ಮರಣೋನ್ಮುಖ ರೋಗಿಗಳನ್ನು ಸಂತೈಸುವುದು
ಮರಣೋನ್ಮುಖ ರೋಗಿಗಳನ್ನು ಸಂತೈಸುವುದು
“ನನ್ನ ಅಮ್ಮ ಸಾವಿನಂಚಿನಲ್ಲಿದ್ದಾರೆಂದು ಕೇಳಿದಾಗ ನನಗದನ್ನು ನಂಬಲಿಕ್ಕೇ ಆಗಲಿಲ್ಲ. ನನಗೆ ಸಿಡಿಲು ಬಡಿದಂತಾಯಿತು. ನನ್ನ ಅಕ್ಕರೆಯ ಅಮ್ಮ ಸ್ವಲ್ಪದರಲ್ಲೇ ಸಾಯಲಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ನನ್ನಿಂದಾಗಲಿಲ್ಲ.”—ಗ್ರೇಸ್, ಕೆನಡ.
ತಮ್ಮ ಪ್ರಿಯರೊಬ್ಬರಿಗೆ ಮರಣೋನ್ಮುಖ ಕಾಯಿಲೆಯಿದೆಯೆಂದು ಡಾಕ್ಟರ್ ಹೇಳುವಾಗ ಕುಟುಂಬದವರು ಮತ್ತು ಸ್ನೇಹಿತರು ತೀವ್ರ ದುಃಖಕ್ಕೆ ಒಳಗಾಗುತ್ತಾರೆ. ಮಾತ್ರವಲ್ಲ ಏನು ಮಾಡುವುದೆಂದೇ ಅವರಿಗೆ ತೋಚುವುದಿಲ್ಲ. ರೋಗಿಗೆ ಅದನ್ನು ಹೇಳಬೇಕೋ ಬಾರದೋ ಎಂದು ಅವರು ಬಹಳವಾಗಿ ಚಿಂತಿಸುತ್ತಾರೆ. ಇತರರಾದರೋ ತಮ್ಮ ಪ್ರಿಯರು ರೋಗದಿಂದ ನರಳುವುದನ್ನು ಹಾಗೂ ಅವರ ಪೇಚಾಟದ ಸ್ಥಿತಿಯನ್ನು ತಮ್ಮಿಂದ ನೋಡಲಾಗುವುದಿಲ್ಲವೆನ್ನುತ್ತಾರೆ. ರೋಗಿಯ ಕೊನೆಯ ಗಳಿಗೆಯಲ್ಲಿ ಏನು ಹೇಳಬೇಕು, ಏನು ಮಾಡಬೇಕು ಎಂದು ತಿಳಿಯದೆ ಅವರು ವ್ಯಥೆಗೀಡಾಗುತ್ತಾರೆ.
ಅಂಥ ದುರ್ವಾರ್ತೆಗೆ ನಿಮ್ಮ ಪ್ರತಿಕ್ರಿಯೇನಾಗಿರಬೇಕು? ಅದರ ಬಗ್ಗೆ ನೀವು ಏನು ತಿಳಿದಿರಬೇಕು? ನೀವು ರೋಗಿಯ “[ನಿಜ] ಮಿತ್ರ”ರಾಗಿದ್ದು ಅವರ ಕಷ್ಟದ ಸಮಯದಲ್ಲಿ ಆದರಣೆ ಮತ್ತು ಬೆಂಬಲವನ್ನು ಹೇಗೆ ನೀಡಬಲ್ಲಿರಿ?—ಜ್ಞಾನೋಕ್ತಿ 17:17.
ಸಾಮಾನ್ಯ ಪ್ರತಿಕ್ರಿಯೆ
ಪ್ರಿಯರೊಬ್ಬರು ಒಂದು ಗುರುತರ ಕಾಯಿಲೆಗೆ ಗುರಿಯಾದಾಗ ನಾವು ವ್ಯಥೆಪಡುವುದು ಸಹಜವೇ. ರೋಗಿಗಳು ಸಾಯುವುದನ್ನು ವೈದ್ಯರು ಯಾವಾಗಲೂ ನೋಡುತ್ತಾರಾದರೂ ಸಾವಿನಂಚಿನಲ್ಲಿರುವ ರೋಗಿಗಳ ದೈಹಿಕ ಮತ್ತು ಭಾವನಾತ್ಮಕ ಸ್ಥಿತಿಗೆ ಕೆಲವು ಸಲ ಯಾವ ರೀತಿಯ ಉಪಶಮನ ಕೊಡಬೇಕೆಂದು ಅವರಿಗೂ ತಿಳಿಯುವುದಿಲ್ಲ.
ಪ್ರಿಯರೊಬ್ಬರು ನೋವಿನಿಂದ ನರಳುವುದನ್ನು ನೋಡುವಾಗ ನಿಮಗೂ ದುಃಖವನ್ನು ತಡೆದುಕೊಳ್ಳಲು ಆಗಲಿಕ್ಕಿಲ್ಲ. ಬ್ರಸಿಲ್ನಲ್ಲಿ ವಾಸಿಸುವ ಹೋಸ ಎಂಬವರ ತಂಗಿ ಮಾರಕ ರೋಗಕ್ಕೆ ಗುರಿಯಾದಾಗ ಅವರು ಹೇಳಿದ್ದು: “ನೀವು ತುಂಬ ಪ್ರೀತಿಸುವ ವ್ಯಕ್ತಿಯು ದಿನದಿನವೂ ನೋವಿನಿಂದ ನರಳುವುದನ್ನು ನೋಡುವುದು ಅತೀ ಸಂಕಟಕರ.” ದೇವರ ನಂಬಿಗಸ್ತ ಸೇವಕನಾಗಿದ್ದ ಮೋಶೆಯ ಅಕ್ಕ ಕುಷ್ಠರೋಗ ಪೀಡಿತಳಾದಾಗ ಅವನು ದುಃಖದಿಂದ “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ ಎಂದು ಮೊರೆಯಿಟ್ಟನು.”—ಅರಣ್ಯಕಾಂಡ 12:12, 13.
