ್ಯಾತ ಕಾರಣಗಳು ಸಿಕ್ಕಿದವು. ಅಷ್ಟೇ ಅಲ್ಲ ಅವರ ಈ ಹತ್ತಿರದ ಒಡನಾಟದಿಂದಾಗಿ ಒಬ್ಬರ ಮೇಲೊಬ್ಬರಿಗಿದ್ದ ಪ್ರೀತಿ ಬೆಳೆಯುತ್ತಾ ಹೋಯಿತು.
2. (ಎ) ಪ್ರೀತಿಯಲ್ಲಿ ಏನು ಒಳಗೂಡಿದೆ? (ಬಿ) ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
2 ಪ್ರೀತಿಯಲ್ಲಿ ಒಬ್ಬರ ಕಡೆಗೆ ಗಾಢ ಮಮತೆ ಹೊಂದಿರುವುದು ಒಳಗೂಡಿದೆ. “ನನ್ನ ಬಲವಾಗಿರುವ ಯೆಹೋವನೇ, ನಿನ್ನಲ್ಲಿಯೇ ಮಮತೆಯಿಡುತ್ತೇನೆ” ಎಂದು ಕೀರ್ತನೆಗಾರ ದಾವೀದ ಹಾಡಿದ. (ಕೀರ್ತ. 18:1) ನಮಗೂ ದಾವೀದನ ಹಾಗೆನಿಸಬೇಕು. ಏಕೆಂದರೆ ನಮ್ಮ ಮೇಲೆಯೂ ದೇವರಿಗೆ ಮಮತೆ ಇದೆ. ನಾವು ಯೆಹೋವನಿಗೆ ವಿಧೇಯರಾದರೆ ಆತನು ನಮಗೆ ಪ್ರೀತಿ ತೋರಿಸುತ್ತಾನೆ. (ಧರ್ಮೋಪದೇಶಕಾಂಡ 7:12, 13 ಓದಿ.) ಆದರೆ ದೇವರನ್ನು ನೋಡಲಿಕ್ಕಾಗುವುದಿಲ್ಲ. ಹಾಗಾಗಿ ನಾವು ಆತನನ್ನು ಪ್ರೀತಿಸಲು ನಿಜವಾಗಲೂ ಆಗುತ್ತದಾ? ಯೆಹೋವನನ್ನು ಪ್ರೀತಿಸುವುದು ಅಂದರೆ ಏನು? ಯಾಕೆ ನಾವು ಆತನನ್ನು ಪ್ರೀತಿಸಬೇಕು? ದೇವರ ಮೇಲೆ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
ದೇವರನ್ನು ಪ್ರೀತಿಸಲು ನಮ್ಮಿಂದ ಸಾಧ್ಯ
3, 4. ಯೆಹೋವನನ್ನು ಪ್ರೀತಿಸಲು ನಮ್ಮಿಂದ ಸಾಧ್ಯ ಏಕೆ?
3 “ದೇವರು ಆತ್ಮಜೀವಿಯಾಗಿದ್ದಾನೆ.” ಆದ್ದರಿಂದ ನಮಗೆ ಆತನನ್ನು ನೋಡಲಾಗುವುದಿಲ್ಲ. (ಯೋಹಾ. 4:24) ಹಾಗಿದ್ದರೂ ಯೆಹೋವನನ್ನು ಪ್ರೀತಿಸುವುದು ಸಾಧ್ಯ. ಹೀಗೆ ಮಾಡಬೇಕೆಂದು ನಮಗೆ ಬೈಬಲ್ನಲ್ಲಿ ಆಜ್ಞೆಯೂ ಇದೆ. ಉದಾಹರಣೆಗೆ ಮೋಶೆ ಇಸ್ರಾಯೇಲ್ಯರಿಗೆ ಹೀಗಂದನು: “ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.”—ಧರ್ಮೋ. 6:5.
4 ನಾವು ದೇವರನ್ನು ಗಾಢವಾಗಿ ಪ್ರೀತಿಸಲು ಸಾಧ್ಯ. ಏಕೆಂದರೆ ಆತನು ನಮ್ಮನ್ನು ಆಧ್ಯಾತ್ಮಿಕತೆಯ ಅಗತ್ಯ ಉಳ್ಳವರಾಗಿ ಸೃಷ್ಟಿಸಿದ್ದಾನೆ. ಪ್ರೀತಿಯನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನೂ ನಮಗೆ ಕೊಟ್ಟಿದ್ದಾನೆ. ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ನಾವು ಸರಿಯಾಗಿ ಪೂರೈಸಿಕೊಂಡಾಗ ಯೆಹೋವನ ಮೇಲಿನ ನಮ್ಮ ಪ್ರೀತಿ ಬೆಳೆಯುತ್ತದೆ ಮತ್ತು ಸಂತೋಷವಾಗಿರಲು ನಮಗೆ ನಿಜ ಕಾರಣವಿರುತ್ತದೆ. “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು” ಎಂದನು ಯೇಸು. (ಮತ್ತಾ. 5:3) ಮ್ಯಾನ್ ಡಸ್ ನಾಟ್ ಸ್ಟ್ಯಾಂಡ್ ಅಲೋನ್ ಎಂಬ ಪುಸ್ತಕದಲ್ಲಿ ಎ.ಸಿ. ಮೋರಿಸನ್, ಮಾನವರು ಆರಂಭದಿಂದಲೇ ದೇವರ ಹುಡುಕಾಟದಲ್ಲಿ ತೊಡಗಿರುವ ಮತ್ತು ದೇವರನ್ನು ನಂಬಲು ಬಯಸಿರುವ ಸಂಗತಿ ವಿಸ್ಮಯಕಾರಿ ಎಂದು ಬರೆದಿದ್ದಾರೆ. ದೇವರನ್ನು ತಿಳಿಯಬೇಕು ಎನ್ನುವ ಅಗತ್ಯ ಮನುಷ್ಯನಿಗೆ ಹುಟ್ಟಿನಿಂದಲೇ ಬಂದಿದೆ ಎಂಬುದು ಈ ಲೇಖಕರಂತೆ ಅನೇಕರಿಗೆ ಅನಿಸುತ್ತದೆ.
