“ಅನೇಕ ಸಂಕಟಗಳ” ಮಧ್ಯೆಯೂ ನಿಷ್ಠೆಯಿಂದ ದೇವರ ಸೇವೆಮಾಡಿ
“ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು.”—ಅ. ಕಾ. 14:22.
1. ಸಂಕಟಗಳನ್ನು ಎದುರಿಸಬೇಕಾಗುತ್ತದೆ ಎಂದಾಗ ದೇವಸೇವಕರಿಗೆ ಯಾಕೆ ಆಘಾತವಾಗುವುದಿಲ್ಲ?
ನಿತ್ಯಜೀವವೆಂಬ ಬಹುಮಾನ ಪಡೆಯುವ ಮುಂಚೆ ನೀವು “ಅನೇಕ ಸಂಕಟಗಳನ್ನು” ಎದುರಿಸಬೇಕಾಗುತ್ತದೆಂದು ಕೇಳಿ ಆಘಾತವಾಯಿತಾ? ಇಲ್ಲ ಅಲ್ಲವೇ? ಏಕೆಂದರೆ ನೀವು ಸತ್ಯವನ್ನು ಇತ್ತೀಚೆಗೆ ಕಲಿತಿರಲಿ ಅಥವಾ ತುಂಬ ವರ್ಷಗಳೇ ಆಗಿರಲಿ ಸೈತಾನನ ಈ ಲೋಕದಲ್ಲಿ ಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ನಿಮಗೆ ಗೊತ್ತು.—ಪ್ರಕ. 12:12.
2. (ಎ) ಎಲ್ಲ ಅಪರಿಪೂರ್ಣ ಮಾನವರಿಗೆ ಬರುವ ಸಮಸ್ಯೆಗಳ ಜೊತೆಗೆ ಕ್ರೈಸ್ತರು ಇನ್ಯಾವ ಸಂಕಟವನ್ನೂ ಅನುಭವಿಸಬೇಕಾಗುತ್ತದೆ? (ಶೀರ್ಷಿಕೆ ಚಿತ್ರ ನೋಡಿ.) (ಬಿ) ನಮಗೆ ಬರುವ ಸಂಕಟಗಳ ಹಿಂದೆ ಯಾರಿದ್ದಾನೆ? (ಸಿ) ಇದು ನಮಗೆ ಹೇಗೆ ಗೊತ್ತು?
2 “ಮನುಷ್ಯರಿಗೆ ಸಹಜವಾಗಿ” ಬರುವ ಸಮಸ್ಯೆಗಳು ಅಂದರೆ ಎಲ್ಲ ಅಪರಿಪೂರ್ಣ ಮಾನವರಿಗೆ ಬರುವ ಸಮಸ್ಯೆಗಳು ಕ್ರೈಸ್ತರಿಗೂ ಬರುತ್ತವೆ. ಜೊತೆಗೆ ಇನ್ನೊಂದು ಬಗೆಯ ಸಂಕಟವನ್ನೂ ಅವರು ಅನುಭವಿಸಬೇಕಾಗುತ್ತದೆ. (1 ಕೊರಿಂ. 10:13) ಅದು ಯಾವುದು? ದೇವರ ನಿಯಮಗಳನ್ನು ಬಿಟ್ಟುಕೊಡದೆ ಪಾಲಿಸುವುದರಿಂದ ಬರುವ ತೀವ್ರ ವಿರೋಧ. ಯೇಸು ತನ್ನ ಶಿಷ್ಯರಿಗೆ “ಒಬ್ಬ ಆಳು ತನ್ನ ಯಜಮಾನನಿಗಿಂತ ದೊಡ್ಡವನಲ್ಲ . . . ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು” ಎಂದು ಹೇಳಿದ್ದನು. (ಯೋಹಾ. 15:20) ಈ ತೀವ್ರ ವಿರೋಧದ ಹಿಂದೆ ಯಾರಿದ್ದಾನೆ? ಸೈತಾನ. ಬೈಬಲ್ ಅವನನ್ನು “ಗರ್ಜಿಸುವ ಸಿಂಹ” ಎಂದು ವರ್ಣಿಸುತ್ತದೆ. ಅವನು ದೇವಜನರನ್ನು ‘ನುಂಗಲು ಹುಡುಕುತ್ತಾ ತಿರುಗುತ್ತಿದ್ದಾನೆ.’ (1 ಪೇತ್ರ 5:8) ಅವನು ಯೇಸುವಿನ ಅನುಯಾಯಿಗಳ ಸಮಗ್ರತೆಯನ್ನು ಮುರಿಯಲು ಯಾವ ವಿಧವನ್ನು ಬಳಸಲೂ ಹೇಸುವುದಿಲ್ಲ. ನಾವೀಗ ಅಪೊಸ್ತಲ ಪೌಲನ ಜೀವನದಲ್ಲಿ ಏನಾಯಿತೆಂದು ನೋಡೋಣ.
ಲುಸ್ತ್ರದಲ್ಲಿ ಎದುರಾದ ಸಂಕಟ
3-5. (ಎ) ಲುಸ್ತ್ರದಲ್ಲಿ ಪೌಲ ಯಾವ ಸಂಕಟವನ್ನು ಎದುರಿಸಿದನು? (ಬಿ) ಮುಂದೆ ಅನೇಕ ಸಂಕಟಗಳನ್ನು ತಾಳಿಕೊಳ್ಳಬೇಕಾಗುತ್ತದೆ ಎಂಬ ಅವನ ಮಾತು ಶಿಷ್ಯರನ್ನು ಹೇಗೆ ಬಲಪಡಿಸಿತು?