ನಮ್ಮ ಪ್ರಿಯರ ಶೋಚನೀಯ ಸ್ಥಿತಿಯನ್ನು ಕಾಣುವಾಗ ನಾವು ದುಃಖಕ್ಕೀಡಾಗಲು ಕಾರಣವೇನೆಂದರೆ ನಮ್ಮ ಕನಿಕರವುಳ್ಳ ದೇವರು ಅಂಥ ಗುಣಗಳನ್ನು ನಮ್ಮಲ್ಲಿಟ್ಟಿದ್ದಾನೆ. (ಆದಿಕಾಂಡ 1:27; ಯೆಶಾಯ 63:9) ಮನುಷ್ಯರು ನೋವಿನಿಂದ ನರಳುವುದನ್ನು ಕಾಣುವಾಗ ಯೆಹೋವನಿಗೆ ಹೇಗನಿಸುತ್ತದೆ? ಇದನ್ನು ಅರ್ಥಮಾಡಿಕೊಳ್ಳಲು ಯೇಸುವಿನ ಪ್ರತಿಕ್ರಿಯೆಯನ್ನು ಗಮನಿಸಿ. ಅವನು ತನ್ನ ತಂದೆಯಾದ ಯೆಹೋವನ ಭಾವನೆಗಳನ್ನೇ ಪ್ರದರ್ಶಿಸಿದನು. (ಯೋಹಾನ 14:9) ರೋಗಪೀಡಿತರನ್ನು ಯೇಸು ಕಂಡಾಗ ಅವರಿಗಾಗಿ ‘ಕನಿಕರಪಟ್ಟನು.’ (ಮತ್ತಾಯ 20:29-34; ಮಾರ್ಕ 1:40, 41) ಹಿಂದಿನ ಲೇಖನದಲ್ಲಿ ನೋಡಿದಂತೆ, ಅವನ ಮಿತ್ರನಾದ ಲಾಜರನ ಸಾವಿನಿಂದಾಗಿ ಮತ್ತು ದುಃಖವನ್ನು ತಾಳಲಾರದೆ ಅಳುತ್ತಿದ್ದ ಲಾಜರನ ಕುಟುಂಬದವರನ್ನೂ ಸ್ನೇಹಿತರನ್ನೂ ಕಂಡಾಗ ಯೇಸು ಬಹಳವಾಗಿ ನೊಂದು “ಕಣ್ಣೀರು ಬಿಟ್ಟನು.” (ಯೋಹಾನ 11:32-35) ಮರಣವನ್ನು ಬೈಬಲ್ ಶತ್ರುವಾಗಿ ವರ್ಣಿಸುತ್ತದೆ ಮತ್ತು ಬೇಗನೆ ರೋಗ, ಮರಣ ಇಲ್ಲದೆ ಹೋಗುವುದೆಂದೂ ವಾಗ್ದಾನಿಸುತ್ತದೆ.—1 ಕೊರಿಂಥ 15:26; ಪ್ರಕಟನೆ 21:3, 4.
ಪ್ರಿಯರೊಬ್ಬರ ಮಾರಕ ರೋಗದ ಕುರಿತು ತಿಳಿದಾಗ ಅದಕ್ಕಾಗಿ ಯಾರನ್ನಾದರೂ ದೂರಬೇಕೆಂದು ನಿಮಗನಿಸೀತು, ಇದು ಸಹಜ. ಮರಣೋನ್ಮುಖ ರೋಗಿಗಳ ಆರೈಕೆ ವಿಷಯದಲ್ಲಿ ಒಂದು ಪ್ರಬಂಧವನ್ನು ಬರೆದ ಡಾ. ಮಾರ್ಟ ಆರ್ಟೀಸ್ ಈ ಸಲಹೆ ನೀಡಿದರು: “ರೋಗಿಯ ಕಾಯಿಲೆಗಾಗಿ ಬೇರೆಯವರನ್ನು ಅಂದರೆ ವೈದ್ಯರನ್ನಾಗಲಿ, ನರ್ಸ್ಗಳನ್ನಾಗಲಿ ಅಥವಾ ನಿಮ್ಮನ್ನಾಗಲಿ ದೂರಬೇಡಿ. ಇದು ಸಂಬಂಧಗಳನ್ನು ಕೆಡಿಸುತ್ತದೆ ಮಾತ್ರವಲ್ಲ ರೋಗಿಗೆ ಕೊಡಬೇಕಾದ ಅತ್ಯಾವಶ್ಯಕ ಗಮನವನ್ನು ಅಲಕ್ಷ್ಯಿಸುವಂತೆ ಮಾಡುತ್ತದೆ.” ತಮ್ಮ ಕಾಯಿಲೆಯನ್ನು ಮತ್ತು ತಾವು ಸಾಯುತ್ತೇವೆಂಬ ನಿಜತ್ವವನ್ನು ನಿಮ್ಮ ಪ್ರಿಯರು ನಿಭಾಯಿಸುವಂತೆ ನೀವು ಹೇಗೆ ನೆರವು ನೀಡಬಲ್ಲಿರಿ?