5. ದೇವರಿಗಾಗಿ ಹುಡುಕುವುದು ವ್ಯರ್ಥವಲ್ಲ ಎಂದು ನಮಗೆ ಹೇಗೆ ಗೊತ್ತು?
5 ದೇವರನ್ನು ಹುಡುಕುವುದು ವ್ಯರ್ಥವಾ? ಖಂಡಿತ ಇಲ್ಲ. ಏಕೆಂದರೆ ನಾವಾತನನ್ನು ಕಂಡುಕೊಳ್ಳಬೇಕೆಂದು ದೇವರೇ ಬಯಸುತ್ತಾನೆ. ಪೌಲನು ಈ ವಿಷಯವನ್ನು ಅರಿಯೊಪಾಗದಲ್ಲಿ ನೆರೆದು ಬಂದಿದ್ದ ಜನರ ಗುಂಪಿಗೆ ಸಾಕ್ಷಿ ನೀಡುತ್ತಾ ಸ್ಪಷ್ಟಪಡಿಸಿದನು. ಅಲ್ಲಿಂದ ಕಣ್ಣಳತೆ ದೂರದಲ್ಲೇ ಪುರಾತನ ಅಥೆನ್ಸ್ನ ಊರ ದೇವತೆಯಾದ ಅಥೆನಳಿಗಾಗಿ ಕಟ್ಟಿಸಿದ ಪಾರ್ಥಿನಾನ್ ದೇವಾಲಯ ಇತ್ತು. “ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರ” ಬಗ್ಗೆ ಪೌಲನು ಮಾತಾಡಿದನು. ಈ ದೇವರು “ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ” ಎಂದು ವಿವರಿಸಿದನು. ಪೌಲ ಮುಂದುವರಿಸಿ ಹೇಳಿದ್ದು: “ಆತನು ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ ಅವರು ಭೂಮಿಯಾದ್ಯಂತ ವಾಸಿಸುವಂತೆ ಮಾಡಿದನು. ಆತನು ನಿಯಮಿತ ಕಾಲಗಳನ್ನೂ ಮನುಷ್ಯ ನಿವಾಸದ ಮೇರೆಗಳನ್ನೂ ನಿರ್ಣಯಿಸಿದನು; ಹೀಗೆ ಮಾಡಿದ್ದು, ಅವರು ದೇವರಿಗಾಗಿ ತಡಕಾಡಿ, ನಿಜವಾಗಿಯೂ ಕಂಡುಹಿಡಿಯುವ ಕಾರಣದಿಂದ ಆತನನ್ನು ಹುಡುಕುವಂತೆ ಮಾಡಲಿಕ್ಕಾಗಿಯೇ. ಆದರೂ ವಾಸ್ತವದಲ್ಲಿ ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ.” (ಅ. ಕಾ. 17:24-27) ಹೌದು ಮಾನವರು ದೇವರನ್ನು ಕಂಡುಕೊಳ್ಳಬಲ್ಲರು. 75 ಲಕ್ಷಕ್ಕಿಂತಲೂ ಹೆಚ್ಚು ಯೆಹೋವನ ಸಾಕ್ಷಿಗಳು ‘ಆತನನ್ನು ನಿಜವಾಗಿಯೂ ಕಂಡುಕೊಂಡಿದ್ದಾರೆ.’ ಅವರು ಆತನನ್ನು ತುಂಬ ಪ್ರೀತಿಸುತ್ತಾರೆ.
ದೇವರನ್ನು ಪ್ರೀತಿಸುವುದು ಅಂದರೇನು?
6. ಯಾವುದು “ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆ” ಎಂದು ಯೇಸು ಹೇಳಿದ್ದಾನೆ?
6 ಯೆಹೋವನಿಗಾಗಿ ಪ್ರೀತಿ ನಮ್ಮ ಹೃದಯದಿಂದ ಚಿಮ್ಮಬೇಕು. ಒಬ್ಬ ಫರಿಸಾಯನಿಗೆ ಕೊಟ್ಟ ಉತ್ತರದಲ್ಲಿ ಯೇಸು ಇದನ್ನು ಸ್ಪಷ್ಟಪಡಿಸಿದನು. ಆ ಫರಿಸಾಯ ಕೇಳಿದ್ದು: “ಬೋಧಕನೇ, ಧರ್ಮಶಾಸ್ತ್ರದಲ್ಲಿ ಅತಿ ದೊಡ್ಡ ಆಜ್ಞೆ ಯಾವುದು?” ಅದಕ್ಕೆ ಯೇಸು ಉತ್ತರಿಸಿದ್ದು: “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು.’ ಇದೇ ಅತಿ ದೊಡ್ಡದಾದ ಮತ್ತು ಮೊದಲನೆಯ ಆಜ್ಞೆಯಾಗಿದೆ.”—ಮತ್ತಾ. 22:34-38.
7. (ಎ) ಯೆಹೋವನನ್ನು “ಪೂರ್ಣ ಹೃದಯದಿಂದ” ಪ್ರೀತಿಸುವುದು ಅಂದರೇನು? (ಬಿ) “ಪೂರ್ಣ ಪ್ರಾಣದಿಂದ” ಪ್ರೀತಿಸುವುದು ಅಂದರೇನು? (ಸಿ) “ಪೂರ್ಣ ಮನಸ್ಸಿನಿಂದ” ಪ್ರೀತಿಸುವುದು ಅಂದರೇನು?
7 ನಾವು “ಪೂರ್ಣ ಹೃದಯದಿಂದ” “ಪೂರ್ಣ ಪ್ರಾಣದಿಂದ” “ಪೂರ್ಣ ಮನಸ್ಸಿನಿಂದ” ದೇವರನ್ನು ಪ್ರೀತಿಸಬೇಕು ಎಂದು ಯೇಸು ಹೇಳಿದಾಗ ಆತನ ಮಾತಿನ ಅರ್ಥವೇನಾಗಿತ್ತು? “ಪೂರ್ಣ ಹೃದಯ” ಅಂದರೆ ನಮ್ಮ ಆಸೆ, ಭಾವನೆ, ಅನಿಸಿಕೆಗಳು ಸೇರಿವೆ. “ಪೂರ್ಣ ಪ್ರಾಣ” ಅಂದರೆ ನಮ್ಮ ಇಡೀ ಜೀವ ಹಾಗೂ ಜೀವನದಲ್ಲಿ ಮಾಡುವ ಎಲ್ಲಾ ಕಾರ್ಯಗಳು. “ಪೂರ್ಣ ಮನಸ್ಸು” ಅಂದರೆ ನಮ್ಮ ಸಂಪೂರ್ಣ ಬುದ್ಧಿಶಕ್ತಿ. ಒಟ್ಟಿನಲ್ಲಿ, ಯಾವುದೇ ಮಿತಿಯಿಲ್ಲದೆ ಸಂಪೂರ್ಣವಾಗಿ ಯೆಹೋವನನ್ನು ಪ್ರೀತಿಸಬೇಕೆಂದು ಯೇಸು ಹೇಳುತ್ತಿದ್ದನು.
