ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮೇಲಿನವುಗಳ ಮೇಲೆ ಮನಸ್ಸಿಡಿ”

“ಮೇಲಿನವುಗಳ ಮೇಲೆ ಮನಸ್ಸಿಡಿ”

“ನೀವು ಭೂಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ ಮನಸ್ಸಿಡಿರಿ.”—ಕೊಲೊ. 3:2.

1, 2. (ಎ) ಕೊಲೊಸ್ಸೆ ಸಭೆಯಲ್ಲಿ ಯಾವ ಅಪಾಯವಿತ್ತು? (ಬಿ) ಆ ಸಭೆಯವರು ಯೆಹೋವನಿಗೆ ಆಪ್ತರಾಗಿರಲು ನೆರವಾಗಲಿಕ್ಕಾಗಿ ಪೌಲನು ಯಾವ ಸಲಹೆ ಕೊಟ್ಟನು?

ಒಂದನೇ ಶತಮಾನದ ಕೊಲೊಸ್ಸೆ ಸಭೆಯ ಸಹೋದರರಲ್ಲಿ ಭಿನ್ನ ಅಭಿಪ್ರಾಯಗಳಿದ್ದವು. ಕೆಲವು ಸಹೋದರರು ಧರ್ಮಶಾಸ್ತ್ರವನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ಹೇಳುತ್ತಿದ್ದರು. ಇನ್ನು ಕೆಲವರು ಜೀವನದ ಎಲ್ಲ ಆನಂದವನ್ನು ತೊರೆಯಬೇಕೆಂದು ಹೇಳುತ್ತಿದ್ದರು. ಇಂಥ ಆಲೋಚನೆಗಳು ಸಭೆಗೆ ಅಪಾಯಕಾರಿಯಾಗಿದ್ದವು. ಏಕೆಂದರೆ ಅವರ ಮಧ್ಯೆ ವಿಭಜನೆಯುಂಟಾಗುವ ಸಾಧ್ಯತೆಯಿತ್ತು. ಹಾಗಾಗಿ ಪೌಲನು ಅವರನ್ನು ಎಚ್ಚರಿಸಿದನು. ಅವನು ಹೀಗೆ ಬರೆದನು: “ಎಚ್ಚರವಾಗಿರಿ! ಕ್ರಿಸ್ತನಿಗೆ ಅನುಸಾರವಾಗಿರದೆ ಮನುಷ್ಯರ ಸಂಪ್ರದಾಯಕ್ಕೆ ಅನುಸಾರವಾಗಿಯೂ ಈ ಲೋಕಕ್ಕೆ ಸೇರಿದ ಪ್ರಾಥಮಿಕ ವಿಷಯಗಳಿಗೆ ಅನುಸಾರವಾಗಿಯೂ ಇರುವ ತತ್ತ್ವಜ್ಞಾನ ಮತ್ತು ನಿರರ್ಥಕವಾದ ಮೋಸಕರ ಮಾತುಗಳ ಮೂಲಕ ಯಾವನಾದರೂ ನಿಮ್ಮನ್ನು ತನ್ನ ಬೇಟೆಯೋಪಾದಿ ಹಿಡಿದುಕೊಂಡು ಹೋಗಬಹುದು.”—ಕೊಲೊ. 2:8.

2 ಕೊಲೊಸ್ಸೆ ಸಭೆಯ ಆ ಅಭಿಷಿಕ್ತ ಕ್ರೈಸ್ತರು ಅಂಥ ಮೋಸಕರ ಆಲೋಚನೆಗಳಿಗೆ ಗಮನಕೊಟ್ಟರೆ ದೇವರ ಪುತ್ರರಾಗುವ ಸುಯೋಗವನ್ನು ಕಳೆದುಕೊಳ್ಳುತ್ತಿದ್ದರು. (ಕೊಲೊ. 2:20-23) ಅವರು ಯೆಹೋವನಿಂದ ದೂರ ಆಗಬಾರದೆಂಬ ಉದ್ದೇಶದಿಂದ ಪೌಲನು ಅವರಿಗೆ, “ನೀವು ಭೂಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ ಮನಸ್ಸಿಡಿರಿ” ಎಂದು ಬುದ್ಧಿ ಹೇಳಿದನು. (ಕೊಲೊ. 3:2) ಅಂದರೆ ಆ ಕ್ರೈಸ್ತರು ಸ್ವರ್ಗದಲ್ಲಿ ಸದಾಕಾಲ ಜೀವಿಸುವ ಸುಯೋಗವನ್ನು ಯಾವಾಗಲೂ ತಮ್ಮ ಮನಸ್ಸಿನಲ್ಲಿಡಬೇಕಿತ್ತು.—ಕೊಲೊ. 1:4, 5.

3. (ಎ) ಅಭಿಷಿಕ್ತ ಕ್ರೈಸ್ತರು ಎಂಥ ಜೀವನಕ್ಕಾಗಿ ಕಾಯುತ್ತಿದ್ದಾರೆ? (ಬಿ) ಈ ಲೇಖನದಲ್ಲಿ ನಮಗೆ ಯಾವ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ?

3 ಇಂದಿರುವ ಅಭಿಷಿಕ್ತ ಕ್ರೈಸ್ತರು ಸಹ ದೇವರ ರಾಜ್ಯದ ಮೇಲೆ ಹಾಗೂ ‘ಕ್ರಿಸ್ತನೊಂದಿಗೆ ಜೊತೆ ಬಾಧ್ಯರಾಗುವ’ ತಮ್ಮ ನಿರೀಕ್ಷೆಯ ಮೇಲೆ ಮನಸ್ಸಿಟ್ಟಿದ್ದಾರೆ. (ರೋಮ. 8:14-17) ಆದರೆ ಈ ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆ ಇರುವವರು ಸಹ ಪೌಲನ ಈ ಸಲಹೆಯನ್ನು ಪಾಲಿಸಬೇಕಾ? ಹೌದಾದಲ್ಲಿ ಅವರು ‘ಮೇಲಿನವುಗಳ ಮೇಲೆ ಮನಸ್ಸಿಡುವುದು’ ಹೇಗೆ? (ಯೋಹಾ. 10:16) ಅಬ್ರಹಾಮ ಮತ್ತು ಮೋಶೆ ಕಷ್ಟಕರ ಸಮಯದಲ್ಲಿದ್ದಾಗಲೂ ‘ಮೇಲಿನವುಗಳ ಮೇಲೆ ಮನಸ್ಸಿಟ್ಟರು.’ ನಾವು ಕೂಡ ಅವರಂತೆ ಇರುವುದು ಹೇಗೆ? ನಾವೀಗ ನೋಡೋಣ.