3 ಪೌಲ ತನ್ನ ನಂಬಿಕೆಗಾಗಿ ಅನೇಕ ಬಾರಿ ಹಿಂಸೆಯನ್ನು ಎದುರಿಸಿದ್ದನು. (2 ಕೊರಿಂ. 11:23-27) ಅಂಥ ಒಂದು ಘಟನೆ ಲುಸ್ತ್ರದಲ್ಲಿ ನಡೆಯಿತು. ಅಲ್ಲಿ ಪೌಲ ಒಬ್ಬ ಹುಟ್ಟುಕುಂಟನನ್ನು ವಾಸಿಮಾಡಿದನು. ಆಗ ಜನರು ಅವನನ್ನು ಮತ್ತವನ ಸಂಗಡಿಗನಾದ ಬಾರ್ನಬನನ್ನು “ದೇವತೆಗಳು” ಎಂದು ಕರೆದು ಜೈಕಾರ ಹಾಕಿದರು. ಹುಚ್ಚೆದ್ದ ಆ ಜನರಿಗೆ ಪೌಲಬಾರ್ನಬರು ತಮ್ಮನ್ನು ಆರಾಧಿಸಬೇಡಿ ಎಂದು ಬೇಡಿಕೊಂಡರು. ಅಷ್ಟರಲ್ಲೇ ಕ್ರೈಸ್ತ ವಿರೋಧಿಗಳಾದ ಯೆಹೂದಿಗಳು ಅಲ್ಲಿಗೆ ಬಂದರು. ಪೌಲಬಾರ್ನಬರನ್ನು ನಿಂದಿಸುತ್ತಾ ಜನರ ಮನಸ್ಸಲ್ಲಿ ವಿಷ ಬಿತ್ತಿದರು. ಇದ್ದಕ್ಕಿದ್ದಂತೆ ಪರಿಸ್ಥಿತಿ ಬದಲಾಯಿತು! ಆಕ್ರೋಶಗೊಂಡ ಜನರು ಪೌಲನ ಮೇಲೆ ಕಲ್ಲೆಸೆಯಲು ಆರಂಭಿಸಿದರು. ಅವನು ಸತ್ತನೆಂದು ಭಾವಿಸಿ ಕಲ್ಲೆಸೆಯುವುದನ್ನು ನಿಲ್ಲಿಸಿ ಹೋಗಿಬಿಟ್ಟರು.—ಅ. ಕಾ. 14:8-19.
4 ಪೌಲಬಾರ್ನಬರು ದೆರ್ಬೆಗೆ ಭೇಟಿಕೊಟ್ಟ ಬಳಿಕ “ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಶಿಷ್ಯರನ್ನು ಬಲಪಡಿಸುತ್ತಾ, ‘ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು’ ಎಂದು ಹೇಳಿ ನಂಬಿಕೆಯಲ್ಲಿ ಉಳಿಯುವಂತೆ ಅವರನ್ನು ಉತ್ತೇಜಿಸಿದರು.” (ಅ. ಕಾ. 14:21, 22) ಅವರ ಮಾತುಗಳು ‘ಹೆದರಿದವನ ಮೇಲೆ ಹಾವು ಎಸೆದರು’ ಎಂಬ ಗಾದೆಯಂತೆ ಶಿಷ್ಯರನ್ನು ಹೆದರಿಸುವಂತೆ ಇವೆಯಲ್ಲಾ ಎಂದು ಅನಿಸಬಹುದು. ಮುಂದೆ “ಅನೇಕ ಸಂಕಟಗಳನ್ನು” ತಾಳಿಕೊಳ್ಳಬೇಕಾಗುತ್ತದೆ ಎನ್ನುವ ವಿಷಯ ಧೈರ್ಯತುಂಬಿಸುವುದಕ್ಕಿಂತ ಧೈರ್ಯಗುಂದಿಸುವಂತೆ ತೋರಬಹುದು. ಹೀಗಿರುವಾಗ ಪೌಲಬಾರ್ನಬರ ಈ ಮಾತು ‘ಶಿಷ್ಯರನ್ನು ಬಲಪಡಿಸಿದ್ದು’ ಹೇಗೆ?
5 ಪೌಲನ ಮಾತುಗಳಿಗೆ ಸರಿಯಾಗಿ ಗಮನಕೊಟ್ಟರೆ ಅದರಲ್ಲೇ ಉತ್ತರ ಸಿಗುತ್ತದೆ. “ನಾವು ಅನೇಕ ಸಂಕಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ” ಎಂದು ಅವನು ಹೇಳುವ ಬದಲಿಗೆ “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು” ಎಂದು ಹೇಳಿದನು. ಹೀಗೆ, ದೇವರಿಗೆ ನಂಬಿಗಸ್ತರಾಗಿ ಇರುವುದರಿಂದ ಸಿಗುವ ಒಳ್ಳೇ ಫಲಿತಾಂಶದ ಮೇಲೆ ಪೌಲ ಒತ್ತುನೀಡಿ ಶಿಷ್ಯರನ್ನು ಬಲಪಡಿಸಿದನು. ಆ ಬಹುಮಾನ ಒಂದು ಭ್ರಮೆಯಲ್ಲ. ಯೇಸು ತಾನೇ ಹೇಳಿದ್ದಾನೆ: “ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು.”—ಮತ್ತಾ. 10:22.
6. ಕೊನೇ ವರೆಗೂ ತಾಳಿಕೊಳ್ಳುವವರು ಯಾವ ಬಹುಮಾನ ಪಡೆಯಲಿದ್ದಾರೆ?
6 ನಾವು ಕೊನೇ ವರೆಗೆ ತಾಳಿಕೊಂಡರೆ ಬಹುಮಾನ ಖಚಿತ. ಅಭಿಷಿಕ್ತ ಕ್ರೈಸ್ತರಿಗೆ ಯೇಸುವಿನ ಸಹರಾಜರಾಗಿ ಸ್ವರ್ಗದಲ್ಲಿ ಅಮರಜೀವನದ ಬಹುಮಾನ ಸಿಗುತ್ತದೆ. ‘ಬೇರೆ ಕುರಿಗಳಿಗೆ’ ‘ನೀತಿಯು ವಾಸವಾಗಿರುವ’ ಭೂಮಿಯಲ್ಲಿ ನಿತ್ಯಜೀವದ ಬಹುಮಾನ ಸಿಗುತ್ತದೆ. (ಯೋಹಾ. 10:16; 2 ಪೇತ್ರ 3:13) ಅಲ್ಲಿವರೆಗೂ ಪೌಲ ಹೇಳಿದಂತೆ ನಾವು ಅನೇಕ ಸಂಕಟಗಳನ್ನು ಎದುರಿಸಬೇಕಾಗಬಹುದು. ಅವುಗಳಲ್ಲಿ ಎರಡು ರೀತಿಯ ಸಂಕಟಗಳ ಬಗ್ಗೆ ನೋಡೋಣ.
ನೇರ ಆಕ್ರಮಣಗಳು
7. ಯಾವ ರೀತಿಯ ಸಂಕಟವನ್ನು ನೇರ ಆಕ್ರಮಣ ಎಂದು ಹೇಳಬಹುದು?
