ಮದುವೆಯ ಬದ್ಧತೆಗಳನ್ನು ಪಾಲಿಸಿರಿ
ಕುಟುಂಬ ಸಂತೋಷಕ್ಕೆ ಕೀಲಿಕೈಗಳು
ಮದುವೆಯ ಬದ್ಧತೆಗಳನ್ನು ಪಾಲಿಸಿರಿ
ಹೆಂಡತಿ: “ನನ್ನ ಯಜಮಾನರು ಈಚೀಚೆಗೆ ನನ್ನಿಂದ ದೂರವಾದಂತೆ ಅನಿಸುತ್ತದೆ. ನಮ್ಮ ಮಕ್ಕಳನ್ನು ನೋಡಿದರೂ ಅವರಿಗಾಗೊದಿಲ್ಲ. ಇಂಟರ್‌ನೆಟ್ ನೋಡಲು ಆರಂಭಿಸಿದಂದಿನಿಂದ ಅವರ ವರ್ತನೆ ಬದಲಾಗಿದೆ. ಅವರು ಕಂಪ್ಯೂಟರಿನಲ್ಲಿ ಪೋರ್ನಾಗ್ರಫಿ (ಕಾಮಪ್ರಚೋದಕ ಚಿತ್ರಗಳು) ನೋಡುತ್ತಿದ್ದಾರೆ ಎಂದು ನನಗೆ ಯಾಕೋ ಸಂಶಯ ಬಂತು. ಒಮ್ಮೆ ಮಕ್ಕಳು ಮಲಗಿದ ಮೇಲೆ ನಾನು ಅವರನ್ನು ಮುಖಾಮುಖಿ ಎದುರಾದೆ. ಆಗ ಅವರು ಪೋರ್ನಾಗ್ರಫಿ ವೆಬ್ ಸೈಟ್‌ಗಳನ್ನು ನೋಡುತ್ತಿರುವುದನ್ನು ಒಪ್ಪಿಕೊಂಡರು. ನಾನು ಕಂಗಾಲಾಗಿ ಹೋದೆ. ನನ್ನ ಯಜಮಾನರು ಹಾಗೆ ಮಾಡುತ್ತಾರೆಂದು ನಾನು ನೆನಸಲೇ ಇಲ್ಲ. ಅವರ ಮೇಲಿದ್ದ ಭರವಸೆ ನುಚ್ಚುನೂರಾಯಿತು. ಅದೂ ಅಲ್ಲದೆ ನನ್ನ ಆಫೀಸಿನಲ್ಲಿ ಒಬ್ಬನು ಇತ್ತೀಚೆಗೆ ನನ್ನಲ್ಲಿ ಪ್ರಣಯಾಸಕ್ತಿ ತೋರಿಸತೊಡಗಿದಾಗ ಪರಿಸ್ಥಿತಿ ಇನ್ನೂ ಕೆಟ್ಟಿತು.”
ಗಂಡ: “ಸ್ವಲ್ಪ ಸಮಯದ ಹಿಂದೆ, ನಾನು ಕಂಪ್ಯೂಟರಿನಲ್ಲಿ ಸೇವ್ ಮಾಡಿದ್ದ ಅಶ್ಲೀಲ ಚಿತ್ರವನ್ನು ನೋಡಿ ನನ್ನ ಹೆಂಡತಿ ನನ್ನೊಂದಿಗೆ ಮುಖಾಬಿಲೆ ಮಾಡಿದಳು. ನಾನು ಪೋರ್ನಾಗ್ರಫಿ ವೆಬ್ ಸೈಟ್‌ಗಳನ್ನು ಯಾವಾಗಲೂ ನೋಡುತ್ತಿದ್ದೆನೆಂದು ಹೇಳಿದಾಗ ಅವಳ ಸಿಟ್ಟು ನೆತ್ತಿಗೇರಿತು. ದೋಷಿ ಎಂಬ ಅನಿಸಿಕೆಯಿಂದ ನಾನು ಘೋರ ಪೇಚಾಟಕ್ಕೆ ಬಿದ್ದೆ. ನಮ್ಮ ಮದುವೆಯ ಬಂಧ ಇಲ್ಲಿಗೇ ಮುರಿಯಿತು ಎಂದು ನಾನು ನೆನಸಿದೆ.”