8. ದೇವರನ್ನು ಪೂರ್ಣವಾಗಿ ಪ್ರೀತಿಸುತ್ತಿರುವುದಾದರೆ ನಾವೇನು ಮಾಡುತ್ತೇವೆ?
8 ನಾವು ದೇವರನ್ನು ಪೂರ್ಣ ಹೃದಯ, ಪ್ರಾಣ, ಮನಸ್ಸಿನಿಂದ ಪ್ರೀತಿಸುತ್ತಿರುವುದಾದರೆ ಬೈಬಲಿನ ಒಳ್ಳೇ ವಿದ್ಯಾರ್ಥಿಗಳಾಗಿರುತ್ತೇವೆ, ದೇವರ ಉದ್ದೇಶಕ್ಕೆ ಹೊಂದಿಕೆಯಲ್ಲಿ ಇರುತ್ತೇವೆ, ಹುರುಪಿನಿಂದ ರಾಜ್ಯದ ಸುವಾರ್ತೆಯನ್ನು ಸಾರುತ್ತೇವೆ. (ಮತ್ತಾ. 24:14; ರೋಮ. 12:1, 2) ಯೆಹೋವನ ಮೇಲಿನ ನಿಜ ಪ್ರೀತಿ ನಾವಾತನಿಗೆ ಹತ್ತಿರವಾಗುವಂತೆ ಮಾಡುತ್ತದೆ. (ಯಾಕೋ. 4:8) ನಾವು ದೇವರನ್ನು ಏಕೆ ಪ್ರೀತಿಸಬೇಕು ಎಂಬುದಕ್ಕೆ ಇರುವ ಎಲ್ಲಾ ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಲಾಗುವುದಿಲ್ಲ ನಿಜ. ಆದರೆ ಕೆಲವೊಂದನ್ನು ಈಗ ನೋಡೋಣ.
ಯಾಕೆ ನಾವು ಯೆಹೋವನನ್ನು ಪ್ರೀತಿಸಬೇಕು?
9. ಸೃಷ್ಟಿಕರ್ತನೂ ಒದಗಿಸುವಾತನೂ ಆಗಿರುವ ಯೆಹೋವನನ್ನು ನೀವೇಕೆ ಪ್ರೀತಿಸುತ್ತೀರಿ?
9 ಯೆಹೋವನು ನಮ್ಮ ಸೃಷ್ಟಿಕರ್ತ, ಎಲ್ಲವನ್ನೂ ಒದಗಿಸುವಾತ. “ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ” ಎಂದ ಪೌಲ. (ಅ. ಕಾ. 17:28) ಈ ಸುಂದರ ಭೂಮಿಯನ್ನು ನಮಗೆ ಮನೆಯಾಗಿ ಕೊಟ್ಟವನು ಯೆಹೋವನು. (ಕೀರ್ತ. 115:16) ನಮಗೆ ಬದುಕಲು ಬೇಕಾದ ಆಹಾರ ಮತ್ತು ಇನ್ನಿತರ ವಸ್ತುಗಳನ್ನು ದಯಪಾಲಿಸುತ್ತಿರುವುದೂ ಆತನೇ. ಆದ್ದರಿಂದಲೇ ಪೌಲನು ವಿಗ್ರಹಾರಾಧಕರಾಗಿದ್ದ ಲುಸ್ತ್ರದ ಜನರಿಗೆ ಹೀಗಂದ: “ಜೀವವುಳ್ಳ ದೇವರು . . . ತನ್ನ ಕುರಿತು ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ಅನುಗ್ರಹಿಸಿ, ಹೇರಳವಾಗಿ ಆಹಾರವನ್ನು ಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುವ ಮೂಲಕ ಆತನು ಒಳ್ಳೇದನ್ನು ಮಾಡಿದನು.” (ಅ. ಕಾ. 14:15-17) ನಮ್ಮ ಮಹಾನ್ ಸೃಷ್ಟಿಕರ್ತನಾದ, ಎಲ್ಲವನ್ನೂ ಪ್ರೀತಿಯಿಂದ ಒದಗಿಸುವಾತನಾದ ದೇವರನ್ನು ಪ್ರೀತಿಸಲು ಇದೊಂದು ಒಳ್ಳೇ ಕಾರಣವಲ್ಲವೇ?—ಪ್ರಸಂ. 12:1.
10. ಪಾಪ ಮತ್ತು ಮರಣವನ್ನು ತೆಗೆದುಹಾಕುವ ದೇವರ ಏರ್ಪಾಡಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
10 ನಾವು ಆದಾಮನಿಂದ ಬಾಧ್ಯತೆಯಾಗಿ ಪಡೆದ ಪಾಪ ಮತ್ತು ಮರಣವನ್ನು ತೆಗೆದುಹಾಕುವ ಏರ್ಪಾಡು ಮಾಡಿದ್ದಾನೆ. (ರೋಮ. 5:12) “ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತದ್ದರಲ್ಲಿ ದೇವರು ತನ್ನ ಸ್ವಂತ ಪ್ರೀತಿಯನ್ನು ನಮಗೆ ಶಿಫಾರಸ್ಸುಮಾಡುತ್ತಾನೆ.” (ರೋಮ. 5:8) ನಾವು ಪಶ್ಚಾತ್ತಾಪಪಟ್ಟು ಯೇಸು ಕೊಟ್ಟ ವಿಮೋಚನಾ ಮೌಲ್ಯದ ಯಜ್ಞದಲ್ಲಿ ನಂಬಿಕೆಯನ್ನಿಟ್ಟರೆ ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಈ ಕಾರಣದಿಂದಾಗಿ ಆತನ ಮೇಲೆ ನಮಗೆ ಪ್ರೀತಿ ಉಕ್ಕೇರುತ್ತದೆ.—ಯೋಹಾ. 3:16.