ರೋಗವನ್ನಲ್ಲ, ವ್ಯಕ್ತಿಯ ಕುರಿತು ಆಲೋಚಿಸಿರಿ
ರೋಗದ ಪರಿಣಾಮವಾಗಿ ವ್ಯಕ್ತಿಯು ದುರ್ಬಲನಾಗಬಹುದು ಇಲ್ಲವೆ ರೂಪಗೆಡಬಹುದು. ಇಂಥ ಸಂದರ್ಭಗಳಲ್ಲಿ ವ್ಯಕ್ತಿಯ ಕುರಿತು ಆಲೋಚಿಸುವುದೇ ಪ್ರಥಮ ಹೆಜ್ಜೆ. ಇದನ್ನು ಹೇಗೆ ಮಾಡಬಹುದು? ಈ ಕುರಿತು ಸಾರಾ ಎಂಬ ನರ್ಸ್ ಹೇಳುವುದು “ವ್ಯಕ್ತಿಯು ಚೆನ್ನಾಗಿದ್ದಾಗ ತೆಗೆದ ಫೋಟೋಗಳನ್ನು ನಾನು ನೋಡುತ್ತಿರುತ್ತೇನೆ. ಅವನು ತನ್ನ ಹಿಂದಿನ ಸ್ಮರಣೆಗಳನ್ನು ಹೇಳುತ್ತಿರುವಾಗ ಕಿವಿಗೊಟ್ಟು ಕೇಳುತ್ತೇನೆ. ಇದು, ರೋಗಿಯ ಇಂದಿನ ಸ್ಥಿತಿಯ ಕುರಿತು ಹೆಚ್ಚು ಆಲೋಚಿಸದೆ ಅವನ ಕಳೆದ ಜೀವನದ ಕುರಿತು ಆಲೋಚಿಸುವಂತೆ ಸಹಾಯಮಾಡುತ್ತದೆ.”
ಆ್ಯನ್ಕ್ಯಾತ್ರಿನ್ ಎಂಬ ಇನ್ನೊಬ್ಬಳು ನರ್ಸ್ ಸಹ ತಾನು ರೋಗಿಯ ಹೊರತೋರಿಕೆಯನ್ನು ನೋಡದೆ ಹೇಗೆ ಆರೈಕೆಮಾಡುತ್ತೇನೆಂದು ವಿವರಿಸುತ್ತಾಳೆ: “ನಾನು ವ್ಯಕ್ತಿಯ ಕಣ್ಣುಗಳನ್ನು ನೋಡುತ್ತಾ ಅವನು ರೋಗದಿಂದ ಸುಧಾರಿಸಲು ಏನು ಮಾಡಬಲ್ಲೆ ಎಂಬುದಕ್ಕೆ ಹೆಚ್ಚು ಗಮನ ಕೊಡುತ್ತೇನೆ.” ಸಾಯುವ ಸ್ಥಿತಿಯಲ್ಲಿರುವವರನ್ನು ಹೇಗೆ ಸಂತೈಸಬೇಕೆಂಬುದನ್ನು ತಿಳಿಸುವ ಒಂದು ಇಂಗ್ಲಿಷ್ ಪುಸ್ತಕವು ಹೇಳುವುದು: “ನಮಗೆ ಪ್ರಿಯರಾದವರು ಕಾಯಿಲೆ ಅಥವಾ ಅಪಘಾತದಿಂದಾಗಿ ರೂಪಗೆಟ್ಟಿರುವುದನ್ನು ನೋಡುವುದು ತುಂಬ ಸಂಕಟಕರ ನಿಜ. ಅಂಥ ಸಂದರ್ಭಗಳಲ್ಲಿ ವ್ಯಕ್ತಿಯ ಹೊರತೋರಿಕೆಯನ್ನು ನೋಡದೆ ಅವನ ಹೃದಯದ ಭಾವನೆಗಳನ್ನು ನೋಡುವುದೇ ಒಳ್ಳೇದು.”
ಹೀಗೆ ಮಾಡಲು ಆತ್ಮಸಂಯಮ ಮತ್ತು ದೃಢಸಂಕಲ್ಪ ಬೇಕು. ಮರಣೋನ್ಮುಖ ರೋಗಿಗಳನ್ನು ಭೇಟಿಮಾಡುವ ಒಬ್ಬ ಕ್ರೈಸ್ತ ಮೇಲ್ವಿಚಾರಕರಾದ ಜಾರ್ಜ್ ಹೇಳುವುದು, “ನಮ್ಮ ಸ್ನೇಹಿತರ ಮೇಲಿರುವ ನಮ್ಮ ಪ್ರೀತಿಯು ಅವರ ರೋಗಕ್ಕಿಂತ ಹೆಚ್ಚು ಬಲವಾಗಿರಬೇಕು. ಹೀಗಿದ್ದಲ್ಲಿ ಮಾತ್ರ ನಾವು ಅವರಿಗೆ ನೆರವಾಗುವೆವು.” ರೋಗವನ್ನಲ್ಲ, ವ್ಯಕ್ತಿ ಕುರಿತು ಆಲೋಚಿಸುವುದೇ ನಿಮಗೂ ನಿಮ್ಮ ಪ್ರಿಯರಿಗೂ ಪ್ರಯೋಜನಕರ. ಕ್ಯಾನ್ಸರ್ಪೀಡಿತ ಮಕ್ಕಳ ಆರೈಕೆ ಮಾಡಿದ ಈವೋನ್ ಎಂಬಾಕೆ ಹೇಳುವುದು, “ರೋಗಿಗಳನ್ನು ಮಾನಸಿಕವಾಗಿ ಹಾಯಾಗಿರಿಸುವ ಮೂಲಕ ಅವರ ಶಾರೀರಿಕ ದೌರ್ಬಲ್ಯವನ್ನು ನಿಭಾಯಿಸಲು ನಿಮಗೆ ಸಹಾಯ ಸಿಕ್ಕುವುದು.”