7 “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ಸ್ಥಳಿಕ ನ್ಯಾಯಾಲಯಗಳಿಗೆ ಒಪ್ಪಿಸುವರು, ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು, ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ನಿಲ್ಲಿಸುವರು” ಎಂದು ಯೇಸು ಪ್ರವಾದನೆ ನುಡಿದಿದ್ದಾನೆ. (ಮಾರ್ಕ 13:9) ಅವನ ಮಾತುಗಳು ಸೂಚಿಸುವಂತೆ ಕೆಲವು ಕ್ರೈಸ್ತರಿಗೆ ಸಂಕಟ ಬರುವುದು ಶಾರೀರಿಕ ಹಿಂಸೆಯ ರೂಪದಲ್ಲಿ. ಇದಕ್ಕೆ ಕೆಲವೊಮ್ಮೆ ಧರ್ಮಗುರುಗಳ ಅಥವಾ ರಾಜಕೀಯ ನಾಯಕರ ಚಿತಾವಣೆ ಕಾರಣವಾಗಿರಬಹುದು. (ಅ. ಕಾ. 5:27, 28) ಪುನಃ ನಾವು ಪೌಲನ ಉದಾಹರಣೆಯನ್ನು ನೋಡೋಣ. ಇಂಥ ಹಿಂಸೆ ಬಗ್ಗೆ ನೆನಸಿ ಅವನು ಭಯದಿಂದ ಮುದುರಿಹೋದನಾ? ಇಲ್ಲವೇ ಇಲ್ಲ.—ಅಪೊಸ್ತಲರ ಕಾರ್ಯಗಳು 20:22, 23 ಓದಿ.
8, 9. (ಎ) ಸಂಕಟಗಳನ್ನು ತಾಳಿಕೊಳ್ಳುವ ದೃಢಸಂಕಲ್ಪ ಪೌಲನಿಗಿತ್ತೆಂದು ಹೇಗೆ ಗೊತ್ತಾಗುತ್ತದೆ? (ಬಿ) ಇಂಥ ಸಂಕಲ್ಪವನ್ನು ಆಧುನಿಕ ಕಾಲದಲ್ಲೂ ಕೆಲವರು ಹೇಗೆ ತೋರಿಸಿಕೊಟ್ಟಿದ್ದಾರೆ?
8 ಸೈತಾನನ ನೇರ ಆಕ್ರಮಣಗಳನ್ನು ಪೌಲ ಧೈರ್ಯದಿಂದ ಎದುರಿಸಿದನು. ಅವನು ಹೇಳಿದ್ದು: “ನಾನು ನನ್ನ ಪ್ರಾಣವನ್ನು ಯಾವುದೇ ರೀತಿಯಲ್ಲಿ ಅಮೂಲ್ಯವೆಂದು ಎಣಿಸುವುದಿಲ್ಲ; ನಾನು ನನ್ನ ಓಟವನ್ನೂ ದೇವರ ಅಪಾತ್ರ ದಯೆಯ ಸುವಾರ್ತೆಗೆ ಕೂಲಂಕಷ ಸಾಕ್ಷಿಯನ್ನು ಕೊಡುವಂತೆ ಕರ್ತನಾದ ಯೇಸುವಿನಿಂದ ನಾನು ಪಡೆದ ಶುಶ್ರೂಷೆಯನ್ನೂ ಪೂರ್ಣಗೊಳಿಸುವುದೇ ನನ್ನ ಅಪೇಕ್ಷೆ.” (ಅ. ಕಾ. 20:24) ಪೌಲನಿಗೆ ಹಿಂಸೆಗೊಳಗಾಗುವ ಭಯ ಇರಲಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಏನೇ ಬಂದರೂ ತಾಳಿಕೊಳ್ಳುವ ದೃಢಸಂಕಲ್ಪವಿತ್ತೇ ವಿನಃ ಅವನಲ್ಲಿ ಭಯ ಇರಲಿಲ್ಲ. ಯಾವುದೇ ಸಂಕಟ ಎದುರಾದರೂ ‘ಕೂಲಂಕಷ ಸಾಕ್ಷಿ ಕೊಡುವುದೇ’ ಅವನ ಮುಖ್ಯ ಧ್ಯೇಯವಾಗಿತ್ತು.
9 ಇಂದು ಕೂಡ ಸಂಕಟದ ಬಿಗಿಮುಷ್ಠಿಯಲ್ಲಿರುವ ಎಷ್ಟೋ ಸಹೋದರ ಸಹೋದರಿಯರು ಇಂಥದ್ದೇ ದೃಢಸಂಕಲ್ಪ ತೋರಿಸಿದ್ದಾರೆ. ಉದಾಹರಣೆಗೆ ಒಂದು ದೇಶದ ಕೆಲವು ಸಾಕ್ಷಿಗಳು ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿರುವ ಕಾರಣ ಹತ್ತಿರಹತ್ತಿರ 20 ವರ್ಷದಿಂದ ಜೈಲಲ್ಲಿದ್ದಾರೆ. ಅವರ ಕೇಸನ್ನು ನ್ಯಾಯಾಲಯದ ಮುಂದೆ ಇದುವರೆಗೂ ತರಲಾಗಿಲ್ಲ. ಏಕೆಂದರೆ ಮನಸ್ಸಾಕ್ಷಿಗೆ ತಕ್ಕಂತೆ ಆಯ್ಕೆ ಮಾಡುವವರಿಗೆ ಅವಕಾಶ ಕಲ್ಪಿಸಿಕೊಡುವ ಕಾಯ್ದೆಯೇ ಆ ದೇಶದಲ್ಲಿಲ್ಲ. ಕುಟುಂಬ ಸದಸ್ಯರಿಗೂ ಅವರನ್ನು ಭೇಟಿಯಾಗುವ ಅವಕಾಶವಿಲ್ಲ. ಜೈಲಲ್ಲಿರುವ ಕೆಲವರನ್ನಂತೂ ತುಂಬ ಹೊಡೆಯಲಾಗಿದೆ. ವಿವಿಧ ರೀತಿಯ ಚಿತ್ರಹಿಂಸೆಯನ್ನೂ ನೀಡಲಾಗಿದೆ.
10. ಹಠಾತ್ತನೆ ಸಂಕಟಗಳು ಎದುರಾದಾಗ ನಾವೇಕೆ ಭಯಪಡಬಾರದು?