‘ಮೇಲಿನವುಗಳ ಮೇಲೆ ಮನಸ್ಸಿಡುವುದರ’ ಅರ್ಥ

4. ಭೂಮಿಯಲ್ಲಿ ಜೀವಿಸುವ ನಿರೀಕ್ಷೆಯಿರುವ ಕ್ರೈಸ್ತರು ‘ಮೇಲಿನವುಗಳ ಮೇಲೆ ಮನಸ್ಸಿಡುವುದು’ ಹೇಗೆ?

4 ಭೂಮಿಯಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯಿರುವವರು ಕೂಡ ‘ಮೇಲಿನವುಗಳ ಮೇಲೆ ಮನಸ್ಸಿಡಬೇಕು.’ ಇದನ್ನು ಮಾಡುವುದು ಹೇಗೆ? ಯೆಹೋವನಿಗೂ ಆತನ ರಾಜ್ಯಕ್ಕೂ ತಮ್ಮ ಜೀವನದಲ್ಲಿ ಮೊದಲ ಸ್ಥಾನ ಕೊಡುವ ಮೂಲಕವೇ. (ಲೂಕ 10:25-27) ಕ್ರಿಸ್ತನು ಹಾಗೆ ಮಾಡಿದನು. ನಾವು ಕೂಡ ಅದನ್ನೇ ಮಾಡಬೇಕು. (1 ಪೇತ್ರ 2:21) ಒಂದನೇ ಶತಮಾನದ ಕ್ರೈಸ್ತರು ಜೀವಿಸುತ್ತಿದ್ದ ಸಮಯದಲ್ಲಿ ಸುಳ್ಳು ತರ್ಕಗಳು, ತತ್ವಜ್ಞಾನ ಮತ್ತು ಪ್ರಾಪಂಚಿಕತೆ ಲೋಕದಲ್ಲಿ ತುಂಬಿಕೊಂಡಿದ್ದವು. ಇಂಥ ವಿಷಯಗಳು ಈಗ ನಮ್ಮ ಕಾಲದಲ್ಲೂ ಇವೆ. (2 ಕೊರಿಂಥ 10:5 ಓದಿ.) ಇವು ನಮಗೆ ಯೆಹೋವನೊಂದಿಗಿರುವ ಸಂಬಂಧವನ್ನು ಹಾಳುಮಾಡುತ್ತವೆ. ಹಾಗಾಗಿ ನಾವು ಯೇಸುವಿನಂತೆ ಈ ಎಲ್ಲ ವಿಷಯಗಳಿಂದ ದೂರವಿರಬೇಕು.

5. ಹಣ ಮತ್ತು ಆಸ್ತಿಪಾಸ್ತಿಯ ಬಗ್ಗೆ ನಮಗೆ ಯಾವ ಮನೋಭಾವ ಇದೆಯೆಂದು ಪರೀಕ್ಷಿಸಲು ನಾವೇನು ಮಾಡಬೇಕು?

5 ಉದಾಹರಣೆಗೆ ಹಣ ಮತ್ತು ಆಸ್ತಿಪಾಸ್ತಿಯ ಬಗ್ಗೆ ಲೋಕದ ಜನರಿಗಿರುವ ಮನೋಭಾವ ಗಮನಿಸಿ. ಅದು ಅವರಿಗೆ ಸರ್ವಸ್ವ. ಅಂಥ ಮನೋಭಾವ ನಮ್ಮಲ್ಲೂ ಬಂದಿದೆಯಾ? ನಾವು ಯಾವುದರ ಬಗ್ಗೆ ಯೋಚಿಸುತ್ತೇವೋ ಮತ್ತು ಏನು ಮಾಡುತ್ತೇವೋ ಅದು ನಾವು ಯಾವುದನ್ನು ನಿಜವಾಗಿಯೂ ಪ್ರೀತಿಸುತ್ತೇವೆ ಎನ್ನುವುದನ್ನು ತೋರಿಸುತ್ತದೆ. ಯೇಸು ಕೂಡ ಇದನ್ನೇ ಹೇಳಿದನು. “ನಿನ್ನ ಸಂಪತ್ತು ಇರುವಲ್ಲಿಯೇ ನಿನ್ನ ಹೃದಯವು ಸಹ ಇರುವುದು.” (ಮತ್ತಾ. 6:21) ಹಾಗಾಗಿ ನಮ್ಮನ್ನೇ ಪರೀಕ್ಷೆ ಮಾಡಿಕೊಳ್ಳಬೇಕು. ‘ಜೀವನದಲ್ಲಿ ಯಾವುದು ಪ್ರಾಮುಖ್ಯವೆಂದು ನಾನು ಯೋಚಿಸುತ್ತೇನೆ? ಯಾವಾಗಲೂ ಹಣದ್ದೇ ಚಿಂತೆ ಮಾಡುತ್ತಾ ಇರುತ್ತೇನಾ? ಈಗಿರುವುದಕ್ಕಿಂತ ಒಳ್ಳೇ ಕೆಲಸ ಸೇರಬೇಕು, ಇನ್ನೂ ಹೆಚ್ಚು ಸುಖವಾಗಿ ಬದುಕಬೇಕು ಎನ್ನುವ ಆಲೋಚನೆಯೇ ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿರುತ್ತದಾ? ಅಥವಾ ಸರಳ ಜೀವನ ನಡೆಸಲಿಕ್ಕೆ ಪ್ರಯತ್ನಿಸುತ್ತಾ ಯೆಹೋವನೊಟ್ಟಿಗಿರುವ ಸಂಬಂಧವನ್ನು ಕಾಪಾಡಿಕೊಳ್ಳುವುದರ ಮೇಲೆ ನನ್ನ ಗಮನವಿದೆಯಾ?’ (ಮತ್ತಾ. 6:22) ಯೇಸು ಏನು ಹೇಳಿದನೆಂದು ನೆನಪಿಸಿಕೊಳ್ಳಿ. ಒಂದುವೇಳೆ ನಾವು ‘ಭೂಮಿಯಲ್ಲಿ ಸಂಪತ್ತು ಕೂಡಿಸಿಟ್ಟುಕೊಳ್ಳುವುದರ’ ಮೇಲೆ ಮನಸ್ಸಿಟ್ಟರೆ ಯೆಹೋವನೊಟ್ಟಿಗಿರುವ ಸಂಬಂಧವನ್ನು ಕಳಕೊಳ್ಳುತ್ತೇವೆ.—ಮತ್ತಾ. 6:19, 20, 24.