ಅವರಿಗೆ ಕಿವಿಗೊಡಲು ಸಿದ್ಧರಿರಿ
ಸಾವಿಗೆ ಹತ್ತಿರವಾಗಿರುವ ಒಬ್ಬ ವ್ಯಕ್ತಿ ತಮಗೆ ಹೆಚ್ಚು ಪ್ರಿಯನಾಗಿದ್ದರೂ ಅವನೊಂದಿಗೆ ಮಾತಾಡಲು ಅನೇಕರು ಹಿಂಜರಿಯುತ್ತಾರೆ. ಏಕೆ? ಏಕೆಂದರೆ ಅವನಿಗೆ ಏನು ಹೇಳಬೇಕೆಂದೇ ಅವರಿಗೆ ತಿಳಿಯುವುದಿಲ್ಲ. ಮಾರಕ ರೋಗದಿಂದ ಬಳಲುತ್ತಿದ್ದ ತನ್ನ ಸ್ನೇಹಿತೆಯನ್ನು ನೋಡಿಕೊಂಡ ಆ್ಯನ್ಕ್ಯಾತ್ರಿನ್, ಕೆಲವೊಮ್ಮೆ ಏನೂ ಹೇಳದೆ ಮೌನವಾಗಿರುವುದು ಕೂಡ ಒಳ್ಳೇದು ಎನ್ನುತ್ತಾರೆ. ಅವರು ಹೇಳುವುದು: “ಕೇವಲ ನಮ್ಮ ನುಡಿಯಿಂದ ಮಾತ್ರವಲ್ಲ ನಮ್ಮ ನಡೆಯಿಂದಲೂ ನಾವು ರೋಗಿಗಳನ್ನು ಸಂತೈಸಬಹುದು. ಅವರ ಪಕ್ಕ ಕುಳಿತುಕೊಳ್ಳುವುದು, ಅವರ ಕೈ ಹಿಡಿಯುವುದು, ಅವರು ತಮ್ಮ ಭಾವನೆಗಳನ್ನು ತೋಡಿಕೊಳ್ಳುವಾಗ ನಮ್ಮ ಕಣ್ಣೀರನ್ನು ತಡೆಯದಿರುವುದು ಇವೆಲ್ಲವೂ ನಮಗೆ ಅವರ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ.”
ನಿಮ್ಮ ಪ್ರಿಯ ವ್ಯಕ್ತಿಗೆ ತನ್ನ ಮನಸ್ಸಿನಲ್ಲಿರುವ ಭಾವನೆಗಳನ್ನೆಲ್ಲಾ ಬಿಚ್ಚಿ ಹೇಳಬೇಕು ಎಂದನಿಸಬಹುದು. ಹಾಗಿದ್ದರೂ ಅನೇಕ ವೇಳೆ ಅವನು ನಿಮಗೆ ಮುಜುಗರವಾಗಬಹುದೇನೋ ಎಂದೆಣಿಸಿ ತನ್ನ ಸ್ವಂತ ವಿಚಾರಗಳನ್ನು ಹೇಳದಿರುತ್ತಾನೆ. ಕುಟುಂಬದವರು ಮತ್ತು ಹಿತಚಿಂತಕ ಸ್ನೇಹಿತರು ಸಹ ರೋಗಿಗೆ ಹೇಳಲೇಬೇಕಾದ ವಿಷಯಗಳನ್ನು, ಅಷ್ಟೇಕೆ ಅವನ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನೂ ಹೇಳದಿರಬಹುದು. ಈ ರೀತಿ ವಿಷಯಗಳನ್ನು ಮುಚ್ಚಿಡುವುದರಿಂದ ಏನಾಗುತ್ತದೆ? ಗಂಭೀರ ಕಾಯಿಲೆಗೆ ತುತ್ತಾಗಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರೊಬ್ಬರು, ಸತ್ಯಾಂಶವನ್ನು ಮುಚ್ಚಿಡುವುದರ ಹಾನಿಯನ್ನು ತಿಳಿಸುತ್ತಾರೆ: “ಹೀಗೆ ಮಾಡುವುದಾದರೆ ರೋಗಿಯ ನಿಜ ಸ್ಥಿತಿಯನ್ನು ನೀವು ಅರ್ಥಮಾಡಿಕೊಳ್ಳಲಾರಿರಿ
ಮತ್ತು ಅವರಿಗೆ ಯಾವ ಸಹಾಯವನ್ನೂ ನೀಡಲಾರಿರಿ.” ಆದುದರಿಂದ ಕಾಯಿಲೆ ಬಿದ್ದಿರುವ ವ್ಯಕ್ತಿಯು ತನ್ನ ಪರಿಸ್ಥಿತಿಯ ಕುರಿತಾಗಲಿ ತನ್ನ ಸಾವಿನ ಕುರಿತಾಗಲಿ ಏನನ್ನಾದರೂ ಹೇಳಲು ಇಷ್ಟಪಡುವುದಾದರೆ ಮನಬಿಚ್ಚಿ ಮಾತಾಡಲು ಬಿಡಿರಿ.