ವಾಚಕರಿಂದ ಪ್ರಶ್ನೆಗಳು
ಪ್ರತಿ ಸಭೆಯಲ್ಲಿ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ಹೇಗೆ ನೇಮಿಸಲಾಗುತ್ತದೆ?
ಕ್ರಿ.ಶ. ಒಂದನೇ ಶತಮಾನದಲ್ಲಿ ಅಪೊಸ್ತಲ ಪೌಲನು ಎಫೆಸ ಸಭೆಯಲ್ಲಿ ಸೇವೆಮಾಡುತ್ತಿದ್ದ ಹಿರಿಯರಿಗೆ ಹೇಳಿದ್ದು: “ದೇವರು ತನ್ನ ಸ್ವಂತ ಪುತ್ರನ ರಕ್ತದಿಂದ ಕೊಂಡುಕೊಂಡ ಆತನ ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮವು ನಿಮ್ಮನ್ನು ಮೇಲ್ವಿಚಾರಕರನ್ನಾಗಿ ನೇಮಿಸಿರುವುದರಿಂದ ನಿಮಗೂ ಇಡೀ ಮಂದೆಗೂ ಗಮನಕೊಡಿರಿ.” (ಅ. ಕಾ. 20:28) ಇಂದು ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ನೇಮಿಸುವುದರಲ್ಲಿ ಪವಿತ್ರಾತ್ಮ ಯಾವ ಪಾತ್ರ ವಹಿಸುತ್ತಿದೆ?
ಮೊದಲನೇದಾಗಿ, ಹಿರಿಯರಲ್ಲಿ ಹಾಗೂ ಶುಶ್ರೂಷಾ ಸೇವಕರಲ್ಲಿ ಇರಬೇಕಾದ ಅರ್ಹತೆಗಳ ಕುರಿತು ಬರೆಯುವಂತೆ ಬೈಬಲ್ ಲೇಖಕರನ್ನು ಪ್ರಚೋದಿಸಿದ್ದು ಪವಿತ್ರಾತ್ಮವೇ. ಹಿರಿಯರಲ್ಲಿರಬೇಕಾದ 16 ವಿಭಿನ್ನ ಅರ್ಹತೆಗಳನ್ನು 1 ತಿಮೊಥೆಯ 3:1-7ರಲ್ಲಿ ಪಟ್ಟಿಮಾಡಲಾಗಿದೆ. ಇನ್ನಿತರ ಅರ್ಹತೆಗಳು ತೀತ 1:5-9 ಹಾಗೂ ಯಾಕೋಬ 3:17, 18ರಲ್ಲಿವೆ. ಶುಶ್ರೂಷಾ ಸೇವಕರಲ್ಲಿರಬೇಕಾದ ಅರ್ಹತೆಗಳನ್ನು 1 ತಿಮೊಥೆಯ 3:8-10, 12, 13ರಲ್ಲಿ ತಿಳಿಸಲಾಗಿದೆ. ಎರಡನೇದಾಗಿ, ಒಬ್ಬ ಸಹೋದರನನ್ನು ಹಿರಿಯ ಅಥವಾ ಶುಶ್ರೂಷಾ ಸೇವಕನಾಗಿ ಶಿಫಾರಸ್ಸು ಮಾಡುವವರು ಮತ್ತು ನೇಮಕ ಮಾಡುವವರು ಅವನಲ್ಲಿ ಬೈಬಲಿನ ಅರ್ಹತೆಗಳು ತಕ್ಕಮಟ್ಟಿಗೆ ಇವೆಯೋ ಎಂದು ತಿಳಿದುಕೊಳ್ಳಲು ನಿರ್ದಿಷ್ಟವಾಗಿ ಪವಿತ್ರಾತ್ಮದ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುತ್ತಾರೆ. ಮೂರನೇದಾಗಿ, ಶಿಫಾರಸ್ಸು ಮಾಡಲಾಗಿರುವ ಸಹೋದರನು ತನ್ನ ಜೀವನದಲ್ಲಿ ಪವಿತ್ರಾತ್ಮದ ಫಲವನ್ನು ತೋರಿಸಬೇಕು. (ಗಲಾ. 5:22, 23) ಹೀಗೆ ನೇಮಕಮಾಡುವ ಈ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಪವಿತ್ರಾತ್ಮ ಪಾತ್ರ ವಹಿಸುತ್ತದೆ.