ಈ ದಂಪತಿಯಾದ ಮೈಕಲ್ ಮತ್ತು ಮರೀಯರ * ಮದುವೆಯ ಸಂಬಂಧಕ್ಕೆ ಏನಾಯಿತು? ಮೈಕಲ್‌ನ ದೊಡ್ಡ ತಪ್ಪು ಪೋರ್ನಾಗ್ರಫಿ ನೋಡುತ್ತಿದ್ದದ್ದೇ ಎಂದು ನೀವು ನೆನಸಬಹುದು. ಆದರೆ ಮೈಕಲ್‌ಗೆ ತಿಳಿದುಬಂದಂತೆ ಈ ವ್ಯಸನ ಒಂದು ಗಹನವಾದ ಸಮಸ್ಯೆಯ ಸೂಚನೆಯಾಗಿತ್ತು. ಅಂದರೆ ಅವನು ಮದುವೆಯ ಬದ್ಧತೆಯನ್ನು ಪಾಲಿಸದಿದ್ದದ್ದೇ. * ಮೈಕಲ್ ಮತ್ತು ಮರೀಯ ವಿವಾಹವಾದಾಗ ಪರಸ್ಪರ ಪ್ರೀತಿ, ಸಂತೋಷದ ಸವಿ ಬಾಳನ್ನು ಮುನ್ನೋಡಿದರು. ಹೆಚ್ಚಿನ ದಂಪತಿಯಂತೆ ಅವರ ವಿವಾಹ ಬದ್ಧತೆಗಳು ಸಮಯ ಕಳೆದಂತೆ ಕ್ಷೀಣಿಸುತ್ತಾ ಬಂದು ಇಬ್ಬರೂ ಒಬ್ಬರಿಂದೊಬ್ಬರು ದೂರವಾಗತೊಡಗಿದರು.
ವರ್ಷಗಳು ಉರುಳಿದಂತೆ ನಿಮ್ಮ ವೈವಾಹಿಕ ಬಂಧವು ಕ್ಷೀಣಿಸುತ್ತಿರುವಂತೆ ನಿಮಗೆ ಅನಿಸುತ್ತಿದೆಯೋ? ಆ ಬಂಧವನ್ನು ಪುನಃ ಬಲಗೊಳಿಸಲು ನೀವು ಬಯಸುತ್ತೀರೋ? ಹೌದಾದರೆ, ನೀವು ಈ ಮೂರು ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯುವ ಅಗತ್ಯವಿದೆ: ನಿಮ್ಮ ಮದುವೆಯ ಬದ್ಧತೆಯಲ್ಲಿ ಏನೆಲ್ಲಾ ಕೂಡಿದೆ? ಅಂಥಾ ಬದ್ಧತೆಯನ್ನು ಉರುಳಿಸಿಬಿಡುವ ಸವಾಲುಗಳು ಯಾವುವು? ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಬದ್ಧತೆಯನ್ನು ಸುದೃಢಗೊಳಿಸಲು ನೀವೇನು ಮಾಡಬಲ್ಲಿರಿ?
ಬದ್ಧತೆ ಅಂದರೇನು?
ಮದುವೆಯಲ್ಲಿ ಬದ್ಧತೆ ಎಂಬುದರ ಅರ್ಥವೇನು? ಅದೊಂದು ಕರ್ತವ್ಯ ಅಥವಾ ಕಟ್ಟುಪಾಡು ಎಂದು ಅನೇಕರು ನೆನಸುತ್ತಾರೆ. ಉದಾಹರಣೆಗಾಗಿ, ಒಬ್ಬ ದಂಪತಿಯು ತಮ್ಮ ಮಕ್ಕಳಿಗಾಗಿ ಅಥವಾ ವಿವಾಹದ ಮೂಲನಾದ ದೇವರ ಕಡೆಗಿನ ಆದಿಕಾಂಡ 2:22-24) ಅಂಥಾ ಉದ್ದೇಶಗಳು ಶ್ಲಾಘನೀಯವೂ ವಿವಾಹವನ್ನು ಮುಗ್ಗಟ್ಟಿನಿಂದ ಉಳಿಸಲು ನೆರವಾಗುವಂಥದ್ದೂ ಆಗಿವೆ ನಿಶ್ಚಯ. ಆದರೆ ವಿವಾಹ ದಂಪತಿಯು ಸಂತೋಷದಿಂದ ಇರಬೇಕಾದರೆ ಅವರಲ್ಲಿ ಪರಸ್ಪರ ಕರ್ತವ್ಯಭಾವನೆಗಿಂತ ಹೆಚ್ಚಿನದ್ದು ಇರಬೇಕು.