11, 12. ಯೆಹೋವನು ನಮಗೆ ಯಾವೆಲ್ಲ ವಿಧದ ನಿರೀಕ್ಷೆ ಕೊಟ್ಟಿದ್ದಾನೆ?
11 ಯೆಹೋವನು ‘ನಿರೀಕ್ಷೆಯ ಮೂಲಕ ನಮ್ಮಲ್ಲಿ ಆನಂದ ಶಾಂತಿಯನ್ನು ತುಂಬಿಸುತ್ತಾನೆ.’ (ರೋಮ. 15:13) ನಮ್ಮ ನಂಬಿಕೆಗೆ ಸವಾಲೊಡ್ಡುವ ಕಷ್ಟ-ಪರೀಕ್ಷೆಗಳನ್ನು ತಾಳಲು ದೇವರು ಕೊಟ್ಟಿರುವ ನಿರೀಕ್ಷೆ ಸಹಾಯ ಮಾಡುತ್ತದೆ. ಅಭಿಷಿಕ್ತ ಕ್ರೈಸ್ತರಿಗಾದರೊ ‘ಮರಣದ ತನಕ ನಂಬಿಗಸ್ತರಾಗಿದ್ದರೆ ಸ್ವರ್ಗದಲ್ಲಿ ಜೀವದ ಕಿರೀಟ’ ಲಭಿಸುವುದು. (ಪ್ರಕ. 2:10) ಭೂಮಿಯ ಮೇಲೆ ಜೀವಿಸುವ ನಿರೀಕ್ಷೆಯುಳ್ಳ ಸಮಗ್ರತಾ ಪಾಲಕರಿಗೆ ವಾಗ್ದತ್ತ ಭೂಪರದೈಸಲ್ಲಿ ಅನಂತ ಆಶೀರ್ವಾದಗಳು ಸಿಗುವವು. (ಲೂಕ 23:43) ಇಂಥ ಆಶೀರ್ವಾದಗಳ ಬಗ್ಗೆ ನಮ್ಮ ಸಹಜ ಪ್ರತಿಕ್ರಿಯೆ ಏನು? ಇದು ನಮ್ಮಲ್ಲಿ ಸಂತೋಷ ಶಾಂತಿಯನ್ನು ತುಂಬಿಸಿ, ‘ಪ್ರತಿಯೊಂದು ಒಳ್ಳೆಯ ದಾನ ಪ್ರತಿಯೊಂದು ಪರಿಪೂರ್ಣ ವರವನ್ನು’ ಕೊಡುವ ದೇವರಿಗಾಗಿ ಪ್ರೀತಿಯನ್ನು ಹುಟ್ಟಿಸುವುದಿಲ್ಲವೇ?—ಯಾಕೋ. 1:17.
12 ಪುನರುತ್ಥಾನವೆಂಬ ಹೃದಯಸ್ಪರ್ಶಿ ನಿರೀಕ್ಷೆಯನ್ನು ದೇವರು ನಮಗೆ ಕೊಟ್ಟಿದ್ದಾನೆ. (ಅ. ಕಾ. 24:15) ನಾವು ಪ್ರೀತಿಸುವ ಯಾರಾದರು ಸಾವಿನಲ್ಲಿ ನಮ್ಮನ್ನು ಅಗಲಿದಾಗ ತುಂಬ ದುಃಖಪಡುತ್ತೇವೆ. ಆದರೆ ಪುನರುತ್ಥಾನದ ನಿರೀಕ್ಷೆಯಿರುವುದರಿಂದ ನಾವು ‘ನಿರೀಕ್ಷೆಯಿಲ್ಲದವರಂತೆ ದುಃಖಿಸುವುದಿಲ್ಲ.’ (1 ಥೆಸ. 4:13) ಯೆಹೋವ ದೇವರು ಪ್ರೀತಿಯಿಂದ ಪ್ರಚೋದಿತನಾಗಿ ಯೋಬನಂಥ ನೀತಿವಂತರನ್ನು ಪುನರುತ್ಥಾನ ಮಾಡಲು ಹಂಬಲಿಸುತ್ತಿದ್ದಾನೆ. (ಯೋಬ 14:15) ಪುನರುತ್ಥಾನಗೊಂಡವರು ತಮ್ಮ ಕುಟುಂಬ, ಸ್ನೇಹಿತರೊಟ್ಟಿಗೆ ಪುನರ್ಮಿಲನವಾಗುವ ದೃಶ್ಯವನ್ನು ತುಸು ಕಲ್ಪಿಸಿಕೊಳ್ಳಿ. ಇಂಥ ಮನಸ್ಪರ್ಶಿ ನಿರೀಕ್ಷೆ ಕೊಟ್ಟಿರುವ ನಮ್ಮ ಸ್ವರ್ಗೀಯ ತಂದೆಯ ಮೇಲೆ ನಮ್ಮ ಪ್ರೀತಿ ಇನ್ನಷ್ಟು ಹೆಚ್ಚುತ್ತದಲ್ಲವೇ!
13. ದೇವರಿಗೆ ನಮ್ಮ ಬಗ್ಗೆ ಕಾಳಜಿ ಇದೆ ಎಂಬುದಕ್ಕೆ ಯಾವ ಪುರಾವೆ ಇದೆ?