6. ಅಪರಿಪೂರ್ಣತೆಯ ವಿರುದ್ಧ ನಾವು ಮಾಡುವ ಹೋರಾಟದಲ್ಲಿ ಜಯ ಗಳಿಸಲು ಏನು ಮಾಡಬೇಕು?

6 ನಾವು ಅಪರಿಪೂರ್ಣರಾಗಿರುವುದರಿಂದ ನಮ್ಮ ಮನಸ್ಸು ತಪ್ಪಾದದ್ದರ ಕಡಗೆ ಸುಲಭವಾಗಿ ವಾಲುತ್ತದೆ. (ರೋಮನ್ನರಿಗೆ 7:21-25 ಓದಿ.) ಹಾಗಾಗಿ ನಾವು ಪವಿತ್ರಾತ್ಮದ ಮೇಲೆ ಆತುಕೊಳ್ಳಬೇಕು. ಇಲ್ಲದಿದ್ದರೆ ಯೆಹೋವನ ಮಟ್ಟಗಳನ್ನು ಕಡೆಗಣಿಸುವ ಸಾಧ್ಯತೆಯಿದೆ. ಭಾರೀ ಮೋಜು, ಕುಡಿಕತನ, ಅನೈತಿಕತೆ, ನಾಚಿಕೆಗೆಟ್ಟ ನಡತೆಯಲ್ಲಿ ಒಳಗೂಡುವ ಅಪಾಯವಿದೆ. (ರೋಮ. 13:12, 13) ನಾವು ಅಪರಿಪೂರ್ಣತೆಯ ವಿರುದ್ಧ ಯಾವಾಗಲೂ ಹೋರಾಟ ಮಾಡುತ್ತಲೇ ಇರಬೇಕು. ಈ ಹೋರಾಟದಲ್ಲಿ ಜಯ ಪಡೆಯಬೇಕಾದರೆ ನಮ್ಮ ಮನಸ್ಸನ್ನು ‘ಮೇಲಿನವುಗಳ ಮೇಲೆ’ ಕೇಂದ್ರೀಕರಿಸಬೇಕು. ಅಂದರೆ ಯೆಹೋವನಿಗೂ ಆತನ ರಾಜ್ಯಕ್ಕೂ ಜೀವನದಲ್ಲಿ ಮೊದಲ ಸ್ಥಾನ ಕೊಡಬೇಕು. ಇದು ಸುಲಭವಲ್ಲ. ತುಂಬ ಪ್ರಯತ್ನ ಅಗತ್ಯ. ಹಾಗಾಗಿಯೇ ಪೌಲನು ಹೇಳಿದ್ದು: “ನನ್ನ ದೇಹವನ್ನು ಜಜ್ಜಿ ಅದನ್ನು ದಾಸನಂತೆ ನಡೆಸಿಕೊಳ್ಳುತ್ತೇನೆ.” (1 ಕೊರಿಂ. 9:27) ನಾವೂ ಅದನ್ನೇ ಮಾಡಬೇಕು. ಅದಕ್ಕಾಗಿ ನಾವು ನಮ್ಮನ್ನೇ ಶಿಸ್ತುಗೊಳಿಸಬೇಕು. ಅದನ್ನು ಮಾಡುವುದು ಹೇಗೆಂದು ತಿಳಿಯಲು, ದೇವರನ್ನು ಮೆಚ್ಚಿಸಲು ತಮ್ಮಿಂದ ಆದುದೆಲ್ಲವನ್ನು ಮಾಡಿದ ಇಬ್ಬರು ನಂಬಿಗಸ್ತ ಪುರುಷರ ಮಾದರಿಯನ್ನು ಗಮನಿಸೋಣ.—ಇಬ್ರಿ. 11:6.

ಅಬ್ರಹಾಮನು “ಯೆಹೋವನನ್ನು ನಂಬಿದನು”

7, 8. (ಎ) ಕಾನಾನಿಗೆ ಬಂದಾಗ ಅಬ್ರಹಾಮ ಮತ್ತು ಸಾರಳಿಗೆ ಯಾವ ಸಮಸ್ಯೆಗಳಿದ್ದವು? (ಬಿ) ಅಬ್ರಹಾಮನು ಯಾವಾಗಲೂ ಯಾವುದರ ಬಗ್ಗೆ ಯೋಚಿಸುತ್ತಿದ್ದನು?