ಆದರೆ ಹಿರಿಯರನ್ನು, ಶುಶ್ರೂಷಾ ಸೇವಕರನ್ನು ನಿಜವಾಗಿ ಯಾರು ನೇಮಿಸುತ್ತಾರೆ? ಮೊದಲೆಲ್ಲಾ ಇವರನ್ನು ನೇಮಕ ಮಾಡುವ ಎಲ್ಲಾ ಶಿಫಾರಸ್ಸುಗಳನ್ನು ಸ್ಥಳೀಯ ಬ್ರಾಂಚ್ ಆಫೀಸಿಗೆ ಕಳುಹಿಸಲಾಗುತ್ತಿತ್ತು. ಅಲ್ಲಿ ಆಡಳಿತ ಮಂಡಲಿಯಿಂದ ನೇಮಕ ಪಡೆದಿದ್ದ ಸಹೋದರರು ಈ ಶಿಫಾರಸ್ಸುಗಳನ್ನೆಲ್ಲಾ ಪರಿಶೀಲಿಸಿ ಅರ್ಹರಾದವರನ್ನು ಹಿರಿಯರು ಅಥವಾ ಶುಶ್ರೂಷಾ ಸೇವಕರಾಗಿ ನೇಮಿಸುತ್ತಿದ್ದರು. ನಂತರ ಬ್ರಾಂಚ್ ಆಫೀಸ್ ಹಿರಿಯ ಮಂಡಲಿಗೆ ಈ ವಿಷಯವನ್ನು ತಿಳಿಸುತ್ತಿತ್ತು. ಹಿರಿಯರು ಹೊಸದಾಗಿ ನೇಮಕ ಪಡೆದಿರುವ ಸಹೋದರನಿಗೆ ಅವನು ಹೊಸದಾಗಿ ನೇಮಕಗೊಂಡಿದ್ದಾನೆ ಎಂದು ತಿಳಿಸುತ್ತಿದ್ದರು. ಅವನು ಈ ನೇಮಕ ಪಡೆಯಲು ಇಷ್ಟಪಡುತ್ತಾನೋ ಹಾಗೂ ಈ ನೇಮಕಕ್ಕಾಗಿರುವ ಅರ್ಹತೆಗಳನ್ನು ಪೂರೈಸುತ್ತಿದ್ದಾನೋ ಎಂದು ವಿಚಾರಿಸುತ್ತಿದ್ದರು. ಕೊನೆಯದಾಗಿ, ಸಭೆಯಲ್ಲಿ ಅವನ ನೇಮಕದ ಬಗ್ಗೆ ಪ್ರಕಟಣೆ ಮಾಡಲಾಗುತ್ತಿತ್ತು.
ಒಂದನೇ ಶತಮಾನದಲ್ಲಿ ಈ ನೇಮಕಗಳನ್ನು ಹೇಗೆ ಮಾಡಲಾಗುತ್ತಿತ್ತು? ಕೆಲವು ಸಂದರ್ಭಗಳಲ್ಲಿ ಅಪೊಸ್ತಲರು ನಿರ್ದಿಷ್ಟ ಕೆಲಸಕ್ಕಾಗಿ ಸಹೋದರರನ್ನು ನೇಮಿಸುತ್ತಿದ್ದರು. ಉದಾಹರಣೆಗೆ, ವಿಧವೆಯರಿಗೆ ಪ್ರತಿದಿನ ಆಹಾರ ವಿತರಿಸಲು 7 ಮಂದಿ ಪುರುಷರನ್ನು ನೇಮಿಸಿದರು. (ಅ. ಕಾ. 6:1-6) ಆದರೆ ಈ ಹೆಚ್ಚಿನ ಕೆಲಸ ಪಡೆಯುವ ಮೊದಲೇ ಆ ಸಹೋದರರು ಹಿರಿಯರಾಗಿ ಸೇವೆ ಸಲ್ಲಿಸಿದ್ದಿರಬೇಕು.