13 ಯೆಹೋವನಿಗೆ ನಮ್ಮ ಬಗ್ಗೆ ಕಾಳಜಿ ಇದೆ. (ಕೀರ್ತ. 34:6, 18, 19; 1 ಪೇತ್ರ 5:6, 7 ಓದಿ.) ತನಗೆ ನಂಬಿಗಸ್ತರಾಗಿರುವವರಿಗೆ ಸಹಾಯ ಮಾಡಲು ನಮ್ಮ ಪ್ರೀತಿಭರಿತ ದೇವರು ಯಾವಾಗಲೂ ಸಿದ್ಧನಿರುತ್ತಾನೆ ಎಂದು ನಮಗೆ ತಿಳಿದಿದೆ. ಹಾಗಾಗಿ ‘ಆತನು ಪಾಲಿಸುವ ಮಂದೆಯ’ ಭಾಗವಾಗಿರುವ ನಮಗೆ ಸುರಕ್ಷೆಯ ಭಾವನೆ ಇದೆ. (ಕೀರ್ತ. 79:13) ಅಷ್ಟೇ ಅಲ್ಲ, ಆತನು ಮೆಸ್ಸೀಯ ರಾಜ್ಯದ ಮೂಲಕ ಪೂರೈಸಲಿರುವ ವಿಷಯಗಳಿಂದ ನಮ್ಮ ಮೇಲೆ ಆತನು ಇಟ್ಟಿರುವ ಪ್ರೀತಿ ಇನ್ನಷ್ಟು ತೋರಿಬರಲಿದೆ. ಆತನಿಂದ ನೇಮಿತನಾದ ಅರಸ ಯೇಸು ಕ್ರಿಸ್ತನು ಕ್ರೂರತನ, ದಬ್ಬಾಳಿಕೆ, ದುಷ್ಟತನವನ್ನು ಭೂಮಿಯಿಂದ ಅಳಿಸಿಹಾಕುವನು. ನಂತರ ಮಾನವಕುಲಕ್ಕೆ ನಿರಂತರ ಶಾಂತಿ ಮತ್ತು ಏಳಿಗೆಯ ಆಶೀರ್ವಾದ ದೊರಕುವುದು. (ಕೀರ್ತ. 72:7, 12-14, 16) ಇಂಥ ಪ್ರತೀಕ್ಷೆಗಳು, ನಮ್ಮ ಕಾಳಜಿಭರಿತ ದೇವರನ್ನು ಪೂರ್ಣ ಹೃದಯ, ಪ್ರಾಣ, ಬಲ ಮತ್ತು ಮನಸ್ಸಿನಿಂದ ಪ್ರೀತಿಸಲು ಇನ್ನಷ್ಟು ಕಾರಣ ಕೊಡುತ್ತದಲ್ಲವೇ?—ಲೂಕ 10:27.
14. ಬೆಲೆಕಟ್ಟಲಾಗದ ಯಾವ ಸುಯೋಗವನ್ನು ದೇವರು ನಮಗೆ ದಯಪಾಲಿಸಿದ್ದಾನೆ?
14 ಯೆಹೋವನು ನಮಗೆ ತನ್ನ ಸಾಕ್ಷಿಗಳಾಗಿರುವ ಮಹಾ ಸುಯೋಗವನ್ನು ದಯಪಾಲಿಸಿದ್ದಾನೆ. (ಯೆಶಾ. 43:10-12) ಈ ಸದವಕಾಶ ಕೊಟ್ಟಿರುವುದಕ್ಕೆ ನಾವು ದೇವರನ್ನು ಪ್ರೀತಿಸುತ್ತೇವೆ. ಆತನ ಸಾಕ್ಷಿಗಳಾಗಿದ್ದು ನಾವಾತನ ಪರಮಾಧಿಕಾರವನ್ನು ಬೆಂಬಲಿಸುತ್ತೇವೆ ಮತ್ತು ಈ ತೊಂದರೆಗ್ರಸ್ತ ಲೋಕದಲ್ಲಿರುವ ಜನರಿಗೆ ನಿಜ ನಿರೀಕ್ಷೆ ಕೊಡುತ್ತೇವೆ. ಈ ನಿರೀಕ್ಷೆ ಬಗ್ಗೆ ನಾವು ನಂಬಿಕೆ ಮತ್ತು ನಿಶ್ಚಿತತೆಯಿಂದ ಮಾತಾಡುತ್ತೇವೆ. ಯಾಕೆಂದರೆ ನಾವು ಸಾರುತ್ತಿರುವ ಈ ಸುವಾರ್ತೆ ಸತ್ಯ ದೇವರ ವಾಕ್ಯದ ಮೇಲೆ ಆಧರಿತವಾಗಿದೆ. ನಿರೀಕ್ಷೆ ಕೊಡುವ ಆತನ ವಾಗ್ದಾನಗಳು ಎಂದೂ ಸುಳ್ಳಾಗುವುದಿಲ್ಲ. (ಯೆಹೋಶುವ 21:45; 23:14 ಓದಿ.) ಆಶೀರ್ವಾದಗಳ ಮತ್ತು ಯೆಹೋವನನ್ನು ಪ್ರೀತಿಸಲು ನಮಗಿರುವ ಕಾರಣಗಳ ಪಟ್ಟಿ ಹೀಗೆ ಉದ್ದವಾಗುತ್ತಲೇ ಹೋಗುತ್ತದೆ. ಆದರೆ ಆತನ ಮೇಲೆ ನಮಗಿರುವ ಪ್ರೀತಿಯನ್ನು ತೋರಿಸುವುದು ಹೇಗೆ?
ದೇವರ ಮೇಲೆ ನಮಗಿರುವ ಪ್ರೀತಿಯನ್ನು ಹೇಗೆ ತೋರಿಸಬಲ್ಲೆವು?
15. ದೇವರ ವಾಕ್ಯದ ಅಧ್ಯಯನ ಮತ್ತು ಅನ್ವಯ ಹೇಗೆ ಸಹಾಯಕಾರಿ?
