ನರಕದ ಕುರಿತ ಸತ್ಯವು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
ನರಕದ ಕುರಿತ ಸತ್ಯವು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ?
ನರಕವು ಯಾತನೆಯ ಸ್ಥಳ ಎಂದು ಬೋಧಿಸುವವರು, ಯೆಹೋವನನ್ನೂ ಆತನ ಗುಣಗಳನ್ನೂ ತಪ್ಪಾಗಿ ನಿರೂಪಿಸುತ್ತಾರೆ. ದೇವರು ದುಷ್ಟರನ್ನು ನಾಶಮಾಡುವನು ಎಂದು ಬೈಬಲ್ ಹೇಳುತ್ತದೆ ನಿಜ. (2 ಥೆಸಲೊನೀಕ 1:6-9) ಆದರೆ ಧರ್ಮಕ್ರೋಧವು ದೇವರ ಪ್ರಧಾನ ಗುಣವಲ್ಲ.
ದೇವರು ಹಗೆಸಾಧಿಸುವುದಿಲ್ಲ ಅಥವಾ ಪ್ರತಿಕಾರ ಕೊಡುವುದಿಲ್ಲ. “ದುಷ್ಟನ ಸಾವಿನಲ್ಲಿ ನನಗೆ ಲೇಶವಾದರೂ ಸಂತೋಷವುಂಟೋ?” ಎಂದು ಆತನು ಕೇಳುತ್ತಾನೆ. (ಯೆಹೆಜ್ಕೇಲ 18:23) ದುಷ್ಟನ ಸಾವಿನಲ್ಲಿ ದೇವರು ಸಂತೋಷಪಡುವುದಿಲ್ಲ ಎಂದಾದರೆ ಅವರು ಸದಾಕಾಲಕ್ಕೂ ಯಾತನೆಪಡುವುದನ್ನು ನೋಡಿ ಆತನು ಹೇಗೆ ಸಂತೋಷಪಟ್ಟಾನು?
ದೇವರ ಪ್ರಧಾನ ಗುಣವು ಪ್ರೀತಿಯಾಗಿದೆ. (1 ಯೋಹಾನ 4:8) ಮಾತ್ರವಲ್ಲ, “ಯೆಹೋವನು ಸರ್ವೋಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ.” (ಕೀರ್ತನೆ 145:9) ಪ್ರತಿಯಾಗಿ, ಆತನಿಗಾಗಿ ನಾವು ಹೃತ್ಪೂರ್ವಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕೆಂಬುದೇ ಆತನ ಅಪೇಕ್ಷೆ.—ಮತ್ತಾಯ 22:35-38.
ನಿಮ್ಮನ್ನು ಪ್ರೇರಿಸುವಂಥದ್ದು ನರಕದ ಭಯವೋ ದೇವರ ಪ್ರೀತಿಯೋ?
ಆತ್ಮಗಳು ನರಕದಲ್ಲಿ ಯಾತನೆಪಡುತ್ತವೆ ಎಂಬ ಬೋಧನೆಯು ದೇವರ ಬಗ್ಗೆ ವಿಕೃತ ಭಯವನ್ನು ಮೂಡಿಸುತ್ತದೆ. ವ್ಯತಿರಿಕ್ತವಾಗಿ, ದೇವರ ಕುರಿತು ಸತ್ಯವನ್ನು ಕಲಿತು ಆತನನ್ನು ಪ್ರೀತಿಸುವ ವ್ಯಕ್ತಿಯಾದರೋ ಆತನಲ್ಲಿ ಹಿತಕರ ಭಯವನ್ನು ಬೆಳೆಸಿಕೊಳ್ಳುತ್ತಾನೆ. “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು; ಆತನ ಕಟ್ಟಳೆಗಳನ್ನು ನಡಿಸುವವರು ಪೂರ್ಣ ವಿವೇಕಿಗಳು. ಆತನ ಸ್ತುತಿಯು ನಿರಂತರವಾದದ್ದು” ಎಂದು ಕೀರ್ತನೆ 111:10 ವಿವರಿಸುತ್ತದೆ. ದೇವರ ಮೇಲಿರುವ ಈ ಭಯವು ವಿಕೃತ ಭೀತಿಯಲ್ಲ. ನಿರ್ಮಾಣಿಕನಿಗಾಗಿ ಭಯಭಕ್ತಿ ಮತ್ತು ಪರಮಪೂಜ್ಯ ಭಾವನೆಯಾಗಿದೆ. ಇದು ನಮ್ಮಲ್ಲಿ ಆತನನ್ನು ಅಸಂತೋಷಪಡಿಸದಂಥ ಆರೋಗ್ಯಕರ ಭಯವನ್ನು ಹುಟ್ಟಿಸುತ್ತದೆ.