ಹಿಂದೆ ಎಲ್ಲಾ ನೇಮಕಗಳನ್ನು ಹೇಗೆ ಮಾಡಲಾಗುತ್ತಿತ್ತು ಎಂದು ಬೈಬಲಿನಲ್ಲಿ ಪ್ರತಿಯೊಂದು ವಿವರ ಕೊಟ್ಟಿಲ್ಲವಾದರೂ ಅದನ್ನು ಸೂಚಿಸುವ ಕೆಲವೊಂದು ಸುಳಿವುಗಳನ್ನು ನಾವು ಬೈಬಲಿನಲ್ಲಿ ಕಂಡುಕೊಳ್ಳಬಹುದು. ಪೌಲಬಾರ್ನಬರು ತಮ್ಮ ಮೊದಲ ಮಿಷನರಿ ಪ್ರಯಾಣ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ “ಅವರು ಪ್ರತಿ ಸಭೆಯಲ್ಲಿ ಅ. ಕಾ. 14:23) ತನ್ನ ಸಂಚರಣ ಸಂಗಡಿಗನಾದ ತೀತನಿಗೆ ವರ್ಷಗಳ ನಂತರ ಪೌಲನು ಬರೆದದ್ದು: “ನಾನು ನಿನಗೆ ಆಜ್ಞಾಪಿಸಿದಂತೆ, ಕ್ರೇತದಲ್ಲಿ ಲೋಪವುಳ್ಳ ವಿಷಯಗಳನ್ನು ನೀನು ಸರಿಪಡಿಸಲು ಸಾಧ್ಯವಾಗುವಂತೆಯೂ ಪಟ್ಟಣ ಪಟ್ಟಣಗಳಲ್ಲಿ ಹಿರೀಪುರುಷರ ನೇಮಕಗಳನ್ನು ಮಾಡಲು ಸಾಧ್ಯವಾಗುವಂತೆಯೂ ನಾನು ನಿನ್ನನ್ನು ಅಲ್ಲೇ ಬಿಟ್ಟುಬಂದೆನು.” (ತೀತ 1:5) ಅಪೊಸ್ತಲ ಪೌಲನ ಜೊತೆ ತುಂಬ ಪ್ರಯಾಣ ಮಾಡಿರುವ ತಿಮೊಥೆಯನಿಗೂ ಇದೇ ಅಧಿಕಾರವನ್ನು ಕೊಡಲಾಗಿದ್ದಿರಬೇಕು. (1 ತಿಮೊ. 5:22) ಇದರಿಂದ ಸ್ಪಷ್ಟವಾಗಿ ತಿಳಿದು ಬರುವುದೇನೆಂದರೆ ನೇಮಿಸುವ ಕೆಲಸವನ್ನು ಸಂಚರಣ ಮೇಲ್ವಿಚಾರಕರು ಮಾಡುತ್ತಿದ್ದರು. ಯೆರೂಸಲೇಮಿನಲ್ಲಿದ್ದ ಅಪೊಸ್ತಲರಾಗಲಿ ಹಿರೀಪುರುಷರಾಗಲಿ ಮಾಡುತ್ತಿರಲಿಲ್ಲ.