15 ದೇವರ ವಾಕ್ಯದ ಒಳ್ಳೇ ಅಧ್ಯಯನ ಮಾಡಿ ಅದನ್ನು ಅನ್ವಯಿಸಿ. ಹೀಗೆ ಮಾಡಿದರೆ ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ನಿಜವಾಗಲೂ ಆತನ ವಾಕ್ಯ ‘ನಮ್ಮ ದಾರಿಗೆ ಬೆಳಕಾಗಿರುವಂತೆ’ ಬಯಸುತ್ತೇವೆಂದು ತೋರಿಸಿಕೊಡುತ್ತೇವೆ. (ಕೀರ್ತ. 119:105) ಕಷ್ಟದಿಂದಾಗಿ ನಾವು ನೊಂದಿರುವಲ್ಲಿ ಇಂಥ ಮಾತುಗಳಿಂದ ಸಾಂತ್ವನ ಪಡೆಯಬಹುದು: “ದೇವರೇ, ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು ನೀನು ತಿರಸ್ಕರಿಸುವದಿಲ್ಲ.” “ನಿನ್ನ ಕೃಪೆಯು ನನಗೆ ಆಧಾರವಾಯಿತು. ನನ್ನಲ್ಲಿ ಅನೇಕ ಚಿಂತೆಗಳಿರುವಾಗ ನಿನ್ನ ಸಂತೈಸುವಿಕೆಯಿಂದಲೇ ನನ್ನ ಪ್ರಾಣಕ್ಕೆ ಸಂತೋಷವುಂಟಾಗುತ್ತದೆ.” (ಕೀರ್ತ. 51:17; 94:18, 19) ಕಷ್ಟದಲ್ಲಿರುವವರಿಗೆ ಯೆಹೋವನು ಕರುಣೆ ತೋರಿಸುತ್ತಾನೆ. ಇದೇ ರೀತಿಯ ಕನಿಕರದ ಭಾವನೆ ಯೇಸುವಿಗೂ ಇದೆ. (ಯೆಶಾ. 49:13; ಮತ್ತಾ. 15:32) ಬೈಬಲ್ ಅಧ್ಯಯನ ಮಾಡಿದರೆ ಯೆಹೋವನಿಗೆ ನಮ್ಮ ಬಗ್ಗೆ ಇರುವ ಕಾಳಜಿ ಚೆನ್ನಾಗಿ ತಿಳಿದುಬರುತ್ತದೆ. ಆಗ ಆತನ ಮೇಲಿರುವ ಪ್ರೀತಿ ಇನ್ನಷ್ಟು ಗಾಢವಾಗುತ್ತದೆ.
16. ನಿಯಮಿತವಾಗಿ ಮಾಡುವ ಪ್ರಾರ್ಥನೆ ದೇವರ ಮೇಲಿನ ನಮ್ಮ ಪ್ರೀತಿ ಬೆಳೆಯುವಂತೆ ಮಾಡುತ್ತದೆ ಹೇಗೆ?
16 ನಿಯಮಿತವಾಗಿ ದೇವರಿಗೆ ಪ್ರಾರ್ಥಿಸಿರಿ. ನಮ್ಮ ಪ್ರಾರ್ಥನೆಗಳು ನಮ್ಮನ್ನು ‘ಪ್ರಾರ್ಥನೆಯನ್ನು ಕೇಳುವವನ’ ಹತ್ತಿರಕ್ಕೆ ಸೆಳೆಯುತ್ತವೆ. (ಕೀರ್ತ. 65:2) ದೇವರು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಿದ್ದಾನೆ ಎನ್ನುವುದನ್ನು ನಾವು ಅರಿತಾಗ ಆತನ ಮೇಲಿನ ಪ್ರೀತಿ ಇನ್ನಷ್ಟು ಗಾಢವಾಗುತ್ತದೆ. ಉದಾಹರಣೆಗೆ ನಮ್ಮಿಂದ ಸಹಿಸಲಾಗದಷ್ಟರ ಮಟ್ಟಿಗೆ ಪ್ರಲೋಭನೆಯನ್ನು ದೇವರು ಅನುಮತಿಸುವುದಿಲ್ಲ ಎಂದು ನಾವು ನೋಡಿರಬಹುದು. (1 ಕೊರಿಂ. 10:13) ನಮಗೆ ಕಳವಳ ಆತಂಕ ಇರುವಲ್ಲಿ ಶ್ರದ್ಧಾಪೂರ್ವಕ ಪ್ರಾರ್ಥನೆಯಿಂದ ಸಿಗುವ ಅಸಾಮಾನ್ಯ “ದೇವಶಾಂತಿ”ಯನ್ನು ನಾವು ಅನುಭವಿಸಬಹುದು. (ಫಿಲಿ. 4:6, 7) ಕೆಲವೊಮ್ಮೆ ನೆಹೆಮೀಯನ ಹಾಗೆ ನಾವು ಮಾಡುವ ಮೌನ ಪ್ರಾರ್ಥನೆಯನ್ನು ಕೂಡ ಯೆಹೋವನು ಉತ್ತರಿಸುತ್ತಾನೆಂಬುದು ನಮ್ಮ ಅನುಭವಕ್ಕೆ ಬರಬಹುದು. (ನೆಹೆ. 2:1-6) ‘ಪಟ್ಟುಹಿಡಿದು ಪ್ರಾರ್ಥಿಸಿದಾಗಲೆಲ್ಲಾ’ ಯೆಹೋವನು ನಮ್ಮ ಬಿನ್ನಹಕ್ಕೆ ಕಿವಿಗೊಡುತ್ತಿದ್ದಾನೆ ಎಂದು ಗ್ರಹಿಸಿದಾಗ ಆತನ ಮೇಲೆ ನಮಗೆ ಪ್ರೀತಿ ಇನ್ನೂ ಹೆಚ್ಚಾಗುತ್ತದೆ. ಭವಿಷ್ಯದಲ್ಲಿ ನಮ್ಮ ನಂಬಿಕೆಗೆ ಸವಾಲೊಡ್ಡುವ ಪರೀಕ್ಷೆಗಳನ್ನು ಎದುರಿಸಲು ಆತನು ಸಹಾಯ ಮಾಡುತ್ತಾನೆ ಎಂಬ ಧೈರ್ಯ ಕೂಡ ಹೆಚ್ಚುತ್ತದೆ.—ರೋಮ. 12:12.
17. ನಮಗೆ ದೇವರ ಮೇಲೆ ಪ್ರೀತಿ ಇದ್ದರೆ ಕೂಟಗಳಿಗೆ ಹಾಜರಾಗುವುದರ ಬಗ್ಗೆ ನಮ್ಮ ನೋಟ ಏನಾಗಿರುತ್ತದೆ?