ಕರ್ತವ್ಯಭಾವದಿಂದಾಗಿ ತಮ್ಮ ವಿವಾಹ ಬದ್ಧತೆಗಳನ್ನು ಪಾಲಿಸಬಹುದು. (ಯೆಹೋವ ದೇವರು ದಂಪತಿಗೆ ಆಳವಾದ ಸಂತೋಷ ಮತ್ತು ಸಂತೃಪ್ತಿ ತರುವಂಥ ರೀತಿಯಲ್ಲಿ ಮದುವೆಯನ್ನು ಏರ್ಪಡಿಸಿದನು. ಪುರುಷನು ‘[ತನ್ನ] ಪತ್ನಿಯಲ್ಲಿ ಆನಂದಿಸುವಂತೆಯೂ’ ಸ್ತ್ರೀಯು ತನ್ನ ಗಂಡನನ್ನು ಪ್ರೀತಿಸುವಂತೆಯೂ ಹಾಗೂ ತನ್ನ ಗಂಡನು ಸ್ವಶರೀರವನ್ನು ಪ್ರೀತಿಸುವ ಹಾಗೆ ತನ್ನನ್ನು ಪ್ರೀತಿಸುತ್ತಾನೆಂದು ಭಾವಿಸುವ ಪ್ರವೃತ್ತಿ ಅವಳಲ್ಲಿರುವಂತೆಯೂ ಆತನು ಅವರನ್ನು ಉಂಟುಮಾಡಿದನು. (ಜ್ಞಾನೋಕ್ತಿ 5:18; ಎಫೆಸ 5:28) ಆ ರೀತಿಯ ಬಂಧವನ್ನು ನಿರ್ಮಿಸಬೇಕಾದರೆ ದಂಪತಿಯು ಪರಸ್ಪರ ಭರವಸೆಯನ್ನಿಡಲು ಕಲಿಯಬೇಕು. ಅಷ್ಟೇ ಮಹತ್ವವಾದುದು ಏನಂದರೆ ಅವರು ಒಂದು ಜೀವನಾರಭ್ಯದ ಸ್ನೇಹವನ್ನು ಬೆಳೆಸಿಕೊಳ್ಳುವುದೇ. ಪುರುಷ ಮತ್ತು ಸ್ತ್ರೀಯು ಪರಸ್ಪರ ನಂಬಿಕೆಯನ್ನು ಗಳಿಸಿದಾಗ ಮತ್ತು ಆಪ್ತ ಮಿತ್ರರಾಗಿ ಉಳಿಯಲು ಶ್ರಮಿಸುವಾಗ ಅವರ ವಿವಾಹ ಬದ್ಧತೆಯು ಬಲವಾಗುವುದು. ಅವರ ಬಂಧವು ಎಷ್ಟು ಬಲವಾಗುವುದೆಂದರೆ ಬೈಬಲ್ ಅವರಿಬ್ಬರು “ಒಂದೇ ಶರೀರವಾಗಿರುವರು” ಎಂಬ ಅತ್ಯಂತ ಆಪ್ತ ಸಂಬಂಧದಿಂದ ವರ್ಣಿಸುತ್ತದೆ.—ಮತ್ತಾಯ 19:5.
ಬದ್ಧತೆಯನ್ನು, ಒಂದು ಸುದೃಢ ಮನೆ ಕಟ್ಟಲು ಬಳಸುವ ಇಟ್ಟಿಗೆಗಳನ್ನು ಒಂದಕ್ಕೊಂದು ಬಂಧಿಸುವ ಗಾರೆಗೆ ಹೋಲಿಸಬಹುದು. ಮರಳು, ಸಿಮೆಂಟ್, ನೀರಿನ ಮಿಶ್ರಣದಿಂದ ತಯಾರಿಸಲಾದ ಗಾರೆಯಂತೆ ಬದ್ಧತೆಯು ಕರ್ತವ್ಯ, ನಂಬಿಕೆ, ಗೆಳೆತನದ ಸಂಯೋಗವಾಗಿದೆ. ಆ ಆಪ್ತ ಬಂಧವನ್ನು ಯಾವುದು ಸಡಿಲಿಸಬಹುದು?
ಏಳುವ ಸವಾಲುಗಳು
ಬದ್ಧತೆಯನ್ನು ಉಳಿಸಿಕೊಳ್ಳಲು ಪರಿಶ್ರಮ ಮತ್ತು ಸ್ವತ್ಯಾಗ ಅತ್ಯಾವಶ್ಯಕ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲಿಕ್ಕಾಗಿ ನಿಮ್ಮ ಇಷ್ಟಗಳನ್ನು ತ್ಯಾಗಮಾಡಲೂ ನೀವು ಸಿದ್ಧರಿರಬೇಕು. ಸ್ವಪ್ರಯೋಜನವಿಲ್ಲದೆ ಬೇರೊಬ್ಬರ ಇಷ್ಟವನ್ನು ಪೂರೈಸಲು ಒಬ್ಬನು ಸಿದ್ಧನಿರುವುದು ಬಹಳ ಕಡಿಮೆ. ‘ಅದರಲ್ಲಿ ನನಗೇನು ಲಾಭ?’ ಎಂದು ಕೇಳದ ಹೊರತು ಒಬ್ಬನು ಬೇರೊಬ್ಬನ ಇಷ್ಟಗಳಿಗೆ ಮಣಿಯುವುದು ಜನಪ್ರಿಯವಲ್ಲ. ಆದರೆ ಕೇಳಿಕೊಳ್ಳಿ. ‘ಸ್ವಾರ್ಥಿಗಳಾದ ಎಷ್ಟು ಜನರ ವಿವಾಹವು ನಿಜವಾಗಿಯೂ ಯಶಸ್ವಿಯಾಗಿದೆ?’ ಕೊಂಚವೇ. ಏಕೆ? ಸ್ವಾರ್ಥಪರ ವ್ಯಕ್ತಿಯು ವಿವಾಹ ಬದ್ಧತೆಗೆ ನಿಷ್ಠನಾಗಿ ಉಳಿಯುವುದು ಬಹಳ ಕಡಿಮೆ. ಏಕೆಂದರೆ ಅದರಲ್ಲಿ ವೈಯಕ್ತಿಕ ತ್ಯಾಗವು ಒಳಗೂಡಿದೆ. ಮಾತ್ರವಲ್ಲ ಅವನು ಮಾಡಿದ ಯಾವುದೇ ಚಿಕ್ಕಪುಟ್ಟ ತ್ಯಾಗಗಳಿಗೆ ಆ ಕೂಡಲೇ ಯಾವುದೇ ಸ್ವಲಾಭವಿಲ್ಲ. ದಂಪತಿಯ ಪ್ರೇಮವು ಆರಂಭದಲ್ಲಿ ಎಷ್ಟೇ ಮಧುರವಾಗಿದ್ದಿರಲಿ ಬದ್ಧತೆಯಿರದ ಹೊರತು ಆ ಸಂಬಂಧವು ಕಹಿಯಾಗುವುದು ನಿಶ್ಚಯ.