10 ಇತರ ಕಡೆಗಳಲ್ಲೂ ನಮ್ಮ ಸಹೋದರರು ಹಠಾತ್ತನೆ ಎದುರಾದ ಸಂಕಟಗಳನ್ನು ತಾಳಿಕೊಂಡಿದ್ದಾರೆ. ನಿಮಗೆ ಅಂಥ ಸಂದರ್ಭವೊಂದು ಎದುರಾದರೆ ಕಿಂಚಿತ್ತೂ ಹೆದರಬೇಡಿ. ಯೋಸೇಫನಿಗೂ ಹಠಾತ್ತನೆ ಇಂಥ ಸಂಕಟ ಎದುರಾಯಿತು. ಅವನನ್ನು ದಾಸತ್ವಕ್ಕೆ ಮಾರಲಾಯಿತು. ಆದರೆ ಯೆಹೋವನು “ಎಲ್ಲ ಸಂಕಟಗಳಿಂದ ಅವನನ್ನು ವಿಮೋಚಿಸಿ”ದನು. (ಅ. ಕಾ. 7:9, 10) ಯೆಹೋವನು ನಿಮ್ಮನ್ನೂ ಕಾಪಾಡುವನು. ‘ಆತನು ದೇವಭಕ್ತಿಯುಳ್ಳ ಜನರನ್ನು ಪರೀಕ್ಷೆಯಿಂದ ತಪ್ಪಿಸುವುದಕ್ಕೆ ತಿಳಿದವನಾಗಿದ್ದಾನೆ’ ಎನ್ನುವುದನ್ನು ಎಂದಿಗೂ ಮರೆಯಬೇಡಿ. (2 ಪೇತ್ರ 2:9) ಯೆಹೋವನು ಈ ದುಷ್ಟ ಲೋಕದಿಂದ ನಿಮ್ಮನ್ನು ಕಾಪಾಡಿ ತನ್ನ ರಾಜ್ಯದಲ್ಲಿ ನಿತ್ಯಜೀವವನ್ನು ಆನಂದಿಸುವಂತೆ ಮಾಡುವನೆಂಬ ಭರವಸೆ ನಿಮಗಿದೆ ತಾನೇ? ಸದಾ ಈ ಭರವಸೆಯನ್ನಿಡಲು ಮತ್ತು ಹಿಂಸೆಯನ್ನು ಧೈರ್ಯದಿಂದ ಎದುರಿಸಲು ನಿಮಗೆ ಸಾಕಷ್ಟು ಕಾರಣಗಳಿವೆ.—1 ಪೇತ್ರ 5:8, 9.
ಕುಟಿಲ ಆಕ್ರಮಣಗಳು
11. ಸೈತಾನನ ಕುಟಿಲ ಆಕ್ರಮಣಗಳು ನೇರ ಆಕ್ರಮಣಗಳಿಗಿಂತ ಹೇಗೆ ಭಿನ್ನವಾಗಿವೆ?
11 ನಮಗೆ ಎದುರಾಗುವ ಇನ್ನೊಂದು ರೀತಿಯ ಸಂಕಟ ಕುಟಿಲ ಆಕ್ರಮಣಗಳು. ಶಾರೀರಿಕ ಹಿಂಸೆಯನ್ನು ತರುವ ನೇರ ಆಕ್ರಮಣಗಳಿಗಿಂತ ಇವು ಭಿನ್ನವಾಗಿವೆ. ಹೇಗೆ? ನೇರ ಆಕ್ರಮಣಗಳು, ಬಲವಾಗಿ ಬೀಸಿ ಮನೆಯನ್ನು ಕ್ಷಣಾರ್ಧದಲ್ಲಿ ನೆಲಸಮಮಾಡುವ ತೂಫಾನಿನಂತಿವೆ. ಆದರೆ ಕುಟಿಲ ಆಕ್ರಮಣಗಳು, ಮನೆಯೊಳಗೆ ನುಸುಳಿ ಮರವನ್ನು ಸ್ವಲ್ಪಸ್ವಲ್ಪವಾಗಿ ತಿಂದುಹಾಕಿ ಇಡೀ ಮನೆ ಕುಸಿದು ಬೀಳುವಂತೆ ಮಾಡುವ ಗೆದ್ದಲಿನಂತಿವೆ. ಮನೆಗೆ ಗೆದ್ದಲು ಹತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ.
12. (ಎ) ಸೈತಾನನ ಕುಟಿಲ ಆಕ್ರಮಣಗಳಲ್ಲಿ ಒಂದು ವಿಧಾನ ಯಾವುದು? (ಬಿ) ಅದು ಅತಿ ಹೆಚ್ಚಿನ ಯಶಸ್ಸು ಪಡೆದಿರುವ ವಿಧಾನ ಎಂದು ಏಕೆ ಹೇಳಬಹುದು? (ಸಿ) ಪೌಲನು ಯಾಕೆ ನಿರುತ್ಸಾಹಗೊಂಡನು?