7 ಅಬ್ರಹಾಮನು ಊರ್‌ ಪಟ್ಟಣವನ್ನು ಬಿಟ್ಟು ತನ್ನ ಕುಟುಂಬದೊಂದಿಗೆ ಕಾನಾನಿಗೆ ಹೋಗುವಂತೆ ಯೆಹೋವನು ಹೇಳಿದನು. ಅಬ್ರಹಾಮನು ಕೂಡಲೆ ಹಾಗೆ ಮಾಡಿದನು. ಅವನು ಇಷ್ಟೊಂದು ನಂಬಿಕೆ ಮತ್ತು ವಿಧೇಯತೆ ತೋರಿಸಿದ್ದಕ್ಕಾಗಿ ಯೆಹೋವನು ಅವನೊಂದಿಗೆ ಒಂದು ಒಡಂಬಡಿಕೆ ಮಾಡಿದನು. ‘ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸುವೆನು’ ಎಂದು ಯೆಹೋವನು ಹೇಳಿದನು. (ಆದಿ. 12:2) ಇದನ್ನು ಹೇಳಿ ಅನೇಕ ವರ್ಷಗಳಾದರೂ ಅಬ್ರಹಾಮ ಮತ್ತು ಸಾರಳಿಗೆ ಮಕ್ಕಳೇ ಆಗಲಿಲ್ಲ. ಆಗ ಅಬ್ರಹಾಮನಿಗೆ ಹೇಗನಿಸಿರಬೇಕು? ಯೆಹೋವನು ತಾನು ಕೊಟ್ಟ ಮಾತನ್ನು ಮರೆತುಬಿಟ್ಟಿದ್ದಾನೋ ಎಂಬ ಸಂದೇಹ ಅವನಲ್ಲಿ ಬಂದಿರಬಹುದಾ? ಆ ಸಮಯದಲ್ಲಿ ಅವರ ಜೀವನ ಕೂಡ ಅಷ್ಟು ಸುಲಭವಾಗಿರಲಿಲ್ಲ. ಅವರು ಸಂಪದ್ಭರಿತ ಊರ್‌ ಪಟ್ಟಣದಲ್ಲಿನ ಆರಾಮದ ಜೀವನವನ್ನು ಬಿಟ್ಟು 1,600 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸಿ ಕಾನಾನಿಗೆ ಬಂದಿದ್ದರು. ಅಲ್ಲಿ ಡೇರೆಗಳಲ್ಲಿ ವಾಸಿಸುತ್ತಿದ್ದರು. ಕೆಲವೊಮ್ಮೆ ಊಟಕ್ಕೆ ಬೇಕಾದಷ್ಟು ಇರಲಿಲ್ಲ. ಕಳ್ಳಕಾಕರ ಅಪಾಯವೂ ಇತ್ತು. (ಆದಿ. 12:5, 10; 13:18; 14:10-16) ಇಷ್ಟೆಲ್ಲ ಕಷ್ಟಗಳಿದ್ದಾಗ ಅವರು, ‘ವಾಪಸ್‌ ನಮ್ಮೂರಿಗೆ ಹೋಗಿ ಆರಾಮವಾಗಿ ಬದುಕೋಣ’ ಎಂದು ನೆನಸಬಹುದಿತ್ತು. ಆದರೆ ಅಂಥ ಯೋಚನೆ ಕೂಡ ಅಬ್ರಹಾಮನಿಗಾಗಲಿ ಅವನ ಕುಟುಂಬದವರಿಗಾಗಲಿ ಬರಲಿಲ್ಲ.—ಇಬ್ರಿಯ 11:8-12, 15 ಓದಿ.

8 ಅಬ್ರಹಾಮನು ‘ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಲಿಲ್ಲ.’ ಬದಲಿಗೆ “ಯೆಹೋವನನ್ನು ನಂಬಿದನು.” (ಆದಿ. 15:6) ತನಗೆ ಯೆಹೋವನು ಮಾಡಿದ ವಾಗ್ದಾನದ ಕುರಿತು ಅವನು ಯಾವಾಗಲೂ ಯೋಚಿಸುತ್ತಿದ್ದನು. ಅವನಲ್ಲಿದ್ದ ಆ ಬಲವಾದ ನಂಬಿಕೆಗೆ ಪ್ರತಿಫಲವಾಗಿ ಯೆಹೋವನು ಅವನಿಗೆ: “ಆಕಾಶದ ಕಡೆಗೆ ನೋಡು; ನಕ್ಷತ್ರಗಳನ್ನು ಲೆಕ್ಕಿಸುವದು ನಿನ್ನಿಂದಾದರೆ ಲೆಕ್ಕಿಸು; ನಿನ್ನ ಸಂತಾನವು ಅಷ್ಟಾಗುವದು ಅಂದನು.” (ಆದಿ. 15:5) ಇದನ್ನು ಕೇಳಿಸಿಕೊಂಡಾಗ ಅಬ್ರಹಾಮನಿಗೆ ಖಂಡಿತ ತುಂಬ ಖುಷಿಯಾಗಿರಬೇಕು! ಯೆಹೋವನು ತಾನು ಕೊಟ್ಟ ಮಾತನ್ನು ಮರೆತಿಲ್ಲ ಎಂದು ಅವನಿಗೆ ತಿಳಿಯಿತು. ಬಳಿಕ ಪ್ರತಿಬಾರಿ ನಕ್ಷತ್ರಗಳನ್ನು ನೋಡಿದಾಗೆಲ್ಲ, ‘ತನ್ನ ಸಂತತಿ ಸಹ ಅಷ್ಟೊಂದಾಗುತ್ತದೆಂಬ’ ಯೆಹೋವನ ಮಾತು ಅವನಿಗೆ ನೆನಪಿಗೆ ಬರುತ್ತಿತ್ತು. ಯೆಹೋವನು ತಕ್ಕ ಸಮಯದಲ್ಲಿ ತನ್ನ ಮಾತನ್ನು ನೆರವೇರಿಸಿದನು. ಅಬ್ರಹಾಮನಿಗೆ ಒಬ್ಬ ಮಗನು ಹುಟ್ಟಿದನು.—ಆದಿ. 21:1, 2.

9. ನಾವು ಹೇಗೆ ಅಬ್ರಹಾಮನಂತೆ ಇರಬಲ್ಲೆವು?