. . . ಹಿರೀಪುರುಷರನ್ನು ನೇಮಿಸಿದರು ಮತ್ತು ಉಪವಾಸವಿದ್ದು ಪ್ರಾರ್ಥಿಸುತ್ತಾ ಅವರು ಯಾರಲ್ಲಿ ವಿಶ್ವಾಸಿಗಳಾಗಿದ್ದರೋ ಆ ಯೆಹೋವನ ಕೈಗೆ ಅವರನ್ನು ಒಪ್ಪಿಸಿದರು.” (ಬೈಬಲಿನಲ್ಲಿ ದಾಖಲಾಗಿರುವ ಈ ಹಿಂದಿನ ಉದಾಹರಣೆಗಳನ್ನು ಮನಸ್ಸಿನಲ್ಲಿಟ್ಟು ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ನೇಮಕ ಮಾಡುವ ವಿಧಾನದಲ್ಲಿ ಬದಲಾವಣೆ ಮಾಡಿದೆ. ಸೆಪ್ಟೆಂಬರ್ 1, 2014ರಿಂದ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ಈ ರೀತಿ ನೇಮಿಸಲಾಗುತ್ತಿದೆ: ಪ್ರತಿಯೊಬ್ಬ ಸರ್ಕಿಟ್ ಮೇಲ್ವಿಚಾರಕ ತನ್ನ ಸರ್ಕಿಟ್ನಲ್ಲಿ ಮಾಡಲಾಗಿರುವ ಶಿಫಾರಸ್ಸುಗಳನ್ನು ಜಾಗರೂಕತೆಯಿಂದ ಪರಿಶೀಲಿಸುತ್ತಾನೆ. ಸಭೆಗಳನ್ನು ಭೇಟಿಮಾಡುವಾಗ ಶಿಫಾರಸ್ಸು ಮಾಡಲಾಗಿರುವ ಸಹೋದರರ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಅವರ ಜೊತೆ ಸಾಧ್ಯವಾದರೆ ಸೇವೆಗೆ ಹೋಗುತ್ತಾನೆ. ಶಿಫಾರಸ್ಸು ಮಾಡಲಾಗಿರುವ ಸಹೋದರರ ಕುರಿತು ಹಿರಿಯ ಮಂಡಲಿಯೊಂದಿಗೆ ಮಾತಾಡುತ್ತಾನೆ. ನಂತರ ಸರ್ಕಿಟ್ ಮೇಲ್ವಿಚಾರಕ ಹಿರಿಯರನ್ನು ಹಾಗೂ ಶುಶ್ರೂಷಾ ಸೇವಕರನ್ನು ನೇಮಿಸುತ್ತಾನೆ. ಇದನ್ನು ತನ್ನ ಸರ್ಕಿಟ್ನಲ್ಲಿರುವ ಸಭೆಗಳಲ್ಲಿ ಮಾಡುತ್ತಾನೆ. ಈ ಏರ್ಪಾಡು ಒಂದನೇ ಶತಮಾನದಲ್ಲಿ ನೇಮಕ ಮಾಡಲಾಗುತ್ತಿದ್ದ ರೀತಿಗೆ ಹೋಲುತ್ತದೆ.