ದೇವರ ಸೇವಕರು ಮರಣಕ್ಕೆ ಎದುರಾದಾಗ ತಮಗುಂಟಾದ ಕಳವಳವನ್ನು ಯೆಹೋವ ದೇವರಿಗೆ ತಿಳಿಸಲು ಹಿಂಜರಿಯಲಿಲ್ಲ. ಉದಾಹರಣೆಗೆ, 39 ವರ್ಷ ಪ್ರಾಯದ ರಾಜ ಹಿಜ್ಕೀಯನಿಗೆ ತನ್ನ ಅವಸಾನ ಹತ್ತಿರವೆಂದು ತಿಳಿದಾಗ ಅವನು ಹತಾಶೆಯನ್ನು ವ್ಯಕ್ತಪಡಿಸಿದನು. (ಯೆಶಾಯ 38:9-12, 18-20) ತದ್ರೀತಿ, ತಮ್ಮ ಜೀವನ ಕೊನೆಗೊಳ್ಳಲಿದೆ ಎಂದು ರೋಗಿಗಳು ತಿಳಿಯುವಾಗ ತಮ್ಮ ದುಃಖವನ್ನು ವ್ಯಕ್ತಪಡಿಸುವಂತೆ ಬಿಡಬೇಕು. ಪ್ರಾಯಶಃ ಅವರಿಗೆ ಮಕ್ಕಳು ಮೊಮ್ಮಕ್ಕಳನ್ನು ನೋಡುವ, ಬೇರೆ ಸ್ಥಳಗಳನ್ನು ನೋಡುವ ಅಥವಾ ದೇವರನ್ನು ಪೂರ್ಣವಾಗಿ ಸೇವಿಸುವ ಗುರಿಗಳಿದ್ದಿರಬಹುದು. ಮತ್ತು ಈಗ ಆ ಕನಸುಗಳೆಲ್ಲಾ ನುಚ್ಚುನೂರಾಗಿ ಅವರು ಆಶಾಭಂಗಪಡಬಹುದು. ಕುಟುಂಬದವರು ಮತ್ತು ಸ್ನೇಹಿತರು ಮುಜುಗರದಿಂದಾಗಿ ತಮ್ಮನ್ನು ನೋಡಲು ಬಾರದಿರಬಹುದೆಂದೂ ಅವರು ಹೆದರಬಹುದು. (ಯೋಬ 19:16-18) ಬೇನೆಯನ್ನು ಸಹಿಸಿಕೊಳ್ಳಲಾಗುತ್ತದೋ ಇಲ್ಲವೋ ಎಂಬ ಭಯದಿಂದ, ದೈಹಿಕ ಪ್ರಕ್ರಿಯೆಗಳ ಮೇಲೆ ನಿಯಂತ್ರಣ ಇಲ್ಲದಿರುವ ಅಥವಾ ಒಂಟಿಗರಾಗಿ ಸಾಯುವ ಭಯದಿಂದ ಸಹ ಅವರು ವ್ಯಥೆಪಡಬಹುದು.
ಆ್ಯನ್-ಕ್ಯಾತ್ರಿನ್ ಹೇಳುವುದು: “ನಿಮ್ಮ ಸ್ನೇಹಿತರು ಮನಬಿಚ್ಚಿ ಮಾತಾಡುವಂತೆ ಬಿಡುವುದು ಪ್ರಾಮುಖ್ಯ. ಅವರು ಮಾತಾಡುವಾಗ ತಡೆಯಬೇಡಿ, ಮನನೋಯಿಸುವಂತೆ ಮಾತಾಡಬೇಡಿ, ಅಥವಾ ಅವನು ತನ್ನ ಭಯವನ್ನು ಹೇಳಿಕೊಳ್ಳುವಾಗ ಕಿವಿಗೊಡಿರಿ. ಏಕೆಂದರೆ ಆ ಮೂಲಕ ಅವನ ನಿಜವಾದ ಭಾವನೆಗಳನ್ನು ಮತ್ತು ಅವನ ಆಸೆ, ಅಪೇಕ್ಷೆ, ಅಂಜಿಕೆಗಳನ್ನು ನೀವು ಅರಿತುಕೊಳ್ಳುವಿರಿ.”
ಅವರ ನಿಜ ಅಗತ್ಯಗಳನ್ನು ಮರೆಯದಿರಿ
ನಿಮ್ಮ ಪ್ರಿಯರು ಪ್ರಾಯಶಃ ನೋವುಭರಿತ ಚಿಕಿತ್ಸೆಗಳಿಂದ ಮತ್ತು ಅದರ ವಿಷಮ ಪರಿಣಾಮಗಳಿಂದ ಅನುಭವಿಸುವ ಪಾಡು ನಿಮ್ಮನ್ನು ಎಷ್ಟು ಕಳವಳಕ್ಕೀಡುಮಾಡಬಹುದೆಂದರೆ ನೀವು ಅವರ ಒಂದು ನಿಜ ಅಗತ್ಯವನ್ನೇ ಮರೆತುಬಿಡಬಹುದು. ಈ ಅಗತ್ಯವು ಯಾವುದೆಂದರೆ ಅವರ ಸ್ವಂತ ಆಯ್ಕೆಗಳನ್ನು ಮಾಡಲು ಅವರಿಗೆ ಅವಕಾಶಕೊಡುವುದೇ.
ಕೆಲವು ಸಂಸ್ಕೃತಿಗಳಲ್ಲಿ, ರೋಗಿಯ ಕಡೆಗಿರುವ ಹಿತಚಿಂತನೆಯಿಂದಾಗಿ ಕುಟುಂಬವು ಅವನ ಗಂಭೀರ ಸ್ಥಿತಿಯ ಕುರಿತ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಬಹುದು. ಎಷ್ಟೆಂದರೆ ವೈದ್ಯಕೀಯ ಚಿಕಿತ್ಸೆಯ ಕುರಿತು ಅವನ ಅಭಿಪ್ರಾಯವನ್ನು ಕೂಡ ಅವರು ಕೇಳುವುದಿಲ್ಲ. ಇತರ ಸಂಸ್ಕೃತಿಗಳಲ್ಲಿ ಬೇರೆ ರೀತಿಯ ಸಮಸ್ಯೆಗಳಿರಬಹುದು. ಉದಾಹರಣೆಗೆ, ಜೆರಿ ಎಂಬ ಒಬ್ಬ ನರ್ಸ್ ಹೇಳುವುದು, “ರೋಗಿಯನ್ನು ನೋಡಲು ಬರುವವರು ಕೆಲವೊಮ್ಮೆ ರೋಗಿಯ ಹಾಸಿಗೆಯ ಬಳಿ ನಿಂತು ಅವನ ಪರಿವೆಯೇ ಇಲ್ಲದಂತೆ ಏನೆಲ್ಲಾ ಮಾತಾಡಿಬಿಡುತ್ತಾರೆ.” ಇಂಥ ನಡವಳಿಕೆಯು ರೋಗಿಯ ಸ್ವಗೌರವವನ್ನು ಕಸಿದುಕೊಳ್ಳುತ್ತದೆ.