9 ಅಬ್ರಹಾಮನಂತೆ ನಾವು ಸಹ ದೇವರ ವಾಗ್ದಾನಗಳು ನೆರವೇರಲಿಕ್ಕಾಗಿ ಕಾಯುತ್ತಿದ್ದೇವೆ. (2 ಪೇತ್ರ 3:13) ಈಗ ನಾವು ನಮ್ಮ ಮನಸ್ಸನ್ನು ‘ಮೇಲಿನವುಗಳ ಮೇಲೆ’ ಕೇಂದ್ರೀಕರಿಸದಿದ್ದರೆ ದೇವರ ವಾಗ್ದಾನಗಳು ನೆರವೇರಲು ತಡವಾಗುತ್ತಿದೆ ಎಂದು ನೆನಸುವ ಸಾಧ್ಯತೆಯಿದೆ. ಆಗ ನಮಗೆ ಯೆಹೋವನ ಸೇವೆಯಲ್ಲಿ ಇರುವ ಹುರುಪು ಕುಂದಿಹೋಗಬಹುದು. ಈ ಮುಂಚೆ ನಾವು ಅನೇಕ ತ್ಯಾಗಗಳನ್ನು ಮಾಡಿ ಪಯನೀಯರ್‌ ಸೇವೆ ಮಾಡಿರಬಹುದು ಅಥವಾ ಬೇರೆ ರೀತಿಯಲ್ಲಿ ಸೇವೆಯನ್ನು ಹೆಚ್ಚಿಸಲು ಪ್ರಯತ್ನಿಸಿರಬಹುದು. ಆದರೆ ಈಗಲೂ ಅದನ್ನೇ ಮಾಡುತ್ತಿದ್ದೇವಾ? ಅಬ್ರಹಾಮನಂತೆ ಯೆಹೋವನಿಗಾಗಿ ನಮ್ಮಿಂದಾಗುವುದನ್ನೆಲ್ಲ ಮಾಡುತ್ತಾ ಭವಿಷ್ಯತ್ತಿನಲ್ಲಿ ಸಿಗುವ ಆಶೀರ್ವಾದಗಳ ಮೇಲೆ ಮನಸ್ಸಿಟ್ಟಿದ್ದೇವಾ? (ಇಬ್ರಿ. 11:10) “ಅಬ್ರಹಾಮನು ಯೆಹೋವನಲ್ಲಿ ನಂಬಿಕೆಯನ್ನಿಟ್ಟನು.” ಆದ್ದರಿಂದ ಅವನು ದೇವರ ಸ್ನೇಹಿತನಾದನು.—ರೋಮ. 4:3.

ಮೋಶೆ ‘ಅದೃಶ್ಯನಾಗಿರುವಾತನನ್ನು ನೋಡಿದನು’

10. ಮೋಶೆ ಎಲ್ಲಿ ಮತ್ತು ಹೇಗೆ ಬೆಳೆದನು?

10 ‘ಮೇಲಿನವುಗಳ ಮೇಲೆ ಮನಸ್ಸಿಟ್ಟ’ ಇನ್ನೊಬ್ಬ ವ್ಯಕ್ತಿ ಮೋಶೆ. ಅವನು ಬೆಳೆದದ್ದು ಈಜಿಪ್ಟಿನ ರಾಜ ಮನೆತನದಲ್ಲಿ. ಅದೂ ಈಜಿಪ್ಟ್‌ ಸಾಮ್ರಾಜ್ಯವು ಲೋಕದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದ್ದ ಕಾಲದಲ್ಲಿ. ಬೈಬಲ್‌ ಹೇಳುವ ಪ್ರಕಾರ, ಮೋಶೆ “ಈಜಿಪ್ಟಿನವರ ಸರ್ವವಿದ್ಯೆಗಳಲ್ಲಿ ಉಪದೇಶಹೊಂದಿದನು.” ಈ ವಿದ್ಯೆಯು ಅವನನ್ನು “ಮಾತಿನಲ್ಲಿಯೂ ಕಾರ್ಯದಲ್ಲಿಯೂ ಸಮರ್ಥನಾಗಿ” ಮಾಡಿತು. (ಅ. ಕಾ. 7:22) ಆದುದರಿಂದ ಮೋಶಗೆ ಈಜಿಪ್ಟಿನಲ್ಲಿ ದೊಡ್ಡ ಅಧಿಕಾರದ ಸ್ಥಾನಕ್ಕೆ ಬರಲು ಅನೇಕ ಅವಕಾಶಗಳಿದ್ದವು. ಆದರೆ ಮೋಶೆ ಈಜಿಪ್ಟಿನ ಶಿಕ್ಷಣಕ್ಕಿಂತ ಇನ್ನೊಂದು ವಿಧದ ಶಿಕ್ಷಣವನ್ನು ಹೆಚ್ಚು ಪ್ರಾಮುಖ್ಯವೆಂದು ಎಣಿಸಿದನು. ಅದು ಯಾವುದು?

11, 12. (ಎ) ಮೋಶೆಗೆ ಯಾವ ಶಿಕ್ಷಣ ಹೆಚ್ಚು ಪ್ರಮುಖವಾಗಿತ್ತು? (ಬಿ) ಅದು ನಮಗೆ ಹೇಗೆ ತಿಳಿದುಬರುತ್ತದೆ?

11 ಮೋಶೆ ಚಿಕ್ಕವನಿದ್ದಾಗ ಅವನ ತಾಯಿ ಯೋಕೆಬೆದಳು ಅವನಿಗೆ ಇಬ್ರಿಯರ ದೇವರಾದ ಯೆಹೋವನ ಕುರಿತು ಕಲಿಸಿದಳು. ಯೆಹೋವನ ಕುರಿತಾದ ಈ ಜ್ಞಾನವನ್ನು ಮೋಶೆ ಬೇರೆಲ್ಲದ್ದಕ್ಕಿಂತ ಪ್ರಾಮುಖ್ಯವೆಂದು ಎಣಿಸಿದನು. ಹಾಗಾಗಿ ದೇವರ ಚಿತ್ತವನ್ನು ಮಾಡಲಿಕ್ಕಾಗಿ ಅವನು ಐಶ್ವರ್ಯ, ಅಧಿಕಾರ ಗಳಿಸಲು ತನಗಿದ್ದ ಅವಕಾಶಗಳನ್ನೆಲ್ಲ ಬಿಟ್ಟುಬಿಟ್ಟನು. ಅದಕ್ಕಾಗಿ ಅವನು ಬೇಸರಪಡಲಿಲ್ಲ. (ಇಬ್ರಿಯ 11:24-27 ಓದಿ.) ಚಿಕ್ಕಂದಿನಲ್ಲಿ ಸಿಕ್ಕಿದ ತರಬೇತಿ ಹಾಗೂ ಯೆಹೋವನ ಮೇಲಿದ್ದ ನಂಬಿಕೆಯು ಮೋಶೆಗೆ ‘ಮೇಲಿನವುಗಳ ಮೇಲೆ ಮನಸ್ಸಿಡಲು’ ಸಹಾಯಮಾಡಿತು.