ಈ ಪ್ರಕ್ರಿಯೆಯಲ್ಲಿರುವ ಬೇರೆಬೇರೆ ಪಾತ್ರಗಳನ್ನು ಯಾರು ನಿರ್ವಹಿಸುತ್ತಾರೆ? ಮನೆಯವರಿಗೆ ಉಣಿಸುವ ಮುಖ್ಯ ಜವಾಬ್ದಾರಿ ಎಂದಿನಂತೆ ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಿಗೆ’ ಇದೆ. (ಮತ್ತಾ. 24:45-47) ಈ ಜವಾಬ್ದಾರಿಯಲ್ಲಿ ಲೋಕವ್ಯಾಪಕ ಸಭೆಯನ್ನು ಸಂಘಟಿಸಲು ನೆರವಾಗುವಂಥ ಬೈಬಲ್ ತತ್ವಗಳನ್ನು ಪ್ರಾಯೋಗಿಕವಾಗಿ ಅನ್ವಯಿಸುವುದು ಹೇಗೆ ಎಂಬ ನಿರ್ದೇಶನ ಕೊಡುವುದು ಸೇರಿದೆ. ಇದಕ್ಕಾಗಿ ಅವರು ಪವಿತ್ರಾತ್ಮದ ಸಹಾಯದಿಂದ ಬೈಬಲನ್ನು ಚೆನ್ನಾಗಿ ಪರಿಶೀಲಿಸುತ್ತಾರೆ. ಈ ಆಳು ಸರ್ಕಿಟ್ ಮೇಲ್ವಿಚಾರಕರನ್ನು ಹಾಗೂ ಬ್ರಾಂಚ್ ಕಮಿಟಿಯ ಸದಸ್ಯರನ್ನು ನೇಮಿಸುತ್ತದೆ ಸಹ. ಆಳು ಕೊಡುವ ನಿರ್ದೇಶನ ಪಾಲಿಸಲು ಬ್ರಾಂಚ್ ಆಫೀಸ್ ಪ್ರಾಯೋಗಿಕ ಸಹಾಯ ಕೊಡುತ್ತದೆ. ಪ್ರತಿಯೊಂದು ಹಿರಿಯ ಮಂಡಲಿಗೆ ತಾವು ಶಿಫಾರಸ್ಸು ಮಾಡುವ ಸಹೋದರರು ಬೈಬಲಿನ ಅರ್ಹತೆಗಳನ್ನು ಪೂರೈಸುತ್ತಿದ್ದಾರೋ ಎಂದು ಕೂಲಂಕಷವಾಗಿ ಪರಿಶೀಲಿಸುವ ಗಂಭೀರ ಜವಾಬ್ದಾರಿಯಿದೆ. ಪ್ರತಿಯೊಬ್ಬ ಸರ್ಕಿಟ್ ಮೇಲ್ವಿಚಾರಕನಿಗೆ ಹಿರಿಯ ಮಂಡಲಿ ಮಾಡಿರುವ ಶಿಫಾರಸ್ಸಿನ ಕುರಿತು ಪ್ರಾರ್ಥನಾಪೂರ್ವಕವಾಗಿ ಹಾಗೂ ಜಾಗರೂಕತೆಯಿಂದ ಪರಿಶೀಲಿಸಿ ಅರ್ಹರಾದವರನ್ನು ನೇಮಕ ಮಾಡುವ ಗಂಭೀರ ಜವಾಬ್ದಾರಿಯಿದೆ.
ನೇಮಕಗಳನ್ನು ಹೇಗೆ ಮಾಡಲಾಗುತ್ತದೆ ಎಂದು ಅರ್ಥಮಾಡಿಕೊಂಡಾಗ ಈ ಪ್ರಕ್ರಿಯೆಯಲ್ಲಿ ಪವಿತ್ರಾತ್ಮದ ಪಾತ್ರವನ್ನು ಹೆಚ್ಚು ಗಣ್ಯಮಾಡುತ್ತೇವೆ. ಆಗ ಕ್ರೈಸ್ತ ಸಭೆಯಲ್ಲಿ ನೇಮಕ ಪಡೆದವರ ಮೇಲೆ ನಮ್ಮ ಗೌರವ ಹಾಗೂ ಭರವಸೆ ಹೆಚ್ಚಾಗುತ್ತದೆ.—ಇಬ್ರಿ. 13:7, 17.
ಪ್ರಕಟನೆ 11 ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಇಬ್ಬರು ಸಾಕ್ಷಿಗಳು ಯಾರು?