32 ವರ್ಷದ ಕ್ಯಾತ್ಲಿನ್ ಮೊದಲು ಮಾದಕ ವ್ಯಸನಿಯಾಗಿದ್ದಳು. ನರಕದ ಕುರಿತ ಸತ್ಯವನ್ನು ಕಲಿತ ಮೇಲೆ ಅದು ಅವಳನ್ನು ಹೇಗೆ ಪ್ರಭಾವಿಸಿತು ಎಂದು ನೋಡಿ. ಅವಳ ಜೀವನವು ಸದಾ ವಿನೋದಗೋಷ್ಠಿ, ಹಿಂಸಾಚಾರ, ಆತ್ಮದ್ವೇಷ, ಅನೈತಿಕತೆಯಿಂದ ತುಂಬಿಹೋಗಿತ್ತು. ಅವಳು ಒಪ್ಪಿಕೊಂಡಿದ್ದು: “ನನ್ನ ಒಂದು ವರ್ಷದ ಮಗಳನ್ನು ನೋಡಿ ‘ನಾನು ಅವಳನ್ನು ಸರಿಯಾಗಿ ಪರಾಮರಿಸುತ್ತಿಲ್ಲ. ಇದಕ್ಕಾಗಿ ನನಗೆ ನರಕ ಯಾತನೆ ಸಿಗುವುದು ಖಂಡಿತ’ ಎಂದು ನೊಂದುಕೊಳ್ಳುತ್ತಿದ್ದೆ.” ಡ್ರಗ್ಸ್ ಸೇವನೆಯನ್ನು ಕ್ಯಾತ್ಲಿನ್ ನಿಲ್ಲಿಸಲು ಪ್ರಯತ್ನಿಸಿದಳು. ಆದರೆ ಆಗಲಿಲ್ಲ. “ನಾನು ಒಳ್ಳೆಯವಳಾಗಲು ಬಯಸಿದೆ. ಆದರೆ ನನ್ನ ಜೀವಿತದ ಮತ್ತು ಲೋಕದ ಎಲ್ಲಾ ವಿಷಯಗಳು ಎಷ್ಟು ದುಃಖಕರವಾಗಿತ್ತೆಂದರೆ ಒಳ್ಳೆಯವಳಾಗುವುದರಿಂದ ಏನೂ ಪ್ರಯೋಜನವಿಲ್ಲವೆಂದು ತೋರಿತು” ಎಂದು ಅವಳು ಹೇಳಿದಳು.
ಕೀರ್ತನೆ 37:10, 11, 29; ಲೂಕ 23:43) “ಪರದೈಸ್ನಲ್ಲಿ ಸದಾ ಜೀವಿಸುವ ಒಂದು ನಿಜ ನಿರೀಕ್ಷೆ ಈಗ ನನ್ನದಾಗಿದೆ!” ಎಂದು ಅವಳು ಉದ್ಗರಿಸಿದಳು.