12 ಆ ಕಾಲದಲ್ಲಿ ಈಜಿಪ್ಟಿನಲ್ಲಿ ಸಿಗುತ್ತಿದ್ದದರಲ್ಲೇ ಅತ್ಯುತ್ತಮ ಶಿಕ್ಷಣ ಮೋಶೆಗೆ ಸಿಕ್ಕಿತಾದರೂ ಅವನದನ್ನು ಬಳಸಿ ಅಧಿಕಾರ, ಪ್ರಸಿದ್ಧಿ, ಐಶ್ವರ್ಯದ ಬೆನ್ನುಹತ್ತಲು ಹೋಗಲಿಲ್ಲ. ‘ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಅವನು ನಿರಾಕರಿಸಿದನು.’ “ಪಾಪದ ತಾತ್ಕಾಲಿಕ ಸುಖಾನುಭವಕ್ಕಿಂತ ದೇವರ ಜನರೊಂದಿಗೆ ದುರುಪಚಾರವನ್ನು ಅನುಭವಿಸುವ ಆಯ್ಕೆಯನ್ನು ಮಾಡಿದನು.” ಆದರೆ ಯೆಹೋವನ ಕುರಿತು ಅವನು ಪಡೆದ ಜ್ಞಾನವನ್ನು ಸದುಪಯೋಗಿಸಿದನು. ಅನೇಕ ವರ್ಷಗಳ ನಂತರ ದೇವಜನರನ್ನು ಮುನ್ನಡೆಸಲು ಅದನ್ನು ಬಳಸಿದನು.

13, 14. (ಎ) ಮೋಶೆಯು ದೇವಜನರನ್ನು ಈಜಿಪ್ಟಿನಿಂದ ಬಿಡಿಸುವ ಮುಂಚೆ ಯಾವ ಗುಣಗಳನ್ನು ಬೆಳೆಸಿಕೊಳ್ಳಬೇಕಿತ್ತು? (ಬಿ) ನಾವು ಸಹ ಏನನ್ನು ಕಲಿತುಕೊಳ್ಳಬೇಕು?

13 ಮೋಶೆಗೆ ಯೆಹೋವನ ಮೇಲೆ ಹಾಗೂ ಈಜಿಪ್ಟಿನಲ್ಲಿ ದಾಸರಾಗಿದ್ದ ದೇವಜನರ ಮೇಲೆ ತುಂಬ ಪ್ರೀತಿಯಿತ್ತು. 40 ವರ್ಷದವನಾದಾಗ ಅವನು ತಾನು ದೇವಜನರನ್ನು ಅಲ್ಲಿಂದ ಬಿಡಿಸಲು ತಯಾರಾಗಿದ್ದೇನೆ ಎಂದು ನೆನಸಿದನು. (ಅ. ಕಾ. 7:23-25) ಆದರೆ ಮೋಶೆ ಇನ್ನೂ ಆ ಕೆಲಸಕ್ಕೆ ತಯಾರಾಗಿಲ್ಲ ಎಂದು ಯೆಹೋವನಿಗೆ ಗೊತ್ತಿತ್ತು. ದೀನತೆ, ತಾಳ್ಮೆ, ಸೌಮ್ಯಭಾವ, ಸ್ವನಿಯಂತ್ರಣ ಮುಂತಾದ ಗುಣಗಳನ್ನು ಮೋಶೆ ಬೆಳೆಸಿಕೊಳ್ಳಬೇಕಿತ್ತು. (ಜ್ಞಾನೋ. 15:33) ಏಕೆಂದರೆ ಆ ಗುಣಗಳು ಮುಂದೆ ಬರಲಿದ್ದ ಗಂಭೀರ ಸಮಸ್ಯೆಗಳನ್ನು ನಿಭಾಯಿಸಲು ಮೋಶೆಗೆ ನೆರವಾಗಲಿದ್ದವು. ಮುಂದಿನ 40 ವರ್ಷ ಕುರುಬನಾಗಿ ಕೆಲಸಮಾಡುತ್ತಿದ್ದಾಗ ಅವನು ಆ ಗುಣಗಳನ್ನು ಬೆಳೆಸಿಕೊಂಡನು.

14 ಈ ರೀತಿಯ ತರಬೇತಿಯಿಂದ ಮೋಶೆಗೆ ಪ್ರಯೋಜನವಾಯಿತಾ? ಹೌದು. ಅವನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು” ಅಂದರೆ ಬಹು ಸೌಮ್ಯಭಾವದವನಾದನು ಎಂದು ಬೈಬಲ್‌ ಹೇಳುತ್ತದೆ. (ಅರ. 12:3) ಅವನು ದೀನನಾಗಿರಲು ಕಲಿತದ್ದರಿಂದ ಬೇರೆ ಬೇರೆ ರೀತಿಯ ಜನರೊಂದಿಗೆ ತಾಳ್ಮೆಯಿಂದಿರಲು ಮತ್ತು ಅವರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಯಿತು. (ವಿಮೋ. 18:26) ನಾವು ಸಹ “ಮಹಾ ಸಂಕಟವನ್ನು” ಪಾರಾಗಲು ಮತ್ತು ಹೊಸ ಲೋಕಕ್ಕೆ ಹೋಗಲು ಸಹಾಯಮಾಡುವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. (ಪ್ರಕ. 7:14) ಉದಾಹರಣೆಗೆ, ನಾವು ಎಲ್ಲ ರೀತಿಯ ಜನರೊಂದಿಗೆ ಹೊಂದಿಕೊಂಡು ಹೋಗುತ್ತೇವಾ? ಮುಂಗೋಪಿಗಳು ಅಥವಾ ಬೇಗನೆ ನೊಂದುಕೊಳ್ಳುವವರು ಎಂದು ನಮಗನಿಸುವ ವ್ಯಕ್ತಿಗಳೊಂದಿಗೆ ಕೂಡ ಹೊಂದಿಕೊಂಡು ಹೋಗುವ ಗುಣ ನಮ್ಮಲ್ಲಿದೆಯಾ? ಇಲ್ಲವಾದರೆ ಅಪೊಸ್ತಲ ಪೇತ್ರನು ಕೊಟ್ಟ ಈ ಸಲಹೆಯನ್ನು ನಾವು ಅನ್ವಯಿಸಬೇಕು: “ಎಲ್ಲ ರೀತಿಯ ಜನರನ್ನು ಗೌರವಿಸಿರಿ, ಸಹೋದರರ ಇಡೀ ಬಳಗವನ್ನು ಪ್ರೀತಿಸಿರಿ.”—1 ಪೇತ್ರ 2:17.