12 ಶಾರೀರಿಕ ಹಿಂಸೆಯಂಥ ನೇರ ಆಕ್ರಮಣಗಳನ್ನು ಬಳಸಿಯೋ ಅಥವಾ ನಂಬಿಕೆಯನ್ನು ಸ್ವಲ್ಪಸ್ವಲ್ಪವಾಗಿ ನಾಶಮಾಡುವ ಕುಟಿಲ ಆಕ್ರಮಣಗಳನ್ನು ಬಳಸಿಯೋ ನಿಮ್ಮ ಮತ್ತು ಯೆಹೋವನ ನಡುವಣ ಸಂಬಂಧವನ್ನು ಕಡಿದುಹಾಕಬೇಕೆನ್ನುವುದು ಸೈತಾನನ ಆಸೆ. ಅವನ ಕುಟಿಲ ಆಕ್ರಮಣಗಳಲ್ಲಿ ಅತೀ ಹೆಚ್ಚಿನ ಯಶಸ್ಸು ಪಡೆದಿರುವ ವಿಧಾನ ನಿರುತ್ಸಾಹ. ಪೌಲನನ್ನು ಅನೇಕ ಬಾರಿ ನಿರುತ್ಸಾಹ ಕಾಡಿತ್ತು. ಅದನ್ನು ಸ್ವತಃ ಅವನೇ ಹೇಳಿದ್ದಾನೆ. (ರೋಮನ್ನರಿಗೆ 7:21-24 ಓದಿ.) ಪೌಲನು ಒಂದನೇ ಶತಮಾನದ ಆಡಳಿತ ಮಂಡಲಿಯ ಸದಸ್ಯನಾಗಿದ್ದಿರಬಹುದು. ಆಧ್ಯಾತ್ಮಿಕವಾಗಿ ಹೆಮ್ಮರದಂತಿದ್ದ ಅವನು ತನ್ನನ್ನು “ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯ” ಎಂದೇಕೆ ಹೇಳಿಕೊಂಡನು? ಇದಕ್ಕೆ ಕಾರಣ ತನ್ನ ಅಪರಿಪೂರ್ಣತೆಗಳು ಎಂದು ಸ್ವತಃ ಅವನೇ ಹೇಳಿದನು. ಅವನಿಗೆ ಸರಿಯಾದದ್ದನ್ನು ಮಾಡುವ ಬಯಕೆ ಇತ್ತು. ಆದರೆ ಅವನನ್ನು ಏನೋ ತಡೆಯುತ್ತಿದ್ದಂತೆ ಅವನಿಗೆ ಭಾಸವಾಗುತ್ತಿತ್ತು. ಇಂಥ ಹೋರಾಟ ಆಗಾಗ್ಗೆ ನಿಮ್ಮಲ್ಲೂ ನಡೆಯುತ್ತಿರಬಹುದು. ಅಪೊಸ್ತಲ ಪೌಲನಿಗೂ ಈ ಸವಾಲು ಎದುರಾಯಿತು ಎಂಬ ವಿಷಯ ನಿಮಗೆ ಸಮಾಧಾನ ತರುತ್ತದಲ್ಲವೇ?
13, 14. (ಎ) ಕೆಲವು ದೇವಜನರು ನಿರುತ್ಸಾಹಗೊಳ್ಳಲು ಕಾರಣಗಳೇನು? (ಬಿ) ಯಾರು ನಮ್ಮ ನಂಬಿಕೆ ನಾಶವಾಗುವುದನ್ನು ನೋಡಲು ಬಯಸುತ್ತಾನೆ? ಯಾಕೆ?
13 ಅನೇಕ ಬಾರಿ ಸಹೋದರ ಸಹೋದರಿಯರು ನಿರುತ್ಸಾಹಗೊಳ್ಳುತ್ತಾರೆ, ಚಿಂತೆಗೆ ಒಳಗಾಗುತ್ತಾರೆ. ತಾವು ಯಾವ ಪ್ರಯೋಜನಕ್ಕೂ ಬಾರದವರು ಎಂಬ ಕೀಳರಿಮೆಯೂ ಅವರಲ್ಲಿ ಹುಟ್ಟುತ್ತದೆ. ಒಬ್ಬ ಹುರುಪಿನ ಪಯನೀಯರ್ ಸಹೋದರಿಗೂ ಹೀಗನಿಸುತ್ತದೆ. ಅವರನ್ನು ಡೆಬ್ರ ಎಂದು ಕರೆಯೋಣ. ಅವರು ಹೀಗನ್ನುತ್ತಾರೆ: “ನಾನು ಮಾಡಿದ ತಪ್ಪೊ೦ದರ ಬಗ್ಗೆ ಪ್ರತಿಸಲ ನೆನಪಿಸಿಕೊಂಡಾಗೆಲ್ಲ ದುಃಖ ಇಮ್ಮಡಿಯಾಗುತ್ತದೆ. ಅದರ ಬಗ್ಗೆ ಯೋಚಿಸಿದಾಗೆಲ್ಲ ನನ್ನನ್ನು ಯಾರೂ ಪ್ರೀತಿಸಲು ಸಾಧ್ಯವಿಲ್ಲ, ಯೆಹೋವನು ಕೂಡ ಪ್ರೀತಿಸಲ್ಲ ಎಂಬ ಭಾವನೆ ಮೂಡುತ್ತದೆ.”
14 ಈ ಸಹೋದರಿಯಂತೆ ಹುರುಪಿನಿಂದ ಯೆಹೋವನ ಸೇವೆ ಮಾಡುವವರು ನಿರುತ್ಸಾಹಗೊಳ್ಳಲು ಕಾರಣವೇನು? ಕಾರಣಗಳು ಹಲವಾರು. ಕೆಲವರು ತಮ್ಮ ಬಗ್ಗೆ ಮತ್ತು ತಮ್ಮ ಪರಿಸ್ಥಿತಿಗಳ ಬಗ್ಗೆ ಯಾವಾಗಲೂ ಕೆಟ್ಟದಾಗಿ ಯೋಚಿಸುತ್ತಿರುತ್ತಾರೆ. (ಯೆರೆ. 20:18) ಇನ್ನು ಕೆಲವರ ನಕಾರಾತ್ಮಕ ಭಾವನೆಗಳಿಗೆ ಅವರ ಕಾಯಿಲೆ ಕಾರಣವಾಗಿರಬಹುದು. ಕಾರಣ ಏನೇ ಆಗಿದ್ದರೂ ನಮ್ಮ ಇಂಥ ಭಾವನೆಗಳನ್ನು ದುರುಪಯೋಗಿಸುವವನು ಯಾರು ಎನ್ನುವುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು. ನಾವು ತುಂಬ ನಿರುತ್ಸಾಹಗೊಂಡು ಸೋತುಹೋಗಬೇಕೆನ್ನುವುದು ಯಾರ ಬಯಕೆ? ಸೈತಾನನದ್ದೇ ಅಲ್ಲವೇ? ಅವನಂತೂ ಯಾವುದೇ ನಿರೀಕ್ಷೆ ಇಲ್ಲದೆ ನಾಶವಾಗುವುದು ಖಂಡಿತ. ಅದೇ ರೀತಿ ನೀವೂ ನಿರೀಕ್ಷಾಹೀನರಾಗಬೇಕು, ನಿರುತ್ಸಾಹಗೊಳ್ಳಬೇಕು ಎಂದವನು ಬಯಸುತ್ತಾನೆ. (ಪ್ರಕ. 20:10) ನೇರ ಆಕ್ರಮಣ ಮೂಲಕವಾಗಲಿ ತುಂಬ ಕುಟಿಲವಾದ ಆಕ್ರಮಣಗಳ ಮೂಲಕವಾಗಲಿ ನಮ್ಮನ್ನು ಚಿಂತೆಯಲ್ಲಿ ಮುಳುಗಿಸಿಬಿಡಬೇಕು, ನಮ್ಮ ಹುರುಪನ್ನು ಬತ್ತಿಸಿಬಿಡಬೇಕು, ನಾವು ದೇವರ ಸೇವೆಯನ್ನು ಬಿಟ್ಟುಬಿಡಬೇಕು ಎನ್ನುವುದೇ ಸೈತಾನನ ಏಕೈಕ ಗುರಿ. ದೇವಜನರಾದ ನಮಗಿರುವುದು ಆಧ್ಯಾತ್ಮಿಕ ಹೋರಾಟ ಎನ್ನುವುದರಲ್ಲಿ ಸಂಶಯವೇ ಇಲ್ಲ!