ಆಮೇಲೆ ಕ್ಯಾತ್ಲಿನ್ಗೆ ಯೆಹೋವನ ಸಾಕ್ಷಿಗಳ ಭೇಟಿಯಾಯಿತು. “ಬೆಂಕಿಯ ನರಕ ಇಲ್ಲ ಎಂದು ನನಗೆ ತಿಳಿದುಬಂತು. ಅದಕ್ಕೆ ಬೈಬಲ್ ಸ್ಪಷ್ಟ ಪುರಾವೆಯನ್ನು ನೀಡಿತು. ನರಕದ ಯಾತನೆ ಅನುಭವಿಸಲಿಕ್ಕಿಲ್ಲ ಎಂಬ ತಿಳಿವಳಿಕೆ ನನಗೆ ಹೇಳಲಾಗದಷ್ಟು ಉಪಶಮನ ತಂದಿತು” ಎಂದಳು ಕ್ಯಾತ್ಲಿನ್. ಭೂಮಿಯ ಮೇಲೆ ದುಷ್ಟರು ಇಲ್ಲದೆಹೋಗಿ ನೀತಿವಂತ ಮಾನವರು ಸದಾ ಜೀವಿಸುವರೆಂಬ ದೇವರ ವಾಗ್ದಾನವನ್ನು ಸಹ ಅವಳು ಕಲಿತಳು. (ಅಗ್ನಿ ನರಕದ ಬೆದರಿಕೆಯು ಕಾಡದಿದ್ದಾಗಲೂ ಕ್ಯಾತ್ಲಿನ್ ಅಮಲೌಷಧ ಸೇವನೆಯನ್ನು ಬಿಟ್ಟುಬಿಡಲು ಶಕ್ತಳಾಗುವಳೋ? ಅವಳು ಹೇಳಿದ್ದು: “ಅಮಲೌಷಧ ತಕ್ಕೊಳ್ಳುವ ಬಲವಾದ ಚಪಲ ನನಗಿದ್ದಾಗ ನಾನು ಯೆಹೋವನ ಸಹಾಯಕ್ಕಾಗಿ ಬೇಡುತ್ತಾ ಪ್ರಾರ್ಥನೆಮಾಡುತ್ತಿದ್ದೆ. ಅಂಥಾ ದುಶ್ಚಟಗಳ ಕುರಿತು ಯೆಹೋವನ ನೋಟವನ್ನು ನಾನು ನೆನಸಿ ಆತನನ್ನು ನಿರಾಶೆಗೊಳಿಸಲು ಬಯಸಲಿಲ್ಲ. ಆತನು ನನ್ನ ಪ್ರಾರ್ಥನೆಗಳನ್ನು ಉತ್ತರಿಸಿದನು.” (2 ಕೊರಿಂಥ 7:1) ದೇವರನ್ನು ಅಸಂತೋಷಗೊಳಿಸುವ ಈ ಭಯದಿಂದಾಗಿ ಕ್ಯಾತ್ಲಿನ್ ತನ್ನ ದುಶ್ಚಟಗಳಿಂದ ಮುಕ್ತಳಾದಳು.
ಹೌದು, ನರಕ ಯಾತನೆಯ ಭಯಕ್ಕೆ ಬದಲಾಗಿ ದೇವರಲ್ಲಿ ಪ್ರೀತಿ ಮತ್ತು ಹಿತಕರ ಭಯವನ್ನು ಬೆಳೆಸಿಕೊಳ್ಳುವುದೇ ದೇವರ ಆಜ್ಞೆಗಳನ್ನು ಪಾಲಿಸುವಂತೆ ನಮ್ಮನ್ನು ಪ್ರೇರಿಸುವುದು. ಇದರಿಂದ ಬಾಳುವ ಸಂತೋಷ ನಮ್ಮದಾಗುವುದು. ಕೀರ್ತನೆಗಾರನು ಬರೆದದ್ದು: “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.”—ಕೀರ್ತನೆ 128:1. (w08 11/1)
[ಪುಟ 9ರಲ್ಲಿರುವ ಚೌಕ/ಚಿತ್ರಗಳು]
ಸತ್ತವರಲ್ಲಿ ಯಾರು ಜೀವಿತರಾಗಿ ಏಳುವರು?