ಮೇಲಿನವುಗಳ ಮೇಲೆ ಮನಸ್ಸಿಡಿ

15, 16. (ಎ) ನಾವು ಸರಿಯಾದ ವಿಷಯಗಳ ಮೇಲೆ ಏಕೆ ಮನಸ್ಸಿಡಬೇಕು? (ಬಿ) ನಮ್ಮ ನಡತೆ ಯಾವಾಗಲೂ ಒಳ್ಳೇದಾಗಿರಬೇಕು ಏಕೆ?

15 ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲದಲ್ಲಿ’ ನಾವು ಜೀವಿಸುತ್ತಿದ್ದೇವೆ. (2 ತಿಮೊ. 3:1) ಇಂಥ ಸಮಯದಲ್ಲಿ ನಾವು ದೇವರಿಗೆ ಆಪ್ತರಾಗಿ ಉಳಿಯಬೇಕಾದರೆ ಸರಿಯಾದ ವಿಷಯಗಳ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸಬೇಕು. (1 ಥೆಸ. 5:6-9) ಇದನ್ನು ಮಾಡುವ ಮೂರು ವಿಧಗಳನ್ನು ನಾವೀಗ ನೋಡೋಣ.

16 ನಮ್ಮ ನಡತೆ: “ಅನ್ಯಜನಾಂಗಗಳ ಮಧ್ಯೆ ನಿಮ್ಮ ನಡತೆಯನ್ನು ಉತ್ತಮವಾಗಿ ಕಾಪಾಡಿಕೊಳ್ಳಿರಿ” ಎಂದು ಪೇತ್ರನು ತಿಳಿಸಿದನು. ಹೀಗೆ, ಒಳ್ಳೇ ನಡತೆ ತುಂಬ ಪ್ರಾಮುಖ್ಯ ಎನ್ನುವುದಕ್ಕೆ ಒತ್ತುಕೊಟ್ಟನು. ಆದರೆ ನಾವು ಏಕೆ ಒಳ್ಳೇ ನಡತೆ ಕಾಪಾಡಿಕೊಳ್ಳಬೇಕು? ಏಕೆಂದರೆ ಯೆಹೋವನ ಕುರಿತು ಗೊತ್ತಿಲ್ಲದವರು ನಮ್ಮ ನಡತೆಯನ್ನು ನೋಡಿ ‘ಆತನನ್ನು ಮಹಿಮೆಪಡಿಸಲು’ ಸಾಧ್ಯವಾಗುತ್ತದೆ. (1 ಪೇತ್ರ 2:12) ಹಾಗಾಗಿ ನಾವು ಮನೆಯಲ್ಲಿರಲಿ, ಕೆಲಸದ ಸ್ಥಳದಲ್ಲಿರಲಿ ಅಥವಾ ಶಾಲೆಯಲ್ಲಿರಲಿ, ಆಟ ಆಡುತ್ತಿರಲಿ ಇಲ್ಲವೆ ಸುವಾರ್ತೆ ಸಾರುತ್ತಿರಲಿ, ನಮ್ಮ ನಡತೆಯ ಮೂಲಕ ಯೆಹೋವನಿಗೆ ಮಹಿಮೆ ತರಲು ನಮ್ಮಿಂದ ಆಗುವುದನ್ನೆಲ್ಲ ಮಾಡಬೇಕು. ನಾವು ಅಪರಿಪೂರ್ಣರಾದ್ದರಿಂದ ತಪ್ಪು ಮಾಡುತ್ತೇವೆ ನಿಜ. (ರೋಮ. 3:23) ಹಾಗಂತ ನಿರಾಶೆಗೊಂಡು ಒಳ್ಳೇ ನಡತೆ ತೋರಿಸುವದನ್ನು ಬಿಟ್ಟುಬಿಡಬಾರದು. ಯೆಹೋವನ ಸಹಾಯದಿಂದ ‘ನಂಬಿಕೆಯ ಉತ್ತಮ ಹೋರಾಟವನ್ನು ಮಾಡಲು’ ನಮ್ಮಿಂದ ಖಂಡಿತ ಆಗುತ್ತದೆ!—1 ತಿಮೊ. 6:12.

17. ಯೇಸುವಿನ ಮನೋಭಾವವನ್ನು ನಾವು ಹೇಗೆ ಅನುಕರಿಸಬಹುದು? (ಶೀರ್ಷಿಕೆಯ ಮೇಲಿರುವ ಚಿತ್ರ ನೋಡಿ.)