ಪ್ರಕಟನೆ 11:3ರಲ್ಲಿ 1,260 ದಿನಗಳವರೆಗೆ ಪ್ರವಾದಿಸಿದ ಇಬ್ಬರು ಸಾಕ್ಷಿಗಳ ಕುರಿತು ತಿಳಿಸಲಾಗಿದೆ. ಅದೇ ವೃತ್ತಾಂತದ ಮುಂದಿನ ವಚನಗಳಲ್ಲಿ ಹೀಗನ್ನಲಾಗಿದೆ: ಆ ಸಾಕ್ಷಿಗಳನ್ನು ಕಾಡುಮೃಗ ‘ಜಯಿಸುತ್ತದೆ ಮತ್ತು ಕೊಲ್ಲುತ್ತದೆ.’ ಆದರೆ “ಮೂರೂವರೆ ದಿವಸಗಳಾದ” ನಂತರ ಅವರಿಗೆ ಪುನಃ ಜೀವ ಬರುತ್ತದೆ. ಇದನ್ನು ನೋಡಿದವರೆಲ್ಲರಿಗೂ ಆಶ್ಚರ್ಯವಾಗುತ್ತದೆ.—ಪ್ರಕ. 11:7, 11.
ಈ ಇಬ್ಬರು ಸಾಕ್ಷಿಗಳು ಯಾರು? ಅವರು ಯಾರೆಂದು ಗುರುತಿಸಲು ಅದೇ ವೃತ್ತಾಂತದಲ್ಲಿರುವ ವಿವರಗಳು ನಮಗೆ ಸಹಾಯ ಮಾಡುತ್ತವೆ. ಮೊದಲನೇ ವಿವರವೇನೆಂದರೆ, ಈ ಇಬ್ಬರು ಸಾಕ್ಷಿಗಳು “ಎರಡು ಆಲೀವ್ ಮರಗಳಿಂದಲೂ ಎರಡು ದೀಪಸ್ತಂಭಗಳಿಂದಲೂ ಸಂಕೇತಿಸಲ್ಪಡುತ್ತಾರೆ” ಎಂದು ತಿಳಿಸಲಾಗಿದೆ. (ಪ್ರಕ. 11:4) ಇದು, ಜೆಕರ್ಯನ ಪ್ರವಾದನೆಯಲ್ಲಿ ತಿಳಿಸಲಾಗಿರುವ ದೀಪಸ್ತಂಭ ಮತ್ತು ಎರಡು ಆಲೀವ್ ಮರಗಳನ್ನು ನಮಗೆ ನೆನಪಿಸುತ್ತದೆ. ಜೆಕರ್ಯನ ಪ್ರವಾದನೆಯಲ್ಲಿರುವ ಆಲೀವ್ ಮರಗಳು ಯೆಹೋವನಿಂದ ಅಭಿಷಿಕ್ತರಾದ ‘ಇಬ್ಬರು ಪುರುಷರನ್ನು’ ಚಿತ್ರಿಸುತ್ತದೆ. ಅವರು ‘ಸರ್ವಭೂಲೋಕದೊಡೆಯನ ಸನ್ನಿಧಿಸೇವಕರಾಗಿದ್ದ’ ದೇಶಾಧಿಪತಿ ಜೆರುಬ್ಬಾಬೆಲ್ ಮತ್ತು ಮಹಾ ಯಾಜಕ ಯೆಹೋಶುವ ಆಗಿದ್ದಾರೆ. (ಜೆಕ. 4:1-3, 14) ಎರಡನೇ ವಿವರವೇನೆಂದರೆ, ಆ ಇಬ್ಬರು ಸಾಕ್ಷಿಗಳು ಮೋಶೆ ಮತ್ತು ಎಲೀಯನು ಮಾಡಿದ ಸೂಚಕಕಾರ್ಯಗಳಿಗೆ ಹೋಲುವಂಥ ಕೆಲಸಗಳನ್ನು ಮಾಡುವರೆಂದು ವರ್ಣಿಸಲಾಗಿದೆ.—ಪ್ರಕಟನೆ 11:5, 6ನ್ನು ಅರಣ್ಯಕಾಂಡ 16:1-7, 28-35 ಮತ್ತು 1 ಅರಸುಗಳು 17:1; 18:41-45ರೊಂದಿಗೆ ಹೋಲಿಸಿ.