ರೋಗಿಯ ಇನ್ನೊಂದು ಅಗತ್ಯವೇನೆಂದರೆ ಗುಣಹೊಂದುವ ನಿರೀಕ್ಷೆ. ಉತ್ತಮ ಗುಣಮಟ್ಟದ ಔಷಧ ದೊರೆಯುವ ದೇಶಗಳಲ್ಲಿ ವಾಸಿಕಾರಕ ಚಿಕಿತ್ಸೆಯನ್ನು ಕಂಡುಹಿಡಿಯಬೇಕೆಂದು ರೋಗಿ ನಿರೀಕ್ಷಿಸುತ್ತಾನೆ. ಮೂರು ಸಲ ಕ್ಯಾನ್ಸರ್ ರೋಗವು ಮರುಕಳಿಸಿದ ತನ್ನ ತಾಯಿಯ ಆರೈಕೆ ಮಾಡಿದ ಮಿಷೆಲ್ ಎಂಬವಳು ಹೇಳುವುದು: “ಅಮ್ಮ ಬೇರೊಂದು ಚಿಕಿತ್ಸೆ ಬಯಸಿದ್ದಲ್ಲಿ ಅಥವಾ ಬೇರೊಬ್ಬ ಸ್ಪೆಷಲಿಸ್ಟನ್ನು ನೋಡಲಿಚ್ಛಿಸಿದ್ದಲ್ಲಿ ಅದಕ್ಕೆ ನಾನು ಕೂಡಲೇ ಒಪ್ಪುತ್ತೇನೆ. ಗುಣವಾಗದ ರೋಗವೆಂದು ನನಗೆ ಗೊತ್ತಿದ್ದರೂ ನನ್ನ ಮಾತು ಆಕೆಯನ್ನು ಉತ್ತೇಜಿಸುವಂತಿರಬೇಕಾಗಿದೆ.”
ವಾಸಿಯಾಗುವ ಸಾಧ್ಯತೆಯೇ ಇಲ್ಲದಿದ್ದರೆ ಆಗೇನು? ಸಾವಿನಂಚಿನಲ್ಲಿರುವ ರೋಗಿಯೊಂದಿಗೆ ಮರಣದ ಕುರಿತು ಮುಚ್ಚುಮರೆಯಿಲ್ಲದೆ ಮಾತಾಡುವ ಅಗತ್ಯವಿದೆ ಎಂಬುದನ್ನು ಮರೆಯದಿರಿ. ಈ ಮುಂಚೆ ತಿಳಿಸಲಾದ ಕ್ರೈಸ್ತ ಮೇಲ್ವಿಚಾರಕರಾದ ಜಾರ್ಜ್ ಹೇಳುವುದು: “ಸನ್ನಿಹಿತ ಮರಣದ ಕುರಿತು ರೋಗಿಗೆ ತಿಳಿಸುವುದು ಅತಿ ಪ್ರಾಮುಖ್ಯ. ಇದರಿಂದ ಅವನು ಆವಶ್ಯಕ ಏರ್ಪಾಡುಗಳನ್ನು ಮಾಡುತ್ತಾನೆ ಮಾತ್ರವಲ್ಲ ತನ್ನ ಮರಣಕ್ಕೂ ಸಿದ್ಧನಾಗುತ್ತಾನೆ.” ಅಂಥ ಸಿದ್ಧತೆಯು ಒಬ್ಬ ರೋಗಿಗೆ ತಾನು ಮಾಡಬೇಕಾದದ್ದನ್ನು ಮಾಡಿಮುಗಿಸುವಂಥ ತೃಪ್ತಿಯನ್ನು ಕೊಡುತ್ತದೆ. ಮತ್ತು ಇತರರಿಗೆ ಹೊರೆಯಾಗಿರಬಹುದೆಂಬ ಚಿಂತೆಯಿಂದಲೂ ಮುಕ್ತಗೊಳಿಸುತ್ತದೆ.
ಇಂಥ ವಿಷಯಗಳನ್ನು ರೋಗಿಯೊಂದಿಗೆ ಚರ್ಚಿಸುವುದು ಕಷ್ಟಕರ ಎಂಬುದು ನಿಜ. ಆದರೆ ಅಂಥ ಮನಬಿಚ್ಚಿದ ಮಾತು ನಿಮ್ಮ ಆಳವಾದ ಭಾವನೆಗಳನ್ನು ಯಥಾರ್ಥವಾಗಿ ವ್ಯಕ್ತಪಡಿಸುವ ಸುಸಂದರ್ಭವನ್ನು ಕೊಡುತ್ತದೆ. ಸಾಯುತ್ತಿರುವ ವ್ಯಕ್ತಿಯು ತನ್ನ ಹಿಂದಣ ಮನಸ್ತಾಪಗಳನ್ನು ಸರಿಪಡಿಸಲು, ವಿಷಾದಗಳನ್ನು ವ್ಯಕ್ತಪಡಿಸಲು, ಅಥವಾ ಕ್ಷಮೆಯನ್ನು ಕೋರಲು ಬಯಸಬಹುದು. ಈ ರೀತಿಯ ಮಾತುಕತೆಗಳು ನಿಮ್ಮ ಮತ್ತು ಆ ವ್ಯಕ್ತಿಯ ನಡುವಣ ಸಂಬಂಧವನ್ನು ಇನ್ನೂ ಆಪ್ತಗೊಳಿಸಬಹುದು.