15. ಎರಡು ಕೊರಿಂಥ 4:16, 17ರ ಪ್ರಕಾರ ನಮಗೆ ಯಾವ ದೃಢಸಂಕಲ್ಪ ಇರಬೇಕು?
15 ಈ ಹೋರಾಟವನ್ನು ಬಿಟ್ಟುಬಿಡದಿರುವ ದೃಢಸಂಕಲ್ಪ ನಿಮಗಿರಲಿ. ಬಹುಮಾನದ ಮೇಲೆ ನಿಮ್ಮ ಗಮನವಿರಲಿ. ಕೊರಿಂಥದ ಕ್ರೈಸ್ತರಿಗೆ ಪೌಲ ಹೀಗೆ ಬರೆದನು: “ನಾವು ಬಿಟ್ಟುಬಿಡುವುದಿಲ್ಲ; ನಮ್ಮ ಹೊರಗಣ ಮನುಷ್ಯನು ನಶಿಸಿ ಹೋಗುತ್ತಿರುವುದಾದರೂ, ನಮ್ಮ ಒಳಗಣ ಮನುಷ್ಯನು ನಿಶ್ಚಯವಾಗಿಯೂ ದಿನೇ ದಿನೇ ನವೀಕರಿಸಲ್ಪಡುತ್ತಿದ್ದಾನೆ. ಸಂಕಟವು ಕ್ಷಣಮಾತ್ರದ್ದೂ ಹಗುರವಾದದ್ದೂ ಆಗಿರುತ್ತದೆಯಾದರೂ, ಅದು ನಮಗೆ ಹೆಚ್ಚೆಚ್ಚು ಉತ್ಕೃಷ್ಟವಾದ ತೂಕವುಳ್ಳದ್ದೂ ನಿರಂತರವಾದದ್ದೂ ಆದ ಮಹಿಮೆಯನ್ನು ಫಲಿಸುತ್ತದೆ.”—2 ಕೊರಿಂ. 4:16, 17.
ಸಂಕಟಗಳಿಗೆ ಈಗಲೇ ಸಿದ್ಧತೆ ನಡೆಸಿ
16. ಮುಂದೆ ಬರುವ ಸಂಕಟಗಳಿಗೆ ಈಗಲೇ ಸಿದ್ಧತೆ ನಡೆಸುವುದು ಪ್ರಾಮುಖ್ಯವೇಕೆ?
16 ನಾವು ಈಗಾಗಲೇ ಕಲಿತಿರುವಂತೆ ಸೈತಾನನ ಬಳಿ ಬೇಕಾದಷ್ಟು ‘ತಂತ್ರೋಪಾಯಗಳಿವೆ.’ (ಎಫೆ. 6:11) ಹಾಗಾಗಿ “ನಂಬಿಕೆಯಲ್ಲಿ ಸ್ಥಿರರಾಗಿದ್ದು . . . ಅವನನ್ನು ಎದುರಿಸಿರಿ” ಎಂದು 1 ಪೇತ್ರ 5:9ರಲ್ಲಿ ಕೊಡಲಾಗಿರುವ ಬುದ್ಧಿವಾದವನ್ನು ನಾವೆಲ್ಲರೂ ಪಾಲಿಸಬೇಕು. ನಂಬಿಕೆಯಲ್ಲಿ ಸ್ಥಿರರಾಗಿ ನಿಲ್ಲಲು ನಮ್ಮ ಹೃದಮನಗಳನ್ನು ಈಗಲೇ ಸಿದ್ಧಪಡಿಸಬೇಕು. ಸರಿಯಾದದ್ದನ್ನು ಮಾಡಲು ನಮ್ಮನ್ನೇ ತರಬೇತಿಗೊಳಿಸಬೇಕು. ಉದಾಹರಣೆಗೆ ಸೈನಿಕರು ಯುದ್ಧಕ್ಕೆ ಹೋಗುವ ಎಷ್ಟೋ ಕಾಲದ ಮುಂಚೆಯೇ ಕಠಿಣ ತಾಲೀಮು ನಡೆಸುತ್ತಾರೆ. ಇದು ಯೆಹೋವನ ಆಧ್ಯಾತ್ಮಿಕ ಸೈನ್ಯದವರಾದ ನಮಗೂ ಅನ್ವಯ. ನಮ್ಮ ಆಧ್ಯಾತ್ಮಿಕ ಹೋರಾಟದಲ್ಲಿ ಏನೆಲ್ಲ ಎದುರಾಗುತ್ತದೆಂದು ನಮಗೆ ಗೊತ್ತಿಲ್ಲ. ಹಾಗಾಗಿ ‘ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ’ಕ್ಕಿಂತ ಈಗಲೇ ಒಂದಿಷ್ಟು ಶಾಂತಿಯಿರುವಾಗ ನಮ್ಮನ್ನೇ ಸರಿಯಾಗಿ ತರಬೇತಿಗೊಳಿಸುವುದು ಜಾಣತನ ಅಲ್ಲವೇ? ಕೊರಿಂಥದವರಿಗೆ ಪೌಲ ಬರೆದದ್ದು: “ನೀವು ನಂಬಿಕೆಯಲ್ಲಿ ಇದ್ದೀರೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ, ನೀವು ಏನಾಗಿದ್ದೀರಿ ಎಂಬುದನ್ನು ಪ್ರಮಾಣೀಕರಿಸುತ್ತಾ ಇರಿ.”—2 ಕೊರಿಂ. 13:5.
17-19. (ಎ) ನಾವು ಹೇಗೆ ಸ್ವಪರಿಶೀಲನೆ ಮಾಡಿಕೊಳ್ಳಬಲ್ಲೆವು? (ಬಿ) ಶಾಲೆಯಲ್ಲಿ ತಮ್ಮ ನಂಬಿಕೆಯನ್ನು ಸಮರ್ಥಿಸಲು ಮಕ್ಕಳು ಹೇಗೆ ಸಿದ್ಧತೆ ನಡೆಸಬಹುದು?