17 ನಮ್ಮ ಮನೋಭಾವ: ನಮ್ಮ ನಡತೆ ಒಳ್ಳೇದಾಗಿರಬೇಕಾದರೆ ನಮ್ಮ ಮನೋಭಾವವೂ ಒಳ್ಳೇದಿರಬೇಕು. ಈ ಬಗ್ಗೆ ಅಪೊಸ್ತಲ ಪೌಲನು ಹೇಳಿದ್ದು: “ಕ್ರಿಸ್ತ ಯೇಸುವಿನಲ್ಲಿದ್ದ ಈ ಮನೋಭಾವವು ನಿಮ್ಮಲ್ಲಿಯೂ ಇರಲಿ.” (ಫಿಲಿ. 2:5) ಯೇಸುವಿನಲ್ಲಿ ಎಂಥ ಮನೋಭಾವ ಇತ್ತು? ಅವನು ದೀನನಾಗಿದ್ದನು. ಈ ಗುಣವು ತನ್ನಿಂದಾದಷ್ಟು ಹೆಚ್ಚು ಯೆಹೋವನ ಸೇವೆ ಮಾಡುವಂತೆ ಅವನನ್ನು ಪ್ರಚೋದಿಸಿತು. ದೇವರ ರಾಜ್ಯದ ಬಗ್ಗೆ ಸುವಾರ್ತೆ ಸಾರುವುದೇ ಯಾವಾಗಲೂ ಅವನ ಮನಸ್ಸಲ್ಲಿತ್ತು. (ಮಾರ್ಕ 1:38; 13:10) ದೇವರ ವಾಕ್ಯವೇ ಅವನ ಮಾರ್ಗದರ್ಶಿಯಾಗಿತ್ತು. (ಯೋಹಾ. 7:16; 8:28) ಅವನು ಪವಿತ್ರ ಶಾಸ್ತ್ರಗ್ರಂಥವನ್ನು ಆಳವಾಗಿ ಅಧ್ಯಯನ ಮಾಡಿದನು. ಹಾಗಾಗಿ ಅದರಿಂದ ಉದ್ಧರಿಸಿದನು, ಅದರ ಪರ ವಹಿಸಿ ತರ್ಕಿಸಿದನು ಹಾಗೂ ವಿವರಿಸಿದನು. ಕ್ರಿಸ್ತನಲ್ಲಿ ಇದ್ದ ಮನೋಭಾವ ನಮ್ಮಲ್ಲೂ ಇದ್ದರೆ ನಾವು ದೀನರಾಗಿರುತ್ತೇವೆ, ಹುರುಪಿನಿಂದ ಸೇವೆ ಮಾಡುತ್ತೇವೆ ಮತ್ತು ಮನಸ್ಸುಕೊಟ್ಟು ಬೈಬಲ್‌ ಅಧ್ಯಯನ ಮಾಡುತ್ತೇವೆ.

ದೇವರ ರಾಜ್ಯದ ಕುರಿತು ಸಾರುವುದೇ ಯೇಸುವಿಗೆ ಅತಿ ಪ್ರಾಮುಖ್ಯವಾಗಿತ್ತು (ಪ್ಯಾರ 17 ನೋಡಿ)

18. ನಾವು ಯಾವ ವಿಧಗಳಲ್ಲಿ ಯೆಹೋವನ ಕೆಲಸಕ್ಕೆ ಬೆಂಬಲ ಕೊಡಬಹುದು?

18 ನಮ್ಮ ಬೆಂಬಲ: “ಸ್ವರ್ಗದಲ್ಲಿರುವವರೂ ಭೂಮಿಯಲ್ಲಿರುವವರೂ” ಯೇಸುವಿಗೆ ಅಧೀನರಾಗಬೇಕೆಂಬುದು ದೇವರ ಉದ್ದೇಶ. (ಫಿಲಿ. 2:9-11) ಯೇಸುವಿಗೆ ಇಷ್ಟು ದೊಡ್ಡ ಅಧಿಕಾರವಿರುವುದಾದರೂ ಆತನು ತನ್ನ ತಂದೆಗೆ ದೀನತೆಯಿಂದ ಅಧೀನನಾಗುತ್ತಾನೆ. ನಾವೂ ಅದೇ ಗುಣವನ್ನು ತೋರಿಸಬೇಕು. (1 ಕೊರಿಂ. 15:28) ನಾವು ಯಾವಾಗ ‘ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ಕೆಲಸದಲ್ಲಿ ಭಾಗವಹಿಸುತ್ತೇವೋ ಆಗ ಯೆಹೋವನ ಕೆಲಸಕ್ಕೆ ಬೆಂಬಲ ಕೊಡುತ್ತೇವೆ. (ಮತ್ತಾ. 28:19) ಇತರ ಜನರಿಗೆ ಹಾಗೂ ನಮ್ಮ ಸಹೋದರರಿಗೆ ನೆರವಾಗುವ ಮೂಲಕ ನಾವು ‘ಎಲ್ಲರಿಗೂ ಒಳ್ಳೇದನ್ನು ಮಾಡುತ್ತೇವೆ.’—ಗಲಾ. 6:10.

19. ನಮ್ಮ ದೃಢನಿರ್ಧಾರ ಏನಾಗಿರಬೇಕು?

19 ‘ಮೇಲಿನವುಗಳ ಮೇಲೆ ಮನಸ್ಸಿಡಲು’ ಯೆಹೋವನು ನಮಗೆ ಕಲಿಸುತ್ತಿರುವುದಕ್ಕಾಗಿ ನಾವೆಷ್ಟು ಕೃತಜ್ಞರು! ಆತನು ಹೇಳಿರುವಂತೆಯೇ ನಾವು ಸರಿಯಾದ ವಿಷಯಗಳ ಮೇಲೆ ಮನಸ್ಸಿಟ್ಟು “ತಾಳ್ಮೆಯಿಂದ ಓಡೋಣ.” (ಇಬ್ರಿ. 12:1, 2) ನಮ್ಮ ತಂದೆಯಾದ ಯೆಹೋವನು ನಮ್ಮನ್ನು ಬಹಳವಾಗಿ ಆಶೀರ್ವದಿಸುವನು ಎಂಬ ಭರವಸೆಯಿಂದ ‘ಆತನಿಗೋಸ್ಕರ ಪೂರ್ಣ ಪ್ರಾಣದಿಂದ’ ಕೆಲಸಮಾಡುವ ದೃಢನಿರ್ಧಾರ ಮಾಡೋಣ.—ಕೊಲೊ. 3:23, 24.