ವಿವಾಹವು ಒಂದು ಪ್ರಯಾಸದ ಬದ್ಧತೆಯೆಂದು ಬೈಬಲ್ ವಾಸ್ತವಿಕವಾಗಿ ಅಂಗೀಕರಿಸುತ್ತದೆ. ಅದು ಅನ್ನುವುದು: “ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ . . . ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.” (1 ಕೊರಿಂಥ 7:33, 35) ವಿಷಾದಕರವಾಗಿ, ನಿಸ್ವಾರ್ಥಿಗಳಾದ ದಂಪತಿಗಳು ಸಹ ಕೆಲವೊಮ್ಮೆ ಒಬ್ಬರು ಇನ್ನೊಬ್ಬರ ಸುಖ-ದುಃಖಗಳನ್ನು ಅಥವಾ ತ್ಯಾಗಗಳನ್ನು ಅರಿತುಕೊಳ್ಳಲು ತಪ್ಪುತ್ತಾರೆ. ದಂಪತಿಗಳು ಪರಸ್ಪರ ಗಣ್ಯತೆಯನ್ನು ತೋರಿಸುವಾಗಲೂ “ಶರೀರಸಂಬಂಧವಾಗಿ ಕಷ್ಟಸಂಭವಿಸುವದು” ಎಂದು ಬೈಬಲ್ ಅನ್ನುತ್ತದೆ. ಆದರೆ ಗಣ್ಯತೆ ತೋರಿಸದಿದ್ದಾಗಲಂತೂ ಆ ಕಷ್ಟ ಇನ್ನೂ ಹೆಚ್ಚುವುದು.—1 ಕೊರಿಂಥ 7:28.
ನಿಮ್ಮ ವಿವಾಹವು ಕಷ್ಟದ ಸಮಯವನ್ನು ಪಾರಾಗಿ ಸುಖದ ಸಮಯದಲ್ಲಿ ವರ್ಧಿಸಬೇಕಾದರೆ, ನಿಮ್ಮಿಬ್ಬರ ಸಂಬಂಧವು ಜೀವಿತದ ಕೊನೇ ವರೆಗೂ ಇರುವ ಬಂಧವೆಂದು ನೀವು ವೀಕ್ಷಿಸಬೇಕು. ಅಂಥ ಮನೋಭಾವವನ್ನು ನೀವು ಹೇಗೆ ಬೆಳೆಸಿಕೊಳ್ಳುವಿರಿ ಮತ್ತು ನಿಮ್ಮ ಸಂಗಾತಿಯು ವಿವಾಹದ ಬದ್ಧತೆಯನ್ನು ಪಾಲಿಸುವಂತೆ ನೀವು ಅವರನ್ನು ಹೇಗೆ ಪ್ರೋತ್ಸಾಹಿಸಬಲ್ಲಿರಿ?
ಬದ್ಧತೆಯನ್ನು ಬಲಪಡಿಸುವ ವಿಧ
ಬದ್ಧತೆಯನ್ನು ಬಲಪಡಿಸಲು ದೇವರ ವಾಕ್ಯವಾದ ಬೈಬಲಿನ ಸಲಹೆಯನ್ನು ದೀನತೆಯಿಂದ ಅನ್ವಯಿಸುವುದೇ ಮುಖ್ಯ ಕೀಲಿಕೈ. ಇದನ್ನು ಮಾಡುವ ಮೂಲಕ ನಿಮಗೂ ನಿಮ್ಮ ಸಂಗಾತಿಗೂ ‘ವೃದ್ಧಿಮಾರ್ಗ’ ಲಭಿಸುವುದು ನಿಶ್ಚಯ. (ಯೆಶಾಯ 48:17) ನೀವು ತಕ್ಕೊಳ್ಳಬಲ್ಲ ಎರಡು ಪ್ರಾಯೋಗಿಕ ಹೆಜ್ಜೆಗಳನ್ನು ಪರಿಗಣಿಸಿರಿ.