ಕೆಲವು ಬೈಬಲ್ಗಳು, ಪುನರುತ್ಥಾನದ ಅಂದರೆ ಪುನಃ ಜೀವಿತರಾಗಿ ಏಳುವ ನಿರೀಕ್ಷೆಯೇ ಇಲ್ಲದ ಸಂಪೂರ್ಣ ನಾಶನವನ್ನು ಸೂಚಿಸುವ ಗೆಹೆನ್ನ ಎಂಬ ಪದವನ್ನು ಭಾಷಾಂತರಿಸುವಾಗ ‘ನರಕ’ ಎಂಬ ಶಬ್ದವನ್ನು ಬಳಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, “ಪಾತಾಳ” ಅಥವಾ “ಸಮಾಧಿ” ಎಂದು ಭಾಷಾಂತರಿಸಲಾದ ಗ್ರೀಕ್ ಮೂಲ ಪದವಾದ ಹೇಡೀಸ್ನಲ್ಲಿರುವ ಸತ್ತವರಿಗಾದರೋ ಪುನಃ ಜೀವಿತರಾಗಿ ಏಳುವ ನಿರೀಕ್ಷೆಯಿದೆ.
ಹೀಗೆ, ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರ ಅಪೊಸ್ತಲ ಪೇತ್ರನು ತನ್ನ ಕೇಳುಗರಿಗೆ, ಯೇಸು “ಪಾತಾಳದಲ್ಲಿ ಬಿಡಲ್ಪಡಲಿಲ್ಲ” ಎಂದು ಆಶ್ವಾಸನೆಯಿತ್ತನು. (ಅ. ಕೃತ್ಯಗಳು 2:27, 31, 32; ಕೀರ್ತನೆ 16:10) ಈ ವಚನದಲ್ಲಿ “ಪಾತಾಳ” ಎಂದು ಭಾಷಾಂತರವಾಗಿರುವ ಗ್ರೀಕ್ ಪದವು ಹೇಡಿಸ್ ಆಗಿದೆ. ಯೇಸು ಹೋದದ್ದು ಅಗ್ನಿಮಯ ನರಕಕ್ಕಲ್ಲ. ಏಕೆಂದರೆ ಹೇಡಿಸ್ ಅಥವಾ “ಪಾತಾಳ” ಎಂಬುದು ಸಮಾಧಿಯಾಗಿದೆ. ಹೇಡಿಸ್ನಿಂದ ದೇವರು ಯೇಸುವನ್ನು ಬಿಡುಗಡೆಮಾಡಿದನು. ಹಾಗೆ ಬಿಡುಗಡೆ ಹೊಂದುವವರಲ್ಲಿ ಇನ್ನು ಅನೇಕರೂ ಇದ್ದಾರೆ.
ಪುನರುತ್ಥಾನದ ಕುರಿತು ಬೈಬಲ್ ಹೇಳುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.” (ಪ್ರಕಟನೆ 20:13, 14) ಪಾತಾಳವು ತನ್ನ ವಶದಲ್ಲಿದ್ದವರನ್ನು ಒಪ್ಪಿಸಿ ಬರಿದುಮಾಡುವುದೆಂದರೆ, ದೇವರು ಯಾರನ್ನು ಪುನರುತ್ಥಾನಕ್ಕೆ ಅರ್ಹರೆಂದು ತೀರ್ಪುಮಾಡುತ್ತಾನೋ ಅವರನ್ನು ಸತ್ತವರೊಳಗಿಂದ ಪುನಃ ಜೀವಿತರನ್ನಾಗಿ ಮಾಡುವುದು ಎಂದರ್ಥ. (ಯೋಹಾನ 5:28, 29; ಅ. ಕೃತ್ಯಗಳು 24:15) ಭವಿಷ್ಯದಲ್ಲಿ ನಮ್ಮ ಪ್ರಿಯ ಜನರು ಜೀವಿತರಾಗಿ ಸಮಾಧಿಯಿಂದ ಎದ್ದುಬರುವುದನ್ನು ಕಾಣುವ ಎಂತಹ ಅದ್ಭುತ ನಿರೀಕ್ಷೆ ನಮಗಿದೆ! ಅಪರಿಮಿತ ಪ್ರೀತಿಯುಳ್ಳ ದೇವರಾದ ಯೆಹೋವನೇ ಅದನ್ನು ಮಾಡುವನು.