17 ಪೌಲನ ಈ ಬುದ್ಧಿವಾದವನ್ನು ಪಾಲಿಸುವ ಒಂದು ವಿಧ ನಾವು ಗಂಭೀರವಾಗಿ ಸ್ವಪರಿಶೀಲನೆ ಮಾಡಿಕೊಳ್ಳುವುದೇ. ನಮ್ಮನ್ನೇ ಕೇಳಿಕೊಳ್ಳಬಹುದಾದ ಪ್ರಶ್ನೆಗಳು: ‘ಎಡೆಬಿಡದೆ ಪ್ರಾರ್ಥನೆ ಮಾಡುತ್ತೇನಾ? ಸಮವಯಸ್ಕರಿಂದ ಒತ್ತಡ ಬಂದಾಗ ಮನುಷ್ಯರಿಗಿಂತ ಹೆಚ್ಚಾಗಿ ದೇವರಿಗೆ ವಿಧೇಯನಾಗುತ್ತೇನಾ? ತಪ್ಪದೇ ಕೂಟಗಳಿಗೆ ಹಾಜರಾಗುತ್ತೇನಾ? ನನ್ನ ನಂಬಿಕೆಗಳ ಬಗ್ಗೆ ಧೈರ್ಯದಿಂದ ಮಾತಾಡುತ್ತೇನಾ? ಬೇರೆಯವರು ನನ್ನ ತಪ್ಪುಗಳನ್ನು ಕ್ಷಮಿಸುವ ಹಾಗೆ ನಾನು ಜೊತೆವಿಶ್ವಾಸಿಗಳನ್ನು ಕೂಡಲೇ ಕ್ಷಮಿಸುತ್ತೇನಾ? ನನ್ನ ಸಭೆಯಲ್ಲಿ ಮತ್ತು ಲೋಕವ್ಯಾಪಕ ಕ್ರೈಸ್ತ ಸಭೆಯಲ್ಲಿ ಮುಂದಾಳತ್ವ ವಹಿಸುವವರಿಗೆ ಅಧೀನತೆ ತೋರಿಸುತ್ತೇನಾ?’
18 ಈ ಪ್ರಶ್ನೆಗಳಲ್ಲಿ ಎರಡು ಪ್ರಶ್ನೆಗಳು ನಮ್ಮ ನಂಬಿಕೆಗಳ ಕುರಿತು ಧೈರ್ಯದಿಂದ ಮಾತಾಡುವುದರ ಬಗ್ಗೆ ಮತ್ತು ಸಮವಯಸ್ಕರಿಂದ ಬರುವ ಒತ್ತಡಗಳನ್ನು ಜಯಿಸುವುದರ ಬಗ್ಗೆ ಇವೆ. ಶಾಲೆಯಲ್ಲಿ ನಮ್ಮ ಮಕ್ಕಳು ಈ ಸವಾಲನ್ನು ಎದುರಿಸುತ್ತಾರೆ. ಅವರು ನಾಚಿಕೆ, ಮುಜುಗರಪಡದೆ ಧೈರ್ಯದಿಂದ ತಮ್ಮ ನಂಬಿಕೆಗಳ ಬಗ್ಗೆ ಮಾತಾಡಲು ಕಲಿತಿದ್ದಾರೆ. ಧೈರ್ಯದಿಂದ ಮಾತಾಡಲು ಸಹಾಯಕಾರಿಯಾದ ಸಲಹೆಗಳನ್ನು ನಮ್ಮ ಪತ್ರಿಕೆಗಳಲ್ಲಿ ಪ್ರಕಾಶಿಸಲಾಗಿದೆ. ಉದಾಹರಣೆಗೆ, 2009ರ ಎಚ್ಚರ! ಪತ್ರಿಕೆಯ ಅಕ್ಟೋಬರ್-ಡಿಸೆಂಬರ್ ಸಂಚಿಕೆಯಲ್ಲಿ ಈ ಸಲಹೆ ಕೊಡಲಾಗಿತ್ತು. ಸಹಪಾಠಿಯೊಬ್ಬ “ನೀನೇಕೆ ವಿಕಾಸವಾದ ನಂಬುವುದಿಲ್ಲ?” ಎಂಬ ಪ್ರಶ್ನೆ ಕೇಳಿದರೆ “ಮೇಧಾವಿಗಳೆನಿಸುವ ವಿಜ್ಞಾನಿಗಳೇ ಅದನ್ನು ಒಪ್ಪದಿರುವಾಗ ನಾನೇಕೆ ಅದನ್ನು ನಂಬಬೇಕು?” ಎಂದು ಕೇಳುವಂತೆ ಹೇಳಲಾಯಿತು. ಹೆತ್ತವರೇ, ನಿಮ್ಮ ಮಕ್ಕಳೊಂದಿಗೆ ಪ್ರ್ಯಾಕ್ಟಿಸ್ ಸೆಷನ್ಗಳನ್ನು ನಡೆಸಿ. ಆಗ ಅವರು ಶಾಲೆಯಲ್ಲಿ ಸಮವಯಸ್ಕರಿಂದ ಬರುವ ಇಂಥ ಒತ್ತಡಗಳನ್ನು ಎದುರಿಸಲು ಸಿದ್ಧರಾಗಿರುತ್ತಾರೆ.
19 ನಂಬಿಕೆಗಳ ಬಗ್ಗೆ ಧೈರ್ಯದಿಂದ ಮಾತಾಡುವುದಾಗಲಿ ಯೆಹೋವನು ನಮ್ಮಿಂದ ಕೇಳಿಕೊಳ್ಳುವಂಥ ವಿಷಯಗಳನ್ನು ಮಾಡುವುದಾಗಲಿ ಅಷ್ಟು ಸುಲಭದ ಮಾತಲ್ಲ. ಇಡೀ ದಿನ ಕೆಲಸಮಾಡಿ ಸಂಜೆ ಕೂಟಗಳಿಗೆ ಹಾಜರಾಗಬೇಕೆಂದರೆ ನಮ್ಮನ್ನೇ ನಾವು ಎಳಕೊಂಡು ಹೋಗಬೇಕಾದೀತು. ಬೆಳಗ್ಗೆ ಸೇವೆಗೆ ಹೋಗಬೇಕೆಂದರೆ ಹಾಸಿಗೆಯ ಸುಖನಿದ್ದೆ ಬಿಟ್ಟು ಏಳಬೇಕಾದೀತು. ಆದರೆ ನೆನಪಿಡಿ, ಈಗ ನೀವು ಉತ್ತಮ ಆಧ್ಯಾತ್ಮಿಕ ರೂಢಿಗಳನ್ನು ಬೆಳೆಸಿಕೊಂಡರೆ, ಮುಂದೆ ಕೂಟದ ಹಾಜರಿ ಮತ್ತು ಸಾರುವ ವಿಷಯದಲ್ಲಿ ಬರಬಹುದಾದ ದೊಡ್ಡ ದೊಡ್ಡ ಸವಾಲುಗಳನ್ನೂ ಎದುರಿಸಲು ಶಕ್ತರಾಗುವಿರಿ.