17 ಕ್ರೈಸ್ತ ಕೂಟಗಳಿಗೆ, ಸಮ್ಮೇಳನಗಳಿಗೆ, ಅಧಿವೇಶನಗಳಿಗೆ ತಪ್ಪದೆ ಹಾಜರಾಗುವ ರೂಢಿ ಬೆಳೆಸಿಕೊಳ್ಳಿ. (ಇಬ್ರಿ. 10:24, 25) ಇಸ್ರಾಯೇಲ್ಯರು ಯೆಹೋವನ ಮೇಲೆ ತಮ್ಮ ಭಕ್ತಿ ಹೆಚ್ಚಿಸಲಿಕ್ಕಾಗಿ ಮತ್ತು ಆತನ ಆಜ್ಞೆಗಳನ್ನು ಪಾಲಿಸಲಿಕ್ಕಾಗಿ ಕೂಡಿಬಂದು ಯೆಹೋವನ ಬಗ್ಗೆ ಕೇಳಿಸಿಕೊಳ್ಳುತ್ತಿದ್ದರು ಮತ್ತು ಕಲಿಯುತ್ತಿದ್ದರು. (ಧರ್ಮೋ. 31:12) ನಾವು ದೇವರನ್ನು ನಿಜವಾಗಿ ಪ್ರೀತಿಸುವುದಾದರೆ ಆತನ ಚಿತ್ತದಂತೆ ನಡೆಯುವುದು ಹೊರೆಯಾಗಿರುವುದಿಲ್ಲ. (1 ಯೋಹಾನ 5:3 ಓದಿ.) ಆದ್ದರಿಂದ ನಾವು ಕೂಟಕ್ಕೆ ಹೋಗಲು ಯಾವುದೇ ವಿಷಯ ಅಡ್ಡಬರುವಂತೆ ಬಿಡಬಾರದು. ದೇವರ ಮೇಲೆ ನಮಗೆ ಮೊದಲಿದ್ದ ಪ್ರೀತಿಯನ್ನು ಕಳಕೊಳ್ಳುವಂತೆ ಮಾಡುವ ಯಾವುದಕ್ಕೂ ಆಸ್ಪದಕೊಡಬಾರದು.—ಪ್ರಕ. 2:4.
18. ದೇವರ ಮೇಲಿನ ಪ್ರೀತಿ ನಾವು ಸುವಾರ್ತೆಯ ವಿಷಯದಲ್ಲಿ ಏನನ್ನು ಮಾಡುವಂತೆ ಪ್ರೇರಿಸುತ್ತದೆ?
18 ‘ಸುವಾರ್ತೆಯ ಸತ್ಯವನ್ನು’ ಹುರುಪಿನಿಂದ ಸಾರಿರಿ. (ಗಲಾ. 2:5) ನಮಗೆ ದೇವರ ಮೇಲೆ ಪ್ರೀತಿ ಇರುವುದರಿಂದಲೇ ಆತನ ಪ್ರಿಯ ಪುತ್ರನ ರಾಜ್ಯದ ಬಗ್ಗೆ ಸಾರುತ್ತೇವೆ. ಆತನ ಈ ಪುತ್ರ ಅರ್ಮಗೆದೋನ್ ಮೂಲಕ ‘ಸತ್ಯತೆಯನ್ನು ಸ್ಥಾಪಿಸುತ್ತಾನೆ.’ (ಕೀರ್ತ. 45:4; ಪ್ರಕ. 16:14, 16) ದೇವರ ಪ್ರೀತಿಯ ಬಗ್ಗೆ ಮತ್ತು ಹೊಸ ಲೋಕದ ಬಗ್ಗೆ ಇತರರಿಗೆ ಕಲಿಸಿ ಶಿಷ್ಯರನ್ನಾಗಿ ಮಾಡುವ ಕೆಲಸದ ಭಾಗವಾಗಿರುವುದು ಎಷ್ಟು ಆನಂದ ತರುತ್ತದೆ!—ಮತ್ತಾ. 28:19, 20.
19. ತನ್ನ ಮಂದೆಯನ್ನು ಪರಿಪಾಲಿಸಲು ಯೆಹೋವನು ಮಾಡಿರುವ ಏರ್ಪಾಡಿಗೆ ನಾವೇಕೆ ಕೃತಜ್ಞತೆ ತೋರಿಸಬೇಕು?
19 ತನ್ನ ಮಂದೆಯನ್ನು ಪರಿಪಾಲಿಸಲು ದೇವರು ಮಾಡಿರುವ ಏರ್ಪಾಡಿಗಾಗಿ ಕೃತಜ್ಞತೆ ತೋರಿಸಿ. (ಅ. ಕಾ. 20:28) ಯಾವಾಗಲೂ ನಮ್ಮ ಹಿತ ಬಯಸುವ ಯೆಹೋವನು ಕ್ರೈಸ್ತ ಹಿರಿಯರ ಏರ್ಪಾಡನ್ನು ಮಾಡಿದ್ದಾನೆ. ಹಿರಿಯರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇದ್ದಾರೆ. (ಯೆಶಾ. 32:1, 2) ಜೋರಾಗಿ ಗಾಳಿ ಬೀಸುವಾಗ ಅಥವಾ ಬಿರುಗಾಳಿ ಮಳೆ ಬರುವಾಗ ನಮಗೆ ಆಸರೆ ಸಿಕ್ಕಿದರೆ ಎಷ್ಟು ನೆಮ್ಮದಿ ಸಿಗುತ್ತದೆ! ಸುಡು ಬಿಸಿಲು ನೆತ್ತಿಯ ಮೇಲೆ ಹೊಡೆಯುತ್ತಿರುವಾಗ ಬಂಡೆ ಕಲ್ಲಿನ ನೆರಳು ಸಿಕ್ಕಿದರೆ ಹೇಗಿರುತ್ತದೆ! ಈ ಭಾಷಾಲಂಕಾರಗಳು ಹಿರಿಯರು ಆಧ್ಯಾತ್ಮಿಕ ಸಹಾಯ ಮತ್ತು ಚೈತನ್ಯವನ್ನು ಕೊಡುತ್ತಾರೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಮುಂದಾಳತ್ವ ವಹಿಸುವವರಿಗೆ ವಿಧೇಯತೆ ತೋರಿಸುವ ಮೂಲಕ ‘ಮನುಷ್ಯರಲ್ಲಿ ದಾನಗಳಾಗಿರುವವರಿಗಾಗಿ’ ಕೃತಜ್ಞತೆ ತೋರಿಸುತ್ತೇವೆ. ಅಲ್ಲದೆ ಸಭೆಗೆ ಶಿರಸ್ಸಾಗಿರುವ ಯೇಸುವಿನ ಮೇಲೆ ಮತ್ತು ದೇವರ ಮೇಲೆ ಪ್ರೀತಿಯನ್ನೂ ವ್ಯಕ್ತಪಡಿಸುತ್ತೇವೆ.—ಎಫೆ. 4:8; 5:23; ಇಬ್ರಿ. 13:17.