ಸಾವಿಗೆ ಹತ್ತಿರವಿರುವಾಗ ಸಾಂತ್ವನ
ಸಾವಿಗೆ ಹತ್ತಿರವಾಗಿರುವ ವ್ಯಕ್ತಿಗೆ ನೀವು ಹೇಗೆ ಸಾಂತ್ವನ ನೀಡಬಲ್ಲಿರಿ? ಈ ಮುಂಚೆ ತಿಳಿಸಿದ ಡಾ. ಆರ್ಟೀಸ್ ಹೇಳುವುದು: “ರೋಗಿಯ ಕೊನೆಯ ಆಸೆಗಳೇನೆಂದು ಕೇಳಿರಿ. ಅವನಿಗೆ ಕಿವಿಗೊಡಿರಿ. ಸಾಧ್ಯವಾದರೆ ರೋಗಿಯ ಆಸೆಗಳನ್ನು ಪೂರೈಸಲು ಪ್ರಯತ್ನಿಸಿ. ಸಾಧ್ಯವಿಲ್ಲದಿದ್ದಲ್ಲಿ ಯಥಾರ್ಥವಾಗಿ ತಿಳಿಸಿರಿ.”
ತನ್ನ ಪ್ರಿಯ ಜನರು ಹಿಂದೆಂದಿಗಿಂತಲೂ ಹೆಚ್ಚಾಗಿ ತನ್ನೊಂದಿಗಿರುವಂತೆ ಸಾಯುವಂಥ ವ್ಯಕ್ತಿಯು ಈಗ ಬಯಸಬಹುದು. ಜಾರ್ಜ್ ಹೇಳುವುದು, “ರೋಗಿಗೆ ಹೆಚ್ಚು ಮಾತಾಡಲು ಆಗದಿರುವುದಾದರೂ ಅವನು ಪ್ರೀತಿಸುವ ವ್ಯಕ್ತಿಗಳನ್ನು ಸಂಪರ್ಕಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಿ.” ಕೇವಲ ಫೋನ್ ಮೂಲಕವಾದರೂ ಸರಿಯೇ ಇಂಥ ಸಂಪರ್ಕವು ಪರಸ್ಪರ ಪ್ರೋತ್ಸಾಹಕ್ಕೂ ಒಟ್ಟಾಗಿ ಪ್ರಾರ್ಥನೆ ಮಾಡುವುದಕ್ಕೂ ಸಂದರ್ಭವನ್ನು ಕೊಡುತ್ತದೆ. ಕ್ರಿಸ್ಟೀನ ಎಂಬ ಕೆನಡದ ಸ್ತ್ರೀಯು ತನ್ನ ಅಚ್ಚುಮೆಚ್ಚಿನ ಮೂವರನ್ನು ಒಬ್ಬೊಬ್ಬರನ್ನಾಗಿ ಮರಣದಲ್ಲಿ ಕಳಕೊಂಡಳು. ಆಕೆ ನೆನಪಿಸಿಕೊಳ್ಳುವುದು, “ಅವರು ಮರಣಕ್ಕೆ ಹೆಚ್ಚೆಚ್ಚು ಹತ್ತಿರವಾದಂತೆ ತಮ್ಮ ಕ್ರೈಸ್ತ ಒಡನಾಡಿಗಳ ಪ್ರಾರ್ಥನೆಯ ಮೇಲೆ ಹೆಚ್ಚೆಚ್ಚು ಆತುಕೊಂಡರು.”
ಸಾವಿನಂಚಿನಲ್ಲಿರುವ ಪ್ರಿಯ ವ್ಯಕ್ತಿಯ ಮುಂದೆ ಅಳಲು ನೀವು ಅಂಜಬಾರದು. ನೀವು ಅತ್ತರೆ, ನಿಮ್ಮ ಆ ನೆಚ್ಚಿನ ವ್ಯಕ್ತಿ ನಿಮ್ಮನ್ನು ಸಂತೈಸುವಂತೆ ಅವರಿಗೆ ಅವಕಾಶಕೊಡುತ್ತೀರಿ. ಅಂಥವರ ಅಗತ್ಯಗಳ ಕುರಿತು ತಿಳಿಸುವ ಒಂದು ಇಂಗ್ಲಿಷ್ ಪುಸ್ತಕವು ಹೇಳುವುದು: “ಸಾಯಲಿರುವ ವ್ಯಕ್ತಿಯಿಂದಲೇ ನಾವು ಸಾಂತ್ವನವನ್ನು ಪಡೆದುಕೊಳ್ಳುವುದು ನಿಜವಾಗಿಯೂ ಮನಕರಗಿಸುವ ಅನುಭವ. ಇತರರಿಗೆ ಸಮಾಧಾನ ಹೇಳುವುದರಿಂದ ಅವನಿಗೂ ಪ್ರಯೋಜನವಾಗಬಲ್ಲದು.” ಸಮಾಧಾನ ಕೊಡುವ ಮೂಲಕ ಆ ವ್ಯಕ್ತಿಯು, ತನ್ನನ್ನು ಆರೈಕೆಮಾಡುವವರಿಗೆ ಒಬ್ಬ ಕಾಳಜಿಯುಳ್ಳ ಸ್ನೇಹಿತನಾಗಿ, ತಂದೆಯಾಗಿ, ಅಥವಾ ತಾಯಿಯಾಗಿ ಪರಿಣಮಿಸಬಹುದು.
ಕೆಲವೊಂದು ಸನ್ನಿವೇಶಗಳಿಂದಾಗಿ ನಿಮ್ಮ ನೆಚ್ಚಿನವರ ಕೊನೆಗಳಿಗೆಯಲ್ಲಿ ಅವರೊಂದಿಗಿರಲು ನಿಮಗೆ ಆಗಲಿಕ್ಕಿಲ್ಲ ನಿಜ. ಆದರೆ, ನೀವು ಆಸ್ಪತ್ರೆಯಲ್ಲಾಗಲಿ ಮನೆಯಲ್ಲಾಗಲಿ ನಿಮ್ಮ ಸ್ನೇಹಿತನ ಕೊನೆಗಳಿಗೆಯಲ್ಲಿ ಅವನ ಸಂಗಡ ಇರುವುದಾದರೆ ಕೊನೆಯುಸಿರಿನ ತನಕ ಅವನ ಕೈ ಹಿಡಿದುಕೊಂಡಿರಲು ಪ್ರಯತ್ನಿಸಿ. ಈ ಕೊನೆಕ್ಷಣಗಳು ಯೋಬ 14:14, 15; ಅ. ಕೃತ್ಯಗಳು 24:15.