20, 21. (ಎ) ನಕಾರಾತ್ಮಕ ಭಾವನೆಗಳನ್ನು ನಿಭಾಯಿಸಲು ನಮಗೆ ವಿಮೋಚನಾ ಮೌಲ್ಯ ಹೇಗೆ ಸಹಕಾರಿ? (ಬಿ) ನಮ್ಮ ದೃಢಸಂಕಲ್ಪ ಏನಾಗಿರಬೇಕು?
20 ಕುಟಿಲ ಆಕ್ರಮಣಗಳ ಬಗ್ಗೆ ಏನು? ಉದಾಹರಣೆಗೆ ನಿರುತ್ಸಾಹವನ್ನು ನಿಭಾಯಿಸುವುದು ಹೇಗೆ? ಇದನ್ನು ಮಾಡುವ ಶಕ್ತಿಶಾಲಿ ವಿಧಗಳಲ್ಲೊಂದು ವಿಮೋಚನಾ ಮೌಲ್ಯದ ಬಗ್ಗೆ ಧ್ಯಾನಿಸುವುದು ಆಗಿದೆ. ಅಪೊಸ್ತಲ ಪೌಲ ಕೂಡ ಇದನ್ನೇ ಮಾಡಿದನು. ತಾನು ದುರವಸ್ಥೆಯಲ್ಲಿರುವ ಮನುಷ್ಯ ಎಂಬ ಅನಿಸಿಕೆ ಅವನಲ್ಲಿ ಆಗಾಗ್ಗೆ ಮೂಡುತ್ತಿತ್ತು. ಆದರೆ ಕ್ರಿಸ್ತನು ಪರಿಪೂರ್ಣ ಜನರಿಗಾಗಿ ಅಲ್ಲ ಪಾಪಿಗಳಿಗಾಗಿ ಪ್ರಾಣಕೊಟ್ಟನು ಮತ್ತು ಆ ಪಾಪಿಗಳಲ್ಲಿ ತಾನೂ ಒಬ್ಬ ಎಂಬ ವಿಷಯ ಅವನ ಮನಸ್ಸಲ್ಲಿತ್ತು. ಹಾಗಾಗಿ ಅವನು ಬರೆದದ್ದು: “ನಾನು ಶಾರೀರಿಕವಾಗಿ ಜೀವಿಸುವ ಜೀವಿತವು ದೇವರ ಮಗನ ಕಡೆಗಿನ ನಂಬಿಕೆಯಿಂದಲೇ. ಅವನು ನನ್ನನ್ನು ಪ್ರೀತಿಸಿ ನನಗೋಸ್ಕರ ತನ್ನನ್ನೇ ಒಪ್ಪಿಸಿಬಿಟ್ಟನು.” (ಗಲಾ. 2:20) ಪೌಲನು ವಿಮೋಚನಾ ಮೌಲ್ಯವನ್ನು ಸ್ವೀಕರಿಸಿದನು. ಅದನ್ನು ತನಗೋಸ್ಕರ ಕೊಡಲಾಗಿದೆ ಎಂದವನು ಅರ್ಥಮಾಡಿಕೊಂಡನು.
21 ವಿಮೋಚನಾ ಮೌಲ್ಯ ಯೆಹೋವನು ನಮ್ಮಲ್ಲಿ ಒಬ್ಬೊಬ್ಬರಿಗೂ ಕೊಟ್ಟ ಉಡುಗೊರೆ ಎಂಬ ದೃಷ್ಟಿಕೋನ ನಮಗೂ ಇದ್ದರೆ ನಿರುತ್ಸಾಹ ನಿಭಾಯಿಸಲು ತುಂಬ ತುಂಬ ಸಹಕಾರಿ. ಅಂದಮಾತ್ರಕ್ಕೆ ನಿರುತ್ಸಾಹ ನಮ್ಮನ್ನು ಇನ್ನೆಂದೂ ಕಾಡುವುದಿಲ್ಲ ಎಂದಲ್ಲ. ನಮ್ಮಲ್ಲಿ ಕೆಲವರನ್ನು ಆಗಾಗ್ಗೆ ಅದು ಕಾಡಬಹುದು. ಆದ್ದರಿಂದ ಹೊಸ ಲೋಕ ಬರುವ ವರೆಗೂ ಈ ಕುಟಿಲ ಆಕ್ರಮಣದ ವಿರುದ್ಧ ಕಾಳಗ ನಡೆಸಬೇಕಾಗುತ್ತದೆ. ಆದರೆ ನೆನಪಿಡಿ: ಬಹುಮಾನ ಸಿಗುವುದು ಕೊನೇ ವರೆಗೂ ಹೋರಾಡಿ ಜಯಿಸುವವರಿಗೆ ಮಾತ್ರ. ದೇವರ ರಾಜ್ಯ ಶಾಂತಿಯನ್ನು ಸ್ಥಾಪಿಸಿ, ಎಲ್ಲ ಮಾನವರನ್ನು ಪರಿಪೂರ್ಣರಾಗಿಸುವ ಆ ಭವ್ಯ ದಿನ ತುಂಬ ಹತ್ತಿರದಲ್ಲಿದೆ. ಹಾಗಾಗಿ ಅನೇಕ ಸಂಕಟಗಳು ದಾರಿಗೆದುರಾಗಿ ಬಂದರೂ ಆ ರಾಜ್ಯವನ್ನು ಪ್ರವೇಶಿಸುವ ದೃಢಸಂಕಲ್ಪ ನಿಮಗಿರಲಿ.