ದೇವರ ಮೇಲೆ ನಿಮಗಿರುವ ಪ್ರೀತಿ ಬೆಳೆಯುತ್ತಾ ಇರಲಿ
20. ನೀವು ದೇವರನ್ನು ಪ್ರೀತಿಸುತ್ತಿರುವುದಾದರೆ ಯಾಕೋಬ 1:22-25ಕ್ಕೆ ಹೇಗೆ ಪ್ರತಿಕ್ರಿಯಿಸುವಿರಿ?
20 ಯೆಹೋವನ ಜೊತೆ ಪ್ರೀತಿಭರಿತ ಸಂಬಂಧವಿರುವಲ್ಲಿ ನೀವು ‘ಕೇಳಿಸಿಕೊಳ್ಳುವವರಾಗಿ ಮಾತ್ರ ಇರದೆ ವಾಕ್ಯದ ಪ್ರಕಾರ ಮಾಡುವವರಾಗಿಯೂ’ ಇರುವಿರಿ. (ಯಾಕೋಬ 1:22-25 ಓದಿ.) ‘ವಾಕ್ಯದ ಪ್ರಕಾರ ಮಾಡುವವನು’ ತನ್ನ ನಂಬಿಕೆಯನ್ನು ಕ್ರಿಯೆಗಳಲ್ಲಿ ತೋರಿಸುತ್ತಾನೆ. ಆ ಕ್ರಿಯೆಗಳು ಯಾವುದೆಂದರೆ ಹುರುಪಿನಿಂದ ಸುವಾರ್ತೆ ಸಾರುವುದು ಮತ್ತು ಕೂಟಗಳಲ್ಲಿ ಭಾಗವಹಿಸುವುದು. ನೀವು ಯೆಹೋವನನ್ನು ನಿಜವಾಗಿ ಪ್ರೀತಿಸುವುದಾದರೆ ಆತನ ‘ಲೋಪವಿಲ್ಲದ ಧರ್ಮಶಾಸ್ತ್ರಕ್ಕೆ’ ವಿಧೇಯರಾಗುವಿರಿ. ಆ ಧರ್ಮಶಾಸ್ತ್ರದಲ್ಲಿ ಆತನು ನಿಮ್ಮಿಂದ ಅವಶ್ಯಪಡಿಸುವಂಥದೆಲ್ಲವೂ ಸೇರಿದೆ.—ಕೀರ್ತ. 19:7-11.
21. ಹೃತ್ಪೂರ್ವಕ ಪ್ರಾರ್ಥನೆಗಳನ್ನು ಯಾವುದಕ್ಕೆ ಹೋಲಿಸಲಾಗಿದೆ?
21 ಯೆಹೋವ ದೇವರ ಮೇಲಿನ ಪ್ರೀತಿಯು ನಾವು ಆಗಿಂದಾಗ್ಗೆ ಹೃತ್ಪೂರ್ವಕ ಪ್ರಾರ್ಥನೆ ಮಾಡುವಂತೆ ಪ್ರೇರಿಸುತ್ತದೆ. ಇಸ್ರಾಯೇಲ್ಯರ ಸಮಯದಲ್ಲಿ ಯಾಜಕರು ಯೆಹೋವನ ಸನ್ನಿಧಿಯಲ್ಲಿ ಧೂಪವನ್ನು ಅರ್ಪಿಸುತ್ತಿದ್ದರು. ರಾಜ ದಾವೀದನು ತನ್ನ ಪ್ರಾರ್ಥನೆಗಳನ್ನು ಧೂಪಕ್ಕೆ ಹೋಲಿಸುತ್ತಾ ಹೀಗೆ ಹಾಡಿದನು: “ನನ್ನ ಪ್ರಾರ್ಥನೆಯು ಧೂಪದಂತೆಯೂ ನಾನು ಕೈಯೆತ್ತುವದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.” (ಕೀರ್ತ. 141:2; ವಿಮೋ. 30:7, 8) ನಿಮ್ಮ ದೀನ ಬಿನ್ನಹಗಳು, ಶ್ರದ್ಧಾಪೂರ್ವಕ ಯಾಚನೆಗಳು, ಹೃತ್ಪೂರ್ವಕ ಕೃತಜ್ಞತಾ ಸ್ತುತಿಯ ಮಾತುಗಳು ಸುವಾಸನಾಭರಿತ ಧೂಪದಂತಿರಲಿ. ಈ ಧೂಪ ಯೆಹೋವನಿಗೆ ಸ್ವೀಕೃತವಾದ ಪ್ರಾರ್ಥನೆಗಳನ್ನು ಸೂಚಿಸುತ್ತದೆ.—ಪ್ರಕ. 5:8.
22. ಯಾವ ಪ್ರೀತಿಯ ಬಗ್ಗೆ ನಾವು ಮುಂದಿನ ಲೇಖನದಲ್ಲಿ ಕಲಿಯಲಿದ್ದೇವೆ?
22 ದೇವರನ್ನು ಮತ್ತು ನಮ್ಮ ನೆರೆಯವರನ್ನೂ ಪ್ರೀತಿಸಬೇಕೆಂದು ಯೇಸು ಹೇಳಿದನು. (ಮತ್ತಾ. 22:37-39) ಯೆಹೋವನ ಮತ್ತು ಆತನ ತತ್ವಗಳ ಮೇಲೆ ನಮಗಿರುವ ಪ್ರೀತಿ ಜೊತೆ ಮಾನವರೊಂದಿಗೆ ಒಳ್ಳೇದಾಗಿ ನಡೆದುಕೊಳ್ಳಲು, ಪ್ರೀತಿ ತೋರಿಸಲು ಹೇಗೆ ಸಹಾಯ ಮಾಡುತ್ತದೆ? ಇದನ್ನು ಮುಂದಿನ ಲೇಖನದಲ್ಲಿ ಕಲಿಯೋಣ.