1.ನಿಮ್ಮ ದಾಂಪತ್ಯಕ್ಕೆ ಆದ್ಯತೆ ಕೊಡಿ. ‘ಉತ್ತಮ ಕಾರ್ಯಗಳು ಯಾವದೆಂದು ನೀವು ವಿವೇಚಿಸಿಕೊಳ್ಳಿರಿ’ ಎಂದು ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 1:10) ಗಂಡಹೆಂಡರು ಒಬ್ಬರನೊಬ್ಬರು ಉಪಚರಿಸುವ ರೀತಿಯು ದೇವರ ದೃಷ್ಟಿಯಲ್ಲಿ ಅತಿ ಮೌಲ್ಯ. ತನ್ನ ಹೆಂಡತಿಯನ್ನು ಗೌರವಿಸುವ ಗಂಡನು ದೇವರಿಂದಲೂ ಗೌರವಿಸಲ್ಪಡುವನು. ಅಲ್ಲದೆ, ಗಂಡನನ್ನು ಗೌರವಿಸುವ ಹೆಂಡತಿಯೂ ‘ದೇವರ ದೃಷ್ಟಿಗೆ ಬಹು ಬೆಲೆಯುಳ್ಳವಳು.’—1 ಪೇತ್ರ 3:1-4, 7.
ನಿಮ್ಮ ವೈವಾಹಿಕ ಜೀವನವು ನಿಮಗೆ ಪ್ರಾಮುಖ್ಯವಾಗಿದೆಯೋ?
ಸಾಮಾನ್ಯವಾಗಿ ಹೆಚ್ಚು ಪ್ರಾಮುಖ್ಯವಾದ ಒಂದು ಕಾರ್ಯಕ್ಕೆ ನೀವು ಅಷ್ಟೇ ಹೆಚ್ಚು ಸಮಯವನ್ನು ವ್ಯಯಿಸುವಿರಿ. ನಿಮ್ಮನ್ನೇ ಕೇಳಿಕೊಳ್ಳಿ, ‘ಕಳೆದ ತಿಂಗಳು ನಾನು ನನ್ನ ಸಂಗಾತಿಯೊಂದಿಗೆ ಎಷ್ಟು ಸಮಯ ಕಳೆದಿದ್ದೇನೆ? ನಾವಿನ್ನೂ ಆಪ್ತಸ್ನೇಹಿತರೆಂಬ ಭಾವನೆಯನ್ನು ಕೊಡಲು ನಾನೇನು ಮಾಡಿದ್ದೇನೆ?’ ನಿಮ್ಮ ಸಂಗಾತಿಗೆ ಸಮಯವನ್ನೇ ಕೊಡದಿರುವುದಾದರೆ ನೀವು ವಿವಾಹ ಬದ್ಧತೆಯನ್ನು ಪಾಲಿಸುತ್ತೀರಿ ಎಂಬುದನ್ನು ನಂಬಲು ಅವರಿಗೆ ಕಷ್ಟವಾದೀತು.ನೀವು ವಿವಾಹ ಬದ್ಧತೆಯನ್ನು ಪಾಲಿಸುತ್ತಿದ್ದೀರಿ ಎಂದು ನಿಮ್ಮ ಸಂಗಾತಿ ನೆನಸುತ್ತಾರೋ? ನೀವು ಅದನ್ನು ಹೇಗೆ ತಿಳಿದುಕೊಳ್ಳಬಲ್ಲಿರಿ?
ಪ್ರಯತ್ನಿಸಿ ನೋಡಿ: ಒಂದು ಕಾಗದದಲ್ಲಿ ಈ ಐದು ವಿಷಯಗಳನ್ನು ಬರೆಯಿರಿ: ಹಣ, ಕೆಲಸ, ಮದುವೆ, ಮನೋರಂಜನೆ ಮತ್ತು ಸ್ನೇಹಿತರು. ಈಗ ನಿಮ್ಮ ಸಂಗಾತಿ ಯಾವುದಕ್ಕೆ ಆದ್ಯತೆ ಕೊಡುತ್ತಾರೆಂದು ಕ್ರಮಾನುಗತವಾಗಿ ಪಟ್ಟಿಮಾಡಿ. ನಿಮ್ಮ ಕುರಿತಾಗಿಯೂ ಹಾಗೆ ಮಾಡುವಂತೆ ನಿಮ್ಮ ಸಂಗಾತಿಯನ್ನು ಕೇಳಿಕೊಳ್ಳಿ. ಆಮೇಲೆ ಆ ಚೀಟಿಗಳನ್ನು ಅದಲು ಬದಲಾಯಿಸಿ. ನೀವು ಸಂಗಾತಿಗೆ ಸಾಕಷ್ಟು ಸಮಯ ಮತ್ತು ಸಹಾಯವನ್ನು ಕೊಡುತ್ತಿಲ್ಲ ಎಂದು ಅವರಿಗೆ ಅನಿಸಿದಲ್ಲಿ ಪರಸ್ಪರ ಬದ್ಧತೆಯನ್ನು ಬಲಪಡಿಸಲು ಯಾವ ಬದಲಾವಣೆಯನ್ನು ಮಾಡಬೇಕೆಂಬದನ್ನು ಚರ್ಚಿಸಿ. ಅಲ್ಲದೆ, ಹೀಗೆ ಕೇಳಿಕೊಳ್ಳಿ. ‘ನನ್ನ ಸಂಗಾತಿಗೆ ಮಹತ್ತ್ವವಾದ ವಿಷಯಗಳಲ್ಲಿ ನಾನು ಹೆಚ್ಚಿನ ಆಸಕ್ತಿಯನ್ನು ತಕ್ಕೊಳ್ಳಲು ನಾನೇನು ಮಾಡಬಲ್ಲೆ?’
