ಕಣ್ಣಿಗೆ ಕಾಣುವುದನ್ನು ಮಾತ್ರ ನಂಬಬೇಕೋ?
ಕಣ್ಣಿಗೆ ಕಾಣುವುದನ್ನು ಮಾತ್ರ ನಂಬಬೇಕೋ?
“ಕ್ರೈಸ್ತ ಧರ್ಮ ಮತ್ತು ಇನ್ನಿತರ ಧರ್ಮಗಳು ಆಸಕ್ತಿವಹಿಸುವ ವಿಷಯಗಳಾದ, ದೇವರು ಮತ್ತು ಭವಿಷ್ಯತ್ತಿನ ಕುರಿತು ಸತ್ಯವನ್ನು ತಿಳಿದುಕೊಳ್ಳುವುದು ಅಸಾಧ್ಯ. ಒಂದು ವೇಳೆ ಸಾಧ್ಯವಿರಬಹುದಾದರೂ ಸದ್ಯಕ್ಕಂತೂ ಸಾಧ್ಯವಿಲ್ಲ” ಎಂದು ಕೆಲವರು ಭಾವಿಸುತ್ತಾರೆ.—ತತ್ವಜ್ಞಾನಿ ಬರ್ಟ್ರಾಂಡ್ ರಸ್ಸಲ್, 1953.
ಈ ರೀತಿಯ ಯೋಚನಾಧಾಟಿಯನ್ನು ವ್ಯಕ್ತಪಡಿಸಿದವರಲ್ಲಿ ಪ್ರಾಣಿವಿಜ್ಞಾನಿ ಥೋಮಸ್ ಹಕ್ಸ್ಲೀ ಒಬ್ಬರು. 1825ರಲ್ಲಿ ಹುಟ್ಟಿದ ಇವರು ಚಾರ್ಲ್ಸ್ ಡಾರ್ವಿನರ ಸಮಕಾಲೀನರೂ ವಿಕಾಸವಾದವನ್ನು ಬೆಂಬಲಿಸುವವರೂ ಆಗಿದ್ದರು. “ಕ್ರೈಸ್ತರು ಭಾವಿಸುವಂತೆ, ನಮ್ಮನ್ನು ಪ್ರೀತಿಸಿ ನಮ್ಮ ಬಗ್ಗೆ ಅಕ್ಕರೆ ತೋರಿಸುವ ಒಬ್ಬ ದೇವರು” ಇದ್ದಾನೆಂಬುದಕ್ಕೆ ತಾನು ಯಾವುದೇ ರುಜುವಾತನ್ನು ಕಾಣುತ್ತಿಲ್ಲ ಎಂದು ಹಕ್ಸ್ಲೀ 1863ರಲ್ಲಿ ಬರೆದರು.
ಇಂದು ಅನೇಕರು ಅಂಥ ಪ್ರಭಾವಶಾಲಿ ವ್ಯಕ್ತಿಗಳ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತಾ, ತಾವು ಕಣ್ಣಾರೇ ನೋಡಿದ್ದನ್ನು ಮಾತ್ರ ನಂಬುತ್ತೇವೆಂದು ಹೇಳುತ್ತಾರೆ. ಯಾವುದೇ ರುಜುವಾತುಗಳಿಲ್ಲದೆ ಒಂದು ವಿಷಯದಲ್ಲಾಗಲಿ ಒಬ್ಬ ವ್ಯಕ್ತಿಯ ಅಸ್ತಿತ್ವದಲ್ಲಾಗಲಿ ನಂಬಿಕೆಯಿಡುವುದು ಶುದ್ಧ ಮೂರ್ಖತನ ಎಂದು ಅವರು ಹೇಳಬಹುದು.
ಹಾಗಾದರೆ, ಸಾಕ್ಷ್ಯಾಧಾರಗಳಿಲ್ಲದೆ ನಾವು ಸುಮ್ಮನೆ ಕಣ್ಮುಚ್ಚಿ ದೇವರಲ್ಲಿ ನಂಬಿಕೆಯಿಡಬೇಕೆಂದು ಬೈಬಲ್ ಹೇಳುತ್ತದೋ? ಖಂಡಿತ ಇಲ್ಲ. ಸಾಕ್ಷ್ಯಾಧಾರಗಳಿಲ್ಲದ ವಿಷಯಗಳಲ್ಲಿ ನಂಬಿಕೆಯಿಡುವುದು ಮೂರ್ಖತನವಾಗಿದೆ ಎಂದು ಬೈಬಲ್ ತಿಳಿಸುತ್ತದೆ. ಅದನ್ನುವುದು, “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.