ಪ್ರಕಟನೆ 11ನೇ ಅಧ್ಯಾಯ ಮತ್ತು ಜೆಕರ್ಯ 4:1-3, 14ರಲ್ಲಿರುವ ವಿವರಗಳಲ್ಲಿ ಯಾವ ಸಮಾನತೆಯಿದೆ? ಈ ವೃತ್ತಾಂತಗಳು ಪರೀಕ್ಷೆಯ ಸಮಯದಲ್ಲಿ ದೇವರ ಅಭಿಷಿಕ್ತರ ಪೈಕಿ ಯಾರು ಮುಂದಾಳತ್ವ ವಹಿಸುತ್ತಿದ್ದರೊ ಅವರಿಗೆ ಸೂಚಿಸುತ್ತದೆ. ಇದೇ ರೀತಿ ಪ್ರಕಟನೆ 11ನೇ ಅಧ್ಯಾಯವನ್ನು ನೆರವೇರಿಸುತ್ತಾ “ಗೋಣಿತಟ್ಟುಗಳನ್ನು ಧರಿಸಿಕೊಂಡು” ಮೂರುವರೆ ವರ್ಷ ಸಾರಿದವರು ದೇವರ ರಾಜ್ಯ ಸ್ವರ್ಗದಲ್ಲಿ 1914ರಲ್ಲಿ ಸ್ಥಾಪನೆಯಾದಾಗ ಅಭಿಷಿಕ್ತ ಸಹೋದರರಲ್ಲಿ ಯಾರು ಮುಂದಾಳತ್ವ ವಹಿಸುತ್ತಿದ್ದರೊ ಅವರಾಗಿದ್ದರು.
ಗೋಣಿತಟ್ಟುಗಳನ್ನು ಧರಿಸಿಕೊಂಡು ಸಾರಿದ ಸಮಯಾವಧಿಯ ಕೊನೆಯಲ್ಲಿ ಈ ಅಭಿಷಿಕ್ತರನ್ನು ಸಾಂಕೇತಿಕವಾಗಿ ಕೊಲ್ಲಲಾಯಿತು ಅಂದರೆ ಜೈಲಿಗೆ ಹಾಕಲಾಯಿತು. ಅವರನ್ನು ಜೈಲಿನಲ್ಲಿ ಹಾಕಲಾದ ಅವಧಿಯನ್ನು ಸಾಂಕೇತಿಕವಾಗಿ ಮೂರುವರೆ ದಿವಸಗಳು ಎಂದು ಸೂಚಿಸಲಾಗಿದೆ. ಈ ಅವಧಿಯನ್ನು ಮೂರುವರೆ ವರ್ಷಗಳಿಗೆ ಹೋಲಿಸುವಾಗ ಅಲ್ಪ ಸಮಯವಾಗಿತ್ತು. ದೇವಜನರ ವೈರಿಗಳು ಅವರ ಕೆಲಸವನ್ನು ಧೂಳಿಪಟಮಾಡಿದ್ದೇವೆಂದು ನೆನಸಿ ಅತ್ಯಾನಂದದಿಂದ ಹಿರಿಹಿರಿ ಹಿಗ್ಗಿದರು.—ಪ್ರಕ. 11:8-10.
ಆದರೆ ಪ್ರವಾದನೆಯಲ್ಲಿ ತಿಳಿಸಲಾದಂತೆ ಮೂರುವರೆ ದಿನದ ಅಂತ್ಯದಲ್ಲಿ ಆ ಎರಡು ಸಾಕ್ಷಿಗಳಿಗೆ ಮರುಜೀವ ನೀಡಲಾಯಿತು. ಅಂದರೆ ಅವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಇವರಲ್ಲಿ ನಂಬಿಗಸ್ತರಾಗಿ ಉಳಿದವರು 1919ರಲ್ಲಿ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಂದ ವಿಶೇಷ ನೇಮಕವನ್ನು ಪಡೆದರು. ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳಾಗಿ’ ಕೆಲಸ ಮಾಡುವ ನೇಮಕ ಪಡೆದವರಲ್ಲಿ ಇವರೂ ಸೇರಿದ್ದರು. ಈ ಆಳು ಕಡೇ ದಿವಸಗಳಲ್ಲಿ ದೇವಜನರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸಬೇಕಿತ್ತು.—ಮತ್ತಾ. 24:45-47; ಪ್ರಕ. 11:11, 12.