2.ಎಲ್ಲಾ ತರದ ದಾಂಪತ್ಯದ್ರೋಹ ತ್ಯಜಿಸಿ. ಯೇಸು ಕ್ರಿಸ್ತನು ಹೇಳಿದ್ದು: “ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.” (ಮತ್ತಾಯ 5:28) ಮದುವೆಯ ಹೊರಗೆ ಒಬ್ಬನು ಲೈಂಗಿಕ ಸಂಭೋಗವನ್ನು ನಡೆಸುವುದಾದರೆ ಅವನ ಅಥವಾ ಅವಳ ಮದುವೆಯ ಬಂಧಕ್ಕೆ ವಿಪತ್ಕಾರಕ ಹೊಡೆತ ಬೀಳುತ್ತದೆ. ವಿವಾಹ ವಿಚ್ಛೇದಕ್ಕೆ ಇದೇ ಆಧಾರವೆಂದು ಬೈಬಲ್ ತಿಳಿಸುತ್ತದೆ. (ಮತ್ತಾಯ 5:32) ಯೇಸುವಿನ ಮೇಲಿನ ಮಾತುಗಳು, ಒಬ್ಬನು ವ್ಯಭಿಚಾರ ಕೃತ್ಯದಲ್ಲಿ ತೊಡಗುವ ಮುಂಚೆಯೇ ಅವನ ಹೃದಯದಲ್ಲಿ ಕೆಟ್ಟ ಅಭಿಲಾಷೆ ಇರಸಾಧ್ಯವಿದೆ ಎಂದು ತಿಳಿಸುತ್ತವೆ. ಆ ಕೆಟ್ಟ ಅಭಿಲಾಷೆ ಹೊಂದಿರುವುದು ತಾನೇ ಒಂದು ರೀತಿಯ ದಾಂಪತ್ಯದ್ರೋಹವಾಗಿದೆ.
ನಿಮ್ಮ ವಿವಾಹ ಬದ್ಧತೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಪೋರ್ನಾಗ್ರಫಿ (ಕಾಮಪ್ರಚೋದಕ ಚಿತ್ರಗಳು) ನೋಡದಿರಲು ಗಂಭೀರವಾದ ನಿರ್ಣಯಮಾಡಿ. ಯಾರು ಏನೇ ಹೇಳಲಿ ಪೋರ್ನಾಗ್ರಫಿ ನಿಜವಾಗಿಯೂ ಮದುವೆಯ ಮಧುರ ಬಂಧಕ್ಕೆ ವಿಷವಿಕ್ಕುತ್ತದೆ. ಪೋರ್ನಾಗ್ರಫಿ ನೋಡುವ ಚಾಳಿಯಿದ್ದ ತನ್ನ ಗಂಡನ ಕುರಿತು ಅವನ ಹೆಂಡತಿ ಹೇಳಿದ್ದನ್ನು ಗಮನಿಸಿ: “ಪೋರ್ನಾಗ್ರಫಿ ನೋಡುವುದು ನಮ್ಮ ಸೆಕ್ಸ್‌ನ್ನು ಇನ್ನಷ್ಟು ರಂಜಿಸುತ್ತದೆ ಎಂದು ನನ್ನ ಗಂಡನು ಹೇಳುತ್ತಾನೆ. ಆದರೆ ಅದು ನನಗೆ ನಾನು ನಿಷ್ಪ್ರಯೋಜಕಳು, ಅವನ ಇಚ್ಛಾಪೂರೈಕೆಗೆ ತಕ್ಕವಳಲ್ಲ ಎಂಬ ಅನಿಸಿಕೆಯನ್ನು ಕೊಡುತ್ತದೆ. ಅವನು ಅದನ್ನು ನೋಡುವಾಗ ನಾನು ಅಳುತ್ತಾ ಮಲಗುತ್ತೇನೆ.” ಈ ಪುರುಷನು ತನ್ನ ವಿವಾಹ ಬದ್ಧತೆಯನ್ನು ಬಲಪಡಿಸುತ್ತಿದ್ದಾನೋ ಇಲ್ಲವೆ ಬಿಗಡಾಯಿಸುತ್ತಿದ್ದಾನೋ? ವಿವಾಹ ಬದ್ಧತೆಯನ್ನು ಕಾಪಾಡಲು ಅವನು ತನ್ನ ಹೆಂಡತಿಗೆ ನೆರವಾಗುತ್ತಿದ್ದಾನೋ ಅಥವಾ ಕಷ್ಟಕರವನ್ನಾಗಿ
ಮಾಡುತ್ತಿದ್ದಾನೋ? ಪೋರ್ನಾಗ್ರಫಿ ನೋಡುವ ಮೂಲಕ ಅವನು ಅವಳ ಆಪ್ತಸ್ನೇಹಿತೆಯಾಗಿಯೇ ಉಳಿಯುವಳೋ?ದೇವರಿಗೆ ನಂಬಿಗಸ್ತನಾಗಿದ್ದ ಯೋಬನು ದೇವರಿಗೂ ತನ್ನ ವಿವಾಹಕ್ಕೂ ಬದ್ಧತೆಯನ್ನು ವ್ಯಕ್ತಪಡಿಸುತ್ತಾ “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ” ಅಂದನು. ಬೇರೆ ‘ಯುವತಿಯ ಮೇಲೆ ಕಣ್ಣಿಡದಿರಲು’ ಅವನು ದೃಢಸಂಕಲ್ಪ ಮಾಡಿದ್ದನು. (ಯೋಬ 31:1) ನೀವು ಯೋಬನನ್ನು ಹೇಗೆ ಅನುಸರಿಸುವಿರಿ?