ಹಾಗಾದರೆ ದೇವರಲ್ಲಿ ನಂಬಿಕೆಯಿಡುವುದರ ಕುರಿತೇನು? ದೇವರಿದ್ದಾನೆ ಮತ್ತು ಆತನು ನಮ್ಮನ್ನು ಪ್ರೀತಿಸುತ್ತಾನೆ ಹಾಗೂ ಕಾಳಜಿವಹಿಸುತ್ತಾನೆ ಎಂಬುದಕ್ಕೆ ನಿಜವಾಗಿಯೂ ಸಾಕ್ಷ್ಯವಿದೆಯೋ?
ದೇವರ ಗುಣಗಳು ಸುವ್ಯಕ್ತವಾಗಿವೆ
ಬೈಬಲ್ ಲೇಖಕನಾದ ಪೌಲನು ಅಥೇನೆ ಪಟ್ಟಣದ ಮೇಧಾವಿಗಳೊಂದಿಗೆ ಮಾತಾಡುತ್ತಾ, ದೇವರು ‘ಜಗತ್ತನ್ನೂ ಅದರಲ್ಲಿರುವ ಎಲ್ಲಾ ವಸ್ತುಗಳನ್ನೂ ಉಂಟುಮಾಡಿದನು’ ಎಂದು ಹೇಳಿದನು. ದೇವರಿಗೆ ಮಾನವರಲ್ಲಿ ಕಾಳಜಿಯಿದೆ ಮತ್ತು “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ” ಎಂದು ಪೌಲನು ತಾನು ಮಾತಾಡುತ್ತಿದ್ದ ಆ ಸಂದೇಹವಾದಿ ಜನರಿಗೆ ತಿಳಿಸಿದನು.—ಅ. ಕೃತ್ಯಗಳು 17:24-27.
ದೇವರು ಇದ್ದಾನೆ, ಮಾತ್ರವಲ್ಲ ಮಾನವರಲ್ಲಿ ಆತನಿಗೆ ಕಾಳಜಿಯಿದೆ ಎಂದು ಪೌಲನು ದೃಢವಾಗಿ ನಂಬಲು ಕಾರಣವೇನು? ಒಂದು ಕಾರಣವನ್ನು ಪೌಲನು ರೋಮ್ನಲ್ಲಿದ್ದ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ತಿಳಿಸುತ್ತಾನೆ. ದೇವರ ಕುರಿತು ಬರೆಯುತ್ತಾ ಅವನು ಹೇಳಿದ್ದು: “ಕಣ್ಣಿಗೆ ಕಾಣದಿರುವ ಆತನ ಗುಣಲಕ್ಷಣಗಳು . . . ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”—ರೋಮಾಪುರ 1:20.
ಮುಂದಿನ ಪುಟಗಳು, ದೇವರು ಮಾಡಿರುವ ಸೃಷ್ಟಿಗಳ ಮೂಲಕ ಸ್ಪಷ್ಟವಾಗಿ ಕಂಡುಬರುವ ಆತನ ಗುಣಗಳಲ್ಲಿ ಮೂರನ್ನು ವಿವರಿಸುತ್ತವೆ. ಈ ಉದಾಹರಣೆಗಳನ್ನು ನೀವು ಓದುವಾಗ ಹೀಗೆ ಕೇಳಿಕೊಳ್ಳಿ: ‘ದೇವರ ಈ ಗುಣಗಳ ಕುರಿತು ಕಲಿಯುವುದು ನನ್ನನ್ನು ಏನು ಮಾಡುವಂತೆ ಪ್ರಚೋದಿಸುತ್ತದೆ?’ (w08 5/1)
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ಸಾಕ್ಷ್ಯಾಧಾರಗಳಿಲ್ಲದೆ ನಾವು ದೇವರಲ್ಲಿ ನಂಬಿಕೆಯಿಡಬೇಕೆಂದು ಬೈಬಲ್ ಹೇಳುವುದಿಲ್ಲ