ಆಸಕ್ತಿಕರವಾಗಿ, ಪ್ರಕಟನೆ 11:1, 2 ಈ ಘಟನೆಗಳನ್ನು ಆಧ್ಯಾತ್ಮಿಕ ಆಲಯವನ್ನು ಅಳತೆಮಾಡಲಾಗುವ ಸಮಯಕ್ಕೆ ಜೋಡಿಸುತ್ತದೆ. ಆಧ್ಯಾತ್ಮಿಕ ಆಲಯದ ಇದೇ ರೀತಿಯ ಪರಿಶೀಲನೆಯನ್ನು ಮತ್ತು ಅದನ್ನು ಹಿಂಬಾಲಿಸಿ ಮಾಡಲಾಗುವ ಶುದ್ಧೀಕರಣವನ್ನು ಮಲಾಕಿಯ 3ನೇ ಅಧ್ಯಾಯದಲ್ಲೂ ತಿಳಿಸಲಾಗಿದೆ. (ಮಲಾ. 3:1-4) ಈ ಪರಿಶೀಲನೆ ಮತ್ತು ಶುದ್ಧೀಕರಣದ ಕೆಲಸಕ್ಕೆ ಎಷ್ಟು ಸಮಯ ಹಿಡಿಯಿತು? ಅದು 1914ರಿಂದ ಆರಂಭಿಸಿ 1919ರ ಆರಂಭದ ತಿಂಗಳುಗಳ ತನಕ ನಡೆಯಿತು. ಈ ಸಮಯಾವಧಿಯಲ್ಲಿ ಪ್ರಕಟನೆ 11ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ 1,260 ದಿನಗಳು (42 ತಿಂಗಳುಗಳು) ಮತ್ತು ಸಾಂಕೇತಿಕ ಮೂರುವರೆ ದಿನಗಳು ಒಳಗೊಂಡಿವೆ.
ಸತ್ಕ್ರಿಯೆಗಳಿಗಾಗಿ ಹುರುಪುಳ್ಳ ಜನರನ್ನು ಶುದ್ಧೀಕರಿಸಲಿಕ್ಕಾಗಿ ಯೆಹೋವನು ಈ ಆಧ್ಯಾತ್ಮಿಕ ಶೋಧನೆಯ ಕೆಲಸವನ್ನು ಏರ್ಪಡಿಸಿದನು. ಇದಕ್ಕಾಗಿ ನಾವು ತುಂಬಾ ಸಂತೋಷಿಸುತ್ತೇವೆ. (ತೀತ 2:14) ಅಷ್ಟುಮಾತ್ರವಲ್ಲ, ಆ ಪರೀಕ್ಷೆಯ ಸಮಯದಲ್ಲಿ ನಂಬಿಗಸ್ತ ಅಭಿಷಿಕ್ತರ ಪೈಕಿ ಯಾರು ಮುಂದಾಳತ್ವ ವಹಿಸಿದರೊ ಅವರ ಮಾದರಿಯನ್ನು ಸಹ ನಾವು ಗಣ್ಯಮಾಡುತ್ತೇವೆ. ಇವರೇ ಪ್ರಕಟನೆ 11ನೇ ಅಧ್ಯಾಯದಲ್ಲಿ ತಿಳಿಸಲಾದ ಇಬ್ಬರು ಸಾಕ್ಷಿಗಳು. *
^ ಪ್ಯಾರ. 18 ಹೆಚ್ಚಿನ ಮಾಹಿತಿಗಾಗಿ, ಕಾವಲಿನಬುರುಜು ಜುಲೈ 15, 2013 ಪುಟ 22 ಪ್ಯಾರ 12 ನೋಡಿ.