ಪೋರ್ನಾಗ್ರಫಿಯನ್ನು ತೊರೆಯುವುದಲ್ಲದೆ ಬೇರೊಂದು ಗಂಡು-ಹೆಣ್ಣಿನೊಂದಿಗೆ ಅಯೋಗ್ಯ ಗೆಳೆತನ ಇಟ್ಟುಕೊಳ್ಳುವುದರಿಂದ ನಿಮ್ಮ ಹೃದಯವನ್ನೂ ಕಾದುಕೊಳ್ಳಿ. ಹಾಗೆ ಚೆಲ್ಲಾಟವಾಡುವುದು ಮದುವೆಗೆ ಹಾನಿಕರವಲ್ಲವೆಂದು ಅನೇಕರು ನೆನಸುತ್ತಾರೆ. ಆದರೆ ದೇವರ ವಾಕ್ಯವು ಎಚ್ಚರಿಸುವುದು: “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” (ಯೆರೆಮೀಯ 17:9) ನಿಮ್ಮ ಹೃದಯ ನಿಮ್ಮನ್ನು ವಂಚಿಸಿದೆಯೇ? ನಿಮ್ಮನ್ನೇ ಕೇಳಿಕೊಳ್ಳಿ: ‘ನಾನು ಯಾರೊಂದಿಗೆ ಹೆಚ್ಚು ಸರಸವಾಡುತ್ತೇನೆ—ನನ್ನ ಬಾಳಸಂಗಾತಿಯೊಂದಿಗೋ ಅಥವಾ ಬೇರೊಂದು ಗಂಡು/ಹೆಣ್ಣಿನೊಂದಿಗೋ? ಯಾವುದೇ ಸಿಹಿಸುದ್ದಿಯನ್ನು ಮೊದಲು ಯಾರಿಗೆ ತಿಳಿಸುತ್ತೇನೆ—ನನ್ನ ಸಂಗಾತಿಗೋ ಇನ್ನೊಬ್ಬರಿಗೋ? ಬೇರೆ ಗಂಡು/ಹೆಣ್ಣಿನೊಂದಿಗೆ ಸಹವಾಸವನ್ನು ಕಡಿಮೆಗೊಳಿಸಲು ನನ್ನ ಸಂಗಾತಿ ಹೇಳುವುದಾದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತದೆ? ನಾನು ಕೋಪಗೊಳ್ಳುವೆನೋ ಇಲ್ಲವೆ ಸಿದ್ಧಮನಸ್ಸಿನಿಂದ ನನ್ನನ್ನು ಸರಿಪಡಿಸಿಕೊಳ್ಳುವೆನೋ?
ಪ್ರಯತ್ನಿಸಿ ನೋಡಿ: ನಿಮ್ಮ ಸಂಗಾತಿಯನ್ನು ಬಿಟ್ಟು ಬೇರೊಬ್ಬರೆಡೆಗೆ ನೀವು ಆಕರ್ಷಿತರಾದಲ್ಲಿ, ಅವರೊಂದಿಗೆ ಅವಶ್ಯಕವಾದದನ್ನು ಬಿಟ್ಟು ಬೇರೆಲ್ಲಾ ಸಂಪರ್ಕವನ್ನು ಕಡಿಮೆಮಾಡಿ. ವೃತ್ತಿಪರ ಸಂಪರ್ಕವನ್ನು ಮಾತ್ರ ಇಟ್ಟುಕೊಳ್ಳಿ. ಈ ವ್ಯಕ್ತಿಯು ನಿಮ್ಮ ಸಂಗಾತಿಗಿಂತ ಯಾವುದರಲ್ಲೆಲ್ಲಾ ಹೆಚ್ಚು ಉತ್ತಮರೆಂಬ ವಿಷಯದ ಕಡೆ ನಿಮ್ಮ ಮನಸ್ಸನ್ನು ಹರಿಯಬಿಡಬೇಡಿ. ಬದಲಾಗಿ ನಿಮ್ಮ ಸಂಗಾತಿಯ ಉತ್ತಮ ಗುಣಗಳ ಮೇಲೆಯೇ ಮನಸ್ಸನ್ನು ಕೇಂದ್ರೀಕರಿಸಿ. (ಜ್ಞಾನೋಕ್ತಿ 31:29) ನಿಮ್ಮ ಸಂಗಾತಿಯನ್ನು ಮೊದಲಾಗಿ ನೀವು ಪ್ರೇಮಿಸಿದ್ದೇಕೆ ಎಂಬುದನ್ನು ಜ್ಞಾಪಿಸಿಕೊಳ್ಳಿ. ಹೀಗೆ ಕೇಳಿಕೊಳ್ಳಿ, ‘ನನ್ನ ಸಂಗಾತಿಯಲ್ಲಿ ಆ ಗುಣಗಳು ಈಗ ನಿಜವಾಗಿಯೂ ಇಲ್ಲವೋ ಅಥವಾ ನಾನು ಆ ಗುಣಗಳಿಗೆ ಕಣ್ಮುಚ್ಚಿಕೊಂಡಿದ್ದೇನೋ?’