ನೀವು ಈ ವರೆಗೆ ತಿಳಿಸಲು ಆಗಿರದ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಕೊಡುವವು. ಅವನು ಯಾವ ಪ್ರತಿಕ್ರಿಯೆ ತೋರಿಸದಿದ್ದರೂ ಅವನಿಗೆ ನಿಮ್ಮ ಪ್ರೀತಿಯನ್ನೂ ಪುನರುತ್ಥಾನದಲ್ಲಿ ಅವನನ್ನು ಪುನಃ ನೋಡುವ ನಿರೀಕ್ಷೆಯನ್ನೂ ತಿಳಿಸಿ ವಿದಾಯ ಹೇಳಲು ಮರೆಯದಿರಿ.—ಆ ಕೊನೆ ಕ್ಷಣಗಳನ್ನು ಉತ್ತಮವಾಗಿ ಉಪಯೋಗಿಸುವಲ್ಲಿ ನೀವು ಅನಂತರ ಪಶ್ಚಾತ್ತಾಪಪಡಲಾರಿರಿ. ಆ ತೀವ್ರ ಭಾವನಾತ್ಮಕ ಕ್ಷಣಗಳು ನಿಮಗೆ ಸ್ವತಃ ಆದರಣೆಯಾಗಿ ಪರಿಣಮಿಸಸಾಧ್ಯವಿದೆ. ಏಕೆಂದರೆ “ಆಪತ್ತಿನಲ್ಲಿ” ನಿಜ ಮಿತ್ರರೆಂದು ನೀವು ತೋರಿಸಿಕೊಂಡಿರುವಿರಿ.—ಜ್ಞಾನೋಕ್ತಿ 17:17. (w08 5/1)
[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರಣೆ]
ರೋಗವನ್ನಲ್ಲ, ವ್ಯಕ್ತಿಯ ಕುರಿತು ಆಲೋಚಿಸುವುದು ನಿಮಗೂ ನಿಮ್ಮ ಪ್ರಿಯರಿಗೂ ಪ್ರಯೋಜನಕರ
[ಪುಟ 29ರಲ್ಲಿರುವ ಚೌಕ/ಚಿತ್ರ]
ರೋಗಿಯ ಸ್ವಗೌರವಕ್ಕೆ ಮಾನ್ಯತೆ
ಮರಣೋನ್ಮುಖ ರೋಗಿಗೆ ಸಮಾಧಾನ ಮತ್ತು ಸ್ವಗೌರವದಿಂದ ಸಾಯುವ ಹಕ್ಕಿದೆ ಎಂಬುದನ್ನು ಅಂಗೀಕರಿಸಲು ಅನೇಕ ದೇಶಗಳು ಏರ್ಪಾಡುಗಳನ್ನು ಮಾಡುತ್ತಿವೆ. ರೋಗಿಯ ಇಚ್ಛೆಗಳನ್ನು ಮುಂದಾಗಿಯೇ ಬರೆದಿಡುವುದಾದರೆ ಈ ಹಕ್ಕುಗಳನ್ನು ಗೌರವಿಸಲು ಮತ್ತು ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಅವರು ಮರಣಹೊಂದುವಂತೆ ಬಿಡಲು ಸಹಾಯಕರ.
ಮುಂಚೆಯೇ ಬರೆದಿಟ್ಟ ಮಾಹಿತಿ ಈ ಕೆಳಗಿರುವುದನ್ನು ಮಾಡಲು ಸಹಾಯಕರ:
• ವೈದ್ಯರೊಂದಿಗೆ ಮತ್ತು ಸಂಬಂಧಿಕರೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು ಸಾಧ್ಯಗೊಳಿಸುತ್ತದೆ
• ವೈದ್ಯಕೀಯ ನಿರ್ಣಯಗಳನ್ನು ಕುಟುಂಬವಲ್ಲ, ರೋಗಿಯೇ ಮಾಡುವಂತೆ ಸಹಾಯಮಾಡುತ್ತದೆ
• ಅನಾವಶ್ಯಕ, ಅಪ್ರಯೋಜಕ, ನೋವುಭರಿತ, ದುಬಾರಿ ಔಷಧೋಪಚಾರದ ಬಳಕೆಯನ್ನು ಕಡಿಮೆಗೊಳಿಸುತ್ತದೆ
ಅದರಲ್ಲಿ ಕಡಿಮೆಪಕ್ಷ ಕೆಳಗಿನ ವಿಷಯಗಳು ಒಳಗೂಡಿರಬೇಕು:
• ನಿಮ್ಮ ವೈದ್ಯಕೀಯ ನಿರ್ಣಯಗಳನ್ನು ಮಾಡಲು ನೀವು ನೇಮಿಸಿರುವ ವ್ಯಕ್ತಿಯ ಹೆಸರು
• ನಿಮ್ಮ ಪರಿಸ್ಥಿತಿಯು ವಿಷಮಗೊಂಡಲ್ಲಿ ನೀವು ಸ್ವೀಕರಿಸುವ ಇಲ್ಲವೆ ನಿರಾಕರಿಸುವ ಔಷಧೋಪಚಾರಗಳು
• ಸಾಧ್ಯವಿದ್ದಲ್ಲಿ, ನಿಮ್ಮ ಆಯ್ಕೆಗಳನ್ನು ತಿಳಿದಿರುವಂಥ ವೈದ್ಯರ ಹೆಸರು