ಮುಂದಡಿಯಿಡಿ
ಆರಂಭದಲ್ಲಿ ತಿಳಿಸಲಾದ ಮೈಕಲ್ ಮತ್ತು ಮರೀಯ ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸಲಹೆ ಕೇಳಲು ನಿರ್ಣಯಿಸಿದರು. ಸಲಹೆ ಕೇಳುವುದು ಮೊತ್ತಮೊದಲ ಹೆಜ್ಜೆ ನಿಜ. ಆದರೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧಮನಸ್ಸುಳ್ಳವರಾದ ಮೂಲಕ ಮೈಕಲ್ ಮತ್ತು ಮರೀಯ ಇಬ್ಬರೂ ತಾವು ತಮ್ಮ ವೈವಾಹಿಕ ಜೀವನವನ್ನು ಉಳಿಸಲು ಬದ್ಧರೆಂದು ಮತ್ತು ಅದರ ಯಶಸ್ಸಿಗಾಗಿ ಶ್ರಮಿಸಲು ಸಿದ್ಧರೆಂದು ತೋರಿಸಿಕೊಟ್ಟರು.
ನಿಮ್ಮ ದಾಂಪತ್ಯ ಜೀವನ ಬಲವಾಗಿರಲಿ ದುರ್ಬಲವಾಗಿರಲಿ, ಅದನ್ನು ಯಶಸ್ವಿಗೊಳಿಸಲು ನೀವು ಪ್ರಯಾಸಪಡುತ್ತೀರಿ ಎಂದು ನಿಮ್ಮ ಸಂಗಾತಿ ತಿಳಿಯುವುದು ಅಗತ್ಯ. ಆ ನಿಜತ್ವನ್ನು ನಿಮ್ಮ ಸಂಗಾತಿಗೆ ಖಾತ್ರಿಗೊಳಿಸಲು ಬೇಕಾದ ಸೂಕ್ತ ಹೆಜ್ಜೆಯನ್ನು ತಕ್ಕೊಳ್ಳಿರಿ. ನೀವದನ್ನು ಮಾಡಲು ತಯಾರಿದ್ದೀರೋ? (w08 11/1)
[ಪಾದಟಿಪ್ಪಣಿಗಳು]
^ ಪ್ಯಾರ. 5 ಹೆಸರುಗಳು ಬದಲಾಗಿವೆ.
^ ಪ್ಯಾರ. 5 ಇಲ್ಲಿ ಒಬ್ಬ ಪುರುಷನು ಪೋರ್ನಾಗ್ರಫಿ ವೀಕ್ಷಿಸಿದ ಉದಾಹರಣೆಯನ್ನು ಕೊಡಲಾಗಿದ್ದರೂ, ಹಾಗೆ ಮಾಡುವ ಸ್ತ್ರೀಯು ಸಹ ಮದುವೆಯ ಬದ್ಧತೆಯನ್ನು ಪಾಲಿಸುವವಳಾಗಿರುವುದಿಲ್ಲ.
ಕೇಳಿಕೊಳ್ಳಿ . . .
▪ ನನ್ನ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲಿಕ್ಕಾಗಿ ನಾನು ಯಾವ ಚಟುವಟಿಕೆಯನ್ನು ಕಡಿಮೆಮಾಡಸಾಧ್ಯವಿದೆ?
▪ ವಿವಾಹ ಬದ್ಧತೆಯನ್ನು ಕಾಪಾಡಲು ಸಿದ್ಧನೆಂದು ನನ್ನ ಸಂಗಾತಿಗೆ ಖಾತ್ರಿಗೊಳಿಸಲು ಏನು ಮಾಡಬಲ್ಲೆ?
[ಪುಟ 14ರಲ್ಲಿರುವ ಚಿತ್ರ]
ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ
[ಪುಟ 15ರಲ್ಲಿರುವ ಚಿತ್ರ]
ದಾಂಪತ್ಯದ್ರೋಹವು ಹೃದಯದಿಂದಲೇ ಆರಂಭಿಸುತ್ತದೆ